ನನ್ನ ಬ್ಲಾಗ್ ಪಟ್ಟಿ

ಶನಿವಾರ, ಜುಲೈ 31, 2010

ಅಟಲ್ ಸೋಗಲಾಡಿಯೇ! ಹಾಂ, ಏನಂದ್ರಿ ಲಿಬರ್‍ಹಾನ್?


TRC ಅಥವಾ Truth and Reconciliation Commission!
“ಸತ್ಯ ಶೋಧನೆ ಹಾಗೂ ರಾಜಿ” ಎಂಬ ಈ ಆಯೋಗದ ಹೆಸರನ್ನು ಬಹುಶಃ ನೀವು ಕೇಳಿರಬಹುದು. ನೊಬೆಲ್ ಶಾಂತಿ ಪ್ರಶಸ್ತಿ ಪುರಸ್ಕೃತ ಆರ್ಚ್ ಬಿಷಪ್ ಡೆಸ್ಮಂಡ್ ಟುಟು ಅದರ ಅಧ್ಯಕ್ಷರಾಗಿದ್ದರು. ಡಾ. ಅಲೆಕ್ಸ್ ಬೊರೈನ್, ಮೇರಿ ಬರ್ಟನ್, ವಕೀಲ ಕ್ರಿಸ್ ಡಿ ಜಾಗರ್, ಬೊಂಗಾನಿ ಫಿಂಕಾ, ರೆವೆರೆಂಡ್ ಖೋಝಾ ಮೊಜೋ, ಡುಮಿಸಾ ಎನ್ಸೆಬೆಝಾ, ಯಾಸ್ಮಿನ್ ಸೂಕಾ ಮುಂತಾದ ಖ್ಯಾತನಾಮರು ಸದಸ್ಯರಾಗಿದ್ದರು. ಅದು ಮೂರು ಉಪಸಮಿತಿಗಳನ್ನು ನೇಮಕ ಮಾಡಿತು.

1. 1960ರಿಂದ 1994ರವರೆಗೂ ದಕ್ಷಿಣ ಆಫ್ರಿಕಾದಲ್ಲಿ ನಡೆದ ಮಾನವಹಕ್ಕು ಉಲ್ಲಂಘನೆ ಪ್ರಕರಣಗಳ ಪರಿಶೋಧನೆ ಹಾಗೂ ತನಿಖಾ ಸಮಿತಿ
2. ವರ್ಣಭೇದ ನೀತಿಯಿಂದಾಗಿ ಸಂತ್ರಸ್ತರಾಗಿದ್ದ ಜನರಿಗೆ ಪುನರ್ವಸತಿ ಕಲ್ಪಿಸುವ ಸಮಿತಿ
3. ಕ್ಷಮಾದಾನ ಯಾಚಿಸಿದವರ ಅಹವಾಲನ್ನು ಪರಿಗಣಿಸಿ ಜೀವದಾನ ನೀಡುವ ಸಮಿತಿ

ಆ ಮೂಲಕ ಮಾನವ ಹಕ್ಕುಗಳ ಉಲ್ಲಂಘನೆ ಮಾಡಿದವರನ್ನು ಸಾರ್ವಜನಿಕವಾಗಿ ವಿಚಾರಣೆಗೆ ಒಳಪಡಿಸಲಾಯಿತು, ವರ್ಣ ಭೇದ ನೀತಿಯ ಕಾಲದಲ್ಲಿ ದೌರ್ಜನ್ಯವೆಸಗಿದವರನ್ನು ಕಟಕಟೆಗೆ ಕರೆತಂದು ನಿಲ್ಲಿಸಲಾಯಿತು. ತಪ್ಪನ್ನು ಒಪ್ಪಿಕೊಂಡವರಿಗೆ ಕ್ಷಮಾ ದಾನ ನೀಡುವ ಅಧಿಕಾರವನ್ನೂ ಆಯೋಗಕ್ಕೆ ನೀಡಲಾಗಿತ್ತು. ಈ ಆಯೋಗ ರಚನೆಯಾಗಿದ್ದು 1995ರಲ್ಲಿ. ಅದಕ್ಕೂ ಮೊದಲು 1994, ಏಪ್ರಿಲ್ 27ರಂದು ನಡೆದ ದಕ್ಷಿಣ ಆಫ್ರಿಕಾದ ಮೊಟ್ಟ ಮೊದಲ ಸಾರ್ವತ್ರಿಕ ಚುನಾವಣೆಯಲ್ಲಿ ಆಫ್ರಿಕನ್ ನ್ಯಾಷನಲ್ ಕಾಂಗ್ರೆಸ್(ಎಎನ್‌ಸಿ) ಶೇ. 62ರಷ್ಟು ಮತಗಳನ್ನು ಪಡೆದು ಅಧಿಕಾರಕ್ಕೆ ಬಂದಿತ್ತು. 1994, ಮೇ 10ರಂದು ದೇಶದ ಮೊದಲ ಕಪ್ಪುವರ್ಣೀಯ ಅಧ್ಯಕ್ಷರಾಗಿ ನೆಲ್ಸನ್ ಮಂಡೇಲಾ ಅಧಿಕಾರ ವಹಿಸಿಕೊಂಡಿದ್ದರು. ಅಲ್ಲಿಗೆ ವರ್ಣಭೇದ ಸಮಸ್ಯೆ ಮುಗಿಯಿತೆಂದು ಅವರು ಭಾವಿಸಲಿಲ್ಲ. ಸುಮಾರು ಮೂರೂವರೆ ದಶಕಗಳ ಕಾಲ ಪರಸ್ಪರ ಬಡಿದಾಡುತ್ತಿದ್ದ ಬಿಳಿಯರು ಹಾಗೂ ಕರಿಯರ ನಡುವಿನ ಕಿತ್ತಾಟಕ್ಕೆ ಕಾರಣ ಹುಡುಕಿ, ತಪ್ಪಿತಸ್ಥರನ್ನು ಗುರುತಿಸಿ, ಮುಂದೆ ಅಂತಹ ಸಂಘರ್ಷವೇರ್ಪಡದಂತೆ ತಡೆಯಲು ನೆಲ್ಸನ್ ಮಂಡೇಲಾ ಅವರು “ಸತ್ಯ ಶೋಧನೆ ಹಾಗೂ ರಾಜಿ” ಎಂಬ ಈ ಆಯೋಗವನ್ನು ರಚನೆ ಮಾಡಿದ್ದರು. 1998, ಅಕ್ಟೋಬರ್ 28ರಂದು ವರದಿಯನ್ನು ಸಲ್ಲಿಸಿದ ಈ ಆಯೋಗ ಯಾರೋ ಒಬ್ಬರನ್ನು ತಪ್ಪಿತಸ್ಥರನ್ನಾಗಿ ಮಾಡಲಿಲ್ಲ, ಯಾವುದೋ ಒಂದು ವರ್ಗದತ್ತ ಬೆರಳು ಮಾಡಲಿಲ್ಲ. ಮೂರೂವರೆ ದಶಕಗಳ ಕಾಲ ನಡೆದ ವರ್ಣಭೇದ ನೀತಿ, ಅದರಡಿ ನಡೆದ ದೌರ್ಜನ್ಯ, ಅದರಿಂದ ಸೃಷ್ಟಿಯಾದ ಭೀಕರ ಹಿಂಸಾಚಾರಗಳಿಗೆ ಕರಿಯರು ಹಾಗೂ ಬಿಳಿಯರಿಬ್ಬರನ್ನೂ ಹೊಣೆಗಾರರನ್ನಾಗಿ ಮಾಡಿತು, ಎರಡೂ ಪಂಗಡಗಳನ್ನು ಖಂಡಿಸಿತು. ಕರಿಯರು ಹಳೆಯ ವೈಷಮ್ಯವನ್ನು ಮರೆತು ಒಟ್ಟಾಗಿ ದೇಶಕಟ್ಟಬೇಕು ಎಂದು ಕಿವಿಮಾತು ಹೇಳಲಾ ಯಿತು. ಹಾಗಾಗಿ ದಕ್ಷಿಣ ಆಫ್ರಿಕಾದಲ್ಲಿ ಇಂದು ಶಾಂತಿ ನೆಲೆಸಿದೆ. ಒಂದು ವೇಳೆ, ಆಯೋಗವೇನಾದರೂ ಜನಾಂಗೀಯ ಸಮರಕ್ಕೆ ಒಂದು ವರ್ಗವನ್ನು ಮಾತ್ರ ದೋಷಿಯನ್ನಾಗಿ ಮಾಡಿ, ಗೂಬೆ ಕೂರಿಸಿದ್ದರೆ ಪರಸ್ಪರ ವೈಷಮ್ಯ, ಅಸಮಾಧಾನ ಇಂದಿಗೂ ಮುಂದುವರಿದುಕೊಂಡು ಬರುತ್ತಿತ್ತೇನೋ.

ಧರ್ಮಗುರು ಡೆಸ್ಮಂಡ್ ಟುಟು ಹಾಕಿಕೊಟ್ಟ ಇಂತಹ ಮಾದರಿ ಮೇಲ್ಪಂಕ್ತಿ ಮುಂದಿದ್ದರೂ ಬಾಬರಿ ಮಸೀದಿ ಧ್ವಂಸ ಪ್ರಕರಣದ ‘ಸತ್ಯಶೋಧನೆ’ ಮಾಡಲು ನೇಮಕವಾಗಿದ್ದ ನ್ಯಾಯಮೂರ್ತಿ ಮನಮೋಹನ್ ಸಿಂಗ್ ಲಿಬರ್‍ಹಾನ್ ಆಯೋಗ ಮಾಡಿದ್ದೇನು?

ಭಾರತದ ಇತಿಹಾಸದಲ್ಲೇ ಅತಿ ಹೆಚ್ಚು ಅವಧಿ(17 ವರ್ಷ) ತೆಗೆದುಕೊಂಡು, 48 ತನಿಖಾ ಅವಧಿ ವಿಸ್ತರಣೆಗಳನ್ನು ಪಡೆದು ಕೊಂಡು ಲಿಬರ್‍ಹಾನ್ ಕೊಟ್ಟ ವರದಿಯಾದರೂ ಎಂಥದ್ದು? ವರದಿಯ 1029 ಪುಟಗಳಲ್ಲಿ ಶೋಧಿಸಿರುವ ಸತ್ಯವಾದರೂ ಏನು? “ಲಾಲ್ ಕೃಷ್ಣ ಆಡ್ವಾಣಿ, ಅಟಲ್ ಬಿಹಾರಿ ವಾಜಪೇಯಿ, ಮುರಳಿ ಮನೋಹರ ಜೋಶಿ ಮುಂತಾದವರಿಗೆ ಸಂಘಪರಿ ವಾರದ ಕಾರ್ಯಸೂಚಿಯೇನೆಂದು ತಿಳಿದಿರಲಿಲ್ಲ ಎಂದು ಒಂದು ಕ್ಷಣಕ್ಕೂ ಅಂದುಕೊಳ್ಳಬೇಡಿ. ‘ಸೋಗಲಾಡಿ ಸೌಮ್ಯವಾದಿಗಳು’ ಎಂದು ಕರೆಯಬಹುದಾದ ಈ ನಾಯಕರು ಖಂಡಿತ ಸಂಘ ಪರಿವಾರದ ಆeಯನ್ನು ಪಾಲಿಸದೇ ಇರುತ್ತಿರಲಿಲ್ಲ. ಇವರೆಲ್ಲಾ ಸಂಘಪರಿವಾರದ ಮುಖವಾಡಗಳು”.

“ಇವರಿಗೆ ಸಂಶಯದ ಲಾಭ ಕೊಡುವುದಕ್ಕಾಗಲಿ, ಜವಾಬ್ದಾರಿಯಿಂದ ನುಣುಚಿಕೊಳ್ಳಲು ಬಿಡುವುದಕ್ಕಾಗಲಿ ಆಗುವುದಿಲ್ಲ. ಈ ನಾಯಕರುಗಳು ಮತದಾರರ ವಿಶ್ವಾಸಕ್ಕೆ ದ್ರೋಹಬಗೆದಿದ್ದಾರೆ. ಪ್ರಜಾತಂತ್ರದಲ್ಲಿ ಇದಕ್ಕಿಂತ ದೊಡ್ಡ ದ್ರೋಹ ಮತ್ತೊಂದಿಲ್ಲ. ಹಾಗಾಗಿ ಇವರನ್ನು, ಇವರು ಮಾಡಿದ ಪಾಪಕಾರ್ಯಕ್ಕಾಗಿ ಸೋಗಲಾಡಿ ಸೌಮ್ಯವಾದಿಗಳು ಎಂದು ಕರೆಯಲು ಆಯೋಗಕ್ಕೆ ಯಾವ ಅಂಜಿಕೆಯೂ ಇಲ್ಲ”.

ಹಾಗಂತ ನ್ಯಾಯಮೂರ್ತಿ ಎಂ.ಎಸ್. ಲಿಬರ್‍ಹಾನ್ ತಮ್ಮ ವರದಿಯಲ್ಲಿ ಹೇಳಿದ್ದಾರೆ!

ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರನ್ನಾಗಲಿ, ಅಥವಾ ಯಾರನ್ನೇ ಆಗಲಿ ‘ಸೋಗಲಾಡಿ ಸೌಮ್ಯವಾದಿಗಳು’ ಎಂದು ಕರೆಯಲು ಲಿಬರ್‍ಹಾನ್‌ಗೆ ಯಾವ ಹಕ್ಕಿದೆ? ಅಷ್ಟಕ್ಕೂ ಲಿಬ ರ್‍ಹಾನ್ ಯಾರು? ಲಿಬರ್‍ಹಾನ್ ಆಯೋಗ ಒಂದು ಸತ್ಯಶೋಧನೆ ಅಥವಾ ಫ್ಯಾಕ್ಟ್ ಫೈಂಡಿಂಗ್ ಸಮಿತಿಯೇ ಹೊರತು, ಮುಂಬೈ ಸ್ಫೋಟದ ಬಗ್ಗೆ ತನಿಖೆ ಹಾಗೂ ವಿಚಾರಣೆ ನಡೆಸಿದ ಜಸ್ಟಿಸ್ ಶ್ರೀಕೃಷ್ಣ ಆಯೋಗದಂತೆ ನ್ಯಾಯಾಂಗೀಯ ತನಿಖಾ ಆಯೋಗವಲ್ಲ. ಒಂದು ವೇಳೆ ಅಟಲ್, ಆಡ್ವಾಣಿ, ಜೋಶಿ ಅಥವಾ ಇನ್ನಾವುದೇ ನಾಯಕರು ಬಾಬರಿ ಮಸೀದಿ ಧ್ವಂಸದಲ್ಲಿ ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಭಾಗಿಯಾಗಿದ್ದಾರೆಂದಾದರೆ ಅದಕ್ಕೆ ಸೂಕ್ತ ಸಾಕ್ಷ್ಯ, ಸಾಂದರ್ಭಿಕ ಆಧಾರಗಳನ್ನು ಕಲೆಹಾಕಿ, ಅವರ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಲಿಬರ್‍ಹಾನ್ ಸೂಚಿಸಬಹುದಿತ್ತು. ಒಂದು ಸತ್ಯಶೋಧನಾ ಆಯೋಗ ಮಾಡಬೇಕಾದ ಕೆಲಸವೂ ಅದನ್ನೇ. ಅದನ್ನು ಬಿಟ್ಟು, ಸೋಗಲಾಡಿ ಸೌಮ್ಯವಾದಿಗಳು ಎಂದು ಯಾವ ಆಧಾರದ ಮೇಲೆ ಕರೆದಿದ್ದಾರೆ? ಕೆಟ್ಟ ಉದ್ದೇಶ ವಿದ್ದರಷ್ಟೇ ಸಾಲದು, ಕೆಟ್ಟ ಕೆಲಸವನ್ನೂ ಮಾಡಿದರೆ ಮಾತ್ರ ಅದು ಶಿಕ್ಷಾರ್ಹ (Bad intention coupled with bad act is punishable) ಎಂದು ನಮ್ಮ ಕಾನೂನು ಮತ್ತು ನ್ಯಾಯಾಂಗ ಎರಡೂ ಹೇಳುತ್ತವೆ. ಅಟಲ್‌ಗೆ ಬಾಬರಿ ಮಸೀದಿ ಧ್ವಂಸಗೊಳಿಸುವ ಉದ್ದೇಶವಿತ್ತು, ಅವರು ಸಂಘಪರಿವಾರದ ಉದ್ದೇಶಕ್ಕೆ ಅನುಗುಣ ವಾಗಿ ನಡೆದುಕೊಂಡಿದ್ದಾರೆ ಎಂದು ಯಾವ ಆಧಾರದ ಮೇಲೆ ಹೇಳುತ್ತಿದ್ದಾರೆ? ಅಷ್ಟಕ್ಕೂ ಅಟಲ್ ಯಾವ ವಿಧ್ವಂಸಕ ಕೃತ್ಯವೆಸಗಿದ್ದಾರೆ? ತನ್ನ 17 ವರ್ಷಗಳ ಸುದೀರ್ಘ ಅವಧಿಯಲ್ಲಿ ಲಿಬರ್‍ಹಾನ್ ಎಂದಾದರೂ ಅಟಲ್ ಅವರನ್ನು ಕರೆಸಿ ವಿಚಾರಣೆ ನಡೆಸಿದ್ದಾರೆಯೇ? 1952ರ ತನಿಖಾ ಆಯೋಗ ಕಾಯಿದೆಯ 8ಬಿ ವಿಧಿಯಡಿ ಅಟಲ್ ಅವರನ್ನು ಕರೆಸಿಕೊಂಡು, ವಿಚಾರಣೆ ಮಾಡಿ, ಅಟಲ್ ಕೂಡ ಬಾಬರಿ ಮಸೀದಿ ಧ್ವಂಸ ಕಾರ್ಯದಲ್ಲಿ ಭಾಗಿಯಾಗಿದ್ದರೆಂಬುದಕ್ಕೆ ಸಾಂದರ್ಭಿಕ ಸಾಕ್ಷ್ಯಾಧಾರ ನೀಡಿ ತಪ್ಪಿತಸ್ಥ ಎಂದು ಕರೆದಿದ್ದರೆ ಒಪ್ಪಿಕೊಳ್ಳಬಹುದಿತ್ತು. ಒಬ್ಬ ನಿವೃತ್ತ ನ್ಯಾಯಾಧೀಶರಾಗಿ ಲಿಬರ್‍ಹಾನ್ ಇಂತಹ ಯಾವುದೇ ಪ್ರಕ್ರಿಯೆಗಳನ್ನು ಮಾಡದೆ ಗೂಬೆ ಕೂರಿಸುವುದು ಎಷ್ಟು ಸರಿ?

ಅಟಲ್ ಅವರನ್ನೂ ವಿಚಾರಣೆಗೆ ಗುರಿಪಡಿಸಬೇಕೆಂದು ಮೊಹಮದ್ ಅಸ್ಲಾಂ ಭುರೆ ಎಂಬವರ ಪರವಾಗಿ ವಕೀಲ ಓ.ಪಿ. ಶರ್ಮಾ ಅರ್ಜಿ ಹಾಕಿದ್ದು ನಿಜ. “ಆ ಅರ್ಜಿಯ ಬಗ್ಗೆ ವಿವರಣಾತ್ಮಕ ವಾದ ವಾದವನ್ನು ಆಲಿಸಲಾಯಿತು. ಬಾಬರಿ ಮಸೀದಿ ಧ್ವಂಸಕ್ಕೆ ಸಂಬಂಧಿಸಿದಂತೆ ವಾಜಪೇಯಿಯವರನ್ನು ಹೊಣೆಗಾರರನ್ನಾಗಿ ಮಾಡಲು ಯಾವ ಆಧಾರಗಳೂ ಇಲ್ಲ. ಅವರನ್ನು ವಿಚಾರಣೆಗೆ ಕರೆಸುವ ಅಗತ್ಯವಿಲ್ಲ ಎಂಬ ನನ್ನ ವಾದವನ್ನು 2003, ಜುಲೈ 22ರಂದು ಒಪ್ಪಿಕೊಂಡ ಆಯೋಗ ಅರ್ಜಿಯನ್ನು ತಿರಸ್ಕರಿಸಿತ್ತು” ಎಂದು ಲಿಬರ್‍ಹಾನ್ ಆಯೋಗದ ಅಂದಿನ ವಕೀಲರಾಗಿದ್ದ ಅನುಪಮ್ ಗುಪ್ತಾ ಅವರು ‘ದಿ ಟೈಮ್ಸ್ ಆಫ್ ಇಂಡಿಯಾ’ಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ. ಅಷ್ಟೇ ಅಲ್ಲ, “ಕರೆಸಿ ವಿಚಾರಣೆ ಮಾಡದೆ ವಾಜಪೇಯಿಯವರನ್ನು ದೂಷಿಯೆಂದು ಹೇಳುವುದು ಕಾನೂನುಬಾಹಿರ” ಎಂದು ಅಭಿಪ್ರಾಯಪಟ್ಟಿದ್ದಾರೆ. ಇಷ್ಟಾಗಿಯೂ ಅಟಲ್ ಮೇಲೆ ಕೆಸರೆರಚಿದ್ದೇಕೆ?
ಅಟಲ್‌ಗೆ ಬಾಬರಿ ಮಸೀದಿಯನ್ನು ಧ್ವಂಸ ಮಾಡಬೇಕೆಂಬ ಉದ್ದೇಶ ಇತ್ತೋ, ಇಲ್ಲವೋ… ಆದರೆ ಜಸ್ಟಿಸ್ ಲಿಬರ್‍ಹಾನ್ ಅವರು ಬಳಸಿರುವ ಪದಗಳು ಹಾಗೂ ಮಾಧ್ಯಮಕ್ಕೆ ವರದಿ ಸೋರಿಕೆಯಾಗಿದ್ದನ್ನು ನೋಡಿದರೆ ಇಲ್ಲೇನೋ ಉದ್ದೇಶವಿದೆ ಯೆಂಬುದು ಮಾತ್ರ ಸ್ಪಷ್ಟವಾಗುತ್ತದೆ.

ಹೀಗೆ ಸಂಶಯ ಪಡುವುದಕ್ಕೂ ಕಾರಣವಿದೆ!

ಯಾವುದೇ ಪಕ್ಷ ಕೇಂದ್ರದಲ್ಲಿ ಅಧಿಕಾರಕ್ಕೆ ಬರಬೇಕೆಂದಾದರೆ 80 ಸಂಸದರನ್ನು ಆಯ್ಕೆಮಾಡುವ ಉತ್ತರ ಪ್ರದೇಶವನ್ನು ಗೆಲ್ಲಲೇ ಬೇಕೆಂಬ ಮಾತು ಹಿಂದೆಯೂ ಇತ್ತು, ಈಗಲೂ ಇದೆ. ಉತ್ತರ ಪ್ರದೇಶದಲ್ಲಿ ಶೇ. 19ರಷ್ಟು ಮುಸ್ಲಿಮರಿದ್ದಾರೆ. ಸಮಾಜವಾದಿ ಪಕ್ಷ ಹಾಗೂ ಬಿಎಸ್‌ಪಿ ತೆಕ್ಕೆಯಲ್ಲಿರುವ ಮುಸ್ಲಿಮರನ್ನು ತನ್ನೆಡೆಗೆ ಸೆಳೆದುಕೊಳ್ಳಲು ಹಾಗೂ ಬಿಜೆಪಿಯನ್ನು ಸಂಪೂರ್ಣವಾಗಿ ನಾಶ ಮಾಡಲು ಕಾಂಗ್ರೆಸ್‌ಗೆ ಸೂಕ್ತ ಕಾರ್ಯತಂತ್ರದ ಅಗತ್ಯವಿದೆ. ಅದರಲ್ಲೂ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಗದ್ದುಗೆ ಹಿಡಿದೇ ಹಿಡಿಯುತ್ತೇನೆ ಎಂದು ಹೊರಟಿರುವ ರಾಹುಲ್‌ಗಾಂಧಿಯವರಿಗೆ ಮುಸ್ಲಿಮರನ್ನು ಸೆಳೆಯಲು ಬಲವಾದ ಅಸ್ತ್ರವೊಂದು ಬೇಕಿತ್ತು. ಇತ್ತ ಬೆಲೆಯೇರಿಕೆ, ಜಾರ್ಖಂಡ್‌ನ ಮಾಜಿ ಮುಖ್ಯಮಂತ್ರಿ ಮಧು ಕೋಡಾ ಸೃಷ್ಟಿಸಿರುವ ಹಗರಣ, ಕಬ್ಬು ಬೆಳೆಗಾರರ ಸಮಸ್ಯೆಗೆ ಸ್ಪಂದಿಸದೇ ಇರುವುದು, ಲಷ್ಕರೆ ತಯ್ಬಾದ ಪಿತೂರಿದಾರ ಹೆಡ್ಲಿ ಟೇಪ್ ಹಾಗೂ ಆತ ನುಣುಚಿಕೊಂಡ ಪ್ರಕರಣ, ಅದರ ಬೆನ್ನಲ್ಲೇ ಬರಲಿದ್ದ ಮುಂಬೈ ದಾಳಿಯ ವಾರ್ಷಿಕ ದಿನ ಇವುಗಳನ್ನಿಟ್ಟುಕೊಂಡು ಪ್ರಸ್ತುತ ನಡೆಯುತ್ತಿರುವ ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಕೇಂದ್ರ ಸರಕಾರವನ್ನು ಪ್ರತಿಪಕ್ಷಗಳು ಪೇಚಿಗೆ ಸಿಲುಕಿಸುವುದು ಖಚಿತ ಎಂದು ಕಾಂಗ್ರೆಸ್‌ಗೆ ಚೆನ್ನಾಗಿಯೇ ಗೊತ್ತಿತ್ತು. ಆಗ ರೂಪುಗೊಂಡ ಮಾಸ್ಟರ್ ಪ್ಲಾನ್ ಏನಿದೆಯಲ್ಲಾ ಅದೇ ‘ಲಿಬರ್‍ಹಾನ್ ಆಯೋಗದ ವರದಿ ಸೋರಿಕೆ”! ಅದರಲ್ಲೂ ರಾಷ್ಟ್ರದ ಗಮನವನ್ನು ಮುಖ್ಯ ಸಮಸ್ಯೆಗಳಿಂದ ಬೇರೆಡೆಗೆ ಸೆಳೆಯುವ ತಂತ್ರದಲ್ಲಿ ಕಾಂಗ್ರೆಸ್ ಎಂದೋ ಪರಿಣತಿ ಸಾಧಿಸಿದೆ. ಆಡ್ವಾಣಿ, ಜೋಶಿಯವರನ್ನು ಟಾರ್ಗೆಟ್ ಮಾಡಿದರೆ ಯಾರೂ ತಲೆಕೆಡಿಸಿಕೊಳ್ಳುವುದಿಲ್ಲ, ಅವರ ಪಾತ್ರ ಎಲ್ಲರಿಗೂ ತಿಳಿದಿರುವಂಥದ್ದೇ, ಆದರೆ ಅಟಲ್ ಮೇಲೆ ಆರೋಪ ಮಾಡಿದರೆ ಎಲ್ಲರೂ ಮುಗಿಬೀಳುತ್ತಾರೆ ಎಂದು ಕಾಂಗ್ರೆಸ್‌ಗೆ ಚೆನ್ನಾಗಿ ಗೊತ್ತಿತ್ತು. ಈಗ ಕಾಣುತ್ತಿರುವುದೂ ಅಂತಹ ತಂತ್ರವನ್ನೇ. ಪಕ್ಷಾತೀತವಾಗಿ ಎಲ್ಲರೂ ಗೌರವಿಸುವ ಅಟಲ್ ಬಿಹಾರಿ ವಾಜಪೇಯಿಯವರನ್ನು ಒಮ್ಮೆ “ಸುಳ್ಳುಗಾರ” ಎಂದು ಕರೆದಿದ್ದ ಸೋನಿಯಾಗಾಂಧಿಯವರ ಪಕ್ಷದಿಂದ ಇನ್ನೇನನ್ನು ನಿರೀಕ್ಷಿಸಲು ಸಾಧ್ಯ? ಒಂದು ವೇಳೆ ಕಾಂಗ್ರೆಸ್‌ಗೆ ಉದ್ದೇಶ ಶುದ್ಧಿ ಇದ್ದಿದ್ದೇ ಆದರೆ, ಆಯೋಗ ಕಳೆದ ಜೂನ್‌ನಲ್ಲೇ ವರದಿಯನ್ನು ಸಲ್ಲಿಸಲಾಗಿದ್ದರೂ ಇಷ್ಟು ದಿನ ಏಕೆ ಸಂಸತ್ತಿನ ಮುಂದಿಟ್ಟಿರಲಿಲ್ಲ? ಮಳೆಗಾಲದ ಅಧಿವೇಶನದಲ್ಲೇ ಸಂಸತ್ತಿನ ಮುಂದಿಡಬಹುದಾಗಿತ್ತಲ್ಲವೆ? ಕನಿಷ್ಠ ಬಹಿರಂಗವನ್ನಾ ದರೂ ಏಕೆ ಮಾಡಲಿಲ್ಲ? ಗೃಹ ಸಚಿವ ಪಿ. ಚಿದಂಬರಂ ಹೇಳುವಂತೆ ವರದಿಯ ಒಂದೇ ಕಾಪಿಯಿದ್ದು, ಅದು ಅವರ ಬಳಿಯೇ ಇದೆ ಎಂದಾಗಿದ್ದರೆ ಅದು ಮಾಧ್ಯಮಗಳಿಗೆ ಸಿಕ್ಕಿದ್ದಾದರೂ ಹೇಗೆ? ಅದರಲ್ಲೂ ಕಾಂಗ್ರೆಸ್‌ಗೆ ಅಪ್ತರಾಗಿರುವ ಪತ್ರಿಕೆ, ಚಾನೆಲ್ ಹಾಗೂ ಪತ್ರಕರ್ತರಿಗೇ ಆ ವರದಿ ಸೋರಿಕೆಯಾಗಿದ್ದೇಕೆ?

ಅದಿರಲಿ, ಯಾವನೋ ಮೀರ್ ಬಾಕಿ ಕಟ್ಟಿದ ಒಂದು ಗೋರಿ ಬಗ್ಗೆ ಇವರಿಗೆ ಇಷ್ಟೊಂದು ಪ್ರೇಮವೇಕೆ? ಅದೇನು ಮೆಕ್ಕಾವೂ ಅಲ್ಲ, ಮದೀನಾನೂ ಅಲ್ಲ, ಅಲ್ ಅಕ್ಷಾ ಕೂಡ ಅಲ್ಲ. ಪ್ರಾರ್ಥನಾ ಮಂದಿರ ಎಂದು ಕರೆಯಲು ಅಲ್ಲೆಂದೂ ನಮಾಜ್ ಕೂಡ ನಡೆದಿಲ್ಲ. ಯಾವುದೋ ಒಂದು ಕಳಂಕಿತ ಕಟ್ಟಡವನ್ನು ಕೆಡವಿದ ಮಾತ್ರಕ್ಕೆ ‘ನ್ಯಾಷನಲ್ ಮಾನ್ಯುಮೆಂಟ್’ ಅನ್ನು ಕೆಡವಿದರೇನೋ ಎಂಬಂತೆ ವರ್ತಿಸುತ್ತಿರುವುದೇಕೆ? ಬಾಬರಿ ಮಸೀದಿಯನ್ನು ಕೆಡವಿದ್ದು ತಪ್ಪು ಎನ್ನುವುದಾದರೆ ರಾಮನ ದೇವಾಲಯದ ಮೇಲೆ ಮಸೀದಿ ಕಟ್ಟಿದ್ದು ಮೊದಲನೇ ತಪ್ಪು. ಇದರ ಬಗ್ಗೆ ಸತ್ಯಶೋಧನೆ ಮಾಡಲು ಹೊರಟ ಸಮಿತಿ, ದಕ್ಷಿಣ ಆಫ್ರಿಕಾದ Truth and Reconciliation Commissionನಂತೆ ಎರಡೂ ವರ್ಗಗಳನ್ನು ತಪ್ಪಿತಸ್ಥರನ್ನಾಗಿ ಮಾಡಿ, ಸಾಮರಸ್ಯದ ಪಾಠ ಹೇಳಬಹುದಿತ್ತು ಅಲ್ಲವೆ? ಅಟಲ್ ಅವರಂತಹ ನಾಯಕನನ್ನು ‘ಸುಳ್ಳುಗಾರ’ ಎಂದಿದ್ದ ಸೋನಿಯಾಗಾಂಧಿ ಎಂಬ ರಾಜಕಾರಣಿಗೂ, ‘ಸೋಗಲಾಡಿ ಸೌಮ್ಯವಾದಿ’ ಎಂದಿರುವ ನ್ಯಾಯಮೂರ್ತಿ ಲಿಬರ್‍ಹಾನ್‌ಗೂ ಏನು ವ್ಯತ್ಯಾಸ? ಇಂಥವರು ಸಮಾಜವನ್ನು ಒಡೆಯುತ್ತಾರೆಯೇ ಹೊರತು, ಒಂದುಗೂಡಿಸುವುದಿಲ್ಲ. ಅದಿರಲಿ, ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರು ಹುತಾತ್ಮರಾಗಿ 25 ವರ್ಷಗಳಾದ ಸಂದರ್ಭದಲ್ಲಿ (ಅಕ್ಟೋಬರ್ 31ರಂದು) ಇಂದಿರಾ ಅವರನ್ನು ಮಹಾನ್ ನಾಯಕಿ ಎಂದು ಹೊಗಳಿ ರಾಷ್ಟ್ರದ ಎಲ್ಲ ಪತ್ರಿಕೆ, ಚಾನೆಲ್‌ಗಳಿಗೂ ಕೋಟ್ಯಂತರ ರೂಪಾಯಿ ಜಾಹೀರಾತು ನೀಡಿದ ಕೇಂದ್ರ ಸರಕಾರ ಇಂದಿರಾ ಹತ್ಯೆ ನಂತರ ನಡೆದ 3600 ಸಿಖ್ಖರ ಮಾರಣಹೋಮದ ಬಗ್ಗೆ ಕನಿಷ್ಠ ಮರುಕವನ್ನೂ ವ್ಯಕ್ತಪಡಿಸಲಿಲ್ಲವೇಕೆ? 3600 ಜನರ ಪ್ರಾಣದ ಬಗ್ಗೆ ಇಲ್ಲದ ಕಾಳಜಿ, ಪಾಳುಬಿದ್ದಿದ್ದ ಕಟ್ಟಡದ ಮೇಲೇಕೆ? ಬಾಬರನ ಕಮಾಂಡರ್ ಕಟ್ಟಿದ ಕಟ್ಟಡದ ಮೇಲೆ ಮುಸ್ಲಿಮರಿಗೆ ಅಷ್ಟು ಅಭಿಮಾನವಿರುವಾಗ, ರಾಮನ ಜನ್ಮಸ್ಥಳವೆಂದು ನಂಬಿಕೊಂಡು ಬಂದಿರುವ ಹಿಂದೂಗಳಿಗೆ ಅಯೋಧ್ಯೆಗೆ ಬಗ್ಗೆ ಇನ್ನೆಷ್ಟು ಅಭಿಮಾನವಿರಬೇಕು ಹೇಳಿ?

ಇಂತಹ ಸೂಕ್ಷ್ಮ ಲಿಬರ್‍ಹಾನ್ ಹಾಗೂ ಕೇಂದ್ರ ಸರಕಾರಕ್ಕೆ ಅರ್ಥವಾಗಿದ್ದರೆ ಅಯೋಧ್ಯೆ ಘಟನೆಯನ್ನು ರಾಜಕೀಯ ಲಾಭಕ್ಕೆ ಬಳಸಿಕೊಳ್ಳಲು, ಅಟಲ್ ಮೇಲೆ ಗೂಬೆ ಕೂರಿಸಲು ಪ್ರಯತ್ನಿಸುತ್ತಿರಲಿಲ್ಲ.
ಕೃಪೆ : ಪ್ರತಾಪ್ ಸಿಂಹ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ