ನನ್ನ ಬ್ಲಾಗ್ ಪಟ್ಟಿ

ಮಂಗಳವಾರ, ಆಗಸ್ಟ್ 24, 2010

ಹತಾಶ, ನಿರ್ಲಜ್ಜ ಗಳಿಗೆಯಲ್ಲಿ ಈ ವಿಶ್ವಾಸದ “ವಾಣಿ’ ಅಗತ್ಯವಿತ್ತು!


By ಪ್ರತಾಪ್ ಸಿಂಹ, 04, July, Sunday

‘ಯಾವ ಕಾರಣಕ್ಕೂ ನಾನು ರಾಜೀನಾಮೆ ವಾಪಸು ಪಡೆಯಲಾರೆ’ ರಾಜೀನಾಮೆ ನೀಡಿದಾಗಿನಿಂದ ಲೋಕಾಯುಕ್ತ ಸಂತೋಷ್ ಹೆಗ್ಡೆಯವರು ನಿರಂತರವಾಗಿ ಹೇಳಿಕೊಂಡು ಬಂದ ಮಾತು ಇದು. ಅವರ ಆ ನಿರ್ಧಾರದ ನುಡಿಯಲ್ಲಿ ಯಾವ ಅನುಮಾನಕ್ಕೂ ಆಸ್ಪದ ಇರಲಿಲ್ಲ. ಅವರ ನಿರ್ಧಾರದಲ್ಲಿ ಯಾವ ರಾಜಕೀಯ ಸೋಂಕು ಇರಲಿಲ್ಲ. ಬಿಜೆಪಿ, ಜೆಡಿಎಸ್, ಕಾಂಗ್ರೆಸ್ ಪಕ್ಷಗಳ ಎಲ್ಲ ರಾಜಕಾರಣಿಗಳೂ ಭ್ರಷ್ಟಾಚಾರದ ವಿಷಯದಲ್ಲಿ ಒಂದೇ, ಅವರೆಲ್ಲ ಒಂದೇ ಶಾಲೆಯಲ್ಲಿ ತರಬೇತಿ ಪಡೆದವರು ಎಂದು ಅವರು ಬಹಿರಂಗವಾಗಿ ಹೇಳಿಯೂ ಇದ್ದರು. ಅಷ್ಟರಮಟ್ಟಿಗೆ ಇನ್ನಾಗದು ಎಂಬ ಹತಾಶೆ ಅವರನ್ನು ಕಾಡಿತ್ತು.

ಶುಕ್ರವಾರ ಈಶ್ವರಪ್ಪ, ಸುರೇಶ್‌ಕುಮಾರ್, ವಿ. ಎಸ್. ಆಚಾರ್‍ಯ ಅವರನ್ನು ಒಳಗೊಂಡ ಬಿಜೆಪಿ ನಿಯೋಗ ಭೇಟಿ ಮಾಡಿದಾಗಲೂ ಅವರು ಮೆತ್ತಗಾದ ಸೂಚನೆ ಇರಲಿಲ್ಲ. ಸಚಿವರ ಕತೆ ಹಾಗಿರಲಿ, ಮುಖ್ಯಮಂತ್ರಿ ಹೇಳಿದ್ದರೂ ಲೋಕಾಯುಕ್ತರು ಜಗ್ಗುತ್ತಿರಲಿಲ್ಲ. ಏಕೆಂದರೆ ಈ ವಿಷಯದಲ್ಲಿ ಸಮಾಧಾನದ ಭರವಸೆಗಳನ್ನು ಕೊಡಬಹುದೇ ಹೊರತು ಏನೂ ಮಾಡುವ ಹಂತದಲ್ಲಿಲ್ಲ ಎಂಬುದು ಅವರಿಗೂ ಅರ್ಥವಾದಂತಿತ್ತು.

ಇವೆಲ್ಲದರ ನಡುವೆ ಒಂದು ಕರೆ ಲೋಕಾಯುಕ್ತರನ್ನು ಏಕಾಏಕಿ ಮೆತ್ತಗಾಗಿಸಿದೆ. ಬಿಜೆಪಿ ಹಿರಿಯ ನಾಯಕ ಲಾಲ್ ಕೃಷ್ಣ ಆಡ್ವಾಣಿಯವರ ವ್ಯಕ್ತಿತ್ವದ ಝಲಕು ಸೂಕ್ತ ಸಮಯದಲ್ಲಿ ನಿರ್ಣಾಯಕ ಹಂತದಲ್ಲಿ ಅನಾವರಣಗೊಂಡಿದೆ. ಇಂಥ ಒಂದು ನಡೆಗೆ ಆಡ್ವಾಣಿಯವರಿಗೆ ದೇಶ ಕಾಳಜಿ ಉಳ್ಳ ಮನಸ್ಸುಗಳು ಒಂದು ಧನ್ಯವಾದ ಹೇಳಲೇಬೇಕು. ಇದು ಲೋಕಾಯುಕ್ತರ ರಾಜೀನಾಮೆ ಹಿಂದಕ್ಕೆ ತೆಗೆದುಕೊಂಡ ಕ್ರಮ ಎಂಬ ಸೀಮಿತ ಪರಿಧಿಯಲ್ಲಿ ವಿಶ್ಲೇಷಣೆ ಮಾಡಹೊರಟರೆ ಇದರ ಪ್ರಾಮುಖ್ಯ ಖಂಡಿತ ಅರ್ಥವಾಗುವುದಿಲ್ಲ.

ಸ್ವಲ್ಪ ಗಮನವಿಟ್ಟು ನೋಡಿ. ಕಳೆದ ಒಂದು ವಾರದಲ್ಲಿ ಅದೆಂಥ ಹತಾಶೆಯ ವಾತಾವರಣ ಕವಿದುಕೊಂಡು ಕಾಡುತ್ತಿತ್ತು. ಅದು ಒಂದು ಬಿಜೆಪಿಯ, ಒಬ್ಬ ಯಡಿಯೂರಪ್ಪನವರ, ಲೋಕಾಯುಕ್ತರ ಪ್ರಶ್ನೆಯಾಗಿರಲೇ ಇಲ್ಲ. ಒಂದಿಡೀ ವ್ಯವಸ್ಥೆಯಲ್ಲಿ ವಿಶ್ವಾಸದ ಚಿಕ್ಕ ಗೆರೆಯೂ ಕಾಣುತ್ತಿಲ್ಲವಲ್ಲ? ಇಲ್ಲಿಯವರೆಗೆ ಭ್ರಷ್ಟಾಚಾರಕ್ಕೆ ವ್ಯವಸ್ಥೆ ನಿರ್ಲಿಪ್ತವಾಗಿತ್ತು. ಆದರೀಗ ನಿರ್ದಿಷ್ಟ ಲಾಬಿಯೊಂದು ಸರಕಾರವನ್ನೇ ಅಂಗೈಯಲ್ಲಿ ಕುಣಿಸುತ್ತಿದ್ದರೂ ಪ್ರತಿರೋಧದ ದನಿಯನ್ನು ಉಳಿಸಿಕೊಳ್ಳುವುದು ಸಾಧ್ಯವಾಗುತ್ತಿಲ್ಲವಲ್ಲ? ಈ ಪ್ರತಿರೋಧದ ಪ್ರಾಮಾಣಿಕ ಪ್ರತಿನಿಧಿ ಎಂಬಂತಿದ್ದ ಲೋಕಾಯುಕ್ತರೂ ಆ ಲಾಬಿಗೆ ಬಲಿಯಾಗಿ ಸ್ಥಾನ ತೊರೆದು ಹೋಗುತ್ತಿದ್ದರೆ ಮುಖ್ಯಮಂತ್ರಿಯಾಗಿದ್ದವರಿಗೆ ಔಪಚಾರಿಕತೆಗೂ ‘ಹೋಗಬೇಡಿ’ ಎನ್ನಲಾಗುತ್ತಿಲ್ಲವಲ್ಲ? ಇದೆಂಥ ಸ್ಥಿತಿ ಬಂತು? ಮಾತೃಭೂಮಿ, ತತ್ತ್ವ ಸಿದ್ಧಾಂತ ಎನ್ನುತ್ತಿದ್ದ ಬಿಜೆಪಿಗೂ ಇಂಥ ದುರ್ಗತಿ ಬಂದಿದೆ ಎಂದರೆ ವ್ಯವಸ್ಥೆಯಲ್ಲಿ ಯಾರ ಮೇಲೆ ವಿಶ್ವಾಸವಿಡುವುದು? ಭ್ರಷ್ಟಾಚಾರದೊಂದಿಗೆ ರಾಜಿಯೇ ಏಕೈಕ ಅನಿವಾರ್‍ಯ ಮಾರ್ಗವೇ? ಎಂಬೆಲ್ಲ ಪರಮ ಹತಾಶೆಯ ಪ್ರಶ್ನೆಗಳು ಏಳುತ್ತಿದ್ದಾಗ ಆಡ್ವಾಣಿಯವರ ಒಂದು ನಡೆ ಸಾಂತ್ವನದ ಗಾಳಿ ಸೋಕಿಸಿದೆ. ‘ಇಲ್ಲ, ವ್ಯವಸ್ಥೆಯಲ್ಲಿ ಸಂವೇದನೆಗಳು ಇನ್ನೂ ಜೀವಂತ ಇವೆ. ಪ್ರಮಾದಗಳನ್ನು ಸರಿಪಡಿಸಿಕೊಳ್ಳಬೇಕು ಎಂಬ ಮನಸ್ಸು ಉಳ್ಳವರು ರಾಜಕೀಯದಲ್ಲಿ ಇದ್ದಾರೆ ’ ಎಂಬ ಸಂದೇಶವನ್ನು ಆಡ್ವಾಣಿಯವರ ನಡೆ ದೃಢಪಡಿಸಿದೆ.

‘ಆಡ್ವಾಣಿಯವರು ನನ್ನ ತಂದೆಯ ಸಮಾನ. ಅವರ ಮಾತನ್ನು ಮೀರಲು ಸಾಧ್ಯವಿರಲಿಲ್ಲ’ ಎಂಬ ಲೋಕಾಯುಕ್ತರ ಹೇಳಿಕೆಯನ್ನೂ ಕೂಡ ರಾಜಕೀಯದ ಪರಿಧಿಯಲ್ಲೇ ನೋಡುವ ಅಗತ್ಯವಿಲ್ಲ. ಆಡ್ವಾಣಿ ಹಾಗೂ ಹೆಗ್ಡೆಯವರ ವೈಯಕ್ತಿಕ ಸಂಬಂಧ ಕೂಡ ಪರಸ್ಪರ ಗೌರವ, ಶುದ್ಧಹಸ್ತತೆ, ಪ್ರಾಮಾಣಿಕತೆಯನ್ನೇ ಬುನಾದಿಯನ್ನಾಗಿ ಹೊಂದಿದೆ. ಜೈನ್ ಹವಾಲಾ ಆರೋಪ ಬಂದಾಗ ಸ್ವಯಿಚ್ಛೆಯಿಂದ ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ ಹಾಗೂ ದೋಷಮುಕ್ತರಾಗುವವರೆಗೂ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಸಾರ್ವಜನಿಕವಾಗಿ ಘೋಷಣೆ ಮಾಡಿದ್ದ ವ್ಯಕ್ತಿ ಆಡ್ವಾಣಿ. ಅವರ ಪಕ್ಷ, ಸಿದ್ಧಾಂತ ಬೇರೆಯಾಗಿರಬಹುದು. ಆದರೆ ವೈಯಕ್ತಿಕ ಚಾರಿತ್ರ್ಯ ಎಲ್ಲವನ್ನೂ ಮೀರಿ ಸ್ನೇಹ, ವಿಶ್ವಾಸ, ಗೌರವವನ್ನು ಗಳಿಸಿಕೊಡಬಲ್ಲದು. ಆಡ್ವಾಣಿಯವರ ಕರೆ ಹಾಗೂ ಲೋಕಾಯುಕ್ತರ ನಿರ್ಧಾರ ಬದಲು ಇವುಗಳಲ್ಲಿ ಕಾಣುವುದು ಇವೇ. ಅದರಲ್ಲೂ ಆಡ್ವಾಣಿಯವರು ಎಂತಹ ಸಂದರ್ಭದಲ್ಲಿ ಕರೆ ಮಾಡಿದ್ದಾರೆ ನೋಡಿ?

ಅವರು ಯಾವ ಪ್ರತಿಪಕ್ಷದ ನಾಯಕನ ಸ್ಥಾನವನ್ನು ಬಿಟ್ಟುಕೊಟ್ಟು ಒಂದು ರೀತಿಯಲ್ಲಿ ಸಕ್ರಿಯ ರಾಜಕಾರಣದಿಂದ ದೂರ ಸರಿದರೋ ಅವರ ಸ್ಥಾನಕ್ಕೆ ಬಂದ ಸುಷ್ಮಾ ಸ್ವರಾಜ್ ನಡತೆಗೂ, ಆಡ್ವಾಣಿಯವರು ನಡೆದುಕೊಂಡ ರೀತಿಗೂ ನಡುವೆ ಇರುವ ವ್ಯತ್ಯಾಸವನ್ನು ಗಮನಿಸಿ. ಒಂದು ಕಡೆ, ಲೋಕಾಯುಕ್ತರ ರಾಜೀನಾಮೆಗೆ ಕಾರಣರಾದವರ ಜತೆ ಸಾಧನಾ ಸಮಾವೇಶದಲ್ಲಿ ವೇದಿಕೆ ಹಂಚಿಕೊಂಡಿದ್ದಲ್ಲದೆ, ಗಣಿ ಕುಳಗಳನ್ನೇ ವಾಕರಿಕೆ ಹುಟ್ಟಿಸುವಂತೆ ಹೊಗಳುವ ಕೆಲಸವನ್ನು ಸುಷ್ಮಾ ಮಾಡಿದರು. ಲೋಕಾಯುಕ್ತರ ರಾಜೀನಾಮೆಗೆ ಕಾರಣವಾಗಿದ್ದ ದುಷ್ಟಶಕ್ತಿಗಳ ಬಗ್ಗೆ ಆಕೆಯ ಬಾಯಿಂದ ಒಂದು ಮಾತೂ ಹೊರಡಲಿಲ್ಲ. ಇನ್ನೊಂದೆಡೆ, ಆಡ್ವಾಣಿಯವರು ಹೆಚ್ಚೂಕಡಿಮೆ ರಾಜಕೀಯದಿಂದಲೇ ದೂರ ಸರಿದಿದ್ದಾರೆ. ಪಕ್ಷದ ಹಿರಿಯ ನಾಯಕ ಎನ್ನುವುದನ್ನು ಬಿಟ್ಟರೆ ಅಧಿಕಾರ ಚಲಾಯಿಸಬಹುದಾದ ಯಾವ ಹುದ್ದೆಯೂ ಇಲ್ಲ. ರಾಜಕೀಯಲ್ಲಿ ಇನ್ನೂ ಮಹತ್ವಾಕಾಂಕ್ಷೆ ಇಟ್ಟುಕೊಳ್ಳುವ ವಯಸ್ಸೂ ಅವರದ್ದಾಗಿಲ್ಲ. ಹಾಗಿರುವಾಗ ನನಗೇಕು ಇಲ್ಲದ ಉಸಾಬರಿ ಎಂದು ಸುಮ್ಮನಾಗಬಹುದಿತ್ತು. ಇಷ್ಟಾಗಿಯೂ ಲೋಕಾಯುಕ್ತರಿಗೆ ಖುದ್ದಾಗಿ ಕರೆ ಮಾಡಿ, ರಾಜೀನಾಮೆಯನ್ನು ಹಿಂತೆಗೆದುಕೊಳ್ಳಿ ಎಂದು ಮನವಿ ಮಾಡಿದರು. ಪಕ್ಷದ ರಾಷ್ಟ್ರೀಯ ಅಧ್ಯಕ್ಷ ನಿತಿನ್ ಗಡ್ಕರಿ ಹಾಗೂ ಮುಖ್ಯಮಂತ್ರಿ ಯುಡಿಯೂರಪ್ಪನವರನ್ನು ಲೋಕಾಯುಕ್ತರ ಮನೆಗೆ ಓಡಿಸಿದರು. ಭರವಸೆ ಕೊಡುವಂತೆ ಮಾಡಿದರು. ಆ ಮೂಲಕ ಒಳ್ಳೆಯ ಕೆಲಸ ಮಾಡುವವರಿಗೆ ಆಡ್ವಾಣಿಯವರ ಬೆಂಬಲ, ಪ್ರೋತ್ಸಾಹ ಸದಾ ಇದೆ ಎಂಬುದನ್ನು ಸಾಬೀತು ಪಡಿಸಿದ್ದಾರೆ.

ಇನ್ನೊಂದು ಗಮನಾರ್ಹ ಅಂಶ ಎಂದರೆ ಈ ಎಲ್ಲ ಪ್ರಕ್ರಿಯೆಗಳೂ ಖುಲ್ಲಂಖುಲ್ಲ ಆಗಿ ನಡೆದಿವೆ. ಆಡ್ವಾಣಿಯವರು ತಮ್ಮ ಸ್ನೇಹವನ್ನು ಮಾತ್ರ ಉಪಯೋಗಿಸಿಕೊಂಡು ತಮ್ಮ ಹೆಸರು ಪ್ರಸ್ತಾವವಾಗದಂತೆ ಲೋಕಾಯುಕ್ತರ ಮೇಲೆ ಒತ್ತಡ ಹೇರುವ ಕ್ರಮವನ್ನೇನೂ ಅನುಸರಿಸಿಲ್ಲ. ಈ ಮೂಲಕ ಇದೊಂದು ಜವಾಬ್ದಾರಿಯುತ ನಡೆಯಾಗಿದ್ದು, ಕೇವಲ ಬಿಜೆಪಿಯನ್ನು ಇರಿಸುಮುರಿಸಿನಿಂದ ಪಾರು ಮಾಡುವುದಕ್ಕೆ ಮುಂದಾಗಿ ಮಾಡಿದ ಕ್ರಮವಲ್ಲ ಎಂಬ ವಿಶ್ವಾಸ ಬಂದಿದೆ.

ಒಟ್ಟಿನಲ್ಲಿ ಬಿಜೆಪಿ ಕೂಡ ಎಲ್ಲ ಪಕ್ಷಗಳಂತೆಯೇ ಆಗಿದೆ, ಸಂವೇದನೆಯನ್ನೇ ಕಳೆದುಕೊಂಡಿದೆ ಎಂಬ ಹತಾಶೆಯ ಮಡುವಿನಲ್ಲಿರುವಾಗಲೇ ಆಡ್ವಾಣಿಯವರ ಒಂದು ಕರೆ, ಅದಕ್ಕೆ ಲೋಕಾಯುಕ್ತರು ಸ್ಪಂದಿಸಿದ ಬಗೆ ಜನರಲ್ಲಿ ಮತ್ತೆ ಒಂದಿಷ್ಟು ಆಶಾಭಾವನೆಯನ್ನು ಸೃಷ್ಟಿಸಿದೆ. ಒಂದು ವೇಳೆ, ಯಡಿಯೂರಪ್ಪನವರಿಂದ ಭರವಸೆ ವ್ಯಕ್ತವಾಗಿದ್ದರೆ ನಂಬಲು ಕಷ್ಟವಾಗುತ್ತಿತ್ತು. ಏಕೆಂದರೆ ಅವರು ಮತ್ತೆ ಕೈಕೊಟ್ಟಿದ್ದರೆ ಕೇಳಲು ಯಾರಿದ್ದರು? ಅಕೌಂಟೆಬಿಲಿಟಿಗೆ ಯಾರಿದ್ದರು? ಆದರೆ ಈಗ ಸರಕಾರ ಭರವಸೆಯನ್ನು ಈಡೇರಿಸಲಿಲ್ಲವೆಂದಾದರೆ ಲೋಕಾಯುಕ್ತರು ನೇರವಾಗಿ ಆಡ್ವಾಣಿಯವರನ್ನೋ, ನಿತಿನ್ ಗಡ್ಕರಿಯವರನ್ನೋ ಸಂಪರ್ಕಿಸಬಹುದು. ಆ ಮಟ್ಟಿಗಾದರೂ ಸರಕಾರದ ಕಿವಿ ಹಿಂಡಲು ಯಾರೋ ಇದ್ದಾರೆ ಎಂದಾಯಿತು.

ಲೋಕಾಯುಕ್ತರು ತಮ್ಮ ಗಟ್ಟಿ ನಿರ್ಧಾರದಿಂದ ಏಕೆ ಹಿಂದೆ ಸರಿದರು, ಇದು ಸರಕಾರಕ್ಕೆ ಸಿಕ್ಕ ಗೆಲುವು ಅಥವಾ ಲೋಕಾಯುಕ್ತ ವರ್ಸಸ್ ಸರಕಾರ ಅಂತ ಈಗಲೂ ಏಕೆ ನೋಡಬೇಕು? ಆಡ್ವಾಣಿಯವರ ಕರೆ, ಲೋಕಾಯುಕ್ತರ ಸ್ಪಂದನೆಯನ್ನು ಪ್ರಾಮಾಣಿಕತೆಗೆ ಸಿಕ್ಕ ಜಯ, ಪ್ರಾಮಾಣಿಕತೆ ಹಾಗೂ ಸಮಗ್ರತೆ ಇಂದಿಗೂ ಬೆಲೆ ಇದೆ, ಬೆಲೆ ಕೊಡುವವರೂ ಇದ್ದಾರೆ ಎಂದು ಏಕೆ ನೋಡಬಾರದು?

ಕೃಪೆ : ಪ್ರತಾಪ್ ಸಿಂಹ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ