ನನ್ನ ಬ್ಲಾಗ್ ಪಟ್ಟಿ

ಮಂಗಳವಾರ, ಆಗಸ್ಟ್ 24, 2010

ಶ್ರದ್ಧೆಯ ತಾಯಂದಿರೇ, ತತ್ತ್ವಾದರ್ಶದ ‘ಶ್ರಾದ್ಧ’ ನೋಡಿ ಸುಮ್ಮನಿರೋದಾ?


ಅಂದು ನಡುರಾತ್ರಿ ಕಳೆದು 2 ಗಂಟೆಯಾಗಿದೆ. ಆ ಹೊತ್ತಿ ನಲ್ಲಿ ಮೊಬೈಲ್ ರಿಂಗ್ ಆಗುತ್ತಿದೆ. ಅತ್ತ ಕಡೆ ಹೆಣ್ಣು ಧ್ವನಿಯೊಂದು ಗದ್ಗದಿತವಾಗಿ ಕೇಳುತ್ತಿದೆ. ತನ್ನ 8 ತಿಂಗಳ ಕಂದಮ್ಮನ ಜೀವ ಉಳಿಸಿಕೊಳ್ಳಲು ಹೆಣಗಾಡುತ್ತಿದ್ದ ಅಮ್ಮನ ಧ್ವನಿ ಯದು. “ನೀವು ಹೇಳಿ ಸಾರ್, ಅವರು ನಿಮ್ಮ ಮಾತನ್ನು ಕೇಳುತ್ತಾರೆ” ಎಂದು ಅಂಗಲಾಚುತ್ತಿದ್ದಾಳೆ. ಅನಾರೋಗ್ಯದಿಂದ ಮಗು ನರಳುತ್ತಿ ದ್ದರೂ ಬಳ್ಳಾರಿ ಸರಕಾರಿ ಆಸ್ಪತ್ರೆಯ ವೈದ್ಯರು ಚಿಕಿತ್ಸೆ ಕೊಡಲು ಮುಂದಾಗುತ್ತಿಲ್ಲ.

ಆಗ ಆಕೆಗೆ ಕಂಡ ಕಡೆಯ ಆಶಾಕಿರಣ ಯಾವುದೆಂದು ತಿಳಿದಿದ್ದೀರಿ? ಆ ಹೊತ್ತಿನಲ್ಲಿ ಆಕೆ ಕರೆ ಮಾಡಿದ್ದು ಯಾರಿಗೆ ಅಂದುಕೊಂಡಿರಿ?

ಬಳ್ಳಾರಿಯನ್ನೇ ಪ್ರತಿನಿಧಿಸುವ ಆರೋಗ್ಯ ಸಚಿವ, ‘ರಾ ಅಂಟೆ ಶ್ರೀರಾಮುಲು’ ಹಾಗೂ ‘108’ ಮುಖ ಇಟ್ಟುಕೊಂಡಿರುವ ಯಾವ ಯಶವಂತ ಪುರುಷನಿಗೂ ಅಲ್ಲ, “ಒಂದೇ” ಮುಖ ಇಟ್ಟುಕೊಂಡಿರುವ ಲೋಕಾಯುಕ್ತ ಎನ್. ಸಂತೋಷ್ ಹೆಗ್ಡೆಯವರಿಗೆ! ಹೊತ್ತಲ್ಲದ ಹೊತ್ತಿನಲ್ಲೂ ಬಂದ ಕರೆಗೆ ಸ್ಪಂದಿಸಿದ ಲೋಕಾಯುಕ್ತರು ಕೂಡಲೇ ಬಳ್ಳಾರಿ ಜಿಲ್ಲಾ ಆಸ್ಪತ್ರೆಗೆ ಕರೆ ಮಾಡಿದರು. ಅಧಿಕಾರಿಗಳು ಮನೆ ಬಾಗಿಲಿಗೆ ಬಂದರು. ಚಿಕಿತ್ಸೆಗಾಗಿ ಮಗುವನ್ನು ಕೂಡಲೇ ಬೆಂಗಳೂರಿಗೆ ವರ್ಗಾಯಿಸಲಾಯಿತು. ಪ್ರಾಣ ಉಳಿಯಿತು. ಇಂಥದ್ದೊಂದು ಮನಮುಟ್ಟುವ ಘಟನೆಯ ಮೇಲೆ ‘ಟೈಮ್ಸ್ ಆಫ್ ಇಂಡಿಯಾ’ದ ಹಿರಿಯ ವರದಿಗಾರ ವಿನಯ್ ಮಾಧವ್ ಬೆಳಕು ಚೆಲ್ಲಿದ್ದಾರೆ. ಇವತ್ತು ಮಿಂಟೋ ಆಸ್ಪತ್ರೆಯಲ್ಲಿ ರಾಜೇಂದ್ರ ಜಯರಾಮ್ ಎಂಬವರು ಕ್ಯಾಟರ್‍ಯಾಕ್ಟ್ ಶಸ್ತ್ರಚಿಕಿತ್ಸೆಗೆ ಒಳಗಾಗುತ್ತಿದ್ದಾರೆ. ಅವರಿಗೆ 98 ವರ್ಷ. ಸ್ವಾತಂತ್ರ್ಯ ಹೋರಾಟಗಾರರು. ಈ ದೇಶಕ್ಕಾಗಿ ಹೋರಾಡಿದ ಆ ವೃದ್ಧ ಹಾಗೂ ಬಡ ಜೀವ ಕಣ್ಣಿನ ಶಸ್ತ್ರಚಿಕಿತ್ಸೆಗಾಗಿ ಮಿಂಟೋ ಎಂಬ ಬೆಂಗಳೂರಿನ ಸರಕಾರಿ ಆಸ್ಪತ್ರೆಯನ್ನು ಸಂಪರ್ಕಿಸಿದಾಗ, 7 ಸಾವಿರ ರೂಪಾಯಿ ಕೊಡುವಂತೆ ಒತ್ತಾಯಿಸಿದ್ದರು. ಅಷ್ಟು ಹಣವನ್ನು ತೆರುವ ಸಾಮರ್ಥ್ಯವಿಲ್ಲದೆ ರಾಜೇಂದ್ರ ಜಯರಾಮ್, ಲೋಕಾಯುಕ್ತ ಸಂತೋಷ್ ಹೆಗ್ಡೆಯವರಲ್ಲಿ ಮೊರೆಯಿಟ್ಟರು. ಅದರ ಫಲವಾಗಿ ಇಂದು ಶಸ್ತ್ರಚಿಕಿತ್ಸೆ ನೆರವೇರುತ್ತಿದೆ.

ಆದರೆ…

ಅನಾರೋಗ್ಯಪೀಡಿತ ಮಕ್ಕಳಿಗೆ ಚಿಕಿತ್ಸೆ ಕೊಡಿಸುವುದು, ವೃದ್ಧರ ಕಣ್ಣಿನ ಪೊರೆಯ ಆಪರೇಶನ್ ಮಾಡಿಸುವುದು ಯಾರ ಕೆಲಸ? ಲೋಕಾಯುಕ್ತರು ಅದನ್ನೆಲ್ಲಾ ಮಾಡಬೇಕೇನು? ಏಕೆ ಜನ ಲೋಕಾಯುಕ್ತ ಸಂತೋಷ್ ಹೆಗ್ಡೆಯವರಿಗೆ ಹೊತ್ತು-ಗೊತ್ತು ನೋಡದೇ ಕರೆ ಮಾಡುತ್ತಾರೆ? ಏಕೆಂದರೆ ಅವರು ಭರವಸೆಯ ಏಕೈಕ ಆಶಾಕಿರಣದಂತೆ ನಮ್ಮ ನಡುವೆ ಇದ್ದರು, ಏಕೆಂದರೆ ನಮ್ಮ ವ್ಯವಸ್ಥೆ ಭ್ರಷ್ಟಗೊಂಡಿದೆ, ಏಕೆಂದರೆ ನಮ್ಮನ್ನಾಳುವವರಿಗೆ ಬಡವರ ಅಳಲು ಕೇಳುತ್ತಿಲ್ಲ. ಹಾಗಿದ್ದರೂ ನಮ್ಮ ಸಮಾಜದ ಸಾಕ್ಷಿಪ್ರeಯಂತಿದ್ದ, ಕಡೆಯ ಆಶಾಕಿರಣದಂತಿದ್ದ ಲೋಕಾಯುಕ್ತ ಸಂತೋಷ್ ಹೆಗ್ಡೆಯವರನ್ನೂ ಉಳಿಸಿಕೊಳ್ಳದೇ ಹೋದೆವಾ ನಾವು? ನಮ್ಮ ವ್ಯವಸ್ಥೆಗಂತೂ ಅದಕ್ಕಂಟಿರುವ ಭ್ರಷ್ಟಾಚಾರದ ಕೊಳೆಯನ್ನು ತೊಳೆಯುವವರು ಬೇಕಿಲ್ಲ. ನಮಗೂ ಬೇಡವಾ? ಸಂತೋಷ್ ಹೆಗ್ಡೆಯವರು ರಾಜೀನಾಮೆ ನೀಡಿ 60 ಗಂಟೆಗಳು ಕಳೆದು ಹೋದರೂ ನಮ್ಮ ಸಮಾಜವೇಕೆ ಕುಪಿತಗೊಂಡಿಲ್ಲ, ಎದ್ದು ಪ್ರತಿಭಟಿಸುತ್ತಿಲ್ಲ? ಅಷ್ಟು ಜಡಗೊಂಡು ಬಿಟ್ಟಿದೆಯೇ ಈ ಸಮಾಜ? ‘ಘೋಷ’ದ ಬಗ್ಗೆ ಬರೆದರೆ ಬೆಳಗಾಗುವಷ್ಟರಲ್ಲಿ ಪೇಟೆ-ಪಟ್ಟಣಗಳಲ್ಲಿ ಕೋಮು ಗಲಭೆ ಆರಂಭವಾಗುತ್ತದೆ, ರಸ್ತೆಯಲ್ಲಿ ಹೋಗುವ ಅಮಾಯಕರಿಗೆ ಚೂರಿ ಹಾಕುತ್ತಾರೆ, ‘ಆನುದೇವ..’ ಕೃತಿ ಬಂದಾಗ ಹಳ್ಳಿ ಹಳ್ಳಿಗಳಲ್ಲಿ ಪ್ರತಿಭಟನೆಯಾಗುತ್ತದೆ, ಗೋಹತ್ಯೆ ನೀಷೇಧ ಮಾಡುತ್ತೇವೆ ಎಂದಾಗ ಯೂನಿವರ್ಸಿಟಿ ಕ್ಯಾಂಪಸ್‌ನಲ್ಲಿ ದನದ ಮಾಂಸ ಬೇಯಿಸಿ ತಿಂದು ಪ್ರತಿಭಟಿಸುತ್ತಾರೆ, ಪ್ರೆಸ್‌ಮೀಟ್, ಸೆಮಿನಾರ್ ನಡೆಯುತ್ತವೆ. ಆದರೆ ಒಬ್ಬ ಪ್ರಾಮಾಣಿಕ ವ್ಯಕ್ತಿಯನ್ನು ಭ್ರಷ್ಟ ವ್ಯವಸ್ಥೆ ಹೊಸಕಿ ಹಾಕಲು ಹೊರಟರೆ ನಮ್ಮ ಆತ್ಮಸಾಕ್ಷಿ ಏಕೆ ಘಾಸಿಗೊಂಡು ಪ್ರತಿಭಟನೆಗೆ ಮುಂದಾಗುವುದಿಲ್ಲ? ಮಹಿಳೆಯರು ಹೆಗಲಿಗೆ ವ್ಯಾನಿಟಿ ಬ್ಯಾಗು ನೇತುಹಾಕಿಕೊಂಡು ಎಂದಿನಂತೆ ಕಚೇರಿಗೆ ತೆರಳುತ್ತಾರೆ, ಗಂಡಸರು ಒಂದು ಕೈಯಲ್ಲಿ ಕಾಫಿ-ಟೀ, ಇನ್ನೊಂದು ಕೈಯಲ್ಲಿ ಸಿಗರೇಟು ಹಿಡಿದುಕೊಂಡು ಟೈಮ್‌ಪಾಸ್ ಎಂಬಂತೆ ಕಳ್ಳರು, ಸುಳ್ಳರು, ಖದೀಮರು ಎಂಬಿತ್ಯಾದಿ ಬೈಗುಳಗಳನ್ನು ಉಗಿದು ಮುಂದಿನ ಕೆಲಸಕ್ಕೆ ತೆರಳುತ್ತಾರೆ. ಹಾಗಾದರೆ ಪ್ರತಿಭಟಿಸುವವರು ಯಾರು? ನಿಮ್ಮನ್ನು ಬಡಿದೆಬ್ಬಿಸಲು ಇನ್ನೆಷ್ಟು ಸಂತೋಷ್ ಹೆಗ್ಡೆಗಳು ರಾಜೀನಾಮೆ ಕೊಡಬೇಕು? ಅಂತಹ ಕಟ್ಟಾ ಪ್ರಾಮಾಣಿಕ ವ್ಯಕ್ತಿಯನ್ನೇ ಉಳಿಸಿಕೊಳ್ಳದ ಸಮಾಜದಿಂದ ಏನನ್ನು ನಿರೀಕ್ಷಿಸಲು ಸಾಧ್ಯ? ಸ್ಥಾಪಿತ ವ್ಯವಸ್ಥೆಯ ವಿರುದ್ಧ ಈಜಲು ಹೊರಟವರನ್ನು, ಭ್ರಷ್ಟಾಚಾರವನ್ನು ಮೂಲೋತ್ಪಾಟನೆ ಮಾಡಲು ಮುಂದಾದವರನ್ನು ರಕ್ಷಿಸಿಕೊಳ್ಳಬೇಕಾದುದು ಯಾರು? ಲೋಕಾಯುಕ್ತ ಸಂತೋಷ್ ಹೆಗ್ಡೆ, ಆರ್. ಕೆ. ದತ್ತ, ಮಧುಕರ ಶೆಟ್ಟಿ, ಹರೀಶ್ ಗೌಡ, ಡಿ.ವಿ. ಶೈಲೇಂದ್ರ ಕುಮಾರ್ ಮುಂತಾದವರನ್ನು ಉಳಿಸಿಕೊಳ್ಳದೇ ಹೋದರೆ ಕೊನೆಗೆ ಯಾರು ಉಳಿಯುತ್ತಾರೆ?

“ಯಾವುದೋ ರಾಜಕೀಯ ಪ್ರಭಾವದಿಂದ ಸಂತೋಷ್ ಹೆಗ್ಡೆ ರಾಜೀನಾಮೆ ನೀಡಿದ್ದಾರೆ ಎಂದು ನನಗೆ ಬಲವಾಗಿ ಅನಿಸುತ್ತಿದೆ. ವಿರೋಧ ಪಕ್ಷದ ನಾಯಕನಂತೆ ಅವರು ಮಾತನಾಡಿದ್ದನ್ನು ನೋಡಿ ದರೆ ಇದು ಗೊತ್ತಾಗುತ್ತದೆ”

ಹಾಗೆಂದು ಬಿಜೆಪಿ ಅಧ್ಯಕ್ಷ ಕೆ.ಎಸ್. ಈಶ್ವರಪ್ಪ ಪ್ರತಿಕ್ರಿಯಿಸಿದ್ದಾರೆ. ಎಂತಹ ದರ್ಪ, ಧಾರ್ಷ್ಟ್ಯದ ಮಾತಿದು ನೋಡಿ? ಪ್ರಾಮಾಣಿಕತೆಗೆ ಮತ್ತೊಂದು ಹೆಸರಿನಂತಿರುವ ಸಂತೋಷ್ ಹೆಗ್ಡೆಯವರ ಬಗ್ಗೆ ಮಾತನಾಡುವುದಕ್ಕೂ ಒಂದು ಯೋಗ್ಯತೆ ಬೇಕು. ಅಂಥದ್ದರಲ್ಲಿ ಈಶ್ವರಪ್ಪನವರು ಹೀಗೆ ಲಜ್ಜೆಗೆಟ್ಟು ಮಾತನಾಡಲು ಅವರಿಗೆ ಧೈರ್ಯ ಕೊಟ್ಟಿದ್ದು ಹೋರಾಟಕ್ಕೆ ಬೆನ್ನು ತೋರಿಸುವ ನಮ್ಮ ಮನಃಸ್ಥಿತಿಯೇ ಅಲ್ಲವೆ? ಸುಪ್ರೀಂಕೋರ್ಟ್‌ನ ಮಾಜಿ ನ್ಯಾಯಾಧೀಶರಿಗೇ ಇಂತಹ ಪರಿಸ್ಥಿತಿ ಎದುರಾಗುವುದಾದರೆ ಸಾಮಾನ್ಯ ವ್ಯಕ್ತಿಯ ಗತಿಯೇನು? ಈ ಸರಕಾರ ಯಾರ ರಕ್ಷಣೆಗೆ ನಿಂತಿದೆ? ಲಂಚ ತೆಗೆದುಕೊಳ್ಳುವಾಗ ರೆಡ್‌ಹ್ಯಾಂಡ್ ಆಗಿ ಸಿಕ್ಕಿಕೊಂಡ ಕೆ.ಜಿ.ಎಫ್. ಶಾಸಕ ಸಂಪಂಗಿಗೆ ಸದನ ಸಮಿತಿಯೇ ‘ಕ್ಲೀನ್ ಚಿಟ್’(ಶುದ್ಧಹಸ್ತ) ಕೊಡುತ್ತದೆಂದರೆ ಈ ಸಮಾಜದಲ್ಲಿ ಯಾರಿಗೆ ಕಾಲವಿದೆ? ಕಾಂಗ್ರೆಸ್‌ನವರೋ, ಜೆಡಿಎಸ್‌ನವರೋ ಹೀಗೆ ಮಾಡಿದ್ದರೆ ತಲೆಕೆಡಿಸಿಕೊಳ್ಳಬೇಕಾದ ಅಗತ್ಯವಿರಲಿಲ್ಲ. ಆದರೆ ಸಭೆ, ಸಮಾರಂಭ, ಬೈಠಕ್‌ಗಳಲ್ಲಿ, “ಶ್ರದ್ಧೆಯ ತಾಯಂದಿರೇ…, ಮಾತೆಯರೇ….” ಎಂದು ಭಾಷಣ ಆರಂಭಿಸುವ, ಶಿವಾಜಿ ಮಹಾರಾಜ್, ರಾಣಾ ಪ್ರತಾಪ್, ಸಾವರ್ಕರ್ ಕಥೆ ಹೇಳಿ ಮರುಳು ಮಾಡುವ, ಭಾರತ ಮಾತೆಯ ಗೌರವ ರಕ್ಷಣೆಯ ಹೆಸರಲ್ಲಿ ವೋಟು ಕೇಳುವ ಬಿಜೆಪಿಯವರೇ ಹೀಗೆ ಮಾಡಿದರೆ ಜನ ಯಾರ ಮೇಲೆ ವಿಶ್ವಾಸ, ಭರವಸೆಯನ್ನಿಡಬೇಕು?

ಅಷ್ಟಕ್ಕೂ ಲೋಕಾಯುಕ್ತರು ಈಡೇರಿಸಲಾರದ ಯಾವ ಬೇಡಿಕೆ ಯನ್ನಿಟ್ಟಿದ್ದರು?

1. ಲೋಕಾಯುಕ್ತ ದಾಳಿಯ ವೇಳೆ ಸಿಕ್ಕಿಹಾಕಿಕೊಂಡ ಅಧಿಕಾರಿ ಗಳನ್ನು ಕೂಡಲೇ ಅಮಾನತ್ತಿನಲ್ಲಿಡಬೇಕು.

2. ಮುಂದೆ ಮರು ನೇಮಕ ಮಾಡುವುದಾದರೂ ಲೋಕಾಯುಕ್ತದ ಗಮನಕ್ಕೆ ತರಬೇಕು.

3. ಭ್ರಷ್ಟರ ವಿರುದ್ಧ ಕ್ರಮಕೈಗೊಳ್ಳಲು ಲೋಕಾಯುಕ್ತಕ್ಕೆ ಹೆಚ್ಚಿನ ಅಧಿಕಾರ ನೀಡಬೇಕು.

4. ಲೋಕಾಯುಕ್ತ ಅಧಿಕಾರಿಗಳಿಗೆ ಹೆಚ್ಚಿನ ಸಂಬಳ ಸವಲತ್ತು ನೀಡಬೇಕು.

ಇವುಗಳಲ್ಲಿ ಈಡೇರಿಸಲು ಸಾಧ್ಯವಿಲ್ಲ ಎನ್ನುವಂಥದ್ದೇನಿದೆ? ಸರಕಾರ ಮಾಡಿದ್ದೇನು? ಲಂಚ ಸ್ವೀಕರಿಸಿ ಸಿಕ್ಕಿಬಿದ್ದಿದ್ದ ಬೆಸ್ಕಾಂ ಅಧಿಕಾರಿ ಬಿಸ್ಸೇಗೌಡ ಹಾಗೂ ಬಿಬಿಎಂಪಿಯ ಇಬ್ಬರು ಅಧಿಕಾರಿಗಳನ್ನು ಮತ್ತೆ ಅದೇ ಹುದ್ದೆಗೆ ನೇಮಕ ಮಾಡಿದರೆ ಲೋಕಾಯುಕ್ತದ ಆತ್ಮಸ್ಥೈರ್ಯ ಏನಾಗಬೇಕು? ಇನ್ನು ಉಪಲೋಕಾ ಯುಕ್ತರ ನೇಮಕ ವಿಚಾರಕ್ಕೆ ಬನ್ನಿ. ಆ ಹುದ್ದೆಯನ್ನು ಭರ್ತಿ ಮಾಡಲು 6 ತಿಂಗಳು ಬೇಕಾ? ಅದನ್ನು ಅಲಂಕರಿಸುವ ಯೋಗ್ಯತೆ ಈ ರಾಜ್ಯದಲ್ಲಿ ಯಾರಿಗೂ ಇಲ್ಲವೆ? ಲೋಕಾಯುಕ್ತಕ್ಕೆ ಬರುವವರಲ್ಲಿ ಹೆಚ್ಚಿನವರು ಪ್ರಾಮಾಣಿಕ ಅಧಿಕಾರಿಗಳೇ ಆಗಿರುತ್ತಾರೆ. ಅವರಿಗೆ ಹೆಚ್ಚಿನ ಸಂಬಳ ಸವಲತ್ತು ನೀಡುವುದಕ್ಕೂ ಮೀನ-ಮೇಷ ಎಣಿಸಬೇಕೆ? ಇದಿಷ್ಟೇ ಅಲ್ಲ, ಲಂಚ ಸ್ವೀಕರಿಸಿ ಸಿಕ್ಕಿಬಿದ್ದವರನ್ನು ಪುನಃ ಅದೇ ಹುದ್ದೆಗೆ ನೇಮಕ ಮಾಡುವ ಜತೆಗೆ ಕಳ್ಳರನ್ನು ಹಿಡಿದ ಅಧಿಕಾರಿಗಳಿಗೆ ಅಮಾನತ್ತಿನ ಬಳುವಳಿ ನೀಡುತ್ತಿದೆ ಈ ಸರಕಾರ!

ಬಹುಶಃ ಆರ್. ಗೋಕುಲ್ ಹೆಸರನ್ನು ನೀವು ಇದಕ್ಕೂ ಮೊದಲೇ ಕೇಳಿರುತ್ತೀರಿ. ಕಾವೇರಿ ಎಂಪೋರಿಯಂ ಬೆಂಕಿ ಪ್ರಕರಣದ ಹಿಂದೆ ಅಡಗಿದ್ದ ಪಿತೂರಿ, ಅವ್ಯವಹಾರ ಹಾಗೂ ಭ್ರಷ್ಟಾಚಾರವನ್ನು ಬೆಳಕಿಗೆ ತಂದ ದಕ್ಷ ಅಧಿಕಾರಿ ಅವರು. ಈ ಸರಕಾರಕ್ಕೆ ಪ್ರಾಮಾಣಿಕರು, ದಕ್ಷರು ಅಂದರೆ ವರ್ಜ್ಯ. ಹಾಗಾಗಿ ಗೋಕುಲ್ ಅವರನ್ನು ಎತ್ತಂಗಡಿ ಮಾಡಿ ಕಾರವಾರದ ಉಪ ಅರಣ್ಯ ಸಂರಕ್ಷಣಾಧಿಕಾರಿಯಾಗಿ(ಡಿಸಿಎಫ್) ಕಳುಹಿಸಿದರು. ಒಳ್ಳೆಯ ಕೆಲಸ ಮಾಡಬೇಕೆಂಬ ಇಚ್ಛೆ ಇರುವವರಿಗೆ ಜಾಗ ಯಾವುದಾದರೇನು? ಬೇಲಿಕೇರಿ ಹಾಗೂ ಕಾರವಾರ ಬಂದರು ಗಳಲ್ಲಿ 5 ಲಕ್ಷ ಮೆಟ್ರಿಕ್ ಟನ್ ಅದಿರನ್ನು ಅಕ್ರಮವಾಗಿ ದಾಸ್ತಾನು ಮಾಡಿರುವುದು ಗೋಕುಲ್ ಗಮನಕ್ಕೆ ಬಂತು. ಇದಕ್ಕೂ ಮುನ್ನ ಫೆಬ್ರವರಿ ಹಾಗೂ ಮಾರ್ಚ್ ತಿಂಗಳಲ್ಲಿ ಲೋಕಾಯುಕ್ತ ಅಧಿಕಾರಿಗಳು ಕಾರವಾರ ಬಂದರಿಗೆ ಹೋಗುತ್ತಿದ್ದ 99 ಅದಿರು ಸಾಗಣೆ ಲಾರಿಗಳನ್ನು ಹಿಡಿದು 40 ಗೋಣಿ ಚೀಲದಷ್ಟು ಬೋಗಸ್ ದಾಖಲೆಗಳನ್ನು ವಶಪಡಿಸಿಕೊಂಡಿದ್ದು ಹಾಗೂ ಲೋಕಾಯುಕ್ತದ ಅರಣ್ಯ ಘಟಕದ ಮುಖ್ಯಾಧಿಕಾರಿ ಯು.ವಿ. ಸಿಂಗ್‌ಗೆ ನೀಡಿದ ಮಾಹಿತಿ ಅವರ ನೆರವಿಗೆ ಬಂತು. ಅವರ ಸಲಹೆಯ ಮೇರೆಗೆ ಅಂಕೋಲಾ ನ್ಯಾಯಾಲಯದ ಮೊರೆ ಹೋದ ಗೋಕುಲ್, ಅಕ್ರಮ ಅದಿರನ್ನು ಮುಟ್ಟುಗೋಲು ಹಾಕಿಕೊಂಡರು. ಅದರ ವಿರುದ್ಧ ಖದೀಮ ಕಂಪನಿಗಳು ಹೈಕೋರ್ಟ್‌ನ ಹಸಿರು ಪೀಠದ ಎದುರು ಮೇಲ್ಮನವಿ ಹಾಕಿದವು. ವಕೀಲರನ್ನು ನೇಮಿಸಿಕೊಂಡು ಹೋರಾಟ ನಡೆಸಿದ ಲೋಕಾಯುಕ್ತಕ್ಕೆ ತಾತ್ಕಾಲಿಕವಾಗಿ ಜಯವೇನೋ ಸಿಕ್ಕಿತು, ಅಷ್ಟರಲ್ಲಿ ಮುಟ್ಟುಗೋಲು ಹಾಕಿಕೊಂಡಿದ್ದ ಅದಿರು ನಾಪತ್ತೆಯಾಗಿತ್ತು! ಈ ಘಟನೆಯ ನಂತರ ಅಕ್ರಮ ಅದಿರು ದಾಸ್ತಾನು ಮಾಡಿದ್ದ 10 ಕಂಪನಿಗಳ ವಿರುದ್ಧ ಗೋಕುಲ್ ಕ್ರಿಮಿನಲ್ ಕೇಸು ಹಾಕಿದರು. ಅದೇ ಸಮಯಕ್ಕೆ, ೫ ಲಕ್ಷ ಮೆಟ್ರಿಕ್ ಟನ್ ಪತ್ತೆಯಾಗುವುದಕ್ಕೆ ಮೊದಲೇ 35 ಲಕ್ಷ ಮೆಟ್ರಿಕ್ ಟನ್ (2 ಸಾವಿರ ಕೋಟಿ ರೂ. ಮೌಲ್ಯ) ಅದಿರು ಕಾರಾವಾರ ಬಂದರಿನ ಮೂಲಕ ಅಕ್ರಮವಾಗಿ ಸಾಗಣೆಯಾಗಿರುವ ವಿಚಾರ ತಿಳಿದು ಬಂತು. ಈ ನಡುವೆ ಕೋರ್ಟ್ ಕಸ್ಟಡಿಯಲ್ಲಿದ್ದ ೫ ಲಕ್ಷ ಮೆಟ್ರಿಕ್ ಟನ್ ಅದಿರು ನಾಪತ್ತೆಗೆ ಸಂಬಂಧಿಸಿದಂತೆ ಬಂದರು ಸಚಿವ ಕೃಷ್ಣ ಪಾಲೇಮಾರು, ಕಳ್ಳ ಕಂಪನಿಗಳ ಸಭೆ ಕರೆದರು. ಅದಕ್ಕೆ ಗೋಕುಲ್ ಹಾಜರಾಗಲಿಲ್ಲ. ಅವರು 35 ಲಕ್ಷ ಮೆಟ್ರಿಕ್ ಟನ್ ಕಳ್ಳಸಾಗಣೆ ಯಾಗಿರುವುದಕ್ಕೆ ಸಂಬಂಧಪಟ್ಟಂತೆ ದಾಖಲೆ ಕಲೆಹಾಕುವ ಕೆಲಸ ಮಾಡುತ್ತಿದ್ದರು. ಆನಂತರ ಬೆಂಗಳೂರಿಗೆ ಆಗಮಿಸಿದ ಗೋಕುಲ್, ಆಡಳಿತ ಸುಧಾರಣೆ ಮತ್ತು ಒಳಾಡಳಿತ ವಿಭಾಗದ ಮುಖ್ಯಸ್ಥೆ ಮೀರಾ ಸಕ್ಸೇನಾ ಬಳಿಗೆ ಹೋಗಿ, ನನ್ನ ಬಳಿ ಸಾಕಷ್ಟು ದಾಖಲೆಗಳಿವೆ. ಕೋರ್ಟ್ ಮುಂದಿಡಲು ಮತ್ತೊಬ್ಬ ವಕೀಲರನ್ನು ಕೊಡಿ ಎಂದು ಮನವಿ ಮಾಡಿಕೊಂಡರು. ಆಗ ಆಕೆ ಬಾಯ್ಬಿಟ್ಟರು. ದಾಖಲೆ ಕೊಡುವ ಮಾತು ಹಾಗಿರಲಿ, ನಿಮ್ಮನ್ನೇ ಸಸ್ಪೆಂಡ್ ಮಾಡಬೇಕು ಎಂದು ಸರಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಸಚಿವರಿಂದ ಶಿಫಾರಸು ಬಂದಿದೆ. ಇನ್ನೇನು ಆದೇಶ ಜಾರಿಯಾಗುತ್ತದೆ ಎಂಬ ಡ್ರಾಫ್ಟ್ ತೋರಿಸಿದರು! ‘ನಾನು ಕರೆದಿದ್ದ ಸಭೆಗೆ ಗೋಕುಲ್ ಆಗಮಿಸದೇ ಇದ್ದಿದ್ದು ಅವರು ಕಳ್ಳ ಕಂಪನಿಗಳ ಜತೆ ಶಾಮೀಲಾಗಿದ್ದಾರೆ ಎಂಬುದನ್ನು ತೋರಿಸುತ್ತದೆ’ ಎಂದು ಸಚಿವ ಕೃಷ್ಣ ಪಾಲೇಮಾರು ಕಾರಣ ನೀಡಿದ್ದರು!! ಅಲ್ಲಾ, ಇವರೇನು ಬಂದರು ಸಚಿವರೋ? ಅಥವಾ ‘ಬಂದರು ಕಳ್ಳಸಾಗಣೆ’ ಸಚಿವರೋ? ಒಬ್ಬ ಪ್ರಾಮಾಣಿಕ ಅಧಿಕಾರಿಯನ್ನೇ ಭ್ರಷ್ಟ ಎಂದು ಹೇಳುತ್ತಾರಲ್ಲಾ ಸ್ವಾಮಿ, ಇವರಿಗೆ ಏನು ಮಾಡಬೇಕು?

ಈ ವಿಷಯವನ್ನು ಗೋಕುಲ್, ಲೋಕಾಯುಕ್ತ ಸಂತೋಷ್ ಹೆಗ್ಡೆಯವರ ಗಮನಕ್ಕೆ ತಂದ ನಂತರವೇ ಅವರು ನೊಂದುಕೊಂಡು ರಾಜೀನಾಮೆ ನಿರ್ಧಾರ ತೆಗೆದುಕೊಂಡಿದ್ದು. ನನ್ನ ಅಧಿಕಾರಿಗಳ ರಕ್ಷಣೆ ಅಸಾಧ್ಯವಾದಾಗ ಜನತೆಗೆ ನನ್ನಿಂದ ಯಾವ ನ್ಯಾಯ ನೀಡಲು ಸಾಧ್ಯ? ಎಂಬ ಲೋಕಾಯುಕ್ತರ ಪ್ರಶ್ನೆಯ ಹಿಂದಿರುವ ಹತಾಶೆ ಹಾಗೂ ಆಳುವ ಬಿಜೆಪಿ ಸರಕಾರದ ಒಟ್ಟು ಧೋರಣೆಯನ್ನು ಅರ್ಥಮಾಡಿಕೊಳ್ಳಿ. ಇದೇ ಬಿಜೆಪಿ 2008 ಮೇ.ನಲ್ಲಿ ನಡೆದ ರಾಜ್ಯ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಹೊರಡಿಸಿದ್ದ ‘ಪ್ರಣಾಳಿಕೆ’ಯ 14ನೇ ಪುಟದಲ್ಲಿ ಹೇಳಿದ್ದಿದ್ದೇನು ಗೊತ್ತೆ?
1. ಆಡಳಿತದಲ್ಲಿ ದಕ್ಷತೆ ತರಲು, ಚುರುಕು ಮೂಡಿಸಲು, ಭ್ರಷ್ಟಾಚಾರ ನಿಗ್ರಹಕ್ಕೆ ನಾನಾ ಕ್ರಮ ತೆಗೆದುಕೊಳ್ಳಲಾಗುವುದು.

2. ಲೋಕಾಯುಕ್ತಕ್ಕೆ ಪರಮಾಧಿಕಾರ ನೀಡಲಾಗುವುದು.

ಹೀಗೆಲ್ಲ ಹೇಳಿ ಅಧಿಕಾರಕ್ಕೆ ಬಂದವರು 2 ವರ್ಷ ಕಳೆದರೂ ಮಾಡಿದ್ದೇನು? ಲೋಕಾ ಯುಕ್ತಕ್ಕೆ ಪರಮಾಧಿಕಾರ ಕೊಡುವುದು ಹಾಗಿರಲಿ, ಭ್ರಷ್ಟಾಚಾರದ ವಿರುದ್ಧ ಹೋರಾಟಕ್ಕಿಳಿದವರಿಗೇ ಅಮಾನತ್ತಿನ ಕೊಡುಗೆ ನೀಡಲು ಮುಂದಾಗಿದ್ದು ಯಾವ ನೈತಿಕತೆ ಹೇಳಿ ಯಡಿಯೂರಪ್ಪನವರೇ? ಲೋಕಾಯುಕ್ತರ ರಾಜೀನಾಮೆ ‘ದುರದೃಷ್ಟಕರ’, ‘ಅನಿರೀಕ್ಷಿತ’ ಎಂದು ಮುಖ್ಯಮಂತ್ರಿ ಹೇಳಿಕೆ ನೀಡುತ್ತಿದ್ದಾರೆಯೇ ಹೊರತು ವಾಪಸ್ ತೆಗೆದುಕೊಳ್ಳಿ ಎಂಬ ಮಾತು ಬರುತ್ತಿಲ್ಲ! ಎರಡು ವರ್ಷಗಳ ಸಾಧನಾ ಸಮಾವೇಶದ ಪ್ರಯುಕ್ತ ಮೊನ್ನೆ ಗುರುವಾರ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿ ವೇಳೆ ರಾಜೀನಾಮೆ ಹಿಂತೆಗೆದುಕೊಳ್ಳುವಂತೆ ಲೋಕಾಯುಕ್ತರಿಗೆ ಮನವಿ ಮಾಡಿಕೊಳ್ಳುತ್ತೀರಾ ಎಂಬ ಪ್ರಶ್ನೆಗೆ, “ಹಾಗೆ ಹೇಳುವ ಮೂಲಕ ಸುಪ್ರೀಂಕೋರ್ಟ್‌ನ ಮಾಜಿ ನ್ಯಾಯಾಧೀಶರಿಗೆ ಮುಜುಗರವನ್ನುಂಟು ಮಾಡಲು ನನಗೆ ಇಷ್ಟವಿಲ್ಲ” ಎಂದು ಮುಖ್ಯಮಂತ್ರಿ ಯಡಿಯೂರಪ್ಪನವರು ಮಹಾ ಸಾತ್ವಿಕ ಮನುಷ್ಯನಂತೆ ಹೇಳಿದ್ದಾರೆ. ರಾಜೀನಾಮೆ ಹಿಂತೆಗೆದುಕೊಳ್ಳಿ ಎಂದು ಮನವಿ ಮಾಡುವುದು ಸಂತೋಷ್ ಹೆಗ್ಡೆಯವರಿಗೆ ಯಾವ ರೀತಿ ಮುಜುಗರವನ್ನುಂಟು ಮಾಡಲು ಸಾಧ್ಯ ಹೇಳಿ?

ಈ ಸರಕಾರದಲ್ಲಿ ಯಾರಿಗೆ ಆಶ್ರಯ, ಅಭಯ ಸಿಗುತ್ತಿದೆ?

ಬೇಲಿಕೇರಿಯಲ್ಲಿ 5 ಲಕ್ಷ ಮೆಟ್ರಿಕ್ ಟನ್ ಅಕ್ರಮ ಅದಿರು ದಾಸ್ತಾನು ಮಾಡಿದ್ದ 10 ಕಂಪನಿಗಳೂ ಬೋಗಸ್ ಡಾಕ್ಯುಮೆಂಟ್ ಹೊಂದಿದ್ದ ಬೇನಾಮಿ ಕಂಪನಿಗಳು. ಅವು ಯಾರದ್ದೆಂದು ಬಿಡಿಸಿ ಹೇಳಬೇಕಾದ ಅಗತ್ಯವಿದೆಯೇ?! ಹಾಲಪ್ಪ, ರೇಣುಕಾಚಾರ್ಯ, ಬಳ್ಳಾರಿಯ ಕಳ್ಳ ಸಹೋದರರು… ಹೀಗೆ ಯಾರು ಮುಖಮುಚ್ಚಿಕೊಂಡು ಓಡಾಡ ಬೇಕಿತ್ತೋ ಅವರು ರಾಜಾರೋಷವಾಗಿ ತಿರುಗಾಡುತ್ತಿದ್ದಾರೆ. ರೈಡ್ ಮಾಡಿದವರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಲೋಕಾಯುಕ್ತ ಅಧಿಕಾರಿಗಳು ಬೆಳಗಾವಿಯ ಎಸ್ಪಿ ನಿಂಬಾಳ್ಕರ್ ಮೇಲೆ ಭ್ರಷ್ಟಾಚಾರ ಹಿನ್ನೆಲೆಯಲ್ಲಿ ದಾಳಿ ಮಾಡಿದ್ದಕ್ಕೆ ಆತ ಸಂತೋಷ್ ಹೆಗ್ಡೆಯವರ ವಿರುದ್ಧವೇ ಮಾನನಷ್ಟ ಮೊಕದ್ದಮೆ ಹಾಕಿದ್ದಾರೆ. ಅನುಮಾನಾಸ್ಪದವಾಗಿ ಸ್ವಯಂ ನಿವೃತ್ತಿ ತೆಗೆದುಕೊಂಡ ಬೆಂಗಳೂರು ಕಾರ್ಪೊರೇಶನ್ ಕಮಿಷನರ್ ಆಗಿದ್ದ ಸುಬ್ರಹ್ಮಣ್ಯ ಅವರ ಆಪ್ತ ಕಾರ್ಯದರ್ಶಿ ಮೇಲೆ ದಾಳಿ ಮಾಡಿ, ಅಕ್ರಮ ಆಸ್ತಿ ದಾಖಲೆಗಳನ್ನು ವಶಪಡಿಸಿಕೊಂಡಾಗ ಸುಬ್ರಹ್ಮಣ್ಯ ಕೂಡ ಲೋಕಾಯುಕ್ತರ ವಿರುದ್ಧ ಮಾನನಷ್ಟ ಮೊಕದ್ದಮೆ ಹಾಕಲು ಮುಂದಾಗಿದ್ದರು. ಈ ಹಿನ್ನೆಲೆಯಲ್ಲಿ ಕ್ರಮ ತೆಗೆದುಕೊಳ್ಳುವ ಅಧಿಕಾರ ಕೊಡಿ ಎಂದು ಕೇಳಿದರೆ ತಪ್ಪೇನು? ಅದು ಭ್ರಷ್ಟಾಚಾರವಿರಬಹುದು, ಮೈನಿಂಗ್ ಮಾಫಿಯಾ ಆಗಿರಬಹುದು. ಇವುಗಳ ವಿರುದ್ಧ ಸಂತೋಷ್ ಹೆಗ್ಡೆಯವರು ಸಮರ ಸಾರಿರುವುದು ವೈಯಕ್ತಿಕ ಹಿತಾಸಕ್ತಿಯಿಂದೇನು? ಭಾರತ ಮಾತೆ ಎಂದು ಬಾಯಲ್ಲಿ ಹೇಳುತ್ತಾ, ಭೂಮಿಯನ್ನೇ ಅಗೆದು ಚೀನಾಕ್ಕೆ ಕಳುಹಿಸುತ್ತಿದ್ದಾರಲ್ಲಾ….ಇವರ ವಿರುದ್ಧ ಸಮರ ಸಾರಿದ್ದು ತಪ್ಪಾ?

ಸಂತೋಷ್ ಹೆಗ್ಡೆ ಲೋಕಾಯುಕ್ತರಾಗಿ ನೇಮಕ ಗೊಂಡಾಗ ಇದ್ದಿದ್ದು 1 ಅಪಾರ್ಟ್‌ಮೆಂಟ್, 1 ಕಾರು, ಒಂದಿಷ್ಟು ಬ್ಯಾಂಕ್ ಬ್ಯಾಲೆನ್ಸ್. ಅದನ್ನು ವೈಬ್‌ಸೈಟ್‌ನಲ್ಲೇ ಪ್ರಕಟ ಮಾಡಿದ್ದರು. ಈಗಲೂ ಅಷ್ಟೇ ಇದೆ. ಜನರಿಗೆ ಒಳ್ಳೆಯದನ್ನು ಮಾಡುವುದಕ್ಕಾಗದೇ, ಬರೀ ಸರಕಾರಿ ಬಂಗಲೆ, ಕಾರು, ಸಂಬಳಕ್ಕಾಗಿ ನಾನು ಹುದ್ದೆಯಲ್ಲಿ ಮುಂದುವರಿಯಬೇಕೇ ಎಂಬ ಅವರ ಪ್ರಶ್ನೆಯೇ ಪ್ರಾಮಾಣಿಕತೆಗೆ ಹಿಡಿದ ಕನ್ನಡಿ. ಇಂಥವರನ್ನು ಉಳಿಸಿಕೊಳ್ಳಲು ನಮಗೆ ಸಾಧ್ಯವಿಲ್ಲವೆ? ನಮ್ಮ ಜನರಿಗೆ ಯಾಕಿಷ್ಟು ಜಡತ್ವ?ಇದುವರೆಗೂ ಲೋಕಾಯುಕ್ತ ಸಂತೋಷ್ ಹೆಗ್ಡೆ ಇದ್ದರು. ಇವತ್ತು ಸ್ವಾತಂತ್ರ್ಯ ಹೋರಾಟಗಾರ ರಾಜೇಂದ್ರ ಜಯರಾಮ್ ಅವರ ಕಣ್ಣಿನ ಪೊರೆಯ ಆಪರೇಶನ್ ಆಗುತ್ತದೆ. ಆಪರೇಶನ್ ಆದ ಮೇಲೆ ದುಡ್ಡು ಕೇಳಿದರೆ ಯಾರ ಮೊರೆ ಹೋಗಬೇಕು?! ತತ್ತ್ವಾದರ್ಶದ ಶ್ರಾದ್ಧ ನೋಡಿಕೊಂಡು ಸುಮ್ಮನಿರಬೇಕಾ? ನಿಮ್ಮನ್ನು ತಾಯಿ ಎಂದು ಸಂಬೋಧಿಸುವ, ನಿಮ್ಮನ್ನು ಮರಳು ಮಾಡಿ ವೋಟು ಗಿಟ್ಟಿಸಿಕೊಂಡ ಬಿಜೆಪಿಯವರು ಏನು ಮಾಡುತ್ತಿದ್ದಾರೆ?

ನೀವೇ ಹೇಳಿ, ಶ್ರದ್ಧೆಯ ತಾಯಂದಿರೇ, ಮಾತೆಯರೇ….

ಕೃಪೆ : ಪ್ರತಾಪ್ ಸಿಂಹ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ