ನನ್ನ ಬ್ಲಾಗ್ ಪಟ್ಟಿ

ಶನಿವಾರ, ಜುಲೈ 31, 2010

ಕುರುಡು ಕಾಂಚಾಣ ಕುಣಿಯುತ್ತಲಿತ್ತು, ಕಾಲಿಗೆ ಬಿದ್ದವರ ತುಳಿಯುತ್ತಲಿತ್ತು!

ಭಿನ್ನಹಕೆ ಬಾಯಿಲ್ಲವಯ್ಯ ಅನಂತ ಅಪರಾಧಗಳು
ಎನ್ನೊಳಿರಲಾಗಿ….
ಅನ್ನ ಮದ ಅರ್ಥ ಮದ
ಅಷ್ಟೈಶ್ವರ್ಯ ಮದ
ಮುನ್ನ ಪ್ರಾಯದ ಮದವು, ರೂಪ ಮದವು….

ದುರಹಂಕಾರ ಮಾಡಿದರೆ ಕೊನೆಗೆ ಗಂಜಿಗೂ ಗತಿಯಿಲ್ಲ ದಂತಾಗುತ್ತದೆ ಅಂತ ೫೦೦ ವರ್ಷಗಳ ಹಿಂದೆಯೇ ಪುರಂದರ ದಾಸರು ಹೇಳಿದ್ದರು. ಕಳೆದ ಮೂರ್ನಾಲ್ಕು ತಿಂಗಳುಗಳಿಂದ ಕಂಡುಬರುತ್ತಿರುವ ಬೆಳವಣಿಗೆಗಳನ್ನು ಗಮನಿಸಿದರೆ ದಾಸರು ಹೇಳಿದ್ದ ಮಾತು ಇಂದಿಗೂ ಎಷ್ಟು ನಿಜ ಎನಿಸಲಾರಂಭಿಸಿದೆ. ಫ್ಲ್ಯಾಟು, ಸೈಟು ಎನ್ನುತ್ತಿದ್ದವರೆಲ್ಲ ಗಂಜಿಯ ಮಾತನಾಡುತ್ತಿದ್ದಾರೆ. ಕೆಲವರು ಈಗಾಗಲೇ ಕೆಲಸ ಕಳೆದುಕೊಂಡಿದ್ದರೆ, ಉಳಿದವರು ನಮ್ಮ ಸರದಿ ಯಾವ ಕ್ಷಣದಲ್ಲೂ ಬರಬಹುದು ಎಂಬ ಆತಂಕ ದಲ್ಲಿದ್ದಾರೆ. ನಿಜಕ್ಕೂ ಐಟಿ ಕ್ಷೇತ್ರದಲ್ಲಿರುವವರು ನೀರಿನಿಂದ ಮೇಲೆತ್ತಿ ದಡಕ್ಕೆ ಹಾಕಿದ ಮೀನಿನಂತಾಗಿದ್ದಾರೆ.

ಹಾಗಂತ ಯಾರೂ ಇವರ ಬಗ್ಗೆ ಅನುಕಂಪ ವ್ಯಕ್ತಪಡಿಸುತ್ತಿಲ್ಲ!

‘ಬಹಳ ಹಾರಾಡುತ್ತಿದ್ದರು, ತಕ್ಕ ಶಾಸ್ತಿಯಾಗಿದೆ’ ಎಂದು ಉಳಿದವರು ಒಂದು ರೀತಿ rejoice ಮಾಡುತ್ತಿದ್ದಾರೆ!! ಆದರೆ ಅದು ಶ್ರೀಮಂತಿಕೆಯ ಮೇಲಿನ ಮತ್ಸರದಿಂದಲ್ಲ. ಇವತ್ತು ಒಬ್ಬ ಸಾಫ್ಟ್‌ವೇರ್ ಎಂಜಿನಿಯರ್ ಅಥವಾ ಬಿಪಿಒ, ಕೆಪಿಒದಲ್ಲಿದ್ದವರು ಕೆಲಸ ಕಳೆದುಕೊಂಡರೆ ಅವರ ಬಗ್ಗೆ ಸಮಾಜ ಕಿಂಚಿತ್ತೂ ಅನುಕಂಪವನ್ನು ತೋರದ ಪರಿಸ್ಥಿತಿಯನ್ನು ಸೃಷ್ಟಿಸಿಕೊಂಡವರು ಅವರೇ.

Force of the market is force of the devil ಎನ್ನುತ್ತಿದ್ದರು ಗಾಂಧೀಜಿ. ಅವರ ಮಾತನ್ನು ಐಟಿ ಕ್ಷೇತ್ರದಲ್ಲಿರುವವರು ಯಾವತ್ತೂ ಅರ್ಥಮಾಡಿಕೊಳ್ಳಲಿಲ್ಲ. ಅಪ್ಪ ನಿವೃತ್ತಿಯಾಗುವಾಗ ಪಡೆಯುತ್ತಿದ್ದ ಸಂಬಳವನ್ನು ಮಗ ಕೆಲಸಕ್ಕೆ ಸೇರಿದ ಮೊದಲ ತಿಂಗಳೇ ಪಡೆದುಕೊಳ್ಳಲಾರಂಭಿಸಿದ. ಹಾಗೆಂದು ಐಟಿ ಕ್ಷೇತ್ರದಲ್ಲಿರುವವರಿಗೆ ಅಷ್ಟು ಸಂಬಳ ಕೊಟ್ಟಿದ್ದು ತಪ್ಪು ಅಂತ ಯಾರೂ ಭಾವಿಸಲಿಲ್ಲ. ಕಷ್ಟಪಟ್ಟು ದುಡಿಯುವವರಿಗೆ ಒಳ್ಳೆಯ ಸಂಬಳ ಕೊಟ್ಟರೆ ಯಾರಾದರೂ ಬೇಡ ಎನ್ನಲು ಸಾಧ್ಯವೆ? ಇಪ್ಪತ್ಮೂರು ವರ್ಷಕ್ಕೇ ಕೈ ತುಂಬ ದುಡ್ಡೇನೋ ಬಂತು, ದುಡ್ಡಿನ ಬೆಲೆ ಅರ್ಥಮಾಡಿಕೊಳ್ಳುವ ವಯಸ್ಸು ಅದಾಗಿರಲಿಲ್ಲ. ಹಾಗಾಗಿ ದುಡ್ಡು ಬಂದ ಮೇಲೆ ಅವರ “Attitude”ಗಳೇ ಬದಲಾಗಿ ಬಿಟ್ಟಿದ್ದವು. “ನನ್ನ ದುಡ್ಡು, ನಾನು ಖರ್ಚು ಮಾಡುತ್ತೇನೆ” ಎನ್ನಲಾರಂಭಿಸಿದರು. ನಿಮಗೆ ಜವಾಬ್ದಾರಿಯೇ ಇಲ್ಲ, ನಿಮ್ಮಿಂದಾಗಿ ಎಲ್ಲರಿಗೂ ಸಮಸ್ಯೆಯಾಗುತ್ತಿದೆ ಎಂದು ಯಾರಾ ದರೂ ನೋವು ತೋಡಿಕೊಂಡರೆ, “ಟ್ಯಾಕ್ಸ್ ಕಟ್ಟಲ್ವಾ, ನಾವು ಕಟ್ಟುತ್ತಿರುವ ಟ್ಯಾಕ್ಸ್‌ನಿಂದಾಗಿಯೇ ಸರಕಾರ ನಡೆಯುತ್ತಿದೆ” ಎಂಬ ಉಡಾಫೆಯ ಮಾತುಗಳನ್ನು ಹೇಳಲಾರಂಭಿಸಿದರು. ಅರ್ಹತೆ ಮೀರಿ ಸಿಕ್ಕಿದ ಸಂಬಳ ‘ಪ್ರಾಯ ಬರುವ ಮುನ್ನದ ಮದ’ಕ್ಕೆ ಕಾರಣವಾಯಿತು. ಹಾಗಾಗಿ ತಮಗೂ ಸಾಮಾಜಿಕ ಜವಾಬ್ದಾರಿ (ಸೋಷಿಯಲ್ ರೆಸ್ಪಾನ್ಸಿಬಿಲಿಟಿ) ಇದೆ ಎಂಬುದು ಇವರಿಗೆ ಅರ್ಥವಾಗಲೇ ಇಲ್ಲ.

ನಮ್ಮ ಸ್ವಾತಂತ್ರ್ಯ ಚಳವಳಿಯನ್ನು ತೆಗೆದುಕೊಳ್ಳಿ.

ಆಗಲೂ ಆಗರ್ಭ ಶ್ರೀಮಂತರಿದ್ದರು. ಮೋತಿ ಲಾಲ್ ನೆಹರು, ಜಮ್ನಾ ಲಾಲ್ ಬಜಾಜ್, ಬಿರ್ಲಾ ಅವರಂತಹ ಕೋಟ್ಯಧಿಪತಿಗಳು ಬಂಗಲೆಯಲ್ಲಿ ಆಡಂಬರದ ಜೀವನ ನಡೆಸಬಹುದಿತ್ತು. ಆದರೆ ಭೋಗದ ಆಸೆ ಬಿಟ್ಟ ಅವರು, ಸ್ವಾತಂತ್ರ್ಯ ಚಳವಳಿಯಲ್ಲಿ ತೊಡಗಿದ್ದವರಿಗೆ ಹಣಕಾಸು ನೆರವು ನೀಡುವ ಜತೆಗೆ ಮನೆಯಿಂದ ಹೊರಬಂದು ಬ್ರಿಟಿಷರ ವಿರುದ್ಧ ಸ್ವತಃ ಬೀದಿಗಿಳಿದಿದ್ದರು. ಒಬ್ಬ ಸಾಮಾನ್ಯ ಭಾರತೀಯನ ಮಧ್ಯೆ ಸಾಮಾನ್ಯನಾಗಿ ಹೋರಾಡಿದರು. ಅಂತಹ ಸರಳ ನಡೆ, ನುಡಿ ಹಾಗೂ ಜೀವನದ ಮೂಲಕ ಎಲ್ಲರಿಗೂ ಒಂದು ಮೇಲ್ಪಂಕ್ತಿ ಹಾಕಿಕೊಟ್ಟರು. ಅವರ ವೇಷ-ಭೂಷಣಗಳೂ ಯಾರ ಕಣ್ಣುಕುಕ್ಕುವಂತಿರಲಿಲ್ಲ. ಅವರು ಶ್ರೀಮಂತರು ಎಂದು ಯಾರಿಗೂ ಅನಿಸಲಿಲ್ಲ. ಅಂತಹ ಶ್ರೀಮಂತರೇ ಸಾಮಾನ್ಯರಂತೆ ಹೋರಾಡುತ್ತಿದ್ದಾರೆ, ಇನ್ನು ನಾವು ಸುಮ್ಮನೆ ಕುಳಿತುಕೊಳ್ಳುವುದಾದರೂ ಹೇಗೆ ಎಂಬ ಭಾವನೆ ಇತರರಲ್ಲಿ ಮೂಡತೊಡಗಿತು. ಹೀಗೆ ದೇಶವೇ ಒಂದಾಗಿ ಬ್ರಿಟಿಷರ ವಿರುದ್ಧ ಹೋರಾಟ ನಡೆಸಿತು.

ಇವತ್ತು ಅಂತಹ ಮನಸ್ಥಿತಿಯನ್ನು ಕಾಣಲು ಸಾಧ್ಯವಿಲ್ಲ.

ಅದರಲ್ಲೂ ಈ ‘First Time Rich’ ಅಥವಾ ‘Neo-Rich’ ಅಥವಾ Neo-Capitalists’ಗಳಿದ್ದಾರಲ್ಲಾ ಅವರು “ಅಲ್ಪನಿಗೆ ಐಶ್ವರ್ಯ ಬಂದರೆ ಅರ್ಧರಾತ್ರಿಯಲ್ಲಿ ಕೊಡೆ ಹಿಡಿದ” ಎಂಬ ನಾಣ್ನುಡಿಯನ್ನು ನಿಜವಾಗಿಸಲಾರಂಭಿಸಿದರು. ಇಂತಹ ವರ್ತನೆಯನ್ನು ಕಂಪನಿಗಳು ಬಹಳ ಚೆನ್ನಾಗಿಯೇ ಅರ್ಥಮಾಡಿಕೊಂಡವು. ಮೊದಲೆಲ್ಲ ಬ್ಯಾಂಕ್‌ನಲ್ಲಿ ಒಂದು ಅಕೌಂಟ್ ತೆರೆಯಬೇಕೆಂದರೆ ಅದೇ ಬ್ಯಾಂಕ್‌ನಲ್ಲಿ ಖಾತೆ ಹೊಂದಿರುವ ಮತ್ತೊಬ್ಬರ ಸಹಿ ಬೇಕಿತ್ತು, ಬ್ಯಾಂಕ್ ಮೇನೇಜರ್ ಎದುರು ಕೈಕಟ್ಟಿ ನಿಂತುಕೊಂಡು ತನಗೇಕೆ ಅಕೌಂಟ್ ಬೇಕೆಂದು ಮನವರಿಕೆ ಮಾಡಿಕೊಡಬೇಕಿತ್ತು, ಖಾತೆ ತೆರೆಯುವಾಗ ಇಂತಿಷ್ಟು ಠೇವಣಿ ಇಡಬೇಕಿತ್ತು. ಆದರೆ ಐಟಿ ಕ್ಷೇತ್ರ ಭಾರತದಲ್ಲಿ ಉಚ್ಛ್ರಾಯ ಸ್ಥಿತಿಗೆ ತಲುಪುವ ಜತೆಗೆ ಖಾಸಗಿ ಬ್ಯಾಂಕ್‌ಗಳೂ ಆಗಮಿಸಿದವು. ಒಬ್ಬ ಎಂಜಿನಿಯರ್ ಕೆಲಸಕ್ಕೆ ಸೇರಿದ ದಿನವೇ ಕಂಪನಿಗಳು ಆತನ ಕೈಗೊಂದು ಪಾಸ್ ಮತ್ತು ಚೆಕ್ ಬುಕ್, ಎಟಿಎಂ ಕಾರ್ಡ್ ಜತೆಗೊಂದು ಕ್ರೆಡಿಟ್ ಕಾರ್ಡ್ ಕೊಡಲಾರಂಭಿಸಿದವು. ದುಡ್ಡು ಬಿಡಿಸಿಕೊಳ್ಳಲು ಎಟಿಎಂ, ಖರ್ಚು ಮಾಡಲು ಕ್ರೆಡಿಟ್ ಕಾರ್ಡ್. ಅಂದರೆ ಕಾಸು ಕೊಟ್ಟ ಕಂಪನಿಗಳು ಅದನ್ನು ಖರ್ಚು ಮಾಡುವ ದಾರಿಯನ್ನೂ ತೋರಿದವು. ಅಷ್ಟಕ್ಕೂ ಸರಕಾರವೆಂಬುದು “Welfare Oriented” ಆಗಿದ್ದರೆ, ಕಂಪನಿಗಳೇನಿದ್ದರೂ “Profit oriented”. ಉದ್ಧಾರ ಮಾಡುವುದಕ್ಕಿಂತ ಎಷ್ಟು ಖರ್ಚು ಮಾಡಿಸಬಹುದು, ಎಷ್ಟು ಗಿಟ್ಟುತ್ತದೆ ಎಂಬುದನ್ನೇ ಲೆಕ್ಕಹಾಕುತ್ತವೆ. ಇಪ್ಪತ್ತೆರಡು, ಇಪ್ಪತ್ಮೂರು ವರ್ಷ ಇಂತಹ ತಂತ್ರಗಳನ್ನು ಅರ್ಥಮಾಡಿಕೊಳ್ಳುವ ವಯಸ್ಸಲ್ಲ. ‘ನಾವು ದುಡಿದಿದ್ದನ್ನು ನಾವೇ ತಿನ್ನಬೇಕು’ ಎಂಬ ಮನಸ್ಥಿತಿ ನಮ್ಮ ಯುವಜನಾಂಗದಲ್ಲಿ ಬೇರು ಬೀಡಲು ಆರಂಭಿಸಿತು. “ನಮ್ಮಪ್ಪ ಹೊಟ್ಟೆ-ಬಟ್ಟೆ ಕಟ್ಟಿಕೊಂಡು ನಿವೃತ್ತಿಯಾಗುವವರೆಗೂ ದುಡಿದ, ಈಗ ಅನುಭವಿಸಲು ಆರೋಗ್ಯವೇ ಸರಿಯಿಲ್ಲ” ಅಂತ ಅದಕ್ಕೊಂದು ಸಮಜಾಯಿಷಿಯನ್ನೂ ಕಂಡುಕೊಂಡರು. ಭವಿಷ್ಯಕ್ಕೆ ಕೂಡಿಡುವ ಬಗ್ಗೆ ಯೋಚಿಸುವುದನ್ನೇ ನಿಲ್ಲಿಸಿದರು. “ನನ್ನ ದುಡ್ಡು-ನಾನು ಖರ್ಚು ಮಾಡುತ್ತೇನೆ, ನಾನು ದುಡಿಯು ತ್ತೇನೆ-ನಾನೇ ತಿನ್ನುತ್ತೇನೆ” ಎಂಬ ಧೋರಣೆ ಜೀವನವನ್ನೇ ದಿಕ್ಕುತಪ್ಪಿಸಲಾರಂಭಿಸಿತು. ‘ಇಂದು ಕಷ್ಟಪಟ್ಟರೆ ನಾಳೆ ಸುಖ’ ಅಲ್ಲ, ‘ಬೆಳಗ್ಗೆ ಕಷ್ಟಪಟ್ಟರೆ ಸಂಜೆಯೇ ಸುಖ ಅನುಭವಿಸಬೇಕು’, “ನಾನು, ನನ್ನದು, ನಾನೇ”… ಇವುಗಳು ಎಂತಹ ಪರಿಸ್ಥಿತಿಯನ್ನು ಸೃಷ್ಟಿಸಿದವು ಎಂದರೆ ಅವರ “ವರ್ಕ್ ಕಲ್ಚರ್” ಮೇಲೆಯೇ ಪರಿಣಾಮ ಬೀರಲಾರಂಭಿಸಿದವು.

ಐಟಿಯವರು ಒಂಥರಾ “Salary oriented workers” ಆಗಿ ಬಿಟ್ಟರು.

ಅವರದ್ದೇ ಆದ ಒಂದು “ವರ್ಕ್ ಕಲ್ಚರ್” ಏನಿದೆ ಹೇಳಿ? ಒಬ್ಬ ಮಿಲಿಟರಿಯವನು ಎಂದ ಕೂಡಲೇ ಜನರಿಗೆ ಶಿಸ್ತುಬದ್ಧ ಜೀವನ ನೆನಪಾಗುತ್ತದೆ. ಒಬ್ಬ ಶಿಸ್ತುಬದ್ಧ ಜೀವನ ನಡೆಸುತ್ತಿದ್ದಾನೆ ಎಂದರೆ ಕೂಡ, ‘ಅವನು ಬಿಡಪ್ಪ ಶಿಸ್ತಿನ ಸಿಪಾಯಿ’ ಎಂದು ಜನ ಹೇಳುವುದನ್ನು ಕಾಣಬಹುದು. ಮೇಷ್ಟ್ರು ವಿಷಯಕ್ಕೆ ಬಂದಾಗ ಥಟ್ಟನೆ “ಗುರು” ಎಂಬ ಭಾವನೆ ಮೂಡುತ್ತದೆ. ಒಬ್ಬ ವಿeನಿ ಎಂದ ಕೂಡಲೇ ‘ದೇಶ ಸೇವೆ’ಯ ನೆನಪಾಗುತ್ತದೆ. ಅಂದರೆ ಯಾವುದೇ ವೃತ್ತಿಗಳನ್ನು ತೆಗೆದುಕೊಳ್ಳಿ. ಅವುಗಳೆಲ್ಲವೂ ಮೂಲತಃ ವೃತ್ತಿಗಳೇ ಆಗಿದ್ದರೂ, ಆ ವೃತ್ತಿಯಲ್ಲಿರುವವರೂ ಸಂಬಳ ಪಡೆಯುವವರೇ ಆಗಿದ್ದರೂ, ಆ ವೃತ್ತಿಗಳಿಗೆ ಅವುಗಳದ್ದೇ ಒಂದು ವೈಶಿಷ್ಟ್ಯ, ಗುಣ-ಲಕ್ಷಣಗಳಿವೆ. ಆದರೆ ಐಟಿ ಎಂದ ಕೂಡಲೇ ಏನು ನೆನಪಾಗುತ್ತದೆ? ಐಟಿ ಬೂಮ್ ಪ್ರಾರಂಭವಾಗಿ ೧೫ ವರ್ಷಗಳೇ ಆಗಿದ್ದರೂ ಅವರು ಏನು ಮಾಡುತ್ತಿದ್ದಾರೆ ಎಂಬುದು ಒಬ್ಬ ಸಾಮಾನ್ಯ ವ್ಯಕ್ತಿಗೆ ಇಂದಿಗೂ ಅರ್ಥವಾಗಿಲ್ಲ. ಐಟಿ ಎಂದ ಕೂಡಲೇ ಎಲ್ಲರಿಗೂ ನೆನಪಾಗುವುದು ಬರೀ ದುಡ್ಡು!!

ಹಾಗಂತ ಜನರನ್ನು ದೂರಿ ಪ್ರಯೋಜನವಿಲ್ಲ.

‘ದುಡ್ಡಿಗಿಂತ ಕಸುಬು ಕಲಿಯಬೇಕು’ ಎಂಬ ಮೆಂಟಾಲಿಟಿ ಐಟಿಯವರಲ್ಲಿ ಬರಲೇ ಇಲ್ಲ. ಸೋಮವಾರ ಬಂದರೆ ಯಾವಾಗ ಶುಕ್ರವಾರ ಬರುತ್ತದೋ ಎಂಬ ಮನಸ್ಥಿತಿ. ಇಂತಹ ಮನಸ್ಥಿತಿಯಿಂದಾಗಿ, ಎಲ್ಲಿ ಹುಲ್ಲು ಚೆನ್ನಾಗಿ ಬೆಳೆದಿದೆಯೋ ಅಲ್ಲಿಗೆ ಹಸುಗಳನ್ನು ಹೊಡೆದುಕೊಂಡು ಹೋಗುತ್ತಾನಲ್ಲಾ ಅಂತಹ ಕೌಬಾಯ್‌ನಂತಾದರು. ಅಂದರೆ ‘ಜಾಸ್ತಿ ಸಿಕ್ಕುವ ಕಡೆಗೆ ಹೋಗುವ’ ಕೌಬಾಯ್ ಮೆಂಟಾಲಿಟಿ. ವೃತ್ತಿ ನಿಷ್ಠೆ ಇವರಿಗೆ ಬರಲೇ ಇಲ್ಲ, ಅವರ ನಿಷ್ಠೆಯೇನಿದ್ದರೂ ದುಡ್ಡಿಗೆ. ಹಾಗಾಗಿ ಐಟಿ ಕ್ಷೇತ್ರದಲ್ಲಿ ಕತ್ತೆಯಂತೆ ದುಡಿದರೂ ಒಳ್ಳೆಯ ‘ವರ್ಕ್ ಕಲ್ಚರ್’ ಬರಲೇ ಇಲ್ಲ. ಅವರಿಗೆ ದುಡ್ಡಿನ ‘ಪ್ರಮಾಣ’ದ ಅರಿ ವಾಯಿತಾದರೂ ಅದರ ‘ಮೌಲ್ಯ’ದ ಅಂದಾಜು ಸಿಗಲಿಲ್ಲ. ಕಿಸೆಯಿಂದ ನೋಟನ್ನು ಎಳೆದುಕೊಡುವ ಮೊದಲು, ವಸ್ತುವಿನ ನೈಜ ಬೆಲೆಯನ್ನು ನಾಲ್ಕಾರು ಕಡೆ ವಿಚಾರಿಸಿ ಕೊಡಬೇಕು, ಕೇಳಿದ ಕೂಡಲೇ ಕೇಳಿದಷ್ಟನ್ನು ಕೊಡಬಾರದು, ಅದರಿಂದ ದುಡ್ಡಿಲ್ಲದವರ ಮೇಲೆ ದುಷ್ಪರಿಣಾಮವಾಗುತ್ತದೆ ಎಂಬ ಯೋಚನೆಯೇ ಅವರ ಮನಸ್ಸಿನಲ್ಲಿ ಬರಲಿಲ್ಲ. ನಮ್ಮಪ್ಪ ಪೈಸಾ ಪೈಸಾ ಲೆಕ್ಕಹಾಕಿ ಕೂಡಿಟ್ಟಿದ್ದರಿಂದ, ಮನೆ ಖರ್ಚಿಗೆಂದು ಅಪ್ಪ ಕೊಟ್ಟಿದ್ದರಲ್ಲಿಯೂ ಅಮ್ಮ ಜಿಗುಟಿ ಕೂಡಿಹಾಕಿದ್ದರಿಂದ ನಮಗೆ ಒಳ್ಳೆಯ ಶಿಕ್ಷಣ ಪಡೆದುಕೊಳ್ಳುವ ಅವಕಾಶ ಲಭ್ಯವಾಯಿತು, ನಾವೂ ಕೂಡಿಡಬೇಕು, ಕಂಡಾಪಟ್ಟೆ ಖರ್ಚು ಮಾಡಿದರೆ ಮನೆಯೂ ಹಾಳಾಗುತ್ತದೆ, ಕಾಸಿಲ್ಲದವರ ಮೇಲೂ ಕೆಟ್ಟ ಪರಿ ಣಾಮವಾಗುತ್ತದೆ, ಇತರರಲ್ಲಿ ಹತಾಶೆ ನೆಲೆಗೊಳ್ಳಬಹುದು. ಈ ಯಾವ ಅಂಶಗಳ ಬಗ್ಗೆಯೂ ತಲೆಕೆಡಿಸಿಕೊಳ್ಳಲಿಲ್ಲ.
ಒಂದು ಹಂತದವರೆಗೂ ಸುಮ್ಮನಿದ್ದ ಕೆಲವು ಜನರು, ಐಟಿ ಯವರ ಕಿಸೆ ಮೇಲೆ ಕಣ್ಣುಹಾಕಲಾರಂಭಿಸಿದರು.

ಇವತ್ತು ಶಿವಮೊಗ್ಗ, ಮಡಿಕೇರಿ, ಹಾಸನ, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ತೋಟದ ಮನೆಗಳ ಮುಂದೆಲ್ಲ “ಹೋಮ್ ಸ್ಟೇ” ಎಂಬ ಬೋರ್ಡು ನೇತು ಹಾಕಿಕೊಂಡಿರುವುದನ್ನು ಕಾಣಬಹುದು. ವಾರದ ಐದು ದಿನ ದುಡಿದು ಶನಿವಾರ, ಭಾನುವಾರವೂ ಬೆಂಗಳೂರಲ್ಲೇ ಇದ್ದು ಹೊಗೆ ಕುಡಿಯಲು ಯಾವ ಟೆಕ್ಕಿ ಕೂಡ ಇಷ್ಟಪಡುವುದಿಲ್ಲ. ಶುಕ್ರವಾರ ರಾತ್ರಿಯೇ ‘ಇನೋವಾ’ ಬುಕ್ ಮಾಡಿ ಮಲೆನಾಡಿನ ಕಡೆಗೆ ಹೊರಟು ಬಿಡುತ್ತಾರೆ. ಇವರಿಂದಾಗಿ ಹಳ್ಳಿಯವರು ಯಾವ ಸ್ಥಿತಿಗೆ ಬಂದಿದ್ದಾರೆ ಎಂದರೆ ಸ್ವಂತ ಮನೆಯನ್ನೇ ಟೆಕ್ಕಿಗಳಿಗೆ ಬಿಟ್ಟುಕೊಟ್ಟು ಶೆಡ್‌ನಲ್ಲಿ ಬಿಡಾರ ಹೂಡಿದ್ದಾರೆ. “ಒಂದೆರಡು ದಿನ ಮನೆ ಬಿಟ್ಟು ಕೊಟ್ಟರೆ ದಿನಕ್ಕೆ ಕನಿಷ್ಠ ಐದಾರು ಸಾವಿರ ರೂ. ಸಿಗುತ್ತದೆ” ಎಂಬ ಲಾಭದ ಯೋಚನೆ. ಒಂದು ದಿನಕ್ಕೆ ‘ಅಷ್ಟೊಂದು’ ಚಾರ್ಜ್ ಮಾಡಬೇಕಾದ ಅಗತ್ಯವಿದೆಯೇ ಎಂದು ಕೇಳಿದರೆ, “ಯಾರಪ್ಪನ ದುಡ್ಡು ಕೊಡುತ್ತಾರೆ, ತಿಂಗಳಿಗೆ ಮೂವತ್ತು ನಲ್ವತ್ತು ಸಾವಿರ ಸಿಗುತ್ತದಲ್ವಾ?” ಎಂದು ಕಾರಣ ನೀಡುತ್ತಾರೆ. ‘ಅಕಸ್ಮಾತ್ ನಾವು ಕಡಿಮೆ ಚಾರ್ಜ್ ಮಾಡಿದರೆ ಕ್ವಾಲಿಟಿ ಸರಿಯಿಲ್ಲ ಅಂತ ಐಟಿಯವರು ಭಾವಿಸುತ್ತಾರೆ’ ಎಂದು ಸಬೂಬು ನೀಡುತ್ತಾರೆ. ಹೀಗೆ ವಾರಾಂತ್ಯದಲ್ಲಿ ಕಾಡುದಾರಿ ಹಿಡಿಯುವ, ತೋಟದ ಮನೆ ಹುಡುಕುವ ಐಟಿಯವರಿಂದಾಗಿ ‘ಹೋಮ್ ಸ್ಟೇ’, ‘ಮಾಲ್’ಗಳ ರೂಪದಲ್ಲಿ ಪರಸ್ಪರ ದೋಚುವ ಕೆಲಸ ಆರಂಭವಾಯಿತು. ಇತ್ತ ಐಟಿ ಎಂಬ ದುಡ್ಡು ಕೊಡುವ ‘ಜಾಬ್ ಮಾರ್ಕೆಟ್’ನಿಂದ ‘ಮ್ಯಾರೇಜ್ ಮಾರ್ಕೆಟ್’ ಕೂಡ ರಂಗೇರಿತು. ಬಿಕಾಂ, ಬಿಎಸ್ಸಿ ಓದಿದವಳೂ ತನ್ನ ಅರ್ಹತೆ ಎಷ್ಟೇ ಇದ್ದರೂ ಐಟಿ ಗಂಡನೇ ಬೇಕು ಎನ್ನಲಾರಂಭಿಸಿದ್ದಳು. ಐಟಿ ಅಲ್ಲದವರು ಮೂರು ಕಾಸಿಗೂ ಬೇಡದವರು ಎಂಬ ಭಾವನೆ ಸೃಷ್ಟಿಯಾಗಿ, ಫೀಲಿಂಗ್ಸ್ ಕೂಡ ‘ಮಾರ್ಕೆಟ್ ಓರಿಯೆಂಟೆಡ್’ ಆಗಿತ್ತು. ಈ ಐಟಿ ಉಪಟಳ ಎಷ್ಟಾಗಿತ್ತು ಎಂದರೆ ಇತರ ವೃತ್ತಿಗಳಲ್ಲಿರುವವರು ತಮ್ಮ ಸಂಬಳ ಎಷ್ಟೆಂದು ಹೇಳಿಕೊಳ್ಳುವುದಕ್ಕೂ ನಾಚಿಕೆ, ಮುಜುಗರಪಟ್ಟುಕೊಳ್ಳಬೇಕಾದ ಪರಿಸ್ಥಿತಿ ಇತ್ತು. ಈ ನಾಡಲ್ಲಿ ಬಡವರಿಗೆ ಜಾಗವೇ ಇಲ್ಲ, ಬಡವರೇ ಇರಬಾರದು ಎಂಬ ಪರಿಸ್ಥಿತಿ ಸೃಷ್ಟಿ ಯಾಗುತ್ತಿತ್ತು.

ಖಂಡಿತ ದುಡ್ಡು ಎಲ್ಲರೂ ಇಷ್ಟಪಡುವಂತಹ ವಸ್ತುವೇ.

ಆದರೆ ದುಡ್ಡಿನ ಒಳಹರಿವಿನಿಂದ ಬರುವ ‘ಎಕಾನಮಿಕ್ ಎಂಪವರ್‌ಮೆಂಟ್’ ಅಂತಿಮವಾಗಿ ‘ಸೋಷಿಯಲ್ ಎಂಪವರ್ ಮೆಂಟ್’ನಲ್ಲಿ ಪರ್ಯವಸಾನಗೊಳ್ಳಬೇಕಿತ್ತು. ಆದರೆ ಆಗಿ ದ್ದೇನು? ಐಟಿ ಕಂಪನಿಗಳು ಹಾಗೂ ಉದ್ಯೋಗಿಗಳ ಪ್ರಕಾರ ಮೂರು ತಿಂಗಳಿಗೊಮ್ಮೆ ಯಾವುದಾದರೂ ಅನಾಥಾಲಯ, ವೃದ್ಧಾಶ್ರಮಗಳಿಗೆ ಭೇಟಿ ಕೊಟ್ಟು, ಒಂದಿಷ್ಟು ಸಮಯ ಕಳೆದು, ನೂರು ರೂ. ನೋಟನ್ನಿಟ್ಟು ಹಿಂದಿರುಗುವುದೇ ಮಹಾನ್ ಸಾಮಾಜಿಕ ಕಾರ್ಯವಾಗಿ ಬಿಟ್ಟಿದೆ. ಟ್ಯಾಕ್ಸ್ ಕಟ್ಟುವುದೇ ಈ ಸಮಾಜ ಹಾಗೂ ಸರಕಾರಕ್ಕೆ ನಾವು ಕೊಡುತ್ತಿರುವ ದೊಡ್ಡ ಕೊಡುಗೆ ಎಂದು ಭಾವಿಸಿದ್ದಾರೆ. ಹಾಗಾಗಿಯೇ ಕಳಪೆ ರಸ್ತೆ, ಲೋಡ್‌ಶೆಡ್ಡಿಂಗ್ ಬಗ್ಗೆ ಹರಿಹಾಯುವ ಐಟಿ ದೊರೆಗಳಿಗೆ ರಸ್ತೆ ಅಭಿವೃದ್ಧಿ, ವಿದ್ಯುತ್ ಸ್ಥಾವರ ನಿರ್ಮಾಣಕ್ಕೆ ಬಂಡವಾಳ ತೊಡಗಿಸುವುದೂ ಕೂಡ ಸಾಮಾಜಿಕ ಸೇವೆ, ಜವಾಬ್ದಾರಿ ಎಂದನಿಸುವುದಿಲ್ಲ. ಈ ವಿಷಯದಲ್ಲಿ ದೇಶ ಕಟ್ಟಿದ ಟಾಟಾ, ಬಿರ್ಲಾ ಇವರಿಗೆ ಮಾದರಿಯಾಗುವುದಿಲ್ಲ. ಇನ್ನು ಇಂತಹ ಮಾಲೀಕರ ಕಂಪನಿಗಳಲ್ಲಿ ಕೆಲಸ ಮಾಡುತ್ತಿರುವವರಿಂದ ಸಾಮಾಜಿಕ ಜವಾಬ್ದಾರಿಯನ್ನು ನಿರೀಕ್ಷಿಸಲು ಸಾಧ್ಯ?

ಅಷ್ಟೇ ಅಲ್ಲ, ಇವತ್ತು ಪ್ರಗತಿಯ ಮಾನದಂಡಗಳೇ ಬದಲಾಗಿ ಬಿಟ್ಟಿವೆ. ಸೆಲ್‌ಫೋನ್‌ಗಳ ಸಂಖ್ಯೆ ಇಷ್ಟು ಹೆಚ್ಚಾಗಿದೆ, ಟೆಲಿಕಾಂ ಕ್ಷೇತ್ರ ಇಷ್ಟು ಗತಿಯಲ್ಲಿ ವೃದ್ಧಿಯಾಗುತ್ತಿದೆ ಎಂಬುದರ ಮೇಲೆ ಅಭಿವೃದ್ಧಿಯನ್ನು ಅಳೆಯುತ್ತಾರೆ. ಸೆಲ್‌ಫೋನ್ ಸಂಖ್ಯೆ ಹೆಚ್ಚಳ ಪ್ರಗತಿಯ ಸಂಕೇತವೇ? ಒಂದು ಪುಟ್ಟ ಪಟ್ಟಣದ ಕೂಲಿ ಕಾರ್ಮಿಕನ ಕೈಯಲ್ಲೂ ವಿಚಿತ್ರ ನಮೂನೆಯ ಮೊಬೈಲ್ ಸೆಟ್‌ಗಳನ್ನು ಕಾಣಬಹುದು. ಆತನಿಗೆ ಕೂಲಿಯಿಂದ ದಿನಕ್ಕೆ ೧೨೦ ರೂ. ಬಂದರೆ, ಅದರಲ್ಲಿ ೫೦ ರೂ. ಕಿವಿ ಬಳಿ ಮೊಬೈಲ್ ಇಟ್ಟುಕೊಂಡು “ಹಲೋ……” ಎಂದು ಕೂಗುವುದಕ್ಕೇ ಬೇಕು. ಎಷ್ಟು ಜೋರಾಗಿ ಕೂಗಿದರೂ ಅತ್ತ ಕಡೆ ಇರುವವರಿಗೆ ಎಷ್ಟು ಕೇಳಬೇಕೋ ಅಷ್ಟೇ ಕೇಳುತ್ತದೆ ಎಂಬ ಸಾಮಾನ್ಯ ಅರಿವು ಇಲ್ಲದವರೂ ಮೊಬೈಲ್ ದಾಸರಾಗಿ ಬಿಟ್ಟಿದ್ದಾರೆ. ಇವು ಐಟಿ ಹಾಗೂ ಜಾಗತೀಕರಣ ಪ್ರೇರಿತ ಬೆಳವಣಿಗೆಗಳು. ಇವುಗಳನ್ನು ಯಾವ ದೃಷ್ಟಿಯಲ್ಲಿ ಪ್ರಗತಿ ಎನ್ನುತ್ತೀರಿ? ಹಣ, ಶ್ರೀಮಂತಿಕೆ ಬಂದ ಕೂಡಲೇ ಒಂದು ಸಮಾಜ ಉದ್ಧಾರವಾಗುವುದಿಲ್ಲ, ಸಮಗ್ರ ಅಭಿವೃದ್ಧಿ ಹೊಂದುವುದಿಲ್ಲ ಎಂಬುದಕ್ಕೆ ಹಾಲಿ ಭಾರತವೇ ದೊಡ್ಡ ಉದಾಹರಣೆ.

ಶಿವಮೊಗ್ಗ, ಶಿರಸಿ, ಸಾಗರ ಭಾಗದಲ್ಲೊಂದು ವಿಚಿತ್ರ ಸಮಸ್ಯೆ ಎದುರಾಗಿದೆ. ಎಷ್ಟೋ ಅಪ್ಪ-ಅಮ್ಮಂದಿರು ಅಂಗೈ ಅಗಲದ ಅಡಕೆ ತೋಟದಲ್ಲಿ ಕಷ್ಟಪಟ್ಟು ದುಡಿದು, ಬೆಲೆಯಲ್ಲಿನ ಏರು-ಪೇರನ್ನೂ ಸಹಿಸಿಕೊಂಡು ಮಕ್ಕಳನ್ನು ಸಾಫ್ಟ್‌ವೇರ್ ಎಂಜಿನಿಯರ್‌ಗಳಾಗಿ ಮಾಡಿದ್ದಾರೆ. ಮಕ್ಕಳು ದುಡಿಯಲು ಆರಂಭಿಸಿದ ನಂತರ ಮನೆ, ಊರು ಉದ್ಧಾರವಾಗಬೇಕಿತ್ತು ತಾನೇ? ಒಂದು ವೇಳೆ ದುಡ್ಡಿನಿಂದ ಪ್ರಗತಿ ಹೆಚ್ಚಾಗಿದ್ದರೆ ಊರಲ್ಲಿರುವ ತೋಟ ಅರ್ಧ, ಒಂದು ಎಕರೆಯಿಂದ ಎರಡು, ಮೂರು ಎಕರೆಗಳಾಗಬೇಕಿತ್ತು ಅಲ್ಲವೆ? ಕನಿಷ್ಠ ಅಭಿವೃದ್ಧಿಯನ್ನಾದರೂ ಕಾಣಬೇಕಿತ್ತು ಅನಿಸುವು ದಿಲ್ವಾ? ಆದರೆ ಈ ಭಾಗದ ಮಲೆನಾಡಿನಲ್ಲಿ, ‘ಕೆಲಸಕ್ಕೆ ಜನರೇ ಸಿಗುತ್ತಿಲ್ಲ, ಅಡಕೆಗೆ ಬೆಲೆಯೂ, ಮಕ್ಕಳಿಗೆ ತೋಟದ ಮೇಲೆ ಆಸಕ್ತಿಯೂ ಇಲ್ಲ’ ಎಂಬ ಕೊರಗು ಕೇಳಿಬರುತ್ತಿದೆ. ಊರಲ್ಲಿದ್ದ ತೋಟವನ್ನು ಕೇರಳದ ಕಾಕಾಗಳಿಗೆ ಮಾರಿ ಬೆಂಗಳೂರು ಸೇರುತ್ತಿದ್ದಾರೆ. ಅಪ್ಪ-ಅಮ್ಮ ಯಾವ ಕೃಷಿಯಿಂದಾಗಿ ತಮ್ಮನ್ನು ಓದಿಸಿ ವಿದ್ಯಾ ವಂತರನ್ನಾಗಿ ಮಾಡಿದರೋ ಆ ಕೃಷಿಯ ಬಗ್ಗೆಯಾಗಲಿ, ಭೂಮಿಯ ಬಗ್ಗೆಯಾಗಲಿ ಮಕ್ಕಳಿಗೆ ಪ್ರೀತಿಯೇ ಇಲ್ಲದಾಗಿದೆ. ಮುಂದೊಂದು ದಿನ ಕಾಕಾಗಳು ಶಿರಸಿ, ಸಾಗರ, ಬನವಾಸಿಗಳನ್ನು ಮತ್ತೊಂದು ಭಟ್ಕಳವನ್ನಾಗಿಸಿದರೂ ಆಶ್ಚರ್ಯ ವಿಲ್ಲ!
ಇದೇನೇ ಇರಲಿ, ಎಲ್ಲ ಭಾಗಗಳ ಜನರೂ ಒಂದಿಲ್ಲೊಂದು ನೆಪ ಹೇಳಿಕೊಂಡು, ‘ಬೆಂಗಳೂರಿನಲ್ಲಿ ದುಡ್ಡಿದೆ’ ಎಂಬ ದೂರ ದೃಷ್ಟಿಯನ್ನಿಟ್ಟುಕೊಂಡು ಬೆಂಗಳೂರು ಸೇರುತ್ತಿರುವುದರಿಂದ ವಿನಾಕಾರಣ ಎಲ್ಲದರ ಬೆಲೆಗಳೂ ಹೆಚ್ಚಾಗುತ್ತಿವೆ.

ಇಂತಹ ಒಂದು ಪರಿಸ್ಥಿತಿಯಲ್ಲಿ, ಹೋಳಿ ಹುಣ್ಣಿಮೆಯ ದಿನ ಜೋರಾಗಿ ಮಳೆ ಬಂದರೆ ಏನಾಗಬಹುದೋ ಹಾಗೆ “ಇಕನಾಮಿಕ್ ರಿಸೆಷನ್”(ಆರ್ಥಿಕ ಹಿಂಜರಿತ) ಆಗಮಿಸಿದೆ. ರಿಸೇಷನ್ ಎಂಬ ಭಾರೀ ಮಳೆಯಿಂದಾಗಿ ಬಣ್ಣ ತೊಳೆದುಹೋಗಿ ನಗ್ನದರ್ಶನವಾಗುತ್ತಿದೆ. ಇದು ದೇಶಕ್ಕೆ ಹಿನ್ನಡೆ ಎಂದು ಗೊತ್ತಿದ್ದರೂ ಅದನ್ನು ಸ್ವಾಗತಿಸಬೇಕಾದ, ಅದರಲ್ಲೂ ಒಂದು ಆಶಾಕಿರಣವನ್ನು ಕಂಡುಕೊಳ್ಳಬೇಕಾದ ಪರಿಸ್ಥಿತಿಯನ್ನು ನಾವೇ ಸೃಷ್ಟಿಸಿಕೊಂಡಿದ್ದೇವೆ. ೯/೧೧ ನಂತರ ನಮ್ಮ ಮೇಲೆ ಒಂದೇ ಒಂದು ಭಯೋತ್ಪಾದಕ ದಾಳಿಯನ್ನು ನಡೆಸಲು ಯಾರಿಗೂ ಸಾಧ್ಯವಾಗಿಲ್ಲ ಎಂದು ಬೀಗುತ್ತಿದ್ದ ಅಮೆರಿಕ ಅಸಹಾಯಕವಾಗಿ ನಿಂತಿದೆ. ಲಾಡೆನ್‌ಗೆ ಹೆದರದ ಅಮೆರಿಕ ರಿಸೆಷನ್‌ಗೆ ಬೆದರಿ ಕುಳಿತಿದೆ. ಅಮೆರಿಕವನ್ನೇ ನಂಬಿಕೊಂಡಿದ್ದ ಭಾರತದ ಐಟಿ ಕ್ಷೇತ್ರ ಕೂಡ ಕುಸಿದು ಬೀಳಲಾರಂಭಿಸಿದೆ. ಖಂಡಿತ ಐಟಿ ಕ್ಷೇತ್ರದ ಬಗ್ಗೆ ನಮಗ್ಯಾರಿಗೂ ಮತ್ಸರವಿಲ್ಲ. ಐಟಿಯಿಂದಾಗಿಯೇ ಭಾರತಕ್ಕೆ ವಿಶ್ವಮಾನ್ಯತೆ ದೊರೆಯಿತು, ಸಾಕಷ್ಟು ಬದಲಾವಣೆಗಳಾದವು ಎಂಬುದನ್ನು ಎಲ್ಲರೂ ಒಪ್ಪುತ್ತಾರೆ. ಆದರೆ ಐಟಿ ಕ್ಷೇತ್ರದಲ್ಲಿರುವ ಉದ್ಯೋಗಿಗಳಾಗಲಿ, ಮಾಲೀಕರಾಗಲಿ ಒಂದು ವೇಳೆ ಐಟಿ ಬಿದ್ದು ಹೋದರೆ ಏನು ಮಾಡಬೇಕು? ಎಂಬುದರ ಬಗ್ಗೆ ಎಂದೂ ಯೋಚಿಸಲಿಲ್ಲ. ೧೯೯೧ರ ನಂತರ ಅಂದರೆ ನರಸಿಂಹರಾವ್ ನೀತಿಗಳ ಲಾಭ ಪಡೆದು ರಾತ್ರೋರಾತ್ರಿ ಶ್ರೀಮಂತರಾಗಿ ಮಧ್ಯಮವರ್ಗದವರ ಹೀರೋಗಳಾದ ಐಟಿ ದೊರೆಗಳು ಅಮೆರಿಕ, ಬ್ರಿಟನ್‌ನ ದುಡ್ಡನ್ನು ಭಾರತಕ್ಕೆ ತಂದರೇ ಹೊರತು, ಆ ದುಡ್ಡಿನಿಂದ ತಂತ್ರeನವನ್ನು ಅಭಿವೃದ್ಧಿಪಡಿಸಲು ಪ್ರಯತ್ನಿಸ ಲಿಲ್ಲ. ಅಮೆರಿಕದ ಕಾಮಗಾರಿಗಳನ್ನು ಗುತ್ತಿಗೆ ಹಿಡಿದು ನಮ್ಮ ಸಾಫ್ಟ್‌ವೇರ್ ಎಂಜಿನಿಯರ್‌ಗಳನ್ನು ಐಟಿ ಕೂಲಿಗಳನ್ನಾಗಿ ಮಾಡಿದರೇ ಹೊರತು ಐಬಿಎಂ, ಮೈಕ್ರೋಸಾಫ್ಟ್, ಆಪಲ್‌ಗಳಂತೆ ಅಭಿವೃದ್ಧಿ ಮತ್ತು ಸಂಶೋಧನೆಗೆ (ಆರ್ ಆಂಡ್ ಡಿ) ಬಂಡವಾಳ ತೊಡಗಿಸಿ ಭವಿಷ್ಯವನ್ನು ಭದ್ರಪಡಿಸಿಕೊಳ್ಳಲಿಲ್ಲ. ಹಾಗಾಗಿ ಅವರ ಕಂಪನಿಗಳಲ್ಲಿ ಕೆಲಸಕ್ಕೆ ಸೇರಿದವರೂ ಕೂಡ ಭವಿಷ್ಯದ ದೃಷ್ಟಿಯಿಂದ ದುಡ್ಡನ್ನು ಕೂಡಿಡುವ ಬದಲು ಶೋಕಿ ಬೆಳೆಸಿಕೊಂಡರು. ಇವತ್ತು ನಮ್ಮ ಯಾವ ಖ್ಯಾತನಾಮ ಐಟಿ ಕಂಪನಿಗಳ ಬಳಿ ಪೇಟೆಂಟ್‌ಗಳಿವೆ ಹೇಳಿ? ಜಾಸ್ತಿ ಕೂಲಿ ಕೊಟ್ಟಿದ್ದೇ ದೊಡ್ಡ ಸಾಧನೆಯೆಂದು ಬೀಗುವುದರ ಹೊರತು ಭಾರತದ ಐಟಿ ಕ್ಷೇತ್ರದ ಭವಿಷ್ಯವನ್ನು ಹಸನಾಗಿಟ್ಟುಕೊಳ್ಳಲು ಯಾರೂ ಪ್ರಯತ್ನಿಸಲಿಲ್ಲ. ಇವತ್ತು ಒಬ್ಬ ಐಟಿಯವನು ಕೆಲಸ ಕಳೆದುಕೊಂಡರೆ ಪ್ಯಾನಿಕ್ ಆಗುತ್ತಾನೆ. ಅವನಿಗೆ ಬೇರೆ ಕೆಲಸವೂ ಗೊತ್ತಿಲ್ಲ, ತನ್ನ ಭವಿಷ್ಯಕ್ಕಾಗಿ ಕೂಡಿಡುವುದೂ ಒಂದು ಸಾಮಾಜಿಕ ಜವಾಬ್ದಾರಿ ಎಂಬುದನ್ನೂ ಕಲಿಯಲಿಲ್ಲ.

ತ ಅರ್ಥಶಾಸ್ತ್ರಜ್ಞರಾದ ಅಮರ್ತ್ಯ ಸೇನ್ ಹಾಗೂ ಜೀನ್ ಡ್ರೆಝ್ ಅವರ “Being rich doesn’t mean being happy” ಎಂಬ ಮಾತು ನಿಜಕ್ಕೂ ಅರ್ಥಗರ್ಭಿತ. ದುಡ್ಡಿನಿಂದ ಅಭಿವೃದ್ಧಿಯನ್ನು ಅಳೆಯಲಾಗದು, ನಾಲ್ಕು ಜನ ಶ್ರೀಮಂತರಾದ ಮಾತ್ರಕ್ಕೆ ದೇಶ ಅಭಿವೃದ್ಧಿಯಾದಂತಲ್ಲ ಎಂಬುದನ್ನು ನಿರೂಪಿಸಲು ಇವರು “ಹ್ಯೂಮನ್ ಡೆವೆಲಪ್‌ಮೆಂಟ್ ಇಂಡೆಕ್ಸ್” ಎಂಬ ಹೊಸ ಮಾನದಂಡವನ್ನು ರೂಪಿಸಿದರು. ವಿಶ್ವಸಂಸ್ಥೆಯ ಸಲಹೆಗಾರರಾಗಿದ್ದಾಗ ಇವರಿಬ್ಬರುಗಳು ನೀಡಿದ ಸಲಹೆಯಿಂದಾಗಿಯೇ ಏಷ್ಯಾ ಹಾಗೂ ಆಫ್ರಿಕಾದಲ್ಲಿ ಮಕ್ಕಳಿಗೆ “ಮಧ್ಯಾಹ್ನದ ಊಟ”(ಮಿಡ್ ಡೇ ಮೀಲ್ಸ್) ಯೋಜನೆ ಯನ್ನು ಜಾರಿಗೆ ತಂದಿದ್ದು. ೧. ಆತ್ಮಗೌರವ ಮತ್ತು ಸಮಾನ ಅವಕಾಶ, ೨. ಆರೋಗ್ಯ, ೩. ಶಿಕ್ಷಣ, ೪. ಉದ್ಯೋಗ ಎಲ್ಲರಿಗೂ ಲಭ್ಯವಾಗಬೇಕು ಎಂದು ಹೇಳಿದ್ದೂ ಇವರೇ. ಕೆಲವು ಮೂಲಭೂತ ವೃತ್ತಿಗಳ (ಫಂಡಮೆಂಟಲ್ ಆಕ್ಯುಪೇಶನ್ಸ್) ಮೇಲೆ ಸಮಾಜ ನಿಂತಿದೆ. ಇವುಗಳಾಚೆಯ ಯಾವುದೋ ಒಂದು ಕ್ಷೇತ್ರ ಅಸಹಜವಾಗಿ ಅಭಿವೃದ್ಧಿಯಾದರೆ, ಆ ಕ್ಷೇತ್ರದವರು ಅತಿಯಾಗಿ ವರ್ತಿಸಿದರೆ ಅದರಿಂದ ಸಮಾಜದ ಮೇಲೆ ಆಗುವುದು ಕೆಟ್ಟಪರಿಣಾಮವೇ. ಈ ಹಿನ್ನೆಲೆಯಲ್ಲಿ ಐಟಿ ಕ್ಷೇತ್ರದವರು ತಮ್ಮ ಸಾಮಾಜಿಕ ಜವಾಬ್ದಾರಿ ಹಾಗೂ ಕರ್ತವ್ಯಗಳನ್ನು ಅರ್ಥಮಾಡಿಕೊಳ್ಳಲು, False pride ನಿಂದ ಹೊರಬರುವಂತಾಗಲು, ಕೂಡಿಡುವುದನ್ನು ಕಲಿಯಲು ಇಂಥದ್ದೊಂದು ಆರ್ಥಿಕ ಹಿಂಜರಿತ ಬೇಕಿತ್ತು ಎನಿಸುತ್ತಿದೆ. ಅಷ್ಟಕ್ಕೂ ಐಟಿಯಿಂದಾಗಿ ಸಾವಿರಾರು ಕುಟುಂಬಗಳು ಉದ್ಧಾರ ವಾದವು ಎಂಬುದು ಎಷ್ಟು ಸತ್ಯವೋ, ಐಟಿಯವರ ಹಣದ ಮದದಿಂದಾಗಿ ಹತ್ತು ಪಟ್ಟು ಹೆಚ್ಚು ಕುಟುಂಬಗಳು ಸಂಕಷ್ಟಕ್ಕೂ ಸಿಲುಕಿದವು ಎಂಬುದು ಅಷ್ಟೇ ಸತ್ಯ.

ಕುರುಡು ಕಾಂಚಾಣ ಕುಣಿಯುತ್ತಲಿತ್ತು
ಕಾಲಿಗೆ ಬಿದ್ದವರ ತುಳಿಯುತ್ತಲಿತ್ತು….
ಅಂಗಾತ ಬಿತ್ತು ಹೆಗಲಾಗೆ ಎತ್ತು…
ಎಂಬ ಬೇಂದ್ರೆಯವರ ಮಾತುಗಳನ್ನು ಇನ್ನಾದರೂ ಅರ್ಥ ಮಾಡಿಕೊಳ್ಳಿ. ಒಮ್ಮೆ ಕೆಳಗೆ ಬಿದ್ದರೆ ಹೆಗಲ ಮೇಲೆಯೇ ಹೊತ್ತು ಕೊಂಡು ಹೋಗಬೇಕಾಗುತ್ತದೆ.

ಕೃಪೆ : ಪ್ರತಾಪ್ ಸಿಂಹ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ