ನನ್ನ ಬ್ಲಾಗ್ ಪಟ್ಟಿ

ಮಂಗಳವಾರ, ಆಗಸ್ಟ್ 24, 2010

ಅನಂತಮೂರ್ತಿಯವರೇ, ಮಾವೋ ಏನು ಮಹಾತ್ಮ ಗಾಂಧಿಯೇ?


ಮಾವೋಯಿಸಂ ಅಂದರೆ ಏನು?

ಇಂಥದ್ದೊಂದು ‘ಇಸಂ’ ಹುಟ್ಟಿಕೊಂಡಿದ್ದಾದರೂ ಹೇಗೆ? ಹಾಗೂ ಏಕೆ? ಅದು ಜನ್ಮತಳೆಯುವುದಕ್ಕೂ ಮುನ್ನ ಜರುಗಿದ ಘಟನೆಗಳಾದರೂ ಯಾವುವು? ಅದು ಬೆಳೆದು ಬಂದ ರೀತಿಯನ್ನು ನೋಡಿದರೆ, ಅದರ ಪರಂಪರೆಯನ್ನು ಗಮನಿಸಿ ದರೆ ಮುಂದೆ ಎಂತಹ ಪರಿಸ್ಥಿತಿ ಸೃಷ್ಟಿಯಾಗಬಹುದು? ಇತ್ತೀಚಿನ ವರ್ಷಗಳಲ್ಲಿ ಭಾರತದಲ್ಲಿ ಪ್ರಮುಖವಾಗಿ ಕೇಳಿ ಬರುತ್ತಿರುವ ನಕ್ಸಲಿಸಂನ(ಹಿಂಸೆ) ಇನ್ನೊಂದು ಹೆಸರಾಗಿರುವ ಮಾವೋಯಿಸಂನ ಅಗತ್ಯ ನಿಜಕ್ಕೂ ನಮ್ಮ ದೇಶಕ್ಕಿದೆಯೇ? ಮಾವೋಯಿಸಂ ಎಂಬುದು ಯಾವ ವ್ಯಕ್ತಿಯ ಹೆಸರನ್ನು ಹೊಂದಿದೆ? ಅದು ಯಾವ ವ್ಯಕ್ತಿಯಿಂದ ಪ್ರೇರಣೆ ಪಡೆಯುತ್ತಿದೆ? ಮಾವೋ ಝೆಡಾಂಗ್ ಯಾರು? ಆತ 1962ರಲ್ಲಿ ಯಾವ ದೇಶದ ಮೇಲೆ ದಾಳಿ ಮಾಡಿದ್ದ? ಅಂದು ಯಾವ ವ್ಯಕ್ತಿ ಭಾರತದ ಮೇಲೆ ಆಕ್ರಮಣ ಮಾಡಿದ್ದನೋ ಅಂತಹ ವ್ಯಕ್ತಿಯಿಂದ ಇಂದು ಪ್ರೇರಣೆ ಪಡೆದುಕೊಂಡಿರುವವರಿಂದ ಏನನ್ನು ನಿರೀಕ್ಷಿಸಲು ಸಾಧ್ಯ?

ಈ ಬಗ್ಗೆ ಎಂದಾದರೂ ಯೋಚಿಸಿದ್ದೀರಾ ಅನಂತಮೂರ್ತಿಯವರೇ?

“ನಮ್ಮಲ್ಲಿ ಎರಡು ಬಗೆಯ ಹಿಂಸೆಗಳಿವೆ ಎಂದು ನಾನು ಹಿಂದೊಮ್ಮೆ ಬರೆದಿದ್ದೆ. ಮೊದಲನೆಯದು ಕೋಮುವಾದಿ ಹಿಂಸೆ. ಎರಡನೆಯದು ನಕ್ಸಲ್ ಹಿಂಸೆ. ಮೊದಲನೆಯದು ರೇಬಿಸ್ ಇದ್ದಂತೆ. ಈ ರೋಗಕ್ಕೆ ಗುಣಪಡಿಸುವ ಚಿಕಿತ್ಸೆಯಿಲ್ಲ. ನಕ್ಸಲ್‌ವಾದದ ಹಿಂಸೆ ಕ್ಯಾನ್ಸರ್ ಇದ್ದಂತೆ. ಇದು ದೇಹವೇ ಹದಗೆಟ್ಟು ತನ್ನೊಳಗೆ ತಾನೇ ಸೃಷ್ಟಿಸಿಕೊಂಡಿರುವ ರೋಗ. ಇದಾಗದಂತೆ ತಡೆಯುವ ಕ್ರಮಗಳೂ ಇವೆ. ಅಂದರೆ ಸರ್ಜರಿ ಮತ್ತು ಚಿಕಿತ್ಸೆಯೂ ಇದೆ”.

ಮೊನ್ನೆ ಬುಧವಾರ ಅನಂತಮೂರ್ತಿಯವರ ಮೂಸೆಯಿಂದ ಮತ್ತದೇ ಹಳಸು ಹಾಗೂ ‘Recycled’ ವಿಚಾರಧಾರೆಯನ್ನು ಹೊತ್ತ ಲೇಖನವೊಂದು ಹರಿದಾಡಿದೆ. ಸಂಬಂಧ, ಅರ್ಥ, ಔಚಿತ್ಯ ಯಾವುವೂ ಇಲ್ಲದೆ ಏನೇನೋ ಬರೆಯುವುದು, ಮಾತನಾಡುವುದು, ಅನಗತ್ಯವಾಗಿ ಯಾವ್ಯಾವುದೋ ವಿಚಾರಗಳನ್ನು ಎಳೆದು ತರುವುದು ಈ ಎಡಪಂಥೀಯರಿಗೆ ಅಭ್ಯಾಸವಾಗಿ ಬಿಟ್ಟಿದೆ. ಆದರೂ ಚರಿತ್ರೆಯ ಕತ್ತಲಲ್ಲೂ ಕಾಣುವ ಬಾವಿಯನ್ನು ತೋಡಿದವರು ಕಮ್ಯುನಿಸ್ಟ್ ನಾಯಕರೇ ಎಂಬುದನ್ನು ಮಾತ್ರ ಇವರು ಒಪ್ಪಿಕೊಳ್ಳಲು ಸಿದ್ಧರಿಲ್ಲ. ಬದಲಿಗೆ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿಯವರನ್ನು ಹೀಗಳೆಯದೆ, ರಾಷ್ಟ್ರವಾದಿಗಳನ್ನು ಜರಿಯದೆ, ಸಂಘಪರಿವಾರವನ್ನು ಅಣಕಿಸದೆ ಇವರ ಯಾವ ಮಾತು, ಲೇಖನಗಳೂ ಪೂರ್ಣಗೊಳ್ಳುವುದಿಲ್ಲ. ಬುದ್ಧಿಜೀವಿಗಳು, ಚಿಂತಕರು ಎನಿಸಿಕೊಳ್ಳಬೇಕಾದರೆ ಎಡಪಂಥೀಯರೇ ಆಗಿರಬೇಕು ಎಂದು ಬರೆಯುವ ಮತಿ ಇಲ್ಲದ ಪತ್ರಕರ್ತರಿಗೂ ಅನಂತಮೂರ್ತಿ ಯವರಿಗೂ ಏನಾದರೂ ವ್ಯತ್ಯಾಸವಿದೆಯೇ? ಅದ್ಯಾವ ದೃಷ್ಟಿಯಲ್ಲಿ ಕೋಮುವಾದ ಹಾಗೂ ಮಾವೋವಾದಿ ಹಿಂಸಾಚಾರವನ್ನು ಪರಸ್ಪರ ತಳಕು ಹಾಕುತ್ತೀರಿ ‘eನಪೀಠ ನಂಬರ್-1’?

1. 2010, ಮೇ 28: ಪಶ್ಚಿಮ ಬಂಗಾಳದ ಮಿಡ್ನಾಪುರ ಜಿಲ್ಲೆಯಲ್ಲಿ ರೈಲನ್ನು ಹಳಿತಪ್ಪಿಸಿದ ನಕ್ಸಲರು. 71 ಪ್ರಯಾಣಿಕರ ದಾರುಣ ಸಾವು.
2. 2010, ಮೇ 16: ಛತ್ತೀಸ್‌ಗಢದ ರಾಜನಂದಗಾಂವ್‌ನಲ್ಲಿ ನಕ್ಸಲರಿಂದ 6 ಗ್ರಾಮಸ್ಥರ ಹತ್ಯೆ.
3. 2010, ಏಪ್ರಿಲ್ 6: ಛತ್ತೀಸ್‌ಗಢದ ದಂತೇವಾಡದಲ್ಲಿ ನಕ್ಸಲರಿಂದ ಕೇಂದ್ರ ಮೀಸಲು ಪಡೆ ಹಾಗೂ ಪೊಲೀಸ್ ವಾಹನ ಸ್ಫೋಟ. 75 ಯೋಧರ ಸಾವು.
4. ಪಶ್ಚಿಮ ಬಂಗಾಳದ ಮಿಡ್ನಾಪುರ ಜಿಲ್ಲೆಯಲ್ಲಿ ಸೈನಿಕ ನೆಲೆ ಮೇಲೆ ನಕ್ಸಲ್ ದಾಳಿ. 24 ಯೋಧರ ಹತ್ಯೆ.
5. 2009, ಅಕ್ಟೋಬರ್ 8: ಮಹಾರಾಷ್ಟ್ರದ ಗಡಚಿರೋಲಿಯ ಲಹೆರಿ ಪೊಲೀಸ್ ಠಾಣೆ ಮೇಲೆ ನಕ್ಸಲ್ ದಾಳಿ, 17 ಪೊಲೀಸರ ಬರ್ಬರ ಹತ್ಯೆ, ಶಿರಚ್ಛೇದ.

ಇವರ್‍ಯಾರು ಅನಂತಮೂರ್ತಿಯವರೇ?

“ಉದಾಹರಣೆಗೆ ಒಂದು ಊರಿನಲ್ಲಿ ಒಬ್ಬ ದುಷ್ಟ ಅಧಿಕಾರಿ ಇರುತ್ತಾನೆ. ಏನು ಮಾಡಿದರೂ ಅವನ ದರ್ಬಾರು ನಡೆಯುತ್ತಲೇ ಹೋಗುತ್ತದೆ ಎಂದುಕೊಳ್ಳೋಣ. ಅಲ್ಲಿನ ಪ್ರಜೆಗಳು ನಿಸ್ಸಹಾಯಕ ಭಾವನೆಯಲ್ಲಿ ಕುಗ್ಗಿಹೋಗಿದ್ದಾರೆ ಎಂದುಕೊಳ್ಳೋಣ. ಇಂತಹ ಪರಿಸ್ಥಿತಿಯಲ್ಲಿ ಇಡೀ ದೇಶದ ಕ್ರಾಂತಿಗಾಗಿ ಕಾಯದೆ ಆ ದುಷ್ಟನನ್ನು ಕೊಂದು ಹಾಕಿದರೆ ಜನರಿಗೆ ತಮ್ಮ ಪಾಡು ಸನಾತನವೂ ಅಲ್ಲ, ಶಾಶ್ವತವೂ ಅಲ್ಲ ಎನ್ನುವ ಧೈರ್ಯ ಉಕ್ಕುತ್ತದೆ. ಈ ಬಗೆಯ ಹಿಂಸೆಗಳಿಂದಲೇ ಒಂದಿಡೀ ದೇಶವನ್ನು ಲೆನಿನ್/ಮಾವೋವಾದಿ ಪಕ್ಷ ಕ್ರಾಂತಿಗೆ ಸಿದ್ಧಪಡಿಸುತ್ತದೆ” ಎನ್ನುತ್ತೀರಲ್ಲಾ ಈ ಮೇಲಿನ ಐದು ಘಟನೆಗಳಲ್ಲಿ ಬರ್ಬರವಾಗಿ ಕೊಲೆಗೀಡಾದವರು ದುಷ್ಟ ಅಧಿಕಾರಿಗಳಾ? ನಿಮ್ಮ ಮಾರ್ಕ್ಸ್, ಲೆನಿನ್, ಸ್ಟಾಲಿನ್, ಮಾವೋ ಝೆಡಾಂಗ್ ಹೇಳಿದ, ಪ್ರತಿಪಾದಿಸಿದ “Haves”(ಉಳ್ಳವ) ಮತ್ತು “Have-nots”(ಬಡವ)ಗಳಲ್ಲಿ ಇವರು ಯಾವ ಕೆಟಗರಿಗೆ ಬರುತ್ತಾರೆ? ಮಾವೋವಾದಿ/ನಕ್ಸಲರು ಏಕಾಗಿ ಇವರನ್ನು ಗುರಿಯಾಗಿಸಿಕೊಂಡು ಕೊಲ್ಲುತ್ತಿದ್ದಾರೆ? 2010, ಮೇ 16ರಂದು ಕೊಲೆಗೀಡಾದ 6 ಗ್ರಾಮಸ್ಥರು ನಿಮ್ಮ ವ್ಯಾಖ್ಯಾನದಲ್ಲಿ ‘ಉಳ್ಳವರೇನು? ಕಳೆದ ಒಂಬತ್ತು ತಿಂಗಳುಗಳಲ್ಲಿ ನಡೆದ ಐದು ಭಯಾನಕ (deadliest) ಆಕ್ರಮಣ ಗಳೆಲ್ಲ ಮಾವೋವಾದಿ ದಾಳಿಗಳೇ ಆಗಿವೆ. ಇಂಥದ್ದೊಂದು ಗಂಭೀರ ಸಮಸ್ಯೆ ತಲೆದೋರಿರುವಾಗ, ಒಬ್ಬ ಜವಾಬ್ದಾರಿಯುತ ಸಾಹಿತಿಯಾಗಿ ಅದರ ಬಗ್ಗೆ ಜನರಿಗೆ ಅರಿವು, ಜಾಗೃತಿ ಮೂಡಿಸುವ ಬದಲು ಕೋಮುವಾದವನ್ನೇಕೆ ಎಳೆದು ತರುತ್ತಿದ್ದೀರಿ?
ನಿಮ್ಮ ಕಾರ್ಲ್ ಮಾರ್ಕ್ಸ್ ಹೇಳಿದ್ದಾದರೂ ಏನು?

ಆತ ಎಂದಾದರೂ ಹಿಂಸೆಯನ್ನು ಪ್ರತಿಪಾದಿಸಿದ್ದನೆ? ಮಾರ್ಕ್ಸ್ ಏನು ಹೇಳಿದ್ದ ಎಂಬುದನ್ನು ಸರಳವಾಗಿ, ಜನರಿಗೆ ಅರ್ಥವಾಗುವಂತೆ ಹೇಳಿ ನೋಡೋಣ? ಸಮಾಜದಲ್ಲಿ ಎರಡು ವರ್ಗಗಳಿವೆ. Haves ಮತ್ತು Have-nots. ಈ ಬಡವರ ಸಂಘಟನೆ (ಆರ್ಗನೈಝಿಂಗ್) ಹಾಗೂ ಶಿಕ್ಷಣದ ಮೂಲಕ ಆರ್ಥಿಕ ತಾರತಮ್ಯವನ್ನು ಹೋಗಲಾಡಿಸಬೇಕು. ಜನರಿಗೆ ಶಿಕ್ಷಣ ಕೊಟ್ಟರೆ ಅವರೇ Vangauard of the proletariat ಅಥವಾ ಸಮಾಜ ಸುಧಾರಣೆ ಮಾಡುವಂತಹ ಕಾರ್ಮಿಕ ನಾಯಕರಾಗುತ್ತಾರೆ, ಕ್ರಾಂತಿ ಮಾಡುತ್ತಾರೆ. ಮಾಲೀಕ ಭೂಮಿಯನ್ನು ಖರೀದಿಸಿ ಒಡೆಯನಾಗಬಹುದು. ಆದರೆ ಆತನದ್ದು One time investment. ಕಾರ್ಮಿಕರದ್ದು ದೈನಂದಿನ ಹೂಡಿಕೆ. ಪ್ರತಿನಿತ್ಯವೂ ಬೆವರು, ರಕ್ತ ಸುರಿಸುತ್ತಾರೆ. ಹಾಗಾಗಿ ಆದಾಯದಲ್ಲಿ ಸಮಪಾಲು ಸಿಗಬೇಕು. ಜಗತ್ತಿನ ಕಾರ್ಮಿಕರೆಲ್ಲ ಒಂದಾಗಬೇಕು. ಖಾಸಗಿ ಇರಲಿ, ಸರಕಾರಿ ಆಗಿರಲಿ, ಕಂಪನಿಗಳು ನೌಕರರ ಶ್ರೇಯೋ ಭಿವೃದ್ಧಿ ಮಾಡಬೇಕು. ಹೀಗೆಲ್ಲ ಮಾರ್ಕ್ಸ್ ಪ್ರತಿಪಾದನೆ ಮಾಡಿದ್ದ. ಆನಂತರ ಬಂದ ಸ್ಟಾಲಿನ್, ತನ್ನ ಸರಕಾರದಲ್ಲಿ ಮಾರ್ಕ್ಸ್ ಥಿಯರಿ ಯನ್ನು ಅಳವಡಿಸಲು ಹೊರಟ. ಜನಸಾಮಾನ್ಯರಿಗೆ ಸ್ವಂತ ಭೂಮಿಯ ಅಗತ್ಯವಿಲ್ಲ. ಉಳ್ಳವರು (Haves) ಅದನ್ನು ಸರಕಾರಕ್ಕೆ ನೀಡಬೇಕು ಎಂದು ಪ್ರತಿಪಾದಿಸಿದ, ಹಿಂಸೆಗಿಳಿದ. ಇತ್ತ 1949ರಿಂದ 1976ರವರೆಗೂ ಸುಮಾರು 27 ವರ್ಷ ಚೀನಾವನ್ನಾಳಿದ ಮಾವೋ ಝೆಡಾಂಗ್ ಇವರೆಲ್ಲರಿಗಿಂತಲೂ ಕ್ರೂರಿ. ಯಾರು ದೌರ್ಜನ್ಯವೆಸಗು ತ್ತಿದ್ದಾರೋ ಅಂತಹವರನ್ನು ಬಡವರು ಕೊಂದು ಹಾಕಿದರೆ ಸಮ ಸ್ಯೆಯೇ ತೀರಿಹೋಗುತ್ತದೆ ಎಂದು ಪ್ರತಿಪಾದಿಸಿದ ಮಹಾನುಭಾವ!

ನಿಮಗೆ ಗೊತ್ತಾ?

ಹಿಟ್ಲರ್‌ನ ನಾಝಿಸಂಗೆ ಬಲಿಯಾದವರ ಸಂಖ್ಯೆ 20 ಲಕ್ಷ. ಸರಕಾರಕ್ಕೆ ಭೂಮಿ ಕೊಡಲೊಪ್ಪದ ಮಾಲೀಕರ ಹತ್ಯೆಗಿಳಿದ ಸ್ಟಾಲಿನ್ ಬಲಿತೆಗೆದುಕೊಂಡಿದ್ದು 70 ಲಕ್ಷ. ಮಾವೋ ಝೆಡಾಂಗ್‌ನ “ಗ್ರೇಟ್ ಲೀಪ್ ಫಾರ್ವರ್ಡ್” ಅಥವಾ “ಗ್ರೇಟ್ ಹಾರ್ವೆಸ್ಟ್” ಹಾಗೂ “ಕಲ್ಚರಲ್ ರೆವಲೂಶನ್”ಗೆ ಬಲಿಯಾದವರ ಸಂಖ್ಯೆ 170 ಲಕ್ಷ!! ಇಂತಹ ಮಾವೋನಿಂದ ಪ್ರೇರಣೆ ಪಡೆಯುತ್ತಿರುವವರು ಇನ್ನೇನು ಮಾಡಿಯಾರು ಸ್ವಾಮಿ? ಅವರ ಉದ್ದೇಶ ಏನಿದ್ದೀತು? 1962ರಲ್ಲಿ ಭಾರತದ ಮೇಲೆ ಆಕ್ರಮಣ ಮಾಡಿದವನೇ ಮಾವೋ. ಅಂತಹ ವ್ಯಕ್ತಿಯ ಹೆಸರಿಟ್ಟುಕೊಂಡವರ ಉದ್ದೇಶ ಭಾರತದ ನಾಶವಲ್ಲದೆ ಮತ್ತೇನಿದ್ದೀತು? ಕ್ರಾಂತಿಗೆ ಪ್ರೇರಣೆ ಪಡೆಯಲು ಭಗತ್ ಸಿಂಗ್, ಸುಭಾಷ್‌ಚಂದ್ರ ಬೋಸ್, ಚಂದ್ರಶೇಖರ ಆಜಾದ್‌ಗಿಂತ ದೊಡ್ಡ ವ್ಯಕ್ತಿಗಳು ಬೇಕೇನು? ಕೋಮುವಾದವನ್ನು ಎಳೆದು ತಂದು ಮಾವೋ ಹಿಂಸೆಯನ್ನು ಮರೆಮಾಚಲು, ಸಾಮಾಜಿಕ ನ್ಯಾಯದ ಹೆಸರಿನಲ್ಲಿ ಹಿಂಸೆಗೆ ಕಾರಣ ಹುಡುಕಲು ಹೊರಟಿದ್ದೀರಲ್ಲಾ ಅನಂತಮೂರ್ತಿಯವರೇ, ಅಷ್ಟಕ್ಕೂ ಚೀನಾದ ಮಾವೋನೇನು ಮಹಾತ್ಮ ಗಾಂಧಿಯೇ? ಉಳ್ಳವರನ್ನು ಕೊಲ್ಲಿ ಎಂದ ಮಾವೋನನ್ನು ಅನುಸರಿಸಲು, ಮೇಲ್ಪಂಕ್ತಿಯಾಗಿಟ್ಟುಕೊಳ್ಳಲು ಹೊರಟವರು ಏನು ಮಾಡಿಯಾರು ಸಾರ್? ಜಾತ್ಯತೀತ ಎಂಬ ಪದವನ್ನು ಸಂವಿಧಾನದ ಪೀಠಿಕೆಗೆ (ಪ್ರಿಯಾಂಬ್ಲ್) ಸೇರಿಸಿದ ಕಾಂಗ್ರೆಸ್ ಪಕ್ಷವೇ ಮಾವೋ ವಾದಿಗಳು ತಂದೊಡ್ಡಿರುವ ಅಪಾಯದ ಬಗ್ಗೆ ಆತಂಕ ವ್ಯಕ್ತಪಡಿಸುತ್ತಿ ರುವಾಗ ನೀವೇಕೆ ಕೋಮುವಾದಿಗಳ ಬಗ್ಗೆ ಚಿಂತೆ ಮಾಡುತ್ತಿದ್ದೀರಿ? ನಕ್ಸಲರನ್ನು, ಅವರು ಹಿಡಿದಿರುವ ಮಾರ್ಗವನ್ನು, ಅವರ ಹೋರಾಟದ ಹಿಂದಿರುವ ಅಧಿಕಾರ ದಾಹವನ್ನು ಖಂಡಿಸಲು ನಿಮಗೆ ಸಾಧ್ಯ ವಿಲ್ಲವೆಂದಾದರೆ ಸುಮ್ಮನಿರಿ. ಏಕೆ ವಿನಾಕಾರಣ ಹಿಂದುತ್ವವಾದವನ್ನು ಎಳೆದು ತರುತ್ತೀರಿ? ನೀವು ಕೋಮುವಾದ ಎಂದ ಕೂಡಲೇ ಅದರ ಗುರಿ ಖಂಡಿತ ಸಂಘ ಪರಿವಾರವೇ ಆಗಿರುತ್ತದೆ. ಏಕೆಂದರೆ ನೀವೆಂದೂ ಮುಸ್ಲಿಂ ಮೂಲಭೂತವಾದವನ್ನು, ವಹಾಬಿಸಂ ಅನ್ನು, ಭಯೋತ್ಪಾದನೆಯನ್ನು ಖಂಡಿಸಿದವರಲ್ಲ. ನೀವೇ ಹೇಳಿ, ಹಿಂದೂ ಮೂಲಭೂತವಾದಿಗಳು ಎಷ್ಟು ಜನರನ್ನು ಕೊಂದಿದ್ದಾರೆ?

ಏಕೆ ಜನರನ್ನು ಫೂಲ್ ಮಾಡುತ್ತಿದ್ದೀರಿ?

ಮಾರ್ಕ್ಸ್ ಪ್ರತಿಪಾದಿಸಿದ “Haves” ಮತ್ತು “Have-nots” ಹಾಗೂ ವರ್ಗ ಸಂಘರ್ಷ ಸೂತ್ರವನ್ನು ಭಾರತಕ್ಕೆ ಅನ್ವಯಿಸಲು ಸಾಧ್ಯವೇ ಇಲ್ಲ. ಭಾರತದಲ್ಲಿರುವುದು ಜಾತಿಗಳೇ ಹೊರತು ವರ್ಗಗಳಲ್ಲ. ಮಾರ್ಕ್ಸ್ ಹೇಳಿದಂತೆ ಬಡವರೆಲ್ಲ ಒಂದು ವರ್ಗ ಎನ್ನುವುದಾದರೆ ಮೇಲ್ಜಾತಿಯ ಬಡವನೊಬ್ಬ ಆತನ ಆರ್ಥಿಕ ಸ್ಥಿತಿ ಎಷ್ಟೇ ಹದಗೆಟ್ಟಿದ್ದರೂ ದಲಿತನೊಬ್ಬನ ಮನೆಯಲ್ಲಿ ಕುಳಿತು ಊಟ ಮಾಡುತ್ತಾನೆಯೇ? ನಮ್ಮಲ್ಲಿ ನಡೆಯುವ ಚಳವಳಿಗಳಾಗಲಿ, ಹಿಂಸೆಯೇ ಇರಲಿ ಅದು ಜಾತಿ ಆಧಾರಿತವೇ ಆಗಿರುತ್ತದೆ. ಮಾವೋಯಿಸಂ ಎಂದ ಕೂಡಲೇ ಏನೂ ತಿಳಿಯದವರಂತೆ ಬರೀ ಉಳ್ಳವ-ಬಡವನ ಪ್ರಶ್ನೆಯನ್ನು ಎತ್ತಬೇಡಿ. ಭಾರತದಲ್ಲಿ ಚಾರು ಮಜುಂದಾರ್ ಹಾಗೂ ಕಾನು ಸನ್ಯಾಲ್ ಬಿಟ್ಟರೆ ನಿಜವಾದ ನಕ್ಸಲ್ ನಾಯಕರು ಯಾರು ಹೊರಹೊಮ್ಮಿದ್ದಾರೆ ಹೇಳಿ ನೋಡೋಣ? ಉಸ್ಮಾನಿಯಾ, ಜೆಎನ್‌ಯು, ಮೈಸೂರು, ಕುವೆಂಪು ವಿವಿಗಳ ಎಷ್ಟು ಯುಜಿಸಿ ಪ್ರೊಫೆಸರ್‌ಗಳು ಬಡವರಿಗಾಗಿ ಸತ್ತಿದ್ದಾರೆ? ಸಾಯುವವ ರೆಲ್ಲ ಎಸ್ಸಿ, ಎಸ್ಟಿ, ಒಬಿಸಿ ಹುಡುಗರು. ಅವರನ್ನು ದಾರಿ ತಪ್ಪಿಸುವವರು, ಅವರಿಗೆ ಕಾಡುದಾರಿ ತೋರುವವರು ನಿಮ್ಮಂಥವರು. ಅವಕಾಶ ಸಿಕ್ಕಿದಾಗಲೆಲ್ಲ ಮಹಾತ್ಮ ಗಾಂಧಿಯವರನ್ನು ಉದಾಹರಿಸುವ ನೀವು, ಮಾವೋ/ನಕ್ಸಲ್ ಹಿಂಸೆ ವಿಚಾರ ಬಂದಾಗ ಕೋಮುವಾದವನ್ನು ಎಳೆದುತಂದು ತಿಪ್ಪೆ ಸಾರಿಸುತ್ತೀರಿ, ಹಿಂಸೆಗೆ ಸಾಮಾಜಿಕ ಅಸಮಾ ನತೆಯ ಲೇಪ ಹಚ್ಚುತ್ತೀರಿ. ಏಕೆ ಸ್ವಾಮಿ? ನೀವೆಂಥ ಲೋಹಿಯಾ ವಾದಿ ಹಾಗೂ ಗಾಂಧಿತತ್ವ ಪ್ರತಿಪಾದಕ? ಗಾಂಧಿ/ಲೋಹಿಯಾ ಇಬ್ಬರೂ ಮಹಾನ್ ರಾಷ್ಟ್ರವಾದಿಗಳಾಗಿದ್ದರು. ಅವರಿಬ್ಬರ ಅನುಯಾಯಿ ಎಂದು ಹೇಳಿಕೊಳ್ಳುವ ನೀವು, ರಾಷ್ಟ್ರದ ಭದ್ರತೆಗೇ ಅಪಾಯ ತಂದೊಡ್ಡಿರುವ ಮಾವೋವಾದಿಗಳ ಹಿಂಸೆಯನ್ನು ಸಾಮಾಜಿಕ ಅಸಮಾನತೆಯ ಹೆಸರಿನಲ್ಲಿ ಪರೋಕ್ಷವಾಗಿ ಹೇಗೆ ಸಮರ್ಥಿಸುತ್ತಿದ್ದೀರಿ? ಎರಡನೆಯದಾಗಿ, ಗಾಂಧಿ/ಲೋಹಿಯಾ ಇಬ್ಬರೂ ಪ್ರಜಾತಾಂತ್ರಿಕ ವ್ಯವಸ್ಥೆಯಲ್ಲಿ ನಂಬಿಕೆ ಇಟ್ಟವರಾಗಿದ್ದರು. ನಕ್ಸಲರು/ಮಾವೋವಾದಿಗಳಿಗೆ ಪ್ರಜಾಪ್ರಭುತ್ವದಲ್ಲಿ ನಂಬಿಕೆಯೇ ಇಲ್ಲ.

ಸ್ವಾಮಿ ಅನಂತಮೂರ್ತಿಯವರೇ, ಹಿಂಸೆಗೆ ‘ಲೆಫ್ಟು’, ‘ರೈಟು’ ಎಂಬುದಿಲ್ಲ. ಆದರೆ ವೈಚಾರಿಕತೆಯ ಸೋಗಿನಲ್ಲಿ ನೀವೇಕೆ ಹಿಂಸೆಯ ಸಮರ್ಥನೆಗೆ ಹೊರಟಿದ್ದೀರಿ? ಅಲ್ಲಾ, ಕ್ರಾಂತಿ ಮಾಡಲು, ಅಸಮಾನತೆಯ ವಿರುದ್ಧ ಧ್ವನಿಯೆತ್ತಲು ಡಾ. ಅಂಬೇಡ್ಕರ್‌ಗಿಂತ ದೊಡ್ಡ ಪ್ರೇರಕ ಶಕ್ತಿ ಬೇಕಾ? ಅಮಾನವೀಯ ದೌರ್ಜನ್ಯ, ಸಾಮಾಜಿಕ ಅವಮಾನದ ಹೊರತಾಗಿಯೂ ಅಂಬೇಡ್ಕರ್ ಅವರೆಂದಾದರೂ ಮೇಲ್ಜಾತಿಯವರನ್ನು ಕಡಿಯಿರಿ, ಕೊಲ್ಲಿರಿ ಎಂದು ಕರೆ ನೀಡಿದ್ದರೇ? ಬಾಯಲ್ಲಿ ಗಾಂಧಿ, ಲೋಹಿಯಾ, ಅಂಬೇಡ್ಕರ್ ಎನ್ನುತ್ತಾ ಯಾರನ್ನು ಸಮರ್ಥಿಸುತ್ತಿದ್ದೀರಿ? ನಕ್ಸಲರನ್ನು ಮಟ್ಟಹಾಕಲು ಸೇನೆ ಬಳಕೆ ಮಾಡಿಕೊಳ್ಳಲಾಗುವುದು ಎಂದ ಕೂಡಲೇ, ಆಕಾಶ ದಿಂದ ಬಾಂಬ್ ಹಾಕುತ್ತಾರೆ ಎಂದು ನಿಮಗೆ ಹೇಳಿದ್ದಾರು? ಸರ್ವೈ ವಲೆನ್ಸ್, ಲಾಜಿಸ್ಟಿಕ್ ಸಪೋರ್ಟ್‌ಗೆ ಮಾತ್ರ ಯುದ್ಧ ವಿಮಾನ, ಹೆಲಿ ಕಾಪ್ಟರ್‌ಗಳ ಬಳಕೆ ಮಾಡಿಕೊಳ್ಳಲಾಗುತ್ತದೆ ಅಷ್ಟೇ. ಇನ್ನು ಮಾವೋ ವಾದಿಗಳದ್ದು ಸಾಮಾಜಿಕ ಅಸಮಾನತೆ, ದೌರ್ಜನ್ಯದ ವಿರುದ್ಧದ ಹೋರಾಟ ಎಂದು ನಿಮಗೆ ಹೇಳಿದವರಾರು? ಮಾವೋವಾದಿಗಳಿಗೆ ಎಕೆ-೪೭ ರೈಫಲ್ ಮತ್ತು ಗ್ರನೇಡ್‌ಗಳನ್ನು ಪೂರೈಸುತ್ತಿರುವ ರಾಷ್ಟ್ರ ಯಾವುದು? ಮಾವೋ ಝೆಡಾಂಗ್‌ನ ಚೀನಾ ಅಲ್ಲವೆ? ನೇಪಾಳ ವನ್ನು ಕಬಳಿಸಿದ ಮಾವೋವಾದಿ ನಾಯಕ ಪ್ರಚಂಡ ಪ್ರಧಾನಿಯಾದ ಕೂಡಲೇ ಭೇಟಿ ಕೊಟ್ಟಿದ್ದು ಯಾವ ದೇಶಕ್ಕೆ? ಚೀನಾಕ್ಕೋ ಭಾರತಕ್ಕೋ? ನೇಪಾಳದಲ್ಲಿ ಮಾವೋವಾದಿಗಳನ್ನು ಹುಟ್ಟುಹಾಕಿದ್ದು, ಅವರನ್ನು ಅಧಿಕಾರಕ್ಕೆ ತರುವ ಮೂಲಕ ನೇಪಾಳವನ್ನು ತನ್ನ ಹಿಡಿತಕ್ಕೆ ತೆಗೆದುಕೊಂಡಿರುವ ಚೀನಾ, ಎಲ್ಟಿಟಿಇಯನ್ನು ಹತ್ತಿಕ್ಕಲು ಸಹಾಯ ಮಾಡುವ ಮೂಲಕ ಶ್ರೀಲಂಕಾ ಸರಕಾರದಿಂದಲೂ ನೌಕಾ ಹಾಗೂ ವಾಯು ನೆಲೆಯನ್ನು ಇತ್ತೀಚಿಗೆ ಪಡೆದುಕೊಂಡಿದೆ. ಆ ಮೂಲಕ ಭಾರತವನ್ನು ಮೂರು ಭಾಗಗಳಿಂದ ಸುತ್ತುವರಿದಿದೆ. ಒಂದು ವೇಳೆ, ಮಾವೋವಾದಿಗಳು ಹಿಂಸೆಯ ಮೂಲಕ ಭಾರತದಲ್ಲೂ ಅಲ್ಲಲ್ಲಿ ಅಧಿಕಾರಕ್ಕೇರಿದರೆ ಯಾರಿಗೆ ನಿಷ್ಠೆ ತೋರುತ್ತಾರೆ? ಸ್ವತಂತ್ರ ನ್ಯಾಯಾಂಗವೇ ಇಲ್ಲದ, ಮಾನವ ಹಕ್ಕು ಇಲ್ಲದ ಚೀನಾದಿಂದ ಕುಮ್ಮಕ್ಕು, ಪ್ರೋತ್ಸಾಹ, ಸಹಾಯ ಪಡೆದುಕೊಳ್ಳುತ್ತಿರುವ ಮಾವೋವಾದಿಗಳನ್ನು “Gandhi, but with guns” ಎಂದು ವರ್ಣಿಸಿದ ಆ ಅರುಂಧತಿ ರಾಯ್‌ಗೂ ನಿಮಗೂ ಯಾವುದಾದರೂ ವ್ಯತ್ಯಾಸವಿದೆಯೇ? ನಕ್ಸಲರು/ಮಾವೋವಾದಿಗಳ ಜೀವಾಳವೇ ಹಿಂಸೆ. ಎಲ್ಲೆಲ್ಲಿ ಬಡತನ, ಅನ್ಯಾಯ, ದೌರ್ಜನ್ಯ, ನಿರುದ್ಯೋಗ ಇರುತ್ತದೋ ಅಲ್ಲೆಲ್ಲ ಕಮ್ಯುನಿಸಂ ಹಾಗೂ ಕಮ್ಯುನಿಸ್ಟರಿರುತ್ತಾರೆ. ಎಲ್ಲೆಲ್ಲಿ ಕಮ್ಯುನಿಸ್ಟರಿರು ತ್ತಾರೋ ಅಲ್ಲೆಲ್ಲ ಬಡತನ, ನಿರುದ್ಯೋಗ, ಅನ್ಯಾಯ ಇರುತ್ತದೆ ಹಾಗೂ ಅದನ್ನು ಹಾಗೇ ಇಟ್ಟಿರುತ್ತಾರೆ. ಇದು ಸಾಬೀತಾಗಿರುವ ಸತ್ಯ. ಇಂತಹ ಹಿನ್ನೆಲೆ ಇರುವಾಗ ಮಾವೋ/ನಕ್ಸಲ್ ವಾದದ ಮೂಲಕ ಭಾರತದ ನವನಿರ್ಮಾಣ ಸಾಧ್ಯವೆ? 2002ರಲ್ಲಿ ನಡೆದ ಹಿಂಸಾಚಾರಕ್ಕಾಗಿ ಇಂದಿಗೂ ನರೇಂದ್ರ ಮೋದಿಯವರನ್ನು ದೂರುವ ನೀವು, ನಿತ್ಯವೂ ನಕ್ಸಲರು ನಡೆಸುವ ಹಿಂಸೆಯನ್ನು ಅದ್ಹೇಗೆ ಸಮರ್ಥಿಸುತ್ತೀರಿ? ಅದು ಮಾರ್ಕ್ಸ್, ಗಾಂಧಿ, ಟಾಲ್‌ಸ್ಟಾಯ್, ಲಿಂಕನ್, ಅಂಬೇಡ್ಕರ್ ಹಾಗೂ ಮತ್ತಾವುದೇ ಮಹಾನ್ ನಾಯಕರಿರಬಹುದು. ಅವರೆಲ್ಲ ಶೋಷಿತರ ಪರವಾಗಿ ಮಾತನಾಡಿದರೇ ಹೊರತು, ಹಿಂಸೆಗೆ ಪ್ರಚೋದಿಸಲಿಲ್ಲ, ಅದನ್ನು ಸಮರ್ಥಿಸಲೂ ಇಲ್ಲ. ಲೇಖಕನೊಬ್ಬ ಸರಕಾರದ ಲೋಪ ದೋಷಗಳ ಬಗ್ಗೆ ದನಿ ಎತ್ತುವುದರಲ್ಲಿ ತಪ್ಪೇನೂ ಇಲ್ಲ. ಆದರೆ ಅದನ್ನೇ ಹಿಂಸೆಯನ್ನು ಬೆಂಬಲಿಸುವಂತೆ ವ್ಯಾಖ್ಯಾ ನಿಸುವುದು ಸರಿಯಲ್ಲ. ಶೋಷಿತರ ಪರವಾಗಿ ಮಾತನಾಡುವ ಪೋಸು ಕೊಟ್ಟುಕೊಂಡು ತಿರುಗಾಡುವ ನಮ್ಮ ಬುದ್ಧಿಜೀವಿಗಳ ವರ್ಗದ ಮೆಳ್ಳೆಗಣ್ಣತನ ‘ಮಾರ್ಜಾಲ ನ್ಯಾಯ’ದ ಸಂಕೇತವಲ್ಲವೆ? ಇಲ್ಲಿ ಅನಂತಮೂರ್ತಿ ಯವರು ಒಂದು ಸಂಕೇತ ಮಾತ್ರ. ಇಂಥ ರೋಗಗ್ರಸ್ತ ಗ್ರಹಿಕೆ/ಒಮ್ಮುಖ ಚಿಂತನೆಯ ಕೂಪಮಂಡೂಕಗಳಾಗಿ ರುವ ಲೇಖಕರ ದಂಡೇ ನಮ್ಮಲ್ಲಿದೆ. ಮಾತು ಮಾತಿಗೂ ಬುದ್ಧ, ಬಸವಣ್ಣ, ಗಾಂಧಿ, ನಾರಾಯಣ ಗುರು, ಜ್ಯೋತಿ ಬಾಪುಲೆ ಎನ್ನುವ ವರು, ಅವರು ನಿಜವಾಗಿಯೂ ಪ್ರತಿಪಾದಿಸಿದ ಅಹಿಂಸೆಯ ಪ್ರತಿ ಪಾದಕರೂ ಆಗಿರಬೇಕಲ್ಲವೆ? ಹಿಂಸೆ/ರಕ್ತಪಾತಗಳನ್ನು ಆರಂಭಿಸುವುದು ಬಲು ಸುಲಭ. ಆದರೆ ಇದಕ್ಕೇನಾದರೂ ಕೊನೆ ಇದೆಯೇ? ಇಷ್ಟಕ್ಕೂ ಹಿಂಸೆಯಿಂದ ಜಗತ್ತಿನಲ್ಲಿ ಯಾವುದಾದರೂ ಚಾರಿತ್ರಿಕ ಪರಿವರ್ತನೆಗಳು ಸಂಭವಿಸಿವೆಯೇ?

Nah..nah..nah…

ಇಷ್ಟನ್ನೂ ಅರ್ಥಮಾಡಿಕೊಳ್ಳಲಾಗದ ದಡ್ಡರೇ ನೀವು? ಹಾಗಾದರೆ ನಿಮ್ಮ ಉದ್ದೇಶವೇನು ತಿಳಿಸಬಲ್ಲಿರಾ?

ಕೃಪೆ : ಪ್ರತಾಪ್ ಸಿಂಹ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ