ನನ್ನ ಬ್ಲಾಗ್ ಪಟ್ಟಿ

ಭಾನುವಾರ, ಆಗಸ್ಟ್ 22, 2010

ಮಾಡಿ ಅವರದ್ದೇ ಗುಣಗಾನ, ಮರೆಯದಿರಿ ಇವರ ಬಲಿದಾನ!

ಲಾ ಇಲಾಹ ಇಲ್ಲಲ್ಲಾಹು ಮುಹಮ್ಮದುರ್ ರಸೂಲುಲ್ಲ್ಲಾಹ್…

ಅವನ ತುಟಿಗಳು ಕಂಪಿಸಿದ್ದು ಅದೇ ಕಡೇ ಸಲ. ಅಲ್ಲಾಹುವಿಗೆ ಕೊನೆಯ ಪ್ರಾರ್ಥನೆಯನ್ನು ಸಲ್ಲಿಸಿ, ಕಣ್ಣು ತೆರೆದ. ಅಷ್ಟರೊಳಗೆ ಮುಖದ ಸುತ್ತ ಕಪ್ಪು ಚೀಲ ಆವರಿಸಿತ್ತು. ಕುಣಿಕೆ ಶಿರವನ್ನು ಸುತ್ತಿತ್ತು. ಕಾಲ ಕೆಳಗಿನ ಹಲಗೆ ಸರಿಯಿತು. ಶರೀರ ಬಾವಿಯೊಳಕ್ಕೆ ಧುಮುಕಿತು. ಹಗ್ಗ ಬಿಗಿಯಿತು, ಉಸಿರು ನಿಂತಿತು. ಅಲ್ಲಿಗೆ ಆಶ್ಫಾಕುಲ್ಲಾ ಖಾನ್ ಎಂಬ ಕ್ರಾಂತಿಕಾರಿಯ ವಿರೋಚಿತ ಹೋರಾಟ ಅಂತ್ಯವಾಯಿತು. ಎಲ್ಲರೂ ಒಂದಲ್ಲ ಒಂದು ದಿನ ಈ ಬುವಿಯನ್ನು ಬಿಟ್ಟುಹೋಗಲೇ ಬೇಕು. ಸಾವು ಅನಿವಾರ್ಯ. ಆದರೆ ಕೆಲವರು ಸಾವಿನಲ್ಲೂ ಅಮರತ್ವ ಕಾಣುತ್ತಾರೆ.

ಅಂಥವರಲ್ಲಿ ಆಶ್ಫಾಕುಲ್ಲಾ ಖಾನ್ ಕೂಡ ಒಬ್ಬ…

1900, ಅಕ್ಟೋಬರ್ 22ರಂದು ಜನಿಸಿದ ಆಶ್ಫಾಕ್‌ನ ತಂದೆ ಶಫೀಕುಲ್ಲಾ ಖಾನ್ ಬ್ರಿಟಿಷ್ ಆಡಳಿತದಲ್ಲಿ ಪೊಲೀಸ್ ಕೆಲಸದಲ್ಲಿ ದ್ದರು. ಮೂಲತಃ ಉತ್ತರ ಪ್ರದೇಶದ ಶಹಜಹಾನ್‌ಪುರದವರು. 1921ರಲ್ಲಿ ಮಹಾತ್ಮ ಗಾಂಧೀಜಿಯವರು ಅಸಹಕಾರ ಚಳವಳಿ ಆರಂಭಿಸಿದರು. ಬ್ರಿಟಿಷರಿಗೆ ಯಾರೂ ತೆರಿಗೆ ನೀಡಬೇಡಿ, ಬ್ರಿಟಿಷ್ ಆಡಳಿತದೊಂದಿಗೆ ಸಹಕರಿಸಬೇಡಿ ಎಂದು ಗಾಂಧೀಜಿ ನೀಡಿದ ಕರೆ ಇಡೀ ದೇಶವಾಸಿಗಳನ್ನು ಬಡಿದೆಬ್ಬಿಸಿತು. ಯುವಕ ಆಶ್ಫಾಕ್ ಮನ ಕೂಡ ಚಳವಳಿಯತ್ತ ಸೆಳೆಯಿತು. ಹೀಗೆ ದೇಶಕ್ಕೆ ದೇಶವೇ ಚಳವಳಿಗೆ ಧುಮುಕಿ ಬ್ರಿಟಿಷರಿಗೆ ನಡುಕು ಹುಟ್ಟಿಸಲಾರಂಭಿಸಿತು. ಅದು ಕೆಲವೊಮ್ಮೆ ಹಿಂಸಾಚಾರಕ್ಕೆ ತಿರುಗುವ ಲಕ್ಷಣವನ್ನೂ ತೋರಿತು. 1922, ಫೆಬ್ರವರಿ 4ರಂದು ಹಾಗೇ ಆಯಿತು. ಚೌರಿ ಚೌರಾ ಎಂಬಲ್ಲಿ ನಿಶ್ಶಸ್ತ್ರಧಾರಿ ಪ್ರತಿಭಟನಾಕಾರರ ಮೇಲೆ ಪೊಲೀಸರು ಗುಂಡುಹಾರಿಸಿ ಮೂವರನ್ನು ಹತ್ಯೆಗೈದಾಗ ರೊಚ್ಚಿಗೆದ್ದ ಜನ ಪೊಲೀಸ್ ಠಾಣೆಯನ್ನು ದಹಿಸಿದ ಕಾರಣ ೨೨ ಪೊಲೀಸರು ಪ್ರಾಣ ಕಳೆದುಕೊಳ್ಳಬೇಕಾಗಿ ಬಂತು. ಪ್ರತಿಭಟನೆ ಕೈಮೀರಿ ಹೋಗುವುದು, ಕೆಲವೊಮ್ಮೆ ಹಿಂಸಾಚಾರಕ್ಕೆ ತಿರುಗುವುದು ಸಹಜ ಹಾಗೂ ನಿರೀಕ್ಷಿತ. ಆದರೆ ಇಂಥದ್ದೊಂದು ಕ್ಷುಲ್ಲಕ ಕಾರಣವನ್ನೇ ದೊಡ್ಡದು ಮಾಡಿದ ಗಾಂಧೀ ಎಂಬ ಮಹಾತ್ಮ ಹಾಗೂ ಅವರ ಕಾಂಗ್ರೆಸ್ ಪಕ್ಷ ಅಸಹಕಾರ ಚಳಿವಳಿಯನ್ನೇ ಕೈಬಿಟ್ಟಿತು!

ಇಂಥ ನಿರ್ಧಾರದಿಂದಾಗಿ ಲಕ್ಷಾಂತರ ಯುವಕರು ನಿರಾಸೆಗೊಂಡರು.

ಅವರಲ್ಲಿ ಆಶ್ಫಾಕುಲ್ಲಾ ಖಾನ್ ಕೂಡ ಒಬ್ಬ. ಈ ದೇಶ ಆದಷ್ಟು ಬೇಗ ಸ್ವತಂತ್ರಗೊಳ್ಳಬೇಕು. ಅಂಥದ್ದೊಂದು ನಿರೀಕ್ಷೆ, ಉದ್ದೇಶವನ್ನಿಟ್ಟುಕೊಂಡಿದ್ದ ಆಶ್ಫಾಕ್ ಕ್ರಾಂತಿಕಾರಿಗಳ ಪಡೆ ಸೇರಲು ಮುಂದಾದ. ಆ ಕಾಲದಲ್ಲಿ ಶಹಜಹಾನ್‌ಪುರದಲ್ಲಿ ದೊಡ್ಡ ಕ್ರಾಂತಿಕಾರಿಯೆಂದರೆ ರಾಮ್‌ಪ್ರಸಾದ್. ಹೌದು, ಪಂಡಿತ್ ರಾಮ್‌ಪ್ರಸಾದ್ ಬಿಸ್ಮಿಲ್!! ಆತನ ಜತೆ ದೋಸ್ತಿ ಬೆಳೆಸಲು ದೊಡ್ಡ ಅಡಚಣೆಯೊಂದಿತ್ತು. ರಾಮ್‌ಪ್ರಸಾದ್ ‘ಆರ್ಯಸಮಾಜ’ದ ಸದಸ್ಯ. ಕ್ರಾಂತಿಕಾರಿಗಳಿಗೆ ಹಿಂದೂ ಧರ್ಮದ ಹಿರಿಮೆ, ಮಹಿಮೆ ಯನ್ನು ಸಾರುತ್ತಿದ್ದ. ಇಚ್ಛಿಸಿದವರನ್ನು ಮರಳಿ ಮಾತೃಧರ್ಮಕ್ಕೆ ಕರೆತರುವ ಕಾರ್ಯವನ್ನೂ ಮಾಡುತ್ತಿದ್ದ. ಅಂತಹ ಪ್ರತಿeಯನ್ನೂ ಗೈದಿದ್ದ, ಪಣವನ್ನೂ ತೊಟಿದ್ದ. ಇತ್ತ ಆಶ್ಫಾಕ್ ಅಷ್ಟೇ ದೈವನಿಷ್ಠ, ಶ್ರದ್ಧಾವಂತ ಮುಸ್ಲಿಂ. ಹಾಗಂತ ರಾಮ್‌ಪ್ರಸಾದ್‌ನ ಸ್ನೇಹಕ್ಕೆ ಕೈಚಾಚಲು ಆತನಿಗೆ ಧರ್ಮ ಅಡ್ಡಿ ಬರಲಿಲ್ಲ. ಹಾಗೆ ನೋಡಿದರೆ ಆಶ್ಫಾಕ್ ಜತೆ ದೋಸ್ತಿ ಮಾಡಲು ರಾಮ್‌ಪ್ರಸಾದ್‌ಗೇ ಇಷ್ಟವಿರ ಲಿಲ್ಲ, ಅಳುಕು, ಅನುಮಾನ ತೋರತೊಡಗಿದ, ಪ್ರಾರಂಭದಲ್ಲಿ ನಿರಾಕರಣೆಯನ್ನೂ ಮಾಡಿದ. ಸಾವನ್ನು ಎದುರು ನೋಡುತ್ತಾ ಜೈಲಿನಲ್ಲಿ ಕುಳಿತಿರುವಾಗ ಗೌಪ್ಯವಾಗಿ ಬರೆದ ತನ್ನ ಆತ್ಮಚರಿತ್ರೆಯಲ್ಲಿ ರಾಮ್ ಪ್ರಸಾದ್ ಬಿಸ್ಮಿಲ್, ತಮ್ಮಿಬ್ಬರ ನಡುವಿನ ಮೊದಲ ಭೇಟಿ ಹಾಗೂ ತನ್ನೊಳಗೆ ತಲೆಯೆತ್ತಿದ ಅನುಮಾನದ ಬಗ್ಗೆ ಹೀಗೆ ಹೇಳುತ್ತಾನೆ.

“ನಾವಿಬ್ಬರು ಶಹಜಹಾನ್‌ಪುರದ ಶಾಲೆಯಲ್ಲಿ ಮೊದಲ ಬಾರಿಗೆ ಭೇಟಿಯಾಗಿದ್ದು ನನಗೆ ಚೆನ್ನಾಗಿ ನೆನಪಿದೆ. ಬ್ರಿಟಿಷರು ಶಾಶ್ವತವಾಗಿ ಭಾರತವನ್ನಾಳುವ ಉದ್ದೇಶವನ್ನು ಬಹಿರಂಗಪಡಿಸಿದ ನಂತರ ನಮ್ಮ ಭೇಟಿ ನಡೆಯಿತು. ನೀನು ನನ್ನನ್ನು ಭೇಟಿಯಾಗಲು, ಬಹುಮುಖ್ಯ ವಿಷಯವೊಂದರ ಬಗ್ಗೆ ಮಾತುಕತೆ ನಡೆಸಲು ಪ್ರಾಮಾಣಿಕವಾಗಿಯೇ ಪ್ರಯತ್ನಿಸುತಿದ್ದೆ. ಆದರೆ ಮುಸ್ಲಿಮನಾದ ಕಾರಣ ನಿನ್ನ ಉದ್ದೇಶದ ಬಗ್ಗೆ ನಾನು ಸಂಶಯ ಹೊಂದಿದೆ. ನಿನ್ನ ಜತೆ ನಾನು ಅವಮಾನಕಾರಿಯಾಗಿ ಮಾತನಾಡಿದಾಗ ನೀನು ತುಂಬಾ ನೊಂದುಕೊಂಡೆ ಎಂದು ನನಗೆ ಗೊತ್ತು. ಇಷ್ಟಾಗಿಯೂ ನೀನು ಸೋಗುಹಾಕುತ್ತಿಲ್ಲ, ಪ್ರಾಮಾಣಿಕ ಕಾಳಜಿ ಹೊಂದಿದ್ದೀಯಾ ಎಂಬುದನ್ನು ಸ್ನೇಹಿತರ ಮೂಲಕ ಮನವರಿಕೆ ಮಾಡಿಕೊಡಲು ಯತ್ನಿಸಿದೆ. ನೀನು ಈ ದೇಶಕ್ಕಾಗಿ ಹೋರಾಡಲು ಕಟಿಬದ್ಧವಾಗಿದ್ದೆ. ಕೊನೆಗೆ ಜಯ ನಿನ್ನದಾಯಿತು. ನಿನ್ನ ಪ್ರಯತ್ನದಿಂದ ನನ್ನ ಹೃದಯದಲ್ಲೂ ಸ್ಥಾನ ಪಡೆದೆ…”

ಹಾಗೆನ್ನುವ ರಾಮ್‌ಪ್ರಸಾದ್ ಹಾಗೂ ಆಶ್ಫಾಕ್ ನಡುವೆ ಕೊನೆಗೂ ಸ್ನೇಹ ಬೆಳೆಯಿತು.

ಒಟ್ಟಿಗೇ ವಾಸ, ಒಟ್ಟಿಗೇ ಊಟ ಆರಂಭವಾಯಿತು. ರಿವಾ ಲ್ವರ್, ಬಾಂಬ್ ಹಾಗೂ ಇತರ ಶಸ್ತ್ರಾಸ್ತ್ರಗಳಿಂದ ಮಾತ್ರ ಬ್ರಿಟಿಷರನ್ನು ಬಗ್ಗುಬಡಿಯಲು ಸಾಧ್ಯ ಎಂದು ಭಾವಿಸಿದರು. ಅವರ ಎಲ್ಲ ಚಟುವಟಿಕೆಗಳ ಮುಖ್ಯ ಕೇಂದ್ರ ಕಾಶಿ(ವಾರಾಣಸಿ) ಆಗಿತ್ತು. ಎಲ್ಲರೂ ಸೇರಿ ‘ಹಿಂದೂಸ್ಥಾನ್ ರಿಪಬ್ಲಿಕನ್ ಆರ್ಮಿ’ ಎಂಬ ಸಂಘಟನೆ ಆರಂಭಿಸಿದರು. ಶಸ್ತ್ರಾಸ್ತ್ರ ಕ್ರಾಂತಿಯ ಮೂಲಕ ದೇಶವನ್ನು ದಾಸ್ಯದಿಂದ ವಿಮೋಚನೆ ಮಾಡುವುದು ಅದರ ಉದ್ದೇಶವಾಗಿತ್ತು. 1925ರಲ್ಲಿ ಸಂಘಟನೆ ತನ್ನ ಪ್ರಣಾಳಿಕೆಯನ್ನು ಹೊರತಂದಿತು. ಅದರ ಹೆಸರು ‘ಕ್ರಾಂತಿಕಾರಿ’. ಶಹಜಹಾನ್‌ಪುರದ ಮುಖ್ಯ ಸಂಘಟಕ ರಾಮ್‌ಪ್ರಸಾದ್ ಬಿಸ್ಮಿಲ್ಲಾನೇ ಆಗಿದ್ದ. ತಮ್ಮ ಕ್ರಾಂತಿಕಾರಿ ಚಟುವಟಿಕೆಯನ್ನು ಮುಂದುವರಿಸಲು ಬೇಕಾದ ಹಣ ಸಂಗ್ರಹಣೆಗಾಗಿ ಸುತ್ತಮುತ್ತಲಿನ ಗ್ರಾಮಗಳ ಶ್ರೀಮಂತರ ಮನೆಗಳನ್ನು ಲೂಟಿ ಮಾಡಲಾರಂಭಿಸಿದರು. ಪರವಾನಗಿ ಹೊಂದಿದ್ದ ಅಣ್ಣನ ರೈಫಲ್‌ನ ಹೊತ್ತು ತಂದ ಆಶ್ಫಾಕ್ ಲೂಟಿಯಲ್ಲಿ ಮುಖ್ಯಪಾತ್ರ ವಹಿಸತೊಡಗಿದ. ಆದಾಗ್ಯೂ ಇಂತಹ ಲೂಟಿಗಳಿಂದ ದೊರೆಯುತ್ತಿದ್ದ ಹಣದ ಪ್ರಮಾಣ ತೀರಾ ಕಡಿಮೆಯಾಗಿರುತ್ತಿತ್ತು. ರಿವಾಲ್ವರ್, ಬಾಂಬ್ ತಯಾರಿಸುವ ಚಟುವಟಿಕೆಗೆ ಅಪಾರ ನಿಧಿ ಬೇಕಿತ್ತು.

ಆಗ ಹೊಳೆದಿದ್ದೇ ‘ಕಾಕೋರಿ ಟ್ರೇನ್ ರಾಬರಿ’!

ಒಮ್ಮೆ ಶಹಜಹಾನ್‌ಪುರದಿಂದ ಲಖನೌಗೆ ಪ್ರಯಾಣಿಸುತ್ತಿದ್ದ ರಾಮ್‌ಪ್ರಸಾದ್, ಪ್ರತಿ ಠಾಣೆಯಲ್ಲೂ ಹಣದ ಚೀಲವನ್ನು ರೈಲಿನ ಗಾರ್ಡ್‌ಗಳ ವ್ಯಾನಿಗೆ ತುಂಬುವುದನ್ನು ಗಮನಿಸಿದ. ಲಖನೌದಲ್ಲಿ ಅಷ್ಟೇನು ಪೊಲೀಸ್ ಭದ್ರತೆ ಇಲ್ಲ ಎಂಬುದನ್ನೂ ಖಾತ್ರಿ ಮಾಡಿಕೊಂಡ. ಕನಿಷ್ಠ ೧೦ ಸಾವಿರ ರೂ.ಗಳಾದರೂ ಚೀಲದಲ್ಲಿರುತ್ತದೆ ಎಂದು ಅಂದಾಜು ಮಾಡಿದ. ರೈಲಿನ ನಂಬರ್ ಹಾಗೂ ಸಮಯವನ್ನು ದಾಖಲು ಮಾಡಿಕೊಂಡ. ಖ್ಯಾತ ‘ಕಾಕೋರಿ ರೈಲು ಲೂಟಿ’ ಪಿತೂರಿ ಸ್ಕೆಚ್ ಆರಂಭವಾಗಿದ್ದೇ ಅಲ್ಲಿಂದ. ಕಾಶಿ, ಕಾನ್ಪುರ, ಲಖನೌ ಹಾಗೂ ಆಗ್ರಾದ ಕ್ರಾಂತಿಕಾರಿಗಳ ಸಭೆಯಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿದ ರಾಮ್‌ಪ್ರಸಾದ್, ಲೂಟಿ ಯೋಜನೆಯನ್ನು ಮುಂದಿಟ್ಟ. ಒಂದು ವೇಳೆ, ರಾಬರಿಯಲ್ಲಿ ನಾವು ಯಶಸ್ವಿಯಾದರೆ ನಮ್ಮ ಚಟುವಟಿಕೆಗೆ ಬೇಕಾದ ಸಂಪೂರ್ಣ ಹಣ ದೊರೆಯುತ್ತದೆ. ಪ್ರಯಾಣಿಕರಿಗೆ ತೊಂದರೆಯಾಗದಂತೆಯೇ ಯೋಜನೆಯನ್ನು ಕಾರ್ಯಗತ ಮಾಡಿಕೊಳ್ಳಬಹುದು. ಆದರೆ ಕೆಲಸ ಸ್ವಲ್ಪ ಕಷ್ಟ ಹಾಗೂ ಬಹಳ ಎಚ್ಚರಿಕೆಯಿಂದ ಮಾಡಬೇಕು ಎಂದು ಮಾತು ಮುಗಿಸಿದ. ಆಶ್ಫಾಕ್ ವಿರೋಧ ವ್ಯಕ್ತಪಡಿಸಿದ. ಇದೊಂದು ಆತುರದ ಕ್ರಮ. ನಮ್ಮ ಬಲಾಬಲಕ್ಕೂ ಸರಕಾರದ ಸಾಮರ್ಥ್ಯಕ್ಕೂ ತಾಳೆಹಾಕಲು ಸಾಧ್ಯವೇ? ಸಣ್ಣಪುಟ್ಟ ಕಳ್ಳತನ ಮಾಡಿ ಸಿಕ್ಕಿಬಿದ್ದಾಗಲೇ ಪೊಲೀಸರ ಆತಿಥ್ಯ ಸ್ವೀಕರಿಸಬೇಕಾಗುತ್ತದೆ. ಇನ್ನು ಸರಕಾರದ ಹಣ ಲೂಟಿ ಮಾಡಿದರೆ ಇಡೀ ಪೊಲೀಸ್ ಪಡೆಯನ್ನೇ ಬಳಸಿ ನಮ್ಮನ್ನು ಹತ್ತಿಕ್ಕಲು ಮುಂದಾಗುತ್ತದೆ. ಈ ಐಡಿಯಾ ಬೇಡ, ಬಂಧನದಿಂದ ತಪ್ಪಿಸಿಕೊಳ್ಳಲು ಖಂಡಿತ ಸಾಧ್ಯವಿಲ್ಲ ಎಂದ ಆಶ್ಫಾಕ್. ಆದರೆ ಭಾವವೇಶದಿಂದಿದ್ದ ಕ್ರಾಂತಿಕಾರಿಗಳು ಒಂದು ಕೈ ನೋಡಿ ಬಿಡೋಣ ಎಂದ ಕಾರಣ, ಯೋಜನೆಯನ್ನು ಜಾರಿಗೆ ತರುವ ನಿರ್ಧಾರ ಕೈಗೊಳ್ಳಲಾಯಿತು. ಆಶ್ಫಾಕ್ ಕೂಡ ಶಿಸ್ತಿನ ಸಿಪಾಯಿಯಂತೆ ತಲೆಯಾಡಿಸಿದ. ಅಲ್ಲಿಗೆ ಅಂದಿನ ಮಾತುಕತೆ ಮುಗಿಯಿತು.

1925, ಆಗಸ್ಟ್ 9.

ಶಹಜಹಾನ್‌ಪುರದಿಂದ ಲಖನೌಗೆ ಹೊರಟಿದ್ದ ಎಂಟನೇ ನಂಬರ್‌ನ ರೈಲು ಕಾಕೋರಿಯನ್ನು ಸಮೀಪಿಸುತ್ತಿರುವಾಗ ಯಾರೋ ಎಮರ್ಜೆನ್ಸಿ ಚೈನು ಎಳೆದರು. ರೈಲು ನಿಂತಿತು. ಎರಡನೇ ದರ್ಜೆ ಬೋಗಿಯಲ್ಲಿದ್ದ ಆಶ್ಫಾಕ್, ಸಚೀಂದ್ರ ಬಕ್ಷಿ ಹಾಗೂ ರಾಜೇಂದ್ರ ಲಹಿರಿ ಕೂಡಲೇ ಕೆಳಗಿಳಿದರು. ಅಲ್ಲಿಗೆ ಯೋಜನೆಯ ಮೊದಲ ಹಂತ ಮುಗಿಯಿತು. ಚೈನು ಎಳೆದಿದ್ದು ಯಾವ ಭೋಗಿಯಲ್ಲಿ ಎಂದು ತಪಾಸಣೆ ಮಾಡಲು ಗಾರ್ಡ್ ಕೆಳಗಿಳಿದ. ಮೂವರೂ ಆತನನ್ನು ನೆಲಕ್ಕುರುಳಿಸಿದರು. ಇನ್ನಿಬ್ಬರು ಚಾಲಕನನ್ನು ರೈಲಿನಿಂದ ಕೆಳದಬ್ಬಿದರು. ರೈಲಿನ ತುದಿಯಲ್ಲಿ ನಿಂತ ಕ್ರಾಂತಿಕಾರಿ ಪಿಸ್ತೂಲ್ ತೆಗೆದು ಗುಂಡಿನ ಶಬ್ದಗೈದ. ಪ್ರಯಾಣಿಕರು ಬೆಚ್ಚಿಬಿದ್ದಿದ್ದನ್ನು ನೋಡಿ, ‘ನೀವ್ಯಾರೂ ಭಯಪಡಬೇಡಿ. ನಾವು ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿರುವ ಕ್ರಾಂತಿಕಾರಿಗಳು. ನಿಮಗೆ ಯಾವುದೇ ತೊಂದರೆ ಮಾಡುವುದಿಲ್ಲ. ಕದಲದೇ ಕುಳಿತುಕೊಳ್ಳಿ…” ಎಂದು ಕೂಗಿ ಹೇಳಿದರು. ಹಣದ ಚೀಲವನ್ನು ಹೊಂದಿದ್ದ ಕಬ್ಬಿಣದ ಕಪಾಟನ್ನು ಕೆಳಕ್ಕೆ ಹಾಕಿದರು. ಸುತ್ತಿಗೆ ತೆಗೆದು ಎಷ್ಟೇ ಬಡಿದರೂ ಪೆಟ್ಟಿಗೆ ಬಾಯಿ ತೆರೆಯುತ್ತಿಲ್ಲ… ಇದ್ದವರಲ್ಲಿ ಆಶ್ಫಾಕ್‌ನೇ ಕಟ್ಟುಮಸ್ತು. ಸುತ್ತಿಗೆ ತೆಗೆದುಕೊಂಡು ಜೋರಾಗಿ ಏಟು ಹಾಕತೊಡಗಿದ. ಕೊನೆಗೂ ಪೆಟ್ಟಿಗೆ ಒಡೆಯಿತು. ರಗ್ಗುಗಳಲ್ಲಿ ಹಣವನ್ನು ಸುತ್ತಿಕೊಂಡು, ತಲೆಮೇಲೆ ಹೊತ್ತು ಲಖನೌದತ್ತ ಹೊರಟರು. ಸ್ವಾತಂತ್ರ್ಯ ಗಳಿಸಲು ಯಾವ ಕಾರ್ಯಕ್ಕೂ, ಯಾವ ತ್ಯಾಗಕ್ಕೂ ಸಿದ್ಧರಾಗಿದ್ದ ಕ್ರಾಂತಿಕಾರಿಗಳ ಅಚಲ ನಂಬಿಕೆ, ಅಟಲ ನಿರ್ಧಾರ ಅಸಾಧ್ಯವನ್ನೂ ಸಾಧ್ಯವಾಗಿಸಿತು. ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಹೊಸ ಅಧ್ಯಾಯವೊಂದಕ್ಕೆ ನಾಂದಿ ಹಾಡಿತು. ಇಷ್ಟೆಲ್ಲಾ ಸಾಧಿಸಿದ್ದು ಕೇವಲ ೧೦ ಜನ!

ರಾಮ್‌ಪ್ರಸಾದ್ ಬಿಸ್ಮಿಲ್, ಆಶ್ಫಾಕುಲ್ಲಾ ಖಾನ್, ರಾಜೇಂದ್ರ ಲಹಿರಿ, ಠಾಕೂರ್ ರೋಶನ್ ಸಿಂಗ್, ಸಚೀಂದ್ರ ಬಕ್ಷಿ, ಚಂದ್ರ ಶೇಖರ್ ಆಝಾದ್, ಕೇಶವ ಚಕ್ರವರ್ತಿ, ಬನ್ವಾರಿ ಲಾಲ್, ಮುಕುಂದಿ ಲಾಲ್ ಮತ್ತು ಮನ್ಮಥ್ ನಾಥ್ ಗುಪ್ತಾ…

ಕಾಕೋರಿ ರೈಲು ರಾಬರಿ ನಡೆದು ಒಂದು ತಿಂಗಳು ಕಳೆದರೂ ಸರಕಾರಕ್ಕೆ ಯಾರೊಬ್ಬರನ್ನೂ ಬಂಧಿಸಲಾಗಲಿಲ್ಲ. ಆದರೆ ಅವರನ್ನೆಲ್ಲಾ ಹಿಡಿಯಲು ಸರಕಾರ ದೊಡ್ಡ ಬಲೆಯನ್ನೇ ಬೀಸಿತ್ತು, ಜಾಲವನ್ನೇ ಹರಡಿತ್ತು. 1925, ಆಗಸ್ಟ್ 26ರಂದು ರಾಮ್‌ಪ್ರಸಾದ್ ಬಿಸ್ಮಿಲ್ ಸಿಕ್ಕಿಬಿದ್ದ. ಅರೆಸ್ಟ್ ಮಾಡುವಷ್ಟರಲ್ಲಿ ಆಶ್ಫಾಕ್ ಪರಾರಿಯಾಗಿಬಿಟ್ಟ. ಎಲ್ಲರೂ ಸಿಕ್ಕಿಬಿದ್ದರೂ ಆಶ್ಫಾಕ್ ಮಾತ್ರ ಸಿಗಲಿಲ್ಲ. ಕಾಶಿಗೆ ಹೋಗುವಲ್ಲಿ ಯಶಸ್ವಿಯಾದ ಆತನನ್ನು ಬನಾರಸ್ ವಿಶ್ವವಿದ್ಯಾಲಯದ ಸ್ನೇಹಿತರು ಭೇಟಿಯಾದರು. ಸ್ವಲ್ಪ ಕಾಲ ಎಲ್ಲಾದರೂ ತಲೆಮರೆಸಿಕೊಂಡಿರು ಎಂದು ಸಲಹೆ ನೀಡಿದರು. ಸ್ನೇಹಿತರ ಸಹಾಯದಿಂದ ಬಿಹಾರ ತಲುಪಿದ ಆಶ್ಫಾಕ್, ಅಲ್ಲಿನ ಕಾರ್ಖಾನೆಯೊಂದರಲ್ಲಿ ಕೆಲಸಕ್ಕೆ ಸೇರಿಕೊಂಡ. ಹತ್ತು ತಿಂಗಳು ಕಳೆದವು. ಅದೆಕೋ ಜೀವನ ಬೇಸರವೆನಿಸತೊಡಗಿತು. ಹೇಗಾದರೂ ಮಾಡಿ ದಿಲ್ಲಿಗೆ ಹೋಗಿ ಅಲ್ಲಿಂದ ವಿದೇಶಕ್ಕೆ ತೆರಳಿ, ಚಳಿವಳಿಗೆ ಸೂಕ್ತ ತಯಾರಿ ಮಾಡಿಕೊಳ್ಳಬೇಕೆನಿಸಿತು. ಆಶ್ಫಾಕ್ ಮೂಲತಃ ಒಬ್ಬ ಪಠಾಣ. ಶಹಜಹಾನ್‌ಪುರದಲ್ಲಿ ಆತನ ಸಹಪಾಠಿಯಾಗಿದ್ದ ಪಠಾಣ್ ಒಬ್ಬ ಅನಿರೀಕ್ಷಿತವಾಗಿ ಸಿಕ್ಕಿದ. ತನ್ನ ಮನೆಗೆ ಕರೆದೊಯ್ದ ಆತ, ಆಶ್ಫಾಕ್‌ಗೆ ಒಳ್ಳೆಯ ಉಪಚಾರವನ್ನೇ ಮಾಡಿದ. ಬೆಳಗ್ಗೆ ಯಾರೋ ಬಾಗಿಲು ತಟ್ಟಿದಂತಾಯಿತು. ಎದುರಿಗೆ ಪೊಲೀಸರು! ಆ ಪಠಾಣ್ ಹಣದಾಸೆಗೆ ಸ್ನೇಹಿತನನ್ನೇ ಪೊಲೀಸರಿಗೊಪ್ಪಿಸಿದ. ಜೈಲಿನಲ್ಲಿ ತಸದ್ರುಕ್ ಖಾನ್ ಎಂಬ ಅಧಿಕಾರಿ ಎದುರಾದ. ನಿನ್ನ ಸ್ನೇಹಿತರ ವಿರುದ್ಧ ಸಾಕ್ಷ್ಯ ಹೇಳಿದರೆ ನಿನಗೆ ಮಾಫಿ ಕೊಡಿಸುವೆ ಎಂದು ಪುಸಲಾಯಿಸಿದ. ಆಶ್ಫಾಕ್ ಒಪ್ಪಲಿಲ್ಲ. ಆತನ ವಿರುದ್ಧ ಪೊಲೀಸರು ದೋಷಾರೋಪ ಪಟ್ಟಿ ಸಲ್ಲಿಸಿದರು. ಆ ವೇಳೆಗಾಗಲೇ ಕಾಕೋರಿ ರೈಲು ರಾಬರಿ ಕೇಸಿನ ವಿಚಾರಣೆ ನಡೆದು ತೀರ್ಪಿನ ಹಂತಕ್ಕೆ ಬಂದಿತ್ತು. ಮೋತಿಲಾಲ್ ನೆಹರು ನೇತೃತ್ವದಲ್ಲಿ ವಕೀಲರ ಸಮಿತಿಯೊಂದು ಆರೋಪಿಗಳ ಪರವಾಗಿ ವಾದಿಸಿದರೂ ಪ್ರಯೋಜನವಾಗಲಿಲ್ಲ. ರಾಮ್‌ಪ್ರಸಾದ್ ಬಿಸ್ಮಿಲ್, ಆಶ್ಫಾಕುಲ್ಲಾ ಖಾನ್, ರಾಜೇಂದ್ರ ಲಹಿರಿ ಹಾಗೂ ರೋಶನ್ ಸಿಂಗ್‌ಗೆ ಗಲ್ಲಾಯಿತು. ಉಳಿದವರಿಗೆ ಜೀವಾವಧಿ ಶಿಕ್ಷೆ ವಿಧಿಸಲಾಯಿತು.

1927, ಡಿಸೆಂಬರ್ 18.

ಗೋರಖ್‌ಪುರ ಸೆಂಟ್ರಲ್ ಜೈಲ್ ಎದುರು ಮಹಿಳೆಯೊಬ್ಬರು ಕಾಯುತ್ತಾ ನಿಂತಿದ್ದಾಳೆ. ಅವಳ ಮುಖವನ್ನು ನೋಡಿದರೇ ಗೊತ್ತಾಗುತ್ತಿತ್ತು, ಜೈಲಿನೊಳಕ್ಕೆ ಹೋಗಲು ಅನುಮತಿಗಾಗಿ ಕಾದಿದ್ದಳು. ಅವಳು ಮಗನಿಗಾಗಿ ಕಾದಿದ್ದಳು. ಆ ಕಾಲದಲ್ಲಿ ಬಂಧಿತರ ಕೈ-ಕಾಲುಗಳನ್ನು ಸರಪಳಿಯಲ್ಲಿ ಬಂಧಿಸಿರುತ್ತಿದ್ದರು. ಅವುಗಳೇ ಕೈದಿಗಳ ಆಭರಣಗಳು. ಅಂದು ರಾಮ್‌ಪ್ರಸಾದ್ ಬಿಸ್ಮಿಲ್ ಅಮ್ಮನ ಎದುರು ಗದ್ಗದಿತನಾಗಿ ನಿಂತಿದ್ದ. ‘ಅಮ್ಮಾ’ ಎಂದು ಕರೆಯಲು ಇದ್ದ ಕಡೆಯ ಅವಕಾಶವದು. ಕಣ್ಣೀರು ಬಳಬಳ ಸುರಿಯಲಾರಂಭಿಸಿದವು.

‘ಏಕೆ ಅಳುತ್ತೀಯಾ ಮಗನೇ…?’

ಎಂದಳು ಅಮ್ಮಾ… ಮುಂದುವರಿದು, “ನನ್ನ ಮಗ ದೊಡ್ಡ ಹೀರೋ, ಅವನ ಹೆಸರು ಕೇಳುತ್ತಲೇ ಬ್ರಿಟಿಷ್ ಸರಕಾರ ಥರಥರ ನಡುಗುತ್ತದೆ ಎಂದು ಭಾವಿಸಿದ್ದೆ. ನನ್ನ ಮಗ ಸಾವಿಗೆ ಹೆದರುತ್ತಾನೆ ಎಂದು ಯಾವತ್ತೂ ಊಹಿಸಿರಲಿಲ್ಲ. ಈ ರೀತಿ ಅಳುತ್ತಾ ಸಾಯುವುದೇ ನಿನ್ನ ಜಾಯಮಾನವಾಗಿದ್ದರೆ ಏಕೆ ಸ್ವಾತಂತ್ರ್ಯ ಹೋರಾಟದಂತಹ ಕಾರ್ಯಕ್ಕೆ ಕೈಹಾಕಿದೆ?” ಎಂದಳು.

“ಅಮ್ಮಾ, ಇದು ಭಯದಿಂದ ಬರುತ್ತಿರುವ ಕಣ್ಣೀರಧಾರೆಯಲ್ಲ… ನಿನ್ನಂಥ ಧೈರ್ಯಶಾಲಿ ಅಮ್ಮನನ್ನು ಪಡೆದುಕೊಂಡಿದ್ದೆನಲ್ಲಾ ಎಂದು ಸುರಿಯುತ್ತಿರುವ ಆನಂದಬಾಷ್ಪಗಳು..” ಎನ್ನುತ್ತಾನೆ ಆ ಧೈರ್ಯ ಶಾಲಿ ಅಮ್ಮನ ಧೈರ್ಯಶಾಲಿ ಮಗ ರಾಮ್‌ಪ್ರಸಾದ್ ಬಿಸ್ಮಿಲ್.

1927, ಡಿಸೆಂಬರ್ 19.

ಕುಣಿಕೆಗೆ ತಲೆಕೊಡುವ ಸಮಯ ಆಗಮಿಸಿತು. ಒಂದೆಡೆ ಎತ್ತರದ ಧ್ವನಿಯಲ್ಲಿ, “ಭಾರತ್ ಮಾತಾ ಕೀ ಜೈ, ಬ್ರಿಟಿಷ್ ಆಡಳಿತಕ್ಕೆ ಧಿಕ್ಕಾರ” ಎಂದು ರಾಮ್‌ಪ್ರಸಾದ್ ನೇಣಿಗೆ ತಲೆಕೊಟ್ಟರೆ, ಇನ್ನೊಂದೆಡೆ “ಈ ದೇಶದ ಸ್ವಾತಂತ್ರ್ಯಕ್ಕಾಗಿ ನೇಣಿಗೇರುತ್ತಿರುವ ಮೊದಲ ಮುಸ್ಲಿಂ ನಾನೆಂಬ ಬಗ್ಗೆ ಹೆಮ್ಮೆಯೆನಿಸುತ್ತಿದೆ… ಲಾ ಇಲಾಹ ಇಲ್ಲಲ್ಲಾಹು ಮುಹಮ್ಮದುರ್ ರಸೂಲುಲ್ಲ್ಲಾಹ್… ” ಎನ್ನುತ್ತಾ ಆಶ್ಫಾಕುಲ್ಲಾ ಖಾನ್ ಕೂಡ ಅದೇ ದಿನ, ಆದರೆ ಬೇರೆ ಜೈಲಿನಲ್ಲಿ ನೇಣಿಗೇರಿದ.

ಪ್ರತಿ ಸಾರಿ ಸ್ವಾತಂತ್ರ್ಯೋತ್ಸವ ಬಂದಾಗಲೂ ಅದೇ ಗಾಂಧಿ, ಅದೇ ನೆಹರು, ಅದೇ ಕಾಂಗ್ರೆಸ್‌ನ ಗುಣಗಾನ ಮಾಡಲಾಗುತ್ತದೆ. ಆದರೆ ಈ ದೇಶಕ್ಕೆ ಸ್ವಾತಂತ್ರ್ಯ ತಂದುಕೊಡುವುದರಲ್ಲಿ ಗಾಂಧಿ- ನೆಹರು-ಕಾಂಗ್ರೆಸ್‌ನಂತೆಯೇ ಹೋರಾಡಿದ ಹಲವಾರು ಸಂಘ-ಸಂಘಟನೆಗಳೂ ಇವೆ, ಬಲಿದಾನವನ್ನು ಮಾಡಿದವರೂ ಇದ್ದಾರೆ. ನಾವು ಇಂದು ಅನುಭವಿಸುತ್ತಿರುವ ಸ್ವಾತಂತ್ರ್ಯದ ಹಿಂದೆ ಲಕ್ಷಾಂತರ ಜನರ ನಿಸ್ವಾರ್ಥ ಹೋರಾಟವಿದೆ. ಜೈಲು ಸೇರಿದವರೂ ಇದ್ದಾರೆ, ಜೈಲಲ್ಲೇ ಬದುಕು ಕಳೆದು ಮಡಿದವರೂ ಇದ್ದಾರೆ. ಸುಭಾಷ್‌ಚಂದ್ರ ಬೋಸ್, ಚಂದ್ರಶೇಖರ ಆಜಾದ್, ಭಗತ್ ಸಿಂಗ್, ಆಶ್ಫಾಕುಲ್ಲಾ ಖಾನ್, ರಾಮ್‌ಪ್ರಸಾದ್ ಬಿಸ್ಮಿಲ್, ಮದನ್‌ಲಾಲ್ ಧಿಂಗ್ರಾ, ರಾಜಗುರು, ಸುಖದೇವ್ ಇವರ ತ್ಯಾಗವನ್ನು ಮರೆಯುವುದಾದರೂ ಹೇಗೆ? ಕನಿಷ್ಠ ನಾವಾದರೂ ಅವರನ್ನು ನೆನಪಿಸಿಕೊಳ್ಳೋಣ. ನಾಳೆ ೬೪ನೇ ಸ್ವಾತಂತ್ರ್ಯ ದಿನಾಚರಣೆ.

Happy Independence ಡೇ

ಕೃಪೆ : ಪ್ರತಾಪ್ ಸಿಂಹ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ