ನನ್ನ ಬ್ಲಾಗ್ ಪಟ್ಟಿ

ಶನಿವಾರ, ಡಿಸೆಂಬರ್ 4, 2010

ಅಲ್ಲಿ ಮೋದಿ ದಶಕದ ಹಾದಿ, ಇಲ್ಲಿ ಬಿಜೆಪಿಗೆ ಅಂಟಿದೆ ವ್ಯಾಧಿ

ನಾವಿಲ್ಲಿ ಕಾಣುತ್ತಿರುವುದು ಏನೇನೂ ಅಲ್ಲ ಬಿಡಿ! ಅವತ್ತು ಶಂಕರ್ ಸಿನ್ಹ್ ವಾಫೇಲಾ ಇದಕ್ಕಿಂತ ದೊಡ್ಡ ಬಂಡಾಯವೆಬ್ಬಿಸಿದ್ದರು. 1995, ಮಾರ್ಚ್ 14ರಂದು ಕೇಶುಭಾಯಿ ಪಟೇಲ್ ಗುಜರಾತ್‌ನ ಮೊಟ್ಟಮೊದಲ ಬಿಜೆಪಿ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿದ್ದರು. ಅದರ ಬೆನ್ನಲ್ಲೇ ಮುಖ್ಯಮಂತ್ರಿಯವರ ತವರಾದ ಸೌರಾಷ್ಟ್ರಕ್ಕೆ ಹೆಚ್ಚಿನ ಪ್ರಾತಿನಿಧಿತ್ವ ಕೊಡಲಾಗಿದೆ, ಯೋಗ್ಯ ವ್ಯಕ್ತಿಗಳಿಗೆ ಮಂತ್ರಿಗಿರಿ ಕೊಟ್ಟಿಲ್ಲ ಎಂದು ಅಧಿಕಾರಕ್ಕೆ ಬಂದ ಮೊದಲ ದಿನವೇ ಸಂಘರ್ಷ ಆರಂಭವಾಯಿತು. ರಾಜ್ಯ ಸರಕಾರದ 42 ನಿಗಮ ಮಂಡಳಿಗಳು ಹಾಗೂ ಪಾಲಿಕೆಗಳಿಗೆ ಅಧ್ಯಕ್ಷರನ್ನು ನೇಮಕ ಮಾಡುವಾಗಲಾದರೂ ನನ್ನನ್ನು ಕೇಳಬೇಕು ಎಂದು ವಾಘೇಲಾ ಮುಖ್ಯಮಂತ್ರಿಯವರಿಗೆ ಎಚ್ಚರಿಕೆ ನೀಡಿದರು. ಇವತ್ತು ಕರ್ನಾಟಕದ ‘ಅತಂತ್ರ’ ಮುಖ್ಯ ಮಂತ್ರಿ ಯಡಿಯೂರಪ್ಪನವರಲ್ಲಿ ಯಾವ ದರ್ಪವನ್ನು ಕಾಣು ತ್ತೇವೋ ಅದೇ ತೆರನಾದ ಹುಂಬತನವನ್ನು ಅಂದು ಕೇಶುಭಾಯಿ ಪಟೇಲ್ ಕೂಡ ತೋರಿದ್ದರು. ‘ನಿಗಮ ಮಂಡಳಿಗಳ ಅಧ್ಯಕ್ಷರ ನೇಮಕಾತಿಯಲ್ಲಿ ಮೂಗುತೂರಿಸಬೇಡ’ ಎಂದು ಪಟೇಲ್ ಖಾರವಾಗಿ ಹೇಳಿದಾಗ, ವಿದೇಶ ಪ್ರವಾಸಕ್ಕೆ ಹೊರಟು ನಿಂತಿದ್ದ ಮುಖ್ಯಮಂತ್ರಿಯವರನ್ನುದ್ದೇಶಿಸಿ, ‘ನೀನು ವಿದೇಶದಿಂದ ವಾಪಸ್ಸಾಗುವ ವೇಳೆಗೆ ಮುಖ್ಯಮಂತ್ರಿಯಾಗಿರುವುದೇ ಇಲ್ಲ’ ಎಂದು ವಾಘೇಲಾ ಮಾರುತ್ತರ ನೀಡಿದ್ದರು. ಇಷ್ಟಾಗಿಯೂ ಪಟೇಲ್ 1995, ಸೆಪ್ಟೆಂಬರ್ 8ರಂದು ಒಂದು ತಿಂಗಳ ಅಮೆರಿಕ ಪ್ರವಾಸಕ್ಕೆ ಹೋದರು. ಸೆಪ್ಟೆಂಬರ್ 25ರಂದು ವಾಘೇಲಾ ಬಂಡಾಯ ಸದಸ್ಯರ ಸಭೆಯೊಂದನ್ನು ಏರ್ಪಡಿಸಿದರು. ಇದಾಗಿ ಎರಡು ದಿನಗಳಲ್ಲಿ ಬಿಜೆಪಿ ಕೂಡ ತನ್ನ ಶಾಸಕರ ಸಭೆ ನಡೆಸಿತು. ಅದರಲ್ಲಿ ಭಾಗಿಯಾಗಿದ್ದು ಕೇವಲ 60 ಜನ. ವಾಘೇಲಾ ಸಭೆಗೆ 47 ಮಂದಿ ಬಂದಿದ್ದರು!! ಮೊಟ್ಟಮೊದಲ ಬಿಜೆಪಿ ಸರಕಾರ ಬೀಳುವುದು ಖಚಿತವಾಯಿತು. ಮುಖ್ಯಮಂತ್ರಿ ಪಟೇಲ್ ದರ್ಪಕ್ಕೆ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ನರೇಂದ್ರ ಮೋದಿಯವರ ಮೇಲೆ ಭಿನ್ನರು ಬಾವುಟ ಹಾರಿಸಿದರು. “ನನಗೊಂದು ಕಥೆ ನೆನಪಾಗುತ್ತಿದೆ. ಮಗುವೊಂದು ತನಗೆ ಸೇರಬೇಕೆಂದು ನಿಜವಾದ ತಾಯಿ ಹಾಗೂ ಮಲತಾಯಿ ಜಗಳಕ್ಕೆ ನಿಂತಿರುತ್ತಾರೆ. ವಿಷಯ ನ್ಯಾಯಾಲಯದ ಕಟಕಟೆ ಹತ್ತುತ್ತದೆ. ಮಗುವನ್ನು ಎರಡು ತುಂಡು ಮಾಡಿ ಹಂಚಿಕೊಳ್ಳಿ ಎನ್ನುತ್ತಾರೆ ನ್ಯಾಯಾಧೀಶರು. ಆದರೆ ತುಂಡರಿಸಬೇಡಿ ಎಂದು ಅಂಗಲಾಚುತ್ತಾಳೆ ನಿಜವಾದ ತಾಯಿ. ನಾನೂ ಕೂಡ ಅಂತಹದ್ದೇ ನಿರ್ಧಾರಕ್ಕೆ ಬಂದಿದ್ದೇನೆ. ಪಕ್ಷದ ಹಿತದೃಷ್ಟಿಯಿಂದ ನಾನು ಬಲಿಯಾಗಲು ಸಿದ್ಧನಾಗಿದ್ದೇನೆ. ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ” ಎಂದು ಮನನೊಂದು ಪತ್ರ ಬರೆದ ಮೋದಿ ರಾಜಕೀಯ ಅeತವಾಸಕ್ಕೆ ತೆರಳುತ್ತಾರೆ.

ಹಾಗಂತ ವಾಘೇಲಾ ಸುಮ್ಮನಾಗಲಿಲ್ಲ.

ಅವರಿಗೆ ಬೇಕಿದ್ದು ಅಧಿಕಾರ ಹಾಗೂ ಅಧಿಕಾರ ಮಾತ್ರ. ರಾಷ್ಟ್ರೀಯ ಅಧ್ಯಕ್ಷ ಲಾಲ್ ಕೃಷ್ಣ ಆಡ್ವಾಣಿಯವರನ್ನೂ ಟೀಕಿಸಿ ದರು. ಸಮಸ್ಯೆ ಪರಿಹರಿಸಲು ಸ್ವತಃ ವಾಜಪೇಯಿಯವರೇ ಆಗಮಿಸಿದರು. ಮುಖ್ಯಮಂತ್ರಿಯವರೊಂದಿಗೆ ಮಾತುಕತೆ ನಡೆಸಿದ ವಾಜಪೇಯಿ, ಪಕ್ಷದ ಹಿತದೃಷ್ಟಿಯಿಂದ ರಾಜೀನಾಮೆ ನೀಡುವಂತೆ ಸೂಚಿಸಿದರು. ಅದೊಂದು ರಾಜೀಸೂತ್ರವೂ ಆಗಿತ್ತು. ಬಂಡಾಯವೆದ್ದಿದ್ದ ಶಾಸಕರು ಅಹಮದಾಬಾದ್‌ಗೆ ಮರಳಿ ಕೇಶುಭಾಯಿಯವರಿಗೆ ತಮ್ಮ ನಿಷ್ಠೆ ವ್ಯಕ್ತಪಡಿಸಬೇಕು ಹಾಗೂ ವಿಶ್ವಾಸಮತ ಗೊತ್ತುವಳಿ ಪರ ಮತ ಹಾಕಬೇಕು. ಆನಂತರ ಕೇಶುಭಾಯಿ ರಾಜೀನಾಮೆ ನೀಡುತ್ತಾರೆ. ಎಲ್ಲವೂ ಅಂದುಕೊಂಡಂತೇ ಆಯಿತು. ವಿಶ್ವಾಸಮತ ಗೆದ್ದ ಕೇಶುಭಾಯಿ ಮರುದಿನ ರಾಜೀನಾಮೆ ನೀಡಿದರು. ಆದರೆ ವಾಘೇಲಾಗೆ ಮುಖ್ಯಮಂತ್ರಿ ಸ್ಥಾನ ಸಿಗಲಿಲ್ಲ. ಸುರೇಶ್ ಮೆಹ್ತಾ ಅವರನ್ನು ಮುಖ್ಯಮಂತ್ರಿ ಮಾಡಲಾಯಿತು. ಒಂದಿಷ್ಟು ಕಾಲ ಸುಮ್ಮನಿದ್ದ ವಾಘೇಲಾ 1996ರಲ್ಲಿ ‘ಮಹಾ ಗುಜರಾತ್ ಜನತಾ ಪಾರ್ಟಿ’ ಎಂದು ನೂತನ ಪಕ್ಷ ಕಟ್ಟಿದರು. ಅವತ್ತು ೪೨ ಶಾಸಕರು ವಾಘೇಲಾ ಹಿಂದೆ ನಡೆದರು. 45 ಸದಸ್ಯರನ್ನು ಹೊಂದಿದ್ದ ಕಾಂಗ್ರೆಸ್ ಪಕ್ಷದ ಬೆಂಬಲ ಪಡೆದ ವಾಘೇಲಾ ಮುಖ್ಯಮಂತ್ರಿಯಾದರು. ವರ್ಷ ಕಳೆಯುವಷ್ಟರಲ್ಲಿ ಕಾಂಗ್ರೆಸ್ ಕಾಲೆಳೆಯಿತು. ವಾಘೇಲಾ ಸರಕಾರ ಉರುಳಿತು. ಮುಂದಿನ ಚುನಾವಣೆಯಲ್ಲೂ ಬಿಜೆಪಿ ಅಧಿಕಾರಕ್ಕೆ ಬಂತು. ವಾಘೇಲಾರಹಿತ ಬಿಜೆಪಿ ಮತ್ತೆ ಕೇಶುಭಾಯಿ ನೇತೃತ್ವದಲ್ಲಿ ಸರಕಾರ ರಚನೆ ಮಾಡಿತು. ಈ ಬಾರಿ ಕೇಶುಭಾಯಿ ಅವರಿಗೆ ಅಸಮರ್ಥತೆಯೇ ದೊಡ್ಡ ಶತ್ರುವಾಯಿತು. ೨೦೦೧, ಜನವರಿ ೨೬ರಂದು ನಡೆದ ಭೀಕರ ಭೂಕಂಪದ ಪರಿಹಾರ ಕಾರ್ಯದಲ್ಲಿ ತೀವ್ರ ತಪ್ಪುಗಳನ್ನೆಸಗಿದರು. ಮುಖ್ಯಮಂತ್ರಿಯೇ ಬಿಜೆಪಿ ಪಾಲಿಗೆ ಹೊರೆಯಾಗಲಾರಂಭಿಸಿದರು.

ಆ ವೇಳೆಗಾಗಲೇ ನರೇಂದ್ರ ಮೋದಿ ಗುಜರಾತನ್ನು ಬಿಟ್ಟು 6 ವರ್ಷಗಳಾಗಿದ್ದವು.

ರಾಜಕೀಯದಿಂದ ದೂರವಾಗಿ ‘ಸಂಸ್ಕಾರಧಾಮ’ ಎಂಬ ಶಾಲೆ ನಡೆಸುತ್ತಿದ್ದ ಮೋದಿಯವರಂತಹ ಕುಶಲಮತಿಯನ್ನು ಹಾಗೇ ಬಿಡಬಾರದು ಎಂಬ ಸತ್ಯ 2 ವರ್ಷ ತಡವಾಗಿಯಾದರೂ ಬಿಜೆಪಿಗೆ ಅರ್ಥವಾಗಿತ್ತು. ಮತ್ತೆ ಕರೆದು ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯನ್ನಾಗಿ ಮಾಡಿತ್ತು. ಪಕ್ಷದ ವಕ್ತಾರನಾಗಿಯೂ ಕೆಲಸ ಮಾಡಿದ ಮೋದಿ ಒಳ್ಳೆಯ ಹೆಸರು ಗಳಿಸಿದ್ದರು. ಅದು ಸೆಪ್ಟೆಂಬರ್ 30, 2001. ಅಂದು ಸಂಭವಿಸಿದ ಹೆಲಿಕಾಪ್ಟರ್ ದುರಂತದಲ್ಲಿ ಕಾಂಗ್ರೆಸ್‌ನ ಪ್ರಸಿದ್ಧ ನಾಯಕ ಮಾಧವ್‌ರಾವ್ ಸಿಂಧಿಯಾ ದುರ್ಮರಣಕ್ಕೀಡಾಗಿದ್ದರು. ಅವರ ಜತೆಯಲ್ಲಿದ್ದ ‘ಆಜ್‌ತಕ್’ ಚಾನೆಲ್‌ನ ಕ್ಯಾಮೆರಾಮನ್ ಗೋಪಾಲ್ ಕೂಡ ಪ್ರಾಣ ಕಳೆದುಕೊಂಡಿದ್ದರು. ಅವರನ್ನು ಬಹಳ ಹತ್ತಿರದಿಂದ ನೋಡಿದ್ದ, ಸ್ನೇಹ ಸಂಬಂಧ ಹೊಂದಿದ್ದ ಮೋದಿಯವರಿಗೂ ಅತೀವ ನೋವುಂಟಾಗಿತ್ತು. ಗೋಪಾಲ್ ಅಂತ್ಯಕ್ರಿಯೆ ದಿಲ್ಲಿಯಲ್ಲೇ ನಡೆಯುತ್ತಿದೆ ಎಂದು ಗೊತ್ತಾಗಿ ಮೋದಿ ಸ್ಥಳಕ್ಕೆ ಹೋಗಿದ್ದರು. ಅಷ್ಟರಲ್ಲಿ ಪ್ರಧಾನಿ ಕಚೇರಿಯಿಂದ ಫೋನ್ ಬಂತು. ಇನ್ನೊಂದು ಬದಿಯಲ್ಲಿ ಪ್ರಧಾನಿ ಮಾತನಾಡುತ್ತಿದ್ದರು.

ವಾಜಪೇಯಿ: ಎಲ್ಲಿದ್ದೀಯಾ?
ಮೋದಿ: ಶವಾಗಾರದಲ್ಲಿದ್ದೇನೆ.
ವಾಜಪೇಯಿ: ಅಲ್ಲೇನು ಮಾಡುತ್ತಿದ್ದೀಯಾ?
ಮೋದಿ: ಸ್ನೇಹಿತ ಗೋಪಾಲ್ ಅವರ ಅಂತ್ಯಕ್ರಿಯೆಗೆ ಬಂದಿ ದ್ದೇನೆ.
ವಾಜಪೇಯಿ: ಸರಿ, ಸಾಯಂಕಾಲ ಬಂದು ನನ್ನನ್ನು ಕಾಣು.
ಹಾಗೆಂದು ಪ್ರಧಾನಿ ಫೋನಿಟ್ಟರು. ಸಂಜೆ ನಿವಾಸಕ್ಕೆ ಆಗಮಿಸಿದ ಮೋದಿಯವರನ್ನು ನೋಡಿದ ವಾಜಪೇಯಿ, “ಪಂಜಾಬಿ ತಿನಿಸುಗಳನ್ನು ತಿಂದೂ ತಿಂದು ಊದಿದ್ದೀಯಾ. ನೀನು ಸ್ಲಿಮ್ ಆಗಬೇಕು. ಬೇಗ ಹೋಗು” ಎಂದರು.
ಮೋದಿ: ಎಲ್ಲಿಗೆ?
ವಾಜಪೇಯಿ: ಗುಜರಾತ್‌ಗೆ
ಮೋದಿ: ನನಗೆ ಕೇವಲ ಗುಜರಾತ್ ಉಸ್ತುವಾರಿ ಇರುತ್ತದೆಯೋ ಅಥವಾ ಇತರ ರಾಜ್ಯಗಳ ಜವಾಬ್ದಾರಿಯೂ ಇದೆಯೇ?

ಗುಜರಾತ್‌ಗೆ ಹೋಗು ಎಂದ ವಾಜಪೇಯಿ ಮಾತಿನ ಹಿಂದೆ, ‘ಗುಜರಾತ್ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೋ…’ ಎಂಬ ಅರ್ಥವಿದೆ ಎಂದು ಮೋದಿಯವರಿಗೆ ಅರಿವೇ ಆಗಿರಲಿಲ್ಲ. ಒಲ್ಲದ ಮನಸ್ಸಿನಿಂದಲೇ ಮುಖ್ಯಮಂತ್ರಿಯಾಗಲು ಒಪ್ಪಿದರು. ಮೊದಲಿಗೆ ಬಿಜೆಪಿ ಶಾಸಕಾಂಗ ಪಕ್ಷದ ನೇತಾರನಾಗಿ ಆಯ್ಕೆ ಮಾಡಿದ ನಂತರ ಮೋದಿ ಒಂದು ಭಾಷಣ ಮಾಡಿದರು. “ಮುಂದಿನ ಚುನಾವಣೆಗೆ ಇನ್ನು 500 ದಿನಗಳು ಬಾಕಿಯಿವೆ. ಅಂದರೆ ನಮ್ಮ ಬಳಿ ಕೇವಲ 12 ಸಾವಿರ ಗಂಟೆಗಳಿವೆ. ಈ ಅವಧಿಯಲ್ಲಿ ಜನರ ಆಶೋತ್ತರಗಳನ್ನು ಈಡೇರಿಸಬೇಕು. ಆ ಮೂಲಕ ಮುಂದಿನ ಚುನಾವಣೆಯಲ್ಲಿ ಪಕ್ಷದ ಗೆಲುವನ್ನು ಖಾತ್ರಿಗೊಳಿಸಬೇಕು. ನಾನು ಒನ್ ಡೇ ಮ್ಯಾಚ್ ಆಡಲು ಬಂದಿದ್ದೇನೆ” ಎಂದರು. ನಿಮ್ಮ ಮಾತಿನ ಅರ್ಥವೇನು ಎಂದು ಮಾಧ್ಯಮಗಳು ಪ್ರಶ್ನಿಸಿದಾಗ, “ಒನ್ ಡೇ ಮ್ಯಾಚ್‌ಗಳು ‘ರನ್‌ರೇಟ್’ ಮೇಲೆ ಅವಲಂಬಿತವಾಗಿರುತ್ತವೆ. ಚುನಾವಣೆಗೆ ಇನ್ನು ಕೆಲವೇ ತಿಂಗಳು ಉಳಿದಿರುವುದರಿಂದ ಜನರ ವಿಶ್ವಾಸ ಗಳಿಸಬೇಕಾದರೆ ಸರಕಾರದ ‘ವರ್ಕ್ ರೇಟ್’ ಹೆಚ್ಚಿಸಬೇಕು” ಎಂದರು ಮೋದಿ. ಮುಖ್ಯಮಂತ್ರಿಯಾದಾಗ ಮೋದಿಯವರಿಗೆ ೧೩೪ ಅತ್ಯಮೂಲ್ಯ ಉಡುಗೊರೆಗಳು ಬಂದಿದ್ದವು. ಅವುಗಳನ್ನು ರಾಜ್ಯ ಖಜಾನೆಯಲ್ಲಿ ದಾಸ್ತಾನು ಮಾಡಿಸಿದ ಮೋದಿ, ‘ಗುಜರಾತ್ ಚೇಂಬರ್‍ಸ್ ಆಫ್ ಕಾಮರ್ಸ್’ ಮೂಲಕ ಹರಾಜು ಹಾಕಿಸಿ ಬಂದ ಹಣವನ್ನು ಹೆಣ್ಣುಮಕ್ಕಳ ಶಿಕ್ಷಣಕ್ಕೆ ನೀಡಿದರು. ಅದುವರೆಗೂ ಯಾವ ಮುಖ್ಯಮಂತ್ರಿಯೂ ಅಂತಹ ಕೆಲಸ ಮಾಡಿರಲಿಲ್ಲ. ‘ಬ್ರಹ್ಮಚಾರಿಯೊಬ್ಬ ಮುಖ್ಯಮಂತ್ರಿಯಾಗುವುದರ ಒಂದು ದೊಡ್ಡ ಅನುಕೂಲ ಇದೇ’ ಎಂದು ವರದಿಗಾರರೊಬ್ಬರು ಅಂದು ಕಾಮೆಂಟ್ ಮಾಡಿದ್ದರು! ಅಂದಹಾಗೆ ನರೇಂದ್ರ ಮೋದಿ ಗುಜರಾತ್‌ನ ಮುಖ್ಯಮಂತ್ರಿಯಾಗಿದ್ದು 2001, ಅಕ್ಟೋಬರ್ 7ರಂದು.

ಮೊನ್ನೆ 2010, ಅಕ್ಟೋಬರ್ 7ಕ್ಕೆ 10 ವರ್ಷ ಅಧಿಕಾರಾವಧಿಯನ್ನು ಪೂರೈಸಿದ್ದಾರೆ!!

ಈ ಹತ್ತು ವರ್ಷಗಳು ಹೂವಿನ ಹಾಸಿಗೆಯಾಗಿರಲಿಲ್ಲ. ಮುಖ್ಯಮಂತ್ರಿಯಾಗಿ ನಾಲ್ಕೇ ತಿಂಗಳಲ್ಲಿ ಗೋಧ್ರಾ ಘಟನೆ ಸಂಭವಿಸಿತು. ಇಡೀ ರಾಜ್ಯವೇ ಹೊತ್ತಿ ಉರಿಯಿತು. ಅಟಲ್ ಬಿಹಾರಿ ವಾಜಪೇಯಿಯವರೇ ಮೋದಿಯ ರಾಜೀನಾಮೆಗೆ ಪಟ್ಟು ಹಿಡಿದರು. ಮೋದಿ ಹೋದ ಕಡೆಗಳಲ್ಲೆಲ್ಲಾ ಪ್ರತಿಭಟನೆಗಳಾದವು. ಅಮೆರಿಕ ವೀಸಾ ನಿರಾಕರಿಸಿತು, ಇಂಗ್ಲೆಂಡ್‌ಗೆ ಹೋದಾಗ ವಿರೋಧಿಗಳು ಬೀದಿಗಿಳಿದು ವಿರೋಧ ವ್ಯಕ್ತಪಡಿಸಿದರು. 2 ಸಾವಿರ ಮುಸ್ಲಿಮರನ್ನು ಕೊಂದ ವ್ಯಕ್ತಿ ವೆಂಬ್ಲಿಯಲ್ಲೇಕಿದ್ದಾನೆ? ಎಂದು ಅಲ್ಲಿನ ಖ್ಯಾತ ‘ಗಾರ್ಡಿಯನ್’ ಪತ್ರಿಕೆ ಬರೆಯಿತು. 2003, ಫೆಬ್ರವರಿ 6ರಂದು ನಡೆದ ‘ಕಾನ್ಫೆಡೆರೇಶನ್ ಆಫ್ ಇಂಡಿಯನ್ ಇಂಡಸ್ಟ್ರಿ’(ಸಿಐಐ) ಅನ್ನು ಉದ್ದೇಶಿಸಿ ಮಾತನಾಡಲು ಬಂದ ಮೋದಿಯವರನ್ನು ಕಂಡು ಕುಪಿತರಾದ ಉದ್ಯಮಿಗಳಾದ ರಾಹುಲ್ ಬಜಾಜ್ ಹಾಗೂ ಜೆಮ್ಷೆಡ್ ಗೋದ್ರೇಜ್ ವೇದಿಕೆಯೇರಿ ಮೋದಿಯವರನ್ನು ಹೀಗಳೆದರು. ಕೇಶುಭಾಯಿ ಪಟೇಲ್, ಕಾಶೀರಾಮ್ ರಾಣಾ ಮುಂತಾದ ಬಿಜೆಪಿಯ ಘಟಾನುಘಟಿ ನಾಯಕರೇ ಮೋದಿಯವರ ವಿರುದ್ಧ ಬಂಡೆದ್ದರು. ಸಾವಿನ ವ್ಯಾಪಾರಿ ಎಂದರು ಸೋನಿಯಾ, ಹರೇನ್ ಪಂಡ್ಯಾ ಹತ್ಯೆಯ ಆರೋಪ ಹೊರಿಸಿದರು, ಕ್ರಿಮಿನಲ್‌ಗಳನ್ನು ಕೊಂದಾಗಲೂ ಫೇಕ್ ಎನ್‌ಕೌಂಟರ್ ಎಂದು ದೂರಿದರು. ಮಾಧ್ಯಮಗಳು ಹುಳುಕು ಹುಡುಕುವುದನ್ನೇ ಕಾಯಕ ಮಾಡಿಕೊಂಡವು.

ಇಷ್ಟೆಲ್ಲಾ ವಿರೋಧ, ಟೀಕೆ, ಆಕ್ರಮಣಗಳ ಹೊರತಾಗಿಯೂ ಮೋದಿಯವರು 10 ವರ್ಷ ಅಧಿಕಾರ ನಡೆಸಿದ್ದು ಹೇಗೆ?

೨೦೦೮ರಲ್ಲಿ ಬೆಂಗಳೂರಿನಲ್ಲೇ ನಡೆದ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಣಿ ಸಭೆಯ ಸಂದರ್ಭದಲ್ಲಿ ನರೇಂದ್ರ ಮೋದಿಯ ವರನ್ನು ಭೇಟಿಯಾಗುವ, ಪ್ರಶ್ನೆ ಕೇಳುವ ವಿರಳ ಅವಕಾಶ ದೊರೆತಿತ್ತು. ಮೋದಿಯವರೇ ನಿಮ್ಮ ಯಶಸ್ಸಿನ ಹಿಂದಿರುವ ಗುಟ್ಟೇನು? ಮಹಾಭ್ರಷ್ಟ ಅಧಿಕಾರಶಾಹಿ ವರ್ಗವನ್ನು ಹೇಗೆ ಹತೋಟಿಗೆ ತೆಗೆದುಕೊಂಡಿರಿ? ಅವರ ಭ್ರಷ್ಟತೆಯನ್ನು ಹೇಗೆ ಮಟ್ಟಹಾಕಿದ್ದೀರಿ? ಎಂದು ಕೇಳಿದಾಗ, “ನಾನು ಏನೂ ಮಾಡಲಿಲ್ಲ. ಎಲ್ಲರಿಗಿಂತಲೂ ಹೆಚ್ಚು ಕೆಲಸ ಮಾಡತೊಡಗಿದೆ. ಪ್ರತಿದಿನ ಬೆಳಗ್ಗೆ 8 ಗಂಟೆಗೆ ಮನೆ ಬಿಟ್ಟರೆ ವಾಪಸ್ಸಾಗುವಾಗ 11 ಕಳೆದಿರುತ್ತಿತ್ತು. ನಮ್ಮ ಮುಖ್ಯಮಂತ್ರಿಯೇ ಕೆಲಸ ಮಾಡುತ್ತಿದ್ದಾನೆ, ನಾವ್ಹೇಗೆ ಸುಮ್ಮನೆ ಕುಳಿತುಕೊಳ್ಳುವುದು ಎಂದು ಉಳಿದವರೂ ಸರಿಯಾಗಿ ಕೆಲಸ ಮಾಡಲಾರಂಭಿಸಿದರು. ಸಾಮಾನ್ಯವಾಗಿ ಐಎಎಸ್, ಐಪಿಎಸ್ ಮುಂತಾದ ಅಧಿಕಾರಶಾಹಿ ವರ್ಗದಲ್ಲಿ ಶೇ. 80ರಷ್ಟು ಜನ ಒಳ್ಳೆಯವರೇ ಇರುತ್ತಾರೆ. ಆದರೆ 20 ಪರ್ಸೆಂಟ್ ಭ್ರಷ್ಟರ ಹಾವಳಿ ಎಷ್ಟಿರುತ್ತದೆಂದರೆ ಅವರನ್ನು ಎದುರುಹಾಕಿಕೊಳ್ಳುವ ಬದಲು ಬಂದಷ್ಟು ಕಿಸೆಗಿಳಿಸಿಕೊಂಡು ಸುಮ್ಮನಿರುವುದೇ ವಾಸಿ ಎಂಬ ಮನಸ್ಥಿತಿಗೆ ತಲುಪಿರುತ್ತಾರೆ. ನಾನು ಎಲ್ಲರಿಗಿಂತಲೂ ಹೆಚ್ಚು ಕೆಲಸ ಮಾಡಲು ಆರಂಭಿಸಿದ್ದನ್ನು ಕಂಡು 80 ಪರ್ಸೆಂಟ್ ಒಳ್ಳೆಯವರು ಉತ್ಸಾಹಿತರಾಗಿ ಕಾರ್ಯಪ್ರವೃತ್ತರಾದರು. ನಾನು ಬಿಡಿಗಾಸೂ ಮುಟ್ಟಲಿಲ್ಲ. ಅಯ್ಯೋ, ನಮ್ಮ ಮುಖ್ಯಮಂತ್ರಿಯೇ ಕಾಸು ತೆಗೆದುಕೊಳ್ಳುವುದಿಲ್ಲ. ನಾವೇನಾದರೂ ತೆಗೆದುಕೊಂಡಿದ್ದು ಗೊತ್ತಾದರೆ ಗತಿಯೇನು ಎಂಬ ಭಯದಿಂದ 20 ಪರ್ಸೆಂಟ್ ಭ್ರಷ್ಟರೂ ಸರಿದಾರಿಗೆ ಬಂದರು” ಎಂದರು ಮೋದಿ!
ಇದೇ ಮಾತನ್ನು ದಕ್ಷಿಣ ಭಾರತದ ಮೊಟ್ಟಮೊದಲ ಬಿಜೆಪಿ ಸರಕಾರದ ಚುಕ್ಕಾಣಿ ಹಿಡಿದ ಮುಖ್ಯಮಂತ್ರಿ ಡಾ. ಬಿ.ಎಸ್. ಯಡಿಯೂರಪ್ಪನವರ ಬಗ್ಗೆ ಹೇಳುವುದಕ್ಕಾಗುತ್ತದೆಯೇ?!

ಒಬ್ಬ ಮುಖ್ಯಮಂತ್ರಿಯೇ ದುಡ್ಡು ಮಾಡಲು, ಕಾನೂನುಗಳನ್ನು ಗಾಳಿಗೆ ತೂರಲು, ಶ್ರೀಮಂತಿಕೆಯ ಮೊರೆಹೋಗಲು, ಒಬ್ಬ ಗುಮಾಸ್ತನ ವರ್ಗಾವಣೆಯನ್ನೂ ಗಳಿಕೆಯ ಮಾರ್ಗವಾಗಿ ನೋಡಲು ಪ್ರಯತ್ನಿಸಿದರೆ ಅಧಿಕಾರಿ ವರ್ಗದ ಮೇಲೆ ಯಾವ ನಿಯಂತ್ರಣ, ಭಯ ಇಟ್ಟುಕೊಳ್ಳಲು ಸಾಧ್ಯ? ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಎಂಬ ಕಟ್ಟಾ ಭ್ರಷ್ಟ ವ್ಯಕ್ತಿಯ ಮೇಲೂ ಕ್ರಮ ತೆಗೆದುಕೊಳ್ಳಲಾರದ ಸ್ಥಿತಿಗೆ ಮುಖ್ಯಮಂತ್ರಿ ಹೋಗಿದ್ದಾರೆಂದರೆ ಸ್ವತಃ ಸಿಎಂ ಎಷ್ಟು ಶುದ್ಧಹಸ್ತರಾಗಿರಬಹುದು ಯೋಚಿಸಿ? ಒಮ್ಮೆ ಅರುಣ್ ಜೇಟ್ಲಿಯವರಲ್ಲಿ ನರೇಂದ್ರ ಮೋದಿಯವರ ಬಗ್ಗೆ ಅಭಿಪ್ರಾಯ ಕೇಳಿದಾಗ, “ಮುಖ್ಯಮಂತ್ರಿ ಮೋದಿ ಬಳಿಗೆ ಹೋಗಿ ಇಂಥವರಿಗೆ ಟಿಕೆಟ್ ಕೊಡಿ, ಇಂತಹ ಕೆಲಸ ಮಾಡಿಕೊಡಿ ಎಂದು ಕೇಳುವಷ್ಟು ಧೈರ್ಯ ಬಹುಶಃ ಯಾವ ಮಂತ್ರಿ, ಶಾಸಕನಿಗೂ ಇಲ್ಲ” ಎಂದಿದ್ದರು. ಶಾಸಕರು, ಮಂತ್ರಿಗಳಾದವರು ಮುಖ್ಯಮಂತ್ರಿಯವರ ಮರ್ಜಿಯಲ್ಲಿರಬೇಕು. ಆದರೆ ನಮ್ಮ ಮುಖ್ಯಮಂತ್ರಿ, ಶಾಸಕರು ಹಾಗೂ ಮಂತ್ರಿಗಳ ಮರ್ಜಿಯಲ್ಲಿರಬೇಕಾದ ಪರಿಸ್ಥಿತಿ ಏಕೆ ಸೃಷ್ಟಿಯಾಯಿತು? ಬಸವರಾಜ ಬೊಮ್ಮಾಯಿ, ಸೋಮಣ್ಣ, ಉಮೇಶ್ ಕತ್ತಿ ಮುಂತಾದ ಹೂವಿಂದ ಹೂವಿಗೆ ಹಾರುವ ದುಂಬಿಗಳು ಯಾವ ಯೋಗ್ಯತೆ ಮೇಲೆ ಯಡಿಯೂರಪ್ಪನವರ ಸರಕಾರದಲ್ಲಿ ಮಂತ್ರಿ ಸ್ಥಾನ ಪಡೆದರು? ವಿ.ಎಸ್. ಆಚಾರ್ಯ ಅವರಂತಹ ಅಸಮರ್ಥರು ಯಾವ ಕಾರಣಕ್ಕಾಗಿ ಇನ್ನೂ ಸಂಪುಟ ದಲ್ಲಿದ್ದಾರೆ? ರೇಣುಕಾಚಾರ್ಯ ಅವರಂತಹ ಚಾರಿತ್ರ್ಯಹೀನರನ್ನು ಮಂತ್ರಿ ಮಾಡಬೇಕಾದ ದರ್ದು ಏಕೆ ಎದುರಾಯಿತು?

ಇದಕ್ಕೆಲ್ಲಾ ಹೊಣೆ ಯಾರು?

ಒಬ್ಬ ಮುಖ್ಯಮಂತ್ರಿಯಾದವರು ತನ್ನ ಕೈ, ಬಾಯಿ ಕಚ್ಚೆಯನ್ನು ಸರಿಯಿಟ್ಟುಕೊಂಡಿದ್ದರಷ್ಟೇ ಸರಕಾರ ನಡೆಸಲು, ಅಧಿಕಾರ ಉಳಿಸಿಕೊಳ್ಳಲು ಸಾಧ್ಯ. ಶಿವಪಾರ್ವತಿ ಎಂಬ ಮದಿರೆಯ ಹಿಂದೆ ಹೋದ ಆಂಧ್ರದ ಎನ್.ಟಿ. ರಾಮರಾವ್‌ಗೆ ಕೊನೆಗೆ ಯಾವ ಗತಿಯಾಯಿತು? ಸಂಘಮಿತ್ರಾ ಭರಾಲಿಯ ಬಗಲಲ್ಲಿ ಆಶ್ರಯ ಪಡೆಯಲು ಹೋದ ಪ್ರಫುಲ್ ಕುಮಾರ್ ಮಹಾಂತ ಎಂಬ ಈ ದೇಶ ಕಂಡ ಅತ್ಯಂತ ಕಿರಿಯ ಮುಖ್ಯಮಂತ್ರಿ ಹೇಗೆ ನಾಮಾವಶೇಷನಾದ? ಪುತ್ರ ವ್ಯಾಮೋಹ ಎಷ್ಟು ಕೆಟ್ಟದ್ದು, ಒಬ್ಬ ವ್ಯಕ್ತಿ ಯಾವ ರೀತಿಯ ರಾಜಕಾರಣ ಮಾಡಬಾರದು ಎಂಬುದಕ್ಕೆ ಮಾಜಿ ಪರ್ದಾನಿ ದೇವೇಗೌಡರಿಗಿಂತ ದೊಡ್ಡ ಉದಾಹರಣೆ ಬೇಕೆ? ಸಾಂಸ್ಕೃತಿಕ ರಾಷ್ಟ್ರೀಯ ವಾದವನ್ನು ಪ್ರತಿಪಾದಿಸುವ ಪಕ್ಷ, ನಾವೆಲ್ಲ ಹಿಂದು, ನಾವೆಲ್ಲ ಒಂದು ಎನ್ನುವ ಸಂಘದ ಹಿನ್ನೆಲೆ ಇಟ್ಟುಕೊಂಡು ಬಂದ ವ್ಯಕ್ತಿ ಒಂದು ಜಾತಿಯ ನಾಯಕನೆಂಬಂತೆ ವರ್ತಿಸಲು ಪ್ರಾರಂಭಿಸಿದರೆ ಗತಿಯೇನು? ನರೇಂದ್ರ ಮೋದಿ ಗಾಣಿಗ ಸಮುದಾಯಕ್ಕೆ ಸೇರಿದವರು. ಅವರ ಸಮುದಾಯವರ ಸಂಖ್ಯೆ ಗುಜರಾತ್‌ನಲ್ಲಿ ಶೇ. 5 ಪರ್ಸೆಂಟ್ ಕೂಡ ಇಲ್ಲ. ಆದರೂ 10 ವರ್ಷ ಆಡಳಿತ ನಡೆಸಿದ್ದಾರೆ. ರಾಷ್ಟ್ರ ರಾಜಕಾರಣ ಬೇಡವೆಂದಾದರೆ ಇನ್ನೂ ಹತ್ತು ವರ್ಷ ಗುಜರಾತನ್ನು ಆಳಬಹುದು. ಚುನಾವಣೆ ಬಂತೆಂದರೆ ನಮ್ಮ ಪರವಾಗಿ ಪ್ರಚಾರಕ್ಕೆ ಬನ್ನಿ ಎಂದು ಇತರ ರಾಜ್ಯಗಳವರು ಮುಗಿಬಿದ್ದು ಕರೆಯುತ್ತಾರೆ. ಗುಜರಾತ್ ಹಿಂಸಾಚಾರದ ಬಗ್ಗೆ ಮೋದಿಯವರನ್ನು ತೆಗಳುವವರೂ ಅವರ ಚಾರಿತ್ರ್ಯದ ಬಗ್ಗೆ ಚಕಾರವೆತ್ತುವುದಿಲ್ಲ. ಆದರೆ ದೌರ್ಬಲ್ಯಗಳು ಒಬ್ಬ ಮನುಷ್ಯನನ್ನು ಹೇಗೆ ಹಾಳು ಮಾಡುತ್ತವೆ ಎಂಬುದಕ್ಕೆ ಯಡಿಯೂರಪ್ಪನವರಿಗಿಂತ ಬೇರೆ ಉದಾಹರಣೆ ಬೇಕಿಲ್ಲ. ಇಲ್ಲಿ ಯಡಿಯೂರಪ್ಪನವರನ್ನು ದೂರದೇ ಬೇರೆ ದಾರಿಯಿಲ್ಲ. ಮನೆಯ ಯಜಮಾನ ಸರಿಯಿದ್ದರೆ ಉಳಿದವರನ್ನು ಖಂಡಿಸುವ, ಶಿಕ್ಷಿಸುವ ಹಕ್ಕು ಸಿಗುತ್ತದೆ. ಎಸ್.ಎಂ. ಕೃಷ್ಣ ಅವರು ಮುಖ್ಯಮಂತ್ರಿಯಾಗಿದ್ದಾಗ 3 ವರ್ಷ ಸತತ ಬರ, ವಿಠಲೇನಹಳ್ಳಿ ಗೋಲಿಬಾರ್, ಕಾವೇರಿ ವಿವಾದ, ದೇವೇಗೌಡರ ನಿರಂತರ ಕ್ಯಾತೆ, ರಾಜ್‌ಕುಮಾರ್ ಅಪಹರಣ, ನಾಗಪ್ಪ ಹತ್ಯೆ ಇಂತಹ ಒಂದಕ್ಕಿಂತ ಒಂದು ದೊಡ್ಡ ಸಮಸ್ಯೆಗಳು ಎದುರಾದರೂ ಹೇಗೆ ನಿಭಾಯಿಸಿದರು? ಈ ಯಾವ ಸಮಸ್ಯೆಗಳು ಎದುರಾದರೂ ಕೃಷ್ಣ ಅವರ ನಾಯಕತ್ವದ ಬಗ್ಗೆ ಒಂದು ಸಣ್ಣ ಅಪಸ್ವರವಾದರೂ ಕೇಳಿಬಂತೆ? ದೇವೇಗೌಡರಂತಹ ವ್ಯಕ್ತಿಯನ್ನು ಮಂತ್ರಿಮಂಡಲದಲ್ಲಿಟ್ಟುಕೊಂಡು ರಾಮಕೃಷ್ಣ ಹೆಗಡೆ ಹೇಗೆ ಆಡಳಿತ ನಡೆಸಿದರು? ಇವರಿಗೆ ಹೋಲಿಸಿದರೆ ಯಡಿಯೂರಪ್ಪನವರು ಎಲ್ಲಿ ನಿಲ್ಲುತ್ತಾರೆ?

ಈ ‘ಅಪ್ಪ’ದಿರಿದ್ದಾರಲ್ಲಾ ಯಡಿಯೂರಪ್ಪ, ಈಶ್ವರಪ್ಪ ಇವರೇ ಬಿಜೆಪಿ ಪಾಲಿಗೆ Nemesis.

ಶ್ರೀಮಾನ್ ಯಡಿಯೂರಪ್ಪನವರು ಅಧಿಕಾರ ಬಂದ ಹೊಸದ ರಲ್ಲಿಯೇ ನಡೆದುಕೊಂಡ ರೀತಿ ಹೇಗಿತ್ತು? ಧಾರವಾಡದಿಂದ ಆಯ್ಕೆಯಾಗಿ ಬಂದ ಸೀಮಾ ಮಸೂತಿ ಎಂಬ ಶಾಸಕಿ ವಿಧಾನ ಸೌಧದಲ್ಲಿ ಎದುರಾದ ಮುಖ್ಯಮಂತ್ರಿಯವರನ್ನು ವಿನೀತರಾಗಿಯೇ ತಮ್ಮ ಅಹವಾಲಿನ ಬಗ್ಗೆ ಯಾವ ನಿರ್ಧಾರ ಕೈಗೊಂಡಿರಿ ಎಂದು ಪ್ರಶ್ನಿಸಿದಾಗ ಯಡಿಯೂರಪ್ಪನವರು ಎಲ್ಲರ ಎದುರೇ ಹಿಗ್ಗಾಮುಗ್ಗ ಬೈದಿದ್ದರು. ನಿನಗೆ ಎಲ್ಲಿ ಕೇಳಬೇಕು ಎಂದು ಬುದ್ಧಿಯಿಲ್ಲವಾ ಎಂದು ಜಾಡಿಸಿದ್ದರು. ಮನನೊಂದ, ಅವಮಾನಿತರಾದ ಆಕೆ ಬಿಕ್ಕಳಿಸಿ ಅತ್ತಿದ್ದರು. ಅಲ್ಲಾ, ವಿಧಾನಸೌಧದಲ್ಲಿ ಕೇಳದೇ ಮಲಗುವ ಕೋಣೆಗೆ ಬಂದು ಕೇಳಬೇಕಿತ್ತಾ? ಗೂಳಿಹಟ್ಟಿ ಶೇಖರ್ ಅವರಿಗೂ ಒಮ್ಮೆ ಇಂಥದ್ದೇ ಅನುಭವವಾಗಿತ್ತು. ಸಾಮಾನ್ಯ ಜನರ ಕಥೆ ಹಾಗಿರಲಿ, ಶಾಸಕರು ತಮ್ಮ ಕುಂದುಕೊರತೆಗಳನ್ನು ಹೇಳಲು ಬಂದರೂ ಸಿಡುಕಿ ಕಳುಹಿಸುತ್ತಿದ್ದರು. ಹಾಲಿ ರಾಜಕೀಯ ಪರಿಸ್ಥಿತಿಗೆ ಕಾರಣರಾಗಿರುವ 14 ಮಂದಿ ಬಂಡಾಯ ಶಾಸಕರನ್ನು ತೆಗಳುವುದು ಸುಲಭ. ಆದರೆ ಇದೇ ಶಾಸಕರು ಒಬ್ಬೊಬ್ಬರೇ ಹೋಗಿ ಮುಖ್ಯಮಂತ್ರಿಯವರಲ್ಲಿ ತಮ್ಮ ಅಹವಾಲು ಇಟ್ಟಿದ್ದರೆ ಮುಖ್ಯಮಂತ್ರಿ ಉಗಿದು ಅಟ್ಟುತ್ತಿದ್ದರು. ಅಧಿಕಾರ ಕಳೆದುಕೊಳ್ಳುವ ಸ್ಥಿತಿ ಬಂದಾಗ ಈ ಮುಖ್ಯಮಂತ್ರಿ ಅಂಗಲಾಚುತ್ತಾರೆ, ಆನಂತರ ಒದ್ದು ಓಡಿಸುತ್ತಾರೆ. ಒಂದು ವೇಳೆ, ಯಡಿಯೂರಪ್ಪನವರು ಅಂತಃಕರಣ ಇಟ್ಟುಕೊಂಡು ಆಡಳಿತ ನಡೆಸಿದರೆ ಖಂಡಿತ ಈ ಪರಿಸ್ಥಿತಿ ಬರುತ್ತಿರಲಿಲ್ಲ. ಅದನ್ನು ಬಿಟ್ಟು ಹೋಮ-ಹವನ, ಕತ್ತೆ ಬಲಿ, ಆನೆ ದಕ್ಷಿಣೆ ಕೊಟ್ಟರೆ ಏನು ಫಲ? ಆ ಭಗವಂತನೂ ನೀವು ನಡೆದುಕೊಂಡ ರೀತಿಯನ್ನು ಮೆಚ್ಚುವುದಿಲ್ಲ ಮುಖ್ಯಮಂತ್ರಿಯವರೇ… ಇನ್ನು ರಾಜ್ಯ ಬಿಜೆಪಿಯಲ್ಲಿ ಎಂತಹ ಕ್ಯಾರೆಕ್ಟರ್‌ಗಳಿವೆ ನೋಡಿ. ಒಳಗೇ ಮೆದ್ದ ಗುಳಿಗೆ ಸಿದ್ದ ಎಂಬಂತಿದ್ದಾರೆ ಜಗದೀಶ್ ಶೆಟ್ಟರ್. ಆ ರೇಣುಕಾಚಾರ್ಯ ಒಂಥರಾ ಹೆಂಡ ಕುಡಿದ ಮಂಗ. ಈಶ್ವರಪ್ಪನವರವರು ಪಕ್ಕಾ ‘Sycophant’. ಬಳ್ಳಾರಿ ರೆಡ್ಡಿಗಳಂತೂ ವಾಲ್ಮೀಕಿ ಮಹಾಋಷಿಯಾಗುವುದಕ್ಕಿಂತ ಮೊದಲು ಹೇಗಿದ್ದರೋ ಅದೇ ಆಗಿದ್ದಾರೆ. ಇನ್ನು ಕಮಲ ಬಿಟ್ಟು ಬೇರಾವ ಚಿಹ್ನೆಯಡಿ ನಿಂತರೂ 10 ವೋಟು ಪಡೆದುಕೊಳ್ಳುವ ಸಾಮರ್ಥ್ಯವಿಲ್ಲದ ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅನಂತ ಕುಮಾರ್, ಪಂಚತಂತ್ರ ಕಥೆಯಲ್ಲಿ ಬರುವ ಗುಳ್ಳೆನರಿಯಲ್ಲದೆ ಮತ್ತೇನೂ ಅಲ್ಲ. ಇವರೆಲ್ಲರೂ ಮುಖ್ಯಮಂತ್ರಿಯಾಗುವ ಕನಸನ್ನು ಪೋಷಿಸುತ್ತಿರುವವರೇ ಆಗಿದ್ದಾರೆ. ಸರಕಾರ ಬೀಳಿಸಲು ಕುಮಾರ ಸ್ವಾಮಿ, ಸಿದ್ಧರಾಮಯ್ಯನವರು ಬೇಕಿಲ್ಲ. ಇವರೇ ಸಾಕು. ಇವರ ಮಾತು, ನಡತೆಗಳನ್ನು ಸೂಕ್ಷ್ಮವಾಗಿ ನೋಡಿ. ಪ್ರಸ್ತುತ ನಡೆಯು ತ್ತಿರುವ ಪ್ರಹಸನದಲ್ಲಿ ‘ಸೇವಿಯರ್’ ಹಾಗೂ ‘ವಿಲನ್’ ಎರಡೂ ಪಾತ್ರಗಳಲ್ಲಿ ಇವರೇ ಇದ್ದಾರೆ!

ಇವತ್ತು ಎಲ್ಲರೂ, ಎಲ್ಲ ಪಕ್ಷದವರು, ಬಂಡಾಯವೆದ್ದಿರುವವರೂ ಆತ್ಮಗೌರವದ ಮಾತನಾಡುತ್ತಿದ್ದಾರೆ!

ಆತ್ಮಗೌರವ ಎಂದರೆ ಏನೆಂದುಕೊಂಡಿದ್ದಾರೆ ಇವರು? ಇವರಿಗೆ ವೋಟು ಕೊಟ್ಟ ಮತದಾರನ ಆತ್ಮಗೌರವವನ್ನು ಯಾರು ಕೇಳುತ್ತಾರೆ? ಈ ದೇಶದ ಬಗ್ಗೆ ಒಂದಿಷ್ಟು ಕಾಳಜಿ, ಪ್ರೀತಿ, ಅಭಿಮಾನ ಇಟ್ಟುಕೊಂಡಿರುವವರೇ ಬಿಜೆಪಿಯ ಸಾಂಪ್ರದಾಯಿಕ ಮತದಾರರು. ಬೀದಿ ನಾಟಕ ಮಾಡುವ ಮೊದಲು, ವೋಟುಕೊಟ್ಟ ಮತದಾರನ ಆತ್ಮಗೌರವದ ಬಗ್ಗೆ ಒಂದಿನಿತಾದರೂ ಇವರು ಯೋಚಿಸಿದರೆ? ಒಂದು ಸರಕಾರವನ್ನು ಆಯ್ಕೆ ಮಾಡುವುದು 5 ವರ್ಷ ‘ಪಾಲಿಟಿಕ್ಸ್’ ನಡೆಸುವುದಕ್ಕಲ್ಲ, ‘ಗವರ್ನೆನ್ಸ್’ ಮಾಡುವುದಕ್ಕೆ. ಅಷ್ಟಕ್ಕೂ ಜನಾದೇಶ ಎಂದರೇನು? ಜೆಡಿಎಸ್‌ಗೆ ಜನ 28 ಸೀಟು ಕೊಟ್ಟಿದ್ದು ಅಧಿಕಾರ ನಡೆಸಿ ಎಂದೇ? ಸರಕಾರ ಬೀಳಿಸುವುದೇ ಪ್ರತಿಪಕ್ಷಗಳ ಕೆಲಸವೇ? ಆಳುವವರು ತಪ್ಪೆಸಗಿದರೆ ಜನರ ಗಮನಕ್ಕೆ ತಂದು, ಜಾಗೃತಿ ಮೂಡಿಸಲಿ. ಅದು ಬಿಟ್ಟು, ಅಡ್ಡಮಾರ್ಗದಿಂದ ಅಧಿಕಾರಕ್ಕೇ ರಲು ಪ್ರಯತ್ನಿಸುವುದು ಯಾವ ನೈತಿಕತೆ? ಡೆಮಾಕ್ರಸಿಗೂ ಆಟೋಕ್ರಸಿಗೂ ಇರುವ ವ್ಯತ್ಯಾಸ ಪೊಲಿಟಿಕಲ್ ಲೀಡರ್‌ಶಿಪ್. ಪ್ರತಿ 5 ವರ್ಷಕ್ಕೊಮ್ಮೆ ಅಯೋಗ್ಯರನ್ನು, ಅಸಮರ್ಥರನ್ನು ಬದಲಾಯಿಸುವ ಹಕ್ಕು ಪ್ರಜೆಗೆ ಸಿಗುತ್ತದೆ. ಆಗ ಜನರ ಮನವೊಲಿಸಿ ಅಧಿಕಾರಕ್ಕೆ ಬರಬಹುದಲ್ಲವೆ? ಇವತ್ತಿನ ಪರಿಸ್ಥಿತಿಗೆ ಆಡಳಿತ ಹಾಗೂ ಪ್ರತಿಪಕ್ಷಗಳೆರಡೂ ಕಾರಣ. ಈ ಸರಕಾರ ಬಂದಿದ್ದಿನಿಂದಲೂ ಅದನ್ನು ಬೀಳಿಸುವುದೇ ತಮ್ಮ ಗುರಿಯೆಂಬಂತೆ ಪ್ರತಿಪಕ್ಷಗಳೂ ವರ್ತಿಸುತ್ತಿವೆ. ಹೀಗಾಗಿ ಸೃಷ್ಟಿಯಾಗುತ್ತಾ ಬರುತ್ತಿರುವ ರಾಜಕೀಯ ಅನಿಶ್ಚಯತೆ, ಅಸ್ಥಿರತೆಯಿಂದ ಸಫರ್ ಆಗುವುದು ಮಾತ್ರ ಸಾಮಾನ್ಯ ಜನ. ಸಂಪೂರ್ಣ ಲಾಭ ಪಡೆಯುವುದು ಅಧಿಕಾರಿಗಳು. ಅವರು ಯಾರ ಮಾತನ್ನೂ ಕೇಳುವುದಿಲ್ಲ. ಲೂಟಿ ಮಾಡಿ ಬಿಡುತ್ತಾರೆ.

ಇದೇನೇ ಇರಲಿ, ಇಷ್ಟೆಲ್ಲಾ ಹಂಗಾಮ ನಡೆಯುತ್ತಿದ್ದರೂ ಜನ ಏನು ಮಾಡುತ್ತಿದ್ದಾರೆ? ಅಯ್ಯೋ ವೋಟು ಕೊಟ್ಟು ತಪ್ಪು ಮಾಡಿದೆವು ಎಂದು 5 ವರ್ಷ ತಮಾಷೆ ನೋಡುತ್ತಾ ಕುಳಿತುಕೊಳ್ಳಬೇಕಾ? ಶಿವಮೊಗ್ಗ, ಶಿಕಾರಿಪುರ, ಹೊನ್ನಾಳಿ, ಕಾರವಾರ, ಅರಭಾವಿ, ಇಂಡಿ, ಲಿಂಗಸಗೂರು, ಸಾಗರ, ಮೈಸೂರು, ಬಸವನಬಾಗೇವಾಡಿ, ಹೊಸದುರ್ಗ, ಹಿರಿಯೂರು ಜನರು ತಮ್ಮ ತಮ್ಮ ಮನೆಗಳಲ್ಲಿ ಪೊರಕೆಗಳನ್ನೇ ಇಟ್ಟುಕೊಂಡಿಲ್ಲವಾ?

ಚಿತ್ರ ಕೃಪೆ : ಪ್ರತಾಪ್ ಸಿಂಹ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ