ನನ್ನ ಬ್ಲಾಗ್ ಪಟ್ಟಿ

ಶನಿವಾರ, ಫೆಬ್ರವರಿ 5, 2011

ಕನ್ನಡ ಭಾಷೆ, ಕನ್ನಡ ಸಂಸ್ಕೃತಿಯನ್ನು ಆಕ್ರಮಿಸುತ್ತಿರುವ ಅಮೇರಿಕನಿಸಂ....

"ಬೆಂಗಳೂರಿನ ಯಾವುದೇ ಹೋಟೆಲ್ಲಿಗೆ ಹೋಗಿ, ಅಲ್ಲಿ ನಾರ್ತ್ ಇಂಡಿಯನ್ ಊಟ ಮಾತ್ರ ಸಿಕ್ಕುತ್ತದೆ.."

ದಾವಣಗೆರೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹೊನ್ನಾಳಿಯಲ್ಲಿ ಹಮ್ಮಿಕೊಂಡಿದ್ದ ನಾಲ್ಕನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಅಧ್ಯಕ್ಷರಾದ ಎಚ್.ಎಸ್.ವೆಂಕಟೇಶ ಮೂರ್ತಿ ಅವರು ಮಾಡಿದ ಭಾಷಣ

ಆತ್ಮೀಯ ಬಂಧುಗಳೇ,

ದಾವಣಗೆರೆಯ ಜಿಲ್ಲಾ ಸಾಹಿತ್ಯ ಸಮ್ಮೇಳನಕ್ಕೆ ಅಧ್ಯಕ್ಷನನ್ನಾಗಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ನನ್ನನ್ನು ನೇಮಿಸಿರುವುದು ನನಗೆ ಬಹು ದೊಡ್ಡ ಗೌರವ ಮತ್ತು ಅಭಿಮಾನದ ಸಂಗತಿಯಾಗಿದೆ. ಕಾರಣ ಇದು ನಾನು ನನ್ನ ತವರಿಂದ ಪಡೆದ ಗೌರವವಾಗಿದೆ. ಅದಕ್ಕಾಗಿ ದಾವಣಗೆರೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಿಗೂ, ಪದಾಧಿಕಾರಿಗಳಿಗೂ ನಾನು ತುಂಬ ಆಭಾರಿಯಾಗಿದ್ದೇನೆ.

ಈ ಸಂದರ್ಭದಲ್ಲಿ ನಮ್ಮ ಸಾಮಾಜಿಕ ಮತ್ತು ಸಾಹಿತ್ಯಕ ಸಂದರ್ಭವನ್ನು ಕುರಿತು ಕೆಲವು ಮಾತುಗಳನ್ನು ತಮ್ಮ ಮುಂದೆ ಇಡಲು ಬಯಸುತ್ತೇನೆ. ಸ್ವತಂತ್ರ ಭಾರತದ ಜೀವಿತದಲ್ಲಿ ಒಂದು ಇಕ್ಕಟ್ಟಿನ ಸಂದರ್ಭದಲ್ಲಿ ನಾವು ಬದುಕುತ್ತಿದ್ದೇವೆ. ಲಕ್ಷಾಂತರ ವರ್ಷಗಳ ಇತಿಹಾಸವುಳ್ಳ ಒಂದು ಜೀವನ ಪದ್ಧತಿಯು ಜಗತ್ತಿನ ಒತ್ತಡದಲ್ಲಿ ತನ್ನ ಅಸ್ತಿತ್ವವನ್ನು ನಿಧಾನವಾಗಿ ಕಳೆದುಕೊಳ್ಳುತ್ತಿರುವ ದಾರುಣ ಸಂದರ್ಭವಿದು. ದ್ವೀಪವೊಂದು ಬೃಹತ್ ಸಾಗರದಲ್ಲಿ ಕರಗಿಹೋಗುತ್ತಿರುವ ಸಂದರ್ಭವಿದು. ಇದ್ದಲ್ಲೇ ನಾವು ಪರದೇಶಿಗಳಾಗುವ ಚೋದ್ಯವಿದು. ಅಣೆಕಟ್ಟು ಒಂದು ನಿರ್ಮಾಣವಾದಾಗ ಸುತ್ತ ಮುತ್ತಲ ಹಳ್ಳಿ ಪಟ್ಟಣಗಳು, ತೋಟ ಗದ್ದೆಗಳು, ಗುಡಿ ಗುಂಡಾಂತರಗಳು ನಿಧನಿಧಾನಕ್ಕೆ ಮುಳುಗಡೆಯಾಗಿ ಕಣ್ಮರೆಯಾಗುತ್ತವಲ್ಲ ಅಂಥ ಸಂದರ್ಭವಿದು. ಭೌಗೋಳಿಕ ಮುಳುಗಡೆಯಲ್ಲಿ, ಎತ್ತರದ ಪ್ರದೇಶಕ್ಕೆ ವಲಸೆ ಹೋಗಿ ನಮ್ಮ ಊರನ್ನು ಪುನರ್ನಿರ್ಮಿಸಿ ಉಳಿಸಿಕೊಳ್ಳುವ ಅವಕಾಶವುಂಟು. ಸಾಂಸ್ಕೃತಿಕ ಮತ್ತು ಸಾಮಾಜಿಕ ಮುಳುಗಡೆಯಲ್ಲಿ ಆದರೋ ಎಲ್ಲ ಎತ್ತರದ ಪ್ರದೇಶಗಳೂ ಮುಳುಗಡೆಯಾಗಿ ಸಮ ಪಾತಳಿಯ ಜಲಸಂಮರ್ದವೊಂದು ನಿರ್ಮಾಣವಾಗುವ ವಿಚಿತ್ರ ವಿದ್ಯಮಾನ ಸಂಭವಿಸುತ್ತದೆ. ನಾವು ಕಟ್ಟಿಕೊಂಡು ಬಂದ ಕಾವ್ಯ ಕಲೆ ಪುರಾಣ ಶಿಲ್ಪ ನೃತ್ಯ ನಡಾವಳಿ ಹಬ್ಬ ಹುಣ್ಣಿವೆ ಉಡುಪು ರೀತಿ ರಿವಾಜು ಮತ್ತು ಮುಖ್ಯವಾಗಿ ಮೌಲ್ಯ ವ್ಯವಸ್ಥೆ ಮುಳುಗಡೆಯಾಗುವಾಗ ವಿಲಕ್ಷಣವಾದ ವಿಷಾದವೊಂದು ನಮ್ಮ ಮನೋಭೂಮಿಕೆಯನ್ನು ಆವರಿಸುತ್ತದೆ. ನಿಂತ ನಿಲುವಲ್ಲೇ ವಾಮನನ ಕಾಲೊತ್ತಡಕ್ಕೆ ಸಿಕ್ಕ ಬಲಿಯೆಂಬ ರಾಜನಂತೆ ನಾವು ಭೂಮಿಯಲ್ಲಿ ಜೀವಂತ ಹುಗಿದು ಹೋಗುತ್ತಿದ್ದೇವೆ. ಇದೊಂದು ಆತ್ಮನಾಶದ ಸಂದರ್ಭವಾಗಿದೆ.

ತ್ವರಿತವಾಗಿ ನಮ್ಮ ಹಳ್ಳಿಗಳ ಮತ್ತು ನಗರಗಳ ಬಾಹ್ಯಚಹರೆಗಳು ಬದಲಾಗುತ್ತಿರುವ ಮತ್ತು ಏಕ ರೂಪಗೊಳ್ಳುತ್ತಿರುವ ಕ್ರಮವನ್ನು ತಾವು ಗಮನಿಸಿ. ಎಲ್ಲ ಬಗೆಯ ವೈವಿಧ್ಯವನ್ನೂ ಈ ಸಾಂಸ್ಕೃತಿಕ ಮುಳುಗಡೆಯು ನಿರ್ನಾಮ ಗೊಳಿಸುತ್ತದೆ. ನಾವು ನಮ್ಮ ಭಾಷೆಯನ್ನು ಕಳೆದುಕೊಳ್ಳುತ್ತೇವೆ. ಜೊತೆಗೆ ಆ ಭಾಷೆ ಕಟ್ಟಿಕೊಂಡು ಬಂದ ನೆನಪಿನ ಭಾವ ಕೋಶಗಳೆನ್ನಬಹುದಾದ ಸಾಹಿತ್ಯ ಮತ್ತು ಕಲೆಗಳನ್ನು ಕಳೆದುಕೊಳ್ಳುತ್ತೇವೆ. ಐವತ್ತು ವರ್ಷಗಳ ಹಿಂದೆ ಕೂಡ ದಾವಣಗೆರೆಗೆ, ಈ ಹೊನ್ನಾಳಿಗೆ ತನ್ನದೇ ಆದ ವಿಶಿಷ್ಟ ಆಕಾರ, ಆಚಾರ, ಅಸ್ಮಿತೆ ಎಂಬುದೊಂದು ಇತ್ತಲ್ಲವೇ? ಆ ಪ್ರತ್ಯೇಕತೆಯನ್ನು ನಾವೂ ಈ ಏಕೀಕರಣ ಪ್ರಕ್ರಿಯೆಯಲ್ಲಿ ಕಳೆದುಕೊಂಡುಬಿಡುತ್ತೇವೆ. ಎಲ್ಲಾ ನಗರಗಳೂ ಒಂದೇ ಬಗೆಯಲ್ಲಿ ಕಾಣತೊಡಗುತ್ತವೆ. ಆ ನಗರದ ಎಲ್ಲ ಬೀದಿಗಳೂ ಒಂದೇ ಬಗೆಯಲ್ಲಿ ಕಾಣತೊಡಗುತ್ತವೆ. ಆ ಬೀದಿಯ ಇಕ್ಕೆಲದ ಎಲ್ಲ ಮನೆಗಳೂ ಒಂದೇ ಆಕಾರದವಾಗುತ್ತವೆ. ಹೀಗಾದಾಗ ಪ್ರತ್ಯೇಕತೆ ಮತ್ತು ವೈಯಕ್ತಿಕತೆ ಎಂಬುದು ಮೂಲೋತ್ಪಾಟಗೊಳ್ಳುತ್ತದೆ. ಅಮೆರಿಕಾದ ಎಲ್ಲ ನಗರಗಳೂ ಒಂದೇ ರೀತಿಯಲ್ಲಿ ಕಾಣುತ್ತವೆ; ಎಲ್ಲ ಮನೆಗಳೂ ಒಂದೇ ರೀತಿಯಲ್ಲಿ ಕಾಣುತ್ತವೆ. ಊಟ ಉಡುಪಿನ ವೈವಿಧ್ಯವೂ ಮರೆಯಾಗಿ ಹೋಗಿ, ಆಹಾರ ಆಚಾರಗಳಲ್ಲೂ ಏಕೀಕರಣದ ಪ್ರಭಾವ ನೋಡಲಿಕ್ಕೆ ಸಿಕ್ಕುತ್ತದೆ. ಇನ್ನೂ ವಿಚಿತ್ರವೆಂದರೆ ಎಲ್ಲ ಜನರೂ ಒಂದೇ ರೀತಿಯಲ್ಲಿ ಮಾತಾಡುವ, ನಡೆದಾಡುವ, ಉಟ್ಟು ಉಣ್ಣುವ, ವೈಪರೀತ್ಯದ ನಾಗರಿಕತೆಯೊಂದು ಉದ್ಭವವಾಗುತ್ತದೆ. ಅಮೆರಿಕಾದಲ್ಲಿ ಈಗ ಆಗಿರುವುದು ಅದೇ. ನಮ್ಮ ದೇಶವೂ ಕ್ಷಿಪ್ರಗತಿಯಲ್ಲಿ ಈ ಏಕೀಕರಣ ಸಂಸ್ಕೃತಿಯತ್ತ ಧಾವಿಸುತ್ತಿದೆ. ನಾವು ನಮ್ಮ ನಾಲಗೆಯಿಂದ ನಮ್ಮ ತಾಯ್ನುಡಿಯನ್ನು ಕಳಚಿದ್ದೇವೆ. ಭಾಷೆಯನ್ನು ಕಳೆದುಕೊಳ್ಳುವುದೆಂದರೆ ಒಂದು ಸಾಂಸ್ಕೃತಿಕ ಜಗತ್ತನ್ನೇ ಕಳೆದುಕೊಳ್ಳುವುದೆಂದು ಅರ್ಥ. ಉಕ್ಕಿ ಬರುತ್ತಿರುವ ಈ ಮಹಾಪ್ರವಾಹದಲ್ಲಿ ನಮ್ಮದು ಎಂದು ನಾವು ಯಾವು ಯಾವುದನ್ನು ಸಾವಿರಾರು ವರ್ಷಗಳಿಂದ ಬೆಳೆಸಿಕೊಂಡು, ಉಳಿಸಿಕೊಂಡು ಬಂದಿದ್ದೆವೋ ಅದೆಲ್ಲವನ್ನೂ ಕಳೆದುಕೊಳ್ಳುತ್ತಿದ್ದೇವೆ. ಆಶ್ಚರ್ಯವೆಂದರೆ ಇದರ ಅರಿವೇ ನಮ್ಮ ಸಮಾಜ ಪುರುಷನಿಗೆ ಇಲ್ಲವಾಗಿದೆ.

ಈಗ ನೀವು ಬೆಂಗಳೂರಿನ ಯಾವುದೇ ಹೋಟೆಲ್ಲಿಗೆ ಹೋಗಿ. ಅಲ್ಲಿ ನಾರ್ತ್ ಇಂಡಿಯನ್ ಊಟ ಮಾತ್ರ ಸಿಕ್ಕುತ್ತದೆ. ದಕ್ಷಿಣದ ಅನ್ನ ಸಾರು ಹುಳಿ ಪಲ್ಯಗಳು ನಿಮಗೆ ದೊರಕಲಾರವು. ಇನ್ನು ಕೆಲವು ಕಾಲಕ್ಕೆ ಪಿಜ್ಜಾ ಮತ್ತು ಬರ್ಗರ್ ಗಳು ಮಾತ್ರ ನಿಮಗೆ ದೊರೆತಾವು. ಉತ್ತರದ ಭಾರತದ ಪರೋಟ, ಕರಿಗಳೂ ನಿಮಗೆ ದೊರೆಯದೆ ಹೋದಾವು. ಹೋದ ತಿಂಗಳು ನಾನು ಗೆಳೆಯರೊಂದಿಗೆ ದಾವಣಗೆರೆಗೆ ಬಂದಿದ್ದಾಗ ದಾವಣಗೆರೆಯ ಗೆಳೆಯರು ಒಂದು ಔತಣ ಕೂಟವನ್ನು ಏರ್ಪಡಿಸಿದ್ದರು. ಖಾರಮಂಡಕ್ಕಿ, ಹಿಟ್ಟು ಹಚ್ಚಿದ ಮೆಣಸಿನಕಾಯಿ, ಬೆಣ್ಣೆದೋಸೆಗಳ ಸುಳಿವೇ ಔತಣಕೂಟದಲ್ಲಿ ಇರಲಿಲ್ಲ. ಗೆಳೆಯರಿಗೆ ಹೇಳೀ ನಾವು ಆ ಪದಾರ್ಥಗಳನ್ನು ತರಿಸಿಕೊಳ್ಳಬೇಕಾಯಿತು! ನಿಮ್ಮನ್ನು ನಗಿಸಬಹುದಾದ ಈ ಅಂಶ ನಾವು ಅಲಕ್ಷಿಸಬಹುದಾದ ಕ್ಷುಲ್ಲಕ ವಿಚಾರವಲ್ಲ. ಈ ಜಾಗತೀಕರಣದ ಅಬ್ಬರದಲ್ಲಿ ನಮ್ಮ ಗಿರಣಿಗಳನ್ನು ನಾವು ಕಳೆದುಕೊಳ್ಳುತ್ತೇವೆ. ಒಂದು ಕಾಲದಲ್ಲಿ ಮಿಲ್ಲುಗಳಿಗೆ ದಾವಣಗೆರೆ ವಿಶ್ವವಿಖ್ಯಾತವಾಗಿತ್ತು. ಈಗ ಬಹಳಷ್ಟು ಗಿರಣಿಗಳು ಬಂದಾಗಿ ಅವು ಕಾಲಕ್ಕೆ ತಕ್ಕ ಹೊಸ ವೇಷಗಳನ್ನು ಕಟ್ಟ ತೊಡಗಿವೆ. ನಮ್ಮ ರಾಷ್ಟ್ರೀಯ ಶಾಲೆಗಳ ಪಾಡು ನೋಡಿ. ಅವು ನಿಧಾನಕ್ಕೆ ಮುಳುಗಡೆಯಾಗುತ್ತಾ ಅರಾಷ್ಟ್ರೀಯ ಶಾಲೆಗಳು ಎಲ್ಲೆಲ್ಲೂ ಅಂತಸ್ತ್ ಅಂತಸ್ತಾಗಿ ಮೇಲೇರುತ್ತಿವೆ. ಅವುಗಳ ಹೆಸರು ಸಾಮಾನ್ಯವಾಗಿ ಕೇಂಬ್ರಿಜ್ ಶಾಲೆಯೆಂದೋ, ಆಕ್ಸ್ಫರ್ಡ್ ಶಾಲೆಯೆಂದೋ ಇರುತ್ತದೆ. ನ್ಯಾಷನಲ್ ಸ್ಕೂಲ್ ಗಳು, ಈಗ ತ್ವರಿತ ಗತಿಯಲ್ಲಿ ಇಂಟರ್ ನ್ಯಾಷನಲ್ ಸ್ಕೂಲ್ಗಳಾಗಿ ಪರಿವರ್ತಿತವಾಗುತ್ತಿವೆ. ಮಕ್ಕಳು ಕನ್ನಡ ಓದಲಾರರು; ಬರೆಯಲಾರರು. ಕನ್ನಡ ಓದುವುದಿಲ್ಲ ಎಂದ ಮೇಲೆ ಕುವೆಂಪು, ಬೇಂದ್ರೆ, ಕಾರಂತ , ಮಾಸ್ತಿ ಅವರಿಗೆ ಅಪರಿಚಿತ ಜಗತ್ತಾಗೇ ಉಳಿಯುವುದರಲ್ಲಿ ಏನಾಶ್ಚರ್ಯ?

ಆರ್ಥಿಕ ಪ್ರಗತಿಯೆಂದರೆ ಹೊಸದನ್ನು ನಿರ್ಮಿಸುವುದಲ್ಲ, ಇರುವುದನ್ನು ಶೋಷಿಸುವುದು ಎಂದಾಗಿದೆ. ಕಾಡುಗಳನ್ನು ನಿರಂತರವಾಗಿ ಕಡಿಯುತ್ತಿದ್ದೇವೆ. ಎಲ್ಲ ನದಿಗಳನ್ನೂ ಮಹಾ ಚರಂಡಿಗಳಾಗಿ ಪರಿವರ್ತಿಸುತ್ತೇವೆ, ಇಲ್ಲಾ ಒಣಗಿಸುತ್ತೇವೆ. ಬೆಟ್ಟಗಳನ್ನು ಉದ್ಧರಿಸುವುದಲ್ಲ, ಸೀಳಿ ಸೀಳಿ ಹೋಳು ಮಾಡುತ್ತೇವೆ. ಗೋವರ್ಧನೋದ್ಧರಣ ಎಂಬ ನುಡಿಗಟ್ಟಿಗೆ ಈಗ ಅರ್ಥವೇ ಇಲ್ಲವಾಗಿದೆ. ಭೂಮಿಯ ಹೊಟ್ಟೆಯನ್ನು ಬಗಿಯುವುದು ನಮ್ಮ ನಿತ್ಯ ಕಾಯಕ. ಆಳುವ ಮಂದಿಯೇ ಇದರಲ್ಲಿ ನಿಸ್ಚಿಂತೆಯಿಂದ ತೊಡಗಿರುವುದು ವಾರ್ತಾಪತ್ರಿಕೆಗಳಲ್ಲಿ ದಿನನಿತ್ಯದ ಸಂಗತಿಯಾಗಿದೆ. ಇದೆಲ್ಲವೂ ಪ್ರಗತಿ ಮತ್ತು ಅಭಿವೃದ್ಧಿ ಎನ್ನುವ ಹೆಸರಿನಲ್ಲೇ ಆಗುತ್ತದೆ. ಬೆಂಗಳೂರಲ್ಲಿ ವಿಶಾಲವಾದ ರಸ್ತೆಗಳನ್ನು ನಿರ್ಮಿಸಿಕೊಡದೆ ಇದ್ದರೆ ನಾವು ಕಲ್ಕತ್ತಕ್ಕೋ, ಹೈದರಾಬಾದಿಗೋ, ಚನ್ನೈಗೋ ಹೋಗುತ್ತೇವೆ ಎಂದು ಐಟಿ ಬೀಟಿ ಕಂಪೆನಿಗಳು ಗುಟುರು ಹಾಕುತ್ತವೆ. ಶುರುವಾಗುತ್ತದೆ ನೋಡಿ ರಸ್ತೆಗಳ ಅಗಲೀಕರಣದ ರಂಪಾಟ. ಸಾಲುಮರಗಳನ್ನು ಕಡಿಯುವುದು, ರಸ್ತೆಬದಿಯ ಮನೆಗಳ ಮೂಗು ಮೊಲೆ ಮುಡಿಗಳನ್ನು ಕತ್ತರಿಸುವುದು ನಿರಂತರವಾಗಿ ನಡೆಯಲೇ ಬೇಕಾಗುತ್ತದೆ. ಬೀದಿಗಳು ಸುಂದರಗೊಳ್ಳುತ್ತವೆ. ಆದರೆ ಮನೆಗಳು ಮುರಿದು ಹೋಗುತ್ತವೆ. ಮನೆಗೆ ಆತ್ಮವೆನ್ನಬಹುದಾದ ಕುಟುಂಬ ವ್ಯವಸ್ಥೆ ಈಗ ಅಲ್ಲಾಡ ತೊಡಗಿದೆ. ಕೂಡು ಕುಟುಂಬಗಳು ಶಾಸ್ತ್ರಕ್ಕಾಗಿ ಬೇಕೆಂದು ಹುಡುಕಿದರೂ ಸಿಕ್ಕಲಾರವು. ಅಮೆರಿಕಾದಲ್ಲಿ ಈಗ ಒಂದು ಹೊಸ ನುಡಿಗಟ್ಟು ಬಳಕೆಯಾಗುತ್ತಿದೆಯಂತೆ. ಎಂಟಿ ನಿಸ್ಟರ್ಸ್ ಅಂತ. ಅಂದರೆ ಖಾಲಿಯಾದ ಹಕ್ಕಿ ಗೂಡಿನವರು ಅಂತ. ಮಕ್ಕಳೆಲ್ಲಾ ಹದಿನಾರು ವರ್ಷಕ್ಕೆ ಹಾರಿ ಹೋಗುತ್ತಾರಲ್ಲಾ! ಕೊನೆಗೆ ದೊಡ್ಡ ದೊಡ್ಡ ಬಂಗಲೆಗಳಲ್ಲಿ ಉಳಿಯುವುದು ಮಧ್ಯ ವಯಸ್ಸಿನ ಗಂಡ ಹೆಂಡತಿ ಇಬ್ಬರೇ! ಎಂಪ್ಟಿ ನಿಸ್ಟರ್ಸ್!

ಅಮೆರಿಕಾದ ಮಾತು ಬಿಡಿ. ಬೆಂಗಳೂರಿನ ಜಯನಗರ, ಮಲ್ಲೇಶ್ವರಂ, ಬಸವನ ಗುಡಿಗಳಲ್ಲೂ ಈವತ್ತು ಬಹಳಷ್ಟು ಮನೆಗಳು ಎಂಪ್ಟಿ ನೆಸ್ಟ್ಗಳು. ಖಾಲಿ ಗೂಡುಗಳು. ಮಕ್ಕಳೆಲ್ಲಾ ಅಮೆರಿಕಾಕ್ಕೆ ಹಾರಿಹೋಗಿರುವುದರಿಂದ.

ಅದ್ಯಾಕೋ ಅಮೆರಿಕಾದ ಹುಡುಗರಿಗೂ ಭಾರತದ ವಧುಗಳೇ ಬೇಕು. ಇಲ್ಲಿ ಬಂದು ಮದುವೆಯಾಗಿ ಹೋದವರು ನಿಯತ್ತಾಗಿ ಸಂಸಾರ ಮಾಡಿಯಾರೆಂದು ನಂಬುವಂತಿಲ್ಲ. ಅಮೆರಿಕಾದ ಅಧಿದೇವತೆಯೇ ಸ್ವಾತಂತ್ರ ದೇವಿ. ಪುರುಷ ಠೀವಿಯ ಲೋಹದ ಹೆಣ್ಣು. ಡೈವೋರ್ಸ್ ಅಲ್ಲಿ ಪ್ರತಿನಿತ್ಯದ ವಿದ್ಯಮಾನ. ಈ ಮನೆ ಮುರಿತ ಈಗ ಭಾರತದಲ್ಲೂ ಸರ್ವೇಸಾಮಾನ್ಯ ಸಂಗತಿಯಾಗಿದೆ. ಮದುವೆ ಮುರಿದು ಹೋಯಿತು ಎಂದು ಗೋಳಾಡುವ ತಾಯಿ ತಂದೆ ನಿಮಗೆ ಎಲ್ಲೆಲ್ಲೂ ಕಂಡಾರು. ಹೋದರೆ ಹೋಯಿತು. ಹಾಗೆ ಮುರಿದು ಹೋಗುವುದೇ ಸ್ವಾಭಾವಿಕ ಎಂಬ ಸಮಾಧಾನದ ನಿಲುವು ಮುಂದಿನ ದಿನಗಳಲ್ಲಿ ಬಂದರೆ ಆಶ್ಚರ್ಯ ಪಡಬೇಕಾಗಿಲ್ಲ. ದಾಂಪತ್ಯದ ಚೆಲುವಿನ ಬಗ್ಗೆ, ತಾಳಿಕೆಯ ಬಗ್ಗೆ ಕೆ.ಎಸ್.ನರಸಿಂಹ ಸ್ವಾಮಿ ಅದ್ಭುತ ಕಾವ್ಯವನ್ನು ರಚಿಸಿದ್ದಾರೆ. ಅದು ಆಧುನಿಕ ಸಂದರ್ಭದಲ್ಲಿ ಒಂದು ಭ್ರಮಾಕಲ್ಪನೆಯ ಹಾಗೆ ಕಾಣುತ್ತಾ ಇದೆ. ಕಾರಂತರ ಮರಳಿ ಮಣ್ಣಿಗೆ ಎಂಬ ಕಾದಂಬರಿ ಹೊಸಜಗತ್ತಿಗೆ ಪಳಿಯುಳಿಕೆಯಂತೆ ಕಾಣಬಹುದು! ಸಮಾಜವು ಧೃತ ಗತಿಯಲ್ಲಿ ಮತ್ತು ಒಂದೇ ದಿಕ್ಕಿನಲ್ಲಿ ಶರವೇಗದಲ್ಲಿ ಓಡಲಿಕ್ಕೆ ಹತ್ತಿದೆ. ಅದೂ ಕೂಡ ಒಂದೇ ದಿಕ್ಕಿನ ಕಡೆಗಿನ ಓಟ. ಹೊನ್ನಾಳಿಯಿಂದ ದಾವಣಗೆರೆಗೆ. ದಾವಣಗೆರೆಯಿಂದ ಬೆಂಗಳೂರಿಗೆ. ಬೆಂಗಳೂರಿಂದ ಅಮೆರಿಕಾಕ್ಕೆ! ನಮ್ಮ ಸಮಾಜದಲ್ಲಿ ಹಿಂದಿದ್ದಂತೆ ವಿರುದ್ಧ ದಿಕ್ಕಿನ ಚಲನೆಗಳೇ ಇಲ್ಲ. ಕೃಷ್ಣ ಕಾಡಿನಿಂದ ನಗರದ ಕಡೆ ಚಲಿಸಿದರೆ, ರಾಮ ನಗರದಿಂದ ಕಾಡಿನ ಕಡೆ ಚಲಿಸುತ್ತಾನೆ. ಈಗ ನಾವಾದರೋ ಸಾರಾಸಗಟಾಗಿ ಮಾನಸಿಕವಾಗಿ ಮತ್ತು ಭೌತಿಕವಾಗಿ ಅಮೆರಿಕಾದ ಕಡೆ ಚಲಿಸುತ್ತಿದ್ದೇವೆ. ಗಾದೆ ಕೂಡ ಈಗ ಬದಲಾಗಿದೆ. ಆಲ್ ರೋಡ್ಸ್ ಲೀಡ್ ಟು ಅಮೆರಿಕಾ. ಅದೂ ಅತ್ಯಂತ ತ್ವರಿತ ಗತಿಯಲ್ಲಿ. ಸಾವಧಾನಕ್ಕೆ ಈಗ ಸಮಯವೇ ಇಲ್ಲ. ದೂರವನ್ನೂ ಈಗ ಇಷ್ಟು ಹೊತ್ತಿನ ಡ್ರೈವ್ ಎಂದೇ ಗುರುತಿಸುತ್ತಾರೆ. ಇಷ್ಟು ಮೈಲಿ ದೂರ ಎಂದಲ್ಲ. ನನ್ನ ಕೂಗು ನಿಮಗೆ ತಲಪುವ ದೂರವಷ್ಟೇ ಹಿಂದೆಲ್ಲಾ ನಮ್ಮ ದೂರದ ಅಳತೆಗೋಲಾಗಿತ್ತು. ಪುರಂದರದಾಸರು ವೈಕುಂಠ ಕೂಗಳತೆಯಲ್ಲಿದೆ ಎನ್ನುತ್ತಾರೆ. ನಾವೀಗ ಇಲ್ಲಿ ಕುಳಿತೇ ಇಡೀ ಜಗತ್ತಿನೊಂದಿಗೆ ಸಂಭಾಷಿಸಬಹುದು. ಖರೆ. ಆದರೆ ಆ ಸಂಭಾಷಣೆಯಲ್ಲಿ ಹೃದಯವೊಂದು ಬಿಟ್ಟು ಬೇರೆಲ್ಲಾ ಇರಲು ಸಾಧ್ಯ. ಅಲ್ಲಿ ಆಪ್ತತೆ ಇಲ್ಲ. ವಿವರಗಳಿಲ್ಲ, ಭಾವವಿಲ್ಲ. ಇದೊಂದು ಟೆಲಿಗ್ರಾಫಿಕ್ ಭಾಷೆ. ಇದು ನಮ್ಮ ಸಾಹಿತ್ಯ ಮೀಮಾಂಸೆಗೆ ತದ್ವಿರುದ್ಧವಾದುದು. ನಮ್ಮ ಸಾಹಿತ್ಯದ ಭಾಷೆಗೆ ಸಾವಧಾನದ ಗತಿ ಬೇಕು. ಸಣ್ಣಪುಟ್ಟ ವಿವರಗಳು ಬೇಕು. ಧ್ವನಿಯ ಏರಿಳಿತದ ಸಂಗೀತ ಬೇಕು. ಆಧುನಿಕ ಭಾಷೆಗೆ ಅದೇನೂ ಬೇಕಾಗಿಲ್ಲ. ಅಮೆರಿಕನ್ನರೊಂದಿಗೆ ನೀವು ಮಾತಾಡಿ. ಧ್ವನಿಯಲ್ಲಿ ಏರಿಳಿತವಿಲ್ಲ. ಮುಖದಲ್ಲಿ ಭಾವನೆಗಳಿಲ್ಲ. ಭಾವವೇ ಇಲ್ಲದ ಭಾಷೆಯೊಂದನ್ನು ಈ ಆಧುನಿಕತೆ ನಮಗೆ ನಿರ್ಮಿಸಿಕೊಡುತ್ತಿದೆ.

ಅದಕ್ಕೇ ಸಾಹಿತ್ಯ ಇವತ್ತು ಅಪ್ರಸ್ತುವಾಗತೊಡಗಿದೆ! ಸಾಹಿತಿಗಳು ಸಮಾಜದ ಅಂಚಿಗೆ ಸರಿದಿದ್ದಾರೆ. ಇದು ಎಲ್ಲ ಕಲೆಗೂ ಅನ್ವಯಿಸುವ ಸಂಗತಿ. ಸಾಹಿತ್ಯವನ್ನೂ ಮಾರುಕಟ್ಟೆಯ ಸರಕಾಗಿಸುವ ನಾನಾ ಬಗೆಯ ಹುನ್ನಾರಗಳು ನಡೆಯ ತೊಡಗಿವೆ. ಅದಕ್ಕೇ ನಾನು ತಮ್ಮಲ್ಲಿ ಮತ್ತೆ ಮತ್ತೆ ಹೇಳುವುದು-ಮೊದಲು ನಾವು ನಮ್ಮ ಭಾಷೆಯನ್ನು ಉಳಿಸಿಕೊಳ್ಳೋಣ. ಆ ಮೂಲಕ ನಮ್ಮ ಭಾಷೆಯ ನೆನಪುಗಳನ್ನು ಉಳಿಸಿಕೊಳ್ಳೋಣ. ಆ ಮೂಲಕ ಮೌಲ್ಯವಯವಸ್ಥೆಯೊಂದನ್ನು ಮತ್ತೆ ಶೋಧಿಸಿ ಹಳೆಯ ಚಿನ್ನದಲ್ಲೇ ಹೊಸ ಆಭರಣಗಳನ್ನು ನಿರ್ಮಿಸುವಂತೆ ಪುನರ್ ನಿರ್ಮಿಸಿಕೊಳ್ಳೋಣ. ಇದೊಂದೇ ನಾವು ನಾವಾಗಿ ಉಳಿಯುವುದಕ್ಕಿರುವ ಏಕೈಕ ಉಪಾಯ. ಮುಳುಗಡೆಯ ವಿರುದ್ಧ ನಡೆಸಬಹುದಾದ ಏಕಮೇವ ಹೋರಾಟದ ಪರಿ.ಇಂಥ ಹೋರಾಟ ಶುರುವಾಗಬೇಕಾದದ್ದು ಹೊನ್ನಾಳಿಯಂಥ ಸಣ್ಣ ಊರುಗಳಲ್ಲಿ. ವಿಶ್ವೀಕರಣದ ಎಲ್ಲ ಒಳಜ್ವರದ ಗುರುತುಗಳನ್ನೂ ನಾವು ಅನುಮಾನದಿಂದಾದರೂ ನೋಡುವುದನ್ನು ಕಲಿಯಬೇಕು. ಮಹಾತ್ಮ ಗಾಂಧಿಯಂತೆ ದೇಸಿಯನ್ನು ಮತ್ತೆ ನಮ್ಮ ಹೋರಾಟದ ಧ್ವಜ ಮಾಡಿಕೊಳ್ಳಬೇಕು.

ಆತ್ಮೀಯ ಬಂಧುಗಳೇ ತಮ್ಮ ಸಮಯ ಹೆಚ್ಚಾಗಿ ತೆಗೆದುಕೊಂಡಿದ್ದರೆ ದಯಮಾಡಿ ನನ್ನನ್ನು ಕ್ಷಮಿಸಿರಿ. ನೀವು ನಿಮ್ಮ ಸಮಯ ನನಗೆ ಕೊಡದೆ ನನ್ನ ಸಮಯ ನಿಮ್ಮದಾಗದಲ್ಲವೇ? ಈ ಸಮಯ ವಿನಿಮಯವನ್ನು ನಾವು ಸಾರೋದ್ಧಾರವಾಗಿ ಪುನರುಜ್ಜೀವಿಸೋಣ. ನಮಸ್ಕಾರ.

ಜೈ ಹಿಂದ್! ಜೈ ಕರ್ನಾಟಕ!

ಕೃಪೆ : avadhimag.com

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ