ನನ್ನ ಬ್ಲಾಗ್ ಪಟ್ಟಿ

ಶನಿವಾರ, ಜುಲೈ 31, 2010

ಶೇಮ್ ಶೇಮ್ ಸೆತಲ್ವಾಡ್, ಶಿಕ್ಷೆ ಕೊಡಲ್ವಾ ಮೈ ಲಾರ್ಡ್?!

ಸ್ಥಳ: ಹುಸೇನ್ ನಗರ, ನರೋಡಾ ಪಾಟಿಯಾ
ಪ್ರತ್ಯಕ್ಷದರ್ಶಿ: ಅಮೀನಾ ಆಪಾ

ಆಗ ಬೆಳಗ್ಗೆ 9 ಗಂಟೆ 10 ನಿಮಿಷವಾಗಿತ್ತು. ಅದು 2002, ಫೆಬ್ರವರಿ 28, ಗುರುವಾರ. ನಾನು ಚಹಾ ಸಿದ್ಧಪಡಿಸುತ್ತಿದ್ದೆ. ನಮ್ಮ ಮೊಹಲ್ಲಾದ ಬಾಲಕಿಯೊಬ್ಬಳು ಇದ್ದಕ್ಕಿದ್ದಂತೆಯೇ ಮನೆ ಕೆಲಸ ಬಿಟ್ಟು ಗಾಬರಿಯಿಂದ ಹೊರಗೋಡಿ ಬಂದಳು. ಬಜರಂಗ ದಳದ ವ್ಯಕ್ತಿಗಳು ಬರುತ್ತಿದ್ದಾರೆ ಎಂದು ಅವರು ಕೂಗುತ್ತಿದ್ದರು. ನಾನೂ ಕೂಡ ಮನೆಯಿಂದ ಹೊರಗೋಡಿದೆ. ಕಾಲುಪುರ್ ಹಾಗೂ ನರೋಡಾ ಪಾಟಿಯಾ ನಡುವೆ ಜನಜಂಗುಳಿ ಸೃಷ್ಟಿ ಯಾಗುತ್ತಿತ್ತು. ಎಲ್ಲಿ ನೋಡಿದರೂ ತಲೆ, ತಲೆ, ತಲೆಗಳೇ. ಅವರ ಸಂಖ್ಯೆಗೆ ಲೆಕ್ಕವೇ ಇರಲಿಲ್ಲ. ಅಂದಾಜಿಗೆ 15 ಸಾವಿರದಷ್ಟಿದ್ದರು. ಅವರೆಲ್ಲ ವಿಶ್ವಹಿಂದೂ ಪರಿಷತ್‌ನವರು, ಬಜರಂಗಿಗಳು ಎಂದಷ್ಟೇ ನನಗೆ ತಿಳಿಯಿತು. ಏಕೆಂದರೆ ಅವುಗಳ ನಾಯಕರು ಎಲ್ಲರಿಗೂ ಗೊತ್ತಿದ್ದ ವ್ಯಕ್ತಿಗಳೇ ಆಗಿದ್ದರು ಹಾಗೂ ಹಣೆಗೆ ಕೇಸರಿ ಪಟ್ಟಿ ಕಟ್ಟಿಕೊಂಡಿದ್ದರು. ಉಳಿದವರು ಸ್ಥಳೀಯ ಛಾರಾ ಸಮು ದಾಯಕ್ಕೆ ಸೇರಿದವರು.

ಅವರಲ್ಲಿ ಕೃಷ್ಣಾನಗರದವರೇ ಸಾವಿರಾರು ಜನರಿದ್ದರು. ಉಳಿದವರು ಕೇಂದ್ರ ಸರಕಾರದ ಸ್ಥಳೀಯ ಕಾರ್ಯಾಗಾರದ ಕಾರ್ಮಿಕರು. ಆ ದಿನ ಕೇಂದ್ರದ ಕಾರ್ಯಾಗಾರದ ಕಾರ್ಮಿಕ ರನ್ನೂ ಕೂಡ ಹತ್ಯಾಕಾಂಡಕ್ಕೆ ಬಳಸಿಕೊಳ್ಳಲಾಯಿತು. ಅಂದು ಬೇಕೆಂದೇ ಮುಸ್ಲಿಂ ಉದ್ಯೋಗಿಗಳಿಗೆ ರಜೆ ನೀಡಿ ಹಿಂದೂಗಳಿಗೆ ಮಾತ್ರ ಕರ್ತವ್ಯಕ್ಕೆ ಹಾಜರಾಗುವಂತೆ ತಿಳಿಸಲಾಗಿತ್ತು. ನಮ್ಮ ಜನರನ್ನು ಸುಟ್ಟುಹಾಕಲು ಕೇಂದ್ರದ ಕಾರ್ಯಾಗಾರದಿಂದಲೇ ಡೀಸೆಲ್ ಪೂರೈಸಲಾಗಿತ್ತು. ಅದರ ವಾಚ್‌ಮನ್ ಸೋಲಂಕಿ ಎಂಬಾತನೇ ಡೀಸೆಲ್ ನೀಡಿದ್ದು.

ಐವತ್ತರಿಂದ 100ರಷ್ಟಿದ್ದ ಗುಂಪು ಬಸ್ತಿಯುದ್ದಕ್ಕೂ ಇರುವ ರಸ್ತೆಯ, ಹಿಂಬದಿಯಿರುವ ನೂರಾನಿ ಮಸೀದಿಯನ್ನು ಮೊದಲಿಗೆ ಗುರಿಯಾಗಿಸಿಕೊಂಡಿತು. ಆನಂತರ ಗಂಭೀರವಾಗಿ ಗಾಯಗೊಂಡಿದ್ದ 18 ವರ್ಷದ ಶಫೀಕ್ ಎಂಬ ಹುಡುಗನನ್ನು ರಕ್ತಹಿಂಡಿ ಸಾಯಿಸಿದರು. ನರೋಡಾ ಪೊಲೀಸ್ ಠಾಣೆ, ಐಜಿಪಿ, ಪೊಲೀಸ್ ಕಮಿಷನರ್‌ಗೆ ಬೆಳಗ್ಗೆ 9ರಿಂದ ರಾತ್ರಿ 9ರವರೆಗೂ ನೂರಾರು ಕರೆಗಳನ್ನು ಮಾಡಿ ಸಹಾಯಕ್ಕಾಗಿ ಅಂಗಲಾಚಿದರೂ ಇಷ್ಟೆಲ್ಲಾ ದೌರ್ಜನ್ಯ ನಡೆದು ಹೋಯಿತು. ಇಂತಹ ಹತ್ಯಾ ಕಾಂಡಕ್ಕೆ ಕೆ.ಕೆ. ಮೈಸೂರ್‌ವಾಲಾ ಎಂಬ ಪೊಲೀಸ್ ಇನ್‌ಸ್ಪೆಕ್ಟರ್ ಅವರೇ ಕಾರಣ. ನಾವು ಸಹಾಯಯಾಚಿಸಿ ಆತನ ಬಳಿಗೆ ಓಡುತ್ತಿದ್ದರೆ ಆತ ನಮ್ಮ ಮೇಲೆಯೇ ಅಶ್ರುವಾಯು(ಟಿಯರ್ ಗ್ಯಾಸ್) ಪ್ರಯೋಗಿಸಿದ. ನಮಗೆ ರಕ್ಷಣೆ ನೀಡು ಎಂದು ಅಂಗಲಾಚಿದಾಗ, ‘ದೂರ ಹೋಗು, ನನಗೆ ಮೇಲಿನಿಂದ ಆದೇಶ ಬಂದಿದೆ’ ಎಂದ. ಮೈಸೂರ್‌ವಾಲಾ, ಐಜಿಪಿ ಹಾಗೂ ಸಿಪಿ ಇವರೇ ನಮ್ಮ ಜನರ ಕೊಲೆಗೆ ಕಾರಣ. ಪ್ರಮಾಣ ಮಾಡಿ ಹೇಳುತ್ತೇನೆ, ನಮ್ಮ ಸುಂದರ ಹೆಣ್ಣುಮಕ್ಕಳು ಅತ್ಯಾಚಾರಕ್ಕೊಳಗಾಗುವುದನ್ನು, ತುಂಡು ತುಂಡಾಗುವುದನ್ನು ಕಣ್ಣಾರೆ ಕಂಡಿದ್ದೇನೆ.

ಅಂದು ಮೂರು ಮಾರುತಿ ಕಾರುಗಳು ನಮ್ಮ ಕಣ್ಣಿಗೆ ಕಂಡವು. ಮೂರೂ ಬಿಳಿ ಬಣ್ಣದವಾಗಿದ್ದವು. GJ-61418, GJ-1-B-1593 ಮತ್ತು GJ-1-3631 ಅವುಗಳ ನಂಬರ್. ಅವುಗಳಲ್ಲಿ ಬಂದವರೇ ದೊಂಬಿಯ ನೇತೃತ್ವ ವಹಿಸಿದವರು. ಅದು ನಿಜಕ್ಕೂ ಭಯಾನಕ ದಿನ. ನಾವು ನಮ್ಮ ಮನೆಯ ಮೇಲ್ಚಾವಣಿಯ ಮೇಲೆ ಅಡಗಿ ಕುಳಿತಿದ್ದೆವು. ನಮ್ಮ ಆತ್ಮೀಯ ಸ್ನೇಹಿತೆ ಕೌಸರ್ ಬಾನು ಅತ್ಯಾಚಾರಕ್ಕೊಳಗಾಗಿದ್ದನ್ನು ನಾವು ಕಣ್ಣಾರೆ ಕಂಡಿದ್ದು ಅಲ್ಲಿಂದಲೇ. ಅವಳು ನರೋಡಾ ಪಾಟಿಯಾದ ಪಿರೋಜ್‌ನಗರ ನಿವಾಸಿ. ಅವಳ ಹೊಟ್ಟೆಯನ್ನು ಸೀಳಿ ಮಗುವನ್ನು ಹೊರಗೆಳೆದು ಉರಿವ ಬೆಂಕಿಗೆ ಹಾಕಿ ಜೀವಂತವಾಗಿ ದಹಿಸಿದರು. ಆನಂತರ ಕೌಸರ್‌ಳನ್ನು ತುಂಡು ತುಂಡಾಗಿಸಿದರು. ಆಕೆ 9 ತಿಂಗಳ ತುಂಬು ಗರ್ಭಿಣಿ. ಕೌಸರ್‌ಳ ಮೇಲ್ದುಟಿ ಹುಟ್ಟಿನಿಂದಲೇ ಸ್ವಲ್ಪ ವಿಕೃತಗೊಂಡಿತ್ತು. ಸ್ಥಳೀಯ ಆಸ್ಪತ್ರೆಯಲ್ಲಿದ್ದ ಹೆಣವನ್ನು ನೋಡಿ ಆಕೆಯದ್ದೇ ಎಂದು ನಮಗೆ ಗುರುತಿಸಲು ಸಾಧ್ಯವಾಗಿದ್ದು ಅದರಿಂದಾಗಿಯೇ. ಮದುವೆಯಾಗಿ ಮಗುವಿಗೆ ಜನ್ಮ ನೀಡಬೇ ಕೆಂಬುದು ಅವರ ಕನಸಾಗಿತ್ತು.
ಅಂದು ಯಾವ ಮಹಿಳೆಯ ಮಾನವೂ ಉಳಿದಿರಲಿಲ್ಲ. ಎಲ್ಲರೂ ಅತ್ಯಾಚಾರಕ್ಕೊಳಗಾಗಿದ್ದರು, ತುಂಡಾಗಿ ಹೆಣವಾಗಿದ್ದರು. ನಮ್ಮ ಹೆಂಗಳೆಯರಿಗೆ ಗೌರವಯುತ ಅಂತ್ಯಸಂಸ್ಕಾರವೂ ದೊರೆಯಲಿಲ್ಲ. ನೀವೇ ಹೇಳಿ, ಈ ಭೂಮಿ ಯಾರಿಗೆ ಸೇರಿದ್ದು? ಈ ದೇಶದ ದಾಸ್ಯ ವಿಮೋಚನೆಗೆ ಮುಸ್ಲಿಮರು ಹೋರಾಡಿಲ್ಲವೆ? ನಮ್ಮದೇ ಗ್ಯಾಸ್ ಸಿಲಿಂಡರ್‌ಗಳಿಂದ ನಮ್ಮ ಜೀವಗಳನ್ನೇ ಸುಟ್ಟುಹಾಕಿದರು. ಕ್ಷಣಮಾತ್ರದಲ್ಲಿ ನಾವು ಸುಟ್ಟ ಮಾಂಸವಾಗಿದ್ದೆವು. ಎಲ್ಲವೂ ಕಣ್ಣುಮಿಟುಕಿಸುವಷ್ಟರಲ್ಲಿ ನಡೆದು ಹೋಗಿತ್ತು.

ಆರೋಪಿಗಳು: ಬಜರಂಗದಳ/ವಿಎಚ್‌ಪಿ
ದೂಷಿತ ಪೊಲೀಸ್ ಅಧಿಕಾರಿಗಳು: ಐಜಿಪಿ ಸಿ.ಪಿ. ಪಾಂಡೆ ಮತ್ತು ಇನ್‌ಸ್ಪೆಕ್ಟರ್ ಮೈಸೂರ್‌ವಾಲಾ
ಪ್ರತ್ಯಕ್ಷದರ್ಶಿಯ ಸಂದರ್ಶನ: 2002, ಮಾರ್ಚ್ 4 ಮತ್ತು 22ರಂದು, ಗುಜರಾತ್ ನಿರಾಶ್ರಿತರ ಶಿಬಿರದಲ್ಲಿ.

ಈ ಘಟನೆಯನ್ನು ಕೇಳಿದರೇ ನಿಜಕ್ಕೂ ಮೈ ಜುಮ್ಮೆನ್ನುತ್ತದೆ ಅಲ್ಲವೆ?! ಇಂಥದ್ದೊಂದು ಕರುಣಾಜನಕ ಕಥೆಯನ್ನು ಕೇಳಿದರೆ ಯಾರ ಮನಸ್ಸು ತಾನೇ ಕರಗದೇ ಇದ್ದೀತು? ಒಬ್ಬ ತುಂಬು ಗರ್ಭಿಣಿಯ ಹೊಟ್ಟೆಯನ್ನು ಸೀಳಿ ಮಗುವನ್ನು ಹೊರತೆಗೆದು ಬೆಂಕಿಗೆ ಬಿಸಾಡುತ್ತಾರೆಂದರೆ ಅವರೆಂತಹ ಕ್ರೂರಿಗಳಿರಬಹುದು?

ಆದರೆ……. ಕಳೆದ 7 ವರ್ಷಗಳಿಂದ ನೀವು ಯಾವುದನ್ನು ನಂಬುತ್ತಾ ಬಂದಿದ್ದೀರೋ, ಯಾವ ಘಟನೆಗಾಗಿ ನಿಮ್ಮ ಕಣ್ಣುಗಳು ಜಿನುಗಿದ್ದವೋ ಅದೊಂದು ‘ಕಟ್ಟುಕಥೆ’ ಎಂದರೆ ನಿಮ್ಮ ಮನಸ್ಸಿಗೆ ಹೇಗಾದೀತು?!

Don’t u feel cheated?

ಆ ‘”Cheat” ಮತ್ತಾರೂ ಅಲ್ಲ ತೀಸ್ತಾ ಸೆತಲ್ವಾಡ್! ಆಕೆ ಹಾಗೂ ಆಕೆಯ ಗಂಡ ಜಾವೆದ್ ಆನಂದ್ ನಡೆಸುವ ‘sabrang.com’ ಅನ್ನು ತಡಕಾಡಿದರೆ 2002ರ ಗುಜರಾತ್ ಕೋಮು ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಇಂತಹ ಹತ್ತಾರು ಕಣ್ಣೀರ ಕಥೆಗಳು ಕಾಣಸಿಗುತ್ತವೆ. ಕೌಸರ್ ಬಾನು ಮಾತ್ರವಲ್ಲ, ಜನ್ನತ್‌ಬಿಬಿ ಶೇಖ್, ಶಬನಾ, ಅನೀಸಾ, ಜರೀನಾ ಮನ್ಸೂರಿ ಕಥೆಗಳೂ ಕೂಡ ಕರುಳು ಹಿಂಡುವಂತಿವೆ. ಇಂತಹ ಘಟನೆಗಳನ್ನು ‘ಸೃಷ್ಟಿಸಿ’ ಬೆಳಕಿಗೆ ತಂದ ತೀಸ್ತಾ ಸೆತಲ್ವಾಡ್ ಅವರ ಪ್ರಯತ್ನ ಯಾರ ಗಮನಕ್ಕೂ ಬಾರದೆ ಹೋಗಲಿಲ್ಲ! ಪ್ರತಿ ಟಿವಿ ಚಾನೆಲ್‌ಗಳೂ ಆಕೆಯನ್ನು ಕರೆಸಿ ಅಭಿಪ್ರಾಯ ಕೇಳಿದವು, ಬೋಧನೆ ಕೊಡಿಸಿ ದವು, ಮೋದಿಯ ಮುಖಕ್ಕೆ ಉಗಿಸಿದವು, ತಾವೂ ಉಗಿದವು. ಇನ್ನೊಂದೆಡೆ ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದ ಪ್ರಶಸ್ತಿಗಳೂ ತೀಸ್ತಾರನ್ನು ಹುಡುಕಿಕೊಂಡು ಬಂದವು.

1. ಗುಜರಾತ್ ಹಿಂಸಾಪೀಡಿತರಿಗೆ ನೀಡಿದ ಸಹಾಯಕ್ಕಾಗಿ 2002ರಲ್ಲಿಯೇ ರಾಜೀವ್ ಗಾಂಧಿ ಪ್ರಶಸ್ತಿ ಬಂತು.
2. ನ್ಯೂಜಿಲೆಂಡ್ ಪ್ರಧಾನಿಯಿಂದ ‘ಪ್ರಜಾಪ್ರಭುತ್ವದ ರಕ್ಷಕಿ’ ಬಿರುದು.
3. 2003ರಲ್ಲಿ ನ್ಯುರೆಂಬರ್ಗ್‌ನ ಮಾನವ ಹಕ್ಕು ಪ್ರಶಸ್ತಿ.
4. 2004ರಲ್ಲಿ ಎಂ.ಎ. ಥಾಮಸ್ ರಾಷ್ಟ್ರೀಯ ಮಾನವ ಹಕ್ಕು ಪುರಸ್ಕಾರ

ಅಷ್ಟು ಸಾಲದೆಂಬಂತೆ 2007ರಲ್ಲಿ ಕೇಂದ್ರದ ಕಾಂಗ್ರೆಸ್ ಸರಕಾರ ಆಕೆಗೆ ‘ಪದ್ಮಶ್ರೀ’ ಪುರಸ್ಕಾರವನ್ನೂ ನೀಡಿಬಿಟ್ಟಿತು. ಅಷ್ಟಕ್ಕೂ ಆಕೆ ಹೊರಗೆಳೆದಿದ್ದು ಸಾಮಾನ್ಯ ಘಟನೆಗಳೇನು? ಆಕೆ ಅದೆಷ್ಟು ಚೆನ್ನಾಗಿ ಕಥೆ ಹೆಣೆದಿದ್ದಳೆಂದರೆ ಆಕೆಯ ಮಾತಿಗೆ ಸುಪ್ರೀಂಕೋರ್ಟ್ ಕೂಡ ತಲೆದೂಗಿತು! ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿಯವರನ್ನು ‘Modern Day Nero’ ಎಂದು ಕಟುವಾಗಿ ಟೀಕಿಸಿತು. ಅಷ್ಟೇ ಅಲ್ಲ, ತೀಸ್ತಾ ಹಾಗೂ ರಾಷ್ಟ್ರೀಯ ಮಾನವ ಹಕ್ಕು ಆಯೋಗದ ಮನವಿಯನ್ನು ಪುರಸ್ಕರಿಸಿ ಪ್ರಕರಣಗಳ ವಿಚಾರಣೆಯನ್ನು ಗುಜರಾತ್‌ನಿಂದ ಮಹಾರಾಷ್ಟ್ರಕ್ಕೆ ವರ್ಗಾವಣೆ ಮಾಡುವ ನಿರ್ಧಾರವನ್ನೂ ಕೈಗೊಂಡಿತು. ಜತೆಗೆ ಕೌಸರ್ ಬಾನು ಹತ್ಯೆಯಾದ ನರೋಡಾ ಪಾಟಿಯಾ ಹತ್ಯಾಕಾಂಡ, ಗುಲ್‌ಬರ್ಗಾ ಸೊಸೈಟಿ ದೊಂಬಿ, ಬ್ರಿಟಿಷ್ ನಾಗರಿಕರ ಹತ್ಯೆ ಮುಂತಾದ ಹತ್ತಾರು ಪ್ರಕರಣಗಳ ತನಿಖೆ ನಡೆಸಿ ಆರೋಪ ಸಾಬೀತುಪಡಿಸುವಂತೆ ಸೂಚಿಸಿ, ೨೦೦೮, ಮಾರ್ಚ್ ೨೬ರಂದು ಸಿಬಿಐನ ಮಾಜಿ ನಿರ್ದೇಶಕ ಆರ್.ಕೆ. ರಾಘವನ್ ನೇತೃತ್ವದ ವಿಶೇಷ ತನಿಖಾ ತಂಡ(ಎಸ್‌ಐಟಿ)ವನ್ನೂ ರಚನೆ ಮಾಡಿತು.

ಆದರೆ ಸಿಕ್ಕಿಬಿದ್ದವರಾರು?!

ಪ್ರಕರಣಗಳ ತನಿಖೆ ನಡೆಸಿ ಸಾಕ್ಷ್ಯಗಳನ್ನು ಕಲೆಹಾಕಿ ಮೋದಿ ಸರಕಾರವನ್ನು ಹಣಿಯಲು ಹೊರಟ ಉತ್ತರ ಪ್ರದೇಶದ ಮಾಜಿ ಪೊಲೀಸ್ ಮಹಾನಿರ್ದೇಶಕ ಸಿ.ಡಿ. ಸತ್ಪತಿ ಹಾಗೂ ಗೀತಾ ಜೋಹ್ರಿ, ಶಿವಾನಂದ್ ಝಾ ಮತ್ತು ಆಶಿಷ್ ಭಾಟಿಯಾ ಎಂಬ ಮೂವರು ಐಪಿಎಸ್ ಅಧಿಕಾರಿಗಳನ್ನು ಹೊಂದಿದ್ದ ರಾಘವನ್ ಪಡೆ ಮುಂದೆ ಸತ್ಯ ನಿಧಾನವಾಗಿ ತೆರೆದುಕೊಳ್ಳುತ್ತಾ ಹೋಯಿತು. ಪ್ರತ್ಯಕ್ಷದರ್ಶಿಗಳ ವಿಚಾರಣೆ ನಡೆಸಿ, ಸಾಕ್ಷ್ಯಾಧಾರಗಳನ್ನು ಪ್ರಮಾಣೀಕರಿಸಿ ಕಳೆದ ಮಾರ್ಚ್ 2ರಂದು ನ್ಯಾಯಮೂರ್ತಿ ಅರಿಜಿತ್ ಪಸಾಯತ್, ಪಿ. ಸದಾಶಿವಂ ಮತ್ತು ಆಫ್ತಾಬ್ ಆಲಂ ಅವರನ್ನೊಳಗೊಂಡಿರುವ ಸುಪ್ರೀಂಕೋರ್ಟ್ ನ್ಯಾಯಪೀಠದ ಮುಂದೆ ವರದಿಯನ್ನಿಡಲಾಯಿತು. ಕೋರ್ಟ್ ಮುಂದಿನ ವಿಚಾ ರಣೆಯನ್ನು ಏಪ್ರಿಲ್ 13ರಕ್ಕೆ ಮುಂದೂಡಿತು.

ಕೊನೆಗೂ ಏಪ್ರಿಲ್ 14ರಂದು ಸತ್ಯ ಹೊರಗೆ ಬಿದ್ದಿದೆ.

ನಿಜವಾಗಿಯೂ ನಡೆದಿದ್ದೇನು ಎಂಬುದು ಏಳು ವರ್ಷಗಳ ನಂತರ ಬಹಿರಂಗಗೊಂಡಿದೆ. ಇಷ್ಟು ವರ್ಷ ತೀಸ್ತಾ ಹೇಳುತ್ತಾ ಬಂದಿದ್ದೆಲ್ಲಾ ಸತ್ಯವಲ್ಲ, ಕೌಸರ್ ಬಾನು ಘಟನೆಯೇ ನಡೆದಿಲ್ಲ, ಅದೊಂದು ಕಟ್ಟುಕಥೆ ಎಂದರೆ ನಂಬುತ್ತೀರಾ?! “ಹಲವಾರು ಘಟನೆಗಳು ಕಟ್ಟುಕಥೆಗಳಾಗಿವೆ, ಹುಸಿ ಸಾಕ್ಷ್ಯಗಳನ್ನು ನೀಡಲಾಗಿದೆ, ಸಾಕ್ಷಿಗಳನ್ನು ಸೃಷ್ಟಿಸಿ ಅವರಿಗೆ ತರಬೇತಿ ನೀಡಲಾಗಿದೆ. ಜತೆಗೆ ಹಲವಾರು ಘಟನೆಗಳು ತೀರಾ ಕಾಲ್ಪನಿಕವಾಗಿವೆ. ಅದರಲ್ಲೂ ತುಂಬು ಗರ್ಭಿಣಿ ಕೌಸರ್ ಬಾನುಳ ಹೊಟ್ಟೆಯನ್ನು ಸೀಳಿ ಮಗುವನ್ನೆಳೆದು ಬೆಂಕಿಗೆ ಹಾಕಿದ ಘಟನೆಯಾಗಲಿ, ನರೋಡಾ ಪಾಟಿಯಾದ ಬಾವಿಯೊಂದರಲ್ಲಿ ಹೆಣಗಳನ್ನು ತುಂಬಿರುವುದಾಗಲಿ, ಗುಜರಾತ್ ಪ್ರವಾಸಕ್ಕೆ ಬಂದಿದ್ದ ಬ್ರಿಟಿಷ್ ನಾಗರಿಕರನ್ನು ಹತ್ಯೆಗೈದಿರುವ ಘಟನೆಗಳಾಗಲಿ ಸಂಭವಿಸಿಯೇ ಇಲ್ಲ” ಎಂದು ರಾಘವನ್ ಸ್ಪಷ್ಟವಾಗಿ ತಿಳಿಸಿದ್ದಾರೆ!! ಅಲ್ಲದೆ ತೀಸ್ತಾ ಮುಂದಿಟ್ಟ ೨೨ ಪ್ರತ್ಯಕ್ಷದರ್ಶಿಗಳ ಪ್ರಮಾಣಪತ್ರಗಳು ಏಕರೂಪದಲ್ಲಿವೆ, ಒಂದೇ ಕಡೆ ಅಚ್ಚುಹಾಕಿಸಿ, ಮುದ್ರಿಸಲಾಗಿದೆ ಹಾಗೂ ಸಾಕ್ಷಿಗಳಿಗೆ ಹೀಗೇ ಹೇಳಬೇಕೆಂದು ತರಬೇತಿ ನೀಡಲಾಗಿದೆ. ಮಿಗಿಲಾಗಿ ಆ ಸಾಕ್ಷಿಗಳಾರೂ ಹಿಂಸಾಚಾರದ ಪ್ರತ್ಯಕ್ಷದರ್ಶಿಗಳೇ ಅಲ್ಲ ಎಂದೂ ವರದಿ ತಿಳಿಸಿದೆ. ‘ಗುಲ್‌ಬರ್ಗಾ ಸೊಸೈಟಿಯಲ್ಲಿ ದೊಂಬಿ ನಡೆ ಯುತ್ತಿದ್ದಾಗ ಐಜಿಪಿ ಪಿ.ಸಿ. ಪಾಂಡೆಯವರು ಹಿಂಸಾಚಾರ ದಲ್ಲಿ ತೊಡಗಿದ್ದವರಿಗೆ ಸಹಾಯ ಮಾಡುತ್ತಿದ್ದರು’ ಎಂಬ ತೀಸ್ತಾ ಆರೋಪ ಕೂಡ ಸುಳ್ಳು. ಆ ಸಂದರ್ಭದಲ್ಲಿ ಪಾಂಡೆಯವರು ಅಮಾಯಕರನ್ನು ಆಸ್ಪತ್ರೆಗೆ ಸೇರಿಸುವ ಹಾಗೂ ಪೊಲೀಸ್ ಬಂದೋಬಸ್ತ್ ಮಾಡುವ ಕಾರ್ಯದಲ್ಲಿ ತೊಡಗಿದ್ದರು ಎಂದು ತಿಳಿಸಿದೆ. ಸಾಕ್ಷ್ಯಗಳನ್ನು ಸೃಷ್ಟಿಸುವ ವ್ಯವಸ್ಥಿತ ಸಂಚು ನಡೆದಿದೆ ಎಂದು ವರದಿ ತಿಳಿಸಿದೆ.

ಈ ತೀಸ್ತಾ ಹೇಳುವುದೆಲ್ಲ ನಿಜವಲ್ಲ ಎಂಬುದು 2004ರಲ್ಲೇ ಬೆಳಕಿಗೆ ಬಂದಿತ್ತು. ಬೆಸ್ಟ್‌ಬೇಕರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಳ್ಳು ಸಾಕ್ಷ್ಯ ಹೇಳುವಂತೆ ಒತ್ತಡ ಹೇರಿದ ತೀಸ್ತಾ ವಿರುದ್ಧ ಝಹೀರಾ ಶೇಖ್ ಎಂಬಾಕೆ ಅಂದೇ ತಿರುಗಿ ಬಿದ್ದಿದ್ದರು. ಮುಂಬೈನ ತಮ್ಮ ಮನೆಯಲ್ಲಿ ತಮ್ಮನ್ನು ಗೃಹಬಂಧನದಲ್ಲಿಡಲಾಗಿತ್ತು ಎಂದು ಝಹೀರಾ ಸುಪ್ರೀಂಕೋರ್ಟ್ ಮುಂದೆ ಆರೋಪ ಮಾಡಿದ್ದರು. ಆದರೆ ಸೂಕ್ತ ಸಾಕ್ಷ್ಯಗಳ ಕೊರತೆಯಿಂದಾಗಿ ತೀಸ್ತಾ ತಪ್ಪಿಸಿಕೊಂಡರೂ ಆಕೆಯ ಬಗ್ಗೆ ಅಂದೇ ಅನುಮಾನಗಳೆದಿದ್ದವು. ಈಕೆ ಮೂಲತಃ ಗುಜರಾತಿ. ಮುಂಬೈನಲ್ಲಿ ನೆಲೆಗೊಂಡಿರುವ ವಕೀಲ ಅತುಲ್ ಸೆತಲ್ವಾಡ್ ಹಾಗೂ ಸೀತಾ ಸೆತಲ್ವಾಡ್ ಮಗಳಾದ ತೀಸ್ತಾ, ಪತ್ರಕರ್ತೆಯಾಗಿ ವೃತ್ತಿ ಆರಂಭಿಸಿದರಾದರೂ ಗುಜರಾತ್ ಕೋಮು ಹಿಂಸಾಚಾರದ ನಂತರ ಈಕೆ ಮತ್ತು ಈಕೆಯ ಗಂಡ ಜಾವೆದ್ ಆನಂದ್ ‘ಸಬ್ರಂಗ್ ಕಮ್ಯುನಿಕೇಶನ್ಸ್’ ಎಂಬ ಮಾಧ್ಯಮ ಸಂಸ್ಥೆ ಹಾಗೂ ‘ಸಿಟಿಜೆನ್ಸ್ ಫಾರ್ ಪೀಸ್ ಆಂಡ್ ಜಸ್ಟೀಸ್(ಸಿಪಿಜೆ) ಎಂಬ ಎನ್‌ಜಿಒ ಹುಟ್ಟುಹಾಕಿಕೊಂಡು ಕೌಸರ್ ಬಾನುಳಂತಹ ಕಥೆಗಳನ್ನು ಸೃಷ್ಟಿಸಲಾರಂಭಿಸಿದರು. ಜಾವೆದ್ ಅವರನ್ನು ವಿವಾಹವಾದ ನಂತರ ಇಸ್ಲಾಂಗೆ ಮತಾಂತರಗೊಂಡರೂ ಹಿಂದೂ ಹೆಸರು ಮತ್ತು ಅಗಲವಾದ ಬಿಂದಿಯನ್ನು ಮಾತ್ರ ಹಾಗೆಯೇ ಉಳಿಸಿಕೊಂಡು ಅಹಿಂದೂ ಕಾರ್ಯವನ್ನು ಆರಂಭಿಸಿದರು. ಒಂದು ವೇಳೆ, ಈಕೆಯಲ್ಲಿ ನಿಜವಾಗಿಯೂ ಮಾನವೀಯ ಮೌಲ್ಯಗಳಿದ್ದಿದ್ದರೆ ಯಾರೂ ಬೇಸರಿಸಿಕೊಳ್ಳುವ ಅಗತ್ಯವಿರಲಿಲ್ಲ. ಆದರೆ 2008, ಅಕ್ಟೋಬರ್‌ನಲ್ಲಿ ಮಹಾರಾಷ್ಟ್ರದಲ್ಲಿ ನಡೆದ ಧುಲೆ ಹಿಂಸಾಚಾರದ ವೇಳೆ ನಾಲ್ವರು ಹಿಂದೂ ಮಹಿಳೆಯರನ್ನು ಮುಸ್ಲಿಮರು ಸಾಮೂಹಿಕ ಅತ್ಯಾಚಾರಗೈದಾಗ ಈಕೆ ಹೇಳಿದ್ದೇನು ಗೊತ್ತೆ?-“ಮುಸ್ಲಿಮರೇ ಅತ್ಯಾಚಾರ ಮಾಡಿದ್ದಾರೆ ಎಂಬುದಕ್ಕೆ ಗ್ಯಾರಂಟಿಯೇನು?”.

ಹಾಗೆ ಪ್ರಶ್ನಿಸಿದ್ದ ತೀಸ್ತಾ ಅವರ ನಿಜಬಣ್ಣವನ್ನು ಸುಪ್ರೀಂಕೋರ್ಟ್ ನೇಮಕ ಮಾಡಿದ್ದ ವಿಶೇಷ ತನಿಖಾ ತಂಡವೇ ಬಯಲು ಮಾಡಿದೆ.

A lie, no matter how outrageous, if repeated often will eventually be accepted as truth. I mean, If you tell a lie big enough and keep repeating it, people will eventually come to believe it.. ಅಂದರೆ, ಒಂದು ಸುಳ್ಳನ್ನು ಪದೇ ಪದೆ ಹೇಳುತ್ತಾ ಹೋದರೆ ಅಂತಿಮವಾಗಿ ಅದೇ ಸತ್ಯವೆಂದು ಜನ ನಂಬಿ ಬಿಡುತ್ತಾರೆ ಎಂದು ಹಿಟ್ಲರ್‌ನ ಪ್ರಚಾ ರಾಂದೋಲನದ ಮುಖ್ಯಸ್ಥ ಜೋಸೆಫ್ ಗಾಬೆಲ್ ಹೇಳುತ್ತಿದ್ದ.

2005ರಲ್ಲಿ ಕೇಂದ್ರ ಗೃಹಖಾತೆ ರಾಜ್ಯ ಸಚಿವ ಶ್ರೀಪ್ರಕಾಶ್ ಜೈಸ್ವಾಲ್(ಕಾಂಗ್ರೆಸ್‌ನ) ಅವರು ರಾಜ್ಯಸಭೆಗೆ ನೀಡಿದ ಲಿಖಿತ ಹೇಳಿಕೆಯಲ್ಲಿ “ಗುಜರಾತ್ ಹಿಂಸಾಚಾರದಲ್ಲಿ ಒಟ್ಟು 254 ಹಿಂದೂಗಳು, 790 ಮುಸ್ಲಿಮರು ಹತ್ಯೆಯಾಗಿದ್ದಾರೆ” ಎಂದು ತಿಳಿಸಿದ್ದರು. ಇಂತಹ ಅಧಿಕೃತ ಹಾಗೂ ವಾಸ್ತವಿಕ ಸ್ಪಷ್ಟನೆಯ ಹೊರತಾಗಿಯೂ ಗುಜರಾತ್ ಹಿಂಸಾಚಾರದಲ್ಲಿ ‘ಸಾವಿರಾರು’, ‘ಎರಡು ಸಾವಿರಕ್ಕೂ ಹೆಚ್ಚು’ ಮುಸ್ಲಿಮರ ಮಾರಣಹೋಮ ಮಾಡಲಾಯಿತು ಎಂದು ಇಂದಿಗೂ ಹೇಳುವ ಮಾಧ್ಯಮಗಳು ಹಾಗೂ ‘ಕೌಸರ್ ಬಾನು’ ಪ್ರಕರಣ ಸೃಷ್ಟಿಸಿದ ತೀಸ್ತಾ ಸೆತಲ್ವಾಡ್ ಅನುಸರಿಸುತ್ತಿರುವುದು ಗಾಬೆಲ್ ನೀತಿಯನ್ನೇ ಅಲ್ಲವೆ? ಇವರ ಮಟ್ಟಿಗೆ ಗಾಬೆಲ್ ವ್ಯಾಖ್ಯಾನದಂತೆ truth is the mortal enemy of the lie!! ಅದಕ್ಕೇ ಇವರು ಸತ್ಯವನ್ನೂ ಹೇಳುವುದಿಲ್ಲ, ಸತ್ಯವನ್ನು ಸಹಿಸುವುದೂ ಇಲ್ಲ. ಉದಾಹರಣೆ ಬೇಕೆ? ಈ ತೀಸ್ತಾ ಹೇಳಿದ್ದು ಎಂತಹ ಮಹಾಸುಳ್ಳು ಎಂಬುದರ ಬಗ್ಗೆ ಏಪ್ರಿಲ್ 14ರಂದು ಟೈಮ್ಸ್ ಆಫ್ ಇಂಡಿಯಾದಲ್ಲಿ ಅದರ ವರದಿಗಾರ ಧನಂಜಯ ಮಹಾಪಾತ್ರ ವಿವರವಾದ ವರದಿ ಮಾಡಿದ್ದರು. ಆದರೆ ಮರುದಿನವೇ ಪತ್ರಿಕಾ ಹೇಳಿಕೆಯೊಂದನ್ನು ಹೊರಡಿಸಿದ ತೀಸ್ತಾ ಸೆತಲ್ವಾಡ್, ‘2009, ಮಾರ್ಚ್ 2ರಂದು ಎಸ್‌ಐಟಿ ಸಲ್ಲಿಸಿರುವ ವರದಿ ರಾಷ್ಟ್ರೀಯ ಮಾನವ ಹಕ್ಕು ಆಯೋಗಕ್ಕಾಗಲಿ, ಸುಪ್ರೀಂಕೋರ್ಟ್‌ನಲ್ಲಿ ದಾವೆ ಹೂಡಿರುವ ಸಿಜೆಪಿಗಾಗಲಿ, ಯಾವುದೇ ಮಾಧ್ಯಮಗಳಿಗಾಗಲಿ ಸಿಕ್ಕಿಲ್ಲ. ಹಾಗಿರುವಾಗ ನ್ಯಾಯಾಲಯ ಬಹಿರಂಗ ಮಾಡದ ವರದಿಯ ಬಗ್ಗೆ ಉಲ್ಲೇಖ ಮಾಡುವುದೂ ನ್ಯಾಯಾಂಗ ನಿಂದನೆಯಾಗುತ್ತದೆ. ಮಿಗಿಲಾಗಿ ಗುಜರಾತ್ ಪರ ವಕೀಲರು ಸಿದ್ಧಪಡಿಸಿರುವ ವರದಿಯನ್ನೇ ಎಸ್‌ಐಟಿ ವರದಿಯೆಂದು ಬರೆದಿರುವುದು ಬೇಜವಾಬ್ದಾರಿಯುತ ವರದಿಗಾರಿಕೆ. ಎಸ್‌ಐಟಿ ಅಂತಹ ವರದಿಯನ್ನೇ ನೀಡಿಲ್ಲ” ಎಂದು ಪತ್ರಿಕೋದ್ಯಮದ ಬಗ್ಗೆ ಪಾಠ ಹೇಳಿಕೊಟ್ಟಿದ್ದಾರೆ! ಇಂತಹ ವಾದವನ್ನು ಹೊಂದಿರುವ ಇ-ಮೇಲ್ ಅನ್ನು ಜಗತ್ತಿನಲ್ಲಿರುವವರಿಗೆಲ್ಲ ಕಳುಹಿಸಿಕೊಟ್ಟಿದ್ದಾರೆ! ಆದರೆ ಧನಂಜಯ್ ಮಹಾಪಾತ್ರ ಸುಮ್ಮನಾಗಿಲ್ಲ. ಎಸ್‌ಐಟಿ ಸಲ್ಲಿಸಿರುವ ವರದಿಯ ಪ್ರತಿಯೊಂದನ್ನು ಹೊಂದಿರುವ ಅವರು, ಒಂದೊಂದು ಪುಟದಲ್ಲೂ ಏನಿದೆ ಎಂಬುದನ್ನು ಉಲ್ಲೇಖಿಸಿ ಏಪ್ರಿಲ್ 17ರಂದು ಮತ್ತೆ ಕೂಲಂಕಷ ವರದಿ ಮಾಡಿದ್ದಾರೆ. ವರದಿಯ 10ನೇ ಪುಟವನ್ನು ಉಲ್ಲೇಖಿಸಿರುವ ಅವರು, ‘ಪ್ರತ್ಯಕ್ಷದರ್ಶಿಗಳು ಕಂಪ್ಯೂಟರ್‌ನಲ್ಲಿ ಸಿದ್ಧಪಡಿಸಿದ ಹೇಳಿಕೆಗಳೊಂದಿಗೆ ಆಗಮಿಸಿದ್ದರು. ಆದರೆ ವಿಚಾರಣೆಗೆ ಒಳಪಡಿಸಿದಾಗ ಆ ಸಿದ್ಧ ಹೇಳಿಕೆಗಳನ್ನು ತಮಗೆ ಕೊಟ್ಟಿದ್ದು ತೀಸ್ತಾ ಸೆತಲ್ವಾಡ್ ಹಾಗೂ ಸಿಪಿಜೆ ಪರ ವಕೀಲ ತಿರ್ಮಿಜಿ. ಆ ಸಿದ್ಧ ಹೇಳಿಕೆಗಳಿಗೆ ಸಹಿ ಹಾಕಿದ್ದಷ್ಟೇ ನಮ್ಮ ಕೆಲಸ’ ಎಂಬ ಸತ್ಯವನ್ನು ಹೊರಗೆಡವಿದ್ದಾರೆ!

ಇಡೀ ಜಗತ್ತನ್ನೇ ದಾರಿ ತಪ್ಪಿಸಿದ, ಹುಸಿ ಘಟನೆಗಳನ್ನು ಸೃಷ್ಟಿಸಿ ಗುಜರಾತ್ ಮುಖ್ಯಮಂತ್ರಿ ವಿರುದ್ಧ ಅಂತಾರಾಷ್ಟ್ರೀಯ ಮಟ್ಟದ ಪ್ರಚಾರಾಂದೋಲನಗೈದ ತೀಸ್ತಾ ಸೆತಲ್ವಾಡ್ ಅವರನ್ನು ಈಗ ಶಿಕ್ಷಿಸುವವರಾರು? ಮೋಸಗೈಯ್ಯುವುದೂ ಅಪರಾಧವಲ್ಲವೆ ಮೈ ಲಾರ್ಡ್? ಇಷ್ಟಾಗಿಯೂ ಮಾಧ್ಯಮಗಳು ಬಾಯಿ ಮುಚ್ಚಿಕೊಂಡು ಕುಳಿತಿರುವುದೇಕೆ? ಟಿವಿ ಚಾನೆಲ್‌ಗಳೇಕೆ ಚರ್ಚೆ ನಡೆಸುತ್ತಿಲ್ಲ? ಸತ್ಯಾಸತ್ಯತೆಯನ್ನು ಪರಾಮರ್ಶೆ ಮಾಡದೇ ಆಕೆಯ ಕಟ್ಟುಕಥೆಗಳನ್ನು ಮನೆಮನೆಗೂ ಕೊಂಡೊಯ್ದು ಜನರಿಗೆ ಮೋಸ ಮಾಡಿದ ಮಾಧ್ಯಮಗಳೂ ‘Partners in crime’ ಅಲ್ಲವೆ?! ಇನ್ನು ಮುಂದೆ ನೈತಿಕತೆ, ಸಮಗ್ರತೆಯ ಬಗ್ಗೆ ಮಾತನಾಡಲು ಮಾಧ್ಯಮಗಳಿಗೆ ಯಾವ ಹಕ್ಕಿದೆ? ಅದಿರಲಿ, ರಾಷ್ಟ್ರ, ಸಮಾಜಕ್ಕೆ ಕೊಡುಗೆ ನೀಡುತ್ತಿರುವವರಿಗೆ ನೀಡಲಾಗುವ ಪದ್ಮಶ್ರೀ ಪುರಸ್ಕಾರವನ್ನು ಸಮಾಜವನ್ನೇ ದಾರಿ ತಪ್ಪಿಸಿದ ತೀಸ್ತಾ ಅವರಿಂದ ವಾಪಸ್ ಪಡೆದುಕೊಳ್ಳುವವರಾರು? ಗುಜರಾತ್ ಬಗ್ಗೆ ರಂಗುರಂಗಿನ ಕಥೆ ಹೇಳುತ್ತಿದ್ದ ತೆಹಲ್ಕಾ ಪತ್ರಿಕೆಯ ತರುಣ್ ತೇಜ್‌ಪಾಲ್ ಈಗೇಕೆ ಮೌನ ವಹಿಸಿದ್ದಾರೆ? ಗುಜರಾತ್‌ನಲ್ಲಿ ಮುಸ್ಲಿಮರ ಮೇಲೆ ನಡೆದ ದೌರ್ಜನ್ಯದ ಬಗ್ಗೆ ‘ಪರ್ಝಾನಿಯಾ’ ‘ಫಿರಾಕ್’ ಮುಂತಾದ ಚಲನಚಿತ್ರಗಳು, ‘ದಿ ಫೈನಲ್ ಸಲೂಷನ್’ ನಂತಹ ಹಲವಾರು ಸಾಕ್ಷ್ಯಚಿತ್ರಗಳನ್ನು ನಿರ್ಮಾಣ ಮಾಡಿದ, “The Gujarat Carnage”, “The Black Book of Gujarat” ಮತ್ತು “Gujarat, the Making of a Tragedy” ಪುಸ್ತಕ ಬರೆದವರು ಈಗೇಕೆ ಬಾಯಿ ಬಿಡುತ್ತಿಲ್ಲ? ಗುಜರಾತ್ ಹಿಂಸಾಚಾರವನ್ನು ‘State Orchestrated” ಬರೆಯುತ್ತಿದ್ದ ಮಾಧ್ಯಮಗಳ ಧ್ವನಿಯೇಕೆ ಬಿದ್ದುಹೋಗಿದೆ?

ಏಕೆ ಇದನ್ನೆಲ್ಲಾ ಹೇಳಬೇಕಾಗಿದೆಯೆಂದರೆ, ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿಯವರನ್ನು ‘ಸಾವಿನ ವ್ಯಾಪಾರಿ’ ಎಂದು ಎಲ್ಲರೂ ಇದುವರೆಗೂ ದೂಷಿಸುತ್ತಾ ಬಂದಿದ್ದಾರೆ. ಆದರೆ ವಾಸ್ತವದಲ್ಲಿ ಕಾಲ್ಪನಿಕ ಮುಸ್ಲಿಮರ ಹೆಣಗಳನ್ನಿಟ್ಟುಕೊಂಡು ಸಾವನ್ನು ವ್ಯಾಪಾರ ಮಾಡುತ್ತಿರುವುದು ತೀಸ್ತಾ ಸೆತಲ್ವಾಡ್. ನಮ್ಮ ನಡುವೆ ಹಾಗೂ ಮಾಧ್ಯಮಗಳಲ್ಲಿ ಅದೆಷ್ಟು ತೀಸ್ತಾ ಸೆತಲ್ವಾಡ್‌ಗಳಿರಬಹುದು ಯೋಚಿಸಿ? ಇಂತಹವರ ಬಗ್ಗೆ ನಾವು ಮೊದಲು ಎಚ್ಚರ ವಹಿಸಬೇಕು. ಅಷ್ಟಕ್ಕೂ ಈ ರೀತಿಯ ಸುಳ್ಳುಗಳನ್ನು ಹರಡಿ, ಸಮಾಜ ಮತ್ತು ಸುಪ್ರೀಂಕೋರ್ಟ್ ಅನ್ನೇ ದಾರಿತಪ್ಪಿಸಿದರೆ ನಮ್ಮ ದೇಶ ಎತ್ತ ಸಾಗೀತು?

ಕೃಪೆ : ಪ್ರತಾಪ್ ಸಿಂಹ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ