ನನ್ನ ಬ್ಲಾಗ್ ಪಟ್ಟಿ

ಮಂಗಳವಾರ, ಆಗಸ್ಟ್ 24, 2010

ಬಿಜೆಪಿ=ಬಳ್ಳಾರಿ ಜನಾರ್ದನರೆಡ್ಡಿ ಪಾರ್ಟಿ?!


ಬಳ್ಳಾರಿಯ ಮಾಜಿ ಮೇಯರ್ ಪದ್ಮಾವತಿ ಯಾದವ್ ಕೊಲೆ ಯಾಗಿ ಇಂದಿಗೆ 65 ದಿನಗಳಾದವು, ಟಪಾಲ್ ಗಣೇಶ್ ಹಾಗೂ ಇಬ್ಬರು ಟಿವಿ ವರದಿಗಾರರ ಮೇಲೆ ಹಲ್ಲೆ ನಡೆದು 13 ದಿನ ಕಳೆದವು. ಇದುವರೆಗೂ ಎಷ್ಟು ಜನರನ್ನು ಅರೆಸ್ಟ್ ಮಾಡಲಾಗಿದೆ? ತನಿಖೆಗೆ ಎಲ್ಲಿವರೆಗೆ ಬಂದಿದೆ? ಅಪರಾಧಿಗಳ ಸುಳಿವು ಸಿಕ್ಕಿ ದೆಯೇ? ಈ ಯಾವ ಪ್ರಶ್ನೆಗಳಿಗೂ ಉತ್ತರವಿಲ್ಲ. ಉತ್ತರ ಸಿಕ್ಕುವುದೂ ಇಲ್ಲ. ಇಷ್ಟಕ್ಕೂ ಪದ್ಮಾವತಿ ಯಾದವ್ ಯಾರ ಕುಟುಂಬಕ್ಕೆ ಆಪ್ತರಾಗಿ ದ್ದರು? ಟಪಾಲ್ ಗಣೇಶ್ ಎದುರು ಹಾಕಿಕೊಂಡಿರುವುದಾದರೂ ಯಾರನ್ನು?

IA- ಇಂಟರ್‌ಲಾಕ್ಯುಟರಿ ಅಪ್ಲಿಕೇಶನ್.

ಟಪಾಲ್ ಗಣೇಶ್ ಅವರು ಇಂಥದ್ದೊಂದು ಅಪ್ಲಿಕೇಶನ್(ಮಧ್ಯ ಪ್ರವೇಶ ಅರ್ಜಿ) ಹಾಕಿದ್ದು 2009, ಫೆಬ್ರವರಿ 6 ರಂದು. ಸೆಂಟ್ರಲ್ ಎಂಪವರ್ಡ್ ಕಮಿಟಿ ಅಥವಾ ಕೇಂದ್ರ ಉನ್ನತಾಧಿಕಾರ ಸಮಿತಿ ಮುಂದೆ. ಕರ್ನಾಟಕ ಪ್ರವಾಸೋದ್ಯಮ ಸಚಿವ ಜನಾರ್ದನರೆಡ್ಡಿ ಮತ್ತು ಸಹೋದರರ ‘ಓಬುಳಾಪುರಂ ಮೈನಿಂಗ್ ಕಂಪನಿ(ಪ್ರೈ) ಲಿಮಿಟೆಡ್’ 1980ರ ಅರಣ್ಯ ಸಂರಕ್ಷಣಾ ಕಾಯಿದೆಯನ್ನು ಉಲ್ಲಂಘಿಸಿ ಅಕ್ರಮ ಗಣಿಗಾರಿಕೆ ನಡೆಸಿದೆ ಎಂಬ ಆರೋಪದ ಬಗ್ಗೆ ತನಿಖೆ ನಡೆಸಲು ಈ ಸಮಿತಿ ನೇಮಕಗೊಂಡಿತ್ತು. ಅದರ ಮುಂದೆ ‘ಮಧ್ಯಪ್ರವೇಶ ಅರ್ಜಿ’ ಹಾಕಿದ ಗಣೇಶ್ ಕೆಲವು ಮನವಿಗಳನ್ನಿಟ್ಟರು.

೧. 1980ರ ಅರಣ್ಯ ಸಂರಕ್ಷಣಾ ಕಾಯಿದೆಯನ್ನು ಸ್ಪಷ್ಟವಾಗಿ ಉಲ್ಲಂಘಿಸುವ ಮೂಲಕ 2009, ಮೇ 1ರಂದು ನೀಡಲಾಗಿರುವ ತನ್ನ ಆದೇಶವನ್ನು ಜಾರಿಗೊಳಿಸದಂತೆ ಪರಿಸರ ಹಾಗೂ ಅರಣ್ಯ ಖಾತೆಗೆ ನಿರ್ದೇಶನ ನೀಡಬೇಕು.

೨. 2009, ಏಪ್ರಿಲ್ 22ರಂದು ಹೊರಡಿಸಲಾಗಿರುವ ಆದೇಶದಲ್ಲಿ ಉಲ್ಲೇಖಿಸಲಾಗಿರುವ ಪ್ರದೇಶಗಳಲ್ಲಿ ಅರಣ್ಯ ಭೂಮಿ ಒತ್ತುವರಿ ಹಾಗೂ ಅಕ್ರಮ ಗಣಿಗಾರಿಕೆ ನಡೆದಿರುವ ವಿಷಯದ ಬಗ್ಗೆಯೂ ದೃಷ್ಟಿಹಾಯಿಸುವಂತೆ ಸೆಂಟ್ರಲ್ ಎಂಪವರ್ಡ್ ಕಮಿಟಿಗೆ ಸೂಚಿಸ ಬೇಕು. ಅಲ್ಲದೆ ಪರಿಸರ ಹಾಗೂ ಅರಣ್ಯ ಸಚಿವಾಲಯ ಮತ್ತು ಆಂಧ್ರಪ್ರದೇಶ ಸರಕಾರ ಆದೇಶವನ್ನು ಜಾರಿಗೊಳಿಸುವುದರ ಮೇಲೆಯೂ ಸಮಿತಿ ನಿಗಾ ಇಡಬೇಕು.

೩. ಅದರ ಜತೆಗೆ ಎಲ್ಲ ಐದು ಮೈನಿಂಗ್ ಲೈಸೆನ್ಸ್‌ದಾರರ ಗಣಿ ಗಾರಿಕೆ ಮೇಲೆ ನಿಷೇಧ ಹೇರುವ ಮೂಲಕ ಆದೇಶವನ್ನು ಜಾರಿಗೊಳಿಸುವಂತೆ ಅರಣ್ಯ ಸಚಿವಾಲಯಕ್ಕೆ ನಿರ್ದೇಶನ ನೀಡಬೇಕು. 2009, ಮೇ 1ರ ಆದೇಶದಲ್ಲಿ ಸುಪ್ರೀಂಕೋರ್ಟ್ ಸೂಚಿಸಿರುವಂತೆ 6 ವಾರಗಳೊಳಗೆ ಭಾರತದ ಸರ್ವೇಕ್ಷಣಾ ಸಂಸ್ಥೆ ತನ್ನ ಸರ್ವೆ ಕಾರ್ಯ ವನ್ನು ಪೂರ್ಣಗೊಳಿಸುವಂತೆ ಮಾಡಬೇಕು.

ಅಷ್ಟೇ ಅಲ್ಲ…

ಟಪಾಲ್ ಗಣೇಶ್ ತಮ್ಮ ಅರ್ಜಿಯಲ್ಲಿ ಕೆಲವು ಗಂಭೀರ ಹಾಗೂ ಬಹುಮುಖ್ಯ ಪ್ರಶ್ನೆಗಳನ್ನೂ ಎತ್ತಿದ್ದರು. “ರಾಜಕೀಯವಾಗಿ ಅತ್ಯಂತ ಬಲಿಷ್ಠ ಹಾಗೂ ಪ್ರಭಾವಿ ವ್ಯಕ್ತಿಯೊಬ್ಬರು ಓಬುಳಾಪುರಂ ಮೈನಿಂಗ್ ಕಂಪನಿ ಪ್ರೈವೇಟ್ ಲಿಮಿಟೆಡ್‌ನ ಒಡೆಯರಾಗಿದ್ದಾರೆ. ಅದರ ವ್ಯವಸ್ಥಾಪಕ ನಿರ್ದೇಶಕ ಮತ್ತಾರೂ ಅಲ್ಲ ಕರ್ನಾಟಕ ಸರಕಾರದಲ್ಲಿ ಕ್ಯಾಬಿನೆಟ್ ಸಚಿವರಾಗಿರುವ ಜನಾರ್ದನ ರೆಡ್ಡಿ. ಆತ ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ದಿವಂಗತ ವೈ.ಎಸ್. ರಾಜಶೇಖರ ರೆಡ್ಡಿಯವರ ಪುತ್ರನ ಜತೆ ವ್ಯವಹಾರ-ಸಹಕಾರ ಹೊಂದಿದ್ದಾರೆ. ಹಾಗಾಗಿ ಓಬುಳಾಪುರಂ ಮೈನಿಂಗ್ ಕಂಪನಿ ತಾನು ಪರವಾನಗಿ ಹೊಂದಿರುವ ಭೂಮಿಯ ವ್ಯಾಪ್ತಿಯಾಚೆಗಿನ ಸಂಪದ್ಭರಿತ ಜಾಗವನ್ನೂ ಒತ್ತುವರಿ ಮಾಡಿದೆ ಹಾಗೂ ಅರಣ್ಯ ಭೂಮಿಯಲ್ಲಿ ಅಕ್ರಮವಾಗಿ ಭಾರೀ ಪ್ರಮಾಣದಲ್ಲಿ ಗಣಿಗಾರಿಕೆ ನಡೆಸುತ್ತಿದೆ. ಕರ್ನಾಟಕ-ಆಂಧ್ರ ಗಡಿಯನ್ನು ಪ್ರತ್ಯೇಕಿಸುವ ಹೆಗ್ಗುರುತಾದ ಸುಂಕುಳಮ್ಮ ದೇವಾಲಯವನ್ನೂ ನಾಶಪಡಿಸಿದೆ. ಒತ್ತುವರಿಯನ್ನು ಚಟ ಮಾಡಿಕೊಂಡಿರುವ ಓಬುಳಾಪುರಂ ಮೈನಿಂಗ್ ಕಂಪನಿ ಇತರ ಪರವಾನಗಿದಾರರ ಭೂಮಿಯನ್ನೂ ಕಬಳಿಸುತ್ತಿದೆ. ಹಾಗಾಗಿ ಭಾರತೀಯ ಸರ್ವೇಕ್ಷಣಾ ಸಂಸ್ಥೆ ಅಕ್ರಮವಾಗಿ ಗಣಿಗಾರಿಕೆ ನಡೆ ಯುತ್ತಿರುವ ಅರಣ್ಯ ಭೂಮಿಯನ್ನೂ ಗುರುತಿಸಬೇಕು. ಆ ಮೂಲಕ ಓಬುಳಾಪುರಂ ಕಂಪನಿಯ ಕಾನೂನುಬಾಹಿರ ಗಣಿಗಾರಿಕೆಯನ್ನು ಪತ್ತೆ ಮಾಡಬೇಕು”.

2009, ಫೆಬ್ರವರಿ 23ರಂದು ಆ ಅರ್ಜಿಯನ್ನು ಪರಿಸರ ಹಾಗೂ ಅರಣ್ಯ ಸಚಿವಾಲಯಕ್ಕೆ ಕಳುಹಿಸಲಾಯಿತು. ಅದು ತನ್ನ ಸ್ಥಳೀಯ ಕಚೇರಿಯ ವರದಿ, ಅರಣ್ಯ ಸಲಹಾ ಸಮಿತಿ ಶಿಫಾರಸು ಹಾಗೂ ಸೆಂಟ್ರಲ್ ಎಂಪವರ್ಡ್ ಕಮಿಟಿಯ ಟಿಪ್ಪಣಿ-ಸಲಹೆಗಳ ಆಧಾರದ ಮೇಲೆ ಅರಣ್ಯ ಸಂರಕ್ಷಣಾ ಕಾಯಿದೆಯಡಿ ಮಂಜೂರು ಮಾಡ ಲಾಗಿದ್ದ ಐದು ಮೈನಿಂಗ್ ಲೈಸೆನ್ಸ್‌ಗಳನ್ನು ಸ್ಥಗಿತಗೊಳಿಸಿತು. (68.53 ಹೆಕ್ಟೇರ್ ಭೂಮಿಯಲ್ಲಿ ಗಣಿಗಾರಿಕೆ ನಡೆಸಲು ಓಬುಳಾಪುರಂ ಮೈನಿಂಗ್ ಕಂಪನಿ ಪ್ರೈ ಲಿ. ನೀಡಿದ್ದ ಪರವಾನಗಿಯೊಂದನ್ನು ಹೊರತುಪಡಿಸಿ) ಭಾರತೀಯ ಸರ್ವೇಕ್ಷಣಾ ಸಂಸ್ಥೆ ಖುದ್ದು ಭೂ ಸಮೀಕ್ಷೆ ನಡೆಸಿ ಐವರು ಲೈಸೆನ್ಸ್‌ದಾರರಿಗೆ (ಬಳ್ಳಾರಿ ಐರನ್ ಓರ್ ಪ್ರೈ ಲಿ., ವೈ.ಎಂ. ಆಂಡ್ ಸನ್, ಓಬುಳಾಪುರಂ ಮೈನಿಂಗ್ ಕಂಪನಿ ಪ್ರೈ ಲಿ.(1), ಓಬುಳಾಪುರಂ ಮೈನಿಂಗ್ ಕಂಪನಿ ಪ್ರೈ ಲಿ.(2), ಅನಂತಪುರ ಮೈನಿಂಗ್ ಕಾರ್ಪೊರೇಶನ್) ಸೇರಿದ ಭೂಮಿಯ ಗಡಿಯನ್ನು ಗುರುತಿಸಬೇಕು ಹಾಗೂ ಗಡಿ ಗುರುತು ಮಾಡದೇ ಗಣಿಗಾರಿಕೆಗೆ ಅವಕಾಶ ಮಾಡಿಕೊಟ್ಟಿರುವ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳ ಬೇಕು ಎಂದೂ ಸೂಚಿಸಲಾಯಿತು. ಇಷ್ಟಾಗಿಯೂ ವೈ.ಎಸ್. ರಾಜ ಶೇಖರ ರೆಡ್ಡಿಯವರ ಆಂಧ್ರ ಸರಕಾರ 2009, ಏಪ್ರಿಲ್ 28ರಂದು ಪತ್ರವೊಂದನ್ನು ಬರೆದು ಐವರಲ್ಲಿ ಯಾವುದೇ ಪರವಾನಗಿದಾರರು ಅರಣ್ಯ ಭೂಮಿಯನ್ನು ಒತ್ತುವರಿ ಮಾಡಿಲ್ಲ ಎಂದು ಪರಿಸರ ಹಾಗೂ ಅರಣ್ಯ ಇಲಾಖೆಗೆ ತಿಳಿಸಿತು! ಅಲ್ಲದೆ ಪರವಾನಗಿ ನೀಡಿರುವ ವ್ಯಾಪ್ತಿಯಾಚೆಗಿನ ರಕ್ಷಿತ ಅರಣ್ಯದಲ್ಲಿ ಗಣಿಗಾರಿಕೆ ನಡೆಸಲು ತಾನು ಅವಕಾಶ ಮಾಡಿಕೊಟ್ಟಿಲ್ಲ ಎಂದು ಸ್ಪಷ್ಟಪಡಿಸಿತು. ತದನಂತರ ಪರಿಸರ ಹಾಗೂ ಅರಣ್ಯ ಇಲಾಖೆ ಮತ್ತೆ ಗಣಿಗಾರಿಕೆಗೆ ಅನುಮತಿ ನೀಡಿತು! ಆದರೆ ಮೈನಿಂಗ್ ಲೀಸ್ ಕೊಡಲಾಗಿದ್ದ ಸ್ಥಳ ಪರೀಕ್ಷೆ ನಡೆಸಿದ ಪರಿಸರ ಹಾಗೂ ಅರಣ್ಯ ಇಲಾಖೆಯ ಸ್ಥಳೀಯ ಕಚೇರಿ 2009, ಅಗಸ್ಟ್ 1ರಂದು ವರದಿಯೊಂದನ್ನು ನೀಡಿತು. ಅದರಲ್ಲಿ ಆಂಧ್ರ ಸರಕಾರ ನೀಡಿದ್ದ ಸಮಜಾಯಿಷಿಗೆ ತದ್ವಿರುದ್ಧವಾದ ಟಿಪ್ಪಣಿಗಳನ್ನು ಮಾಡಿತು!

1)ಎಚ್. ಸಿದ್ದಾಪುರ ಹಾಗೂ ಓಬುಳಾಪುರಂಗಳನ್ನು ಪ್ರತ್ಯೇಕಿಸುವ ರೇಖೆ 1986ರ ನಕಾಶೆಯಲ್ಲಿ ಗುರುತು ಮಾಡಲಾಗಿರುವ ರೇಖೆ ಜತೆ ಯಾವ ವಿಧದಲ್ಲೂ ಹೊಂದಾಣಿಕೆಯಾಗುವುದಿಲ್ಲ. 2) ಆಂಧ್ರದ ಓಬುಳಾಪುರಂ-ಸಿದ್ದಾಪುರ ಮತ್ತು ಕರ್ನಾಟಕದ ಹಳಕುಂಡಿ -ವೊನ್ನಾಹಳ್ಳಿಯನ್ನು ಪ್ರತ್ಯೇಕಿಸುವ ರೇಖೆ ಕೂಡ ಅನು ಮಾನಾಸ್ಪ ದವಾಗಿದೆ. 3) ಈ ಮೇಲಿನ ಐದೂ ಮೈನಿಂಗ್ ಲೈಸೆನ್ಸ್‌ಗಳ ಭೂಭಾಗ ಅಕ್ಕಪಕ್ಕದಲ್ಲಿದ್ದು ಒಂದೇ ವ್ಯಾಪ್ತಿಯಲ್ಲಿವೆ. ಆದರೆ ರಕ್ಷಿತ ಅರಣ್ಯವನ್ನು ಒತ್ತುವರಿ ಮಾಡುವುದಿಲ್ಲ, ಕಾಯಿದೆಯನ್ನು ಉಲ್ಲಂಘಿಸಿಲ್ಲ ಎನ್ನುವುದಾದರೆ ಸೂಕ್ತ ಸ್ಕೆಚ್‌ಗಳನ್ನೇಕೆ ನೀಡಿಲ್ಲ?

ಈ ಟಿಪ್ಪಣಿಗಳನ್ನು ನೋಡಿದಾಗ ವೈ.ಎಸ್.ಆರ್. ಸರಕಾರ ಮೈನಿಂಗ್ ಗಡಿಯನ್ನು ನಿರ್ಧರಿಸುವಲ್ಲಿ ಉದ್ದೇಶಪೂರ್ವಕವಾ ಗಿಯೇ ಗಂಭೀರ ಲೋಪಗಳನ್ನೆಸಗಿದೆ ಎಂಬುದು ಸ್ಪಷ್ಟವಾಗುತ್ತದೆ.

ಇಂದು ಅನಂತಪುರ-ಬಳ್ಳಾರಿಯನ್ನು ಬಹುವಾಗಿ ಲೂಟಿ ಮಾಡುತ್ತಿರುವುದು ಈ ೫ ಮೈನಿಂಗ್ ಲೈಸೆನ್ಸ್ ಹೊಂದಿರುವವರೇ. ಅವುಗಳಲ್ಲಿ 4 ಲೈಸೆನ್ಸ್‌ಗಳು ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಜನಾರ್ದನ ರೆಡ್ಡಿಯವರದ್ದಾಗಿವೆ. ಇತ್ತ ಆಂಧ್ರ ಹಾಗೂ ಕರ್ನಾಟಕದ ಗಡಿಯನ್ನು ಪ್ರತ್ಯೇಕಿಸುವ ಮತ್ತು 1980ರ ಸಂರಕ್ಷಿತ ಅರಣ್ಯ ಕಾಯಿದೆಯಲ್ಲಿ ‘ನೋ ಮ್ಯಾನ್ಸ್ ಲ್ಯಾಂಡ್’ ಎಂದು ಗುರುತಿಸಲಾಗಿರುವ ಸುಂಕುಳಮ್ಮ ದೇವಸ್ಥಾನ ಇಂದು ಹುಡುಕಿದರೂ ಕಾಣ ಸಿಗುವುದಿಲ್ಲ. ಅದು ಹೋಗಿದ್ದೆಲ್ಲಿಗೆ? ರೆಡ್ಡಿಗಳು ದೇವಾಲಯವನ್ನೂ ನುಂಗಿ ನೀರು ಕುಡಿದಿದ್ದಾರೆ. ಇಷ್ಟಾಗಿಯೂ ಆಂಧ್ರ ಸರಕಾರ ರೆಡ್ಡಿಗಳು ಅಕ್ರಮ ಗಣಿಗಾರಿಕೆ ಮಾಡಿಯೇ ಇಲ್ಲ ಎಂದು ಪರಿಸರ ಹಾಗೂ ಅರಣ್ಯ ಇಲಾಖೆಗೆ ವರದಿ ಸಲ್ಲಿಸಿತು. ಆ ಕಾರಣಕ್ಕಾಗಿಯೇ ಆಂಧ್ರ ಸರಕಾರದ ವಸ್ತುನಿಷ್ಠತೆ, ನಿಷ್ಪಕ್ಷಪಾತತೆ ಬಗ್ಗೆ ಗಂಭೀರ ಅನುಮಾನಗಳಿವೆ ಎಂದು ಸೆಂಟ್ರಲ್ ಎಂಪವರ್ಡ್ ಕಮಿಟಿ ತನ್ನ ವರದಿಯಲ್ಲಿ ಟೀಕಾಪ್ರಹಾರ ಮಾಡಿತು. ಜತೆಗೆ ಸುಂಕುಳಮ್ಮ ದೇವಸ್ಥಾನವಿದ್ದ ಸ್ಥಳವನ್ನು ಗುರುತಿಸಿ ಇನ್ನು ಮುಂದೆ ಯಾವುದೇ ಗಣಿಗಾರಿಕೆಗೆ ಅನುಮತಿ ನೀಡಬಾರದು ಎಂದು ಸೂಚಿಸಿತು. ಇಷ್ಟಾಗಿಯೂ ವೈಎಸ್‌ಆರ್ ಬದುಕಿರುವವ ರೆಗೂ ಯಾವ ಸಮಿತಿ, ಕೋರ್ಟ್ ಆದೇಶಗಳೂ ರೆಡ್ಡಿಗಳನ್ನು ಅಲ್ಲಾ ಡಿಸಲಾಗಲಿಲ್ಲ. ಯಾವಾಗ ವೈಎಸ್‌ಆರ್ ಅಕಾಲಿಕ ಮರಣವನ್ನಪ್ಪಿ ರೋಶಯ್ಯ ಆಂಧ್ರದ ಮುಖ್ಯಮಂತ್ರಿಯಾದರೋ ರೆಡ್ಡಿಗಳ ಗ್ರಹಚಾರ ವಕ್ರವಾಗತೊಡಗಿತು. ಜತೆಗೆ ತೆಲುಗುದೇಶಂ ಪಕ್ಷ ಕೂಡ ಜೋರಾಗಿ ಧ್ವನಿಯೆತ್ತಿತು. ಪರಿಣಾಮವಾಗಿ ಓಬುಳಾಪುರಂ ಮೈನಿಂಗ್ ಕಂಪನಿಯ ಗಣಿಗಾರಿಕೆ ಮೇಲೆ ನಿರ್ಬಂಧ ಹೇರಿದ ಆಂಧ್ರ ಸರಕಾರ, ಸಿಬಿಐ ತನಿಖೆಗೂ ಆದೇಶ ಮಾಡಿತು. ಆಂಧ್ರಕೋರ್ಟ್ ನಲ್ಲಿ ಅದಕ್ಕೆ ತಡೆಯಾe ತರುವಲ್ಲಿ ರೆಡ್ಡಿಗಳು ಯಶಸ್ವಿಯಾದರೂ ಸುಪ್ರೀಂಕೋರ್ಟ್‌ನಲ್ಲಿ ಹಿನ್ನಡೆ ಅನುಭವಿಸಬೇಕಾಯಿತು. ಮೊನ್ನೆ ಮಾರ್ಚ್ 22ರಂದು ಓಬುಳಾಪುರಂ ಕಂಪನಿ ಆಂಧ್ರಪ್ರದೇಶದಲ್ಲಿ ನಡೆಸುತ್ತಿರುವ ಎಲ್ಲ ಗಣಿಗಾರಿಕೆಗಳಿಗೂ ಸುಪ್ರೀಂಕೋರ್ಟ್ ತಡೆ ಯಾe ನೀಡಿದ್ದಲ್ಲದೆ ಅಕ್ರಮ ಗಣಿಗಾರಿಕೆಯ ಸರ್ವೆ ನಡೆಸುವಂತೆ ಭಾರತೀಯ ಸರ್ವೇಕ್ಷಣಾ ಸಂಸ್ಥೆಗೆ ನಿರ್ದೇಶನ ನೀಡಿತು. ಸರ್ವೆ ಮುಗಿದು ವರದಿಯನ್ನು ನಿನ್ನೆ (ಏ. 9) ಸಲ್ಲಿಸಿದ್ದೂ ಆಗಿದೆ. ವರದಿ ಏನು ಹೇಳುತ್ತದೋ ಗೊತ್ತಿಲ್ಲ. ಆದರೆ… ಹಣಬಲದ ಮುಂದೆ ಇಂದು ಯಾವ ವ್ಯವಸ್ಥೆಯೂ ಏನೂ ಮಾಡುವುದಕ್ಕಾಗುವುದಿಲ್ಲ.

ಇಂಥದ್ದೊಂದು ಸಿನಿಕತೆ ಅತ್ತಕಡೆ ಇರಲಿ.

ಅಕ್ರಮ ಗಣಿಗಾರಿಕೆ ಆರೋಪ ರೆಡ್ಡಿಗಳ ಕುತ್ತಿಗೆಗೆ ಬರಲು ನಮ್ಮ ಕರ್ನಾಟಕದಲ್ಲಿ ಕಾರಣಕರ್ತರಾದ ವ್ಯಕ್ತಿ ಯಾರು? ಟಪಾಲ್ ಗಣೇಶ್! ಅವರ ಮೇಲೆ ಯಾರಾದರೂ ದಾಳಿ ಮಾಡಿದರೆ, ಮಾಡಿಸಿದರೆ ಯಾರು ಕಾರಣರಿರುತ್ತಾರೆ? ಟಪಾಲ್ ಗಣೇಶ್‌ಗೆ ಇರುವ ವೈರಿಯಾದರೂ ಯಾರು? ಅವರು ಯಾರನ್ನು ಎದುರು ಹಾಕಿಕೊಂಡಿದ್ದಾರೆ? ಆಂಧ್ರ ಅಸೆಂಬ್ಲಿಯಲ್ಲಿ ಅಕ್ರಮ ಗಣಿಗಾರಿಕೆ ವಿಚಾರವನ್ನೆತ್ತಿ ಗಲಾಟೆ ಮಾಡಿದ ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರನ್ನೇ “ನಿನ್ನನ್ನು ಮುಗಿಸುತ್ತೇನೆ”ಎಂದು ಬಹಿರಂಗವಾಗಿ ಧಮಕಿ ಹಾಕಿದ್ದ ವ್ಯಕ್ತಿ, ಟಪಾಲ್ ಗಣೇಶ್‌ರನ್ನು ಸುಮ್ಮನೆ ಬಿಟ್ಟಾರೆ?! ಗಣೇಶ್ ಮೇಲೆ ದಾಳಿ ನಡೆದಿದ್ದು ಮಾರ್ಚ್ 29ರಂದು. ಇವತ್ತಿಗೆ 13 ದಿನ ಕಳೆದರೂ ಯಾರನ್ನೂ ಏಕೆ ಬಂಧಿಸಿಲ್ಲ? ‘ಸರ್ವೇ ಆಫ್ ಇಂಡಿಯಾದ ಮುಂದೆ ನಾನು ಹಾಜರಾಗಬಾರದು ಎಂಬ ಕಾರಣಕ್ಕೆ ನನ್ನ ಮೇಲೆ ಜನಾರ್ದನ ರೆಡ್ಡಿ ಹಾಗೂ ಬಳಗದವರೇ ಹಲ್ಲೆ ಮಾಡಿಸಿದ್ದಾರೆ” ಎಂದು ಟಪಾಲ್ ಗಣೇಶ್ ಆರೋಪ ಮಾಡಿ ದ್ದಾರೆ. ಅಂದಮೇಲೆ ರೆಡ್ಡಿ ತಪ್ಪಿತಸ್ಥರೋ, ಇಲ್ಲವೋ. ಆರೋಪ ಹೊತ್ತಿರುವ ಅವರ ಹೇಳಿಕೆ ಪಡೆದುಕೊಳ್ಳಲೇಬೇಕು. ಹೀಗಿದ್ದರೂ ಪೊಲೀಸರೇಕೆ ಯಾರ ಸ್ಟೇಟ್‌ಮೆಂಟನ್ನೂ ರೆಕಾರ್ಡ್(ಹೇಳಿಕೆ ದಾಖಲು) ಮಾಡಿಲ್ಲ? ಈ ಮಧ್ಯೆ ಗೃಹಸಚಿವ ವಿ.ಎಸ್. ಆಚಾರ್ಯ, ಟಪಾಲ್ ಗಣೇಶ್ ಮೇಲಿನ ಹಲ್ಲೆಯಲ್ಲಿ ಜನಾರ್ದನರೆಡ್ಡಿಯವರದ್ದೇನೂ ಪಾತ್ರವಿಲ್ಲ ಎಂದು ಹೇಳಿಕೆ ನೀಡಿದ್ದಾರೆ. ಕ್ಲೀನ್ ಚಿಟ್ ಕೊಡುವುದು ನಂತರದ ಮಾತು, ಇದುವರೆಗೂ ರೆಡ್ಡಿಯ ಸ್ಟೇಟ್‌ಮೆಂಟನ್ನೇ ರೆಕಾರ್ಡ್ ಮಾಡಿಕೊಂಡಿಲ್ಲವೇಕೆ ಸ್ವಾಮಿ? ಇನ್ನು ಹಲ್ಲೆ ನಡೆದ ದಿನ ಆ ಬಗ್ಗೆ ಮಾಧ್ಯಮಗಳು ಮುಖ್ಯಮಂತ್ರಿಯವರನ್ನು ಪ್ರಶ್ನಿಸಿದರೆ ಮೊದಲಿಗೆ “ನನಗೇನೂ ಗೊತ್ತಿಲ್ಲ” ಎಂಬ ಉತ್ತರ ಬಂತು. “ಅಲ್ಲಾ ಸ್ವಾಮಿ ಅರಣ್ಯ ಸಚಿವರೂ ಆಗಿರುವ ನಿಮಗೇ ಗೊತ್ತಿಲ್ಲವೇ, ಸರ್ವೆ ನಡೆಯುತ್ತಿರುವ ವಿಚಾರ ತಿಳಿದಿಲ್ಲವೆ?’ ಎಂದಾಗ, ‘ಬಳ್ಳಾರಿಯಲ್ಲಿ ಏನೇ ನಡೆದರೂ ವ್ಯತಿರಿಕ್ತವಾಗಿ ವರದಿ ಮಾಡಲಾಗುತ್ತದೆ, ವೈಭವೀಕರಿಸಲಾಗುತ್ತದೆ” ಎಂಬ ಸಮಜಾಯಿಷಿ ಕೊಟ್ಟರು. ಹಲ್ಲೆ ಪ್ರಕರಣದ ಭವಿಷ್ಯ ಏನಾಗಲಿದೆ ಎಂಬುದು ಮುಖ್ಯಮಂತ್ರಿಯವರ ಆ ಹೇಳಿಕೆಯಲ್ಲೇ ಸ್ಪಷ್ಟವಾಗುತ್ತದೆ. ಟಪಾಲ್ ಗಣೇಶ್ ಕಥೆ ಬಿಡಿ, ಫೆಬ್ರವರಿ ೪ರ ರಾತ್ರಿ ಕೊಲೆಯಾದ ಬಿಜೆಪಿಯ ಬಳ್ಳಾರಿಯ ಮಾಜಿ ಮೇಯರ್ ಪದ್ಮಾವತಿ ಯಾದವ್ ಪ್ರಕರಣ ಎಲ್ಲಿಗೆ ಬಂತು? ಕೊಲೆಯಾಗಿ ಎರಡು ತಿಂಗಳಾದರೂ ಯಾರನ್ನೂ ಅರೆಸ್ಟ್ ಮಾಡಿಲ್ಲ! ಸೀಮಂತ್ ಕುಮಾರ್ ಸಿಂಗ್ ಎಂಬ ಎಸ್ಪಿ ಇರುವ ವರೆಗೂ ಯಾರೂ ಅರೆಸ್ಟ್ ಆಗೋಲ್ಲ. ಪರಿಸ್ಥಿತಿ ಹೀಗೆಯೇ ಮುಂದುವರಿದರೆ ಇಡೀ ಕರ್ನಾಟಕವೇ ರೆಡ್ಡಿಗಳಿಗೆ ಹೆದರಿ ಕುಳಿತುಕೊಳ್ಳಬೇಕಾಗುತ್ತದೆ. ಖ್ಯಾತ ಇಂಗ್ಲಿಷ್ ವಾರಪತ್ರಿಕೆ ‘ತೆಹಲ್ಕಾ’ ತನ್ನ ಏಪ್ರಿಲ್ ೩ರ ಸಂಚಿಕೆಯಲ್ಲಿ “It’s Rape, Reap, And Run” ಎಂಬ ಶೀರ್ಷಿಕೆಯಡಿ ರೆಡ್ಡಿಗಳು ನಡೆಸುತ್ತಿರುವ ಅಕ್ರಮ ಗಣಿಗಾರಿಕೆ, ದೌರ್ಜನ್ಯ ಹಾಗೂ ಸರಕಾರವನ್ನು ಒತ್ತೆಯಾಗಿಟ್ಟುಕೊಂಡಿರುವ ವಿಧಾನದ ಬಗ್ಗೆ ಪರಿಪರಿಯಾಗಿ ವಿವರಿಸಿದೆ. ಇದನ್ನೆಲ್ಲ ನೋಡುತ್ತಿದ್ದರೆ ಏನನ್ನಿಸುತ್ತದೆ? ಕರ್ನಾಟಕವನ್ನು ಆಳುತ್ತಿರುವುದು ಯಾರು? ಭಾರತೀಯ ಜನತಾ ಪಾರ್ಟಿಯೋ(ಬಿಜೆಪಿ) ಅಥವಾ ಬಳ್ಳಾರಿ(ಬಿ) ಜನಾರ್ದನರೆಡ್ಡಿ(ಜೆ) ಪಾರ್ಟಿಯೋ(ಪಿ)?

ಇದರ ವಿರುದ್ಧ ಧ್ವನಿಯೆತ್ತಬೇಕಾದವರು ಯಾರು?

Make no mistake, ನಮ್ಮ ರಾಜ್ಯದಲ್ಲಿ ಪ್ರತಿಕ್ಷಗಳೆನಿಸಿರುವ ಕಾಂಗ್ರೆಸ್ ಹಾಗೂ ಜೆಡಿಎಸ್‌ಗಳಲ್ಲೇನು ಎಲ್ಲರೂ ಸಾಚಾಗಳೇ ಇದ್ದಾರೆ ಎಂದುಕೊಳ್ಳಬೇಡಿ. ನನ್ನ “ಮೈನಿಂಗ್ ಮಾಫಿಯಾ” ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಲೋಕಾಯುಕ್ತ ನ್ಯಾ. ಸಂತೋಷ್ ಹೆಗ್ಡೆಯವರು ಮಾಡಿದ ಭಾಷಣವನ್ನೇ ತಿರುಳಾಗಿಟ್ಟುಕೊಂಡು ಬರೆದ “ಮೈನಿಂಗ್ ಮಾಫಿಯಾ, ಮಟ್ಟಹಾಕುವುದಕ್ಕೇಕೆ ಭಯ?” ಎಂಬ ಲೇಖನದಲ್ಲಿ ಮೈನಿಂಗ್‌ನಲ್ಲಿ ತೊಡಗಿರುವವರ ಪಟ್ಟಿಯಲ್ಲಿ ತನ್ನ ಹೆಸರನ್ನು ಉಲ್ಲೇಖಿಸಲಾಗಿದೆ ಎಂಬ ಕಾರಣಕ್ಕೆ ಕಾಂಗ್ರೆಸ್ ಅಧ್ಯಕ್ಷ ಆರ್.ವಿ. ದೇಶಪಾಂಡೆ ಪತ್ರ ಬರೆದಿದ್ದರು. ನಾನು ಬಹಳ ಸಾಚಾ, ಮೈನಿಂಗ್ ಅನ್ನು ಮೊದಲಿನಿಂದಲೂ ವಿರೋಧಿಸಿಕೊಂಡು ಬರುತ್ತಿ ದ್ದೇನೆ ಎಂದು ಪತ್ರ ಬರೆದ ಆರ್.ವಿ. ದೇಶಪಾಂಡೆಯವರ ಹಿರಿಯ ಮಗ ಪ್ರಸಾದ್ (ಮೊಮ್ಮಗ ‘ಧ್ರುವದೇಶ್’ ಹೆಸರಿನಲ್ಲಿ) ಚಿಕ್ಕನಾಯಕ ನಹಳ್ಳಿ ಹಾಗೂ ಹೊಸಪೇಟೆ ತಾಲೂಕಿನ ಬಿಳಿಗೆರೆಯಲ್ಲಿ ಮಾಡುತ್ತಿರು ವುದೇನು ಘನ ಕಾರ್ಯ ಎಂದುಕೊಂಡಿದ್ದೀರಾ? ಅವರೂ ಮೈನಿಂಗ್‌ನಲ್ಲಿ ತೊಡಗಿದ್ದಾರೆ. ಹಾಗಿರುವಾಗ ಯಾವ ಮುಖ ಇಟ್ಟುಕೊಂಡು ದೇಶಪಾಂಡೆ ರೆಡ್ಡಿಗಳ ವಿರುದ್ಧ ಮಾತನಾಡುತ್ತಾರೆ ಹೇಳಿ?! ಇನ್ನು ಮೊನ್ನೆ ಮಾರ್ಚ್‌ನಲ್ಲಿ ನಡೆದ ರಾಜ್ಯ ವಿಧಾನಸಭೆ ಅಧಿವೇಶನದಲ್ಲಿ ಗಣಿ ವಿವಾದದ ಬಗ್ಗೆ ಚರ್ಚೆ ನಡೆಯುತ್ತಿದ್ದರೆ ಕೆಪಿಸಿಸಿ ಅಧ್ಯಕ್ಷ ದೇಶಪಾಂಡೆ ಬಾಯಿಯೇ ಬಿಡಲಿಲ್ಲ, ಕಾರ್ಯಾಧ್ಯಕ್ಷ ಡಿ.ಕೆ. ಶಿವಕುಮಾರ್ ಸದನಕ್ಕೇ ಬರಲಿಲ್ಲ. ಏಕೆಂದರೆ ಅವರು ಮಾಡುತ್ತಿರುವುದೂ ಅದೇ ದಂಧೆ! ಇನ್ನು ಶಾಸಕಾಂಗ ಪಕ್ಷದ ನಾಯಕ ಸಿದ್ಧರಾಮಯ್ಯನವರು ಗಣಿ ಬಗ್ಗೆ ಗಂಭೀರವಾಗಿ ಮಾತ ನಾಡುವ ಬದಲು ಹಾಸ್ಯಚಟಾಕಿ ಹಾರಿಸಿ ಸುಮ್ಮನಾಗಿ ಬಿಡುತ್ತಾರೆ. ಮಾಜಿ ಪ್ರಧಾನಿ ದೇವೇಗೌಡರು ಗಣಿ ಬಗ್ಗೆ ಬೊಬ್ಬೆಹಾಕಿದರೂ ತಮ್ಮ ಪುತ್ರರಿಬ್ಬರ ಒಳವಹಿವಾಟು ಅವರ ಕೈಜಗ್ಗುತ್ತದೆ. ಇಂತಹ ಪರಿಸ್ಥಿತಿಯ ನಡುವೆಯೂ ಗಣಿ ಬಗ್ಗೆ ಒಂದಿಷ್ಟಾದರೂ ಕಾಳಜಿ ಇಟ್ಟುಕೊಂಡು ಯಾರಾದರೂ ಮಾತನಾಡುತ್ತಿದ್ದರೆ ಅದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ಎಂ.ಸಿ. ನಾಣಯ್ಯ ಅವರು ಮಾತ್ರ. ಖ್ಯಾತ ಸಾಹಿತಿ ಅನಂತಮೂರ್ತಿಯವರು ಸಾಮಾಜಿಕ ಕಾಳಜಿಯಿಂದ ಒಂದಷ್ಟು ದಿನಗಳ ಕಾಲ ಗಣಿಧಣಿಗಳ ವಿರುದ್ಧ ಧ್ವನಿಯೆತ್ತಿದ್ದರು. ಈಗ ಅವರೂ ಸುಮ್ಮನಾಗಿದ್ದಾರೆ. ಹಾಗಿರುವಾಗ ಸಾಮಾನ್ಯ ಜನರು ಯಾರ ಮೊರೆ ಹೋಗಬೇಕು?

ಅಥವಾ

ಅಸಹಾಯಕರಾಗಿ ಬಳ್ಳಾರಿ ಜನಾರ್ದನರೆಡ್ಡಿ ಪಾರ್ಟಿ(ಬಿಜೆಪಿ)ಗೆ ಜೈ ಎಂದು ಸುಮ್ಮನಾಗಬೇಕೋ?!

ಕೃಪೆ : ಪ್ರತಾಪ್ ಸಿಂಹ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ