ನನ್ನ ಬ್ಲಾಗ್ ಪಟ್ಟಿ

ಗುರುವಾರ, ಮಾರ್ಚ್ 10, 2011

ಹಿರಿಯ ಜೀವದ ಮನ ಆ ಕ್ಷಣ ತಳಮಳಗೊಂಡಿದ್ಯಾಕೆ?


Reading between the lines ಎಂಬ ಮಾತನ್ನು ಕೇಳಿರಬಹುದು. ಅಂತ ಮಾತಿಗೆ ಒಳ್ಳೆಯ ಉದಾಹರಣೆ ಚಿದಾನಂದ ಮೂರ್ತಿಯವರ ಪತ್ರ. ಪಾಪ ವಯಸ್ಸಾಯಿತು. ಅದರಿಂದ ಹೀಗೆಲ್ಲ ಬಡಬಡಿಸುತ್ತಿದ್ದಾರೆ ಅಂಥ ಕೆಲವು ಪತ್ರಿಕೆಗಳು ಬರೆದು ಕಾಸಿಗೆ ರಾಜ ಮಾರ್ಗ ಮಾಡಿಕೊಂಡವು. ನಿಜ.ಚಿಮೂ ಅವರಿಗೆ ವಯಸ್ಸಾಯಿತು.ಆದರೆ ಅವರಳೊಗಿನ ಸಂಶೋಧಕನಿಗೆ ಇತಿಹಾಸದ ಕ್ರೂರ ಅಧ್ಯಾಯಗಳ ಅರಿವಿದೆ. ಮೈ ಮರೆತರೆ ಮತ್ತೊಮ್ಮೆ ಇತಿಹಾಸ ಮರುಕಳಿಸಬಹುದೆಂದ ಸಹಜ ಆತಂಕವೂ ಇದೆ. ಹಂಪಿಯ ಬಗ್ಗೆ ಹೋರಾಡಿದವರ ಅರಿವಿಗೆ ದಂಡೆತ್ತಿ ಬಂದು ಧೂಳಿಪಟ ಮಾಡಿದವರ,ರಕ್ಕಸ ತಂಗಡಿಯ ನೆನಪು ಬಾರದಿರಬಹುದೇ? ಭಾವುಕ ಜೀವಿ ಚಿಮೂ ಅವರಿಗೆ ಇಳಿ ವಯಸ್ಸಿನಲ್ಲಿ ಇವೆಲ್ಲ ಇನ್ನೂ ಹೆಚ್ಚಾಗಿ ಕಾಡುತ್ತಿರಬಹುದು,ಅದರಲ್ಲೂ ಮೈ-ಕೈಗೆ ಎಣ್ಣೆ ಸವರಿಕೊಂಡು ಸತ್ಯ ಹೇಳಲು ಬಂದವರ ಕಣ್ಣಿಗೆ ಮಣ್ಣೇರಚಿ ಹಾದಿ ತಪ್ಪಿಸುವ ಜನರ ಮಧ್ಯೆ ಮಾತಾಡುವ ಚಾಣಕ್ಷ ಮಂದಿಯ ನಡುವೆ ದಿಗಿಲಿಗೆ ಬಿದ್ದ ಆ ಹಿರಿಯ ಜೀವದ ತಲ್ಲಣ ನಮಗರಿವಾಗುತ್ತಿಲ್ಲವಾ?
ಕೆಲ ದಿನಗಳ ಹಿಂದೆ ಸಾಹಿತ್ಯ ಸಮ್ಮೇಳನದ ಸಂದರ್ಭದಲ್ಲಿ ರಾಜ್ಯಪಾಲರು ಹಿರಿಯ ವಿದ್ವಾಂಸ,ಸಂಶೋಧಕ ಚಿಮೂ ಅವರಿಗೆ ಡಾಕ್ಟರೇಟ್ ನಿರಾಕರಿಸಿದಾಗ ಕನ್ನಡ ಸಾರಸ್ವತ ಲೋಕವೇ ರಾಜ್ಯಪಾಲರೆಡೆಗೆ ತಿರುಗಿ ನಿಂತಿತ್ತು. ತಪ್ಪಿನ ಅರಿವಾದ ರಾಜ್ಯಪಾಲರು ಚಿಮೂ ಅವರಿಗೆ ಗೌರವ ಡಾಕ್ಟರೇಟ್ ನೀಡಿದ್ದು ಆಯಿತು. ಹಾಗೆ ಡಾಕ್ಟರೇಟ್ ಪಡೆದ ನಂತರ ಚಿಮೂ ಅವರು ಪ್ರಜಾವಾಣಿಯಲ್ಲಿ ’ರಾಜ್ಯಪಾಲರು ಇದನ್ನು ಗಮನಿಸಬೇಕು’ ಅನ್ನುವ ಶೀರ್ಷಿಕೆಯ ಪತ್ರವನ್ನು ವಾಚಕರ ವಾಣಿಗೆ ಬರೆದ್ರು. ಅದರಲ್ಲಿ ಗೋರಿ ಪಾಳ್ಯದಲ್ಲಿ ಹಸಿರು ಬಾವುಟ ನೋಡಿದ್ದರ ಬಗ್ಗೆ, ಅಲ್ಲಿ ಹಿಂದೂಗಳ ಸಂಖ್ಯೆ ಕಡಿಮೆಯಾಗುತ್ತಿರುವುದರ ಬಗ್ಗೆ ಆತಂಕ ವ್ಯಕ್ತಪಡಿಸುತ್ತಾ, ಮಾಂಸದಂಗಡಿಯ ಮುಂದೆ ನಿಂತ ಹಸುವಿಗೆ ಮರುಗುತ್ತ ಇದ್ದಿದ್ದನ್ನ ಹೇಳಿಕೊಂಡಿದ್ದಾರೆ. ಹಾಗೆಯೆ ಅದರಲ್ಲಿ ಮತಾಂತರದ ಬಗ್ಗೆಯು ಮಾತುಗಳಿವೆ.
ಯಥಾ ಪ್ರಕಾರ ಕೆಲ ಮಾಧ್ಯಮದ ಮಂದಿ ’ಮತಾಂತರ’ ಅನ್ನುವ ಸಾಮಾಜಿಕ ಶಾಂತಿಗೆ ಅನಿಷ್ಟವಾಗಿರುವ ವಿಷಯವನ್ನು ಮೂಲೆಗೆ ತಳ್ಳಿ, ’ಹಸಿರು ಬಾವುಟ, ಮಾಂಸ, ಆತಂಕ’ ಅನ್ನುವ ಚಿಮೂ ಅವರ ವಾಕ್ಯದ ಸುತ್ತ ಚರ್ಚೆಯನ್ನ ಗಿರಕಿ ಹೊಡೆಸುತ್ತಲೇ ಇದ್ದಾರೆ! ನಿಜ, ಹಸಿರು ಬಾವುಟ ಹಾರಿಸುವುದನ್ನ,ಮೈಕಿನಲ್ಲಿ ನಮಾಜ್ ಕೇಳಿಸುವುದಕ್ಕೆಲ್ಲ ಆತಂಕ ಪಡಬೇಕಿಲ್ಲ, ಕ್ರೈಸ್ತರೆಲ್ಲ ಕೋಮುವಾದಿಗಳು ಅನ್ನೋ ಹೇಳಿಕೆಗಳು ಚಿಮೂ ಅವರಂಥ ಸಂಶೋಧಕರಿಂದ ಬರಬಾರದಿತ್ತು. ಅದಕ್ಕೆ ಸಂಶೋಧನಾ ಭಾಷೆಯನ್ನೇ ಉಪಯೋಗಿಸಿ ಮಾತನಾಡಬಹುದಿತ್ತು. ಹೀಗೆ ಮಾಡದೆ ಇರುವುದು ಅವರ ಸಮರ್ಥಕರನ್ನು ಒಂದು ಗಳಿಗೆ ತಡ ಬಡಾಯಿಸುವಂತೆ ಮಾಡಿದ್ದು ಸುಳ್ಳಲ್ಲ. ಈಗ ಇದ್ದ ಹಾಗೆಯೇ ಅವರ ಮಾತುಗಳನ್ನು ಯಾರು ಒಪ್ಪಲು ಕಷ್ಟವಾದೀತು. ಅವರ ಪತ್ರಕ್ಕೆ ಪ್ರತಿಕ್ರಿಯೆಯಾಗಿ ’ಚಿಮೂ ಅವರು ಅಪಾಯಕಾರಿ ಮನಸ್ಥಿತಿ ತಲುಪಿದ್ದಾರೆ, ಇಂಥ ಮಾತುಗಳಿಂದ ರಕ್ತಪಾತವಾಗಬಹುದು’ ಅಂತ ಹುಯಿಲೆಬ್ಬಿಸುವುದನ್ನೂ ಒಪ್ಪಲಾಗುವುದಿಲ್ಲ.
ಚಿಮೂ ಅವ್ರ ಪತ್ರದ ಕೆಲವೇ ಕೆಲವು ಅಂಶಗಳನ್ನ ಹಿಡಿದು ಯಾಕೆ ಚರ್ಚೆ ನಡೆಯುತ್ತಿದೆ? ಆ ಪತ್ರದಲ್ಲಿ ಅವರು ಬರಿ ಇಷ್ಟನ್ನು ಮಾತ್ರವೇ ಬರೇದಿದ್ದು? ಅಥವಾ ತಮಗೆ ಯಾವುದು ಬೇಕೋ ಅದನ್ನ ಮಾತ್ರ ಆರಿಸಿಕೊಂಡು ಪತ್ರದ ಹಿಂದಿನ ನಿಜವಾದ ಆತಂಕವನ್ನು ಮರೆಮಾಡಿರುವುದು ಚರ್ಚೆಯ ಹಾದಿ ತಪ್ಪಿಸುತ್ತದೆ. ಎಡ-ಬಲ ಪಂಥೀಯರ ಹಿಂದಿನ ಎಲ್ಲ ಚರ್ಚೆಗಳನ್ನ ನೋಡುತ್ತ ಬಂದರೆ ’ಹಾದಿ ತಪ್ಪಿಸುವ’ ಚರ್ಚೆಗೇ ಪ್ರಾಮುಖ್ಯತೆ ಅನ್ನುವುದು ಸ್ಪಷ್ಟವಾಗುತ್ತದೆ.
ಬಹು ಧರ್ಮವಿರುವ ರಾಷ್ಟ್ರದಲ್ಲಿ ಅನ್ಯ ಧರ್ಮಗಳೆಡೆಗೆ ಭಯ,ಅಪನಂಬಿಕೆಗಳಿರುವುದು ಸಹಜ,ಇದಕ್ಕೆ ಮುಖ್ಯವಾದ ಕಾರಣ ಊಹಾತ್ಮಕ ಭಯ.ತಮ್ಮ ಧರ್ಮೀಯರ ಸಂಖ್ಯೆ ಎಲ್ಲಿ ಈ ದೇಶದಲ್ಲಿ ಕಡಿಮೆಯಾಗಿ ಬಿಡುವುದೋ ಎಂಬ ಭಯ ಬಹುಸಂಖ್ಯಾತರಲ್ಲೂ,ಅಲ್ಪಸಂಖ್ಯಾತರಲ್ಲೂ ಇರುತ್ತದೆ.ಚಿಮೂ ಅವರ ಪತ್ರ ಕೆಲವು ಬಹುಸಂಖ್ಯಾತರನ್ನ ತಲ್ಲಣವನ್ನ ಪ್ರತಿನಿಧಿಸುತ್ತಿದೆ,ಅ ತಲ್ಲಣಗಳನ್ನ ಅರಿತು ಅದರ ನಿವಾರಣೆಗೆ ಪ್ರಯತ್ನಿಸುದನ್ನ ಬಿಟ್ಟು,ಬೆದರಿದವರ ಮೇಲೆ ಹಾವು ಎಸೆಯುವಂತ ಕೆಲಸವಾಗಬಾರದು.ನಮ್ಮ ವಿದ್ವಾಂಸರ ‘ಒಂದು ಕಣ್ಣಿಗೆ ಬೆಣ್ಣೆ, ಒಂದು ಕಣ್ಣಿಗೆ ಸುಣ್ಣ’ ಎಂಬ ವಾದ ಜನತೆಯಲ್ಲಿ ಇನ್ನಷ್ಟು ಕೋಮುವಾದಕ್ಕೆ ಅಂಟಿಕೊಳ್ಳುವಂತೆ ಮಾಡುತ್ತಿದೆ.ಸರ್ಕಾರಗಳ ನೀತಿಯೂ ಇದಕ್ಕೆ ಪೂರಕವಾಗಿಯೇ ಇದ್ದಾಗ ಇದರ ತೀವ್ರತೆ ಇನ್ನೂ ಹೆಚ್ಚು.ವಿಚಾರವಾದವೂ ಒಂದು ಮಗ್ಗುಲಿಗೆ ಸರಿಯಾಗಿ ಅನ್ವಯಿಸುತ್ತ ಇನ್ನೊಂದನ್ನು ಬಿಟ್ಟೂಬಿಟ್ಟಾಗ ಎರಡನೆ ಗುಂಪು ತಮ್ಮ ವಿಚಾರವೆಲ್ಲ ಸರಿ ಎಂದು ಭಾವಿಸಿ ಬಿಡಬಹುದು.
ಉದಾಹರಣೆಗೆ ಟೀವಿಯಲ್ಲಿ ಬಣ್ಣ ಬಣ್ಣದ ಬಟ್ಟೆ ತೊಟ್ಟು ದೀಪ ಹಚ್ಚಲಿಲ್ಲ ಅಂದ್ರೆ ಪ್ರಳಯವಾಗುತ್ತದೆ ಅಂತ ಹೆದರಿಸೋ ಡೋಂಗಿ ಜ್ಯೋತಿಷಿಗಳನ್ನು ತೆಗಳುವಾಗ ಇರುವ ಹುಮ್ಮಸ್ಸು, ದೇವರು ಖಾಯಿಲೆ ವಾಸಿ ಮಾಡುತ್ತಾನೆ ಬನ್ನಿ ಅಂತ ’ಬೆನ್ನ(ನ್ನಿ) ಹಿಂದೆ(ನ್)’ ನಿಂತು ತಲೆ ಮೇಲೆ ಕೈಯಿಟ್ಟು ಪವಾಡದ ಮಂಕೂ ಬೂದಿ ಎರಚುವಾಗ ತನ್ನ ತೀವ್ರತೆ ಕಳೆದುಕೊಂಡಿತ್ತು. ಇಂದು ಮಾಟ ಮಂತ್ರದ ಬಗ್ಗೆ ಟೀಕಿಸುವ ಮಂದಿ ಹೀಗೆ ಕೆಲ ವರ್ಷದ ಹಿಂದೆ ಪ್ಯಾಲೇಸ್ ಗ್ರೌಂಡ್ಸ್ನಲ್ಲಿ ತಲೇ ಮೇಲೆ ಕೈಯಿಡಿಸಿಕೊಂಡು ತಲೆ(ಇದ್ದವ್ರು!) ತಿರುಗಿ ಬಿದ್ದಾಗ ಚರ್ಚೆಯಾಗಲೇ ಇಲ್ಲ.
ಇನ್ನು ’ಮತಾಂತರ’ದ ಬಗ್ಗೆ ಚಿಮೂ ಅವರ ಆತಂಕಕ್ಕೆ ಕಾರಣವಿಲ್ಲವೇ? ಭಾರತದ ಸಂವಿಧಾನದ ಅಡಿಯಲ್ಲಿ ಸ್ವ ಇಚ್ಚೆಯಿಂದ ಮತಾಂತರವಾಗಬಹುದು ಅಂತ ವಾದಿಸಿದರೂ ಸಹ ವಾಸ್ತವ ಬೇರೆಯೇ ಆಗಿದೆ ಎಂಬುದು ಪ್ರಗತಿ ಮತ್ತು ಪ್ರತಿಗಾಮಿಗಳೀಬ್ಬರಿಗೂ ತಿಳಿದ ವಿಷಯವೇ. ಇವೆಲ್ಲ ನ್ಯೂಟನ್ನನ ಮೂರನೇ ನಿಯಮದ ಹಾಗೆ.ಕ್ರಿಯೆಗೊಂದು ಪ್ರತಿಕ್ರಿಯೆ ಇರುತ್ತದೆ ಅನ್ನುವ ಅಂಶವನ್ನು ಅರ್ಥಮಾಡಿಕೊಂಡು ತಪ್ಪು ಯಾರೇ ಮಾಡಿದರು ಅದನ್ನು ವಿರೋಧಿಸುವುದನ್ನು ಕಲಿತರೆ ಶಾಂತಿ ನೆಲೆಸಬಲ್ಲದು.
ನಾವು ಬದುಕ ಬಂದವರು. ಹೊಡದಾಡಿ ಸಾಯುವುದಕ್ಕಲ್ಲ. ಸುಂದರ ಭಾರತವನ್ನು ಕಟ್ಟಲಿಕ್ಕೆ. ಇದಕ್ಕೆ ರಿಲಿಜಿಯನ್ ಎನ್ನುವ ಸಂಗತಿ ಅಡ್ಡಿ ಮಾಡಬಾರದು.ಓಲೈಕೆಯಂತೂ ಬೇಡವೇ ಬೇಡ. ಜನರಿಗೆ ಬೇಕಾಗಿರುವುದು ಸಹಬಾಳ್ವೆ ಮಾತ್ರ.ತುತ್ತು ಅನ್ನಕ್ಕಾಗಿ ಹೋರಾಡುವ ಜನರಿಗ್ಯಾವ ಧರ್ಮ ಸ್ವಾಮೀ? ಅವರೆಂದಿಗೂ ಒಟ್ಟಿಗೆ ಬದುಕ ಬಯಸುವವರು.ಸೌಹಾರ್ದತೆ ಅನ್ನುವುದು ನಮ್ಮ ರಕ್ತದ ಗುಣ.
ಇಡಿ ದೇಶವೇ ಅಯೋಧ್ಯ ವಿವಾದದ ಬಿಸಿಯಲ್ಲಿರುವಾಗ,ಕರ್ನಾಟಕದ ಮೂಲೆಯ ಹಿಂದೂಗಳೇ ಹೆಚ್ಚಿರುವ ಊರಿನಲ್ಲಿ ಕೂಲಿ ಮಾಡಿ ಜೀವನ ಸಾಗಿಸುವ ಮುಸ್ಲಿಂ ಬಾಂಧವರಿಗೊಸ್ಕರ ಖುದ್ದು ನಿಂತು ಮಸೀದಿ ಕಟ್ಟಿಸಿ ಕೊಡುವ ಹಿಂದೂಗಳಿದ್ದಾರೆ.ಕಾಶ್ಮೀರ ಅನ್ನೋ ಅಗ್ನಿ ಕುಂಡದೊಳಗೆ,ನಿಷೇಧಾಜ್ಞೆಯ ಸಮಯದಲ್ಲೂ ಸಹ ಅಂಜದೆ ಪಕ್ಕದ ಮನೆಯ ಕಾಶ್ಮೀರಿ ಪಂಡಿತರ ಅಂತ್ಯ ಸಂಸ್ಕಾರವನ್ನ ಹಿಂದೂ ಧರ್ಮದ ಶೈಲಿಯಲ್ಲಿ ಮಾಡುವ ಮುಸ್ಲಿಂ ಹೃದಯಗಳಿವೆ,ಶಿಕ್ಷಣ,ಸೇವಾ ಕ್ಷೇತ್ರದಲ್ಲಿ ಯಾವುದೇ ಫಲಾಪೇಕ್ಷೆಯಿಲ್ಲದೆ ತಮ್ಮ ಪಾಡಿಗೆ ತಾವು ದುಡಿಯುವ ಕ್ರೈಸ್ತ ಮನಸ್ಸುಗಳಿವೆ.
ಭಾರತದಲ್ಲಿ ಬಹು ಧರ್ಮವಿರಬಹುದು,ಆದರೆ ಭಾರತೀಯತೆ ಅಂದರೆ ಮಾನವೀಯತೆ ಅಷ್ಟೇ! ನನ್ನ ಮಟ್ಟಿಗೆ ಭಾರತೀಯತೆ ಅಂದರೆ ಎಲ್ಲರನ್ನ ಬೆಸೆಯುವ ಕೊಂಡಿ. ಎಲ್ಲರನ್ನು ಬೆಸೆಯುವ ಕೊಂಡಿಯನುಡುಕುತ ಮುಂದೆ ಸಾಗೋಣ.

(ಚಿತ್ರ ಕೃಪೆ : ದಿಹಿಂದೂ.ಕಾಂ)


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ