ನನ್ನ ಬ್ಲಾಗ್ ಪಟ್ಟಿ

ಶನಿವಾರ, ಜುಲೈ 31, 2010

ಚಾವ್ಲಾ ಮೂತ್ರಕ್ಕೆ ಹೋದಾಗಲೆಲ್ಲ ವಾಸನೆ ಬಡಿಯುತ್ತಿದ್ದು ಯಾರ ಮೂಗಿಗೆ?

ಈ ಬಿಜೆಪಿಯವರು ಬೇಕೆಂದೇ ತಕರಾರು ತೆಗೆಯುತ್ತಿದ್ದಾರೆ ಎನ್ನಲು ಇದೇನು ಚುನಾವಣೆ ಹತ್ತಿರ ಬರುತ್ತಿರುವ ಸಂದರ್ಭದಲ್ಲಿ ಕಂಡು ಹುಡುಕಿದ, ಬಗೆದು ತೆಗೆದ ವಿವಾದವಲ್ಲ. “ನಿಷ್ಪಕ್ಷಪಾತ ನಿರ್ಧಾರ, ನಿಲುವನ್ನು ನಿರೀಕ್ಷಿಸುವ ಹಾಗೂ ಇತರರಿಗೆ ನ್ಯಾಯದಾನ ಮಾಡಬೇಕಾದ ಯಾವುದೇ ಸರಕಾರಿ ಹುದ್ದೆಯನ್ನು ಅಲಂಕರಿಸಲು ಈ ವ್ಯಕ್ತಿ ಅನರ್ಹ” ಎಂದು ಸುಪ್ರೀಂ ಕೋರ್ಟ್‌ನ ಮಾಜಿ ಮುಖ್ಯ ನ್ಯಾಯಮೂರ್ತಿ ಜೆ.ಸಿ. ಶಾ 1979ರಲ್ಲೇ ಹೇಳಿದ್ದರು.

1975ರಿಂದ 77ರವರೆಗೂ, ಆ ಕಾಲದಲ್ಲಿ ಕೇಂದ್ರಾಡಳಿತ ಪ್ರದೇಶವಾಗಿದ್ದ ದಿಲ್ಲಿಯ ಲೆಫ್ಟಿನೆಂಟ್ ಗವರ್ನರ್ ಕಿಶನ್ ಚಂದ್‌ಗೆ ನವೀನ್ ಚಾವ್ಲಾ ವೈಯಕ್ತಿಕ ಸಲಹೆಗಾರರಾಗಿದ್ದರು. ಅದೇ ಕಾಲಾವಧಿಯಲ್ಲಿ ಘೋಷಣೆಯಾಗಿದ್ದ ತುರ್ತುಪರಿ ಸ್ಥಿತಿಯ ವೇಳೆ ನಡೆದ ದೌರ್ಜನ್ಯಗಳ ಬಗ್ಗೆ ತನಿಖೆ ನಡೆಸಲು ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಜೆ.ಸಿ. ಶಾ ನೇತೃತ್ವದಲ್ಲಿ ಆಯೋಗವೊಂದನ್ನು ನೇಮಕ ಮಾಡಲಾಗಿತ್ತು. 1979ರಲ್ಲಿ ತನ್ನ ವರದಿ ಸಲ್ಲಿಸಿದ ಶಾ ಆಯೋಗ, “ಪ್ರಧಾನಿ ನಿವಾಸದೊಳಕ್ಕೆ ಸುಲಭ ಪ್ರವೇಶ ಹೊಂದಿದ್ದ ಕಿಶನ್ ಚಂದ್ ಹಾಗೂ ಚಾವ್ಲಾ ತುರ್ತುಪರಿಸ್ಥಿತಿಯ ಸಂದರ್ಭದಲ್ಲಿ ಕಾನೂ ಏನನ್ನು ರೇಜಿಗೆ ಹುಟ್ಟಿಸುವಷ್ಟು ದುರುಪಯೋಗಪಡಿಸಿ ಕೊಂಡಿದ್ದಾರೆ. ಜನಸಾಮಾನ್ಯರ ಜತೆ ಪಾಳೇಗಾರರಂತೆ ನಡೆದು ಕೊಂಡಿದ್ದಾರೆ” ಎಂದು ಕಟುವಾಗಿ ಟೀಕಿಸಿತು. ಇಂತಹ ಮಂಗಳಾರತಿಯ ನಂತರ ಅವಮಾನವನ್ನು ತಾಳಲಾರದೆ ಕಿಶನ್‌ಚಂದ್ ಆತ್ಮಹತ್ಯೆ ಮಾಡಿಕೊಂಡರು.

ಆದರೆ ಚಾವ್ಲಾ ಅವರು ಮುಖಕ್ಕೆ ಉಗಿಸಿಕೊಂಡು ೩೦ ವರ್ಷಗಳಾದರೂ ಬದುಕಿರುವುದು ಮಾತ್ರವಲ್ಲ, ಬುದ್ಧಿ ಯನ್ನೂ ಬದಲಾಯಿಸಿಕೊಂಡಿಲ್ಲ!

ಪಕ್ಷಪಾತ ಧೋರಣೆ ತೋರುತ್ತಿರುವ ಚುನಾವಣಾ ಆಯುಕ್ತ ನವೀನ್ ಚಾವ್ಲಾ ಅವರನ್ನು ವಜಾ ಮಾಡಬೇಕೆಂದು ಮುಖ್ಯ ಚುನಾವಣಾ ಆಯುಕ್ತ ಎನ್. ಗೋಪಾಲಸ್ವಾಮಿಯವರು ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅವರಿಗೆ ೨ ಪುಟದ ಪತ್ರ ಬರೆದಿದ್ದಾರೆ. ಅದರ ಜತೆಗೆ 24 ಪುಟದ ಇನ್ನೊಂದು ಬಂಚ್ ಕೂಡ ಇದೆ. ಅದರಲ್ಲಿ ಚಾವ್ಲಾ ಅವರ ಪಕ್ಷಪಾತ ನಿಲುವಿಗೆ ಕನ್ನಡಿ ಹಿಡಿಯುವ 12 ನಿರ್ದಿಷ್ಟ ನಿದರ್ಶನಗಳನ್ನು ಪಟ್ಟಿ ಮಾಡಿದ್ದಾರೆ. ಅಷ್ಟೇ ಅಲ್ಲ, ಚುನಾವಣಾ ಆಯೋಗದಲ್ಲಿ ಇದುವರೆಗೂ ನಡೆದ ಆಂತರಿಕ ಪತ್ರ ವ್ಯವಹಾರ, ದಾಖಲೆಗಳನ್ನು ಹೊಂದಿರುವ ಇನ್ನೂ 800 ಪುಟಗಳನ್ನೂ ಕಳುಹಿಸಿದ್ದಾರೆ.

ಅವರು ರಾಷ್ಟ್ರಪತಿಗೆ ಪತ್ರ ಬರೆದಿದ್ದು ಜನವರಿ 16ರಂದು. ಅದು ಬೆಳಕಿಗೆ ಬಂದಿದ್ದು, ವಿವಾದ ಸೃಷ್ಟಿಯಾಗಿದ್ದು ಜನವರಿ 31ರಂದು. ಅಣಕವೆಂದರೆ, ಪತ್ರದಲ್ಲಿ ಅವರು ಮಾಡಿರುವ ಆರೋಪಗಳಿಗೆ, ಎತ್ತಿರುವ ಪ್ರಶ್ನೆಗಳಿಗೆ ಸಮರ್ಪಕ ಉತ್ತರ ಕೊಡುವ ಬದಲು ಎಲ್ಲರೂ ಗೋಪಾಲಸ್ವಾಮಿಯವರನ್ನೇ ಕಟಕಟಗೆ ತಂದು ನಿಲ್ಲಿಸುವ, ನಿಂದಿಸುವ ಕೆಲಸವನ್ನು ಮಾಡುತ್ತಿದ್ದಾರೆ. ಆದರೆ ಪತ್ರದಲ್ಲಿರುವ ಒಂದೊಂದು ಅಂಶಗಳನ್ನೂ ಗಮನಿಸುತ್ತಾ ಹೋಗಿ, ಗೋಪಾಲಸ್ವಾಮಿಯವರು ಬಿಜೆಪಿಯ ಏಜೆಂಟೋ? ಹೇಗೂ ತಾನು ಏಪ್ರಿಲ್ ೨೦ಕ್ಕೆ ನಿವೃತ್ತಿಯಾಗುತ್ತೇನೆ ಮುಂದೆ ಎನ್‌ಡಿಎ ಸರಕಾರ ಅಧಿಕಾರಕ್ಕೆ ಬಂದರೆ ರಾಜ್ಯಪಾಲ ಅಥವಾ ಇನ್ನಾವುದೋ ಹುದ್ದೆಯನ್ನು ಗಳಿಸಿಕೊಳ್ಳಬಹುದು ಎಂಬ ಮುಂದಾಲೋಚನೆಯಿಂದ ವಿವಾದವೆಬ್ಬಿಸುತ್ತಿದ್ದಾರೋ? ಇಂಥ ಎಲ್ಲ ಅನುಮಾನಗಳಿಗೂ ಉತ್ತರ ದೊರೆಯುತ್ತದೆ.

ಗೋಪಾಲಸ್ವಾಮಿಯವರು ಬರೆದ ಪತ್ರದಲ್ಲಿ ಚಾವ್ಲಾರನ್ನು ವಜಾ ಮಾಡಬೇಕೆಂದು ಮಾತ್ರ ಒತ್ತಾಯಿಸಿಲ್ಲ. ಇನ್ನೂ ಎರಡು ಅಂಶಗಳನ್ನು ಎತ್ತಿದ್ದಾರೆ. 1) ಕೇಂದ್ರ ಜಾಗೃತ ಆಯುಕ್ತ ಹಾಗೂ ರಾಷ್ಟ್ರೀಯ ಮಾನವ ಹಕ್ಕು ಆಯೋಗದ ಅಧ್ಯಕ್ಷರನ್ನು ನೇಮಕ ಮಾಡುವುದಕ್ಕಾಗಿ ಪ್ರತಿಪಕ್ಷ ನಾಯಕನನ್ನೂ ಒಳಗೊಂಡಿರುವ ಒಂದು ವ್ಯವಸ್ಥೆಯಿದೆ. ಅಂತಹ ವ್ಯವಸ್ಥೆಯನ್ನು ಚುನಾವಣಾ ಆಯುಕ್ತರನ್ನು ನೇಮಕ ಮಾಡುವುದಕ್ಕೂ ರೂಪಿಸಬೇಕು ಎಂಬ ಮಾಜಿ ಚುನಾವಣಾ ಆಯುಕ್ತ ಬಿ.ಬಿ. ಟಂಡನ್ ಅವರ ಶಿಫಾರಸನ್ನು ಜಾರಿಗೆ ತರಬೇಕು. 2) ಕೇಂದ್ರ ಜಾಗೃತ ಆಯೋಗದ ಕಾಯಿದೆಗೆ ಅನುಗುಣವಾಗಿ ಜಾಗೃತ ದಳದ ಆಯುಕ್ತರು ನಿವೃತ್ತಿಯ ನಂತರ ರಾಜತಾಂತ್ರಿಕ ಜವಾಬ್ದಾರಿ ಸೇರಿದಂತೆ ಯಾವುದೇ ಲಾಭದಾಯಕ ಸರಕಾರಿ ಹುದ್ದೆಯನ್ನು ಅಲಂಕರಿಸುವಂತಿಲ್ಲ. ಅಂತಹ ನಿಯಮವನ್ನು ಚುನಾವಣಾ ಆಯುಕ್ತರಿಗೂ ಅನ್ವಯಿಸಬೇಕು. ಚುನಾವಣಾ ಆಯುಕ್ತರು ನಿವೃತ್ತಿಯ ನಂತರ 10 ವರ್ಷಗಳವರೆಗೂ ಯಾವುದೇ ರಾಜಕೀಯ ಪಕ್ಷ ಸೇರಬಾರದು, ಚುನಾವಣೆಯಲ್ಲಿ ಸ್ಪರ್ಧಿಸಬಾರದು, ರಾಜ್ಯಪಾಲ ಸ್ಥಾನ ಸೇರಿದಂತೆ ಯಾವುದೇ ಸರಕಾರಿ ಹುದ್ದೆಯನ್ನು ಅಲಂಕರಿಸಬಾರದು.

ಇವೆರಡೇ ಅಂಶಗಳು ಸಾಕು ಗೋಪಾಲಸ್ವಾಮಿಯವರ ವ್ಯಕ್ತಿತ್ವನ್ನು ಪರಿಚಯಿಸಲು. ಅಷ್ಟಕ್ಕೂ ಮುಂದೆ ಬಿಜೆಪಿ ಸರಕಾರ ಅಧಿಕಾರಕ್ಕೆ ಬರುತ್ತದೆ, ತಮಗೇನೋ ಗಿಟ್ಟುತ್ತದೆ ಎಂಬ ಊಹೆಯಿಂದ ಗೋಪಾಲಸ್ವಾಮಿಯವರು ವಿವಾದವೆಬ್ಬಿಸು ತ್ತಿದ್ದಾರೆ ಎಂದು ಅನುಮಾನ ಪಡಲು ಈ ಮೇಲಿನ ಶಿಫಾರಸು ಗಳಿಂದ ಗೋಪಾಲಸ್ವಾಮಿಯವರಿಗೇ ನಷ್ಟ. ಇನ್ನು ನಿವೃತ್ತಿಯ ನಂತರ ಹತ್ತು ವರ್ಷಗಳವರೆಗೂ ಯಾವುದೇ ಸರಕಾರಿ ಹುದ್ದೆಯನ್ನು ಅಲಂಕರಿಸಬಾರದು ಎಂಬ ಶಿಫಾರಸನ್ನು ತೆಗೆದುಕೊಳ್ಳಿ. ಚುನಾವಣಾ ಆಯುಕ್ತರು ನಿವೃತ್ತಿಯ ನಂತರ ಯಾವುದಾದರೂ ಪಕ್ಷಗಳನ್ನು ಸೇರಿದರೆ, ಅಧಿಕಾರದಲ್ಲಿದ್ದಾಗಲೇ ಅವರಿಗೆ ರಾಜಕೀಯ ಒಲವು-ನಿಲುವುಗಳಿದ್ದವು ಎಂದಾಗುವು ದಿಲ್ಲವೆ? ಅಂತಹ ವ್ಯಕ್ತಿ ಅಧಿಕಾರದಲ್ಲಿದ್ದಾಗ ನಿಷ್ಪಕ್ಷಪಾತವಾಗಿ ನಡೆದುಕೊಂಡಿಲ್ಲ ಎಂಬ ಅನುಮಾನ ಕಾಡುವುದಿಲ್ಲವೆ? ಚುನಾವಣಾ ಆಯೋಗದ ಬಗ್ಗೆ ದೇಶಾದ್ಯಂತ ಅರಿವು ಮೂಡಿಸಿದ ಟಿ.ಎನ್. ಶೇಷನ್ ಅವರಂತಹ ವ್ಯಕ್ತಿಗಳೇ ಕೊನೆಗೆ ಕಾಂಗ್ರೆಸ್ ಸೇರಿ ಗುಜರಾತ್‌ನ ಗಾಂಧಿನಗರದಿಂದ ಲಾಲ್‌ಕೃಷ್ಣ ಆಡ್ವಾಣಿಯವರ ವಿರುದ್ಧ ಸ್ಪರ್ಧಿಸಿದರೆ ಜನರಲ್ಲಿ ಇವರ ಪ್ರಾಮಾಣಿಕತೆಯ ಬಗ್ಗೆಯೇ ಸಂಶಯಗಳು ಮೂಡುವು ದಿಲ್ಲವೆ? ಶೇಷನ್ ಒಬ್ಬರೇ ಅಲ್ಲ, ಈ ಹಿಂದೆ ಮುಖ್ಯ ಚುನಾ ವಣಾ ಆಯುಕ್ತರಾಗಿದ್ದ ಎಂ.ಎಸ್. ಗಿಲ್ ಅವರಂತೂ ಕಾಂಗ್ರೆಸ್ ಸೇರಿದ್ದಲ್ಲದೆ ಪ್ರಸ್ತುತ ಕೇಂದ್ರ ಕ್ರೀಡಾ ಸಚಿವರಾಗಿದ್ದಾರೆ. ಹೀಗೆ, ನಿಷ್ಪಕ್ಷಪಾತ ಧೋರಣೆಯನ್ನು ನಿರೀಕ್ಷಿಸುವ ಹುದ್ದೆಯೇರಿ ಕೊನೆಗೆ ರಾಜಕೀಯಕ್ಕಿಳಿದರೆ ಅವರು ಅಲಂಕರಿಸಿದ್ದ ಹುದ್ದೆಯ ಮೇಲಿನ ಗೌರವ, ವಿಶ್ವಾಸ ಉಳಿಯುತ್ತದೆಯೇ?

ಹಾಗಿರುವಾಗ ಇಂದಿರಾ ಗಾಂಧಿಯವರು ಹೇರಿದ್ದ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಅಧಿಕಾರ ದುರುಪಯೋಗ ಮಾಡಿ ಕೊಂಡು, ‘ಈ ವ್ಯಕ್ತಿ ನಿಷ್ಪಕ್ಷಪಾತ ನಡವಳಿಕೆಯನ್ನು ನಿರೀಕ್ಷಿಸುವ ಯಾವ ಹುದ್ದೆಯನ್ನೂ ನಿರೀಕ್ಷಿಸಲು ಅನರ್ಹ” ಎಂದು ಹೇಳಿಸಿಕೊಂಡಿರುವ ನವೀನ್ ಚಾವ್ಲಾ ಅವರು ಮುಂದಿನ ಮುಖ್ಯ ಚುನಾವಣಾ ಆಯುಕ್ತರಾದರೆ ಗತಿಯೇನು? ಇನ್ನು ಪಶ್ಚಿಮ ಬಂಗಾಳದಲ್ಲಿ ವಿಧಾನಸಭೆ ಚುನಾವಣೆ ನಡೆದ ನಂತರ ಕಮ್ಯುನಿಸ್ಟರು, ಜಮ್ಮು-ಕಾಶ್ಮೀರದಲ್ಲಿ ಪ್ರತ್ಯೇಕತಾವಾದಿಗಳ ಬೆದರಿಕೆಯ ಹೊರತಾಗಿಯೂ ಯಶಸ್ವಿಯಾಗಿ ಚುನಾವಣೆ ನಡೆಸಿದ ನಂತರ ಕಾಂಗ್ರೆಸ್ಸಿಗರು ಯಾವ ವ್ಯಕ್ತಿಯನ್ನು ಮುಕ್ತಕಂಠ ದಿಂದ ಶ್ಲಾಘಿಸಿದ್ದರೋ ಅದೇ ಗೋಪಾಲಸ್ವಾಮಿ ಇವರಿಗೆ ಇದ್ದಕ್ಕಿ ದ್ದಂತೆ ವಿನಾಶಕಾರಿಯಂತೆ ಕಾಣುತ್ತಿರುವುದೇಕೆ?

ಅದಿರಲಿ, ನವೀನ್ ಚಾವ್ಲಾ ಪ್ರಕರಣವೇನು ಚುನಾವಣೆಯ ಸಂದರ್ಭದಲ್ಲಿ ಬೇಕೆಂದೇ ಕೆದಕಿ ತೆಗೆದಿರುವ ತಗಾದೆಯೇ?

ನವೀನ್ ಚಾವ್ಲಾ ಹಾಗೂ ಅವರ ಪತ್ನಿ ರೂಪಿಕಾ ಅವರು ದತ್ತಿ ಸಂಸ್ಥೆಯೊಂದನ್ನು ನಡೆಸುತ್ತಿದ್ದಾರೆ. ಈ ಟ್ರಸ್ಟ್‌ಗೆ ರಾಜಸ್ಥಾನದ ಕಾಂಗ್ರೆಸ್ ಸರಕಾರ 6 ಎಕರೆ ಜಾಗವನ್ನು ಪುಕ್ಕಟೆಯಾಗಿ ನೀಡಿದ್ದರೆ, ಕಾಂಗ್ರೆಸ್ಸಿಗರಾದ ಎ.ಎ. ಖಾನ್, ಆರ್.ಪಿ. ಗೋಯೆಂಕಾ, ಅಂಬಿಕಾ ಸೋನಿ, ಕರಣ್ ಸಿಂಗ್, ಎ.ಆರ್. ಕಿದ್ವಾಯಿ ತಮ್ಮ ಸಂಸದರ ನಿಧಿಯಿಂದ ದೇಣಿಗೆ ನೀಡುತ್ತಾ ಬಂದಿದ್ದಾರೆ. ಹೀಗೆ ತುರ್ತುಪರಿಸ್ಥಿತಿಯಿಂದ ಇಂದಿನವರೆಗೂ ಕಾಂಗ್ರೆಸ್ ಜತೆ ಸಂಬಂಧವಿಟ್ಟುಕೊಳ್ಳುತ್ತಾ ಬಂದಿದ್ದ ಚಾವ್ಲಾ ಅವರನ್ನು ಚುನಾವಣಾ ಆಯುಕ್ತರನ್ನಾಗಿ ಕಾಂಗ್ರೆಸ್ ನೇಮಕ ಮಾಡಿದಾಗ, ಕೂಡಲೇ ವಜಾ ಮಾಡಬೇಕೆಂದು ಒತ್ತಾಯಿಸಿ ೨೦೪ ಸಂಸದರ ಸಹಿ ಹೊಂದಿದ್ದ ಮನವಿಯನ್ನು ಆಗಿನ ರಾಷ್ಟ್ರಪತಿ ಕಲಾಂ ಅವರಿಗೆ ಎನ್‌ಡಿಎ ನೀಡಿತ್ತು. ಈ ಮಧ್ಯೆ ಮುಖ್ಯ ಚುನಾವಣಾ ಆಯುಕ್ತ ಗೋಪಾಲಸ್ವಾಮಿ ಹಾಗೂ ಚಾವ್ಲಾ ಅವರ ನಡುವೆಯೂ ಸಂಘರ್ಷಗಳು ಆರಂಭವಾಗಿದ್ದವು. ೨೦೦೭ರಲ್ಲಿ ನಡೆದ ಪಂಜಾಬ್ ವಿಧಾನಸಭೆ ಚುನಾವಣೆಯ ಸಂದರ್ಭದಲ್ಲಿ ಕೊನೇ ಕ್ಷಣದಲ್ಲಿ ಗುರುತಿನ ಚೀಟಿಯಿಲ್ಲದವರಿಗೂ ಮತದಾನಕ್ಕೆ ಅವಕಾಶ ಮಾಡಿಕೊಡಲು ಚಾವ್ಲಾ ಪ್ರಯತ್ನಿಸಿದಾಗ ಗೋಪಾಲಸ್ವಾಮಿ ಹಾಗೂ ಚಾವ್ಲಾ ನಡುವೆ ಮೊದಲ ಬಾರಿಗೆ ಸಂಘರ್ಷವೇರ್ಪಟ್ಟಿತ್ತು. ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯನ್ನು ವಿನಾಕಾರಣ ಮುಂದಕ್ಕೆ ಹಾಕಲು ಪ್ರಯತ್ನಿಸಿದ ಚಾವ್ಲಾ ಮತ್ತೆ ಮುಖಭಂಗ ಅನುಭವಿಸಿದರು. ಗುಜರಾತ್ ಚುನಾವಣೆ ಪ್ರಚರಾಂದೋಲನದ ಸಮಯದಲ್ಲಿ ನರೇಂದ್ರಮೋದಿಯವರನ್ನು “ಸಾವಿನ ವ್ಯಾಪಾರಿ”(ಮೌತ್ ಕಾ ಸೌದಾಗರ್) ಎಂದು ಕರೆಯುವ ಮೂಲಕ ಚುನಾವಣಾ ನೀತಿ ಸಂಹಿತೆಯನ್ನು ಉಲ್ಲಂಘಿಸಿದ ಸೋನಿಯಾ ಗಾಂಧಿಯವರಿಗೆ ನೋಟಿಸ್ ಜಾರಿ ಮಾಡುವುದನ್ನು ತಡೆಯಲು ಬಂದಾಗಲಂತೂ ಚಾವ್ಲಾ ಕಾಂಗ್ರೆಸ್ ಕಾರ್ಯಕರ್ತರಂತೆ ವರ್ತಿಸುತ್ತಿರುವುದು ಎಲ್ಲರ ಗಮನಕ್ಕೂ ಬಂದಿತ್ತು. ಈ ಮಧ್ಯೆ, ಚಾವ್ಲಾ ಅವರನ್ನು ವಜಾಗೊಳಿಸಬೇಕೆಂದು ಬಿಜೆಪಿ ಸುಪ್ರೀಂ ಕೋರ್ಟ್ ಮೆಟ್ಟಿಲು ಹತ್ತಿತು. ಆದರೆ ಇತರ ಆಯುಕ್ತರನ್ನು ವಜಾ ಮಾಡುವ ಅಧಿಕಾರ ಮುಖ್ಯ ಚುನಾವಣಾ ಆಯುಕ್ತರಿಗೆ ಸೇರಿದ್ದು ಎಂದು ಗೋಪಾಲಸ್ವಾಮಿಯವರೇ ಕೋರ್ಟ್ ಮುಂದೆ ವಾದಿಸಿದಾಗ ಬಿಜೆಪಿ ಅವರ ಬಳಿಗೇ ಬಂತು.

ಇಷ್ಟಾಗಿಯೂ ಚಾವ್ಲಾ ಎಚ್ಚೆತ್ತುಕೊಳ್ಳಲಿಲ್ಲ.

ಇನ್ನೂ ಮತದಾರರ ಪಟ್ಟಿಯನ್ನು ತಯಾರಿಸಿಲ್ಲ, ಕ್ಷೇತ್ರ ಮರುವಿಂಗಡಣೆ ವಿಷಯದಲ್ಲಿ ಜನರಲ್ಲಿ ಗೊಂದಲವಿದೆ ಎಂದು ಕುಂಟು ನೆಪ ಹೇಳಿಕೊಂಡು ಕರ್ನಾಟಕ ವಿಧಾನಸಭೆ ಚುನಾವಣೆಯನ್ನು ಮುಂದೂಡಿಸಲು ನಮ್ಮ ಕಾಂಗ್ರೆಸ್ಸಿಗರು ಪ್ರಯತ್ನಿಸಿದ್ದನ್ನು ನೆನಪು ಮಾಡಿಕೊಳ್ಳಿ. ಅದೇ ಲಾಬಿ ಕೆಲಸವನ್ನು ಚಾವ್ಲಾ ಚುನಾವಣಾ ಆಯೋಗದಲ್ಲಿ ಮಾಡಿದರು. ಮತ್ತೆ ಕೈಸುಟ್ಟುಕೊಂಡರು. ಗೋಪಾಲಸ್ವಾಮಿಯವರು ಕರ್ನಾಟಕ ಚುನಾವಣೆ ಮುಗಿದ ನಂತರ ಬಿಜೆಪಿ ದೂರಿನ ಆಧಾರದ ಮೇಲೆ ಕಳೆದ ಜುಲೈನಲ್ಲಿ ನೋಟಿಸ್ ಜಾರಿ ಮಾಡಿ ವಿವರಣೆ ಕೇಳಿದ ಕೂಡಲೇ ಚಾವ್ಲಾ ಒಂದು ತಿಂಗಳ ಕಾಲ ರಜೆ ಹೋದರು. ರಜೆಯಿಂದ ಬಂದ ನಂತರವೂ ಐದು ತಿಂಗಳು ಸತಾಯಿಸಿದರು. ಅವರ ವಿವರಣೆ ದೊರೆತ ನಂತರ ಒಂದೂವರೆ ತಿಂಗಳು ಕುಳಿತು ಸೂಕ್ತ ದಾಖಲೆ ಹಾಗೂ ನಿದರ್ಶನಗಳ ಸಮೇತ ಚಾವ್ಲಾ ಅವರನ್ನು ವಜಾ ಮಾಡುವಂತೆ ಗೋಪಾಲಸ್ವಾಮಿಯವರು ರಾಷ್ಟ್ರಪತಿಗೆ ಪತ್ರ ಕಳುಹಿಸಿದ್ದಾರೆ.

“ಆಯೋಗದ ಪೂರ್ಣ ಪ್ರಮಾಣದ ಸಭೆ ನಡೆಯುತ್ತಿದ್ದ ಸಂದರ್ಭಗಳಲ್ಲಿ ನವೀನ್ ಚಾವ್ಲಾ ಅವರು ಶೌಚಾಲಯಕ್ಕೆಂದು ನಡು ನಡುವೆ ತೆರಳುತ್ತಿದ್ದರು. ಹಾಗೆ ಹೋಗಿ ಬಂದ ಕ್ಷಣ ಮಾತ್ರದಲ್ಲಿ ಉನ್ನತ ಕಾಂಗ್ರೆಸ್ ನಾಯಕರಿಂದ ನನಗೆ ದೂರ ವಾಣಿ ಕರೆಬರುತ್ತಿತ್ತು. ಅಂದರೆ ಆಯೋಗದ ಸಭೆಯಲ್ಲಿ ಚರ್ಚಿಸಲಾಗುತ್ತಿದ್ದ ವಿಷಯಗಳನ್ನು ಯಾರೋ ಸರಕಾರಕ್ಕೆ ಸೋರಿಕೆ ಮಾಡುತ್ತಿದ್ದಾರೆ ಎಂದಾಯಿತಲ್ಲವೆ? ಅಲ್ಲದೆ ಸಭೆಯ ಮಧ್ಯೆ ಕಾಂಗ್ರೆಸ್ಸಿಗರಿಂದ ಬರುತ್ತಿದ್ದ ಕರೆಗಳು ಚುನಾ ವಣಾ ಆಯೋಗದ ಕಾರ್ಯಕಲಾಪದಲ್ಲಿ ಮಾಡುತ್ತಿದ್ದ ಹಸ್ತಕ್ಷೇಪವಲ್ಲದೆ ಮತ್ತೇನು? ಒಮ್ಮೆಯಂತೂ, ಬೆಲ್ಜಿಯಂನಲ್ಲಿ ಸೋನಿಯಾ ಗಾಂಧಿಯವರು ಪಡೆದುಕೊಂಡಿದ್ದ ಪುರಸ್ಕಾರದ ವಿಷಯದಲ್ಲಿ ಆಕೆಯ ಸಂಸತ್ ಸದಸ್ಯತ್ವಕ್ಕೇ ಕುತ್ತು ಬಂದಿದ್ದಾಗ ಆಯೋಗ ಯಾವ ನಿರ್ಧಾರ ಕೈಗೊಳ್ಳಲಿದೆ ಎಂಬುದನ್ನು ತಿಳಿದುಕೊಳ್ಳಲು ಪ್ರಧಾನಿಯವರ ಮುಖ್ಯ ಕಾರ್ಯದರ್ಶಿ ಟಿ.ಕೆ.ಎ. ನಾಯರ್ ಅವರೇ ಆಗಮಿಸಿದ್ದರು. ಗುಜರಾತ್ ವಿಧಾನಸಭೆ ಚುನಾವಣೆಯನ್ನು ಎರಡು ಹಂತದಲ್ಲಿ ಮುಗಿಸಲು ಸೂಕ್ತ ಭದ್ರತೆಯನ್ನು ಒದಗಿಸಲು ಗೃಹಖಾತೆ ನಿರಾಕರಿಸಿದ ನಂತರ ಮೂರು ಹಂತಗಳಲ್ಲಿ ಚುನಾವಣೆ ನಡೆಸಲು ಆಯೋಗ ದಿನಾಂಕಗಳ ಬಗ್ಗೆ ಚರ್ಚೆ ನಡೆಸುತ್ತಿದ್ದಾಗ ಉನ್ನತ ಕಾಂಗ್ರೆಸ್ ನಾಯಕರೊಬ್ಬರು ಪದೇ ಪದೆ ಕರೆ ಮಾಡುತ್ತಿದ್ದರು” ಎಂದು ಗೋಪಾಲಸ್ವಾಮಿಯವರು ರಾಷ್ಟ್ರಪತಿಗೆ ಬರೆದಿರುವ ಪತ್ರದಲ್ಲಿ ಚಾವ್ಲಾ ಅವರ ನಿಜರೂಪವನ್ನು ಬಯಲು ಮಾಡಿದ್ದಾರೆ.

ಇಂತಹ ಆರೋಪಗಳಿಗೆ ಉತ್ತರ ನೀಡುವ ಬದಲು ಕೇಂದ್ರ ಕಾನೂನು ಸಚಿವ ಎಚ್.ಆರ್. ಭಾರದ್ವಾಜ್ ಹಾಗೂ ಇತರ ಕಾಂಗ್ರೆಸ್ ನಾಯಕರು ಗೋಪಾಲಸ್ವಾಮಿಯವರ ವಿರುದ್ಧವೇ ದೂಷಣೆ ಮಾಡುತ್ತಿರುವುದೇಕೆ?

ಒಂದು ವೇಳೆ ಕಾಂಗ್ರೆಸ್ಸಿಗರು ಚುನಾವಣಾ ಆಯೋಗದ ಚಟುವಟಿಕೆಯಲ್ಲಿ ಹಸ್ತಕ್ಷೇಪ ಮಾಡಿಲ್ಲ ಎನ್ನುವುದಾದರೆ, ಸಭೆಯ ಮಧ್ಯೆ ಶೌಚಾಲಯಕ್ಕೆ ತೆರಳುತ್ತಿದ್ದ ಚಾವ್ಲಾ ಅವರ ಮೂತ್ರದ ವಾಸನೆ ಕಾಂಗ್ರೆಸ್ಸಿನ ಮೂಗಿಗೆ ಬಡಿದಿಲ್ಲ ಎಂದಾದರೆ ಆರೋಪಗಳನ್ನೇಕೆ ನಿರಾಕರಿಸುತ್ತಿಲ್ಲ? ಸ್ಪಷ್ಟನೆಯನ್ನೇಕೆ ಕೊಡು ತ್ತಿಲ್ಲ?

1966ರ ಸಾಲಿನ ಐಎಎಸ್ ಅಧಿಕಾರಿ ಗೋಪಾಲಸ್ವಾಮಿಯ ವರು ಸಾಮಾನ್ಯ ವ್ಯಕ್ತಿಯಲ್ಲ. ಆಧಾರವಿಲ್ಲದೆ ಏನನ್ನೂ ಹೇಳುವು ದಿಲ್ಲ, ಅಧಿಕಾರವೇ ಇಲ್ಲದ ಕ್ರಮವನ್ನೂ ತೆಗೆದುಕೊಳ್ಳುವುದಿಲ್ಲ. ಅದು ಕಾಂಗ್ರೆಸ್‌ಗೂ ಗೊತ್ತು. ಹಾಗಾಗಿಯೇ “ಎಲ್ಲ ಮೂವರು ಆಯುಕ್ತರೂ ಸಮಾನರು. ಯಾರನ್ನು ವಜಾಗೊಳಿಸುವ ಹಕ್ಕು ಯಾರಿಗೂ ಇಲ್ಲ” ಎಂದು ಕಥೆ ಹೇಳುತ್ತಿದೆ. ಆದರೆ ಮೂವರೂ ಸಮಾನರು ಎಂಬ ವಾದವೇ ದೊಡ್ಡ ಸುಳ್ಳು. ಸಂಬಳ, ಸವಲತ್ತಿನ ವಿಷಯದಲ್ಲಷ್ಟೇ ಇವರು ಸಮಾನರು. ಅಧಿಕಾರ ವಿಷಯ ಬಂದಾಗ ಯೋಗ್ಯ ಕಾರಣಗಳಿದ್ದರೆ ಇತರ ಆಯುಕ್ತರನ್ನು ವಜಾಗೊಳಿಸುವಂತೆ ಶಿಫಾರಸು ಮಾಡುವ ಹಕ್ಕು ಮುಖ್ಯ ಚುನಾವಣಾ ಆಯುಕ್ತರಿಗೆ ಸಂವಿಧಾನದತ್ತವಾಗಿ ಬಂದಿದೆ. ಆ ಕಾರಣಕ್ಕಾಗಿ, “ಪ್ರಜಾತಾಂತ್ರಿಕ ಸಂಸ್ಥೆಗಳನ್ನು ಹಾಳುಗೆಡವಬೇಡಿ, ಅವುಗಳ ವಿಶ್ವಾಸಾರ್ಹತೆಗೆ ಧಕ್ಕೆ ತರುವ ಪ್ರಯತ್ನವಿದು, ಇದೆಲ್ಲಾ ಬಿಜೆಪಿಯ ಹುನ್ನಾರ, ಪೊಲಿಟಿಕಲ್ ಬಾಸ್ ಥರಾ ವರ್ತಿಸಬೇಡ” ಎಂದು ಗದರಿಸುವ, ಗೋಪಾಲ ಸ್ವಾಮಿಯವರನ್ನೇ ತಪ್ಪಿತಸ್ಥರನ್ನಾಗಿ ಚಿತ್ರಿಸುವ ಕೆಲಸ ಮಾಡು ತ್ತಿದೆ. ನವೀನ್ ಚಾವ್ಲಾ ಅವರ ಸಾಚಾತನದ ಬಗ್ಗೆ ಯಾರೂ ಮಾತನಾಡಲು ಪ್ರಯತ್ನಿಸುತ್ತಿಲ್ಲ. ಅವರು ಸಾಚಾ ಎಂದು ಸಾಬೀತು ಮಾಡುವುದಕ್ಕೂ ಯತ್ನಿಸುತ್ತಿಲ್ಲ. ಬದಲಿಗೆ ಗೋಪಾಲ ಸ್ವಾಮಿಯವರನ್ನು ಬಿಜೆಪಿ ಏಜೆಂಟ್ ಎಂಬಂತೆ ಬಿಂಬಿಸುವ ಕೆಲಸವನ್ನು ಎಲ್ಲರೂ ಮಾಡುತ್ತಿದ್ದಾರೆ. ಬಿಜೆಪಿಯೇನು ಸದ್ಗುಣ ಸಂಪನ್ನರ ಪಕ್ಷ ಎಂದು ಹೇಳುತ್ತಿಲ್ಲ. ಆದರೆ ಯಾವ ಆಧಾರವೂ ಇಲ್ಲದೆ ಗೋಪಾಲಸ್ವಾಮಿಯವರನ್ನು ಬಿಜೆಪಿ ಪಕ್ಷಪಾತಿ ಎಂದು ಬಿಂಬಿಸುವುದು ಆ ವ್ಯಕ್ತಿಗೆ ಬಗೆಯುವ ಅಪಚಾರವಲ್ಲವೆ? ಅದಿರಲಿ, ಹುಟ್ಟು ಕಾಂಗ್ರೆಸ್ಸಿಗ ಪಿ.ಸಿ. ಅಲೆಗ್ಸಾಂಡರ್ ಅವರನ್ನು ರಾಷ್ಟ್ರಪತಿ ಮಾಡಲು ಹೊರಟಿದ್ದು, ಕೊನೆಗೆ ಅಬ್ದುಲ್ ಕಲಾಂ ಅವರನ್ನು ರಾಷ್ಟ್ರಪತಿ ಸ್ಥಾನಕ್ಕೆ ತನ್ನ ಉಮೇದುವಾರರನ್ನಾಗಿ ಮಾಡಿ, ಗೆಲ್ಲಿಸಿದ್ದು ಬಿಜೆಪಿಯೇ. ಹಾಗಾದರೆ ಇವರಿಬ್ಬರನ್ನೂ ಬಿಜೆಪಿಯ ಏಜೆಂಟರು ಎನ್ನುವುದಕ್ಕಾಗುತ್ತದೆಯೇ? ಕಲಾಂ ಅವರಂತಹ ರಾಷ್ಟ್ರದ ನೆಚ್ಚಿನ ನೇತಾರ ಎರಡನೇ ಬಾರಿಗೆ ರಾಷ್ಟ್ರಪತಿಯಾಗದಂತೆ ತಡೆದಿದ್ದು, ಇನ್ನಿಬ್ಬರು ಚುನಾವಣಾ ಆಯುಕ್ತರನ್ನು ನೇಮಕ ಮಾಡುವ ಮೂಲಕ ಶೇಷನ್ ಅವರನ್ನು ಹದ್ದುಬಸ್ತಿನಲ್ಲಿಟ್ಟುಕೊಳ್ಳಲು ಪ್ರಯತ್ನಿಸಿದ್ದು ಕಾಂಗ್ರೆಸ್ಸೇ ಅಲ್ಲವೆ?

ಈ ದೇಶದಲ್ಲಿ ಏನೇ ಕೆಟ್ಟ ಕೆಲಸಗಳು ನಡೆದರೂ ಅದರ ಮೂಲ ಕಾಂಗ್ರೆಸ್‌ನಲ್ಲೇ ಇರುತ್ತದೆ. ರಾಜ್ಯಪಾಲರ ಹುದ್ದೆ, ರಾಷ್ಟ್ರಪತಿ ಹುದ್ದೆಯಲ್ಲದೆ ಪ್ರಧಾನಿ ಹುದ್ದೆಯನ್ನೂ ಬಿಡದೇ ಪ್ರತಿಯೊಂದು ಪ್ರಜಾತಾಂತ್ರಿಕ ಸಂಸ್ಥೆಗಳನ್ನು ಹಾಳುಗೆಡವಿದ, ಎಲ್ಲ ಕೆಟ್ಟ ಕೆಲಸಗಳಿಗೂ ಮೇಲ್ಪಂಕ್ತಿ ಹಾಕಿಕೊಟ್ಟ ಕೀರ್ತಿ ೫೦ ವರ್ಷ ದೇಶವನ್ನಾಳಿದ ಕಾಂಗ್ರೆಸ್‌ಗೇ ಸಲ್ಲಬೇಕು. ಇಂತಹ ವ್ಯಕ್ತಿಗಳು, ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಬ್ಯಾನರ್, ಬಂಟಿಂಗ್ಸ್‌ಗಳನ್ನು ನಿಷೇಧಿಸಿ ಬಿಜೆಪಿಯಿಂದಲೇ ಟೀಕಿಸಿಕೊಂಡಿದ್ದ ಗೋಪಾಲಸ್ವಾಮಿಯವರನ್ನು ಪಕ್ಷಪಾತಿ ಎನ್ನುತ್ತಿದ್ದಾರೆ. ಗೋಪಾಲಸ್ವಾಮಿಯವರ ಹಣೆಯ ಮೇಲೆ ಸದಾ ಕಾಣುವ ಉದ್ದನೆಯ ತಿಲಕವನ್ನು ನೋಡಿ ಅವರನ್ನು ಬಿಜೆಪಿಯವರು, ಬಿಜೆಪಿ ಪರವಿದ್ದಾರೆ ಎನ್ನಬೇಕೇ ಹೊರತು ಅವರ ನಡತೆಯಲ್ಲಿ ಯಾವ ಲೋಪಗಳನ್ನೂ ಪತ್ತೆ ಮಾಡಲು ಸಾಧ್ಯವಿಲ್ಲ.

ಹಣೆಗೆ ಕುಂಕುಮ, ತಿಲಕವಿಟ್ಟವರನ್ನೆಲ್ಲಾ ಬಿಜೆಪಿಯವರು, ಕೋಮುವಾದಿಗಳು ಎಂದು ಕರೆಯುವ ಕಾಲವೂ ಸದ್ಯದಲ್ಲೇ ಬರಬಹುದು!

Gosh!!

ಕೃಪೆ : ಪ್ರತಾಪ್ ಸಿಂಹ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ