ನನ್ನ ಬ್ಲಾಗ್ ಪಟ್ಟಿ

ಭಾನುವಾರ, ಆಗಸ್ಟ್ 22, 2010

ಕಳಂಕ ತಂದ ಕಲ್ಮಾಡಿ, ಯಾವ ಪಕ್ಷದ ಒಡನಾಡಿ?2008ರ ಒಲಿಂಪಿಕ್ಸ್ ನಡೆದಿದ್ದು ಚೀನಾದ ಬೀಜಿಂಗ್‌ನಲ್ಲಿ. 2012ರ ಒಲಿಂಪಿಕ್ಸ್ ನಡೆಯುವುದು ಇಂಗ್ಲೆಂಡ್‌ನ ಲಂಡನ್‌ನಲ್ಲಿ. 2016ರ ಒಲಿಂಪಿಕ್ಸ್ ಬ್ರೆಝಿಲ್‌ನ ರಯೋ ಡಿ ಜನೈರೋದಲ್ಲಿ ನಡೆಯಲಿದೆ. 2020ರ ಒಲಿಂಪಿಕ್ಸ್ ಎಲ್ಲಿ ನಡೆಯಲಿದೆ ಎಂಬುದು ಲಂಡನ್ ಒಲಿಂಪಿಕ್ಸ್ ವೇಳೆಗೆ ಅಖೈರಾಗಲಿದೆ. 2024 ಹಾಗೂ 2028ರ ಒಲಿಂಪಿಕ್ಸ್ ಅನ್ನು ಆಯೋಜಿಸಲು ಜಗತ್ತಿನ ಹತ್ತಾರು ದೇಶಗಳು ನಾ ಮುಂದು, ತಾ ಮುಂದು ಎಂಬಂತೆ ಧಾವಿಸುತ್ತಿವೆ. ಅದಕ್ಕಾಗಿ ಬಿಡ್ಡಿಂಗ್ ಕೂಡ ಆರಂಭವಾಗಿದೆ. ಅಧಿಕೃತವಾಗಿ ಘೋಷಣೆ ಮಾಡುವುದು 8 ವರ್ಷ ಮೊದಲಾದರೂ ಅಂತಾರಾಷ್ಟ್ರೀಯ ಕ್ರೀಡಾಕೂಟಗಳು ಕನಿಷ್ಠ 12 ವರ್ಷ ಮೊದಲೇ ಯಾವ ಸ್ಥಳದಲ್ಲಿ ನಡೆಯುತ್ತವೆ ಎಂದು ಬಹುತೇಕ ಖಾತ್ರಿಯಾಗಿ ಬಿಡುತ್ತವೆ. ಅಂತಿಮ ಘೋಷಣೆ ಹೊರಬೀಳುವ ಮೊದಲೇ ಆತಿಥೇಯ ರಾಷ್ಟ್ರ ಮಾನಸಿಕವಾಗಿ, ವಿತ್ತೀಯವಾಗಿ ಸಿದ್ಧವಾಗಿ ಬಿಟ್ಟಿರುತ್ತದೆ. ಘೋಷಣೆಯ ಬೆನ್ನಲ್ಲೇ ಕ್ರೀಡಾಂಗಣ ನಿರ್ಮಾಣ, ಮೂಲಭೂತ ಸೌಕರ್ಯ ಅಭಿವೃದ್ಧಿ, ವಸತಿ ವ್ಯವಸ್ಥೆ ಎಲ್ಲ ಕಾಮಗಾರಿಗಳೂ ಆರಂಭವಾಗುತ್ತವೆ. ಘೋಷಣೆ ಹಾಗೂ ಕ್ರೀಡಾಕೂಟಕ್ಕೆ ಅಧಿಕೃತ ಚಾಲನೆ ಈ ನಡುವಿನ ೮ ವರ್ಷಗಳ ಕಾಲವೂ ಆತಿಥೇಯ ರಾಷ್ಟ್ರ ಸುದ್ದಿ ಮಾಡುತ್ತಿರುತ್ತದೆ. 2008ರ ಒಲಿಂಪಿಕ್ ಕ್ರೀಡಾಕೂಟವನ್ನು ಆಯೋಜನೆ ಮಾಡಿದ ಚೀನಾ ಯಾವ ರೀತಿ ಸುದ್ದಿ ಮಾಡಿತು ನೋಡಿ… ಅಲ್ಲಿನ ಕ್ರೀಡಾಂಗಣ ನಿರ್ಮಾಣ, ಅವುಗಳ ಅದ್ಭುತ ವಿನ್ಯಾಸ, ಪ್ರಾರಂಭೋತ್ಸವಕ್ಕೆ ನಡೆಯುತ್ತಿದ್ದ ಸ್ಥಳೀಯ ಸಮರ ಕಲೆಗಳ ತರಬೇತಿ, ತಯಾರಿಗಳು ಇ-ಮೇಲ್‌ಗಳಲ್ಲಿ ಸಚಿತ್ರ ವರದಿಗಳೊಂದಿಗೆ ರವಾನೆಯಾಗುತ್ತಿದ್ದವು, ಇಡೀ ಜಗತ್ತಿನ ಗಮನ ಸೆಳೆಯಲಾರಂಭಿಸಿದ್ದವು. ಆ ಮೂಲಕ ಚೀನಾ ಹೇಗೆ ಆಯೋಜನೆ ಮಾಡಿರಬಹುದು ಎಂಬ ಕುತೂಹಲ ಜನರಲ್ಲೆಲ್ಲ ಮೂಡುವಂತೆ ಮಾಡಲಾಗಿತ್ತು. 2008, ಆಗಸ್ಟ್ 8ರಂದು ಒಲಿಂಪಿಕ್ ಕ್ರೀಡಾಕೂಟ ಅಧಿಕೃತವಾಗಿ ಚಾಲನೆ ಪಡೆದಾಗ ಚೀನಾದ “The Bird’s Nest” ಕ್ರೀಡಾಂಗಣವನ್ನು ನೋಡಿ ಇಡೀ ಜಗತ್ತೇ ಒಂದು ಕ್ಷಣ ನಿಬ್ಬೆರಗಾಗಿ ಬಿಟ್ಟಿತು. ಅಂತಹ ತಯಾರಿಯನ್ನು ಚೀನಾ ಮಾಡಿತ್ತು. ಅದಕ್ಕೂ ಮುನ್ನ ನಡೆದ 8 ವರ್ಷಗಳ ಸಿದ್ಧತೆಯಲ್ಲಿ ಒಮ್ಮೆ ಕೂಡ ಚೀನಾ ಕೆಟ್ಟ ಕಾರಣಕ್ಕಾಗಿ ಸುದ್ದಿಯಾಗಲಿಲ್ಲ!’ 2010, ಅಕ್ಟೋಬರ್ 4ರಂದು ನಮ್ಮ ರಾಜಧಾನಿ ಹೊಸ ದಿಲ್ಲಿಯಲ್ಲಿ ಆರಂಭವಾಗಲಿರುವ 19ನೇ ಕಾಮನ್‌ವೆಲ್ತ್ ಕ್ರೀಡಾ ಕೂಟದ ಬಗ್ಗೆ ಇದೇ ಮಾತನ್ನು ಹೇಳಲು ಸಾಧ್ಯವಿದೆಯೆ?!

ಅಂತಾರಾಷ್ಟ್ರೀಯ ಕ್ರೀಡಾಳು ದೈಹಿಕ ವ್ಯಾಯಾಮಕ್ಕಾಗಿ ಬಳಸುವ ಅತ್ಯುತ್ತಮ ಗುಣಮಟ್ಟದ ‘ಟ್ರೆಡ್ ಮಿಲ್’ ವೊಂದರ(Treadmill) ಖರೀದಿ ಬೆಲೆ 4 ಲಕ್ಷ ರೂಪಾಯಿ. ಆದರೆ ಕಾಮನ್‌ವೆಲ್ತ್ ಕ್ರೀಡಾಕೂಟಕ್ಕೆ ಟ್ರೆಡ್‌ಮಿಲ್ ಪೂರೈಸುವ ಗುತ್ತಿಗೆ ಪಡೆದುಕೊಂಡಿರುವ ಕಂಪನಿ 45 ದಿನಗಳಿಗೆ ನಿಗದಿಪಡಿಸಿರುವ ಬಾಡಿಗೆ ಎಷ್ಟು ಗೊತ್ತೇನು? ಪ್ರತಿ ಟ್ರೆಡ್ ಮಿಲ್‌ಗೆ 9.75 ಲಕ್ಷ ರೂ!! ಹಾಗಂತ ಅವರೇನು ಹೊಸ ಉಪಕರಣವನ್ನು ಖರೀದಿ ಮಾಡಿ ತಂದಿಲ್ಲ. ಸ್ಥಳೀಯ ಜಿಮ್ನೇಷಿಯಂಗಳಿಗೆ 45 ದಿನಕ್ಕೆ 1 ಲಕ್ಷ ರೂ. ನಂತೆ ನೀಡಿ, ಕಾಮನ್‌ವೆಲ್ತ್ ಗೇಮ್ಸ್‌ಗೆ ಹತ್ತು ಪಟ್ಟು ಹೆಚ್ಚು ಬಾಡಿಗೆಗೆ ನೀಡಿವೆ. ಉದ್ಘಾಟನಾ ಸಮಾರಂಭದ ದಿನ ನೆಹರು ಸ್ಟೇಡಿಯಂ ಸುತ್ತ ಆಗಸದಲ್ಲಿ ಬಲೂನೊಂದು ಹಾರಾಡಲಿದೆ. ಅದು ಸರಿಯಾಗಿ ಕಾರ್ಯನಿರ್ವಹಿಸುತ್ತದೋ ಇಲ್ಲವೋ ಇನ್ನೂ ಪರೀಕ್ಷೆ ಮಾಡಿಲ್ಲ. ಆದರೆ ಈಗಾಗಲೇ ಅದಕ್ಕೆ 50 ಕೋಟಿ ರೂ. ವ್ಯಯ ಮಾಡಲಾಗಿದೆ. ಆಟಗಾರರು, ಕೈ-ಮೈ ತೊಳೆದುಕೊಳ್ಳಲು ಅಗತ್ಯವಾದ ದ್ರವ ಸೋಪುಗಳನ್ನು ಪ್ರತಿಯೊಂದಕ್ಕೆ 3,397 ರೂ.ನಂತೆ ಖರೀದಿ ಮಾಡಲಾಗಿದೆ. ಆದರೆ ಅದೇ ಸೋಪು ಮಾರುಕಟ್ಟೆಯಲ್ಲಿ 460 ರೂಪಾಯಿಗೆ ದೊರೆಯುತ್ತದೆ! ಟಾಯ್ಲೆಟ್‌ಗಳಲ್ಲಿ ಬಳಸುವ ಟಿಶ್ಯೂ ಪೇಪರ್‌ನ ಉಂಡೆಯೊಂದಕ್ಕೆ 4 ಸಾವಿರ ರೂಪಾಯಿ ನೀಡಿ ಖರೀದಿಸಲಾಗಿದ್ದು, ಅದೇ ಟಿಶ್ಯೂ ಪೇಪರ್ ಉಂಡೆ ಸ್ಥಳೀಯ ಮಾರುಕಟ್ಟೆಯಲ್ಲಿ ೩೫ರಿಂದ ೩೭ ರೂಪಾಯಿಗೆ ಲಭ್ಯವಿದೆ!! 2009ರಲ್ಲಿ ಇಂಗ್ಲೆಂಡ್ ರಾಣಿ ಕಾಮನ್‌ವೆಲ್ತ್ ಕ್ರೀಡಾ ಜ್ಯೋತಿಯ ಪಯಣಕ್ಕೆ ಚಾಲನೆ ನೀಡುವ ಸಮಾರಂಭಕ್ಕೆ ಕಾರುಗಳನ್ನು ಬಾಡಿಗೆ ಪಡೆದುಕೊಳ್ಳಲಾಗಿದ್ದ ಕಂಪನಿಗೆ ಇ-ಮೇಲ್ ಒಂದನ್ನು ಕಳುಹಿಸಿ ನಿಗದಿತ ಬೆಲೆಗಿಂತ ಹೆಚ್ಚಿನ ಮೊತ್ತಕ್ಕೆ ರಶೀದಿ ಕೊಡಿ ಎಂದು ಮನವಿ ಮಾಡಿಕೊಂಡು ಹಣ ಮಾಡಿರುವುದನ್ನೂ ‘ಟೈಮ್ಸ್ ನೌ’ ಚಾನೆಲ್ ಹಾಗೂ ‘ಟೈಮ್ಸ್ ಆಫ್ ಇಂಡಿಯಾ’ ಪತ್ರಿಕೆ ಆಧಾರ ಸಮೇತ ಬೆಳಕಿಗೆ ತಂದಿದೆ.

ಇಷ್ಟು ಮಾತ್ರವಲ್ಲ.

ಕ್ರೀಡಾಕೂಟದ ನಾನಾ ಕಾಮಗಾರಿ, ಕ್ರೀಡಾ ಉಪಕರಣಗಳ ಪೂರೈಕೆಯ ಕಾಂಟ್ರ್ಯಾಕ್ಟ್ ನೀಡುವ ವಿಷಯದಲ್ಲೂ ಸ್ವಜನಪಕ್ಷ ಪಾತ ನಡೆದಿದೆ! ಸುಮಾರು 35 ಸಾವಿರ ಕೋಟಿ ರೂಪಾಯಿ ವೆಚ್ಚದಲ್ಲಿ ನಡೆಯುತ್ತಿರುವ ಈ ಕ್ರೀಡಾಕೂಟದ ಪ್ರತಿ ಹಂತದಲ್ಲೂ ಭ್ರಷ್ಟಾಚಾರ ನಡೆದಿದೆ. ಆರಂಭಕ್ಕೆ ಇನ್ನು 56 ದಿನಗಳಷ್ಟೇ ಉಳಿದಿದ್ದರೂ ಕಾಮಗಾರಿಯೇ ಪೂರ್ಣಗೊಂಡಿಲ್ಲ. ಸರಕಾರವೇ ಒಪ್ಪಿಕೊಂಡಿರುವಂತೆ ಕಾಮಗಾರಿಯ ವೇಳೆ 40 ಕಾರ್ಮಿಕರು ದುರ್ಮರಣಕ್ಕೀಡಾಗಿದ್ದಾರೆ. ಈ ಮಧ್ಯೆ ಖ್ಯಾತ ಅಥ್ಲೀಟ್ ಉಸೇನ್ ಬೋಲ್ಟ್, ಟೆನಿಸ್ ಆಟಗಾರ್ತಿ ಸಮಂತಾ ಸ್ಟೋಸರ್ ಮುಂತಾದವರು ಕಾಮನ್‌ವೆಲ್ತ್‌ನಿಂದ ಹಿಂದೆ ಸರಿದಿದ್ದಾರೆ.

ಇಂತಹ ಒಂದೊಂದು ವರದಿಗಳು, ಸುದ್ದಿಗಳು, ಅಂಶಗಳು, ಹಗರಣಗಳು ಯಾವ ಸಂದೇಶ ಕೊಡುತ್ತವೆ?

ಭ್ರಷ್ಟಾಚಾರ, ಸ್ವಜನಪಕ್ಷಪಾತ ಇಂಥವುಗಳಿಂದ ಭಾರತ ಇನ್ನೂ ಮುಕ್ತವಾಗಿಲ್ಲ ಎಂಬ ಸಂದೇಶ ಜಗತ್ತಿಗೆ ರವಾನೆಯಾಗುವುದಿಲ್ಲವೆ? ಅಟಲ್ ಬಿಹಾರಿ ವಾಜಪೇಯಿಯವರ ಸರಕಾರವಿದ್ದಾಗಲೇ ಅಂದರೆ 2002ರಲ್ಲೇ 2010ರ ಕಾಮನ್‌ವೆಲ್ತ್ ಕ್ರೀಡಾಕೂಟದ ಆತಿಥ್ಯ ಭಾರತಕ್ಕೆ ಸಿಕ್ಕಿತ್ತು. ಕಳೆದ 8 ವರ್ಷಗಳಲ್ಲಿ ಆರೂವರೆ ವರ್ಷ ಆಡಳಿತ ನಡೆಸಿದ ಕಾಂಗ್ರೆಸ್ ಮಾಡಿದ್ದೇನು? ಒಬ್ಬ ಕ್ರಿಮಿನಲ್‌ನ ಪ್ರಾಣದ ಬಗ್ಗೆ ಭಾರೀ ಕಾಳಜಿ ತೋರುವ ಕಾಂಗ್ರೆಸ್ ಸರಕಾರ, ದೇಶದ ಮಾನ-ಮರ್ಯಾದೆಯ ಪ್ರಶ್ನೆಯಾಗಿದ್ದ ಕಾಮನ್‌ವೆಲ್ತ್ ಕ್ರೀಡಾಕೂಟದ ಆಯೋಜನೆಯ ಬಗ್ಗೆ ಉಪೇಕ್ಷೆ ತೋರಿದ್ದೇಕೆ? ನಮ್ಮ ದೇಶದ ಪ್ರತಿಷ್ಠೆಯನ್ನೇ ಮಣ್ಣುಪಾಲು ಮಾಡುವಂತಹ ಇಂತಹ ಹಗರಣ ನಡೆದಿದ್ದರೂ ‘ಟೈಮ್ಸ್ ನೌ’ ಹಾಗೂ ‘ನ್ಯೂಸ್ ಎಕ್ಸ್’ ಚಾನೆಲ್‌ಗಳನ್ನು ಬಿಟ್ಟು ಉಳಿದ ಇಂಗ್ಲಿಷ್ ಮಾಧ್ಯಮಗಳು ಏನು ಮಾಡುತ್ತಿವೆ? ಇಡೀ ದೇಶವೇ ತಲೆತಗ್ಗಿಸುವಂತಾಗಿದ್ದರೂ, ಜನ ಹೇಸಿಗೆಪಟ್ಟುಕೊಳ್ಳುತ್ತಿದ್ದರೂ “ಪದ್ಮಶ್ರೀ” ರಾಜ್‌ದೀಪ್ ಸರ್ದೇಸಾಯಿ ಹಾಗೂ ಬರ್ಖಾ ದತ್ ಏಕೆ ಬಾಯಿಬಿಡುತ್ತಿಲ್ಲ? ಯಾವುದೋ ಕ್ಷುಲ್ಲಕ ಪಬ್ ದಾಳಿ, ವ್ಯಾಲೆಂಟೆನ್ಸ್ ಡೇ ಆಚರಣೆ ವೇಳೆ ನಡೆವ ರಂಪಗಳ ಬಗ್ಗೆ “Nation Outraged” ಎಂದು ಬೊಬ್ಬೆಹಾಕುವ ಇವರಿಗೆ ಕಾಮನ್‌ವೆಲ್ತ್ ಹಗರಣದ ಬಗ್ಗೆ ಈ ದೇಶದ ಒಬ್ಬ ಸಾಮಾನ್ಯ ಪ್ರಜೆಯೂ ಸಿಟ್ಟಿಗೆದ್ದಿರುವುದು Nation Outraged ಎಂದನಿಸುವುದಿಲ್ಲವೆ? Are the Commonwealth games tainted for good? ಎಂದು ಸಿಎನ್‌ಎನ್-ಐಬಿಎನ್ ವೆಬ್‌ಸೈಟ್‌ನಲ್ಲಿ ಪ್ರಶ್ನೆ ಕೇಳುತ್ತಿರುವ ರಾಜ್‌ದೀಪ್ ಸರ್ದೇಸಾಯಿಯವರು ಯಾರನ್ನು ಮೂರ್ಖರನ್ನಾಗಿಸಲು ಪ್ರಯತ್ನಿಸುತ್ತಿದ್ದಾರೆ? ಜುಲೈ 26ರಂದು ಗುಜರಾತ್‌ನ ಮಾಜಿ ಗೃಹ ಸಚಿವ ಅಮಿತ್ ಶಾ ಅವರನ್ನು ಸಿಬಿಐ ಬಂಧಿಸಿದ ಕೂಡಲೇ, “ಮುಂದಿನ ಗುರಿ ಮೋದಿ”, “Did Modi Sanction Sohrabuddin killing?”ಎಂಬ ಶೀರ್ಷಿಕೆಗಳನ್ನು ಕೊಟ್ಟುಕೊಂಡು ದೊಡ್ಡ ಗುಲ್ಲೆಬ್ಬಿಸಿದ್ದ, ಮಹಾಪ್ರಳಯವೇ ಆಗಿದೆ, ಅದಕ್ಕೆ ಮೋದಿಯೇ ಕಾರಣವೆಂಬಂತೆ ಬಿಂಬಿಸಿದ್ದ ಈ ಮಹಾನುಭಾವರಿಗೆ ದೇಶದ ಮರ್ಯಾದೆ ಹರಾಜಾಗುತ್ತಿರುವುದು ಕಾಣುತ್ತಿಲ್ಲವೆ? ಕ್ರಿಮಿನಲ್ ಸೊಹ್ರಾಬುದ್ದೀನ್ ಹತ್ಯೆಯ ಹಿಂದೆ ಮೋದಿಯ ಕೈವಾಡವನ್ನು ಕಾಣುವ ಇವರಿಗೆ, ಕಾಮನ್‌ವೆಲ್ತ್ ಹಗರಣದ ಹಿಂದೆ ಯಾರ ಕೈವಾಡವಿದೆ, ಅದಕ್ಕೆ ಯಾರೆಲ್ಲ ಹೊಣೆ ಎಂಬುದು ಗೊತ್ತಿಲ್ಲವೆ? ಕಾಮನ್‌ವೆಲ್ತ್ ಗೇಮ್ಸ್ ಸಮಿತಿಯ ಮುಖ್ಯಸ್ಥರಾದ ಸುರೇಶ್ ಕಲ್ಮಾಡಿ ಯಾವ ಪಕ್ಷದವರು? ಕಾಂಗ್ರೆಸ್‌ನವರಲ್ಲವೆ? ಕ್ರೀಡಾ ಕೂಟ ನಡೆಯುತ್ತಿರುವುದು ಕಾಂಗ್ರೆಸ್ ನೇತೃತ್ವದ ಕೇಂದ್ರ ಸರಕಾರದ ಮೂಗಿನ ಕೆಳಗೆ. ಅಮಿತ್ ಶಾ ಮಾಡಿರಬಹುದಾದ ಕೆಲಸಕ್ಕೆ, “Did Modi Sanction Sohrabuddin killing?”ಎಂದು ಅನುಮಾನ ವ್ಯಕ್ತಪಡಿಸುವುದಾದರೆ ಇಷ್ಟೆಲ್ಲಾ ರಂಪ, ಹಗರಣದ ಹೊರತಾಗಿಯೂ ಕಲ್ಮಾಡಿ ಸ್ಥಾನಕ್ಕೆ ಕುತ್ತು ಬಂದಿಲ್ಲ ಎಂದಾದರೆ ಸೋನಿಯಾ ಗಾಂಧಿಯವರ ಪಾತ್ರದ ಬಗ್ಗೆಯೂ ಶಂಕೆ ವ್ಯಕ್ತಪಡಿಸಬಹುದಲ್ಲವೆ? ಈ ಮಧ್ಯೆ, ಸೋನಿಯಾ ಗಾಂಧಿಯವರು ಹೇಳಿದರೆ ರಾಜೀನಾಮೆ ನೀಡುತ್ತೇನೆ ಎನ್ನುತ್ತಿದ್ದಾರಲ್ಲಾ ಕಲ್ಮಾಡಿ, ಅದರ ಗೂಢಾರ್ಥವೇನು? ಜತೆಗೆ ದಿಲ್ಲಿಯಲ್ಲಿರುವ ಶೀಲಾ ದೀಕ್ಷಿತ್ ಸರಕಾರ ಯಾರದ್ದು? ಕ್ರೀಡಾ ಖಾತೆ ಹೊಂದಿರುವ ಕೇಂದ್ರ ಸರಕಾರ ಯಾವ ಪಕ್ಷದ್ದು? ಏಕೆ ಯಾರೂ ಕಾಂಗ್ರೆಸ್ಸನ್ನು ಪ್ರಶ್ನಿಸುತ್ತಿಲ್ಲ? ಇದರ ಬಗ್ಗೆ ದೊಡ್ಡ ಸುದ್ದಿ ಮಾಡಲು ಎಐಸಿಸಿಯಿಂದ ಅನುಮತಿ ಪಡೆದುಕೊಳ್ಳಬೇಕೆ? “Gill on CWG: Nothing ready, but have faith in India” ಎಂದು ಎನ್‌ಡಿಟಿವಿ ದೊಡ್ಡ ವರದಿ ಮಾಡುತ್ತದೆ. ಕಾಮನ್‌ವೆಲ್ತ್ ಗೇಮ್ಸ್‌ಗೆ ಸರಿಯಾಗಿ ಎರಡು ತಿಂಗಳೂ ಬಾಕಿಯಿಲ್ಲ. ಯಾವುದೊಂದೂ ಸಿದ್ಧವಾಗಿಲ್ಲ. ಆದರೂ ಭರವಸೆಯಿಡಿ ಎಂದು ಕ್ರೀಡಾ ಸಚಿವ ಎಂ.ಎಸ್. ಗಿಲ್ ನಾಚಿಕೆಯಿಲ್ಲದೆ ನೀಡಿದ ಹೇಳಿಕೆಯನ್ನು ಪ್ರಮುಖ ಸುದ್ದಿಯಾಗಿ ಬಿತ್ತರಿಸುವ ಎನ್‌ಡಿಟಿವಿಯಿಂದ ಯಾರನ್ನು ದಾರಿತಪ್ಪಿಸಲು ಹೊರಟಿದೆ? ‘ಟೈಮ್ಸ್ ನೌ’ ಚಾನೆಲ್ ಹಾಗೂ ‘ಟೈಮ್ಸ್ ಆಫ್ ಇಂಡಿಯಾ’ ಪತ್ರಿಕೆ ಬಿಟ್ಟರೆ ಯಾವುದೇ ಚಾನೆಲ್‌ಗಳು ಏಕೆ ಹಗರಣದ ಮೂಲವನ್ನು ಶೋಧಿಸಲು, ಕಟಕಟೆಗೆ ತಂದು ನಿಲ್ಲಿಸಲು ಪ್ರಯತ್ನಿಸುತ್ತಿಲ್ಲ? ಮಾಧ್ಯಮಗಳೂ ವಸ್ತುನಿಷ್ಠತೆ ಇಲ್ಲದೆ, ವ್ಯಕ್ತಿನಿಷ್ಠೆಗೆ ಇಳಿದರೆ ಗತಿಯೇನು? ಏಕೆ ಯಾರೂ ಪ್ರಧಾನಿ ಮನಮೋಹನ್ ಸಿಂಗ್ ಹಾಗೂ ಅವರ ಜುಟ್ಟು ಹಿಡಿದುಕೊಂಡಿರುವ ಸೋನಿಯಾ ಗಾಂಧಿಯವರನ್ನು ಪ್ರಶ್ನಿಸುತ್ತಿಲ್ಲ? ಒಳ್ಳೆಯದಕ್ಕೆಲ್ಲಾ ಸೋನಿಯಾ ಕಾರಣ ಎಂದು ಬಿಂಬಿಸಿ, ಕೆಟ್ಟದ್ದಕ್ಕೆ ಬೇರೆ ಕುರಿಗಳನ್ನು ಹುಡುಕುವ ತನ್ನ ಚಾಳಿಯನ್ನು ಕಾಂಗ್ರೆಸ್ ಬಿಡುವುದಾದರೂ ಯಾವಾಗ? 1983ರ ಭೋಪಾಲ್ ಅನಿಲ ದುರಂತದ ವಿಷಯವನ್ನು ತೆಗೆದುಕೊಳ್ಳಿ. ಕೊಲೆಗೆಡುಕ ವಾರೆನ್ ಆಂಡರ್‌ಸನ್ ಓಡಿಹೋಗಲು ಬಿಟ್ಟುಕೊಟ್ಟಿದ್ದು ಪ್ರಧಾನಿ ರಾಜೀವ್ ಗಾಂಧಿ, ಆದರೆ ಗೂಬೆ ಕೂರಿಸಿದ್ದು ಅರ್ಜುನ್ ಸಿಂಗ್ ಮೇಲೆ. ಇನ್ನು ಶಶಿ ತರೂರ್ ವಿಷಯದಲ್ಲೂ ಹೀಗೇ ಆಯಿತು. ಸುನಂದಾ ಪುಷ್ಕರ್ ಅವರ ಬಿಡ್ಡಿಂಗ್‌ಗೆ ತರೂರ್ ತಮ್ಮ ಮಂತ್ರಿಸ್ಥಾನದ ಪ್ರಭಾವ ಬಳಸಿ ಸಹಾಯ ಮಾಡಿರಬಹುದು, ಆದರೆ ನೇರವಾಗಿ ಅವರೆಲ್ಲೂ ಶಾಮೀಲಾಗಿರಲಿಲ್ಲ. ಆದರೂ ಅವರ ಮಂತ್ರಿ ಪದವಿಯನ್ನೇ ಕಿತ್ತುಕೊಳ್ಳಲಾಯಿತು. ಏಕೆಂದರೆ ಸರಕಾರದ ಕಾರ್ಯವೈಖರಿಯ ಬಗ್ಗೆಯೇ ಅವರು ಆಗಾಗ್ಗೆ ಪ್ರಶ್ನಿಸುತ್ತಿದ್ದರು, ಟೀಕಾಪ್ರಹಾರವನ್ನೂ ಮಾಡಿದ್ದರು. ಕಾಂಗ್ರೆಸ್‌ನ ‘ಗರ್ಭಗುಡಿಯ ಸಂಸ್ಕೃತಿ’ಗೆ ಅದು ಪಥ್ಯ ವಾಗಲಿಲ್ಲ. ತರೂರ್ ವಿಷಯದಲ್ಲಿ ನಿರ್ದಯವಾಗಿ ನಡೆದುಕೊಂಡ ಸೋನಿಯಾ ಗಾಂಧಿಯವರು, ಏಕಾಗಿ ಕಲ್ಮಾಡಿಯವರನ್ನು ಇನ್ನೂ ಕಿತ್ತೊಗೆದಿಲ್ಲ?

ರಾಷ್ಟ್ರದ ಪ್ರತಿಷ್ಠೆಯ ಬಗ್ಗೆ ಇವರಿಗೆ ಕಿಂಚಿತ್ತೂ ಕಾಳಜಿಯಿಲ್ಲವೆ?

ಕಾಮನ್‌ವೆಲ್ತ್ ಎಂದರೆ ಏನು? ಒಂದು ಕಾಲದಲ್ಲಿ ಬ್ರಿಟನ್ ರಾಣಿಯ ಆಳ್ವಿಕೆಗೆ ಒಳಪಟ್ಟಿದ್ದ ರಾಷ್ಟ್ರಗಳೆಲ್ಲವನ್ನೂ ಹೊಂದಿರುವ ಒಕ್ಕೂಟವೇ ಕಾಮನ್‌ವೆಲ್ತ್. ಕಾಮನ್‌ವೆಲ್ತ್ ಕ್ರೀಡಾಕೂಟವೆಂದರೆ ಅದೂ ಒಂಥರಾ ಮಿನಿ ಒಲಿಂಪಿಕ್ ಇದ್ದ ಹಾಗೆ. ಏಕಾಗಿ ಇಂತಹ ಕ್ರೀಡಾಕೂಟಗಳನ್ನು ಆಯೋಜನೆ ಮಾಡುತ್ತಾರೆ? ಮೂವತ್ತೈದು ಸಾವಿರ ಕೋಟಿ ರೂ.ಗಳನ್ನು ಏಕಾಗಿ ವ್ಯಯಮಾಡಲಾಗುತ್ತಿದೆ? ನಮ್ಮ ದೇಶದಲ್ಲಿ ನೋಡಲು ಎಂಥೆಂಥ ಸ್ಥಳಗಳಿವೆ, ಯಾವ ಯಾವ ಸೌಲಭ್ಯಗಳನ್ನು ಕಲ್ಪಿಸಿದ್ದೇವೆ, ಎಷ್ಟು ಸುರಕ್ಷತೆಯನ್ನು ಒದಗಿಸಿದ್ದೇವೆ, ಎಷ್ಟು ಕಡಿಮೆ ಖರ್ಚಿನಲ್ಲಿ ದೇಶದ ಬಹುತೇಕ ಪ್ರೇಕ್ಷಣೀಯ ಸ್ಥಳಗಳನ್ನು ನೋಡಬಹುದು ಎಂಬುದನ್ನು ಅಂತಾರಾಷ್ಟ್ರೀಯ ಪ್ರವಾಸಿಗರಿಗೆ ಮನವರಿಕೆ ಮಾಡಿಕೊಟ್ಟು ದೇಶಕ್ಕೆ ಆಕರ್ಷಿಸಲು, ಆ ಮೂಲಕ ಪ್ರವಾಸೋದ್ಯಮಕ್ಕೆ ಉತ್ತೇಜನ ಕೊಡಲು, ವಿದೇಶಿ ವಿನಿಮಯ ಗಳಿಸಲು ಕ್ರೀಡಾ ಕೂಟಗಳನ್ನು ಬಳಸಿಕೊಳ್ಳಲಾಗುತ್ತದೆ. ನಮ್ಮ ದೇಶವನ್ನು ಎಲ್ಲ ವಿಧದಲ್ಲೂ ಸಕಾರಾತ್ಮಕವಾಗಿ ‘showcase’ ಮಾಡಿಕೊಳ್ಳಲು ಅವಕಾಶ ಸಿಗುತ್ತದೆ. ಅದರಿಂದ ಬಂಡವಾಳ ಹೂಡಿಕೆಯನ್ನೂ ಆಕರ್ಷಿಸಬಹುದು. ಒಂದು ಅಂತಾರಾಷ್ಟ್ರೀಯ ಕ್ರೀಡಾಕೂಟವನ್ನು ಯಶಸ್ವಿಯಾಗಿ ಆಯೋಜನೆ ಮಾಡುವುದೆಂದರೆ ಅದು ನಮ್ಮ ಶಕ್ತಿ-ಸಾಮರ್ಥ್ಯಗಳ ಪ್ರದರ್ಶನವೂ ಹೌದು. ಆದರೆ ಈಗ ಪ್ರದರ್ಶನವಾಗುತ್ತಿರುವುದು ಏನು? ದಕ್ಷಿಣ ಆಫ್ರಿಕಾದಂತಹ ದಟ್ಟ ದರಿದ್ರ ರಾಷ್ಟ್ರವೇ ವಿಶ್ವಕಪ್ ಫುಟ್ಬಾಲ್ ಹಬ್ಬವನ್ನು ಆಯೋಜನೆ ಮಾಡಬಹುದಾದರೆ ನ್ಯೂಕ್ಲಿಯರ್ ಪವರ್ ಭಾರತವೇಕೆ ಈ ರೀತಿ ಹೆಣಗುತ್ತಿದೆ? ಹೀಗಾದರೆ ಯಾವ ಅಂತಾರಾಷ್ಟ್ರೀಯ ಕ್ರೀಡಾ ಒಕ್ಕೂಟ ಭಾರತದ ಮೇಲೆ ಭರವಸೆ ತೋರುತ್ತದೆ? ಭಾರತ ಮುಂದೊಂದು ದಿನ ಒಲಿಂಪಿಕ್‌ನಂತಹ ಜಾಗತಿಕ ಕ್ರೀಡಾ ಮೇಳವನ್ನು ಆಯೋಜಿಸಲು ಸಾಧ್ಯವಿದೆಯೆ? ಅಂಗಲಾಚಿದರೂ ಅವಕಾಶ ಕೊಟ್ಟಾರೆ? ಭಾರತವೆಂದರೆ ಒಂದು ಪ್ರಜಾತಾಂತ್ರಿಕ, ಪ್ರಗತಿಪರ, ಸೂಪರ್‌ಪವರ್ ರಾಷ್ಟ್ರವಾಗುತ್ತ ಸಾಗುತ್ತಿರುವ, ನಾರಾಯಣಮೂರ್ತಿಯವರಂತಹ ಐಟಿ ದಿಗ್ಗಜರನ್ನು ಹೊಂದಿರುವ resurgent, confident ರಾಷ್ಟ್ರವೆಂಬ ಖ್ಯಾತಿ ಕಾಲಕಸವಾಯಿತಲ್ಲಾ ಇದಕ್ಕೆ ಹೊಣೆ ಯಾರು?

ಎಂದಿನಂತೆ ಅನ್ಯರತ್ತ ಬೆರಳು ತೋರದೆ ನೀವೇ ಉತ್ತರ ಕೊಡಿ ಸೋನಿಯಾ ಗಾಂಧಿಯವರೇ

ಕೃಪೆ : ಪ್ರತಾಪ್ ಸಿಂಹ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ