ನನ್ನ ಬ್ಲಾಗ್ ಪಟ್ಟಿ

ಶನಿವಾರ, ಜುಲೈ 31, 2010

ಶಿಕ್ಷಣದ ಕೇಸರೀಕರಣ,ಇದೆಂಥಾ ಅಪಪ್ರಚಾರದ ಪಣ?

ಆ ಕಾಲದಲ್ಲಿ ಬ್ರಿಟಿಷರ ಬಗ್ಗೆ ದೇವತಾಭಾವನೆ ಹೊಂದಿದ್ದ ಭಾರತೀಯರೂ ಇದ್ದರು!

ಡಾಕ್ಟರ್ ಸಾಹಿಬ್ ದಿಟ್ಟಾ ಅಂಥವರಲ್ಲಿ ಒಬ್ಬ ರಾಗಿದ್ದರು. ಅವರು ಪಂಜಾಬ್‌ನ ಅಮೃತಸರದ ಪ್ರಸಿದ್ಧ ವೈದ್ಯರು. ವೈದ್ಯರ ತೀವ್ರ ಕೊರತೆ ಎದುರಿಸುತ್ತಿದ್ದ ಕಾಲವದು. ಸಹಜವಾಗಿಯೇ ಸಾಹಿಬ್ ದಿಟ್ಟಾ ಕೈತುಂಬಾ ಸಂಪಾದನೆ ಮಾಡುತ್ತಿದ್ದರು. ಅವರಿಗೆ ಬ್ರಿಟಿಷರ ಬಗ್ಗೆ ಎಲ್ಲಿಲ್ಲದ ಗೌರವ. ಬಹುಶಃ ದೇವರಷ್ಟೇ ಬ್ರಿಟಿಷರ ಬಗ್ಗೆಯೂ ಭಯ-ಭಕ್ತಿ ಇಟ್ಟುಕೊಂಡಿದ್ದರು. ಅಂತಹ ವ್ಯಕ್ತಿಯ ಮಗನೇ ಮದನ್‌ಲಾಲ್ ಧಿಂಗ್ರಾ. ಆತ ಹುಟ್ಟಿದ್ದು 1883ರಲ್ಲಿ. ಧಿಂಗ್ರಾಗೊಬ್ಬ ಅಣ್ಣನಿದ್ದ. ಅಪ್ಪನ ಹಾಗೇ ಆತನಿಗೂ ಬ್ರಿಟಿಷರ ಬಗ್ಗೆ ಅಪಾರ ಗೌರವ. ವೈದ್ಯಕೀಯ ವಿeನ ಓದಲು ಇಂಗ್ಲೆಂಡ್‌ಗೆ ಹೋಗಿ ಅಲ್ಲಿಯೇ ನೆಲೆಸಿದ್ದ. ಧಿಂಗ್ರಾ ಮಾತ್ರ ಅಪ್ಪ-ಅಣ್ಣನಿಗೆ ತದ್ವಿರುದ್ಧ ಎಂಬಂತಿದ್ದ. ಲಾಹೋರ್‌ನಲ್ಲಿ ಶಾಲಾಭ್ಯಾಸ ಮಾಡಿದ ಆತ, ಅಮೃತಸರದಲ್ಲಿ ಕಾಲೇಜು ವ್ಯಾಸಂಗ ಆರಂಭಿಸಿದ. ಸ್ವಾತಂತ್ರ್ಯದ ಜ್ವರ ಆತನನ್ನೂ ತಟ್ಟಿತು. ಬ್ರಿಟಿಷರ ವಿರುದ್ಧ ರಾಜಕೀಯ ಚಟುವಟಿಕೆಯಲ್ಲಿ ಪಾಲ್ಗೊಂಡಿದ್ದಾನೆ ಎಂಬ ಕಾರಣಕ್ಕೆ ಧಿಂಗ್ರಾನನ್ನು ಕಾಲೇಜಿನಿಂದ ಕಿತ್ತೊಗೆದರು. ಮೊದಲೇ ಬ್ರಿಟಿಷರ ಭಕ್ತನಾಗಿದ್ದ ಅಪ್ಪನೂ ಮಗನನ್ನು ಮನೆಯಿಂದ ಹೊರ ಹಾಕಿದರು. ಧಿಂಗ್ರಾ ಅಧೀರನಾಗಲಿಲ್ಲ. ಅಪ್ಪನ ಹಂಗು ಆತನಿಗೂ ಬೇಡವಾಯಿತು. ಗುಮಾಸ್ತನಾಗಿ ಕೆಲಸಕ್ಕೆ ಸೇರಿದ, ರಿಕ್ಷಾ ಎಳೆಯುವವನ ಕೆಲಸವನ್ನೂ ಮಾಡಿದ. ಕೊನೆಗೆ ಕಾರ್ಖಾನೆಯೊಂದನ್ನು ಸೇರಿದ. ಕ್ರಾಂತಿಕಾರಿ ಗುಣ ಸುಮ್ಮನಾಗಲಿಲ್ಲ. ಕಾರ್ಮಿಕರನ್ನೆಲ್ಲ ಸಂಘಟಿಸಲು ಹೋಗಿ ಕೆಲಸವನ್ನೇ ಕಳೆದುಕೊಂಡ. ತದನಂತರ ಬಾಂಬೆಯಲ್ಲಿ ಒಂದಿಷ್ಟು ಸಮಯ ಅದೂ-ಇದೂ ಕೆಲಸ ಮಾಡಿ ಹೊಟ್ಟೆಹೊರೆಯಲಾರಂಭಿಸಿದ. ಅಷ್ಟರಲ್ಲಿ ಇಂಗ್ಲೆಂಡ್‌ನಲ್ಲಿದ್ದ ಅಣ್ಣನಿಂದ ಆಪ್ತ ಸಲಹೆಯೊಂದು ಬಂತು. ಉನ್ನತ ಶಿಕ್ಷಣ ಮಾಡಲು ಇಂಗ್ಲೆಂಡ್‌ಗೆ ಬಾ ಎಂಬ ಕರೆ ಅದಾಗಿತ್ತು.

1906ರಲ್ಲಿ ಮದನ್ ಲಾಲ್ ಧಿಂಗ್ರಾ ಇಂಗ್ಲೆಂಡ್‌ನತ್ತ ಹೊರಟ.

ಲಂಡನ್ ವಿಶ್ವವಿದ್ಯಾಲಯದ ಇಂಜಿನಿಯರಿಂಗ್ ಕಾಲೇಜಿನಲ್ಲಿ ಪ್ರವೇಶ ಪಡೆದು ಮೆಕ್ಯಾನಿಕಲ್ ಇಂಜಿನಿಯರಿಂಗ್‌ಗೆ ಸೇರಿದ. ಇಂಗ್ಲೆಂಡ್ ಜೀವನದ ಬಗ್ಗೆ ಬಹುವಾಗಿಯೇ ಮೋಹಿತನಾದ. ಆತನಿಗೆ ಬಂಧನದಿಂದ ಬಿಡುಗಡೆ ಸಿಕ್ಕಿದಂತಾಗಿತ್ತು. ಒಳ್ಳೆಯ ಉಡುಪು, ಮೋಜು-ಮಸ್ತಿಯಲ್ಲಿ ದಿನ ಕಳೆಯತೊಡಗಿದ. ಇತ್ತ ಮಹಾರಾಷ್ಟ್ರದಿಂದ ಬಂದಿದ್ದ ವಿನಾಯಕ ದಾಮೋದರ ಸಾವರ್ಕರ್ ಆಗ ಇಂಗ್ಲೆಂಡ್‌ನಲ್ಲೇ ಇದ್ದರು. ಬಂದಿದ್ದು ಕಾನೂನು ಪದವಿ ಪಡೆಯುವುದಕ್ಕಾದರೂ ತೆರೆಮರೆಯಲ್ಲಿ ಅವರ ಚಟುವಟಿಕೆ ಬೇರೆಯೇ ಆಗಿತ್ತು! ಅದಕ್ಕೆಂದೇ ‘ಇಂಡಿಯಾ ಹೌಸ್’ ಸ್ಥಾಪಿಸಿದ್ದರು. ಉನ್ನತ ವ್ಯಾಸಂಗಕ್ಕೆಂದು ಇಂಗ್ಲೆಂಡ್‌ಗೆ ಆಗಮಿಸುತ್ತಿದ್ದ ವಿದ್ಯಾರ್ಥಿಗಳನ್ನು ಇಂಡಿಯಾ ಹೌಸ್‌ಗೆ ಆಹ್ವಾನಿಸಿ, ಭಾರತದ ದಾಸ್ಯದ ಸಂಕೋಲೆಯ ಬಗ್ಗೆ ಅದ್ಭುತ ಭಾಷಣ ಮಾಡಿ ಎದೆಯಲ್ಲಿ ದೇಶಪ್ರೇಮವನ್ನು ತುಂಬುತ್ತಿದ್ದರು. ನಾವೆಲ್ಲ ಒಂದಾದರೆ, ಒಂದುಗೂಡಿ ಪ್ರಯತ್ನಿಸಿದರೆ ಭಾರತವನ್ನು ಬ್ರಿಟಿಷರ ಕಪಿಮುಷ್ಟಿಯಿಂದ ಬಿಡಿಸಿಕೊಳ್ಳಬಹುದು ಎಂಬ ಅವರ ಮಾತುಗಳಿಗೆ ಎಂಥವರೂ ಮಾರುಹೋಗುತ್ತಿದ್ದರು. ಒಂದು ದಿನ ಅಕಸ್ಮಿಕವಾಗಿ ಇಂಡಿಯಾ ಹೌಸ್‌ಗೆ ಹೋಗಿದ್ದ ಮದನ್‌ಲಾಲ್ ಧಿಂಗ್ರಾ ಕೂಡ ಹಾಗೆ ಮಾರುಹೋದವನೇ. ಸಾವರ್ಕರ್ ಮಾತುಗಳು ಅವನಲ್ಲಿದ್ದ ದೇಶಪ್ರೇಮವನ್ನು ಜಾಗೃತಗೊಳಿಸಿದವು. ಧಿಂಗ್ರಾನ ದೇಶಪ್ರೇಮದ ತೀವ್ರತೆ ಸಾವರ್ಕರ್ ಮತ್ತು ಶ್ಯಾಮ್‌ಜಿ ಕೃಷ್ಣವರ್ಮ ಅವರಿಗೂ ಮೆಚ್ಚುಗೆಯಾಯಿತು. ಆತನ ಗಮನವನ್ನು ಸ್ವಾತಂತ್ರ್ಯ ಹೋರಾಟದತ್ತ ತಿರುಗಿಸಿದರು. ಅದರಲ್ಲೂ ಸಾವರ್ಕರ್ ಅವರಂತೂ ಕ್ರಾಂತಿಯಿಂದ ಮಾತ್ರ ಸ್ವಾತಂತ್ರ್ಯ ಗಳಿಸಲು ಸಾಧ್ಯ ಎಂದು ನಂಬಿದ್ದ ವ್ಯಕ್ತಿ. ಧಿಂಗ್ರಾನಿಗೆ ಗೌಪ್ಯವಾಗಿ ಶಸ್ತ್ರಾಸ್ತ್ರ ತರಬೇತಿ ನೀಡಿದರು. ಗುಪ್ತವಾಗಿ ಕ್ರಿಯಾಶೀಲವಾಗಿದ್ದ ‘ಅಭಿನವ ಭಾರತ’ದ ಸದಸ್ಯತ್ವ ನೀಡಿದರು. ಇಂಡಿಯಾ ಹೌಸ್‌ಗೂ ಸದಸ್ಯನನ್ನಾಗಿ ಮಾಡಿದರು. ಇತ್ತ ಭಾರತದಲ್ಲಿ ಖುದಿರಾಮ್ ಬೋಸ್, ಕನಾಯ್ ದತ್, ಸತೀಂದರ್ ಪಾಲ್ ಮತ್ತು ಕಾನ್ಷಿರಾಮ್ ಎಂಬ ಕ್ರಾಂತಿಕಾರಿಗಳನ್ನು ಬ್ರಿಟಿಷರು ಗಲ್ಲಿಗೇರಿಸಿದರು. ಇದು ಇಂಗ್ಲೆಂಡ್‌ನಲ್ಲಿದ್ದ ಸಾವರ್ಕರ್, ಧಿಂಗ್ರಾ ಹಾಗೂ ಇತರ ವಿದ್ಯಾರ್ಥಿಗಳನ್ನು ಕುಪಿತಗೊಳಿಸಿತು. ಮುಯ್ಯಿಗೆ ಮುಯ್ಯಿ ತೀರಿಸಿಕೊಳ್ಳಲು ನಿರ್ಧರಿಸಿದರು.

1909, ಜುಲೈ 1.

ಅಂದು ಭಾರತ ರಾಷ್ಟ್ರೀಯ ಸಂಘದ ವಾರ್ಷಿಕ ಸಮಾರಂಭ ಆಯೋಜನೆಯಾಗಿತ್ತು. ಭಾರತೀಯರು, ಬ್ರಿಟಿಷರು ಆಗಮಿಸಿ ದ್ದರು. ಬ್ರಿಟಿಷ್ ಆಡಳಿತ ನಿಯುಕ್ತಿ ಮಾಡಿದ್ದ ಭಾರತದ ವಿದೇಶಾಂಗ ಸಚಿವರ ಕಾರ್ಯದರ್ಶಿ ಹಾಗೂ ಸಂಸದ ಸರ್ ಕರ್ಝನ್ ವೆಯ್ಲಿ ಕೂಡ ಆಗಮಿಸುವವರಿದ್ದರು. ಪತ್ನಿಯೊಂದಿಗೆ ಬಂದ ವೆಯ್ಲಿಯನ್ನು ಕಂಡ ಕೂಡಲೇ ಪಿಸ್ತೂಲನ್ನು ಹೊರತೆಗೆದ ಮದನ್‌ಲಾಲ್ ಧಿಂಗ್ರಾ 5 ಗುಂಡುಗಳನ್ನು ಹಾರಿಸಿದ. ಅವು ವೆಯ್ಲಿಯ ಮುಖ ಮತ್ತು ತಲೆಯನ್ನು ಹೊಕ್ಕವು. ತಡೆಯಲು ಬಂದ ಪಾರ್ಸಿ ವೈದ್ಯ ಕೌಸ್‌ಜಿ ಲಾಲ್‌ಕಾಕಾ ಅವರಿಗೂ ಒಂದು ಗುಂಡು ಹೊಡೆದ. ಇಬ್ಬರೂ ನೆಲಕ್ಕುರುಳಿದರು. ಲಾಲ್‌ಕಾಕಾ ಆಕಸ್ಮಿಕವಾಗಿ ಜೀವ ಕಳೆದುಕೊಂಡರೆ ವೆಯ್ಲಿಯನ್ನು ಕೊಂದ ಧಿಂಗ್ರಾ ಕ್ರಾಂತಿಕಾರಿಗಳನ್ನು ಗಲ್ಲಿಗೇರಿಸಿದ್ದಕ್ಕೆ ಸೇಡುತೀರಿಸಿ ಕೊಂಡಿದ್ದ. ಉದ್ದೇಶ ಈಡೇರಿದ ಮೇಲೆ ಧಿಂಗ್ರಾ ಪಲಾಯನ ಮಾಡಲಿಲ್ಲ. ಕದಲದೇ ನಿಂತು ಬಂಧಿತನಾದ. ಓಲ್ಡ್ ಬೆಯ್ಲಿ ನ್ಯಾಯಾಲಯದಲ್ಲಿ ಪ್ರಕರಣ ವಿಚಾರಣೆಗೆ ಬಂತು. ಧಿಂಗ್ರಾ ತನ್ನ ಪರ ವಕೀಲರನ್ನು ನೇಮಿಸಿಕೊಳ್ಳಲು ನಕಾರ ವ್ಯಕ್ತಪಡಿಸಿದ. 1909, ಜುಲೈ 23ರಂದು ನಡೆದ ನ್ಯಾಯಾಂಗ ವಿಚಾರಣೆಯ ನಂತರ ನ್ಯಾಯಾಧೀಶರು ಧಿಂಗ್ರಾಗೆ ಗಲ್ಲುಶಿಕ್ಷೆ ವಿಧಿಸಿದರು. ಬಹುಶಃ ಒಂದೇ ದಿನದ ವಿಚಾರಣೆಯಲ್ಲಿ ಗಲ್ಲುಶಿಕ್ಷೆ ವಿಧಿಸಿದ ಏಕೈಕ ಪ್ರಕರಣ ಅದಾಗಿತ್ತು. ಆದರೆ ಪ್ರಾಣವೇ ಹೋಗುವ ಸಂದರ್ಭ ಬಂದಾಗಲೂ ಧಿಂಗ್ರಾನ ಮುಖದಲ್ಲಿ ಅಳುಕು ಇರಲಿಲ್ಲ. 1909, ಆಗಸ್ಟ್ 17ರಂದು ಲಂಡನ್‌ನಲ್ಲೇ ಮದನ್‌ಲಾಲ್ ಧಿಂಗ್ರಾನನ್ನು ಗಲ್ಲಿಗೇರಿಸಿದರು.

ಅವತ್ತು ಹಗ್ಗಕ್ಕೆ ಕುತ್ತಿಗೆ ಕೊಡುವ ಮೊದಲು ಧಿಂಗ್ರಾ ಹೇಳಿದ್ದೇನು ಗೊತ್ತೆ?

“ಸಮರವೆನ್ನಬಹುದಾದ ಸ್ಥಿತಿಯಲ್ಲಿ ವಿದೇಶಿ ಬಂದೂಕುಗಳು ಭಾರತವನ್ನು ಬಂಧನದಲ್ಲಿಟ್ಟಿವೆ. ಮುಕ್ತ ಯುದ್ಧ ಅಸಾಧ್ಯವಾಗಿ ರುವ ಕಾರಣ ನಾವು ಆಶ್ಚರ್ಯಚಕಿತರಾಗಿದ್ದೇವೆ. ನಮಗೆ ಬಂದೂಕು ಕೈಗೆತ್ತಿಕೊಳ್ಳುವ ಅವಕಾಶವಿಲ್ಲದ ಕಾರಣ ಪಿಸ್ತೂಲು ತೆಗೆದು ಗುಂಡು ಹಾರಿಸಿದೆ. ಅಷ್ಟೇನು ಸದೃಢನಲ್ಲದ, ಬುದ್ಧಿವಂತ ನಲ್ಲದ ನನ್ನಂಥ ಮಗನೊಬ್ಬ ತಾಯಿಗೆ ರಕ್ತವನ್ನಲ್ಲದೆ ಬೇರೇನನ್ನು ಅರ್ಪಿಸಬಲ್ಲ?! ನಾನು ಅರ್ಪಿಸಿರುವುದೂ ಅದನ್ನೇ. ಪ್ರಸ್ತುತ ಭಾರತೀಯರು ಕಲಿಯಬೇಕಾದ ಏಕೈಕ ಪಾಠವೆಂದರೆ ಹೇಗೆ ಪ್ರಾಣಾರ್ಪಣೆ ಮಾಡಬೇಕೆಂಬುದನ್ನು ಹಾಗೂ ಸ್ವಪ್ರಾಣಾರ್ಪಣೆ ಮೂಲಕವೇ ಆ ಪಾಠವನ್ನು ಕಲಿಸಬೇಕು. ದೇವರಲ್ಲಿ ನಾನು ಬೇಡಿಕೊಳ್ಳುವುದಿಷ್ಟೇ- ನಾನು ಮತ್ತೆ ಅದೇ ತಾಯಿಯ (ಭಾರತ) ಹೊಟ್ಟೆಯಲ್ಲಿ ಹುಟ್ಟುವಂತೆ ಮಾಡು ಹಾಗೂ ಆ ತಾಯಿಯ ದಾಸ್ಯವಿಮೋಚನೆಗಾಗಿ ಮತ್ತೊಮ್ಮೆ ಪ್ರಾಣಾರ್ಪಣೆ ಮಾಡುವೆ. ವಂದೇ ಮಾತರಂ”.

ಒಂದು ಗುರಿ ಸಾಧನೆಗಾಗಿ, ಮಾತೃಭೂಮಿಯ ದಾಸ್ಯವಿಮೋ ಚನೆಗಾಗಿ ಒಬ್ಬ ವ್ಯಕ್ತಿ ಪ್ರಾಣ ಕೊಡುವುದಕ್ಕಿಂತ ದೊಡ್ಡ ತ್ಯಾಗ ಯಾವುದಿದೆ ಹೇಳಿ? ಇವತ್ತು ಭಾರತದ ಮೇಲೆ ಯಾವ ದೇಶವಾದರೂ ಯುದ್ಧಸಾರಿದರೆ ರಣರಂಗದಲ್ಲಿ ನಿಂತು ಹೋರಾಡಲು, ಪ್ರಾಣವನ್ನೂ ಅರ್ಪಿಸಲು ನಮ್ಮಲ್ಲಿ ಎಷ್ಟು ಜನ ಸಿದ್ಧರಿದ್ದಾರೆ? ಇಂದು ನಾವು ಅನುಭವಿಸುತ್ತಿರುವ ಸ್ವಾತಂತ್ರ್ಯದ ಹಿಂದೆ ಸಾವಿರಾರು ಕ್ರಾಂತಿಕಾರಿಗಳ ರಕ್ತತರ್ಪಣವಿದೆ, ಶಿವಾಜಿ ಮಹಾರಾಜ, ರಾಣಾಪ್ರತಾಪ್, ಕಿತ್ತೂರು ಚೆನ್ನಮ್ಮ, ಝಾನ್ಸಿರಾಣಿ ಲಕ್ಷ್ಮೀಬಾಯಿಯವರ ಸತತ ಹೋರಾಟವಿದೆ. ಮಕ್ಕಳಿಗೆ ಇಂಥ ವೀರರ ಕಥೆಗಳನ್ನು ಹೇಳಬೇಕು ದಿಟ. ಹಾಗೆ ಹೇಳಲು ಎಷ್ಟು ಅಪ್ಪ-ಅಮ್ಮಂದಿರಿಗೆ ಸಮಯವಿದೆ? ಇಬ್ಬರೂ ದುಡಿಯುವವರೇ ಹೆಚ್ಚಿದ್ದಾರೆ. ಒಂದು ವೇಳೆ ಇಂತಹ ಕದನ ಕಲಿಗಳ, ಮಹಾಪುರುಷರ, ಮಾತೆಯರ ಕಥೆಗಳನ್ನೇ ಹೇಳದೇ ಹೋದರೆ ನಮ್ಮ ಮಕ್ಕಳಲ್ಲಿ ಈ ದೇಶ, ನೆಲ, ಜಲ, ಸಂಸ್ಕೃತಿ, ಸಂಸ್ಕಾರದ ಬಗ್ಗೆ ಗೌರವ, ಅಭಿಮಾನ, ಪ್ರೀತಿ, ಆಪ್ತತೆ, ತನ್ನದೆಂಬ ಭಾವನೆ, ದೇಶಪ್ರೇಮ ಮೂಡುವುದಾದರೂ ಎಂತು? ನಮ್ಮ ಸರಕಾರ ಕೊಡುವ ಶಿಕ್ಷಣ ಬರೀ ಉದ್ಯೋಗ ಪಡೆಯುವುದಕ್ಕೆ, ಒಳ್ಳೆಯ ಸಂಬಳ ಗಿಟ್ಟಿಸುವುದಕ್ಕೆ ಸೀಮಿತವಾದರೆ ದೇಶದ ಪರಿಸ್ಥಿತಿ ಏನಾದೀತು? ಹೊಸ ತಲೆಮಾರಿನವರಲ್ಲಿ ನಿಸ್ವಾರ್ಥ ಸೇವಾಮನೋಭಾವನೆ ಹೇಗೆ ಮೂಡೀತು? ಭಾರತೀಯ ಪರಂಪರೆ ಎಷ್ಟು ಶ್ರೀಮಂತ ಹಾಗೂ ಆದರ್ಶಪ್ರಾಯ ಎಂದು ಯಾವ ಉದಾಹರಣೆ ಕೊಟ್ಟು ನಮ್ಮ ಮಕ್ಕಳಿಗೆ ಹೇಳಬೇಕು, ಮನವರಿಕೆ ಮಾಡಿಕೊಡಬೇಕು?

ಈ ಹಿನ್ನೆಲೆಯಲ್ಲಿ ವಾಲ್ಮೀಕಿ, ಶ್ರೀನಿವಾಸ ರಾಮಾನುಜನ್, ಸರ್ ಎಂ. ವಿಶ್ವೇಶ್ವರಯ್ಯ, ಶಿವಾಜಿ, ಅರವಿಂದರು, ವಿವೇಕಾನಂದ, ಜಗದೀಶ್‌ಚಂದ್ರ ಬೋಸ್, ಸುಭಾಷ್‌ಚಂದ್ರ ಬೋಸ್, ಯುಧಿಷ್ಠಿರ, ತಾಂತ್ಯಾಟೋಪಿ, ತ್ಯಾಗರಾಜ, ಮದನ್‌ಲಾನ್ ಧಿಂಗ್ರಾ, ಮದನಮೋಹನ ಮಾಳವೀಯ, ಲಾಲ್ ಬಹಾದ್ದೂರ್ ಶಾಸ್ತ್ರಿ, ಓಬವ್ವ, ಅಭಿಮನ್ಯು, ಲಕ್ಷ್ಮಣ, ಶ್ರೀ ನಾರಾಯಣ ಗುರು, ಪಂಪ, ಹಕ್ಕ-ಬುಕ್ಕ, ಗುರುನಾನಕ್, ಅಲ್ಲಮಪ್ರಭು, ಬಸವಣ್ಣ, ಕೆಂಪೇಗೌಡ, ಶಂಕರಾಚಾರ್ಯ, ರಾಮಾನುಜಾಚಾರ್ಯ, ದಯಾನಂದ ಸರಸ್ವತಿ, ಕಿತ್ತೂರು ಚೆನ್ನಮ್ಮ, ಡಾ. ಬಿ.ಆರ್. ಅಂಬೇಡ್ಕರ್, ಕನಕದಾಸ, ಪುರಂದರದಾಸ, ಬಾಲಗಂಗಾಧರ ತಿಲಕ್, ಸರ್ವಜ್ಞ, ಚಾಣಕ್ಯ, ಹೋಮಿ ಭಾಭಾ, ಆರ್ಯಭಟ, ಜಯಪ್ರಕಾಶ್ ನಾರಾಯಣ್, ತಿರುವಳ್ಳುವರ್, ಕಾಳಿದಾಸ, ವಿಕ್ರಮ್ ಸಾರಾಭಾಯಿ ಮುಂತಾದ 510 ಮಹನೀಯರ ಬದುಕು, ಸಾಧನೆಯನ್ನು ಪುಟ್ಟ ಪುಟ್ಟ ಪುಸ್ತಕಗಳಲ್ಲಿ ಹೊರತರುವ ಪ್ರಯತ್ನ 1972ರಲ್ಲಿ ನಡೆಯಿತು. “ರಾಷ್ಟ್ರೋತ್ಥಾನ ಸಾಹಿತ್ಯ” ಆ ಕೆಲಸಕ್ಕೆ ಮುಂದಾಯಿತು. “ಭಾರತ-ಭಾರತಿ ಪುಸ್ತಕ ಸಂಪದ” ಎಂಬ ಹೆಸರಿನಲ್ಲಿ ಹೊರತರಲಾಗಿರುವ ಆ ಪುಸ್ತಕಗಳನ್ನು ಓದಿದರೆ ಮಕ್ಕಳೇಕೆ ದೊಡ್ಡವರೂ ಪ್ರೇರೇಪಿತರಾಗಿ ಬಿಡುತ್ತಾರೆ. ಅಷ್ಟು ಸೊಗಸಾಗಿ ಹಾಗೂ ಸಂಕ್ಷಿಪ್ತವಾಗಿ ಹೊರಬಂದಿವೆ. ಇಂತಹ ಪ್ರಯತ್ನಕ್ಕೆ ಕೈಹಾಕಲು ‘ರಾಷ್ಟ್ರೋತ್ಥಾನ” ಮುಂದಾದಾಗ ಆಗಿನ ಮುಖ್ಯಮಂತ್ರಿ ಡಿ. ದೇವರಾಜ್ ಅರಸು ಅವರೇ ಮೆಚ್ಚಿಕೊಂಡಿದ್ದರು.

ಅಷ್ಟೇ ಅಲ್ಲ…

“1965ರಲ್ಲಿ ನೋಂದಣಿಯಾಗಿರುವ ಬೆಂಗಳೂರಿನ ಕೆಂಪೇಗೌಡ ನಗರದ ರಾಷ್ಟ್ರೋತ್ಥಾನ ಪರಿಷತ್ ‘ಭಾರತ-ಭಾರತಿ ಪುಸ್ತಕ ಸಂಪದ’ ಎಂಬ ಹೆಸರಿನಡಿ ಕನ್ನಡದಲ್ಲಿ 510 ಮಕ್ಕಳ ಪುಸ್ತಕ ಗಳನ್ನು ಹೊರತರುವ ಯೋಜನೆ ಹಮ್ಮಿಕೊಂಡಿದೆ. 1971-73ನೇ ಸಾಲಿನಿಂದ ಹಂತಹಂತವಾಗಿ ಮುಂದಿನ 5 ವರ್ಷಗಳವರೆಗೂ ಪುಸ್ತಕ ಹೊರತರಲಾಗುವುದು. ಪ್ರಾರಂಭದಲ್ಲಿ, 1972ರ ದೀಪಾವಳಿಗೆ ಮೊದಲು 10 ಪುಸ್ತಕಗಳನ್ನು ಬಿಡುಗಡೆ ಮಾಡ ಲಾಗುವುದು. ಹಾಲಿ ಆರ್ಥಿಕ ವರ್ಷಾಂತ್ಯದೊಳಗೆ ಒಟ್ಟು 30 ಹಾಗೂ ಮುಂದಿನ 4 ವರ್ಷಗಳಲ್ಲಿ (1973ರಲ್ಲಿ 75, 1974ರಲ್ಲಿ 105, 1975ರಲ್ಲಿ 120, 1976ರಲ್ಲಿ 120 ಹಾಗೂ 1977ರಲ್ಲಿ 60) ಉಳಿದ ಪುಸ್ತಕಗಳನ್ನು ಹೊರತರಲಾಗುವುದು. ನಮ್ಮ ದೇಶದ ಮಹಾನ್ ವ್ಯಕ್ತಿಗಳ ಜೀವನ ಹಾಗೂ ಸಾಧನೆ ಬಗ್ಗೆ ಮಕ್ಕಳಿಗೆ ನೈಜಚಿತ್ರಣ ನೀಡುವುದೇ ಇದರ ಉದ್ದೇಶ. ಪುರಾಣ-ಪುಣ್ಯಕಥೆ, ಐತಿಹಾಸಿಕ ಹಾಗೂ ರಾಜಕೀಯ ಕ್ಷೇತ್ರದ ಸಾಧಕರ ಪುಸ್ತಕಗಳನ್ನು ಬಣ್ಣದ ಹೊದಿಕೆ ಹಾಗೂ ಆಕರ್ಷಕ ರೇಖಾಚಿತ್ರಗಳ ಮೂಲಕ ಹೊರತರಲಾಗುವುದು. ಕನ್ನಡದ ಗಣ್ಯ ಬರಹಗಾರರ ತಂಡವೇ ಈ ಯೋಜನೆಯಲ್ಲಿ ತೊಡಗಿಕೊಂಡಿದೆ. ಪುಸ್ತಕ ಪುಟ್ಟದಾಗಿದ್ದು, ಬೆಲೆಯೂ ಕಡಿಮೆಯಿದೆ(75 ಪೈಸೆ). ಈ ಎಲ್ಲ 510 ಪುಸ್ತಕಗಳನ್ನು ತಲಾ 10 ಸಾವಿರ ಪ್ರತಿಯಂತೆ ಮುದ್ರಿಸಲು ಒಟ್ಟು 24 ಲಕ್ಷ ರೂ. ಅಗತ್ಯವಿದೆ ಎಂದು ಅಂದಾಜಿಸಲಾಗಿದ್ದು, ಸರಕಾರದ ಸಹಾಯವಿಲ್ಲದೆ ಇಂಥದ್ದೊಂದು ಯಶಸ್ವಿಯಾಗದು. ರಾಷ್ಟ್ರೋತ್ಥಾನ ಪರಿಷತ್ ಧನಸಹಾಯ ಹಾಗೂ ಸಾಲಕ್ಕಾಗಿ ಸರಕಾರಕ್ಕೆ ಮನವಿ ಮಾಡಿದೆ. ಈ ಪುಸ್ತಕಗಳು ಪ್ರೌಢ ಹಾಗೂ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳಿಗೆ ಉಪಯುಕ್ತ ಮತ್ತು ಆಸಕ್ತಿದಾಯಕ ಎಂಬ ದೃಷ್ಟಿಯಿಂದ ಪಠ್ಯಪುಸ್ತಕ ನಿರ್ದೇಶಕರು ರಾಷ್ಟ್ರೋತ್ಥಾನ ಪರಿಷತ್‌ಗೆ 10 ಲಕ್ಷ ರೂ. ಬಡ್ಡಿರಹಿತ ಸಾಲ ನೀಡಲು ಶಿಫಾರಸು ಮಾಡಿದ್ದಾರೆ. ವರ್ಷಕ್ಕೆ 2 ಲಕ್ಷ ರೂ.ಗಳಂತೆ ರಾಷ್ಟ್ರೋತ್ಥಾನ ಸಾಲ ಮರುಪಾವತಿ ಮಾಡಬೇಕು. ಆದರೆ ವರ್ಷಂಪ್ರತಿ ನೀಡುವ ಪುಸ್ತಕಗಳ ಬೆಲೆಯನ್ನು ಸಾಲದಲ್ಲಿ ವಜಾ ಮಾಡಲಾಗುವುದು. 75 ಪೈಸೆ ಬೆಲೆಯ 510 ಪುಸ್ತಕಗಳನ್ನು ಶೇ. 15ರ ರಿಯಾಯಿತಿಯಲ್ಲಿ ತಲಾ 12 ಸಾವಿರ ಕಾಪಿಗಳನ್ನು ನೀಡಬೇಕೆಂದು ಸೂಚಿಸಿ ಗುತ್ತಿಗೆಯನ್ನೂ ಕೊಡಲಾಗಿದೆ. ಹಣಕಾಸು ಸಚಿವಾಲಯದ ಒಪ್ಪಿಗೆಯ ಮೇರೆಗೇ ಈ ಆದೇಶ ವನ್ನು ಹೊರಡಿಸಲಾಗಿದೆ.”

1972ರಲ್ಲಿ ಆಗಿನ ರಾಜ್ಯ ಸರಕಾರದ ಅಧೀನ ಕಾರ್ಯದರ್ಶಿ ಎನ್. ನಾರಾಯಣ ಸ್ವಾಮಿಯವರು ಸರಕಾರದ ಪರವಾಗಿ ಇಂತಹ ಆದೇಶ ಹೊರಡಿಸಿದ್ದರು. ಅದೂ ಪಕ್ಕಾ ಕಾಂಗ್ರೆಸ್ಸಿರಾಗಿದ್ದ ಮುಖ್ಯಮಂತ್ರಿ ದೇವರಾಜ್ ಅರಸು ಸರಕಾರ ಇಂತಹ ಆದೇಶ ನೀಡಿತ್ತು. ಆಗ ಶಿಕ್ಷಣ ಸಚಿವರಾಗಿದ್ದ ಎ.ಆರ್. ಬದ್ರಿನಾರಾಯಣ್ ಪುಸ್ತಕ ಪ್ರಕಟಣೆಯಲ್ಲಿ ಖುದ್ದು ಆಸಕ್ತಿ ತೋರಿದ್ದರು. 1988ರಲ್ಲಿ ಆಗಿನ ಕೇಂದ್ರ ಸರಕಾರದ ಅಧೀನ ಕಾರ್ಯದರ್ಶಿಎ.ಕೆ. ಮೆಹ್ರಾ ಅವರು ‘ಭಾರತ-ಭಾರತಿ’ ಪುಸ್ತಕಗಳನ್ನು ಅನೌಪಚಾರಿಕ ಶಿಕ್ಷಣ ಕೇಂದ್ರಗಳಿಗೆ ವಿತರಿಸುವಂತೆ ಆದೇಶ ಹೊರಡಿಸಿದ್ದರು. ಆಗ ಕೇಂದ್ರದಲ್ಲಿ ಇದ್ದಿದ್ದೂ ಕಾಂಗ್ರೆಸ್ ಸರಕಾರವೇ ಅಲ್ಲವೆ? ಕಾಂಗ್ರೆಸ್ ಸರಕಾರಗಳು ಯಾವ ಪುಸ್ತಕ ಪ್ರಕಟಣೆ ಹಾಗೂ ವಿತರಣೆಗೆ ಆದೇಶ ನೀಡಿದ್ದವೋ ಅದೇ ಪುಸ್ತಕಗಳ ವಿತರಣೆಗೆ ಮುಖ್ಯಮಂತ್ರಿ ಯಡಿಯೂರಪ್ಪನವರ ಸರಕಾರ ಆದೇಶ ನೀಡಿದ ಕೂಡಲೇ ಹೇಗೆ ಕೋಮುವಾದ, ಕೇಸರೀಕರಣವಾಗಿ ಬಿಡುತ್ತದೆ? ‘ಭಾರತ-ಭಾರತಿ ಪುಸ್ತಕ ಸಂಪದ’ದ 300 ಪುಸ್ತಕಗಳನ್ನು ಮಾಧ್ಯಮಿಕ ಶಾಲೆಗಳಿಗೆ ವಿತರಣೆ ಮಾಡಿ ಎಂದು ಕಳೆದ ಜೂನ್ ೨೫ರಂದು ಯಡಿಯೂರಪ್ಪನವರ ಸರಕಾರ ಆದೇಶ ನೀಡಿದ ನಂತರ ಕೆಲವು ಪತ್ರಿಕೆಗಳೂ ಸೇರಿದಂತೆ ಹಲವರು ತಗಾದೆ ತೆಗೆದುಕೊಂಡು ಕುಳಿತಿದ್ದಾರೆ. ಕೇಸರೀಕರಣ ಎಂದು ಬೊಬ್ಬೆ ಹಾಕುತ್ತಿದ್ದಾರೆ.

ಏನಾಗಿದೆ ಇವರಿಗೆ?

ಮದನ್‌ಲಾಲ್ ಧಿಂಗ್ರಾ ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ತಪ್ಪಿಗಾಗಿ ವಿದೇಶಿ ನೆಲದಲ್ಲಿ ಗಲ್ಲಿಗೇರಿಸಲಾದ ಮೊದಲ ಹುತಾತ್ಮ. ಆತನ ಬಗ್ಗೆ ಓದುವುದು ಮಹಾಪರಾಧವೇ? ಇನ್ನು ಮಹಮದ್ ಅಲಿ ಜಿನ್ನಾನನ್ನು ಒಳಗೊಳಗೆ ಆರಾಧಿಸುವ ದೇಶದ್ರೋಹಿ ಆತ್ಮಗಳಿಗೆ ಮಾತ್ರ ಸಾವರ್ಕರ್ ಕೋಮುವಾದಿಯಾಗಿ ಕಾಣಬಲ್ಲರು ಅಷ್ಟೇ. ಹೆಡಗೇವಾರ್, ಗೋಳ್ವಲ್ಕರ್ ಬಗ್ಗೆ ಅಪಸ್ವರವೆತ್ತಿ, ಯಾರೂ ಬೇಡವೆನ್ನುವುದಿಲ್ಲ, ಅವರ ಬಗೆಗಿನ ಪುಸ್ತಕಗಳನ್ನು ಪಟ್ಟಿಯಿಂದ ತೆಗೆದುಹಾಕಿ ಎನ್ನಿ…ಅದೂ ತಪ್ಪಲ್ಲ. ಆದರೆ ರಾಷ್ಟ್ರೋತ್ಥಾನ ಪ್ರಕಟಿಸಿರುವ ಪುಸ್ತಕಗಳೆಲ್ಲವನ್ನೂ ಸಾರಾಸಗಟಾಗಿ ಕೇಸರೀಕರಣ ಎಂದು ಹಣೆಪಟ್ಟಿಕಟ್ಟುವುದು ಎಷ್ಟು ಸರಿ? ಹಾಗಂತ ಬರೆಯುವ ದಡ್ಡಶಿಖಾಮಣಿಗಳು ಮೊದಲು ಪುಸ್ತಕಗಳನ್ನು ಓದಲಿ? ಸರಕಾರ ವಿತರಿಸಲಿರುವ 300 ಪುಸ್ತಕಗಳಲ್ಲಿ ಆಶ್ಫಾಕ್ ಉಲ್ ಹಕ್, ಅಬ್ದುಲ್ ಕರೀಂ ಖಾನ್, ಶಿರಡಿ ಸಾಯಿ ಬಾಬಾ, ಬಡೇ ಗುಲಾಂ ಅಲಿ ಖಾನ್, ಮಹಮದ್ ಪೀರ್, ಕಬೀರ್‌ದಾಸ್, ಖುರ್ಷಿದ್ ನಾರಿಮನ್ ಕಥೆಗಳೂ ಇವೆ. ಅವರನ್ನೂ ಆರೆಸ್ಸೆಸ್ಸಿಗರು ಎನ್ನುತ್ತೀರಾ?! ಆರೆಸ್ಸೆಸ್ ಹುಟ್ಟುವುದಕ್ಕಿಂತ 16 ವರ್ಷ ಮೊದಲೇ ಮದನ್‌ಲಾಲ್ ಧಿಂಗ್ರಾ ನೇಣಿಗೆ ಕೊರಳು ಕೊಟ್ಟು ಹುತಾತ್ಮನಾಗಿದ್ದ. ಆರೆಸ್ಸೆಸ್‌ನ ಅಂಗಸಂಸ್ಥೆಯೊಂದು ಹೊರತಂದ ಮಾತ್ರಕ್ಕೆ ಭಗತ್‌ಸಿಂಗ್, ಚಂದ್ರಶೇಖರ ಆಝಾದ್, ಸುಭಾಷ್‌ಚಂದ್ರ ಬೋಸ್, ನಾರಾಯಣ ಗುರು, ಹೋಮಿ ಭಾಭಾ, ಕೆಂಪೇಗೌಡ, ಕಿತ್ತೂರು ಚೆನ್ನಮ್ಮ, ಜನರಲ್ ತಿಮ್ಮಯ್ಯ ಆರೆಸ್ಸಿಗರು, ಕೋಮುವಾದಿಗಳು ಆಗಿ ಬಿಡುತ್ತಾರೆಯೇ?

ಇಷ್ಟೆಲ್ಲಾ ಆರೋಪ ಮಾಡುವ ಮೊದಲು ಆರೆಸ್ಸೆಸ್‌ನವರು ಯಾವ ಯಾವ ರೈಲಿಗೆ ಬಾಂಬಿಟ್ಟಿದ್ದಾರೆ, ಯಾವ ಮಾರ್ಕೆಟ್‌ಗಳಲ್ಲಿ ಸ್ಫೋಟಕಗಳನ್ನಿಟ್ಟು ಜನಸಾಮಾನ್ಯರನ್ನು ಸಾಯಿಸಿದ್ದಾರೆ, ಯಾವಾಗ ಧರ್ಮದ ಕಾರಣ ನೀಡಿ ಕುಟುಂಬ ಯೋಜನೆಗೆ ವಿರೋಧ ವ್ಯಕ್ತಪಡಿಸಿದ್ದಾರೆ, ಎಲ್ಲಿ ಧಾರ್ಮಿಕ ಪ್ರತ್ಯೇಕತೆ ನಡೆಸುತ್ತಿದ್ದಾರೆ ಎನ್ನುವುದಕ್ಕೆ ಒಂದು ಪಟ್ಟಿ , ಆಧಾರ ಕೊಡಿ ಸಾರ್? ಅಥವಾ ಇದನ್ನೆಲ್ಲಾ ಮಾಡುತ್ತಿರುವುದು ಯಾರು ಎಂದು ನಿಷ್ಪಕ್ಷಪಾತವಾಗಿ ಆತ್ಮಾವಲೋಕನ ಮಾಡಿಕೊಳ್ಳಿ… ದೇಶದ್ರೋಹಿಗಳು, ಧರ್ಮಾಂಧರು, ಧರ್ಮದ ಹೆಸರಿನಲ್ಲಿ ದೇಶ, ಸಮಾಜವನ್ನು ಒಡೆಯಲು ಪ್ರಯತ್ನಿಸುತ್ತಿರುವವರು, 1947ರಲ್ಲಿ ದೇಶ ಒಡೆದವರು ಯಾರು ಎಂದು ಗೊತ್ತಾಗುತ್ತದೆ!

ಅದಿರಲಿ, “ಭಾರತ-ಭಾರತಿ ಪುಸ್ತಕ ಸಂಪದ” ಯೋಜನೆ ಯಲ್ಲಿ ಕಾಯಾ, ವಾಚಾ, ಮನಸಾ ತಮ್ಮನ್ನು ತೊಡಗಿಸಿಕೊಂಡು ವೀರಗಾಥೆಗಳನ್ನು ಬರೆದವರೇನು ಸಾಮಾನ್ಯ ವ್ಯಕ್ತಿಗಳೇ? ಮಾಸ್ತಿ ವೆಂಕಟೇಶ ಅಯ್ಯಂಗಾರ್, ದಾ.ರಾ. ಬೇಂದ್ರೆ, ತಿ. ತಾ. ಶರ್ಮ, ಎಚ್ಚೆಸ್ಕೆ, ಜಿ.ಎಸ್. ಶಿವರುದ್ರಪ್ಪ, ಬಿ. ಪುಟ್ಟಸ್ವಾಮಯ್ಯ, ಎನ್. ರಂಗನಾಥಶರ್ಮ, ಬಸವರಾಜ ಕಟ್ಟೀಮನಿ, ನಾ. ಡಿಸೋಜ, ಹಂಪ ನಾಗರಾಜಯ್ಯ, ಬಿ.ಸಿ. ಪೊನ್ನಪ್ಪ, ಮಾತೆ ಮಹಾದೇವಿ, ಸಿದ್ದಯ್ಯ ಪುರಾಣಿಕ, ಸಂತೋಷ್‌ಕುಮಾರ್ ಗುಲ್ವಾಡಿ, ಹಾ.ಮಾ. ನಾಯಕ್, ಬನ್ನಂಜೆ ಗೋವಿಂದಾಚಾರ್ಯ, ವ್ಯಾಸರಾಯ ಬಲ್ಲಾಳ, ದೇ. ಜವರೇಗೌಡ, ಮಾಸ್ಟರ್ ಹಿರಣ್ಣಯ್ಯ, ಪ್ರಭುಶಂಕರ್ ಇವರನ್ನೆಲ್ಲಾ ಕೋಮುವಾದಿಗಳು, ಕೇಸರಿ ಪಡೆಯವರು ಎನ್ನುತ್ತೀರಾ? ಶಾಲೆಗಳಲ್ಲಿ ಬೈಬಲ್ ಖರೀದಿ ಹಾಗೂ ವಿತರಣೆಗೇಕೆ ಅನುಮತಿ ನಿರಾಕರಿಸಿದ್ದು ಎಂದು ಕೆಲವರು ಪ್ರಶ್ನಿಸುತ್ತಿದ್ದಾರಲ್ಲಾ, ಬೈಬಲ್‌ಗೂ ಈ ದೇಶ ಕಟ್ಟಿದ ಮಹಾನುಭಾವರ ಬಗ್ಗೆ ಮಕ್ಕಳಿಗೆ ಮನವರಿಕೆ ಮಾಡಿಕೊಡುವುದಕ್ಕೂ ವ್ಯತ್ಯಾಸವೇ ಇಲ್ಲವೆ? ಶಾಸಕರ ಕ್ಷೇತ್ರ ಅಭಿವೃದ್ಧಿ ನಿಧಿಯಿಂದ ಈ ಪುಸ್ತಕಗಳನ್ನು ಖರೀದಿ ಮಾಡಬೇಕೆಂದು ಆದೇಶ ನೀಡಲಾಗಿದೆ. ರಸ್ತೆ, ಶೌಚ ಮುಂತಾದ ಅಭಿವೃದ್ಧಿಗಳಿಗೆ ವಿನಿಯೋಗಿಸಬೇಕಾದ ಹಣವನ್ನು ಪುಸ್ತಕ ಖರೀದಿಗೆ ಬಳಸುವುದು ಎಷ್ಟು ಸರಿ ಎಂದು ಕೆಲವರು ಪ್ರಶ್ನಿಸುತ್ತಿದ್ದಾರೆ. ಇವರ ಪ್ರಕಾರ ರಸ್ತೆ, ಮೂಲಭೂತ ಸೌಕರ್ಯಗಳ ಅಭಿವೃದ್ಧಿಯಷ್ಟೇ ಪ್ರಗತಿಯ ಸಂಕೇತವೇ? ಮಕ್ಕಳ ಬೌದ್ಧಿಕ ಬೆಳವಣಿಗೆ, ವಿಕಾಸ ಬೇಡವೇ? ಮಕ್ಕಳಲ್ಲಿ ದೇಶಾಭಿಮಾನ ಮೂಡಿಸಿ ಒಳ್ಳೆಯ ನಾಗರಿಕರನ್ನಾಗಿ ಮಾಡುವುದೂ ಪ್ರಗತಿಯ ಅಂಗವೇ ಅಲ್ಲವೆ? ಏಕೆ ಕೆಲವರು ವಿನಾಕಾರಣ ಅಪಪ್ರಚಾರ ಮಾಡುವುದಕ್ಕೇ ಹುಟ್ಟಿದವರಂತೆ, ಪಣ ತೊಟ್ಟವರಂತೆ ವರ್ತಿಸುತ್ತಿದ್ದಾರೆ?

ಯಡಿಯೂರಪ್ಪನವರ ಸರಕಾರ ಕೆಲವೊಂದು ತಪ್ಪುಗಳ ಹೊರತಾಗಿ ಒಂದಿಷ್ಟು ಒಳ್ಳೆಯ ಕೆಲಸವನ್ನೂ ಮಾಡಿದೆ. ಬೆಂಗಳೂರು ರಸ್ತೆಗಳು ಹಿಂದೆಂದೂ ಕಂಡರಿಯದ ರಿಪೇರಿ ಕಾಣುತ್ತಿವೆ. ಕಳೆದ ಮೇ-ಜೂನ್‌ನಲ್ಲಂತೂ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿಯವರು, “ಮಕ್ಕಳನ್ನು ಶಾಲೆಗೆ ಕಳುಹಿಸಿ” ಎಂಬ ಸಂದೇಶವನ್ನು ಹೊತ್ತ ಪ್ರಶಂಸಾರ್ಹ ಪ್ರಚಾರಾಂದೋಲನ ಮಾಡಿದರು. ಅಂತಹ ಒಳ್ಳೆಯ ಕೆಲಸದ ಅಂಗವೇ ಭಾರತ-ಭಾರತಿ ಪುಸ್ತಕ ಖರೀದಿ-ವಿತರಣೆಯಾಗಿದೆ.

ಏಕೆ ಸುಖಾಸುಮ್ಮನೆ ಎಲ್ಲದರಲ್ಲೂ ಹುಳುಕು ಹುಡುಕುತ್ತೀರಿ?

ಕೃಪೆ : ಪ್ರತಾಪ್ ಸಿಂಹ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ