ನನ್ನ ಬ್ಲಾಗ್ ಪಟ್ಟಿ

ಶನಿವಾರ, ಜುಲೈ 31, 2010

ಮತ್ತೆ ಕದಡಿದ ನೇಪಾಳ, ಭಾರತಕ್ಕೂ ಕೇಡುಗಾಲ!

ಕ್ಯೂಬಾ ರಷ್ಯಾಕ್ಕೆ ಹತ್ತಿರವಾದರೆ ಅಮೆರಿಕ ಕ್ಕೇನು ತ್ರಾಸ, ಮೆಕ್ಸಿಕೊ ಮಾದಕ ವಸ್ತು ಉತ್ಪಾದನೆ ಮಾಡಿದರೆ ಅಮೆರಿಕದ ಅಧ್ಯಕ್ಷರಿಗೇಕೆ ಕೋಪ, ಉತ್ತರ ಕೊರಿಯಾ ಖಂಡಾಂತರ ಕ್ಷಿಪಣಿ ಪರೀಕ್ಷೆ ಮಾಡಿದರೆ ಜಪಾನ್ ಹಾಗೂ ದಕ್ಷಿಣ ಕೊರಿಯಾಗಳಿಗೇನು ಚಿಂತೆ, ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ತನಗೆ ಖಾಯಂ ಸ್ಥಾನ ನೀಡಬೇಕೆಂದು ಬ್ರೆಝಿಲ್ ಬೇಡಿಕೆಯಿಟ್ಟರೆ ಅರ್ಜೆಂಟೀನಾವೇಕೆ ವಿರೋಧಿಸುತ್ತದೆ, ಇರಾಕ್ ಅಣುಸ್ಥಾವರ ನಿರ್ಮಾಣ ಮಾಡಲು ಹೊರಟಾಗ ಇಸ್ರೇಲ್ ಕ್ಷಿಪಣಿ ದಾಳಿ ಮಾಡಿ ನಾಶಪಡಿಸಿದ್ದೇಕೆ, ಇರಾನ್ ಅಣ್ವಸ್ತ್ರ ಅಭಿವೃದ್ಧಿ ಮಾಡಲು ಹೊರಟರೆ ಅಮೆರಿಕ-ಇಸ್ರೇಲ್‌ಗಳೇಕೆ ವಿರೋಧಿಸುತ್ತಿವೆ?

ಹಾಗಂತ ಕೇಳಲು, ಪ್ರಶ್ನಿಸಲು ಸಾಧ್ಯವೆ?

ಇವತ್ತು ನೆರೆಯಲ್ಲಿ ನಡೆಯುವ ಬೆಳವಣಿಗೆಗಳನ್ನು ಯಾವುದೇ ದೇಶ ಕೂಡ ಕೈಕಟ್ಟಿಕೊಂಡು ನೋಡುವಂತಿಲ್ಲ. ಈ ಹಿನ್ನೆಲೆಯಲ್ಲೇ ಕಳೆದ ಒಂದು ವಾರದಿಂದ ನೇಪಾಳದಲ್ಲಿ ನಡೆಯುತ್ತಿರುವ ಬೆಳವಣಿಗೆಗಳನ್ನು ಭಾರತೀಯರಾದ ನಾವು ನೋಡಬೇಕಾಗಿದೆ.

ಕಳೆದ ಭಾನುವಾರ ನೇಪಾಳದ ಪ್ರಧಾನಿ ಪುಷ್ಪ ಕಮಲ್ ದಹಲ್ ಅಥವಾ ಪ್ರಚಂಡ ಅವರು, ನೇಪಾಳಿ ಸೇನಾ ಮುಖ್ಯಸ್ಥ ಜನರಲ್ ರುಕ್ಮಾಂಗದ ಕಟ್ವಾಲ್ ಅವರನ್ನು ಅಧಿಕಾರದಿಂದ ಉಚ್ಛಾಟನೆ ಮಾಡಿದರು. ಆದರೆ ಉಚ್ಛಾಟನೆ ಊರ್ಜಿತವಾಗಬೇಕಾದರೆ ನೇಪಾಳದ ಅಧ್ಯಕ್ಷರಾದ ರಾಮ್ ಬರಣ್ ಯಾದವ್ ತಮ್ಮ ಅಂಕಿತ ಹಾಕಬೇಕಿತ್ತು. ಪ್ರಚಂಡ ಅವರ ನಿರೀಕ್ಷೆ ತಪ್ಪಾಯಿತು. ಸಹಿ ಹಾಕಲೊಪ್ಪದ ರಾಮ್ ಬರಣ್ ಯಾದವ್, ಪ್ರಚಂಡ ಅವರ ಆದೇಶವನ್ನೇ ತಿರಸ್ಕರಿಸಿದರು. ಜತೆಗೆ ಜನರಲ್ ರುಕ್ಮಾಂಗದ ಕಟ್ವಾಲ್‌ಗೆ ಅಧಿಕಾರದಲ್ಲಿ ಮುಂದುವರಿಯುವಂತೆ ಸೂಚನೆಯನ್ನೂ ನೀಡಿದರು. ಈ ಮಧ್ಯೆ, ಪ್ರಚಂಡ ಅವರ ಮಾವೋವಾದಿ ನೇಪಾಳಿ ಕಮ್ಯುನಿಸ್ಟ್ ಪಾರ್ಟಿ(ಸಿಪಿಎನ್-ಎಂ) ನೇತೃತ್ವದ ಸರಕಾರದಲ್ಲಿ ಭಾಗಿಯಾಗಿದ್ದ ಮತ್ತೊಂದು ಎಡಪಕ್ಷವಾದ ಸಿಪಿಎನ್-ಯುಎಂಎಲ್ ಕೂಡ ತಿರುಗಿ ಬಿದ್ದಿತು. ಪ್ರಚಂಡ ಸರಕಾರದಲ್ಲಿದ್ದ ತನ್ನ ಸಚಿವರನ್ನು ಹಿಂತೆಗೆದುಕೊಳ್ಳುವುದಾಗಿ ಘೋಷಣೆ ಮಾಡಿದ್ದಲ್ಲದೆ, ನೇಪಾಳಿ ಕಾಂಗ್ರೆಸ್ ಪಕ್ಷ ಸರಕಾರದ ವಿರುದ್ಧ ಮಂಡಿಸಲು ಮುಂದಾಗಿದ್ದ ಅವಿಶ್ವಾಸ ಗೊತ್ತುವಳಿಗೆ ಬೆಂಬಲ ನೀಡುವುದಾಗಿಯೂ ಘೋಷಿಸಿ ಬಿಟ್ಟಿತು. ಹೀಗೆ ಮುಖಭಂಗ ಅನುಭವಿಸಿದ ಪ್ರಚಂಡ, ಅಧಿಕಾರ ಕಳೆದುಕೊಳ್ಳುವ ಭಯದಿಂದ ಮೇ ೪ರಂದು ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿ ಕೆಳಗಿಳಿದಿದ್ದಾರೆ.

ಇದರಿಂದ ನಿಟ್ಟುಸಿರು ಬಿಟ್ಟಿರುವುದು ಮಾತ್ರ ಭಾರತ!!

“ನೇಪಾಳ, ಪಾಕಿಸ್ತಾನ, ಶ್ರೀಲಂಕಾದಲ್ಲಿ ನಡೆಯುವ ಘಟನೆಗಳು ಭಾರತದ ಮೇಲೆ ಅವುಗಳದ್ದೇ ಆದ ಪರಿಣಾಮ ಬೀರುತ್ತವೆ” ಎಂಬ ಪ್ರಧಾನಿ ಮನಮೋಹನ್ ಸಿಂಗ್ ಮಾತಿನ ಹಿಂದಿರುವ ಅರ್ಥವನ್ನು ಅರಿಯಲು ಪ್ರಯತ್ನಿಸಿ. ಇಂದು ಪ್ರಚಂಡ ಅವರು ಒಬ್ಬ ರಾಜಕೀಯ ನೇತಾರನಾಗಿ, ನೇಪಾಳದ ಪ್ರಧಾನಿಯಾಗಿ ನಮಗೆ ಕಾಣುತ್ತಿರಬಹುದು. ಆದರೆ ಮೂಲತಃ ಅವರೊಬ್ಬ ಬಂಡುಕೋರ. 1994ರಲ್ಲಿ ‘ಸಿಪಿಎನ್-ಎಂ’ ಪ್ರಾರಂಭ ಮಾಡಿದ ಪ್ರಚಂಡ, ಬಂದೂಕಿನ ಮೂಲಕ ಅಧಿಕಾರಕ್ಕೇರಲು ಮುಂದಾದರು. ಆಗ ನೇಪಾಳ ದಲ್ಲಿ ಸಾಂವಿಧಾನಿಕ ರಾಜಾಡಳಿತವಿತ್ತು. ಪ್ರಜಾತಾಂತ್ರಿಕ ಪ್ರಕ್ರಿಯೆಯಾದ ಚುನಾವಣೆ ಮೂಲಕ ಪ್ರಧಾನಿಯನ್ನು ಆಯ್ಕೆ ಮಾಡುತ್ತಿದ್ದರೂ ರಾಜನೇ ಅಂತಿಮನಾಗಿದ್ದ. ದಿವಂಗತ ಬೀರೇಂದ್ರ ಅವರು ದೇಶದ ಅತ್ಯಂತ ಜನಪ್ರಿಯ ರಾಜರಾಗಿದ್ದರು. ಹಾಗಾಗಿ ಮಾವೋವಾದಿಗಳ ಹೋರಾಟಕ್ಕೆ ಅಷ್ಟಾಗಿ ಜನಬೆಂಬಲ ದೊರೆಯಲಿಲ್ಲ. ಅಂದಮಾತ್ರಕ್ಕೆ ಮಾವೋವಾದಿಗಳು ಹೋರಾಟವನ್ನು ನಿಲ್ಲಿಸಲಿಲ್ಲ. ಗ್ರಾಮೀಣ ಭಾಗಗಳ ಜನರನ್ನು ಹೊಡೆದು-ಬಡಿದು ಹೆದರಿಸಿ ತಮ್ಮದೇ ಸಾಮ್ರಾಜ್ಯವನ್ನು ಸ್ಥಾಪಿಸಿಕೊಳ್ಳಲಾರಂಭಿಸಿದರು. ಇವರಿಗೆ ಯಾರು ಶಸ್ತ್ರಾಸ್ತ್ರ ಮತ್ತು ಮದ್ದು-ಗುಂಡುಗಳನ್ನು ಪೂರೈಸುತ್ತಿದ್ದಾರೆ ಎಂಬುದೇ ಒಂದು ಆಶ್ಚರ್ಯದ ವಿಷಯವಾಯಿತು. ಊಟಕ್ಕೆ ಚಿಂತೆ ಮಾಡಬೇಕಾದವರ ಕೈಗಳಲ್ಲಿ ಎಕೆ-47 ರೈಫಲ್‌ಗಳು ಕಾಣಿಸಲಾರಂಭಿಸಿದರೆ ಯಾರಿಗೆ ತಾನೇ ಆಶ್ಚರ್ಯವಾಗುವುದಿಲ್ಲ? ಇಷ್ಟಾಗಿಯೂ ಯಾರೂ ಆ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳಲಿಲ್ಲ. ರಾಜ ಬೀರೇಂದ್ರ ಅವರ ಜನಪ್ರಿಯತೆ ಎಷ್ಟೋ ಒಡಕು, ಭಿನ್ನಾಭಿಪ್ರಾಯ, ಆರ್ಥಿಕ ಸಂಕಷ್ಟಗಳನ್ನು ಮೀರಿ ನಿಂತಿತು. ಇಂತಹ ಸಂದರ್ಭದಲ್ಲಿ 2001, ಜೂನ್ 1ರಂದು ಯಾರೂ ಊಹಿಸಲಾಗದಂತಹ ಘಟನೆ ನಡೆದೇ ಹೋಯಿತು. ನೇಪಾಳದ ರಾಜಕುಮಾರ ದೀಪೇಂದ್ರ ತನ್ನ ಪ್ರೇಯಸಿ ದೇವಯಾನಿಯನ್ನು ವಿವಾಹವಾಗುವುದಕ್ಕೆ ಒಪ್ಪಿಗೆ ನೀಡಲಿಲ್ಲ ಎಂಬ ಕಾರಣಕ್ಕೆ ತಂದೆ ಬೀರೇಂದ್ರ, ತಾಯಿ ಹಾಗೂ ಇಡೀ ಕುಟುಂಬ ವರ್ಗದವರನ್ನು ಹತ್ಯೆಗೈದು ತಾನೂ ಆತ್ಮಹತ್ಯೆ ಮಾಡಿಕೊಂಡ. ಈ ಸುದ್ದಿ ಇಡೀ ಜಗತ್ತನ್ನೇ ತಲ್ಲಣಗೊಳಿಸಿತು. ಅದರ ಬೆನ್ನಲ್ಲೇ ಅನುಮಾನಗಳೂ ಕಾಡಲಾರಂಭಿಸಿದವು! ರಾಜಕುಮಾರ ದೀಪೇಂದ್ರ ಇಡೀ ಕುಟುಂಬದವರನ್ನು ಹತ್ಯೆಗೈದು ತಾನೂ ‘ಆತ್ಮಹತ್ಯೆ’ ಮಾಡಿಕೊಂಡಿದ್ದಾನೆ ಎಂಬ ಸುದ್ದಿಯನ್ನು ನಂಬೋಣವೆಂದರೆ ದೀಪೇಂದ್ರನ ತಲೆಯ ಹಿಂಬದಿಗೆ ಗುಂಡೇಟು ಬಿದ್ದಿದ್ದಾದರೂ ಹೇಗೆ ಎಂಬ ಪ್ರಶ್ನೆ ಕಾಡತೊಡಗಿತು! ಒಂದು ವೇಳೆ, ಆತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂಬುದು ನಿಜವೇ ಎಂದು ಒಪ್ಪಿಕೊಳ್ಳಬೇಕೆಂದರೂ ರೈಫಲ್‌ನಿಂದ ತಲೆಯ ಹಿಂಬದಿಗೆ ಗುಂಡುಹಾರಿಸಿಕೊಳ್ಳಲು ಸಾಧ್ಯವುಂಟೇ?!

ಅವತ್ತೇ ಕಾಣದ ಕೈಗಳ ಸುಳಿವು ಸಿಕ್ಕಿತ್ತು.

ಆದರೆ ಮೊದಲೇ ಆಘಾತಕ್ಕೊಳಗಾಗಿದ್ದ ನೇಪಾಳ ಆ ಬಗ್ಗೆ ತನಿಖೆ ನಡೆಸಲು ಮುಂದಾಗಲಿಲ್ಲ. ಭಾರತ ಕೂಡ ತೆಪ್ಪಗಾಯಿತು. ಬೀರೇಂದ್ರ ಅವರ ನಂತರ eನೇಂದ್ರ ಅವರು ರಾಜನಾಗಿ ಪಟ್ಟಕ್ಕೇರಿದರೂ ನೇಪಾಳ ಅವನತಿಯತ್ತ ಸಾಗತೊಡಗಿತು. ಪ್ರಜಾತಾಂತ್ರಿಕ ಪ್ರಕ್ರಿಯೆಯನ್ನೇ ಹಾಳುಗೆಡವಿ ಸರ್ವಾಧಿಕಾರಿಯಂತೆ ಆಡಳಿತ ನಡೆಸತೊಡಗಿದ eನೇಂದ್ರ ಅವರ ಧೋರಣೆಯಿಂದಾಗಿ ಮಾವೋವಾದಿಗಳ ಹೋರಾಟ ದೊಡ್ಡದಾಗುತ್ತಾ ಹೋಯಿತು. ಆಗ ಯಾರಿಗೂ ಮುಂದೆ ಎದುರಾಗಲಿರುವ ಅಪಾಯದ ಬಗ್ಗೆ ಅರಿವಾಗಲಿಲ್ಲ. ಹಾಗಾಗಿ ಮಾವೋವಾದಿಗಳಿಗೆ ಸಾಕಷ್ಟು ಜನಬೆಂಬಲವೂ ದೊರೆಯಿತು. ಇದರಿಂದ ಉತ್ಸಾಹಿತಗೊಂಡ ಮಾವೋವಾದಿಗಳು ಸೇನೆಯ ವಿರುದ್ಧ ಕಾಳಗಕ್ಕಿಳಿದರು. 2002ರಿಂದಾಚೆಗಂತೂ ಹೋರಾಟ ತೀವ್ರ ಪ್ರಮಾಣದಲ್ಲಿ ಹಿಂಸಾರೂಪ ಪಡೆಯತೊಡಗಿತು. ನೇಪಾಳದ ಶೇ.೩೦ರಷ್ಟು ಭೂಭಾಗ ಮಾವೋವಾದಿಗಳ ನಿಯಂತ್ರಣಕ್ಕೊಳಪಟ್ಟಿತು. ರಾಯಲ್ ನೇಪಾಳಿ ಆರ್ಮಿ ಮತ್ತು ಮಾವೋವಾದಿ ಗೆರಿಲ್ಲಾಗಳ ಹೋರಾಟಕ್ಕೆ ಸಿಲುಕಿ ಇಡೀ ನೇಪಾಳವೇ ಪಾರ್ಶ್ವವಾಯುಪೀಡಿತಕ್ಕೊಳಗಾದಂತಾಯಿತು. 15 ಸಾವಿರ ಜನ ಹತ್ಯೆಯಾದರು. ಹೀಗೆ ಇಡೀ ದೇಶವನ್ನೇ ಭೀತಿಯ ಕೂಪಕ್ಕೆ ತಳ್ಳಿದ ಮಾವೋವಾದಿಗಳಿಗೆ ರಾಜಕೀಯ ಪಕ್ಷಗಳೂ ಹೆದರಿಕೊಂಡವು. ಹಾಗೆ ಹೆದರಿ ಕದನ ವಿರಾಮ ಘೋಷಿಸುವಂತೆ ಮಾವೋವಾದಿಗಳಿಗೆ ಮನವಿ ಮಾಡಿಕೊಂಡವು. ಮಾವೋವಾದಿ ನಾಯಕ ಪ್ರಚಂಡ ಅಂತಹ ಸಂದರ್ಭಕ್ಕಾಗಿಯೇ ಕಾದು ಕುಳಿತಿದ್ದರು. 2006ರಲ್ಲಿ ಕದನ ವಿರಾಮ ಘೋಷಣೆ ಮಾಡಿದ ಪ್ರಚಂಡ, ರಾಜಾಡಳಿತವನ್ನು ತೆಗೆದುಹಾಕಬೇಕೆಂದು ಬೇಡಿಕೆ ಇಟ್ಟರು. ಏಕೆಂದರೆ ನೇಪಾಳಿಯರು ರಾಜನನ್ನು ವಿಷ್ಣುವಿನ ಅವತಾರವೆಂಬಂತೆ ಕಾಣುತ್ತಾರೆ. ಅಂತಹ ರಾಜನನ್ನೇ ಕಿತ್ತೊಗೆದರೆ ನಂಬಿಕೆಗೇ ಕೊಡಲಿಯೇಟು ಹಾಕಬಹುದು ಎಂಬುದು ಪ್ರಚಂಡ ಅವರಿಗೆ ಗೊತ್ತಿತ್ತು. ಇತ್ತ ಪ್ರಚಂಡ ಅವರನ್ನು ಸಮರ್ಥವಾಗಿ ಎದುರಿಸುವ ತಾಕತ್ತು ಯಾರಿಗೂ ಇರಲಿಲ್ಲ. ಹಾಗಾಗಿ ಪ್ರಚಂಡ ಹೇಳಿದ್ದೇ ಕಾನೂನಾಗತೊಡಗಿತು. 2006, ಮೇ 18ರಂದು ರಾಜಾಡಳಿತವನ್ನು ಕಿತ್ತೊಗೆದು ನೇಪಾಳವನ್ನು ಜಾತ್ಯತೀತ ರಾಷ್ಟ್ರವೆಂದು ಘೋಷಣೆ ಮಾಡಲಾಯಿತು.

ಅಲ್ಲಿಗೆ ಜಗತ್ತಿನ ಏಕೈಕ ಹಿಂದೂ ರಾಷ್ಟ್ರ ಪತನಗೊಂಡಿತು.

ಹೊಸ ಸಂವಿಧಾನ, ಸಂಸತ್ತು ರಚನೆಯಾಯಿತು. 2008, ಮೇ.ನಲ್ಲಿ ಚುನಾವಣೆಯೂ ಘೋಷಣೆಯಾಯಿತು. ಆದರೆ ಗ್ರಾಮಾಂತರ ಪ್ರದೇಶಗಳಲ್ಲಿ ‘ಜಂಗಲ್ ರಾಜ್’ ನಡೆಸುತ್ತಿದ್ದ ಮಾವೋವಾದಿಗಳಿಗೆ ಬೆದರಿ ಯಾವ ರಾಜಕೀಯ ಪಕ್ಷಗಳೂ ಚುನಾವಣಾ ಪ್ರಚಾರಕ್ಕೆ ಹೋಗಲಿಲ್ಲ. ಹೀಗೆ ಮಾವೋವಾದಿಗಳ ಭಯದಲ್ಲೇ ನಡೆದ ಚುನಾವಣೆಯಲ್ಲಿ ಸಹಜವಾಗಿಯೇ ಸಿಪಿಎನ್-ಎಂ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿತು. ೨೦೦೮, ಆಗಸ್ಟ್‌ನಲ್ಲಿ ಪ್ರಚಂಡ ಅವರು ನೇಪಾಳದ ಪ್ರಧಾನಿ ಯಾಗಿ ಅಧಿಕಾರ ವಹಿಸಿಕೊಂಡರು. ಅಲ್ಲಿಗೆ ಭಾರತದ ನಿಯಂತ್ರಣ ತಪ್ಪಿ ನೇಪಾಳ ಚೀನಾದ ಕಪಿಮುಷ್ಟಿಗೆ ಸಿಲುಕುವತ್ತ ಸಾಗತೊಡಗಿತು. ಅಷ್ಟಕ್ಕೂ ಭಾರತದ ಕಮ್ಯುನಿಸ್ಟರನ್ನೇ ತೆಗೆದುಕೊಳ್ಳಿ. ಅವರ ನಿಷ್ಠೆ ಎಂದಿಗೂ ಸಿದ್ಧಾಂತಕ್ಕೇ ಹೊರತು, ದೇಶಕ್ಕಲ್ಲ. ಚೀನಾ ಭಾರತ ವಿರೋಧಿ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರವೇ ಆದರೂ ಅಮೆರಿಕವನ್ನು ಸದಾ ತೆಗಳುವ ಭಾರತದ ಎಡಪಕ್ಷಗಳೆಂದಾದರೂ ಚೀನಾ ವಿರುದ್ಧ ಮಾತನಾಡಿದ್ದನ್ನು ನೋಡಿದ್ದೀರಾ, ಕೇಳಿದ್ದೀರಾ, ಓದಿದ್ದೀರಾ? ಪ್ರಚಂಡ ಪ್ರಧಾನಿಯಾದ ಮೇಲೆ ನೇಪಾಳ ಕೂಡ ಚೀನಾದತ್ತ ವಾಲತೊಡಗಿತು. ಅದು ಪ್ರಚಂಡ ಅಧಿಕಾರ ವಹಿಸಿಕೊಂಡ ಕ್ಷಣಮಾತ್ರದಲ್ಲೇ ಬಹಿರಂಗವಾಗತೊಡಗಿತು. ಯಾರೇ ನೇಪಾಳದ ಪ್ರಧಾನಿಯಾಗಲಿ, ಅಧಿಕಾರ ವಹಿಸಿಕೊಂಡ ನಂತರ ಮೊದಲು ಮಾಡುವ ಕೆಲಸವೆಂದರೆ ಪಶುಪತಿನಾಥ ದೇವಾಲಯಕ್ಕೆ ಭೇಟಿಕೊಟ್ಟು ಪೂಜೆ ಸಲ್ಲಿಸುತ್ತಾರೆ. ಆದರೆ ತಾನು ನಿರೀಶ್ವರವಾದಿ ಎಂದ ಪ್ರಚಂಡ, ಪಶುಪತಿನಾಥ ದೇವಾಲಯಕ್ಕೆ ತೆರಳಿ ಪೂಜೆ ಸಲ್ಲಿಸಲು ನಿರಾಕರಿಸಿದರು. ಇವತ್ತಿಗೂ ಅಮೆರಿಕದ ಅಧ್ಯಕ್ಷರು ಬೈಬಲ್ ಮೇಲೆ ಕೈಯಿಟ್ಟು ಪ್ರಮಾಣ ವಚನ ಸ್ವೀಕರಿಸುತ್ತಾರೆ, ಬ್ರಿಟನ್‌ನಲ್ಲಿ ಚರ್ಚ್‌ಗಳು ಅಧಿಕೃತವಾಗಿ ಧರ್ಮದ ಪಾರುಪತ್ಯ ಹೊಂದಿವೆ, ಮುಸ್ಲಿಮ್ ರಾಷ್ಟ್ರಗಳಲ್ಲಂತೂ ಉಸಿರಲ್ಲೇ ಧರ್ಮ ಬೆರೆತಿದೆ. ಆದರೆ ವಿಶ್ವದ ಏಕೈಕ ಹಿಂದೂ ರಾಷ್ಟ್ರವಾದ ನೇಪಾಳಕ್ಕೆ ಧರ್ಮವೇ ಶಾಪವೆಂಬಂತೆ ಪ್ರಚಂಡ ವರ್ತಿಸಲಾರಂಭಿಸಿದರು. ಆತ ಎಂತಹ ಕೃತ್ರಿಮನೆಂದರೆ ಪುಷ್ಪ ಕಮಲ್ ದಹಲ್ ಎಂಬ ಹೆಸರನ್ನು ಮೊದಲೇ ಬದಲಾಯಿಸಿಕೊಂಡು ತಾನು ಬ್ರಾಹ್ಮಣನೆಂಬುದನ್ನು ಮರೆಮಾಚಲು ಯತ್ನಿಸಿದ್ದ! 1959ರಲ್ಲಿ ಟಿಬೆಟ್‌ನ್ನು ಸಂಪೂರ್ಣವಾಗಿ ತನ್ನ ವಶಕ್ಕೆ ತೆಗೆದುಕೊಂಡ ನಂತರ ಬೌದ್ಧ ಧರ್ಮದ ಎಲ್ಲ ಸಂಕೇತಗಳನ್ನೂ ನಾಶಪಡಿಸಲು ಚೀನಾ ಹೇಗೆ ಪ್ರಯತ್ನಿಸಿತೋ ಪ್ರಚಂಡ ಅದೇ ಕೆಲಸವನ್ನು ನೇಪಾಳದಲ್ಲಿ ಆರಂಭಿಸಿದರು. ಪ್ರಾಚೀನ ಕಾಲದಿಂದಲೂ ಗ್ರಾಮೀಣ ಭಾಗಗಳಲ್ಲಿ ನಡೆದುಕೊಂಡು ಬಂದಿದ್ದ ಸಂಸ್ಕೃತ ಪಾಠಶಾಲೆಗಳನ್ನು ನಿಲ್ಲಿಸಿದರು. ಗೋಮಾಂಸ ಸೇವನೆಯನ್ನು ಸಾರ್ವಜನಿಕವಾಗಿ ಪ್ರತಿಪಾದಿಸಿದರು. ಹೀಗೆ ಹಿಂದೂ ಧರ್ಮದ ನಾಶಕ್ಕೇ ನಿಂತರು.

ಅಷ್ಟೇ ಅಲ್ಲ, ಯಾರೇ ನೇಪಾಳದ ಪ್ರಧಾನಿಯಾದರೂ ಅವರ ಮೊದಲ ಭೇಟಿ ಭಾರತಕ್ಕಾಗಿರುತ್ತದೆ. ಆದರೆ ಪ್ರಚಂಡ ಮೊದಲಿಗೆ ಚೀನಾಕ್ಕೆ ಭೇಟಿ ನೀಡಿದರು. ಚೀನಾದ ಜತೆ ‘ಸ್ನೇಹ ಸಂಬಂಧ’ಕ್ಕೆ ಸಹಿ ಹಾಕಿದರು. ಇದನ್ನೆಲ್ಲಾ ಭಾರತ ಮೂಕ ಪ್ರೇಕ್ಷಕನಂತೆ ನೋಡತೊಡಗಿತಾದರೂ ಸಂದರ್ಭಕ್ಕಾಗಿ ಕಾದು ಕುಳಿತಿತ್ತು. ಅಷ್ಟಕ್ಕೂ ಟಿಬೆಟ್‌ನಂತೆ ನೇಪಾಳವೇನಾದರೂ ಚೀನಾದ ಕೈವಶವಾದರೆ ಗತಿಯೇನು? ಈಗಲಾದರೂ ಭಾರತ ಹಾಗೂ ಚೀನಾ ನಡುವೆ ತಡೆಗೋಡೆಯಾಗಿ ಹಿಮಾಲಯವಿದೆ. ಒಂದು ವೇಳೆ ನೇಪಾಳ ಚೀನಾದ ನಿಯಂತ್ರಣಕ್ಕೊಳಗಾದರೆ ಅದು ಗಂಡಾಂತರಕಾರಿಯೇ ಸರಿ. ಹಾಗಾಗಿ ಭಾರತ ಕೊನೆಗೂ ಎಚ್ಚೆತ್ತುಕೊಂಡು ಅವಕಾಶವನ್ನು ಎದುರು ನೋಡತೊಡಗಿತು. ಇತ್ತ ನೇಪಾಳ ಸೇನೆಯ ಜನರಲ್ ರುಕ್ಮಾಂಗದ ಕಟ್ವಾಲ್ ಅವರು ನಮ್ಮ ಇಂಡಿಯನ್ ಮಿಲಿಟರಿ ಅಕಾಡೆಮಿಯಲ್ಲಿ(ಐಎಂಎ) ತರಬೇತಿ ಪಡೆದವರು. ನೇಪಾಳಿ ಕಾಂಗ್ರೆಸ್ ಪಕ್ಷವಂತೂ ಮೊದಲಿನಿಂದಲೂ ಭಾರತದ ಪರವಿರುವ ಪಕ್ಷ. ಇಂತಹ ಅನುಕೂಲಗಳಿದ್ದರೂ ಅವಕಾಶವೊಂದು ಒದಗಿ ಬರಬೇಕಿತ್ತು. ನೇಪಾಳದ ಪ್ರಧಾನಿಯಾದ ಕೂಡಲೇ ಒಂದರ ಹಿಂದೆ ಒಂದು ಬದಲಾವಣೆ ತರಲು ಹೊರಟ ಪ್ರಚಂಡ ಅವರು ಆತುರದಲ್ಲಿ ಎಲ್ಲವನ್ನೂ ಒಮ್ಮೆಲೇ ಬದಲಾಯಿಸಲು ಹೊರಟರು. ಯಾವ ಮಾವೋವಾದಿ ಗೆರಿಲ್ಲಾಗಳು ನೇಪಾಳಿ ಸೇನೆಯ ವಿರುದ್ಧ ಹೋರಾಡಿದ್ದರೋ ಅದೇ ಗೆರಿಲ್ಲಾಗಳನ್ನು ಸೇನೆಗೆ ಭರ್ತಿ ಮಾಡಲು ಮುಂದಾದರು. ಆದರೆ ಪ್ರಚಂಡ ಅವರ ಕ್ರಮಕ್ಕೆ ಜನರಲ್ ರುಕ್ಮಾಂಗದ ಕಟ್ವಾಲ್ ಅಡ್ಡಗಾಲು ಹಾಕಿದರು. ಪ್ರಚಂಡ ಅವರ ಮಾತನ್ನು ಧಿಕ್ಕರಿಸಿ ಗೆರಿಲ್ಲಾಗಳ ಬದಲು ಬೇರೆಯವರನ್ನು ಹೊಸದಾಗಿ ನೇಮಕ ಮಾಡಿಕೊಂಡರು. ಹೀಗಾಗಿ ಪ್ರಚಂಡ ಹಾಗೂ ರುಕ್ಮಾಂಗದ ನಡುವೆ ತಿಕ್ಕಾಟ ಆರಂಭವಾಯಿತು. ಅಷ್ಟಕ್ಕೂ ದೇಶದ್ರೋಹಿಗಳನ್ನು ಸೇನೆಗೆ ಭರ್ತಿ ಮಾಡಿಕೊಳ್ಳಲು ಮುಂದಾದರೆ ಯಾವ ಸೈನಿಕ ತಾನೇ ಸುಮ್ಮನಿದ್ದಾನು? ಈ ಮಧ್ಯೆ, ೫ನೇ ರಾಷ್ಟ್ರೀಯ ಕ್ರೀಡಾ ಕೂಟದಲ್ಲಿ ಭಾಗವಹಿಸಲು ಮಾವೋವಾದಿಗಳಿಗೆ ಅವಕಾಶ ಮಾಡಿಕೊಟ್ಟರೆಂಬ ಕಾರಣಕ್ಕೆ ನೇಪಾಳಿ ಸೇನೆ ಕ್ರೀಡಾಕೂಟವನ್ನೇ ಬಹಿಷ್ಕರಿಸುವಂತೆ ಮಾಡಿದರು ರುಕ್ಮಾಂಗದ. ಅಲ್ಲಿಗೆ ಸಂಘರ್ಷ ಅಂತಿಮ ಹಂತಕ್ಕೆ ತಲುಪಿತು.

ಪ್ರಚಂಡ ಕಳೆದ ಭಾನುವಾರ ರುಕ್ಮಾಂಗದ ಅವರನ್ನು ಉಚ್ಛಾಟನೆ ಮಾಡಿ ಆದೇಶ ಹೊರಡಿಸುವುದಕ್ಕೆ ಇವೇ ಕಾರಣಗಳು.

ಆದರೆ ಭಾರತ ಸರಕಾರದ ಜಾಣ್ಮೆಯಿಂದಾಗಿ ಪ್ರಚಂಡ ಆದೇಶ ಅವರಿಗೇ ಉರುಳಾಯಿತು. ರುಕ್ಮಾಂಗದ ಅವರ ಉಚ್ಛಾಟನೆಯನ್ನು ತಡೆಯಲು ಭಾರತ ತೆರೆಮರೆಯಲ್ಲಿ ಸಾಕಷ್ಟು ಪ್ರಯತ್ನ ಮಾಡಿತು. ಪ್ರಚಂಡ ಮಾತು ಕೇಳಲಿಲ್ಲ, ಉಚ್ಛಾಟನೆ ಮಾಡಿಯೇ ಬಿಟ್ಟರು. ಆದರೆ ಅಧ್ಯಕ್ಷ ರಾಮ್ ಬರಣ್ ಯಾದವ್ ಭಾರತದ ಪರ ಇರುವ ನೇಪಾಳಿ ಕಾಂಗ್ರೆಸ್ ಪಕ್ಷಕ್ಕೆ ಸೇರಿದವರು. ಆ ಸಂಪರ್ಕವನ್ನು ಸದುಪಯೋಗಪಡಿಸಿಕೊಂಡ ಭಾರತ, ಪ್ರಚಂಡ ಆದೇಶವನ್ನು ತಿರಸ್ಕರಿಸುವಂತೆ ಮಾಡಿತು. ಹೀಗೆ ಮೊದಲ ಸುತ್ತಿನಲ್ಲಿ ಭಾರತಕ್ಕೆ ಗೆಲುವು ದೊರೆತಿದೆ, ಚೀನಾದ ಕುತಂತ್ರಕ್ಕೆ ಹಿನ್ನಡೆಯಾಗಿದೆ. ಆದರೆ ಮುಂದೆ ಅತಿ ದೊಡ್ಡ ಸವಾಲಿದೆ. ಮಾವೋವಾದಿಗಳು ಮತ್ತೆ ಬೀದಿಗಿಳಿದು ಹಿಂಸಾತ್ಮಕ ಹೋರಾಟಕ್ಕೆ ಮುಂದಾಗುವುದನ್ನು ತಡೆಯಬೇಕಾದುದು ಭಾರತದ ಹಿತದೃಷ್ಟಿಯಿಂದ ಅತ್ಯಂತ ಮುಖ್ಯ. ಅಷ್ಟಕ್ಕೂ, ಎಕೆ-47 ರೈಫಲ್ಲನ್ನು ಕಂಡು ಹಿಡಿದಿದ್ದು ಸೋವಿಯತ್ ರಷ್ಯಾವಾದರೂ ಇವತ್ತು ಜಗತ್ತಿನಲ್ಲಿಯೇ ಅತಿ ಹೆಚ್ಚು ಎಕೆ-47 ರೈಫಲ್ ಉತ್ಪಾದನೆ ಮಾಡುತ್ತಿರುವುದು ಚೀನಾ. ಅವುಗಳು ರವಾನೆಯಾಗುವುದು ನಮ್ಮ ಈಶಾನ್ಯ ರಾಜ್ಯಗಳು ಹಾಗೂ ನೇಪಾಳದ ಮಾವೋವಾದಿಗಳಿಗೆ. ಇವತ್ತು ಭಾರತ 163 ಜಿಲ್ಲೆಗಳು ನಕ್ಸಲ್ ಪೀಡಿತ ಪ್ರದೇಶ ಗಳೆಂದು ಘೋಷಣೆಯಾಗಿವೆ. ನಕ್ಸಲರ ರೆಡ್ ಕಾರಿಡಾರ್ ಪ್ರಾರಂಭವಾಗುವುದೇ ನೇಪಾಳದಿಂದ. ಈ ಹಿನ್ನೆಲೆಯಲ್ಲಿ ಭಾರತ ದೃಢ ಕ್ರಮ ಕೈಗೊಳ್ಳಲೇಬೇಕು. ಈ ಹಿಂದೆ ಮಿಲಿಟರಿ ಸರ್ವಾಧಿಕಾರಿಗಳು ಅಧಿಕಾರಕ್ಕೇರಿದರೆಂಬ ಕಾರಣಕ್ಕೆ ಭಾರತ ಮ್ಯಾನ್ಮಾರ್(ಬರ್ಮಾ) ಜತೆ ಸಂಬಂಧವನ್ನೇ ಕಡಿದುಕೊಂಡ ಕಾರಣ ಚೀನಾ ಬರ್ಮಾಕ್ಕೆ ಆಗಮಿಸಿತು. ಬರ್ಮಾದ ಕೋಕೋ ದ್ವೀಪದಲ್ಲಿ ತನ್ನದೇ ಆದ ನೌಕಾ ನೆಲೆಯನ್ನು ಸ್ಥಾಪಿಸಿಕೊಂಡು ಬಂಗಾಳ ಕೊಲ್ಲಿಯ ಮೂಲಕವೂ ಭಾರತಕ್ಕೆ ಅಪಾಯ ತಂದೊಡ್ಡಿತು. ಅಲ್ಲದೆ ನಮ್ಮ ಈಶಾನ್ಯ ರಾಜ್ಯಗಳಲ್ಲಿ ಪ್ರತ್ಯೇಕತಾವಾದ ಹೆಚ್ಚಾಗಿದ್ದೇ ಚೀನಾ ಬರ್ಮಾಕ್ಕೆ ಆಗಮಿಸಿದ ನಂತರ. ಈ ದೃಷ್ಟಿಯಿಂದಲೇ ಅಟಲ್ ಬಿಹಾರಿ ವಾಜಪೇಯಿಯವರ ಸರಕಾರ ಪ್ರಜಾತಂತ್ರ, ಆಂಗ್ ಸಾನ್ ಸೂಕಿ ಎಂಬ ಭ್ರಮೆಗಳನ್ನು ಬಿಟ್ಟು ಬರ್ಮಾದ ಮಿಲಿಟರಿ ಸರಕಾರದ ಜತೆ ಸಂಬಂಧ ಬೆಳೆಸಿತು, ಮಿಲಿಟರಿ ಆಡಳಿತ ಗಾರರನ್ನು ಭಾರತಕ್ಕೆ ಆಹ್ವಾನಿಸಿ ಆತಿಥ್ಯ ನೀಡಿತು. ನಮ್ಮ ಈಶಾನ್ಯ ರಾಜ್ಯಗಳಲ್ಲಿ ಹಿಂಸಾ ಹೋರಾಟ ಗಣನೀಯವಾಗಿ ಕಡಿಮೆಯಾಗಿದ್ದೇ ಆನಂತರ. ಏಕೆಂದರೆ ಬರ್ಮಾದ ಜತೆ ಸ್ನೇಹ ಬೆಳೆಸುವ ಮೂಲಕ ಪ್ರತ್ಯೇಕತಾವಾದಿಗಳಿಗೆ ಹರಿದು ಬರುತ್ತಿದ್ದ ಶಸ್ತ್ರಾಸ್ತ್ರ ರವಾನೆ ಜಾಲಕ್ಕೇ ಕಡಿವಾಣ ಹಾಕಿತು.

ಹಾಗಾಗಿ ನೇಪಾಳದ ವಿಷಯದಲ್ಲೂ ನಾವು ಸೂಕ್ಷ್ಮವಾಗಿ ನಡೆದುಕೊಳ್ಳಬೇಕು. ನೇಪಾಳ ಹಾಗೂ ಭೂತಾನ್ ಜತೆ ಭಾರತಕ್ಕೆ ಜನುಮಜನುಮದ ಸಂಬಂಧವಿದೆ. ನಮ್ಮ ಗೂರ್ಖಾ ರೆಜಿಮೆಂಟಿನಲ್ಲಿ ನೇಪಾಳಿಯರೇ ಹೆಚ್ಚಿದ್ದಾರೆ. ಅವರನ್ನು ನಾವೆಂದೂ ವಿದೇಶಿಯರೆಂಬಂತೆ ಕಂಡಿಲ್ಲ. ಇವತ್ತಿಗೂ ನೇಪಾಳ-ಭೂತಾನ್ ಹಾಗೂ ಭಾರತದ ಗಡಿಯ ನಡುವೆ ಬೇಲಿಯಿಲ್ಲ. ನಮ್ಮ ನೆರೆಯ ರಾಷ್ಟ್ರಗಳಲ್ಲಿ ನಡೆಯುವ ಅಹಿತಕರ ಘಟನೆಗಳು ನಮ್ಮ ಮೇಲೂ ಕೆಟ್ಟ ಪರಿಣಾಮ ಬೀರುತ್ತವೆ. ‘ಪಾಕೆಟ್ ಕಾರ್ಟೂನ್’ಗಳಂತಿರುವ ಚೀನಿಯರು ಜಗತ್ತಿನಲ್ಲಿಯೇ ಅತ್ಯಂತ ಕೃತ್ರಿಮರು. ಸೈದ್ಧಾಂತಿಕ ಸಂಗಾತಿಗಳಾದ ಅಂತಹ ಸೋವಿಯತ್ ರಷ್ಯಾದ ಜತೆಯೇ ೧೯೬೪ರಲ್ಲಿ ಯುದ್ಧ ಮಾಡಿದ ಚೀನಿಯರು ಯಾರ ನಂಬಿಕೆಗೂ ಅರ್ಹರಲ್ಲ. ಒಂದೆಡೆ ನಮ್ಮ ಜತೆ ವ್ಯಾಪಾರ ಮಾತನಾಡುತ್ತಿದ್ದರೂ ಮತ್ತೊಂದೆಡೆ ಅರುಣಾಚಲದ ಮೇಲೆ ಹಕ್ಕು ಪ್ರತಿಪಾದನೆ ಮಾಡುತ್ತಿರುವ ಹಾಗೂ ನಮ್ಮ ವಿದೇಶಾಂಗ ಖಾತೆಯ ಕಂಪ್ಯೂಟರ್‌ಗಳನ್ನು ಹ್ಯಾಕ್ ಮಾಡಿ ಮಾಹಿತಿ ಕದಿಯುತ್ತಿರುವ ಚೀನಿಯರು ವಿಶ್ವಾಸಕ್ಕೆ ಅರ್ಹರಲ್ಲ. ಪಾಕಿಸ್ತಾನ, ಬರ್ಮಾ, ಬಾಂಗ್ಲಾಕ್ಕೆ ಈಗಾಗಲೇ ಕಾಲಿಟ್ಟಿರುವ ಚೀನಿಯರು ಪ್ರಚಂಡನನ್ನು ಮುಂದಿಟ್ಟುಕೊಂಡು ನೇಪಾಳವನ್ನೂ ಕಬಳಿಸಿದರೆ ಭಾರತಕ್ಕದು ಖಂಡಿತ Suicidal.

ಕೃಪೆ : ಪ್ರತಾಪ್ ಸಿಂಹ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ