ನನ್ನ ಬ್ಲಾಗ್ ಪಟ್ಟಿ

ಶನಿವಾರ, ಜುಲೈ 31, 2010

ಠಕ್ಕರನ್ನು ಹೆಕ್ಕಿ ಹಿಡಿಯುತ್ತಿರುವ ಟೆಕ್ಕಿ!

ಅಂಕಿತ್ ಗುಜರಾತಿನವನು. ಆತನ ವಿವಾಹ ನಿಶ್ಚಿತಾರ್ಥವಾಯಿತು. ಅದರ ಜತೆಗೆ ವಿಚಿತ್ರ ಸಮಸ್ಯೆಯೂ ಶುರುವಾಯಿತು. ಅಂಕಿತ್‌ನ ಸೆಲ್‌ಫೋನ್‌ಗೆ ಆತ ವಿವಾಹವಾಗಲಿದ್ದ ವಧುವಿನ ಸೆಲ್‌ನಿಂದ ದಿನಕ್ಕೆ ಐದಾರು ಎಸ್ಸೆಮ್ಮೆಸ್‌ಗಳು ಬರಲಾರಂಭಿಸಿದವು. ಆದರೆ ಅವು ಪ್ರೀತಿ, ಕಾಳಜಿಯ ಸಂದೇಶಗಳಾಗಿರಲಿಲ್ಲ. ಎಚ್ಚರಿಕೆಯ ಗಂಟೆಗಳಾಗಿದ್ದವು. ನನಗೆ ಬೇರೊಬ್ಬನ ಜತೆ ಸಂಬಂಧವಿದೆ. ನನ್ನನ್ನು ಬಿಟ್ಟುಬಿಡು. ಇಲ್ಲದಿದ್ದರೆ ಹುಶಾರ್. ಇಂತಹ ಎಸ್ಸೆಮ್ಮೆಸ್‌ಗಳನ್ನು ಕಂಡು ಆಶ್ಚರ್ಯಚಕಿತನಾದ ಅಂಕಿತ್, ಕಾರಣ ತಿಳಿದುಕೊಳ್ಳುವ ಸಲುವಾಗಿ ನೇರವಾಗಿ ವಧುವನ್ನು ಕಂಡು ವಿಚಾರಿಸಿದಾಗ ಅಂತಹ ಎಸ್ಸೆಮ್ಮೆಸ್‌ಗಳನ್ನು ಆಕೆ ಕಳುಹಿಸಿಯೇ ಇರಲಿಲ್ಲ!

ಅದರ ಬಗ್ಗೆ ಆಕೆಗೆ ಅರಿವೂ ಇರಲಿಲ್ಲ. ಇದೆಂಥ ವಿಚಿತ್ರ ಎಂದು ಸುಮ್ಮನಾಗುವಂತೆಯೂ ಇಲ್ಲ. ಇಬ್ಬರಿಗೂ ಪರಸ್ಪರರ ಮೇಲೆ ವಿಶ್ವಾಸವಿದ್ದರೂ ನಿತ್ಯವೂ ಬರುತ್ತಿದ್ದ ಎಸ್ಸೆಮ್ಮೆಸ್‌ಗಳು ಮನಃಶಾಂತಿಯನ್ನು ಕೆಡಿಸುತ್ತಿದ್ದವು. ಅಂಕಿತ್ ಅಹಮದಾಬಾದ್ ಕ್ರೈಮ್ ಬ್ರ್ಯಾಂಚ್‌ನ ಮೊರೆ ಹೋದ. ಆತ ನೀಡಿದ ದೂರಿನ ತನಿಖೆಯ ಜವಾಬ್ದಾರಿ ಸನ್ನಿ ವಾಘೇಲಾನ ಹೆಗಲಿಗೆ ಬಿತ್ತು. ಎಸ್ಸೆಮ್ಮೆಸ್ ಸೆಂಟರ್‌ನ ನಂಬರ್ ತೆಗೆದುಕೊಂಡ ಸನ್ನಿ ತನಿಖೆ ಆರಂಭಿಸಿದ. ಆ ಎಸ್ಸೆಮ್ಮೆಸ್‌ಗಳನ್ನು ವೈಬ್‌ಸೈಟೊಂದರ ಮೂಲಕ ಕಳುಹಿಸಲಾಗಿದೆ ಎಂಬುದನ್ನು ಪತ್ತೆ ಮಾಡಿದ. ಆ ಮೂಲಕ ಯಾವ ಕಂಪ್ಯೂಟರ್‌ನಿಂದ ಕಳುಹಿಸಲಾಗುತ್ತಿದೆ ಎಂಬುದನ್ನು ‘ಐಪಿ’ ಅಡ್ರೆಸ್ ಮೂಲಕ ಕಂಡು ಹುಡುಕಿದ. ಒಂದೇ ದಿನದಲ್ಲಿ ಇಷ್ಟೆಲ್ಲಾ ಕಸರತ್ತುಗಳನ್ನು ಮುಗಿಸಿದ ಸನ್ನಿ, ಅಪರಾಧಿಯನ್ನೂ ಸಿಕ್ಕಿಬೀಳಿಸಿದ. ಆತ ಮತ್ತಾರೂ ಆಗಿರಲಿಲ್ಲ, ಅಂಕಿತ್‌ನೊಂದಿಗೆ ನಿಶ್ಚಿತಾರ್ಥವಾಗಿದ್ದ ಹುಡುಗಿಯ ಪಕ್ಕದ ಮನೆಯ ಗೆಂಡೇತಿಮ್ಮ!

ಈಗ ಪೊಲೀಸರ ಅತಿಥಿಯಾಗಿದ್ದಾನೆ.

ಈ ಮಧ್ಯೆ ಪ್ರತಿಷ್ಠಿತ ಕಾಲೇಜಾದ ‘ಎಂಜಿನಿಯರಿಂಗ್ ಇನ್‌ಸ್ಟಿಟ್ಯೂಟ್ ಆಫ್ ಗುಜರಾತ್’ನ ನಾಲ್ವರು ವಿದ್ಯಾರ್ಥಿನಿ ಯರು ಅಹಮದಾಬಾದ್ ಕ್ರೈಮ್ ಬ್ರ್ಯಾಂಚ್‌ನ ಮುಂದೆ ದೂರೊಂದನ್ನು ಸಲ್ಲಿಸಲು ಬಂದರು. ಯಾರೋ ಕಿಡಿಗೇಡಿಗಳು “ಆರ್ಕಟ್ ಡಾಟ್‌ಕಾಮ್”ನಲ್ಲಿ ಈ ವಿದ್ಯಾರ್ಥಿನಿಯರ ಪ್ರೊಫೈಲ್ ಸೃಷ್ಟಿಸಿ, ಅಶ್ಲೀಲ ಚಿತ್ರಗಳನ್ನು ಹಾಕಿದ್ದರು. ಜತೆಗೆ ಆರ್ಕಟ್‌ಗೆ ಇಣುಕುವವರಿಗೆ ಸ್ನೇಹದ ಬಲೆ ಬೀಸಿ ಅವರೊಂದಿಗೆ ಅಶ್ಲೀಲ ಸಂಭಾಷಣೆಯನ್ನೂ ನಡೆಸುತ್ತಿದ್ದರು. ಅಲ್ಲದೆ ಆ ವಿದ್ಯಾರ್ಥಿನಿಯರ ನೈಜ ಸ್ನೇಹಿತರನ್ನೂ ‘ಫ್ರೆಂಡ್ಸ್ ಲಿಸ್ಟ್’ಗೆ ಸೇರಿಸಿಕೊಂಡು ಸ್ಕ್ರ್ಯಾಪ್ ಬುಕ್‌ನಲ್ಲಿ ಸರಸ ಸಲ್ಲಾಪ ನಡೆಸುತ್ತಿದ್ದರು. ಹೀಗೆ ತಮ್ಮ ಚಾರಿತ್ರ್ಯಕ್ಕೆ ಯಾರೋ ಮಸಿ ಬಳಿಯಲು ಯತ್ನಿಸುತ್ತಾರೆ ಎಂಬುದು ಅರಿವಾದ ಕೂಡಲೇ ಆ ವಿದ್ಯಾರ್ಥಿನಿಯರು ದಾರಿ ಕಾಣದೆ ಕ್ರೈಮ್ ಬ್ರ್ಯಾಂಚ್‌ಗೆ ಬಂದಿದ್ದರು. ಈ ಪ್ರಕರಣವನ್ನು ಕೈಗೆತ್ತಿಕೊಂಡಿದ್ದೂ ಸನ್ನಿ ವಾಘೇಲಾನೇ. ಆರ್ಕಟ್‌ನ ಮೇಲೆ ನಿಗಾ ಇಡಲು ಆರಂಭಿಸಿದ ಸನ್ನಿ, ಆ ಕಿಡಿಗೇಡಿ ಆನ್‌ಲೈನ್‌ಗೆ ಬರುವುದನ್ನೇ ಕಾದು ಕುಳಿತ. ಆನ್‌ಲೈನ್‌ಗೆ ಬಂದ ಕೂಡಲೇ ತಂತ್ರeನದ ಸಹಾಯದಿಂದ ಆರ್ಕಟ್‌ಗೆ ಲಾಗ್ ಇನ್ ಆಗುತ್ತಿದ್ದ ಕಂಪ್ಯೂಟರ್‌ನ ಐಪಿ ಅಡ್ರೆಸ್ ತಿಳಿದುಕೊಂಡ. ಕೂಡಲೇ ಸೇವಾ ಪೂರೈಕೆದಾರರನ್ನು ಸಂಪರ್ಕಿಸಿ, ಅಪರಾಧಿಯನ್ನು ರೆಡ್‌ಹ್ಯಾಂಡ್ ಆಗಿ ಹಿಡಿದುಬಿಟ್ಟ. ಈ ಬಾರಿ ಸನ್ನಿ ತೆಗೆದುಕೊಂಡಿದ್ದು ೫ ದಿನಗಳನ್ನು.

ಸನ್ನಿಯೇನು ಸಾಮಾನ್ಯ ವ್ಯಕ್ತಿ ಎಂದು ಭಾವಿಸಬೇಡಿ.

ಕಳೆದ ಕೆಲವು ತಿಂಗಳುಗಳಲ್ಲಿ ಜೈಪುರ, ಬೆಂಗಳೂರು, ಅಹಮದಾಬಾದ್, ಸೂರತ್, ದಿಲ್ಲಿ ಹೀಗೆ ಒಂದರ ಹಿಂದೆ ಒಂದರಂತೆ ಸಂಭವಿಸಿದ ಬಾಂಬ್ ಸ್ಫೋಟಗಳನ್ನು ನೆನಪು ಮಾಡಿಕೊಳ್ಳಿ. ಹಾಗೆ ಪ್ರತಿ ಬಾರಿ ಸ್ಫೋಟಗಳಾದಾಗಲೂ ಅದರ ಬೆನ್ನಲ್ಲೇ, ಇಲ್ಲವೇ ಸ್ಫೋಟಕ್ಕೂ ಕೆಲವು ನಿಮಿಷಗಳ ಮೊದಲು “ಇಂಡಿಯನ್ ಮುಜಾಹಿದ್ದೀನ್” ಎಂಬ ಹೆಸರಿನಲ್ಲಿ ಎಲ್ಲ ಪತ್ರಿಕೆ, ಪೊಲೀಸ್ ಹಾಗೂ ಸರಕಾರಿ ಕಚೇರಿಗಳಿಗೂ ಇ-ಮೇಲ್‌ಗಳು ರವಾನೆಯಾಗುತ್ತಿದ್ದವು. ಆದರೆ ಐಪಿ ಅಡ್ರೆಸ್ ಕಂಡುಹಿಡಿದು ಆ ಇ-ಮೇಲ್‌ಗಳನ್ನು ಎಲ್ಲಿಂದ ಕಳುಹಿಸಲಾಗುತ್ತಿದೆ ಎಂದು ಪತ್ತೆಹಚ್ಚಲು ಸಾಧ್ಯವಾಗುತ್ತಿರಲಿಲ್ಲ. ಅಷ್ಟಕ್ಕೂ ತನಿಖೆಯನ್ನು ದಾರಿ ತಪ್ಪಿಸುವ ಸಲುವಾಗಿ ಯಾರದ್ದೋ ಅಸುರಕ್ಷಿತ “Wi-Fi”(ಕೇಬಲ್ ರಹಿತ ಇಂಟರ್‌ನೆಟ್ ವ್ಯವಸ್ಥೆ) ನೆಟ್‌ವರ್ಕ್ ಮೂಲಕ ಇ-ಮೇಲ್‌ಗಳನ್ನು ಕಳುಹಿಸಲಾಗುತ್ತಿತ್ತು. ಹಾಗಾಗಿ ಪ್ರತಿಬಾರಿ ಬಾಂಬ್‌ಸ್ಫೋಟಗಳಾದಾಗಲೂ ಲಷ್ಕರೆ ತಯ್ಬಾ, ಜೈಶೆ ಮೊಹಮದ್, ಸಿಮಿ ಎಂಬ ಹೆಸರುಗಳನ್ನೇ ಹೇಳುತ್ತಿದ್ದ ಪೊಲೀಸರಿಗೆ, ಇದ್ಯಾವುದೀ ‘ಇಂಡಿಯನ್ ಮುಜಾಹಿದ್ದೀನ್’ ಎಂದು ತಲೆಕೆರೆದುಕೊಳ್ಳುವಂತಾಗಿತ್ತು.

ಅಂತಹ ಸಂದರ್ಭದಲ್ಲಿ ಉಪಯೋಗಕ್ಕೆ ಬಂದಿದ್ದೇ ಸನ್ನಿ ವಾಘೇಲಾನ ಬುದ್ಧಿಶಕ್ತಿ.

೧೯೯೬ರಲ್ಲೇ ಅನುಮಾನಕ್ಕೆಡೆಯಾಗಿದ್ದ ‘ಸಿಮಿ’ಯನ್ನು ನಿಷೇಧ ಮಾಡಿದ ನಂತರ ವಿವಿಧ ರೂಪಗಳಲ್ಲಿ ತಲೆಯೆತ್ತು ತ್ತಿರುವ ಭಯೋತ್ಪಾದಕ ಸಂಘಟನೆಗಳ ಇತ್ತೀಚಿನ ಅವತಾ ರವೇ ‘ಇಂಡಿಯನ್ ಮುಜಾಹಿದೀನ್’. ಇದರ ಒಂದು ವೈಶಿಷ್ಟ್ಯವೆಂದರೆ ಇದುವರೆಗೂ ದೇಶದ್ರೋಹಿಗಳು ಬಾಂಬ್ ಸ್ಫೋಟಿಸಿ ಪರಾರಿಯಾಗುತ್ತಿದ್ದರು, ಇಲ್ಲವೇ ತಲೆಮರೆಸಿಕೊಳ್ಳುತ್ತಿದ್ದರು. ಸ್ಫೋಟಕ್ಕೆ ಕಾರಣ ಯಾರು ಎಂಬುದರ ಸುಳಿವೇ ಸಿಗುತ್ತಿರಲಿಲ್ಲ. ಹಾಗಾಗಿ ನಮ್ಮ ಪೊಲೀಸರು ಹಾಗೂ ಗೃಹ ಇಲಾಖೆ ಸಿದ್ಧಸೂತ್ರವೊಂದನ್ನು ಇಟ್ಟುಕೊಂಡಿತ್ತು. ‘ಲಷ್ಕರೆ, ಜೈಶೆ’ ಎಂದು ಬಾಯಿಗೆ ಬಂದ ಒಂದು ಹೆಸರು ಹೇಳಿ ಆರೋಪ ಹೊರಿಸಿ ಬಿಡುತ್ತಿತ್ತು. ಅದನ್ನು ಕಾಲಾಂತರದಲ್ಲಿ ಜನರೂ ಮರೆಯುತ್ತಿದ್ದರು, ತನಿಖೆಯಿಂದಲೂ ಏನೂ ಸಾಬೀತಾಗುತ್ತಿರಲಿಲ್ಲ. ಮತ್ತೆ ಬಾಂಬ್ ಸ್ಫೋಟವಾದ ಕೂಡಲೇ ಅದೇ ಹೆಸರು, ಅದೇ ಆರೋಪಗಳನ್ನು ಪುನರುಚ್ಚರಿಸಲಾಗುತ್ತಿತ್ತು. ಆದರೆ ಇತ್ತೀಚೆಗೆ ತಲೆಯೆತ್ತಿರುವ ‘ಇಂಡಿಯನ್ ಮುಜಾಹಿದೀನ್’ ಮಾತ್ರ ತೀರಾ ಭಿನ್ನ ಕಾರ್ಯತಂತ್ರ ಅನುಸರಿಸುತ್ತಿದೆ. ಅದಕ್ಕೆ ಪ್ರಚಾರದ ಗೀಳು ಅಂಟಿಕೊಂಡಿದೆ. ಜನರನ್ನು ಭಯಭೀತಗೊಳಿಸುವ ಉದ್ದೇಶವನ್ನೂ ಹೊಂದಿದೆ. ಹಾಗಾಗಿ ಸ್ಫೋಟ ನಡೆಯುವುದಕ್ಕಿಂತ ಕೆಲವೇ ನಿಮಿಷ, ಸೆಕೆಂಡ್‌ಗಳ ಮೊದಲು ಇ-ಮೇಲ್ ಕಳುಹಿಸಿ ಎಲ್ಲಿ ಬಾಂಬ್ ಸ್ಫೋಟಿಸಲಿದೆ ಎಂಬುದರ ಸುಳಿವು ನೀಡುತ್ತಿತ್ತು. ಸ್ಫೋಟದ ನಂತರ ತಾನೇ ಜವಾಬ್ದಾರ ಎಂದು ಹೇಳಿಕೊಳ್ಳುತ್ತಿತ್ತು. ಹೀಗೆ ಪ್ರಚಾರದ ಹಿಂದೆ ಬಿದ್ದಿರುವ, ಆ ಮೂಲಕ ಜಗತ್ತಿನ ಗಮನ ಸೆಳೆಯಲು ಯತ್ನಿಸುತ್ತಿರುವ ಇಂಡಿಯನ್ ಮುಜಾಹಿದೀನ್ ತನ್ನದೇ ಆದ ಮಾಧ್ಯಮ ಕೇಂದ್ರವನ್ನು ಹೊಂದಿದೆ. ಜುಲೈ ೨೬ರಂದು ನಡೆದ ಅಹಮದಾಬಾದ್ ಸ್ಫೋಟಕ್ಕೆ ಸ್ವಲ್ಪ ಮೊದಲು ಅಂದರೆ ಸಾಯಂಕಾಲ ೬.೪೦ಕ್ಕೆ ಇ-ಮೇಲ್ ಕಳುಹಿಸಿದ್ದು ಈ ಮಾಧ್ಯಮ ಕೇಂದ್ರವೇ. ಅಂದು ‘alarbi_gujarat@yahoo.com’ ಎಂಬ ಐಡಿಯಿಂದ ಇ-ಮೇಲನ್ನು ಕಳುಹಿಸಲಾಗಿತ್ತು. ಅದರ ಐಪಿ ಅಡ್ರೆಸ್ “೨೧೦.೨೧೧.೧೩೩.೨೦೦” ಅನ್ನು ಬೆನ್ನುಹತ್ತಿ ಹೋದ ಪೊಲೀಸರು ತಲುಪಿದ್ದು ಮುಂಬೈನ ಕೆನೆತ್ ಹೇವುಡ್‌ನ ನಿವಾಸವನ್ನು. ಆದರೆ ಕೆನೆತ್ ಹೇವುಡ್ ಭಯೋತ್ಪಾದಕನೇನೂ ಆಗಿರಲಿಲ್ಲ. ಆತನ ಅಸುರಕ್ಷಿತ “Wi-Fi” ವ್ಯವಸ್ಥೆಯನ್ನು ಬಳಸಿಕೊಂಡು ಭಯೋತ್ಪಾದಕರು ಮೇಲ್ ಕಳುಹಿಸಿದ್ದರು. ಹಾಗಾಗಿ ಪೊಲೀಸರು ಚಳ್ಳೆಹಣ್ಣು ತಿನ್ನಬೇಕಾಯಿತು. ೨೦೦೮, ಜುಲೈ ೩೧ರಂದು “alarbi_gujarat@yahoo.com” ಎಂಬ ಐಡಿಯಿಂದ ಮತ್ತೆ ಟೆರರ್ ಇ-ಮೇಲ್ ಬಂತು. ಅದರ ಐಪಿ ಅಡ್ರೆಸ್ಸನ್ನು ಬೆನ್ನತ್ತಿ ಹೋದಾಗ ಬರೋಡಾ ಮೆಡಿಕಲ್ ಕಾಲೇಜಿಗೆ ಬಂದು ತಲುಪಬೇಕಾಯಿತು. ೨೦೦೮, ಆಗಸ್ಟ್ ೨೩ರಂದು “alarbi.alhindi@gmail.com”ನಿಂದ ಬಂದ ಮತ್ತೊಂದು ಇ-ಮೇಲ್‌ನ ಐಪಿ ಅಡ್ರೆಸ್ ಹುಡುಕಿಕೊಂಡು ಹೋದಾಗ ಮುಂಬೈನ ಖಾಲ್ಸಾ ಕಾಲೇಜು ಸಿಕ್ಕಿತು. ಅಂದರೆ ಭಯೋತ್ಪಾದಕರು ಯಾರದ್ದೋ “Wi-Fi” ವ್ಯವಸ್ಥೆಯ ಮೂಲಕ ಕದ್ದುಮುಚ್ಚಿ ಇ-ಮೇಲ್ ಮಾಡುತ್ತಿದ್ದರು. ಅದನ್ನು ಪತ್ತೆಹಚ್ಚಲು ಹೆಣಗುತ್ತಿದ್ದ ಗುಜರಾತ್ ಪೊಲೀ ಸರು ಮುಖ ಮಾಡಿದ್ದು ಸನ್ನಿ ವಾಘೇಲಾನತ್ತ. ಅಷ್ಟಕ್ಕೂ ಸಾಫ್ಟ್‌ವೇರ್ ಎಂಜಿನಿಯರ್‌ಗಳಂತಹ ಪ್ರತಿಭಾನ್ವಿತರ ಬುದ್ಧಿಶಕ್ತಿಯನ್ನು ಬಳಸಿಕೊಳ್ಳುತ್ತಿರುವ ಉಗ್ರರನ್ನು ಪತ್ತೆ ಹಚ್ಚುವುದು ಸುಲಭದ ಮಾತಾಗಿರಲಿಲ್ಲ. ಇಂತಹ ಜವಾಬ್ದಾರಿಯನ್ನು ಸವಾಲಾಗಿ ಸ್ವೀಕರಿಸಿದ ಸನ್ನಿ ವಾಘೇಲಾ, ತನ್ನೆಲ್ಲಾ ಜಾಣ್ಮೆಯನ್ನು ಪಣಕ್ಕಿಟ್ಟು ಶೋಧನೆ ಆರಂಭಿಸಿದ. ಭಯೋತ್ಪಾದಕರು ಯಾರದ್ದೋ “Wi-Fi” ವ್ಯವಸ್ಥೆಯನ್ನು ದುರುಪಯೋಗಪಡಿಸಿಕೊಂಡು ದಾರಿ ತಪ್ಪಿಸುತ್ತಿದ್ದರೂ Media Access Control ಮೂಲಕ ಅವರು ಇ-ಮೇಲ್ ಕಳುಹಿಸುತ್ತಿದ್ದ ಕಂಪ್ಯೂಟರ್‌ಗಳನ್ನು ಪತ್ತೆಹಚ್ಚುವಲ್ಲಿ ಸನ್ನಿ ಸಫಲನಾದ. ಹಾಗೆ ಆತ ಕಲೆಹಾಕಿದ ಮಾಹಿತಿಯಿಂದಾಗಿಯೇ ಮೊನ್ನೆ ಅಕ್ಟೋಬರ್ ೬ರಂದು ಆಸಿಫ್ ಬಶೀರ್ ಶೇಕ್, ಮೊಹಮದ್ ಮನ್ಸೂರ್ ಅಸ್ಗರ್ ಪೀರ್‌ಭಾಯ್, ಮುಬಿನ್ ಖಾದರ್ ಶೇಕ್, ಮೊಹಮದ್ ಆತಿಕ್ ಮೊಹಮದ್ ಇಕ್ಬಾಲ್, ದಸ್ತಗಿರ್ ಫಿರೋಝ್ ಮುಜಾವರ್, ಮೊಹಮದ್ ಅಕ್ಬರ್ ಇಸ್ಮಾಯಿಲ್, ಅಹಮದ್ ಬಾವಾ ಅಬೂಬಕರ್ ಮುಂತಾದ ೧೫ ಜನರನ್ನು ನಮ್ಮ ಮಂಗಳೂರು, ಬಾಂಬೆ ಹಾಗೂ ಇತರೆಡೆಗಳಲ್ಲಿ ಪೊಲೀಸರು ಬಂಧಿಸಲು ಸಾಧ್ಯವಾಗಿದ್ದು. ಅದರಲ್ಲೂ ಇಂಡಿಯನ್ ಮುಜಾಹಿದೀನ್‌ನ ಮಾಧ್ಯಮ ಕೇಂದ್ರವನ್ನು ನೋಡಿಕೊಳ್ಳುತ್ತಿದ್ದ ಪುಣೆಯ ಮೊಹಮದ್ ಪೀರ್‌ಭಾಯ್ ಹಾಗೂ ಮುಬಿನ್ ಖಾದರ್ ಶೇಕ್‌ನನ್ನು ಬಂಧಿಸಿದ್ದಂತೂ ದೊಡ್ಡ ಸಾಧನೆಯೇ ಸರಿ. ಅದರ ಹೆಗ್ಗಳಿಕೆ ಸನ್ನಿಗೆ ಸಲ್ಲಬೇಕು.

ಇಂದು ಇಡೀ ದೇಶದ ಗಮನ ಸೆಳೆದಿರುವ ಸನ್ನಿಗೆ ಕೇವಲ ೨೧ ವರ್ಷ.

ಆತನೊಬ್ಬ ‘ಎಥಿಕಲ್ ಹ್ಯಾಕರ್’. ಆತನಿಗೆ ಹ್ಯಾಕಿಂಗ್ ಗೀಳು ಅಂಟಿಕೊಂಡಿದ್ದು ಪ್ರಥಮ ಪಿಯುಸಿಯಲ್ಲಿದ್ದಾಗ. ಒಮ್ಮೆ ಆತನ ಇ-ಮೇಲನ್ನು ಯಾರೋ ಹ್ಯಾಕ್ ಮಾಡಿ ಬಿಟ್ಟರು. ಆ ಘಟನೆಯ ನಂತರ ಹ್ಯಾಕಿಂಗ್ ಬಗ್ಗೆ ತಿಳಿದುಕೊಳ್ಳಲು ಆರಂಭಿಸಿದ ಸನ್ನಿ, ಹ್ಯಾಕಿಂಗ್ ಬಗ್ಗೆ ಆಸಕ್ತಿ ಹೊಂದಿರುವವರ ಆನ್‌ಲೈನ್ ಗುಂಪೊಂದನ್ನು ಕಟ್ಟಿಕೊಂಡ. ಅವರ ಜತೆ ಹ್ಯಾಕಿಂಗ್‌ನ ಒಳ-ಹೊರಗುಗಳ ಬಗ್ಗೆ ಚರ್ಚೆ ನಡೆಸಿದ. ಸೂಕ್ಷ್ಮಗಳನ್ನು ಅರ್ಥಮಾಡಿಕೊಂಡ. ಇ-ಮೇಲ್ ಹ್ಯಾಕಿಂಗ್ ಬಗ್ಗೆ ತಿಳಿದುಕೊಂಡ ನಂತರ, ‘ಲಾಗ್ ಆಫ್’ ಮಾಡಿದ ನಂತರವೂ ‘ಕುಕಿ’ಗಳ ಸಹಾಯದಿಂದ ಇತರರ ಆರ್ಕಟ್ ಐಡಿಯೊಳಕ್ಕೆ ಹೊಕ್ಕುವುದು ಹಾಗೂ ಖೊಟ್ಟಿ ಎಸ್ಸೆಮ್ಮೆಸ್ (SMS Spoofing)ನತ್ತ ಆತನ ಆಸಕ್ತಿ ತಿರುಗಿತು. ಯಾರದ್ದೋ ನಂಬರ್‌ನಿಂದ ಇನ್ಯಾರಿಗೋ ಎಸ್ಸೆಮ್ಮೆಸ್ ಕಳುಹಿಸುವ ವಿದ್ಯೆಯನ್ನೂ ಕರಗತ ಮಾಡಿಕೊಂಡ. ಆದರೆ ಅದನ್ನು ಪ್ರಯೋಗಿಸಿದ್ದು ಯಾರ ಮೇಲೆ ಗೊತ್ತೆ? ಒಮ್ಮೆ ಕಾಲೇಜಿನಲ್ಲಿ ಇಂಟರನಲ್ ಪರೀಕ್ಷೆ ಇತ್ತು. ಆದರೆ ಸನ್ನಿ ಓದಿಕೊಂಡಿರಲಿಲ್ಲ. ಹಾಗಾಗಿ ಪರೀಕ್ಷೆ ಬರೆಯುವ ಧೈರ್ಯವಿರಲಿಲ್ಲ. ಹಾಗಂತ ಚಕ್ಕರ್ ಹೊಡೆಯುವಂತೆಯೂ ಇರಲಿಲ್ಲ. ಆತ ವ್ಯಾಸಂಗ ಮಾಡುತ್ತಿದ್ದ ‘ನಿರ್ಮಾ’ ಕಾಲೇಜಿನಲ್ಲಿ ಕಟ್ಟುನಿಟ್ಟಾದ ನಿಯಮಗಳಿದ್ದವು. ಹಾಗಾಗಿ ತಾನು ಕಲಿತಿದ್ದ SMS Spoofing ವಿದ್ಯೆಯನ್ನು ಕಾಲೇಜಿನ ಪ್ರಾಂಶುಪಾಲರ ಮೇಲೆಯೇ ಪ್ರಯೋಗಿಸಲು ಮುಂದಾದ! “ಕಾರಣಾಂತರದಿಂದ ಇಂಟರ್ನಲ್ ಪರೀಕ್ಷೆ ಯನ್ನು ಮುಂದೂಡಲಾಗಿದೆ” ಎಂಬ ಸಂದೇಶವನ್ನು ಪ್ರಾಂಶುಪಾಲರ ನಂಬರ್‌ನಿಂದ ಎಲ್ಲ ವಿದ್ಯಾರ್ಥಿಗಳಿಗೂ ಕಳುಹಿಸಿದ ಸನ್ನಿ, ವಿದ್ಯಾರ್ಥಿಗಳು ಗೈರು ಹಾಜರಾಗುವಂತೆ ಮಾಡಿ ಪರೀಕ್ಷೆಯೇ ನಡೆಯದಂತೆ ಮಾಡಿದ್ದ! ಇಂತಹ ಫಟಿಂಗತನವನ್ನು ಆತ ಮಾಡಿರಬಹುದು. ಆದರೆ ಸನ್ನಿಗೆ ದೇಶದ ಬಗ್ಗೆ ಅಪಾರ ಕಾಳಜಿ ಇದೆ. ೨೦೦೮ನೇ ಸಾಲಿನಲ್ಲಿ ಗುಜರಾತ್‌ನ ‘ನಿರ್ಮಾ’ ಕಾಲೇಜಿನಿಂದ ಎಂಜಿನಿಯರಿಂಗ್ ಪದವಿ ಪಡೆದು ಹೊರಬಂದಿರುವ ಸನ್ನಿಗೆ ಭಾರೀ ಸಂಬಳ-ಸವಲತ್ತನ್ನು ನೀಡುವ ಹಲವಾರು ಉದ್ಯೋಗಗಳು ತಾವಾಗಿಯೇ ಅರಸಿಕೊಂಡು ಬಂದಿದ್ದವು. ಆದರೆ ಆತನಿಗೆ ಪೊಲೀಸ್ ಅಧಿಕಾರಿಯಾಗಬೇಕೆಂಬ ಆಸೆಯಿತ್ತು. ಆ ಆಸೆ ಈಡೇರದಿದ್ದರೇನಂತೆ, ಅಹಮದಾಬಾದಿನಲ್ಲಿ “ಸೈಬರ್ ಕ್ರೈಮ್ ಸೆಲ್” ಸ್ಥಾಪನೆ ಮಾಡಿರುವ ಆತ, ಸೈಬರ್ ಕಳ್ಳರನ್ನು ಹುಡುಕಿ ಕೊಡುತ್ತಿದ್ದಾನೆ. ಅಮೆರಿಕ ಮೂಲದ ಐಟಿ ಕಂಪನಿ ‘ನೋಬೆಲ್ ವೆಂಚರ್‍ಸ್’ನಲ್ಲಿ ನಡೆದ ಅತಿದೊಡ್ಡ ಡೇಟಾ ಕಳವು ಪ್ರಕರಣದ ರೂವಾರಿಯನ್ನು ಪತ್ತೆಹಚ್ಚಿದ ಸನ್ನಿ, ‘ಇ-ಬೇ’ ಕ್ರೆಡಿಟ್ ಕಾರ್ಡ್ ಮೋಸ, ಖೊಟ್ಟಿ ಎಸ್ಸೆಮ್ಮೆಸ್ ಪ್ರಕರಣ, ಉದ್ಯಮ ವಲಯದಲ್ಲಿನ ಕಡತಗಳ ಕಳ್ಳತನ, ಆರ್ಕಟ್‌ನಲ್ಲಿ ನಕಲಿ ಪ್ರೊಫೈಲ್ ಸೃಷ್ಟಿಸುವುದು ಮುಂತಾದ ೧೬ ಸೈಬರ್ ಅಪರಾಧಗಳನ್ನು ಇದುವರೆಗೂ ಶೋಧಿಸಿದ್ದಾನೆ. ಟೆಕ್ ಹ್ಯಾಕಿಂಗ್, ಮೊಬೈಲ್ ಸೆಕ್ಯುರಿಟಿ, ವೆಬ್ ಸೆಕ್ಯುರಿಟಿ, ಸೈಬರ್ ಫಾರೆನ್ಸಿಕ್ಸ್ ಮುಂತಾದ ವಿಷಯಗಳ ಕುರಿತು ದೇಶಾದ್ಯಂತ ೩೦ ಉಪನ್ಯಾಸಗಳನ್ನು ನೀಡಿದ್ದಾನೆ. ಅಹಮದಾಬಾದ್ ಕ್ರೈಮ್ ಬ್ರ್ಯಾಂಚ್ ಹಾಗೂ ಮುಂಬೈ ಭಯೋತ್ಪಾದನಾ ನಿಗ್ರಹ ದಳಗಳಿಗೆ ಸಹಾಯ ನೀಡುತ್ತಿರುವ ಆತ, ಮೊಹಮದ್ ಪೀರ್‌ಭಾಯ್‌ನಂತಹ ಪ್ರಚಂಡ ದೇಶದ್ರೋಹಿಗಳನ್ನು ಪತ್ತೆಹಚ್ಚುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾನೆ. ಹಾಗಾಗಿ ಆತನ ಜೀವಕ್ಕೂ ಅಪಾಯ ಎದುರಾಗಿದೆ. ಆತ ಮಾಡುತ್ತಿರುವ ಕೆಲಸದ ಬಗ್ಗೆ ಕುಟುಂಬ ವರ್ಗಕ್ಕೆ ತೀವ್ರ ಅಸಮಾಧಾನವಿದೆ. ಆದರೆ ಸನ್ನಿ ಮಾತ್ರ ಯಾವುದಕ್ಕೂ ತಲೆಕೆಡಿಸಿಕೊಳ್ಳದೆ ಅಹಮದಾಬಾದ್ ಕ್ರೈಮ್ ಬ್ರ್ಯಾಂಚ್‌ಗೆ ತನ್ನೆಲ್ಲಾ ಪ್ರತಿಭೆಯನ್ನು ಧಾರೆ ಎರೆಯುತ್ತಿದ್ದಾನೆ, ಜೀವ ಬೆದರಿಕೆಯನ್ನೂ ಲೆಕ್ಕಿಸದೆ ಉಗ್ರರ ಜಾಲವನ್ನು ಪತ್ತೆ ಹಚ್ಚಿ ನಾಶಪಡಿಸಲು ಸಹಾಯ ಮಾಡುತ್ತಿದ್ದಾನೆ. ಆತನ ಸೇವೆಯನ್ನು ಗುರುತಿಸಿ ‘ರಾಜೀವ್ ಗಾಂಧಿ ಯುವ ಸಾಧಕ’ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.

ಮುಸ್ಲಿಮ್ ಯುವಕರು ಭಯೋತ್ಪಾದನೆಯತ್ತ ಆಕರ್ಷಿತರಾಗಲು ಅನಕ್ಷರತೆ ಮತ್ತು ನಿರುದ್ಯೋಗವೇ ಕಾರಣ ಎಂದು ಹಿಂದೆಲ್ಲಾ ಸಬೂಬು ಹೇಳುತ್ತಿದ್ದರು. ಅನರಕ್ಷತೆ ಮತ್ತು ನಿರುದ್ಯೋಗವೆಂಬುದು ಮುಸ್ಲಿಮರನ್ನು ಮಾತ್ರ ಕಾಡುತ್ತಿದೆ ಎಂಬಂತೆ ಬೊಬ್ಬೆ ಹಾಕುತ್ತಿದ್ದರು. ಬಡತನ ಮತ್ತು ಅನಕ್ಷರತೆಗಳು ಭಯೋತ್ಪಾದನೆಗೆ ಕಾರಣ ಎನ್ನುವುದಾದರೆ ಬಡತನರೇಖೆಗಿಂತ ಕೆಳಗಿರುವ ಈ ದೇಶದ ಶೇ. ೩೦ರಷ್ಟು ಭಾರತೀಯರೂ ಭಯೋತ್ಪಾದಕರಾಗಿರಬೇಕಿತ್ತು ಎಂಬ ಕನಿಷ್ಠ eನವೂ ಇಲ್ಲದವರಂತೆ ಮುಸ್ಲಿಮ್ ಭಯೋತ್ಪಾದಕರನ್ನು ಸಮರ್ಥನೆ ಮಾಡುತ್ತಿದ್ದರು. ಆದರೆ ಈಗ ಸತ್ಯ ಬೆತ್ತಲಾಗಿ ನಿಂತಿದೆ. ಇಂದು ದೇಶದ್ರೋಹಿ ಕೃತ್ಯಗಳಲ್ಲಿ ತೊಡಗುತ್ತಿರುವ ಮುಸ್ಲಿಮ್ ಯುವಕರು ಬಡವರೂ ಅಲ್ಲ, ಅನಕ್ಷರಸ್ಥರೂ ಅಲ್ಲ. ‘ಇಂಡಿಯನ್ ಮುಜಾಹಿದೀನ್’ನ ಮಾಧ್ಯಮ ಕೇಂದ್ರವನ್ನು ನಿರ್ವಹಣೆ ಮಾಡುತ್ತಿದ್ದ ಪುಣೆಯ ಮೊಹಮದ್ ಅಸ್ಗರ್ ಪೀರ್ ಭಾಯ್ ‘ಯಾಹೂ ಇನ್‌ಕಾರ್ಪೊರೇಟೆಡ್’ನ ಉದ್ಯೋಗಿ ಯಾಗಿದ್ದ. ವರ್ಷಕ್ಕೆ ೧೯ ಲಕ್ಷ ಸಂಬಳ ಎಣಿಸುತ್ತಿದ್ದ. ಆತನಿಗೆ ಸಹಾಯ ನೀಡುತ್ತಿದ್ದ ಮುಬಿನ್ ಖಾದರ್ ಶೇಕ್ ಕೂಡ ಸಾಫ್ಟ್‌ವೇರ್ ಎಂಜಿನಿಯರ್. ಶ್ರೀಮಂತ ಕುಟುಂಬ ದಿಂದಲೇ ಬಂದವನಾಗಿದ್ದಾನೆ. ಹೀಗೆ ಧರ್ಮದ ಹೆಸರಿನಲ್ಲಿ ಅನ್ನ ನೀಡುತ್ತಿರುವ, ವಿದ್ಯಾದಾನ ಮಾಡಿದ ದೇಶವನ್ನೇ ನಾಶ ಮಾಡಲು ಹೊರಟಿರುವ ಕೃತಘ್ನರು ಹೆಚ್ಚುತ್ತಿರುವ ಸಂದರ್ಭದಲ್ಲಿ ಸಂಬಳ-ಸವಲತ್ತಿನ ಆಸೆ ಬಿಟ್ಟು, ಅಪಾಯವನ್ನು ಮೈಮೇಲೆ ಎಳೆದುಕೊಂಡು ಪೊಲೀಸರಿಗೆ ಸಹಾಯ ನೀಡುತ್ತಿರುವ ಸನ್ನಿ ವಾಘೇಲಾನ ಬಗ್ಗೆ ನಿಜಕ್ಕೂ ಹೆಮ್ಮೆಯಾಗುತ್ತದೆ ಅಲ್ಲವೆ?

ಕೃಪೆ : ಪ್ರತಾಪ್ ಸಿಂಹ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ