ನನ್ನ ಬ್ಲಾಗ್ ಪಟ್ಟಿ

ಶನಿವಾರ, ಜುಲೈ 31, 2010

ದೋಷವಿದ್ದಿದ್ದು ಅವರ ಇಂಗ್ಲಿಷ್‌ನಲ್ಲಿ, ಗುಂಡಿಗೆಯಲ್ಲಲ್ಲ! ದೋಷವಿದ್ದಿದ್ದು ಅವರ ಇಂಗ್ಲಿಷ್‌ನಲ್ಲಿ, ಗುಂಡಿಗೆಯಲ್ಲಲ್ಲ!

ನವೆಂಬರ್ 26 ರಂದು ನಮ್ಮ ಮುಂಬೈ ಮೇಲೆ ನಡೆದ ದಾಳಿಯ ನಂತರ ಪಾಕಿಸ್ತಾನ ಯಾವ ನಖರಾ ತೋರುತ್ತಿದೆಯೋ ಅದೇ ಸೊಕ್ಕನ್ನು 2001ರಲ್ಲಿ ತಾಲಿಬಾನ್ ಕೂಡ ಪ್ರದರ್ಶಿಸಿತ್ತು. ‘ಸಾಕ್ಷ್ಯ ಕೊಡಿ, ನಮ್ಮ ನೆಲದಲ್ಲೇ ವಿಚಾರಣೆ ನಡೆಸುತ್ತೇವೆ’ಎಂದಿತ್ತು.

ನಮ್ಮ ಬಳಿಯಾದರೂ ಪಾಕಿಸ್ತಾನದ ಪಾತ್ರಕ್ಕೆ ಕನ್ನಡಿ ಹಿಡಿದಂತೆ ಕಸಬ್‌ನಾದರೂ ಇದ್ದಾನೆ. ಆದರೆ ಅಮೆರಿಕದ ಬಳಿ ಯಾವ ಸಾಕ್ಷ್ಯಗಳೂ ಇರಲಿಲ್ಲ. ಹಾಗಂತ ಅಮೆರಿಕದ ಅಧ್ಯಕ್ಷ ಜಾರ್ಜ್ ವಾಕರ್ ಬುಷ್ ಸಾಕ್ಷ್ಯಗಳನ್ನು ಕಲೆಹಾಕುತ್ತಾ ಕುಳಿತುಕೊಳ್ಳಲಿಲ್ಲ. 2001, ಸೆಪ್ಟೆಂಬರ್ 11ರ ದಾಳಿ ನಡೆದು 6 ದಿನಗಳ ಬಳಿಕ ಮಾಧ್ಯಮಗಳ ಮುಂದೆ ನಿಂತ ಬುಷ್, “ನಮ್ಮ ಶತ್ರುಗಳ್ಯಾರು, ಅವರಿಗೆ ಬೆಂಬಲ ನೀಡುತ್ತಿರುವವರ್‍ಯಾರು ಎಂದು ನಮಗೆ ಗೊತ್ತು. ಒಸಾಮಾ ಬಿನ್ ಲಾಡೆನ್‌ನೇ ಮುಖ್ಯ ಶಂಕಿತ. ಒಂದೋ ಲಾಡೆನ್ ಹಾಗೂ ಇತರ ಭಯೋತ್ಪಾದಕರನ್ನು ನಮಗೆ ಹಸ್ತಾಂತರ ಮಾಡಿ ಇಲ್ಲವೆ ಅಮೆರಿಕದ ದಾಳಿಗೆ ತುತ್ತಾಗಿ” ಎಂದರು.

ತಾಲಿಬಾನ್ ಬಗ್ಗಲಿಲ್ಲ.

“ನಮ್ಮ ನಿಲುವು ಸ್ಪಷ್ಟವಾಗಿದೆ. ಒಂದು ವೇಳೆ ಅಮೆರಿಕದ ಬಳಿ ಸಾಕ್ಷ್ಯಧಾರವಿದ್ದರೆ ಕೊಡಲಿ, ಒಸಾಮಾನನ್ನು ನಾವೇ ವಿಚಾರಣೆಗೆ ಒಳಪಡಿಸುತ್ತೇವೆ” ಎಂದರು ಪಾಕಿಸ್ತಾನದಲ್ಲಿದ್ದ ತಾಲಿಬಾನ್ ರಾಯಭಾರಿ ಅಬ್ದುಲ್ ಸಲೀಂ ಝಯೀಫ್. ಬುಷ್ ಮರು ಮಾತನಾಡಲಿಲ್ಲ. ಅಮೆರಿಕದ ಪಡೆಗಳು ಅರಬ್ಬೀ ಸಮುದ್ರದತ್ತ ಹೊರಟವು. ಅಮೆರಿಕದ ಮೇಲೆ ದಾಳಿ ನಡೆದು ತಿಂಗಳು ಕೂಡ ಆಗಿಲ್ಲ, “Operation Enduring Freedom” ಆರಂಭ ವಾಗಿಯೇ ಬಿಟ್ಟಿತು. “ಅಂತಹ ಸೋವಿಯತ್ ರಷ್ಯಾದವರೇ ಅಫ್ಘಾನಿಸ್ತಾನದಿಂದ ಕೈಸುಟ್ಟುಕೊಂಡು ಹೋಗಿದ್ದಾರೆ. ನೆರೆಯಲ್ಲೇ ಇದ್ದರೂ ತಾಲಿಬಾನಿಗಳನ್ನು ಮಣಿಸಲಾಗಲಿಲ್ಲ. ಇನ್ನು ಸಾವಿರಾರು ಮೈಲು ದೂರದಿಂದ ಬಂದು ಅಮೆರಿಕವೇನು ಮಾಡೀತು?” ಎಂದು ಕೆಲವರು ಅನುಮಾನ ವ್ಯಕ್ತಪಡಿಸಿದರು. ಅದಕ್ಕೆ ತಕ್ಕಂತೆ “ಲಾಡೆನ್ ನಮ್ಮ ಅತಿಥಿ. ಅತಿಥಿಗಳಿಗೆ ಆಶ್ರಯ, ಸತ್ಕಾರ ನೀಡು ಎನ್ನುತ್ತದೆ ನಮ್ಮ ಪುಶ್ತೂನ್ ಸಂಸ್ಕೃತಿ” ಎಂದ ತಾಲಿಬಾನ್ ಲಾಡೆನ್‌ನನ್ನು ಹಸ್ತಾಂತರ ಮಾಡುವುದಿಲ್ಲ, ಆತನ ತಂಟೆಗೆ ಬಂದರೆ ನಾವೂ ಸುಮ್ಮನಿರುವುದಿಲ್ಲ ಎಂಬ ಸಂದೇಶವನ್ನು ಮುಟ್ಟಿಸಿತು. ಹಾಗಾಗಿ ಅಮೆರಿಕಕ್ಕೆ ಮುಖಭಂಗ ಖಚಿತ ಎಂದು ಪತ್ರಕರ್ತರೂ ಬರೆದರು.

ಆದರೆ ಆಗಿದ್ದೇನು?

2001, ಅಕ್ಟೋಬರ್ 7ರಂದು ದಾಳಿ ಆರಂಭವಾಯಿತು. ಅಮೆರಿಕದ ‘ಕಾರ್ಪೆಟ್ ಬಾಂಬಿಂಗ್’ಗೆ (ನೂರಾರು ಬಾಂಬ್‌ಗಳನ್ನು ಒಮ್ಮೆಲೆ ಸುರಿಯುವುದು) ಅಫ್ಘಾನಿಸ್ತಾನದ ಬೆಟ್ಟ-ಗುಡ್ಡಗಳೇ ಧ್ವಂಸವಾಗತೊಡಗಿದವು. ಆಕ್ರಮಣ ಆರಂಭವಾಗಿ 7 ದಿನ ಕಳೆಯುವಷ್ಟರಲ್ಲಿ ಅಂದರೆ ಅಕ್ಟೋಬರ್ 14ರಂದು ಹೇಳಿಕೆಯೊಂದನ್ನು ಹೊರಡಿಸಿದ ತಾಲಿಬಾನ್, “ಒಂದು ವೇಳೆ ಅಮೆರಿಕ ಬಾಂಬ್ ದಾಳಿಯನ್ನು ನಿಲ್ಲಿಸಿ ಸಾಕ್ಷ್ಯ ಕೊಟ್ಟರೆ ವಿಚಾರಣೆ ನಡೆಸಲು ಲಾಡೆನ್ನನನ್ನು ಮೂರನೇ ರಾಷ್ಟ್ರಕ್ಕೆ ಹಸ್ತಾಂತರಿಸುತ್ತೇವೆ’ ಎಂದಿತು. ಅಮೆರಿಕದ ದಾಳಿ, ಅತಿಥಿ ಸತ್ಕಾರ ಮಾಡುವ ಪುಶ್ತೂನ್ ಸಂಸ್ಕೃತಿಯನ್ನೇ ಸಂಹಾರ ಮಾಡಿತ್ತು! “ಲಾಡೆನ್ ಅಪರಾಧಿಯೋ ಅಥವಾ ಅಮಾಯಕಯೋ ಎಂದು ಚರ್ಚೆ ನಡೆಸುವ ಅಗತ್ಯವಿಲ್ಲ. ಆತ ಅಪರಾಧಿ ಎಂದು ನಮಗೆ ಗೊತ್ತು” ಎಂದ ಬುಷ್, ತಾಲಿಬಾನ್ ಆಹ್ವಾನವನ್ನು ತಿರಸ್ಕರಿಸಿ ದಾಳಿಯನ್ನು ಮುಂದುವರಿಸಿದರು. ಇನ್ನೊಂದೆಡೆ ಜರ್ಮನಿ, ಫ್ರಾನ್ಸ್‌ನಂತಹ ಒಂದಿಷ್ಟು ಐರೋಪ್ಯ ಹಾಗೂ ಇತರ ರಾಷ್ಟ್ರಗಳು, ‘ವಿಶ್ವಸಂಸ್ಥೆಯ ಒಪ್ಪಿಗೆ ಪಡೆಯದೇ ಅಮೆರಿಕ ದಾಳಿ ನಡೆಸುತ್ತಿದೆ’ ಎಂದು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಸಭೆ ಕರೆದು ಅಮೆರಿಕವನ್ನು ತರಾಟೆಗೆ ತೆಗೆದು ಕೊಳ್ಳಲು, ದಾಳಿಯನ್ನು ನಿಲ್ಲಿಸುವಂತೆ ಒತ್ತಡ ಹೇರಲು ಮುಂದಾದವು. ಅವುಗಳ ಚರ್ಚೆ, ಮಾತುಕತೆ, ಪರಸ್ಪರ ಕಿತ್ತಾಟ ಮುಗಿಯುವಷ್ಟರ ವೇಳೆಗೆ ಆಫ್ಘನ್ ಯುದ್ಧವೇ ಕೊನೆಗೊಂಡಿತ್ತು! ತಾಲಿಬಾನ್ ಪರಾರಿಯಾಗಿತ್ತು. ಕಾಬೂಲ್ ಕೈವಶವಾಗಿತ್ತು. ೨೦೦೧, ಡಿಸೆಂಬರ್ ೨೦ರಂದು ನಿರ್ಧಾರವೊಂದನ್ನು ಕೈಗೊಂಡ ಭದ್ರತಾ ಮಂಡಳಿ, ‘ಅಫ್ಘಾನಿಸ್ತಾನದಲ್ಲಿ ಮಧ್ಯಂತರ ಸರಕಾರ ಸ್ಥಾಪಿ ಸಲು ಎಲ್ಲ ರಾಷ್ಟ್ರಗಳೂ ಸಹಕಾರ ನೀಡಬೇಕು’ ಎಂದಿತು, ಜತೆಗೆ ಅಂತಾರಾಷ್ಟ್ರೀಯ ಶಾಂತಿ ಪಾಲನಾ ಪಡೆಯೊಂದನ್ನು ರಚಿಸಿ ಅಫ್ಘಾನಿಸ್ತಾನಕ್ಕೆ ಕಳುಹಿಸಿತು.

ಇಂತಹ ಕೆಲಸವನ್ನು ಗುಂಡಿಗೆ ಇದ್ದವನು ಮಾಡುತ್ತಾನೆಯೇ ಹೊರತು, ನಮ್ಮಂಥವರಲ್ಲ.

“My Government will not bend before such a show of terrorism“. 1999, ಡಿಸೆಂಬರ್ 24ರಂದು ಇಂಡಿಯನ್ ಏರ್‌ಲೈನ್ಸ್‌ನ ಐಸಿ-814 ವಿಮಾನವನ್ನು ಕಂದಹಾರ್‌ಗೆ ಅಪಹರಣ ಮಾಡಿದಾಗ ಮರುದಿನ ಮಾಧ್ಯಮಗಳ ಮುಂದೆ ಹೀಗೆ ಹೇಳಿದ್ದರು ಆಗಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ. ಆದರೆ ಇಂತಹ ಹೇಳಿಕೆ ಹೊರಬಿದ್ದ ಬೆನ್ನಲ್ಲೇ ಭಯೋತ್ಪಾದಕರ ಜತೆ ಸಂಧಾನ ಮಾತುಕತೆ ಆರಂಭವಾಯಿತು. ಭಾರತದ ಜೈಲುಗಳಲ್ಲಿರುವ ಮೂವತ್ತೈದು ಭಯೋತ್ಪಾದಕರನ್ನು ಬಿಟ್ಟರೆ ಹಾಗೂ 20 ಕೋಟಿ ಡಾಲರ್ ಹಣ ನೀಡಿದರೆ ಮಾತ್ರ ಪ್ರಯಾಣಿಕರನ್ನು ಬಿಡುಗಡೆ ಮಾಡುವುದಾಗಿ ಅಪಹರಣಕಾರರು ಪೂರ್ವ ಷರತ್ತು ಹಾಕಿದರು. ಆ ವಿಷಯದಲ್ಲಿ ಸರಕಾರ ಚೌಕಾಶಿ ಆರಂಭಿಸಿತು. ಇತ್ತ ಸಿಟ್ಟಿಗೆದ್ದ ಪ್ರಯಾಣಿಕರ ಕುಟುಂಬದವರು ಹಾಗೂ ಸಂಬಂಧಿಕರು ಸರಕಾರ ವಿಳಂಬ ಮಾಡುತ್ತಿದೆಯೆಂದು ಆರೋಪಿಸಿ ಪ್ರಧಾನಿ ನಿವಾಸದ ಮೇಲೆಯೇ ಮುಗಿಬಿದ್ದರು. ಹೀಗೆ ಒತ್ತಡಕ್ಕೊಳಗಾದ ವಾಜಪೇಯಿಯವರು ಮೌಲಾನಾ ಮೊಹಮದ್ ಮಸೂದ್ ಅಜರ್, ಮುಷ್ತಾಕ್ ಅಹ್ಮದ್ ಝರ್ಗಾರ್ ಮತ್ತು ಅಹ್ಮದ್ ಉಮರ್ ಸಯೀದ್ ಷೇಕ್ ಮೊದಲಾದ ಮೂವರು ಭಯೋತ್ಪಾದಕರನ್ನು ಬಿಡುಗಡೆ ಮಾಡಲೊಪ್ಪಿದರು. ಡಿಸೆಂಬರ್ 30ರಂದು ವಿದೇಶಾಂಗ ಸಚಿವ ಜಸ್ವಂತ್ ಸಿಂಗ್ ಸ್ವತಃ ಭಯೋತ್ಪಾದಕರನ್ನು ಕರೆದೊಯ್ದು ಕಂದಹಾರ್‌ಗೆ ಬಿಟ್ಟು, 31ರಂದು 154 ಪ್ರಯಾಣಿಕರನ್ನು ಬಿಡಿಸಿಕೊಂಡು ಬಂದರು. ಇದು ಆರೆಸ್ಸೆಸ್‌ನ ಆಗಿನ ಸರಸಂಘಚಾಲಕರಾಗಿದ್ದ ರಾಜೇಂದ್ರ ಸಿಂಗ್ ಅವರನ್ನು ಎಷ್ಟು ಕುಪಿತಗೊಳಿಸಿತೆಂದರೆ “It’s an act of Hindu cowardice” ಎಂದು ಕಟುವಾಗಿ ಟೀಕಿಸಿದರು. ಆದರೆ ವಾಜಪೇಯಿಯವರು ಅಂದು ಸಂದಿಗ್ಧ ಸ್ಥಿತಿಯಲ್ಲಿದ್ದರು. ಒಂದೆಡೆ ಪ್ರಯಾಣಿಕರ ಸಂಬಂಧಿಕರ ಕೋಪ-ತಾಪ, ಮತ್ತೊಂದೆಡೆ ಅತ್ತು-ಕರೆಯುತ್ತಿರುವ ಮುಖಗಳನ್ನೇ ತೋರಿಸಿ ಇಡೀ ದೇಶವಾಸಿಗಳು ಕಣ್ಣೀರು ಹಾಕುವಂತೆ ಮಾಡುತ್ತಿದ್ದ ಮಾಧ್ಯಮಗಳು. ಜತೆಗೆ ೧೯೯೮ರಲ್ಲಿ ಅಣು ಪರೀಕ್ಷೆ ನಡೆಸಿದ್ದಕ್ಕಾಗಿ ಕುಪಿತಗೊಂಡಿದ್ದ ಅಮೆರಿಕ ಹಾಗೂ ಜಗತ್ತಿನ ಇತರ ರಾಷ್ಟ್ರಗಳ ಭಯ. ಅಂತಹ ಸಂದರ್ಭದಲ್ಲಿ ಆಡಳಿತದ ಅಷ್ಟೇನೂ ಅನುಭವವಿಲ್ಲದ ವಾಜಪೇಯಿ ಏನುತಾನೇ ಮಾಡಿಯಾರು? ‘ನನ್ನ ಸರಕಾರ ಭಯೋತ್ಪಾದನೆಯ ಇಂತಹ ಪ್ರದರ್ಶನದ ಮುಂದೆ ಮಂಡಿಯೂರುವುದಿಲ್ಲ’ ಎಂದಿದ್ದ ವಾಜಪೇಯಿ ಮೆತ್ತಗಾಗಿ, ಬೇಡಿಕೆಗಳಿಗೆ ಮಣಿದರು.

ಈ ಘಟನೆ ನಡೆದು ೯ ವರ್ಷಗಳ ನಂತರ ಮೊನ್ನೆ ಸಂಭವಿಸಿದ ನವೆಂಬರ್ ೨೬ರ ಮುಂಬೈ ದಾಳಿಯನ್ನೇ ತೆಗೆದುಕೊಳ್ಳಿ. ಇಡೀ ದೇಶವೇ ಒಕ್ಕೊರಲಿನಿಂದ ಹೇಳಿತು, ಯುದ್ಧವಾದರೂ ಸರಿ ಪಾಕಿಸ್ತಾನವನ್ನು ಮಟ್ಟಹಾಕಿ ಅಂತ. ಅಮೆರಿಕದ ನೂತನ ಅಧ್ಯಕ್ಷರಾಗಿ ಚುನಾಯಿತರಾಗಿದ್ದ ಬರಾಕ್ ಒಬಾಮ ಕೂಡ “ಪ್ರತಿಯೊಂದು ಸಾರ್ವಭೌಮ ರಾಷ್ಟ್ರಗಳಿಗೂ ತಮ್ಮನ್ನು ರಕ್ಷಿಸಿಕೊಳ್ಳುವ ಹಕ್ಕಿದೆ” ಎನ್ನುವ ಮೂಲಕ ಪಾಕಿಸ್ತಾನದ ಮೇಲೆ ಆಕ್ರಮಣ ಮಾಡಬಹುದು ಎಂಬ ಸೂಚನೆ ನೀಡಿದರು. ಆದರೆ ಪಾಕಿಸ್ತಾನದ ಮೇಲೆ ಬಾಂಬ್ ಹಾಕುವುದು ಬಿಡಿ, ಭಯೋತ್ಪಾದಕರ ತರಬೇತಿ ಶಿಬಿರಗಳ ಮೇಲೆ ಒಂದು ಸಣ್ಣ ಪಟಾಕಿಯನ್ನು ಬಿಸಾಡಲೂ ನಮ್ಮ ಕೇಂದ್ರ ಸರಕಾರಕ್ಕೆ ಆಗಲಿಲ್ಲ! ಏಳು ಗುಂಡುಗಳು ಹೊಟ್ಟೆಯನ್ನು ಹೊಕ್ಕಿದ್ದರೂ ಕಸಬ್‌ನ ಬಂದೂಕನ್ನು ಕೈಬಿಡದ ತುಕಾರಾಮ್ ಒಂಬ್ಳೆ ದೇಶವೇ ಮೆಚ್ಚುವ ಶೌರ್ಯ ತೋರಿ ಪಾಕಿಸ್ತಾನದ ಪಾತ್ರಕ್ಕೆ ಸಾಕ್ಷ್ಯ ಒದಗಿಸಿಕೊಟ್ಟರು. ಆದರೂ ದಾಳಿ ನಡೆದ ಮೂರು ತಿಂಗಳಾದರೂ ನಮ್ಮಿಂದ ಏನೂ ಮಾಡಲಾಗಿಲ್ಲ. ಈಗಾಗಲೇ ಪ್ರಧಾನಿ ಹಾಸಿಗೆ ಹಿಡಿದಿದ್ದಾರೆ, ಇನ್ನು ಸ್ವಲ್ಪ ದಿನ ಕಳೆದರೆ ಬಜೆಟ್ ಎನ್ನುತ್ತಾರೆ, ಅದು ಮುಗಿಯುವಷ್ಟರಲ್ಲಿ ಚುನಾವಣೆ ಘೋಷಣೆಯಾಗುತ್ತದೆ.

ಇಂತಹ ನಮ್ಮ ಜನರು, ನಾಯಕರಿಗೆ ಜಾರ್ಜ್ ಬುಷ್ ಅವರನ್ನು ಟೀಕಿಸುವ ನೈತಿಕ ಹಕ್ಕಿದೆಯೇ?

ಜಾರ್ಜ್ ಬುಷ್ ಅವರು ಅಫ್ಘಾನಿಸ್ತಾನದ ಮೇಲೆ ಆಕ್ರ ಮಣ ಮಾಡಿದ್ದು ಪ್ರತೀಕಾರ ತೆಗೆದುಕೊಳ್ಳುವುದಕ್ಕಾಗಿಯೇ ಎಂಬುದರಲ್ಲಿ ಎರಡು ಮಾತಿಲ್ಲ. ಅಷ್ಟಕ್ಕೂ ಒಬ್ಬ ಸಾಮಾನ್ಯ ವ್ಯಕ್ತಿಯಿರಬಹುದು, ಒಂದು ರಾಷ್ಟ್ರದ ನಾಯಕನಿರಬಹುದು ಪ್ರತಿಫಲದ ನಿರೀಕ್ಷೆಯಿಲ್ಲದೆ ತನ್ನ ಹಣ, ಬಲವನ್ನು ವ್ಯಯಮಾಡಿ ಯಾರದ್ದೋ ಮೇಲೆ ಯುದ್ಧ ಮಾಡುವುದಿಲ್ಲ. ಹಾಗಾಗಿ ಅಮೆರಿಕ ತನ್ನ ಹಿತಾಸಕ್ತಿಗಾಗಿ ಅಫ್ಘಾನಿಸ್ತಾನ, ಇರಾಕ್ ಮೇಲೆ ದಾಳಿ ಮಾಡಿತು ಎಂದು ದೂರುವುದರಲ್ಲಿ ಯಾವ ಅರ್ಥವೂ ಇಲ್ಲ. ಆದರೆ ಬುಷ್ ಅಫ್ಘಾನಿಸ್ತಾನದ ಮೇಲೆ ದಾಳಿ ಮಾಡಿದ್ದರಿಂದ ಭಾರತಕ್ಕಾದ ಲಾಭ ಗಳೇನು ಎಂಬುದರ ಬಗ್ಗೆ ಎಂದಾದರೂ ಯೋಚಿಸಿದ್ದೀರಾ?

ಹತ್ತು, ಹದಿನೈದು ವರ್ಷಗಳ ಹಿಂದೆ ಕಾಶ್ಮೀರದಲ್ಲಿ ಯಾವ ಪರಿಸ್ಥಿತಿ ಇತ್ತು ಯೋಚನೆ ಮಾಡಿ. ನಮ್ಮ ಕಾಶ್ಮೀರಿ ಪಂಡಿತರನ್ನು ಕಣಿವೆಯಿಂದ ಸಂಪೂರ್ಣವಾಗಿ ಹೊರಹಾಕಿದ ನಂತರ ಭಯೋತ್ಪಾದಕರ ಮುಂದಿದ್ದ ಏಕೈಕ ಸವಾಲು ನಮ್ಮ ಸೈನಿಕರು. ಆಗ ಪತ್ರಿಕೆಗಳಲ್ಲಿ ಪ್ರಕಟವಾಗುತ್ತಿದ್ದ ವರದಿಗಳೆಂಥವು? “ಸೈನಿಕರ ಜತೆ ಕಾದಾಟ, ಇಬ್ಬರು ವಿದೇಶಿ ಬಾಡಿಗೆ ಹಂತಕರ ಹತ್ಯೆ”, “ಒಬ್ಬ ಸೈನಿಕ ಹತ್ಯೆ, ವಿದೇಶಿ ಬಾಡಿಗೆ ಹಂತಕರು ಪರಾರಿ”. ಈ ವಿದೇಶಿ ಬಾಡಿಗೆ ಹಂತಕರು ಅಥವಾ Foreign Mercenaries ಯಾರು? ಇವರು ದುಡ್ಡು ಅಥವಾ ಇನ್ನಾವುದೋ ಉದ್ದೇಶ ಸಾಧನೆಗಾಗಿ ಕಾಶ್ಮೀರಕ್ಕೆ ಆಗಮಿಸುತ್ತಿದ್ದು ಯಾವ ರಾಷ್ಟ್ರದಿಂದ? ಇವತ್ತು ಪಾಕಿಸ್ತಾನವನ್ನು Epicenter of terrorism ಅಥವಾ ಭಯೋತ್ಪಾದನೆಯ ಕೇಂದ್ರಸ್ಥಾನ ಎಂದು ಎಲ್ಲರೂ ಹೇಳುತ್ತಿದ್ದಾರೆ. ಆದರೆ ಹತ್ತು ವರ್ಷಗಳ ಹಿಂದೆ ಅಂತಹ ಅಪಖ್ಯಾತಿ ಅಫ್ಘಾನಿಸ್ತಾನಕ್ಕಿತ್ತು. ಕಾಶ್ಮೀರಕ್ಕೆ ಬಂದು ಹೋರಾಡುತ್ತಿದ್ದ ಬಾಡಿಗೆ ಹಂತಕರಿಗೆ ತರಬೇತಿ ನೀಡುತ್ತಿದ್ದುದು ಐಎಸ್‌ಐ ಹಾಗೂ ತಾಲಿಬಾನ್. ಇಂದಿಗೂ ಕಾಶ್ಮೀರದಲ್ಲಿ ಭಯೋತ್ಪಾದಕರು ಮತ್ತು ನಮ್ಮ ರಕ್ಷಣಾ ಪಡೆಗಳ ನಡುವೆ ಕಾಳಗ ನಡೆಯುತ್ತದೆಯಾದರೂ ಕಳೆದ ಏಳೆಂಟು ವರ್ಷಗಳಿಂದ “ವಿದೇಶಿ ಬಾಡಿಗೆ ಹಂತಕರು” ಎಂಬ ಹೆಸರು ಕಾಣಿಸುವುದಿಲ್ಲ. ಅದಕ್ಕೆ ಕಾರಣವೇನು? ೨೦೦೧, ಅಕ್ಟೋಬರ್ ೭ರಂದು ಜಾರ್ಜ್ ಬುಷ್ ಅಫ್ಘಾನಿಸ್ತಾನದ ಮೇಲೆ ಆಕ್ರಮಣ ಮಾಡಿದ ಕಾರಣ ತಾಲಿಬಾನಿಗಳು ಮೊದಲು ತಮ್ಮ ಸ್ವಂತ ನೆಲೆಯನ್ನೇ ಉಳಿಸಿಕೊಳ್ಳಲು ಹೋರಾಡಬೇಕಾಗಿ ಬಂತು. ಕಾಶ್ಮೀರಕ್ಕೆ ಬಂದು ಹೋರಾಡುವ ಮಾತು ಹಾಗಿರಲಿ, ಅಫ್ಘಾನಿಸ್ತಾನವೇ ಕೈಬಿಟ್ಟು ಹೋಗುವ ಸ್ಥಿತಿ ಎದುರಾಯಿತು. ಹಾಗಾಗಿ ವಿದೇಶಿ ಭಯೋತ್ಪಾದಕರು ಕಾಶ್ಮೀರಕ್ಕೆ ಬರುವುದು ನಿಂತುಹೋಯಿತು ಹಾಗೂ ಕಾಶ್ಮೀರದಲ್ಲಿ ಪರಿಸ್ಥಿತಿ ತಿಳಿಗೊಳ್ಳತೊಡಗಿತು. ಅತ್ತ ಕೇವಲ ಎರಡೂವರೆ ತಿಂಗಳಲ್ಲಿ ಅಮೆರಿಕದ ಎದುರು ಸೋತುಸುಣ್ಣಾದ ತಾಲಿಬಾನಿಗಳು ಜೀವ ಉಳಿಸಿಕೊಳ್ಳುವುದೇ ದೊಡ್ಡ ವಿಷಯವಾಯಿತು. ಪ್ರಾಣಭಯದಿಂದ ಪಾಕಿಸ್ತಾನದ ಗಡಿಯೊಳಕ್ಕೆ ನುಸುಳಿ ಪರ್ವತಶ್ರೇಣಿಗಳಲ್ಲಿ ಅಡಗಿ ಕುಳಿತರು. ಅವರನ್ನೂ ಬೆನ್ನಟ್ಟಿ ಹೋದ ಬುಷ್, ತನ್ನ ಗಡಿಯನ್ನು ಮುಚ್ಚುವಂತೆ ಪಾಕಿಸ್ತಾನಕ್ಕೆ ಸೂಚಿಸಿದರು. ಪಾಕಿಸ್ತಾನ ತನ್ನ ಸೈನಿಕರನ್ನು ಆಫ್ಘನ್ ಗಡಿಯಲ್ಲಿ ನಿಯೋಜನೆ ಮಾಡಬೇಕಾಗಿ ಬಂತು. ಹಾಗೆ ಬುಷ್ ಅವರು ಪಾಕಿಸ್ತಾನ ತನ್ನ ಪಡೆಯನ್ನು ಅಫ್ಘಾನಿಸ್ತಾನದ ಗಡಿಯಲ್ಲಿ ನಿಯೋಜನೆ ಮಾಡುವಂತೆ ಮಾಡಿದ ಕಾರಣ, ನಮ್ಮ ಸೈನಿಕರತ್ತ ಗುಂಡುಹಾರಿಸಿ ಭಯೋತ್ಪಾದಕರನ್ನು ಭಾರತದೊಳಕ್ಕೆ ನುಸುಳಿಸುತ್ತಿದ್ದ ಪಾಕ್ ಸೇನೆಯ ಕುತಂತ್ರಕ್ಕೂ ಕಡಿವಾಣ ಬಿತ್ತು.

ಇದರ ಪರಿಣಾಮವಾಗಿಯೇ ಭಯೋತ್ಪಾದಕರ ಉಪಟಳ ವಿಲ್ಲದೆ ೨೦೦೨ರಲ್ಲಿ ವಾಜಪೇಯಿ ಸರಕಾರ ಕಾಶ್ಮೀರದಲ್ಲಿ ಮೊಟ್ಟ ಮೊದಲ ಬಾರಿಗೆ ಮುಕ್ತ ಹಾಗೂ ನ್ಯಾಯಸಮ್ಮತ ವಿಧಾನಸಭೆ ಚುನಾವಣೆಗಳನ್ನು ನಡೆಸಲು ಸಾಧ್ಯವಾಯಿತು. ಪ್ರತ್ಯೇಕತಾವಾದಿಗಳ ಬಹಿಷ್ಕಾರ ಕರೆಯ ಹೊರತಾಗಿಯೂ ಕಳೆದ ಡಿಸೆಂಬರ್‌ನಲ್ಲಿ ಮತ್ತೆ ವಿಧಾನಸಭೆ ಚುನಾವಣೆಗಳನ್ನು ನಡೆಸಲು ಸಾಧ್ಯವಾಗಿದ್ದರೆ ಅದರ ಹಿಂದೆಯೇ ಇಂತಹ ಅಂಶಗಳ ಕಾಣಿಕೆಯಿದೆ. ಕಾಶ್ಮೀರ ಸಿಡಿದು ಸ್ವತಂತ್ರವಾಗದಂತೆ ತಡೆದಿದ್ದು ಖಂಡಿತ ನಮ್ಮ ರಕ್ಷಣಾ ಪಡೆಗಳೇ. ಆದರೆ ಇಂದು ಕಾಶ್ಮೀರದಲ್ಲಿ ನಿರ್ಮಾಣವಾಗಿರುವ ತಿಳಿಯಾದ ಪರಿಸ್ಥಿತಿಗೆ ತಾಲಿಬಾನನ್ನು ಅಮೆರಿಕ ಸದೆ ಬಡಿದಿದ್ದು ಹಾಗೂ ಪಾಕಿಸ್ತಾನಕ್ಕೆ ಕಡಿವಾಣ ಹಾಕಿರುವುದು ಕಾರಣವೇ ಹೊರತು ನಮ್ಮ ಪ್ರಧಾನಿ ಆರಂಭಿಸಿದ ಮುಜಫರಾಬಾದ್ ರೈಲು ಸಂಚಾರವಾಗಲಿ, ಅಭಿವೃದ್ಧಿ ಪ್ಯಾಕೇಜ್‌ಗಳಾಗಲಿ ಅಥವಾ ಇನ್ನಾವುದೇ ‘ಸಿಬಿಎಂ’ಗಳಾಗಲಿ (ವಿಶ್ವಾಸ ಮೂಡಿಸುವ ಕ್ರಮಗಳು) ಅಲ್ಲ.

ಇದಿಷ್ಟೇ ಅಲ್ಲ. ತಾಲಿಬಾನನ್ನು ಮಟ್ಟಹಾಕಿದ ನಂತರ ಹಮೀದ್ ಕರ್ಜಾಯಿ ನೇತೃತ್ವದಲ್ಲಿ ಅಫ್ಘಾನಿಸ್ತಾನದಲ್ಲಿ ಒಂದು ಪ್ರಜಾತಾಂತ್ರಿಕ ಸರಕಾರ ಸ್ಥಾಪನೆಯಾಗಿದೆ. ಅಲ್ಲಿನ ಹೆದ್ದಾರಿ ಹಾಗೂ ಸಂಪರ್ಕ ಜಾಲಗಳ ನಿರ್ಮಾಣ ಕಾರ್ಯದ ಗುತ್ತಿಗೆಗಳು ಭಾರತದ ಕಂಪನಿಗಳಿಗೆ ದೊರೆತಿವೆ. ನಮ್ಮ ಎಂಜನಿಯರ್‌ಗಳು ಹಾಗೂ ಕಾರ್ಮಿಕರಿಗೆ ಅಲ್ಲಿ ಉದ್ಯೋಗ ದೊರೆತಂತಾಗಿದೆ. ಆ ರಾಷ್ಟ್ರದ ಪುನರ್‌ನಿರ್ಮಾಣ ಕಾರ್ಯದಲ್ಲಿ ತೊಡಗಿರುವುದರಿಂದ ಅಫ್ಘಾನಿಸ್ತಾನದ ಜತೆ ಭಾರತ ಉತ್ತಮ ಬಾಂಧವ್ಯ ಹೊಂದು ವಂತಾಗಿದೆ. ತಾಲಿಬಾನ್ ಆಡಳಿತವಿದ್ದಾಗ ಅಫ್ಘಾನಿಸ್ತಾನ ಪಾಕ್‌ಗೆ ಮಿತ್ರ ಹಾಗೂ ಭಾರತದ ಪಾಲಿಗೆ ಕಂಟಕವಾಗಿತ್ತು. ಆದರೆ ಅಮೆರಿಕದ ಕೈವಶವಾದ ಮೇಲೆ ಅಫ್ಘಾನಿಸ್ತಾನ ಪಾಕ್‌ಗೆ ಕಂಟಕ ಹಾಗೂ ಭಾರತಕ್ಕೆ ಮಿತ್ರರಾಷ್ಟ್ರವಾಗಿದೆ. ಅಫ್ಘಾನಿಸ್ತಾನದ ಮೂಲಕ ಭಾರತ ತನಗೆ ಅಪಾಯವೊಡ್ಡುತ್ತಿದೆ, ಬಲೂಚಿಸ್ತಾನದಲ್ಲಿ ಬುಡಕಟ್ಟು ಜನಾಂಗಗಳನ್ನು ಎತ್ತಿಕಟ್ಟುತ್ತಿದೆ ಎಂದು ಪಾಕ್ ಹೆದರುತ್ತಿದೆ. ಇದರಿಂದ ಅದು ಎಷ್ಟು ಹತಾಶಗೊಂಡಿದೆಯೆಂದರೆ ಕಾಬೂಲ್‌ನಲ್ಲಿರುವ ನಮ್ಮ ರಾಯಭಾರ ಕಚೇರಿಯ ಮೇಲೆ ಬಾಂಬ್ ದಾಳಿ ಮಾಡುವಷ್ಟು ಅದರ ಕೋಪ ನೆತ್ತಿಗೇರಿದೆ.

ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಆಡಳಿತವಿದ್ದಾಗ, ಒಬ್ಬ ಅಪ್ರಾಪ್ತ ವಯಸ್ಕ ಬಾಲಕಿ ಇರಬಹುದು, ಮುದುಕಿ ಆಗಿರಬಹುದು. ಆಕೆ ಮನೆಯಿಂದ ಹೊರಹೋಗುವಾಗ ಅಪ್ಪ, ಅಣ್ಣ-ತಮ್ಮ ಅಥವಾ ಗಂಡ ಹೀಗೆ ಯಾರಾದರೂ ಒಬ್ಬ ಗಂಡಸು ಜತೆಯಲ್ಲಿರಬೇಕಿತ್ತು. ಒಬ್ಬಂಟಿಯಾಗಿ ಹೊರಬಂದರೆ ತಾಲಿಬಾನಿಗಳು ಗುಂಡಿಟ್ಟು ಕೊಲೆ ಗೈಯ್ಯುತ್ತಿದ್ದರು. ಗಂಡಸರು ಕಡ್ಡಾಯವಾಗಿ ಗಡ್ಡ ಬೆಳೆಸಬೇಕಿತ್ತು. ಮಹಿಳೆಯರು ಬುರ್ಖಾವಿಲ್ಲದೆ ಓಡಾಡುವಂತಿರ ಲಿಲ್ಲ. ನೀವೇ ಯೋಚನೆ ಮಾಡಿ, ಈಗ್ಗೆ ಕೆಲವೇ ವರ್ಷಗಳ ಹಿಂದೆ ಕಾಶ್ಮೀರದಲ್ಲಿ ಬುರ್ಖಾ ಹಾಕದಿದ್ದ ಕಾಲೇಜು ವಿದ್ಯಾರ್ಥಿನಿಯರ ಮೇಲೆ ಹಲ್ಲೆ, ಅವರ ತಲೆ ಬೋಳಿಸುವ ಘಟನೆಗಳು ಜರುಗುತ್ತಿದ್ದವು. ಅದು ತಾಲಿಬಾನ್ ಆಡ ಳಿತದ ಲಕ್ಷಣವಲ್ಲವೆ? ಇಂದು ಅಂತಹ ಯಾವ ಅವಘಢಗಳೂ ಸಂಭವಿಸುತ್ತಿಲ್ಲ. ಏಕೆಂದರೆ ಬುಷ್ ಅಫ್ಘಾನಿಸ್ತಾನದಲ್ಲೇ ತಾಲಿ ಬಾನನ್ನು ಮಟ್ಟಹಾಕಿದ್ದರಿಂದ ಕಾಶ್ಮೀರದ ತಾಲಿಬಾನೀಕರಣಕ್ಕೂ ಕಡಿವಾಣ ಬಿದ್ದಿದೆ.

ಇನ್ನು ಇರಾಕ್ ಮೇಲೆ ಅಮೆರಿಕ ಮಾಡಿದ ದಾಳಿ, ಹೇಳಿದ ಸುಳ್ಳುಗಳನ್ನು ತೆಗೆದುಕೊಂಡು ನಾವೇನು ಮಾಡಬೇಕು?

ಅಷ್ಟಕ್ಕೂ ಇರಾಕ್‌ನ ಬೆಂಬಲಕ್ಕೆ ನಿಲ್ಲಲು ಸದ್ದಾಂ ಹುಸೇನ್ ಅವರೇನು ಸಾಧು-ಸಂತರಾಗಿರಲಿಲ್ಲ. ಸ್ವಂತ ಅಳಿಯಂದಿರನ್ನೇ ಕೊಲ್ಲಿಸಲು ಹೇಸದ ಆತ ೬ ಲಕ್ಷ ಕುರ್ದಿಶ್ ಮುಸ್ಲಿಮರನ್ನೇ ಮಾರಣ ಹೋಮ ಮಾಡಿಸಿದ್ದ. ಇತ್ತ ಅಣ್ವಸ್ತ್ರ ಹೊಂದಲು ಹವಣಿಸುತ್ತಿರುವ ಇರಾನ್‌ಗೆ ಬುಷ್ ಕಡಿವಾಣ ಹಾಕಿದ್ದರಿಂದ ಪರೋಕ್ಷವಾಗಿ ಭಾರತಕ್ಕೂ ಲಾಭವಾಗಿದೆ. ಒಂದು ವೇಳೆ, ಇರಾನ್ ಕೂಡ ಅಣ್ವಸ್ತ್ರ ಹೊಂದಿದ್ದರೆ ಅರಬ್ಬಿ ಸಮುದ್ರದೆಡೆಯಲ್ಲಿರುವ ಭಾರತದ ಮತ್ತೊಂದು ನೆರೆಯ ರಾಷ್ಟ್ರ ಕೂಡ ಅಣ್ವಸ್ತ್ರ ಹೊಂದಿದಂತಾಗುತಿತ್ತು. ಅಕಸ್ಮಾತ್ ಭಾರತ-ಪಾಕಿಸ್ತಾನದ ನಡುವೆ ಸಂಘರ್ಷವೇರ್ಪಟ್ಟರೆ ಇರಾನ್ ಯಾರನ್ನು ಬೆಂಬಲಿಸುತ್ತಿತ್ತು? ಮತ್ತೊಂದು ಇಸ್ಲಾಮಿಕ್ ರಾಷ್ಟ್ರವಾದ ಪಾಕಿಸ್ತಾನವನ್ನು ಬೆಂಬಲಿಸುತ್ತಿತ್ತೇ ಹೊರತು ಭಾರತವನ್ನಲ್ಲ. ಈ ಹಿನ್ನೆಲೆಯಲ್ಲಿ ಬುಷ್ ಹಾಕಿದ ಕಡಿವಾಣದಿಂದ ಭಾರತಕ್ಕೂ ಅನುಕೂಲವಾಗಿದೆ.

ಬುಷ್ ನೇರವಾಗಿಯೂ ಭಾರತಕ್ಕೆ ಹಲವಾರು ಅನುಕೂಲ ಗಳನ್ನು ಮಾಡಿಕೊಟ್ಟಿದ್ದಾರೆ.

ಯಾರೇನೇ ಬೊಬ್ಬೆ ಹಾಕಿದರೂ ನಮ್ಮ ಜತೆ ಮಾಡಿಕೊಂಡ ಅಣು ಸಹಕಾರ ಒಪ್ಪಂದದ ಹಿಂದೆ ಭಾರತವನ್ನು ಚೀನಾಕ್ಕೆ ಪ್ರತಿಸ್ಪರ್ಧಿಯಾಗಿ ಬೆಳೆಸಬೇಕೆಂಬ ಅಮೆರಿಕದ ಉದ್ದೇಶ ಇದ್ದೇ ಇದೆ. ಒಂದು ವೇಳೆ ಟೀಕಾಕಾರರು ಹೇಳುತ್ತಿರುವಂತೆ ಅಣು ಒಪ್ಪಂದ ಭಾರತಕ್ಕೆ ಮಾರಕ ಎನ್ನುವುದಾದರೆ ಅಂತಾರಾಷ್ಟ್ರೀಯ ಅಣುಶಕ್ತಿ ಏಜೆನ್ಸಿಯಲ್ಲಿ (ಐಎಇಎ) ಚೀನಾವೇಕೆ ಒಪ್ಪಂದಕ್ಕೆ ವಿರೋಧ ವ್ಯಕ್ತಪಡಿಸುತ್ತಿತ್ತು? ಪಾಕಿಸ್ತಾನದ ಜತೆ ತಾನೂ ಕೂಡ ಅಂತಹದ್ದೇ ಒಪ್ಪಂದ ಮಾಡಿಕೊಳ್ಳಲು ಅವಕಾಶ ನೀಡಬೇಕು ಎಂದು ಚೀನಾವೇಕೆ ಒತ್ತಾಯಿಸುತ್ತಿತ್ತು? ಕ್ಲಿಂಟನ್ ಅವರಂತೆ ‘ಸಿಟಿಬಿಟಿ’ಯೆಂಬ ಬೆದರುಗೊಂಬೆಯನ್ನಿಟ್ಟುಕೊಂಡು ಆಟವಾಡಿಸದೇ ಅಣುಪ್ರಸರಣ ನಿಷೇಧ ಒಪ್ಪಂದಕ್ಕೆ ಸಹಿಹಾಕದಿದ್ದರೂ ಭಾರತವೊಂದು ಅಣ್ವಸ್ತ್ರ ರಾಷ್ಟ್ರವೆಂದು ಒಪ್ಪಿಕೊಳ್ಳುವ ಔದಾರ್ಯವನ್ನು ಬುಷ್ ತೋರಿದರು. ಕಲ್ಲಿದ್ದಲು ಮುಂತಾದ ಹಾನಿಕಾರಕ ಶಕ್ತಿಮೂಲಗಳು ಹಾಗೂ ತೈಲದ ಮೇಲಿನ ಅತಿಯಾದ ಅವಲಂಬನೆಯನ್ನು ಬಿಡಿ. ಜೈವಿಕ ಇಂಧನವನ್ನು ಅಭಿವೃದ್ಧಿಪಡಿಸಿ, “Go Green” ಎಂದು ಭಾರತಕ್ಕೆ ಬುದ್ಧಿ ಹೇಳಿದ್ದೂ ಕೂಡ ಬುಷ್ ಆಡಳಿತವೇ. ಔಟ್‌ಸೋರ್ಸಿಂಗ್ (ವ್ಯಾಪಾರ ಹೊರಗುತ್ತಿಗೆ) ವಿರುದ್ಧ ಅಮೆರಿಕದಾದ್ಯಂತ ವಿರೋಧ ವ್ಯಕ್ತವಾದರೂ, ಕ್ಯಾಲಿಫೋರ್ನಿಯಾದಂತಹ ರಾಜ್ಯ ಕಾನೂನನ್ನೇ ತರಲು ಹೊರಟರೂ ಬುಷ್ ಮಾತ್ರ ಔಟ್‌ಸೋರ್ಸಿಂಗ್ ಪರವಾಗಿ ನಿಂತರು. ಇಲ್ಲದೇ ಹೋಗಿದ್ದರೆ ನಮ್ಮ ಸಾಫ್ಟ್‌ವೇರ್ ಎಂಜಿನಿಯರ್‌ಗಳೂ ಎಂದೋ ಕೆಲಸ ಕಳೆದುಕೊಳ್ಳುತ್ತಿದ್ದರು.

ಬುಷ್ ಮೇಲೆ ಸಾವಿರ ಜೋಕುಗಳು ಹುಟ್ಟಿರಬಹುದು, ಅವರ ಇಂಗ್ಲಿಷ್‌ನಲ್ಲಿ ವ್ಯಾಕರಣವಿಲ್ಲದೇ ಇರಬಹುದು. ಆದರೆ ದೋಷವಿದ್ದಿದ್ದು ಇಂಗ್ಲಿಷ್‌ನಲ್ಲೇ ಹೊರತು ಅವರ ಗುಂಡಿಗೆಯಲ್ಲಲ್ಲ. ಸೌದಿ ಅರೇಬಿಯಾಕ್ಕೆ ಕಡಿವಾಣ ಹಾಕಿದ್ದು, ಮಧ್ಯ ಏಷ್ಯಾದ ಮೇಲೆ ಹಿಡಿತ ಸಾಧಿಸಿದ್ದು, ಒಪೆಕ್(ತೈಲ ರಫ್ತು ರಾಷ್ಟ್ರಗಳ ಒಕ್ಕೂಟ) ಅನ್ನು ನಿಯಂತ್ರಣಕ್ಕೆ ತೆಗೆದುಕೊಂಡಿದ್ದು, ತಾಲಿಬಾನನ್ನು ಮಟ್ಟಹಾಕಿದ್ದು, ಇರಾಕ್‌ನಲ್ಲಿ ಪ್ರಜಾಪ್ರಭುತ್ವವನ್ನು ಸ್ಥಾಪನೆ ಮಾಡಿದ್ದು, ಇರಾನ್‌ನ ಅಣ್ವಸ್ತ್ರ ಕಾರ್ಯಕ್ರಮಕ್ಕೆ ತೆರೆ ಎಳೆದಿದ್ದು, ಉತ್ತರ ಕೊರಿಯಾಕ್ಕೆ ಲಗಾಮು ಹಾಕಿದ್ದು, ಆಫ್ರಿಕಾಕ್ಕೆ ಅಪಾರ ಸಹಾಯ ನೀಡಿದ್ದು, ಭಯೋತ್ಪಾದನೆ ವಿರುದ್ಧ ಜಾಗತಿಕ ಹೋರಾಟ ಆರಂಭಿಸಿದ್ದು ಬುಷ್ ಹೆಗ್ಗಳಿಕೆ. ಬಿಲ್ ಕ್ಲಿಂಟನ್ ಅಧ್ಯಕ್ಷರಾಗಿದ್ದಾಗ ಪುಕ್ಕಟೆ ಪ್ರಚಾರಕ್ಕಾಗಿ ಬಾಲ್ಕನ್ (ಯುಗೋಸ್ಲಾವಿಯಾ) ಮುಸ್ಲಿಮರ ಬೆಂಬಲಕ್ಕೆ ಹೊರಟರು, ತಾಲಿಬಾನ್, ಉತ್ತರ ಕೊರಿಯಾದಂತಹ ರೋಗಿಷ್ಠ ವ್ಯವಸ್ಥೆಗಳು ಬೆಳೆಯಲು ಬಿಟ್ಟಿದ್ದರು. ಆದರೆ ಅವುಗಳನ್ನು ಮಟ್ಟಹಾಕಿದ್ದು ಬುಷ್. ಇಂತಹ ಬುಷ್ ತಮ್ಮ ಅಧಿಕಾರಾವಧಿಯ ಕೊನೆಯ ಭಾಗದಲ್ಲಿ ಅಮೆರಿಕದವರಿಗೇ ಅಪ್ರಿಯರಾಗಿದ್ದು ಖಂಡಿತ ದುರದೃಷ್ಟ. ಅಷ್ಟಕ್ಕೂ ಆರ್ಥಿಕ ಹಿಂಜರಿತಕ್ಕೆ ಬುಷ್ ಒಬ್ಬರನ್ನೇ ಹೊಣೆಗಾರರನ್ನಾಗಿ ಮಾಡುವುದರಲ್ಲಿ ಯಾವ ಅರ್ಥವೂ ಇಲ್ಲ. ಎಂಐಟಿ, ಆಕ್ಸ್‌ಫರ್ಡ್, ಕೇಂಬ್ರಿಡ್ಜ್, ಐಐಎಂ-ಐಐಟಿಗಳಲ್ಲಿ ಕಲಿತು ಕಂಪನಿಗಳ ‘ಸಿಇಓ’ಗಳಾಗಿದ್ದ ಮಹಾ ಮೇಧಾವಿಗಳು ಮಾಡಿದ ತಪ್ಪಿನ ಪಾತ್ರ ಆರ್ಥಿಕ ಹಿಂಜರಿತದಲ್ಲಿ ಬಹುವಾಗಿದೆ. ರಾಮಲಿಂಗರಾಜು ಅವರಂತಹ ಠಕ್ಕರು ಅಲ್ಲೂ ಇದ್ದಾರೆ. ಆದರೆ ಸಂಕಷ್ಟಕ್ಕೆಲ್ಲಾ ಶನೇಶ್ವರನೇ ಕಾರಣ ಎಂಬಂತೆ ಎಲ್ಲದಕ್ಕೂ ಮಾಧ್ಯಮಗಳು ಬುಷ್ ಅವರನ್ನೇ ದೂರಿದವು. ಎರಡನೇ ಮಹಾಯುದ್ಧದಲ್ಲಿ ಹಿಟ್ಲರ್‌ಗೆ ಮಣಿಯದೆ ೮ ವರ್ಷಗಳ ಕಾಲ ಜರ್ಮನಿಯ ವಿರುದ್ಧ ಹೋರಾಡಿದ ಮಹಾನ್ ನಾಯಕ ವಿನ್‌ಸ್ಟನ್ ಚರ್ಚಿಲ್ ಅವರನ್ನೇ ಅರ್ಥವ್ಯವಸ್ಥೆಯನ್ನು ಹಾಳುಮಾಡಿದರೆಂದು ದೂರಿ ಜನ ಚುನಾವಣೆಯಲ್ಲಿ ಸೋಲಿಸಿದ್ದರು. ಇನ್ನು ಅಂತಹದ್ದೇ ಕಾರಣಕ್ಕಾಗಿ ಬುಷ್ ಅಪಖ್ಯಾತಿ ಪಡೆದಿದ್ದರಲ್ಲಿಯೂ ಯಾವ ಆಶ್ಚರ್ಯವಿಲ್ಲ. ಆದರೇನಂತೆ ಇಂಟರ್‌ನೆಟ್ ಆಧಾರಿತ ಬ್ಲಾಗ್, ಡಾಟ್‌ಕಾಂಗಳಂತಹ ಯಾವ ಮೀಡಿಯಾ ಹೌಸ್‌ಗಳ ಹಿಡಿತದಲ್ಲಿರದ ಇಂಡಿಪೆಂಡೆಂಟ್ ಮೀಡಿಯಾಗಳಲ್ಲಿ ಬುಷ್ ಬಗ್ಗೆ ಬಹಳ ಒಳ್ಳೆಯ ಅಭಿಪ್ರಾಯವೇ ಇದೆ. ಇತ್ತೀಚೆಗೆ ಭಾರತ ಹಾಗೂ ನೈಜೀರಿಯಾ, ತಾಂಜನಿಯಾದಂತಹ ಮುಸ್ಲಿಂ ರಾಷ್ಟ್ರಗಳು ಸೇರಿದಂತೆ ಜಗತ್ತಿನ ಹತ್ತಾರು ದೇಶಗಳಲ್ಲಿ ನಡೆದ ಸಮೀಕ್ಷೆಗಳು ಬುಷ್ ಜನಪ್ರಿಯತೆಯನ್ನು ಖಚಿತಪಡಿಸಿವೆ.

ಇಷ್ಟಾಗಿಯೂ ಯಾವನೋ ಬೂಟು ಬಿಸಾಡಿದಾಗ ತಾವೇ ಬಿಸಾಡಿದಷ್ಟು ಖುಷಿಪಟ್ಟವರೂ ನಮ್ಮಲ್ಲಿದ್ದಾರೆ. ಮುಸ್ಲಿಮ್ ರಾಷ್ಟ್ರಗಳನ್ನೇ ಗುರಿಯಾಗಿಸಿಕೊಂಡರು ಎಂದಂದುಕೊಂಡು ಬುಷ್ ಅವರನ್ನು ದ್ವೇಷಿಸುವವರೂ ಇದ್ದಾರೆ. ಆದರೆ ಅದು ಬುಷ್ ಇರಲಿ, ಒಬಾಮ ಆಗಿರಲಿ. ಅಮೆರಿಕದವರು ಯಾವ ಬಾಕಿಯನ್ನೂ ಉಳಿಸಿಕೊಳ್ಳುವುದಿಲ್ಲ. ಅಮೆರಿಕದ ಪರ್ಲ್ ಹಾರ್ಬರ್ ಮೇಲೆ ಜಪಾನ್ ದಾಳಿ ಮಾಡಿತು, ಅಣುಬಾಂಬ್ ಮೂಲಕ ಉತ್ತರ ಕೊಟ್ಟಿತು ಅಮೆರಿಕ. ತಾಲಿಬಾನ್ ದಾಳಿ ಮಾಡಿತು, ಅಮೆರಿಕ ತಾಲಿಬಾನ್‌ನ ಮೂಲಸ್ಥಾನವನ್ನೇ ನಾಶ ಮಾಡಿತು. ವಿನಾಕಾರಣ ಎಲ್ಲದಕ್ಕೂ ಅಮೆರಿಕವನ್ನು ತೆಗಳುವ ಬದಲು ಅದರ ಒಳ್ಳೆಯ ಗುಣಗಳನ್ನು ನಾವೇಕೆ ರೂಢಿಸಿಕೊಳ್ಳಬಾರದು? ಅಂದು ಅಫ್ಘಾನಿ ಸ್ತಾನದ ಮೇಲೆ ಆಕ್ರಮಣ ಮಾಡುವಾಗ, “Our war on terror begins with Al Qaeda, but it does not end there” ಎಂದಿದ್ದರು ಬುಷ್. ಅವರ ಮಾತು ನಿಜವಾಗಲಿ, ಒಬಾಮ ಅವರ ಮುಂದಿನ ಗುರಿ ಪಾಕಿಸ್ತಾನವಾಗಲಿ. ನಮ್ಮನ್ನಾಳುವವರಲ್ಲಂತೂ ಅಂತಹ ತಾಕತ್ತಿಲ್ಲ.

Thank you Bush, We certainly love you!

ಕೃಪೆ : ಪ್ರತಾಪ್ ಸಿಂಹ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ