ನನ್ನ ಬ್ಲಾಗ್ ಪಟ್ಟಿ

ಶನಿವಾರ, ಡಿಸೆಂಬರ್ 4, 2010

ಆಡ್ವಾಣಿಯವರ ದೂರಾಲೋಚನೆ, ಸುಷ್ಮಾ ಸ್ವರಾಜ್‌ರ ದುರಾ ಲೋಚನೆ

2010, ಅಕ್ಟೋಬರ್ 19, ಮೋತಿಹಾರಿ, ಮುಜಫ್ಫರ್‌ಪುರ, ಬಿಹಾರ.

ಅಂದು ಚುನಾವಣಾ ರ್‍ಯಾಲಿಯನ್ನುದ್ದೇಶಿಸಿ ಮಾತನಾಡುತ್ತಿದ್ದ ಬಿಜೆಪಿಯ ಮೇರು ನೇತಾರ ಲಾಲ್ ಕೃಷ್ಣ ಆಡ್ವಾಣಿಯವರು, ಗುಜರಾತ್‌ನ ವಿಕಾಸ ಪುರುಷ ನರೇಂದ್ರ ದಾಮೋದರದಾಸ್ ಮೋದಿಯವರ ಹೆಸರು ಪ್ರಸ್ತಾಪಿಸಿದರು. “ಗುಜರಾತ್‌ನಲ್ಲಿ ಮುಸ್ಲಿಮರು ಅತ್ಯುತ್ತಮ ಸೌಲಭ್ಯಗಳನ್ನು ಹೊಂದಿದ್ದಾರೆ ಹಾಗೂ ಗುಜರಾತ್ ಮುಸ್ಲಿಮರ ತಲಾ ಆದಾಯ ಇತರ ರಾಜ್ಯಗಳಿಗಿಂತ ಹೆಚ್ಚಿದೆ. ಮೋದಿಯವರನ್ನು ಮಾಧ್ಯಮಗಳು ನಕಾರಾತ್ಮಕವಾಗಿ ಚಿತ್ರಿಸುತ್ತವೆ ಎಂಬುದು ಬೇರೆ ಮಾತು, ಆದರೆ ಸಮಾಜದ ಎಲ್ಲ ಸ್ತರ, ಸಮುದಾಯಗಳಿಗೆ ಸೇರಿದ ಜನರೂ ಗುಜರಾತ್‌ನಲ್ಲಿ ಬಹಳ ಖುಷಿಯಿಂದಿದ್ದಾರೆ” ಎಂದರು. ಆಡ್ವಾಣಿ ಮಾತ್ರವಲ್ಲ, ಬಿಜೆಪಿಯಲ್ಲಿರುವ ಅತಿದೊಡ್ಡ ಮುಸ್ಲಿಂ ಧುರೀಣೆ ನಜ್ಮಾ ಹೆಫ್ತುಲ್ಲಾ ಕೂಡ ಮೋದಿಯವರನ್ನು ಮುಕ್ತಕಂಠದಿಂದ ಶ್ಲಾಘಿಸಿದರು. “ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಆರಕ್ಕೆ ಆರೂ ಮಹಾನಗರ ಪಾಲಿಕೆಗಳನ್ನು ಗೆದ್ದುಕೊಂಡ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿಯವರ ವಿಜಯದ ಅಲೆ ನೆರೆಯ ದಾದ್ರಾ ಹಾಗೂ ನಗರ್ ಹವೇಲಿಗೂ ಅಪ್ಪಳಿಸಿದೆ. ಆ ಕಾರಣಕ್ಕಾಗಿಯೇ ಅಲ್ಲಿ ನಡೆದ ಚುನಾವಣೆಯನ್ನು ಬಿಜೆಪಿ ಗೆದ್ದುಕೊಂಡಿದೆ” ಎಂದರು.

2010, ಅಕ್ಟೋಬರ್ 25, ಪಟನಾ, ಬಿಹಾರ.

ಆಡ್ವಾಣಿ ಹಾಗೂ ಹೆಫ್ತುಲ್ಲಾ ಅವರು ಮೋದಿಯ ವರನ್ನು ಹೊಗಳಿದ್ದು ಸೆಕ್ಯುಲರ್ ಮಾಧ್ಯಮಗಳು ಹಾಗೂ ಮುಸ್ಲಿಮರಿಗಿಂತಲೂ ಹೆಚ್ಚು ಕೋಪ ತರಿಸಿದ್ದು ಒಳಗೊಳಗೇ ಪ್ರಧಾನಿ ಕನಸನ್ನು ಪೋಷಿಸುತ್ತಿರುವ ಸುಷ್ಮಾಸ್ವರಾಜ್ ಎಂಬ ಬಿಜೆಪಿಯ ಸ್ವಘೋಷಿತ ಭಾರತ ಮಾತೆಗೆ! ಚುನಾವಣಾ ಪ್ರಚಾರ ಸಭೆಯನ್ನು ದ್ದೇಶಿ ಮಾತನಾಡಲು ಬಿಹಾರ ರಾಜಧಾನಿ ಪಟನಾಕ್ಕೆ ಆಗಮಿಸಿದ್ದ ಸುಷ್ಮಾಸ್ವರಾಜ್ ಅವರನ್ನು, ‘ನರೇಂದ್ರ ಮೋದಿಯವರೇಕೆ ಬಿಹಾರ ಪ್ರಚಾರಕ್ಕೆ ಬಂದಿಲ್ಲ?’ ಎಂದು ಮಾಧ್ಯಮಗಳು ಕೇಳಿದಾಗ, “ಮೋದಿ ಮ್ಯಾಜಿಕ್ ಎಲ್ಲಾ ಕಡೆ ನಡೆಯುವುದಿಲ್ಲ” ಎಂದು ಬಿಡಬೇಕೆ ಆಕೆ!

ಅದು ಬಿಜೆಪಿಯನ್ನೇ ದಿಗ್ಭ್ರಮೆಗೊಳಿಸಿತು.

ಒಂದು ಕಡೆ, ಪಕ್ಷವನ್ನು ಕೇಂದ್ರದಲ್ಲಿ ಮತ್ತೆ ಅಧಿಕಾರಕ್ಕೆ ತರುವ ತಾಕತ್ತಿರುವುದು ನರೇಂದ್ರ ಮೋದಿಯವರಿಗೆ ಮಾತ್ರ ಎಂದು ಬಿಜೆಪಿ ಯೋಚಿಸುತ್ತಿರುವಾಗ ಈ ಸುಷ್ಮಕ್ಕನಿಗೆ ಮೋದಿ ಮೇಲೆ ಅದೇಕೆ ಈ ಪರಿ ಕೋಪ? ಬಿಹಾರದಲ್ಲಿ ೧೬ ಪರ್ಸೆಂಟ್ ಮುಸ್ಲಿಂ ಮತದಾರರಿದ್ದು ಮೋದಿ ಹಾಗೂ ವರುಣ್ ಗಾಂಧಿ ಪ್ರಚಾರಕ್ಕೆ ಬಂದರೆ ಪ್ರತಿಕೂಲ ಪರಿಣಾಮವಾಗಬಹುದೆಂಬ ಭಯ ಮುಖ್ಯಮಂತ್ರಿ ನಿತೀಶ್ ಕುಮಾರ್‌ಗಿದೆ. ಹಾಗಾಗಿ ಇವರಿಬ್ಬರ ಆಗಮನಕ್ಕೆ ಅಡ್ಡಗಾಲು ಹಾಕಿದ್ದಾರೆ. ಇದು ಎಲ್ಲರಿಗೂ ಗೊತ್ತಿರುವ ವಿಚಾರವೇ. ಅದನ್ನು ನೇರವಾಗಿ ಯಾರೂ ಒಪ್ಪಿಕೊಳ್ಳುತ್ತಿಲ್ಲ. ಈ ಹಿನ್ನೆಲೆಯಲ್ಲಿ, ‘ಬಿಹಾರ ಚುನಾವಣೆ ಪ್ರಚಾರಕ್ಕೆ ಬಿಜೆಪಿಯ ಸ್ಥಳೀಯ ನಾಯಕರು ಹಾಗೂ ಕೆಲ ರಾಷ್ಟ್ರನಾಯಕರು ಸಾಕೆಂದು ನಿರ್ಧಾರ ಕೈಗೊಂಡಿದ್ದೇವೆ’ ಎಂಬ ಬಿಜೆಪಿಯ ಸಹಜ ಸ್ಪಷ್ಟನೆಯನ್ನೇ ಸುಷ್ಮಾ ಸ್ವರಾಜ್ ಕೂಡ ಪುನರುಚ್ಚರಿಸ ಬಹುದಿತ್ತು. ಅದನ್ನು ಬಿಟ್ಟು ಮೋದಿ ಮ್ಯಾಜಿಕ್ ಎಲ್ಲಾ ಕಡೆ ನಡೆಯುವುದಿಲ್ಲ ಎಂಬ ನಂಜಿನ ಮಾತನಾಡಿ ದ್ದೇಕೆ?

ಈ ಸುಷ್ಮಾ ಸ್ವರಾಜ್ ಅವರನ್ನು ಬಹಳ ಸಾಧು ಮಹಿಳೆ ಎಂದುಕೊಳ್ಳಬೇಡಿ. ಇತ್ತೀಚೆಗೆ ಕರ್ನಾಟಕದಲ್ಲಿ ನಡೆದ ಬಂಡಾಯ ಪ್ರಹಸನದ ವೇಳೆ ಮಾಧ್ಯಮಗಳನ್ನು ಬಹಳ ಚೆನ್ನಾಗಿ ನಿಭಾಯಿಸಿದ ಚಿಕ್ಕಮಗಳೂರು ಶಾಸಕ ಸಿ.ಟಿ. ರವಿ ಅವರು, ಚಾನೆಲ್‌ಲ್ಲೊಂದರಲ್ಲಿ ಮಾತನಾಡುತ್ತಾ ಹಾಲಿ ಬಿಜೆಪಿಯಲ್ಲಿರುವವರನ್ನು ೩ ವಿಧವಾಗಿ ವಿಂಗಡಿಸಬಹುದು ಎಂದರು. ಅದು ನಿಜಕ್ಕೂ ಅರ್ಥಗರ್ಭಿತ ವಿಂಗಡಣೆಯಾಗಿತ್ತು. 1. ಸೈದ್ಧಾಂತಿಕವಾಗಿ ಬಿಜೆಪಿಯಲ್ಲಿರುವವರು. 2. ವ್ಯಾವಹಾರಿಕವಾಗಿ ಬಿಜೆಪಿಯಲ್ಲಿರುವವರು ಹಾಗೂ 3. ಹುದ್ದೆಗಾಗಿ ಬಿಜೆಪಿಯಲ್ಲಿರುವವರು. ಈ ಸುಷ್ಮಾ ಸ್ವರಾಜ್ ಅವರಾಗಲಿ, ಆಕೆಯ ದತ್ತುಪುತ್ರರಾದ ರೆಡ್ಡಿ ಬ್ರದರ್ಸ ಆಗಲಿ ಸೈದ್ಧಾಂತಿಕವಾಗಿ ಬಿಜೆಪಿಯಲ್ಲಿ ರುವವರಲ್ಲ ಎಂದು ಬಿಡಿಸಿ ಹೇಳಬೇಕೇನು?!

ಮೂವತ್ತು ವರ್ಷಗಳ ಹಿಂದಿನ, ಆದರೆ ಸಂಘದ ಕೆಲ ಹಳಬರಿಗೆ ಮಾತ್ರ ತಿಳಿದಿರುವ ಘಟನೆ ಯೊಂದನ್ನು ನೆನಪಿಸಿಕೊಳ್ಳುವುದೊಳಿತು. ಸುಷ್ಮಾ ಸ್ವರಾಜ್ ಮೂಲತಃ ಜನತಾ ಪರಿವಾರದಿಂದ ಬಂದವರು. ಜನತಾ ಪಕ್ಷದಿಂದ ಆಯ್ಕೆಯಾಗಿ ಹರಿಯಾಣಾದ ದೇವಿಲಾಲ್ ಸರಕಾರದಲ್ಲಿ ಕಾರ್ಮಿಕ ಹಾಗೂ ಉದ್ಯೋಗ ಖಾತೆ ಸಚಿವೆಯಾಗಿದ್ದ ಸುಷ್ಮಾ ಸ್ವರಾಜ್ ವೃತ್ತಿಯಿಂದ ವಕೀಲೆಯಾಗಿದ್ದವರು. ಆಕೆ ಯನ್ನು ಒಮ್ಮೆ ಬೆಂಗಳೂರಿನ ಬಾರ್ ಕೌನ್ಸಿಲ್‌ಗೆ ಕರೆಸಲಾಗಿತ್ತು. ಆ ಸಂದರ್ಭದಲ್ಲಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ಕೆಲವು ಪ್ರಶ್ನೆಗಳನ್ನು ಕೇಳಿದಾಗ ಇರಸು-ಮುರಸುಗೊಂಡು “ನೀವೆಲ್ಲ ಆ ‘ಆರ್ಗನೈಸರ್’ ಹಾಗೂ ‘ಪಾಂಚಜನ್ಯ’ ಪತ್ರಿಕೆಗಳನ್ನು ಓದಿಕೊಂಡು ಬಂದು ಪ್ರಶ್ನೆ ಕೇಳುತ್ತಿದ್ದೀರಿ” ಎಂದು ಕೋಪತಾಪ ವ್ಯಕ್ತಪಡಿಸಿದ್ದರು!! ರಾಷ್ಟ್ರೀಯ ಸ್ವಯಂ ಸೇವಕ ಸಂಘ ನಡೆಸುವ ಈ ಪತ್ರಿಕೆಗಳನ್ನು ನಿಕೃಷ್ಟವಾಗಿ ಕಂಡಿದ್ದ ಈ ಮಹಿಳೆ ಇಂದು ಬಿಜೆಪಿಯಲ್ಲಿ ದೊಡ್ಡ ಸ್ಥಾನಕ್ಕೇರಿರಬಹುದು, ಆದರೆ ಆಕೆ ಸೈದ್ಧಾಂತಿಕವಾಗಿ ಬಿಜೆಪಿಯಲ್ಲಿರುವವರಲ್ಲ. ಒಂದು ವೇಳೆ, ಆಕೆಯೇನಾ ದರೂ ಈ ದೇಶ, ನೆಲ, ಜಲ, ಸಂಸ್ಕೃತಿಯ ಬಗ್ಗೆ ಕಾಳಜಿ ಇಟ್ಟುಕೊಂಡು ಸೈದ್ಧಾಂತಿಕವಾಗಿ ಬಿಜೆಪಿಯಲ್ಲಿದ್ದಿದ್ದರೆ ‘ಹಿಂದು ಹೃದಯ ಸಾಮ್ರಾಟ’ ಎಂದೇ ಹೆಸರು ಗಳಿಸಿಕೊಂಡಿರುವ ನರೇಂದ್ರ ಮೋದಿಯವರ ಜನಪ್ರಿಯತೆ ಬಗ್ಗೆ ಹೀಗೆ ಸಾರ್ವಜನಿಕವಾಗಿ ತಮ್ಮ ಅಸಹನೆಯನ್ನು ಕಕ್ಕಿಕೊಳ್ಳುತ್ತಿದ್ದರೆ? ಅಟಲ್ ಬಿಹಾರಿ ವಾಜಪೇಯಿ ಹಾಗೂ ಲಾಲ್ ಕೃಷ್ಣ ಆಡ್ವಾಣಿಯವರು ತಮ್ಮ ೫೦ ವರ್ಷಗಳಿಗೂ ಮೀರಿದ ರಾಜಕೀಯ ಜೀವನದಲ್ಲಿ ಎಂದಾದರೂ ಹೀಗೆ ಪರಸ್ಪರರ ವಿರುದ್ಧ ಹೇಳಿಕೆ ಕೊಟ್ಟಿದ್ದನ್ನು ಕೇಳಿದ್ದೀರಾ? ಸತ್ತರೆ ಹೊರಲು ನಾಲ್ಕು ಜನರೂ ಇಲ್ಲ ಎಂದು 1984ರಲ್ಲಿ ಸಂಸತ್ತಿನಲ್ಲಿ ಹಂಗಿಸಿಕೊಂಡಿದ್ದ ಪಕ್ಷವನ್ನು ಪಾತಾಳದಿಂದ ಮೇಲಕ್ಕೆತ್ತಿ ಗದ್ದುಗೆಯ ಸಮೀಪ ಕೊಂಡೊಯ್ದಿದ್ದು ಆಡ್ವಾಣಿ ಯವರು. ಆದರೆ ಪ್ರಧಾನಿಯಾಗಿದ್ದು ವಾಜಪೇಯಿ! ಅಷ್ಟೇಕೆ, ಅಟಲ್ ಅವರೇ ನಮ್ಮ ಪ್ರಧಾನಿ ಅಭ್ಯರ್ಥಿ ಎಂದು ಸಾರ್ವಜನಿಕವಾಗಿ ಘೋಷಿಸಿದ್ದೇ ಆಡ್ವಾಣಿ. ಹೀಗೆ ನಿಸ್ವಾರ್ಥವಾಗಿ ಪಕ್ಷ ಕಟ್ಟಿದ ಆಡ್ವಾಣಿಯವರು ಅಲಂಕರಿಸಿದ್ದ ಪ್ರತಿಪಕ್ಷ ನಾಯಕನ ಸ್ಥಾನಕ್ಕೆ ಬಂದು ಕುಳಿತಿರುವ ಸುಷ್ಮಾ ಸ್ವರಾಜ್ ನಡೆದುಕೊಳ್ಳುತ್ತಿರುವ ರೀತಿ ಹೇಗಿದೆ? ಕಳೆದ ಚುನಾವಣೆಯಲ್ಲಿ ಎನ್‌ಡಿಎಯ ಪ್ರಧಾನಿ ಅಭ್ಯರ್ಥಿಯಾಗಿದ್ದ ಆಡ್ವಾಣಿಯವರೇ ತಮಗಿಂತ ವಯಸ್ಸು, ಅನುಭವ ಎಲ್ಲದರಲ್ಲೂ ತೀರಾ ಕಿರಿಯವರಾದ ಮೋದಿಯವರ ಬಗ್ಗೆ ಸಿಕ್ಕ ಅವಕಾಶಗಳಲ್ಲೆಲ್ಲ ಹೊಗಳುತ್ತಾರೆ. ಮುಂದಿನ ಪ್ರಧಾನಿ ಅಭ್ಯರ್ಥಿ ಮೋದಿಯವರಾದರೆ ಮಾತ್ರ ಬಿಜೆಪಿಗೆ ಉಳಿಗಾಲ ಎಂಬ ದೂರದೃಷ್ಟಿ, “ದೂರಾಲೋಚನೆ” ಆಡ್ವಾಣಿಯವರಿಗಿದ್ದರೆ ಈ ಸುಷ್ಮಾಗೇಕೆ ಬರೀ “ದುರಾ”ಲೋಚನೆ?!

ಹಾಗೆ ನೋಡಿದರೆ ಸುಷ್ಮಾಗಿಂತ ಅರುಣ್ ಜೇಟ್ಲಿಯವರೇ ಬಿಜೆಪಿಯಲ್ಲಿ ಪ್ರಭಾವಿ ನಾಯಕ. ಅವರು ಚುನಾವಣೆಯಲ್ಲಿ ಸ್ಪರ್ಧಿಸದಿರಬಹುದು, ಆದರೆ ಮಾಧ್ಯಮಗಳಲ್ಲಿ ನಡೆಯುವ ವಾಕ್ಸಮರವನ್ನು ಗೆಲ್ಲುವುದು ಅದಕ್ಕಿಂತ ದೊಡ್ಡ ಸವಾಲು. ಕಪಿಲ್ ಸಿಬಲ್, ಅಭಿಷೇಕ್ ಮನುಸಿಂಘ್ವಿ, ಸೀತಾರಾಮ್ ಯೆಚೂರಿಯವರಂತಹ ಮಾತಿನ ಮಲ್ಲರನ್ನು ಮಣಿಸುವುದು ಸಾಮಾನ್ಯ ಮಾತೇ? ಅತ್ಯುತ್ತಮ ಇಂಗ್ಲಿಷ್ ಭಾಷೆ ಹಾಗೂ ತಾರ್ಕಿಕ ವಾದ ಎರಡೂ ಇರಬೇಕು. ಇವೆಲ್ಲವನ್ನೂ ಮೈಗೂಡಿಸಿಕೊಂಡಿರುವ ಏಕಮಾತ್ರ ಬಿಜೆಪಿ ವಕ್ತಾರ, ನೇತಾರ ಜೇಟ್ಲಿ. ಅಂತಹ ಜೇಟ್ಲಿಯವರು “ನರೇಂದ್ರ ಮೋದಿ: ಯಾರೂ ತುಳಿಯದ ಹಾದಿ” ಪುಸ್ತಕ ಬಿಡುಗಡೆಗೆ ಬಂದಿದ್ದಾಗ ಗುಜರಾತ್‌ನ ನಾಯಕನ ಬಗ್ಗೆ ಮುಕ್ತಕಂಠದಿಂದ ಶ್ಲಾಘಿಸಿದ್ದರು. ನರೇಂದ್ರ ಮೋದಿ ಬಿಜೆಪಿಯ ಮುಂದಿನ ಪ್ರಧಾನಿ ಅಭ್ಯರ್ಥಿಯಾಗಬೇಕು ಎಂದು ಜೇಟ್ಲಿಯವರೇ ಹೇಳುತ್ತಾರೆ. ಬಿಜೆಪಿ ಅಧ್ಯಕ್ಷ ನಿತಿನ್ ಗಡ್ಕರಿ ಅಭಿಪ್ರಾಯವೂ ಅದೇ. ಹುಟ್ಟಾ ಬಿಜೆಪಿ ನಾಯಕರೇ ವೈಯಕ್ತಿಕ ಮಹತ್ವಾಕಾಂಕ್ಷೆ ಬಿಟ್ಟು ಮೋದಿಯವರ ಬಗ್ಗೆ ಒಲವು ತೋರುತ್ತಿರುವಾಗ ಬಳ್ಳಾರಿ ರೆಡ್ಡಿಗಳ ಈ ಮಹಾತಾಯಿಗೇಕೆ ಮತ್ಸರ? ಮೋದಿ ಮ್ಯಾಜಿಕ್ ಎಲ್ಲ ಕಡೆಯೂ ನಡೆಯುವುದಿಲ್ಲ ಎನ್ನುವಾಗ ಈಕೆಯ ಭಾಷಣ ಕೇಳಲು ಅದೆಷ್ಟು ಜನ ಬರುತ್ತಾರೆ ಎಂದು ಎಂದಾದರೂ ಯೋಚಿಸಿದ್ದಾರಾ? ೧೯೮೦ರ ದಶಕದ ಮಧ್ಯಭಾಗದಲ್ಲಿ ದೂರದರ್ಶನದಲ್ಲಿ ಪ್ರಸಾರವಾಗುತ್ತಿದ್ದ ‘ರಾಮಾಯಣ’, ‘ಮಹಾಭಾರತ’ ಧಾರಾವಾಹಿಗಳಲ್ಲಿದ್ದಂಥ ಗ್ರಾಂಥಿಕ ಹಿಂದಿಯಲ್ಲಿ ಮಾತನಾಡುವ ವಿಜಯ್ ಕುಮಾರ್ ಮಲ್ಹೋತ್ರಾ ಹಾಗೂ ಸುಷ್ಮಾ ಸ್ವರಾಜ್‌ರ ಮಾತು ಕೇಳುವುದೆಂದರೆ it’s a pain! ಆದರೆ ಅಟಲ್ ನಂತರ ಬಿಜೆಪಿಯಲ್ಲಿ ರುವ ಅತ್ಯುತ್ತಮ ವಾಗ್ಮಿಯೆಂದರೆ ಮೋದಿ. ಅವರ ಬಗ್ಗೆ ಮಾತನಾಡುವುದಕ್ಕೂ ಒಂದು ಯೋಗ್ಯತೆ ಬೇಕು. ಅದಿರಲಿ, ವಾಜಪೇಯಿ ಸರಕಾರದಲ್ಲಿ ೬ ವರ್ಷ ಮಂತ್ರಿಯಾಗಿದ್ದ ಸುಷ್ಮಾ ಸ್ವರಾಜ್ ಮಾಡಿದ ಘನ ಕೆಲಸವಾದರೂ ಯಾವುದು? ಆಕೆ ಮಾಡಿದ ಒಂದಾ ದರೂ ಒಳ್ಳೆಯ ಕಾರ್ಯ ಅಥವಾ ಸಾಧನೆಯನ್ನು ಹೇಳಿ ನೋಡೋಣ?

ಇತ್ತ ಮೋದಿ ಎಂದರೆ ಸಾಮಾನ್ಯ ವ್ಯಕ್ತಿಯೇ?

ಅದು ಕೇಂದ್ರವಿರಲಿ, ರಾಜ್ಯ ಸರಕಾರಗಳಿರಲಿ, ಕಾಂಗ್ರೆಸ್ ಆಗಿರಲಿ, ಬಿಜೆಪಿ ಇರಲಿ, ಇಡೀ ದೇಶಕ್ಕೆ ದೇಶವೇ ಭ್ರಷ್ಟಾಚಾರದ ಕೂಪದಲ್ಲಿ ಬಿದ್ದಿರುವಾಗ, “ಸಾರ್ವಜನಿಕ ಸೇವೆಯಲ್ಲಿ ಪಾರದರ್ಶಕತೆ, ಹೊಣೆ ಗಾರಿಕೆ ಹಾಗೂ ಉತ್ತರದಾಯಿತ್ವ ಹೆಚ್ಚಳ”ಕ್ಕಾಗಿ ಗುಜರಾತ್ ಸರಕಾರಕ್ಕೆ ಕಳೆದ ಜೂನ್‌ನಲ್ಲಿ ವಿಶ್ವ ಸಂಸ್ಥೆಯ ಅಂತಾರಾಷ್ಟ್ರೀಯ ಪುರಸ್ಕಾರ ಲಭಿಸಿದೆ. ‘ಸ್ವಾಗತ್’ (ಸ್ಟೇಟ್ ವೈಡ್ ಅಟೆನ್ಷನ್ ಆನ್ ಗ್ರೀವೆನ್ಸಸ್ ವಿತ್ ಅಪ್ಲಿಕೇಶನ್ ಆಫ್ ಟೆಕ್ನಾಲಜಿ) ಎಂಬ ಕಾರ್ಯಕ್ರಮವನ್ನು ಹಮ್ಮಿಕೊಂಡು ಮೋದಿ ಭ್ರಷ್ಟಾಚಾರವನ್ನು ಗಣನೀಯವಾಗಿ ತೊಡೆದುಹಾಕಿ ದ್ದಾರೆ. ಇದು ದೇಶದ ಯಾವೊಬ್ಬ ಮುಖ್ಯಮಂತ್ರಿಗೂ ಸಾಧ್ಯವಾಗಿಲ್ಲ. ಸುಜಲಾಂ ಸುಫಲಾಂ ಎಂಬ ಉತ್ತರ ಗುಜರಾತ್‌ನ ನೀರಿನ ಸಮಸ್ಯೆ ನೀಗಿಸುವ ಯೋಜನೆ ಕೂಡ ದೇಶದ ಗಮನ ಸೆಳೆದಿದೆ. ಗುಜರಾತ್‌ನಂತಹ ಒಣ ಭೂಮಿ ಇಂದು ಹಸಿರಿನಿಂದ ಕಂಗೊಳಿಸುವಂತೆ ಮಾಡಿರುವುದನ್ನು ‘ಇಂಡಿಯಾ ಟುಡೆ’ಯಂಥ ಸೆಕ್ಯುಲರ್ ಪತ್ರಿಕೆಯೇ ಹಾಡಿ ಹೊಗಳಿದೆ. ಈ ಮಧ್ಯೆ ಸಮುದ್ರದ ಕೊಲ್ಲಿಗೇ ಅಣೆಕಟ್ಟು ನಿರ್ಮಾಣ ಮಾಡುವಂತಹ ಹೊಸದೊಂದು ಸಾಹಸಕ್ಕೆ ಮೋದಿ ಕೈಹಾಕಿದ್ದಾರೆ. ಭಾವ್‌ನಗರ್ ಹಾಗೂ ಭರೂಚ್ ನಡುವೆ ಬರುವ ಖಂಬತ್ (ಕಾಂಬೆ) ಕೊಲ್ಲಿಗೆ 30 ಕಿ.ಮೀ. ಉದ್ದದ ಅಣೆಕಟ್ಟು ಕಟ್ಟುವ 54 ಸಾವಿರ ಕೋಟಿ ರೂ. ಯೋಜನೆಯದು! ಭಾರತದ ಇತಿಹಾಸದಲ್ಲೇ ಅತಿದೊಡ್ಡ ಪ್ರಾಜೆಕ್ಟ್. ಕೇಂದ್ರ ಸರಕಾರವೇ ಹಿಂದೇಟು ಹಾಕುವಂತಹ ಯೋಜನೆಗೆ ರಾಜ್ಯ ಸರಕಾರವೊಂದು ಮುಂದಾಗಿದೆ. ದಕ್ಷಿಣ ಕೊರಿಯಾದಲ್ಲಿರುವ ಇದೇ ತೆರನಾದ ಅಣೆಕಟ್ಟನ್ನು ಖುದ್ದು ವೀಕ್ಷಿಸಿ ಬಂದಿರುವ ಮೋದಿ, ‘ಕಲ್ಪಸರ್ ಆಣೆಕಟ್ಟು’ ನಿರ್ಮಾಣ ಮಾಡುವ ಮೂಲಕ ಸಮುದ್ರದ ಪಾಲಾಗುತ್ತಿರುವ ನರ್ಮದಾ, ಮಾಹಿ, ಸಬರ್‌ಮತಿ ಹಾಗೂ ದಾದರ್ ನದಿಗಳ ಸಿಹಿ ನೀರನ್ನು ಬಂಧಿಸಿ 10 ಲಕ್ಷ ಹೆಕ್ಟೇರ್ ಕೃಷಿ ಭೂಮಿಗೆ ನೀರುಣಿಸುವ, 5,500 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಮಾಡುವ ಮಹತ್ವಾಕಾಂಕ್ಷೆ ಹೊಂದಿದ್ದಾರೆ. ಬ್ರಿಟನ್ನಿನ ಅಂತಾರಾಷ್ಟ್ರೀಯ ಖ್ಯಾತಿಯ ‘ಫೈನಾನ್ಷಿಯಲ್ ಟೈಮ್ಸ್ ಗ್ರೂಪ್’ ನೀಡುವ ಪ್ರತಿಷ್ಠಿತ “FDI Asian Personality of the Year 2009″ ಪ್ರಶಸ್ತಿಗೆ ಆಯ್ಕೆಯಾಗಿದ್ದ ವ್ಯಕ್ತಿ ನರೇಂದ್ರ ಮೋದಿ. ಅವರು ಸದ್ದಿಲ್ಲದೆ ಗುಜರಾತ್ ರಾಜ್ಯವನ್ನು ವಿಕಾಸದತ್ತ ಕೊಂಡೊಯ್ಯುತ್ತ ಕೆಲಸವೇ ತಮ್ಮ ಪರವಾಗಿ ಮಾತನಾಡುವಂತೆ ಮಾಡುತ್ತಿದ್ದರೆ ಸುಷ್ಮಾ ಸ್ವರಾಜ್ ಮಾತ್ರ ಅದಿರು ಲೂಟಿಕೋರರನ್ನು ಸಾಕುತ್ತಿದ್ದಾರೆ.

ಸುಷ್ಮಾಸ್ವರಾಜ್‌ಗೂ ಮೋದಿಗೂ ಇರುವ ವ್ಯತ್ಯಾಸ ಇದೇ.

ಲೋಕಾಯುಕ್ತ ಸಂತೋಷ್ ಹೆಗ್ಡೆ ರಾಜೀನಾಮೆ ಸಂದರ್ಭದಲ್ಲಿ ಇಡೀ ರಾಜ್ಯವೇ ರೆಡ್ಡಿಗಳ ದರ್ಪದ ಬಗ್ಗೆ ರೊಚ್ಚಿಗೆದ್ದಿದ್ದಾಗಲೂ ಒಂದು ಸಣ್ಣ ಹೇಳಿಕೆಯನ್ನೂ ಕೊಡದ ಸುಷ್ಮಾಸ್ವರಾಜ್ ಅವರಲ್ಲಿ ಯಾವ ನೈತಿಕ ಮೌಲ್ಯಗಳಿವೆ ಹೇಳಿ? ಆಕೆಯ ಹಣೆಯಲ್ಲಿ ಅಗಲವಾದ ಬಿಂದಿಯನ್ನು ನೋಡಿ ಭಾರತ ಮಾತೆಯನ್ನು ಕಾಣಬೇಡಿ. ಅಷ್ಟಕ್ಕೂ ಸಿಪಿಎಂ ನಾಯಕಿಯರಾದ ಬೃಂದಾ ಕಾರಟ್, ಶುಭಾಷಿಣಿ ಅಲಿ, ಕಾಂಗ್ರೆಸ್‌ನ ಮಾರ್ಗರೆಟ್ ಆಳ್ವ, ಅಂಬಿಕಾ ಸೋನಿ, ಗಿರಿಜಾ ವ್ಯಾಸ್, ಜಯಂತಿ ನಟರಾಜನ್, ಸಮಾಜವಾದಿ ಪಕ್ಷದ ನಫೀಸಾ ಅಲಿ ಹಣೆಯಲ್ಲೂ ಅಂಗೈಅಗಲದ ಬಿಂದಿ ಸದಾ ರಾರಾಜಿಸುತ್ತಿರುತ್ತದೆ. ಹಾಗಂತ ಅವರನ್ನು ಭಾರತೀಯತೆಯ, ಈ ದೇಶದ ಸಂಸ್ಕೃತಿಯ ಪ್ರತಿಪಾದಕರು ಎನ್ನುವುದಕ್ಕಾಗುತ್ತದಾ?!

ನರೇಂದ್ರ ಮೋದಿಯೆಂಬ ಶುದ್ಧಹಸ್ತ ನಾಯಕನ ಅಭಿವೃದ್ಧಿ ಕಾರ್ಯದಿಂದಾಗಿ ಗುಜರಾತ್‌ನಂತಹ ಒಂದಿಡೀ ರಾಜ್ಯಕ್ಕೆ ಲಾಭವಾಗುತ್ತಿದೆ. ಹಾಗಾಗಿ ಅದು ಸ್ಥಳೀಯ ಸಂಸ್ಥೆಗಳ ಚುನಾವಣೆ ಇರಬಹುದು, ವಿಧಾನಸಭೆ-ಲೋಕಸಭೆ ಚುನಾವಣೆ ಆಗಿರಬಹುದು, ಕಳೆದ 10 ವರ್ಷಗಳಲ್ಲಿ ನಡೆದ ಎಲ್ಲ ಚುನಾವಣೆಗಳಲ್ಲೂ ಗುಜರಾತ್ ಜನ ಮೋದಿಯವರಿಗೆ ಅಭೂತಪೂರ್ವ ಜಯ ತಂದುಕೊಟ್ಟಿದ್ದಾರೆ. ಆದರೆ “ತಾಯಿ ಸುಷ್ಮಾ ಸ್ವರಾಜ್” ಅವರ ಹೆಸರನ್ನು ಎಷ್ಟು ಜನ ಹಾಗೂ ಯಾರು ಜಪ ಮಾಡುತ್ತಿದ್ದಾರೆ?! ಕಳೆದ ಲೋಕಸಭೆ ಚುನಾವಣೆಯಲ್ಲಿ ರಾಜಧಾನಿ ದಿಲ್ಲಿಯಿಂದ ಮಧ್ಯ ಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌವ್ಹಾಣ್ ಪ್ರತಿನಿಧಿಸುತ್ತಿದ್ದ ವಿಧೀಶಾ ಎಂಬ ಬಿಜೆಪಿಯ ಭದ್ರಕೋಟೆಗೆ ಪಲಾಯನ ಮಾಡಿದ ಹಾಗೂ ಸ್ವಂತ ಸೀಟು ಗೆಲ್ಲುವ ಆತ್ಮವಿಶ್ವಾಸವೇ ಇಲ್ಲದ ಸುಷ್ಮಾಸ್ವರಾಜ್‌ಗೆ ಮೋದಿ ಮ್ಯಾಜಿಕ್ ಬಗ್ಗೆ ಮಾತನಾಡುವ ಹಕ್ಕನ್ನು ಕೊಟ್ಟವರಾರು?

ಪ್ರಧಾನಿ ಹುದ್ದೆಯೆಂಬುದು ತಿರುಕನ ಕನಸಿನಂತಿದ್ದ ಕಾಲದಲ್ಲೂ ಛಲಬಿಡದ ಅಟಲ್, ಆಡ್ವಾಣಿಯವರು ಕಟ್ಟಿ ಬೆಳೆಸಿದ ಪಕ್ಷಕ್ಕೆ ಸುಷ್ಮಾ ಸ್ವರಾಜ್‌ರಂತಹ ಪದವಿ ಆಕಾಂಕ್ಷಿಗಳು ಬಂದು ಕುಳಿತುಕೊಂಡಿರುವುದು ಖಂಡಿತ ಒಳ್ಳೆಯ ಲಕ್ಷಣವಲ್ಲ.

ಕೃಪೆ : ಪ್ರತಾಪ್ ಸಿಂಹ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ