ನನ್ನ ಬ್ಲಾಗ್ ಪಟ್ಟಿ

ಶನಿವಾರ, ಜುಲೈ 31, 2010

ಭಾರತವನ್ನು ಬೈಯಿರಿ, ‘ಬುಕರ್’ ಪಡೆಯಿರಿ!

ಮಿಸ್ಟರ್ ಜಿಯಾಬಾವೋ,

ಇಂಟರ್‌ನೆಟ್‌ನಿಂದ ಗಗನ ನೌಕೆಗಳವರೆಗೆ ಎಲ್ಲವನ್ನೂ ಸಂಶೋಧನೆ ಮಾಡಿದ್ದು ಭಾರತೀ ಯರೇ. ಅವುಗಳನ್ನೆಲ್ಲ ಬ್ರಿಟಿಷರು ನಮ್ಮಿಂದ ಕದ್ದುಕೊಂಡು ಹೋದರು. ಇಂತಹ ಕಥೆಯನ್ನು ನೀವು ಭಾರತಕ್ಕೆ ಕಾಲಿಟ್ಟ ಕೂಡಲೇ ಹೇಳುತ್ತಾರೆ!

Nonsense. ಹತ್ತು ಸಾವಿರ ವರ್ಷಗಳ ಇತಿಹಾಸ ಹೊಂದಿರುವ ಈ ದೇಶ ಕೊಟ್ಟ ಅತಿದೊಡ್ಡ ಕೊಡುಗೆಯೆಂದರೆ ಕೋಳಿಗೂಡು!

ಹಳೇ ದಿಲ್ಲಿಗೆ ಹೋಗಿ, ಜಾಮಾ ಮಸೀದಿ ಹಿಂಭಾಗದ ಮಾರುಕಟ್ಟೆಯಲ್ಲಿ ಹೇಗೆ ಕೋಳಿಗಳನ್ನು ಇಟ್ಟಿದ್ದಾರೆ ಎಂಬುದನ್ನು ಕಣ್ಣಾರೆ ನೋಡಿ. ನೂರಾರು ಬಿಳಿಚಿಕೊಂಡ ಕೋಳಿಗಳನ್ನು ತಂತಿಯ ಗೂಡುಗಳಲ್ಲಿ ಬಂಧಿಸಿಟ್ಟಿರುತ್ತಾರೆ. ಅವು ಒಂದಕ್ಕೊಂದು ಅಂಟಿಕೊಂಡು ಕುಳಿತುಕೊಳ್ಳಬೇಕು. ಉಸಿರಾಡಲೂ ಜಾಗವಿರುವುದಿಲ್ಲ. ಅಂತಹ ಗೂಡಿನ ಮೇಲೆ ಕತ್ತಿಯನ್ನು ಝಳಪಿಸುತ್ತಾ ಕಟುಕ ಕುಳಿತಿರುತ್ತಾನೆ. ಅದಾಗ ತಾನೇ ಕಡಿದಿರುವ ಕೋಳಿಯ ಹಸಿ ಮಾಂಸದ ತುಣುಕುಗಳು, ಹೆಪ್ಪುಗಟ್ಟಿರುವ ರಕ್ತ ಗೂಡಿನ ಸುತ್ತ ಹರಡಿರುತ್ತದೆ. ತಮ್ಮ ಸಹೋದರರ ಅಂಗಾಂಗಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿರುವುದನ್ನು ಕಂಡರೂ, ಮುಂದಿನ ಸರದಿ ತಮ್ಮದೇ ಎಂದು ಗೊತ್ತಿದ್ದರೂ ಬದುಕಿರುವ ಕೋಳಿಗಳು ಬಂಡಾಯವೇಳುವುದಿಲ್ಲ. ಗೂಡಿನಿಂದ ಹೊರಹೋಗಲೂ ಪ್ರಯತ್ನಿಸುವುದಿಲ್ಲ.
ನಮ್ಮ ದೇಶದಲ್ಲಿ ಮನುಷ್ಯರ ಕಥೆಯೂ ಇದೇ ಆಗಿದೆ!

ಒಂದಾನೊಂದು ಕಾಲದಲ್ಲಿ ನಾನು ಹಿಂದಿ ಚಿತ್ರಗಳನ್ನು ನೋಡುತ್ತಿದ್ದೆ(ಆದರೆ ಈಗ ನೋಡುವುದಿಲ್ಲ). ಆ ಕಾಲದಲ್ಲಿ ಚಲನಚಿತ್ರ ಪ್ರಾರಂಭವಾಗುವುದಕ್ಕೆ ಮುಂಚೆ ಕಪ್ಪು ಪರದೆಯ ಮೇಲೆ ‘೭೮೬’ ಸಂಖ್ಯೆ ಮಿಂಚಿ ಮಾಯವಾಗುತ್ತಿತ್ತು. ಮುಸ್ಲಿಮರು ಅದು ತಮ್ಮ ದೇವರ ಸಂಕೇತವಾದ ಮ್ಯಾಜಿಕ್ ನಂಬರ್ ಎಂದು ಭಾವಿಸುತ್ತಿದ್ದರು. ಇಲ್ಲವಾದರೆ ಬಿಳಿ ಸೀರೆಯುಟ್ಟಿರುವ ಮಹಿಳೆಯೊಬ್ಬಳು ಪರದೆಯ ಮೇಲೆ ಕಾಣಿಸಿಕೊಳ್ಳುತ್ತಿದ್ದಳು. ಆಕೆಯ ಅಂಗೈನಿಂದ ಚಿನ್ನದ ನಾಣ್ಯ ಗಳು ಕೆಳಗುರುಳಿ ಪಾದದ ಮೇಲೆ ಬೀಳುತ್ತಿರುತ್ತಿದ್ದವು. ಆಕೆ ಹಿಂದೂಗಳ ಲಕ್ಷ್ಮೀ ದೇವತೆಯಾಗಿರುತ್ತಿದ್ದಳು. ಯಾವುದೇ ಕಥೆಯನ್ನು ಪ್ರಾರಂಭಿಸುವ ಮೊದಲು ದೇವರಿಗೆ ವಂದನೆ ಸಲ್ಲಿಸುವ ಪದ್ಧತಿ ನಮ್ಮ ದೇಶದಲ್ಲಿತ್ತು. ನನಗನಿಸುತ್ತದೆ ನಾನೂ ಯಾವುದಾದರೊಂದು ದೇವರ “Arse”ಗೆ(ಪೃಷ್ಠ) ಮುತ್ತಿಕ್ಕಿ ಬರೆಯಲು ಆರಂಭಿಸಬೇಕೇನೋ! ಆದರೆ ಯಾವ ದೇವರ ಪೃಷ್ಠ?! ಮುಸ್ಲಿಮರಿಗೆ ಒಬ್ಬನೇ ದೇವರಿದ್ದಾನೆ. ಕ್ರೈಸ್ತರಿಗೆ ಮೂವರು ದೇವರಿದ್ದಾರೆ. ಹಿಂದೂಗಳಿಗೆ ಮೂರು ಕೋಟಿ ಅರವತ್ತು ಲಕ್ಷ ದೇವರಿದ್ದಾರೆ. ಎಲ್ಲವನ್ನೂ ಒಟ್ಟು ಸೇರಿಸಿದರೆ 3,60,000,04! ಸರ್, ನಾನು ಕೈಜೋಡಿಸಿ ಕಣ್ಣುಮುಚ್ಚಿ ನನ್ನ ಕರಾಳ ಕಥೆಯ ಮೇಲೆ ಬೆಳಕು ಚೆಲ್ಲು ಎಂದು ದೇವರನ್ನು ಪ್ರಾರ್ಥಿಸುತ್ತಿದ್ದೇನೆ. ಮಿಸ್ಟರ್ ಜಿಯಾಬಾವೋ, ದಯವಿಟ್ಟು ಸಹಕರಿಸಿ. ಎಷ್ಟು ಬೇಗ 3,60,000,04 ದೇವರುಗಳ ಪೃಷ್ಠಕ್ಕೆ ಮುತ್ತಿಕ್ಕಬಹುದು ಎಂದು ನಿಮಗನಿಸುತ್ತದೆ?”

ಹೀಗೆ ಸಾಗುತ್ತದೆ ‘ನಮ್ಮ ಕನ್ನಡಿಗ’, ‘ನಮ್ಮ ಮಂಗಳೂರು ಹುಡುಗ’ ಎಂದು ನಾವೆಲ್ಲ ಹೆಮ್ಮೆಪಟ್ಟುಕೊಳ್ಳುತ್ತಿರುವ ಅರವಿಂದ ಅಡಿಗ ಬರೆದಿರುವ “ದಿ ವೈಟ್ ಟೈಗರ್” ಪುಸ್ತಕದ ಕಥೆ. ಮೊದಲ ಏಳೆಂಟು ಪುಟಗಳನ್ನು ಓದುವಾಗಲೇ ಮುಂದೇನು ಹೇಳಬಹುದು ಎಂಬುದರ ಸುಳಿವು ಸಿಗುತ್ತದೆ, ದೇವರ ಬಗ್ಗೆ ಅವರು ಬಳಸುವ ಪದಗಳು ವಿಡಂಬನೆ ಎನಿಸುವ ಬದಲು ಕೀಳು ಅಭಿರುಚಿ ಎನಿಸಿ ಬಿಡುತ್ತವೆ. ‘ದಿ ವೈಟ್ ಟೈಗರ್’ನ ಕಥೆ ಆರಂಭವಾಗುವುದೇ ಒಂದು ವಿಚಿತ್ರ ಸನ್ನಿವೇಶದೊಂದಿಗೆ. ‘ಚೀನಾ ಪ್ರಧಾನಿ ವೆನ್ ಜಿಯಾಬಾವೋ ಮುಂದಿನ ವಾರ ಭಾರತಕ್ಕೆ ಆಗಮಿಸಲಿದ್ದಾರೆ’ ಎಂಬ ಸುದ್ದಿ ‘ಆಲ್ ಇಂಡಿಯಾ ರೇಡಿಯೋ’ದಲ್ಲಿ ಬಿತ್ತರವಾಗುತ್ತದೆ. ಅದನ್ನು ಕೇಳಿದ ಬಲರಾಮ ಹಲವಾಯಿ ಮನದೊಳಗೆ ಅನೇಕ ಆಲೋಚನೆಗಳು ಹರಿದು ಹೋಗತೊಡಗುತ್ತವೆ. “ಪ್ರತಿ ಬಾರಿ ಮಹಾನ್ ವ್ಯಕ್ತಿಗಳು ದೇಶಕ್ಕೆ ಆಗಮಿಸಿದಾಗಲೂ ನಮ್ಮ ಪ್ರಧಾನಿ ಕರಿ ಕಾರಿನಲ್ಲಿ ಏರ್‌ಪೋರ್ಟ್‌ಗೆ ಆಗಮಿಸು ತ್ತಾರೆ. ಕಾರಿನಿಂದ ಕೆಳಗಿಳಿದು ನಿಮ್ಮ ಹಾಗೂ ಟಿವಿ ಕ್ಯಾಮೆರಾ ಗಳ ಮುಂದೆ ನಮಸ್ತೆ ಮಾಡುತ್ತಾರೆ. ಭಾರತವೆಂಥ ನೈತಿಕತೆ ಯಿಂದ ಕೂಡಿದ, ಪರಿಶುದ್ಧ, ಚಾರಿತ್ರ್ಯಯುತ ರಾಷ್ಟ್ರ ಎಂದು ವರ್ಣಿಸುತ್ತಾರೆ!

ಅದೊಂದು ದೊಡ್ಡ ಜೋಕು”.

ಹಾಗೆನ್ನುತ್ತಾನೆ ಬಲರಾಮ ಹಲವಾಯಿ. “ದಿ ವೈಟ್ ಟೈಗರ್” ಪ್ರಾರಂಭವಾಗುವುದೇ ಹೀಗೆ. ಚೀನಾದ ಪ್ರಧಾನಿ ವೆನ್ ಜಿಯಾಬಾವೋ ಮುಂದಿನ ವಾರ ಭಾರತಕ್ಕೆ ಭೇಟಿ ನೀಡಲಿದ್ದಾರೆ ಎಂಬ ಸುದ್ದಿಯನ್ನೇ ಇಟ್ಟುಕೊಂಡು ಅರವಿಂದ ಅಡಿಗ ಕಥೆ ಹೆಣೆಯುತ್ತಾರೆ. ಜಿಯಾಬಾವೋ ಆಗಮನಕ್ಕೆ ೭ ದಿನಗಳಿರುತ್ತವೆ. ಆ ಏಳು ದಿನಗಳಲ್ಲಿ ಜಿಯಾಬಾವೋಗೆ ಏಳು ಪತ್ರಗಳನ್ನು ಬರೆಯುತ್ತಾರೆ. ಆ ಪತ್ರಗಳಲ್ಲೇ ಬಲರಾಮ ಹಲವಾಯಿ ಎಂಬ ವ್ಯಕ್ತಿಯ ಪಾತ್ರ ಸೃಷ್ಟಿಸುತ್ತಾರೆ. ಆತ ಬೆಂಗಳೂರಿನಲ್ಲಿ ತಳವೂರಿರುವ ಉದ್ಯಮಿ. ವೆನ್ ಜಿಯಾಬಾವೋ ಬೆಂಗಳೂರಿಗೆ ಭೇಟಿ ನೀಡಲಿದ್ದಾರೆ. ಸಿಲಿಕಾನ್ ವ್ಯಾಲಿ ಎನಿಸಿರುವ ಬೆಂಗಳೂರಿನ ಆಮೋಘ ಯಶಸ್ಸಿನ ಹಿಂದಿರುವ ಸತ್ಯವನ್ನು ತಿಳಿಯುವ ಉದ್ದೇಶವನ್ನು ಹೊಂದಿದ್ದಾರೆ ಎಂಬ ರೇಡಿಯೋ ಸುದ್ದಿಯನ್ನು ಕೇಳಿ, ‘ಬೆಂಗಳೂರಿನ ಬಗ್ಗೆ ಯಾರಿಗಾದರೂ ಗೊತ್ತಿದ್ದರೆ ನನಗೆ ಮಾತ್ರ’ ಎಂದುಕೊಳ್ಳುವ ಬಲರಾಮ ಹಲವಾಯಿ, ಜಿಯಾಬಾವೋ ಮುಂದೆ ವಾಸ್ತವವನ್ನು ಅನಾವರಣ ಮಾಡುವ ಸಲುವಾಗಿ ೭ ರಾತ್ರಿ ಕುಳಿತು ಉದ್ದುದ್ದದ ಪತ್ರ ಬರೆಯುತ್ತಾನೆ. ಹಾಗೆ ಬರೆಯುವ ಪತ್ರಗಳಲ್ಲಿ ಗಯಾ ಜಿಲ್ಲೆಯ ಲಕ್ಷ್ಮಣ್‌ಗಢನ ನಿವಾಸಿಯಾದ ತಾನು ಕೇವಲ ಓದಲಷ್ಟೇ ಬರುವಷ್ಟು ಓದಿದವ, ತನ್ನ ಮನೆಯ ಪರಿಸ್ಥಿತಿ ಹೇಗಿತ್ತು, ಕೊನೆಗೆ ಕಾರು ಡ್ರೈವಿಂಗ್ ಕಲಿತು ಹೇಗೆ ಚಾಲಕನ ಕೆಲಸ ಗಿಟ್ಟಿಸಿಕೊಂಡೆ, ಆ ದೆಸೆಯಿಂದಾಗಿ ಮಾಲೀಕನ ಜತೆ ಹೇಗೆ ದಿಲ್ಲಿಗೆ ಬಂದೆ, ದಿಲ್ಲಿಗೆ ಬಂದ ನಂತರ ಹೇಗೆ ಹೊಸ ಶಿಕ್ಷಣ(ಚಾಲಾಕುತನ) ಆರಂಭವಾಯಿತು, ಆಗ ಒಬ್ಬ ನಿಷ್ಠಾವಂತ ಸೇವಕನಾಗಿರಬೇಕೋ ಅಥವಾ ಅಡ್ಡಮಾರ್ಗ ಹಿಡಿದು ದುಡ್ಡು ಮಾಡಬೇಕೋ ಎಂಬ ತಾಕಲಾಟ ಹೇಗೆ ಎದುರಾಯಿತು, ಕೊನೆಗೆ ಮಾಲೀಕನನ್ನೇ ಕೊಂದು, ಒಂದಿಷ್ಟು ಹಣ ಲಪಟಾಯಿಸಿ ಹೇಗೆ ಬೆಂಗಳೂರಿಗೆ ಬಂದು ಐಟಿ ಕಂಪನಿಗಳಲ್ಲಿ ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವವರ ಪಿಕ್ ಅಪ್, ಡ್ರಾಪ್ ಕಾಂಟ್ರಾಕ್ಟ್ ಪಡೆದು ಟ್ರಾವೆಲ್ ಏಜೆನ್ಸಿಯ ಮೂಲಕ ದುಡ್ಡು ಮಾಡಿ ದೊಡ್ಡ ಶ್ರೀಮಂತನಾದೆ ಎಂಬುದನ್ನು ವಿವರಿಸುತ್ತಾನೆ. ಆದರೆ ಒಂದೊಂದು ಪತ್ರಗಳಲ್ಲೂ ನಾಮ್ ಕೆ ವಾಸ್ತೆಗಾಗಿ ತನ್ನ ಕಥೆಯನ್ನು ಫ್ಲಾಶ್ ಬ್ಲಾಕ್‌ನಲ್ಲಿ ಹೇಳುವ ಬಲರಾಮ ಹಲವಾಯಿ, ಭಾರತವನ್ನು ಕೆಟ್ಟದಾಗಿ ಚಿತ್ರಿಸಲು ಕಥೆಯನ್ನು ಬಳಸಿಕೊಳ್ಳುತ್ತಾನೆ. ಕಥೆಗಿಂತ ಹೆಚ್ಚಾಗಿ ಕೊಳಕುಗಳನ್ನೇ ಹೇಳುತ್ತಾ ಹೋಗುತ್ತಾನೆ. ‘ಗಂಗಾ ನದಿ ಬಹಳ ಪವಿತ್ರ ಎನ್ನುತ್ತಾರೆ. ಅವರ ಮಾತು ಕೇಳಿಕೊಂಡು ಗಂಗೆಯಲ್ಲಿ ಮಿಂದರೆ ಹುಶಾರ್! ಅದರಲ್ಲಿ ಬರೀ ಹೆಣ ಮತ್ತು ಹೊಲಸೇ ತುಂಬಿದೆ’ ಎಂದು ಜಿಯಾಬಾವೋ ಅವರನ್ನು ಬಲರಾಮ ಎಚ್ಚರಿಸುತ್ತಾನೆ.

ಹಾಗೆ ಭಾರತದ ಕಟ್ಟಾವೈರಿ ಚೀನಾದ ಪ್ರಧಾನಿಗೆ ಭಾರತದ ಬಗ್ಗೆ ಕೆಟ್ಟ ಚಿತ್ರಣವನ್ನು ಕೊಡುವುದನ್ನು ಓದುವಾಗ ಇದೇನು ಅರವಿಂದ ಅಡಿಗ ಬರೆದಿರುವುದೋ ಅಥವಾ ಸಿಪಿಎಂನ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಕಾರಟ್ ಅವರು ಅರವಿಂದ ಅಡಿಗನೊಳಕ್ಕೆ ಪರಕಾಯ ಪ್ರವೇಶ ಮಾಡಿದ್ದಾರೋ ಎಂಬ ಅನುಮಾನ ಕಾಡುತ್ತದೆ. ನಮ್ಮ ಪೊಲೀಸರೆಂದರೆ ಭ್ರಷ್ಟರು, ನಮ್ಮ ದೇಶದ ತುಂಬೆಲ್ಲ ಕೊಳಕು, ವಂಚನೆಯೇ ತುಂಬಿದೆ, ಶ್ರೀಮಂತರೆಲ್ಲರೂ ಅಡ್ಡಮಾರ್ಗದಿಂದಲೇ ದುಡ್ಡು ಮಾಡಿ ದವರು ಎಂಬಂತೆ ಚಿತ್ರಿಸುತ್ತಾರೆ. “ದಿ ವೈಟ್ ಟೈಗರ್” ಒಂದು ಫಿಕ್ಷನ್ ಆಗಿದ್ದಿದ್ದರೆ ಕಾಲ್ಪನಿಕ ಕಥೆ ಎಂದು ನಾವೂ ಸುಮ್ಮನಾಗಬಹುದಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಹಿಸ್ಟರಿಯನ್ನು ಫಿಕ್ಷನ್‌ನಂತೆ, ಫಿಕ್ಷನ್ ಅನ್ನು ಹಿಸ್ಟರಿಯಂತೆ ಓದಿಕೊಳ್ಳಬೇಕಾಗಿದೆ. ಏಕೆಂದರೆ “ವೈಟ್ ಟೈಗರ್” ಫಿಕ್ಷನ್ ಆಗಿದ್ದರೂ ಅದರೊಳಗಿರುವುದೇ “ರಿಯಲ್ ಇಂಡಿಯಾ” ಎಂದು ಅರವಿಂದ ಅಡಿಗ ಪ್ರತಿಪಾದಿಸುತ್ತಾರೆ. ಕೊಲಂಬಿಯಾ, ಆಕ್ಸ್‌ಫರ್ಡ್ ವಿಶ್ವವಿದ್ಯಾಲಯಗಳಲ್ಲಿ ಓದಿಕೊಂಡಿದ್ದು, ಸ್ವದೇಶಕ್ಕೆ ಬಂದಾಗ ಬರೀ ಟ್ಯಾಕ್ಸಿಗಳಲ್ಲಿ ಓಡಾಡಿಕೊಂಡೇ ಭಾರತವನ್ನು ಅರೆದು ಕುಡಿದಂತೆ ಬರೆಯುತ್ತಾರೆ. ಪುಸ್ತಕದ ಪ್ರಾರಂಭದಲ್ಲಿ “ನಾನು ಹಿಂದಿ ಚಿತ್ರಗಳನ್ನು ನೋಡುವುದನ್ನು ನಿಲ್ಲಿಸಿದ್ದೇನೆ” ಎಂದು ಅಡಿಗ ಹೇಳಿಕೊಳ್ಳುತ್ತಾರೆ. ಒಂದು ವೇಳೆ ಅವರು ಹಿಂದಿ ಚಿತ್ರಗಳನ್ನು ನೋಡುವುದನ್ನು ನಿಲ್ಲಿಸದೇ ಹೋಗಿದ್ದಿದ್ದರೆ “ದಿ ವೈಟ್ ಟೈಗರ್” ಬರೆಯಬೇಕಾದ ಶ್ರಮವನ್ನೇ ತೆಗೆದುಕೊಳ್ಳ ಬೇಕಿರಲಿಲ್ಲ!

“ಇದು ಯಾವುದೋ ಬಾಲಿವುಡ್ ಚಿತ್ರದ ‘ಸ್ಕಿನ್ ಪ್ಲೇ’ಯ ರಫ್ ಕಾಪಿಯಂತಿದೆ. ಪ್ರತಿ ಪಾತ್ರಗಳೂ ಕ್ಲೀಶೆಯಾಗಿ ಕಾಣಿಸುತ್ತವೆ, ಹಾಸ್ಯ ಕಹಿಯಾಗಿದೆ, ಸೂಕ್ಷ್ಮತೆಯೇ ಅದರ ಲ್ಲಿಲ್ಲ. ಬರವಣಿಗೆಯಂತೂ ಮರೆತುಬಿಡುವಂಥದ್ದು” ಎಂದು “ದಿ ಡೈಲಿ ಟೆಲಿಗ್ರಾಫ್”ನಲ್ಲಿ ಸಮೀರ್ ರಹೀಮ್ ಬರೆದಿರುವ ವಿಮರ್ಶೆಯನ್ನು ಓದಿದ ನಂತರ ‘ವೈಟ್ ಟೈಗರ್’ ಅನ್ನು ಕೈಗೆತ್ತಿಕೊಂಡರೆ ಪ್ರತಿ ಪ್ಯಾರಾ ಮುಗಿದಾಗಲೂ ಮನಸು ಅಹುದಹುದೆನ್ನುತ್ತದೆ!

ಪ್ರತಿಪುಟಗಳಲ್ಲೂ ಭಾರತದ ಅವಹೇಳನ, ನಾವು ಸುಳ್ಳು ಗಾರರು ಎಂಬಂತೆ ಪ್ರತಿಪಾದಿಸುವುದು, ತೆಗಳುವುದೇ ಕಾಣುತ್ತದೆ. ನಡುನಡುವೆ ವಿನಾಕಾರಣವಾಗಿ ಮುಸ್ಲಿಮ್ ಹೆಸರುಗಳನ್ನು ಎಳೆದುಕೊಂಡು ಬಂದು ಮುಸ್ಲಿಮರ ಬಗ್ಗೆ ಹಿಂದೂಗಳಲ್ಲಿ ಅಂತರ್ಗತ ಪೂರ್ವಗ್ರಹ, ಕೀಳಭಿಪ್ರಾಯ ವಿದೆ ಎಂಬಂತೆ ಪ್ರತಿಬಿಂಬಿಸುತ್ತಾರೆ. ಒಮ್ಮೆ, ಬಲರಾಮ ಹಲವಾಯಿಗೆ ಕೆಲಸ ನೀಡಿದ್ದ ಮಿಸ್ಟರ್ ಅಶೋಕ್ ಅವರ ಸಹೋದರ ಮುಕೇಶ್ ಮಗ ರೋಶನ್ ಕೆಲಸದಾಳು ಗಳ ಜತೆ ಕ್ರಿಕೆಟ್ ಆಡುತ್ತಿರುತ್ತಾನೆ. ಆತ ಪ್ರತಿ ಬಾರಿ ಸಿಕ್ಸ್ ಅಥವಾ ಫೋರ್ ಹೊಡೆದಾಗಲೂ “ನಾನು ಮೊಹಮ್ಮದ್ ಅಜರುದ್ದೀನ್, ಭಾರತದ ನಾಯಕ” ಎಂದು ಜೋರಾಗಿ ಹೇಳುತ್ತಿರುತ್ತಾನೆ. ಅದನ್ನು ಕಂಡು “ನಿನ್ನನ್ನು ಗವಾಸ್ಕರ್ ಎಂದು ಕರೆದುಕೋ, ಮೊಹಮ್ಮದ್ ಅಜರುದ್ದೀನ್ ಒಬ್ಬ ಮುಸ್ಲಿಮ” ಎಂದು ಅಜ್ಜ ಗದರಿಸುತ್ತಾನೆ. ಆದರೆ ನಾವು ಸಚಿನ್ ತೆಂಡೂಲ್ಕರ್‌ನನ್ನು ಎಷ್ಟು ಇಷ್ಟಪಡುತ್ತೇವೆಯೋ ಅಷ್ಟೇ ಪ್ರೀತಿ ಅಜರ್ ಮೇಲೆಯೂ ಇದೆ. ಹಿಂದೂಗಳು ಆತನನ್ನು ಮುಸ್ಲಿಮನೆಂಬಂತೆ ಕಂಡಿದ್ದರೆ ಅಜರ್ ಭಾರತದ ನಾಯಕನೇ ಆಗುತ್ತಿರಲಿಲ್ಲ. ಅಜರುದ್ದೀನ್, ಲಿಯಾಂಡರ್ ಪೇಸ್, ತೆಂಡೂಲ್ಕರ್ ಇವರನ್ನು ನಾವೆಂದೂ ಜಾತಿ, ಧರ್ಮ ನೋಡಿ ಪ್ರೀತಿಸಿದವರಲ್ಲ. ಅಡಿಗ ಅವರಿಗೆ ಈ ಸತ್ಯವೇ ಅರ್ಥವಾಗಿಲ್ಲ.

The Story of India ಹೆಸರಿನಡಿ ಮೈಕೆಲ್‌ವುಡ್ ಎಂಬಾತ ಸಾಕ್ಷ್ಯಚಿತ್ರ(ಡಾಕ್ಯೂಮೆಂಟರಿ)ವೊಂದನ್ನು ರೂಪಿಸಿದ್ದಾರೆ. ಅದಕ್ಕೂ ಮೊದಲು ೨೦ ತಿಂಗಳ ಕಾಲ ಭಾರತವನ್ನು ಸಮಗ್ರವಾಗಿ ಸುತ್ತಿದ್ದಾರೆ. ಎಲ್ಲಾ ಲೈಬ್ರರಿಗಳಿಗೂ ಅಲೆದಿ ದ್ದಾರೆ. ಮಾಹಿತಿ, ಪುಸ್ತಕಗಳನ್ನು ಕಲೆಹಾಕಿ ೧೫ ವರ್ಷಗಳ ಕಾಲ ಅಧ್ಯಯನ ಮಾಡಿದ್ದಾರೆ. ಅಂತಹ ಸಂಶೋಧನೆಯ ನಂತರ ರೂಪಿಸಿರುವ ‘ದಿ ಸ್ಟೋರಿ ಆಫ್ ಇಂಡಿಯಾ’ ಎಂಬ ೬ ಗಂಟೆಗಳಷ್ಟು ದೀರ್ಘವಾದ ಸಾಕ್ಷ್ಯಚಿತ್ರ ಭಾರತದ ಇತಿಹಾಸ, ಪರಂಪರೆ ಹಾಗೂ ಹಾಲಿ ಪರಿಸ್ಥಿತಿಯನ್ನು ಹಂತ ಹಂತವಾಗಿ ತೆರೆದಿಡುತ್ತಾ ಸಾಗುತ್ತದೆ. ಹಾಗೆ ಒಂದು ಸಮಗ್ರವಾದ ಸಾಕ್ಷ್ಯಚಿತ್ರವನ್ನು ತಯಾರಿಸಿದರೂ ಭಾರತಕ್ಕೆ ನ್ಯಾಯ ಒದಗಿಸಿಕೊಡಲು ನನಗೆ ಸಾಧ್ಯವಾಗಿಲ್ಲ ಎಂದು ಮೈಕೆಲ್ ವುಡ್ ಪ್ರಾಮಾಣಿಕವಾಗಿ ಹೇಳಿಕೊಳ್ಳುತ್ತಾರೆ. ಆದರೆ ಅಕ್ಟೋಬರ್ ೧೫ರಂದು ‘ಬುಕರ್’ ಪ್ರಶಸ್ತಿ ಪಡೆದಿರುವ ಅರವಿಂದ ಅಡಿಗ, “ವೈಟ್ ಟೈಗರ್”ನ ೩೨೧ ಪುಟಗಳಲ್ಲಿ ಭಾರತವೆಂದರೆ ಹೀಗೆಯೇ ಎಂದು ಜಡ್ಜ್‌ಮೆಂಟ್ ಪಾಸು ಮಾಡಿ ಬಿಡುತ್ತಾರೆ! ಬಹುಶಃ ಅದನ್ನು ಗಮನಿಸಿಯೇ “ಇದು ಮೂಲತಃ ಒಬ್ಬ ಬಾಹ್ಯ ವ್ಯಕ್ತಿಯ ಟಿಪ್ಪಣಿ ಹಾಗೂ ಜಾಳು ಅಭಿಪ್ರಾಯ ಎಂದು ನನಗನಿಸುತ್ತದೆ. ಭಾರತದಲ್ಲಿ ಕಂಡು-ಕೇಳರಿಯದ ಸಾಕಷ್ಟು ಅಂಶಗಳಿವೆ. ಅಡಿಗ ಅವರಲ್ಲಿ ಪ್ರತಿಭೆ ಇದೆ. ಮೊದಲು ಅವರು ತಮ್ಮನ್ನು ದೇಶದೊಳಗೇ ಅದ್ದಿಕೊಂಡು, ನಂತರ ಇತರ ವಿಚಾರಗಳತ್ತ ಗಮನಹರಿಸ ಬೇಕು. ವಿದೇಶಗಳಲ್ಲಿ ನೆಲೆಸಿರುವ ಹಾಗೂ ಅಡಿಗರಂತೆ ವಿದೇಶಗಳಲ್ಲಿ ವ್ಯಾಸಂಗ ಮಾಡಿರುವ ಬಹಳಷ್ಟು ಭಾರತೀಯ ಲೇಖಕರು ಸ್ವದೇಶವನ್ನು ಕ್ರೂರ ಅನ್ಯಾಯ ಹಾಗೂ ಕೊಳಕು ಭ್ರಷ್ಟಾಚಾರದ ತಾಣ ಎಂಬಂತೆಯೇ ಸಾಮಾನ್ಯವಾಗಿ ಚಿತ್ರಿಸುತ್ತಾರೆ” ಎಂದು ಕೆವಿನ್ ರಶ್ಬೈ ಅವರು ‘ವೈಟ್ ಟೈಗರ್’ ಬಗ್ಗೆ ‘ದಿ ಗಾರ್ಡಿಯನ್’ ಪತ್ರಿಕೆಯಲ್ಲಿ ಬರೆದಿದ್ದಾರೆ.

ಕೆವಿನ್ ರಶ್ಬೈ ಮಾತು ನಿಜಕ್ಕೂ ಅರ್ಥಗರ್ಭಿತ.

ಭಾರತವೆಂದರೆ ಎತ್ತಿನ ಬಂಡಿಗಳ, ರಿಕ್ಷವಾಲಾಗಳ, ಹಾವಾ ಡಿಗರ ರಾಷ್ಟ್ರ. ಇಲ್ಲಿನ ನೀರನ್ನು ಕುಡಿದರೆ ಡಯೇರಿಯಾ ಬರುವುದು ಗ್ಯಾರಂಟಿ ಎಂಬ ತಲತಲಾಂತರದಿಂದ ಬಂದ ವಿದೇಶಿಯರ ಅಭಿಪ್ರಾಯವನ್ನು ‘ವೈಟ್ ಟೈಗರ್’ ಮತ್ತಷ್ಟು ಗಟ್ಟಿಗೊಳಿಸಲು ಪ್ರಯತ್ನಿಸುತ್ತದೆಯೇ ಹೊರತು ಎಲ್ಲ ರೀತಿಯ ಅಡ್ಡಿ-ಅಡಚಣೆಗಳ ಹೊರತಾಗಿಯೂ ಭಾರತ ಹೇಗೆ ಒಂದು ಬಲಿಷ್ಠ ರಾಷ್ಟ್ರವಾಗಿ ಹೊರಹೊಮ್ಮುತ್ತಿದೆ ಎಂಬುದರ ಬಗ್ಗೆ ಅಭಿಮಾನಪೂರ್ವಕವಾಗಿ ಕಿಂಚಿತ್ತನ್ನೂ ಹೇಳುವುದಿಲ್ಲ. ಅಲ್ಲದೆ ಅವರ ತೆಗಳಿಕೆಗಳಲ್ಲೂ ಹೊಸತನವಿಲ್ಲ, ಸವಕಲು ಟೀಕೆಗಳೇ. ಶ್ರೀಮಂತರೆಲ್ಲ ದಗಾಕೋರರೇ, ಶ್ರೀಮಂತಿಕೆಯ ಹಿಂದೆ ಮೋಸ, ವಂಚನೆ, ನಿರ್ದಯತೆ, ಡಕಾಯಿತಿಗಳಿವೆ ಎಂಬಂತೆ ಅಡಿಗ ಬರೆಯುತ್ತಾರೆ. ಆದರೆ ಒಂದು ಉದ್ಯಮವನ್ನು ಪ್ರಾರಂಭಿಸಿ ಶ್ರೀಮಂತರಾದ ಇನ್ಫೋಸಿಸ್‌ನ ನಾರಾಯಣ ಮೂರ್ತಿ ಅವರಂತಹವರ ಪ್ರಗತಿಯ ಹಿಂದೆ ಪರಿಶ್ರಮ, ಅಪಾಯವನ್ನು ಮೇಲೆ ಎಳೆದುಕೊಂಡು ಯಶಸ್ಸನ್ನು ಅರಸುವುದು ಹೇಗೆಂಬುದನ್ನು ಕಾಣಬಹುದು. ಹಾಗೆ ಪರಿಶ್ರಮದ ಫಲವಾಗಿ ಬಂದ ಯಶಸ್ಸಿನ ಫಲವನ್ನು ಅವರೊಬ್ಬರೇ ಅನುಭವಿಸಿಲ್ಲ. ಒಂದು ಲಕ್ಷಕ್ಕೂ ಅಧಿಕ ಜನರಿಗೆ ಉದ್ಯೋಗ ನೀಡಿದ್ದಾರೆ. ಎಷ್ಟೋ ಜನರು ನಾರಾಯಣಮೂರ್ತಿಯವರಿಂದಾಗಿ ಮಿಲಿಯನೇರ್‌ಗಳೂ ಆಗಿದ್ದಾರೆ. ಜಗತ್ತಿನ ಯಾವ ದೇಶವೂ ಬಡತನ, ನಿರುದ್ಯೋಗ, ದೌರ್ಜನ್ಯ, ಅನ್ಯಾಯ, ಅನಾಚಾರಗಳಿಂದ ಮುಕ್ತವಾಗಿಲ್ಲ. ಭಾರತದಲ್ಲಿ ಇವುಗಳು ತುಸು ಹೆಚ್ಚಾಗಿಯೇ ಇದ್ದರೂ ಅವುಗಳನ್ನೆಲ್ಲ ಮೀರಿ ನಾವೊಂದು ಬಲಿಷ್ಠ ರಾಷ್ಟ್ರ ವಾಗಿ ಹೊರಹೊಮ್ಮಿದ್ದೇವೆ.

ಭಾರತದಲ್ಲಿ ಶೋಧಿಸುವಂಥದ್ದು, ಗುರುತಿಸುವಂಥದ್ದು, ಹೆಮ್ಮೆಪಟ್ಟುಕೊಳ್ಳುವಂಥದ್ದು ಸಾಕಷ್ಟಿದೆ. ಹಾಗಾಗಿಯೇ ಫ್ರೆಂಚ್ ಲೇಖಕ ಜೀನ್ ಮರೀ ಗುಸ್ತಾವೋ ಲೆ ಕ್ಲೆಝಿಯೋ, ರೋಮಾ ರೋಲ್ಯಾಂಡ್, ಜರ್ಮನ್ ಸಾಹಿತಿ ಹರ್ಮನ್ ಹೆಸ್ಸಿ ಮುಂತಾದವರು ಭಾರತದ ಬಗ್ಗೆ ಅಪಾರ ಗೌರವವನ್ನು ವ್ಯಕ್ತಪಡಿಸಿದ್ದಾರೆ. ರೋಮಾ ರೋಲ್ಯಾಂಡ್ ಅವರು ‘ದಿ ಲೈಫ್ ಆಫ್ ಸ್ವಾಮಿ ವಿವೇಕಾನಂದ ಆಂಡ್ ದಿ ಯೂನಿವರ್ಸಲ್ ಗಾಸ್ಪೆಲ್’ ಎಂಬ ಪುಸ್ತಕವನ್ನೇ ಬರೆದಿದ್ದರೆ ಹೆಸ್ಸಿ ಹಾಗೂ ಕ್ಲೆಝಿಯೋ ತಮ್ಮ ಕೃತಿಗಳಲ್ಲಿ ಭಾರತದ ಪಾತ್ರಗಳನ್ನು ಸೃಷ್ಟಿ ಮಾಡಿದ್ದಾರೆ. ಇವರೆಲ್ಲ ಸಾಮಾನ್ಯ ವ್ಯಕ್ತಿಗಳಲ್ಲ. ಈ ಮೂವರೂ ಸಾಹಿತ್ಯಕ್ಕಾಗಿ ನೊಬೆಲ್ ಪಡೆದಿದ್ದಾರೆ. ಆದರೆ ಅರುಂಧತಿ ರಾಯ್, ವಿ.ಎಸ್. ನೈಪಾಲ್ ಅವರಂತಹವರು ಭಾರತವನ್ನು ಬೈದೇ ‘ಬುಕರ್’ ಪಡೆದರು. ಅರವಿಂದ ಅಡಿಗ ಹೊಸ ಸೇರ್ಪಡೆಯಷ್ಟೆ. ಅಷ್ಟಕ್ಕೂ ‘ಬುಕರ್’ ಕೊಡುವವರು ಭಾರತದ ಮಾಜಿ ಧಣಿಗಳು. ಬ್ರಿಟಿಷರಿಗೆ ಇಂದಿಗೂ ಭಾರತದ ಬಗ್ಗೆ ಕೀಳಭಿಪ್ರಾಯವಿದೆ. ಅಕ್ಟೋಬರ್ ೨೨ರಂದು ಯಶಸ್ವಿಯಾಗಿ ಉಡಾವಣೆ ಮಾಡಿದ ‘ಚಂದ್ರಯಾನ’ವನ್ನೇ ತೆಗೆದುಕೊಳ್ಳಿ. “ಪ್ರತಿ ಭಾರತೀಯನಿಗೂ ಮೂಲಭೂತ ಸೌಕರ್ಯವನ್ನೇ ಒದಗಿಸಲು ಸಾಧ್ಯವಾಗಿಲ್ಲ. ಅಂತಹವರಿಗೆ ಚಂದ್ರಯಾನ ಬೇರೆ ಬೇಕೆ?” ಎಂದು ಬಿಬಿಸಿ ಚಾನೆಲ್ ಟೀಕೆ ಮಾಡಿದೆ. ನಮ್ಮ ವಿeನಿಗಳು ೧೦೦ ಕೋಟಿ ಭಾರತೀಯರು ಹೆಮ್ಮೆಪಟ್ಟುಕೊಳ್ಳುವಂತಹ ಸಾಧನೆ ಮಾಡಿದ್ದರೂ ಅದರಲ್ಲೂ ಹುಳುಕು ಹುಡುತ್ತಿದೆ ಬಿಬಿಸಿ. ಅಡಿಗ ಕೂಡ ಅದೇ ವರ್ಗಕ್ಕೆ ಸೇರಿದವರಂತೆ ಕಾಣುತ್ತದೆ. ಪುಸ್ತಕವನ್ನು ಓದಿದ ನಂತರ ನಮ್ಮ ಕನ್ನಡಿಗ, ನಮ್ಮ ಮಂಗಳೂರು ಹುಡುಗ ಎಂಬ ಯಾವ ಅಭಿಮಾನಗಳೂ ಮೂಡುವುದಿಲ್ಲ. ಅರುಂಧತಿ ರಾಯ್ ಅವರಂತೆ ಬುಕರ್ ಪಡೆದ ಕೂಡಲೇ ತನಗೆ ಜಡ್ಜ್‌ಮೆಂಟ್ ಕೊಡುವ, ಎಲ್ಲದರ ಬಗ್ಗೆಯೂ ಅಭಿಪ್ರಾಯ ವ್ಯಕ್ತಪಡಿಸುವ ಅಧಿಕಾರ ಸಿಕ್ಕಿದೆ ಎಂಬಂತೆ ಅಡಿಗ ಈಗಾಗಲೇ ವರ್ತಿಸುತ್ತಿದ್ದಾರೆ. ಮಂಗಳೂರಿನಲ್ಲಿ ನಡೆದ ಚರ್ಚ್ ದಾಳಿ ತನಗೆ ಅತೀವ ನೋವುಂಟು ಮಾಡಿದೆ ಎಂದಿರುವ ಅಡಿಗ ಮತ್ತೊಬ್ಬ ತಥಾಕಥಿತ ಬುದ್ಧಿಜೀವಿಯಾಗುವ ಎಲ್ಲ ಲಕ್ಷಣಗಳೂ ಕಾಣುತ್ತಿವೆ.

Watch Out!

ಕೃಪೆ : ಪ್ರತಾಪ್ ಸಿಂಹ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ