ನನ್ನ ಬ್ಲಾಗ್ ಪಟ್ಟಿ

ಶನಿವಾರ, ಜೂನ್ 12, 2010

ತಂತ್ರಜ್ಞಾನದಿಂದ ಕನ್ನಡ ಭಾಷೆಯ ಅಸ್ತಿತ್ವಕ್ಕೆ ಧಕ್ಕೆ

ಸ್ವಾಭಿಮಾನಿ ಕನ್ನಡಿಗರೇ,

ಉಡುಪಿ, ಆ. 03 : ತಂತ್ರಜ್ಞಾನ ದಿನದಿಂದ ದಿನಕ್ಕೆ ಬೆಳೆಯುತ್ತಿರುವ ಹಿನ್ನೆಲೆಯಲ್ಲಿ ಸಾಹಿತ್ಯ ತನ್ನ ಸ್ಥಾನವನ್ನು ಕಳೆದುಕೊಳ್ಳತೊಡಗಿದೆ. ಮುಂದಿನ ದಿನದಲ್ಲಿ ಜನರು ಮಾತಾನಾಡುವುದನ್ನೇ ನಿಲ್ಲಿಸಿ ಬರೀ ಕಂಪ್ಯೂಟರ್ ಮೂಲಕ ಮಾತನಾಡುವಂತಹ ದಿನಗಳು ದೂರವಿಲ್ಲ ಎಂದು ಖ್ಯಾತ ಭಾಷಾತಜ್ಞ ಡಾ.ಕೆ.ವಿ.ನಾರಾಯಣ ವಿಷಾದಿಸಿದರು.

ನಗರದಲ್ಲಿ ಮಹಾತ್ಮ ಗಾಂಧಿ ಮೆಮೋರಿಯಲ್ ಕಾಲೇಜಿನ 60ನೇ ವಾರ್ಷಿಕೋತ್ಸವದ ಅಂಗವಾಗಿ ಕನ್ನಡ ಲಿಪಿ ಮತ್ತು ಬೆಳವಣಿಗೆ ಹಾಗೂ ಶಾಸನ ಅಧ್ಯಯನ ಇಲಾಖೆ ಹಾಗೂ ಯುಜಿಸಿ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಲಾಗಿದ್ದ ಎರಡು ದಿನಗಳ ರಾಜ್ಯದ ಮಟ್ಟದ ವಿಚಾರ ಸಂಕಿರಣ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದ ಅವರು, ಮುಂದುವರೆದ ತಂತ್ರಜ್ಞಾನದ ಪರಿಣಾಮ ಕನ್ನಡ ಭಾಷೆಯ ಅಸ್ತಿತ್ವಕ್ಕೆ ಗಂಡಾಂತರ ಎದುರಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು. ಇಂದು ಕನ್ನಡ ಭಾಷೆಯಷ್ಟೆ ಅಲ್ಲ ಯಾವ ಭಾಷೆಯನ್ನು ಕಲಿಯಬೇಕೆಂದರೂ ಕಂಪ್ಯೂಟರಿನ ಮೊರೆ ಹೋಗಬೇಕಾಗಿದೆ. ಬರೆಯುವ ಪರಿಪಾಠ ಸಂಪೂರ್ಣ ನಿಂತುಹೋಗಿದೆ. ಕಂಪ್ಯೂಟರ ಮುಂದೆ ಕುಳಿತುಕೊಂಡು ಕನ್ನಡ ಕಲಿಯುವ ಸಮಯಬಂದಿದೆ. ಇದರ ಪ್ರತಿಫಲವೇ ಇಂದಿನ ಎಸ್ಎಂಎಸ್ ಮೂಲಕ ಸುದ್ದಿ ರವಾನಿಸುವುದು ಎಂದು ಅವರು ಖೇದ ವ್ಯಕ್ತಪಡಿಸಿದರು.

ಜಗತ್ತಿನಲ್ಲಿ ಸುಮಾರು 6 ಸಾವಿರ ಭಾಷೆಗಳು ಚಾಲ್ತಿಯಲ್ಲಿವೆ. ಆದರೆ 100 ಭಾಷೆಗಳಿಗೆ ಮಾತ್ರ ಲಿಪಿ ಇದೆ. ಇದರಲ್ಲಿ ಒಂದೇ ಲಿಪಿಯನ್ನು ಅನೇಕ ಭಾಷೆಗಳಲ್ಲಿ ಕಾಣಬಹುದು. ಹತ್ತು ಲಿಪಿಗಳು ಮಾತ್ರ ಸ್ವಂತ ಭಾಷೆಯನ್ನು ಹೊಂದಿವೆ. ಆ ಹತ್ತು ಭಾಷೆಗಳಲ್ಲಿ ಕನ್ನಡ ನಾಲ್ಕು ಅಥವಾ ಐದನೇ ಸ್ಥಾನದಲ್ಲಿದೆ. ಐತಿಹಾಸಿಕ ಭಾಷೆಯಾಗಿರುವ ಕನ್ನಡವನ್ನು ಕಲಿಯಲು ವಿದೇಶಿ ಸಂಶೋಧಕರು ಆಸಕ್ತಿ ವಹಿಸಿರುವುದು ತಿಳಿದಿರುವ ಸಂಗತಿ ಎಂದು ನಾರಾಯಣ ವಿವರಿಸಿದರು. ಇತಿಹಾಸದಲ್ಲಿ ಶಾಸನಶಾಸ್ತ್ರಕ್ಕೆ ಅಷ್ಟಾಗಿ ಮಹತ್ವವಿಲ್ಲ. ಅನಾದಿ ಕಾಲದಿಂದಲೂ ಶಾಸನಶಾಸ್ತ್ರ ಕೇವಲ ಐತಿಹಾಸಿಕ ಆಧಾರವಾಗಿ ಗುರುತಿಸಿಸಿಕೊಂಡಿದೆ. ಆದ್ದರಿಂದ ಸಂಶೋಧಕರು, ಉಪನ್ಯಾಸಕರು ಶಾಸನಶಾಸ್ತ್ರದ ಮಹತ್ವವನ್ನು ವಿದ್ಯಾರ್ಥಿಗಳಿಗೆ ತಿಳಿಸುವ ಮೂಲಕ ಅದನ್ನು ಕಾಪಾಡುವ ಜವಾಬ್ದಾರಿಯನ್ನು ಹೊರಬೇಕಾಗಿದೆ ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮ ಉದ್ಘಾಟಿಸಿದ ಕರ್ನಾಟಕ ರಾಜ್ಯ ಪ್ರಾಚ್ಯವಸ್ತು ಸಚಿವಾಲಯದ ನಿರ್ದೇಶಕಿ ಉಷಾ ಸುರೇಶ್ ಮಾತನಾಡಿ, ಸುಮಾರು 300 ವರ್ಷಗಳ ಹಳೆಯದಾದ 20 ಲಕ್ಷಕ್ಕೂ ಹೆಚ್ಚು ಪ್ರಾಚೀನ ವಸ್ತುಗಳನ್ನು ಸಂಗ್ರಹಿಸಲಾಗಿದೆ ಎಂದರು. ಅಮೂಲ್ಯವಾಗಿರುವ ಶಾಸನ ಮತ್ತು ಶಾಸನ ಬರಹಗಳು ಸಂಶೋಧಕರಿಗೆ ಮತ್ತು ಸಂಶೋಧನಾ ವಿದ್ಯಾರ್ಥಿಗಳಿಗೆ ತುಂಬಾ ಅನುಕೂಲಕರವಾಗಿವೆ. ಇದರ ಉಪಯೋಗವನ್ನು ಅನೇಕ ಸಂಶೋಧನಾ ವಿದ್ಯಾರ್ಥಿಗಳು ಪಡೆದುಕೊಂಡಿದ್ದಾರೆ. ಆಸಕ್ತರು ಇಲಾಖೆಯ ವೆಬ್ ಸೈಟ್ ಮೂಲಕ ವಿವರವನ್ನು ಪಡೆದುಕೊಳ್ಳಬಹುದು ಎಂದು ಸಲಹೆ ನೀಡಿದರು. ಐತಿಹಾಸಿಕ ದಾಖಲೆಗಳಿಗೆ ಸಂಬಂಧಿಸದಂತೆ ಇಲಾಖೆಯು 100 ತಜ್ಞರ ಹೇಳಿಕೆಯನ್ನು ಕ್ಯಾಸೆಟ್ ರೂಪದಲ್ಲಿ ಹೊರತರಲಾಗಿದೆ ಎಂದು ಉಷಾ ಸುರೇಶ್ ಹೇಳಿದರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ