ನನ್ನ ಬ್ಲಾಗ್ ಪಟ್ಟಿ

ಮಂಗಳವಾರ, ಆಗಸ್ಟ್ 24, 2010

ರವಿ ಬೆಳಗೆರೆ ನೀಡಿದ ಉತ್ತರ, ಅವರಿಗೆ ದೊರೆತ ಪ್ರತ್ಯುತ್ತರ

ಅಕ್ಟೋಬರ್ 16ರಂದುವಿಜಯ ಕರ್ನಾಟಕಪತ್ರಿಕೆಯ ಮುಖಪುಟದಲ್ಲಿಇಂಥ ಘಟನೆ ಬೇರೆ ಯಾವ ದೇಶದಲ್ಲಿ ನಡೆದೀತು?” ಎಂಬ ಶೀರ್ಷಿಕೆಯಡಿ ಖ್ಯಾತ ಸಾಹಿತಿ ಎಸ್.ಎಲ್. ಭೈರಪ್ಪನವರು ಬರೆದ ವಿಚಾರಪೂರ್ಣ ಲೇಖನವನ್ನು ಖಂಡಿತ ನೀವು ಓದಿರುತ್ತೀರಿ. ಅವರ ಲೇಖನಕ್ಕೆ ಪ್ರತಿಕ್ರಿಯಿಸಿ ಜನಪ್ರಿಯ ಪತ್ರಕರ್ತ ರವಿ ಬೆಳಗೆರೆಯವರು ಅಕ್ಟೋಬರ್ 19ರಂದುಭೈರಪ್ಪ ಇತಿಹಾಸಕಾರ, ಬರಹಗಾರ: ಸದ್ಯ ಮುತ್ಸದ್ದಿಯಲ್ಲ?” ಎಂಬ ಲೇಖನ ಬರೆದು ಹಿಗ್ಗಾಮುಗ್ಗ ತರಾಟೆಗೆ ತೆಗೆದುಕೊಂಡರು. ಅಕ್ಟೋಬರ್ 20ರಂದು ಉತ್ತರ ಪಡೆದುಕೊಳ್ಳುವ ಸರದಿ ರವಿ ಬೆಳಗೆರೆಯವರದ್ದಾಗಿತ್ತು. ಮಂಗಳೂರಿನ ರಾಮಚಂದ್ರ ಶೆಣೈ (None, but Myself!!) ನೀಡಿದ ಉತ್ತರ ಹಾಗೂ ರವಿ ಬೆಳಗೆರೆಯವರ ಲೇಖನಗಳರಡೂ ಇಲ್ಲಿವೆ-ಸಮಯವಿದ್ದಾಗ ಓದಿಕೊಳ್ಳಿ.

ಭೈರಪ್ಪ ಇತಿಹಾಸಕಾರ, ಬರಹಗಾರ: ಸದ್ಯ ಮುತ್ಸದ್ದಿಯಲ್ಲ?

ಅಕ್ಟೋಬರ್ 16, 2008ರ ವಿಜಯ ಕರ್ನಾಟಕ ಕೈಗೆತ್ತಿಕೊಳ್ಳುತ್ತಿ ದ್ದಂತೆಯೇ ಕಣ್ಣಿಗೆ ಬಿದ್ದುದು ಎಸ್.ಎಲ್. ಭೈರಪ್ಪನವರ ಸುದೀರ್ಘ ಲೇಖನ, ‘ಆವರಣ’ ಕಾದಂಬರಿ ಬರೆದು ಮುಗಿಸಿದ ಮೇಲೆ ಒಮ್ಮೆ ಅವರು ವಾಡಿಯಾ ರಸ್ತೆಯ ವರ್ಲ್ಡ್ ಕಲ್ಚರ್ ಕಟ್ಟಡದ ಅಂಗಳದಲ್ಲಿ ಸಿಕ್ಕಿದ್ದರು. ‘ಆವ ರಣ’ದ ಬಗ್ಗೆ ಪದೇಪದೆ ಪ್ರಶ್ನೆಗಳನ್ನು ಅಲ್ಲಿದ್ದವರು ಕೇಳಿದಾಗ,

‘ನನ್ನನ್ನು ಆವರಣದಿಂದ ಹೊರಕ್ಕೆ ಬರಲು ಬಿಡಿ. ಅದನ್ನು ಬರೆದಾಯಿತಲ್ಲ?’ ಅಂದಿದ್ದರು ಭೈರಪ್ಪ, ಕ್ರಿಯಾಶೀಲ ಲೇಖಕನೊಬ್ಬನ ಪ್ರಾಮಾಣಿಕ, ಸಾತ್ವಿಕ ಸಿಡುಕು ಆ ದನಿಯಲ್ಲಿತ್ತು. ನನಗೆ ಮತ್ತೇನನ್ನೋ ಬರೆಯ ಬೇಕಾಗಿದೆ. ಧೇನಿಸಬೇಕಾಗಿದೆ: ನನ್ನ ಪಾಡಿಗೆ ಬಿಡಿ ಎಂಬ ಸಿಡುಕು ಅದು ಅಂತ ನಾನು ಅರ್ಥಮಾಡಿಕೊಂಡಿದ್ದೆ. ಆದರೆ ವಿಜಯ ಕರ್ನಾಟಕದಲ್ಲಿ ಅವರ ಲೇಖನ ಓದಿದ ಮೇಲೆ, ಅವರು ‘ಆವರಣ’ದಿಂದ ಹೊರಬರು ವುದು ಹಾಗಿರಲಿ, ಪೂರ್ತಿ ಪೂರ್ತಿ ಗುಹಾಂತರಾಳವನ್ನೇ ಹೊಕ್ಕಂತೆ ಕಾಣುತ್ತಿದೆ. ಭೈರಪ್ಪ ವಿಪರೀತ paranoid ಆಗಿದ್ದಾರೆ. ತುಂಬ ಚೆಲುವಾಗಿ, ಮುದ ನೀಡಿ, ಯೋಚನೆಗೆ ಹಚ್ಚಿ, ಭಾವೋತ್ಕರ್ಷಕ್ಕೆ ಕೊಂಡೊಯ್ದು ಓದುಗನಿಗೊಂದು ಮಧುರಾನುಭೂತಿ ನೀಡುತ್ತಿದ್ದ ಭೈರಪ್ಪ ಇದೇಕೆ ಹೀಗೆ ’ ಎಲ್ಲ ಬಗೆಯ ಕರ್ಮಠ’ರಂತೆ ಬರೆಯತೊಡಗಿದ್ದಾರೆ?

‘ಎಲ್ಲ ಬಗೆಯ ಕರ್ಮಠರು’ ಎಂಬುದನ್ನು ನಾನು ಬಳಸಿದ್ದು ಹಿಂದೂ ಕರ್ಮಠರು, ಕರ್ಮಠ ಬ್ರಾಹ್ಮಣರು, ಕರ್ಮಠ ವೀರಶೈವರು, ಕರ್ಮಠ ಭಜರಂಗಿಗಳು, ಕರ್ಮಠ ಕಮ್ಯುನಿಸ್ಟರು, ಕರ್ಮಠ ನಕ್ಸಲರು ಎಂಬ ಅರ್ಥದಲ್ಲಿ. ಭೈರಪ್ಪನವರೂ ಸೇರಿದಂತೆ ನೀವು ಕೂಡ ಈ ಮಾತನ್ನು ಹೀಗೇ ಅರ್ಥಮಾಡಿಕೊಳ್ಳಬೇಕಾಗಿ ವಿನಂತಿ.

ನೀವು ಮತ್ತೇನೂ ಮಾಡಬೇಕಿಲ್ಲ. ಅಕ್ಟೋಬರ್ ೧೬ನೇ ತಾರೀಕಿನ ವಿಜಯ ಕರ್ನಾಟಕ ತೆರೆದು ಅದರಲ್ಲಿನ ಭೈರಪ್ಪನವರ ಲೇಖನವನ್ನು ಒಬ್ಬರೇ ಕುಳಿತು ದೊಡ್ಡ ದನಿಯಲ್ಲಿ ಓದಿಕೊಳ್ಳಿ. ಸ್ವಲ್ಪ ಹೊತ್ತಿಗೆ ನೀವು ಯಾರಿಗೋ ಲೆಕ್ಚರು ಕೊಡುತ್ತಿದ್ದೀರಿ ಎಂಬಂತೆ ಭಾಸವಾಗುತ್ತದೆ, ನಿಮಗೂ ಒಬ್ಬ ಕ್ರೈಸ್ತರ ಮತ ಬೋಧಕನಿಗೂ ವ್ಯತ್ಯಾಸವಿಲ್ಲ ಅನಿಸುತ್ತದೆ. ಹದಿನೈದು ಜನರನ್ನು ಕೂರಿಸಿಕೊಂಡು ಓದಿ ಬಿಡಿ: ನೀವು ಮುಸ್ಲಿಂ ಧರ್ಮ ಬೋಧಕನಂತೆ ಧ್ವನಿಸತೊಡಗುತ್ತೀರಿ. ಇದನ್ನೇ ನಾನು ಒಂದು ಬರಹದಲ್ಲಿ ನ ಕರ್ಮಠ ಗುಣ ಅನ್ನುವುದು. It starts Preaching. Writer starts barking. ಯಾವಾಗ ನಮ್ಮ ಬರವಣಿಗೆಗೆ ‘ಪ್ರವಾದೀ ಗುಣ’ ಬಂದು ಬಿಡುತ್ತದೋ, ಆವಾಗ ನಮ್ಮೊಳಗಿನ ಸೃಜನಶೀಲ ಬರಹಗಾರ ಸತ್ತು ಹೋಗಿ ಬಿಡುತ್ತಾನೆ. sorry, ಭೈರಪ್ಪ.

‘ಇಂಥ ಘಟನೆ ಯಾವ ದೇಶದಲ್ಲಿ ನಡೆದೀತು?’ ಎಂಬ ತಲೆಬರಹದೊಂದಿಗೆ ಸವಿಸ್ತಾರ ಲೇಖನ ಆರಂಭಿಸುವ ಭೈರಪ್ಪ ಉದ್ದಕ್ಕೂ ಕ್ರೈಸ್ತ ಮಿಷನರಿಗಳ ಮೇಲೆ ಹರಿಹಾಯು ತ್ತಾರೆ. ಅವರು ಎತ್ತುವ ಒಂದು ಪ್ರಶ್ನೆಗೆ ಮಾತ್ರ ನನ್ನ ಸಹಮತವಿದೆ. ‘ಸೆಪ್ಟೆಂಬರ್ ೧೧ರ ನಂತರ ಅಮೆರಿಕದಲ್ಲಿ ಒಂದೇ ಒಂದು ಮುಸ್ಲಿಂ ವಿಧ್ವಂಸಕ ಕೃತ್ಯ ನಡೆಯಲಿಲ್ಲ. ಭಾರತದಲ್ಲಿ ದಿನಕ್ಕೆ ಐದಾರು ಜನರನ್ನು ಕೊಲ್ಲುತ್ತಿದ್ದಾರೆ. ಹೀಗೇಕೆ?’ ಅಂತ ಭೈರಪ್ಪ ಕೇಳುವುದರಲ್ಲಿ Sence ಇದೆ. ಆದರೆ ಇನ್ನೊಂಚೂರು ಸಹನೆಯಿಟ್ಟುಕೊಂಡಿದ್ದಿದ್ದರೆ ಭೈರಪ್ಪನವರ ಪ್ರಶ್ನೆಗೂ ಉತ್ತರ ಸಿಗುತ್ತಿತ್ತು.

ಅಮೆರಿಕದಲ್ಲಿ ನಡೆಯದ ಮುಸ್ಲಿಂ ವಿಧ್ವಂಸಕ ಕೃತ್ಯಗಳು ಲಂಡನ್ನಲ್ಲಿ ನಡೆದವು. ಇಸ್ರೇಲ್ ಇವತ್ತಿಗೂ ಅದರ ತವರು. ಪಾಕಿಸ್ತಾನದಲ್ಲೇ ಜಿಹಾದಿಗಳು ಬೆನಜೀರ್ರನ್ನು ಕೊಂದರು. ಚೀನದಂತಹ ಕರ್ಮಠ ಕಮ್ಯುನಿಸ್ಟ್ ಖಬರ ಸ್ತಾನದಲ್ಲಿ ಮುಸ್ಲಿಮರು ತಿರುಗಿಬಿದ್ದರು. ಅಮೆರಿಕಕ್ಕೆ ತನ್ನ ದೇಶದ ಮಟ್ಟಿಗೆ ಮುಸ್ಲಿಂ ಭಯೋತ್ಪಾದನೆಯನ್ನು ಬಗ್ಗು ಬಡಿಯುವ ತಾಕತ್ತು (ಹಣವಿರುವುದರಿಂದಾಗಿ) ಇದೆಯೇ ಹೊರತು, ಅಫಘನಿಸ್ತಾನದಂತಹ ದೇಶದಲ್ಲಿ ಮುಸ್ಲಿಂ ಉಗ್ರರು ಅಮೆರಿಕಕ್ಕೆ ಇವತ್ತಿಗೂ ನೆಗ್ಗಲು ಮುಳ್ಳುಗಳೇ. Pan Islamism ಎಂಬುದು ರಾಕ್ಷಸ ಸ್ವರೂಪ ಪಡೆದು ಬಿಟ್ಟಿದೆಯೆಂಬುದು ನಿಜ. ಅದು ಆರಂಭಿಸಿರುವ ಜಾಗತಿಕ ಮಟ್ಟದ ಹಿಂಸೆಯನ್ನು ಯಾವ ರಾಜಕೀಯ ಮುತ್ಸದ್ದಿಯ ಇಚ್ಛಾಶಕ್ತಿಯೂ ತಮಣಿ ಮಾಡಲಾರದು. ಮುಸ್ಲಿಂ ಸಮುದಾಯದಲ್ಲೇ ಇವತ್ತು ಭಯೋತ್ಪಾದನೆಯ ವಿರುದ್ಧ ಜಾಗೃತಿ ಮೂಡಬೇಕು. ಅವರಿಂದಲೇ ಅವರ ಉಗ್ರವಾದ ಅಂತ್ಯವಾಗಬೇಕು. ಈಗಾಗಲೇ ಪಾಕಿಸ್ತಾನಿಗಳು ‘ಪಾನ್ ಇಸ್ಲಾಮಿಕ್ ಜಿಹಾದಿ’ಗಳ ವಿರುದ್ಧ ದನಿಯೆತ್ತ ತೊಡಗಿದ್ದಾರೆ.

ಆದರೆ ಭೈರಪ್ಪನವರ ತಕರಾರು ಈಗ ಮುಸಲರ ವಿರುದ್ಧ ಅಲ್ಲ. ಅದು ಕ್ರೈಸ್ತರ ವಿರುದ್ಧ. ಅವರ ಪ್ರಕಾರ ಏಸುವನ್ನು ಶಿಲುಬೆಗೆ ಏರಿಸಿದ್ದು ಯಹೂದಿಗಳಲ್ಲ. (ಹಾಗಾದರೆ ಮತ್ಯಾರೋ?) ಈಗ ಭಾರತದಲ್ಲಿ ಮತಾಂತರ ಎಷ್ಟು ಬಿರುಸಾಗಿ ನಡೆಯುತ್ತಿದೆ ಅಂದರೆ, ಆಂಧ್ರದ ಮುಖ್ಯಮಂತ್ರಿ (ಸ್ಯಾಮುಯೆಲ್) ರಾಜಶೇಖರ ರೆಡ್ಡಿ ಕೂಡ ಭೈರಪ್ಪನವರ ಪ್ರಕಾರ ಭಾರತದ ಐವರು ಕ್ರೈಸ್ತ ಮುಖ್ಯಮಂತ್ರಿಗಳಲ್ಲಿ ಒಬ್ಬರು ! ಅಂದರೆ, ಕ್ರಿಶ್ಚಿಯನ್ನರ ಸಂಖ್ಯೆ ಆ ಪರಿ ಹೆಚ್ಚಿದೆ ಎಂಬುದು ಭೈರಪ್ಪನವರ ಭಯ. ಅದು ಅವರದೇ ವಿನೂತನ ‘ವಾದ’ ಎಂಬಂತೆ ಲೇಖನ ದಲ್ಲಿ ಸಾದರಪಡಿಸುತ್ತಾರಾದರೂ, ಈ ಬಗ್ಗೆ ಒಂದು ವರ್ಷದ ಹಿಂದೆಯೇ ಲೇಖನಗಳು ದೇಶದ ನಾನಾ ಪತ್ರಿಕೆಗಳೂ ಸೇರಿದಂತೆ, ಇಂಟರ್ನೆಟ್ ತುಂಬ ಸರಿದಾಡಿವೆ. ಇಲ್ಲಿ ಭೈರಪ್ಪನವರಿಗೆ ಒಂದೆರಡು ಅಂಶಗಳನ್ನು ಸ್ಪಷ್ಟಪಡಿಸಲು ಯತ್ನಿಸುತ್ತೇನೆ. ನೀವು ಆಂಧ್ರದ ಮುಖ್ಯಮಂತ್ರಿ ವೈ.ಎಸ್. ರಾಜಶೇಖರ ರೆಡ್ಡಿ ಅವರನ್ನು ಕ್ರೈಸ್ತರು ಅಂತ ಭಾವಿಸಿದ್ದರೆ ಅದಕ್ಕಿಂತ ಅಪದ್ಧ ಮತ್ತೊಂದಿಲ್ಲ. ಅವರ ಪೂರ್ವಜರ್ಯಾರೋ ಕ್ರೈಸ್ತರಾಗಿದ್ದಿರಬಹುದು. ಆದರೆ ಬೀಗತನಗಳಿಂದ ಹಿಡಿದು ರಾಜಕಾರಣದ ತನಕ ರಾಜಶೇಖರ ರೆಡ್ಡಿಯವರು ಶುದ್ಧಾನು ಶುದ್ಧ ರೆಡ್ಡಿಯೇ. ಆಂಧ್ರದಲ್ಲಿ ರೆಡ್ಡಿ-ಕಮ್ಮ-ಕಾಪು ಕದನ ತಲಾಂತರಗಳಿಂದ ನಡೆದುಬಂದಿದೆ. ಅದರ ಚುಕ್ಕಾಣಿ ಹಿಡಿದು ‘ರೆಡ್ಡಿ ರಾಜತ್ವ’ ಸ್ಥಾಪಿಸಿರುವುದೇ ರಾಜಶೇಖರ ರೆಡ್ಡಿ.

ಇನ್ನು ‘ಮಣಿಪುರ, ನಾಗಾಲ್ಯಾಂಡ್’ಗಳ ಜನರೆಲ್ಲ ಕ್ರೈಸ್ತ ರಾಗಿದ್ದಾರೆ’ ಎಂಬುದನ್ನು ಹೊಸ (ಸ್ವಂತ) ಕೂಗೇನೋ ಎಂಬಂತೆ ಎಬ್ಬಿಸುತ್ತಿದ್ದಾರೆ ಭೈರಪ್ಪ. ಅದು ಕೂಡ ಹಳೇ ಸಂಗತಿಯೇ. ಭಾರತದ ಒಟ್ಟಾರೆ ಹಿಂದೂ ಜನಸಂಖ್ಯೆಗೆ ಹೋಲಿಸಿಕೊಂಡರೆ, ಮಣಿಪುರ-ನಾಗಾಲ್ಯಾಂಡ್ಗಳ ಸಮಸ್ಯೆ ತುಂಬಾ ಬೃಹತ್ತಾಗಿ ಕಾಣುವುದಿಲ್ಲ. ಹಿಂದೂ ಜನಸಂಖ್ಯೆಯೂ ವಾಕರಿಕೆ ಬರುವಷ್ಟು ಬೆಳೆದಿದೆ. ಆದರೆ ಇಲ್ಲಿ ಗಮನಿಸಬೇಕಾದ ಸಂಗತಿಯೆಂದರೆ, ಮಣಿಪುರ- ನಾಗಾಲ್ಯಾಂಡ್ ಇತ್ಯಾದಿಗಳಲ್ಲಿ ಕ್ರೈಸ್ತರಾಗಿ ಮತಾಂತರ ಹೊಂದಿರುವವರು ಮೊದಲು ಹಿಂದೂಗಳಾಗಿದ್ದವರಲ್ಲ. ಅವರಲ್ಲಿ ಹೆಚ್ಚಿನವರು ಬುಡಕಟ್ಟುಗಳವರು. ತಪ್ಪಿದರೆ ಬೌದ್ಧರು. ಆದರೆ ಅಲ್ಲಿ ಸಾಮೂಹಿಕ ಕ್ರೈಸ್ತ ಮತಾಂತರ ಗಳಾಗಿರುವುದು ಮಾತ್ರ ನಿಜ. ಇಂಥ ಮತಾಂತರಗಳು ಉಗಾಂಡಾ, ಕೀನ್ಯಾ, ಝೈರೆ, ತಾಂಜೀನಿಯಾದಂತಹ ದೇಶಗಳಲ್ಲೂ ಆದವು. ಏಕೆಂದರೆ, ಅಲ್ಲಿ ಕ್ರೈಸ್ತ ಮಿಷನರಿಗಳು ಕಾಲಿಡುವುದಕ್ಕೆ ಮುಂಚೆ ಯಾವುದೇ ಒಂದು ಧರ್ಮ ಪ್ರಬಲವಾಗಿರಲಿಲ್ಲ. ಎರಡನೆಯದಾಗಿ, ಕ್ರೈಸ್ತ ಮಿಷನರಿಗಳು ಒಂದು ಕೈಲಿ ಆಸ್ಪತ್ರೆ, ಇನ್ನೊಂದು ಕೈಲಿ ಸ್ಕೂಲು, ಕಿಸೆಯಲ್ಲಿ ಕಾಸು, ಕೊರಳಿಗೆ ಏಸು- ಹೊತ್ತುಕೊಂಡೇ ಉಗಾಂಡಾದಂಥ ಬುಡಕಟ್ಟು ಹಾಗೂ Virgin landಗಳಿಗೆ ಹೋದರು. ಮುಸ್ಲಿಮರು ಒದ್ದು ಮತಾಂತರಗೊಳಿಸಿದರೆ ಕ್ರೈಸ್ತರು ಕಾಸು ಕೊಟ್ಟು, ಬೇರೆಯದೇ ತೆರೆನಾದ ಭೀತಿ ಹುಟ್ಟಿಸಿ ಪ್ರಬಲ ಧರ್ಮದ ಮುಂದಾಳತ್ವವಿಲ್ಲದ ಬುಡಕಟ್ಟು, ಬಡವ ಮತ್ತು ಧಾರ್ಮಿಕ ಅಮಾಯಕರನ್ನು ಮತಾಂತರಗೊಳಿಸುತ್ತಾರೆ.

ಇದನ್ನೆಲ್ಲ ಭೈರಪ್ಪನವರೂ ಸರಿಯಾಗಿಯೇ ಅರ್ಥ ಮಾಡಿಕೊಳ್ಳುತ್ತಾರೆ. ಆದರೆ ಇದ್ದಕ್ಕಿದ್ದಂತೆ ಅವರು fanatic (ಮತಭ್ರಾಂತ) ಹಿಂದೂ ಆಗಿಬಿಡುತ್ತಾರೆ. ಅಲ್ಲಾಹುನನ್ನು ನಂಬದಿರುವವರನ್ನು ಕೊಲ್ಲಿರಿ ಎಂದು ಕುರ್-ಆನ್ ಹೇಳಿದಂತೆಯೇ (ಆವರಣದ ಅವರ ವಾದ ಇದು) ಆತನನ್ನು ಶಿಲುಬೆಗೇರಿಸಿದ್ದೇ ಕಟ್ಟು ಕತೆ ಅಂತ ವಿತಂಡ ವಾದ ಮಂಡಿಸ ಹೊರಡುತ್ತಾರೆ. ಭೈರಪ್ಪನವರು ತಿಳಿದುಕೊಳ್ಳಬೇಕಾದ ಐತಿಹಾಸಿಕ ಸತ್ಯವೊಂದಿದೆ: ಅದೇನೆಂದರೆ, ಪ್ರತಿ ಪ್ರವಾದಿಯೂ ದೇವರಿಗೆ mediator ಆಗಿ ಹುಟ್ಟಿದವನೇ. ಪ್ರತಿ ಧರ್ಮವೂ ಮೂಲದಲ್ಲಿ ಶ್ರೇಷ್ಠವಾಗಿದ್ದುಕೊಂಡು ಕಾಲಾಂತರದಲ್ಲಿ fanatic ಸ್ವರೂಪ ಪಡೆದಂತಹುದೇ. ಶಂಕರಾಚಾರ್ಯರು ಕೂಡ ಅಗ್ರೆಸಿವ್ ಸ್ವರೂಪ ತಾಳಿದವರೇ. ಬುದ್ಧನ ಶಿಷ್ಯರೂ ಕೊಡಲಿ ಕೈಗೆತ್ತಿಕೊಂಡವರೇ. ಅಂಥದರಲ್ಲಿ ಪೋರ್ಚು ಗೀಸರು ಹೊರಡಿಸಿದ ಫರ್ಮಾನುಗಳನ್ನೂ, ಇಂಗ್ಲಿಷರು ಕಾಫಿ ತೋಟ ಕಿತ್ತುಕೊಂಡ ಬಗೆಯನ್ನೂ, ಮದರ್ ಥೆರೇಸಾ ಮಾಡಿದ ಮಾನವ ಸೇವೆಯನ್ನೂ ಒಂದೇ ತಕ್ಕಡಿ ಯಲ್ಲಿಟ್ಟು ತೂಗುವುದು at least, ಭೈರಪ್ಪನವರಿಗೆ ತರವಲ್ಲ. ಕುಷ್ಠರನ್ನ, ಕೊಳೆತು ಹೋದವರನ್ನ, ಸಾಯಲನುವಾದವರನ್ನ ಮತಾಂತರಗೊಳಿಸಿ ಥೆರೇಸಾಗೆ ಆಗಬೇಕಾದ್ದಾದರೂ ಏನಿತ್ತು? ಆಯ್ತು, ಆಕೆ ಅನಾಥ ಮಕ್ಕಳಿಗೆಲ್ಲ ಶಿಲುಬೆ ಹಾಕಿದಳು: ಆದರೆ ಸಿದ್ದಗಂಗೆಯ ಶ್ರೀಗಳು ಯಾವ ಬಡವನಿಗೂ ಲಿಂಗ ಕಟ್ಟಲಿಲ್ಲ ಎಂಬ ಭೈರಪ್ಪನವರ ವಾದವನ್ನೇ ಒಪ್ಪಿಕೊಳ್ಳೋಣ. ಆದರೆ ಭೈರಪ್ಪ ಯಾವ extremityಗೆ ಹೋಗುತ್ತಾರೆಂದರೆ, ‘ಥೆರೇಸಾಗೆ ಸಿಕ್ಕ ಗೌರವ ಸಿದ್ದಗಂಗೆ ಶ್ರೀಗಳಿಗೆ ಯಾಕೆ ಸಿಗಲಿಲ್ಲ’ ಅಂತ ವಾದಿಸುತ್ತಾರೆ. (ಥೆರೇಸಾಗೆ ಸಿಕ್ಕ ಗೌರವ ಲಿಂಗಾಯತರ ಮಾತೆ ಮಹಾದೇವಿಗೆ ಸಿಕ್ಕಿದ್ದಿದ್ದರೆ ಭೈರಪ್ಪ ಸಿಟ್ಟಾಗ ಬೇಕಿತ್ತು! ಹ್ಹ)

ಇತಿಹಾಸಕ್ಕೆ ಸಂಬಂಧಿಸಿದಂತೆ ಒಂದು ಸರಿಯಾದ ಪರಿಕಲ್ಪನೆ ಇಲ್ಲದೆ ಹೋದರೆ ಹೀಗಾಗುತ್ತದೆ. Basically, ಸಿದ್ದಗಂಗೆಯ ಶ್ರೀಗಳನ್ನು ತಾಯಿ ಥೆರೇಸಾಗೆ ಹೋಲಿಸುವುದೇ ತಪ್ಪು. ಅವರ ಕೆಲಸ, ವ್ಯಾಪ್ತಿ, ಉದ್ದೇಶ ಮತ್ತು reach ಎಲ್ಲವೂ ಬೇರೆಬೇರೆ. ಸಿದ್ದಗಂಗೆ ಶ್ರೀಗಳು ಪಾಠ ಹೇಳಿದರು, ಮಠದಲ್ಲಿ ಮಕ್ಕಳನ್ನಿಟ್ಟುಕೊಂಡರು. ಮಠದ ಕೀರ್ತಿ ಹೆಚ್ಚಿಸಿದರು. (ಕೊಂಚ ತಿರುಗಿಬಿದ್ದ ಕಿರಿಯ ಶ್ರೀಗಳನ್ನು ಎಡಗಾಲಲ್ಲಿ ತುಳಿದು ಸರ್ವನಾಶ ಮಾಡುತ್ತಿದ್ದರೆ ಸಣ್ಣ ಆಕ್ಷೇಪವೂ ಎತ್ತದೆ ಸುಮ್ಮನಿದ್ದರು. ಆ ಮಾತು ಬೇರೆ.) ಆದರೆ ಶ್ರೀಗಳು ಯಾವತ್ತಿಗೂ ಕುಷ್ಠರನ್ನು, ಕೊಳೆತವರನ್ನು ಮುಟ್ಟಲಿಲ್ಲ. ಚರಂಡಿಯಲ್ಲಿ ಹುಳು ಹಿಡಿದು ಮಲಗಿದ ನಿರ್ಗತಿಕನನ್ನು ಅವಚಿ ಎದೆಗಪ್ಪಿಕೊಳ್ಳಲಿಲ್ಲ. ಅವರು ಆಯ್ದುಕೊಂಡ ರಂಗವೇ ಬೇರೆಯಾಗಿದ್ದರಿಂದ, ಅವರ ಕೀರ್ತಿ ಕರ್ನಾಟಕದ ಆಸುಪಾಸು ಬಿಟ್ಟು ಆಚೆಗೆ ಹೋಗಲಿಲ್ಲ. ಇನ್ನು ಮಾಧ್ಯಮಗಳು, ಅದರಲ್ಲೂ ಇಂಗ್ಲಿಷ್ ಮಾಧ್ಯಮಗಳು ಥೆರೇಸಾಗೆ ಅನವಶ್ಯಕ ಪ್ರಚಾರ ಕೊಟ್ಟವು ಎನ್ನುತ್ತಾರೆ ಭೈರಪ್ಪ. Once again,ಸಿದ್ದಗಂಗಾ ಶ್ರೀಗಳು ಕರ್ನಾಟಕಕ್ಕೆ ಸಂಬಂಧಪಟ್ಟವರು. ಅವರು, ಅವರ ಶಿಕ್ಷಣ ಕ್ಷೇತ್ರ, ಅವರ ಮಠ ಇಲ್ಲಿಗೆ ಸೀಮಿತವಾದುದು. ಅದರಾಚೆಗಿನ ಮನುಷ್ಯ, he is not interested. ಅಷ್ಟೇಕೆ, ಗುಜರಾತಿಗೆ ಹೋಗಿ ನೀವು ಸತತ ಹದಿನೈದು ದಿನ ರಾಘವೇಂದ್ರ ಸ್ವಾಮಿಗಳ ಭಜನೆ ಮಾಡಿ. ಅದು ಪರಿಣಾಮ ಬೀರುವುದಿಲ್ಲ. ಏಕೆಂದರೆ issue ಅಲ್ಲಿಗೆ ಸಂಬಂಧಪಟ್ಟುದಾಗಿರುವುದಿಲ್ಲ. ಥೆರೇಸಾ ಅಥವಾ ಬಾಬಾ ಆಮ್ಟೆ ಈ ಪರಿಧಿಯನ್ನು ದಾಟಿದವರು. ಅವರು ಸಿದ್ದಗಂಗಾ ಶ್ರೀಗಳಿಗಿಂತ ಉತ್ತಮರು ಅಂತ ನಾನು ವಾದಿಸುತ್ತಿಲ್ಲ. ಅವರು ಆರಿಸಿಕೊಂಡ ಕ್ಷೇತ್ರ ಶ್ರೀಗಳ ಕ್ಷೇತ್ರಕ್ಕಿಂತ ವಿಸ್ತಾರವಾದದ್ದು. ಇಡೀ ದೇಶಕ್ಕೆ, ಪ್ರಪಂಚಕ್ಕೆ, ಮನುಕುಲಕ್ಕೆ ಸಂಬಂಧಿಸಿದ್ದು.

ಇಷ್ಟಾಗಿ ಥೆರೇಸಾ ತುಂಬಾ subtle ಆಗಿ ಅನಾಥ ಹಿಂದೂ(?) ಕಂದಮ್ಮಗಳನ್ನು ಸದ್ದಿಲ್ಲದೆ ಮತಾಂತರ ಗೊಳಿಸಿದ ರಾಕ್ಷಸಿ ಅಂತಲೇ ಇಟ್ಟುಕೊಳ್ಳೋಣ. ಅವೇ ಅನಾಥ ಹಿಂದೂ ಕಂದಮ್ಮಗಳನ್ನು ಎದೆಗವಚಿಕೊಂಡು ‘ನಾನು ಸಾಕುತ್ತೇನೆ’ ಅಂದಂಥ ಒಬ್ಬ ಹಿಂದೂ ಮಾತೃದೇವತೆ ಹುಟ್ಟಲಿಲ್ಲವಲ್ಲ ಸ್ವಾಮಿ? ಅದೂ ಇಷ್ಟು ದೊಡ್ಡ ಭಾರತದಲ್ಲಿ!

ನೋಡಿ, ಮನಸ್ಸು ಜಡಗೊಂಡರೆ ವಿವೇಕ ಸತ್ತು ಹೋಗುತ್ತದೆ. ವಾದ ವಿತಂಡವೂ, ಬರಹ ವಾಚಾಮವೂ ಆಗುತ್ತದೆ. ಭೈರಪ್ಪನವರ ವಿಷಯದಲ್ಲಿ ಅದೇ ಆಗತೊಡಗಿದೆ. ಇಂಗ್ಲಿಷರ ವಿರುದ್ಧ ಬಂಡೆದ್ದ ಬಾಪೂ ಸ್ವದೇಶಿ ಕಾಲೇಜು, ಬಟ್ಟೆ, ಬ್ಯಾಂಕು-ಹೀಗೆ ಪ್ರತಿ ಯೊಂದಕ್ಕೂ ಸ್ವದೇಶಿ ಪರ್ಯಾಯವನ್ನು ಹುಡುಕಿ ಚಳವಳಿಯನ್ನು ಮುನ್ನಡೆಸಿದರು. ಭೈರಪ್ಪನವರಲ್ಲಿ ಅಂಥ ಯಾವ ಲಕ್ಷಣವೂ ಕಾಣುತ್ತಿಲ್ಲ. ಅವರು ಮತಾಂತರಕ್ಕೆ ಯಾವ ಪರಿಹಾರವನ್ನೂ ಸೂಚಿಸುತ್ತಿಲ್ಲ. ಪೊಲೀಸರನ್ನಿಟ್ಟು ಮಿಷನರಿಗಳನ್ನು ಒದ್ದೋಡಿಸಿ ಎಂಬ ಧಾಟಿಯಲ್ಲಿ ಮಾತಾಡುತ್ತಾರೆ. ಇವರಿಗೂ ಪೋರ್ಚುಗೀಸರಿಗೂ ಯಾವ ವ್ಯತ್ಯಾಸ ಉಳಿಯಿತು? ಭೈರಪ್ಪನವರು ಯಾವ ತಲೆಮಾರನ್ನು ಲೀಡ್ ಮಾಡಲು ಹೊರಟಿದ್ದಾರೆ? (‘ನಂಗೆ ಆ ಉದ್ದೇಶವೇ ಇಲ್ಲ’ ಅಂತ ಪ್ರತಿಕ್ರಿಯಿಸಿ ಮುಟ್ಟಾಗುವುದು ಬೇಡ. Please)

ಇವತ್ತು ಭೈರಪ್ಪ ನೆನಪು ಮಾಡಿಕೊಳ್ಳಬೇಕಾದುದು ಪ್ರೊ. ನಂಜುಂಡಸ್ವಾಮಿಯಂತಹ ಚಿಂತಕರನ್ನ. ಕರ್ನಾ ಟಕಕ್ಕೆ after all, ಒಂದು ಕೋಳಿ ಮಾಂಸ ಮಾರುವ ಅಂಗಡಿ ಬರುತ್ತದೆ ಅಂದದ್ದಕ್ಕೆ ಭೂಮಿ ಆಕಾಶ ಒಂದು ಮಾಡಿ ಕೂಗಾಡಿದ್ದರು ಪ್ರೊಫೆಸರ್. ಏಕೆಂದರೆ, ಅವರಿಗೆ ಗೊತ್ತಿತ್ತು: ಒಬ್ಬ ಮಿಷನರಿ ಬರುವುದಕ್ಕಿಂತ ಒಬ್ಬ ವ್ಯಾಪಾರಿ ಬರುವುದು ದೇಶಕ್ಕೆ ಗಂಡಾಂತರಕಾರಿ ! ಅವರ ಮಾತು ಯಾರೂ ಕಿವಿಗೆ ಹಾಕಿಕೊಳ್ಳಲಿಲ್ಲ. ಅಕ್ಕಿ ಬೆಳೆಯುತ್ತಿದ್ದ ನೆಲದಲ್ಲಿ ಕಂಪ್ಯೂಟರ್ ಬೆಳೆ ಬೆಳೆಯಿತು. ಕೋಟ್ಯಂತರ ರೂಪಾಯಿ ಬಂದೇ ಬಿಟ್ಟಿತೇನೋ ಎಂಬಂತೆ ಭಾಸವಾಯಿತು. ದೊಡ್ಡದೊಂದು ಐಟಿ-ಬಿಟಿ ಗುಳ್ಳೆ ಎದ್ದು ನಿಂತಿತು. ಅದಕ್ಕೀಗ ಸೂಜಿ ಚುಚ್ಚಲಾಗಿದೆ. ಅಮೆರಿಕದಲ್ಲಿ ಬಡವರಿಗೆ (I mean, ಆದಾಯವಿಲ್ಲದ high risk group peopleಗೆ) ಮನೆ ಸಾಲ ಕೊಡುವುದರಲ್ಲಿ ಆದ ಚಿಕ್ಕದೊಂದು ಯಡವಟ್ಟು ಇಡೀ ಜಗತ್ತಿನ ಎಕಾನಮಿಗೆ ಹೊಡೆತ ಕೊಡುತ್ತಿದೆ. ಷೇರು ಮಾರ್ಕೆಟ್ ಮಣ್ಣು ಮುಕ್ಕಿದೆ. ರಿಯಲ್ ಎಸ್ಟೇಟ್ ಬೋರಲು ಬಿದ್ದಿದೆ. ಲಕ್ಷಾಂತರ ಸಂಬಳ ತರುತ್ತೇವೆಂದು ಇಲ್ಲಿಂದ ಹೋದವರು ಕ್ರಮೇಣ ಹಿಂತಿರುಗುತ್ತಿದ್ದಾರೆ. ಎಲ್ಲ ವೈಭವ ಕಳಚಿ ಬೀಳುತ್ತಿದೆ. ಇನ್ನು ಸರದಿಯಿಟ್ಟು ಭಾರತಕ್ಕೆ ಎಲ್ಲರೂ ಹಿಂತಿರುಗುತ್ತಾರೆ. ಬೋಧಿಸಲಿ ಅವರಿಗೆ ಹಿಂದೂ ಧರ್ಮವನ್ನು ಭೈರಪ್ಪ.

ಪ್ರಯಾರಿಟಿಗಳನ್ನು ಇತಿಹಾಸಕಾರ ಮುತ್ಸದ್ದಿ ಮತ್ತು ಬರಹಗಾರ ಯಾವತ್ತಿಗೂ ಮರೆಯಬಾರದು. ಭೈರಪ್ಪನವರು ಇತಿಹಾಸಕಾರರೂ ಹೌದು, ಬರಹಗಾರರೂ ಹೌದು. ಸದ್ಯ, ಮುತ್ಸದ್ದಿಯಲ್ಲ.

-ರವಿ ಬೆಳಗೆರೆ
ಭೈರಪ್ಪ ‘ಮುತ್ಸದ್ದಿ’ಯಲ್ಲ ಅಂತ ಸರ್ಟಿಫಿಕೆಟ್ ಕೊಡಲು ಇವರ್ಯಾರು?

ನಿಮಗೆ ಸಮಯವಿದ್ದರೆ, ಈ ದೇಶದಲ್ಲಿ ಏನು ನಡೆಯುತ್ತಿದೆ ಎಂಬುದನ್ನು ಸರಿಯಾಗಿ ಅರ್ಥಮಾಡಿಕೊಳ್ಳಬೇಕು ಎಂಬ ಇಚ್ಛೆ ನಿಮ್ಮಲ್ಲಿದ್ದರೆ ಕೊನ್ರಾಡ್ ಎಲ್ಟ್ಸ್ ಬರೆದಿರುವ “Negationism in India” ಎಂಬ ಪುಸ್ತಕವನ್ನು ಒಮ್ಮೆ ಓದಿ.

ಭಾರತದಲ್ಲಿ ಮುಸ್ಲಿಮ್ ಆಕ್ರಮಣಕಾರರು, ಆಡಳಿತಗಾರರು ನಡೆಸಿದ ದೌರ್ಜನ್ಯವನ್ನು ಹೇಗೆ ಮರೆಮಾಚಲಾಗುತ್ತಿದೆ ಎಂಬುದನ್ನು ಬಯಲು ಮಾಡಲು ಯತ್ನಿಸಿರುವ ಎಲ್ಟ್ಸ್, ಮೊದಲಿಗೆ ಯುರೋಪ್ನಲ್ಲಿ ನಡೆದ ಇಂತಹದ್ದೇ ಪ್ರಯತ್ನಗಳ ಬಗ್ಗೆ ಬೆಳಕು ಚೆಲ್ಲುತ್ತಾರೆ. “ಇಲ್ಲ, ಇಲ್ಲ.. ಹಿಟ್ಲರ್ ಯಹೂದಿಗಳ ಮಾರಣಹೋಮವನ್ನೇ ಮಾಡಲಿಲ್ಲ. ಅಲ್ಲೊಂದು ಇಲ್ಲೊಂದು ದೌರ್ಜನ್ಯಗಳು ನಡೆದವಷ್ಟೇ. ಜರ್ಮನಿ ಹಾಗೂ ರಷ್ಯಾದಲ್ಲಿ ಹೋಲೋಕಾಸ್ಟ್ ನಡೆಯಲೇ ಇಲ್ಲ” ಎಂದು ವಾಸ್ತವ ಸತ್ಯವನ್ನೇ ಮರೆಮಾಚುವ ಪ್ರಯತ್ನ ಯುರೋಪ್ನಲ್ಲಿ ನಡೆದಿತ್ತು. ಹಾಗಂತ ಉದಾಹರಣೆ ಸಮೇತವಾಗಿ ಭಾರತದ ಮೇಲೆ ಬೆಳಕು ಚೆಲ್ಲುವ ಎಲ್ಟ್ಸ್, ಒಂದು ಸಾವಿರ ವರ್ಷಗಳ ಕಾಲ ಮುಸ್ಲಿಮರು ನಡೆಸಿದ ದೌರ್ಜನ್ಯಗಳನ್ನು ನಮ್ಮ ಇತಿಹಾಸಕಾರರು ಹೇಗೆ ಮುಚ್ಚಿಹಾಕುತ್ತಾ ಬಂದಿದ್ದಾರೆ, ಹೇಗೆ ದೌರ್ಜನ್ಯವೇ ನಡೆದಿಲ್ಲ ಎಂದು ನಿರಾಕರಿ ಸುತ್ತಾರೆ ಎಂಬುದನ್ನು ವಿವರಿಸುತ್ತಾರೆ.

ಅಯೋಧ್ಯೆ ವಿಷಯದಲ್ಲೂ ಹೀಗೇ ಆಯಿತು.

ಮೊದಲಿಗೆ, ಅಲ್ಲಿ ರಾಮನ ದೇವಸ್ಥಾನವೇ ಇರಲಿಲ್ಲ ಎಂದು ನಿರಾಕರಿಸಿದರು. ಇತ್ತು ಎಂದು ಗಟ್ಟಿಯಾಗಿ ವಾದಿಸಿದ ಕೂಡಲೇ, ‘ಹಾಗಾದರೆ ರಾಮ ಅಲ್ಲೇ ಜನಿಸಿದ ಎಂಬುದಕ್ಕೆ ಸಾಕ್ಷ್ಯಾಧಾರ ಗಳನ್ನು ಕೊಡಿ’ ಎಂದು ಕೇಳಿದರು. ಸಾಕ್ಷ್ಯಾಧಾರಗಳನ್ನು ಕೊಟ್ಟ ಕೂಡಲೇ, “ಇಲ್ಲ, ಇಲ್ಲ, ಇಷ್ಟು ಸಾಕಾಗುವುದಿಲ್ಲ. ಇನ್ನೂ ಗಟ್ಟಿಯಾದ, ನಂಬುವಂತಹ ಸಾಕ್ಷ್ಯ ನೀಡಿ” ಎಂದು ಒತ್ತಾಯಿಸಿ ದರು. ಅಂತಹ ಪ್ರಭಲವಾದ ಸಾಕ್ಷ್ಯವೂ ಇದೆ ಎಂದು ಗೊತ್ತಾದರೆ ಏನು ಮಾಡುತ್ತಾರೆ ಗೊತ್ತೆ? ಎರಡು ತಂತ್ರಗಳನ್ನು ಒಡ್ಡುತ್ತಾರೆ. ಎಂದೋ ನಡೆದ ಘಟನೆಯ ಬಗ್ಗೆ ಇಂದಿಗೂ ಚರ್ಚೆ ನಡೆಸುವುದು ಎಷ್ಟು ಸರಿ? ಹಳೆಯದ್ದನ್ನೆಲ್ಲಾ ನಾವು ಮರೆತು ಹೊಸ ಸಮಾಜವನ್ನು ಕಟ್ಟಬೇಕು. ಇಂದು ನಮ್ಮ ಮುಂದಿರುವ ಸಮಸ್ಯೆ ಎಂದರೆ ಉತ್ತಮ ರಸ್ತೆಗಳು ಬೇಕು, ಎಲ್ಲರಿಗೂ ಗುಣಮಟ್ಟದ ಶಿಕ್ಷಣ ಸಿಗಬೇಕು, ಫೋನು, ವಿದ್ಯುತ್ ನಮಗೆ ಬೇಕು. ಹಳೆಯದ್ದನ್ನೆಲ್ಲ ಕೆದಕಿ ತೆಗೆಯಬಾರದು ಎಂದು ನಿಮ್ಮ ತಲೆಸವರಲು ಯತ್ನಿಸುತ್ತಾರೆ. ಒಂದು ವೇಳೆ ನೀವೇನಾದರೂ ಅಂತಹ ಮಾತುಗಳಿಗೆ ಸೊಪ್ಪುಹಾಕದಿದ್ದರೆ, “ಮುಸ್ಲಿಮರು ಭಾರತಕ್ಕೆ ಆಗಮಿಸಲು ನಮ್ಮಲ್ಲಿನ ಜಾತಿ ಪದ್ಧತಿಯೇ ಕಾರಣ. ದಲಿತರನ್ನು ದೂರವಿಟ್ಟಿದ್ದ ಸಾಮಾಜಿಕ ಅಸಮಾನತೆಯೇ ಮುಖ್ಯ ಕಾರಣ. ನಾವು ದಲಿತರನ್ನು ಸಮಾನವಾಗಿ ಕಂಡಿದ್ದರೆ, ನಡೆಸಿಕೊಂಡಿದ್ದರೆ ಜಾತಿ ಹೆಸರಿನಲ್ಲಿ ಸಮಾಜವನ್ನು ಒಡೆಯದಿದ್ದರೆ ಪರಕೀಯರು ನಮ್ಮ ಮೇಲೆ ಆಕ್ರಮಣ ಮಾಡಲು ಸಾಧ್ಯವಾಗುತ್ತಿತ್ತೇ?” ಎಂದು ವಿಷಯಾಂತರ ಮಾಡಲು ಯತ್ನಿಸುತ್ತಾರೆ.

ಹೀಗೆ ಒಂದು ಗಂಭೀರ ಸಮಸ್ಯೆ, ಐತಿಹಾಸಿಕ ದೌರ್ಜನ್ಯದ ಬಗೆಗಿನ ಚರ್ಚೆಯನ್ನು ದಾರಿತಪ್ಪಿಸಿ ಸಾಮಾಜಿಕ ಅಸಮಾನತೆಯ ಹೆಸರಿನಲ್ಲಿ ಜಾತಿ ಜಾತಿಗಳ ನಡುವೆಯೇ ಕಲಹವನ್ನು ತಂದಿಡು ತ್ತಾರೆ.

ಕಮ್ಯುನಿಸ್ಟರು ಮಾಡಿಕೊಂಡು ಬಂದಿರುವುದು ಇದನ್ನೇ. ಒಂದು ವೇಳೆ, ನಿಮ್ಮನ್ನು ಮನವೊಲಿಸಬಹುದಾಗಿದ್ದರೆ ತಮ್ಮ ಪ್ರತಿಭೆ, ವಾಕ್ಚಾತುರ್ಯವನ್ನು ಬಳಸಿ ನಿಮ್ಮನ್ನು ಮಂಗನನ್ನಾಗಿ ಮಾಡುತ್ತಾರೆ. ವಾದದಲ್ಲಿ ಗೆಲ್ಲಲು ಸಾಧ್ಯವಿಲ್ಲ ಎಂದು ಗೊತ್ತಾದ ಕೂಡಲೇ ನಿಮ್ಮನ್ನು confuse ಮಾಡಲು, ಕೊನೆಗೆ Discredit ಮಾಡಲು ಯತ್ನಿಸುತ್ತಾರೆ. ತರ್ಕದಲ್ಲಿ ಸೋಲಿಸಲಾಗದಿದ್ದರೆ ವ್ಯಕ್ತಿ ನಿಂದನೆಗೆ ಇಳಿದು ಬಿಡುತ್ತಾರೆ. ನಿಮ್ಮ ಬಟ್ಟೆಗೆ ಕೊಚ್ಚೆ ಎರಚಿ ಬಿಡುತ್ತಾರೆ, ತೊಳೆದುಕೊಳ್ಳುವ ಕೆಲಸ ನಿಮ್ಮದಾಗುತ್ತದೆ.

“ವಿಚಾರ ನಪುಂಸಕತೆ” ಇರುವವರು ಇನ್ನೇನನ್ನು ಮಾಡಲು ಸಾಧ್ಯ?

ಖ್ಯಾತ ಸಾಹಿತಿ ಎಸ್. ಎಲ್. ಭೈರಪ್ಪನವರು ಮತಾಂತರದ ಬಗ್ಗೆ ಸ್ಥಳೀಯವಾಗಿಯೇ ಜಾಗತಿಕ ಮಟ್ಟದ ಒಂದು ಚರ್ಚೆ ಯನ್ನು ಆರಂಭಿಸಿದ್ದಾರೆ. ಕ್ರಿಶ್ಚಿಯಾನಿಟಿಯ ನಿಜವಾದ ಮುಖ ವನ್ನು ಜಾಗತಿಕ ಸ್ಥರದಲ್ಲಿ ಅನಾವರಣ ಮಾಡಿದ್ದಾರೆ. ಹಾಗೆ ಭೈರಪ್ಪನವರು ಆಧಾರ ಸಮೇತ ಎತ್ತಿರುವ ಪ್ರಶ್ನೆಗಳಿಗೆ ತಾರ್ಕಿಕ ಹಾಗೂ ಆಧಾರ ಸಮೇತವಾಗಿಯೇ ಉತ್ತರ ಕೊಡಬೇಕಾದುದು ಸಹಜ ಆಶಯ.

ಆದರೆ “ವಿಜಯ ಕರ್ನಾಟಕದಲ್ಲಿ ಅವರ ಲೇಖನ ಓದಿದ ಮೇಲೆ, ಅವರು ‘ಆವರಣ’ದಿಂದ ಹೊರಬರುವುದು ಹಾಗಿರಲಿ, ಪೂರ್ತಿಗುಹಾಂತರಾಳವನ್ನೇ ಹೊಕ್ಕಂತೆ ಕಾಣುತ್ತಿದೆ. ಭೈರಪ್ಪ ವಿಪರೀತ Paranoid ಆಗಿದ್ದಾರೆ. ತುಂಬ ಚೆಲುವಾಗಿ, ಮುದ ನೀಡಿ, ಯೋಚನೆಗೆ ಹಚ್ಚಿ, ಭಾವೋತ್ಕರ್ಷಕ್ಕೆ ಕೊಂಡೊಯ್ದು ಓದುಗನಿಗೊಂದು ಮಧುರಾನುಭೂತಿ ನೀಡುತ್ತಿದ್ದ ಭೈರಪ್ಪ ಇದೇಕೆ ಹೀಗೆ’ ಎಲ್ಲ ಬಗೆಯ ಕರ್ಮಠ’ರಂತೆ ಬರೆಯತೊಡಗಿ ದ್ದಾರೆ”.

“ಅಕ್ಟೋಬರ್ 16ನೇ ತಾರೀಕಿನ ವಿಜಯ ಕರ್ನಾಟಕ ತೆರೆದು ಅದರಲ್ಲಿನ ಭೈರಪ್ಪನವರ ಲೇಖನವನ್ನು ಒಬ್ಬರೇ ಕುಳಿತು ದೊಡ್ಡ ದನಿಯಲ್ಲಿ ಓದಿಕೊಳ್ಳಿ. ಸ್ವಲ್ಪ ಹೊತ್ತಿಗೆ ನೀವು ಯಾರಿಗೋ ಲೆಕ್ಚರು ಕೊಡುತ್ತಿದ್ದೀರಿ ಎಂಬಂತೆ ಭಾಸವಾಗುತ್ತದೆ, ನಿಮಗೂ ಒಬ್ಬ ಕ್ರೈಸ್ತರ ಮತ ಬೋಧಕನಿಗೂ ವ್ಯತ್ಯಾಸವಿಲ್ಲ ಅನಿಸುತ್ತದೆ. ಹದಿನೈದು ಜನರನ್ನು ಕೂರಿಸಿಕೊಂಡು ಓದಿ ಬಿಡಿ: ನೀವು ಮುಸ್ಲಿಂ ಧರ್ಮ ಬೋಧಕನಂತೆ ಧ್ವನಿಸತೊಡಗುತ್ತೀರಿ. ಇದನ್ನೇ ನಾನು ಒಂದು ಬರಹದಲ್ಲಿ ನ ಕರ್ಮಠ ಗುಣ ಅನ್ನುವುದು. It starts Preaching. Writer starts barking. ಯಾವಾಗ ನಮ್ಮ ಬರವಣಿಗೆಗೆ ‘ಪ್ರವಾದೀ ಗುಣ’ ಬಂದು ಬಿಡುತ್ತದೋ, ಆವಾಗ ನಮ್ಮೊಳಗಿನ ಸೃಜನಶೀಲ ಬರಹಗಾರ ಸತ್ತು ಹೋಗಿ ಬಿಡುತ್ತಾನೆ. sorry, ಭೈರಪ್ಪ.”

ಹೀಗೆ ಸಾಗುವ ರವಿ ಬೆಳಗೆರೆಯವರ ಲೇಖನ(ಅಕ್ಟೋಬರ್ ೧೯)ವನ್ನು ಓದುತ್ತಿದ್ದರೆ ಇದೇನು “ಚರ್ಚೆಯೋ ಅಥವಾ ಚಾರಿತ್ರ್ಯವಧೆಯೋ”, “ತರ್ಕವೋ ಅಥವಾ ತರ್ಲೆಯೋ” ಎಂಬ ಅನುಮಾನ ಕಾಡಲಾರಂಭಿಸಿತು!

‘ಮಧುರಾನುಭೂತಿ’, ‘ಭಾವೋತ್ಕರ್ಷ’, ‘ಕರ್ಮಠ’ ಮುಂತಾದ ಪದಗಳನ್ನು ಬೆಳಗೆರೆ ವಿನಾಕಾರಣ ಎಳೆದುಕೊಂಡು ಬಂದುಬಿಡುತ್ತಾರೆ. ಅದನ್ನು ನೋಡಿದಾಗ ಈ “ಪ್ರೀಚಿಂಗು, ಬಾರ್ಕಿಂಗು” ಮಾಡುತ್ತಿರುವುದು ಭೈರಪ್ಪನವರೋ ಅಥವಾ ರವಿ ಬೆಳಗೆರೆಯವರೋ ಎಂಬ ಗೊಂದಲವುಂಟಾಗಿ ಬಿಡುತ್ತದೆ. ಅಲ್ಲಾ ಸ್ವಾಮಿ, ಮಧುರಾನುಭೂತಿ ಬೇಕೆಂದರೆ ‘ಗೃಹಭಂಗ’ ಓದಿ, ಅದು ಬೇಡವೆಂದರೆ ‘ಗ್ರಹಣ’ ಓದಿ, ಒಳ್ಳೇ ಸಾಥ್ ಬೇಕೆಂದರೆ ‘ಸಾರ್ಥ’ವನ್ನು ಕೈಗೆತ್ತಿಕೊಳ್ಳಿ.

ಆದರೆ ಸಾಹಿತಿಯೇ ಆಗಿದ್ದರೂ ಭೈರಪ್ಪನವರು ‘ವಿಜಯ ಕರ್ನಾಟಕ’ದಲ್ಲಿ ಅವರು ಬರೆದಿರು ವುದು ಕಾದಂಬರಿಯಲ್ಲ, ಲೇಖನ. ಸಾಹಿತ್ಯ ನವಿರಾಗಿರಬೇಕು ನಿಜ. ಆದರೆ ಲೇಖನ ವಸ್ತುನಿಷ್ಠವಾಗಿರ ಬೇಕು. ಸಾಹಿತ್ಯಕ್ಕೆ ಸತ್ಯನಿಷ್ಠೆಯ ಅಗತ್ಯವಿಲ್ಲ. ನಿಮಗೆ ಬೇಕಾದ ರೀತಿಯಲ್ಲಿ ಕಾಲ್ಪನಿಕ ಪ್ರಸಂಗಗಳನ್ನು ಹೆಣೆದುಕೊಂಡು ಹೋಗಬಹುದು. ಮಿಗಿಲಾಗಿ ಭೈರಪ್ಪನವರ ಕಾದಂಬರಿಗಳಲ್ಲಿ ನವಿರಾದ ಭಾಷೆ ಇದ್ದರೂ, ಅವುಗಳನ್ನು ಓದಿದಾಗ ಮಧುರ ಅನುಭವ ಸಿಗುವುದೇ ಆಗಿದ್ದರೂ ಅರುಣ್ ಶೌರಿಯವ ರಂತೆ ಅವರೊಬ್ಬ Serious Writer. ಶೌರಿ ನಿಮ್ಮ ಮಿದುಳಿಗೆ ತ್ರಾಸ ಕೊಟ್ಟು ನಿಮ್ಮನ್ನು ಚಿಂತನೆಗೆ ಹಚ್ಚುತ್ತಾರೆ. ಖುಷವಂತ್ಸಿಂಗ್ ನಿಮ್ಮ ಮನಸ್ಸಿಗೆ ಕಚಗುಳಿ ಇಕ್ಕುತ್ತಾರೆ. ನಿಮಗೆ ಕಚಗುಳಿಯಲ್ಲಿ ಮಾತ್ರ ಮಧುರಾನುಭೂತಿ ಸಿಗುತ್ತದೆ ಎಂಬ ಕಾರಣಕ್ಕೆ ಒಬ್ಬ ಗಂಭೀರ ಲೇಖಕನಿಂದಲೂ ಕಚಗುಳಿಯನ್ನು ನಿರೀಕ್ಷಿಸುವುದು ಎಷ್ಟು ಸರಿ? “ಟೈಂಪಾಸ್” ಅಥವಾ “ಕಂಪನಿ ಆಫ್ ವಿಮೆನ್”ನಲ್ಲಿ ಸಿಕ್ಕಿದ್ದೇ “ಆವರಣ” ದಲ್ಲೂ ಸಿಗಬೇಕು ಎಂದರೆ ಹೇಗಾದೀತು ಸ್ವಾಮಿ!

ನಿಮಗೆ ಬೇಕಾದದ್ದು ‘ಆವರಣ’ದಲ್ಲಿ ಸಿಗಲಿಲ್ಲ ಎಂಬ ಕಾರಣಕ್ಕೆ ಭೈರಪ್ಪನವರು ‘ಜಡ್ಡುಗಟ್ಟಿದ್ದಾರೆ’ ಎಂದು ತೀರ್ಪು ನೀಡುವು ದನ್ನು ಹೇಗೆತಾನೇ ಒಪ್ಪಿಕೊಳ್ಳಲು ಸಾಧ್ಯ?

ಇನ್ನು ನೀವು ಒಂದಿಷ್ಟು ದಿನ ಇತಿಹಾಸ ಬೋಧಕರಾಗಿದ್ದಿರಬಹುದು. ಆದರೆ ಪ್ಯಾನ್ ಇಸ್ಲಾಮಿಸಂ, ವರ್ಜಿನ್ ಲ್ಯಾಂಡ್ ಅಂತ ಗೋಜಲು ಗೋಜಲಾಗಿ ಯಾವ ಆಧಾರಗಳನ್ನೂ ಕೊಡದೆ ಬರೀ ನಿಂದನೆಗೆ ಪೂರಕವಾಗಿ ಕೆಲವು ಪದಗುಚ್ಛಗಳನ್ನು ಉಲ್ಲೇಖ ಮಾಡಿದ್ದೀರಿ. ಹಾಗಾಗಿ ನಿಮ್ಮ ಲೇಖನ eನವನ್ನೂ ಹೆಚ್ಚಿಸುವುದಿಲ್ಲ, ಬೆಳಕನ್ನೂ ಚೆಲ್ಲುವುದಿಲ್ಲ!! ಕಾರ್ಖಾನೆಯೊಂದರ ಸೈಕಲ್ ಸ್ಟಾಂಡ್ನಲ್ಲಿ ನಿಂತುಕೊಂಡು ಕಮ್ಯುನಿಸ್ಟ್ ನೇತಾರನೊಬ್ಬ ಭಾಷಣ ಕೊಡುತ್ತಿರುವಂತೆ ಭಾಸವಾಗುತ್ತದೆ!

ರವಿ ಬೆಳಗೆರೆಯವರೇ, ಭೈರಪ್ಪನವರು ಹೇಳಲು ಹೊರಟಿರುವುದೇನು ಎಂಬುದನ್ನು ಅರ್ಥಮಾಡಿಕೊಳ್ಳಬೇಕೆಂದಾದರೆ “ಒಬ್ಬರೇ ಕುಳಿತು ದೊಡ್ಡ ಧ್ವನಿಯಲ್ಲಿ ಓದಿಕೊಳ್ಳಬೇಡಿ”. ಒಮ್ಮೆ ನಿಮ್ಮಷ್ಟಕ್ಕೆ ಓದಿಕೊಂಡು, ಒಂದಿಷ್ಟೊತ್ತು ಶಾಂತಚಿತ್ತರಾಗಿ ಕುಳಿತುಕೊಂಡು ಭೈರಪ್ಪ ಎತ್ತಿರುವ ಪ್ರಶ್ನೆಗಳು ಹಾಗೂ ಆಧಾರಸಮೇತ ಬೆಳಕು ಚೆಲ್ಲಿರುವ ಅಂಶಗಳ ಬಗ್ಗೆ ಚಿಂತನೆ ಮಾಡಿ, ಸಾಕು.

ವಿಶ್ವದ ಅತ್ಯಂತ ಪುರಾತನ ನಾಗರೀಕತೆಗಳೆಂದರೆ ರೋಮನ್, ಗ್ರೀಕ್ ಹಾಗೂ ನಮ್ಮ ಸಿಂಧೂನದಿ ನಾಗರೀಕತೆ. ರೋಮನ್ ಸಾಮ್ರಾಜ್ಯದಲ್ಲಿ ರಾಜನನ್ನೇ ದೇವರು ಎಂದು ಭಾವಿಸಲಾಗುತ್ತಿತ್ತು, ಪೂಜಿಸಲಾಗುತ್ತಿತ್ತು. ಆದರೆ ಜೀಸಸ್ “ನಾನೇ ದೇವರ ಪುತ್ರ. ಜನರ ಉದ್ಧಾರಕ ನಾನೇ” ಎಂದು ಹೇಳಿಕೊಳ್ಳಲಾರಂಭಿಸಿದ. ಹಾಗಾಗಿ ಸಹಜವಾಗಿಯೇ ರೋಮನ್ ರಾಜನ ಕೋಪಕ್ಕೆ ತುತ್ತಾದ. ರಾಜ ತನ್ನ ಪ್ರತಿನಿಧಿಯನ್ನು ಕಳುಹಿಸಿ ಜೀಸಸ್ಗೆ ಎಚ್ಚರಿಕೆಯನ್ನೂ ನೀಡಿದ. ಆದರೆ ಜೀಸಸ್ ತನ್ನ ಪ್ರತಿಪಾದನೆ ಯನ್ನು ಮಾತ್ರ ನಿಲ್ಲಿಸಲಿಲ್ಲ. ಒಂದು ವೇಳೆ, ಜನ ಜೀಸಸ್ನನ್ನೇ ದೇವರ ಪುತ್ರ ಎಂದು ಒಪ್ಪಿಕೊಂಡರೆ, ಆತನನ್ನು ಆರಾಧಿಸಲು ಆರಂಭಿಸಿದರೆ ತನ್ನ ಮಹತ್ವವೇ ಕಳೆದುಹೋಗುತ್ತದೆ ಎಂಬುದನ್ನು ಅರಿತ ರೋಮನ್ ರಾಜ ಜೀಸಸ್ಗೆ ಮರಣ ದಂಡನೆಯನ್ನು ವಿಧಿಸಿದ. ನಮ್ಮಲ್ಲಿ ಹೇಗೆ ಮರಣ ದಂಡನೆಯೆಂದರೆ ನೇಣಿಗೇರಿ ಸುತ್ತಾರೋ ಹಾಗೆಯೇ ರೋಮನ್ ಸಾಮ್ರಾಜ್ಯದಲ್ಲಿ ಮರಣ ದಂಡನೆಗೆ ಗುರಿಯಾಗುವವರನ್ನು ಶಿಲುಬೆಗೇರಿಸುತ್ತಿದ್ದರು. ಕ್ರೈಸ್ತರು ‘ಹೋಲಿ ಕ್ರಾಸ್’ ಎಂದು ಹೇಳುವ ಶಿಲುಬೆ ರೋಮನ್ ಸಾಮ್ರಾಜ್ಯದಲ್ಲಿ ನಮ್ಮ ಕುಣಿಕೆಗೆ ಸಮನಾಗಿತ್ತು. ಜೀಸಸ್ಗೆ ಮರಣದಂಡನೆ ವಿಧಿಸಿದ್ದು ಯಹೂದಿಗಳಲ್ಲ ಎಂಬುದನ್ನು ಅರ್ಥಮಾಡಿಕೊಳ್ಳಿ ಸ್ವಾಮಿ.

ಇನ್ನು ನೀವೇ ಹೇಳಿದಂತೆ ಭೈರಪ್ಪನವರು ಖಂಡಿತ ಹಿಸ್ಟಾರಿ ಯನ್. ಎರಡು ಭಾರಿ ಇಸ್ರೇಲ್ಗೆ ಭೇಟಿ ಕೊಟ್ಟು, ಸತತ ೧೫ ದಿನಗಳ ಕಾಲ ಜೀಸಸ್ ಜನಿಸಿದ, ಓಡಾಡಿದ, ಆತನನ್ನು ಶಿಲುಬೆ ಗೇರಿಸಿದ ಸ್ಥಳಗಳಲ್ಲೆಲ್ಲ ಓಡಾಡಿ ತಿಳಿದುಕೊಂಡು ಬಂದು ಬರೆದಿದ್ದಾರೆ. ಜಗತ್ತಿನ ೫೦ಕ್ಕೂ ಹೆಚ್ಚು ದೇಶಗಳನ್ನು ಸಂದರ್ಶಿಸಿರುವ ಅವರು ಸತ್ಯನಿಷ್ಠರು ಹಾಗೂ ಸತ್ಯ ಯಾವತ್ತೂ ನಿಷ್ಠುರವಾಗಿ ರುತ್ತದೆಯೇ ಹೊರತು ನವಿರಾಗಿರುವುದಿಲ್ಲ.

ಮತ್ತೆ ಇತಿಹಾಸಕ್ಕೆ ಬರೋಣ.

ಕ್ರಿಶ್ಚಿಯಾನಿಟಿ ಪ್ರಾಮುಖ್ಯತೆಗೆ ಬಂದಿದ್ದೇ ಜೀಸಸ್ ಮರಣದ ನಂತರ. ಒಂದೆಡೆ ಸಾಮಾಜಿಕ ಕಲಹದಿಂದಾಗಿ ರೋಮನ್ ಸಾಮ್ರಾಜ್ಯ ದುರ್ಬಲವಾಗತೊಡಗಿತು. ಇನ್ನೊಂದೆಡೆ ಜೀಸಸ್ ಸಂದೇಶ ಸಾರಲು ಹೊರಟ್ಟಿದ್ದವರ ಧ್ವನಿ ಬಲಗೊಳ್ಳುತ್ತಾ ಹೋಯಿತು. Infact, Roman Empire was wiped out by Christians. ನಮ್ಮ ನಳಂದ ವಿಶ್ವವಿದ್ಯಾಲಯವನ್ನು ಹೇಗೆ ಮುಸ್ಲಿಮರು ಸುಟ್ಟು ಹಾಕಿದರೋ ಹಾಗೆಯೇ ಅಲೆಗ್ಸಾಂಡ್ರಿಯಾದ ಬೃಹತ್ ಗ್ರಂಥಾಲಯವನ್ನು ನಾಶಪಡಿಸಿದ್ದು ಕ್ರಿಶ್ಚಿಯನ್ನರೇ.ಎಡ್ವರ್ಡ್ ಗಿಬ್ಬನ್ನ “Decline and Fall of the Roman Empire” ಎಂಬ ಪುಸ್ತಕನ್ನೊಮ್ಮೆ ಓದಿ.

ಅಷ್ಟೇ ಅಲ್ಲ, ಪ್ಲೇಟೋ, ಅರಿಸ್ಟಾಟಲ್ಗೆ ಜನ್ಮ ನೀಡಿದ ವಿಶ್ವದ ಅತ್ಯಂತ ಪುರಾತನ ಹಾಗೂ ಶ್ರೇಷ್ಠ ನಾಗರೀಕತೆಗಳಾದ ಗ್ರೀಕ್ ಹಾಗೂ ರೋಮನ್ ಸಿವಿಲೈಜೇಶನ್ಗಳನ್ನು ಬಲಿತೆಗೆದುಕೊಂಡಿದ್ದೇ ಕ್ರೈಸ್ತರು. ಅಂತಹ Christian Evangelist ಗಳ ಮುಂದಿನ ಗುರಿ ಏಷ್ಯಾ. ಅದರಲ್ಲೂ ಭಾರತ. ಹಾಗಂತ ದಿವಂಗತ ಪೋಪ್ ಜಾನ್ ಪಾಲ್ ಅವರೇ ಹೇಳಿದ್ದಾರೆ.

ಇಂದು ವಿಶ್ವದ ಅತ್ಯಂತ ಹಳೆಯ ಹಾಗೂ surviving civilisation ಅಂದರೆ ನಮ್ಮ ಭಾರತದ ನಾಗರೀಕತೆಯೊಂದೇ. ಅದೂ ಕೂಡ ರೋಮನ್ ಹಾಗೂ ಗ್ರೀಕ್ ನಾಗರೀಕತೆಗಳಂತೆ ಇತಿಹಾಸದ ಪುಟ ಸೇರಿ ಪಳೆಯುಳಿಕೆಯಾಗಿರುವ ಡೈನೋಸಾರ್ನಂತಾಗಬೇಕೆ? ಅಂತಹ ಅಪಾಯದ ಬಗ್ಗೆ ಎಚ್ಚರಿಸಲು ಹೊರಟರೆ ‘ಜಡ್ಡುಗಟ್ಟಿ’ದವರಾಗಿ ಬಿಡುತ್ತಾರೆಯೇ? ನೀವು ಅಣಕವಾಗಿ ಹೇಳಿರುವಂತೆ ಭೈರಪ್ಪನವರು ಹೊಸವಿಚಾರವನ್ನೇನೂ ಎತ್ತಿಲ್ಲ. ಆದರೆ ಇತಿ ಹಾಸದ ಪುಟಗಳಲ್ಲಿ ದಾಖಲಾಗಿರುವ ಹಳೆಯ ವಿಚಾರಗಳನ್ನು ಜನರಿಗೆ ಮನವರಿಕೆ ಮಾಡಿಕೊಟ್ಟು ಹೊಸ ಅನಾಹುತಗಳಾಗದಂತೆ ತಡೆಯಬೇಕೆಂಬ ಉದ್ದೇಶ ಖಂಡಿತ ಅವರಿಗಿದೆ. ಅವರ ಕಾಳಜಿಯನ್ನು ಅರ್ಥಮಾಡಿಕೊಳ್ಳುವಷ್ಟು ಮತಿ ಇಲ್ಲದವರಿಗೆ ಭೈರಪ್ಪ ‘ಮತಭ್ರಾಂತ’ರಂತೆ ಕಾಣುತ್ತಾರೆ ಅಷ್ಟೇ.

ಇನ್ನು ನಗುತರುವ ವಿಚಾರವೆಂದರೆ “ನೀವು ಆಂಧ್ರದ ಮುಖ್ಯಮಂತ್ರಿ ವೈ.ಎಸ್. ರಾಜಶೇಖರ ರೆಡ್ಡಿ ಅವರನ್ನು ಕ್ರೈಸ್ತರು ಅಂತ ಭಾವಿಸಿದ್ದರೆ ಅದಕ್ಕಿಂತ ಅಪದ್ಧ ಮತ್ತೊಂದಿಲ್ಲ. ಅವರ ಪೂರ್ವಜರ್ಯಾರೋ ಕ್ರೈಸ್ತರಾಗಿದ್ದಿರಬಹುದು. ಆದರೆ ಬೀಗತನ ಗಳಿಂದ ಹಿಡಿದು ರಾಜಕಾರಣದ ತನಕ ರಾಜಶೇಖರ ರೆಡ್ಡಿಯ ವರು ಶುದ್ಧಾನು ಶುದ್ಧ ರೆಡ್ಡಿಯೇ” ಎನ್ನುವ ಬೆಳಗೆರೆಯವರದು ತರ್ಕವಿಲ್ಲದ ಪ್ರತಿಪಾದನೆ. ದೇಶದ ತುಂಬ ಇರುವವರೆಲ್ಲ ಪೂರ್ವಜರು ಹಿಂದೂಗಳಾಗಿದ್ದು ಈಗ ಕ್ರೈಸ್ತರಾಗಿರುವವರೇ. “ಪೂರ್ವಜರ್ಯಾರೋ ಕ್ರೈಸ್ತರಾಗಿದ್ದಿರಬಹುದು” ಎಂದು ಹೊಸ ವಾದ ಹುಟ್ಟುಹಾಕುತ್ತಿದ್ದೀರಲ್ಲಾ, ರಾಜಶೇಖರ ರೆಡ್ಡಿಯವರು ಮತ್ತೆ ಹಿಂದೂ ಧರ್ಮಕ್ಕೆ ಮತಾಂತರಗೊಂಡಿದ್ದಾರೆ ಎಂಬುದಕ್ಕೆ ನಿಮ್ಮ ಬಳಿ ದಾಖಲೆ ಇದ್ದರೆ ಜನರ ಮುಂದಿಡಿ. ಆತನಲ್ಲಿ ರೆಡ್ಡಿ ಗುಣಗಳಿವೆ ಎಂಬ ಕಾರಣಕ್ಕೆ, ರೆಡ್ಡಿಗಳೊಂದಿಗೇ ಸಂಬಂಧ ಬೆಳೆಸಿದ್ದಾರೆ ಎಂಬ ಕಾರಣಕ್ಕೆ ಹಿಂದುವಾಗಿ ಬಿಡಲ್ಲ. ಆತ ಹಿಂದೂವಾಗಿದ್ದರೆ ಆತನ ಹೆಸರು ‘ಯೇಸುಪದ ಸಾಮ್ಯುಯೆಲ್ ರಾಜಶೇಖರ ರೆಡ್ಡಿ’ ಏಕಾಗುತ್ತಿತ್ತು? ತಿರುಪತಿಯಲ್ಲಿ ಮತಾಂತರ ನಡೆದಿದ್ದು ಯಾರ ಕುರ್ಚಿಯ ಕೆಳಗೆ? ಆಂಧ್ರದಲ್ಲಿ ನಾಯಿ ಕೊಡೆಗಳಂತೆ ಚರ್ಚ್ಗಳು ತಲೆಯೆತ್ತುತ್ತಿರುವುದು ಯಾರ ಆಡಳಿತದಲ್ಲಿ?

ಸ್ವಾಮಿ, ಮನಸ್ಸು ಜಡಗೊಂಡರೆ ವಿವೇಕಕ್ಕೆ ಮಂಕೂ ಕವಿಯು ತ್ತದೆ, ತರ್ಕರಹಿತ ವಾದಕ್ಕಿಳಿದರೆ ವಿವೇಕ ಸತ್ತೂ ಹೋಗುತ್ತದೆ. “ಥೆರೇಸಾಗೆ ಸಿಕ್ಕ ಗೌರವ ಲಿಂಗಾಯತರ ಮಾತೆ ಮಹಾದೇವಿಗೆ ಸಿಕ್ಕಿದ್ದಿದ್ದರೆ ಭೈರಪ್ಪ ಸಿಟ್ಟಾಗ ಬೇಕಿತ್ತು! ಹ್ಹ”, “ನಂಗೆ ಆ ಉದ್ದೇಶವೇ ಇಲ್ಲ’ ಅಂತ ಪ್ರತಿಕ್ರಿಯಿಸಿ ಮುಟ್ಟಾಗುವುದು ಬೇಡ. Please” ಎಂದು ನಾಡೇ ಮೆಚ್ಚಿಕೊಂಡಿರುವ ಹಿರಿಯ ಸಾಹಿತಿಯ ಬಗ್ಗೆ ಉಡಾಫೆಯ ಮಾತುಗಳನ್ನಾಡಿ ಅದನ್ನು ‘Demonstrate‘ ಮಾಡುವ ಅಗತ್ಯವಿಲ್ಲ.

ಇನ್ನು ಮದರ್ ತೆರೆಸಾ ಅವರ ವಿಷಯಕ್ಕೆ ಬರೋಣ. ನೀವು ಹೇಳುವಷ್ಟು ಆಕೆ ಒಳ್ಳೆಯವರಾಗಿದ್ದರೆ, ಆಕೆಗೆ ಮತಾಂತರ ಮಾಡುವ ಉದ್ದೇಶ ಇಲ್ಲದೇ ಹೋಗಿದ್ದಿದ್ದರೆ ನಾವೆಲ್ಲರೂ ಖುಷಿಪಡಬಹುದಿತ್ತು. ಆದರೆ ಕ್ರಿಷ್ಟೋಫರ್ ಹಿಚೆನ್ಸ್ ಹಾಗೂ ತಾರಿಕ್ ಅಲಿ ಅವರು ಬ್ರಿಟನ್ ಚಾನೆಲ್ಗಾಗಿ ರೂಪಿಸಿದ “Hell’s Angel” ಎಂಬ ಡಾಕ್ಯೂಮೆಂಟರಿಯನ್ನು ವೀಕ್ಷಿಸಿದ್ದೀರಾ? ಹೇಗೋ ನಿಮಗೆ ಇಂಟರ್ನೆಟ್ ಬಗ್ಗೆ ಚೆನ್ನಾಗಿ ಗೊತ್ತಲ್ಲ, “ಯು ಟ್ಯೂಬ್”ನಲ್ಲಿ ತಡಕಾಡಿ ನೋಡಿ. ಇಲ್ಲವೆ ಡಾಕ್ಯುಮೆಂಟ ರಿಯ ಪುಸ್ತಕ ರೂಪವಾದ “The Missionary Position” ಓದಿ, ಸತ್ಯದ ಅರಿವಾಗುತ್ತದೆ.

ಮದರ್ ತೆರೆಸಾ ಅವರ ಮಿಡಿಯುವ ಹೃದಯ, ಅದರೊಳಗಿರುವ ಅನುಕಂಪದ ಬಗ್ಗೆ ಸಾಕಷ್ಟು ಕೇಳಿದ್ದೇವೆ. ಆಕೆ ಜನಿಸಿದ್ದು ಅವಿಭಜಿತ ಯುಗೋಸ್ಲಾವಿಯಾದಲ್ಲಿ. ಅದೇ ಯುಗೋಸ್ಲಾವಿಯಾದಲ್ಲಿ ಅಧ್ಯಕ್ಷ ಸ್ಲೊಬಡಾನ್ ಮಿಲೋಸೆವಿಚ್ ಅವರ ಆಡಳಿತಾವಧಿಯಲ್ಲಿ ಮುಸ್ಲಿಮರ ಮಾರಣಹೋಮ ನಡೆದಿದ್ದನ್ನು ನೆನಪಿಸಿಕೊಳ್ಳಿ. ಕೊನೆಗೆ ‘ನೇಟೋ’ ಪಡೆಗಳು ಯುಗೋಸ್ಲಾವಿಯಾದ ಮೇಲೆ ದಾಳಿ ಮಾಡಿ, ಮಿಲೋಸೆವಿಚ್ ಅವರನ್ನು ಬಂಧಿಸಿ ಜೈಲಿಗೆ ತಳ್ಳಬೇಕಾಗಿ ಬಂತು. ಅಂದು ತನ್ನ ಹುಟ್ಟೂರಲ್ಲಿ ಅಲ್ಪಸಂಖ್ಯಾತ ಮುಸ್ಲಿಮರ ಮೇಲೆ ಘೋರ ದೌರ್ಜನ್ಯ ನಡೆಯುತ್ತಿದ್ದಾಗ ಮದರ್ ತೆರೆಸಾ ಅವರ ಮನವೇಕೆ ಮಿಡಿಯಲಿಲ್ಲ? ಕಲ್ಕತ್ತಾದ ಕೊಳೆಗೇರಿಗಳ ಬಗ್ಗೆ ಅನುಕಂಪ ಹೊಂದಿದ್ದ ತೆರೆಸಾ ಅವರು ತಮ್ಮ ಧರ್ಮೀಯನೇ ಆಗಿದ್ದ ಮಿಲೋಸೆವಿಚ್ಗೆ ಏಕೆ ಬುದ್ಧಿವಾದ ಹೇಳಲಿಲ್ಲ? ಇಂದಿಗೂ ಮುಸ್ಲಿಮ್ ರಾಷ್ಟ್ರಗಳನ್ನು ಗುರಿಯಾಗಿಸಿಕೊಂಡು ಇಸ್ಲಾಮ್ ಮತಾನುಯಾಯಿಗಳನ್ನು ಕೊಲ್ಲುತ್ತಿರುವುದು ಕ್ರೈಸ್ತ ರಾಷ್ಟ್ರಗಳೇ.

ಅದಿರಲಿ, ನೀವೇ ಮೆಚ್ಚಿಕೊಳ್ಳುವ ಓಶೋ ಅವರು ಮದರ್ ತೆರೆಸಾ ಬಗ್ಗೆ ಏನು ಹೇಳಿದ್ದಾರೆ ಎಂಬುದನ್ನು ಓದಿದ್ದೀರಾ? ಚರಂಡಿಯಲ್ಲಿ ಮಲಗುವ ನಿರ್ಗತಿಕ ಮಕ್ಕಳನ್ನು ಎದೆಗವುಚಿ ಕೊಳ್ಳಲು ಮದರ್ ತೆರೆಸಾ ಅವರೇ ಆಗಬೇಕಿಲ್ಲ.

ಪೋಸು ಯಾರು ಬೇಕಾದರೂ ಕೊಡಬಹುದು. ಐಶ್ವರ್ಯಾ ರೈ ಕೂಡ ಅನಾಥ ಮಕ್ಕಳನ್ನು ಅಪ್ಪಿಕೊಂಡು ಫೋಟೋಕ್ಕೆ ಪೋಸು ಕೊಡುತ್ತಾಳೆ. ಪ್ರತಿ ವರ್ಷ ಮಿಸ್ ವರ್ಲ್ಡ್, ಮಿಸ್ ಯುನಿವರ್ಸ್ ಆದವರೆಲ್ಲ ಅಂತಹ ಪೋಸು ಕೊಟ್ಟೇ ಕೊಡು ತ್ತಾರೆ. “ಅನಾಥ ಹಿಂದೂ ಕಂದಮ್ಮಗಳನ್ನು ಎದೆಗವಚಿಕೊಂಡು ‘ನಾನು ಸಾಕುತ್ತೇನೆ’ ಅಂದಂಥ ಒಬ್ಬ ಹಿಂದೂ ಮಾತೃದೇವತೆ ಹುಟ್ಟಲಿಲ್ಲವಲ್ಲ ಸ್ವಾಮಿ?” ಎಂದು ಪ್ರಶ್ನಿಸಿದ್ದೀರಲ್ಲಾ, ಒಂದು ವೇಳೆ ನೀವೆಂದಾದರೂ ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿದ್ದಿದ್ದರೆ ಆ ಪ್ರಶ್ನೆಯನ್ನು ಕೇಳುತ್ತಿರಲಿಲ್ಲ. ನಿಮ್ಮ ಪ್ರಶ್ನೆಗೆ ಉತ್ತರ ಕಣ್ಣ ಎದುರೇ ಕಾಣುತ್ತಿತ್ತು. ೧೦ ಸಾವಿರ ಅನಾಥ ಮತ್ತು ನಿರ್ಲಕ್ಷಿತ ಮಕ್ಕಳಿಗೆ ನಿತ್ಯವೂ ಅನ್ನ ಹಾಗೂ ಅಕ್ಷರ ದಾಸೋಹಗಳೆರಡೂ ಸಿದ್ಧಗಂಗಾ ಮಠದಲ್ಲಿ ನಡೆಯುತ್ತಿದೆ. ಮದರ್ ತೆರೆಸಾ ಅವರಿಗಿದ್ದ “ಮಾರ್ಕೆಟಿಂಗ್ ಬ್ಯೂರೋ” ಸಿದ್ಧಗಂಗಾ ಶ್ರೀಗಳಿಗೂ ಇದ್ದಿದ್ದರೆ ಹಾಗೂ ಅವರು ಕ್ರೈಸ್ತ ಪಾದ್ರಿಯಾಗಿದ್ದಿದ್ದರೆ ಖಂಡಿತ ಜಾಗತಿಕ ಮಟ್ಟದಲ್ಲಿ ಖ್ಯಾತಿ ಪಡೆದಿರುತ್ತಿದ್ದರು, ಭಾರತರತ್ನವೂ ಸಿಕ್ಕಿರುತ್ತಿತ್ತು. ನಮ್ಮ ರಾಜ್ಯದಲ್ಲೇ ಇರುವ ವಿವಿಧ ಲಿಂಗಾಯತ ಮಠಗಳು ಹಾಗೂ ಆದಿ ಚುಂಚನಗಿರಿ ಮಠವೂ ಅನಾಥ ಮಕ್ಕಳಿಗೆ ಅನ್ನ ಹಾಕುತ್ತಿವೆ. ಕಣ್ತೆರೆದು ನೋಡಬೇಕಷ್ಟೇ. ಶಿವಕುಮಾರ ಸ್ವಾಮೀಜಿ ಒಂದು ರಾಜ್ಯ, ಒಂದು ಭಾಗಕ್ಕೆ ಸಂಬಂಧಪಟ್ಟವರೇ ಆಗಿರ ಬಹುದು. ಆದರೆ ಕಾಳಜಿಗೆ ರಾಜ್ಯ, ಭಾಗ ಎಂಬ ಚೌಕಟ್ಟು ಹಾಕಲು ಸಾಧ್ಯವೆ? ಅಷ್ಟಕ್ಕೂ ಮದರ್ ತೆರೆಸಾ ಅವರೇನು ದೇಶದುದ್ದಗಲಕ್ಕೂ, ಜಗತ್ತಿನ ಮೂಲೆ ಮೂಲೆಗೂ ಹೋಗಿ ನಿರ್ಗತಿಕ, ಕ್ಷಯ ರೋಗಿಗಳ ಉದ್ಧಾರ ಮಾಡಲಿಲ್ಲ. ಆಕೆಯ ಕಾರ್ಯಕ್ಷೇತ್ರವೂ ಕಲ್ಕತ್ತಾ ಕೊಳಗೇರಿಗೆ ಸೀಮಿತವಾಗಿತ್ತು. ಆದರೆ ತೆರೆಸಾ ಅವರಿಗೆ ಜಾಗತಿಕ ಮಟ್ಟದಲ್ಲಿ ಪ್ರಚಾರ ಸಿಕ್ಕಿತು ಅಷ್ಟೇ.

ಒಂದು ಘಟನೆ ನೆನಪಾಗುತ್ತಿದೆ. ಖ್ಯಾತ ಐರಿಷ್ ನಾಟಕ ರಚನೆಕಾರ ಜಾರ್ಜ್ ಬರ್ನಾರ್ಡ್ ಶಾ ಮಾತುಗಳೆಂದರೆ ಅವರು ಹೇಳುತ್ತಿದ್ದ ಪ್ರತಿ ವಾಕ್ಯಗಳೂ “Quotable Quotes” ನಂತಿರುತ್ತಿದ್ದವು. ಈ ಬರ್ನಾರ್ಡ್ ಶಾ ಹಾಗೂ ಬ್ರಿಟನ್ನ ಆಗಿನ ಪ್ರಧಾನಿ ವಿನ್ಸ್ಟನ್ ಚರ್ಚಿಲ್ ಕೆಲವೊಮ್ಮೆ ಪರಸ್ಪರ ಕಾಲೆಳೆದುಕೊಳ್ಳುತ್ತಿದ್ದರು. ತತ್ತ್ವeನಿಯಂತೆ ಮಾತನಾಡುತ್ತಿದ್ದ ಬರ್ನಾರ್ಡ್ ಶಾ ಅವರನ್ನು ಉಲ್ಲೇಖಿಸಿ “ಭಾರೀ ಭಾರೀ ಮಾತನಾಡುವವರು ಅವುಗಳಲ್ಲಿ ಬಹಳ ಕಡಿಮೆ ಅಂಶಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡಿರುತ್ತಾರೆ. ಆದರೆ None less than George Bernard Shaw” ಎಂದು ಛೇಡಿಸಿದ್ದರು ಚರ್ಚಿಲ್.

ಖಂಡಿತ ರವಿ ಬೆಳೆಗೆರೆಯವರನ್ನು ಬರ್ನಾಡ್ ಶಾ ಮಟ್ಟಕ್ಕೇರಿಸಿ ಹೋಲಿಸುತ್ತಿಲ್ಲ. ಆದರೆ ಭಾನುವಾರದ ಅವರ ಲೇಖನವನ್ನು ಓದಿದಾಗ ಚರ್ಚಿಲ್ ಮಾತು ನೆನಪಾಯಿತು!!

ಒಂದು ವಾಕ್ಯದಲ್ಲಿ ಬೆನ್ನು ಸವರುವುದು, ಆನಂತರ ಚಿವುಟುತ್ತಾ ಹೋಗುವುದು, ನಡುನಡುವೆ ಉಡಾಫೆ, ಅವಹೇಳನ, ಚಾರಿತ್ರ್ಯವಧೆ. ಆದರೆ ಇಂತಹ ನಿಂದನೆ, ಅಗೌರವ ಗಳು ಚರ್ಚೆಯ ಪರಿಧಿಯೊಳಕ್ಕೆ ನುಸುಳಬಾರದು. ಒಂದು ಗಂಭೀರ ಸಮಸ್ಯೆಯನ್ನು ತೆಗೆದುಕೊಂಡು, ಆಧಾರ ಸಮೇತ ಓದುಗರಲ್ಲಿ ಜಾಗೃತಿ ಮೂಡಿಸಲು ಪ್ರಯತ್ನಿಸುತ್ತಿರುವ ಭೈರಪ್ಪ ನವರನ್ನು ಹೊಗಳಬೇಕೆಂದಿಲ್ಲ. ಸಾಧ್ಯವಾದರೆ ತಾರ್ಕಿಕವಾಗಿ ಉತ್ತರ ಕೊಡಲಿ. ನಿಂದನೆ ಮಾಡಿದರೆ ಬೆತ್ತಲಾಗುವುದು ತಾವೇ ಎಂಬುದು ನೆನಪಿರಲಿ.

Come on, ಸಂವಾದ ಮುಂದುವರಿಯಲಿ ಬಿಡಿ.

ರಾಮಚಂದ್ರ ಶೆಣೈ, ಮಂಗಳೂರು

(Pratap Simha!)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ