ನನ್ನ ಬ್ಲಾಗ್ ಪಟ್ಟಿ

ಶನಿವಾರ, ಜುಲೈ 31, 2010

2014ರಲ್ಲೂ ಸೋಲಿಗೆ ಬಿಜೆಪಿ ಕಾರಣ ಹುಡುಕಬಾರದು ಅಂದ್ರೆ?

ಡುಬಾಯ್ಸ್, ಮಾಲ್ಕಮ್ ಎಕ್ಸ್ , ರೋಜರ್ ವಿಲ್ಕಿನ್ಸ್, ಮಾರ್ಟಿನ್ ಲೂಥರ್ ಕಿಂಗ್, ಜೆಸ್ಸಿ ಜಾಕ್ಸನ್… ಯಾವುದೇ ಹೆಸರು ಹೇಳಿ, ಯಾರ ಹೆಸರನ್ನು ಬೇಕಾದರೂ ತೆಗೆದುಕೊಳ್ಳಿ. ಇವರೆಲ್ಲರೂ ಅತ್ಯಂತ ಜನಪ್ರಿಯ ಕರಿಯ ನಾಯಕರಾಗಿದ್ದವರೇ. ಡುಬಾಯ್ಸ್ ಅವರಂತೂ ೨೦ನೇ ಶತಮಾನದ ಪ್ರಭಾವಿ ಕರಿಯ ನಾಯಕರೆನಿಸಿಕೊಂಡಿದ್ದವರು. ಇನ್ನು ಮಾಲ್ಕಮ್ ಎಕ್ಸ್ ಅವರು ಕರಿಯರಿಗಾಗಿಯೇ ಪ್ರತ್ಯೇಕ (Blacks-Only) ರಾಜ್ಯ ಅಥವಾ ರಾಷ್ಟ್ರ ರಚನೆಗಾಗಿ ಕರೆಕೊಟ್ಟವರು. ಅಮೆರಿಕದಲ್ಲಿ ಸಮಾನ ಹಕ್ಕಿಗಾಗಿ ನಡೆದ ಕರಿಯರ ಹೋರಾಟದಲ್ಲಿ ರೋಜರ್ ವಿಲ್ಕಿನ್ಸ್‌ರದ್ದೂ ಸಣ್ಣ ಹೆಸರಲ್ಲ. ಮಾರ್ಟಿನ್ ಲೂಥರ್ ಕಿಂಗ್ ಒಂದು ದಂತಕಥೆಯೇ ಬಿಡಿ. ಅವರ ಜತೆ ಜತೆಯೇ ಚಳವಳಿಗೆ ಧುಮುಕಿದ ರೆವರೆಂಡ್ ಜೆಸ್ಸಿ ಜಾಕ್ಸನ್ ಡೆಮೋಕ್ರಾಟಿಕ್ ಪಕ್ಷದ ನಾಮಪತ್ರಕ್ಕಾಗಿ ಸೆಣಸಾಡುವಷ್ಟು ಪ್ರಭಾವಿ ನಾಯಕರಾಗಿ ಬೆಳೆದವರು.

ಆದರೆ ಇವರ್‍ಯಾರೂ ಒಬ್ಬ ಬರಾಕ್ ಒಬಾಮನಂತಾಗಲಿಲ್ಲವೇಕೆ?!
ಯಾವ ಬಿಳಿಯರು ಒಬಾಮ ಅವರಿಗೆ ವೋಟು ಕೊಟ್ಟು ಅಧಿಕಾರಕ್ಕೇರಿಸಿದರೋ ಅದೇ ಬಿಳಿಯರು ಮಾಲ್ಕಮ್ ಎಕ್ಸ್ ಮತ್ತು ಡಾ. ಮಾರ್ಟಿನ್ ಲೂಥರ್ ಕಿಂಗ್ ಅವರನ್ನು ಕೊಂದುಹಾಕುವಷ್ಟು ರೊಚ್ಚಿಗೆದ್ದಿದ್ದೇಕೆ? ಇತ್ತ ಡುಬಾಯ್ಸ್, ವಿಲ್ಕಿನ್ಸ್, ಜಾಕ್ಸನ್ ಕರಿಯರ ನಾಯಕ ರಾಗಿಯೇ ಉಳಿದರೇ ಹೊರತು, ಏಕೆ ಅಮೆರಿಕದ ನಾಯಕ ರೆನಿಸಿಕೊಳ್ಳಲಿಲ್ಲ? ಒಬ್ಬ ಒಬಾಮ ಅವರನ್ನು ಮಾತ್ರ ಏಕೆ ಎಲ್ಲರೂ ಒಪ್ಪಿಕೊಂಡರು? ಮೊನ್ನೆ ಮೇ 16ರಂದು ಮರ್ಮಾಘಾತಕ್ಕೊಳಗಾಗಿರುವ ಭಾರತೀಯ ಜನತಾ ಪಕ್ಷ(ಬಿಜೆಪಿ) ತನ್ನ ಆತ್ಮವಿಮರ್ಶೆಗೆ ಕುಳಿತುಕೊಳ್ಳುವಾಗ ಈ ಅಂಶಗಳತ್ತ ಗಮನಹರಿಸುವುದೊಳಿತು. ಒಬಾಮ ಅವರಂತೆ ಇಂಟರ್‌ನೆಟ್ ಬಳಸಿಕೊಂಡು “Advani for PM” ಎಂಬ ಸಂದೇಶವನ್ನು ಯುವ ಮತದಾರರಿಗೆ ತಲುಪಿಸಲು ಪ್ರಯತ್ನಿಸಿದ ಬಿಜೆಪಿಗೆ ಒಬಾಮ ಅವರ ಯಶಸ್ಸಿನ ಹಿಂದೆ ಇದ್ದ ಬಹುಮುಖ್ಯ ಅಂಶವೇಕೆ ಗಮನಕ್ಕೆ ಬರಲಿಲ್ಲ? ಅಷ್ಟಕ್ಕೂ ಚುನಾವಣಾ ಪ್ರಚಾರಾಂದೋಲನದುದ್ದಕ್ಕೂ ಒಬಾಮ ಹೇಳಿ ದ್ದೇನು?

America for all!

ಈ ಅಮೆರಿಕ ನಮ್ಮೆಲ್ಲರದ್ದು, ನಮ್ಮೆಲ್ಲರಿಗೂ ಸೇರಿದ್ದು ಎಂದರೇ ಹೊರತು ಕರಿಯರಿಗೆ ನಾನು ವಿಶೇಷ ಸವಲತ್ತು ನೀಡುತ್ತೇನೆ, ಕರಿಯರ ಹಕ್ಕುಗಳನ್ನು ರಕ್ಷಣೆ ಮಾಡುತ್ತೇನೆ, ಕರಿಯರ ಶ್ರೇಯೋಭಿವೃದ್ಧಿಯೇ ನನ್ನ ಗುರಿ ಎಂದೇಕೆ ಹೇಳಲಿಲ್ಲ? Equal Opportunity for All. ಎಲ್ಲರಿಗೂ ಸಮಾನ ಅವಕಾಶ ಎಂದರೆ ಹೊರತು, ಕರಿಯರಿಗೆ ಸಮಾನ ಅವಕಾಶ ಕಲ್ಪಿಸುತ್ತೇನೆ ಎಂದೇಕೆ ಘೋಷಿಸಲಿಲ್ಲ? ಒಂದು ವೇಳೆ ಒಬಾಮ ಹಾಗೇನಾದರೂ ಹೇಳಿದ್ದರೆ ಅಮೆರಿಕದ ಅಧ್ಯಕ್ಷ ನಾಗುವುದು ಬಿಡಿ, ಡೆಮೋಕ್ರಾಟ್ ಪಕ್ಷದ ನಾಮಪತ್ರವೂ ಸಿಗುತ್ತಿರಲಿಲ್ಲ! ಅಷ್ಟಕ್ಕೂ ಒಂದು ಜಾತಿ, ಧರ್ಮ, ವರ್ಗ, ಪಂಥಗಳ ಪರ ವಕಾಲತ್ತು ವಹಿಸುವ Identity Politics ಹೆಚ್ಚು ಕಾಲ ನಡೆಯುವುದಿಲ್ಲ.

ಅದು ಬಿಜೆಪಿಗೆ ಇಂದಿಗೂ ಅರ್ಥವಾದಂತಿಲ್ಲ!

ಚುನಾವಣೆಗೆ ಮುನ್ನ ಬಿಜೆಪಿ ಬಿಡುಗಡೆ ಮಾಡಿದ ಪ್ರಣಾಳಿಕೆಯನ್ನೇ ತೆಗೆದುಕೊಳ್ಳಿ. ಸಂವಿಧಾನದ ೩೭೦ನೇ ವಿಧಿ, ಸಮಾನ ನಾಗರಿಕ ಸಂಹಿತೆ, ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಬದ್ಧತೆ. ಈ ವಿಚಾರಗಳು ಒಪ್ಪು ವಂಥವುಗಳೇ ಆಗಿದ್ದರೂ ಬದಲಾದ ಸನ್ನಿವೇಶದಲ್ಲಿ ಅವುಗಳು ಅರ್ಥವನ್ನೂ ಕಳೆದುಕೊಂಡಿವೆ, ಅದರಿಂದ ಲಾಭವೂ ಇಲ್ಲ. ಹಾಗಾಗಿ ಈ ವಿಚಾರಗಳನ್ನು ಪ್ರಣಾಳಿಕೆಯಲ್ಲಿ ಸೇರಿಸುವ ಮೂಲಕ Lip Serviceಗೆ ನಿಂತಿದ್ದು ಬಿಜೆಪಿ ಮಾಡಿದ ಮೊದಲ ತಪ್ಪು. ಒಂದು ವೇಳೆ, ಈ ಮೂರೂ ವಿಚಾರಗಳನ್ನು ಕೈಬಿಟ್ಟಿದ್ದರೆ ಬಿಜೆಪಿಗೆ ಮತ ಹಾಕುವವರೇನು ಮನಸ್ಸು ಬದಲಾಯಿಸಿ ಕಾಂಗ್ರೆಸ್‌ಗೆ ವೋಟು ಕೊಡುತ್ತಿರಲಿಲ್ಲ, ರಾಮನೂ ಮುನಿಸಿಕೊಳ್ಳುತ್ತಿರಲಿಲ್ಲ. ಆದರೆ ಇದರಿಂದ ಅಲ್ಪಸಂಖ್ಯಾತರಲ್ಲಿರುವ ಅಪನಂಬಿಕೆಯನ್ನು ಹೋಗಲಾಡಿಸಲು ಖಂಡಿತ ಅನುಕೂಲವಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ಒಬಾಮ ಅವರ “We are, and always will be, the United States of America” ಮಾತಿನಿಂದ ಪ್ರೇರಣೆ ಪಡೆಯಬಹುದಿತ್ತು. ಅಟಲ್ ಬಿಹಾರಿ ವಾಜಪೇಯಿಯವರು ಪ್ರಧಾನಿಯಾಗಿದ್ದಾಗ ಹಾಗೂ ಪ್ರಧಾನಿಯಾಗುವುದಕ್ಕೂ ಪೂರ್ವದಲ್ಲಿ ಅಲ್ಪಸಂಖ್ಯಾತರನ್ನೂ ಮುಖ್ಯವಾಹಿನಿಗೆ ತರಲು, ಬಿಜೆಪಿಯ ಬಗ್ಗೆ ಇರುವ ಅಪನಂಬಿಕೆಯನ್ನು ದೂರ ಮಾಡಲು ಆಗಾಗ್ಗೆ ಕೆಲವೊಂದು ಹೇಳಿಕೆಗಳನ್ನಾದರೂ ನೀಡುತ್ತಿದ್ದರು. ಪಾಕಿಸ್ತಾನದ ಬಗ್ಗೆ ಎಷ್ಟೇ ಕಟುವಾಗಿ ಮಾತನಾಡಿದರೂ ಸಮಸ್ಯೆಯನ್ನು ಶಾಂತಿಯುತವಾಗಿ ಬಗೆಹರಿಸಿಕೊಳ್ಳೋಣ ಎಂದು ಮಾತುಕತೆಗೆ ಆಹ್ವಾನಿಸುವ ಹೃದಯವೈಶಾಲ್ಯತೆಯನ್ನೂ ತೋರುತ್ತಿದ್ದರು. ಕಳೆದ ವರ್ಷ ಕಾಶ್ಮೀರಕ್ಕೆ ಹೋದಾಗ ಶ್ರೀನಗರದ ವಾರ್ತಾ ಇಲಾಖೆಯ ಹಿರಿಯ ಮುಸ್ಲಿಂ ಅಧಿಕಾರಿಯೊಬ್ಬರನ್ನು ಹಾಲಿ ಯುಪಿಎ ಸರಕಾರಕ್ಕೂ ವಾಜಪೇಯಿಯವರ ಸರಕಾರಕ್ಕೂ ಏನು ವ್ಯತ್ಯಾಸ ಕಾಣುತ್ತಿದೆ? ಎಂದು ಕೇಳಿದಾಗ, “ವಾಜಪೇಯಿ ಒಬ್ಬ ಮುತ್ಸದ್ದಿ. ಅವರು ಇಲ್ಲಿಗೆ ಬಂದಾಗ ಜನರ ಕಣ್ಣಿನಲ್ಲೇ ಮನದ ಇಂಗಿತವನ್ನು ಅರಿತುಕೊಂಡರು, ಪಾಕಿಸ್ತಾನದ ಜತೆ ಮಾತುಕತೆಗೆ ಸಿದ್ಧ ಎಂದು ಘೋಷಿಸಿದರು” ಎಂದರು! ಗಡಿಯಾಚೆಗಿನ ಭಯೋತ್ಪಾದನೆಯನ್ನು ನಿಲ್ಲಿಸುವವರೆಗೂ ಪಾಕಿಸ್ತಾನದ ಜತೆ ಮಾತುಕತೆ ಸಾಧ್ಯವಿಲ್ಲ ಎಂಬ ಭಾರತದ ಸ್ಥಾಪಿತ ವಿದೇಶಾಂಗ ನಿಲುವನ್ನು ಪುನರುಚ್ಚರಿಸುತ್ತಿದ್ದ ವಾಜಪೇಯಿ, ಕಾಶ್ಮೀರಕ್ಕೆ ಭೇಟಿ ನೀಡಿದ್ದ ವೇಳೆ ಕೊನೆಯದಾಗಿ ನಡೆದ ಪ್ರತಿಕಾಗೋಷ್ಠಿಯ ಸಂದರ್ಭದಲ್ಲಿ, “ನಾವು ಸ್ನೇಹಿತ ರನ್ನು ಬದಲಾಯಿಸಬಹುದು, ಆದರೆ ನೆರೆಯವರನ್ನಲ್ಲ. ಪಾಕಿಸ್ತಾನದ ಜತೆ ಮಾತುಕತೆಗೆ ಸಿದ್ಧ” ಎಂದು ಹೇಳಿಕೆ ನೀಡಿ ಬಿಟ್ಟರು. ಇಡೀ ಬಿಜೆಪಿಯೇ ದಿಗ್ಭ್ರಮೆಗೊಂಡಿತು! ವಾಜಪೇಯಿಯವರಿಗೆ ಅಂತಹ ನಿರ್ಧಾರ ತೆಗೆದುಕೊಳ್ಳುವ ತಾಕತ್ತೂ ಇತ್ತು, ದೂರದೃಷ್ಟಿಯೂ ಇತ್ತು. ನಮಗೆ ಹೇಗೆ ವಿಶ್ವದ ಏಕೈಕ ಹಿಂದೂ ರಾಷ್ಟ್ರವಾಗಿದ್ದ ನೇಪಾಳದ ಜತೆ ಭಾವನಾತ್ಮಕ ಸಂಬಂಧವಿದೆಯೋ, ದೂರದ ಮಲೇಷಿಯಾ, ಫಿಜಿಯಲ್ಲಿ ಹಿಂದೂಗಳ ಮೇಲೆ ದೌರ್ಜನ್ಯವಾದರೆ ಹೇಗೆ ನಮ್ಮ ಕುರುಳನ್ನು ಹಿಂಡಿದಂತಾಗುತ್ತದೋ ಭಾರತೀಯ ಮುಸ್ಲಿಮರಿಗೂ ಪಾಕಿಸ್ತಾನದ ಬಗ್ಗೆ Soft corner ಇದ್ದೇ ಇದೆ. ಅದನ್ನು ಕಿತ್ತುಹಾಕಲು ಯಾರಿಂದಲೂ ಸಾಧ್ಯವಿಲ್ಲ.

ಪಾಕಿಸ್ತಾನದ ಜತೆ ವಾಜಪೇಯಿಯವರು ಮಾತುಕತೆಗೆ ಮುಂದಾಗಿದ್ದಕ್ಕೂ ಭಾರತೀಯ ಮುಸ್ಲಿಮರಿಗೂ ಏನು ಸಂಬಂಧ ಅಂತೀರಾ?

ಪಾಕ್ ಜತೆ ಮಾತುಕತೆ ನಡೆಸಿದ ಮಾತ್ರಕ್ಕೆ ಭಾರತೀಯ ಮುಸ್ಲಿಮರು ಬಿಜೆಪಿಗೆ ವೋಟು ಕೊಡುತ್ತಾರೆ ಎಂದಲ್ಲ. ಆದರೆ ಪಾಕಿಸ್ತಾನದ ಜತೆ ಮಾತುಕತೆಗೆ ಮುಂದಾಗಿದ್ದರಿಂದ ಬಿಜೆಪಿಯೆಂದರೆ ಮುಸ್ಲಿಂ ವಿರೋಧಿಯಲ್ಲ, ಮುಸ್ಲಿಮರನ್ನು ನಾಶಪಡಿಸುವುದು ಅದರ ಉದ್ದೇಶವಲ್ಲ ಎಂಬ ಸದಭಿಪ್ರಾಯ ಮುಸ್ಲಿಮರಲ್ಲಿ ಮೂಡಲು ಅದು ಸಹಕಾರಿಯಾಗುತ್ತಿತ್ತು. ಆಗ ಮುಸ್ಲಿಮರು ಬಿಜೆಪಿಗೆ ವೋಟು ಹಾಕದಿದ್ದರೂ ಬಿಜೆಪಿಯ ವಿರುದ್ಧ Gang-up ಆಗುವುದು ತಪ್ಪುತ್ತಿತ್ತು. ಬಿಜೆಪಿಗೆ ಕೋಮು ವಾದಿ ಎಂಬ ಕಳಂಕ ದೂರವಾಗಿ ಒಂದಷ್ಟು ಮಿತ್ರಪಕ್ಷಗಳೂ ಸಿಗುತ್ತಿದ್ದವು. ಅದರಿಂದ ತನ್ನ ಬಾಹುಳ್ಯವಿಲ್ಲದ ರಾಜ್ಯಗಳಲ್ಲಿ ಬಿಜೆಪಿ ಮಿತ್ರಪಕ್ಷಗಳ ಸಹಾಯ ಪಡೆಯಬಹುದಿತ್ತು. ಆದರೆ ವಾಜಪೇಯಿಯವರ ರಾಜಕೀಯ ಅಂತ್ಯದ ನಂತರ, ಅಂದರೆ ಕಳೆದ ೫ ವರ್ಷಗಳಲ್ಲಿ ಮುಸ್ಲಿಮರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಯಾವ ಕೆಲಸವನ್ನೂ ಬಿಜೆಪಿ ಮಾಡಲಿಲ್ಲ. ನಾವು ಯಾರನ್ನಾ ದರೂ ಕಳ್ಳ, ಕಳ್ಳ, ಕಳ್ಳ, ಕಳ್ಳ ಎಂದು ಸದಾ ಹೇಳುತ್ತಿದ್ದರೆ ಆತ ನಿಜವಾಗಿಯೂ ಕಳ್ಳನಾಗಿದ್ದರೂ ಜನ ಹೇಳುವವನನ್ನೇ ಅನುಮಾನಿಸಲು ಆರಂಭಿಸುತ್ತಾರೆ. ಬಿಜೆಪಿಗೆ ಆಗಿದ್ದೂ ಅದೇ. ಕಳೆದ 5 ವರ್ಷಗಳಲ್ಲಿ ಅಫ್ಜಲ್ ಗುರುವಿನ ಹೆಸರನ್ನು ಅದೆಷ್ಟು ಬಾರಿ ಪುನರುಚ್ಛರಿಸಿದರೆಂದರೆ ಬಿಜೆಪಿ ಬೆಂಬಲಿಗರಿಗೇ ವಾಕರಿಕೆ ಬರುವಂತಾಗಿತ್ತು. ಅದರಿಂದ ಉದ್ದೇಶವೂ ಸಾಧನೆಯಾಗಲಿಲ್ಲ, ಪರೋಕ್ಷವಾಗಿ ಬಿಜೆಪಿ ಅಲ್ಪಸಂಖ್ಯಾತ ವಿರೋಧಿ ಎಂಬ ಭಾವನೆಯೂ ಗಟ್ಟಿಯಾಗತೊಡಗಿತು. ಅದರಲ್ಲೂ ‘ಅಫ್ಜಲ್ ಗುರು, ಆನಂದ್ ಆಗಿದ್ದರೆ ಯುಪಿಎ ಸರಕಾರ ಆತನನ್ನು ಗಲ್ಲಿಗೇರಿಸಿರುತ್ತಿತ್ತು’ ಎಂಬ ತೀರಾ ಬಾಲಿಶ ಹೇಳಿಕೆ ನೀಡಿದ ಲಾಲ್ ಕೃಷ್ಣ ಆಡ್ವಾಣಿಯವರು ಕೋಮು ಕಂದಕವನ್ನು ಇನ್ನಷ್ಟು ದೊಡ್ಡದು ಮಾಡಿದರು. ಅವರ ಮಾತಿನಲ್ಲಿ ಸತ್ಯವಿದ್ದರೂ ಒಂದು ದೇಶದ ಪ್ರಧಾನಿ ಸ್ಥಾನದ ಆಕಾಂಕ್ಷಿ ಹೇಳುವ ಮಾತು ಅದಾಗಿರಲಿಲ್ಲ. ಇಂತಹ ಹೇಳಿಕೆ ನೀಡುವವರ ಜತೆ ಯಾವ ಪ್ರಾದೇಶಿಕ ಪಕ್ಷ ತಾನೇ ಕೈಜೋಡಿಸಲು ಮುಂದಾದೀತು?

ಬಿಜೆಪಿ ಎಡವಿದ್ದೇ ಇಲ್ಲಿ.

ಅದು ಮತ್ತೆ ಮತ್ತೆ Identity Politicsಗೆ ಕೈಹಾಕುತ್ತದೆ. 1992ರ ಬಾಬರಿ ನೆಲಸಮ ಘಟನೆ ನಡೆದು 17 ವರ್ಷ ಗಳೇ ಕಳೆದಿವೆ. ಈ ೧೭ ವರ್ಷಗಳಲ್ಲಿ ಹೊಸದೊಂದು ದೊಡ್ಡ ತಲೆಮಾರೇ ಬೆಳೆದು ನಿಂತಿದೆ. ಈ ತಲೆಮಾರಿಗೆ 1992ರಲ್ಲಿ ಏನು ನಡೆಯಿತು ಎಂಬುದೇ ಗೊತ್ತಿಲ್ಲ. ವಸ್ತುಸ್ಥಿತಿ ಹೀಗಿದ್ದರೂ ಬಿಜೆಪಿಯ ಮನಸ್ಥಿತಿ ಮಾತ್ರ 1992ರಲ್ಲೇ ನಿಂತುಹೋದಂತಾಗಿದೆ. ಮಂದಿರ-ಮಸೀದಿ uಚಿoಛಿooಜಿಟ್ಞ ನಿಂದ ಅದು ಹೊರಬಂದಿಲ್ಲ. ಹಾಗಾಗಿಯೇ ಏನೂ ಗಿಟ್ಟುವುದಿಲ್ಲ ಎಂದು ಗೊತ್ತಿದ್ದರೂ ಆರ್ಟಿಕಲ್ 370, ಅಯೋಧ್ಯೆ, ಸಮಾನ ನಾಗರಿಕ ಸಂಹಿತೆ ಎಂದು ಜಪ ಮಾಡುತ್ತದೆ. ಈ ಮೂರು ವಿಚಾರಗಳು ಬಿಜೆಪಿಗೆ ಪ್ರಾರಂಭಿಕ ಯಶಸ್ಸನ್ನು ತಂದುಕೊಟ್ಟಿದ್ದರೂ ಬದಲಾದ ಸನ್ನಿವೇಶದಲ್ಲಿ ರಾಜಕೀಯವಾಗಿ ಅಧಿಕಾರಕ್ಕೇರಲು ಅವು ಮೆಟ್ಟಿಲುಗಳಲ್ಲ. ಸ್ವಂತ ಬಲದಿಂದ ನಾವು ಅಧಿಕಾರಕ್ಕೇರಿದಾಗ ಈ ಅಂಶಗಳನ್ನು ಜಾರಿಗೆ ತರುತ್ತೇವೆ ಎಂದು ಒಮ್ಮೆ ಘೋಷಣೆ ಮಾಡಿ, ಅಷ್ಟು ಸ್ಥಾನಗಳನ್ನು ಗೆಲ್ಲಿಸಬೇಕಾದ ಜವಾಬ್ದಾರಿಯನ್ನು ಜನರ ತಲೆಗೇ ಕಟ್ಟಿ ಸುಮ್ಮನಾಗಿದ್ದರೆ ಬಿಜೆಪಿ ರಾಜಕೀಯ ಪ್ರೌಢಿಮೆ ತೋರಿದಂತಾಗುತ್ತಿತ್ತು. ಜತೆಗೆ ಮುಸ್ಲಿಂ ವೋಟ್‌ಬ್ಯಾಂಕ್ ಎಂದು ಸದಾ ದೂರುವ ಬದಲು, ‘ಇದು ನಮ್ಮ ಭಾರತ, ನಮ್ಮೆಲ್ಲರ ಭಾರತ. ಇದು ನಮಗೆಷ್ಟು ಸೇರುತ್ತದೋ, ನಿಮಗೂ ಅಷ್ಟೇ ಹಕ್ಕಿದೆ’ ಎಂದು ಸಾರ್ವಜನಿಕವಾಗಿ ಘೋಷಣೆ ಮಾಡುವ ಮೂಲಕ ಮುಸ್ಲಿಂ ಸಮುದಾಯದಲ್ಲಿರುವ ಅಪನಂಬಿಕೆ, ಅನುಮಾನವನ್ನು ದೂರ ಮಾಡಲು ಯತ್ನಿಸಬಹುದಿತ್ತು. ಹಾಗೆ ಮುಸ್ಲಿಂ ಸಮುದಾಯಕ್ಕೆ ಕರೆ ನೀಡಿದ್ದರೆ ವೋಟು ಬೀಳದಿದ್ದರೂ ಕನಿಷ್ಠ ಆ ಸಮುದಾಯಕ್ಕೆ ಬಿಜೆಪಿ ಬಗ್ಗೆ ತಟಸ್ಥ ನಿಲುವಾದರೂ ಸೃಷ್ಟಿಯಾಗುತ್ತಿತ್ತು. ಇನ್ನು ಯಾವುದೇ ಮಾರ್ಗವಾಗಿ ಬಂದರೂ ಉತ್ತರ ಪ್ರದೇಶ ಮೂಲಕವೇ ದಿಲ್ಲಿಗೆ ಹೋಗಬೇಕು ಎಂಬ ಮಾತಿದೆ. ಅಂದರೆ 80 ಲೋಕಸಭಾ ಸ್ಥಾನಗಳನ್ನು ಹೊಂದಿರುವ ಉತ್ತರ ಪ್ರದೇಶವನ್ನು ಜಯಿಸದೇ ದಿಲ್ಲಿಯಲ್ಲಿ ಗದ್ದುಗೆಯೇರಲು ಸಾಧ್ಯವಿಲ್ಲ. ಈ ಹಿನ್ನೆಲೆಯಲ್ಲಿ ಉತ್ತರ ಪ್ರದೇಶ ಜನರಿಗೆ ಅಯೋಧ್ಯೆಯಲ್ಲಿ ಶ್ರೀರಾಮನ ಭವ್ಯ ಮಂದಿರ ನಿರ್ಮಾಣವಾಗುವುದಕ್ಕಿಂತ ರಾಜ್ಯದಲ್ಲಿ ಕಾನೂನು-ಸುವ್ಯವಸ್ಥೆ ನೆಲೆಗೊಳ್ಳುವುದು, ಶಾಂತಿಯುತ ಪರಿಸ್ಥಿತಿ ನಿರ್ಮಾಣವಾಗುವುದು ಮುಖ್ಯ. ಅಂತಹ ಪರಿಸ್ಥಿತಿ ಯನ್ನು ನಿರ್ಮಾಣ ಮಾಡುವ ಭರವಸೆಯನ್ನು ಜನರಿಗೆ ನೀಡಬೇಕು ಎಂಬುದು ಬಿಜೆಪಿಗೆ ಅರ್ಥವಾಗುತ್ತಲೇ ಇಲ್ಲ.

ಹೀಗಿದ್ದಾಗ ಗದ್ದುಗೆ ಏರುವ ಕನಸು ಕಂಡರೆ ಏನು ಪ್ರಯೋಜನ?

ಇನ್ನು ವಾಜಪೇಯಿಯವರ ಜತೆ ಸುದೀರ್ಘ ರಾಜಕೀಯ ಜೀವನವನ್ನು ಕಳೆದ ಆಡ್ವಾಣಿಯವರು ವಾಜಪೇಯಿ ಯವರಲ್ಲಿದ್ದ ಉದಾರ ಮನೋಭಾವವನ್ನಾಗಲಿ, ಜಾಣ್ಮೆಯ ನ್ನಾಗಲಿ ಮೈಗೂಡಿಸಿಕೊಂಡಿದ್ದರೆ ಬಹುಶಃ ಈ ವೇಳೆಗೆ ಪ್ರಧಾನಿಯಾಗಿರುತ್ತಿದ್ದರೋ ಏನೋ! 1999ರ ಚುನಾವಣೆ ವೇಳೆ ಸೋನಿಯಾ ಗಾಂಧಿಯವರು ವಾಜಪೇಯಿಯವರನ್ನು ‘ಗದ್ದರ್’, ‘Liar’ ಎಂದರು. ಆದರೆ ವಾಜಪೇಯಿ ಅದೇ ಮಟ್ಟಕ್ಕಿಳಿದು ಮಾರುತ್ತರ ನೀಡಲು ಮುಂದಾಗದೆ, ಜೋಕು ಮಾಡಿ ಸುಮ್ಮನಾದರು. ಗದ್ದರ್, ಲೈಯರ್ ಎಂದ ಸೋನಿಯಾ ಗಾಂಧಿಯವರೇ ಕುಬ್ಜರಾಗಿ ಹೋದರು, ಅವರ ಪಕ್ಷದ ಸಂಸದರ ಸಂಖ್ಯೆ 120 ದಾಟಲಿಲ್ಲ! ಅಷ್ಟೇಕೆ, ಆಡ್ವಾಣಿಯವರು ಯಾವ ಮನಮೋಹನ್ ಸಿಂಗ್ ವಿರುದ್ಧ ಸೋತಿದ್ದಾರೋ ಅದೇ ಮನಮೋಹನ್ ಸಿಂಗ್ ಅವರನ್ನು ವಿಜಯ್ ಮಲ್ಹೋತ್ರಾ ಎಂಬ ಅಷ್ಟೇನು ಜನಪ್ರಿಯರಲ್ಲದ ವ್ಯಕ್ತಿ ಅತ್ಯಂತ ಪ್ರತಿಷ್ಠಿತ ಕ್ಷೇತ್ರವಾದ ದಕ್ಷಿಣ ದಿಲ್ಲಿಯಲ್ಲಿ ಸೋಲಿಸಿದ್ದರು. ಆದರೆ ಈ ಬಾರಿ ಮನಮೋಹನ್ ಸಿಂಗ್ ಅವರನ್ನು ಪದೇ ಪದೆ ‘ಅತ್ಯಂತ ದುರ್ಬಲ’ ಪ್ರಧಾನಿ ಎಂದು ಕುಟುಕಿದ್ದು, ಅಭಿವೃದ್ಧಿ ಕಾರ್ಯಗಳ ಬಗ್ಗೆ ಗಮನಹರಿಸದೇ ನಕಾರಾತ್ಮಕ ಪ್ರಚಾರದಲ್ಲೇ ತೊಡಗಿದ್ದು ತಿರುಗುಬಾಣವಾಯಿತು. ಮಾಧ್ಯಮಗಳು ಒಂದು ಸಣ್ಣ ವಿಷಯವನ್ನು ದೊಡ್ಡದು ಮಾಡುತ್ತವೆ ಎಂದು ಗೊತ್ತಿದ್ದರೂ, ಅದು ಈ ಹಿಂದೆಯೂ ಅನುಭವಕ್ಕೆ ಬಂದಿದ್ದರೂ ವರುಣ್‌ಗಾಂಧಿ ವಿಚಾರದಲ್ಲಾಗಲಿ, ದುರ್ಬಲ ಪ್ರಧಾನಿ ಹೇಳಿಕೆಯ ಸಂಬಂಧವಾಗಲಿ ಬಿಜೆಪಿ ಎಚ್ಚರಿಕೆಯಿಂದ ವರ್ತಿಸಲಿಲ್ಲ. ಇದರಿಂದಾಗಿ ಅಲ್ಪಸಂಖ್ಯಾತರು ಬಿಜೆಪಿ ವಿರುದ್ಧ ಹಾಗೂ ಕಾಂಗ್ರೆಸ್ ಪರವಾಗಿ ಸಂಘಟಿತರಾಗುವಂತಾಯಿತು.

ಬಿಜೆಪಿಗೆ ಇಂದಿಗೂ ಮಾಧ್ಯಮದ ಅಗತ್ಯತೆ ಬಗ್ಗೆ ಅರಿವಾಗಿಲ್ಲ.

ನಿಷ್ಪಕ್ಷಪಾತತೆ, ಪ್ರಜಾಪ್ರಭುತ್ವದ ನಾಲ್ಕನೆ ಅಂಗ ಮುಂತಾ ದುವುಗಳು ಹೇಳುವುದಕ್ಕಷ್ಟೇ ಚೆನ್ನ. ಇವತ್ತು ಮಾಧ್ಯಮಗಳೂ ದೌರ್ಬಲ್ಯಗಳಿಂದ ಮುಕ್ತವಾಗಿಲ್ಲ. ಇಷ್ಟಾಗಿಯೂ ಸಾರ್ವ ಜನಿಕ ಅಭಿಪ್ರಾಯವನ್ನು ಮೂಡಿಸುವಲ್ಲಿ, ಜನರನ್ನು ದಿಕ್ಕು ತಪ್ಪಿಸುವಲ್ಲಿ ಮಾಧ್ಯಮಗಳ ಪಾತ್ರ ಬಹುದೊಡ್ಡದು. ಹಾಗಾಗಿ ಮಾಧ್ಯಮಗಳ ಮೇಲೆ ಹಿಡಿತ ಸಾಧಿಸಬೇಕಾದುದು ರಾಜಕೀಯದ ಒಂದು ಅಂಗವೇ ಆಗಿದೆ. ಕಮ್ಯುನಿಸ್ಟರಂತೂ ಕ್ಲಾಸ್‌ರೂಮ್‌ಗಳನ್ನೇ penetrate ಮಾಡಿರುವುದರಿಂದ ಖರ್ಚಿಲ್ಲದೆ ಅವರ ಉದ್ದೇಶ ಸಾಧನೆಯಾಗುತ್ತಿದೆ. ಇನ್ನು ಕಾಂಗ್ರೆಸ್ ಅಂತೂ ಯಾವ ಕೊರತೆಯೂ ಇಲ್ಲ. ಆದರೆ ಮಾಧ್ಯಮಗಳ ಪೂರ್ವಗ್ರಹದ ಬಗ್ಗೆ ಕೋಪಿಸಿಕೊಳ್ಳುವ ಬಿಜೆಪಿ ಅದಕ್ಕೆ ಪರಿಹಾರವೇನೆಂಬುದನ್ನು ಮಾತ್ರ ಕಂಡುಕೊಳ್ಳು ವುದಿಲ್ಲ. ಒಂದು ವೃತ್ತಿಪರ ಪ್ರಭಾವಿ ಪತ್ರಿಕೆ, ಟಿವಿ ಚಾನೆಲ್ ಎಷ್ಟು ಅಗತ್ಯ ಎಂಬುದನ್ನು ಇನ್ನೂ ಅರಿತುಕೊಂಡಿಲ್ಲ. ಆದರೆ ಸಿಕ್ಕ ಅವಕಾಶಗಳಲ್ಲೆಲ್ಲ ಮಾಧ್ಯಮಗಳ ಮೇಲೆ ಹರಿಹಾಯುತ್ತಾರೆ. ಒಬ್ಬ ಸರ್ದೇಸಾಯಿ, ಬರ್ಖಾ ದತ್ ಅವರ ಮೇಲೆ ಕೋಪಿಸಿಕೊಳ್ಳುವುದಕ್ಕಿಂತ, ಅದೇ ಮಾಧ್ಯಮಗಳನ್ನು ಬಳಸಿಕೊಂಡು ನೂರು ಕೋಟಿ ಜನರಿಗೆ ಮನವರಿಕೆಯಾಗಬಹುದಾದ, ಸಮಾಧಾನ ತರುವಂತಹ ಹೇಳಿಕೆಯೊಂದನ್ನೇಕೆ ಕೊಡಬಾರದು?

ಇನ್ನು ಈ ಬಾರಿ ಬಿಜೆಪಿ ಸೋಲಿಗೆ ಕಾರಣವಾದ ಮತ್ತೊಂದು ಗಮನಾರ್ಹ ಅಂಶವೆಂದರೆ, ಗೆದ್ದೇ ಗೆಲ್ಲುತ್ತೇವೆ, ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮುವುದು ನಾವೇ, ಮಿತ್ರಪಕ್ಷಗಳೆಲ್ಲ ಕಾಂಗ್ರೆಸ್‌ಗೆ ಕೈಕೊಟ್ಟಿವೆ ಇಂತಹ ಅಂದಾಜು ಮತ್ತು Arroganceಗಳು. ಆದರೆ ಒಟ್ಟು ಸುಮಾರು ೧೮೦ ಸ್ಥಾನಗಳನ್ನು ಹೊಂದಿರುವ ಆಂಧ್ರಪ್ರದೇಶ, ತಮಿಳುನಾಡು, ಕೇರಳ, ಪಶ್ಚಿಮ ಬಂಗಾಳ ಹಾಗೂ ಈಶಾನ್ಯ ರಾಜ್ಯಗಳಲ್ಲಿ ಬಿಜೆಪಿಗೆ ಮಿತ್ರಪಕ್ಷಗಳೇ ಇಲ್ಲ. ಕಾಂಗ್ರೆಸ್ ಲಾಭ ಪಡೆದಿದ್ದೇ ಈ ರಾಜ್ಯಗಳಲ್ಲಿ. ಮೈತ್ರಿ ಮಾಡಿಕೊಳ್ಳಲು ಮುಂದಾದರೂ ಕೋಮುವಾದಿ ಎಂಬ ಹಣೆಪಟ್ಟಿಯಿಂದಾಗಿ ಯಾರೂ ಬಿಜೆಪಿ ಹತ್ತಿರಕ್ಕೆ ಬರುವುದಿಲ್ಲ. ಹಾಗಂತ ಬಿಜೆಪಿ ಕೂಡ ಮತ್ತೊಂದು ಕಾಂಗ್ರೆಸ್ ಆಗಬೇಕು, ಅಲ್ಪಸಂಖ್ಯಾತರ ಓಲೈಕೆ ಮಾಡಬೇಕು ಎಂದಲ್ಲ. ತಾನೊಂದು ಅಲ್ಪಸಂಖ್ಯಾತ ವಿರೋಧಿ ಪಕ್ಷವೆಂಬ ಹಣೆಪಟ್ಟಿಯನ್ನು ಖಂಡಿತ ಕಳಚಿಕೊಳ್ಳಲೇಬೇಕು ಹಾಗೂ ಐಡೆಂಟಿಟಿ ಪಾಲಿಟಿಕ್ಸ್‌ನಿಂದ ಹೊರಬರಬೇಕು. ಜತೆಗೆ ಮತಾಂತರ ತಡೆಗೆ ಹಿಂಸೆ ಮದ್ದಲ್ಲ, ಬಡವರ ಶ್ರೇಯೋಭಿವೃದ್ಧಿ ಎಂಬುದನ್ನು ಕಂಡುಕೊಳ್ಳಬೇಕು. 11 ವರ್ಷಗಳ ಕಾಲ ಬಿಜೆಡಿ ಜತೆ ಒರಿಸ್ಸಾದಲ್ಲಿ ಅಧಿಕಾರ ನಡೆಸಿದ ಬಿಜೆಪಿ, ಕಂದಮಲ್ ಮತ್ತು ಕಿಯೋಂಜರ್ ಜಿಲ್ಲೆಗಳಲ್ಲಿ ಹಿಂದೂಗಳು ಮತಾಂತರಗೊಳ್ಳಲು ಕಾರಣವಾಗಿರುವ ಬಡತನಕ್ಕೆ ಮದ್ದು ನೀಡಿದ್ದರೆ ಮೈತ್ರಿಯೂ ಉಳಿಯುತ್ತಿತ್ತು, 20 ಲೋಕಸಭಾ ಸ್ಥಾನಗಳೂ ದಕ್ಕುತ್ತಿದ್ದವು.

ಇವುಗಳ ಜತೆಗೆ 6 ವರ್ಷಗಳ ಎನ್‌ಡಿಎ ಆಡಳಿತದಲ್ಲಾದ ಬದಲಾವಣೆಗಳನ್ನು ಜನರ ಗಮನಕ್ಕೆ ತಂದು ಜನಾದೇಶ ಕೇಳದೆ ಇದ್ದಿದ್ದೂ ಬಿಜೆಪಿಗೆ ಮಾರಕವಾಯಿತು. ಯಾರೇನೇ ಹೇಳಲಿ, ಚುನಾವಣೆ ಎಂಬುದು ಒಂದು ಯುದ್ಧ. ಯಾರು ಒಳ್ಳೆಯ ಕಾರ್ಯತಂತ್ರ ರೂಪಿಸುತ್ತಾರೋ, ಯಾರು ಜನರ ಬಳಿಗೆ ಹೋಗಿ ಮನವೊಲಿಸುತ್ತಾರೋ ಅವರಿಗೇ ಗೆಲುವು. ಮುಂದಿನ ಐದು ವರ್ಷಗಳಲ್ಲಾದರೂ ಸಂಸತ್ತಿನ ಕಲಾಪವನ್ನು ಹಾಳುಮಾಡುವ ಬದಲು ಬಿಜೆಪಿ ತಪ್ಪನ್ನು ಅರಿತುಕೊಂಡು ಸರಿಪಡಿಸಿಕೊಳ್ಳಲು ಪ್ರಯತ್ನಿಸುವುದೊಳಿತು. ಜತೆಗೆ ಡುಬಾಯ್ಸ್, ಮಾಲ್ಕಮ್ ಎಕ್ಸ್, ರೋಜರ್ ವಿಲ್ಕಿನ್ಸ್ ಅವರಂತೆ ಐಡೆಂಟಿಟಿ ಪಾಲಿಟಿಕ್ಸ್ ಮಾಡುವುದನ್ನು ಕೈಬಿಟ್ಟು ಒಬಾಮ ಅವರಂತೆ Inclusive politicsನ ಮಾತನಾಡುವುದೊಳಿತು.

ಇಲ್ಲದಿದ್ದರೆ, 2014ರಲ್ಲಿ ಮತ್ತೊಂದು ಸೋಲಿನ ಪರಾ ಮರ್ಶೆ ನಡೆಸುತ್ತಾ ಕುಳಿತಿರಬೇಕಾಗುತ್ತದೆ!

ಕೃಪೆ : ಪ್ರತಾಪ್ ಸಿಂಹ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ