ನನ್ನ ಬ್ಲಾಗ್ ಪಟ್ಟಿ

ಶುಕ್ರವಾರ, ಮಾರ್ಚ್ 11, 2011

ವಿಶ್ವೇಶ್ವರ ಭಟ್ - ನೂರೆಂಟು ಮಾತು - ತವರಿಗೆ ಮರಳಿದ ಖುಷಿ, ರೋಮಾಂಚನ!

ಕಾಲ ಚಕ್ರ ತಿರುಗುತ್ತಲೇ ಇರುತ್ತದೆ. ಹದಿನಾಲ್ಕು ವರ್ಷದ ಬಳಿಕ ನಾನು ಪುನಃ ‘ಕನ್ನಡಪ್ರಭ’ ಪತ್ರಿಕೆ ಸೇರಿದ್ದೇನೆ. ಎಲ್ಲವೂ ವಿಸ್ಮಯವೆನಿಸುತ್ತಿದೆ

ಕೆಲವು ಸಂಗತಿಗಳನ್ನು ವ್ಯಾಖ್ಯಾನಿಸಲು ಆಗುವುದಿಲ್ಲ. ಅರ್ಥೈಸಿಕೊಳ್ಳಲು ಹಿಡಿತಕ್ಕೆ ಸಿಗುವುದಿಲ್ಲ. ಅವುಗಳನ್ನು ಏನೆಂದು ಕರೆಯಬೇಕೋ ತಿಳಿಯುವುದಿಲ್ಲ. ಬಂದ ಹಾಗೆ ಸುಮ್ಮನೆ ಒಪ್ಪಿಕೊಳ್ಳಬೇಕಾಗುತ್ತದೆ, ಮರು ಮಾತಾಡದೇ. ನಾನಂತೂ ಕನಸು ಮನಸಿನಲ್ಲಿಯೂ ‘ಕನ್ನಡಪ್ರಭ’ದ ಸಂಪಾದಕನಾಗಬಹುದು ಎಂದು ಎಣಿಸಿರಲಿಲ್ಲ. ಇಂದಿಗೂ ಇದು ನನ್ನ ಪಾಲಿಗೆ ವಿಸ್ಮಯವೇ, ರೋಮಾಂಚನವೇ.

ಹೆಚ್ಚು ಪ್ರಸಾರವಿರುವ ‘ವಿಜಯ ಕರ್ನಾಟಕ’ ಪತ್ರಿಕೆಯಲ್ಲಿ ಸುಮಾರು ಹತ್ತು ವರ್ಷಗಳ ಕಾಲ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಈಗ ‘ಕನ್ನಡಪ್ರಭ’ದಲ್ಲಿ ಸಂಪಾದಕನಾದುದಕೆ ರೋಮಾಂಚನವೇಕೆ ಎಂದು ನೀವು ಕೇಳಬಹುದು. ಹೇಳುತ್ತೇನೆ ಕೇಳಿ.

ಹಾಗೆ ನೋಡಿದರೆ ನಾನು ‘ವಿಜಯಕರ್ನಾಟಕ’ಕ್ಕೂ ಸಂಪಾದಕನಾಗಬಹುದು ಎಂದು ಅಂದುಕೊಂಡಿರಲಿಲ್ಲ. ಯಾಕೆಂದರೆ ನನಗೆ ಆಗ ಸಂಪಾದಕನಾಗುವ ವಯಸ್ಸೂ ಆಗಿರಲಿಲ್ಲ. ಬರವಣಿಗೆ, ಲೋಕಾನುಭವ, ಪತ್ರಿಕೋದ್ಯಮ ಪರಿಣತಿಯ ಜತೆ ಜತೆಗೆ ಸಂಪಾದಕರಾಗಲು ಕೆಲವು ಅರ್ಹತೆಗಳಿವೆ. ಅವ್ಯಾವುವೆಂದರೆ ವಯಸ್ಸು ಐವತ್ತೈದು ದಾಟಿರಬೇಕು, ಕೂದಲು ಹಣ್ಣಾಗಿರಬೇಕು, ಪೂರ್ತಿ ಉದುರಿದ್ದರೆ ಭೇಷು, ಸೋಡಗ್ಲಾಸಿನ ಗುಳಿಂಪು ಕನ್ನಡಕ ಧರಿಸಿರಬೇಕು, ಕನಿಷ್ಠ ಎರಡು ಆಪರೇಶನ್ ಗಳನ್ನಾದರೂ ಮಾಡಿಸಿಕೊಂಡಿರಬೇಕು… ಹೀಗೆ ಸಂಪಾದಕರ ಬಗ್ಗೆ ಕೆಲವು ಇಮೇಜ್ ಗಳಿವೆ. ನನಗೆ ಇಂಥ ಯಾವುದೇ ಅರ್ಹತೆಗಳಾಗಲಿ, ಇಮೇಜ್ ಗಳಾಗಲಿ ಇರಲಿಲ್ಲ.

ಆಗ ಕನ್ನಡ ಪತ್ರಿಕೋದ್ಯಮದಲ್ಲಿ ಅನೇಕ ಘಟಾನುಘಟಿಗಳಿದ್ದರು. ನನ್ನ ವಯಸ್ಸಿನಷ್ಟೇ ಭರ್ತಿ ಅನುಭವ ಹೊಂದಿದ ಹಿರಿಯ ಪತ್ರಕರ್ತರಿದ್ದರು. ಅಲ್ಲದೇ ನಾನು ಆಗ ಪತ್ರಿಕೋದ್ಯಮ ಫೀಲ್ಡ್ ನಲ್ಲೂ ಇರಲಿಲ್ಲ. ಅಂದಿನ ಕೇಂದ್ರ ಪ್ರವಾಸೋದ್ಯಮ ಮತ್ತು ಸಂಸ್ಕೃತಿ ಖಾತೆ ಸಚಿವರಾಗಿದ್ದ ಅನಂತಕುಮಾರ್ ಅವರಿಗೆ ವಿಶೇಷ ಕರ್ತವ್ಯಾಧಿಕಾರಿಯಾಗಿ ಮೂರು ವರ್ಷ ಕೆಲಸ ಮಾಡಿದ್ದರಿಂದ ಮುಖ್ಯವಾಹಿನಿ ಪತ್ರಿಕೋದ್ಯಮದಿಂದ ಹೊರಗುಳಿದಿದ್ದೆ. (ಹಾಗೆಂದು ಪತ್ರಿಕೋದ್ಯಮವನ್ನು ಕೊರಳಿಗೆ ಸುತ್ತಿಕೊಂಡೇ ಇದ್ದೆ. ಇದೇ ಸಂದರ್ಭದಲ್ಲಿ ಪತ್ರಿಕಾ ಹೆಡ್ ಲೈನ್ ಗೆ ಸಂಬಂಧಿಸಿದಂತೆ ‘ತಲೆಬರಹ – ಪತ್ರಿಕೆ ಹಣೆಬರಹ’ ಎಂಬ ಪುಸ್ತಕ ಬರೆದಿದ್ದೆ. ಕರ್ನಾಟಕ ಮಾಧ್ಯಮ ಅಕಾಡೆಮಿ ಅದನ್ನು ಪ್ರಕಟಿಸಿತ್ತು.)

ಆದರೂ ‘ವಿಕ’ ಮಾಲೀಕರಾದ ವಿಜಯ ಸಂಕೇಶ್ವರರು ನನಗೊಂದು ಅವಕಾಶ ನೀಡಿದರು. ಆಗ ಅವರ ಪತ್ರಿಕೆ ಆರಂಭವಾಗಿ ಒಂದು ವರ್ಷವಾಗಿತ್ತು. ಅವರ ನಿರೀಕ್ಷೆಗೆ ತಕ್ಕ ಹಾಗೆ ಪತ್ರಿಕೆ ಪ್ರಸಾರ ಏರಿರಲಿಲ್ಲ. ದರ ಸಮರಕ್ಕಿಳಿದು ಆರು ತಿಂಗಳಾಗಿತ್ತು. ಒಬ್ಬರು ಸಂಪಾದಕರು ಬದಲಾಗಿದ್ದರು, ಇನ್ನೊಬ್ಬರು ಬಂದು ಕುಳಿತಿದ್ದರು.

ಈಗಿನ ಮುಖ್ಯಮಂತ್ರಿ ಯಡಿಯೂರಪ್ಪನವರ ರೇಸ್ ಕೋರ್ಸ್ ನಿವಾಸವಿದೆಯಲ್ಲ, ಅಲ್ಲಿ ಅಂದಿನ ಪ್ರತಿಪಕ್ಷದ ನಾಯಕರಾಗಿದ್ದ ಜಗದೀಶ್ ಶೆಟ್ಟರ್ ಅವರ ನಿವಾಸದಲ್ಲಿ ಉಳಿದುಕೊಂಡಿದ್ದ ಸಂಕೇಶ್ವರ ಮತ್ತು ನನ್ನ ನಡುವೆ ಮೊದಲ ಭೇಟಿಯಾಯಿತು. ಅದಕ್ಕೂ ಮೊದಲು ನಾವು ಅಲ್ಲಲ್ಲಿ ಭೇಟಿಯಾದಾಗ ‘ಹಲೋ ಹಲೋ’ ಎಂದು ಕುಶಲೋಪರಿಗಳನ್ನು ವಿನಿಮಯ ಮಾಡಿಕೊಂಡಿದ್ದನ್ನು ಬಿಟ್ಟರೆ ಕುಳಿತು ಮಾತಾಡಿದ್ದಿಲ್ಲ. ಪತ್ರಿಕೋದ್ಯಮ ಹಾಗೂ ಅವರ ಪತ್ರಿಕೆಗೆ ಸಂಬಂಧಿಸಿದಂತೆ ನಮ್ಮಿಬ್ಬರ ನಡುವೆ ಸುಮಾರು ಎರಡು ಗಂಟೆ ಮಾತುಕತೆಯಾಯಿತು.

ಮರುದಿನ ಬೆಳಗ್ಗೆ ನನಗೆ ಹಾಗೂ ಅವರಿಗೆ ಆತ್ಮೀಯರಾದ ಗೆಳೆಯರೊಬ್ಬರು ನನ್ನನ್ನು ಭೇಟಿ ಮಾಡಿ, ‘ಸಂಕೇಶ್ವರರು ಕೇಳುತ್ತಿದ್ದಾರೆ, ಅವರ ಪತ್ರಿಕೆಗೆ ಸಂಪಾದಕರಾಗಿ ಬರಲು ಸಿದ್ಧರಿದ್ದೀರಾ?’ ಎಂದು ಕೇಳಿದರು. ಅವರು ಜೋಕ್ ಮಾಡುತ್ತಿಲ್ಲ ಎಂಬುದನ್ನು ಖಾತ್ರಿ ಮಾಡಿಕೊಳ್ಳಲು ನನಗೆ ಮೂರ್ನಾಲ್ಕು ಗಂಟೆ ಹಿಡಿಯಿತು! ನಾನು ಒಂದು ವಾರದ ಬಳಿಕ ನನ್ನ ಸಮ್ಮತಿ ತಿಳಿಸಿದ ಬಳಿಕ, ನನ್ನ ಹಾಗೂ ಸಂಕೇಶ್ವರರ ನಡುವೆ ಎರಡನೇ ಭೇಟಿಯಾಯಿತು. ಆಗ ಅವರೊಂದು ಮಾತನ್ನು ಹೇಳಿದ್ದರು- ‘ಇನ್ನು ಆರು ತಿಂಗಳಲ್ಲಿ ಪತ್ರಿಕೆ ಪ್ರಸಾರ ಕನಿಷ್ಠ 75 ಸಾವಿರ ದಾಟಬೇಕು. ಇಲ್ಲದಿದ್ದರೆ ಪತ್ರಿಕೆ ಮುಚ್ಚಲು ಹಿಂದೇಟು ಹಾಕುವುದಿಲ್ಲ. ಗೊತ್ತಲ್ಲ, ನಾನು ಇದೇ ಕಾರಣಕ್ಕಾಗಿ ‘ನೂತನ’ ವಾರಪತ್ರಿಕೆ ಹಾಗೂ ‘ಭಾವನಾ’ ಮಾಸಿಕವನ್ನು ಮುಚ್ಚಿದ್ದೇನೆ. ವಿಕವನ್ನು ಮುಚ್ಚುವ ಪ್ರಸಂಗ ಬಂದರೆ ನಿಮಗೆ ಐದು ಲಕ್ಷ ರು. ಪರಿಹಾರ ನೀಡುತ್ತೇನೆ. ಪತ್ರಿಕೆ ಪ್ರಸಾರ ಹೇಗೆ ಏರಿಸುತ್ತೀರಿ ಎಂಬುದು ನಿಮಗೆ ಬಿಟ್ಟದ್ದು’ ಎಂದು ಸಂಕೇಶ್ವರ ನೇರಾನೇರ ಹೇಳಿದ್ದರು.

ಸಂಕೇಶ್ವರರು ನನ್ನಲ್ಲಿ ಸಂಪಾದಕನ ಸಂಪನ್ನಗುಣವನ್ನು ಹೇಗೆ ಶೋಧಿಸಿದರೋ ಗೊತ್ತಿಲ್ಲ. ನಾನು ಸಂಪಾದಕನೆಂದು ನನ್ನನ್ನೇ ನಂಬಿಸಿಕೊಳ್ಳುವ ಹೊತ್ತಿಗೆ ಎರಡು- ಮೂರು ತಿಂಗಳು ಕಳೆದಿದ್ದವು. ಆಗ ನನಗೆ ಮೂವತ್ನಾಲ್ಕು. ಎಂಟು ವರ್ಷ ಪತ್ರಿಕೆಯಲ್ಲಿ, ನಾಲ್ಕು ವರ್ಷ ಏಷಿಯನ್ ಕಾಲೇಜ್ ಆಫ್ ಜರ್ನಲಿಸಮ್ ನಲ್ಲಿ ಮೇಷ್ಟ್ರಾಗಿ ಕೆಲಸ ಮಾಡಿದ ಚಿಗುರು, ತೊದಲು ಅನುಭವ ಅಷ್ಟೆ. ಒಂದು ವೇಳೆ ನಾನೇ ವಿಜಯ ಸಂಕೇಶ್ವರ ಆಗಿದ್ದೆ ಎನ್ನಿ, ವಿಶ್ವೇಶ್ವರ ಭಟ್ ಎಂಬ ಎಳಸು ಆಸಾಮಿಯನ್ನು ಖಂಡಿತವಾಗಿಯೂ ಸಂಪಾದಕನನ್ನಾಗಿ ನೇಮಿಸುತ್ತಿರಲಿಲ್ಲ. ನೂರಾರು ಕೋಟಿ ರು. ಬಂಡವಾಳ ಹಾಕಿ ಉದ್ಯಮ ಆರಂಭಿಸಿದಾಗ ಶುದ್ಧ ಕಸುಬಿಯನ್ನು ಬಿಟ್ಟು ಪತ್ರಿಕೋದ್ಯಮದಲ್ಲಿ ಕಣ್ಣು ಬಿಡುತ್ತಿರುವ ಮುಂಗಾಲಪುಟಕಿಯನ್ನು ಅದೂ ಸಂಪಾದಕನನ್ನಾಗಿ ನೇಮಿಸೋದುಂಟಾ?

ಆದರೆ ಸಂಕೇಶ್ವರರು ‘ಶ್ರೀ ಮಲ್ಲಿಕಾರ್ಜುನ’ನ (ಅವರ ಎಲ್ಲ ಟ್ರಕ್ಕು, ಬಸ್ ಗಳ ಮೇಲೆಲ್ಲ ಶ್ರೀ ಮಲ್ಲಿಕಾರ್ಜುನ ಎಂದೇ ಬರೆಸಿರುತ್ತಾರೆ.) ಮೇಲೆ ಭಾರ ಹಾಕಿ ನನ್ನನ್ನು ಪತ್ರಿಕೆಯ ನೊಗಕ್ಕೆ ಕಟ್ಟಿ ಹಾಕಿದ್ದರು! ಈ ವಿಷಯದಲ್ಲಿ ಅವರ (ಭಂಡ) ಧೈರ್ಯವನ್ನು ಮೆಚ್ಚಲೇಬೇಕು. ಮುಂದಿನದನ್ನು ಹೇಳಬೇಕಿಲ್ಲ. ಪತ್ರಿಕೆ ಸಾಗಿದ ದಾರಿಯಲ್ಲಿ ನೀವೇ ಸಾಕ್ಷಾತ್ ಪಥಿಕರಾಗಿದ್ದೀರಿ.

ನನಗೆ ‘ಕನ್ನಡಪ್ರಭ’ ಹೊಸ ಪತ್ರಿಕೆಯಲ್ಲ. ‘ಸಂಯುಕ್ತ ಕರ್ನಾಟಕ’ದ ಬೆಂಗಳೂರು ಆವೃತ್ತಿಯಲ್ಲಿ ಎರಡು ವರ್ಷ ಟ್ರೇನಿ ಹಾಗೂ ಕಾಯಂ ಉಪಸಂಪಾದಕನಾಗಿ ಕೆಲಸ ಮಾಡಿದ ಬಳಿಕ ನಾನು ಸೇರಿದ್ದು ‘ಕನ್ನಡಪ್ರಭ’ವನ್ನು. ನನಗೆ ‘ಕೆಲಸ ಕೊಟ್ಟವರು’ ಎನ್ನುವುದಕ್ಕಿಂತ ನನಗೆ ‘ಕೆಲಸ ಕಲಿಸಿ ಕೊಟ್ಟವರು’ ವೈಯೆನ್ಕೆ. ನಾಲ್ಕು ವರ್ಷಗಳ ಕಾಲ ‘ಕನ್ನಡಪ್ರಭ’ದ ಡೆಸ್ಕ್ ನಲ್ಲಿ ನಾನು ಉಪ ಸಂಪಾದಕನಾಗಿದ್ದೆ. ಒಂದು ದಿನ ವೈಯೆನ್ಕೆಯವರು ನನ್ನನ್ನು ‘ಇಂಡಿಯನ್ ಎಕ್ಸ್ ಪ್ರೆಸ್’ ಸಂಪಾದಕೀಯ ಸಲಹೆಗಾರರಾಗಿರುವ ಟಿ.ಜೆ.ಎಸ್. ಜಾರ್ಜ್ ಅವರ ಕೊಠಡಿಗೆ ಕರೆದುಕೊಂಡು ಹೋದರು. ಏಷಿಯನ್ ಕಾಲೇಜಿನಲ್ಲಿ ಕನ್ನಡ ಪತ್ರಿಕೋದ್ಯಮ ಕೋರ್ಸನ್ನು ಆರಂಭಿಸುವ ಆಲೋಚನೆಯನ್ನು ಜಾರ್ಜ್ ವ್ಯಕ್ತಪಡಿಸಿದರು. ‘ಕನ್ನಡ ಪತ್ರಿಕೋದ್ಯಮ ಸಿಲಬಸ್ ನ್ನು ರೂಪಿಸಿ, ಇಡೀ ಕೋರ್ಸನ್ನು ನೀವು ನಿಭಾಯಿಸಬಹುದಾ?’ ಎಂದು ಜಾರ್ಜ್ ಕೇಳಿದಾಗ ನಾನು ಒಪ್ಪಿಕೊಂಡೆ. ಮುಂದಿನ ನಾಲ್ಕು ವರ್ಷ ಏಷಿಯನ್ ಕಾಲೇಜ್ ಆಫ್ ಜರ್ನಲಿಸಮ್ ನನ್ನ ಮನೆಯೇ ಆಯಿತು. ಅಂದರೆ ಕನ್ನಡಪ್ರಭ ಹಾಗೂ ಅದರ ಮಾತೃಸಂಸ್ಥೆ ನಡೆಸಿದ ಕಾಲೇಜಿನಲ್ಲಿ ಒಟ್ಟಾರೆ ಎಂಟು ವರ್ಷ ಕೆಲಸ ಮಾಡಿದ್ದೆ.

ಹದಿನಾಲ್ಕು ವರ್ಷಗಳ ಬಳಿಕ ಪುನಃ ‘ಕನ್ನಡಪ್ರಭ’ಕ್ಕೆ ಮರಳಿದ್ದು ಮರಳಿ ಮನೆಗೆ ಬಂದಂಥ ಸಂತಸ ನೀಡುತ್ತಿದೆ. ರೋಮಾಂಚನವಾಗುತ್ತಿದೆ ಎಂದು ಹೇಳಿದ್ದು ಈ ಕಾರಣಕ್ಕಾಗಿ.

ಇನ್ನೂ ಒಂದು ಕಾರಣವಿದೆ. ಸುಮಾರು ಇಪ್ಪತ್ನಾಲ್ಕು ವರ್ಷಗಳ ಹಿಂದಿನ ಪ್ರಸಂಗ. ನಾನು ಪತ್ರಿಕೋದ್ಯಮ ವಿದ್ಯಾರ್ಥಿಯಾಗಿದ್ದಾಗ ‘ಕನ್ನಡಪ್ರಭ’ ಪತ್ರಿಕಾಲಯಕ್ಕೆ ತೀರಾ ಅಳುಕಿನಿಂದ ಪ್ರವೇಶಿಸಿದ್ದೆ. ಪತ್ರಿಕೆಯ ಅಂದಿನ ಸಂಪಾದಕರಾಗಿದ್ದ ಖಾದ್ರಿ ಶಾಮಣ್ಣ ಅವರನ್ನು ದೂರದಿಂದಾದರೂ ಒಮ್ಮೆ ಕಣ್ಣಾರೆ ನೋಡಬೇಕೆಂಬುದು ನನ್ನ ಆಸೆಯಾಗಿತ್ತು. ಆ ದಿನಗಳಲ್ಲಿ ಖಾದ್ರಿಯವರ ಸಂಪಾದಕೀಯ, ಅವರ ವ್ಯಕ್ತಿತ್ವ, ಧೀಮಂತಿಕೆ ಉತ್ತುಂಗದಲ್ಲಿತ್ತು. ಅವರ ಕುರಿತು ಅನೇಕ ದಂತಕತೆಗಳು ಹರಿದಾಡುತ್ತಿದ್ದವು. ಖಾದ್ರಿ ಸಂಪಾದಕೀಯ ಬರೆದರೆ ಸರಕಾರ ಅಲುಗಾಡುತ್ತದೆ ಎಂದೆಲ್ಲ ಜನ ಮಾತಾಡಿಕೊಳ್ಳುತ್ತಿದ್ದರು. ಅವರ ಸುತ್ತ ಒಂದು ‘ಪ್ರಭಾವಳಿ’ ನಿರ್ಮಾಣವಾಗಿತ್ತು. ಅವರನ್ನೊಮ್ಮೆ ಕಣ್ತುಂಬಿಸಿಕೊಳ್ಳಬೇಕೆಂಬುದು ನನ್ನ ಬಹುದಿನಗಳ ಕನಸಾಗಿತ್ತು. ಅವರ ಮಾತು, ಹಾವಭಾವ, ದಾಢಸಿತನ, ಗಡಸು ದನಿ, ದಢೂತಿ ದೇಹ, ನೀಟಾದ ದಿರಿಸಿನಿಂದ ಅವರನ್ನು ಕಂಡವರು ತುಸು ಅಳುಕುತ್ತಿದ್ದರು. ಇದಕ್ಕೆ ಅವರ ನಿರ್ಭೀತ ಬರಹ ಪುಟವಿಟ್ಟಂತಾಗಿತ್ತು. ಅಲ್ಲದೇ ಖಾದ್ರಿಯವರಿಗೆ ರಾಜ್ಯ- ರಾಷ್ಟ್ರಮಟ್ಟದ ನಾಯಕರ ಸಂಪರ್ಕವಿತ್ತು. ಅವರು ತಮ್ಮ ಧೀಮಂತ ಬರಹ ಹಾಗೂ ವ್ಯಕ್ತಿತ್ವದಿಂದಾಗಿ ವಿಶೇಷ ಮನ್ನಣೆಗೆ ಪಾತ್ರರಾಗಿದ್ದರು. ತಮ್ಮ ಚುಟುಕಾದ, ಚಾಟಿಯೇಟಿನಂತಿರುವ, ವಿಶಿಷ್ಟ ಬರವಣಿಗೆಯ ಶೈಲಿಯಿಂದಾಗಿ ಅವರು ಉಳಿದವರಿಗಿಂತ ಭಿನ್ನರಾಗಿ ಗುರುತಿಸಿಕೊಂಡಿದ್ದರು.

ಖಾದ್ರಿಯವರ ಈ ಎಲ್ಲ ಚಿತ್ರಣಗಳನ್ನು ಮನಸ್ಸಿನಲ್ಲಿ ತುಂಬಿಕೊಂಡು, ಬಹಳ ನಿರೀಕ್ಷೆ, ತವಕಗಳ ಗಂಟು ಕಟ್ಟಿಕೊಂಡು, ಅವರ ಕೊಠಡಿ ಮುಂದೆ ಗುಬ್ಬಚ್ಚಿ ಹಾಗೆ ನಿಂತುಕೊಂಡೆ. ಖಾದ್ರಿ ತಮ್ಮ ದೈನಂದಿನ ಸಂಪಾದಕೀಯವನ್ನು ಸಹಾಯಕನಿಗೆ ಡಿಕ್ಟೇಟ್ ಮಾಡುತ್ತಿದ್ದರು. ‘ಸಂಪಾದಕರು ಒಂದು ಗಂಟೆಯ ನಂತರ ಸಿಕ್ತಾರೆ’ ಅಂದ್ರು. ನಾನು ಒಂದು ಗಂಟೆ ಹೊರಗಡೆ ಅವರಿಗಾಗಿ ಕಾಯುತ್ತಾ ನಿಂತಿದ್ದೆ. ಅಷ್ಟೊತ್ತಿಗೆ ಅವರನ್ನು ಭೇಟಿ ಮಾಡಲು ಮೂರ್ನಾಲ್ಕು ಜನ ಅವರ ಕೊಠಡಿಯೊಳಗೆ ನುಗ್ಗಿಬಿಟ್ಟರು. ಅವರಲ್ಲೊಬ್ಬರು ಬಂದಗದ್ದೆ ರಮೇಶ್ ಎಂಬುದು ಆ ನಂತರ ನನಗೆ ಗೊತ್ತಾಯ್ತು. ಈ ಮೂರ್ನಾಲ್ಕು ಜನ ಸಹ ಸುಮಾರು ಮುಕ್ಕಾಲು ಗಂಟೆ ಖಾದ್ರಿ ಜತೆ ಹರಟುತ್ತಿದ್ದರು. ನಾನು ಹೊರಗಡೆ ಹಾಗೆ ನಿಂತೇ ಇದ್ದೆ. ಅವರೆಲ್ಲ ಹೋದ ಬಳಿಕ ನನ್ನನ್ನು ಕರೆಯಬಹುದು ಎಂದು ಯೋಚಿಸುತ್ತಿದ್ದರೆ, ಖಾದ್ರಿ ಊಟಕ್ಕೆ ಹೊರಟು ಹೋದರು. ‘ಸಾಯಂಕಾಲ ಐದು ಗಂಟೆ ಬಳಿಕ ಸಂಪಾದಕರು ಬರ್ತಾರೆ. ಆಗ ಬನ್ನಿ. ನಿಮ್ಮನ್ನು ಅವರ ಬಳಿಗೆ ಕರೆದುಕೊಂಡು ಹೋಗ್ತೇನೆ’ ಎಂದು ಸಹಾಯಕರು ತಿಳಿಸಿದರು. ಬೇಸರವಾಯಿತು. ಆದರೆ ಬೇರೆ ದಾರಿಯಿರಲಿಲ್ಲ. ನಾನೂ ನಿಂತು ನಿಂತು ಸುಸ್ತಾಗಿದ್ದೆ. ಆದರೆ ಖಾದ್ರಿಯವರನ್ನು ಭೇಟಿ ಮಾಡಲೇ ಬೇಕು ಎಂಬ ಹಠ ಪುನಃ ನನ್ನನ್ನು ‘ಕನ್ನಡಪ್ರಭ’ ಕಾರ್ಯಾಲಯದತ್ತ ಕರೆಯಿತು. ಐದು ಗಂಟೆಗೆ ಬರುತ್ತಾರೆಂದು ನಾನು ಅರ್ಧ ಗಂಟೆ ಮುಂಚಿತವಾಗಿ ಹೋದೆ.

ಸರಿಯಾಗಿ ಐದಕ್ಕೆ ಖಾದ್ರಿ ಬಂದರು. ಹಾಲು ಬಿಳಿ ಪಂಚೆ, ಗರಿಗರಿ ಖದರು, ಮೇಲೊಂದು ಜಾಕೀಟು, ನಿಧಾನವಾಗಿ ಹೆಜ್ಜೆ ಹಾಕಿ ಬರುತ್ತಿದ್ದರೆ ಸಲಗದ ಗೆಟಪ್ಪು. ನನಗೆ ಒಳಗೊಳಗೆ ಪುಕುಪುಕು. ಅವರ ಕೊಠಡಿಗೆ ಕರೆದಾಗ ಅವರ ಮುಂದಿನ ಕುರ್ಚಿ ಮೇಲೆ ಕುಳಿತುಕೊಳ್ಳಲು ಅಂಜಿಕೆ. ಹೆಸರು, ಊರು, ಕುಲ, ಗೋತ್ರ, ಆಸಕ್ತಿ ಎಲ್ಲವನ್ನೂ ಕೇಳಿದರು. ಪತ್ರಕರ್ತನಾಗಬೇಕೆಂದಿದ್ದೇನೆ ಎಂದಾಗ ಖಾದ್ರಿ ತಮ್ಮ ಎಂದಿನ ಅಧಿಕಾರವಾಣಿಯಿಂದ, ‘ಬರೀ ಸುಮ್ಮನೆ ಹಾಗೆ ಹೇಳಿದರೆ ಪ್ರಯೋಜನವಿಲ್ಲ. ಪತ್ರಿಕೋದ್ಯಮ ಅಂದ್ರೆ ತಪಸ್ಸು. ಅದಂದ್ರೆ ತ್ಯಾಗ. ಇದು ಉಳಿದ ವೃತ್ತಿಯಂತೆ ಅಲ್ಲ’ ಎಂದು ಹೇಳಿ ‘ನಿಮ್ಮ ಭಾಷೆ ಹೇಗಿದೆ? ಮೊದಲು ಕಾಗುಣಿತ ತಪ್ಪಿಲ್ಲದೇ ಬರೆಯುವುದನ್ನು ಕಲಿತುಕೋ. ಭಾಷಾ ಶುದ್ಧಿಗೆ ಗಮನ ಕೊಡು. ಅದು ಸಾಧಿಸದೇ ಪತ್ರಿಕಾಲಯದ ಕಡೆ ಬರಬೇಡ. ನನಗೆ ಬೇರೆ ಕೆಲಸವಿದೆ, ನೀನು ಹೊರಡು’ ಎಂದು ಬೆನ್ನು ಸವರಿ ಕಳಿಸಿದ್ದರು. ಆ ಇಡೀ ದಿನ ಅವರಿಗಾಗಿ ವ್ಯಯಿಸಿದ್ದು ಸಾರ್ಥಕವೆನಿಸಿತು.

ಆನಂತರ ಸಂಪಾದಕರಾದ ವೈಯೆನ್ಕೆ ಹಾಗೂ ನನ್ನದು ಅವಿನಾಭಾವ ಸಂಬಂಧ. ನಾನು ಮೊದಲು ಭೇಟಿಯಾದಾಗ ಅವರು ಪ್ರಜಾವಾಣಿ ಸಂಪಾದಕರಾಗಿ ನಿವೃತ್ತರಾಗಿದ್ದರು. ಅದಾಗಿ ಎರಡು ವರ್ಷಗಳ ಬಳಿಕ ಅವರು ‘ಕನ್ನಡಪ್ರಭ’ದ ಸಂಪಾದಕರಾದರು. ಸುಮಾರು ಹನ್ನೊಂದು ವರ್ಷ ಅವರು ಸಂಪಾದಕರಾಗಿದ್ದರು. ನನ್ನ ಅವರ ಸಂಬಂಧ ಮೊದಲ ಭೇಟಿಯಿಂದ ಶುರುವಾಗಿ ಅವರ ಅಂತಿಮ ಯಾತ್ರೆಯಲ್ಲಿ ಪರ್ಯವಸಾನಗೊಳ್ಳುವ ತನಕ ನಡೆಯಿತು. ಹೆಚ್ಚು ಕಮ್ಮಿ ಪ್ರತಿದಿನ ‘ಕನ್ನಡಪ್ರಭ’ದ ಅವರ ಚೇಂಬರ್ ನಲ್ಲಿ ಭೇಟಿಯಾಗುತ್ತಿದ್ದೆ. ಪತ್ರಿಕೋದ್ಯಮದ ಅನೇಕ ಪಟ್ಟುಗಳನ್ನು ನನಗೆ ಕಲಿಸಿದವರು ವೈಯೆನ್ಕೆ. ನಾನು ಅವರ ಗರಡಿಯಲ್ಲಿ ಪಳಗಿದವನು ಎಂಬುದು ನನಗೆ ಅಭಿಮಾನದ ಸಂಗತಿಯೇ. ವೈಯೆನ್ಕೆಯವರ ಕೊನೆಯ ಎಂಟು ವರ್ಷಗಳ ಅವಧಿಯಲ್ಲಿ ನಾನು ಅವರೊಂದಿಗೆ ನಿಕಟವಾಗಿದ್ದೆ.

ಏಷಿಯನ್ ಕಾಲೇಜಿನಲ್ಲಿ ಮೇಷ್ಟ್ರಾಗಿ ಸೇರಿದರೂ, ಪತ್ರಿಕೋದ್ಯಮವನ್ನು ಬೇರೆ ದೃಷ್ಟಿಯಿಂದ ನೋಡಲು, ಅಧ್ಯಯನ ಮಾಡಲು ಸಹಾಯಕವಾಯಿತು. ಜಾರ್ಜ್ ಅವರಂಥ ಧೀಮಂತ ಪತ್ರಕರ್ತರ ಒಡನಾಟ, ಅನುಭವ ಕಥನ ಪ್ರಾಪ್ತಿಯಾಗಿದ್ದು ಇಲ್ಲಿಯೇ. ಪತ್ರಿಕೋದ್ಯಮ ಮೇಷ್ಟ್ರಾದವರು ಪುಸ್ತಕ ಬರೆಯಬೇಕೆಂದು ಪ್ರಚೋದಿಸಿದವರೇ ಜಾರ್ಜ್. ನನ್ನಿಂದ ‘ಪತ್ರಿಕೋದ್ಯಮ ಪಲ್ಲವಿ’ ಬರೆಯಿಸಿದವರೇ ಅವರು. ನಾನು ಆಗ ‘ಕನ್ನಡಪ್ರಭ’ದಲ್ಲಿದ್ದಾಗ ಇದ್ದ ಪ್ರಮುಖ ಪತ್ರಕರ್ತರೆಂದರೆ ಕೆ. ಸತ್ಯನಾರಾಯಣ. ಅವರು ಬರಹ, ನಡೆನುಡಿಗಳಿಂದಲೇ ನಮಗೆ ಪತ್ರಿಕೋದ್ಯಮ ಪಾಠ ಹೇಳಿಕೊಟ್ಟವರು. ನಂತರ ಅವರು ‘ಕನ್ನಡಪ್ರಭ’ದ ಸಂಪಾದಕರೂ ಆದರು.

ಕಾಲ ಚಕ್ರ ತಿರುಗುತ್ತಲೇ ಇರುತ್ತದೆ. ಹದಿನಾಲ್ಕು ವರ್ಷದ ಬಳಿಕ ನಾನು ‘ಕನ್ನಡಪ್ರಭ’ದ ಕಚೇರಿಯಲ್ಲಿ ಬಂದು ಕುಳಿತಿದ್ದೇನೆ. ಪ್ರಧಾನ ಸಂಪಾದಕನಾಗಿ!

ಕನ್ನಡಪ್ರಭಕ್ಕೆ 47 ವರ್ಷಗಳ ಭವ್ಯ ಇತಿಹಾಸವಿದೆ. ಕರ್ನಾಟಕ ಮತ್ತು ಕನ್ನಡಿಗರ ಒತ್ತಾಸೆಗಳಿಗೆ ಪತ್ರಿಕೆ ಸ್ಪಂದಿಸುತ್ತಾ ಬಂದಿದೆ. ಕನ್ನಡಪರ ಹೋರಾಟಗಳಿಗೆ ಧ್ವನಿಯಾಗಿದೆ. ಎನ್.ಎಸ್. ಸೀತಾರಾಂ ಶಾಸ್ತ್ರಿ, ಕೆ. ಎಸ್. ರಾಮಕೃಷ್ಣ ಮೂರ್ತಿ, ವೈಯೆನ್ಕೆ, ಖಾದ್ರಿ ಶಾಮಣ್ಣ ಅವರಂಥ ಧೀಮಂತ ಸಂಪಾದಕರು ಕಟ್ಟಿ ಬೆಳೆಸಿದ ಪತ್ರಿಕೆಯ ಜವಾಬ್ದಾರಿ ಸಿಕ್ಕಿರುವುದು ಸಂತಸ ತಂದಿದೆ. ಜಾರ್ಜ್ ಹಾಗೂ ಕೆ. ಸತ್ಯನಾರಾಯಣ ಅವರಿಗೆ ಹದಿನಾಲ್ಕು ವರ್ಷಗಳ ಹಿಂದೆ ಎಷ್ಟು ವಯಸ್ಸಾಗಿತ್ತೋ ಈಗಲೂ ಅಷ್ಟೇ ವಯಸ್ಸಾಗಿದೆ. ಅವರಿಬ್ಬರ ಮಾರ್ಗದರ್ಶನ ಈಗಲೂ ಸಿಗುತ್ತಿದೆ.

ಈಗ ನನಗೆ ಬೇಕಿರುವುದು ನಿಮ್ಮ ಪ್ರೀತಿ, ವಿಶ್ವಾಸ, ಬೆಂಬಲ.

ಅದಕ್ಕೆ ಹೇಳಿದ್ದು ರೋಮಾಂಚನವಾಗುತ್ತಿದೆ ಅಂತ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ