ನನ್ನ ಬ್ಲಾಗ್ ಪಟ್ಟಿ

ಶನಿವಾರ, ಜುಲೈ 31, 2010

ಡಾ. ಮನಮೋಹನ್, ಡಾ. ಮನಮೋಹನ್…ವೇಕ್ ಅಪ್ ನೌ!


1.1948ರಲ್ಲಿ ಭಾರತ-ಪಾಕಿಸ್ತಾನ ಯುದ್ಧ: ನಾವು ಪಾಕಿ ಸ್ತಾನವನ್ನು ಹಿಮ್ಮೆಟ್ಟಿಸಿದರೂ ಕಾಶ್ಮೀರದ ಶೇ.೩೩ರಷ್ಟು ಭೂಭಾಗ ಕೈತಪ್ಪಿ ಹೋಯಿತು.
2. 1950ರಲ್ಲಿ ಭಾರತ(ನೆಹರು) ಕೈಕಟ್ಟಿ ಕುಳಿತುಕೊಂಡ ಕಾರಣ ಸ್ವತಂತ್ರ ರಾಷ್ಟ್ರವಾಗಿದ್ದ ಟಿಬೆಟ್ ಚೀನಾದ ಕೈವಶವಾಯಿತು, ನೆರೆಯ ರಾಷ್ಟ್ರದ ಸ್ಥಾನಕ್ಕೆ ಟಿಬೆಟ್ ಬದಲು ಚೀನಾ ಬಂದು ಕುಳಿತುಕೊಂಡಿತು.
3. 1962ರಲ್ಲಿ ಭಾರತ-ಚೀನಾ ಯುದ್ಧ: ವಾಯುಸೇನೆಯನ್ನು ಬಳಸಲು ನೆಹರು ನಕಾರ. ಹೀನಾಯ ಸೋಲು, ಲದ್ದಾಕ್ ಮತ್ತು ಈಶಾನ್ಯ ಭಾಗದಲ್ಲಿ ಚೀನಿ ಅತಿಕ್ರಮಣ.
4. 1965ರಲ್ಲಿ ಪಾಕ್-ಭಾರತ ಯುದ್ಧ: ಭಾರತ ಗೆದ್ದರೂ, ನಮ್ಮ ಸೇನೆ ಲಾಹೋರ್‌ವರೆಗೂ ಸಾಗಿದರೂ ಆಕ್ರಮಿತ ಕಾಶ್ಮೀರವನ್ನು ವಾಪಸ್ ಪಡೆಯದೇ ತಾನು ಆಕ್ರಮಿಸಿದ್ದ ಭೂಭಾಗಗಳಿಂದ ಭಾರತೀಯ ಪಡೆಗಳ ಹಿಂತೆಗೆತ.
5. 1971ರಲ್ಲಿ ಬಾಂಗ್ಲಾ ಸಲುವಾಗಿ ಮತ್ತೆ ಭಾರತ-ಪಾಕ್ ಯುದ್ಧ: ಪಾಕಿಸ್ತಾನವನ್ನು ಸೋಲಿಸಿ ಬಾಂಗ್ಲಾದೇಶವನ್ನು ಸೃಷ್ಟಿಸಿದರೂ ಕಾಶ್ಮೀರದಿಂದ ಹಿಂದೆ ಸರಿಯುವಂತೆ ಪ್ರಧಾನಿ ಝಲ್ಫಿಕರ್ ಅಲಿ ಭುಟ್ಟೋಗೆ ತಾಕೀತು ಹಾಕದೆ 90 ಸಾವಿರ ಬಂಧಿತ ಪಾಕ್ ಸೈನಿಕರ ಬಿಡುಗಡೆ.
6. 1999ರಲ್ಲಿ ಕಾರ್ಗಿಲ್ ಯುದ್ಧ: ಅಮೆರಿಕದ ಒತ್ತಡದಿಂದಾಗಿ ಗಡಿನಿಯಂತ್ರಣ ರೇಖೆಗೆ ಹಿಂದೆ ಸರಿದ ಪಾಕ್ ಸೇನೆ.
7. 2000-2008ವರೆಗೂ ಭಾರತದ ಮೇಲೆ ಸತತ ಭಯೋತ್ಪಾದಕ ದಾಳಿ: ಕೈಲಾಗದವರಂತೆ ಕುಳಿತ ಕೇಂದ್ರ ಸರಕಾರಗಳು.
8. ಈಚೆಗೆ ಜಮ್ಮು-ಕಾಶ್ಮೀರ, ಅರುಣಾಚಲ ಪ್ರದೇಶಗಳಲ್ಲಿ ಚೀನಾದ ಅತಿಕ್ರಮಣ: ವಾಸ್ತವಿಕ ವರದಿಗಳನ್ನೇ ನಿರಾಕರಿಸುತ್ತಿರುವ ಹಾಗೂ ವರದಿ ಮಾಡಿದ ಪತ್ರಕರ್ತರ ಮೇಲೆಯೇ ಎಫ್‌ಐಆರ್ ಹಾಕಿದ ಕಾಂಗ್ರೆಸ್ ನೇತೃತ್ವದ ಕೇಂದ್ರ ಸರಕಾರ.

“ಟಿಬೆಟ್ ಸ್ವತಂತ್ರ ರಾಷ್ಟ್ರವಾಗಿದ್ದಾಗ ನಾವು ಸ್ವಾತಂತ್ರ್ಯವನ್ನು ಲಘುವಾಗಿ ತೆಗೆದುಕೊಂಡೆವು. ಹಿಂದಿನ ಕಾಲದಲ್ಲಿ ಟಿಬೆಟ್ ಯುದ್ಧಕಲಿಗಳ ನಾಡಾಗಿತ್ತು. ನಮ್ಮ ಪ್ರಭಾವ ದೂರ ದೂರದ ಸ್ಥಳಗಳಿಗೂ ವಿಸ್ತರಿಸಿತ್ತು. ಆದರೆ ಬೌದ್ಧ ಧರ್ಮ ಹರಡಿದಂತೆ ನಮ್ಮ ಮಿಲಿಟರಿ ಸಾಮರ್ಥ್ಯ ಕುಸಿಯುತ್ತಾ ಬಂತು”.

ಹಾಗಂತ ಹೇಳಿದವರು ಅಹಿಂಸೆಯನ್ನು ಬೋಧಿಸುವ ಬೌದ್ಧ ಧರ್ಮದ ಅತ್ಯುನ್ನತ ಧರ್ಮಗುರುವಾದ ದಲೈಲಾಮಾ! ಏಕೆ ಟಿಬೆಟ್ ಚೀನಾದ ಕೈವಶವಾಯಿತು ಎಂಬುದಕ್ಕೆ ದಲೈಲಾಮಾ ಅವರು ನೊಂದುಕೊಂಡು ನೀಡಿದ(1999ರಲ್ಲಿ) ಕಾರಣವಿದು!!

“ಭಾರತ ಕೂಡ ಕದನ ಕಲಿಗಳ ನಾಡಾಗಿತ್ತು. ಪೃಥ್ವಿರಾಜ್ ಚವ್ಹಾಣ್, ಶಿವಾಜಿ ಮಹಾರಾಜ, ರಾಣಾ ಪ್ರತಾಪ್ ನಮ್ಮಲ್ಲಿ ದ್ದರು. 1000 ವರ್ಷಗಳ ಮುಸ್ಲಿಂ ಆಕ್ರಮಣ, 200 ವರ್ಷಗಳ ಡಚ್, ಫ್ರೆಂಚ್, ಬ್ರಿಟಿಷ್ ಆಡಳಿತಕ್ಕೆ ಸಡ್ಡು ಹೊಡೆದಿತ್ತು. ಸಿಂಹನಾದ ಮೊಳಗಿಸಿದ ವಿವೇಕಾನಂದ, ಬಾಲ ಗಂಗಾಧರ ತಿಲಕ್ ಭಾರತದಲ್ಲಿ ಜನ್ಮವೆತ್ತಿದ್ದರು. ಆದರೆ 1920-47ರವರೆಗೂ ನಡೆದ “ಗಾಂಧೀಯುಗ” ಭಾರತೀಯರ ಹೋರಾಟ ಮನೋ ಭಾವನೆಯನ್ನೇ ಕೊಂದು ಹೆಳವರಂತೆ ಬೇಡುವ ಮನಸ್ಥಿತಿಯನ್ನು ನಮ್ಮೊಳಗೆ ತುಂಬಿತು, ಜವಾಹರಲಾಲ್ ನೆಹರು ಅವರ ವಿಶ್ವ ಭ್ರಾತೃತ್ವ, ವಿಶ್ವಶಾಂತಿ ಎಂಬ False posturing ನಮ್ಮ ಅಂತಃ ಶಕ್ತಿಯನ್ನು ಶಾಶ್ವತವಾಗಿ ಕೊಂದುಬಿಟ್ಟವು”.

ಹಾಗಂತ ನಾವೂ ಹೇಳಬೇಕಾಗಿ ಬಂದಿದೆ!

ಅಷ್ಟಕ್ಕೂ ಏನಾಗಿದೆ ನಮ್ಮ ಕೇಂದ್ರ ಸರಕಾರಕ್ಕೆ? ಚೀನಾ ಒಡ್ಡುತ್ತಿರುವ ಅಪಾಯವನ್ನು ಒಪ್ಪಿಕೊಂಡು, ತಕ್ಕ ತಯಾರಿ ಮಾಡಿಕೊಳ್ಳುವ ಬದಲು ಅರುಣಾಚಲ ಪ್ರದೇಶದಲ್ಲಿ ಚೀನಿ ಸೈನಿಕರ ಅಪ್ರಚೋದಿತ ಗುಂಡಿನ ದಾಳಿಗೆ ಸಿಲುಕಿ ಇಬ್ಬರಿಗೆ ಗಾಯಗಳಾಗಿವೆ ಎಂದು ವರದಿ ಮಾಡಿದ ಪತ್ರಕರ್ತರ ವಿರುದ್ಧ ಎಫ್‌ಐಆರ್ ಹಾಕಿದೆಯಲ್ಲಾ ಈ ಕಾಂಗ್ರೆಸ್ ಸರಕಾರಕ್ಕೆ ಬುದ್ಧಿ ಭ್ರಮಣೆಯೇನಾದರೂ ಆಗಿದೆಯೇ? ಗುರುವಾರ ಚೀನಾ ತನ್ನ ೬೦ನೇ ಸಂಸ್ಥಾಪನಾ ದಿನವನ್ನು ಆಚರಿಸಿಕೊಂಡಿತು. ಭಾರತದ ಪ್ರಧಾನಿ ಡಾ. ಮನಮೋಹನ್ ಸಿಂಗ್ ಶುಭಹಾರೈಸಿದರು. ಅದಕ್ಕೆ ಪ್ರತಿಯಾಗಿ ಸಿಕ್ಕಿದ್ದೇನು? ಭಾರತದ ಪಾಸ್‌ಪೋರ್ಟ್ ಹೊಂದಿರುವ ಜಮ್ಮು-ಕಾಶ್ಮೀರಿ ನಾಗರಿಕರಿಗೆ ಪ್ರತ್ಯೇಕ ವೀಸಾ ನೀಡಿರುವುದು ಬೆಳಕಿಗೆ ಬಂದಿದೆ. ಆ ಮೂಲಕ ಜಮ್ಮು-ಕಾಶ್ಮೀರ ಭಾರತದ ಅವಿಭಾಜ್ಯ ಅಂಗವಲ್ಲ ಎಂಬ ಸಂದೇಶ ಮುಟ್ಟಿಸಿದೆ! ಈಗಾಗಲೇ ಅರುಣಾಚಲ ಪ್ರದೇಶದ ನಾಗರಿಕರಿಗೆ ಪ್ರತ್ಯೇಕ ವೀಸಾ ವಿತರಣೆ ಮಾಡಿರುವ ಚೀನಾ, ಆ ಮೂಲಕ ಅರುಣಾ ಚಲದ ಮೇಲೆ ತನ್ನ ಹಕ್ಕು ಪ್ರತಿಪಾದನೆ ಮಾಡಿದೆ. ಇಷ್ಟಾಗಿಯೂ ಭಾರತವೇಕೆ ತಕ್ಕ ಪ್ರತ್ಯುತ್ತರ ನೀಡುತ್ತಿಲ್ಲ? ಈ ವಿಷಯವನ್ನು ಮಾಧ್ಯಮಗಳು ವೈಭವೀಕರಣ ಮಾಡುತ್ತಿವೆ ಎಂದು ದೂರು ತ್ತಿದೆಯಲ್ಲಾ ಅದಕ್ಕೆ ನಾಚಿಕೆಯೇ ಇಲ್ಲವೆ?”Shock”, “Surprise”, “Disbelief” ಇಂತಹ ಪದಗಳನ್ನು ಹೇಳಿ ಕೊಂಡೇ ಇನ್ನೆಷ್ಟು ದಿನ ಮೈಮರೆತುಕೊಂಡು ಕುಳಿತಿರಲು ಸಾಧ್ಯ? ರಷ್ಯಾದಂತೆ ಚೀನಾವೇನು ಭಾರತದ ಮಿತ್ರರಾಷ್ಟ್ರವೇ?

ಕಳೆದ ಒಂದೂವರೆ ವರ್ಷದಲ್ಲಿ ಮೂರು ಸಂದರ್ಭಗಳಲ್ಲಿ ಚೀನಾದ ನೈಜ ಉದ್ದೇಶ ಬೆಳಕಿಗೆ ಬಂದಿದೆ.

1. ಭಾರತ ಮತ್ತು ಅಮೆರಿಕ ನಾಗರಿಕ ಅಣು ಸಹಕಾರ ಒಪ್ಪಂದ ಮಾಡಿಕೊಂಡಾಗ ಅಣು ಇಂಧನ ಪೂರೈಕೆ ರಾಷ್ಟ್ರಗಳ ಒಕ್ಕೂಟದ(ಎನ್‌ಎಸ್‌ಜಿ) ಸಭೆಯಲ್ಲಿ ಭಾರತಕ್ಕೆ ಅಡ್ಡಗಾಲು ಹಾಕುವುದಿಲ್ಲ ಎಂದು ಚೀನಾ ಬಹಿರಂಗ ಹೇಳಿಕೆ ನೀಡಿತ್ತು. ಆದರೆ ನಾಗರಿಕ ಅಣು ಸಹಕಾರ ಒಪ್ಪಂದದ ಅಂಗವಾದ ಅಣು ಇಂಧನ ಪೂರೈಕೆ ವಿಚಾರ ೨೦೦೮, ಸೆಪ್ಟೆಂಬರ್‌ನಲ್ಲಿ ಅಂತಾರಾಷ್ಟ್ರೀಯ ಅಣುಶಕ್ತಿ ಏಜೆನ್ಸಿಯಲ್ಲಿ (ಐಅಉಅ) ಚರ್ಚೆಗೆ ಬಂದಾಗ ಅದನ್ನು ತಡೆಯಲು ಚೀನಾ ಸಕಲ ಪ್ರಯತ್ನವನ್ನೂ ಮಾಡಿತು! ಕೊನೆಗೆ ಅಮೆರಿಕ ಬೆದರಿಕೆ ಹಾಕಿದಾಗ ಚೀನಾ ಚರ್ಚೆ ಮತ್ತು ಮತದಾನದಿಂದಲೇ ಹೊರನಡೆಯಿತು.
2. ಇದಾಗಿ ಕೆಲವೇ ತಿಂಗಳುಗಳಲ್ಲಿ ಮತ್ತೊಂದು ಘಟನೆ ನಡೆಯಿತು. ಭಾರತ ಎಡಿಬಿ (ಏಷ್ಯಾ ಅಭಿವೃದ್ಧಿ ಬ್ಯಾಂಕ್) ಎದುರು ಅಭಿವೃದ್ಧಿ ಕಾರ್ಯಗಳಿಗಾಗಿ 2.9 ಶತಕೋಟಿ ಡಾಲರ್ ಸಹಾಯಧನಕ್ಕಾಗಿ ಪ್ರಸ್ತಾಪವೊಂದನ್ನಿಟ್ಟಿತು. ಆಶ್ಚರ್ಯವೆಂದರೆ ಚೀನಾ ಅದಕ್ಕೆ ವಿರೋಧ ವ್ಯಕ್ತಪಡಿಸಿತು. ಏಕೆಂದರೆ 2.9 ಶತಕೋಟಿ ಡಾಲರ್‌ನಲ್ಲಿ 60 ದಶಲಕ್ಷ ಡಾಲರ್ ಹಣವನ್ನು ಅರುಣಾಚಲ ಪ್ರದೇಶದ ಅಭಿವೃದ್ಧಿಗೆ ವಿನಿಯೋಗಿಸುವುದಾಗಿ ಭಾರತ ಪ್ರಸ್ತಾವನೆಯಲ್ಲಿ ಉಲ್ಲೇಖಿಸಿತ್ತು! ಅರುಣಾಚಲ ತನಗೆ ಸೇರಬೇಕೆಂದು ಪ್ರತಿಪಾದಿಸುತ್ತಿರುವ ಚೀನಾ, ಆ ಕಾರಣಕ್ಕಾಗಿ ವಿರೋಧ ವ್ಯಕ್ತಪಡಿಸಿತು. ಈ ಘಟನೆಯ ಬೆನ್ನಲ್ಲೇ ಪ್ರಧಾನಿ ಮನಮೋಹನಸಿಂಗ್ ಅರುಣಾಚಲ ಪ್ರದೇಶಕ್ಕೆ ಭೇಟಿ ನೀಡಿದರು. ಅದಕ್ಕೂ ಚೀನಾ ತನ್ನ ಅಸಮಾಧಾನ ವ್ಯಕ್ತಪಡಿಸಿತ್ತು!!
3. 2009, ಆಗಸ್ಟ್ 23ರಂದು ಚೀನಾ ಪಾಕಿಸ್ತಾನದ ಜತೆ ಒಪ್ಪಂದವೊಂದಕ್ಕೆ ಸಹಿ ಹಾಕಿದೆ. ಪಾಕ್ ಆಕ್ರಮಿತ ಕಾಶ್ಮೀರದಲ್ಲಿ 7 ಸಾವಿರ ಮೆಗಾವ್ಯಾಟ್ ಸಾಮರ್ಥ್ಯದ ಬುಂಜಿ ಡ್ಯಾಂ ನಿರ್ಮಾಣ ಮಾಡಿಕೊಡುವುದಾಗಿ ವಾಗ್ದಾನ ಮಾಡಿದೆ. ಆದರೆ ಅಣೆಕಟ್ಟು ನಿರ್ಮಾಣವಾಗಬೇಕಿರುವ ಸ್ಥಳ ತನ್ನದೆಂದು ಭಾರತ 1948ರಿಂದಲೂ ಪ್ರತಿಪಾದಿಸುತ್ತಾ ಬಂದಿದೆ! ಇದು ಗೊತ್ತಿದ್ದೂ ಚೀನಾ ಪಾಕ್ ಜತೆ ಒಪ್ಪಂದ ಮಾಡಿಕೊಂಡಿದೆಯೆಂದರೆ ಅದು ಭಾರತಕ್ಕೆ ಸಡ್ಡು ಹೊಡೆಯುವ ಯತ್ನವಲ್ಲದೆ ಮತ್ತೇನು?

ಚೀನಾದ ಧೂರ್ತ ಉದ್ದೇಶಕ್ಕೆ ಇನ್ನೆಷ್ಟು ಉದಾಹರಣೆಗಳು ಬೇಕು?

“ಟಿಬೆಟ್ ಅಂಗೈಯಾದರೆ ಲದ್ದಾಕ್, ಸಿಕ್ಕಿಂ, ಭೂತಾನ್, ನೇಪಾಳ ಮತ್ತು (ಭಾರತದ) ಈಶಾನ್ಯ ಭಾಗ ಐದು ಬೆರಳು ಗಳಿದ್ದಂತೆ. ಅವು ಚೀನಾದ ಭೂಪ್ರದೇಶಗಳು, ಅವುಗಳನ್ನು ಸ್ವತಂತ್ರಗೊಳಿಸಬೇಕು” ಎಂದು ಚೀನಿ ನಾಯಕ ಮಾವೋ ಝೆಡಾಂಗ್ ಹೇಳಿ ಹಲವು ದಶಕಗಳೇ ಕಳೆದವು. ಇಷ್ಟಾಗಿಯೂ ನಮ್ಮ ನಾಯಕರಿಗೇಕೆ ಅಪಾಯದ ಅರಿವಾಗುತ್ತಿಲ್ಲ? ಏಕೆ ಧೈರ್ಯದ ವಿಚಾರದಲ್ಲಿ ನಮ್ಮವರು ನಪುಂಸಕರಾಗಿದ್ದಾರೆ? ‘ಗಾಂಧೀಜಿ ಇದ್ದಿದ್ದರೆ ಒಂದೇ ಟೇಬಲ್ ಮೇಲೆ ಕುಳಿತು ಊಟ ಮಾಡುತ್ತಿದ್ದೆ’ ಎಂದು ಹೇಳಿಕೆ ನೀಡುವ ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮಾ, ಅಫ್ಘಾನಿಸ್ತಾನಕ್ಕೆ ಇನ್ನೂ ಹೆಚ್ಚಿನ ಸೈನಿಕರನ್ನು ಕಳುಹಿಸುತ್ತಾರೆ, ಇರಾಕ್‌ನಿಂದ ಕೂಡಲೇ ಸೇನೆ ಯನ್ನು ಹಿಂತೆಗೆದುಕೊಳ್ಳುವುದಿಲ್ಲ ಎನ್ನುತ್ತಾರೆ! ಅಹಿಂಸೆ ಅನ್ನು ವುದು ಹೇಳಿಕೆ ನೀಡುವುದಕ್ಕಷ್ಟೇ ಚೆನ್ನ. ಭಯೋತ್ಪಾದಕರು, ಪಾಕ್, ಚೀನಿಯರೆದುರು ಅಹಿಂಸೆ, ಭಾಯಿ ಭಾಯಿ ಎಂದರೆ ಬಾಯಿಗೇ ವಿಷಹಾಕುತ್ತಾರೆ. ಈ ಸತ್ಯ ಗೊತ್ತಿದ್ದರೂ “1962ರಲ್ಲಿ ಏನು ನಡೆಯಿತೋ ಅದು ಈಗ ಇತಿಹಾಸ, ನಮ್ಮ ಕೈಯಲ್ಲೂ ನ್ಯೂಕ್ಲಿಯರ್ ಬಾಂಬ್ ಇದೆ” ಅಂತ ಹೇಳಲು ಏನು ದಾಡಿ? ಏಟಿಗೆ ಎದುರೇಟು ನೀಡಲು ಇಸ್ರೇಲ್‌ನಿಂದ ನಾವು ರಾಜಕಾರಣಿಗಳನ್ನೂ ಆಮದು ಮಾಡಿಕೊಳ್ಳಬೇಕೆ?

ಪಕ್ಕದಲ್ಲಿ ಚೀನಾದಂತಹ ಶತ್ರು ರಾಷ್ಟ್ರವನ್ನಿಟ್ಟುಕೊಂಡು ಸುಮ್ಮನೆ ಕುಳಿತುಕೊಳ್ಳುವುದಕ್ಕಾದರೂ ಸಾಧ್ಯವಿದೆಯೇ?

ಚೀನಾದ ಸಾಮ್ರಾಜ್ಯಶಾಹಿತ್ವ ಹಾಗೂ ವಿಸ್ತರಣಾವಾದ ಎಂದೋ ಆರಂಭವಾಗಿದೆ. ತೈವಾನ್, ಟಿಬೆಟ್, ಹೈನನ್ ದ್ವೀಪಗಳು ಒಂದು ಕಾಲದಲ್ಲಿ ಚೀನಾಕ್ಕೆ ಸೇರಿದ್ದವು. ಅವುಗಳನ್ನು ಮರಳಿ ಗಳಿಸಿಕೊಳ್ಳಲಾಗುತ್ತದೆ ಎಂದು ೧೯೫೦ರ ನಂತರ ಮಾವೋ ಝೆಡಾಂಗ್ ಆಗಾಗ್ಗೆ ಹೇಳಿಕೆ ನೀಡಿದ್ದರು. ಮಕಾವು, ಹಾಂಕಾಂಗ್, ಟಿಬೆಟ್ ಈಗಾಗಲೇ ಚೀನಾದ ಕೈವಶವಾಗಿವೆ. ಬುದ್ಧಿಗೇಡಿ ಪಾಕಿಸ್ತಾನಕ್ಕೆ ಕ್ಷಿಪಣಿ, ಅಣ್ವಸ್ತ್ರಗಳನ್ನು ಕೊಟ್ಟು ಭಾರತವನ್ನು ಆಂತರಿಕವಾಗಿ ಅಸ್ಥಿರಗೊಳಿಸಲು ಆರಂಭಿಸಿದೆ. ಕಮ್ಯುನಿಸ್ಟ್ ನೇತಾರ ಪ್ರಚಂಡ ಹಾಗೂ ಮಾವೋವಾದಿಗಳ ಮೂಲಕ ನೇಪಾಳವನ್ನೂ ಹೆಚ್ಚೂಕಡಿಮೆ ತನ್ನ ಹಿಡಿತಕ್ಕೆ ತೆಗೆದುಕೊಂಡಿದೆ. ಪಶುಪತಿನಾಥ ದೇವಾಲಯದ ಅರ್ಚಕರ ಮೇಲೆ ನಡೆಯುವ ದೌರ್ಜನ್ಯ ಭಾರತಕ್ಕೆ ಚೀನಾ ನೀಡುತ್ತಿರುವ ಎಚ್ಚರಿಕೆ ಗಂಟೆಯಲ್ಲದೆ ಮತ್ತೇನೂ ಅಲ್ಲ! ಬಂದರು ಅಭಿವೃದ್ಧಿ, ರಸ್ತೆ ನಿರ್ಮಾಣ, ಅಭಿವೃದ್ಧಿ ಕಾರ್ಯಗಳಿಗೆ ದೀರ್ಘಕಾಲಿಕ ಸಾಲ ಮುಂತಾದ ನೆಪಗಳನ್ನಿಟ್ಟುಕೊಂಡು ಮ್ಯಾನ್ಮಾರ್ ಹಾಗೂ ಬಾಂಗ್ಲಾದೇಶಗಳಿಗೂ ಆಗಮಿಸಿದೆ. ಕಳೆದ ಮೇ.ವರೆಗೂ ನಡೆದ ಎಲ್‌ಟಿಟಿಇ ವಿರುದ್ಧದ ಕಾರ್ಯಾಚರಣೆಗೆ ಬೇಕಾದ ಶಸ್ತ್ರಾಸ್ತ್ರಗಳನ್ನು ಪೂರೈಸುವ ಮೂಲಕ ಶ್ರೀಲಂಕಾದ ಮೇಲೂ ತನ್ನ ಪ್ರಭಾವ ಇಟ್ಟುಕೊಳ್ಳಲು ಚೀನಾ ಪ್ರಯತ್ನಿಸಿದೆ. ಭಾರತದ ನಕ್ಸಲರ ಕೈಯಲ್ಲಿರುವುದೂ ಚೀನಾ ತಯಾರಿಸುತ್ತಿರುವ ಎಕೆ-47ರೈಫಲ್‌ಗಳೇ. ಅದು ಪೂರೈಕೆಯಾಗುತ್ತಿರುವುದು ನೇಪಾಳದ ಮೂಲಕ. ನೇಪಾಳ ಮಾರ್ಗವಾಗಿ ನಕಲಿ ನೋಟುಗಳನ್ನು ಹರಿಬಿಡುವ ಮೂಲಕ ಭಾರತದ ಅರ್ಥವ್ಯವಸ್ಥೆಯನ್ನು ಹಾಳುಗೆಡವುವ ಕಾರ್ಯವನ್ನೂ ಪಾಕ್ ಮತ್ತು ಚೀನಾಗಳು ನಿರಾತಂಕವಾಗಿ ಮಾಡುತ್ತಲೇ ಇವೆ. ಆದರೂ ಭಾರತ ಮಾತ್ರ ಎಚ್ಚೆತ್ತುಕೊಂಡಂತೆ ಕಾಣುತ್ತಿಲ್ಲ. ಇಂತಹ ಬಹಿರಂಗ ಅಪಾಯದ ಹೊರತಾಗಿಯೂ ಭಾರತವೇಕೆ ಒಂದು ಗಟ್ಟಿ ಹೇಳಿಕೆ ನೀಡುವ ಧೈರ್ಯವನ್ನೂ ತೋರುತ್ತಿಲ್ಲ? ಭಾರತದ ಮೇಲೆ ಪೂರ್ಣ ಪ್ರಮಾಣದ ಯುದ್ಧ ಮಾಡಲು ಚೀನಾಕ್ಕೆ ಖಂಡಿತ ಸಾಧ್ಯವಿಲ್ಲ. ಆದರೆ ಆಂತರಿಕವಾಗಿಯೇ ನಮ್ಮನ್ನು ದುರ್ಬಲಗೊಳಿಸಿಬಿಡಬಹು ದಲ್ಲವೆ? ನಾವೇಕೆ ಚೀನಾಕ್ಕೂ ಅದರ ಮಾರ್ಗದಲ್ಲೇ ಉತ್ತರ ನೀಡಬಾರದು?

1. ಭಾರತ ಕೂಡ ಟಿಬೆಟ್ ನಾಗರಿಕರಿಗೆ ಪ್ರತ್ಯೇಕ ವೀಸಾ ನೀಡ ಬೇಕು.
2. ಸ್ವತಂತ್ರ ಟಿಬೆಟ್ ವಿಮೋಚನೆ ಬಗ್ಗೆ ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಧ್ವನಿಯೆತ್ತಬೇಕು.
3. ಟಿಬೆಟಿಯನ್ನರಿಗೆ ಶಸ್ತ್ರಾಸ್ತ್ರ ನೀಡಿ ಬಂಡಾಯಕ್ಕೆ ಪ್ರೋತ್ಸಾಹ ನೀಡಬೇಕು.
4. ಟಿಬೆಟ್ ಅನ್ನು ಪ್ರತ್ಯೇಕ ರಾಷ್ಟ್ರವೆಂದು ಪರಿಗಣಿಸಬೇಕು.
5. ತನ್ನ ಕ್ಷಿನ್‌ಜಿಯಾಂಗ್ ಪ್ರಾಂತ್ಯದಲ್ಲಿ ಚೀನಾ ಮಾಡುತ್ತಿರುವ ಮುಸ್ಲಿಮರ ಮಾರಣಹೋಮದ ಬಗ್ಗೆ ಜಗತ್ತಿನ ಗಮನ ಸೆಳೆಯಬೇಕು.
6. ಚೀನಾದಲ್ಲಿನ ಪ್ರಜಾಪ್ರಭುತ್ವ ಪರ ಹೋರಾಟಗಾರರಿಗೆ ಸಕಲ ಸಹಕಾರ ನೀಡುವ ಮೂಲಕ ಚೀನಾವನ್ನು ಅಸ್ಥಿರಗೊಳಿಸಲು ಪ್ರಯತ್ನಿಸಬೇಕು.
7. ಚೀನಾದಲ್ಲಿ ನಡೆಯುತ್ತಿರುವ ಮಾನವ ಹಕ್ಕು ಉಲ್ಲಂಘನೆ ಬಗ್ಗೆ ವಿಶ್ವದಾದ್ಯಂತ ಜಾಗೃತಿ ಮೂಡಿಸ ಬೇಕು.
8. ಭಾರತ ಕೂಡ ‘ನೇಟೋ’ದ ಸದಸ್ಯ ರಾಷ್ಟ್ರವಾಗಲು ಪ್ರಯತ್ನಿಸಬೇಕು.
9. ಬಲೂಚಿಸ್ಥಾನದಲ್ಲಿ ನಡೆಯುತ್ತಿರುವ ಪ್ರತ್ಯೇಕತೆಗೆ ಮಿಲಿಟರಿ ಸಹಾಯ ನೀಡುವ ಮೂಲಕ ಪಾಕಿ ಸ್ತಾನ ತುಂಡಾಗುವಂತೆ ಮಾಡಬೇಕು.
10. ಅಗ್ನಿ, ಸೂರ್ಯ ಮುಂತಾದ ಖಂಡಾಂತರ ಕ್ಷಿಪಣಿಗಳನ್ನು ತ್ವರಿತವಾಗಿ ಅಭಿವೃದ್ಧಿ ಪಡಿಸಬೇಕು.
11. ನಮ್ಮ ಐಟಿ ಕ್ಷೇತ್ರದ ಬುದ್ಧಿವಂತರು ಹಾಗೂ ಮಾಧ್ಯಮಗಳನ್ನು ಬಳಸಿಕೊಂಡು ಚೀನಾ ವಿರುದ್ಧ ಮಾಧ್ಯಮ ಹಾಗೂ ಸೈಬರ್ ವಾರ್ ಮಾಡಬೇಕು.
12. ಪಾಕ್-ಚೀನಾ ನಡುವೆ ಸಂಪರ್ಕ ಕಲ್ಪಿಸುವ ಕಾರಾಕೋರಂ ಹೆದ್ದಾರಿಗೆ ಆಗಾಗ ಬಾಂಬಿಟ್ಟು ಸಂಪರ್ಕ ಕಡಿತಗೊಳಿಸಬೇಕು.

ಅಷ್ಟಕ್ಕೂ ನಮ್ಮ “ರಾ” (RAW&ರೀಸರ್ಚ್ ಆಂಡ್ ಅನಾಲಿಸಿಸ್ ವಿಂಗ್) ಇರುವುದಾದರೂ ಏಕೆ? ಅಮೆರಿಕದ ಸಿಐಎ, ಇಸ್ರೇಲ್‌ನ ಮೊಸಾದ್, ರಷ್ಯಾದ ಕೆಜಿಬಿ, ಬ್ರಿಟನ್‌ನ MI ಮುಂತಾದುವುಗಳನ್ನು ನೋಡಿಯಾದರೂ ಕಲಿಯ ಬಹುದಲ್ಲವೆ? ಹಾಗೆ ಮಾಡಿದರೆ ಮಾತ್ರ ನಮ್ಮ ಎದುರಾಳಿಗಳಿಗೆ ತಕ್ಕಪಾಠ ಕಲಿಸಲು, ನಮಗೆ ಅಪಾಯ ಎದುರಾಗದಂತೆ ತಡೆಯಲು ಸಾಧ್ಯ. ಆದರೆ ನಮ್ಮ ಗೃಹ ಸಚಿವ ಪಿ. ಚಿದಂಬರಂ, ”There are formidable challenges to the Security of India’, ‘Pakistan is a still threat to India’, ‘Arunachal Pradesh is an integral part of India’, ‘Naxal and cross-border terrorism are the biggest threat to Indian security” ಅಂತ ಹೇಳಿಕೆ ನೀಡುವುದರಲ್ಲೇ ಸುಖ ಕಾಣುತ್ತಿದ್ದಾರೆ. ಹಾಗಾದರೆ ಈ ದೇಶದ ಬಗ್ಗೆ ಕಾಳಜಿ ವಹಿಸಬೇಕಾದವರು ಯಾರು? ಅಥವಾ “Bad politicians are sent to Washington by good people who don’t vote” ಎಂಬ ವಿಲಿಯಂ ಇ. ಸೈಮನ್ ಅವರ ಮಾತನ್ನು ನೆನಪಿಸಿಕೊಂಡು ನಮ್ಮನ್ನು ನಾವೇ ದೂರಿಕೊಳ್ಳಬೇಕೋ? ಅಮೆರಿಕ ಮತ್ತು ಅದರ ಸಾಮ್ರಾಜ್ಯಶಾಹಿತ್ವದ ಅಪಾಯದ ಬಗ್ಗೆ ಬೊಬ್ಬೆ ಹಾಕುವ ಪ್ರಕಾಶ್ ಕಾರಟ್, ಅವರ ಪತ್ನಿ ಬೃಂದಾ, ಬರ್ದನ್, ರಾಜಾ ಮುಂತಾದ “ಕಮ್ಮಿ“ನಿಸ್ಟ”ರು ಈಗ ಎಲ್ಲಿ ಹೋಗಿದ್ದಾರೆ? ಚೀನಾದ ಭಾರತ ವಿರೋಧಿ ಧೋರಣೆ ಬಗ್ಗೆ ಏಕೆ ಏನನ್ನೂ ಮಾತನಾಡುತ್ತಿಲ್ಲ? ಪ್ರತ್ಯೇಕ ವೀಸಾ ನೀಡುವ ಮೂಲಕ ಜಮ್ಮು-ಕಾಶ್ಮೀರ ಭಾರತದ ಭಾಗವಲ್ಲ ಎಂಬ ಸಂದೇಶ ಮುಟ್ಟಿಸುತ್ತಿರುವ ಚೀನಾ ಭಾರತ ವಿರೋಧಿಯಲ್ಲವೇ ಕಾರಟ್? ನಿಮ್ಮ ನಿಷ್ಠೆಯ “ಕ್ಯಾರಟ್” ಎಷ್ಟು ಎಂಬುದನ್ನು ಈಗ ಸಾಬೀತುಮಾಡಿ ಸ್ವಾಮಿ? ಅದಿರಲಿ, ನಮ್ಮ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರಿಗೆ ಅರ್ಥವ್ಯವಸ್ಥೆ, ಜಿಡಿಪಿ, ಹಣದುಬ್ಬರ ಬಿಟ್ಟು ಬೇರಾವ ಸಮಸ್ಯೆ, ಅಪಾಯಗಳೂ ಕಾಣುತ್ತಿಲ್ಲವೆ? ಚುನಾವಣೆ ಪ್ರಚಾರಾಂದೋಲನದ ವೇಳೆ ಲಾಲ್ ಕೃಷ್ಣ ಆಡ್ವಾಣಿಯವರ ಎದುರು ತೋರಿಸಿದ ಶೌರ್ಯವನ್ನು ಚೀನಾದ ಮುಂದೇಕೆ ಪ್ರದರ್ಶಿಸಬಾರದು?

ಖ್ಯಾತ ಪಾಪ್ ಗಾಯಕಿ ಲೈಲಾಳ ‘ಆಕ್ವಾ’ ಎಂಬ ಜನಪ್ರಿಯ ಆಲ್ಬಮ್‌ನ ಹಾಡುಗಳನ್ನು ನೀವು ಕೇಳಿರಬಹುದು. ಅದರಲ್ಲಿ “ಡಾ. ಜೋನ್ಸ್” ಎಂದು ಹಾಡೊಂದಿದೆ. ಅದರ ಪ್ರತಿ ಚರಣದ ನಂತರವೂ “Doctor Jones, Doctor Jones, Wake up now” ಎಂಬ ‘ಪಲ್ಲವಿ’ ಪುನರಾವರ್ತನೆಯಾಗುತ್ತದೆ. ಅದನ್ನು ಸ್ವಲ್ಪ ಬದಲಾಯಿಸಿ, ಚಿರನಿದ್ರೆಯಲ್ಲಿರುವ ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ಉದ್ದೇಶಿಸಿ ಹೀಗೆ ಹೇಳಬಹುದೇನೋ…

ಡಾ. ಮನಮೋಹನ್, ಡಾ. ಮನಮೋಹನ್… ವೇಕ್ ಅಪ್ ನೌ!

ಕೃಪೆ : ಪ್ರತಾಪ್ ಸಿಂಹ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ