ನನ್ನ ಬ್ಲಾಗ್ ಪಟ್ಟಿ

ಶನಿವಾರ, ಜುಲೈ 31, 2010

ಈಶ್ವರಪ್ಪಾ, ಯಡಿಯೂರಪ್ಪಾ, ನಿಮಗೆ ವೋಟು ಕೊಟ್ಟಿದ್ದೇ ತಪ್ಪಾ?

ಈ ಘಟನೆ ನಡೆದಿದ್ದು 1978ರಲ್ಲಿ. ಮೊರಾರ್ಜಿ ದೇಸಾಯಿ ಅವರು ಪ್ರಧಾನಿಯಾಗಿ ವರ್ಷವಷ್ಟೇ ಕಳೆದಿತ್ತು. ಅದಾಗಲೇ ಪ್ರಧಾನಿ ಸ್ಥಾನಕ್ಕೆ ಕಂಟಕ ಎದುರಾಗಿತ್ತು. ಮತ್ತೊಬ್ಬ ಪ್ರಭಾವಿ ಜನತಾ ನಾಯಕ ಹಾಗೂ ಗೃಹ ಸಚಿವ ಚೌಧರಿ ಚರಣ್ ಸಿಂಗ್ ಮೊದಲಿನಿಂದಲೂ ಪ್ರಧಾನಿ ಹುದ್ದೆಯ ಮೇಲೆ ಕಣ್ಣಿಟ್ಟಿದ್ದರು. ಜತೆಗೆ ಬಾಬು ಜಗಜೀವನ್ ರಾಮ್ ಕೂಡ ಪ್ರಧಾನಿ ಸ್ಥಾನದ ಆಕಾಂಕ್ಷಿಯಾಗಿದ್ದರು. ಹಾಗಾಗಿ ಬಂಡಾಯದ ಹೊಗೆಯಾಡುತ್ತಿತ್ತು. ಚರಣ್ ಸಿಂಗ್ ಅವರು ಮುರಾರ್ಜಿ ವಿರುದ್ಧ ಕ್ಷಿಪ್ರಕ್ರಾಂತಿ ನಡೆಸಿ ಪ್ರಧಾನಿ ಸ್ಥಾನವನ್ನೇ ಕಿತ್ತುಕೊಳ್ಳಬಹುದು ಎಂಬ ಗುಸು ಗುಸು ಕೇಳಿ ಬರುತ್ತಿತ್ತು. ಅದೇ ಸಂದರ್ಭದಲ್ಲಿ ಚುನಾವಣಾ ಸುಧಾರಣೆಗಳ ಬಗ್ಗೆ ಪರಾಮರ್ಶೆ ನಡೆಸಲು ನಾಲ್ವರು ಸಚಿವರನ್ನೊಳಗೊಂಡ ಕೇಂದ್ರ ಸಂಪುಟದ ಸಮಿತಿಯೊಂದು ರಚನೆಯಾಗಿತ್ತು. ಗೃಹ ಸಚಿವ ಚರಣ್ ಸಿಂಗ್, ಕಾನೂನು ಸಚಿವ ಶಾಂತಿ ಭೂಷಣ್, ವಾರ್ತಾ ಮತ್ತು ಪ್ರಸಾರ ಖಾತೆ ಸಚಿವ ಲಾಲ್ ಕೃಷ್ಣ ಆಡ್ವಾಣಿ ಹಾಗೂ ಮತ್ತೊಬ್ಬ ಸಚಿವರಾದ ಡಾ. ಪಿ.ಸಿ. ಚಂದರ್ ಸಮಿತಿಯಲ್ಲಿದ್ದರು. ಈ ಸಮಿತಿಯ ಸಭೆಯೊಂದು ಬೆಳಗ್ಗೆ 11 ಗಂಟೆಗೆ ಪ್ರಾರಂಭವಾಗಬೇಕಿತ್ತು. ಎಲ್ಲರೂ ಸರಿಯಾದ ಸಮಯಕ್ಕೆ ಆಗಮಿಸಿದರು. ಆದರೆ ಚರಣ್ ಸಿಂಗ್ ಇನ್ನೂ ಬಂದಿರಲಿಲ್ಲ. ಅವರನ್ನು ಬಿಟ್ಟು ಸಭೆ ನಡೆಸೋಣವೆಂದರೆ ಚರಣ್‌ಸಿಂಗ್ ಹಿರಿಯ ನಾಯಕರು. ಅವರಿಗೆ ಮುಜುಗರವುಂಟುಮಾಡು ವುದು ಉಚಿತವಲ್ಲ ಎಂದೆಣಿಸಿ ಎಲ್ಲರೂ ದಾರಿ ಕಾಯುತ್ತಾ ಕುಳಿತರು. ಅಷ್ಟರಲ್ಲಿ ಚರಣ್ ಸಿಂಗ್ ಆಗಮಿಸಿದರು. ಆದರೆ ಎಲ್ಲರೂ ತಮಗಾಗಿ ಕಾಯುತ್ತಿರುವುದನ್ನು ಕಂಡು ಅವರಿಗೇ ಮುಜುಗರವುಂಟಾಯಿತು. ಹಾಗಾಗಿ ಕುರ್ಚಿಯ ಹಿಂದೆ ನಿಂತುಕೊಂಡ ಚರಣ್ ಸಿಂಗ್, “ದಯವಿಟ್ಟು ನನ್ನನ್ನು ಕ್ಷಮಿಸಿ” ಎಂದರು. ಇದನ್ನು ಕಂಡ ಇತರ ಸಚಿವರು, ಚರಣ್ ಸಿಂಗ್ ಅವರ ಹಿರಿತನಕ್ಕೆ ಮಾರುಹೋಗಿ, ‘ಪರವಾಗಿಲ್ಲ ಕುಳಿತುಕೊಳ್ಳಿ’ ಎಂದರು.
ಆದರೆ ಚರಣ್ ಸಿಂಗ್ ಕುಳಿತುಕೊಳ್ಳಲಿಲ್ಲ.

“ನೀವು ಕ್ಷಮಿಸುವವರೆಗೂ ನಾನು ಕುಳಿತುಕೊಳ್ಳುವುದಿಲ್ಲ” ಎಂದು ಹಠ ಹಿಡಿದುಕೊಂಡು ನಿಂತರು. ಅಷ್ಟೇ ಅಲ್ಲ, ತಾವೇಕೆ ತಡವಾಗಿ ಬಂದನೆಂದು ವಿವರಿಸಲೂ ಆರಂಭಿಸಿದರು. “ನಾನು ಬಹಳ ಮುಂಗಡವಾಗಿಯೇ ಮನೆಯಿಂದ ಹೊರಟೆ. ಆದರೆ ಕಾರೊಳಗೆ ಕುಳಿತುಕೊಳ್ಳುವಷ್ಟರಲ್ಲಿ ಪತ್ರಕರ್ತನೊಬ್ಬ ಎದುರಾದ. ಪ್ರಧಾನಿಯಾಗಲು ನೀವು ಬಹಳ ಉತ್ಸುಕರಾಗಿದ್ದೀರಾ? ಎಂದು ಕೇಳಿದ. ನನಗೆ ಕೋಪ ಬಂತು. ಅಷ್ಟಕ್ಕೂ ಪ್ರಧಾನಿಯಾಗಬೇಕೆಂಬ ಮಹತ್ವಾಕಾಂಕ್ಷೆ ಇಟ್ಟುಕೊಳ್ಳುವುದರಲ್ಲಿ ಯಾವ ತಪ್ಪೂ ಇಲ್ಲ. ನಿನಗೆ ಒಂದು ದೊಡ್ಡ ಪತ್ರಿಕೆಯ ಸಂಪಾದಕನಾಗಬೇಕೆಂಬ ಆಸೆಯಿಲ್ಲವೆ? ಇಲ್ಲದೇ ಹೋದರೆ ನಿನ್ನ ಜೀವನವೇ ವ್ಯರ್ಥ” ಎಂದು ಆತನಿಗೆ ಝಾಡಿಸಿದೆ ಎಂದರು ಚರಣ್ ಸಿಂಗ್. ಜತೆಗೆ ತಮ್ಮ ಮಾತಿನ ಒಳಾರ್ಥವನ್ನು ವಿವರಿಸಲೂ ನಿಂತುಬಿಟ್ಟರು. “ಒಂದಲ್ಲ ಒಂದು ದಿನ ಪ್ರಧಾನಿಯಾಗಬೇಕೆಂಬ ಮಹತ್ವಾಕಾಂಕ್ಷೆ ಖಂಡಿತ ನನಗಿದೆ. ಹಾಗಂತ ಮೊರಾರ್ಜಿಯವರ ವಿರುದ್ಧ ನಾನು ಪಿತೂರಿ ನಡೆಸುತ್ತಿಲ್ಲ. ಮೊರಾರ್ಜಿಗೆ ವಯಸ್ಸಾಗಿದೆ. ಮುಂದೊಂದು ದಿನ ಅವರು ಸಾಯುತ್ತಾರೆ, ನಾನು ಪ್ರಧಾನಿ ಆಗಿಯೇ ಆಗುತ್ತೇನೆ!” ಎಂದರು.

ಹಾಗೆ ಹೇಳಿ ಚರಣ್ ಸಿಂಗ್ ಕುಳಿತುಕೊಂಡರು.

ಅದೇ ದಿನ ಮಧ್ಯಾಹ್ನ ಕಾನೂನು ಸಚಿವ ಶಾಂತಿ ಭೂಷಣ್ ಪ್ರಧಾನಿಯವರನ್ನು ಭೇಟಿಯಾಗುವ ಕಾರ್ಯಕ್ರಮ ಇಟ್ಟುಕೊಂಡಿ ದ್ದರು. ಹಾಗೆ ಹೋದಾಗ, ‘ನಿಮ್ಮನ್ನು ಪದಚ್ಯುತಗೊಳಿಸುವ ಇಚ್ಛೆ ಚರಣ್ ಸಿಂಗ್‌ಗೆ ಇಲ್ಲವಂತೆ’ ಎಂಬ ಸಂದೇಶವನ್ನು ಮೊರಾರ್ಜಿ ಯವರಿಗೆ ಮುಟ್ಟಿಸಿ, ಸಮಾಧಾನಪಡಿಸಲು ಶಾಂತಿ ಭೂಷಣ್ ಮುಂದಾದರು. ಬೆಳಗ್ಗೆ ನಡೆದ ಘಟನೆಯನ್ನು ವಿವರಿಸಿದರು. ಆದರೆ ಮೊರಾರ್ಜಿ ಮನಸ್ಸಿಗೆ ಬೇಸರವಾಗಬಾರದು ಎಂಬ ಕಾರಣಕ್ಕೆ, “ಮುಂದೊಂದು ದಿನ ಮೊರಾರ್ಜಿ ಸಾಯುತ್ತಾರೆ” ಎಂಬ ಚರಣ್ ಸಿಂಗ್ ಮಾತನ್ನು ಯಥಾವತ್ತಾಗಿ ಹೇಳದೆ, “ಪ್ರಧಾನಿ ಸ್ಥಾನ ಖಾಲಿಯಾದಾಗ ನನ್ನ ಮಹತ್ವಾಕಾಂಕ್ಷೆ ಈಡೇ ರುತ್ತದೆ” ಎಂದು ತಿರುಚಿ ಹೇಳಿದರು. ಆದರೆ ಮೊರಾರ್ಜಿ ಮಹಾಬುದ್ಧಿವಂತರು. ಚರಣ್ ಸಿಂಗ್ ಹೇಗೆ ಹೇಳಿರಬಹುದು ಎಂಬುದನ್ನು ಅಂದಾಜು ಮಾಡಿಕೊಂಡ ಅವರು, “ನನಗಿಂತ ಚರಣ್ ಸಿಂಗ್ ಅವರೇ ಮೊದಲು ಸಾಯುವುದಿಲ್ಲ ಎನ್ನು ವುದಕ್ಕೆ ಗ್ಯಾರಂಟಿಯೇನು? ನನಗೆ ವಯಸ್ಸಾಗಿದ್ದರೂ ಅವರೆಲ್ಲರಿ ಗಿಂತಲೂ ಆರೋಗ್ಯದಿಂದಿದ್ದೇನೆ. ಅದೂ ಅಲ್ಲದೆ ಇನ್ನು ಒಂದು ವರ್ಷದೊಳಗೆ ನಿಮ್ಮ ಇಬ್ಬರು ಸಂಪುಟ ಸಚಿವರನ್ನು ಕಳೆದುಕೊಳ್ಳುತ್ತೀರಿ ಎಂದು ಜ್ಯೋತಿಷಿಯೊಬ್ಬರು ನನಗೆ ಹೇಳಿದ್ದಾರೆ” ಎಂದರು ಮೊರಾರ್ಜಿ!! ಅಂದರೆ ಚರಣ್ ಸಿಂಗ್ ಹಾಗೂ ಜಗಜೀವನ್ ರಾಮ್ ಸಾಯುತ್ತಾರೆ ಎಂಬುದು ಅವರ ಮಾತಿನ ಅರ್ಥವಾಗಿತ್ತು. ಈ ಘಟನೆಯನ್ನು ಶಾಂತಿ ಭೂಷಣ್ ತಮ್ಮ ಆತ್ಮಚರಿತ್ರೆ “Courting Destiny”ಯಲ್ಲಿ ದಾಖಲಿಸಿ ದ್ದಾರೆ.

ಅದೇನೇ ಇರಲಿ, ಒಂದೇ ಪಕ್ಷದ ಹಿರಿಯ ನಾಯಕರಿಬ್ಬರು ಪರಸ್ಪರರ ನಾಶಕ್ಕೆ ನಿಂತರೆ, ಅವನತಿಯನ್ನು ಬಯಸಿದರೆ, ಕೆಡುಕನ್ನು ಬಗೆಯಲಾರಂಭಿಸಿದರೆ ಯಾವ ಪಕ್ಷ, ಸರಕಾರ, ಸಂಘಟನೆ ತಾನೇ ಉಳಿದೀತು? ಈ ಘಟನೆ ನಡೆದು ಕೆಲವೇ ತಿಂಗಳುಗಳಲ್ಲಿ ಮೊರಾರ್ಜಿ ಸರಕಾರ ಪತನವಾಯಿತು, ಚರಣ್ ಸಿಂಗ್ ಪ್ರಧಾನಿಯಾದರೂ ಸಂಸತ್ತನ್ನೇ ಎದುರಿಸದೆ ಇತಿಹಾಸದ ಪುಟ ಸೇರಿದರು. ಪ್ರಸ್ತುತ ಕರ್ನಾಟಕದಲ್ಲಿ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳು ಈ ಮೇಲಿನ ಘಟನೆಯನ್ನು ನೆನಪಿಸಿಕೊಡುತ್ತಿವೆ. ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಸಚಿವ ಈಶ್ವರಪ್ಪ ಕೂಡ ಪರಸ್ಪರರ ನಾಶಕ್ಕೆ ನಿಂತಿದ್ದಾರೆ, ಬಳ್ಳಾರಿ ರೆಡ್ಡಿಗಳು ರಿಂಗ್ ಮಾಸ್ಟರ್‌ಗಳಂತೆ ಎಲ್ಲರನ್ನೂ ಆಟವಾಡಿಸು ತ್ತಿದ್ದಾರೆ. “ಕಳೆದ ಲೋಕಸಭೆ ಚುನಾವಣೆ ವೇಳೆ ಶಿವಮೊಗ್ಗದಲ್ಲಿ ಹಣ, ಹೆಂಡ ಹಂಚಿದರು” ಎಂದು ಭೂ ಉತ್ಖನನ ಮಾಡಿ ಹೊರತೆಗೆದವರಂತೆ ಈಶ್ವರಪ್ಪನವರು ಬೊಬ್ಬೆ ಹಾಕುತ್ತಿದ್ದಾರೆ, ಮುಖ್ಯಮಂತ್ರಿ ಯಡಿಯೂರಪ್ಪನವರ ಮೇಲೆ ಆರೋಪಗಳ ಸರಮಾಲೆಯನ್ನೇ ಬಿಚ್ಚಿಡುತ್ತಿದ್ದಾರೆ. ಆದರೆ ಇವರಿಷ್ಟೂ ಜನರ ಪೂರ್ವಾಪರಗಳನ್ನು ಬಲ್ಲ ಕರ್ನಾಟಕದ ಮಹಾಜನತೆಗೆ ಮಾತ್ರ ಸತ್ಯ ಗೊತ್ತಿದೆ, ಇವರ್‍ಯಾರೂ ಸಾಚಾಗಳಲ್ಲ ಎಂದು. ವಿದ್ಯುತ್ ಖರೀದಿಗೆ ಸಂಬಂಧಿಸಿದ ಡೀಲೊಂದು ಇಬ್ಬರನ್ನೂ ಬೀದಿ ಜಗಳ ಕ್ಕಿಳಿಸಿದೆ, ರೆಡ್ಡಿಗಳು ಬೆಂಕಿಗೆ ತುಪ್ಪ ಸುರಿಯುತ್ತಿದ್ದಾರೆ ಎಂಬ ಮಾತು ಬಿಜೆಪಿಯೊಳಗೇ ಕೇಳಿಬರುತ್ತಿದೆ. ಇಷ್ಟಕ್ಕೂ ಮುಖ್ಯಮಂತ್ರಿಯವರ ಪುತ್ರರತ್ನಗಳಾದ ರಾಘವೇಂದ್ರ, ವಿಜಯೇಂದ್ರ ಹಾಗೂ ಅಳಿಯಂದಿರ ‘ವ್ಯವಹಾರಗಳು’ ಎಂದೋ ಬೆಳಕಿಗೆ ಬಂದಿವೆ. ಆ ಬಗ್ಗೆ ಎಲ್ಲರಿಗೂ ಅಸಮಾಧಾನವಿದೆ ಎಂಬುದೂ ತಿಳಿದ ವಿಚಾರವೇ. ಹಾಗಂತ ಯಡಿಯೂರಪ್ಪನವರ ಕಾರ್ಯವೈಖರಿ ಹಾಗೂ ಸಾಮಾಜಿಕ ಬದ್ಧತೆ ಬಗ್ಗೆ ಈಶ್ವರಪ್ಪನವರು ಈಗ ತೋರುತ್ತಿ ರುವುದು ಖಂಡಿತ ಸಾತ್ವಿಕ ಸಿಟ್ಟಲ್ಲ. ಹಾಗೆಯೇ ಈಶ್ವರಪ್ಪನವರಿಗೆ ಸಿಟ್ಟು ಬರುವಂತೆ ಮಾಡಿರುವುದೂ ಕೂಡ ಯಡಿಯೂರಪ್ಪನವರ ಸಾತ್ವಿಕ ವಿರೋಧವಲ್ಲ!! ಈ ಸರಕಾರದ ಕೆಲವು ಸಚಿವರನ್ನು ಬಿಟ್ಟರೆ ಎಲ್ಲರೂ ‘ಡೀಲ್ ಮಾಸ್ಟರ್’ಗಳಂತೆಯೇ ಇದ್ದಾರೆ. ಅಂತಹ ಯಾವುದೋ ಒಂದು ಡೀಲು ಈ ಇಬ್ಬರೂ ಐಲು ಬಂದವರಂತೆ ವರ್ತಿಸಲು ಕಾರಣವಾಗಿದೆ ಅಷ್ಟೇ. ಒಂದು ವೇಳೆ, ಈಶ್ವರಪ್ಪನವರದ್ದು ಸಾತ್ವಿಕ ಸಿಟ್ಟಾಗಿದ್ದರೆ ಪಕ್ಷದ ವೇದಿಕೆಗಳಲ್ಲಿ ಚರ್ಚಿಸಬಹುದಿತ್ತು ಹಾಗೂ ಯಡಿಯೂರಪ್ಪನವರಲ್ಲಿ ಉದ್ದೇಶ ಶುದ್ಧಿ ಇದ್ದಿದ್ದರೆ ಬಿಜೆಪಿ ಸರಕಾರದ ವರ್ಚಸ್ಸು ಒಂದು ವರ್ಷದಲ್ಲಿ ಖಂಡಿತ ಮಣ್ಣುಪಾಲಾಗುತ್ತಿರಲಿಲ್ಲ. ಇವೆಲ್ಲದರ ಪರಿಣಾಮವಾಗಿ, Washing dirty linen in public ಅನ್ನುತ್ತಾರಲ್ಲಾ ಅಂತಹ ಸಾರ್ವಜನಿಕ ಕೆಸರೆರಚಾಟವನ್ನು ನಾವೀಗ ನೋಡುತ್ತಿದ್ದೇವೆ.

ಇವತ್ತು ಬಿಜೆಪಿಯವರಿಗೆ ಬೇಡವಾಗಿದ್ದಾರೆ ಬಿ.ಬಿ. ಶಿವಪ್ಪ ಎಂಬ ನಾಯಕ.

ಕರ್ನಾಟಕದಲ್ಲಿ ಬಿಜೆಪಿ ಎಂದರೆ ಕೆ.ಜಿ.ಗೆ ಎಷ್ಟು ಎಂದು ಕೇಳುವಂಥ ಕಾಲದಲ್ಲಿ ಪಕ್ಷವನ್ನು ಬೆಳೆಸಿದ ನಾಯಕರು ಎ.ಕೆ. ಸುಬ್ಬಯ್ಯ ಹಾಗೂ ಶಿವಪ್ಪ. ಆ ಕಾಲದಲ್ಲಿ ಪಕ್ಷದ ಖರ್ಚು ವೆಚ್ಚ ಭರಿಸುವ ತಾಕತ್ತು ಇದ್ದಿದ್ದು ಶಿವಪ್ಪನವರಿಗೆ ಮಾತ್ರ. ಅವರೊಬ್ಬ ಶ್ರೀಮಂತ ಕಾಫಿ ಪ್ಲಾಂಟರ್. ಆದರೆ ಇವತ್ತು ಬಿಜೆಪಿಯಲ್ಲಿ ಕಾಫಿ ಪ್ಲಾಂಟರ್‌ಗಳು ಮರೆಯಾಗಿ ‘ನ್ಯೂಸ್ ಪ್ಲಾಂಟರ್’ಗಳು ಹುಟ್ಟಿಕೊಂಡಿದ್ದಾರೆ. ಪತ್ರಿಕೆಗಳಿಗೆ ದಿನಕ್ಕೊಂದು ಹೇಳಿಕೆ ನೀಡುವುದು, ಮರುದಿನ ಬೇರೆಯವರಿಂದ ಬೆಂಬಲಿಸಿ ಮತ್ತೊಂದು ಹೇಳಿಕೆ ಕೊಡಿಸುವುದು. ಹೀಗೆ ನ್ಯೂಸ್ ಪ್ಲಾಂಟ್ ಮಾಡಿ, ನಂತರ ನಾನು ಹಾಗೆ ಹೇಳಿಯೇ ಇಲ್ಲ, ಪತ್ರಿಕೆಯವರು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ ಎಂದು ತಪ್ಪು ಅನ್ಯರ ಮೇಲೆ ಹೊರಿಸಿಬಿಡುವುದು. “ಹಂದಿ ಗಲೀಜು ತಿಂದು ಕರುವಿನ ಬಾಯಿಗೆ ಒರೆಸಿತ್ತಂತೆ” ಎಂಬ ಮಾತು ಮಲೆನಾಡಿನಲ್ಲಿದೆ. ಬಿಜೆಪಿಯ ಕೆಲವರು ಈಗ ಮಾಡುತ್ತಿರುವುದೂ ಅದನ್ನೇ. ಪತ್ರಿಕೆಗಳ ಮೂಲಕ ವೈಯಕ್ತಿಕ ಭಿನ್ನಾಭಿಪ್ರಾಯಗಳನ್ನು ಹೊರ ಹಾಕುತ್ತಿದ್ದಾರೆ, ಒಬ್ಬರನೊಬ್ಬರು ಬೆದರಿಸಲು ಪ್ರಯತ್ನಿಸುತ್ತಿದ್ದಾರೆ ಎಂದರೆ ಇವರ ಉದ್ದೇಶ ಶುದ್ಧವಿಲ್ಲ ಎಂದೇ ಅರ್ಥವಲ್ಲವೆ? ಈ ಶಿವನಗೌಡ ನಾಯಕ, ಜನಾರ್ದನ ಹಾಗೂ ಕರುಣಾಕರ ಎಂಬ ದೊಡ್ಡ ರೆಡ್ಡಿಗಳು, ಸೋಮಶೇಖರ ಎಂಬ ಮರಿ ರೆಡ್ಡಿ, ರೇಣುಕಾಚಾರ್ಯ, ಕೃಷ್ಣಯ್ಯ ಶೆಟ್ಟಿ, ಬೇಳೂರು ಗೋಪಾಲಕೃಷ್ಣ, ಅಸ್ನೋಟಿಕರ್ ಇವರೆಲ್ಲ ಜನ ಪ್ರತಿನಿಧಿಗಳು, ಮಂತ್ರಿ ಏಮಹೋದ ಯರಂತೆ ವರ್ತಿಸುತ್ತಿದ್ದಾರೆಯೇ? ಯಡಿಯೂರಪ್ಪ ನವರು ಹಾಗೂ ಈಶ್ವರಪ್ಪನವರು ನಡೆದುಕೊಳ್ಳುತ್ತಿರುವ ರೀತಿ ಅವರ ಪಕ್ಷ ಹಾಗೂ ಸರಕಾರಕ್ಕೆ ಶೋಭೆ ತರುವಂತಿದೆಯೇ?

ಒಂದು ವರ್ಷದ ಹಿಂದೆ ನಡೆದ ಘಟನೆಯನ್ನು ನೆನಪಿಸಿಕೊಳ್ಳಿ.

ಅವತ್ತು ವಿಧಾನಸೌಧದ ಮುಂದೆ ಜಾತ್ರೆ ನಡೆದಿತ್ತು, ಹಬ್ಬದ ವಾತಾವರಣ ಏರ್ಪಟ್ಟಿತ್ತು. ಬಿಜೆಪಿಯ ಸಾಮಾನ್ಯ ಕಾರ್ಯಕರ್ತರು ತಾವೇ ಮಂತ್ರಿಗಳಾದಂತೆ ಸಂಭ್ರಮಿಸಿದ್ದರು. ನಮ್ಮ ಸರಕಾರ ಬಂತು, ನಮ್ಮ ಉದ್ದೇಶ ಸಾಧನೆಯಾಯಿತು, ಇನ್ನು ನಮ್ಮ ಜವಾಬ್ದಾರಿ ಕಡಿಮೆಯಾಯಿತು ಎಂದುಕೊಂಡು ಮನೆಗೆ ಬಂದಿದ್ದರು. ಇವತ್ತು ಹೊರಗಿನವರಿಗೆ ಮುಖತೋರಿಸಲಾಗದೆ ಮನೆಯೊಳಗೇ ಮನನೊಂದುಕೊಳ್ಳುತ್ತಿದ್ದಾರೆ. ಅವತ್ತು ದಕ್ಷಿಣ ಭಾರತದಲ್ಲಿ ಬಿಜೆಪಿಯ ಮೊದಲ ಸರಕಾರ ಸ್ಥಾಪನೆಯಾಗುತ್ತಿದೆ ಎಂಬ ಹರ್ಷೋಲ್ಲಾಸದಿಂದ ಆಶೀರ್ವದಿಸಲು ಬಂದಿದ್ದ ಕೇಂದ್ರ ನಾಯಕರು, ಈಗ ಸರಕಾರ ಉಳಿಸಿಕೊಳ್ಳಲು ಕಸರತ್ತು ನಡೆಸಬೇಕಾಗಿ ಬಂದಿದೆ. ಇಂತಹ ಪರಿಸ್ಥಿತಿ ಏಕೆ ಸೃಷ್ಟಿಯಾಯಿತು? ಒಂದು ರಾಜ್ಯದ ಯಜಮಾನನ ಸ್ಥಾನಕ್ಕೇರಬೇಕಾಗಿದ್ದ ಯಡಿಯೂರಪ್ಪನವರು ಬರೀ ರಾಘವೇಂದ್ರ, ವಿಜಯೇಂದ್ರ ಹಾಗೂ ಮೂವರು ಹೆಣ್ಣುಮಕ್ಕಳ ಅಪ್ಪನಾಗಿ ಬಿಟ್ಟರು! ಅವತ್ತು ರಾಜ್ಯದ ಮನಗೆದ್ದಿದ್ದ ಕುಮಾರಸ್ವಾಮಿಯವರಿಗೆ ಅಪ್ಪನೇ ಕಂಟಕವಾದರು, ಇವತ್ತು ಯಡಿಯೂರಪ್ಪನವರಿಗೆ ಮಕ್ಕಳೇ ಕಂಟಕರಾಗುತ್ತಿದ್ದಾರೆ!

ಇಂತಹ ಪರಿಸ್ಥಿತಿಯನ್ನು ನೋಡುವುದು ಜನರ ಹಣೆಬರಹ ವಾಗಿದ್ದರೆ ಏಕೆ ಬಿಜೆಪಿಯನ್ನು ಅಧಿಕಾರಕ್ಕೆ ತರಬೇಕಿತ್ತು?

ಕಾಂಗ್ರೆಸ್-ಜೆಡಿಎಸ್‌ಗೂ ಬಿಜೆಪಿಗೂ ಯಾವ ವ್ಯತ್ಯಾಸ ಉಳಿದಿದೆ? ಕಾಂಗ್ರೆಸ್-ಜೆಡಿಎಸ್‌ನಂತೆಯೇ ದುಡ್ಡು ತೆಗೆದು ಕೊಂಡು ವರ್ಗಾವಣೆ ಮಾಡುತ್ತಾರೆ, ದುಡ್ಡು ಕೊಟ್ಟವರಿಗಷ್ಟೇ ನೌಕರಿ ನೀಡುತ್ತಾರೆ, ಎಲ್ಲದರಲ್ಲೂ ಜಾತಿ ವಾದ ಮಾಡುತ್ತಾರೆ, ಕುಟುಂಬ ರಾಜಕಾರಣವನ್ನೂ ಆರಂಭಿಸಿದ್ದಾರೆ, ಪರ್ಸೆಂಟೇಜ್ ಫಿಕ್ಸ್ ಮಾಡಿ, ಕಮಿಷನ್ ಪಡೆದುಕೊಂಡೇ ಯೋಜನೆಗಳಿಗೆ ಹಣ ಬಿಡುಗಡೆ ಮಾಡುತ್ತಾರೆ, ದುಡ್ಡು ಕೊಟ್ಟಿಲ್ಲವೆಂಬ ಕಾರಣಕ್ಕೆ ಕೆಪಿಎಸ್‌ಸಿ ಆಯ್ಕೆ ಮಾಡಿದ್ದ ಸಹಾಯಕ ಎಂಜಿನಿಯರ್‌ಗಳಿಗೆ ನೇಮಕಾತಿ ಆದೇಶ ನೀಡುವುದನ್ನೇ ತಡೆ ಹಿಡಿಯುತ್ತಾರೆ. ಈ ಕೆಲಸವನ್ನು ಕಾಂಗ್ರೆಸ್-ಜೆಡಿಎಸ್‌ನವರೇ ಚೆನ್ನಾಗಿ ಮಾಡುತ್ತಿದ್ದರು. ಬಿಜೆಪಿಯವರೇ ಏಕೆ ಬೇಕಿತ್ತು? ಇವತ್ತು ಬಿಜೆಪಿ ಸರಕಾರದ ಬಗ್ಗೆ ಒಬ್ಬ ಸಾಮಾನ್ಯನಲ್ಲಿ ಯಾವ ಅಭಿಪ್ರಾಯವಿದೆಯೆಂದರೆ “ಆ ಕಾಂಗ್ರೆಸ್-ಜೆಡಿಎಸ್‌ನವರು ದುಡ್ಡು ತಿಂದರೂ ಕೆಲಸ ಮಾಡಿಕೊಡುತ್ತಿದ್ದರು. ಈ ಬಿಜೆಪಿಯವರು ದುಡ್ಡು ತಿನ್ನುತ್ತಾರೆ, ಕೆಲಸ ಮಾತ್ರ ಆಗೊಲ್ಲ” ಎಂದುಕೊಳ್ಳುತ್ತಿದ್ದಾನೆ. ನೀವೇ ಹೇಳಿ, ಇದು ಬಿಜೆಪಿ ಸರಕಾರ ಎನ್ನಲು ಯಾವ ವೈಶಿಷ್ಟ್ಯ ಅದಕ್ಕಿದೆ? ಯಾವುದೇ ಪಕ್ಷ ಅಧಿಕಾರಕ್ಕೆ ಬಂದರೂ ಒಂದಿಷ್ಟು ಜನಪರ ಹಾಗೂ ಮಹತ್ವಾಕಾಂಕ್ಷಿ ಯೋಜನೆಗಳನ್ನು ಘೋಷಣೆ ಮಾಡುತ್ತಾರೆ, ಜನರನ್ನು ಮೆಚ್ಚಿಸಲು ಒಂದಿಷ್ಟು ಕ್ರಮಕೈಗೊಳ್ಳುತ್ತಾರೆ. ಅದರಲ್ಲಿ ಯಾವ ಹೆಚ್ಚುಗಾರಿಕೆಯೂ ಇಲ್ಲ. ಆದರೆ ಇತರ ಸರಕಾರಗಳಿಗೂ ಬಿಜೆಪಿ ಸರಕಾರಕ್ಕೂ ಯಾವ ವ್ಯತ್ಯಾಸವಿದೆ ಹೇಳಿ?

ಒಮ್ಮೆ ನೈಸ್ ವಿವಾದವನ್ನು ನೆನಪು ಮಾಡಿಕೊಳ್ಳಿ. ನೈಸ್ ವಿಚಾರದಲ್ಲಿ ದೇವೇಗೌಡರು ರೈತರ ಭೂಮಿಯ ಬಗ್ಗೆ ಧ್ವನಿಯೆತ್ತಿ ದರು, ಅಶೋಕ್ ಖೇಣಿಯವರು ಅದಕ್ಕೆ ಜಾತಿಯ ಲೇಪ ಹಚ್ಚಿದರು. ಆದರೆ ವಾಸ್ತವದಲ್ಲಿ ಇಬ್ಬರ ಮಧ್ಯೆ ಸಮಸ್ಯೆಯಿದ್ದಿದ್ದು ಪರ್ಸೆಂಟೇಜ್ ವಿಷಯದಲ್ಲಿ ಎಂಬುದನ್ನು ಅಲ್ಲಗಳೆಯಲು ಸಾಧ್ಯವೆ? ಪಾಲು, ಪರ್ಸೆಂಟೇಜ್‌ಗಳು ಬಿಜೆಪಿಯಲ್ಲಿ ಸಚಿವ ಸಚಿವರ ಮಧ್ಯೆಯೇ ಸಮಸ್ಯೆ ತಂದಿಡುತ್ತಿವೆ. ಅದರಲ್ಲೂ “Rags to riches” ಎಂಬ ನುಡಿಗಟ್ಟಿಗೆ ಮೂಲ ಮಾದರಿ ಎಂಬಂತಿರುವ ರೆಡ್ಡಿ ಸಹೋದರರು ಹಾಗೂ ಶ್ರೀರಾಮಲು Short-cut ಮೂಲಕ ದುಡ್ಡು ಮಾಡಿ, ಉದ್ಯಮಿಗಳೆಂಬ ಪಟ್ಟಕ್ಕೇರಿದವರೇ ಹೊರತು ಹುಟ್ಟುವಾಗಲೇ ದುಡ್ಡು ಕಂಡವರಲ್ಲ. ಈ ರಾಜ್ಯಕ್ಕೆ, ಜನರಿಗೆ ಏನಾದರೂ ಒಳ್ಳೆಯ ಕೆಲಸ ಮಾಡಬೇಕು ಎಂಬ ಯಾವ ಇಚ್ಛೆಯಾಗಲಿ, ಕಾಳಜಿಯಾಗಲಿ, ತುಡಿತವಾಗಲಿ ಅವರಲ್ಲಿಲ್ಲ. ಕಬ್ಣಿಣದ ಅದಿರಿನ ಬೆಲೆ ಹೆಚ್ಚಾದರೆ ಖುಷಿ ಪಡುತ್ತಾರೆ, ಕಡಿಮೆಯಾದರೆ ಕಳೆಗುಂದುತ್ತಾರೆ. ಅವರಿಗೆ ದುಡ್ಡು ಮುಖ್ಯವೇ ಹೊರತು, ದುಡ್ಡು ಮಾಡುವ ಮಾರ್ಗದ ಬಗ್ಗೆ ಕ್ಯಾರೆ ಎನ್ನುವುದಿಲ್ಲ. ಇವೆಲ್ಲಕ್ಕೂ ಮಿಗಿಲಾಗಿ ಈ ರೆಡ್ಡಿ ಬ್ರದರ್ಸ್‌ಗಾಗಲಿ, ಪ್ರಸ್ತುತ ಬೀದಿ ರಂಪ ಮಾಡುತ್ತಿರುವ ಬಹುತೇಕ ಶಾಸಕ ಹಾಗೂ ಸಚಿವರಿಗಾಗಲಿ ಬಿಜೆಪಿ ಜತೆ ಭಾವನಾತ್ಮಕ ಸಂಬಂಧವೇ ಇಲ್ಲ. ಆಂಧ್ರದ ಕಾಂಗ್ರೆಸ್ ಮುಖ್ಯಮಂತ್ರಿ ರಾಜಶೇಖರ ರೆಡ್ಡಿಯವರ ಮಗನ ಜತೆ ವ್ಯವಹಾರ ನಡೆಸುವ ಬಳ್ಳಾರಿ ರೆಡ್ಡಿಗಳಲ್ಲಿ, ‘ಬಿಜೆಪಿ ನಮ್ಮ ಪಕ್ಷ, ವ್ಯಕ್ತಿಗಳಿಗಿಂತ ಪಕ್ಷ ದೊಡ್ಡದು, ನಮ್ಮ ಸರಕಾರ ಉಳಿ ಯಬೇಕು, ಒಳ್ಳೆಯ ಹೆಸರು ಗಳಿಸಿಕೊಳ್ಳಬೇಕು’ ಎಂಬ ಪ್ರೀತಿ, ಕಾಳಜಿ, Owning ಅನ್ನು ಕಾಣಲು ಸಾಧ್ಯವೇ? ಅವರದ್ದು ಪಕ್ಕಾ ಲೆಕ್ಕಾಚಾರ. ತಮ್ಮ ವೈಯಕ್ತಿಕ ಹಿತಾಸಕ್ತಿಗೇನಾದರೂ ಧಕ್ಕೆ ಎದು ರಾದರೆ ಯಾವ ಕ್ಷಣದಲ್ಲಿ ಏನನ್ನು ಬೇಕಾದರೂ ಮಾಡಿಯಾರು.

ಈಗ ಆಗುತ್ತಿರುವುದೂ ಅದೇ.

ಬಿಜೆಪಿಗೆ ವರ್ಷದ ಹಿಂದೆ 110 ಸ್ಥಾನಗಳು ಬಂದಾಗ ಬಹುಮತವನ್ನು ಸಾಬೀತುಪಡಿಸುವ ಪರಿ ಹೇಗೆ ಎಂಬುದು ಪಕ್ಷದ ದೊಡ್ಡ ದೊಡ್ಡ ನಾಯಕರಿಗೂ ತಿಳಿಯದಾಗಿತ್ತು. ಅಂತಹ ಸಂದರ್ಭದಲ್ಲಿ, ಶಿವನಗೌಡ, ಅಸ್ನೋಟಿಕರ್, ಬಾಲಚಂದ್ರ ಜಾರಕಿಹೊಳಿ ಮುಂತಾದವರನ್ನು ಬುಟ್ಟಿಗೆ ಹಾಕಿಕೊಂಡು ರಾಜೀನಾಮೆ ಕೊಡಿಸಿ ಪಕ್ಷಕ್ಕೆ ಕರೆತರಬಹುದು, ಆ ಮೂಲಕ ಅಲ್ಪಮತದ ಸರಕಾರವನ್ನು ಬಹುಮತಕ್ಕೇರಿಸಬಹುದು ಎಂಬ ‘ಆಪರೇಶನ್ ಕಮಲ’ದ ಐಡಿಯಾ ಹೊಳೆದಿದ್ದೇ ಈ ರೆಡ್ಡಿ ಬ್ರದರ್ಸ್‌ಗೆ! ಹಾಗಾಗಿ ಬಿಜೆಪಿಯನ್ನು ಅಧಿಕಾರಕ್ಕೆ ತಂದಿದ್ದೇ ನಾವು ಎಂಬ ಭ್ರಮೆ ರೆಡ್ಡಿಗಳಲ್ಲಿದೆ. ಆ ಕಾರಣಕ್ಕಾಗಿಯೇ ತಮ್ಮ ಪಾಳೇಗಾರಿಕೆಯನ್ನು ಬೆಂಗಳೂರಿಗೂ ವಿಸ್ತರಿಸಲು ಮುಂದಾದರು. ಆದರೆ ರೆಡ್ಡಿಗಳ ಸಂಗವೆಂದರೆ ಬಗಲ ಕೆಂಡ ಎಂಬುದು ಯಡಿಯೂರಪ್ಪನವರಿಗೆ ಚೆನ್ನಾಗಿಯೇ ಗೊತ್ತಿತ್ತು. ಹಾಗಾಗಿ ಗಣಿ ಅವ್ಯವಹಾರ ರೆಡ್ಡಿಗಳ ಕುತ್ತಿಗೆಗೆ ಬಂದಾಗ ನಿರ್ಲಕ್ಷ್ಯ ತಳೆದರು. ಭೂಸಮೀಕ್ಷೆ ನಡೆಸಲು ಕೇಂದ್ರ ಮುಂದಾದಾಗ ಹೂಂಗುಟ್ಟಿದರು. ಜತೆಗೆ ಕಳೆದ ಲೋಕಸಭೆ ಚುನಾವಣೆಯಲ್ಲಿ ಶ್ರೀರಾಮಲು ಸಹೋದರಿ ಶಾಂತಾ ಕೂದಲೆಳೆಯಂತರದಲ್ಲಿ ಸೋಲನ್ನು ತಪ್ಪಿಸಿಕೊಂಡಾಗ, ‘ಬಳ್ಳಾರಿಯಲ್ಲಿ ಲಿಂಗಾಯತ ಸಮುದಾಯದವರು ಗಣನೀಯ ಸಂಖ್ಯೆಯಲ್ಲಿದ್ದು, ಒಂದು ವೇಳೆ ಯಡಿಯೂರಪ್ಪನವರು ತಮ್ಮ ಪರ ಕೆಲಸ ಮಾಡಿದ್ದರೆ ಪರಿಸ್ಥಿತಿ ಹೀಗಾಗುತ್ತಿರಲಿಲ್ಲ’ ಎಂಬ ಸಿಟ್ಟು, ಅಸಮಾಧಾನ ರೆಡ್ಡಿಗಳಿಗಿದೆ. ಅದೆಲ್ಲಕ್ಕಿಂತ ಮುಖ್ಯವಾಗಿ, ಗಣಿ ವಿವಾದದ ಸಂದರ್ಭದಲ್ಲಿ ಮುಖ್ಯಮಂತ್ರಿ ಗಟ್ಟಿಯಾಗಿ ನಮ್ಮ ಬೆಂಬಲಕ್ಕೆ ನಿಲ್ಲಲಿಲ್ಲ ಎಂಬ ಕೋಪವಿದೆ. ಇಂತಹ ಅತೃಪ್ತಿಯೇ ಪ್ರಸ್ತುತ ಹೊಗೆಯಾಡುತ್ತಿರುವ ಭಿನ್ನಮತಕ್ಕೆ ಮೂಲ ಕಾರಣ. ತಮ್ಮ ಚೇಲಾ ಶಾಸಕರ ಮೂಲಕ ಬಂಡಾಯವೆಬ್ಬಿಸಲು ಪ್ರಯತ್ನಿಸು ತ್ತಿದ್ದಾರೆ. ಅವರ ಉದ್ದೇಶ ಈಗ್ಗೆ ಮೂರು ತಿಂಗಳ ಹಿಂದೆಯೇ ಬೆಳಕಿಗೆ ಬಂದಿತ್ತು. ಅಧಿಕಾರದಲ್ಲಿಲ್ಲದಾಗ ಯಾರನ್ನು ಅತ್ಯಂತ ಕೀಳಾಗಿ ಚಿತ್ರಿಸಿದ್ದರೋ ಅಂತಹ ಶೋಭಾ ಕರಂದ್ಲಾಜೆಯವರು ಮಂತ್ರಿಯಾದ ಕೂಡಲೇ, ತಮ್ಮ ಶಾಲೆಯ ಪಕ್ಕದಲ್ಲಿರುವ ಸರಕಾರಿ ಉದ್ಯಾನವನವನ್ನು ಕಬಳಿಸುವ ಸಲುವಾಗಿ, “She is the only man in the cabinet” ಎಂದು ಹೊಗಳಿದ್ದ ‘ಪುತ್ರ’ಕರ್ತ ಮಹಾಶಯರೊಬ್ಬರ ಮೂಲಕ, “ಲೋಕಸಭೆ ಚುನಾವಣೆ ನಂತರ ರೆಡ್ಡಿ ಉಪಮುಖ್ಯಮಂತ್ರಿ?” ಎಂದು ಬರೆಸಿಕೊಂಡಿದ್ದರು! ಒಂದು ವೇಳೆ ಆಡಳಿತ ಚುಕ್ಕಾಣಿಯೇನಾದರೂ ಈ ರೆಡ್ಡಿಗಳ ಹಿಡಿತಕ್ಕೆ ಸಿಕ್ಕಿದರೆ ರಾಜ್ಯ ಅವನತಿಯತ್ತ ಸಾಗುವುದು ಖಂಡಿತ. ಈ ಅಧಿಕಾರ ಲಾಲಸಿ ರೆಡ್ಡಿಗಳು ಹಾಗೂ ಯಡಿಯೂರಪ್ಪನವರ ವೈಯಕ್ತಿಕ ‘ದೌರ್ಬಲ್ಯ’ಗಳೇ ರಾಜ್ಯ ಸರಕಾರವನ್ನು ಪೇಚಿಗೆ ಸಿಲುಕಿಸುತ್ತಿವೆ. ತಕ್ಕಮಟ್ಟಿಗೆ ಸುರೇಶ್ ಕುಮಾರ್, ಮುಮ್ತಾಜ್ ಅಲಿಖಾನ್, ವಿಶ್ವೇಶ್ವರ ಹೆಗಡೆ ಕಾಗೇರಿ, ಅರವಿಂದ ಲಿಂಬಾವಳಿ ಮುಂತಾದ ಮೂರ್ನಾಲ್ಕು ಸಚಿವರನ್ನು ಬಿಟ್ಟರೆ ಬೇರಾರೂ ಒಳ್ಳೆಯ ಕಾರಣಕ್ಕೆ ಸುದ್ದಿಯಾಗುತ್ತಿಲ್ಲ. ಇದಕ್ಕೆಲ್ಲ ಕಾರಣ ಯಾರು ಮುಖ್ಯಮಂತ್ರಿಯವರೇ? Caesar’s wife ought to be above suspicion ಎಂಬ ಮಾತನ್ನು ನೀವು ಕೇಳಿಯೇ ಇಲ್ಲವೆ? ಜನ ಏನೆಂದುಕೊಳ್ಳುತ್ತಾರೆ ಎಂಬ ಅಂಜಿಕೆಯೇ ನಿಮಗಿಲ್ಲವೆ? ವಾಡಿಕೆಯಂತೆ ‘ಕ್ಯಾಬಿನೆಟ್ ಬ್ರೀಫಿಂಗ್’ ಮಾಡ ಬೇಕಾದುದು ವಾರ್ತಾ ಸಚಿವರ ಕೆಲಸ. ಆದರೆ ವಾರ್ತಾ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಆ ಕೆಲಸ ಮಾಡಿದ್ದನ್ನು ಎಂದಾದರೂ ನೋಡಿದ್ದೀವಾ? ಶೋಭಾ ಕರಂದ್ಲಾಜೆ ಯವರೇಕೆ ಎಲ್ಲದರಲ್ಲೂ ಮೂಗು ತೂರಿಸುತ್ತಾರೆ?

ಇಷ್ಟೆಲ್ಲಾ ರಂಪಗಳ ಹೊರತಾಗಿಯೂ ಬಿಜೆಪಿ ಸರಕಾರ ಬೀಳುವುದಿಲ್ಲ!

ದೇಶಾದ್ಯಂತ ನೆಲೆಯಿಲ್ಲದೇ ಇರುವುದೇ ಕೇಂದ್ರದಲ್ಲಿ ಅಧಿಕಾರಕ್ಕೇರಲು ಅತಿದೊಡ್ಡ ಅಡ್ಡಿಯಾಗಿದೆ ಎಂಬುದನ್ನು ಅರಿತಿರುವ ಹಿರಿಯ ಬಿಜೆಪಿ ನಾಯಕರು, ದಕ್ಷಿಣ ಭಾರತದಲ್ಲಿ ರಚನೆಯಾಗಿರುವ ತಮ್ಮ ಮೊದಲ ಸರಕಾರವನ್ನು ಅಷ್ಟು ಸುಲಭ ದಲ್ಲಿ ಪತನವಾಗಲು ಬಿಡುವುದಿಲ್ಲ. ತೇಪೆ ಹಾಕಲು ಈಗಾಗಲೇ ಆರಂಭಿಸಿದ್ದಾರೆ. ಈಶ್ವರಪ್ಪನವರು ಮಾತು ಹೊರಳಿಸಿರುವುದನ್ನು ನೋಡಿದರೇ ಗೊತ್ತಾಗುವುದಿಲ್ಲವೆ? ಇತ್ತ ಜೆಡಿಎಸ್‌ನಂತೆ ಬಿಜೆಪಿ ಸರಕಾರದ ಕಾಲೆಳೆದು ಯಡಿಯೂರಪ್ಪ ನವರಿಗೆ ಹುತಾತ್ಮನ ಪಟ್ಟ ನೀಡಲು ಕಾಂಗ್ರೆಸ್ ಖಂಡಿತ ಮುಂದಾಗುವುದಿಲ್ಲ. ಆದರೆ ರೆಡ್ಡಿ ಸಹೋದರರು ರಿಂಗ್ ಮಾಸ್ಟರ್‌ಗಳಂತೆ ಯಡಿಯೂರಪ್ಪನವರ ನಿದ್ದೆಗೆಡಿಸುವುದು ಖಂಡಿತ. ಇಷ್ಟಾಗಿಯೂ, ಬಿಜೆಪಿಗೆ ದೇಶದಲ್ಲಿಯೇ ಅತಿ ಹೆಚ್ಚು ಲೋಕಸಭಾ ಸೀಟುಗಳನ್ನು ಗೆದ್ದು ಕೊಟ್ಟಿರುವ ರಾಜ್ಯ ಕರ್ನಾಟಕ. ಮೋದಿಗಿಂತ ಯಡ್ಡಿಯೇ ಗಟ್ಟಿ ಎಂದು ನಂಬುವಂತಾಗಿದೆ! ಆದರೆ ಪ್ರಸ್ತುತ ನಡೆಯುತ್ತಿರುವ ಘಟನೆಗಳು ಖಂಡಿತ ಯಡಿಯೂರಪ್ಪನವರಿಗೆ ಒಳ್ಳೆಯ ಹೆಸರು ತರುವುದಿಲ್ಲ. ನಾನು ಎಂಬ ದರ್ಪವನ್ನು ಮೊದಲು ಬಿಡಬೇಕು. ಬಿಜೆಪಿ ಯಾರೋ ಒಬ್ಬ ವ್ಯಕ್ತಿ ಕಟ್ಟಿ ಬೆಳೆಸಿದ ಪಕ್ಷವಲ್ಲ, ಸಾವಿರಾರು ಸಣ್ಣ-ಪುಟ್ಟ ನಾಯಕರ, ಲಕ್ಷಾಂತರ ಕಾರ್ಯಕರ್ತರ ಪರಿಶ್ರಮವಿದೆ. ಎ.ಕೆ. ಸುಬ್ಬಯ್ಯ, ಬಿ.ಬಿ. ಶಿವಪ್ಪನವರ ಕೊಡುಗೆ ಇದೆ. ಬಿಜೆಪಿಯಲ್ಲಿ ಈಗ ಎದ್ದುಕಾಣುವ ಯಾವ ದೊಡ್ಡ ಹೆಸರುಗಳನ್ನು ಬೇಕಾದರೂ ತೆಗೆದುಕೊಳ್ಳಿ. ಅವರ್‍ಯಾರೂ ಹುಟ್ಟು ಶ್ರೀಮಂತರಲ್ಲ, ಎಲ್ಲ Neo-Richಗಳೇ. ಯಡಿಯೂರಪ್ಪನವರು, ಈಶ್ವರಪ್ಪನವರ ಆದಿಯಾಗಿ ಬಹುತೇಕ ಎಲ್ಲರೂ ದುಡ್ಡಿನ ಮುಖ ನೋಡಿದ್ದೇ ರಾಜಕೀಯ ಅಧಿಕಾರದ ರುಚಿ ಸಿಕ್ಕಿದ ನಂತರ. ಅದು ಜನರಿಗೂ ಗೊತ್ತು. ಅದರ ನಡುವೆಯೂ ಒಂದಿಷ್ಟು ಕಾಳಜಿಯನ್ನು ಜನ ನಿರೀಕ್ಷಿಸುತ್ತಿದ್ದಾರೆ. ಬಿಜೆಪಿ ಎಂಬ ಪಕ್ಷಕ್ಕಿರುವ ಇಮೇಜು ಸರಕಾರಕ್ಕೂ ಬರಬೇಕು. ಹಾಗಾಗಬೇಕಾದರೆ ಮುಖ್ಯ ಮಂತ್ರಿ ಯಡಿಯೂರಪ್ಪನವರು, ಸ್ವಲ್ಪ ‘ಮೆಂಟಲ್ ಸ್ಪೇಷ್’ ಇಟ್ಟುಕೊಳ್ಳ ಬೇಕು. ತಮ್ಮ ಸಂಪುಟ ಸಹೋದ್ಯೋಗಿಗಳ ಜತೆ ಪ್ರೀತಿ, ವಿಶ್ವಾಸದಿಂದ ಮಾತನಾಡುವುದನ್ನು ಕಲಿತುಕೊಳ್ಳಬೇಕು. ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗಿದ್ದಾಗ, ಯಾರು ಎಲ್ಲೇ ಸಿಗಲಿ, ಅವರು ಎಂತಹ ಆತುರದಲ್ಲಿರಲಿ, ‘ಏನ್ ಬ್ರದರ್…’ ಎಂದು ಹೆಗಲ ಮೇಲೆ ಕೈಹಾಕಿ, ಒಂದೆರಡು ನಿಮಿಷ ಮಾತನಾಡಿ ಮುಂದೆ ಹೋಗುವ ಸೌಜನ್ಯ, ಕಾಳಜಿ ತೋರುತ್ತಿದ್ದರು. ಅದರಿಂದಾಗಿ ಎಷ್ಟೇ ಅಸಮಾಧಾನಗಳಿದ್ದರೂ ಮನಸು ಹಗುರವಾಗಿ ಅವರ ಬಗ್ಗೆ ಸದಭಿಪ್ರಾಯ ಮೂಡುತ್ತಿತ್ತು. ಜತೆಗೆ ಎಷ್ಟೇ ಕಾರ್ಯದೊತ್ತಡದಲ್ಲಿದ್ದರೂ ಇತರ ಸಚಿವರ ಜತೆ ಕುಳಿತು ಅವರ ಕುಂದು-ಕೊರತೆಗಳನ್ನು ಆಲಿಸುವ ದೊಡ್ಡಮನಸು ಕುಮಾರಸ್ವಾಮಿಯವರಲ್ಲಿತ್ತು. ದೇವೇಗೌಡರು ಭಸ್ಮಾಸುರನಂತೆ ಮಗನ ತಲೆ ಮೇಲೆಯೇ ಕೈಯಿಟ್ಟರು ಎಂಬುದು ಬೇರೇ ಮಾತು. ಇದೇನೇ ಇರಲಿ, ಕುಮಾರಸ್ವಾಮಿಯವರಲ್ಲಿದ್ದ ಒಳ್ಳೆಯ ಗುಣ ಗಳನ್ನು ಯಡಿಯೂರಪ್ಪನವರೂ ಕಲಿತುಕೊಳ್ಳಬೇಕು, ಎಸ್.ಎಂ. ಕೃಷ್ಣ ಅವರಲ್ಲಿರುವ ಸಭ್ಯತೆಯನ್ನೂ ರೂಢಿಸಿಕೊಳ್ಳಬೇಕು. ಅಷ್ಟಕ್ಕೂ, ಇದು ನಿಮ್ಮ ನೇತೃತ್ವದ ಸರಕಾರವೇ ಹೊರತು, ನಿಮ್ಮ ಸರಕಾರವಲ್ಲ ಮಿಸ್ಟರ್ ಬಿಎಸ್‌ವೈ! ಅದನ್ನು ಅರಿತುಕೊಳ್ಳ ದಿದ್ದರೆ, ಕುರ್ಚಿ ಉಳಿಸಿಕೊಳ್ಳುವುದೇ ನಿಮ್ಮ ಪರಮ ಧ್ಯೇಯ ಹಾಗೂ ‘ಪಂಚ’ವಾರ್ಷಿಕ ಯೋಜನೆಯಾದರೆ ಪಶ್ಚಿಮ ಬಂಗಾ ಳದ ಮುಖ್ಯಮಂತ್ರಿ ಬುದ್ಧದೇವ ಭಟ್ಟಾಚಾರ್ಜಿಯವರನ್ನು ಜನ ಹೋದಲ್ಲೆಲ್ಲ ಅಟ್ಟಿಸಿಕೊಂಡು ಹೋಗುತ್ತಿರುವಂತೆ ಕರ್ನಾಟಕದ ಜನರೂ ನಿಮ್ಮನ್ನು ಅಟ್ಟಿಸಿಕೊಂಡು ಬರುತ್ತಾರೆ. ಜೋಕೆ!

ಅದಿರಲಿ, ಮಕ್ಕಳಿಗೆ ಎಂತಹ ಸಂಸ್ಕಾರ, ಶಿಕ್ಷಣ ನೀಡಬೇಕು ಎಂಬುದರಿಂದ ಮತಾಂತರ, ಭಯೋತ್ಪಾದನೆವರೆಗೂ ನಾಡಿನ ಜನರಿಗೆ ಬುದ್ಧಿ ಹೇಳುವ ರಾಷ್ಟ್ರೀಯ ಸ್ವಯಂಸೇವಕ ಸಂಘಕ್ಕೆ ತನ್ನ ಹೊಕ್ಕುಳ ಬಳ್ಳಿಯಂತಿರುವ ಬಿಜೆಪಿಗೆ ಬುದ್ಧಿ ಹೇಳುವ, ಪಕ್ಷದ ಸಾಕ್ಷಿಪ್ರeಯನ್ನು ಎತ್ತಿಹಿಡಿಯುವ, ಕಿವಿ ಹಿಂಡುವ ತಾಕತ್ತು ಇಲ್ಲವೆ? ಅಥವಾ ವರ್ಷಕ್ಕೆ ನೂರಿನ್ನೂರು ಬೈಠಕ್ ಮಾಡಿ, ಹೊಟ್ಟೆ ತುಂಬಾ ಊಟ ಮಾಡಿ ಬಾಯಿ ಚಪ್ಪರಿಸುವುದೇ ಇವರ ಪರಮೋದ್ದೇಶವೇ?!

ಕೃಪೆ : ಪ್ರತಾಪ್ ಸಿಂಹ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ