ನನ್ನ ಬ್ಲಾಗ್ ಪಟ್ಟಿ

ಮಂಗಳವಾರ, ಆಗಸ್ಟ್ 24, 2010

‘ಗಾಂಧೀಜಿ ಭಾಷೆ’ ನಮ್ಮನ್ನಾಳುವವರಿಗೆ ಅರ್ಥವಾಗೊಲ್ಲ!

ಮಹಾರಾಷ್ಟ್ರ ನವನಿರ್ಮಾಣ ಸೇನಾದ (ಎಂಎನ್‌ಎಸ್) ನಾಯಕ ರಾಜ್ ಠಾಕ್ರೆ ಹಿಡಿದಿರುವ ಮಾರ್ಗ ಸರಿಯೋ ಅಥವಾ ತಪ್ಪೋ ಎಂಬ ಚರ್ಚೆ ‘ಬುದ್ಧಿಜೀವಿ’ಗಳ ನಡುವೆಯೇ ಒಡಕ ನ್ನುಂಟುಮಾಡಿದೆ, ಹೊಸ ಜಿeಸೆಗೆ ಕಾರಣವಾಗಿದೆ. ರಾಜ್ ಠಾಕ್ರೆ ಬಗ್ಗೆ ಒಂದು ಅಭಿಪ್ರಾಯಕ್ಕೆ ಬರುವ ಮೊದಲು, ಆತ ಹೀಗೇ ಎಂದು ತೀರ್ಪು ನೀಡುವ ಮುನ್ನ ಆತನ ಬಗ್ಗೆ ತಿಳಿದುಕೊಳ್ಳುವುದು ಒಳ್ಳೆಯದಲ್ಲವೆ? ಈ ಹಿನ್ನೆಲೆಯಲ್ಲಿ ಅಕ್ಟೋಬರ್ 2ರಂದು ‘ಮುಂಬೈ ಮಿರರ್’ ಪತ್ರಿಕೆಯಲ್ಲಿ ಪ್ರಕಟವಾಗಿರುವ ಶೋಭಾ ಡೇ ಜತೆಗಿನ ರಾಜ್ ಠಾಕ್ರೆ ಸಂದರ್ಶನವನ್ನು ಓದಿ.

1 ಮಹಾತ್ಮ ಗಾಂಧೀಜಿಯವರ ಜನ್ಮದಿನವಾದ ಇದು ಅಹಿಂಸಾ ದಿನವೂ ಹೌದು. ಈ ದಿನದಂದು ನಿಮ್ಮ ಸಂದೇಶವೇನು?
ಮಹಾತ್ಮ ಗಾಂಧೀಜಿಯವರು ಅಹಿಂಸಾ ಚಳವಳಿ ನಡೆಸಿದ್ದು ಬುದ್ಧಿವಂತ ಹಾಗೂ ಶಿಕ್ಷಿತ ಬ್ರಿಟಿಷರ ವಿರುದ್ಧ! ಅಂತಹ ಕಾಲ ಹೋಯಿತು!!

2 ಅಂದರೆ ಇಂದಿನ ಸಾಮಾನ್ಯ ಜನರಿಗೆ ಗಾಂಧೀಜಿ ಅಪ್ರಸ್ತುತ ಎಂದೆನಿಸುತ್ತಿದೆಯೇ?
ಗಾಂಧೀಜಿ ಖಾದಿ ಮತ್ತು ಸ್ವದೇಶಿಗೆ ಕರೆ ನೀಡಿದ್ದರು. ಆದರೆ ಇಂದು ಕಾಂಗ್ರೆಸ್ಸನ್ನು ಆಳುತ್ತಿರುವುದು ವಿದೇಶಿ ಮಹಿಳೆ. ಇದಕ್ಕಿಂತ ವಿರೋಧಾಭಾಸ ಇದೆಯೆ?

3 ಹಿಂಸಾಮಾರ್ಗ ತುಳಿಯುವುದು ಸರಿಯೇ ಎಂಬ ನನ್ನ ಪ್ರಶ್ನೆಗೆ ನೀವು ಉತ್ತರಿಸಲಿಲ್ಲ?
ಮೊದಲನೆಯದಾಗಿ ನಾನು ಗಾಂಧೀಜಿಯಲ್ಲ. ಎರ ಡನೆಯದಾಗಿ, ನಾನು ನಮ್ಮ ರಾಜಕಾರಣಿಗಳಿಗೆ ಯಾವ ಭಾಷೆ ಅರ್ಥವಾಗುತ್ತದೋ ಅದೇ ‘ಭಾಷೆ’ಯಲ್ಲಿ ಮಾತನಾ ಡುತ್ತೇನೆ. ಮೊದಲು ಮಾತುಕತೆಯ ಮೂಲಕ ಹೇಳುತ್ತೇನೆ. ಮಾತಿನಲ್ಲಿ ಹೇಳಿದ್ದು ಅರ್ಥವಾಗದಿದ್ದರೆ ಬೇರೆ ಭಾಷೆ ಯನ್ನು ಪ್ರಯೋಗಿಸುತ್ತೇನೆ. ವಿಧಿಯೇ ಇಲ್ಲ…

4 ಅಕಸ್ಮಾತ್ ನಾನೂ ಮರಾಠಿಯವಳಾಗಿಲ್ಲದಿದ್ದರೆ, ಮರಾಠಿ ಮಾತನಾಡಲು ಬಾರದೇ ಹೋಗಿದ್ದಿದ್ದರೆ ನೀವು ನನ್ನನ್ನು ಭೇಟಿಯಾಗುತ್ತಿದ್ದಿರೋ?
ನಾನು ಎತ್ತಿರುವ ವಿಷಯಗಳ ಬಗ್ಗೆ ಚೆನ್ನಾಗಿ ಅರಿತುಕೊಳ್ಳಿ. ವಿಷಯ ಅರ್ಥಮಾಡಿಕೊಂಡರೆ ನಾನು ಹೇಳುತ್ತಿರುವುದು ನಿಮಗೆ ಅರ್ಥವಾಗುತ್ತದೆ. ಚಿಕ್ಕಂದಿನಿಂದಲೂ ನಾನು ‘ರಾಮ ಲೀಲಾ’ ಪೂಜೆಯಲ್ಲಿ ಪಾಲ್ಗೊಳ್ಳುತ್ತಿದ್ದೆ. ಶಿವಾಜಿ ಪಾರ್ಕ್‌ನಲ್ಲಿ ನಡೆಯುತ್ತಿದ್ದ ದುರ್ಗಾಪೂಜೆಗೆ ಅಮ್ಮನ ಜತೆ ಹೋಗುತ್ತಿದ್ದೆ. ಅದಕ್ಕೂ ಇದಕ್ಕೂ ಏನು ಸಂಬಂಧ?

5 ಒಂದು ವೇಳೆ ದುರ್ಗಾಪೂಜೆ ಮಾಡುವ ಆ ಬೆಂಗಾಲಿ ಗಳಿಗೆ ಮರಾಠಿ ಬರುವುದಿಲ್ಲವಾಗಿದ್ದರೆ?
ನಾನು ಸಂಪೂರ್ಣ ಹೇಳುವುದಕ್ಕೆ ಬಿಡಿ. ನಾನು ಚಿಕ್ಕ ಹುಡುಗನಾಗಿದ್ದಾಗಿನಿಂದಲೂ ನನ್ನ ಮನೆಯ ಬಳಿ ರಾಮ್ ಲೀಲೆಯನ್ನು ನೋಡಿದ್ದೇನೆ. ಮುಂಬೈನಲ್ಲಿ ಯಾರು ಇರಬೇಕು, ಯಾರು ಇರಬಾರದು ಎಂಬುದು ಇಲ್ಲಿರುವ ಪ್ರಶ್ನೆಯಲ್ಲ. ಭಾಷೆಯ ಆಧಾರದ ಮೇಲೆ ರಾಜ್ಯಗಳನ್ನು ರಚನೆ ಮಾಡಿದಾಗ, ಆಯಾ ರಾಜ್ಯಗಳಿಗೆ ಹೋಗಿದ್ದು ಯಾರು? ಇಂದು ಬಹಳಷ್ಟು ಮರಾಠಿಗರು ಮಹಾರಾಷ್ಟ್ರದ ಆಚೆ ನೆಲೆಸಿದ್ದಾರೆ. ಹಾಗೆಯೇ ಅನ್ಯ ರಾಜ್ಯ ದವರೂ ಮಹಾರಾಷ್ಟ್ರದಲ್ಲಿ ವಾಸಿಸುತ್ತಿದ್ದಾರೆ. ಯಾರು ಯಾವ ರಾಜ್ಯದಲ್ಲಿ ಬೇಕಾದರೂ ವಾಸಿಸಬಹುದು. ಆದರೆ ಆ ರಾಜ್ಯದ ಸ್ಥಳೀಯ ಭಾಷೆ, ಸಂಸ್ಕೃತಿಯನ್ನು ಕಲಿತುಕೊಳ್ಳಬೇಕು.

6 ಹಾಗಾದರೆ ಕೇರಳದಲ್ಲಿ ವಾಸಿಸುತ್ತಿರುವ ಮಹಾ ರಾಷ್ಟ್ರದ ವ್ಯಕ್ತಿಗೆ ಮಲಯಾಳಂ ಮಾತನಾಡಲು ಬರುವು ದಿಲ್ಲ ಎಂದು ಅಲ್ಲಿನವರು, ಹೋಗಾಚೆ ಎಂದರೆ…?
ಖಂಡಿತ ಹೇಳಬಹುದು.

7 ಯಾರು ಯಾವ ರಾಜ್ಯದಲ್ಲಿ ವಾಸಿಸಬೇಕೆಂಬುದು ನಿರ್ಧರಿಸಬೇಕಾದವರು ಯಾರು, ಭಾರತದಂತಹ ಪ್ರಜಾ ತಾಂತ್ರಿಕ ರಾಷ್ಟ್ರದಲ್ಲಿ…?
ಭಾರತ್ ಯೂರೋಪ್‌ನಂತೆ. ಅಂದರೆ ಕರೆನ್ಸಿ ಒಂದೇ ಆಗಿದ್ದರೂ ಕಲ್ಚರ್ ಮತ್ತು ಭಾಷೆ ನೂರಾರಿವೆ! ನಮ್ಮದೂ ನೂರಾರು ಭಾಷೆ, ಸಂಸ್ಕೃತಿಗಳಿರುವ ಯೂರೋಪ್!!

8 ಅಂದರೆ ಭಾರತವೂ ರಾಜ್ಯಗಳ ಒಕ್ಕೂಟ ಎಂದೇ?
ಹೌದು, ನಮ್ಮ ರಾಜ್ಯಗಳು ಅಸ್ತಿತ್ವಕ್ಕೆ ಬಂದಿದ್ದು ಭಾಷೆ, ಸಂಸ್ಕೃತಿಗಳ ಆಧಾರದ ಮೇಲೆಯೇ ಅಲ್ಲವೆ? ಲಾಲ್ ಕೃಷ್ಣ ಆಡ್ವಾಣಿಯವರು ದಕ್ಷಿಣ ಭಾರತಕ್ಕೆ ಹೋದಾಗ ಹಿಂದಿ ಬದಲು ಇಂಗ್ಲಿಷ್‌ನಲ್ಲಿ ಮಾತನಾಡುತ್ತಾರೆ. ಏಕೆ? ಅಂದಮೇಲೆ ಮಹಾರಾಷ್ಟ್ರಿಗರಾದ ನಮ್ಮ ಮೇಲೆ ಹಿಂದಿ ಯನ್ನೇಕೆ ಹೇರುತ್ತೀರಿ? ನೀವೂ ಮರಾಠಿ ಕಲಿಯಿರಿ.

9 ಹಿಂದಿಯನ್ನು ‘ರಾಷ್ಟ್ರಭಾಷೆ’ ಎಂದು ಘೋಷಣೆ ಮಾಡಿದ್ದಾರಲ್ಲವೆ?
ಯಾವಾಗ, ಎಲ್ಲಿ ಘೋಷಣೆ ಮಾಡಿದ್ದಾರೆ?!

10 ಅಧಿಕೃತವಾಗಿ ಹಿಂದಿಯೇ ರಾಷ್ಟ್ರಭಾಷೆಯಲ್ಲವೆ?
ಹಾಗಾದರೆ ಇತಿಹಾಸವನ್ನು ತಡಕಾಡೋಣ. ಹಿಂದಿಯೂ ಒಂದು ರಾಜ್ಯಭಾಷೆ. ಅದನ್ನು ರಾಷ್ಟ್ರಭಾಷೆ ಎಂದು ಘೋಷಣೆ ಮಾಡಿದ್ದು ಕಾಂಗ್ರೆಸ್ ಶೃಂಗದಲ್ಲಿ. ನಾನೂ ಹಿಂದಿಗೆ ಗೌರವ ಕೊಡುತ್ತೇನೆ. ಆದರೆ ಮಹಾರಾಷ್ಟ್ರಕ್ಕೆ ಆಗಮಿಸುವ ಅನ್ಯ ರಾಜ್ಯದವರೇಕೆ ಮರಾಠಿ ಕಲಿಯು ವುದಿಲ್ಲ? ನೀವು ಫ್ರಾನ್ಸ್‌ಗೆ ಹೋದರೆ ಫ್ರೆಂಚ್ ಭಾಷೆಯಲ್ಲೇ ಮಾತನಾಡಬೇಕು. ಒಂದು ವೇಳೆ ಇಂಗ್ಲಿಷ್‌ನಲ್ಲಿ ಮಾತನಾ ಡಿದರೆ ಅದು ಜಾಗತಿಕ ಭಾಷೆಯಾಗಿದ್ದರೂ ಯಾರೂ ನಿಮ್ಮತ್ತ ಮುಖ ಎತ್ತಿ ನೋಡುವುದಿಲ್ಲ!

11 ಖಂಡಿತ. ಅದು ಅಲ್ಲಿಯ ಜನರ ಭಾಷೆ, ಅವ ರೊಂದಿಗೆ ವ್ಯವಹಾರ ಮಾಡಬೇಕೆಂದರೆ ಫ್ರೆಂಚ್‌ನಲ್ಲಿ ಮಾತನಾಡಬೇಕು…
ನಾನು ಒಪ್ಪುತ್ತೇನೆ. ಆದರೆ ಆ ರಾಷ್ಟ್ರಗಳು ಒಪ್ಪುತ್ತವೆಯೇ? ಆ ಬಗ್ಗೆ ಯಾರು ಏನೂ ಹೇಳುವುದಿಲ್ಲ. ದಕ್ಷಿಣದ ನಾಲ್ಕೂ ರಾಜ್ಯಗಳಲ್ಲಿ ಹಿಂದಿಯನ್ನು ಮಾತನಾಡುವುದಿಲ್ಲ. ಅವರಿಗೆ ಯಾರೂ ಹಿಂದಿ ರಾಷ್ಟ್ರಭಾಷೆ ಎಂದು ಬೋಧನೆ ನೀಡುವುದಿಲ್ಲ. ಒಂದು ವೇಳೆ ಹಿಂದಿಯಲ್ಲಿ ಮಾತನಾಡ ದಿದ್ದರೆ ದೇಶ ಒಡೆದುಹೋಗುತ್ತದೆ ಎಂದು ಯಾರೂ ಹೇಳು ವುದಿಲ್ಲ. ನಾನು ಸರಳವಾಗಿಯೇ ಹೇಳುತ್ತಿದ್ದೇನೆ-ಮರಾಠಿ ಕಲಿಯಿರಿ. ಅಷ್ಟಕ್ಕೂ ಮರಾಠಿಯನ್ನು ಐಚ್ಚಿಕ ವಿಷಯವಾಗಿ ಮಾಡಿ, ಹಿಂದಿಯಲ್ಲಿ ಮಾತನಾಡಿ ಎಂದು ಹೇಗೆ ನಮಗೆ ಹೇಳುತ್ತೀರಿ?

12 ನಾನು ಹೇಳುತ್ತಿರುವುದನ್ನು ಅರ್ಥಮಾಡಿಕೊಳ್ಳಿ. ಒಬ್ಬ ಮಹಾರಾಷ್ಟ್ರದಲ್ಲಿ ವಾಸಿಸುತ್ತಿದ್ದಾನೆ ಹಾಗೂ ಮಹಾರಾಷ್ಟ್ರ-ಮುಂಬೈಗೆ ತನ್ನ ಕೊಡುಗೆ ನೀಡುತ್ತಿದ್ದಾನೆ ಎಂದಿಟ್ಟುಕೊಳ್ಳಿ. ಆತನಿಗೆ ಮರಾಠಿ ಬರುವುದಿಲ್ಲ ಎಂಬ ಕಾರಣಕ್ಕೆ ಆತನ ಸೇವೆಗೆ ಕಿಮ್ಮತ್ತಿಲ್ಲವೆ?
ಇದು ಕೊಡುಗೆಯ ವಿಷಯವಲ್ಲ. ಅವರು ಮರಾಠಿ ಕಲಿಯಬೇಕು.

13 ಇದು ಜಬರ್‌ದಸ್ತಿ ಎನಿಸುವುದಿಲ್ಲವೆ?
ಅವರಿಗೆ ಅರ್ಥವಾಗುವುದು ‘ಜಬರ್‌ದಸ್ತಿ’ ಭಾಷೆ ಮಾತ್ರ. ಶಾಲೆಯಲ್ಲಿ ಮರಾಠಿ ಕಲಿಸಿ ಎಂದು ನಾನು ಮನವಿ ಮಾಡಿಕೊಂಡರೂ ಕಿವಿಗೆ ಹಾಕಿಕೊಳ್ಳಲಿಲ್ಲ. ಇಂತಹ ಧೋರಣೆ ತೋರಿದರೆ ಜಬರ್‌ದಸ್ತಿ ಮಾಡಲೇ ಬೇಕಾಗುತ್ತದೆ.

14 ಇದು ಮತ್ತೇನು ಅಲ್ಲ ರಾಜಕೀಯ ಅಷ್ಟೇ…
ಖಂಡಿತ ಅಲ್ಲ, ಇದು ಆತ್ಮಗೌರವದ ಪ್ರಶ್ನೆ, ಹೆಮ್ಮೆಯ ವಿಚಾರ. ಇತ್ತೀಚೆಗೆ ಇಲ್ಲಿ ಬಂದಿರುವ ಹೊಸಬರ ಬಗ್ಗೆ ನಾನು ಮಾತನಾಡುತ್ತಿದ್ದೇನೆ. ಇಲ್ಲಿ ಬೆಂಗಾಳಿಗಳಿದ್ದಾರೆ. ತಮಿಳರಿದ್ದಾರೆ. ಹಾಗಂತ ಜ್ಯೋತಿಬಸು ಅಥವಾ ಭಟ್ಟಾಚಾರ್ಜಿ ಆಗಲೀ ಕರುಣಾನಿಧಿ ಮತ್ತು ಜಯಲಲಿತಾ ಆಗಲಿ ಇಲ್ಲಿಗೆ ಬಂದು ‘ನಮ್ಮವರೆಲ್ಲ ಒಂದಾಗೋಣ’ ಎಂದು ಭಾಷಣ ಮಾಡಿಲ್ಲ.

15 ಅಂದರೆ, ವೋಟ್‌ಬ್ಯಾಂಕ್ ರಾಜಕಾರಣ. ಇದು ಮಾಯಾವತಿಯವರ ಬಹುದಿನಗಳ ಯೋಜನೆಯಾಗಿತ್ತು..
ಬರೀ ಮಾಯಾವತಿ ಮಾತ್ರವಲ್ಲ. ಮುಲಾಯಂ ಸಿಂಗ್ ಯಾದವ್, ಲಾಲೂ ಪ್ರಸಾದ್ ಸೇರಿದಂತೆ ಎಲ್ಲರೂ ಮಾಡು ತ್ತಿರುವುದು ಅದನ್ನೇ..

16 ಅವರಿಗೆ ಬೇಕಾಗಿರುವುದಾದರೂ ಏನು?
ಮಹಾರಾಷ್ಟ್ರವನ್ನು ಆಕ್ರಮಿಸಿಕೊಳ್ಳುವುದೆ ಅವರ ಬಯಕೆ. ರಾಜ್ಯಗಳ ಪಟ್ಟಿಯಲ್ಲಿ ಇವತ್ತಿಗೂ ಮಹಾರಾಷ್ಟ್ರ ನಂ.೧

17 ಹೆಚ್ಚು-ಕಮ್ಮಿ ನಾವು ದಿವಾಳಿಯಾಗಿದ್ದರೂ ನಮ್ಮ ಮೇಲೆ ಕಣ್ಣೆ?
ಅದಿಲ್ಲಿ ಹೇಗೆ ಪ್ರಸ್ತುತವಾದೀತು? ಆಂಧ್ರ ಪ್ರದೇಶ ಮಹಾರಾಷ್ಟ್ರಕ್ಕಿಂತ ಹೆಚ್ಚಿನ ಸಾಲದ ಹೊರೆ ಹೊತ್ತಿದೆ. ದೇಶದ ಅಭಿವೃದ್ಧಿ ಯೋಜನೆಗಳು ಬೇರೆ ರಾಜ್ಯಗಳಿಗೆ ಹೋಗುತ್ತಿದ್ದರೂ ಮಹಾರಾಷ್ಟ್ರ ನಂ. ೧ ಆಗಿಯೇ ಇದೆ. ಆದರೆ ಇವತ್ತು ಎಚ್ಚೆತ್ತುಕೊಳ್ಳದಿದ್ದರೆ ಇದೇ ಪ್ರಗತಿಯ ಮುಂದುವರಿಕೆ ಅಸಾಧ್ಯ.

18 ಅದಕ್ಕೆಲ್ಲ ಹಣಕಾಸು ಹರಿದುಬರಬೇಕು. ಇಂಥ ಪ್ರಾದೇಶಿಕ ಚಿಂತನೆಯಿಂದ ಅದು ಸಾಧ್ಯವಾ?
ಬಿಎಂಡಬ್ಲ್ಯು ಯೋಜನೆ ತಮಿಳುನಾಡಿಗೆ ಹೋದದ್ದೇಕೆ ಗೊತ್ತಾ? ಅವರ ನಿಲುವಿನಿಂದಾಗಿ. ನಮ್ಮ ಮುಖ್ಯಮಂತ್ರಿಗಳ ಗೈರಿನಲ್ಲಿ ಒಬ್ಬ ತಮಿಳು ಐಎಎಸ್ ಅಧಿಕಾರಿ ಬಿಎಂಡಬ್ಲ್ಯು ಪ್ರತಿನಿಧಿಗಳೊಂದಿಗೆ ಮಾತನಾಡಿ, ಬೇಕೆಂದೇ ಅಡ್ಡಿ ಆತಂಕ ನಿರ್ಮಿಸಿ, ಅದು ತಮಿಳುನಾಡಿಗೆ ಹೋಗುವಂತೆ ನೋಡಿಕೊಳ್ಳುತ್ತಾನೆ.

19 ಮರ್ಸಿಡಿಸ್ ಇಲ್ಲಿದೆ ಎಂಬ ಕಾರಣವೂ ಇರಬಹುದಲ್ಲ?
ಇಲ್ಲ. ಅದಾಗಿದ್ದು ಐಎಎಸ್ ಅಧಿಕಾರಿ ಕೈಚಳಕದಿಂದ. ಬಿಎಂಡಬ್ಲ್ಯು ನಮ್ಮನ್ನು ತೊರೆದ ಮರುಕ್ಷಣವೇ ಆ ಅಧಿಕಾರಿ ತನ್ನ ತಮಿಳು ಸಹೋದ್ಯೋಗಿಗಳನ್ನು ಸಂಪರ್ಕಿಸಿ ಬಿಎಂಡಬ್ಲ್ಯುವನ್ನು ಸಂಪರ್ಕಿಸಲು ಸೂಚನೆ ನೀಡಿದ. ಅಲ್ಲಿ ಅವರಿಗೆ ಬೇಕಾದ ಎಲ್ಲ ಸೌಲಭ್ಯಗಳನ್ನೂ ನೀಡಲಾಯಿತು.

20 ಇದು ಐಎಎಸ್ ಹಂತದಲ್ಲಿರುವ ಭ್ರಷ್ಟಾಚಾರವನ್ನು ಬಿಂಬಿಸುವುದಿಲ್ಲವೆ?
ಅದು ಹಾಗಲ್ಲ. ಹೆಚ್ಚಿನ ಮಂದಿ ನನ್ನ ನೆಲ, ಭಾಷೆ, ನನ್ನ ಜನ ಎಂಬ ನೆಲೆಗಟ್ಟಿನಲ್ಲಿ ಚಿಂತಿಸುತ್ತಾರೆ.

21 ಬೇರೆ ರಾಜ್ಯಗಳಿಗೆ ಹೋಲಿಸಿದರೆ ಮಹಾರಾಷ್ಟ್ರಿಗರು ಉತ್ಸಾಹ ಕಳೆದುಕೊಂಡಿರುವುದೇಕೆ?
ನಮ್ಮನ್ನು ಆಳುತ್ತಿರುವವರು ಮಾನಸಿಕವಾಗಿ ಭ್ರಷ್ಟರಾಗಿ ದ್ದಾರೆ. ಜನರನ್ನು ಪ್ರಭಾವಿಸಬೇಕಾದವರೇ ಇವರು. ಗುಜರಾತ್ ಚುನಾವಣೆಯುದ್ದಕ್ಕೂ ಗುಜರಾತಿಗಳು ಪರಸ್ಪರ ಎದುರಾದಾಗ ‘ಓಂ ನಮಃ ನಮಃ’ ಎನ್ನುತ್ತಿದ್ದರು. ‘ಓಂ ನರೇಂದ್ರ ಮೋದಿ ನಮಃ’ ಎನ್ನೋದು ಅಲ್ಲಿನ ಅರ್ಥವಾಗಿತ್ತು.

22 ಮೋದಿ ಬಗ್ಗೆ ನಿಮ್ಮ ಅಭಿಪ್ರಾಯ?
ಒಬ್ಬ ಉತ್ತಮ ಆಡಳಿತಗಾರ. ನನ್ನ ಕೆಲ ಮುಸ್ಲಿಂ ಗೆಳೆಯರು ಹೇಳುತ್ತಾರೆ, ‘ಗೋಧ್ರಾ ಘಟನೆ ಒತ್ತಟ್ಟಿಗಿರಲಿ. ಆದರೆ ಮೋದಿ ಗುಜರಾತ್ ಅನ್ನು ಅಭಿವೃದ್ಧಿ ಪಥದಲ್ಲಿ ಮುನ್ನಡೆಸುವುದನ್ನು ನೋಡುತ್ತಿದ್ದರೆ ನಾವ್ಯಾಕಾದರೂ ಇಲ್ಲಿಗೆ ಬಂದೇವೆನಿಸುತ್ತಿದೆ. ಮರಳಿ ಅಲ್ಲಿಗೆ ಹೋಗುವ ಆಶಯ ನಮ್ಮದು’ ಅಂತ.

23 ಮಹಾರಾಷ್ಟ್ರಕ್ಕೊಬ್ಬ ಮೋದಿ ಬೇಕೆ?
ಹಂಡ್ರೆಡ್ ಪರ್ಸಂಟ್!

24 ಇಷ್ಟಕ್ಕೂ ರಾಜ್ಯದ ಒಳಿತು-ಕೆಡಕುಗಳನ್ನು ನಿರ್ಧರಿ ಸೋರ್‍ಯಾರು?
ಬೇಕು-ಬೇಡಗಳು ಜನರಿಗೆ ಗೊತ್ತು. ನನಗೆ ಗೊತ್ತು. ಹಾಗಾಗಿಯೇ ನಾನೇನಾದರೂ ಹೇಳಿದಾಗ ಜನ ಪ್ರತಿಕ್ರಿಯಿಸುತ್ತಾರೆ.

25 ನಿಮ್ಮ ಗುರಿಯಾದರೂ ಏನು? ಮಹಾರಾಷ್ಟ್ರದ ಮುಖ್ಯಮಂತ್ರಿಯಾಗುವುದೋ? ಭಾರತದ ಪ್ರಧಾನಿಯಾಗುವುದೋ?
ಪಕ್ಷಕ್ಕೆ ನಾನಿಟ್ಟ ಹೆಸರು ಮಹಾರಾಷ್ಟ್ರ ನವನಿರ್ಮಾಣ ಸೇನಾ. ಮಹಾರಾಷ್ಟ್ರದ ಗಡಿ ದಾಟಿ ನಾನು ಹೋಗಲಾರೆ. ನನ್ನ ಎಂಪಿಗಳು ಹೋಗುತ್ತಾರೆ. ಏಕೆಂದರೆ ರಾಜ್ಯದ ಪರ ಕೆಲಸ ಮಾಡಬೇಕಾದ ಅವಶ್ಯಕತೆ ಇದೆ.

26 ಶಿವಾಜಿ ಪಾರ್ಕ್ ಸುತ್ತ-ಮುತ್ತ ಇರುವ ಸುಶಿಕ್ಷಿತ ಯುವಕರು ನಿಮ್ಮ ತಂತ್ರಗಳನ್ನು ಒಪ್ಪುತ್ತಾರೆ ಎಂದು ಕೊಂಡಿದ್ದೀರಾ?
ತಂತ್ರವಾ..

27 ಹೌದು. ಜನರ ಮೇಲೆ ಬಲಪ್ರಯೋಗಿಸುವ, ಕಲ್ಲು ತೂರುವ, ಆಸ್ತಿ ಹಾನಿ ಎಸಗುವ ತಂತ್ರಗಳನ್ನು ಅವರು ಒಪ್ಪಿಕೊಳ್ಳುತ್ತಾರಾ? ಇದರಿಂದ ಬಾಂಬೆಗೆ ಕೆಟ್ಟ ಹೆಸರು ಬರುವುದಿಲ್ಲವೇ?
ಬಾಂಬೆ ಅಲ್ಲ, ಮುಂಬಯಿ..

28 ಸರಿ. ಮುಂಬಯಿ..
ಇದು ಮುಂಬಯಿಗೆ ಕೆಟ್ಟ ಹೆಸರು ತರುತ್ತದೆ ಎಂದಾದರೆ, ೧೯೯೨-೯೩ರ ಗಲಭೆಗಳ ಬಗ್ಗೆ ಏನಂತೀರಿ? ಅದಾದ ನಂತರ ಕೈಗಾರಿಕೆಗಳು ಮಹಾರಾಷ್ಟ್ರಕ್ಕೆ ಕಾಲಿಡಲೇ ಇಲ್ಲವೆ? ನನ್ನ ವಾದವಿಷ್ಟೆ. ನೀವು ನನ್ನ ಹಕ್ಕು ಕಸಿಯಬೇಡಿ. ನಾನು ನಿಮ್ಮದನ್ನು ಕಸಿಯುವುದಿಲ್ಲ.

29 ಮುಗ್ಧರ ಹತ್ಯೆಯನ್ನು ನೀವು ಸಮರ್ಥಿಸಿಕೊಳ್ಳುತ್ತೀರಾ?
ನನ್ನನ್ನೇಕೆ ಕೇಳುತ್ತಿದ್ದೀರಿ? ೧೦೦ ಮಂದಿ ಅಪರಾಧಿಗಳು ತಪ್ಪಿಸಿಕೊಂಡರೂ ಒಬ್ಬ ನಿರಪರಾಧಿಗೆ ಶಿಕ್ಷೆಯಾಗಬಾರದು ಎಂಬ ದಿನಗಳು ಹೋಗಿ, ಅದರ ವಿರುದ್ಧದ್ದೇ ಈಗ ಘಟಿಸು ತ್ತಿದೆ. ಅವರು ನಮ್ಮ ಮೇಲೇರಿ ಬಂದರು. ನಾವೇನೂ ಮಾಡ ಲಿಲ್ಲ. ಕೇವಲ ಹತ್ತೇ ದಿನಗಳಲ್ಲಿ ಈ ಸಮಸ್ಯೆ ಪರಿಹರಿಸುವ ಛಾತಿ ಮುಂಬಯಿ ಪೊಲೀಸರಿಗಿದೆ.

30 ರಾಹುಲ್ ಗಾಂಧಿಗೆ ಪ್ರಧಾನಿಯಾಗುವ ಅರ್ಹತೆ ಇದೆಯೇ?
ಅನುಭವಿಗಳು ೬೦ ವರ್ಷಗಳ ಕಾಲ ಈ ದೇಶವನ್ನು ಹಾಳುಗೆಡವಿದ್ದಾರೆ. ಇನ್ನೈದು ವರ್ಷ ದೇಶವನ್ನು ಹಾಳು ಮಾಡಲು ಆತನಿಗೂ ಒಂದು ಅವಕಾಶ ಕೊಡಿ!

31 ಪ್ರಧಾನಿ ಸ್ಥಾನಕ್ಕೆ ನಿಮ್ಮ ಆಯ್ಕೆ ಆಡ್ವಾಣಿಯೋ? ಮಾಯಾವತಿಯೋ?
ಆಡ್ವಾಣಿ. ಬಹಳಷ್ಟು ವರ್ಷಗಳ ಅನುಭವವಿರುವವರು ಹಾಗೂ ಉಪ ಪ್ರಧಾನಿಯಾಗಿದ್ದವರು.

ಕೃಪೆ : ಪ್ರತಾಪ್ ಸಿಂಹ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ