ನನ್ನ ಬ್ಲಾಗ್ ಪಟ್ಟಿ

ಶನಿವಾರ, ಡಿಸೆಂಬರ್ 4, 2010

ವಾತ್ಸಲ್ಯದಲ್ಲೇ ಮೈಮರೆತರೆ ವತ್ಸಲೆ ಯೂ ಕ್ಷಮಿಸಳು

ಆ ದಿನವನ್ನು ಬಿಜೆಪಿಗೆ ಮತ ಹಾಕದವರೂ ಮರೆಯಲು ಸಾಧ್ಯವಿಲ್ಲ. 2008, ಮೇ 30 ರಂದು ವಿಧಾನಸೌಧದ ಮುಂದೆ ಸೇರಿದ್ದ ಜನಸಾಗರ ಇಂದಿಗೂ ಕಣ್ಣಮುಂದೆ ಬರುತ್ತದೆ. ಅದುವರೆಗೂ ಈ ರಾಜ್ಯ 18 ಮುಖ್ಯಮಂತ್ರಿಗಳನ್ನು ಕಂಡಿದ್ದರೂ ಬಿ.ಎಸ್. ಯಡಿಯೂರಪ್ಪನವರಿಗೆ ಕೊಟ್ಟಷ್ಟು ಪ್ರೀತಿ-ಆದರದಿಂದ ಬಹುಶಃ ಯಾರನ್ನೂ ಗದ್ದುಗೆ ಮೇಲೆ ಕೂರಿಸಿರಲಿಲ್ಲ. 1993ರಲ್ಲಿ ಡಾ. ರಾಜ್‌ಕುಮಾರ್ ಅವರಿಗೆ ‘ಕರ್ನಾಟಕ ರತ್ನ’ ಪ್ರಶಸ್ತಿ ಪ್ರದಾನ ಮಾಡುವ ಸಂದರ್ಭದಲ್ಲಿ ವಿಧಾನಸೌಧದ ಮುಂಭಾಗ ಎಷ್ಟು ಕಳೆಗಟ್ಟಿತ್ತೋ ಅದನ್ನೂ ಮೀರಿಸುವಂತಿತ್ತು ಅಂದಿನ ಸಂಭ್ರಮ. ನಾನು ಬೂಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪ…. ಅಂತ ರೈತನ ಹೆಸರಿನಲ್ಲಿ ಪ್ರಮಾಣ ಮಾಡಿ ಪದಗ್ರಹಣ ಮಾಡುವಾಗ ಬಿಜೆಪಿ ಮತದಾರರ ಮುಖದಲ್ಲಿ ಕಂಡ ಆಹ್ಲಾದ ವರ್ಣನೆಗೆ ನಿಲುಕದ್ದು. 4, 17, 38, 42, 79 ಕೊನೆಗೆ 110 ಹೀಗೆ ಹಲವು ದಶಕಗಳ ಹೋರಾಟದ ನಂತರ ಬಿಜೆಪಿಗೆ ಅಧಿಕಾರ ದಕ್ಕಿತ್ತು. ಅಂಥದ್ದೊಂದು ದಿನಕ್ಕಾಗಿ ಜೀವನವಿಡೀ ಕಾದಿದ್ದರೇನೋ ಎಂಬಂತೆ ಬಿಜೆಪಿ ಮತದಾರರು ಅಂದು ಸಂಭ್ರಮಿಸಿದ್ದರು. ಮುಖ್ಯಮಂತ್ರಿಯಾಗಿದ್ದು ಯಡಿಯೂರಪ್ಪನವರಾದರೂ ಅಧಿಕಾರ ತಮಗೇ ದಕ್ಕಿದೆ ಎಂಬಂತೆ ಬಿಜೆಪಿ ಕಾರ್ಯಕರ್ತರು ಖುಷಿಪಟ್ಟಿದ್ದರು. ನಮ್ಮ ಸರಕಾರ ಬಂದಿದೆ, ಇನ್ನು ಮುಂದೆ ಭಯೋತ್ಪಾದನೆ, ಮತಾಂತರ, ಭ್ರಷ್ಟಾಚಾರ, ಅಲ್ಪಸಂಖ್ಯಾತರ ಉಪಟಳ ಇದ್ಯಾವ ವಿಷಯಗಳ ಬಗ್ಗೆಯೂ ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ ಎಂದು ಹೆಗಲ ಭಾರ ಇಳಿಸಿದವರಂತೆ ನಿಟ್ಟುಸಿರು ಬಿಟ್ಟಿದ್ದರು, ಸುಭದ್ರತೆಯ ಭಾವನೆಯೊಂದಿಗೆ ನಿರಾಳಗೊಂಡಿದ್ದರು. ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ಕೆಲವೇ ವಾರಗಳಲ್ಲಿ ಹಾವೇರಿಯಲ್ಲಿ ರೈತರ ಮೇಲೆ ಗೋಲಿಬಾರ್ ನಡೆದಾಗಲೂ, ಇನ್ನೂ ಅನನುಭವಿಗಳು ಎಂದು ಜನ ಸರಕಾರವನ್ನು ಮಾಫಿ ಮಾಡಿದ್ದರು. ಅದರ ಬೆನ್ನಲ್ಲೇ ರಸಗೊಬ್ಬರ ಕೊರತೆ ಕಾರಣ ದಾವಣಗೆರೆಯಲ್ಲಿ ರೈತರು ದಂಗೆ ಎದ್ದಾಗಲೂ ಜನ ಶಂಕಿಸಿದ್ದು ವಿರೋಧ ಪಕ್ಷದವರ ಹುನ್ನಾರವನ್ನು. ಆಪರೇಷನ್ ಕಮಲಕ್ಕೆ ಕೈಹಾಕಿದಾಗಲೂ 110 ಸೀಟು ಗೆದ್ದಿದ್ದರೂ ಸುಮ್ಮನೆ ಕುಳಿತುಕೊಳ್ಳಬೇಕಾ, ಕಾಂಗ್ರೆಸ್-ಜೆಡಿಎಸ್‌ನವರಿಗೆ ಅಧಿಕಾರ ಬಿಟ್ಟುಕೊಡಬೇಕಾ ಎಂದು ಜನರೇ ಬಿಜೆಪಿಯ ಸಮರ್ಥನೆಗೆ ನಿಂತಿದ್ದರು. ಬಿಜೆಪಿ ಸರಕಾರದ ಬಗ್ಗೆ ಯಾರಾದರೂ ಟೀಕೆ ಮಾಡಿದರೆ, ಸಾಕು ಬಿಡ್ರೀ… ನಿಮ್ಮ ಕಾಂಗ್ರೆಸ್, ಜೆಡಿಎಸ್‌ನವರು ೬೦ ವರ್ಷ ಮಾಡಿದ್ದೇನು ಅಂತ ಗೊತ್ತು, ನಿಮ್ಮಿಂದ ಪಾಠ ಕಲಿಯಬೇಕಿಲ್ಲ ಎಂದು ಮುಲಾಜಿಲ್ಲದೆ ಮುಖಕ್ಕೆ ಹೊಡೆದಂತೆ ಹೇಳುತ್ತಿದ್ದರು. ನಮ್ಮ ಸರಕಾರ ಬಂದಿದೆ, ಅದನ್ನು ಉಳಿಸಿಕೊಳ್ಳಲು ಆಪರೇಷನ್ ಕಮಲದ ಅಗತ್ಯವಿದೆ, ಅನನುಭವದಿಂದಾಗಿ ಸಣ್ಣಪುಟ್ಟ ತಪ್ಪುಗಳಾಗುತ್ತವೆ, ಅಚಾತುರ್ಯಗಳು ಜರುಗುತ್ತವೆ ಎಂದು ಜನರೇ ಬಿಜೆಪಿ ವಕ್ತಾರರಂತೆ ಮಾತನಾಡುತ್ತಿದ್ದರು, ಸಮರ್ಥನೆಗೆ ನಿಲ್ಲುತ್ತಿದ್ದರು. ಅಯ್ಯೋ… ಯಾರು ದುಡ್ಡು ಮಾಡಿಕೊಂಡಿಲ್ಲ ಹೇಳಿ, ಈಗ ಅಧಿಕಾರಕ್ಕೆ ಬಂದಿದ್ದಾರೆ ಸ್ವಲ್ಪ ಮಾಡಿಕೊಳ್ಳಲಿ ಬಿಡಿ ಎಂದು ಬಿಜೆಪಿಯವರು ಮಾಡಿದ ಸಣ್ಣ-ಪುಟ್ಟ ಹಗರಣ, ಲೂಟಿಗಳನ್ನೂ ಸಹಿಸಿಕೊಂಡರು.

ಆದರೆ….

ಹೀಗೆಲ್ಲಾ ವಕಾಲತ್ತು ವಹಿಸುತ್ತಿದ್ದ ಬಿಜೆಪಿಯ ಮತದಾರನ ಸ್ಥಿತಿ ಎರಡೂವರೆ ವರ್ಷದ ನಂತರ ಏನಾಗಿದೆ ನೋಡಿ?! ಅದರಲ್ಲೂ ಲೋಕಾಯುಕ್ತ ಸಂತೋಷ್ ಹೆಗ್ಡೆ ರಾಜೀನಾಮೆ ಘಟನೆಯ ನಂತರ ಬಿಜೆಪಿ ಬಗ್ಗೆ ಅದರ ಸಾಂಪ್ರದಾಯಿಕ ಮತದಾರರೇ ಹೇಸಿಗೆಪಟ್ಟುಕೊಳ್ಳಲಾರಂಭಿಸಿದರು. ಈಗಂತೂ ಪರಿಸ್ಥಿತಿ ಇನ್ನೂ ಹದಗೆಟ್ಟಿದೆ. ಅಧಿಕಾರ ಚಲಾಯಿಸುತ್ತಿರುವವರು ಐದು ವರ್ಷಕ್ಕೊಮ್ಮೆ ಮನೆಬಾಗಿಲಿಗೆ ಬರುತ್ತಾರೆ. ಆದರೆ ನಿತ್ಯವೂ ಜನರ, ಎದುರಾಳಿಗಳ ಮುಖ ನೋಡಬೇಕಾದವರು ಬಿಜೆಪಿಯ ಸಾಮಾನ್ಯ ಕಾರ್ಯಕರ್ತರು. ಅವರು ತಲೆಮರೆಸಿಕೊಂಡು ಓಡಾಡುವಂತಾಗಿ ಬಿಟ್ಟಿದೆ. ನಮ್ಮ ಪಕ್ಷದವರೂ ಕಳ್ಳರೇ ಬಿಡಿ ಎಂದು ಹತಾಶೆ ವ್ಯಕ್ತಪಡಿಸುವಂತಾಗಿದೆ. ಕಾಂಗ್ರೆಸ್-ಜೆಡಿಎಸ್‌ನವರಿದ್ದಾಗ ನೂರಿನ್ನೂರು ರೂಪಾಯಿಯಲ್ಲಿ ಮಾಡಿಸಿಕೊಳ್ಳಬಹುದಾಗಿದ್ದ ಸರಕಾರಿ ಕೆಲಸಗಳು ಸಾವಿರ ರೂ. ಬಿಚ್ಚಿದರೂ ಆಗದಂತಹ ಸ್ಥಿತಿಗೆ ಹೋಗಿವೆ, ಬಿಜೆಪಿಯವರು ಕೊಳ್ಳೆ ಹೊಡೆಯುವುದಕ್ಕೇ ನಿಂತಿದ್ದಾರೆ ಎಂದು ಅವರಿಗೆ ಮತಹಾಕಿದವರೇ ಹೇಳುತ್ತಿದ್ದಾರೆ. ಈ ದೇಶದಲ್ಲಿ ಭ್ರಷ್ಟಾಚಾರದ ಬೀಜ ಬಿತ್ತಿದವರು ಕಾಂಗ್ರೆಸಿಗರಾದರೂ ಯಾವ ಪರಿ ಭ್ರಷ್ಟಾಚಾರ ಮಾಡಬಹುದು ಎಂಬುದನ್ನು ತೋರಿಸಿಕೊಡುತ್ತಿರುವುದು ಮಾತ್ರ ಬಿಜೆಪಿ. ಇಷ್ಟಾಗಿಯೂ ಜನರ ಮಧ್ಯೆಯೇ ಇರುವ, ನಿತ್ಯವೂ ಪಕ್ಷದ-ಸಂಘದ ನಿಷ್ಠಾವಂತರ ಮನೆಗೆ ಊಟಕ್ಕೆ ಹೋಗುವ, ಊರೂರುಗಳಲ್ಲಿ ಶಾಖೆ ನಡೆಸುವ ಆರೆಸ್ಸೆಸ್ಸಿಗೆ ಈ ಯಾವ ಅಂಶಗಳೂ ಅರಿವಿಗೆ ಬಂದಿಲ್ಲವೆ?

ಹಾಗೆನ್ನುವುದಕ್ಕೂ ಸಾಧ್ಯವಿಲ್ಲ.

ರಾಷ್ಟ್ರಕಟ್ಟುವ ಕಾಯಕಕ್ಕಾಗಿ ವೈಯಕ್ತಿಕ ಬದುಕನ್ನು ಮರೆತು ಜನರ ಮಧ್ಯೆ ಬೆರೆತುಹೋಗಿರುವ ಸಂಘದ ಒಬ್ಬ ಸಾಮಾನ್ಯ ಸ್ವಯಂಸೇವಕನಲ್ಲೂ ಬಿಜೆಪಿ ರಾಜ್ಯ ಸರಕಾರದ ಕಾರ್ಯವೈಖರಿ, ಹಗರಣಗಳ ಬಗ್ಗೆ ಅಪಾರ ನೋವು, ಹತಾಶೆಗಳಿವೆ. ನಾನೇನು ಮಾಡುವುದಕ್ಕಾಗುತ್ತದೆ ಎಂದು ಆತ ಅಸಹಾಯಕತೆ ವ್ಯಕ್ತಪಡಿಸು ವುದನ್ನು ಬಿಟ್ಟರೆ ಬೇರೇನನ್ನೂ ಮಾಡಲು ಸಾಧ್ಯವಿಲ್ಲ. ಆದರೆ ರಾಷ್ಟ್ರ, ರಾಜ್ಯ ಮಟ್ಟದಲ್ಲಿ ಸಂಘದ ಚುಕ್ಕಾಣಿ ಹಿಡಿದಿರುವವರಿಗೆ ಚಾಟಿ ಬೀಸುವ ತಾಕತ್ತು ಖಂಡಿತ ಇದೆ. ಹಾಗಿದ್ದರೂ ಆರೆಸ್ಸೆಸ್ ಏಕೆ ಮಾತನಾಡುತ್ತಿಲ್ಲ? ಬಿಜೆಪಿ ನಮ್ಮ ನಿಯಂತ್ರಣದಲ್ಲಿಲ್ಲ, ನಾವು ಹೇಳಿದರೂ ನಮ್ಮ ಮಾತು ಕೇಳುವುದಿಲ್ಲ ಎಂದು ಪಲಾಯನವಾದಕ್ಕೆ ಶರಣಾದರೆ ಸಂಘವನ್ನು ಜನರೇ ನಂಬದ ಸ್ಥಿತಿ ಎದುರಾಗುವುದು ಖಂಡಿತ. ಅಷ್ಟಕ್ಕೂ ನಿತಿನ್ ಗಡ್ಕರಿ ಎಂಬ ಮುಖಪರಿಚಯವೇ ಇಲ್ಲದ ವ್ಯಕ್ತಿಯನ್ನು ಏಕಾಏಕಿ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷರನ್ನಾಗಿ ಮಾಡುವ ಸಾಮರ್ಥ್ಯ ಸಂಘಪರಿವಾರಕ್ಕಿದೆ ಎನ್ನುವುದಾದರೆ ರಾಜ್ಯ ಬಿಜೆಪಿ ಸರಕಾರಕ್ಕೆ ಕನಿಷ್ಠ ಕಿವಿಹಿಂಡುವುದಕ್ಕೂ ಆಗುವುದಿಲ್ಲವೆ? ಮಾಧ್ಯಮಗಳ ಮುಂದೆ ಹೇಳಿಕೆ ಕೊಟ್ಟು ಸುದ್ದಿಗೆ ಆಹಾರವಾಗುವ ಧೋರಣೆ ಬಲಪಂಥೀಯ ಸಂಘಟನೆಗಳಿಗೆ ಇಲ್ಲ ಎಂಬ ತಿಪ್ಪೆ ಸಾರಿಸುವ ಉತ್ತರ ಮಾತ್ರ ಬೇಡ. ನಮ್ಮದೇನಿದ್ದರೂ ಸಾಮಾಜಿಕ ಹಾಗೂ ಸಾಂಸ್ಕೃತಿಕ ಸಂಘಟನೆ, ರಾಜಕೀಯದ ಬಗ್ಗೆ ನಮ್ಮಲ್ಲಿ ಅಭಿಪ್ರಾಯ ಕೇಳಬೇಡಿ ಎನ್ನುವ ಮೂಲಕ ಮತ್ತಷ್ಟು ಹಗುರಾಗಬೇಡಿ. ಬಿಜೆಪಿಗೆ ಏನಾದರೂ ಬೆಲೆ ಇರುವುದಾದರೆ, ಉಳಿದ ಪಕ್ಷಗಳಿಗಿಂತ ಭಿನ್ನ (ಈಗ ಖಂಡಿತ ಅಲ್ಲ) ಎಂಬ ಅಭಿಪ್ರಾಯ ಇರುವುದಾದರೆ ಆ ಪಕ್ಷದ ಬೇರುಗಳು ಆರೆಸ್ಸೆಸ್‌ನಲ್ಲಿ ತನ್ನ ಮೂಲವನ್ನು ಹೊಂದಿವೆ ಎಂಬುದೇ ಕಾರಣ. ಆರೆಸ್ಸೆಸ್‌ನ ಶಿಸ್ತು, ಸಮರ್ಪಣಾ ಮನೋಭಾವ, ದೇಶಪ್ರೇಮವನ್ನು ಮೈಗೂಡಿಸಿಕೊಂಡ ಪಕ್ಷ ಬಿಜೆಪಿ ಎಂಬ ಕಾರಣಕ್ಕೆ ಜನರಿಗೆ ಅದರ ಮೇಲೆ ಪ್ರೀತಿ ಹುಟ್ಟಿಕೊಳ್ಳಲಿಕ್ಕೆ ಎಡೆಯಾಯ್ತು. ಖಂಡಿತ, ಇದರ ಶ್ರೇಯಸ್ಸು ಸಂಘ ಪರಿವಾರಕ್ಕೆ ಸಲ್ಲುತ್ತದೆ. ಆದರೆ, ಆಗೆಲ್ಲ ನೈತಿಕ ಕಾವಲುಗಾರನಂತಿದ್ದ ಸಂಘ ಪರಿವಾರದ ಸಂಘಟನೆಗಳು ಕರ್ನಾಟಕದಲ್ಲಿ ಬಿಜೆಪಿ ಈ ಮಟ್ಟದಲ್ಲಿ ಕೆಸರಿನಲ್ಲಿ ಬಿದ್ದಿರುವಾಗಲೂ ಕಿವಿ ಹಿಂಡುವ ಧೈರ್‍ಯ ತೋರುತ್ತಿಲ್ಲವೇಕೆ? ರಾಜಕೀಯ ಪಕ್ಷಕ್ಕಂತೂ ಶತಾಯಗತಾಯ ಅಧಿಕಾರದಲ್ಲೇ ಮುಂದುವರಿಯಬೇಕಾದ ಅನಿವಾರ್‍ಯ ರಾಜಿ ಮನೋಭಾವವಿರುತ್ತದೆ. ಆದರೆ, ದಕ್ಷಿಣ ಭಾರತದಲ್ಲಿ ಮೊದಲ ಬಾರಿಗೆ ಅಧಿಕಾರಕ್ಕೆ ಬಂದಿರುವ ಬಿಜೆಪಿ ಹೇಗಾದರೂ ಸರಿ, ಯಾವ ರೀತಿಯಲ್ಲಾದರೂ ಸರಿ ಅವಧಿ ಮುಗಿಸಿಬಿಡಲಿ ಎಂಬ ಧೋರಣೆಗೆ ಸಂಘ ಪರಿವಾರದ ಪ್ರಮುಖರೂ ಒಗ್ಗಿಹೋದರಾ?

ಇದೇ ಸಂಘಪರಿವಾರದಿಂದ ಬಂದ ಅಟಲ್ ಬಿಹಾರಿ ವಾಜಪೇಯಿಯವರು ಬಹುಮತ ಸಾಬೀತಿಗೆ ಕೊರತೆ ಎದು ರಾಗಲೂ ಹೇಗೆ ನಡೆದುಕೊಂಡಿದ್ದರು? 1998ರಲ್ಲಿ ಅಟಲ್ ಸರಕಾರ 1 ವೋಟಿನಿಂದ ಉರುಳಿತು. ಅಂದು ಅವರೂ ಖರೀದಿಗೆ ಇಳಿಯಬಹುದಿತ್ತಲ್ಲವೆ? ಜಾರ್ಖಂಡ್ ಮುಕ್ತಿ ಮೋರ್ಚಾ ಪಕ್ಷವನ್ನೇ ಸೂಟ್‌ಕೇಸ್ ನೀಡಿ ಬುಟ್ಟಿಗೆ ಹಾಕಿಕೊಳ್ಳುವ ಮೂಲಕ ಹೇಗೆ ಖರೀದಿ ಮಾಡಬಹುದೆಂಬುದನ್ನು ಪಿ.ವಿ. ನರಸಿಂಹರಾವ್ ಅದಾಗಲೇ ತೋರಿಸಿಕೊಟ್ಟಿದ್ದರು, ಮೇಲ್ಪಂಕ್ತಿ ಹಾಕಿಕೊಟ್ಟಿದ್ದರು. ಒರಿಸ್ಸಾದ ಮುಖ್ಯಮಂತ್ರಿಯಾಗಿದ್ದರೂ ಸಂಸದ ಸ್ಥಾನವನ್ನು ಉಳಿಸಿಕೊಂಡಿದ್ದ ಗಿರಿಧರ್ ಗಮಾಂಗ್ ಅನೈತಿಕವಾಗಿ ಮತಹಾಕಲಿದ್ದಾರೆ ಎಂದು ಗೊತ್ತಿದ್ದರೂ ಅಟಲ್ ಸಂಸದರ ಖರೀದಿಯಂತಹ ಕೆಲಸಕ್ಕೆ ಕೈಹಾಕಲಿಲ್ಲ. ಆದರೆ ಅದೇ ಬಿಜೆಪಿಯ ರಾಜ್ಯ ಸರಕಾರ ಏನು ಮಾಡುತ್ತಿದೆ? ಅಧಿಕಾರದ ಹಪಾಹಪಿ ಖಂಡಿತ ಎಲ್ಲರಲ್ಲೂ ಇರುತ್ತದೆ. ಇಂದು ಬಿಜೆಪಿಗೆ ಪಾಠ ಹೇಳುತ್ತಿರುವ ಸಿದ್ದರಾಮಯ್ಯನವರು ಯಾವ ಆಸೆ ಇಟ್ಟುಕೊಂಡು ಕಾಂಗ್ರೆಸ್ಸಿಗೆ ಬಂದರು, ತಮ್ಮನ್ನು ಪ್ರತಿಪಕ್ಷದ ನಾಯಕನನ್ನಾಗಿ ಮಾಡಲಿಲ್ಲ ಎಂದು ಯಾವ ರೀತಿ ಬೀದಿರಂಪ ಮಾಡಿದ್ದರು ಎಂಬುದು ಗೊತ್ತಿದೆ. ಅಮೆರಿಕದ ಜತೆಗಿನ ಅಣುಸಹಕಾರ ಒಪ್ಪಂದದ ವಿಷಯದಲ್ಲಿ ವಿರೋಧ ಪಕ್ಷಗಳೆಲ್ಲ ಒಗ್ಗೂಡಿ ಸರಕಾರವನ್ನು ಬೀಳಿಸಲು ಹೊರಟಾಗ ಕರ್ನಾಟಕದ ಬಿಜೆಪಿ ಸಂಸದರಾಗಿದ್ದ ಎಸ್ಪಿ ಸಾಂಗ್ಲಿಯಾನ, ಮನೋರಮಾ ಮಧ್ವರಾಜ್ ಅವರನ್ನು ಕಾಂಗ್ರೆಸ್ ಹೇಗೆ ಖರೀದಿಸಿತ್ತು ಎಂಬುದೂ ತಿಳಿದ ವಿಚಾರವೇ. ಈ ಹಿನ್ನೆಲೆಯಲ್ಲಿ ಬಿಜೆಪಿ ಆಪರೇಷನ್ ಕಮಲ ಮಾಡಿದ್ದನ್ನು ತಪ್ಪು ಎನ್ನುವುದಕ್ಕಾಗುವುದಿಲ್ಲ. ಆದರೆ ಮತ್ತೆ ಶಾಸಕರ ಖರೀದಿಗೆ ಮುಂದಾಗುವಂತಹ ಪರಿಸ್ಥಿತಿಯನ್ನು ಸೃಷ್ಟಿಸಿ ಕೊಂಡವರ್‍ಯಾರು? ಇಲ್ಲಿ ಗಮನಿಸಬೇಕಾದ ಸಂಗತಿ ಎಂದರೆ, ಬಿಜೆಪಿಯನ್ನು ಮೊದಲಿನಿಂದಲೂ ಕೋಮುವಾದಿಗಳು ಎಂದು ದೂರಿಕೊಂಡು ಬಂದಿದ್ದ ಪಾಳಯದಿಂದ, ವಿರೋಧ ಪಕ್ಷಗಳ ಕಡೆಯಿಂದ ಮಾತ್ರ ಈ ಬಾರಿ ಟೀಕೆ ಕೇಳಿಬರುತ್ತಿಲ್ಲ. ಬಿಜೆಪಿಯನ್ನು ಇಷ್ಟಪಟ್ಟ, ಇವರಿಗೆ ಒಂದು ಅವಕಾಶ ಕೊಡಬೇಕಪ್ಪ ಎಂದು ವಿಶ್ವಾಸ ವಿರಿಸಿ ಮತ ಹಾಕಿದ ಬಹುದೊಡ್ಡ ವರ್ಗ ಇಂದು ಭ್ರಷ್ಟಾಚಾರ ಸಂಬಂಧ ಬಿಜೆಪಿ ನಿಲುವನ್ನು ಆಘಾತ-ಆಕ್ರೋಶಗಳಿಂದ ನೋಡುತ್ತಿದೆ.

ಇಷ್ಟಾಗಿಯೂ ಸಂಘ ಪರಿವಾರದಲ್ಲಿ ಮಾತ್ರ ಈ ದಿವ್ಯಮೌನ ಏಕೆ? ಯಾವ ಪುರುಷಾರ್ಥಕ್ಕೆ?

ಭಯೋತ್ಪಾದನೆ ವಿರುದ್ಧ, ಇಸ್ಲಾಂ ಮೂಲಭೂತವಾದದ ವಿರುದ್ಧ, ನಮ್ಮ ಸಂಸ್ಕೃತಿ ಹಾಗೂ ನಮ್ಮತನದ ಚಹರೆಗಳನ್ನೇ ಅಳಿಸಿಹಾಕುವ ಮತಾಂತರವೆಂಬ ಪಿಡುಗಿನ ವಿರುದ್ಧ, ಒಟ್ಟಾರೆ ದೇಶದ ಸಾರ್ವಭೌಮತೆ ಕಾಪಾಡಿಕೊಳ್ಳುವ ಕಾಳಜಿಯ ಎಲ್ಲ ಹೋರಾಟಗಳಲ್ಲಿ ಸಂಘ ಪರಿವಾರ ಮುಂಚೂಣಿಯಲ್ಲಿದೆ. ಆ ಬಗ್ಗೆ ಅಭಿಮಾನವಿದೆ. ಆದರೆ, ಭ್ರಷ್ಟಾಚಾರವೂ ಕೂಡ ಅತಿ ಭೀಕರ ದೂರಗಾಮಿ ದುಷ್ಪರಿಣಾಮ ಹೊಂದಿದೆ ಎಂಬುದನ್ನು ಅರ್ಥೈಸಿಕೊಳ್ಳಲಾರದ ಅಸಮರ್ಥರೇ ಸಂಘದ ಮಂದಿ? ಚೀನಾ ನಮ್ಮ ಮೇಲೆ ಆಕ್ರಮಣ ಮಾಡಿಬಿಟ್ಟೀತು, ಪಾಕಿಸ್ತಾನದ ಬಗ್ಗೆ ಎಚ್ಚರಿಕೆಯಿಂದಿರಬೇಕು ಎಂದು ಆಗಾಗ ಧ್ವನಿ ಮೊಳಗಿಸುವ ಸಂಘ ಪರಿವಾರ, ಭ್ರಷ್ಟಾಚಾರಿಗಳನ್ನೂ ಭಯೋತ್ಪಾದಕರಂತೆ ಕಾಣಬೇಕು, ಅವರಿಂದಲೂ ಪ್ರಜಾಪ್ರಭುತ್ವಕ್ಕೆ ಭಾರಿ ಅಪಾಯವಿದೆ ಎಂದು ಸಾರುವ ನೈತಿಕ ಧಾಡಸಿತನವನ್ನು ತೋರಿಸುತ್ತಿಲ್ಲವೇಕೆ? ಭಾರತದ ಇತಿಹಾಸ ಹಾಗೂ ಸಂಸ್ಕೃತಿಗಳ ಬಗ್ಗೆ ನಿರರ್ಗಳವಾಗಿ ಮಾತನಾಡುವ ಸಂಘ ಪರಿವಾರ ಅದರಿಂದ ತಿಳಿದುಕೊಂಡಿರುವ ಎಚ್ಚರಿಕೆಯ ಧ್ವನಿ ಯಾವುದು ಹಾಗಾದರೆ? ಬ್ರಿಟಿಷರು ನಮ್ಮ ಮೇಲೆ ಆಧಿಪತ್ಯ ಸಾಧಿಸಿದ್ದು ಕತ್ತಿ ಗುರಾಣಿ, ಬಂದೂಕು-ಮದ್ದುಗುಂಡು ಹಿಡಿದುಕೊಂಡು ಸಮರ ಸಾರುವ ಮೂಲಕ ಅಲ್ಲ. ವ್ಯಾಪಾರಕ್ಕೆ ತಕ್ಕಡಿ ಹಿಡಿದುಕೊಂಡು ಬಂದು, ಇಲ್ಲಿ ಕಾಂಚಾಣದ ದುರಾಸೆಗೆ ಬಿದ್ದವರನ್ನು ದಾಳವಾಗಿಸಿಕೊಂಡು ಅಧಿಕಾರ ಸೂತ್ರ ಹಿಡಿದರು. ಇದೇನು ಆರೆಸ್ಸೆಸ್‌ಗೆ ಗೊತ್ತಿಲ್ಲದ ಸಂಗತಿ ಅಲ್ಲ. ಆದರೆ, ಇವತ್ತು ಅಂಥದೇ ಹಣ-ಅಧಿಕಾರದ ಆಸೆಗೆ ಬಿದ್ದು ಎಲ್ಲ ಕಾಯಿದೆ ಕಾನೂನುಗಳನ್ನು ಗಾಳಿಗೆ ತೂರಿ ‘ಭಾರತಾಂಬೆ’ಯ ಉದರ ಬಗೆದು ಚೀನಾಕ್ಕೆ ಅದಿರು ಸಾಗಿಸುವ ಜನರು ಅವತ್ತಿನ ‘ಮೀರ್ ಜಾಫರ್’ ಗಳಿಗಿಂತ ಭಿನ್ನರಾಗಿರಲು ಸಾಧ್ಯವೇ ಇಲ್ಲ ಎಂಬ ಸರಳ ಸತ್ಯ ಸಂಘ ಪರಿವಾರಕ್ಕೆ ಅರ್ಥವಾಗುತ್ತಿಲ್ಲವೇ? ದುಡ್ಡು-ಅಧಿಕಾರ ಸಿಗುತ್ತದೆ ಎಂದಾದರೆ ಈ ನೆಲವನ್ನು ಯಾರಿಗೆ ಬೇಕಾದರೂ ಅಗೆದುಕೊಡಲು, ಇಲ್ಲಿನ ಬಡವರ ಬದುಕನ್ನು ಮೂರಾಬಟ್ಟೆ ಮಾಡಲು, ಡೀನೋಟಿಫೈ ಮಾಡಿ ರಿಯಲ್ ಎಸ್ಟೇಟ್ ದಂಧೆಯಲ್ಲಿ ತೊಡಗಿರುವವರಿಂದ ದುಡ್ಡು ಬಾಚಿಕೊಳ್ಳಲು ಇವರೆಲ್ಲ ಸದಾಸಿದ್ಧರು. ‘ಈ ಭೂಮಿ ಬರಿ ಮಣ್ಣಿನ ಕಣವಲ್ಲ’ ಎಂದು ಭಾವನಾತ್ಮಕವಾಗಿ ಮಾತನಾಡುವ ಸಂಘ ಪರಿವಾರಕ್ಕೆ ಇವೆಲ್ಲ ಗೊತ್ತಿದ್ದೂ ಮೌನವಾಗಿರುವ ನಿಕೃಷ್ಟ ಪರಿಸ್ಥಿತಿ ಒದಗಿಬಿಟ್ಟಿದೆಯೇ?

ಹಾಗಾದರೆ, ಬಿಜೆಪಿ ಸರಕಾರವನ್ನು ಟೀಕಿಸುವ ಪರಂಪರೆಯೇ ಸಂಘ ಪರಿವಾರದಲ್ಲಿಲ್ಲವೇ ಎಂದು ಯೋಚಿಸಹೋದರೆ ಗುಜರಾತ್‌ನ ನರೇಂದ್ರ ಮೋದಿಯವರು ಕಣ್ಣಿಗೆ ಬರುತ್ತಾರೆ. ಸಂಘ ಪರಿವಾರದಿಂದಲೇ ಹೋಗಿ ಇವತ್ತು ಜನಪ್ರಿಯ ಮುಖ್ಯಮಂತ್ರಿ ಅಷ್ಟೇ ಅಲ್ಲದೇ ರಾಷ್ಟ್ರೀಯ ಸ್ತರದ ನಾಯಕರಾಗಿ ಬೆಳೆದಿರುವವರು ಮೋದಿ. ಸಂಘ ಪರಿವಾರ ಪ್ರತಿಪಾದಿಸುವ ಹಿಂದುತ್ವದ ಬಗ್ಗೆ ಅಚಲ ಶ್ರದ್ಧೆ ಇರುವ ಬಿಜೆಪಿಗರನ್ನು ಪಟ್ಟಿ ಮಾಡಲು ಹೋದರೆ ನರೇಂದ್ರ ಮೋದಿ ಅಲ್ಲಿ ಮೊದಲ ಸ್ಥಾನದಲ್ಲಿ ನಿಲ್ಲುವ ವರ್ಚಸ್ಸು ಹೊಂದಿರುವವರು. ಇಂಥ ಮೋದಿ ಈಗೊಂದು ಎರಡು ವರ್ಷಗಳ ಹಿಂದೆ ರಸ್ತೆ ಪಕ್ಕದಲ್ಲಿ ಅನುಮತಿ ಇಲ್ಲದೇ ತಲೆ ಎತ್ತಿರುವ ಧಾರ್ಮಿಕ ನಿರ್ಮಿತಿಗಳನ್ನೆಲ್ಲ ತೆರವುಗೊಳಿಸಿ ವಿಸ್ತರಣೆಗೆ ಕ್ರಮ ಕೈಗೊಂಡರು. ಹೀಗೆ ರಸ್ತೆ ಪಕ್ಕ ನಿಂತಿರುವ ನಿರ್ಮಾಣಗಳ ಪೈಕಿ ಮುಸ್ಲಿಮರಿಗೆ ಸೇರಿದ್ದ ಜಾಗಗಳಿದ್ದವು. ಹಾಗೆಯೇ 90 ದೇಗುಲ-ಗುಡಿಗಳೂ ನೆಲಸಮವಾದವು. ಅವ್ಯಾವವೂ ಚಾರಿತ್ರಿಕ ಮಹತ್ವ ಹೊಂದಿರುವಂಥವಲ್ಲ ಎಂಬುದು ನಿರ್ವಿವಾದ. ಆ ಸಂದರ್ಭದಲ್ಲಿ ವಿಎಚ್‌ಪಿ, ಬಜರಂಗ ದಳ ಹಾಗೂ ಇನ್ನಿತರ ಕೇಸರಿ ಸಂಘಟನೆಗಳು ಅದ್ಯಾವ ಪರಿ ಆಕ್ರೋಶ ವ್ಯಕ್ತಪಡಿಸಿದವು ಎಂಬುದನ್ನು ಒಮ್ಮೆ ನೆನಪಿಸಿಕೊಳ್ಳಬೇಕು. ರಸ್ತೆ ಪಕ್ಕದಲ್ಲಿ ಅಕ್ರಮವಾಗಿ ತಲೆ ಎತ್ತಿದ ಗುಡಿಗಳೂ ಹಿಂದುತ್ವದ ಹೆಗ್ಗುರುತುಗಳು ಎಂಬಂತೆ ಗುಜರಾತ್‌ನ ವಿಎಚ್‌ಪಿ ರಾಜ್ಯ ಕಾರ್‍ಯದರ್ಶಿ ರಾಂಚೋಡ್ ಭಾರದ್ವಾಜ್ ಅವರು, ‘ಮೋದಿ ಧ್ವಂಸಗೊಳಿಸುತ್ತಿರುವುದು ದೇಗುಲಗಳನ್ನಲ್ಲ, ಹಿಂದುತ್ವವನ್ನು’ ಎಂದೆಲ್ಲ ಅಬ್ಬರಿಸಿದ್ದರು. ಈ ಸಂಘರ್ಷ ಮಾಧ್ಯಮಗಳಲ್ಲೂ ಸಾಕಷ್ಟು ಜಾಗ ಪಡೆದುಕೊಂಡಿತು. ನಮ್ಮ ಪ್ರಶ್ನೆಯಿಷ್ಟೆ. ‘ಹಿಂದು ಹೃದಯ ಸಾಮ್ರಾಟ’ ಎಂದೇ ಅಭಿಮಾನದಿಂದ ಕರೆಸಿಕೊಳ್ಳುವ ನರೇಂದ್ರಮೋದಿಯವರ ಹಿಂದುತ್ವದ ಬದ್ಧತೆಯನ್ನು ಪ್ರಶ್ನಿಸುವುದಕ್ಕೆ ಸಂಘಕ್ಕೆ ಧ್ವನಿ ಇದೆ. ಆದರೆ ಕರ್ನಾಟಕ ರಾಜ್ಯ ಸರಕಾರದ ಧೋರಣೆ ಬಗ್ಗೆ ಒಂದು ಹೇಳಿಕೆ ನೀಡುವುದಕ್ಕೂ ಶಕ್ತಿಯಿಲ್ಲವೆ?

ಇವತ್ತು ಆರೆಸ್ಸೆಸ್ ಪ್ರಮುಖರು ಹೇಳಬೇಕು, ಯಾವುದು ಸಂಸ್ಕೃತಿ ಅಂತ?

ದೇಶಭಕ್ತಿ-ಸಂಘ ಪರಿವಾರ ಎಂದರೆ ಕೆಜಿಗೆಷ್ಟು ಎಂದು ಕೇಳುವ ಮನಸ್ಥಿತಿ ಇರುವವರನ್ನು ಖರೀದಿಸಿ ತಂದು ಕಮಲ ಅರಳಿಸುವುದೇ? ಯಾವ ಶಿಸ್ತಿನ ಮೂಲಕವೇ ಐಡೆಂಟಿಟಿ ಗಳಿಸಿಕೊಳ್ಳಲಾಗಿತ್ತೋ ಅದರ ತಲೆಮೇಲೆ ಹೊಡೆಯುವಂತೆ ಸಂಪುಟದ ಶಾಸಕರು ವ್ಯಭಿಚಾರ ವಿನೋದಾವಳಿಯಲ್ಲಿ ನಿರತರಾಗಿರುವುದನ್ನು ಸುಮ್ಮನೇ ನೋಡಿಕೊಂಡಿರುವುದೇ? ಈ ಹಂತದಲ್ಲಾದರೂ ಸಂಘ ಪರಿವಾರ ಮಾತನಾಡಬೇಕು. ಖಂಡಿತ ಯಡಿಯೂರಪ್ಪನವರಾಚೆಗೆ ಸರಕಾರ ನಡೆಸುವ ಸಾಮರ್ಥ್ಯವಿರುವ ಯಾವ ನಾಯಕರೂ ಬಿಜೆಪಿಯಲ್ಲಿ ಕಾಣುವುದಿಲ್ಲ. ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿ ಮುಂದುವರಿಯುವುದು ಪಕ್ಷದ ಹಿತದೃಷ್ಟಿಯಿಂದಲೂ ಅಗತ್ಯ. ಒಂದು ವೇಳೆ ಸರಕಾರವೇನಾದರೂ ಎಚ್ಚೆತ್ತುಕೊಂಡು ಇನ್ನುಳಿದ ಎರಡೂವರೆ ವರ್ಷ ಒಳ್ಳೆಯ ಆಡಳಿತ ನೀಡಿದರೆ ಮಾತ್ರ ಬಿಜೆಪಿ ಮತದಾರ ಮತ್ತೆ ಎದೆಯುಬ್ಬಿಸಿ ಇದು ‘ನಮ್ಮ ಸರಕಾರ’ ಎನ್ನುತ್ತಾನೆ. ಹಾಗಾಗಿ ಮುಖ್ಯಮಂತ್ರಿ ಹಾಗೂ ಅವರ ಸಂಪುಟದ ಸದಸ್ಯರಿಗೆ ಸಂಘದ, ಪಕ್ಷದ ಹಿನ್ನೆಲೆಯನ್ನು ಕಿವಿಹಿಂಡಿ ನೆನಪಿಸಿಕೊಡಬೇಕು. ತನ್ನ ಹೊಕ್ಕುಳ ಬಳ್ಳಿಯಾದ ಬಿಜೆಪಿ ಮಾಡುತ್ತಿರುವ ತಪ್ಪನ್ನೇ ಖಂಡಿಸದಿದ್ದರೆ ರಾಷ್ಟ್ರದ ಇತರ ಸಮಸ್ಯೆಗಳ ಬಗ್ಗೆ ಮಾತನಾಡುವ ನೈತಿಕತೆ ಹಕ್ಕನ್ನೇ ಸಂಘ ಕಳೆದುಕೊಳ್ಳಬೇಕಾಗುತ್ತದೆ. ಸಮಸ್ತೆ ಸದಾ ವತ್ಸಲೆ ಎಂದು ಪ್ರಾರ್ಥನೆಯಲ್ಲೇ ಮೈಮರೆತರೆ ಆ ವತ್ಸಲೆಯೂ ಕ್ಷಮಿಸಳು!

ಕೃಪೆ : ಪ್ರತಾಪ್ ಸಿಂಹ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ