ನನ್ನ ಬ್ಲಾಗ್ ಪಟ್ಟಿ

ಮಂಗಳವಾರ, ಆಗಸ್ಟ್ 24, 2010

ಆಹಾ… ಎಂಥಾ ಅಮ್ಮಾ, ಎಂಥಾ ಮಕ್ಕಳು?!


Reddys remain Sushma’s blue-eyed boys!

ಅದು ಬಿಜೆಪಿಯ ಅತ್ಯುನ್ನತ ನಾಯಕಿ ಸುಷ್ಮಾ ಸ್ವರಾಜ್ ಅವರಿಂದ ಹೊರಬಿದ್ದ ಸ್ಪಷ್ಟ ಸಂದೇಶ-ಬಳ್ಳಾರಿ ರೆಡ್ಡಿ ಸಹೋದರರಷ್ಟೇ ಆಕೆಗೆ ಪ್ರೀತಿಪಾತ್ರರು! ಬಿಜೆಪಿಯ ಎರಡು ವರ್ಷಗಳ ಸಾಧನಾ ಸಮಾವೇಶದ ವೇದಿಕೆಯನ್ನು ಚೆನ್ನಾಗಿ ಬಳಸಿಕೊಂಡ ಆಕೆ, ಗಾಲಿ ಕರುಣಾಕರ ರೆಡ್ಡಿ, ಗಾಲಿ ಜನಾರ್ದನ ರೆಡ್ಡಿ, ಬಿ. ಶ್ರೀರಾಮುಲು ಹಾಗೂ ಗಾಲಿ ಸೋಮಶೇಖರ ರೆಡ್ಡಿಯೇ ತಮ್ಮ ನಂಬಿಕಸ್ತ ಬಂಟರು ಎಂಬುದನ್ನು ಪುನರುಚ್ಚರಿಸಿದರು. ಇವರೆಲ್ಲ ಸಚಿವರಾಗಿರುವ ಆರೋಗ್ಯ, ಕಂದಾಯ, ಮೂಲಭೂತ ಸೌಕರ್ಯ ಇಲಾಖೆ ಹಾಗೂ ಕೆಎಂಎಫ್ ಅನ್ನು ಮಾತ್ರ ಬೊಟ್ಟು ಮಾಡಿ ಹೊಗಳಿದರು. ಸಮಯದ ಅಭಾವದಿಂದ ಎಲ್ಲ ಇಲಾಖೆಗಳ ಬಗ್ಗೆಯೂ ಹೇಳಲಾಗುತ್ತಿಲ್ಲ ಎಂದು ಭಾಷಣ ಮುಗಿಸಿದರು!

ಜೂನ್ 25ರಂದು ನಡೆದ ಬಿಜೆಪಿ ಸಾಧನಾ ಸಮಾವೇಶದಲ್ಲಿ ರೆಡ್ಡಿಗಳು ಹಾಗೂ ಶ್ರೀರಾಮುಲು ಅವರನ್ನು ಬಿಜೆಪಿ ನಾಯಕಿ ಸುಷ್ಮಾ ಸ್ವರಾಜ್ ಹೇಸಿಗೆ ಬರುವಂತೆ ಹೊಗಳಿದ್ದನ್ನು ‘ಟೈಮ್ಸ್ ಆಫ್ ಇಂಡಿಯಾ’ ಪತ್ರಿಕೆ ತನ್ನ ಮುಖಪುಟದಲ್ಲಿ ಈ ಮೇಲಿನ ಶೀರ್ಷಿಕೆಯಡಿ ಪ್ರಕಟ ಮಾಡಿತು. ಅದನ್ನು ಓದಿ ನಿಜಕ್ಕೂ ಆಶ್ಚರ್ಯವಾಯಿತು. ಈ ಸರಕಾರದಲ್ಲಿ ಕಳೆದ ಎರಡು ವರ್ಷಗಳಲ್ಲಿ ಯಾರಾದರೂ ಒಳ್ಳೆಯ ಕೆಲಸ ಮಾಡಿದವರಿದ್ದಾರಾ ಎಂದು ಯಾರನ್ನೇ ಕೇಳಿದರೂ ಸುರೇಶ್ ಕುಮಾರ್, ಶೋಭಾ ಕರಂದ್ಲಾಜೆ, ವಿಶ್ವೇಶ್ವರ ಹೆಗಡೆ ಕಾಗೇರಿ ಎಂದು ನಿಸ್ಸಂಶಯವಾಗಿ ಹೇಳುತ್ತಾರೆ. ಬೆಂಗಳೂರಿನ ಅರಮನೆ ಮೈದಾನದಲ್ಲಿ ಮಾತಿಗೆ ನಿಂತಿದ್ದ ಬಿಜೆಪಿಯ ‘ಮಹಾನ್’ ನಾಯಕಿ ಸುಷ್ಮಾಸ್ವರಾಜ್ ಕಣ್ಣಿಗೆ ಇವರ್‍ಯಾರೂ ಕಾಣಲಿಲ್ಲವೆ? ಇವರು ಮಾಡುತ್ತಿರುವ ಒಳ್ಳೆಯ ಕೆಲಸಗಳು ಅವರ ಗಮನಕ್ಕೇ ಬಂದೇ ಇಲ್ಲವೆ? ತಾನು ಯಾರನ್ನು ಹೊಗಳುತ್ತಿದ್ದೇನೆ, ಅವರ ಹಿನ್ನೆಲೆ ಎಂಥದ್ದು, ಕರ್ನಾಟಕದ ಮಹಾಜನತೆ ಈ ನಾಲ್ವರ ಬಗ್ಗೆ ಯಾವ ಅಭಿಪ್ರಾಯ ಹೊಂದಿದೆ ಎಂಬುದರ ಅರಿವಾದರೂ ಆಕೆಗಿದೆಯೇ? ಪ್ರತಿ ಸಾರಿಯೂ, ನಾಮ್ ಕೇ ವಾಸ್ಥೆಗೆ ಯಡಿಯೂರಪ್ಪನವರ ಬಗ್ಗೆ ತುಟಿಯಂಚಿನಲ್ಲಿ ಒಂದೆರಡು ಮಾತನಾಡಿ ಅಂತರಾತ್ಮದಿಂದ ರೆಡ್ಡಿ ಸಹೋದರರನ್ನು ಹೊಗಳಲು ಆರಂಭಿಸುತ್ತಾರೆ. ಏಕೆ?

ನಿಮಗೆ ದಿಲೀಪ್ ಸಿಂಗ್ ಜುದೇವ್ ಹೆಸರು ನೆನಪಿರಬಹುದಲ್ಲವೆ?

ಛತ್ತೀಸ್‌ಗಢದ ಜುದೇವ್, ಅಟಲ್ ಬಿಹಾರಿ ವಾಜಪೇಯಿಯವರ ಸರಕಾರದಲ್ಲಿ ಪರಿಸರ ಹಾಗೂ ಅರಣ್ಯ ಖಾತೆ ಸಚಿವರಾಗಿದ್ದರು. ಛತ್ತೀಸ್‌ಗಢದಲ್ಲಿ ಮೈನಿಂಗ್ ಲೈಸೆನ್ಸ್ ಕೊಡಿಸಿದ್ದಕ್ಕೆ ಪ್ರತಿಯಾಗಿ ಆಸ್ಟ್ರೇಲಿಯಾದ ಕಂಪನಿಯೊಂದರಿಂದ ಜುದೇವ್ ಲಂಚ ಪಡೆದಿದ್ದಾರೆ ಎಂದು 2003ರಲ್ಲಿ ‘ಇಂಡಿಯನ್ ಎಕ್ಸ್‌ಪ್ರೆಸ್’ ಪತ್ರಿಕೆ ದೊಡ್ಡ ವರದಿ ಮಾಡಿತು. ಆ ಹುಸಿ ಲಂಚ ಪ್ರಕರಣದ ಹಿಂದೆ ಛತ್ತೀಸ್‌ಗಢದ ಮಾಜಿ ಮುಖ್ಯಮಂತ್ರಿ ಅಜಿತ್ ಜೋಗಿ ಮಗ ಅಮಿತ್ ಜೋಗಿಯ ಕೈವಾಡವಿತ್ತು. ಆದರೂ ದೋಷಮುಕ್ತರಾಗಿ ಹೊರ ಬನ್ನಿ ಎಂದ ವಾಜಪೇಯಿ, ಜುದೇವ್ ಅವರ ರಾಜೀನಾಮೆ ಪಡೆದುಕೊಂಡರು. ಅದೇ ವೇಳೆಗೆ ಛತ್ತೀಸ್‌ಗಢ ವಿಧಾನಸಭೆ ಚುನಾವಣೆಯೂ ಮುಗಿದು, ಫಲಿತಾಂಶ ಹೊರಬರಬೇಕಿತ್ತು. ಜುದೇವ್ ಮುಂಚೂಣಿಯಲ್ಲಿ ನಿಂತು ಪಕ್ಷವನ್ನು ಮುನ್ನಡೆಸಿದ್ದರು. ಅವರೇ ಮುಂದಿನ ಮುಖ್ಯಮಂತ್ರಿ ಎಂದು ಬಿಂಬಿಸಲಾಗಿತ್ತು. ಬಿಜೆಪಿ ಬಹುಮತ ಗಳಿಸಿದರೂ ಜುದೇವ್ ಮುಖ್ಯಮಂತ್ರಿಗಾದಿಯನ್ನು ತಿರಸ್ಕರಿಸಿದರು. ಮುಂದೆ 2005ರಲ್ಲಿ ಜುದೇವ್ ದೋಷಮುಕ್ತರೆಂದು ಸಿಬಿಐ ವರದಿ ನೀಡಿದ್ದು ಬೇರೇ ಮಾತು, ಆದರೆ ಅಂದು ಬಿಜೆಪಿಯ ಕೇಂದ್ರ ನಾಯಕತ್ವ ನೈತಿಕತೆಯನ್ನು ಎತ್ತಿ ಹಿಡಿದಿತ್ತು. ಬಂಗಾರು ಲಕ್ಷಣ್ ಸಿಕ್ಕಿಬಿದ್ದಾಗ ನಿರ್ದಾಕ್ಷಿಣ್ಯವಾಗಿ ಪಕ್ಷದ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಿದ್ದರು. ಅಷ್ಟೇಕೆ, ತಮ್ಮ ಮೇಲೆ ಹವಾಲಾ ಹಗರಣದ ಆರೋಪ ಬಂದಾಗ ದೋಷಮುಕ್ತರಾಗುವವರೆಗೂ ತಾನು ಯಾವ ಹುದ್ದೆಯನ್ನೂ ಅಲಂಕರಿಸುವುದಿಲ್ಲ ಎಂದು ಆಡ್ವಾಣಿಯವರು ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದರು. ಅಟಲ್ ಬಿಹಾರಿ ವಾಜಪೇಯಿಯವರು ೬ ವರ್ಷ ಪ್ರಧಾನಿಯಾಗಿದ್ದರೂ ಅವರ ವಿರುದ್ಧ ಸಣ್ಣ ಆರೋಪ ಮಾಡುವುದಕ್ಕೂ ಅವಕಾಶ ನೀಡಲಿಲ್ಲ. ಅಟಲ್, ಆಡ್ವಾಣಿಯವರಂತಹ ಮೇರು ನಾಯಕರು ಎಂತಹ ಮೇಲ್ಪಂಕ್ತಿ ಹಾಕಿಕೊಟ್ಟಿದ್ದಾರೆ ಎಂಬುದರ ಕನಿಷ್ಠ ಪರಿeನವಾದರೂ, ಅವರ ಉತ್ತರಾಧಿಕಾರಿಯಾಗುವ ಕನಸು ಕಾಣು ತ್ತಿರುವ ಸುಷ್ಮಾ ಸ್ವರಾಜ್‌ಗಿಲ್ಲವೆ?

ಇಷ್ಟಕ್ಕೂ ಆಕೆ ಹೊಗಳುತ್ತಿರುವುದಾದರೂ ಯಾರನ್ನು? ಈ ಶ್ರೀರಾಮುಲು, ರೆಡ್ಡಿ ಸಹೋದರರು ಬಿಜೆಪಿಗೆ ಬಂದಿದ್ದಾದರೂ ಯಾವ ಹಿನ್ನೆಲೆ, ತತ್ತ್ವಸಿದ್ಧಾಂತವನ್ನಿಟ್ಟುಕೊಂಡು?

ಒಂದು ಇ-ಮೇಲ್ ಓದಿ…

“1987ರಲ್ಲಿ ಹೀಗೊಂದು ಕೊಲೆ ನಡೆದುಹೋಯಿತು. ಕ್ರಿಮಿನಲ್ ಹಿನ್ನೆಲೆ ಹೊಂದಿದ್ದ ಬಳ್ಳಾರಿಯ ಕಾಂಗ್ರೆಸ್ ಕೌನ್ಸಿಲರ್ ರೈಲ್ವೆ ಬಾಬು ಹಾಡಹಗಲೇ, ಎಲ್ಲರ ಎದುರೇ ಕೊಲೆಯಾಗಿ ಹೋದ. ಆತ ಪ್ರತಿನಿಧಿಸುತ್ತಿದ್ದ ಬಳ್ಳಾರಿ ಮುನ್ಸಿಪಲ್ ಕೌನ್ಸಿಲ್‌ನ ವಾರ್ಡ್‌ಗೆ ಮಧ್ಯಂತರ ಚುನಾವಣೆ ಏರ್ಪಾಡಾಯಿತು. ರೈಲ್ವೇ ಬಾಬು ಅವರ ಸಂಬಂಧಿಕ ಹಾಗೂ ಆತನ ಗ್ಯಾಂಗ್ ಸದಸ್ಯನೂ ಆಗಿದ್ದ ರಮಣ್‌ಜಿನಿ ಅಲಿಯಾಸ್ ಕುಂಟ ರಮಣ್‌ಜಿನಿಯನ್ನು ಕಾಂಗ್ರೆಸ್ ಕಣಕ್ಕಿಳಿಸಿತು. ಆ ಕಾಲದಲ್ಲಿ ಬಳ್ಳಾರಿಯಲ್ಲಿ ಯಾವ ಬಲಾಬಲವನ್ನೂ ಹೊಂದಿರದ ಬಿಜೆಪಿ ಪ್ರತಿಷ್ಠಿತ ಆರ್ಕಿಟೆಕ್ಟ್ ಎಂ.ಎಸ್. ರಾವ್ ಅವರನ್ನು ಕಣಕ್ಕಿಳಿಸಿತು. ಅವರಿಗಿದ್ದ ಏಕೈಕ ಅರ್ಹತೆಯೆಂದರೆ ಪ್ರಾಮಾಣಿಕತೆ ಹಾಗೂ ಸಮಗ್ರತೆ. ಆ ಕಾಲದಲ್ಲಿ ಬಿಜೆಪಿಯಲ್ಲಿ ಇದ್ದವರೆಲ್ಲ ಅಂತಹವರೇ ಎಂಬುದು ಬೇರೆ ಮಾತು! ವೋಟಿಂಗ್ ದಿನ ಮತಗಟ್ಟೆಗಳ ಬಳಿ ಸೇರಿದ್ದ ಆರೆಸ್ಸೆಸ್, ಎಬಿವಿಪಿ ಹಾಗೂ ಬಿಜೆಪಿಯ 15 ಕಾರ್ಯಕರ್ತರಲ್ಲಿ ನಾನೂ ಒಬ್ಬನಾಗಿದ್ದೆ. ನನಗಾಗ ಕೇವಲ 18 ವರ್ಷ. ಬಿಜೆಪಿಯ ಏಜೆಂಟನಾಗಿ ಮತಗಟ್ಟೆ ಯೊಳಗೆ ನನ್ನನ್ನು ಕುಳ್ಳಿರಿಸಲಾಯಿತು. ಇದ್ದಕ್ಕಿದ್ದಂತೆಯೇ ಕಾಂಗ್ರೆಸ್‌ನ ಗೂಂಡಾಗಳು ನಕಲಿ ಮತದಾನ ಮಾಡಲು ಆರಂಭಿಸಿದರು. ನಾನು ವಿರೋಧಿಸಿದಾಗ ಸರಿಸುಮಾರು ನನ್ನ ವಯಸ್ಸಿನವನೇ ಆದ ಕುಖ್ಯಾತ ರೌಡಿಯೊಬ್ಬ ನನ್ನನ್ನು ಚೆನ್ನಾಗಿ ಚಚ್ಚಿದ. ಈ ಬಗ್ಗೆ ನನ್ನ ಪಕ್ಷದ ನಾಯಕರಾದ ಶ್ರೀ ರಂಗಣ್ಣ ಶೆಟ್ಟಿಯವರಿಗೆ ದೂರು ಹೇಳಿದೆ. 1999ರಲ್ಲಿ ಸುಷ್ಮಾ ಸ್ವರಾಜ್ ಬಳ್ಳಾರಿಗೆ ಕಾಲಿಡುವವರೆಗೂ ಜಿಲ್ಲೆಯಲ್ಲಿ ರಂಗಣ್ಣ ಶೆಟ್ಟಿಯವರದ್ದು ದೊಡ್ಡ ಹೆಸರು. 4 ದಶಕಗಳ ಕಾಲ ಬಳ್ಳಾರಿಯಲ್ಲಿ ಜನಸಂಘ ಮತ್ತು ಬಿಜೆಪಿಯ ಧ್ವನಿಯಾಗಿದ್ದರು. “ಅವರಿಗೆ ಅಧಿಕಾರ ಇದೆ, ಅವರು ಹೊಡಿತಾರೆ. ನಮಗೆ ಅಧಿಕಾರ ಬಂದಾಗ ಖಂಡಿತ ನಾವೂ ಅವರಿಗೆ ಹೊಡಿಯೋಣ. ನೀನು ಸುಮ್ಮನೆ ಇರು ತಮ್ಮಾ…” ಎಂದು ಅವರು ನನ್ನನ್ನು ಸಮಾಧಾನ ಪಡಿಸಿದ್ದರು. ಅವರು ಹೇಳಿದಂತೆ ಒಂದಲ್ಲ ಒಂದು ದಿನ ನಾವೂ ಅಧಿಕಾರಕ್ಕೆ ಬರುತ್ತೇವೆ, ಪ್ರತಿಕಾರ ತೆಗೆದುಕೊಳ್ಳುವ ಅವಕಾಶ ಸಿಗುತ್ತದೆ ಎಂಬ ಭರವಸೆ ಇಟ್ಟುಕೊಂಡಿದ್ದೆ. ಅಂತಹ ಅವಕಾಶ ಬರಲೇ ಇಲ್ಲ.

ಏಕೆಂದರೆ….

ಅವತ್ತು ನನ್ನನ್ನು ಬಡಿದು, ಬೆದರಿಕೆ ಹಾಕಿದ್ದ ವ್ಯಕ್ತಿ ಇಂದು ಕರ್ನಾಟಕ ಸರಕಾರದ ಗೌರವಾನ್ವಿತ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಖಾತೆ ಸಚಿವ! ಅದೂ ನಮ್ಮದೇ ಸರಕಾರದಲ್ಲಿ!! ಅಂದು ಕೊಲೆ, ದರೋಡೆ, ಸುಲಿಗೆ, ಅಪಹರಣದಲ್ಲಿ ತೊಡಗಿದ್ದ ಆ ಕುಖ್ಯಾತ ಗ್ಯಾಂಗ್‌ನ ‘ರಿಂಗ್‌ಮಾಸ್ಟರ್’ ಸಣ್ಣ ಫಕೀರಪ್ಪ ಮುಂದೆ ರಾಯಚೂರು ಜಿಲ್ಲೆಯಿಂದ ನಮ್ಮ ಪಕ್ಷದ ಸಂಸದರಾಗಬಹುದು!! ಕೊಲೆಯಾಗಿದ್ದ ಗೂಂಡಾ ಕೌನ್ಸಿಲರ್ ರೈಲ್ವೇ ಬಾಬುನ ಮಗನೇ ನಮ್ಮ ಪಕ್ಷದ ಕಂಪ್ಲಿ ಎಮ್ಮೆಲ್ಲೆ ಟಿ.ಎಚ್. ಸುರೇಶ್ ಬಾಬು!!”

ಇಂಥದ್ದೊಂದು ಇ-ಮೇಲ್, 2009ರ ಸಂಸತ್ ಚುನಾವಣೆಗೂ ಸ್ವಲ್ಪ ಮುಂಚೆ ಬಿಜೆಪಿಯ ನಾಯಕರೆಲ್ಲರ ‘ಇನ್‌ಬಾಕ್ಸ್’ಗೆ ಬಂದು ಸೇರಿತು. ಬಿಜೆಪಿಯ ಬಲವರ್ಧನೆಗಾಗಿ ಜೀವನದ ಅತ್ಯಮೂಲ್ಯ ವರ್ಷಗಳನ್ನು ಸವೆಸಿದ, ಪೆಟ್ಟನ್ನೂ ತಿಂದಿದ್ದ ವ್ಯಕ್ತಿಯೊಬ್ಬರು ಅದನ್ನು ಬರೆದಿದ್ದರು. ಎಂಥೆಂಥ ಅನರ್ಹರು ಬಿಜೆಪಿಯನ್ನು ಸೇರಿದ್ದಾರೆ, ಯಾರೋ ಶ್ರಮಿಸಿ ಕಟ್ಟಿದ ಪಕ್ಷ ಅಧಿಕಾರಕ್ಕೆ ಬಂದ ಮೇಲೆ ಯಾರು ಅಧಿಕಾರ ಅನುಭವಿಸುತ್ತಿದ್ದಾರೆ ಎಂಬುದನ್ನು ಅದರಲ್ಲಿ ಅನಾವರಣ ಮಾಡಿದ್ದರು. ಆ ಮಿಂಚಂಚೆಯನ್ನು ಬಿಜೆಪಿಯ ಬಹಳಷ್ಟು ಮಂತ್ರಿಗಳು, ಮುಖ್ಯಮಂತ್ರಿ ಯಡಿಯೂರಪ್ಪ, ಬಿಜೆಪಿಯ ಟಾಪ್‌ಬ್ರಾಸ್ ಗಮ ನಕ್ಕೂ ತಂದಿದ್ದರು. ಸುಷ್ಮ ಸ್ವರಾಜ್ ಕೂಡ ಓದಿರುತ್ತಾರೆ ಬಿಡಿ.

೧೯೯೯ರಲ್ಲಿ ಸುಷ್ಮಾ ಸ್ವರಾಜ್ ಬಳ್ಳಾರಿಗೆ ಬರುವವರೆಗೂ ‘108’ ಶ್ರೀರಾಮುಲು ಹಿನ್ನೆಲೆ ಮೇಲಿನಂತೆಯೇ ಇತ್ತು. ಇತ್ತ “ಎನ್ನೋಬಲ್ ಇಂಡಿಯಾ ಸೇವಿಂಗ್ ಅಂಡ್ ಇನ್‌ವೆಸ್ಟ್‌ಮೆಂಟ್ ಕಂಪನಿ ಲಿಮಿಟೆಡ್” ಎಂಬ ‘ಚೀಟ್’ಫಂಡ್ ಕಂಪನಿ ಹುಟ್ಟು ಹಾಕಿದ್ದ ಜನಾರ್ದನ ರೆಡ್ಡಿ ನೆತ್ತಿಗೆ 1998ರಲ್ಲಿ ರಿಸರ್ವ್ ಬ್ಯಾಂಕ್ ಕುಟ್ಟಿ ಕಡಿವಾಣ ಹಾಕಿತ್ತು. ಅದ್ಯಾವ ಕ್ಷಣದಲ್ಲಿ ಆ ಮಹಾತಾಯಿ(!!) ಸುಷ್ಮಾ ಸ್ವರಾಜ್ ಬಳ್ಳಾರಿಗೆ ಬಂದರೋ, ಸೋನಿಯಾ ಗಾಂಧಿಯವರನ್ನು ಸೋಲಿಸಲೇಬೇಕೆಂಬ ಕಾರಣಕ್ಕೆ ಕಳ್ಳರು, ಸುಳ್ಳರು, ದಗಾಕೋರರು, ಕೊಲೆಗಡುಕರು ಎಲ್ಲರ ಸಹಾಯವನ್ನೂ ತೆಗೆದುಕೊಂಡಿತು ಬಿಜೆಪಿ. ಈ ಶ್ರೀರಾಮುಲು ಹಾಗೂ ರೆಡ್ಡಿ ಸಹೋದರರು ಸುಷ್ಮಾ ಸ್ವರಾಜ್ ಸಂಪರ್ಕಕ್ಕೆ ಬಂದಿದ್ದು ಆಗಲೇ. ಸೋತ ಸುಷ್ಮಾ ಪ್ರತಿ ವರ್ಷ ಬಳ್ಳಾರಿಗೆ ಬರುತ್ತೇನೆ ಎಂದು ಹೇಳಿ ದಿಲ್ಲಿಗೆ ಮರಳಿದರು, ಅದಕ್ಕೂ ಮುನ್ನ ರೆಡ್ಡಿ-ಶ್ರೀರಾಮುಲುಗೆ ಜಿಲ್ಲೆಯ ರಾಜ್ಯಭಾರ ವಹಿಸಿಕೊಟ್ಟರು. ಇತ್ತ 2001ರಲ್ಲಿ 10 ಲಕ್ಷ ಪ್ರಾರಂಭಿಕ ಬಂಡವಾಳದೊಂದಿಗೆ ಮೈನಿಂಗ್ ವಹಿವಾಟು ಆರಂಭಿಸಿದ ರೆಡ್ಡಿ ಸಹೋದರರು ಇವತ್ತು 25 ಸಾವಿರ ಕೋಟಿ ರೂಪಾಯಿ ವೆಚ್ಚದಲ್ಲಿ ಬ್ರಹ್ಮಿಣಿ ಉಕ್ಕು ಸ್ಥಾವರ ನಿರ್ಮಾಣ ಮಾಡುವಷ್ಟರ ಮಟ್ಟಿಗೆ ಬೆಳೆದಿದ್ದಾರೆ! ಇಷ್ಟೆಲ್ಲಾ ಹಣವನ್ನು ನ್ಯಾಯಯುತವಾಗಿ ಮಾಡಲು ಸಾಧ್ಯವೆ? ಇನ್ಫೋಸಿಸ್, ವಿಪ್ರೊ, ಟಿಸಿಎಸ್‌ನಂತಹ ಸಾಫ್ಟ್‌ವೇರ್ ಕಂಪನಿಗಳಿಗೇ ಸಾಧ್ಯವಾಗದ ಚಮತ್ಕಾರ, ಪವಾಡ ರೆಡ್ಡಿಗಳಿಗೆ ಹೇಗೆ ಸಾಧ್ಯವಾಯಿತು? ನನ್ನ ರಾಜೀನಾಮೆಗೆ ಮೈನಿಂಗ್ ಮಾಫಿಯಾವೇ ಕಾರಣ ಎಂದು ಲೋಕಾಯುಕ್ತ ಸಂತೋಷ್ ಹೆಗ್ಡೆಯವರು ಘಂಟಾಘೋಷವಾಗಿ ಹೇಳುತ್ತಿದ್ದಾರೆ. ಬೇಲೆಕೇರಿ ಬಳಿ ಸಂಗ್ರಹಿಸಿಡಲಾಗಿದ್ದ ಅದಿರು ಯಾರದ್ದಾ ಗಿತ್ತು, ಅದನ್ನು ಯಾರು ನಾಪತ್ತೆ ಮಾಡಿದರು ಎಂಬುದು ನಮ್ಮ ರಾಜ್ಯದ ಒಬ್ಬ ಅನಕ್ಷರಸ್ತನಿಗೂ ಗೊತ್ತು. ಹಾಗಿದ್ದರೂ ಸುಷ್ಮಾ ಸ್ವರಾಜ್ ಅದ್ದೇಗೆ ರಾಮುಲು, ರೆಡ್ಡಿಗಳನ್ನು ನಿರ್ಲಜ್ಜೆಯಿಂದ ಹೊಗಳುತ್ತಾರೆ? ಈ ರೆಡ್ಡಿಗಳು ಹಾಗೂ ಸುಷ್ಮಾ ಸ್ವರಾಜ್ ನಡುವೆ ಯಾವುದಾದರೂ ‘ಕೊಡು-ಕೊಳ್ಳುವ’ ವ್ಯವಹಾರವಿದೆಯೇ?

ಕಳೆದ ಅಕ್ಟೋಬರ್‌ನಲ್ಲಿ ನಡೆದ ಘಟನೆಯನ್ನು ನೆನಪಿಸಿಕೊಳ್ಳಿ.

2009ರಲ್ಲಿ ಉತ್ತರ ಕರ್ನಾಟಕದ ಕೆಲವು ಜಿಲ್ಲೆಗಳು ಭಾರೀ ನೆರೆಗೆ ಸಿಲುಕಿ ಸಂಕಷ್ಟಕ್ಕೀಡಾದಾಗ, ನಷ್ಟವನ್ನು ಸರಿದೂಗಿಸುವ ಸಲುವಾಗಿ ಮುಖ್ಯಮಂತ್ರಿ ಯಡಿಯೂರಪ್ಪನವರು, ಕಬ್ಬಿಣದ ಅದಿರು ಸಾಗಿಸುವ ಪ್ರತಿ ಲಾರಿಗಳ ಮೇಲೆ 1 ಸಾವಿರ ರೂ. ಸೆಸ್(ಸುಂಕ) ವಿಧಿಸಲು ನಿರ್ಧ ರಿಸಿದರು. ಈ ನಿರ್ಧಾರವನ್ನು ಜನಾರ್ದನ ರೆಡ್ಡಿ ಸಾರ್ವಜನಿಕವಾಗಿ ಖಂಡಿಸಿ ಬಿಟ್ಟರು. ಅಲ್ಲಿಗೆ ಕದನ ಕಹಳೆ ಮೊಳಗಿತು. ದಕ್ಷಿಣ ಭಾರತದಲ್ಲಿ ಸ್ಥಾಪನೆಯಾದ ಬಿಜೆಪಿಯ ಮೊದಲ ಸರಕಾರ ಅಧಿಕಾರಕ್ಕೆ ಬಂದು 18 ತಿಂಗಳಲ್ಲೇ ಕುಸಿದುಬೀಳುವ ಅಪಾಯಕ್ಕೆ ಸಿಲುಕಿತು. ರೆಡ್ಡಿಗಳು ಬಲಾಬಲ ಪ್ರದರ್ಶನಕ್ಕೆ ಮುಂದಾದರು. ಇದಾಗಿ ಮೂರೇ ದಿನಗಳಲ್ಲಿ ಬಿಜೆಪಿ ತನ್ನ ಹಿರಿಯ ನಾಯಕ ಹಾಗೂ ಕರ್ನಾಟಕ ವಿಧಾನಸಭೆ ಚುನಾವಣೆಯ ಉಸ್ತುವಾರಿ ವಹಿಸಿದ್ದ ಅರುಣ್ ಜೇಟ್ಲಿಯವರನ್ನು ರಾಜ್ಯಕ್ಕೆ ದೌಡಾಯಿಸಿತು. ಊಹೂಂ, ರೆಡ್ಡಿಗಳು ಅವರನ್ನು ಭೇಟಿ ಮಾಡುವುದಕ್ಕೂ ಬರಲಿಲ್ಲ. ಬಿಜೆಪಿಯ ಮಾಜಿ ಅಧ್ಯಕ್ಷ ವೆಂಕಯ್ಯ ನಾಯ್ಡು, ಆಗಿನ ಹಾಲಿ ಅಧ್ಯಕ್ಷ ರಾಜ್‌ನಾಥ್ ಸಿಂಗ್ ಯಾರೇ ಪ್ರಯತ್ನಿಸಿದರೂ ಸಮಸ್ಯೆ ಪರಿಹಾರವಾಗುವ ಲಕ್ಷಣ ಕಾಣಲಿಲ್ಲ. ಆಗ ಕಣ್ಣಿಗೆ ಕಂಡಿದ್ದು ಸುಷ್ಮಾ ಸ್ವರಾಜ್! ಅಷ್ಟಕ್ಕೂ, ಬಳ್ಳಾರಿ ಸಹೋದರರ ದತ್ತು ಅಮ್ಮ ಅವರೇ ಅಲ್ಲವೆ?! 2009, ನವೆಂಬರ್ 9ರಂದು ಸಂಧಾನ ನಾಟಕ ನಡೆಯಿತು. ವಿಧೇಯ ಮಕ್ಕಳಂತೆ ಅಮ್ಮ ಸುಷ್ಮಮ್ಮನ ಮಾತಿಗೆ ತಲೆಯಾಡಿಸಿದ ಜನಾರ್ದನ ರೆಡ್ಡಿ ಹಾಗೂ ಶ್ರೀರಾಮುಲು ಯಡಿಯೂರಪ್ಪನವರ ಕೈ ಕೈ ಹಿಡಿದುಕೊಂಡು, ಕುಟುಂಬದೊಳಗಿನ ಸಮಸ್ಯೆ ಎಂದು ಕ್ಯಾಮೆರಾಗಳಿಗೆ ಪೋಸು ಕೊಟ್ಟರು. ಪ್ರಶ್ನೆಯಿಷ್ಟೇ- ಇದೆಂಥಾ ತಾಯಿ-ಮಕ್ಕಳ ಸಂಬಂಧ? ಯಾವ ಮುಖ್ಯಮಂತ್ರಿಯ ಮುಖವನ್ನೂ ನೋಡುವುದಿಲ್ಲ ಎಂದು ಸಾರ್ವಜನಿಕವಾಗಿ ಕೊಟ್ಟಿದ್ದ ಹೇಳಿಕೆಯನ್ನೇ ಮರೆತು ಆ ವ್ಯಕ್ತಿಯನ್ನೇ ಜನಾರ್ದನ ರೆಡ್ಡಿ ಬಿಗಿದಪ್ಪುತ್ತಾ ರೆಂದರೆ ಈ ಅಮ್ಮ ಅದೆಂಥ ಮಹಾತಾಯಿ ಇರಬಹುದು? ಅದಿರಲಿ, ಮಧ್ಯಸ್ಥಿಕೆ ವಹಿಸಿ ಕದನ ವಿರಾಮ ಘೋಷಣೆ ಮಾಡಿಸಿದ್ದಕ್ಕೆ ಸುಷ್ಮಾ ಸ್ವರಾಜ್‌ಗೆ ಸಿಕ್ಕ ಫಲವೇನು ಗೊತ್ತೆ? ಅವರ ಪತಿ ಸ್ವರಾಜ್ ಕೌಶಲ್‌ರನ್ನು ಕರ್ನಾಟಕ ಸರಕಾರದ ವಕೀಲರನ್ನಾಗಿ 2009, ಡಿಸೆಂಬರ್ 5ರಂದು ಆದೇಶ ಹೊರಡಿಸಲಾಯಿತು! ಈಕೆಯೇನು ಸಾಮಾನ್ಯ ಮಹಿಳೆ ಎಂದುಕೊಳ್ಳಬೇಡಿ. ತಾನು ಅರುಣ್ ಜೇಟ್ಲಿಗಿಂತಲೂ ಪವರ್‌ಫುಲ್, ನನ್ನ ಮಾತಿಗೇ ಹೆಚ್ಚು ಬೆಲೆ, ತಾನೇ ಬಿಜೆಪಿಯ ದೊಡ್ಡ ನಾಯಕಿ ಎಂಬ ಭ್ರಮೆ ಇದೆ. ಆ ಭ್ರಮೆಯನ್ನು ಜನರಲ್ಲೂ ಮೂಡಿಸಬೇಕೆಂಬ ತುಡಿತವಿದೆ. ಬಳ್ಳಾರಿ ರೆಡ್ಡಿಗಳನ್ನು ಇಷ್ಟೆಲ್ಲಾ ಹೊಗಳುವ ಈಕೆ ದೇಶದ ನಂಬರ್-1 ಮುಖ್ಯಮಂತ್ರಿ ನರೇಂದ್ರ ಮೋದಿಯವರ ಬಗ್ಗೆ ಒಂದಾದರೂ ಒಳ್ಳೆಯ ಮಾತನಾಡಿದ್ದನ್ನು ಕೇಳಿದ್ದೀರಾ? ಏಕೆ ಈ ಅಮ್ಮಾ ರೆಡ್ಡಿಗಳನ್ನು ಮಾತ್ರ ಹೊಗಳುತ್ತಾರೆ? ಈಕೆಯನ್ನು ಮುಂದಿನ ಪ್ರಧಾನಿಯನ್ನಾಗಿ ಮಾಡುವುದೇ ರೆಡ್ಡಿಗಳ ಗುರಿಯೆಂದು ತೆಹೆಲ್ಕಾ ಪತ್ರಿಕೆ ಬರೆದಿತ್ತು! ಹಾಗಾಗಿ, ಯಡಿಯೂರಪ್ಪನವರ ಉತ್ತರಾಧಿಕಾರಿಯನ್ನಾಗಿ ಜನಾರ್ದನ ರೆಡ್ಡಿಯವರನ್ನು ಬಿಂಬಿಸುವುದೇ ಈಕೆಯ ಉದ್ದೇಶ ಎಂಬ ಅನುಮಾನ ಕಾಡುವುದಿಲ್ಲವೆ? ಮಕ್ಕಳು ದಾರಿ ತಪ್ಪಿದಾಗ, ಕೆಟ್ಟ ಹೆಸರು ತಂದಾಗ ಬದುಕಿರುವಾಗಲೇ ಮಕ್ಕಳ ಶ್ರಾದ್ಧ ಮಾಡಿದ, ಸಾರ್ವಜನಿಕವಾಗಿ dis-own ಮಾಡಿದ ತಂದೆ-ತಾಯಂದಿರು ನಮ್ಮ ಸಮಾಜದಲ್ಲಿದ್ದಾರೆ. ಅಂಥದ್ದರಲ್ಲಿ ಬಳ್ಳಾರಿ ಸಹೋದರರನ್ನು ಅದ್ಯಾವ ಮುಖ ಇಟ್ಟುಕೊಂಡು ಸುಷ್ಮಾ ಸ್ವರಾಜ್, ತಮ್ಮ ಮಾನಸ ಪುತ್ರರು ಎಂದು ಸಾರ್ವಜನಿಕವಾಗಿ ಘೋಷಿಸುತ್ತಾರೆ? 2004ರಲ್ಲಿ ಸೋನಿಯಾ ಗಾಂಧಿಯವರು ಇನ್ನೇನು ಪ್ರಧಾನಿಯಾಗಿ ಬಿಡುವ ಸಂದರ್ಭ ಸೃಷ್ಟಿಯಾದಾಗ, ‘ಆಕೆಯೇನಾದರೂ ಪ್ರಧಾನಿಯಾದರೆ ನಾನು ವಿಧವೆಯಂತೆ ಬಿಳಿ ವಸ್ತ್ರ ಧರಿಸುತ್ತೇನೆ. ಬಳೆ ಒಡೆಯುತ್ತೇನೆ, ಕಾಳು ತಿನ್ನುತ್ತೇನೆ, ನೆಲದ ಮೇಲೆ ಮಲಗುತ್ತೇನೆ’ ಎಂದು ಮೌಲ್ಯಕ್ಕೆ ಮಹಾಬೆಲೆ ಕೊಡುವಂತೆ ವರ್ತಿಸಿದ್ದ ಈಕೆ, ತನ್ನ ಬಳ್ಳಾರಿ ಮಕ್ಕಳು ಏನು ಮಾಡುತ್ತಿದ್ದಾರೆ ಎಂಬುದನ್ನು ತಿಳಿಯದಿರುವಷ್ಟು ಮುಗ್ಧರೇ? ಮಂದಿರದ ಹೆಸರು ಹೇಳಿಕೊಂಡು ಅಧಿಕಾರಕ್ಕೆ ಬಂದ ಪಕ್ಷದ ಮೇರು ನಾಯಕಿಯಾದ ಈಕೆಗೆ ತನ್ನ ಮಕ್ಕಳು ನಾಶ ಮಾಡಿರುವ ಸುಂಕುಳಮ್ಮನ ದೇವಾಲಯದ ಕಥೆ ತಿಳಿದಿಲ್ಲವೆ? ಈಕೆಯೇನಾದರೂ ಪ್ರಧಾನಿಯಾದರೆ ಈ ದೇಶದ ಗತಿಯೇನಾದೀತು? 2007-08ನೇ ಸಾಲಿನಲ್ಲಿ 3 ಸಾವಿರ ಕೋಟಿ ಮೌಲ್ಯದ ಸುಮಾರು 47.33 ಲಕ್ಷ ಮೆಟ್ರಿಕ್ ಟನ್ ಅದಿರನ್ನು ಅಕ್ರಮವಾಗಿ ರಫ್ಪು ಮಾಡಲಾಗಿದೆ. ಹೀಗೆ ಅಕ್ರಮ ಗಣಿಗಾರಿಕೆ ಮಾಡಿ, ಅದಿರು ಸಾಗಾಟ ಮಾಡುತ್ತಿರು ವವರನ್ನು ಒಟ್ಟಾಗಿ ಬಲಿಹಾಕೋಣ ಬನ್ನಿ ಎಂದು ಪ್ರಸ್ತುತ ನಡೆಯುತ್ತಿರುವ ವಿಧಾನಸಭೆ ಅಧಿವೇಶನದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪನವರು ಹೇಳಿರುವುದನ್ನು ಕೇಳಿದರೆ ಅವರಿಗೂ ಅಕ್ರಮ ಗಣಿಗಾರಿಕೆ ಬಗ್ಗೆ ಅಸಮಾಧಾನ, ಹತಾಶೆ, ನೋವು ಎಲ್ಲವೂ ಇವೆ. ಆದರೆ ಬಿಜೆಪಿ ಸಂಸದೀಯ ಪಕ್ಷದ ನಾಯಕಿಯೇ ರೆಡ್ಡಿಗಳ ಬೆಂಬಲಕ್ಕೆ ನಿಂತಿರುವಾಗ ಅವರು ತಾನೇ ಏನು ಮಾಡಿಯಾರು?

“ಶ್ರೀರಾಮುಲು ಜತೆ ಮಾತನಾಡಬೇಕೆಂದಾಗಲೆಲ್ಲ 108ಕ್ಕೆ ಸಂಪರ್ಕಿಸಿ ಎಂದು ನಾನು ಸೂಚಿಸುತ್ತೇನೆ. ಇವತ್ತು ಕರ್ನಾಟಕದಲ್ಲಿ ಶ್ರೀರಾಮುಲು ಎಂದರೆ 108 ಎಂದೇ ಜನ ಗುರುತಿಸುವಷ್ಟು ಪ್ರಸಿದ್ಧ ರಾಗಿದ್ದಾರೆ” ಎಂದು ಸುಷ್ಮಾ ಹೊಗಳಿದ್ದಾರಲ್ಲಾ, ‘ಆಂಬುಲೆನ್ಸ್ ಸೇವೆ’ ಯನ್ನು ಈ ದೇಶದಲ್ಲಿ ಪ್ರಾರಂಭಿಸಿದ್ದೇ ಶ್ರೀರಾಮುಲು ಅವರೇನು? ದಿ ಎಮರ್ಜೆನ್ಸಿ ಮೇನೇಜ್‌ಮೆಂಟ್ ಆಂಡ್ ರೀಸರ್ಚ್ ಇನ್‌ಸ್ಟಿಟ್ಯೂಟ್(EMRI) ಎಂಬ ಸ್ವಯಂ ಸೇವಾಸಂಸ್ಥೆಯನ್ನು ಸ್ಥಾಪಿಸಿದ ‘ಸತ್ಯಂ’ ಸಾಫ್ಟ್‌ವೇರ್ ಕಂಪನಿಯ ಮಾಲೀಕ ರಾಮಲಿಂಗರಾಜು, ೨೦೦೫ರಲ್ಲೇ ಬಡವರಿಗೆ ಉಚಿತ ಆಂಬುಲೆನ್ಸ್ ಸೇವೆ ಆರಂಭಿಸಿದ್ದರು. ಸುಮಾರು ೮ ರಾಜ್ಯಗಳಲ್ಲಿ 1534 ಆಂಬುಲೆನ್ಸ್‌ಗಳನ್ನು ಈ ಸಂಸ್ಥೆ ಓಡಾಟಕ್ಕೆ ಬಿಟ್ಟಿದೆ. ಈಗ ರಾಜು ಎಲ್ಲಿದ್ದಾರೆ ಗೊತ್ತಲ್ಲವೆ?! ಜನರಿಗೆ ಮೋಸವೆಸಗಿ ದುಡ್ಡು ಮಾಡಿದವರಿಗೆ ಸಮಾಜಸೇವೆ ಎಂಬುದು ಒಂದು ಮುಖವಾಡವಷ್ಟೇ. ರಾಜು ಸತ್ಯಂ ಕಂಪನಿಯನ್ನು ಮುಳುಗಿಸಿ ಸಮಾಜ ಸೇವೆ ಹೆಸರಿನಲ್ಲಿ ವರ್ಚಸ್ಸು ಹೆಚ್ಚಿಸಿಕೊಳ್ಳಲು ಪ್ರಯತ್ನಿಸಿದರು, ರಾಮುಲು ಸರಕಾರಿ ದುಡ್ಡಿನಲ್ಲಿ ಸೇವೆಯ ಮುಖವಾಡ ಹಾಕಿಕೊಂಡು ಹೆಸರು ಗಳಿಸಲು ಯತ್ನಿಸುತ್ತಿದ್ದಾರೆ ಅಷ್ಟೇ. ಇಂತಹ ಉದಾಹರಣೆಗಳಿದ್ದರೂ ಏಕೆ ವಾಸ್ತವಕ್ಕೆ ದೂರವಾದ ಚಿತ್ರಣ ನೀಡಿ ಭ್ರಾಮಕ ಜಗತ್ತನ್ನು ಸೃಷ್ಟಿಸಲು ಯತ್ನಿಸುತ್ತಿದ್ದೀರಿ ಸುಷ್ಮಾ ಸ್ವರಾಜ್? ನಿಮ್ಮ ದತ್ತು ಪುತ್ರರ ವ್ಯಾಮೋಹದಲ್ಲಿ ಬಿಜೆಪಿಗಾಗಿ ಜೀವತೇದ ಕರುಳ ಕುಡಿಗಳೇ ಮೂಲೆಗುಂಪಾಗುತ್ತಿದ್ದಾರಲ್ಲಾ ಇದ್ಯಾವ ನ್ಯಾಯ?

ಅಹಾ, ಎಂಥಾ ಅಮ್ಮ ನೀನಮ್ಮಾ?

ರಾಮುಲು-ರೆಡ್ಡಿಗಳಂಥ ಮಕ್ಕಳನ್ನು ಪೋಷಿಸುತ್ತಿರುವ ನಿನ್ನಂಥ ಇನ್ನೊಂದಿಷ್ಟು ಅಮ್ಮಂದಿರಿದ್ದರೆ ನಮ್ಮ ರಾಜ್ಯ ‘ಬೇಕಾರ್’, ‘ಬೆಗ್ಗರ್’ ಆಗುವುದರಲ್ಲಿ ಯಾವ ಅನುಮಾನವೂ ಇಲ್ಲ ಕಣಮ್ಮಾ…

ಕೃಪೆ : ಪ್ರತಾಪ್ ಸಿಂಹ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ