ನನ್ನ ಬ್ಲಾಗ್ ಪಟ್ಟಿ

ಸೋಮವಾರ, ಆಗಸ್ಟ್ 2, 2010

ಆರು ವರ್ಷಗಳಲ್ಲಿ ಆಕೆ ನಮಗೆ ಆಪ್ತರಾದರೆ?!

ಅವರು ಭಾರತದ ಆಗಿನ ಪ್ರಧಾನಿ ಇಂದಿರಾ ಗಾಂಧಿ ಅವರ ಪುತ್ರ ರಾಜೀವ್ ಗಾಂಧಿಯವರನ್ನು ವಿವಾಹವಾಗಿದ್ದು 1968ರಲ್ಲಿ. ರಾಹುಲ್ ಗಾಂಧಿ 1970ರಲ್ಲಿ ಹುಟ್ಟಿದರು. 1972ರಲ್ಲಿ ಪ್ರಿಯಾಂಕಾ ಜನನವಾಯಿತು. 1980ರಲ್ಲಿ ಸಂಭವಿಸಿದ ವಿಮಾನ ದುರ್ಘಟನೆಯಲ್ಲಿ ಸಂಜಯ್ ಗಾಂಧಿ ಅಗಲಿದ ಕಾರಣ 1982ರಲ್ಲಿ ರಾಜೀವ್ ಗಾಂಧಿ ಅಧಿಕೃತವಾಗಿ ರಾಜಕಾರಣಕ್ಕಿಳಿದರು. 1968ರಿಂದ 1982ರವರೆಗೆ ಅಂದರೆ ಸುಮಾರು 14 ವರ್ಷ ಕಳೆದರೂ ಸೋನಿಯಾ ಗಾಂಧಿಯವರು ಮಾತ್ರ ಇಟಲಿಯ ನಾಗರಿಕಳೇ ಆಗಿದ್ದರು. ಒಬ್ಬ ಪ್ರಧಾನಿಯೆಂದರೆ ದೇಶದ ಚುಕ್ಕಾಣಿಯಂಥ ಗುರುತರ ಜವಾಬ್ದಾರಿಯನ್ನು ಹೊತ್ತ ವ್ಯಕ್ತಿ ಮಾತ್ರವಲ್ಲ, ನಮ್ಮ ಸಾಮರ್ಥ್ಯ-ದೌರ್ಬಲ್ಯಗಳ ಬಗ್ಗೆ ಮೂಲ ಮಾಹಿತಿ ಹೊಂದಿರುವ ಸ್ಥಾನವದು. ನಮ್ಮ ದೇಶದ ಅತ್ಯಂತ ಗಂಭೀರ ಹಾಗೂ ಗೌಪ್ಯ ವಿಚಾರಗಳ ಮಾಹಿತಿ ಹೊಂದಿರುವ ಗದ್ದುಗೆಯದು. ಅವು ಯಾವ ಕಾರಣಕ್ಕೂ ಯಾರಿಗೂ, ಅದರಲ್ಲೂ ವಿದೇಶಿಯರಿಗೆ ಸೋರಿ ಹೋಗಬಾರದು. ಮನೆಯಲ್ಲಿ, ಜತೆಯಲ್ಲಿ, ಡ್ರಾಯಿಂಗ್ ರೂಮ್ನಲ್ಲಿ, ಊಟದ ಟೇಬಲ್ನಲ್ಲಿ, ದಿನದ 24 ಗಂಟೆಗಳೂ ಜತೆ ಇರುವ ಪ್ರಧಾನಿಯ ಸೊಸೆಯೇ ವಿದೇಶಿಯರಾಗಿಬಿಟ್ಟರೆ? ಇಂತಹ ಅನುಮಾನ, ಶಂಕೆಗಳ ಹೊರತಾಗಿಯೂ ಸೋನಿಯಾ ಭಾರತೀಯನ ಕೈಹಿಡಿದಿದ್ದರೇ ವಿನಹ ಭಾರತೀಯರಾಗುವ ಆಸಕ್ತಿಯನ್ನೆಂದೂ ತೋರಲಿಲ್ಲ. ಭಾರತದ ಊಟ, ಉಡುಗೆ ಯಾವುದನ್ನೂ ಇಷ್ಟಪಟ್ಟವರಲ್ಲ. ನಮ್ಮ ಪ್ರಧಾನಿ ಸೊಸೆಯಾಗಿ ಬಂದ ಮೇಲೂ ಮಿನಿಸ್ಕರ್ಟ್ ಹಾಕಿ ವಿವಾದಕ್ಕೂ ಒಳಗಾಗಿದ್ದರು. 1980ರಲ್ಲಿ ಮೊಟ್ಟ ಮೊದಲ ಬಾರಿಗೆ ಸೋನಿಯಾ ಗಾಂಧಿಯವರ ಹೆಸರು ದಿಲ್ಲಿಯ ಮತದಾರರ ಪಟ್ಟಿಯಲ್ಲಿ ಕಾಣಿಸಿಕೊಂಡಿತಾದರೂ ಆಕೆ ಭಾರತದ ನಾಗರಿಕರೇ ಆಗಿರಲಿಲ್ಲ. ಅದು ಭಾರತೀಯ ನಾಗರಿಕರ ಹೆಸರನ್ನು ಮಾತ್ರ ಮತದಾರರ ಪಟ್ಟಿಯಲ್ಲಿ ಸೇರಿಸಬೇಕು ಎಂಬ 1960 ಚುನಾವಣೆ ಸಂಹಿತೆ ನೋಂದಣಿ ಕಾಯಿದೆಯ ಉಲ್ಲಂಘನೆಯಾಗಿತ್ತು. ಕೊನೆಗೂ 1983, ಏಪ್ರಿಲ್ನಲ್ಲಿ ಭಾರತದ ಪೌರತ್ವವನ್ನು ಸ್ವೀಕರಿಸಿದರೂ ಅಲ್ಲೂ ಗೋಲ್ಮಾಲ್ ನಡೆದಿತ್ತು. 1983 ಮತದಾರರ ಪಟ್ಟಿಯಲ್ಲಿ ಸೋನಿಯಾ ಹೆಸರು ಕಾಣಿಸಿಕೊಂಡಿತು. ಆದರೆ ಮತದಾರರ ಪಟ್ಟಿ ಪರಿಷ್ಕರಣೆ ಹಾಗೂ ಹೊಸ ಸೇರ್ಪಡೆ ಕಾರ್ಯ ಜನವರಿಯಲ್ಲೇ ಮುಗಿದಿತ್ತು. ಏಪ್ರಿಲ್ನಲ್ಲಿ ಪೌರತ್ವ ಪಡೆದುಕೊಂಡ ಆಕೆಯ ಹೆಸರು ಜನವರಿಯಲ್ಲೇ ಅಂತಿಮಗೊಂಡಿದ್ದ ಪಟ್ಟಿಯೊಳಗೆ ಹೇಗೆ ಸೇರಿಕೊಂಡಿತು?


ಇತ್ತ 1992ಕ್ಕೂ ಮೊದಲು ಯಾರು ತಮ್ಮ ಪೌರತ್ವ ಕಳೆದುಕೊಂಡಿದ್ದಾರೋ ಅವರು ಮತ್ತೆ ತಮ್ಮ ಹೆಸರನ್ನು ನೊಂದಾ ಯಿಸಿಕೊಳ್ಳಬಹುದು ಎಂದು ಘೋಷಿಸಿದ ಇಟಲಿ, 1992ರಲ್ಲಿ ದ್ವಿಪೌರತ್ವ ನೀಡಲು ಮುಂದಾಯಿತು. ಅದಕ್ಕೂ ಮೊದಲು ಅಂದರೆ 1991ರಲ್ಲಿ ರಾಜೀವ್ ಗಾಂಧಿಯವರು ಹತ್ಯೆಯಾಗಿದ್ದರು. ಹಾಗಾಗಿ ಸೋನಿಯಾ ಗಾಂಧಿಯವರು ಮತ್ತೆ ಇಟಲಿಯ ಪೌರತ್ವಕ್ಕಾಗಿ ಹೆಸರು ನೋಂದಣಿ ಮಾಡಿಕೊಂಡರೆ? ಅದನ್ನು ಸೋನಿಯಾ ಅವರೆಂದೂ ಸ್ಪಷ್ಟಪಡಿಸಿಲ್ಲ. ಹಾಗಾಗಿಯೇ ಆಕೆ 1998ರ ಸಾರ್ವತ್ರಿಕ ಚುನಾವಣಾ ಪ್ರಚಾರೋಂದಲನಕ್ಕಿಳಿದಾಗ ಆಕೆಯ ವಿದೇಶಿ ಮೂಲ ದೊಡ್ಡ ವಿಷಯ, ವಿವಾದಕ್ಕೆಡೆಯಾಯಿತು. ಗಾಂಧಿ, ನೆಹರು ಆಳಿದ ಕಾಂಗ್ರೆಸ್ಸಿಗೆ ಯಾರೂ ಸಿಗಲಿಲ್ಲವೆ? ಎಂಬ ಪ್ರಶ್ನೆ ಎದುರಾಯಿತು. ನಮ್ಮ ದೇಶದ ಪೌರತ್ವ ಪಡೆದುಕೊಳ್ಳುವುದಕ್ಕೇ 15 ವರ್ಷ ಮೀನ-ಮೇಷ ಎಣಿಸಿದ್ದ ಆಕೆಯ ದೇಶನಿಷ್ಠೆಯ ಬಗ್ಗೆ ಇಂತಹ ಸಾಕಷ್ಟು ಅನುಮಾನಗಳೆದ್ದವು, ಅನುಮಾನಗಳಿಗೆ ಬಲವಾದ ಕಾರಣಗಳೂ ಇದ್ದವು. ಒಂದು ವೇಳೆ, ಆಕೆಯೇನಾದರೂ ಈ ದೇಶದ ಪ್ರಧಾನಿಯಾದರೆ ಗತಿಯೇನು? ಎಂಬ ಆತಂಕ ಸೃಷ್ಟಿಯಾಯಿತು. 1998ರಲ್ಲಿ ನಡೆದ ಕಾಂಗ್ರೆಸ್ ಕಾರ್ಯಕಾರಣಿ ಸಭೆಯಲ್ಲಿ ಹಾಲಿ ಅಧ್ಯಕ್ಷ ಸೀತಾರಾಮ್ ಕೇಸರಿಯವರನ್ನು ಪದಚ್ಯುತಗೊಳಿಸಿ, ಸೋನಿಯಾ ಗಾಂಧಿಯವರನ್ನು ಪಕ್ಷದ ಅಧ್ಯಕ್ಷೆ ಎಂದು ಏಕಾಏಕಿ ಘೋಷಣೆ ಮಾಡಲಾಯಿತು. ಸಭೆ ಬಿಟ್ಟು ಹೋಗಲೊಪ್ಪದ ಸೀತಾರಾಮ್ ಕೇಸರಿಯವರನ್ನು ಅನಾಮತ್ತಾಗಿ ಎತ್ತಿಕೊಂಡು ಹೋಗಿ ಹೊರಕ್ಕೆ ಹಾಕಲಾಯಿತು. ಪಕ್ಷದ ಸದಸ್ಯರಾದ 69 ದಿನಗಳಲ್ಲಿಯೇ ಸೋನಿಯಾ ಅಧ್ಯಕ್ಷರಾಗಿ ಬಿಟ್ಟರು. 1999ರ ಲೋಕಸಭೆ ಚುನಾವಣೆ ಪ್ರಚಾರದ ವೇಳೆ ಸಾರ್ವಜನಿಕ ಸಭೆಯಲ್ಲಿ ಅತ್ಯಂತ ಜನಪ್ರಿಯ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರನ್ನು ‘ಗದ್ದಾರ್’ (ದೇಶದ್ರೋಹಿ), ‘ಸುಳ್ಳುಗಾರ’ ಎಂದು ಕರೆಯುವ ಮೂಲಕ ದೇಶ ವಾಸಿಗರ ಮುಂದೆ ಕುಬ್ಜರಾಗಿ ಬಿಟ್ಟಿದ್ದರು. ಪರಿಣಾಮವಾಗಿ ಕಾಂಗ್ರೆಸ್ ಹೀನಾಯವಾಗಿ ಸೋತು 114 ಸ್ಥಾನಗಳಿಗೆ ಇಳಿಯಿತು. 2004ರಲ್ಲಿ ಯುಪಿಎ ಸರಕಾರ ಅಧಿಕಾರಕ್ಕೆ ಬಂತಾದರೂ ಕಾಂಗ್ರೆಸ್ ಪಾಲು 145 ಸ್ಥಾನಗಳಷ್ಟೇ ಆಗಿತ್ತು. ಬಿಜೆಪಿ ದ್ವೇಷವೆಂಬ ಏಕೈಕ ಸಾಮಾನ್ಯ ಅಂಶ ಉಳಿದೆಲ್ಲ ಪಕ್ಷಗಳು ಕಾಂಗ್ರೆಸ್ ತೆಕ್ಕೆ ಸೇರಿ ಸೋನಿಯಾ ಕೈಗೆ ಅಧಿಕಾರ ದಕ್ಕುವಂತೆ ಮಾಡಿತು.

ಆದರೆ…

2009ರ ಲೋಕಸಭೆ ಚುನಾವಣೆಯ ನಂತರವೂ ಹಾಗೇ ಹೇಳುವುದಕ್ಕಾಗುತ್ತದೆಯೇ? 2004 ಹಾಗೂ ಅದಕ್ಕಿಂತ ಮೊದ ಲಿದ್ದ ಸೋನಿಯಾ ಗಾಂಧಿಯವರಿಗೂ ಈಗಿನ ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿಯವರಿಗೂ ಯಾವುದಾದರೂ ವ್ಯತ್ಯಾಸಗಳಿವೆಯೇ? ಅಥವಾ ವ್ಯತ್ಯಾಸಗಳಾಗಿವೆಯೇ? ಸೋನಿಯಾ ಬಗ್ಗೆ ಪ್ರಾರಂಭದಲ್ಲಿದ್ದ ಅಪಸ್ವರ, ಅಪನಂಬಿಕೆ ಈಗ ತಕ್ಕಮಟ್ಟಿಗೆ ದೂರವಾ ಗಿದೆ ಎನಿಸುತ್ತಿಲ್ಲವೆ? ಅಸಹನೀಯವಾಗಿದ್ದ ನಮ್ಮ ಮನಸುಗಳು ಸಹ್ಯಗೊಳ್ಳುತ್ತಿವೆಯೇ? How she endeared herself to the masses? ಆಕೆ ಜನರಿಗೆ ಹೇಗೆ ಹತ್ತಿರವಾದರು? ಅಥವಾ ತಮ್ಮನ್ನು ಹೇಗೆ ಹತ್ತಿರ ಮಾಡಿಕೊಂಡರು?

ಒಬ್ಬ ರಾಜಕಾರಣಿಯಾಗಿ ಸೋನಿಯಾ ಗಾಂಧಿಯವರು 1994 ರಿಂದ 2010ರವರೆಗೂ ನಡೆದುಕೊಂಡು ಬಂದ ದಾರಿ, ಬೆಳೆದು ಬಂದ ಬಗೆಯನ್ನು ಗಮನಿಸಿ. ಗಾಂಧಿ-ನೆಹರು ಕುಟುಂಬ ಎಂದ ಕೂಡಲೇ ಡೈನಾಸ್ಟಿ, ವಂಶಾಡಳಿತ ಅಂತ ಎಷ್ಟೇ ದೂರಬಹುದು. ಆದರೂ ಗಾಂಧಿ ಸರ್‌ನೇಮ್ ಹೊಂದಿರುವ ಈ ನೆಹರು ವಂಶ ಇಲ್ಲದಿದ್ದರೆ ಸ್ವಾತಂತ್ರ್ಯಾ ನಂತರ ಕಾಂಗ್ರೆಸ್ ಇಷ್ಟು ಕಾಲ ಅಸ್ತಿತ್ವ ಉಳಿಸಿಕೊಳ್ಳಲು ಸಾಧ್ಯವಿತ್ತೆ? ಕಾಂಗ್ರೆಸ್‌ಗೆ ನೆಹರು ಕುಟುಂಬ ಹಾಗೂ ಗಾಂಧಿ ಸರ್ ನೇಮ್ ಬೇಕು. ಅದೇ ಕಾಂಗ್ರೆಸ್‌ನ ಬೈಂಡಿಂಗ್ ಫೋರ್ಸ್, ಫ್ಯಾಕ್ಟರ್. ನೆಹರು ಕುಟುಂಬ ರಹಿತ ಕಾಂಗ್ರೆಸ್ 1991ರಿಂದ 1998ರವರೆಗೂ ಹೇಗಿತ್ತು ನೋಡಿ? ನರಸಿಂಹರಾವ್ ಅವರು ಪ್ರಧಾನಿಯಾಗಿ 5 ವರ್ಷ ಅಧಿಕಾರ ನಡೆಸಿದರೂ ಪಕ್ಷ ಹಾಗೂ ಸರಕಾರದ ಕಥೆ ಎತ್ತು ಏರಿಗೆ, ಕೋಣ ನೀರಿಗೆ ಎಳೆ ಯಿತು ಎಂಬಂತಿತ್ತು. ಎನ್‌ಡಿ ತಿವಾರಿ, ಅರ್ಜುನ್ ಸಿಂಗ್, ಮಾಧವ್ ರಾವ್ ಸಿಂದ್ಯಾ, ಶರದ್ ಪವಾರ್ ಎಲ್ಲರೂ ಪ್ರಧಾನಿ ಸ್ಥಾನದ ಆಕಾಂಕ್ಷಿಗಳಾಗುವ ಮೂಲಕ ಪಕ್ಷ ಧೂಳೀಪಟವಾಗುವ, ಛಿದ್ರ ಛಿದ್ರವಾಗುವ ಮಟ್ಟಕ್ಕೆ ಹೋಯಿತು. ಕಟ್ಟಾ ಕಾಂಗ್ರೆಸ್ಸಿಗರು ಸೋನಿಯಾ ಗಾಂಧಿಯವರ ದುಂಬಾಲು ಬಿದ್ದು ಪಕ್ಷಕ್ಕೆ ಎಳೆದುತಂದು ಅಧ್ಯಕ್ಷಗಾದಿ ಮೇಲೆ ಕೂರಿಸಿದರು. ಸೋನಿಯಾ ಗಾಂಧಿಯವರಿಗೂ ಕೂಡ ಗಾಂಧಿ ಎಂಬ ಸರ್‌ನೇಮ್‌ನೊಂದಿಗೆ ಬೈ ಡೀಫಾಲ್ಟ್ ಅಥವಾ ಆಯಾಚಿತವಾಗಿ ಕೆಲವು ಅಧಿಕಾರಗಳು, ಹಕ್ಕುಗಳು ಸಿಕ್ಕಿದ್ದು ನಿಜ. ಹಾಗಂತ ವಂಶಾಡಳಿತ ಎನ್ನುವುದಕ್ಕಾಗುವುದಿಲ್ಲ. ನೆಹರು ಕುಟುಂಬವಿಲ್ಲದಿದ್ದರೆ ಕಾಂಗ್ರೆಸ್ ಉಳಿಯುತ್ತದಾ ಎಂಬುದೇ ಇಲ್ಲಿರುವ ಪ್ರಶ್ನೆ. ಕಾಂಗ್ರೆಸ್ ತೆಗಳುವ ಮುನ್ನ ವಾಜಪೇಯಿ ನಿವೃತ್ತಿಯ ನಂತರ ಬಿಜೆಪಿಯ ಗತಿಯೇನಾಯಿತು ನೋಡಿ? ಅಧಿಕಾರ ಕಳೆದುಕೊಂಡು ೬ ವರ್ಷಗಳಾದರೂ ಚೇತರಿಸಿಕೊಳ್ಳಲಾಗದಷ್ಟು ದುರ್ಬಲಗೊಂಡು ಬಿಟ್ಟಿದೆ. ಸೋನಿಯಾ ಅಧ್ಯಕ್ಷರಾದ ಮೇಲೆ ಪಕ್ಷವನ್ನು ಅಧಿಕಾರಕ್ಕೆ ತರಲು 6 ವರ್ಷ ತೆಗೆದುಕೊಂಡರಾದರೂ ಆನಂತರದ ಅವಧಿಯನ್ನು ಗಮನಿಸಿ… 2004ರಲ್ಲಿ ಯುಪಿಎ ಎಂಬ ವ್ಯವಸ್ಥೆ ಮೂಲಕ ಸರಕಾರ ರಚಿಸಿದಾಗ ಕಮ್ಯುನಿಸ್ಟರನ್ನು ಸಂಭಾಳಿಸುವುದು ಸುಲಭವಲ್ಲ ಎಂಬುದು ಅವರಿಗೂ ಗೊತ್ತಿತ್ತು. ಕಾಂಗ್ರೆಸ್ ಜಾಣ್ಮೆ ತೋರಿತು. ನಾಗರಿಕ ಅಣು ಸಹಕಾರ ಒಪ್ಪಂದ ಮಾಡಿಕೊಳ್ಳುವ ನಿಟ್ಟಿನಲ್ಲಿ ೨೦೦೫, ಜುಲೈನಲ್ಲಿ ಅಮೆರಿಕ ಅಧ್ಯಕ್ಷ ಜಾರ್ಜ್ ಬುಷ್ ಜತೆ ಪ್ರಧಾನಿ ಮನಮೋಹನ್ ಸಿಂಗ್ ಮಾತುಕತೆ ಆರಂಭಿಸಿದರು. ಅಮೆರಿಕದ ಕಟ್ಟಾ ವಿರೋಧಿಗಳಾದ ಕಮ್ಯುನಿಸ್ಟರು ಕುಪಿತಗೊಳ್ಳುತ್ತಾರೆಂಬುದು ಕಾಂಗ್ರೆಸ್‌ಗೆ ತಿಳಿದಿತ್ತು. ಆದರೂ ಬುಷ್ ಜತೆ ಕೈಜೋಡಿಸುವ ಮೂಲಕ ಕಮ್ಯುನಿಸ್ಟರು ತಮ್ಮ ಗಮನ, ಶ್ರಮ ಎಲ್ಲವನ್ನೂ ವಿರೋಧದಲ್ಲೇ ಹಾಳು ಮಾಡುವಂತೆ ಮಾಡಿತು. ಒಂದು ಕಡೆ ಒಪ್ಪಂದ ಮಾತುಕತೆಯನ್ನು ಜೀವಂತವಾಗಿಟ್ಟಿತು, ಇನ್ನೊಂದೆಡೆ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ, ಗ್ರಾಮೀಣ ಆರೋಗ್ಯ ಕಾರ್ಯಕ್ರಮ, ಸರ್ವ ಶಿಕ್ಷಾ ಅಭಿಯಾನ್ (ವಾಜಪೇಯಿ ಆರಂಭಿಸಿದ್ದು) ಮುಂತಾದ ಜನಪರ ಕಾರ್ಯಕ್ರಮಗಳನ್ನು ವ್ಯಾಪಕ ಪ್ರಮಾಣದಲ್ಲಿ ಹಮ್ಮಿಕೊಳ್ಳುವ ಮೂಲಕ ತಾವು ಬಡವರ ಪರ ಎಂದು ಕೊಚ್ಚಿಕೊಳ್ಳುವ ಕಮ್ಯುನಿಸ್ಟರನ್ನು ಜಾಣತನದಲ್ಲಿ ಮೀರಿಸಿತು. ಕಾಂಗ್ರೆಸ್‌ಗೆ ಒಳ್ಳೆಯ ಹೆಸರು ತಂದುಕೊಟ್ಟಿದ್ದು ಇಂತಹ ಯೋಜನೆಗಳೇ. ಅದರಲ್ಲೂ ೨೦೦೯ರ ಲೋಕಸಭೆ ಚುನಾವಣೆ ವೇಳೆ ಎಲ್ಲರಿಗಿಂತ ಮೊದಲೇ ಚುನಾವಣಾ ಪ್ರಣಾಳಿಕೆ ಹೊರಡಿಸಿದ ಕಾಂಗ್ರೆಸ್, ಪ್ರತಿ ಪಡಿತರ ಚೀಟಿಗೆ 25 ಕೆ.ಜಿ. ಅಕ್ಕಿ, ಸಕ್ಕರೆ, ಗೋಧಿ ಹಾಗೂ ಸೀಮೆಎಣ್ಣೆ ನೀಡುವ ವಾಗ್ದಾನ ಮಾಡುವ ಮೂಲಕ ಬಿಜೆಪಿ ಜಾರಿ ಬೀಳುವಂತೆ ಮಾಡಿತು.

ನೀವು ಸೋನಿಯಾ ಗಾಂಧಿಯವರನ್ನು ಇಷ್ಟಪಡಿ, ಬಿಡಿ. ಆದರೆ ಆಕೆಯ conviction ಇದೆಯಲ್ಲಾ ಆ ಅಚಲ ನಂಬಿಕೆ, ದೃಢತೆಯನ್ನು ಮಾತ್ರ ಮೆಚ್ಚಲೇಬೇಕು. ಸರಕಾರದ ಭವಿಷ್ಯವನ್ನೇ ಪಣಕ್ಕಿಟ್ಟು ನಾಗರಿಕ ಅಣು ಸಹಕಾರ ಒಪ್ಪಂದಕ್ಕೆ ಸಂಸತ್ತಿನ ಅನುಮೋದನೆ ಪಡೆದುಕೊಳ್ಳಲು ಮುಂದಾದರು. ಇಷ್ಟೆಲ್ಲಾ ನಿರ್ಧಾರಗಳನ್ನು ಏಕಾಂಗಿಯಾಗಿ ಅಥವಾ ಸ್ವಂತ ಸಾಮರ್ಥ್ಯದಿಂದ ತೆಗೆದುಕೊಳ್ಳುವ ತಾಕತ್ತು ಸೋನಿಯಾ ಗಾಂಧಿಯವರಿಗಿಲ್ಲ ಎಂಬುದು ಸತ್ಯವೇ ಆಗಿದ್ದರೂ ಅವರ ಸುತ್ತ ಭಟ್ಟಂಗಿಗಳೇ ತುಂಬಿದ್ದಾರೆ ಎಂದು ಹೇಳಲು ಸಾಧ್ಯವಿಲ್ಲ. ಭಟ್ಟಂಗಿಗಳ ಮಾತು ಕೇಳಿದರೆ ಹಾಳಾಗುವುದೇ ಹೆಚ್ಚು. ಸೋನಿಯಾ ಅವರಿಗೆ ಒಳ್ಳೆಯ ಸಲಹೆಗಾರರಿದ್ದಾರೆ ಹಾಗೂ ಅವರ ಯಾವ ಸಲಹೆಗಳನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು ಎಂಬ ಜಾಣ್ಮೆ ಆಕೆಗಿದೆ. ೨೦೦೯, ಮೇ ೧೬ರಂದು ಪ್ರಕಟವಾದ ಲೋಕಸಭೆ ಚುನಾವಣೆ ಫಲಿತಾಂಶದ ನಂತರ ಸೋನಿಯಾ ನಡೆದುಕೊಂಡ ರೀತಿ, ರಚಿಸಿದ ಕ್ಯಾಬಿನೆಟ್ ಅನ್ನು ಒಮ್ಮೆ ನೋಡಿ… ಕಾಂಗ್ರೆಸ್ ೨೦೬ ಸ್ಥಾನ ಗಳಿಸಿದ್ದೇ ತಡ ಸೋನಿಯಾ ಗಡುಸಾದರು. ಲಾಲು ಕಾಲು ಹಿಡಿದುಕೊಳ್ಳುವಷ್ಟು ದೀನರಾಗಿ ನಿಂತಿದ್ದರೂ ಕ್ಯಾಬಿನೆಟ್‌ಗೆ ತೆಗೆದುಕೊಳ್ಳಲಿಲ್ಲ, ರಾಮ್‌ವಿಲಾಸ್ ಪಾಸ್ವಾನ್‌ಗೂ ಮಣೆಹಾಕಲಿಲ್ಲ. ೧೯ ಸೀಟು ತೆಗೆದುಕೊಂಡಿದ್ದರೂ ಮಮತಾಗೆ ಕೊಟ್ಟಿದ್ದು ಒಂದೇ ಕ್ಯಾಬಿನೆಟ್ ಸೀಟು. ತೃಣಮೂಲ ಕಾಂಗ್ರೆಸ್‌ಗೆ ಸಿಕ್ಕಿದ ಉಳಿದ ೯, ರಾಜ್ಯ ಸಚಿವರ ಸ್ಥಾನ. ಇನ್ನು ಹಿಂದಿನ ಸರಕಾರಕ್ಕೆ ತಲೆನೋವು ಕೊಡುತ್ತಿದ್ದವರ ಕಥೆ ಕೇಳಿ… ಅರ್ಜುನ್ ಸಿಂಗ್ ಮತ್ತೆ ಮಂತ್ರಿಯಾಗುವುದು ಬಿಡಿ, ಅವರ ಮಗಳಿಗೇ ಅಪ್ಪನ ಕ್ಷೇತ್ರದಲ್ಲಿ ಸ್ಪರ್ಧಿಸಲು ಪಕ್ಷದ ಟಿಕೆಟ್ ನಿರಾಕರಿಸಿದರು. ಕಾಂಗ್ರೆಸ್ಸಿಗರೇ, ನಿಷ್ಠಾವಂತರೇ ಆಗಿದ್ದರೂ ಗಿರಿಜಾ ವ್ಯಾಸ್‌ರನ್ನು ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷೆ ಮಾಡುವ ಮೂಲಕ ಕ್ಯಾಬಿನೆಟ್‌ನಿಂದ ದೂರ ಹಾಕಿದರು. ಅಗಲ ಬಾಯಿಯ ರೇಣುಕಾ ಚೌಧುರಿ ಅವರಿಗೆ ಸಂಪುಟದಲ್ಲಿ ಸ್ಥಾನವನ್ನೇ ನೀಡಲಿಲ್ಲ. ತಲೆಹರಟೆಗೆ ಹೆಸರಾಗಿದ್ದ ಮಣಿಶಂಕರ್ ಅಯ್ಯರ್ ಅವರ ಬಾಲ ಕಟ್ ಮಾಡಿ ಬರೀ ಸಂದಸರನ್ನಾಗಿ ಉಳಿಸಿಕೊಂಡಿದ್ದಾರೆ. ಶಶಿ ತರೂರ್ ಎಂಬ ಅಪ್ರಭುದ್ಧ ಇಂಗ್ಲಿಷ್ ರಾಜಕಾರಣಿಯ ತಲೆಗೆ ಮೊಟಕಿದರು. ಬಿಜೆಪಿ ಹಾಗೂ ಪ್ರತಿಪಕ್ಷಗಳ ಒತ್ತಡಕ್ಕೆ ಮಣಿದು ತರೂರ್‌ರನ್ನು ಕಿತ್ತುಹಾಕಿದರು ಎಂದು ತಪ್ಪು ತಿಳಿದುಕೊಳ್ಳಬೇಡಿ. ಪಾಕಿಸ್ತಾನಿಯರಿಗೆ ವೀಸಾ ನೀಡುವ ವಿಷಯದಲ್ಲಿ ಇರುವ ಕಠಿಣ ನಿಯಮಗಳನ್ನು ಸಾರ್ವಜನಿಕವಾಗಿ ಟೀಕಿಸಿದ್ದ ಹಾಗೂ ಆಡಳಿತ ವೆಚ್ಚ ಕಡಿತಕ್ಕೆ ‘ಕ್ಯಾಟಲ್ ಕ್ಲಾಸ್’ ಎಂದು ಕುಟುಕಿದ್ದ ತಲೆಹರಟೆಗೆ ದಂಡಿಸಲು ಸೋನಿಯಾ ಸೂಕ್ತ ಸಂದರ್ಭ ಹುಡುಕುತ್ತಿದ್ದರು. ಐಪಿಎಲ್ ವಿವಾದ ಅದಕ್ಕೊಂದು ಅವಕಾಶ ಕಲ್ಪಿಸಿತಷ್ಟೇ.

ಇವಿಷ್ಟೇ ಅಲ್ಲ, ಸೋನಿಯಾ ಯೋಗ್ಯರಿಗೆ ಮಣೆಯನ್ನೂ ಹಾಕಿದ್ದಾರೆ. ಕಪಿಲ್ ಸಿಬಲ್, ಪಿ. ಚಿದಂಬರಂ, ಪ್ರಣಬ್ ಮುಖರ್ಜಿ, ಎಸ್.ಎಂ. ಕೃಷ್ಣ, ವೀರಪ್ಪ ಮೊಯ್ಲಿ ಅವರಂತಹವರಿಗೆ ಯೋಗ್ಯತೆಯ ಆಧಾರದ ಮೇಲೆ ತಕ್ಕುದಾದ ಖಾತೆ ನೀಡಿದ್ದಾರೆ. ಇಂತಹ ಸಚಿವರ ಸಂಖ್ಯೆ ಇನ್ನೊಂದಿಷ್ಟು ಹೆಚ್ಚಾದರೆ ಕಾಂಗ್ರೆಸ್ ಮುಂದಿನ ಬಾರಿಯೂ ಅಧಿಕಾರಕ್ಕೇರಿದರೆ ಆಶ್ಚರ್ಯವಿಲ್ಲ. ಕಾಂಗ್ರೆಸ್ಸಿಗರ ಮಟ್ಟಿಗೆ ಸೋನಿಯಾ ಗಾಂಧಿ ಎಂಬುದು ಒಂದು ‘ಫಿಯರ್ ಫ್ಯಾಕ್ಟರ್’. ಹಾಗಾಗಿಯೇ ಬಾಲ ಮುದುರಿಕೊಂಡಿರುತ್ತಾರೆ. ಅಂತಹ ನಾಯಕತ್ವ ಖಂಡಿತ ಬೇಕು. ವಾಜಪೇಯಿ ಸರಕಾರದಲ್ಲಿ ಸಾರಿಗೆ ಸಚಿವರಾಗಿ ಒಳ್ಳೆಯ ಹೆಸರು ಮಾಡಿದ್ದ ಬಿ.ಸಿ. ಖಂಡೂರಿಯವರ ವಿರುದ್ಧ ಉತ್ತರಾಂಚಲದಲ್ಲಿ ಬಂಡಾಯವೆದ್ದಾಗ ಬೆನ್ನುಹುರಿಯೇ ಇಲ್ಲದಂತೆ ವರ್ತಿಸಿದ ಬಿಜೆಪಿಯ ಕೇಂದ್ರ ನಾಯಕರು ಖಂಡೂರಿಯಂಥ ಪ್ರಾಮಾಣಿಕ ವ್ಯಕ್ತಿಯನ್ನೇ ಮನೆಗೆ ಕಳುಹಿಸಿದರು. ಆದರೆ ವೈಎಸ್‌ಆರ್ ರಾಜಶೇಖರ ರೆಡ್ಡಿಯವರ ದುರ್ಮರಣದ ಬೆನ್ನಲ್ಲೇ ಆಂಧ್ರದಲ್ಲಿ ಭುಗಿಲೆದ್ದ ಗಲಾಟೆಯನ್ನು ತೆಗೆದುಕೊಳ್ಳಿ. ಆಂಧ್ರದ ಸಮಸ್ಯೆಯನ್ನು ಸೋನಿಯಾ ಹೇಗೆ ಹ್ಯಾಂಡಲ್ ಮಾಡಿದರು? ಅಷ್ಟೆಲ್ಲಾ ಮಂತ್ರಿಗಳು, ಶಾಸಕರು, ಸಂಸದರು ಸಾಮೂಹಿಕವಾಗಿ ರಾಜೀನಾಮೆ ನೀಡಿದರೂ ಜಗನ್ಮೋಹನ ರೆಡ್ಡಿಯನ್ನು ಮಟ್ಟಹಾಕಿದ್ದು, ರೋಶಯ್ಯರನ್ನು ಮುಂದುವರಿಸಿದ್ದು ಸೋನಿಯಾ ಅವರ ನಾಯಕತ್ವ ಗುಣವನ್ನು ತೋರಿಸುವುದಿಲ್ಲವೆ? ಉದ್ಯೋಗ ಖಾತ್ರಿ ಯೋಜನೆಗೆ ಸೋನಿಯಾ ಅವರ ಮುಕ್ತ ಬೆಂಬಲವಿದೆ, ನಿತ್ಯ ರಾಜಕಾರಣ, ಮಿತ್ರಪಕ್ಷಗಳ ನಿಭಾವಣೆ ಮುಂತಾದ ಜವಾಬ್ದಾರಿಯನ್ನು ತಾವು ಹೊತ್ತುಕೊಂಡು ಪ್ರಧಾನಿ ಮನಮೋಹನ್ ಸಿಂಗ್ ನಿಶ್ಚಿಂತೆಯಿಂದ ಆಡಳಿತ ನಡೆಸುವ ಅವಕಾಶ ಕಲ್ಪಿಸಿಕೊಟ್ಟಿದ್ದಾರೆ. ನ್ಯೂಕ್ಲಿಯರ್ ಡೀಲ್ ಬಗ್ಗೆ ಯಾರೇನೇ ಹೇಳಿದರೂ ಅದು ಫ್ಯೂಚರ್ ಎನರ್ಜಿ. ನಂದನ್ ನಿಲೇಕಣಿಯಂಥ ಉದ್ಯಮಿಗಳನ್ನು ಇನ್ಫೋಸಿಸ್‌ನಿಂದ ಬಿಡಿಸಿಕೊಂಡು ಬಂದು ದೇಶವಾಸಿಗಳಿಗೆ ವಿಶಿಷ್ಟ ಗುರುತಿನ ಚೀಟಿ ಹಂಚುವ ಕಾರ್ಯಕ್ಕೆ ಹಚ್ಚಿರುವುದು ಸಾಮಾನ್ಯ ಸಾಧನೆಯೇನು? ಜತೆಗೆ ಸಿಬಿಐ ಅನ್ನು ಎಷ್ಟು ಚೆನ್ನಾಗಿ ಬಳಸಿಕೊಂಡು ಮಾಯಾವತಿ, ಲಾಲು, ಮುಲಾಯಮ್‌ರನ್ನು ಮಟ್ಟಹಾಕುತ್ತಿದ್ದಾರೆ ನೋಡಿ?!

ಇನ್ನೊಂದೆಡೆ ಮಗನನ್ನು ಪ್ರಧಾನಿ ಗಾದಿಯಲ್ಲಿ ಕೂರಿಸುವ ವಿಷಯದಲ್ಲೂ ಆಕೆ ಆತುರ ಮಾಡುತ್ತಿಲ್ಲ. ಬಿಜೆಪಿ ಸರಕಾರ ರಚಿಸಿದ ಕೂಡಲೇ ಪಕ್ಷ ಸಂಘಟನೆಯನ್ನೇ ಮರೆತು ಅಧಿಕಾರದ ಮದದಲ್ಲಿ ಮೈಮರೆಯಿತು. ಅಧಿಕಾರದ ಚುಕ್ಕಾಣಿಯನ್ನು ಸೋನಿಯಾ ಗಾಂಧಿಯವರು ಹಿಡಿದಿದ್ದರೆ, ಮಗ ರಾಹುಲ್ ಗಾಂಧಿಯವರನ್ನು ಪಕ್ಷದ ಬಲವೃದ್ಧಿ ಕಾರ್ಯದಲ್ಲಿ ತೊಡಗಿಸಿದ್ದಾರೆ. ಮುಂಬರುವ ಬಿಹಾರ ಹಾಗೂ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಅಧಿಕಾರ ಹಿಡಿಯಲು ಎಲ್ಲ ಪ್ರಯತ್ನ ಮಾಡಲಾಗುತ್ತಿದೆ. ಖಂಡಿತ, ಸೋನಿಯಾ ಜಾಣೆ ಕೂಡ ಹೌದು. ಅಧಿಕಾರ ನಡೆಸುತ್ತಿರುವುದು ತಾವೇ ಆಗಿದ್ದರೂ ನಾಮ್ ಕೇ ವಾಸ್ಥೆಗೆ ಮನಮೋಹನ್ ಸಿಂಗ್ ಇದ್ದಾರೆ. ಒಂದು ವೇಳೆ ಎಡವಿದರೆ ದೋಷ ಪ್ರಧಾನಿ ತಲೆಗೆ, ಗೆದ್ದರೆ ಕೀರ್ತಿ ಸೋನಿಯಾಗೆ. ಅವರಿಗೆ ಸಾರ್ವಜನಿಕ ಸಂಪರ್ಕ ಕಲೆ ಚೆನ್ನಾಗಿ ಗೊತ್ತಿದೆ. ರಾಜೀವ್ ಹತ್ಯೆ ಆರೋಪಿ ನಳಿನಿಗೆ ವೈಯಕ್ತಿಕವಾಗಿ ಕ್ಷಮಾದಾನ ನೀಡುವ ಮೂಲಕ ತಮಿಳರ ಮನಗೆಲ್ಲುವ, ಅವರ ಮತಕ್ಕೆ ಕೈಹಾಕುವ ಪ್ರಯತ್ನವನ್ನೂ ಮಾಡಿದ್ದಾರೆ. ಮಾಧ್ಯಮಗಳನ್ನು ಹೇಗೆ ನಡೆಸಿಕೊಳ್ಳಬೇಕೆಂಬುದೂ ತಿಳಿದಿದೆ. ನಿಷ್ಠೆಗೆ ಪ್ರತಿಫಲವನ್ನು ಕೊಡುವಾಗಲೂ ಮರೆಯುವುದಿಲ್ಲ. ಎನ್‌ಡಿಟಿವಿಯ ಬರ್ಖಾ ದತ್ ಹಾಗೂ ಸಿಎನ್‌ಎನ್-ಐಬಿಎನ್‌ನ ರಾಜ್‌ದೀಪ್ ಸರ್ದೇಸಾಯಿಗೆ ಪದ್ಮಶ್ರೀ ಕೊಡಿಸಿದ್ದಾರೆ! ಸೋನಿಯಾ ಗಾಂಧಿಯವರನ್ನು ಸಂದರ್ಶನ ಮಾಡಲು ಇವತ್ತಿಗೂ ವೀರ್ ಸಾಂಘ್ವಿಯವರೇ ಬೇಕು. ಆತ ಸದಾ ಪುಳಕಿತವಾಗುವ ಪ್ರಶ್ನೆಗಳನ್ನೇ ಕೇಳುತ್ತಾರೆ!!

ಒಟ್ಟಾರೆ ಸೋನಿಯಾ ಗಾಂಧಿಯವರನ್ನು ಗಮನಿಸುತ್ತಾ ಬಂದವರಿಗೆ she comes of an age ಎಂದು ಖಂಡಿತ ಅನಿಸುತ್ತದೆ. ಮನಮೋಹನ್ ಸಿಂಗ್ ಎರಡನೇ ಭಾರಿ ಪ್ರಧಾನಿಯಾಗಿ ಇಂದಿಗೆ(ಮೇ.22) ಒಂದು ವರ್ಷವಾಯಿತು. ಅದರ ನಿಜವಾದ ಕೀರ್ತಿ ಸಲ್ಲಬೇಕಾಗಿದ್ದು ಸೋನಿಯಾ ಗಾಂಧಿಯವರಿಗೆ.

ಕೃಪೆ : ಪ್ರತಾಪ್ ಸಿಂಹ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ