ನನ್ನ ಬ್ಲಾಗ್ ಪಟ್ಟಿ

ಶನಿವಾರ, ಜೂನ್ 12, 2010

ಕಸಾಯಿಖಾನೆಗೆ ಕಲಿಯುಗದ ಕಾಮಧೇನು


ಪರವಾನಗಿ ಇಲ್ಲದೆ ಗೋವುಗಳನ್ನು ಕಸಾಯಿಖಾನೆಗೆ ಸಾಗಿಸುವ ಕೃತ್ಯ ಕರ್ನಾಟಕದಲ್ಲಿ ಅವ್ಯಾಹತವಾಗಿ ಸಾಗಿದೆ. ಕಾನೂನು ಪಾಲಕರು ಗೋಪಾಲಕರಾಗುವುದು ಯಾವಾಗ?

ಲೇಖನ : ಪಶುಪತಿ

ಭರತಖಂಡದಲ್ಲಿ ಗೋವು ಪವಿತ್ರವಾದ ಪ್ರಾಣಿ. ಭಾರತದ ಪುರಾಣಗಳಲ್ಲಿ ಗೋವಿಗೆ ಅತಿವಿಶಿಷ್ಟ ಸ್ಥಾನ. ಹದಿನಾರು ಕೋಟಿ ದೇವತೆಗಳು ಗೋವಿನಲ್ಲಿ ವಾಸಿಸುತ್ತಾರೆಂತಲೂ, ಹಸು ಕಲಿಯುಗದ ಕಾಮಧೇನು ಎಂತಲೂ, ಬಸವ ಶಿವನ ವಾಹನವೆಂತಲೂ ಹಿಂದೂ ಧರ್ಮದ ನಂಬಿಕೆ. ಗೋವುಗಳ ರಕ್ಷಣೆಗಾಗಿ ಬೆಟ್ಟವನ್ನೇ ಕೈಯಲ್ಲಿ ಎತ್ತಿಹಿಡಿದ ಗೋವರ್ಧನ ಗಿರಿಧಾರಿಯ ಕಥೆಯನ್ನು ಕೇಳದವರಾರು. ಗೋ ಸಂತಾನವೇ ಕೃಷಿಗೆ ಮೂಲಾಧಾರ, ರೈತನ ಬದುಕಿಗೆ ದನಕರುಗಳೇ ಜೀವಾಳ. ಹಸು ಎಮ್ಮೆ ಹಾಲು, ಮೊಸರು, ಬೆಣ್ಣೆ, ತುಪ್ಪ, ಬಿಸಿಬಿಸಿ ಕಾಫಿ, ನಂದಿನಿ ಪೇಢ ಆಹಾರದ ಮೂಲದ್ರವ್ಯಗಳು. ಹೋರಿ ರೈತನ ಮನೆಯ ಗಂಡಾಳು. ದವಸಧಾನ್ಯಗಳನ್ನು ಅವನೇ ಉತ್ತಿ ಬಿತ್ತಿ ಬೆಳೆದು ಮನೆಗೆ ಸಾಗಿಸಬೇಕು. ಅವನಿಂದಲೇ ಗೊಬ್ಬರ, ಅವನಿರುವುದರಿಂದಲೇ ಕಣಜ.

ದನಕರುಗಳ ಐಹಿಕ ಮಹತ್ವವನ್ನು ಸಾರಿ ಹೇಳುವುದಕ್ಕೆ ಭಾರತೀಯ ಸಾಹಿತ್ಯದಲ್ಲಿ, ಜನಪದಗಳಲ್ಲಿ ದನಪದಗಳು ಹೇರಳವಾಗಿ ಸಿಗುತ್ತವೆ. ಹಾಗಾಗಿಯೇ ನೀನಾರಿಗಾದೆಯೋ ಎಲೆ ಮಾನವಾ ಹರಿ ಹರಿ ಗೋವು ನಾನು ಎಂಬ ಗೀತೆ, ಸತ್ಯವಾಕ್ಯಕೆ ತಪ್ಪಿನಡೆದರೆ ಮೆಚ್ಚನಾ ಪರಮಾತ್ಮನು ಎಂಬ ನೀತಿ ಹೇಳುವ ಪುಣ್ಯಕೋಟಿ ಕಥೆ ಹುಟ್ಟಿಕೊಂಡದ್ದು. ಮನುಕುಲದ ಇತಿಹಾಸ ಹುಡುಕುತ್ತಾ ಹೋದರೆ ಮಾನವ ಸಾಕುಪ್ರಾಣಿಯಾಗಿ ಆಯ್ದುಕೊಂಡ ಮೊದಲೆರಡು ಪ್ರಾಣಿಗಳಲ್ಲಿ ಹಸುಕೂಡ ಒಂದು. ಇನ್ನೊಂದು, ನೀವು ಅಥವಾ ಪಕ್ಕದ ಮನೆಯವರು ಸಾಕಿರುವ ನಾಯಿ.

ನಾನಾ ರೂಪಗಳಲ್ಲಿ ಅತ್ಯಂತ ಉಪಯುಕ್ತ ಜೀವ ಹಾಗೂ ಪವಿತ್ರ ಎನಿಸಿರುವ ಗೋವನ್ನು ಹತ್ಯೆ ಮಾಡಬಾರದು, ಆದರ ಮಾಂಸ ಭಕ್ಷಣೆ ಮಾಡಬಾರದು ಎಂದೂ ಹಿಂದೂ ಮತಸ್ಥರು ನಂಬುತ್ತಾರೆ. ಹಾಗೆಯೇ ಗೋಹತ್ಯೆ ನಿಷೇಧ ಮಾಡಬೇಕೆಂದು ಹಲವು ವರ್ಷಗಳಿಂದ ಸರಕಾರಗಳನ್ನು ಒತ್ತಾಯಿಸುತ್ತಲೇ ಬಂದಿದ್ದಾರೆ. ಆದರೆ, ಭಾರತದಲ್ಲಿ ನಾನಾ ಧರ್ಮಗಳಿಗೆ ಸೇರಿದ ನಾಗರಿಕರ ವೈಯಕ್ತಿಯ ಅಭಿರುಚಿಗಳು ಎಷ್ಟೋ ವೇಳೆ ಹಿಂದೂ ಧರ್ಮದವರು ಪರಿಪಾಲನೆ ಮಾಡುವ ನಂಬಿಕೆಗಳಿಗೆ ವ್ಯತಿರಿಕ್ತವಾಗಿ ಇದೆ. ಹಸು ಕೂಡ ಒಂದು ಪ್ರಾಣಿ ಅದನ್ನು ಭಕ್ಷಿಸುವುದು ತಮ್ಮ ಹಕ್ಕು ಎಂದು ಅವರು ವಾದಿಸುತ್ತಾರೆ. ಈ ವಿಚಾರದಲ್ಲಿ ಭಾರತದ ಪ್ರಜೆಗಳಲ್ಲಿ ಭಿನ್ನ ನಿಲುವುಗಳು ಮೂಡಿವೆ. ಆದ್ದರಿಂದ ಯಾವುದು ಸರಿ, ಯಾವುದು ತಪ್ಪು ಎಂದು ಇದಂಇತ್ಥಂ ಎಂದು ಇದುವರೆವಿಗೆ ತೀರ್ಮಾನವಾಗಿಲ್ಲ.

ಗೋಹತ್ಯೆ ಕುರಿತ ಅಹವಾಲುಗಳು ನ್ಯಾಯಾಲಯದ ಕಟೆಕಟೆ ಹತ್ತಿವೆ. ಈ ಜಿಜ್ಞಾಸೆ ಅತ್ಯಂತ ಜಟಿಲವಾಗಿದೆ. ಭಾರತವು ವಿಶಾಲವೂ ಅತ್ಯಂತ ಸಂಕೀರ್ಣ ರಾಷ್ಟ್ರವೂ ಆಗಿರುವುದರಿಂದ ತೀರ್ಪುಗಳು ಏಕರೂಪವಾಗಿರುವುದಿಲ್ಲ. ಹಾಗಾಗಿ, ಒಂದೊಂದು ರಾಜ್ಯದಲ್ಲಿ ಒಂದೊಂದು ತೆರನಾದ ಕಾನೂನುಗಳು, ನಿಯಮಾವಳಿಗಳು ಚಾಲ್ತಿಯಲ್ಲಿವೆ. ಆದಕಾರಣ ಗೋವಿನ ವಿಚಾರದಲ್ಲಿ ಕಾನೂನುಗಳು ಗೋಜಲುಗೋಜಲಾಗಿವೆ. ಇದನ್ನು ಸರಿಪಡಿಸುವ ನಿಟ್ಟಿನಲ್ಲಿ ಸರ್ವಸಮ್ಮತ ಮೂಡಿ ಭಾರತದಲ್ಲಿ ಏಕರೂಪ ಗೋಸಂಹಿತೆ ಜಾರಿಗೆ ಬರುವುದು ಬಾಕಿಯಿದೆ.

ನಮ್ಮ ಕರ್ನಾಟಕದಲ್ಲಿ ಗೋಹತ್ಯೆ ತಡೆ ಮತ್ತು ನಿಯಂತ್ರಣ ಕಾಯ್ದೆ ಇದೆ. ಇದಕ್ಕೆ ಸಂಬಂಧಿಸಿದ ನಿಯಮಾವಳಿ ಮತ್ತು ಉಲ್ಲೇಖಗಳನ್ನು THE KARNATAKA PREVENTION OF COW SLAUGHTER AND CATTLE PRESERVATION ACT, 1964 ಕಲಂನಲ್ಲಿ ನಿರೂಪಿಸಲಾಗಿದೆ. ಅನೇಕ ಕಾನೂನುಗಳು ಉಲ್ಲಂಘನೆ ಆಗುವಂತೆ ಈ ಕಾನೂನು ಸಹ ಉಲ್ಲಂಘನೆ ಆಗುತ್ತಿರುವ ಪ್ರಕರಣಗಳು ನಿತ್ಯ ವರದಿ ಆಗುತ್ತಿರುತ್ತವೆ. ದನಕರುಗಳನ್ನು ಕಸಾಯಿಖಾನೆಗೆ ಕೊಂಡೊಯ್ಯಬಹುದು ಎಂಬ ಉಲ್ಲೇಖವೂ ಕಾಯಿದೆಯಲ್ಲಿದೆ. ಆದರೆ, ಯಾವ ಸ್ಥಿತಿಯಲ್ಲಿರುವ ಹಸು, ಎಮ್ಮೆ, ರಾಸುಗಳನ್ನು ಕಸಾಯಿಖಾನೆಗೆ ಕೊಂಡೊಯ್ಯಬೇಕು ಎಂಬ ಬಗ್ಗೆ ಕಾನೂನಿನಲ್ಲಿ ಕಲಂಗಳಲ್ಲಿ ಸ್ಪಷ್ಟಪಡಿಸಲಾಗಿದೆ. ಸಂಬಂಧಪಟ್ಟ ಅಧಿಕಾರಿಗಳ ಪರವಾನಗಿ ಪತ್ರವಿಲ್ಲದೆ ಕಸಾಯಿಖಾನೆಗೆ ಗೋವುಗಳನ್ನು ಸಾಗಿಸಬಾರದು ಎಂಬ ಕಟ್ಟಳೆ ನಿಚ್ಚಳವಾಗಿದೆ. ಆದರೂ ಅಲ್ಲಲ್ಲಿ ಆಗಾಗ ಉಲ್ಲಂಘನೆ ನಡೆಯುತ್ತಲೇ ಇರುತ್ತದೆ. ಕಾನೂನನ್ನು ಉಲ್ಲಂಘಿಸುವವರಿಗೆ ಶಿಕ್ಷೆಯ ಪರಿವೆ ಎಳ್ಳಷ್ಟೂ ಇರುವುದಿಲ್ಲ. ಶಿಕ್ಷೆಯಾದರೂ ಎಷ್ಟಿದೆ? ಗರಿಷ್ಠ 6 ತಿಂಗಳು ಜೈಲು ಶಿಕ್ಷೆ ಮತ್ತು ಸಾವಿರ ರು. ಜುಲ್ಮಾನೆ.

1975ರಲ್ಲಿ ಈ ಕಾನೂನು ತಿದ್ದುಪಡಿಯಾಗಿದೆ. ತದನಂತರ ಯಾವ ತಿದ್ದುಪಡಿಯನ್ನೂ ತಂದಿಲ್ಲ. ಈ ಕಾನೂನಿನಲ್ಲಿ ನಮೂದಿಸಿರುವ ವಿನಾಯತಿಗಳ ದುರ್ಲಾಭವನ್ನು ಅನೇಕರು ಪಡೆದುಕೊಳ್ಳುತ್ತಿರುವುದು ಸ್ಪಷ್ಟವಾಗಿದೆ. ಅಷ್ಟಕ್ಕೂ, ಎಷ್ಟು ಅಧಿಕಾರಿಗಳಿಗೆ ಈ ಕಾನೂನಿನ ಬಗ್ಗೆ ತಿಳಿವಳಿಕೆಯಿದೆ? ಸರ್ಕಾರದ ತುತ್ತತುದಿಯಲ್ಲಿ ಕುಳಿತಿರುವವರೇ ಕಣ್ಮುಚ್ಚಿ ಕುಳಿತಿರುವಾಗ ಕೆಳಗಿನವರಿಂದ ಕಠಿಣ ಕ್ರಮಗಳನ್ನು ನಿರೀಕ್ಷಿಸುವುದಾದರೂ ಹೇಗೆ? ಇದರ ಜೊತೆಗೆ ಕಾನೂನಿಗೆ ತಿದ್ದುಪಡಿ ತಂದು ಕಟ್ಟಳೆಗಳನ್ನು, ನಿಯಮಗಳನ್ನು ಇನ್ನಷ್ಟು ಸ್ಪಷ್ಟ ಮತ್ತು ಕಠಿಣ ಮಾಡುವ ಅಗತ್ಯವೂ ಇದೆ. ಹಬ್ಬ-ಹರಿದಿನಗಳಂದು ಮತ್ತು ಗಾಂಧಿ ಜಯಂತಿಯಂಥ ಆಚರಣೆಗಳಂದು ಮಾತ್ರ ಗೋಹತ್ಯೆ ಮಾಡಬಾರದೆಂದು ಸರ್ಕಾರ ಕಟ್ಟಪ್ಪಣೆ ಮಾಡುತ್ತದೆಯೇ ಹೊರತು ಉಳಿದ ದಿನಗಳಲ್ಲಿ ಯಾವುದೇ ಕ್ರಮಗಳನ್ನು ತೆಗೆದುಕೊಂಡ ನಿದರ್ಶನಗಳು ಹೆಚ್ಚಿಗೆ ಸಿಗುವುದಿಲ್ಲ.

ಕಳೆದ ವಾರ ಚಿಕ್ಕಮಂಗಳೂರಿನಿಂದ ಹಸುಗಳ ಅನಧಿಕೃತ ಸಾಗಣೆ ಸುದ್ದಿ ನಮ್ಮಲ್ಲಿ ವರದಿಯಾಗಿತ್ತು. ಮೊನ್ನೆ ತುಮಕೂರು ಜಿಲ್ಲೆ ಗುಬ್ಬಿ ತಾಲೂಕಿನಲ್ಲಿ ಇಂಥ ಪ್ರಕರಣ ನಡೆದಿದೆ. ಅದರ ಬಗ್ಗೆ ನಮ್ಮ ಬಾತ್ಮೀದಾರ ಬಿದರೆ ಪ್ರಕಾಶ್ ಚುಟುಕು ಮಾಹಿತಿ ಮತ್ತು ಚಿತ್ರಗಳನ್ನು ರವಾನಿಸಿದ್ದಾರೆ. "ಗುಬ್ಬಿಯಲ್ಲಿ ಕಸಾಯಿಖಾನೆಗೆ ದನಗಳನ್ನು ಅಕ್ರಮವಾಗಿ ಸಾಗಿಸುವ ಪ್ರಕ್ರಿಯೆ ನಡೆಯುತ್ತಿದೆ. ಇಲ್ಲಿನ ಐತಿಹಾಸಿಕ ಶ್ರೀ ಚನ್ನಬಸವೇಶ್ವರ ದೇವಸ್ಥಾನದ ಮುಂದೆಯೇ ನಡೆಯುತ್ತಿರುವ ಈ ಕೃತ್ಯ ಭಕ್ತರ ಮನಸ್ಸಿಗೆ ನೋವು ತರುವ ಸಂಗತಿಯಾಗಿದೆ" ಎಂದು ನೋವಿನಿಂದ ಅವರು ಹೇಳಿಕೊಂಡಿದ್ದಾರೆ. ಇಂಥ ಕೃತ್ಯಗಳು ಅವ್ಯಾಹತವಾಗಿ ರಾಜ್ಯಾದ್ಯಂತ ನಡೆಯುತ್ತಿದ್ದರೂ ಸರ್ಕಾರ ಮಾತ್ರ ಜಾಣ ಕುರುಡನಂತೆ ವರ್ತಿಸುತ್ತಿದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ