ನನ್ನ ಬ್ಲಾಗ್ ಪಟ್ಟಿ

ಶನಿವಾರ, ಜುಲೈ 31, 2010

ಕರ್ನಾಟಕಕ್ಕೂ ಒಬ್ಬ ರಾಜ್ ಠಾಕ್ರೆ ಬೇಡವೆ?!

೧೯೫೭ರಿಂದ ೬೩ರವರೆಗೂ ಬಾಬು ಜಗಜೀವನ್ ರಾಮ್, ೧೯೬೯ರಿಂದ ೭೦ರವರೆಗೂ ಡಾ. ರಾಮ್ ಸುಭಾಗ್ ಸಿಂಗ್, ೧೯೭೩ರಿಂದ ೭೫ರವರೆಗೂ ಲಲಿತ್ ನಾರಾಯಣ ಮಿಶ್ರ, ೧೯೮೦ರಿಂದ ೮೧ರವರೆಗೂ ಕೇದಾರ್ ಪಾಂಡೆ, ೧೯೯೦ರಿಂದ ೧೯೯೧ರವರೆಗೂ ಜಾರ್ಜ್ ಫರ್ನಾಂಡಿಸ್, ೧೯೯೬ರಿಂದ ೧೯೯೮ರವರೆಗೂ ರಾಮ್ ವಿಲಾಸ್ ಪಾಸ್ವಾನ್, ೨೦೦೨ರಿಂದ ೦೪ರವರೆಗೂ ನಿತೀಶ್ ಕುಮಾರ್, ೨೦೦೪ರಿಂದ ಇಂದಿನವರೆಗೂ ಲಾಲು ಪ್ರಸಾದ್ ಯಾದವ್.

ಹೀಗೆ ಸ್ವಾತಂತ್ರ್ಯ ಬಂದಂದಿನಿಂದ ಇಲ್ಲಿಯವರೆಗೂ ಬಿಹಾರದ ಎಂಟು ಸಂಸದರು ಕೇಂದ್ರ ರೈಲ್ವೆ ಸಚಿವರಾಗಿ ದ್ದಾರೆ. ಯುನೈಟೆಡ್ ಫ್ರಂಟ್, ಎನ್‌ಡಿಎ, ಯುಪಿಎ ಹೀಗೆ ಯಾವುದೇ ಪಕ್ಷ ಅಥವಾ ಮೈತ್ರಿಕೂಟ ಅಧಿಕಾರಕ್ಕೆ ಬರಲಿ ರೈಲ್ವೆ ಇಲಾಖೆ ಮಾತ್ರ ಬಿಹಾರಿಗಳ ಪಾಲಾಗುತ್ತದೆ. ಅದೇ ಇಲಾಖೆ ಬೇಕೆಂದು ಪಟ್ಟು ಹಿಡಿದು ಪಡೆದುಕೊಳ್ಳುತ್ತಾರೆ. ಹಾಗಾಗಿ ಇಂದು ಹುಬ್ಬಳ್ಳಿ, ಹುಮನಾಬಾದ್, ಹಿಂದು ಪುರ, ತಿರುವನಂತಪುರದಂತಹ ದಕ್ಷಿಣದ ಮೂಲೆ ಗಳಿಗೂ ಹೋದರೂ ರೈಲ್ವೆ ಸ್ಟೇಷನ್‌ಗಳಲ್ಲಿ ಟಿಕೆಟ್ ನೀಡುವವರಿಂದ ತಪಾಸಣೆ ಮಾಡುವವರವರೆಗೂ ಎಲ್ಲಡೆಯೂ ಬಿಹಾರಿಗಳನ್ನು ಕಾಣಬಹುದು. ವಿಶ್ವದ ಅತಿದೊಡ್ಡ ಉದ್ಯೋಗದಾತನಾದ ರೈಲ್ವೆ ಇಲಾಖೆಯನ್ನು ಮೊದಲಿನಿಂದಲೂ ಈ ಬಿಹಾರಿ ರಾಜಕಾರಣಿಗಳು ತಮ್ಮ ಸ್ವಂತ ಆಸ್ತಿಯಂತೆ ನಡೆಸಿಕೊಳ್ಳುತ್ತಾ ಬಂದಿದ್ದಾರೆ. ಅದು ಬೆಂಗಳೂರು ಇರಬಹುದು, ಮುಂಬೈ ಆಗಿರಬಹುದು ಅಥವಾ ಯಾವುದೇ ಸ್ಥಳಗಳಲ್ಲಿ ಇರುವ ಖಾಲಿ ಹುದ್ದೆ ಗಳನ್ನು ಭರ್ತಿ ಮಾಡುವ ಅಗತ್ಯ ಬಂದಾಗಲೂ, ಅದರ ಜಾಹೀರಾತು ಪ್ರಕಟವಾಗುವುದು ಪಟನಾ, ಗಯಾ ಮತ್ತು ಉತ್ತರ ಪ್ರದೇಶಗಳಲ್ಲಿ ಮಾತ್ರ. ಹಾಗಾಗಿ ಅಲ್ಲಿನ ಅಭ್ಯರ್ಥಿಗಳು ನೇಮಕಾತಿಗಾಗಿ ಇಲ್ಲಿಗೆ ಆಗಮಿಸುತ್ತಾರೆ. ಇಂತಹ ಧೋರಣೆಯ ಬಗ್ಗೆ ಎಲ್ಲರಿಗೂ ಗೊತ್ತಿದ್ದರೂ, ಎಲ್ಲರಲ್ಲೂ ಅಸಮಾಧಾನವಿದ್ದರೂ ಪ್ರತಿಭಟಿಸುವ ಗೋಜಿಗೆ ಯಾರೂ ಹೋಗುತ್ತಿರಲಿಲ್ಲ. ಆದರೆ ಪ್ರತಿಭಟಿಸುವ ಹಾಗೂ ಉಗ್ರ ಮಾರ್ಗದಿಂದಲೇ ತಕ್ಕ ಸಂದೇಶ ಮುಟ್ಟಿಸುವ ಧೈರ್ಯ ತೋರಿದ್ದು ನಾರಾಯಣ ಗೌಡರ ಕರ್ನಾಟಕ ರಕ್ಷಣಾ ವೇದಿಕೆ. ಅಂದು ರೈಲ್ವೆ ಸಚಿವ ಲಾಲು ಯಾದವ್ ಕನ್ನಡಿಗರನ್ನು ‘ಹುಚ್ಚರು’ ಎಂದು ಕರೆದಿದ್ದರು. ಕರ್ನಾಟಕ ರಕ್ಷಣಾ ವೇದಿಕೆ ಮಾಡಿದ ಕೆಲಸವನ್ನೇ ಮೊನ್ನೆ ಮುಂಬೈನಲ್ಲಿ ರಾಜ್ ಠಾಕ್ರೆಯವರ ಮಹಾರಾಷ್ಟ್ರ ನವನಿರ್ಮಾಣ ಸೇನಾ (ಎಂಎನ್‌ಎಸ್) ಮಾಡಿದೆ. ಹಾಗಾಗಿ ಬೈಸಿಕೊಳ್ಳುವ ಸರದಿ ರಾಜ್ ಠಾಕ್ರೆಯದ್ದಾಗಿದೆ. ಅವರನ್ನು “ಮೆಂಟಲ್ ಕೇಸ್” ಎಂದಿದ್ದಾರೆ ಲಾಲು! ಆದರೆ ಕನ್ನಡಿಗರು ಹುಚ್ಚರು, ರಾಜ್ ಠಾಕ್ರೆ ಮೆಂಟಲ್ ಕೇಸ್ ಎಂದು ಅವಹೇಳನಕಾರಿಯಾಗಿ ಮಾತನಾಡಿದ ಲಾಲು ಯಾದವ್ ಅವರನ್ನು ಖಂಡಿಸುವ ಬದಲು ಎಲ್ಲರೂ ರಾಜ್ ಠಾಕ್ರೆಯನ್ನು ದೂಷಿಸುತ್ತಿದ್ದಾರೆ. ಈ ಮಧ್ಯೆ, ಮುಂಬೈನ ಬಸ್ ಏರಿ ನಿರ್ವಾಹಕನನ್ನು ಕಟ್ಟಿಹಾಕಿ ಪಿಸ್ತೂಲಿನಿಂದ ಜನರತ್ತ ಗುಂಡುಹಾರಿಸಿದ ಬಿಹಾರದ ಯುವಕ ರಾಹುಲ್ ರಾಜ್‌ನನ್ನು ಅನಿವಾರ್ಯವಾಗಿ ಪೊಲೀಸರು ಕೊಂದಿದ್ದನ್ನು ಬಿಹಾರಿ ರಾಜಕಾರಣಿಗಳು ದೊಡ್ಡ ವಿವಾದವನ್ನಾಗಿ ಪರಿವರ್ತಿಸುತ್ತಿದ್ದಾರೆ. ಮಹಾರಾಷ್ಟ್ರದ ಸರ ಕಾರವನ್ನು ವಜಾ ಮಾಡಬೇಕೆಂದು ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್, ಉಪಮುಖ್ಯಮಂತ್ರಿ ಸುಶೀಲ್ ಮೋದಿ, ರೈಲ್ವೆ ಸಚಿವ ಲಾಲು ಪ್ರಸಾದ್ ಯಾದವ್, ಕೇಂದ್ರ ಗಣಿಖಾತೆ ಸಚಿವ ರಾಮ್ ವಿಲಾಸ್ ಪಾಸ್ವಾನ್ ಹೀಗೆ ಎಲ್ಲ ಬಿಹಾರಿ ನಾಯಕರೂ ಒಟ್ಟಾಗಿ ಒಕ್ಕೊರಲಿನಿಂದ ಕೇಂದ್ರ ಸರಕಾರದ ಒತ್ತಡ ಮೇಲೆ ಹೇರುತ್ತಿದ್ದಾರೆ.

ಏಕೆ?

ರಾಜ್ ಠಾಕ್ರೆ ಮಾಡಿದ್ದರಲ್ಲಿ ತಪ್ಪೇನಿದೆ? ನೇಮಕಾತಿಗಾಗಿ ಬಂದವರನ್ನು ಅಟ್ಟಿಸಿಕೊಂಡು ಹೋಗಿದ್ದು, ಹಿಡಿದು ಬಡಿದಿದ್ದು ತಪ್ಪಾಗಿ ಕಾಣುತ್ತಿರಬಹುದು. ಆದರೆ ಅದರ ಹಿಂದಿರುವ ನೋವು, ಹತಾಶೆಯನ್ನೂ ನಾವು ಪರಿಗಣನೆಗೆ ತೆಗೆದುಕೊಳ್ಳಬೇಕಲ್ಲವೆ? ೧೯೫೬ರಲ್ಲಿ ಭಾಷೆಯ ಆಧಾರದ ಮೇಲೆ ರಾಜ್ಯಗಳ ಪುನರ್ವಿಗಂಡನೆ ಮಾಡಿದ್ದೇಕೆ? ಸ್ಥಳಿಯ ಆಶಯಗಳನ್ನು(Local Aspiration) ಈಡೇರಿಸುವುದಕ್ಕೇ ಅಲ್ಲವೆ? ಸ್ಥಳೀಯ ಭಾಷೆ, ಸಂಸ್ಕೃತಿಗಳನ್ನು ಕಾಪಾಡಿ ಕೊಳ್ಳಲಿ ಎಂಬ ಕಾರಣಕ್ಕೇ ಅಲ್ಲವೆ? ಮುಂಬೈ ತುಂಬ ಅನ್ಯರಾಜ್ಯದವರೇ ತುಂಬಿಕೊಂಡರೆ, “ಛಾತ್ ಪೂಜಾ” ಹೆಸರಿನಲ್ಲಿ ಬಿಹಾರಿಗಳು ಹಾಗೂ ಉತ್ತರ ಪ್ರದೇಶದರು ಒಂದೆಡೆ ಸೇರಿ ರಾಜಕೀಯ ಮಾಡಲು ಹೊರಟರೆ ಸ್ಥಳೀಯರಾದ ಮರಾಠಿ ಜನರ ಕಣ್ಣುಕೆಂಪಾಗದೇ ಇದ್ದೀತೆ? “ಭಾರತ ಕೂಡ ಯುರೋಪ್‌ನಂತೆ. ಅಂದರೆ ಅಲ್ಲಿನ ಕರೆನ್ಸಿ ಒಂದೇ ಆಗಿದ್ದರೂ ಕಲ್ಚರ್ ಮತ್ತು ಭಾಷೆ ನೂರಾರಿವೆ! ನಮ್ಮದೂ ಕೂಡ ನೂರಾರು ಭಾಷೆ, ಸಂಸ್ಕೃತಿಗಳಿರುವ ಯುರೋಪ್!!” ಎನ್ನುವ ರಾಜ್ ಠಾಕ್ರೆಯವರ ವಾದದಲ್ಲೂ ಹುರುಳಿದೆ. ಅವರೇನು ದೇಶ ವಿಭಜನೆಯ ಮಾತನಾಡುತ್ತಿಲ್ಲ. ಆದರೆ ಬೆಂಗಾಲಿ ಜಯಾ ಬಚ್ಚನ್ ಮುಂಬೈ ಅನ್ನು ಕೇಂದ್ರಾಳಿತ ಪ್ರದೇಶ ಮಾಡಿ ಎಂದರೆ ಮರಾಠಿಗರು ಸುಮ್ಮನಿರುತ್ತಾರೆಯೇ? ಕೈಯಲ್ಲಿ ಪಿಸ್ತೂಲು ಹಿಡಿದುಕೊಂಡು ಮಂಗನಾಟವಾಡಲು ಪ್ರಯತ್ನಿಸಿದರೆ ಪೊಲೀಸರು ಸುಮ್ಮನೆ ಕುಳಿತುಕೊಳ್ಳಲು ಆಗುತ್ತದೆಯೇ? ಮುಂಬೈ ಅನ್ನು ಉದ್ಧಾರ ಮಾಡಿದವರಲ್ಲಿ ವಾಡಿಯಾ, ಟಾಟಾಗಳಂತಹ ಪಾರ್ಸಿಗಳು ಹಾಗೂ ಅಂಬಾನಿಗಳಂತಹ ಗುಜರಾತಿಗಳ ಕೊಡುಗೆ ಇರಬಹುದು. ಆದರೆ ಉದ್ಯಮ ವಲಯಕ್ಕೆ ಮಹಾರಾಷ್ಟ್ರ ಪ್ರಶಸ್ತ ವಾತಾವರಣವನ್ನು ನಿರ್ಮಿ ಸಿತ್ತು. ೧೯೬೦ರವರೆಗೂ ಗುಜರಾತ್ ಕೂಡ ಮಹಾರಾಷ್ಟ್ರದ ಒಂದು ಭಾಗವೇ ಆಗಿತ್ತು. ಭಾರತದ “ಫೈನಾನ್ಸಿಯಲ್ ಕ್ಯಾಪಿಟಲ್” ಎಂದು ಹೆಸರು ಪಡೆದಿರುವ ಮುಂಬೈನತ್ತ ಇಂದು ಎಲ್ಲರೂ ಮುಖ ಮಾಡುತ್ತಿರಬಹುದು. ಆದರೆ ಮುಂಬೈನಂತಹ ನಗರ ಈ ಪರಿ ಬೆಳೆಯಲು ಅಲ್ಲಿನ ಜನರ ಕೊಡುಗೆ, ಉದ್ಯಮಸ್ನೇಹೀ ವಾತಾವರಣ ಕಾರಣವಾಗಿವೆ. ಹಾಗಿರುವಾಗ ಸ್ಥಳೀಯರಿಗೆ ಸಿಗಬೇಕಾದ ಉದ್ಯೋಗಗಳನ್ನು ಅನ್ಯರಾಜ್ಯದವರು ಕಿತ್ತು ಕೊಳ್ಳಲು ಪ್ರಯತ್ನಿಸಿದರೆ, ಸ್ಥಳೀಯ ಭಾಷೆಗೆ ಬದಲಾಗಿ ಹಿಂದಿಯನ್ನು ಹೇರಲು ಹೊರಟರೆ ಸಮಸ್ಯೆಗಳೇಳದೇ ಇರುತ್ತವೆಯೇ?

ಆದರೆ ಬಿಹಾರಿಗಳಿಗೆ ಬೆದರಿಕೆಯೊಡ್ಡುತ್ತಿದ್ದಾರೆ, ಬಿಹಾರಿ ಯುವಕನನ್ನು ಕೊಂದುಹಾಕಿದರು ಎಂದು ರಾಜ್ ಠಾಕ್ರೆ ಮತ್ತು ಮಹಾರಾಷ್ಟ್ರವನ್ನು ದೂಷಿಸಲು, ಅಲ್ಲಿನ ಸರಕಾರವನ್ನು ವಜಾಮಾಡುವಂತೆ ಒತ್ತಾಯ ಮಾಡಲು ಒಂದಾಗಿರುವ ಬಿಹಾರದ ರಾಜಕಾರಣಿಗಳು ತಮ್ಮ ರಾಜ್ಯವನ್ನು ಅಭಿವೃದ್ಧಿಪಡಿಸಲು ಏಕೆ ಒಟ್ಟಾಗುವುದಿಲ್ಲ? ಹದಿನೈದು ವರ್ಷ ಬಿಹಾರವನ್ನು ಲೂಟಿ ಮಾಡಿದ ಲಾಲುಗೆ ಬಿಹಾರಿಗಳ ಬಗ್ಗೆ ಎಷ್ಟು ಕಾಳಜಿ ಇದೆಯೆಂಬುದು ಯಾರಿಗೂ ಗೊತ್ತಿರದ ಸಂಗತಿಯೇ? ಬಿಹಾರವನ್ನು ಡಕಾ ಯಿತರ ರಾಜ್ಯವನ್ನಾಗಿ ಪರಿವರ್ತಿಸಿದ್ದು ಇದೇ ಲಾಲು, ರಾಬ್ಡಿ, ಪಾಸ್ವಾನ್‌ಗಳೇ ಅಲ್ಲವೆ?

ಹಾಗಾಗಿಯೇ “ಕೋಲ್ಕತಾ ಬೆಂಗಾಲಿಗಳಿಗೆ, ಚೆನ್ನೈ ತಮಿಳಿಗರಿಗೆ ಎಂದಾದರೆ ಮುಂಬೈ ಮರಾಠಿಗಳಿಗೆ” ಎನ್ನುವ ಮಹಾರಾಷ್ಟ್ರ ನವನಿರ್ಮಾಣ ಸೇನೆಯ ಕೂಗಿಗೆ ಜನಬೆಂಬಲ ವ್ಯಕ್ತವಾಗುತ್ತಿದೆ. ರಾಜ್ ಠಾಕ್ರೆ ಹೇಳುತ್ತಿರುವುದೇನೋ ಸರಿ, ಆದರೆ ಹಿಡಿದಿರುವ ಮಾರ್ಗ ಸರಿಯಲ್ಲ ಎಂದು ಕೆಲವು ಬುದ್ಧಿಜೀವಿಗಳು ಬೊಟ್ಟು ಮಾಡುತ್ತಿದ್ದಾರೆ. ಆದರೆ ರಾಜ್ ಠಾಕ್ರೆಯವರೇನಾದರೂ ಶಿವಾಜಿ ಪ್ರತಿಮೆಯ ಕೆಳಗೆ ಕುಳಿತು ಸತ್ಯಾಗ್ರಹ ಮಾಡಿದ್ದರೆ ಆಳುವ ಪಕ್ಷದವರು ಸ್ಪಂದಿಸುತ್ತಿದ್ದರೆ? ಮಾಲ್ ಮಾಲೀಕರು ಅಂಗಡಿ, ಕಚೇರಿ, ಕಾರ್ಖಾನೆಗಳ ಮುಂಗಟ್ಟಿನ ಮೇಲೆ ಮರಾಠಿ ಬೋರ್ಡ್‌ಗಳನ್ನು ನೇತು ಹಾಕಿಕೊಳ್ಳುತ್ತಿದ್ದರೆ? ರಾಜ್ ಠಾಕ್ರೆ ಮಾಡುತ್ತಿರುವುದು ರಾಜಕೀಯ ಲಾಭಕ್ಕಾಗಿ ಎಂದು ಕೆಲವರು ದೂರುತ್ತಿದ್ದಾರೆ. ಅಂತಹ ಗಾಂಧಿ ಮಹಾತ್ಮನಿಗೂ ತನಗಿಂತ ದೊಡ್ಡ ನಾಯಕರು ಹೊರಹೊಮ್ಮಬಾರದು ಎಂಬ ಮತ್ಸರವಿದ್ದಿದ್ದನ್ನು ಯಾರೂ ಅಲ್ಲಗಳೆಯಲು ಸಾಧ್ಯವಿಲ್ಲ. ಹಾಗಿರುವಾಗ ರಾಜ್ ಠಾಕ್ರೆಯನ್ನು ದೂರುವುದರಲ್ಲಿ ಯಾವ ಅರ್ಥವೂ ಇಲ್ಲ.

ಅಂದಹಾಗೆ ಕನಡಿಗರಾದ ನಮಗೂ ಒಬ್ಬ ಠಾಕ್ರೆ ಬೇಕೆ?

ಕನ್ನಡ ರಾಜ್ಯೋತ್ಸವದ ದಿನವಾದ ಇಂದು ಕನ್ನಡಿಗರಾದ ನಾವೂ ಆತ್ಮಾವಲೋಕನ ಮಾಡಿಕೊಳ್ಳಬೇಕಾದ ಪರಿಸ್ಥಿತಿ ಖಂಡಿತ ಬಂದು ನಿಂತಿದೆ. ಬೆಂಗಳೂರು ಕೂಡ ಮತ್ತೊಂದು ಮುಂಬೈನಂತೆಯೇ ಆಗಿದೆ. ಆದರೆ ಒಂದೇ ವ್ಯತ್ಯಾಸ-ನಮ್ಮಲ್ಲೊಬ್ಬ ರಾಜ್ ಠಾಕ್ರೆ ತಲೆಯೆತ್ತಿಲ್ಲ ಅಷ್ಟೇ. ಮುಂಬೈನಲ್ಲಿ ಬಿಹಾರಿ ಹಾಗೂ ಉತ್ತರ ಪ್ರದೇಶವರು ಹೇಗೆ ಹೆಚ್ಚಿಕೊಂಡಿದ್ದಾರೋ ನಮ್ಮ ಬೆಂಗಳೂರಿನಲ್ಲಿ ತೆಲುಗು ಹಾಗೂ ತಮಿಳು ಭಾಷಿಕರ ದರ್ಬಾರು ಕೂಡ ಸಹನೆಯ ಕಟ್ಟೆಯೊಡೆಯುವಂತೆ ಮಾಡುತ್ತಿದೆ. ಕರ್ನಾಟಕದಲ್ಲಿ ಕನ್ನಡಿಗರೇ ಅಲ್ಪಸಂಖ್ಯಾತರಾದರು ಎಂಬುದು ಹಳೆಯ ಮಾತಾಯಿತು ಬಿಡಿ. ಆದರೆ ಹೊಸದಾಗಿ ಚುನಾಯಿತವಾಗಿ ರುವ ಈಗಿನ ವಿಧಾನಸಭೆಯಲ್ಲಿ ೧೩ ಜನ ತೆಲುಗುವಾಳ್ಳು ಶಾಸಕರಿದ್ದಾರೆ. ಕನ್ನಡ ಭಾಷೆ, ಸಂಸ್ಕೃತಿಯನ್ನು ರಕ್ಷಣೆ ಮಾಡಬೇಕಾದ ಶಾಸನಸಭೆಯಲ್ಲಿ ತೆಲುಗಿನಲ್ಲಿ ಪರಸ್ಪರ ಮಾತನಾಡಿಕೊಳ್ಳುತ್ತಾರೆ. ಅದರಲ್ಲೂ ಈ ಬಳ್ಳಾರಿಯ ರೆಡ್ಡಿ ಸಹೋದರರು ಕರ್ನಾಟಕದ ರಾಜಕಾರಣವನ್ನು ಕುಲಗೆಡಿಸುವುದಕ್ಕೋಸ್ಕರವೇ ಜನ್ಮವೆತ್ತಿದವರಂತೆ ವರ್ತಿಸುತ್ತಿದ್ದಾರೆ. ನಾಡಿದ್ದು ನವೆಂಬರ್ ೩ರಿಂದ ನಡೆಯಲಿರುವ ಹಂಪಿ ಉತ್ಸವ ವನ್ನೇ ತೆಗೆದುಕೊಳ್ಳಿ. ಹಂಪಿ ಉತ್ಸವವನ್ನು ಆರಂಭಿಸಿದ ಹಾಗೂ ಸ್ಥಳೀಯರಾದ ಎಂ.ಪಿ. ಪ್ರಕಾಶ್ ಅವರಿಗೇ ಆಹ್ವಾನ ನೀಡಿಲ್ಲ. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಮುಖ್ಯಮಂತ್ರಿ ಚಂದ್ರು ಅವರನ್ನೂ ಆಹ್ವಾನಿಸಿಲ್ಲ. ಈ ಜನಾರ್ದನ ಮತ್ತು ಕರುಣಾಕರ ರೆಡ್ಡಿಗಳು ಆ ಮಟ್ಟಿಗೆ ಕನ್ನಡ ನೆಲದಲ್ಲಿ ರೆಡ್ಡಿ(ದ್ವೇಷ) ರಾಜಕಾರಣ ಮಾಡುತ್ತಿದ್ದಾರೆ. ಈಗ್ಗೆ ಕೆಲವೇ ತಿಂಗಳ ಹಿಂದೆ ಬೆಂಗಳೂರಿನಲ್ಲೇ ನಡೆದ ರೆಡ್ಡಿ ಸಮಾವೇಶದಲ್ಲಿ “ಕರ್ನಾಟಕದಾದ್ಯಂತ ಪ್ರವಾಸ ಮಾಡಿ ಯಡಿಯೂರಪ್ಪನವರನ್ನು ಅಧಿಕಾರಕ್ಕೆ ತಂದಿದ್ದೇ ನಾವು” ಎಂದು ಜನಾರ್ದನ ರೆಡ್ಡಿ ಸಾರ್ವಜನಿಕವಾಗಿ ಹೇಳಿಕೊಂಡಿ ದ್ದರು. ರಾಜಕೀಯ ಭಿನ್ನಾಭಿಪ್ರಾಯಗಳ ಹೊರತಾಗಿಯೂ ಸಭ್ಯತೆಗೆ ಹೆಸರಾಗಿದ್ದ ನಮ್ಮ ಕರ್ನಾಟಕ ರಾಜಕೀಯ ರೌಡಿಯಿಂಸಗೆ ತಿರುಗುತ್ತಿದೆ. ವೇದಿಕೆಗಳ ಮೇಲೆ ಆ ಮಗ, ಈ ಮಗ ಅಂತ ಬೈದುಕೊಳ್ಳುವ ಮಟ್ಟಕ್ಕಿಳಿಯುತ್ತಿದೆ. ಇದು ಕರ್ನಾಟಕವೋ ಆಂಧ್ರವೋ ಎಂದು ಅನುಮಾನಪಡುವಷ್ಟರಮಟ್ಟಿಗೆ ಹೊಲಸೇಳುತ್ತಿದೆ. ಇದಕ್ಕೆ ಮುಖ್ಯ ಕಾರಣ ತೆಲುಗುವಾಳ್ಳುಗಳೇ. ಇಂದಲ್ಲ ನಾಳೆ ಈ ಸತ್ಯ ಎಲ್ಲರ ಅನುಭವಕ್ಕೂ ಬರುತ್ತದೆ, ಕಾದು ನೋಡಿ. ಆಂಧ್ರದಲ್ಲಿ ದರ್ಬಾರು ನಡೆಸುತ್ತಿದ್ದ ರೆಡ್ಡಿ, ರಾಜು, ನಾಯ್ಡುಗಳು ನಕ್ಸಲೀಯರ ಕಾಟ ತಾಳಲಾರದೆ ಕರ್ನಾಟಕಕ್ಕೆ ಓಡಿಬಂದು ಬೆಂಗಳೂರನ್ನು ಕುಲಗೆಡಿಸುತ್ತಿದ್ದಾರೆ ಅಷ್ಟೇ. ನಮ್ಮ ನೆರೆಹೊರೆಯಲ್ಲೇ ಇರುವ ತೆಲುಗು ಭಾಷಿಕರ ಬಗ್ಗೆ ನಮ್ಮಲ್ಲಿ ಖಂಡಿತ ಒಳ್ಳೆಯ ಭಾವನೆಯೇ ಇದೆ. ಆದರೆ ಕೆಲವರು ಇಡೀ ಸಮುದಾಯವನ್ನೇ ಕಟಕಟೆಗೆ ತಂದುನಿಲ್ಲಿಸುವಂತೆ ವರ್ತಿಸುತ್ತಿದ್ದಾರೆ. ಈ ರೀತಿ ಅನ್ಯರ ದಬ್ಬಾಳಿಕೆಯಿಂದ ನಮ್ಮ ಸಾಫ್ಟ್‌ವೇರ್ ಕಂಪನಿಗಳೂ ಹೊರತಾಗಿಲ್ಲ. ಕಂಪನಿಗಳೆಲ್ಲ ಒಂದೋ ನಮ್ಮ ಕನ್ನಡಿಗರು ಸ್ಥಾಪಿಸಿದವು ಇಲ್ಲವೆ, ಕನ್ನಡಿಗರು ನಿರ್ಮಿಸಿರುವ ಉದ್ಯಮಸ್ನೇಹೀ ವಾತಾವರಣದಿಂದಾಗಿ ಇಲ್ಲಿಗೆ ಬಂದಿರುವ ವಿದೇಶಿ, ದೇಶಿ ಕಂಪನಿಗಳೇ ಆಗಿವೆ. ಆದರೆ ಟೀಮ್ ಲೀಡರ್, ಪ್ರಾಜೆಕ್ಟ್ ಮೇನೇಜರ್ ಹುದ್ದೆಗಳಲ್ಲಿರುವವರೆಲ್ಲ ತೆಲುಗು, ತಮಿಳು ಇಲ್ಲವೆ ಮಲೆಯಾಳಿಗಳು. ಹೀಗೆ ಆಯಕಟ್ಟಿನ ಸ್ಥಳಗಳಲ್ಲಿ ಕುಳಿತುಕೊಂಡಿರುವ ಇವರು ತಮ್ಮ ರಾಜ್ಯದವರನ್ನೇ ತಂದುತುಂಬಿಕೊಳ್ಳುತ್ತಿರುವುದರಿಂದ ಕನ್ನಡಿಗರಿಗೆ ಸಾಫ್ಟ್ ವೇರ್ ಕ್ಷೇತ್ರದಲ್ಲೂ ಅನ್ಯಾಯವಾಗುತ್ತಿದೆ, ಕಿರುಕುಳಕ್ಕೂ ಒಳಗಾಗುತ್ತಿದ್ದಾರೆ.

ಪರಭಾಷಿಕರ ಮೇಲೆ ನಮಗೇಕೆ ಕೋಪ ಬರುತ್ತಿದೆಯೆಂ ದರೆ ಬೆಂಗಳೂರು ನಿರ್ಮಾತೃ ಕೆಂಪೇಗೌಡ, ವಿಧಾನಸೌಧ ಕಟ್ಟಿದ ಕೆಂಗಲ್ ಹನುಮಂತಯ್ಯ, ಕನ್ನಂಬಾಡಿ ಕಟ್ಟಿದ, ಎಚ್‌ಎಎಲ್ ಸೇರಿದಂತೆ ಹಲವಾರು ಕಚೇರಿ, ಕಾರ್ಖಾನೆಗಳನ್ನು ನಿರ್ಮಾಣ ಮಾಡಿದ ವಿಶ್ವೇಶ್ವರಯ್ಯ, ನಾರಾಯಣಮೂರ್ತಿ ಎಲ್ಲರೂ ಕನ್ನಡಿಗರೇ. ಯಾರೋ ಹೊರಗಿನವರು ಬಂದು ನಮ್ಮಲ್ಲಿ ಉದ್ಯೋಗ ಸೃಷ್ಟಿಸಿದ್ದಲ್ಲ. ಆದರೆ ಇಂದು ಬೆಂಗಳೂರಿ ನಲ್ಲಿ ಕಾಣಸಿಗುವುದು ತೆಲುಗುವಾಳ್ಳುಗಳ ರಿಯಲ್ ಎಸ್ಟೇಟ್ ಲಾಬಿ, ತಮಿಳು, ಮಲೆಯಾಳಿಗಳ ಸಣ್ಣಬುದ್ಧಿ. ಇಂತಹ ಸಂದರ್ಭದಲ್ಲಿ ನಮಗೂ ಒಬ್ಬ ರಾಜ್ ಠಾಕ್ರೆ ಬೇಕು ಎಂದನಿಸುವುದಿಲ್ಲವೆ? ನಾಳೆ ಬೆಳಗ್ಗೆ ಸಾಫ್ಟ್‌ವೇರ್ ಅಥವಾ ಇನ್ನಾವುದೇ ಕಂಪನಿಯಲ್ಲಿರುವ ಕನ್ನಡಿಗನೊಬ್ಬನಿಗೆ ತೊಂದರೆಯಾಯಿತೆಂದರೆ ಯಡಿಯೂರಪ್ಪನವರು ಸಹಾಯಕ್ಕೆ ಬರುವುದಿಲ್ಲ. ಅವರೇನಿದ್ದರೂ ಪೊಲೀಸರು, ಸರಕಾರಿ ಅಧಿಕಾರಿಗಳನ್ನು ವರ್ಗಾವಣೆ ಮಾಡಿಕೊಂಡು ಖಾಸಗಿ ಖಜಾನೆಯನ್ನು ಭರ್ತಿ ಮಾಡಿಕೊಳ್ಳುತ್ತಿರುತ್ತಾ ರಷ್ಟೇ! ಎಂತಹದ್ದೇ ಸಮಸ್ಯೆ ಎದುರಾದರೂ, ರಾಜ್ಯ ರಾಜ್ಯ ಗಳ ನಡುವೆ ಸಂಘರ್ಷಗಳೇರ್ಪಟ್ಟಾಗಲೂ ಈ ಬಿಜೆಪಿ, ಕಾಂಗ್ರೆಸ್‌ನವರು ಕೇಂದ್ರದಲ್ಲಿ ಯಾರ ಸರಕಾರವಿದೆ ಎಂಬು ದನ್ನು ನೋಡಿಕೊಂಡೇ ಪ್ರತಿಕ್ರಿಯಿಸುತ್ತಾರೆ. ಹಾಗಾಗಿ ನಮ್ಮ ಪರವಾಗಿ ಹೊರಾಡುವ ಒಬ್ಬ ನಾಯಕ, ಒಂದು ನೈಜ ಕನ್ನಡ ಪರ ಸಂಘಟನೆ, ಪ್ರಾದೇಶಿಕ ಪಕ್ಷದ ಅಗತ್ಯ ಖಂಡಿತ ಇದೆ.

ನೀವೇ ಯೋಚನೆ ಮಾಡಿ, “ನಿನ್ನ…ನ್… ಏ ಗಾಂಡೂ” ಮುಂತಾದ ಹೊಲಸು ಪದಗಳನ್ನು ಸಿನಿಮಾಗಳ ಮೂಲಕ ಕರ್ನಾಟಕದ ಮನೆಮನೆಗೂ ವಿತರಿಸಿದ, ‘ಕರ್ನಾಟಕದಲ್ಲಿ ಶೂಟಿಂಗ್ ಮಾಡಿದರೆ ಬರುವುದಿಲ್ಲ’ ಎಂದು ಬಹಿರಂಗ ಹೇಳಿಕೆ ನೀಡಿದ್ದ ಹಾಗೂ ‘ಇಂಡಿಪೆಂಡೆನ್ಸ್’ ಎಂಬ ಚಿತ್ರದ ಮುಹೂರ್ತವನ್ನು ತಮಿಳುನಾಡಿನಲ್ಲಿ ಮಾಡಿದ್ದ ಸಾಯಿ ಕುಮಾರ್ ಎಂಬ ತೆಲುಗು ಭಾಷಿಕನಿಗೆ ಕನ್ನಡ ರಾಜ್ಯೋ ತ್ಸವ ಪ್ರಶಸ್ತಿ ಕೊಡುವ “ಮಹಾನ್ ಮುಖ್ಯಮಂತ್ರಿ ಯಡಿಯೂರಪ್ಪ”ನವರ ಕಣ್ಣಿಗೆ, ಕಾಲು ಶತಮಾನದಿಂದ ಕನ್ನಡಿಗರಿಗೆ ಮನರಂಜನೆ ನೀಡುತ್ತಿರುವ ನಮ್ಮ ಶಿವಣ್ಣ, ರವಿಚಂದ್ರನ್, ರಮೇಶ್ ಅರವಿಂದ್ ಕಾಣುವುದೇ ಇಲ್ಲ!! ಇಂತಹ ಕೃತಘ್ನ ರಾಜಕಾರಣಿಗಳು ಹೆಚ್ಚಾಗುತ್ತಿರುವ ಈ ಕಾಲದಲ್ಲಿ ನಮ್ಮ ಕನ್ನಡದ ಪರವಾಗಿ ಹೋರಾಡುವ ನಾಯಕರು ಬೇಕೆನಿಸುವುದಿಲ್ಲವೆ? ಈ ದಿಸೆಯಲ್ಲಿ ರೈತ ಸಂಘ, ವಾಟಾಳ್ ನಾಗರಾಜ್, ದಸಂಸ ಪ್ರಯತ್ನ ನಡೆಸಿ ದ್ದವು. ನಮ್ಮ ನೆಲ-ಜಲದ ಬಗ್ಗೆ ಅಭಿಮಾನ ಮೂಡಿಸುವ ಪ್ರಯತ್ನಗಳು ನಡೆಯುತ್ತಿರುವಾಗಲೇ ಹಾಗೂ ಅದೊಂದು ಸಮಗ್ರ ಹೋರಾಟವಾಗಿ ರೂಪುಗೊಳ್ಳುತ್ತಿರುವ ಹಂತದಲ್ಲೇ ನಮ್ಮವರೇ ಆದ ಹಾಗೂ “ಮುತ್ಸದ್ದಿ” ಎನಿಸಿಕೊಂಡಿದ್ದ ಗುಳ್ಳೇನರಿ ರಾಮಕೃಷ್ಣ ಹೆಗಡೆಯವರು ಹೇಗೆ ಹೊಸಕಿ ಹಾಕಿದರು ಎಂಬುದು ನಮಗೆ ಚೆನ್ನಾಗಿ ಗೊತ್ತಿದೆ. ಆದರೆ ಇಂದು ಹಿಂದೆಂದಿಗಿಂತಲೂ ತ್ವರಿತ ಹಾಗೂ ಪ್ರಾಮಾಣಿಕವಾಗಿ ಕನ್ನಡದ ಬಗ್ಗೆ ಧ್ವನಿಯೆತ್ತಬೇಕಾದ ಅಗತ್ಯ ಎದುರಾಗಿದೆ. ಒಂದು ವೇಳೆ, ೧೯೬೦ರ ದಶಕದಲ್ಲಿ ಡಾ. ರಾಜ್, ಬಾಲಕೃಷ್ಣ, ನರಸಿಂಹ ರಾಜು, ಜಿ.ವಿ. ಅಯ್ಯರ್, ಅನಕೃ ಮುಂತಾದವರು ಅನ್ಯ ಭಾಷಾ ಚಿತ್ರಗಳ ಡಬ್ಬಿಂಗ್ ವಿರುದ್ಧ ಯಶಸ್ವಿಯಾಗಿ ಧ್ವನಿಯೆತ್ತದೇ, ಡಬ್ಬಿಂಗನ್ನು ನಿಷೇಧ ಮಾಡಿಸದೇ ಹೋಗಿದ್ದಿದ್ದರೆ ಇವತ್ತು ಬೆಂಗಳೂರಿನಲ್ಲಿ ಕನ್ನಡ ಚಿತ್ರಗಳನ್ನು ನೋಡಲು ಥಿಯೇಟರ್‌ಗಳೇ ಇರುತ್ತಿರಲಿಲ್ಲ.

ನೆನಪಿನಲ್ಲಿರಲಿ, ಒಂದು ವೇಳೆ ಪರ ಭಾಷಿಕರನ್ನು ಅದರಲ್ಲೂ ತೆಲುಗುವಾಳ್ಳುಗಳನ್ನು ನಾವು ಮಟ್ಟಹಾಕದೇ ಹೋದರೆ, ಮುಂದೊಂದು ದಿನ ಬೆಳಗಾವಿಯಲ್ಲಿ ಕನ್ನಡಿಗನೊಬ್ಬನನ್ನು ಮೇಯರ್ ಮಾಡಬೇಕಾದರೆ ಹೋರಾಡಬೇಕಾದ ಪರಿಸ್ಥಿತಿ ಸೃಷ್ಟಿಯಾಗಿದೆಯಲ್ಲಾ ಅಂಥ ಪರಿಸ್ಥಿತಿ ಬೆಂಗಳೂರಿನಲ್ಲೂ ಸೃಷ್ಟಿಯಾಗುತ್ತದೆ. ಈಗಾಗಲೇ ಬೆಂಗಳೂರಿನ ಜುಟ್ಟನ್ನು ರೆಡ್ಡಿಗಳ ಕೈಗೆ ಕೊಟ್ಟಾಗಿದೆ. ಇನ್ನು ಮೇಯರ್ ಸ್ಥಾನಕ್ಕೆ ನೇರ ಆಯ್ಕೆ ಮಾಡುವ ವ್ಯವಸ್ಥೆಯನ್ನೇನಾದರೂ ತಂದರೆ ವಿಧಾನಸಭೆ ಹಾಗೂ ಕಾರ್ಪೊರೇಶನ್‌ನಲ್ಲೂ “ಮಚ್ಚಾ, ಬಾಬು”ಗಳೇ ತುಂಬಿಕೊಳ್ಳುತ್ತಾರೆ, ಮರೆಯಬೇಡಿ.

ಹಾಗಂತ ಭಾಷೆ, ಸಂಸ್ಕೃತಿ ಹೆಸರಿನಲ್ಲಿ ದೇಶ ವಿಭಜನೆ ಮಾಡಬೇಕೆಂದು ಯಾರೂ ಕೇಳುತ್ತಿಲ್ಲ. ಭಾರತ ಅನ್ನುವ ಒಂದು ಪದಕ್ಕೆ ನಮ್ಮನ್ನೆಲ್ಲ ಭಾವನಾತ್ಮಕವಾಗಿ ಒಂದು ಮಾಡುವ ಶಕ್ತಿಯಿದೆ. ಆದರೆ “ಯೂನಿವರ್ಸಲ್ ಬ್ರದರ್‌ಹುಡ್” ಬಗ್ಗೆ ಎಷ್ಟೇ ಮಾತನಾಡಿದರೂ ಕೊನೆಗೆ ಅಪ್ಪನ ಆಸ್ತಿಗಾಗಿ ಅಣ್ಣತಮ್ಮಂದಿರೇ ಹೊಡೆದಾಡುವಂತೆ “ಸ್ಥಳೀಯರ ಕೂಗು” ಎನ್ನುವುದೂ ಇರುತ್ತದೆ. ಈ ಬೆಂಗಳೂರು ನಮ್ಮದು, ನಮ್ಮ ಕೆಂಪೇಗೌಡ ಕಟ್ಟಿದ್ದು, ನಮ್ಮ ವಿಶ್ವೇಶ್ವರಯ್ಯ ಬೆಳೆಸಿದ್ದು, ನಮ್ಮ ಕನ್ನಡನಾಡು ಎಂದು ಹಕ್ಕು ಪ್ರತಿಪಾದನೆ ಮಾಡುವುದರಲ್ಲಿ, ಪರ ಭಾಷಿಕರ ಸೊಕ್ಕು ಮುರಿಯಬೇಕೆನ್ನುವುದರಲ್ಲಿ, ಅಂಗಡಿ, ಕಾರ್ಖಾನೆಗಳ ಮುಂಗಟ್ಟಿನ ಮೇಲೆ ಕನ್ನಡ ನಾಮಫಲಕಗಳನ್ನು ಹಾಕಿ ಎಂದು ಒತ್ತಾಯಿಸುವುದರಲ್ಲಿ ಯಾವ ತಪ್ಪೂ ಇಲ್ಲ. ಆ ಕೆಲಸವನ್ನು ಕರ್ನಾಟಕ ರಕ್ಷಣಾ ವೇದಿಕೆ ಅಥವಾ ಯಾವ ಸಂಘಟನೆ ಬೇಕಾದರೂ ಮಾಡಲಿ. ಆದರೆ ನಮಗೆ ಕಟ್ಟಾಳುಗಳು ಬೇಕೇ ಹೊರತು ‘ಕಲೆಕ್ಟರ್’ಗಳಲ್ಲ. ಕನ್ನಡದ ಹೆಸರು ಹೇಳಿಕೊಂಡು “ಕಲೆಕ್ಟರ್” ಕೆಲಸಕ್ಕಿಳಿದರೆ ಕೆಡುವುದು ಕನ್ನಡದ ಹೆಸರೇ. ಜತೆಗೆ ಹೋರಾಟಗಳು ಹಾಗೂ ಹೋರಾಟಗಾರರ ಮೇಲೆ ಜನರಿಗೆ ವಿಶ್ವಾಸವೇ ಹೊರಟು ಹೋಗುತ್ತದೆ.

ಕನ್ನಡ ರಾಜ್ಯೋತ್ಸವದ ದಿನವಾದ ಇಂದಾದರೂ ಕನ್ನಡದ ಬಗ್ಗೆ ನೈಜ ಕಾಳಜಿ ಇರುವ ಎಲ್ಲರೂ ಚಿಂತನೆ ಮಾಡಲಿ.

ಕೃಪೆ : ಪ್ರತಾಪ್ ಸಿಂಹ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ