ನನ್ನ ಬ್ಲಾಗ್ ಪಟ್ಟಿ

ಶನಿವಾರ, ಜುಲೈ 31, 2010

ಬಿಯರ್ಡ್, ಬುರ್ಖಾ: ಗೊತ್ತಿಲ್ಲವೆ ಸುಪ್ರೀಂಕೋರ್ಟ್ ಕೊಟ್ಟ ತರ್ಕ?

“We don’t want to have Talibans in the country. Tomorrow a girl student may come and say that she wants to wear the burqa. Can we allow it?”

ಮಧ್ಯಪ್ರದೇಶದ ಮೊಹಮದ್ ಸಲೀಂ ಎಂಬ ವಿದ್ಯಾರ್ಥಿ, “ಗಡ್ಡ ಬೋಳಿಸುವುದು ಇಸ್ಲಾಮ್‌ಗೆ ವಿರುದ್ಧ. ಗಡ್ಡ ಬೆಳೆಸಿಕೊಂಡು ಶಾಲೆಗೆ ಹೋಗಲು ಅನುಮತಿ ನೀಡಬೇಕು” ಎಂದು ಸುಪ್ರೀಂಕೋರ್ಟ್ ನಲ್ಲಿ ಸಲ್ಲಿಸಿದ್ದ ಮೇಲ್ಮನವಿಯನ್ನು 2009, ಮಾರ್ಚ್ 30ರಂದು “Dismissed” ಎಂಬ ಒಂದೇ ಪದದಲ್ಲಿ ತಿರಸ್ಕರಿಸುವ ಮೊದಲು ನ್ಯಾಯಮೂರ್ತಿ ಮಾರ್ಕಂಡೇಯ ಕಾಟ್ಜು ಈ ಮೇಲಿನಂತೆ ಪ್ರಶ್ನಿಸಿದ್ದರು!

ಹಾಗಂದು 4 ತಿಂಗಳಾಗಿವೆ. ಅಷ್ಟರಲ್ಲಿ ಬುರ್ಖಾ ಮಂಗಳೂರಿನಲ್ಲಿ ಹೊಸ ವಿವಾದ ಸೃಷ್ಟಿಸಿದೆ!
ಶ್ರೀ ವೆಂಕಟರಮಣ ಸ್ವಾಮಿ(ಎಸ್‌ವಿಎಸ್) ಕಾಲೇಜು ಇರು ವುದು ದಕ್ಷಿಣ ಕನ್ನಡದ ಬಂಟ್ವಾಳದಲ್ಲಿ. ಕಳೆದ 41 ವರ್ಷಗಳಿಂದ ಈ ಕಾಲೇಜು ಪದವಿ ಶಿಕ್ಷಣವನ್ನು ನೀಡುತ್ತಾ ಬಂದಿದೆ. ಸುಮಾರು 15 ರಿಂದ 20 ಪರ್ಸೆಂಟ್ ವಿದ್ಯಾರ್ಥಿಗಳು ಅಲ್ಪಸಂಖ್ಯಾತ ಸಮುದಾಯಗಳಿಗೆ ಸೇರಿದ್ದಾರೆ. ಇದೇ ಸಂಸ್ಥೆಗೆ ಸೇರಿದ ಎಸ್‌ವಿಎಸ್ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಕೆ.ಪಿ. ಸೂಫಿ ಮುಸ್ಲಿಮ್ ಮತಕ್ಕೆ ಸೇರಿದವರು. ಖ್ಯಾತ ಲೇಖಕಿ ಸಾರಾ ಅಬೂಬಕರ್ ಸೊಸೆಯೂ ಅಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಕಾಲೇಜಿನ ಧರ್ಮನಿರಪೇಕ್ಷತೆಗೆ ಇವಿಷ್ಟೇ ಉದಾಹರಣೆಗಳು ಸಾಕು. ಆದರೆ ಜನ ನೆಮ್ಮದಿಯಿಂದಿದ್ದರೆ ಮಾಧ್ಯಮಗಳಿಗೆ ಸುದ್ದಿ ಎಲ್ಲಿಂದ ಹುಟ್ಟಬೇಕು?

ದುರದೃಷ್ಟವಶಾತ್, ಎಸ್‌ವಿಎಸ್ ಕಾಲೇಜು ಒಂದಿಬ್ಬರು ಪತ್ರಕರ್ತರ ಕಿಡಿಗೇಡಿತನದಿಂದಾಗಿ ಇಂದು ಸುದ್ದಿಗೆ ಗ್ರಾಸವಾಗಿದೆ.

ಈ ಕಾಲೇಜಿನಲ್ಲಿ ಒಟ್ಟಾರೆ 200ಕ್ಕೂ ಹೆಚ್ಚು ಅಲ್ಪಸಂಖ್ಯಾತ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಮುಸ್ಲಿಮ್ ಸಮು ದಾಯಕ್ಕೆ ಸೇರಿದ ವಿದ್ಯಾರ್ಥಿನಿಯರು ಬುರ್ಖಾ ಹಾಕಿಕೊಂಡು ಕಾಲೇಜಿಗೆ ಬರುತ್ತಾರೆ, ಕ್ಲಾಸ್‌ರೂಮ್‌ನೊಳಗೆ ಬಂದ ನಂತರ ಬುರ್ಖಾ ತೆಗೆದು ಎಲ್ಲ ವಿದ್ಯಾರ್ಥಿಗಳಂತೆ ಪಾಠ ಕೇಳುತ್ತಾರೆ. ಇದು ಸ್ಥಾಪಿತ ಹಾಗೂ ನಿರೀಕ್ಷಿತ ನಡವಳಿಕೆಯೂ ಹೌದು. ಜತೆಗೆ ಅಲ್ಪಸಂಖ್ಯಾತ ಹಾಗೂ ಖಾಸಗಿ ಶಿಕ್ಷಣ ಸಂಸ್ಥೆಗಳು ತಮ್ಮದೇ ಆದ ನಿಯಮಾವಳಿಗಳನ್ನು ರೂಪಿಸಿಕೊಳ್ಳಲು ಸಂವಿಧಾನದ ೩೦ನೇ ವಿಧಿ ಅವಕಾಶವನ್ನೂ ಕಲ್ಪಿಸಿದೆ. ಪಾಣೆಮಂಗಳೂರಿನ ಬಿ. ಮೊಹಮದ್ ಅವರ ಪುತ್ರಿ ಆಯೆಷಾ ಆಸ್ಮಿನ್, ಎಸ್‌ವಿಎಸ್ ಕಾಲೇಜಿನಲ್ಲಿ ಬಿ.ಕಾಂಗೆ ಪ್ರವೇಶ ಪಡೆಯುವಾಗ “ಕಾಲೇಜಿನ ನಿಯಮಾವಳಿಗೆ ಬದ್ಧಳಾಗಿರುವುದಾಗಿ” ಘೋಷಣಾ ಪತ್ರಕ್ಕೆ ಸಹಿ ಹಾಕಿದ್ದಳು. ಆದರೆ ಕಾಲೇಜು ಪ್ರಾರಂಭವಾದ ನಂತರ, ಕ್ಲಾಸ್‌ರೂಂನೊಳಗೆ ಬುರ್ಖಾ ಹಾಕಿಕೊಳ್ಳಬಾರದು ಎಂಬ ಸೂಚನೆಯ ಹೊರತಾಗಿಯೂ ಆಯೆಷಾ ಮತ್ತು ಆಝ್ರಾಮಾ ಎಂಬ ಇಬ್ಬರು ವಿದ್ಯಾರ್ಥಿನಿಯರು ಕ್ಲಾಸ್‌ರೂಮ್‌ನೊಳಗೂ ಅರೆ ಬುರ್ಖಾ (ತಲೆಯೊಂದನ್ನು ಹೊರತುಪಡಿಸಿ) ಧರಿಸಿದ್ದರು. ಹಾಗಾಗಿ ಸ್ಥಾಪಿತ ನಡವಳಿಕೆಯನ್ನು ಇಬ್ಬರಿಗೂ ಮತ್ತೆ ಮನದಟ್ಟು ಮಾಡಿಕೊಡಲಾಯಿತು. ಆನಂತರ ಆಝ್ರಾಮಾ ಸೂಚನೆಯಂತೆ ನಡೆದುಕೊಂಡರೆ, ಆಯೆಷಾ ಬುರ್ಖಾ ತೆಗೆಯಲು ನಿರಾಕರಿಸಿದಳು. ಈ ಬಗ್ಗೆ ಆಕೆಯ ತಂದೆಗೆ ಸುದ್ದಿ ಮುಟ್ಟಿಸಿದಾಗ, ಅದು ನಮ್ಮ ಧರ್ಮಕ್ಕೆ ವಿರುದ್ಧವಾದುದು, ನನ್ನ ಮಗಳನ್ನು ಬೇರೆ ಕಾಲೇಜಿಗೆ ಸೇರಿಸುತ್ತೇನೆ ಎಂದರು. “ಬುರ್ಖಾ ಹಾಕುವುದನ್ನು ನಿಲ್ಲಿಸುವ ಬದಲು ನಾನು ಕಾಲೇಜನ್ನೇ ತೊರೆಯುತ್ತೇನೆ” ಎಂದು ಆಯೆಷಾ ಕೂಡ ಹೇಳಿದಳು. ಕಾಲೇಜಿಗೆ ಬರುವುದನ್ನೂ ನಿಲ್ಲಿಸಿದಳು. ಅಲ್ಲಿಗೆ ವಿವಾದವೂ ಮುಗಿಯಿತು. ಇದಾಗಿ ಹತ್ತು ದಿನಗಳು ಕಳೆದವು. ಆಗಸ್ಟ್ 17ರಂದು ತಂದೆಯ ಜತೆ ಪುನಃ ಕಾಲೇಜಿಗೆ ಆಗಮಿಸಿದ ಆಯೆಷಾ ಬುರ್ಖಾ ಹಾಕಿಕೊಂಡೇ ಕ್ಲಾಸ್‌ರೂಂನಲ್ಲಿ ಕುಳಿತುಕೊಂಡಳು. ಕಾಲೇಜಿನ ಆಡಳಿತ ಮಂಡಳಿ ಕ್ಲಾಸ್‌ರೂಮ್‌ನೊಳಗೆ ಬುರ್ಖಾ ತೆಗೆಯುವಂತೆ ಮನವಿ ಮಾಡಿಕೊಂಡಿತು. ಎರಡು ನಿಮಿಷಗಳಾಗುವಷ್ಟರಲ್ಲಿ, ಅದೆಲ್ಲಿದ್ದರೋ ಏನೋ ಇಂಗ್ಲಿಷ್ ಪತ್ರಿಕೆಗಳ ಒಂದಿಬ್ಬರು ಪತ್ರಕರ್ತ ಮಹಾಶಯರು, ಪ್ರಾಂಶುಪಾಲರ ಚೇಂಬರ್‌ಗೆ ನುಗ್ಗಿದರು, ಕಾರಣ ಕೇಳಿದರು, ಮರುದಿನ “College bans Muslim headscarf” ಎಂಬ ಶೀರ್ಷಿಕೆಯಡಿ ಬಾಯಿಗೆ ಬಂದಂತೆ ವರದಿ ಮಾಡಿದರು. ಮೊದಲೇ ಹಸಿದಿದ್ದ ರಾಷ್ಟ್ರೀಯ ಇಂಗ್ಲಿಷ್ ಚಾನೆಲ್‌ಗಳು ಅದನ್ನೆತ್ತಿಕೊಂಡು ಅಂತಾರಾಷ್ಟ್ರೀಯ ಸುದ್ದಿಯನ್ನಾಗಿ ಮಾಡಿಬಿಟ್ಟಿವೆ. “೨೦೦೩ರಲ್ಲಿ ಫ್ರಾನ್ಸ್ ಸರಕಾರ ಶಾಲೆಗಳಲ್ಲಿ ಮುಸ್ಲಿಮರು ಹೆಡ್‌ಸ್ಕಾರ್ಫ್(ಶಿರವಸ್ತ್ರ) ಧರಿಸುವುದರ ಮೇಲೆ ಹೇರಿದ್ದ ನಿಷೇಧ ಇಲ್ಲಿನ ಸರಕಾರಿ ಅನುದಾನಿತ ಕಾಲೇಜಿನಲ್ಲಿ ಪುನರಾವರ್ತನೆಯಾಗಿದೆ! ಕ್ಲಾಸ್‌ರೂಮ್‌ನಲ್ಲಿ ಶಿರವಸ್ತ್ರ ಹಾಕಬಾರ ದೆಂದು ಮುಸ್ಲಿಂ ವಿದ್ಯಾರ್ಥಿನಿಗೆ ಕಾಲೇಜು ಆಡಳಿತ ಮಂಡಳಿ ನಿರ್ದೇಶನ ನೀಡಿದೆ” ಎಂದು ಪತ್ರಕರ್ತರೊಬ್ಬರು ಬರೆದಿದ್ದಾರೆ. ಆಕೆ ಹಾಕಿದ್ದಿದ್ದು ಬುರ್ಖಾ, ವರದಿ ಮಾಡಿದ್ದು ‘ಶಿರವಸ್ತ್ರ’ ಅಂತ! ಆತನಿಗೆ ಬುರ್ಖಾ ಮತ್ತು ಹೆಡ್‌ಸ್ಕಾರ್ಫ್ ನಡುವಿನ ವ್ಯತ್ಯಾಸ ಗೊತ್ತಿಲ್ಲವೋ ಅಥವಾ ಬೇಕೆಂದೇ ಹಾಗೆ ಬರೆದಿದ್ದಾರೋ? ಆತನ ಉದ್ದೇಶ ಸರಿಯಿಲ್ಲ, ವಿವಾದ ಸೃಷ್ಟಿಸಲು ಪ್ರಯತ್ನಿಸುತ್ತಿದ್ದಾನೆ ಎಂಬುದು ಆತನ ವರದಿಯ ಎರಡನೇ ಪ್ಯಾರಾದಲ್ಲಿ ಮತ್ತೂ ಸ್ಪಷ್ಟವಾಗುತ್ತದೆ. “The college authorities’ action might appear to be one-off, but it has larger implications for the constitutional principles of secularism and equality” ಎಂದು ಬರೆದಿರುವ ಈ ಮಹಾಶಯ ನಮ್ಮ ಸಂವಿಧಾನವನ್ನು ಸರಿಯಾಗಿ ಓದಿಕೊಂಡಿದ್ದಾರಾ? ಈತನಿಗೆ ಸುಪ್ರೀಂಕೋರ್ಟ್ ಕಳೆದ ಮಾರ್ಚ್‌ನಲ್ಲಿ ನೀಡಿರುವ ತೀರ್ಪಿನ ಅರಿವಿದೆಯೇ?

ಮಂಗಳೂರಿನಲ್ಲಿ ಬುರ್ಖಾ ಇಂದು ವಿವಾದದ ವಸ್ತುವಾಗಿರ ಬಹುದು, ಬಿಯರ್ಡ್(ಗಡ್ಡ) ವಿವಾದ ಈಗಾಗಲೇ ಸುಪ್ರೀಂ ಕೋರ್ಟ್ ಮೆಟ್ಟಿಲೇರಿ ಮುಖಭಂಗಕ್ಕೊಳಗಾಗಿದೆ!!

ಮಧ್ಯಪ್ರದೇಶದ ರಾಜಧಾನಿ ಭೋಪಾಲ್‌ನಿಂದ 120 ಕಿ.ಮೀ. ದೂರದಲ್ಲಿದೆ ಸಿರೋಂಜ್. ಹದಿನಾರು ವರ್ಷದ ಮೊಹಮದ್ ಸಲೀಂ, ಸಿರೋಂಜ್‌ನ ಏಕೈಕ ಆಂಗ್ಲಮಾಧ್ಯಮ ಶಾಲೆಯಾದ ಕ್ರೈಸ್ತರ ‘ನಿರ್ಮಲಾ ಕಾನ್ವೆಂಟ್’ನ 9ನೇ ತರಗತಿ ವಿದ್ಯಾರ್ಥಿಯಾಗಿದ್ದ. ಒಂಬತ್ತು ಪಾಸಾಗಿ 10ನೇ ತರಗತಿ ಪ್ರಾರಂಭವಾಗುವ ಮೊದಲು ಏಪ್ರಿಲ್-ಮೇನಲ್ಲಿ ಎರಡು ತಿಂಗಳ ಬೇಸಿಗೆ ರಜೆ ಸಿಕ್ಕಿತು. ರಜೆ ಮುಗಿಸಿ ಜೂನ್‌ನಲ್ಲಿ ಶಾಲೆಗೆ ಮರಳಿದಾಗ ಅವನ ಮುಖದ ಮೇಲೆ ಗಡ್ಡ ಬೆಳೆದಿತ್ತು. ಅದನ್ನು ಕಂಡ ಪ್ರಾಂಶುಪಾಲರಾದ ಸಿಸ್ಟರ್ ತೆರೆಸಾ ಮಾರ್ಟಿನ್, ‘ಶೇವ್’ ಮಾಡಿಕೊಂಡು ಶಾಲೆಗೆ ಬಾ ಎಂದರು. ಸಲೀಂ ಮರುದಿನ ಶಾಲೆಗೆ ಬಂದನಾದರೂ ಗಡ್ಡ ಮಾತ್ರ ಹಾಗೆಯೇ ಇತ್ತು. ಕಾರಣ ಕೇಳಿದರೆ, ‘ಗಡ್ಡ ಬೋಳಿಸು ವುದು ಇಸ್ಲಾಂಗೆ ವಿರುದ್ಧ’ ಎಂದ! ಸಿಟ್ಟಿಗೆದ್ದ ಕಾಲೇಜು ಆಡಳಿತ ಮಂಡಳಿ ವ್ಯವಸ್ಥಾಪಕರಾದ ಫಾದರ್ ಅಲೆಕ್ಸ್ ಬಿಶಪ್, ಗಡ್ಡ ಬೋಳಿಸುವವರೆಗೂ ಶಾಲೆಗೆ ಪ್ರವೇಶ ನೀಡುವುದಿಲ್ಲ ಎಂದು ಸ್ಪಷ್ಟವಾಗಿ ತಿಳಿಸಿದರು. ಸಲೀಂ ಮತ್ತೆಂದೂ ಶಾಲೆ ಕಡೆ ಮುಖ ಹಾಕಲಿಲ್ಲ. ಹಾಗಾಗಿ 2008, ಆಗಸ್ಟ್ 4 ರಂದು ಶಾಲೆಯ ಆಡಳಿತ ಮಂಡಳಿ ಸಲೀಂಗೆ ಶೋಕಾಸ್ ನೋಟೀಸ್ ನೀಡಿತು. “ನಿನ್ನನ್ನು ಶಾಲೆಯಿಂದ ಏಕೆ ಹೊರಹಾಕಬಾರದು?” ಎಂದು ಪ್ರಶ್ನಿಸಿತು. ಅದುವರೆಗೂ ಸುಮ್ಮನಿದ್ದ ತರಕಾರಿ ವ್ಯಾಪಾರಿ ಸಲೀಂ ಖಾನ್, ತನ್ನ ಮಗನನ್ನು ಶಾಲೆಯಿಂದ ಹೊರಹಾಕುವ ಆದೇಶದ ವಿರುದ್ಧ ಜಿಲ್ಲಾ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿದರು. ಅವರ ವಾದಕ್ಕೆ ಬೆಲೆ ಸಿಗಲಿಲ್ಲ. “ಸಂವಿಧಾನದ ೨೫ನೇ ವಿಧಿ ಎಲ್ಲರಿಗೂ ತಮ್ಮ ಧರ್ಮವನ್ನು, ನಂಬಿಕೆಯನ್ನು ಆಚರಿಸುವ, ಪಾಲಿಸುವ, ಅನುಸರಿಸುವ ಹಕ್ಕು ನೀಡಿದೆ” ಎಂದು ಪ್ರತಿಪಾದಿಸಿ, ಮಧ್ಯಪ್ರದೇಶ ಹೈಕೋರ್ಟ್‌ನಲ್ಲಿ ರಿಟ್ ಅರ್ಜಿ ಹಾಕಿದರು. 2008, ಡಿಸೆಂಬರ್ 12ರಂದು ಅರ್ಜಿಯನ್ನು ತಿರಸ್ಕರಿಸಿದ ಹೈಕೋರ್ಟ್, “ಅಲ್ಪಸಂಖ್ಯಾತರ ಶಿಕ್ಷಣ ಸಂಸ್ಥೆಗಳು ತಮ್ಮದೇ ಆದ ನಿಯಮಗಳನ್ನು ರೂಪಿಸಿಕೊಳ್ಳಬಹುದು. ವಿದ್ಯಾರ್ಥಿಗಳು ‘ಕ್ಲೀನ್ ಶೇವ್’ ಮಾಡಿ ಕೊಂಡೇ ಶಾಲೆಗೆ ಬರಬೇಕು ಎಂದು ನಿರ್ಮಲಾ ಕಾನ್ವೆಂಟ್ ರೂಪಿಸಿರುವ ನಿಯಮದಲ್ಲಿ ಯಾವ ತಪ್ಪೂ ಇಲ್ಲ. ಅರ್ಜಿದಾರನೇ ಒಪ್ಪಿಕೊಂಡಿರುವಂತೆ ಸಲೀಂ ನಿಯಮವನ್ನು ಪಾಲಿಸಿಲ್ಲ ಹಾಗೂ ಅನಿರ್ದಿಷ್ಟಾವಧಿಯಿಂದ ಶಾಲೆಗೂ ಗೈರುಹಾಜರಾಗಿದ್ದಾನೆ. ಈ ಹಿನ್ನೆಲೆಯಲ್ಲಿ ಆತನನ್ನು ಶಾಲೆಯಿಂದ ಹೊರಹಾಕಿರುವುದು ಸರಿಯಿದೆ” ಎಂದು ತೀರ್ಪು ನೀಡಿತು!

ಸಲೀಂ ಖಾನ್ ಸುಮ್ಮನಾಗಲಿಲ್ಲ.

ಗಡ್ಡವನ್ನು ಹಿಡಿದುಕೊಂಡು ಸುಪ್ರೀಂಕೋರ್ಟ್ ಬಾಗಿಲು ತಟ್ಟಿದರು. ದಿಲ್ಲಿ ಹೈಕೋರ್ಟ್‌ನ ಮಾಜಿ ನ್ಯಾಯಮೂರ್ತಿ ಹಾಗೂ ಹಾಲಿ ವಕೀಲ ಬಷೀರ್ ಅಹ್ಮದ್ ಖಾನ್, ಸಲೀಂ ಪರವಾಗಿ ಸುಪ್ರೀಂಕೋರ್ಟ್‌ನಲ್ಲಿ ವಾದಕ್ಕೆ ನಿಂತರು. ನ್ಯಾಯಮೂರ್ತಿ ಆರ್.ವಿ. ರವೀಂದ್ರನ್ ಹಾಗೂ ಮಾರ್ಕಂಡೇಯ ಕಾಟ್ಜು ಅವರನ್ನೊಳಗೊಂಡ ಇಬ್ಬರು ನ್ಯಾಯಾಧೀಶರ ಪೀಠದ ಮುಂದೆ ವಿವಾದ ವಿಚಾರಣೆಗೆ ಬಂತು. ನ್ಯಾಯಾಧೀಶರು ಹಾಗೂ ವಕೀಲ ಬಷೀರ್ ಅಹ್ಮದ್ ಖಾನ್ ನಡುವೆ ಕುತೂಹಲಕಾರಿ ವಾದ ನಡೆ ಯಿತು.

ಬಷೀರ್ ಖಾನ್: “ಗಡ್ಡ ಬಿಡುವುದು ಇಸ್ಲಾಂನಲ್ಲಿ ಪಾಲಿಸಲೇ ಬೇಕಾದ ಒಂದು ಕರ್ತವ್ಯ”.
ನ್ಯಾಯಮೂರ್ತಿ ಕಾಟ್ಜು: ಹಾಗಾದರೆ ನೀವೇಕೆ ಗಡ್ಡ ಬಿಟ್ಟಿಲ್ಲ?!

ಇಸ್ಲಾಂನಲ್ಲಿ ಗಡ್ಡ ಬಿಡುವುದು ಕಡ್ಡಾಯ ಎಂದು ಬಷೀರ್ ವಾದಿಸಿದ್ದೇನೋ ಸರಿ, ಆದರೆ ಸ್ವತಃ ಮುಸ್ಲಿಮರಾದ ಅವರೇ ಕ್ಲೀನ್ ಶೇವ್ ಮಾಡಿಕೊಂಡಿದ್ದರು!!

“ಮೂಲಭೂತ ಹಕ್ಕುಗಳನ್ನು ಖಾಸಗಿ ವ್ಯಕ್ತಿ ಅಥವಾ ಸಂಸ್ಥೆಗಳಿಗೆ ಅನ್ವಯ ಮಾಡಲಾಗುವುದಿಲ್ಲ. ಜತೆಗೆ ಅಲ್ಪಸಂಖ್ಯಾತ ಹಾಗೂ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ತಮ್ಮದೇ ಆದ ನೀತಿ-ನಿಯಮಗಳನ್ನು ರೂಪಿಸಿಕೊಳ್ಳುವ ಹಕ್ಕನ್ನು ಸಂವಿಧಾನದ ೩೦ನೇ ವಿಧಿಯೇ ನೀಡಿದೆ. ಮುಸ್ಲಿಂ ವಿದ್ಯಾರ್ಥಿಗಳಿಗೆ ಗಡ್ಡ ಬೆಳೆಸಲು ಅನುಕೂಲ ಮಾಡಿಕೊಡುವ ಸಲುವಾಗಿ ಸೆಕ್ಯುಲರಿಸಂ ಅನ್ನು ಅತಿಯಾಗಿ ಹಿಗ್ಗಿಸಿಕೊಂಡು ಹೋಗಲಾಗದು. ಮಿಗಿಲಾಗಿ, ಭಾರತವನ್ನು ತಾಲಿಬಾನೀಕರಣಗೊಳಿಸಲು ಅವಕಾಶ ಕೊಡುವುದಕ್ಕಾಗುವುದಿಲ್ಲ. ನಾಳೆ ವಿದ್ಯಾರ್ಥಿನಿಯೊಬ್ಬಳು ಬಂದು ತಾನು ಶಾಲೆಯೊಳಗೆ ಬುರ್ಖಾ ಹಾಕಿಕೊಳ್ಳಬೇಕು ಎಂದು ಕೇಳುತ್ತಾಳೆ. ಹಾಗಂತ ಆಕೆಗೂ ಅನುಮತಿ ನೀಡಲಾಗುತ್ತದೆಯೇ?” ಎಂದು ಪ್ರಶ್ನಿಸಿದ ನ್ಯಾಯಮೂರ್ತಿ ಕಾಟ್ಜು ಹಾಗೂ ರವೀಂದ್ರನ್, ಸಲಿಂನ ಮೇಲ್ಮನವಿ ಯನ್ನು ತಿರಸ್ಕರಿಸಿದರು.

ವಸ್ತುಸ್ಥಿತಿ ಹೀಗಿದ್ದರೂ, ಸುಪ್ರೀಂಕೋರ್ಟೇ ಬುರ್ಖಾ ಮತ್ತು ಬಿಯರ್ಡ್‌ಗೆ ನೋ ಎಂದಿದ್ದರೂ ಏಕೆ ಸಮಾಜವನ್ನು ದಾರಿ ತಪ್ಪಿಸಲು, ದಕ್ಷಿಣ ಕನ್ನಡ ಜಿಲ್ಲೆಗೆ ಕಳಂಕ ಹಚ್ಚಲು, ಪರಿಸ್ಥಿತಿಯನ್ನು ಕದಡಲು ಕೆಲವರು ಪ್ರಯತ್ನಿಸುತ್ತಿದ್ದಾರೆ? ಈ ಎಲ್ಲ ಘಟನೆಗಳ ಹಿಂದಿರುವ ಉದ್ದೇಶವೇನು? ಮೊಹಮದ್ ಸಲೀಂನ ವಿಚಾರ ವನ್ನೇ ತೆಗೆದುಕೊಳ್ಳಿ… ತರಕಾರಿ ಮಾರುವವನೊಬ್ಬನ ಮಗ ಸುಪ್ರೀಂಕೋರ್ಟ್ ಮೆಟ್ಟಿಲೇರಲು ಹೇಗೆ ಸಾಧ್ಯವಾಯಿತು? ಸಲೀಂಗೆ ಇಷ್ಟೆಲ್ಲಾ ಶಕ್ತಿ ಬಂದಿದ್ದಾದರೂ ಹೇಗೆ? ಅವನ ಹಿಂದೆ ಕೆಲಸ ಮಾಡುತ್ತಿರುವ ಶಕ್ತಿಗಳಾವುವು?

ದುರದೃಷ್ಟವಶಾತ್ ಸೌದಿ ಅರೇಬಿಯಾದಲ್ಲಿ ಹುಟ್ಟಿದ ‘ವಹಾಬಿಸಂ’ ಎಂಬ ಕಟ್ಟರ್‌ಪಂಥೀಯತೆ ಇತ್ತೀಚೆಗೆ ಭಾರತದಲ್ಲೂ ತಲೆಯೆತ್ತುತ್ತಿದೆ! ಜಾಕಿರ್ ನಾಯ್ಕ್ ಅವರಂತಹವರು ಹೊಸ ಪ್ರವಾದಿಗಳಾಗಿ ಹೊರಹೊಮ್ಮಿದ್ದಾರೆ. ಮೊದಲೆಲ್ಲ ಕ್ರೈಸ್ತರ ಎರಡು ಮನೆಗಳಿದ್ದರೂ ೨೦ ಲಕ್ಷ ವೆಚ್ಚದ ಭವ್ಯ ಚರ್ಚ್‌ಗಳು ಹಳ್ಳಿಹಳ್ಳಿಗಳಲ್ಲಿ ತಲೆಯೆತ್ತುತ್ತಿದುದನ್ನು ಕಾಣುತ್ತಿದ್ದೆವು. ಮುಸ್ಲಿಮರು ಸಾವಿರ ವರ್ಷ ನಮ್ಮನ್ನಾಳಿದರೂ ಆ ಪರಿಯಾಗಿ ಮಸೀದಿಗಳನ್ನೆಂದೂ ಕಟ್ಟಿರಲಿಲ್ಲ. ಇವತ್ತಿಗೂ ಬಹುತೇಕ ಹಳ್ಳಿಗಳಲ್ಲಿ ಮಸೀದಿಗಳಿಲ್ಲ. ಬಯಲಲ್ಲಿ ಒಂದು ಬಿಳಿ-ಹಸಿರು ಗೋಡೆಯನ್ನು ಕಾಣಬಹುದು. ಹಬ್ಬ, ಉಪವಾಸದಂದು ಅಲ್ಲಿ ಪ್ರಾರ್ಥನೆ ನಡೆಯುತ್ತಿತ್ತು. ಅದಕ್ಕೆ ಈದ್ಗಾ ಮೈದಾನವೆನ್ನುತ್ತಿದ್ದರು. ಆದರೀಗ ಹಳ್ಳಿ ಹಾಗೂ ರಸ್ತೆ ಬದಿಗಳಲ್ಲೂ ಭವ್ಯ ಮಸೀದಿಗಳು ತಲೆಯೆತ್ತಲಾರಂಭಿಸಿವೆ! ಅಂದರೆ ‘ವ್ಯಾಟಿಕನ್’ ಮಾಡುತ್ತಿದ್ದ ಕೆಲಸವನ್ನು ಕೊಲ್ಲಿ ರಾಷ್ಟ್ರಗಳೂ ಮಾಡಲಾರಂಭಿಸಿವೆ. ನೀವು ಇತ್ತೀಚಿನವರೆಗೂ ನೋಡುತ್ತಿದ್ದ ‘ಕ್ಯು’ ಟೀವಿ, ಈಗ ‘ಪೀಸ್’ ಟೀವಿ ಎಂಬ ಹೊಸ ಮುಖವಾಡ ಹಾಕಿಕೊಂಡು ನಮ್ಮ ಮುಂಬೈನಿಂದಲೇ ಬಿತ್ತರಗೊಳ್ಳುತ್ತಿದೆ. ಇರುವುದು ನಮ್ಮ ನೆಲದಲ್ಲಾ ದರೂ ಅದಕ್ಕೆ ಪೂರೈಕೆಯಾಗುತ್ತಿರುವುದು ಸೌದಿ ಹಣ. ಹೀಗೆ ‘ವಹಾಬಿಸಂ’ ಮೂಲಕ ಕೊಲ್ಲಿ ರಾಷ್ಟ್ರಗಳೂ ಧರ್ಮಪ್ರಚಾರಕ್ಕೆ ಹೊರಟಿವೆ. ಜಗತ್ತಿನ ಎಲ್ಲೆಡೆಗಳಲ್ಲೂ ದೊಡ್ಡ ದೊಡ್ಡ ಮಸೀದಿಗಳನ್ನು ನಿರ್ಮಾಣ ಮಾಡುತ್ತಿವೆ, ಧಾರ್ಮಿಕ ಚಾನೆಲ್‌ಗಳನ್ನು ಆರಂಭಿ ಸುತ್ತಿವೆ. ಇತ್ತ ಗಲ್ಫ್‌ನಿಂದ ದುಡ್ಡು ತೆಗೆದುಕೊಳ್ಳುತ್ತಿರುವ ನಮ್ಮ ದೇಶೀ ಎನ್‌ಜಿಒಗಳು ಧರ್ಮ ಪ್ರಚಾರ, ಪ್ರತಿಪಾದನೆ ಕಾರ್ಯಕ್ಕೆ ಕೈಹಾಕಿವೆ. ಆ ಮೂಲಕ “Identity” ಪಾಲಿಟಿಕ್ಸ್ ಆರಂಭಿಸಿವೆ. ಅಂದರೆ ಮುಸ್ಲಿಮರು ಗಡ್ಡ ಬೆಳೆಸಲೇಬೇಕು, ಬುರ್ಖಾ ಹಾಕಿ ಕೊಳ್ಳಬೇಕು. ಹಾಗೆ ಮಾಡಿದವರು ಮಾತ್ರ ನಿಜವಾದ ಮುಸ್ಲಿಮರು ಎಂಬ ಭಾವನೆಯನ್ನು ತಲೆಗೆ ತುಂಬುವ ಕೆಲಸ ಆರಂಭವಾಗಿದೆ. ಸಲೀಂನಂತಹ ಅಮಾಯಕ ಬಡ ವಿದ್ಯಾರ್ಥಿಗಳ ಹಿಂದೆ ಕೆಲಸ ಮಾಡುತ್ತಿರುವುದು ಇಂತಹ ಶಕ್ತಿಗಳೇ. ಇಲ್ಲದೇ ಹೋಗಿದ್ದರೆ ಶಾಲೆಗೆ ಹೋಗುತ್ತಿರುವುದು ವಿದ್ಯೆ ಕಲಿಯುವುದಕ್ಕಾಗಿಯೇ ಹೊರತು, ಧರ್ಮಪ್ರತಿಪಾದನೆಗಲ್ಲ ಎಂಬುದು ಸಲೀಂಗೆ ಗೊತ್ತಾಗುತ್ತಿರಲಿಲ್ಲವೆ?

ನೀವು ಯಾವುದೇ ಹಳೆಯ ಹಿಂದಿ ಚಿತ್ರಗಳನ್ನು ಬೇಕಾದರೂ ತೆಗೆದುಕೊಳ್ಳಿ. ಅಲ್ಲಿ ಪರಸ್ಪರ ಬೀಳ್ಕೊಡುವಾಗ ‘ಖುದಾ ಹಾಫಿಜ್’ (ದೇವರು ನಿನ್ನನ್ನು ರಕ್ಷಿಸಲಿ) ಎನ್ನುತ್ತಿದ್ದರು. ಖುದಾ ಅಂದರೆ ಆಕಾರ, ಸಾಕಾರ, ನಿರಾಕಾರ ಬ್ರಹ್ಮ, ಜಗತ್ತಿನ ಮಾಲೀಕ ಎಂದರ್ಥ. ಅದರಲ್ಲಿ ಎಲ್ಲವನ್ನೂ ಒಪ್ಪಿಕೊಳ್ಳುವ ಸಹಿಷ್ಣುತೆಯಿತ್ತು. ಸಾಮಾನ್ಯವಾಗಿ ಸೂಫಿ ಸಂತರು ಇಂತಹ ತತ್ತ್ವದ ಪ್ರತಿಪಾದಕರಾಗಿದ್ದರು. ದೇವರು ಎಲ್ಲರಿಗೂ ಸೇರಿದವನು ಎನ್ನುವ ಇಸ್ಲಾಮಿನ ಭಕ್ತಿ ಪಂಥವೇ ಸೂಫಿಯಿಸಂ. ಹಾಗಾಗಿ ‘ಖುದಾ ಹಾಫಿಜ್’ ಎಂದು ಮುಸ್ಲಿಂ, ಹಿಂದೂ ಎಂಬ ಭೇದವಿಲ್ಲದೆ ಎಲ್ಲರೂ ಹೇಳುತ್ತಿದ್ದರು. ಆದರೆ ಇತ್ತೀಚೆಗೆ ‘ಖುದಾ ಹಾಫಿಜ್’ ಬದಲು ‘ಅಲ್ಲಾ ಹಾಫಿಜ್’ ಎನ್ನಲಾರಂಭಿಸಿದ್ದಾರೆ! ಏಕೀ ಬದಲಾವಣೆ? ದೇವರನ್ನೂ ‘Exclusive’ ಮಾಡುವ ‘ವಹಾಬಿಸಂ’ನ ತಂತ್ರದ ಅಂಗವೇ ‘ಅಲ್ಲಾ ಹಾಫಿಸ್’. ಖುದಾ ಎಂದರೆ ಯಾವ ದೇವರೂ ಆಗಬಹುದು! ಆದಕಾರಣ ‘ಅಲ್ಲಾ ಹಾಫಿಸ್’ ಎಂದು ಹೇಳಲಾರಂಭಿಸಿದ್ದಾರೆ. ಹೀಗೆ ‘ವಹಾಬಿಸಂ’ ಇದೆಯಲ್ಲಾ ಅದು, ಮುಲ್ಲಾಗಳ ಮೂಲಕ ಸಮಾಜವನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವ ಕೆಲಸ ಮಾಡುತ್ತಿದೆ. ಸಂತ ಶಿಶುನಾಳ ಷರೀಫ್‌ರಂತಹವರು ಯಾವುದೇ ಮೀಡಿಯೇಟರ್‌ಗಳಿಲ್ಲದ ದೇವರನ್ನು ಕಂಡುಕೊಳ್ಳುವ ಮಾರ್ಗ ವನ್ನು ಹೇಳಿಕೊಟ್ಟರೆ, ಮುಲ್ಲಾಗಳನ್ನು ಬಿಟ್ಟು ಯಾರೂ ಕುರಾನನ್ನು ‘ಇಂಟರ್‌ಪ್ರಿಟ್’ ಮಾಡಬಾರದು ಎಂಬುದು ವಹಾಬಿಸಂನ ಮೂಲ ಉದ್ದೇಶವಾಗಿದೆ. ಆ ಮೂಲಕ ‘ಯುನಿಟಿ’ ಬದಲು ತಮ್ಮದೇ ಪ್ರತ್ಯೇಕ ‘ಐಡೆಂಟಿಟಿ’ಯನ್ನು ಸೃಷ್ಟಿಸಿಕೊಳ್ಳುವುದು ಇವರ ಗುರಿ. ಎಲ್ಲರಲ್ಲೂ ದೇವರನ್ನು ಕಾಣುವ, ಎಲ್ಲರನ್ನೂ ಗೌರವಿ ಸುವ, ಎಲ್ಲರೊಳಗೊಂದಾಗಿರುವ ಸೂಫಿಯಿಸಂ ಇವರಿಗೆ ಬೇಡ. ಹಾಗಾಗಿಯೇ ಧಾರ್ಮಿಕ ಐಡೆಂಟಿಟಿಯನ್ನು ಶಾಲಾ ಕೊಠಡಿ ಯೊಳಕ್ಕೂ ಎಳೆದು ತರಲು ಯತ್ನಿಸುತ್ತಿದ್ದಾರೆ.

ಅದಿರಲಿ, ಶಾಲೆಯೆಂದರೆ ಏನು? ಅಲ್ಲಿ ಸಮವಸ್ತ್ರವನ್ನೇಕೆ ಕಡ್ಡಾಯ ಮಾಡುತ್ತಾರೆ? ಏಕೆ ಶಿಸ್ತು ತರುತ್ತಾರೆ? ಅದರ ಹಿಂದಿರುವ ಉದ್ದೇಶವಾದರೂ ಏನು? ಈ ಎಲ್ಲ ನಿಯಮಗಳ ಹಿಂದೆ ಬಡವ, ಬಲ್ಲಿದ, ಆ ಜಾತಿ, ಈ ಜಾತಿ, ಆ ಧರ್ಮ, ಈ ಧರ್ಮ ಎಂಬ ಭೇದ-ಭಾವವಿಲ್ಲದೆ ಎಲ್ಲರೂ ಒಂದೇ ಭಾವನೆಯಿಂದ ವಿದ್ಯಾರ್ಜನೆಯೆಂಬ ಏಕಮಾತ್ರ ಗುರಿಯನ್ನಿಟ್ಟುಕೊಂಡು ಮಕ್ಕಳು ಬೆಳೆಯಬೇಕೆಂಬ ಆಶಯವಿದೆ. ಶಾಲಾ ಹಂತದಲ್ಲೇ ಮಕ್ಕಳಲ್ಲಿ ಸಾಮರಸ್ಯ, ಸದ್ಭಾವನೆ ಬೆಳೆಯಬೇಕು ಎಂಬ ಉದ್ದೇಶವಿದೆ. ಆ ಕಾರಣಕ್ಕಾಗಿಯೇ ರಾಮ್-ರಹೀಂ ಅಂತಹ ಕಥೆಗಳನ್ನು ಪಠ್ಯದಲ್ಲಿ ಅಳವಡಿಸಿರುತ್ತಾರೆ. ಕಾಲೇಜುವರೆಗಿನ ವ್ಯಾಸಂಗ ಕಳೆದ ನಂತರ ಯಾರು ಏನನ್ನು ಬೇಕಾದರೂ ಬೆಳೆಸಿಕೊಳ್ಳಬಹುದು. ಗಡ್ಡವನ್ನಾದರೂ ಬೆಳೆಸಿಕೊಳ್ಳಿ, ತಲೆಕೂದಲನ್ನು ಬೇಕಾದರೂ ಬೆಳೆಸಿಕೊಳ್ಳಿ. ಯಾರೂ ಕೇಳುವುದಿಲ್ಲ. ಆದರೆ ಶಾಲಾ ಹಂತದಲ್ಲಿ ಶಿಸ್ತಿನ ಕೆಲವು ಅಂಶಗಳಿರುತ್ತವೆ. ಅದನ್ನು ಎಲ್ಲರೂ ಪಾಲಿಸಬೇಕಾ ಗುತ್ತದೆ. ಆದರೆ ಸೆಕ್ಯುಲರಿಸಂ, ಆರ್ಟಿಕಲ್ 25 ಹೆಸರಿನಲ್ಲಿ ‘Unity’ ಬದಲು ಶಾಲೆಗಳಲ್ಲಿ ‘Identity’ ಪಾಲಿಟಿಕ್ಸ್ ಮಾಡಲು ಯತ್ನಿಸುತ್ತಿರುವುದು ಎಷ್ಟರಮಟ್ಟಿಗೆ ಸರಿ? ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯ ಎಷ್ಟೋ ಕ್ರೈಸ್ತ ಶಾಲಾ, ಕಾಲೇಜುಗಳಲ್ಲಿ ಹಿಂದೂ ಹೆಣ್ಣುಮಕ್ಕಳು ಹಣೆಗೆ ಕುಂಕುಮ, ಮುಡಿಗೆ ಹೂವು, ಕೈಗೆ ಬಳೆ ಧರಿಸಲು ‘ಶಿಸ್ತಿ’ನ ಹೆಸರಿನಲ್ಲಿ ಅವಕಾಶ ನೀಡಿಲ್ಲ. ಹಾಗಂತ ಹಿಂದೂಗಳು ದಾಂಧಲೆ ಮಾಡಿದ್ದಾರೆಯೇ? ಬುರ್ಖಾ ನಿಷೇಧವನ್ನು ‘ಹಿಂದೂ ತಾಲಿಬಾನೀಕರಣ’ ಎಂದು ಮಾಧ್ಯಮಗಳಲ್ಲಿ ಚಿತ್ರಿಸುವುದು ಎಷ್ಟು ಸರಿ? ಎಸ್‌ವಿಎಸ್ ಕಾಲೇಜು ಹಿಂದೂಗಳದ್ದಾದರೆ, ಗಡ್ಡ ನಿಷೇಧ ಮಾಡಿರುವ ನಿರ್ಮಲಾ ಕಾನ್ವೆಂಟ್ ಕ್ರೈಸ್ತರದ್ದು! ಏಕಭಾವ ಮೂಡಿಸಬೇಕಾದ ವಿಷಯದಲೂ ಧರ್ಮದ ಅಂಶವನ್ನು ಹುಡುಕುವುದು ತಪ್ಪಲ್ಲವೆ?

“ಒಬ್ಬ ಸಿಖ್ ವಿದ್ಯಾರ್ಥಿ ಜುಟ್ಟು ಬಿಟ್ಟುಕೊಂಡು, ಪೇಟ ಹಾಕಿ ಕೊಂಡು ಶಾಲೆಗೆ ಬರಬಹುದಾದರೆ ನಾವೇಕೆ ಗಡ್ಡ ಬೆಳೆಸಬಾರದು?” ಎಂದು ಸಲೀಂ ಸುಪ್ರೀಂ ಕೋರ್ಟ್‌ನಲ್ಲಿ ವಾದಿಸಿದ್ದಾನೆ. ಆದರೆ ಸಿಖ್ ಪಂಥದಲ್ಲಿ ತಲೆಕೂದಲನ್ನು ಬೆಳೆಸಬೇಕಾದುದು ಕಡ್ಡಾಯ, ಅದು ಇಚ್ಛೆಗೆ ಬಿಟ್ಟಿದ್ದಲ್ಲ. ಇಸ್ಲಾಂನಲ್ಲಿ ಶುಕ್ರವಾರದ ಪ್ರಾರ್ಥನೆ ಕಡ್ಡಾಯವೇ ಹೊರತು ಗಡ್ಡ ಬೆಳೆಸಬೇಕೆಂಬುದು ಕಡ್ಡಾಯವೇನಲ್ಲ. ಅದು ಇಚ್ಛೆಗೆ ಬಿಟ್ಟಿದ್ದು. ಶುಕ್ರವಾರ ಶಾಲೆಯ ಆವರಣದಲ್ಲೇ ಪ್ರಾರ್ಥನೆ ಸಲ್ಲಿಸಲು ಎಲ್ಲೆಡೆಯೂ ಅವಕಾಶ ಕಲ್ಪಿಸಲಾಗಿದೆ. ಆದರೆ ಗಡ್ಡ, ಬುರ್ಖಾದಂತಹ ಐಚ್ಛಿಕ ವಿಚಾರಗಳಿಗೆ ಧಾರ್ಮಿಕ ಕಾರಣವನ್ನೊಡ್ಡಿ, ಜಾತ್ಯತೀತತೆಯನ್ನು ಮುಂದಿಟ್ಟುಕೊಂಡು ಕಾನೂ ನಿನ ಮಾನ್ಯತೆ ಕೊಡಿ ಎಂದಾಗ ಸುಪ್ರೀಂಕೋರ್ಟೇ ಒಪ್ಪಲಿಲ್ಲ. ಅಷ್ಟಕ್ಕೂ ಗಡ್ಡ ಬೋಳಿಸಿಯೂ, ಸ್ಕಲ್ ಕ್ಯಾಪ್ ಹಾಕದೆಯೂ, ದಿನಕ್ಕೆ ಐದು ಬಾರಿ ನಮಾಜು ಮಾಡದೆಯೂ, ಮದ್ಯ ಸೇವನೆ ಮಾಡಿಯೂ ಮುಸ್ಲಿಮರಾಗಿರುವವರು ಇಲ್ಲವೆ? ಆರ್ಟಿಕಲ್ 25, ಸಂವಿಧಾನ, ಸೆಕ್ಯುಲರಿಸಂ, ರಿಲೀಜಿಯಸ್ ಫ್ರೀಡಂ ಎನ್ನುತ್ತಾರಲ್ಲಾ ಶಿಕ್ಷೆಯ ವಿಚಾರದಲ್ಲೂ ಭಾರತೀಯ ಮುಸ್ಲಿಮರಿಗೆ ಅವರ ಧರ್ಮದಲ್ಲೇ ಇರುವ ‘ಇಸ್ಲಾಮಿಕ್ ಕ್ರಿಮಿನಲ್ ಲಾ’ ಜಾರಿಗೆ ತರಲು ಒಪ್ಪುತ್ತಾರೆಯೇ? ಕಳ್ಳತನ ಮಾಡಿದವರ ಕೈ ಕತ್ತರಿಸಿ, ಕೊಲೆ ಮಾಡಿದವರನ್ನು ಸಾರ್ವಜನಿಕವಾಗಿ ಶಿರಚ್ಛೇದ ಮಾಡಿ, ಅತ್ಯಾಚಾರ ಅಥವಾ ವ್ಯಭಿಚಾರ ಮಾಡಿದವರನ್ನು ಕಲ್ಲುಹೊಡೆದು ಸಾಯಿಸಿ… ಇವೇ ಮುಂತಾದ ಇಸ್ಲಾಮಿಕ್ ನಿಯಮಗಳಂತೆಯೇ ಮುಸ್ಲಿಮರಾದ ನಮಗೆ ಶಿಕ್ಷೆ ನೀಡಿ ಎಂದೇಕೆ ಒತ್ತಾಯಿಸುವುದಿಲ್ಲ?

ಐಡೆಂಟಿಟಿ ಪಾಲಿಟಿಕ್ಸ್ ಅನ್ನು ಯಾರೇ ಮಾಡಿದರೂ ಅದು ತಪ್ಪು.

Good Morning, Good Afternoon ಬದಲು ‘ಜೈ ಭೀಮ್’ ಎನ್ನಿ ಎಂದು ಹೇಳಿಕೊಟ್ಟ ಉತ್ತರ ಪ್ರದೇಶದ ಮುಖ್ಯ ಮಂತ್ರಿ ಮಾಯಾವತಿಯವರ ಐಡೆಂಟಿಟಿ ಪಾಲಿಟಿಕ್ಸನ್ನೂ ಯಾರೂ ಒಪ್ಪುವುದಿಲ್ಲ. ಇಬ್ಬರು ಮುಖಾಮುಖಿಯಾದಾಗ ‘ಜೈ ಭೀಮ್’ ಎಂದುಕೊಂಡರೆ ಅವರು ಬಿಎಸ್‌ಪಿ ಕಾರ್ಯಕರ್ತರು ಅಥವಾ ಬೆಂಬಲಿಗರು ಎಂದು ಗೊತ್ತಾಗುತ್ತದೆ. ಅಂತಹ ಐಡೆಂಟಿಟಿ ಬೇಕೆ ಅಥವಾ ನಮಗೆ ಅಗತ್ಯವಿರುವುದು ‘ಯುನಿಟಿ’ಯೇ? ಕಾಲಾಂತರದಲ್ಲಿ ಧಾರ್ಮಿಕ ಆಚರಣೆಗಳೂ ವಿಮರ್ಶೆಗೆ ಒಳಗೊಳ್ಳ ಬೇಕಾಗುತ್ತದೆ.

ಇವತ್ತು ‘ರಿವೈವಲಿಸಂ’ ಎಂಬುದು ಎಲ್ಲ ಧರ್ಮಗಳಲ್ಲೂ ಕಂಡುಬರುತ್ತಿದೆ. ದುರದೃಷ್ಟವಶಾತ್ ಪ್ರಗತಿಯ ಸಂಕೇತವಾದ ಪ್ರೊಟೆಸ್ಟೆಂಟ್ ಪಂಥದ ಬದಲು ಕ್ಯಾಥೋಲಿಕ್ಕರು ಮೇಲುಗೈ ಸಾಧಿಸಿ ಚರ್ಚ್ ಮತ್ತೆ ರಾಜ್ಯಭಾರ ನಡೆಸುವ ಹಂತಕ್ಕೆ ತಲುಪುತ್ತಿದೆ. ಹಿಂದೂ ಧರ್ಮದಲ್ಲೂ ವಾಸ್ತು, ಕುಂಡಲಿ, ಟೀವಿ ಭವಿಷ್ಯಗಳೆಂಬ ಜಾಡ್ಯಗಳು ಮತ್ತೆ ತಲೆಯೆತ್ತುತ್ತಿವೆ. ನಮಗೆ ಬೇಕಾಗಿರುವುದು ಆಚಾರಾಧಾರಿತ (Ritual Based) ಧರ್ಮವಲ್ಲ, ವಿಚಾರಾಧಾರಿತ (Concept Based)ಧರ್ಮ. ಅಷ್ಟಕ್ಕೂ ಧರ್ಮದ ಮೂಲ ಆಶಯ ಆಚರಣೆಯಲ್ಲ, ಅನುಸರಣೆಯಲ್ಲಿದೆ. ‘ಮುಸ್ಲಿಂ ಐಡೆಂಟಿಟಿ’ ಎಂಬುದು ಮುಸ್ಲಿಮನಂತೆ ಕಾಣುವುದಲ್ಲ. ಹೆಣ್ಣುಮಕ್ಕಳಿಗೆ ಶಿಕ್ಷಣ ಕೊಡಿ ಎಂದು ಮೊದಲು ಹೇಳಿದ್ದೇ ಪೈಗಂಬರ್. ಸರಳ ವಿವಾಹ ಹಾಗೂ ವಿಧವಾ ವಿವಾಹವನ್ನು ಆಚರಣೆಯಲ್ಲಿ ತೋರಿದವರು ಅವರು. ಜೂಜಾಡಬಾರದು, ಸುಳ್ಳು ಹೇಳಬಾರದು ಎನ್ನುವ ಇಸ್ಲಾಮ್‌ನ ಒಳ್ಳೆಯ ಅಂಶಗಳನ್ನು ಪಾಲಿಸುವುದರಲ್ಲಿ ನಿಜವಾದ ಧರ್ಮವಿದೆ.

ಕೃಪೆ : ಪ್ರತಾಪ್ ಸಿಂಹ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ