ನನ್ನ ಬ್ಲಾಗ್ ಪಟ್ಟಿ

ಶನಿವಾರ, ಜುಲೈ 31, 2010

ದೇಶಕ್ಕಾಗಿ ರಕ್ತ ಚೆಲ್ಲಿದವರನ್ನು ಮರೆಯುವುದರಲ್ಲಿ ನಾವು ನಿಸ್ಸೀಮರು!

Batra

ಕ್ಷಮಿಸಿ… ಕಾರಣಾಂತರಗಳಿಂದ ಈ ವಾರದ ಲೇಖನವನ್ನು ಬರೆಯಲು ಸಾಧ್ಯವಾಗುತ್ತಿಲ್ಲ. ಇತ್ತ ಇಡೀ ದೇಶವನ್ನೇ ಭಾವನಾತ್ಮಕವಾಗಿ ಒಂದುಮಾಡಿದ್ದ ಕಾರ್ಗಿಲ್ ಯುದ್ಧ ವಿಜಯಕ್ಕೆ ಹತ್ತು ವರ್ಷಗಳು ತುಂಬಿವೆ. ಈ ಹಿನ್ನೆಲೆಯಲ್ಲಿ ಅತ್ಯಂತ ಕಿರಿಯ ಪರಮವೀರ ಚಕ್ರ ಪುರಸ್ಕೃತ ಕಾರ್ಗಿಲ್ ವೀರ ವಿಕ್ರಮ್ ಬಾತ್ರಾ ಅವರ ಬಗ್ಗೆ ನಾನು ಐದು ವರ್ಷಗಳ ಹಿಂದೆ ಬರೆದಿದ್ದ ಲೇಖನವನ್ನು ಮತ್ತೊಮ್ಮೆ ಓದಿಕೊಳ್ಳಿ.

ವ್ಯಾಪಾರಿ ಹಡಗೊಂದರಲ್ಲಿ ಕೆಲಸ ದೊರೆತಿತ್ತು. ಯೂನಿ ಫಾರ್ಮ್ ಕೂಡ ಸಿದ್ಧಗೊಂಡಿತ್ತು. ಟಿಕೆಟ್ ಬುಕ್ ಆಗಿತ್ತು. ಇನ್ನೇನು ಹಾಂಕಾಂಗ್‌ಗೆ ಹಾರಬೇಕು. ಅದೇಕೋ, ವಿಕ್ರಮ್ ಮನಸ್ಸನ್ನೇ ಬದಲಾಯಿಸಿದ. ಡಾಲರ್‌ನಲ್ಲಿ ಸಂಬಳ ನೀಡುವ ಸಂಸ್ಥೆಯ ಯೂನಿಫಾರ್ಮ್‌ಗೆ ಬದಲು, ದೇಶದ ಗಡಿ ಕಾಯುವ ಸೈನಿಕನ ಸಮವಸ್ತ್ರ ತೊಡುವ ನಿರ್ಧಾರ ಕೈಗೊಂಡಿದ್ದ! ಭಾರತ ಕಡೆ ಬಾರಿ ರಣರಂಗಕ್ಕಿಳಿದಿದ್ದು ೧೯೭೧ರಲ್ಲಿ. ಅದು ಬಾಂಗ್ಲಾ ಯುದ್ಧ. ಮೂರು ವರ್ಷಗಳ ನಂತರ, ಅಂದರೆ ಸೆಪ್ಟೆಂಬರ್ ೯, ೧೯೭೪ರಲ್ಲಿ ಅವಳಿಗಳಾದ ವಿಕ್ರಮ್ ಮತ್ತು ವಿಶಾಲ್ ಜನಿಸಿದರು. ಅಪ್ಪ ಜಿ.ಎಲ್. ಬಾತ್ರಾ ಚಂಡೀಗಢ ಸಮೀಪದ ಪಾಲಂಪುರದ ಶಾಲೆಯೊಂದರ ಹೆಡ್ ಮಾಸ್ಟರ್. ಅಮ್ಮ ಜೈಕಮಲ್ ಶಿಕ್ಷಕಿ. ಮಧ್ಯಮ ವರ್ಗದ ಕುಟುಂಬ ಅದು. ಅವತ್ತು ವಿಕ್ರಮ್ ಬಾತ್ರಾ ಮನೆಗೆ ಬಂದಿದ್ದ. ಮಿಲಿಟರಿ ಸೇರಿ ೧೮ ತಿಂಗಳಾಗಿತ್ತು. ಮೊದಲ ಬಾರಿಗೆ ಅಮ್ಮ-ಅಪ್ಪ ಮತ್ತು ತಮ್ಮನನ್ನು ನೋಡಲು ಆಸೆಯಿಂದ ಬಂದಿದ್ದ. ಅದು ರಂಗುರಂಗಿನ ಹೋಳಿ ಹಬ್ಬದ ಸಂದರ್ಭ. ಪಾಲಂಪುರದಲ್ಲೊಂದು ಹೋಟೆಲ್ ಇದೆ. ನೇವುಗಲ್ ಕೆಫೆ! ಪಕ್ಕದಲ್ಲೇ ನೇವುಗಲ್ ನದಿ ಕೂಡ ಹರಿಯುತ್ತಾಳೆ. ವಿಕ್ರಮ್ ಹೋಟೆಲ್‌ಗೆ ಬಂದಿದ್ದ. ಅಲ್ಲೇ ಇದ್ದ ಪರಿಚಿತ ವ್ಯಕ್ತಿಯ್ಬೊರು ವಿಕ್ರಮ್‌ನನ್ನು ಕಂಡಿದ್ದೇ ತಡ ಯುದ್ಧದ ಬಗ್ಗೆ ಮಾತನಾಡ ಲಾರಂಭಿಸಿದರು. ‘ಯುದ್ಧ ಪ್ರಾರಂಭವಾಗಿದೆ. ಯಾರಿಗೆ ಗೊತ್ತು…. ಯಾವ ಕ್ಷಣದಲ್ಲಿ ಬೇಕಾದರೂ ನಿನಗೆ ಕರೆ ಬರಬಹುದು. ಎಚ್ಚರಿಕೆಯಿಂದಿರು….’ ಎಂದು ಕಿವಿಮಾತು ಹೇಳಿದರು.

ಅದುವರೆಗೂ ಶಾಂತಚಿತ್ತನಾಗಿ ಕೇಳಿಸಿಕೊಳ್ಳುತ್ತಿದ್ದ ವಿಕ್ರಮ್, ‘ತಲೆಕೆಡಿಸಿಕೊಳ್ಳಬೇಡಿ. ಒಂದೋ ಗೆದ್ದು ತ್ರಿವರ್ಣ ಧ್ವಜವನ್ನು ಹಾರಿಸಿ ಬರುತ್ತೇನೆ, ಇಲ್ಲವೇ ಅದೇ ಧ್ವಜದಲ್ಲಿ ಸುತ್ತಿರುವ ನನ್ನ ಹೆಣ ಬರುತ್ತೆ ಅಂದಿದ್ದ!!

ಬಹುಶಃ ಆ ವ್ಯಕ್ತಿಗೆ ತಿಳಿದಿರಲಿಲ್ಲ, ತಾನು ವಿಕ್ರಮ್ ಜತೆ ಕಡೆ ಬಾರಿ ಮಾತನಾಡುತ್ತಿದ್ದೇನೆ ಎಂದು…… ೧೯೯೯, ಜೂನ್ ೧ರಂದು ಕಾರ್ಗಿಲ್‌ನಲ್ಲಿ ಸೇವೆಗೆ ಹಾಜರಾಗಬೇಕೆಂದು ಸೇನೆಯಿಂದ ಆದೇಶ ಬಂದಿತ್ತು! ಅಪ್ಪ, ಅಮ್ಮ, ತಮ್ಮ ಮತ್ತುಆಪ್ತ ಸ್ನೇಹಿತರು ಬೀಳ್ಕೊಟ್ಟಿದ್ದೂ ಆಯಿತು. ಆದರೆ ಬಾತ್ರಾ ದಂಪತಿಗಳು ಮತ್ತೆ ಮಗನನ್ನು ಕಂಡಿದ್ದು ಟೀವಿಯಲ್ಲಿ! ಹೀರೊ ಆಗಿ! ಆನಂತರ ಹೆಣವಾಗಿ!! ಕಾರ್ಗಿಲ್‌ನ ಪರ್ವತ ಶ್ರೇಣಿಗಳು ಅಂದು ರಣರಂಗವಾಗಿದ್ದವು. ಕಾಶ್ಮೀರ ಕದಡಿತ್ತು. ಸಾವಿರಾರು ಅಡಿ ಎತ್ತರದಲ್ಲಿರುವ ಶಿಖರಗಳ ತುದಿಯಲ್ಲಿ ಪಾಕ್ ಭಯೋತ್ಪಾದಕರು ಬಂಕರ್ ತೋಡಿಕೊಂಡಿದ್ದರು. ಪವಾಡದಿಂದ ಮಾತ್ರ ಶತ್ರುಗಳನ್ನು ಕೊಲ್ಲಲು ಸಾಧ್ಯ ಎಂದೇ ಭಾವಿಸಲಾಗಿತ್ತು. ದಾರಿ ಕಾಣದ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರು ವಾಯು ದಾಳಿಗೆ ಆದೇಶ ನೀಡಿದ್ದರು. ಆದರೂ ಶಿಖರವೇರಿಯೇ ಭಯೋತ್ಪಾದಕರನ್ನು ಕೊಲ್ಲಬೇಕಿತ್ತು.

೧೭ ಸಾವಿರ ಅಡಿ ಎತ್ತರದಲ್ಲಿರುವ ‘೫೧೪೦’ ಶಿಖರದ ತುದಿಗೆ ಮೊದಲ ಬೆಳಕು ಬೀಳುತ್ತದೆ. ಏಕೆಂದರೆ ದ್ರಾಸ್ ವಿಭಾಗದಲ್ಲಿದ್ದ ೫೧೪೦ ಕಾಶ್ಮೀರ ಕಣಿವೆಯಲ್ಲೇ ಅತಿ ಎತ್ತರದ ಶಿಖರ. ಜೂನ್ ೧೯ರಂದು ದಟ್ಟ ಕತ್ತಲು ಮುಸುಕಿತ್ತು. ಹಾಗಾಗಿ ಭಯೋತ್ಪಾದಕರನ್ನು ಕೊಲ್ಲುವಂತಹ ಆತ್ಮಘಾತುಕ ಕಾರ್ಯಕ್ಕೆ ಕೆಲವೇ ಗಂಟೆಗಳು ಬಾಕಿ ಉಳಿದಿದ್ದವು. ಬೆಳಗಾದರೆ ಶಿಖರವೇರಲು ಸಾಧ್ಯವೇ ಇಲ್ಲ. ಶತ್ರುವಿನ ಗುಂಡಿಗೆ ಎದೆಗೊಡಬೇಕಾಗುತ್ತದೆ. ಕಾರ್ಗಿಲ್ ಯುದ್ಧ ಆರಂಭವಾಗಿ ಐದು ವಾರಗಳಾಗಿತ್ತು. ಆದರೂ ಹೆಚ್ಚಿನ ಯಶಸ್ಸು ಸಾಧಿಸಿರಲಿಲ್ಲ. ಏಕೆಂದರೆ ೫೧೪೦ ಶಿಖರವನ್ನು ವಶಪಡಿಸಿಕೊಂಡರೆ ಮಾತ್ರ ಮುಂದಿನ ಹಾದಿ. ಹಾಗಾಗಿ ಜೂನ್ ೧೯ರ ರಾತ್ರಿ ೫೧೪೦ ಶಿಖರವನ್ನು ಜಯಿಸಲೇಬೇಕೆಂದು ಲೆಫ್ಟಿನೆಂಟ್ ವಿಕ್ರಮ್ ಬಾತ್ರಾ ಮತ್ತು ಕ್ಯಾಪ್ಟನ್ ಸಂಜೀವ್ ಜಾಮ್ವಾಲ್‌ಗೆ ಆದೇಶ ನೀಡಲಾಗಿತ್ತು. ಅದು ದೇಶದ ಘನತೆಯ ಪ್ರಶ್ನೆಯೂ ಆಗಿತ್ತು. ಕಡಿದಾದ ಭಾಗದ ಮೂಲಕ ಶಿಖರವನ್ನೇರುವಂತೆ ತಮ್ಮ ಸಂಗಡಿಗರಿಗೆ ನಿರ್ದೇಶನ ನೀಡಿದ ಬಾತ್ರಾ, ತಾನು ಹಿಂದಿನಿಂದ ದಾಳಿ ಮಾಡಲು ನಿರ್ಧರಿಸಿದ.

ಬೆಳಗಾಗುವಷ್ಟರಲ್ಲಿ ಉತ್ತುಂಗದಲ್ಲಿದ್ದ ಬಂಕರ್ ಸ್ಫೋಟಗೊಂಡಿತ್ತು. ಶತ್ರುಗಳು ಹೆಣವಾಗಿದ್ದರು. ವಿಕ್ರಮ್ ಬಾತ್ರಾ ನೇತೃತ್ವದ ‘೧೩ ಜಮ್ಮು-ಕಾಶ್ಮೀರ್ ರೈಫಲ್ಸ್’ ಸೇನಾ ತುಕಡಿ ನಿರ್ಣಾಯಕ ಕಾಳಗದಲ್ಲಿ ಗೆದ್ದಿತ್ತು! ಆತನ ಸಾಹಸಕ್ಕೆ ದೇಶವೇ ಬೆರಗಾಗಿತ್ತು. ಟೀವಿ ಪರದೆಯ ಮೇಲೆ ಬಾತ್ರಾನದ್ದೇ ಚಿತ್ರ. ಪತ್ರಿಕೆಗಳಲ್ಲಿ ಆತನದ್ದೇ ಗುಣಗಾನ. ಬೆಳಗಾಗುವಷ್ಟರಲ್ಲಿ ಕಾರ್ಗಿಲ್ ಯುದ್ಧದ ಪ್ರೇರಣಾಶಕ್ತಿಯಾಗಿ ಹೊರಹೊಮ್ಮಿದ್ದ. ಜನರಲ್ ವೇದ್ ಪ್ರಕಾಶ್ ಮಲಿಕ್ ಸ್ವತಃ ಕರೆ ಮಾಡಿ ಬಾತ್ರಾಗೆ ಅಭಿನಂದನೆ ಸಲ್ಲಿಸಿದರು. ಸೆಟಲೈಟ್ ಫೋನ್ ಕೈಗೆತ್ತಿಕೊಂಡ ವಿಕ್ರಮ್, ‘ಅಪ್ಪಾ, ಶತ್ರುವಿನ ನೆಲೆಯನ್ನು ವಶಪಡಿಸಿಕೊಂಡಿದ್ದೇನೆ’ ಎಂದಾಗ, ಅದು ತಮ್ಮ ಜೀವಮಾನದ ಅತ್ಯಂತ ಹೆಮ್ಮೆಯ ಕ್ಷಣ ಎಂದು ಜಿ.ಎಲ್. ಬಾತ್ರಾ ಖುಷಿಪಟ್ಟಿದ್ದರು. ಶೌರ್ಯದ ಪ್ರತೀಕವಾಗಿರುವ ‘ವಿಕ್ರಮ್’ ಎಂಬ ಹೆಸರನ್ನು ತಮ್ಮ ಮಗನಿಗಿಟ್ಟಿದ್ದರು. ಹೆಸರಿಗೆ ತಕ್ಕಂಥ ಸಾಧನೆಯೂ ಅದಾಗಿತ್ತು. ೫೧೪೦ನೇ ಶಿಖರದ ವಶ, ಟೈಗರ್ ಹಿಲ್ಸ್‌ನ ಜಯಕ್ಕೆ ಕಾರಣವಾಯಿತು. ಅದು ಕಾರ್ಗಿಲ್ ಯುದ್ಧದ ಮಹತ್ವದ ಘಟ್ಟ. ಮುಂದಿನ ಹಾದಿಯನ್ನು ಸುಗಮಗೊಳಿಸಿದ ಸಾಧನೆ. ಇದಾಗಿ ೯ ದಿನಗಳ ನಂತರ, ವಿಕ್ರಮ್‌ಗೆ ಮತ್ತೆ ಕರೆಬಂತು. ಅದು ಮತ್ತೊಂದು ಮಹತ್ವದ ಕಾರ್ಯಾಚರಣೆಯ ಜವಾಬ್ದಾರಿಯಾಗಿತ್ತು!

‘ವಿಕ್ರಮ್, ನೀನು ಮಹತ್ವದ ಕಾರ್ಯಾಚರಣೆಗೆ ತೆರುಳುತ್ತಿರುವೆ. ಈ ಕ್ಷಣದಲ್ಲಿ ನಿನ್ನ ಮನದಲ್ಲೇನಿದೆ?’ ಎಂದು ಟೀವಿ ವರದಿಗಾರರ್‍ಬೊರು ಪ್ರಶ್ನಿಸಿದರು. ಇತ್ತ ಮನೆಯಲ್ಲಿ ಅಪ್ಪ-ಅಮ್ಮ ಟೀವಿ ಪರದೆಯ ಮೇಲೆ ಮಗನನ್ನೇ ದಿಟ್ಟಿಸುತ್ತಿದ್ದರು. ‘ಸರಕಾರ ಮತ್ತು ಸಮಾಜ ದೇಶಕ್ಕಾಗಿ ಪ್ರಾಣ ತೆತ್ತವರ ಕುಟುಂಬದ ಯೋಗಕ್ಷೇಮ ನೋಡಿಕೊಳ್ಳುತ್ತದೆಂದು ಆಶಿಸುತ್ತೇನೆ’ ಎಂದ ವಿಕ್ರಮ್ ಬಾತ್ರಾ ಕ್ಯಾಮೆರಾದಾಚೆ ಮುಖ ತಿರುಗಿಸಿದ! ಅಪ್ಪ ಜಿ.ಎಲ್. ಬಾತ್ರಾಗೆ ಅರ್ಥವಾಯಿತು. ಬಿಕ್ಕಳಿಸಿ ಅಳಲಾರಂಭಿಸಿದರು. ವಾಪಸ್ ಬರುವ ಬಗ್ಗೆ ವಿಕ್ರಮ್ ಮನದಲ್ಲಿ ಅನುಮಾನಗಳಿರುವುದು ಅವರಿಗೆ ಅರಿವಾಗಿತ್ತು. ಇತ್ತ ಪತ್ನಿ ಪ್ರಶ್ನಿಸಿದರೂ ತಮ್ಮ ಮನಸ್ಸಿನಲ್ಲೇನಿದೆ ಎಂಬುದನ್ನು ಹೇಳುವ ಧೈರ್ಯ ಅವರಿಗಿರಲಿಲ್ಲ. ಹೇಗೆ ತಾನೇ ತನ್ನ ಮಗ ವಾಪಸ್ ಬರುವುದಿಲ್ಲ ಎಂದು ಹೇಳಲು ಸಾಧ್ಯ?

೧೬ ಸಾವಿರ ಅಡಿ ಎತ್ತರದಲ್ಲಿರುವ ೪೮೭೫ ಶಿಖರವನ್ನು ಜಯಿಸುವ ಜವಾಬ್ದಾರಿ ವಿಕ್ರಮ್‌ನ ಹೆಗಲೇರಿತ್ತು. ಮಂಜು ಮುಸುಕಿರುವ ವಾತಾವರಣದಲ್ಲಿ ೮೦ ಡಿಗ್ರಿ ಕಡಿದಾದ ಶಿಖರವನ್ನು ಏರುವುದು ಸಾಮಾನ್ಯ ಮಾತಾಗಿರಲಿಲ್ಲ. ‘ಶೇರ್ ಷಾ’ ಎಂದೇ ಖ್ಯಾತಿ ಪಡೆದಿರುವ ವಿಕ್ರಮ್ ಬಾತ್ರಾ ಬರಲಿದ್ದಾನೆ ಎಂಬ ವಿಷಯ ಶತ್ರುಗಳಿಗೂ ಗೊತ್ತಾಗಿತ್ತು. ಜುಲೈ ೮ರ ರಾತ್ರಿ ವಿಕ್ರಮ್ ಮತ್ತು ಮತ್ತೊಬ್ಬ ಯುವ ಸೇನಾಧಿಕಾರಿ ಅನೂಜ್ ನಯ್ಯರ್ ಶತ್ರುಗಳ ಮೇಲೆ ಪ್ರತಿ ದಾಳಿ ಆರಂಭಿಸಿದರು. ಶಿಖರದ ಪ್ರತಿ ಹಂತದಲ್ಲೂ ಇದ್ದ ಶತ್ರುಗಳ ಬಂಕರ್‌ಗಳನ್ನು ನಾಶಪಡಿಸುತ್ತಲೇ ಸಾಗಿ ದರು. ಅಂತಿಮ ವಿಜಯ ಇನ್ನೇನು ಬಂತು ಎನ್ನುವಷ್ಟರಲ್ಲಿ ಶತ್ರುಗಳು ನಡೆಸಿದ ಸ್ಫೋಟದಲ್ಲಿ ಕಿರಿಯ ಅಧಿಕಾರಿಯೊಬ್ಬನ ಕಾಲುಗಳಿಗೆ ತೀವ್ರ ಗಾಯಗಳಾದವು. ಆತನನ್ನು ಬಂಕರ್‌ಗೆ ಎತ್ತಿಕೊಂಡು ಬರುವೆ ಎಂದು ಸನಿಹದಲ್ಲೇ ಇದ್ದ ಸುಬೇದಾರ್ ಹೇಳಿದರೂ ವಿಕ್ರಮ್ ಕೇಳಲಿಲ್ಲ. ‘ನಿನಗೆ ಮಕ್ಕಳಿದ್ದಾರೆ, ದೂರ ಸರಿ’ ಎಂದು ತಾನೇ ಹೊರ ನೆಗೆದ. ಶತ್ರುವಿನ ಗುಂಡು ಎದೆಯನ್ನೇ ಹೊಕ್ಕಿತು! ಇನ್ನೊಂದು ಗುಂಡು ಸೊಂಟವನ್ನು ಸೀಳಿತು. ಆದರೂ ನೆಲಕ್ಕುರುಳುವ ಮುನ್ನ ಬಾತ್ರಾ ಬಂದೂಕು ಐವರು ಭಯೋತ್ಪಾದಕರನ್ನು ಕೊಂದಿತ್ತು. ಬೆಳಗಾಗುವಷ್ಟರಲ್ಲಿ ೪೮೭೫ ಶಿಖರವೇನೋ ಕೈವಶವಾಯಿತು. ಆದರೆ ವಿಕ್ರಮ್‌ನ ಪ್ರೇಯಸಿ, ಮದುವೆಯಾಗುವ ಮುನ್ನವೇ ವಿಧವೆಯಾಗಿದ್ದಳು. ಅನೂಜ್ ನಯ್ಯರ್ ಕೂಡ ಹುತಾತ್ಮನಾಗಿದ್ದ.

ಇತ್ತ ಸೈನಿಕರಿಬ್ಬರು ಪಾಲಂಪುರದಲ್ಲಿ ಬಾತ್ರಾ ಮನೆಗೆ ಬಂದಾಗ ಅಪ್ಪ-ಅಮ್ಮ ಇಬ್ಬರೂ ಶಾಲೆಗೆ ಹೋಗಿದ್ದರು. ಅಮ್ಮ ಕಮಲ್ ಮನೆಗೆ ಬರುತ್ತಿದ್ದಂತೆ ಸೈನಿಕರು ಬಂದಿರುವ ವಿಷಯ ತಿಳಿದಾಗ ಅಳಲಾರಂಭಿಸಿದರು. ಸೈನಿಕರು ಬರುವುದು ಕೆಟ್ಟ ಸುದ್ದಿ ಮುಟ್ಟಿಸಲು ಮಾತ್ರ ಎಂಬುದು ಅವರಿಗೆ ತಿಳಿದಿತ್ತು. ಅದೇ ವೇಳೆಗೆ ಜಿ.ಎಲ್. ಬಾತ್ರಾ ಕೂಡ ಆಗಮಿಸಿದರು. ಹೊರಗೆ ಕಾದಿರುವಂತೆ ಸೈನಿಕರಿಗೆ ಸೂಚಿಸಿದ ಬಾತ್ರಾ, ದೇವರ ಕೋಣೆಗೆ ಹೋಗಿ ತಲೆಬಾಗಿ ಹೊರಬಂದರು. ಆದರೆ ‘ಬಾತ್ರಾಸಾಬ್, ವಿಕ್ರಮ್ ಇನ್ನಿಲ್ಲ’! ಎಂಬ ಮಾತು ಕೇಳಿದ ಕೂಡಲೇ ಅಲ್ಲೇ ಕುಸಿದರು. ಅಮ್ಮ ಕೂಡ ಬಿಕ್ಕಳಿಸಲಾರಂಭಿಸಿದರು. ನೇವುಗಲ್ ಕೆಫೆಯಲ್ಲಿ ತಾನೇ ಹೇಳಿದಂತೆ, ವಿಕ್ರಮ್ ತ್ರಿವರ್ಣ ಧ್ವಜದಲ್ಲಿ ಹೆಣವಾಗಿ ವಾಪಸ್ ಬಂದ. ಅಂತ್ಯಸಂಸ್ಕಾರಕ್ಕೆ ಆಗಮಿಸಿದ ಜನರಲ್ ಮಲಿಕ್, ‘ಒಂದು ವೇಳೆ ವಿಕ್ರಮ್ ಕಾರ್ಗಿಲ್‌ನಿಂದ ಜೀವಂತವಾಗಿ ಮರಳಿದ್ದರೆ ಇನ್ನು ೧೫ ವರ್ಷಗಳಲ್ಲಿ ನನ್ನ ಕುರ್ಚಿಯ ಮೇಲೆ ಕುಳಿತಿರುತ್ತಿದ್ದ’ ಎಂದು ದುಃಖಿಸಿದರು. ದೇಶವೇ ಕಣ್ಣೀರಿಟ್ಟಿತು. ಸಾಧನೆಯನ್ನು ಗುರುತಿಸಿದ ಅಟಲ್ ಸರಕಾರ, ವಿಕ್ರಮ್‌ಗೆ ಅತಿ ದೊಡ್ಡ ಶೌರ್ಯ ಪ್ರಶಸ್ತಿಯಾದ ಪರಮ ವೀರ ಚಕ್ರವನ್ನು ನೀಡಿ ಗೌರವಿಸಿತು. ಅನೂಜ್ ನಯ್ಯರ್‌ಗೆ ಮರಣೋತ್ತರ ಮಹಾವೀರ ಚಕ್ರವನ್ನು ನೀಡಲಾಯಿತು.
ಆದರೆ ಕಾರ್ಗಿಲ್‌ನಿಂದ ಮರಳಿದ ಕೂಡಲೇ ಮದುವೆಯಾಗುತ್ತೇನೆ ಎಂದು ಕೊಟ್ಟಿದ್ದ ಭರವಸೆಯನ್ನು ಈಡೇರಿಸದೇ ವಿಕ್ರಮ್ ದೂರವಾಗಿದ್ದಾನೆ. ಆತನ ಪ್ರೇಯಸಿ, ಮುಂದೆಂದೂ ಮದುವೆಯಾಗುವುದಿಲ್ಲ ಎಂದು ಶಪಥ ಗೈದಿದ್ದಾಳೆ! ಇದೆಲ್ಲ ಕಳೆದು ಹತ್ತು ವರ್ಷವಾದರೂ ಮನಸ್ಸನ್ನು ಮಾತ್ರ ಬದಲಿಸಿಲ್ಲ. ಚಂಡೀಗಢದ ಶಾಲೆಯೊಂದರಲ್ಲಿ ಶಿಕ್ಷಕಿಯಾಗಿರುವ ಆಕೆ, ವಿಕ್ರಮ್‌ನ ಆರಾಧನೆಯಲ್ಲೇ ಬದುಕು ಸವೆಸುತ್ತಿದ್ದಾಳೆ. ಇತ್ತ ‘ಗುರುಗೋವಿಂದ್ ಸಿಂಗ್ ದೇಶಕ್ಕಾಗಿ ತನ್ನ ನಾಲ್ಕೂ ಮಕ್ಕಳನ್ನು ತ್ಯಾಗ ಮಾಡಿದರು. ಬಹುಶಃ ಒಬ್ಬ ಮಗ ದೇಶಕ್ಕೆ, ಇನ್ನೊಬ್ಬ ನನಗೆ ಎಂದೇ ದೇವರು ಅವಳಿ ಮಕ್ಕಳನ್ನು ಕೊಟ್ಟ’ ಎಂದು ಕಮಲ್ ತನ್ನನ್ನು ತಾನೇ ಸಂತೈಸಿಕೊಳ್ಳುತ್ತಿದ್ದಾರೆ. ಇಂತಹ ಅಮ್ಮಂದಿರು ಅದೆಷ್ಟು ಜನರಿದ್ದಾರೆ?

ಕಾರ್ಗಿಲ್ ಯುದ್ಧ ಕಳೆದು ಹತ್ತು ವರ್ಷಗಳಾದವು. ಪ್ರತಿ ವರ್ಷ ಜುಲೈ ೨೬ರಂದು ಕಾರ್ಗಿಲ್ ವಿಜಯ ದಿನವನ್ನು ಆಚರಿಸುತ್ತೇವೆ. ಬಾತ್ರಾ, ಅನೂಜ್ ನಯ್ಯರ್, ಸೌರಬ್ ಕಾಲಿಯಾರಂತಹ ೫೩೩ ಸೈನಿಕರು ನಮಗಾಗಿ, ನಮ್ಮ ದೇಶಕ್ಕಾಗಿ ಪ್ರಾಣ ತೆತ್ತಿದ್ದಾರೆ. ದೇಶ ಕಾಯುತ್ತಿರುವ ಇಂತಹ ಸೈನಿಕರಿಂದಾಗಿಯೇ ನಾವು ಬೆಚ್ಚನೆ ಮನೆಯೊಳಗೆ ಬದುಕು ನಡೆಸುತ್ತಿದ್ದೇವೆ! ನೆಮ್ಮದಿಯಿಂದ ನಿದ್ರೆ ಮಾಡುತ್ತಿದ್ದೇವೆ. ಆದರೂ ನಮ್ಮ ಜೀವರಕ್ಷಣೆ ಮಾಡುತ್ತಿರುವ ಸೈನಿಕರ ಆತ್ಮರಕ್ಷಣೆಯ ಹಕ್ಕನ್ನು ಮರೆತು, ಭಯೋತ್ಪಾದಕರ ‘ಮಾನವ ಹಕ್ಕು’ಗಳ ಗ್ಗೆ ಮಾತನಾಡುವ ನಾವು ಕೃತಘ್ನರಲ್ಲವೇ?

ಎಷ್ಟೇ ಆಗಲಿ, ದೇಶಕ್ಕಾಗಿ ರಕ್ತ ಚೆಲ್ಲಿದವರನ್ನು ಮರೆಯುವುದರಲ್ಲಿ ನಾವು ನಿಸ್ಸೀಮರು!

ಕೃಪೆ : ಪ್ರತಾಪ್ ಸಿಂಹ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ