ನನ್ನ ಬ್ಲಾಗ್ ಪಟ್ಟಿ

ಭಾನುವಾರ, ಡಿಸೆಂಬರ್ 5, 2010

ಸಮರ್ಪಣೆಯ ದೀಕ್ಷೆ ತೊಟ್ಟವಗೆ ಸಾವು ಬಗೆದ ಅನ್ಯಾಯ

1. ಅವರು ಬಂಡವಾಳವನ್ನು ತರುತ್ತಾರೆ.
2. ಉದ್ಯೋಗವನ್ನು ಸೃಷ್ಟಿಸುತ್ತಾರೆ.
3. ಅದರಿಂದ ದೇಶದ ರಫ್ತು ಭಾರೀ ಪ್ರಮಾಣದಲ್ಲಿ ಹೆಚ್ಚಾಗುತ್ತದೆ.
4. ಅಷ್ಟೇ ಅಲ್ಲ, ನಮ್ಮ ದೇಶಕ್ಕೆ ಅತ್ಯಾಧುನಿಕ ತಂತ್ರeನವನ್ನೂ ತರುತ್ತಾರೆ.

ನಮ್ಮ ದೇಶದಲ್ಲಿ ಬಂಡವಾಳ ತೊಡಗಿಸುವಂತೆ ಬಹುರಾಷ್ಟ್ರೀಯ ಕಂಪನಿಗಳನ್ನು ಆಹ್ವಾನಿಸುತ್ತಿರುವ ಸರಕಾರ ಈ ರೀತಿಯ ಕಾರಣ, ನೆಪಗಳನ್ನು ಕೊಟ್ಟು ನಿಮ್ಮನ್ನು ಸಮಾಧಾನಪಡಿಸುತ್ತಿದೆ. ಆದರೆ ವಾಸ್ತವದಲ್ಲಿ ವಿದೇಶಿ ಕಂಪನಿಗಳ ಆಗಮನದಿಂದಾಗಿ ನಮ್ಮ ದೇಶದ ಸಂಪತ್ತು ಹೊರಕ್ಕೆ ಹರಿದುಹೋಗುತ್ತಿದೆ, ಲೂಟಿಯಾಗುತ್ತಿದೆ. ಬಹುರಾಷ್ಟ್ರೀಯ ಕಂಪನಿಗಳ ಆಗಮನದಿಂದ ಉದ್ಯೋಗ ಸೃಷ್ಟಿಯಾಗುತ್ತದೆ ಎಂಬ ಮಾತೂ ಶುದ್ಧ ಸುಳ್ಳು. ಖಾಸಗಿ ಕಂಪನಿಗಳಿಂದಾಗಿ ಸ್ಥಳೀಯ ಸಣ್ಣ ಉದ್ದಿಮೆಗಳು ನಾಶಗೊಂಡು ಭಾರೀ ಪ್ರಮಾಣದ ನಿರುದ್ಯೋಗ ಸೃಷ್ಟಿಯಾಗುತ್ತದೆ ಹಾಗೂ ಆರ್ಥಿಕ ಅಸಮಾನತೆಯುಂಟಾಗುತ್ತದೆ. ರಫ್ತು ಪ್ರಮಾಣ ಹೆಚ್ಚಾಗುತ್ತದೆ ಎಂಬ ಮಾತೂ ಕೂಡ ಸತ್ಯಕ್ಕೆ ದೂರವಾದುದು. ವಾಸ್ತವದಲ್ಲಿ ವಿದೇಶಿ ಕಂಪನಿಗಳಿಂದಾಗಿ ಆಮದು ಪ್ರಮಾಣ ಹೆಚ್ಚಾಗುತ್ತಿದೆ. ಅವು ತಮ್ಮ ದೇಶದ ಸರಕುಗಳನ್ನು ಭಾರತಕ್ಕೆ ತಂದು ಮಾರಾಟ ಮಾಡುತ್ತಿವೆಯಷ್ಟೇ. ಅಂದರೆ ತಮ್ಮ ದೇಶದ ಕಚ್ಚಾವಸ್ತು ಗಳನ್ನು ಇಲ್ಲಿಗೆ ತಂದು, ಸರಕನ್ನಾಗಿ ಪರಿವರ್ತಿಸಿ ಭಾರೀ ಲಾಭವನ್ನಿಟ್ಟು ಮಾರಾಟ ಮಾಡುತ್ತಿವೆಯಷ್ಟೇ. ನಮ್ಮ ದೇಶದ ಸಂಪತ್ತೇ ಕೊಳ್ಳೆಯಾಗುತ್ತಿದೆ. ಬಹುರಾಷ್ಟ್ರೀಯ ಕಂಪನಿಗಳು ತಂತ್ರeನವನ್ನು ತರುತ್ತವೆ ಎಂಬ ವಾದವೂ ಒಂದು ದೊಡ್ಡ ಸುಳ್ಳು. ಸಮೀಕ್ಷೆಗಳು ಹೇಳುವಂತೆ ವಿದೇಶಿ ಕಂಪನಿಗಳು ಯಾವುದೇ ಉತ್ಪಾದನಾ ತಂತ್ರeನವನ್ನು ನಮ್ಮ ದೇಶಕ್ಕೆ ತರುತ್ತಿಲ್ಲ, ಜತೆಗೆ ಯಾವುದೇ ಸಂಶೋಧನಾ ಕೇಂದ್ರಗಳನ್ನೂ ನಮ್ಮಲ್ಲಿ ಸ್ಥಾಪಿಸುತ್ತಿಲ್ಲ. ತಮ್ಮ ತಮ್ಮ ದೇಶಗಳಿಂದ ಬಿಡಿ ಭಾಗಗಳನ್ನು ತರಿಸಿ, ಇಲ್ಲಿ ಜೋಡಿಸಿ ಮಾರಾಟ ಮಾಡುವ ಕೆಲಸವನ್ನಷ್ಟೇ ಮಾಡುತ್ತಿವೆ. ಈ ದೇಶದಲ್ಲಿ ಅತ್ಯಾಧುನಿಕ ತಂತ್ರeನ ಹೊಂದಿರುವ ಕಂಪನಿಗಳೆಂದರೆ ISRO ಮತ್ತು DRDO ಮಾತ್ರ. ಅವು ದೇಶೀಯವಾಗಿ ಸುಧಾರಿತ ತಂತ್ರeನವನ್ನು ಅಭಿವೃದ್ಧಿಪಡಿಸಿವೆ. ಹೀಗೆ ನಾವು ನಮ್ಮ ದೇಶದಲ್ಲೇ ಆಧುನಿಕ ತಂತ್ರeನವನ್ನು ಅಭಿವೃದ್ಧಿಪಡಿಸಲು ಶಕ್ತವಿರುವಾಗ ವಿದೇಶಿ ಕಂಪನಿಗಳನ್ನೇಕೆ ಕೆಂಪು ಕಂಬಳಿಹಾಕಿ ಆಹ್ವಾನಿಸಬೇಕು? ಈ ದೇಶದ ಸಂಪತ್ತನ್ನೇಕೆ ಲೂಟಿ ಮಾಡಿಕೊಂಡು ಹೋಗಲು ಬಿಡಬೇಕು?

ಈಸ್ಟ್ ಇಂಡಿಯಾ ಕಂಪನಿ!

ಆ ಹೆಸರಿನ ಒಂದೇ ಕಂಪನಿ ನಮ್ಮ ದೇಶವನ್ನು ಎಷ್ಟು ಲೂಟಿ ಮಾಡಿತು ಎಂಬುದು ನಿಮಗೆಲ್ಲ ಗೊತ್ತೇ ಇದೆ. ಆ ಒಂದು ಕಂಪನಿಯನ್ನು ಓಡಿಸಲು ನಮಗೆ 200 ವರ್ಷ ಬೇಕಾದವು! ಈಗ ಭಾರತದಲ್ಲಿ ಸುಮಾರು 5 ಸಾವಿರ ವಿದೇಶಿ ಕಂಪನಿಗಳು ಕಾರ್ಯ ನಿರ್ವಹಿಸುತ್ತಿವೆ!! ಹಾಳೂ-ಮೂಳೂ ಸರಕುಗಳನ್ನು ಮಾರಿ, ದೇಶದ ಸಂಪತ್ತನ್ನು ದೋಚುತ್ತಿವೆ. ಒಂದು ವೇಳೆ ನಮ್ಮ ದೇಶ ಒಂದು ಸುಭದ್ರ ಹಾಗೂ ಬಲಿಷ್ಠ ರಾಷ್ಟ್ರವಾಗಬೇಕಾದರೆ ಈ ಕಂಪನಿಗಳನ್ನು ಆದಷ್ಟು ಬೇಗ ದೇಶದಿಂದ ಹೊರಹಾಕಿ ಸ್ವದೇಶಿ ತಂತ್ರeನದ ಅಭಿವೃದ್ಧಿಗೆ ಪ್ರೋತ್ಸಾಹ ನೀಡಬೇಕು……”

ರಾಜೀವ್ ದೀಕ್ಷಿತ್ ಅವರ ಭಾಷಣವನ್ನು ಕೇಳುವುದೆಂದರೆ ಪ್ರವಾಹಕ್ಕೆ ಬೆನ್ನುಕೊಟ್ಟು ಕುಳಿತುಕೊಂಡಂತೆ, ಕೊಚ್ಚಿಹೋಗದೆ ಬೇರೆ ದಾರಿಯೇ ಇರುತ್ತಿರಲಿಲ್ಲ!

“ತೆರಿಗೆ ಮೂಲಕ ಸಂಗ್ರಹವಾಗುವ ಸಂಪತ್ತನ್ನು ಹಂಚಿದರೆ ಈ ದೇಶದ ಜನರ ತಲಾ ಆದಾಯ ವರ್ಷಕ್ಕೆ 6 ಸಾವಿರ ರೂಪಾಯಿ ಗಳಾಗುತ್ತವೆ. ಸರಕಾರ ಪ್ರತಿ ವ್ಯಕ್ತಿಗೂ ಮಾಡುವ ವೆಚ್ಚ ಕೇವಲ 600 ರೂಪಾಯಿ! ಉಳಿದ ಹಣ ಎಲ್ಲಿಗೆ ಹೋಗುತ್ತದೆ? ಕೇವಲ 20 ಪರ್ಸೆಂಟ್ ಹಣವಷ್ಟೇ ಅಭಿವೃದ್ಧಿ ಕಾರ್ಯಕ್ಕೆ ವಿನಿಯೋಗವಾಗುತ್ತದೆ. ಸರಕಾರಿ ಉದ್ಯೋಗಿಗಳು, ಶಾಸಕ-ಸಂಸದರ ಸಂಬಳ, ಸವಲತ್ತಿಗೆ 80 ಪರ್ಸೆಂಟ್ ವೆಚ್ಚವಾಗುತ್ತಿದೆ. ಹಾಗಿರುವಾಗ ದೇಶದ ಅಭಿವೃದ್ಧಿ ಹೇಗೆ ಸಾಧ್ಯ?”

ಹೀಗೆ ರಾಜೀವ್ ದೀಕ್ಷಿತ್ ಅವರು ಭಾಷಣದ ಮೂಲಕ ತಮ್ಮ ವಾದ ಮಂಡಿಸುತ್ತಿದ್ದರೆ ಅಹುದಹುದೆಂದು ತಲೆಯಾಡಿಸದೇ, ಅಚ್ಚರಿಗೊಳ್ಳದೆ, ಮರುಕ್ಷಣವೇ ಹತಾಶೆಗೊಳ್ಳದೆ ಇರಲಾಗುತ್ತಿರಲಿಲ್ಲ. ನಿಜ ಹೇಳಬೇಕೆಂದರೆ ರಾಜಕೀಯೇತರ ಕ್ಷೇತ್ರಗಳಲ್ಲಿ ಇತ್ತೀಚಿನ ವರ್ಷಗಳಲ್ಲಿ ಕಂಡುಬಂದ ಅತ್ಯುತ್ತಮ ವಾಗ್ಮಿಗಳಲ್ಲಿ ರಾಜೀವ್ ಒಬ್ಬರು. ಅವರು ಕೊಡುತ್ತಿದ್ದ ಅಂಕಿ-ಅಂಶಗಳಲ್ಲಿ ಎಷ್ಟರಮಟ್ಟಿನ ಹುರುಳಿತ್ತು ಎಂಬುದು ವಾದಮಾಡುವಂತಹ ವಿಷಯವಾಗಿದ್ದರೂ ಅವರ ಭಾಷಣ ಮಾತ್ರ ತರ್ಕಬದ್ಧವಾಗಿರುತ್ತಿತ್ತು. ಮಾತುಗಳು ಅತ್ಯಂತ ಸ್ಫುಟ. ಅಸ್ಖಲಿತ ಹಿಂದಿ. ಅಂದಮಾತ್ರಕ್ಕೆ ಅವರು ಬರೀ ಭಾಷಣಕಾರರಾಗಿರಲಿಲ್ಲ. ಎಂ.ಟೆಕ್ ಓದಿದ್ದರು. ಸಿಎಸ್‌ಐಆರ್ ಜತೆ ಕೆಲಸ ಮಾಡಿದ್ದ ಅನುಭವ ಹೊಂದಿದ್ದರು.

ಸುಮಾರು ೮ ವರ್ಷಗಳ ಹಿಂದಿನ ಮಾತು.

ಬೆಂಗಳೂರಿನ ಚಿಕ್ಕಪೇಟೆಯಲ್ಲಿರುವ ‘ಆಜಾದಿ ಬಚಾವೋ ಆಂದೋಲನ’ದ ಕಚೇರಿಗೆ ಸ್ನೇಹಿತ ಚಕ್ರವರ್ತಿ ಸೂಲಿಬೆಲೆ ಕರೆದುಕೊಂಡು ಹೋಗಿದ್ದರು. ಅಲ್ಲಿ ರಾಜೀವ್ ದೀಕ್ಷಿತ್ ಉಪನ್ಯಾಸವಿತ್ತು. ಅವರನ್ನು ನೋಡಿದ್ದು ಅದೇ ಮೊದಲು. ಇಸ್ತ್ರಿಯನ್ನೇ ಕಾಣದ ಕುರ್ತಾ, ಪೈಜಾಮ ಹಾಕಿದ್ದ ವ್ಯಕ್ತಿಯೇ ರಾಜೀವ್ ದೀಕ್ಷಿತ್ ಅವರಾ ಎಂದು ಆಶ್ಚರ್ಯವುಂಟಾಗಿತ್ತು. ಆ ವೇಳೆಗಾಗಲೇ ರಾಜೀವ್ ದೀಕ್ಷಿತ್ ಎಂದರೆ ಸ್ವದೇಶಿ ಚಳವಳಿಯಲ್ಲಿ ದೇಶದಲ್ಲೇ ದೊಡ್ಡ ಹೆಸರು. ಅವರ ಭಾಷಣದ ತೀವ್ರತೆ ದಂತಕಥೆಯಂತಾಗಿತ್ತು. ಆದರೆ ಅವರ ಜೀವನ ಶೈಲಿಯಲ್ಲಿ ಮಾತ್ರ ಯಾವುದೇ ಬದಲಾವಣೆಗಳಾಗಿರಲಿಲ್ಲ. ಖ್ಯಾತ ಗಾಂಧೀವಾದಿ ಧರ್ಮಪಾಲ್ ಅವರ ಅನುಯಾಯಿಯಾಗಿದ್ದ ರಾಜೀವ್ ದೀಕ್ಷಿತ್, ತಮ್ಮ ಜೀವನದಲ್ಲೂ ಗಾಂಧೀಜಿಯಂತೆ ಖಾದಿ ಹಾಗೂ ಸರಳ ಜೀವನ ಅಳವಡಿಸಿಕೊಂಡಿದ್ದರು. ಬಹಳ ಆಶ್ಚರ್ಯದ ಸಂಗತಿಯೆಂದರೆ ಗಾಂಧೀಜಿಯವರನ್ನು ಬಹುವಾಗಿ ಮೆಚ್ಚಿಕೊಂಡಿದ್ದ ರಾಜೀವ್ ದೀಕ್ಷಿತ್ ಅವರು ಚಂದ್ರಶೇಖರ್ ಆಜಾದ್, ಭಗತ್ ಸಿಂಗ್, ಸುಭಾಷ್‌ಚಂದ್ರ ಬೋಸ್ ಮುಂತಾದ ಕ್ರಾಂತಿಕಾರಿಗಳನ್ನೂ ಅಷ್ಟೇ ತೀವ್ರತೆಯೊಂದಿಗೆ ಆರಾಧಿಸುತ್ತಿದ್ದರು. ಹಾಗಾಗಿ ಸ್ವದೇಶಿ ಬಗ್ಗೆ ಮಾತನಾಡುವಾಗಲೂ ಅವರ ಭಾಷಣದಲ್ಲಿ ಒಂದು ಶಕ್ತಿ ಎದ್ದು ಕಾಣುತ್ತಿತ್ತು.

ಹಾಗಂತ ರಾಜೀವ್ ದೀಕ್ಷಿತ್ ಹೇಳಿದ್ದನ್ನೆಲ್ಲಾ ಒಪ್ಪಿಕೊಳ್ಳಬೇಕು ಅಥವಾ ಒಪ್ಪಿಕೊಳ್ಳುವಂತಿರುತ್ತಿತ್ತು ಎಂದಲ್ಲ.

ಉದಾಹರಣೆಗೆ 1948ರಲ್ಲಿ ಸಂಭವಿಸಿದ ಭೋಪಾಲ್ ಅನಿಲ ದುರಂತದ ಬಗ್ಗೆ ರಾಜೀವ್ ದೀಕ್ಷಿತ್ ತಮ್ಮದೇ ಆದ ವ್ಯಾಖ್ಯಾನ ಕೊಡುತ್ತಿದ್ದರು. ಅದು ಅನಿಲ ದುರಂತವಲ್ಲ, ಅಮೆರಿಕ ಉದ್ದೇಶ ಪೂರ್ವಕವಾಗಿ ಎಸಗಿದ ಕೃತ್ಯ, ನೂತನ ಮಾದರಿ ಬಾಂಬೊಂದನ್ನು ಅದು ಪರೀಕ್ಷೆ ಮಾಡಿದೆ ಎಂದೆಲ್ಲ ಹೇಳುತ್ತಿದ್ದರು. 2001, ಸೆಪ್ಟೆಂಬರ್ 11ರಂದು ವಿಶ್ವ ವ್ಯಾಪಾರ ಸಂಸ್ಥೆಯ ಮೇಲೆ ನಡೆದ ಭಯೋತ್ಪಾದಕ ದಾಳಿಯ ಬಗ್ಗೆಯೂ ಕಥೆ ಹೇಳುತ್ತಿದ್ದರು. ಅದು ಅಮೆರಿಕವೇ ಎಸಗಿದ ಕೃತ್ಯ ಎಂದೆಲ್ಲ ಆಧಾರರಹಿತ Conspiracy theory ಗಳನ್ನು ಹೇಳಿ ಏನೂ ಅರಿಯದವರನ್ನು ನಂಬಿಸಿದ್ದೂ ಇದೇ. ಅವು ಕೇಳುವುದಕ್ಕಷ್ಟೇ ಹಿತವಾಗಿರುತ್ತಿದ್ದವು. ಅವರ ಬಹುದೊಡ್ಡ ಸಾಮರ್ಥ್ಯವೆಂದರೆ ಅವರು ಏನನ್ನೇ ಹೇಳಿದರೂ ಅದನ್ನು ನಂಬುವಂತೆ ಹೇಳುತ್ತಿದ್ದರು. ಆಗಿನ ಕಾಲ ಕೂಡ ಅವರಿಗೆ ಹೇಳಿ ಸೃಷ್ಟಿಸಿದಂತಿತ್ತು. 1991ರಲ್ಲಿ ಪ್ರಧಾನಿ ನರಸಿಂಹರಾವ್ ಆರ್ಥಿಕ ಉದಾರೀಕರಣ ನೀತಿಗಳನ್ನು ಜಾರಿಗೆ ತಂದ ನಂತರ ಬಹುರಾಷ್ಟ್ರೀಯ ಕಂಪನಿಗಳ ಬಗ್ಗೆ ದೇಶಾದ್ಯಂತ ಒಂದು ರೀತಿಯ ಆತಂಕ, ಭಯ ಸೃಷ್ಟಿಯಾಗಿತ್ತು. ಇಂತಹ ಒಂದು ಸರಿಯಾದ ಸಂದರ್ಭದಲ್ಲಿ ರಾಜೀವ್ ದೀಕ್ಷಿತ್ ಅವರ ಪ್ರವೇಶವಾಯಿತು. 1995-2005 ಅವಧಿಯಲ್ಲಿ ಅವರು ಇಡೀ ದೇಶದ ಉದ್ದಗಲಕ್ಕೂ ತಿರುಗಿ, ಊರೂರು ಸುತ್ತಿ ಭಾಷಣ ಮಾಡಿದರು. ಜನರಲ್ಲಿ ಜಾಗೃತಿ ಮೂಡಿಸಲು ಪ್ರಯತ್ನಿಸಿದರು. ಒಂದು ದೊಡ್ಡ ಯುವಪಡೆ ಅವರ ಹಿಂದೆ ಟೊಂಕಕಟ್ಟಿ ನಿಂತಿತು.

ಆದರೆ…

ರಾಜೀವ್ ದೀಕ್ಷಿತ್ ಒಬ್ಬ ಒಳ್ಳೆಯ ಮಾತುಗಾರರಾಗಿದ್ದರೇ ಹೊರತು, ಒಳ್ಳೆಯ ಸಂಘಟಕರಾಗಿರಲಿಲ್ಲ, ದೂರದೃಷ್ಟಿಯ ಕೊರ ತೆಯೂ ಸಾಕಷ್ಟಿತ್ತು. ಭಾಷಣದಾಚೆ ಅವರಲ್ಲಿ ಯಾವ ಐಡಿಯಾ ಗಳೂ ಇರಲಿಲ್ಲ. ಈ ಬಾರಿ ಬಂದಾಗಲೂ ಭಾಷಣ, ಮುಂದಿನ ಬಾರಿಯೂ ಭಾಷಣವೇ. ಅದನ್ನು ಕೃತಿಗಿಳಿಸಲು ಪ್ರಯತ್ನಿಸಲಿಲ್ಲ. ಹಾಗಾಗಿ ಆಜಾದಿ ಬಚಾವೋ ಆಂದೋಲನ ಒಂದು ಫಲದಾಯಕ ಚಳವಳಿಯಾಗಲಿಲ್ಲ, ಒಂದು ದೊಡ್ಡ ಸಂಘಟನೆಯಾಗಿ ಬೆಳೆಯ ಲಿಲ್ಲ. ಆದರೂ ಅವರು ದೇಶದ ಬಗ್ಗೆ ಇಟ್ಟುಕೊಂಡಿದ್ದ ಕಾಳಜಿ, ಪ್ರೀತಿ ಮಾತ್ರ ಅಪಾರ. ಕಳೆದ ಕೆಲ ವರ್ಷಗಳಿಂದ ಕೇವಲ ಉತ್ತರ ಭಾರತದ ಕೆಲವು ರಾಜ್ಯಗಳಿಗಷ್ಟೇ ತಮ್ಮನ್ನು ಸೀಮಿತ ಮಾಡಿಕೊಂಡ ರಾಜೀವ್ ದೀಕ್ಷಿತ್, ಬಾಬಾ ರಾಮ್‌ದೇವ್ ಜತೆ ಸೇರಿ ‘ಭಾರತ್ ಸ್ವಾಭಿಮಾನ್’ ಎಂಬ ರಾಜಕೀಯ ವೇದಿಕೆ ಪ್ರಾರಂಭಿಸಿದ್ದರು. ಅದು ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸುವ ಗುರಿಯನ್ನೂ ಹೊಂದಿತ್ತು. ಆದರೆ ಕನಸು ಸಾಕಾರಗೊಳ್ಳುವ ಮೊದಲೇ ವಿಧಿ ಅವರನ್ನು ಕಿತ್ತುಕೊಂಡಿದೆ. ನವೆಂಬರ್ 30ರಂದು ಬೆಳಗಿನ ಜಾವ ರಾಜೀವ್ ದೀಕ್ಷಿತ್ ಹೃದಯಾಘಾತಕ್ಕೆ ಬಲಿಯಾಗಿದ್ದಾರೆ. ಸುಮಾರು 15 ವರ್ಷಗಳ ಕಾಲ ಜನರಲ್ಲಿ ಜಾಗೃತಿ ಮೂಡಿಸಲು ಅವಿರತವಾಗಿ, ಪ್ರಾಮಾಣಿಕವಾಗಿ ಪ್ರಯತ್ನಿಸಿದ, ಲಕ್ಷಾಂತರ ಯುವಕರಿಗೆ ಪ್ರೇರಣೆ ನೀಡಿದ ರಾಜೀವ್ ದೀಕ್ಷಿತ್‌ರನ್ನು 44ನೇ ವರ್ಷಕ್ಕೆ ವಿಧಿ ಕಿತ್ತುಕೊಂಡಿದ್ದು ಮಾತ್ರ ಈ ದೇಶದ ದುರಂತ. ಹೀಗೆ ದುಃಖದ ಮಡುವಿಗೆ ಬಿದ್ದಿರುವಾಗ ಏಳುವ ಪ್ರಶ್ನೆಯೇನೆಂದರೆ, ಈ ಸಾವೇಕೆ ಸಾಧಕರನ್ನು ಸಣ್ಣಪ್ರಾಯದಲ್ಲೇ ಕಿತ್ತುಕೊಂಡುಬಿಡುತ್ತದೆ?

ಛೇ.

ಕೃಪೆ : ಪ್ರತಾಪ್ ಸಿಂಹ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ