ನನ್ನ ಬ್ಲಾಗ್ ಪಟ್ಟಿ

ಮಂಗಳವಾರ, ಏಪ್ರಿಲ್ 5, 2011

ಜಗದಚ್ಚರಿಗಳನ್ನು ಬೆರಳ ತುದಿಗೆ ನಿಲುಕಿಸಿದಾತ ನೇಪಥ್ಯದಲ್ಲೇ ನಿಂತ!


World Wide Web!

ನೀವೊಬ್ಬ ಉದ್ಯೋಗಾಕಾಂಕ್ಷಿಯಾಗಿರಬಹುದು, ಯಾವುದೋ ಒಂದು ಸಂಶೋಧನೆಗೆ ಮಾಹಿತಿ ಹುಡುಕುತ್ತಿರಬಹುದು, ಯಾವುದಾದರೊಂದು ವಿಷಯ-ವಿಚಾರದ ಬಗ್ಗೆ ತಿಳಿದುಕೊಳ್ಳಬೇಕಾಗಿರಬಹುದು, ಮನರಂಜನೆ ಬೇಕಾಗಿರಬಹುದು, ಹೊಸ ಸ್ನೇಹಿತರನ್ನು ಮಾಡಿಕೊಳ್ಳಬೇಕೆನಿಸಿದರೂ, ಸಮಯ ಹರಣ ಮಾಡಬೇಕೆಂದಾದರೂ ಸರಿ, ಈ ವರ್ಲ್ಡ್ ವೈಡ್ ವೆಬ್ ಇದೆಯಲ್ಲಾ ಅದು ನೈಜ ಅರ್ಥದಲ್ಲಿ paradise of opportunities! ಬಹುಶಃ ಯಾವೊಂದು ಸಂಶೋಧನೆಯೂ wwwನಷ್ಟು ಶೀಘ್ರವಾಗಿ, ಈ ಪರಿಯಾಗಿ ಆವರಿಸಿದ್ದಿಲ್ಲ. ಯಾವೊಂದು ಕ್ರಾಂತಿಯಿಂದಲೂ ಮನುಷ್ಯನಿಗೆ ಈ ರೀತಿಯ ಅಗತ್ಯತೆ, ಅನಿವಾರ್ಯತೆಯನ್ನು ಸೃಷ್ಟಿಸಲು ಸಾಧ್ಯವಾಗಿರಲಿಲ್ಲ. ಇಲ್ಲಿ ಎಲ್ಲರಿಗೂ ಪ್ರವೇಶವಿದೆ, ಎಲ್ಲರಿಗೂ ಅವಕಾಶಗಳಿವೆ. ಈ ವರ್ಲ್ಡ್ ವೈಡ್ ವೆಬ್ ಮನುಷ್ಯ ಜೀವನದ ಯಾವ ಅಂಶಗಳನ್ನೂ ಮುಟ್ಟದೆ ಬಿಟ್ಟಿಲ್ಲ. ಅದು ಶಿಕ್ಷಣ, ಸೆಕ್ಸ್, ಸಮಾಧಿ, ಔಷಧಿ, ಕೃಷಿ, ಕೈಗಾರಿಕೆ, ಉತ್ಪಾದನೆ ಯಾವ ಕ್ಷೇತ್ರಗಳನ್ನೂ ಬಾಕಿ ಉಳಿಸಿಲ್ಲ. ಒಂದು ಕರೆಂಟ್ ಬಿಲ್ ಕಟ್ಟುವುದಿರಬಹುದು, ಫೋನ್ ಬಿಲ್ ತುಂಬುವುದಿರಬಹುದು, ಬಸ್, ಟ್ರೈನ್, ಏರ್ ಟಿಕೆಟ್ ಬುಕ್ ಮಾಡುವುದಿರಬಹುದು ಕುಳಿತಲ್ಲೇ ಎಲ್ಲವನ್ನೂ ಸಾಧ್ಯವಾಗಿಸಿರುವುದು ವರ್ಲ್ಡ್ ವೈಡ್ ವೆಬ್. ನಿಮ್ಮದೊಂದು ಸರಕು ಇರಬಹುದು, ಹಳೇ ವಾಹನ ಇರಬಹುದು, ಬಾಡಿಗೆ ಮನೆ ಇರಬಹುದು ಯಾವ ಏಜೆಂಟ್್ಗಳ, ಜಾಹೀರಾತುಗಳ ಸಹಾಯವಿಲ್ಲದೆ ಗ್ರಾಹಕರನ್ನು ತಲುಪುವ ಅವಕಾಶವನ್ನು ಅದು ಕಲ್ಪಿಸಿಕೊಟ್ಟಿದೆ. ಉದ್ಯಮಿಗಳು, ಕೈಗಾರಿಕೆಗಳು, ಟೆಲಿಕಾಂ ಕಂಪನಿಗಳು ಯೋಚಿಸುವ ವಿಧಾನವನ್ನೇ, ಮಾರುಕಟ್ಟೆ ತಂತ್ರವನ್ನೇ ಬದಲಾಯಿಸಿ ಬಿಟ್ಟಿದೆ. ವೆಬ್ ಲೋಕ ಬದುಕಿನ ಆಯಾಮಗಳನ್ನೆಲ್ಲ ಆವರಿಸಿಕೊಂಡಿದೆ. ಜನರ ಸಂವಹನದ ಬಗೆಯನ್ನೇ ಬದಲಾಯಿಸಿಬಿಟ್ಟಿದೆ. ಇವತ್ತು ವೆಬ್ ಇಲ್ಲದ ಜಗತ್ತನ್ನು ಕಲ್ಪಿಸಿಕೊಳ್ಳುವುದಕ್ಕೂ ಅಸಾಧ್ಯ.

ಆದರೆ…

ಇಂಥದ್ದೊಂದು ವ್ಯವಸ್ಥೆಯನ್ನು ಸೃಷ್ಟಿಸಿದ, ಇದನ್ನೆಲ್ಲ ಸಾಧ್ಯವಾಗಿಸಿದ ಆ ಪುಣ್ಯಾತ್ಮ ಯಾರು?

ಜಗತ್ತಿನಲ್ಲಿ ಎಂಥೆಂಥದೋ ಅನ್ವೇಷಣೆಗಳಾಗಿವೆ. ಇವತ್ತು ಒಬ್ಬನ ಹೆಸರಲ್ಲಿ ಗುರುತಿಸಲಾಗುತ್ತಿರುವ ಅನ್ವೇಷಣೆ ವಾಸ್ತವದಲ್ಲಿ ಎಷ್ಟೋ ಕೈಗಳ ಮಿಳಿತದಿಂದ ಆಗಿರುವಂಥದ್ದು. ಈ ವಿಷಯದಲ್ಲಿ ತುಂಬ ಭಿನ್ನವಾಗಿ ಉಳಿಯುವವನೆಂದರೆ ಟಿಮ್ ಬರ್ನರ್ಸ್ ಲೀ. ಈ ಹೆಸರು ನಿಮಗೆ ಅಷ್ಟೇನೂ ಪರಿಚಿತ ಎನಿಸದಿದ್ದರೂ ‘ವರ್ಲ್ಡ್ ವೈಡ್ ವೆಬ್್’ ಎಂಬ ಹೆಸರನ್ನಂತೂ ಅಂತರ್ಜಾಲದ ಪರಿಕಲ್ಪನೆ ಇರುವ ಎಲ್ಲರೂ ಕೇಳಿಯೇ ಇರುತ್ತೀರಿ. ಈ ಡಬ್ಲ್ಯುಡಬ್ಲ್ಯುಡಬ್ಲ್ಯುವನ್ನು ವಿನ್ಯಾಸಗೊಳಿಸಿರುವಾತ ಬರ್ನರ್ಸ್. ಇದರ ಇಡಿ ಶ್ರೇಯಸ್ಸು ಅವನೊಬ್ಬನಿಗೇ ಸಲ್ಲುತ್ತದೆ ಎಂಬುದೇ ವಿಶೇಷ. ಈ ಸೌಲಭ್ಯವನ್ನು ಮುಕ್ತವಾಗಿ ಹಾಗೂ ಉಚಿತವಾಗಿ ಇಟ್ಟುಕೊಂಡು ಬಂದಿರುವುದರ ಹೆಚ್ಚುಗಾರಿಕೆಯೂ ಆತನದ್ದೇ. ಇಂಗ್ಲೆಂಡ್್ನ ಆಕ್ಸ್್ಫರ್ಡ್ ಯೂನಿವರ್ಸಿಟಿಯ ಕ್ವೀನ್ಸ್ ಕಾಲೇಜಿನಲ್ಲಿ 1976ರಲ್ಲಿ ಪದವೀಧರರಾದವರು ಬರ್ನರ್ಸ್ ಲೀ ಸೋಲ್ಡರಿಂಗ್ ಕಬ್ಬಿಣ, ಟಿಟಿಎಲ್ ಗೇಟ್, ಎಮ್6800 ಪ್ರೊಸೆಸರ್ ಹಾಗೂ ಹಳೆ ಟಿವಿಯನ್ನು ಉಪಯೋಗಿಸಿಕೊಂಡು ತಮ್ಮದೊಂದು ಮೊದಲ ಕಂಪ್ಯೂಟರ್ ವಿನ್ಯಾಸಗೊಳಿಸಿಕೊಂಡಿದ್ದರು ಅವರು. ಇಂಗ್ಲೆಂಡ್್ನ ಪ್ರಮುಖ ಟೆಲಿಕಾಂ ಸಾಧನಗಳ ಉತ್ಪಾದಕ ಪ್ಲೆಸ್ಸಿ ಟೆಲಿಕಮ್ಯುನಿಕೇಷನ್ ಲಿಮಿಟೆಡ್್ನಲ್ಲಿ ಟ್ರಾನ್ಶಾಕ್ಷನ್ ವ್ಯವಸ್ಥೆ, ಮೆಸೇಜ್ ರಿಲೆ ಹಾಗೂ ಬಾರ್್ಕೋಡ್ ತಂತ್ರಜ್ಞಾನ ವಿಭಾಗದಲ್ಲಿ ಕೆಲಸ ಮಾಡಿದರು. 1978ರಲ್ಲಿ ಡಿ.ಜಿ. ನ್ಯಾಶ್ ಎಂಬ ಕಂಪನಿಯಲ್ಲಿ ಮಲ್ಟಿಟಾಸ್ಕಿಂಗ್ ಆಪರೇಟಿಂಗ್ ಸಿಸ್ಟಮ್ ಇತ್ಯಾದಿ ಜವಾಬ್ದಾರಿ ನಿರ್ವಹಿಸಿದರು.

ಅದು 1980ನೇ ವರ್ಷ.

ಜಿನೇವಾದ ಭೌತಶಾಸ್ತ್ರಕ್ಕೆ ಸಂಬಂಧಿಸಿದ ಯುರೋಪಿಯನ್ ಲ್ಯಾಬೋರೇಟರಿಯಲ್ಲಿ (SERA) ಆರು ತಿಂಗಳ ಅವಧಿಗೆ ಸಾಫ್ಟ್್ವೇರ್ ಎಂಜಿನಿಯರ್ ಆಗಿದ್ದ ಬ್ರಿಟನ್ನಿನ ಬರ್ನರ್ಸ್ ಲೀ. ಅದೇ ಕಂಪನಿಯಲ್ಲಿ ಹಾರ್ಡ್್ವೇರ್, ಸಾಫ್ಟ್್ವೇರ್್ಗಳ ಭಿನ್ನ ಭಿನ್ನ ಕೆಲಸಗಳಲ್ಲಿ ಸುಮಾರು ಹತ್ತು ಸಾವಿರ ಮಂದಿ ತೊಡಗಿಸಿಕೊಂಡಿದ್ದರು. ಇ-ಮೇಲ್ ಹಾಗೂ ಕಡತಗಳ ಹಸ್ತಾಂತರದ ಮೂಲಕ ಇವರೆಲ್ಲರ ಕೆಲಸ ಬೆಸೆದುಕೊಂಡಿತ್ತು. ಎಲ್ಲ ಯೋಜನೆಗಳೂ ಅನೇಕ ವಿಜ್ಞಾನಿಗಳ ಮಧ್ಯೆ ಹಂಚಿ ಹೋಗಿ ಒಬ್ಬರು ಇನ್ನೊಬ್ಬರೊಂದಿಗೆ ವ್ಯವಹರಿಸುವ ವ್ಯವಸ್ಥೆಯೊಂದರ ನಿರ್ಮಾಣ ಅಗತ್ಯವಾಗಿತ್ತು. ಅಂತ ಸಂದರ್ಭದಲ್ಲೇ ಅಲ್ಲಿದ್ದ ಬರ್ನರ್ಸ್ ‘ಎನ್ಕ್ವಯರ್್’ (Enquire) ಎಂಬ ಸಾಫ್ಟ್್ವೇರ್ ವ್ಯವಸ್ಥೆಯನ್ನು ರೂಪಿಸಿದ. ಈಗಿನ ವರ್ಲ್ಡ್ ವೈಡ್ ವೆಬ್್ನ ಪೂರ್ವರೂಪವೇ ಅದಾಗಿತ್ತು. ವೆಬ್್ನಲ್ಲಿ ಈಗ ಕಾಣುವ ಅನೇಕ ರಚನೆಗಳಿದ್ದರೂ ಕೆಲಮಟ್ಟಿಗೆ ಭಿನ್ನವಾಗಿತ್ತು. ಬರ್ನರ್ಸ್ ಲೀ ಹೇಳಿಕೊಂಡಂತೆ ‘ಎನ್ಕ್ವಯರ್್’ ಎಂಬ ನಾಮಕರಣಕ್ಕೆ ‘ಎನ್ಕ್ವಯರ್ ಅಪಾನ್ ವಿತ್ ಎವೆರಿಥಿಂಗ್್’ ಎಂಬ ಪುಸ್ತಕವೇ ಪ್ರೇರಣೆ.

ಆದರೆ ಬರ್ನರ್ಸ್್ನ ಇಂಥದ್ದೊಂದು ಅದ್ಭುತ ಐಡಿಯಾವನ್ನು ಯಾರೂ ಗಣನೆಗೇ ತೆಗೆದುಕೊಳ್ಳಲಿಲ್ಲ. ‘ಇನ್ಫೋಮೇಶ್್’, ‘ಇನ್ಫಾರ್ಮೇಷನ್ ಮೈನ್್’ ಎಂದೆಲ್ಲ ಬೇರೆ ಬೇರೆ ಹೆಸರುಗಳನ್ನಿಟ್ಟುಕೊಂಡು ಅದನ್ನು ಪರಿಚಯಿಸಲು ನೋಡಿದಾಗಲೂ ಈತನ ಬಾಸ್್ಗಳಿಗೆ ಆ ಬಗ್ಗೆ ಆಸಕ್ತಿಯೇ ಕುದುರಲಿಲ್ಲ. ಆತನ ಪ್ರಸ್ತಾವಗಳೆಲ್ಲವೂ ‘ಕುತೂಹಲಕರವಾಗಿರುವುದಂತೂ ಹೌದು, ಆದರೆ ಅಸ್ಪಷ್ಟವಾಗಿದೆ’ ಎಂಬ ಒಕ್ಕಣೆ ಹೊತ್ತು ವಾಪಸಾದವು.

ಕೊನೆಗೊಮ್ಮೆ ತನ್ನ ಆವಿಷ್ಕಾರವನ್ನು ನೇರವಾಗಿ ಜನರೆದುರು ಇಟ್ಟ ಬರ್ನರ್ಸ್. ‘ವರ್ಲ್ಡ್ ವೈಡ್ ವೆಬ್್’ (ಡಬ್ಲ್ಯುಡಬ್ಲ್ಯುಡಬ್ಲ್ಯು) ಯೋಜನೆಯ ಅಸ್ತಿತ್ವ ಸಾರುವ ಅಂತರ್ಜಾಲ ಸುದ್ದಿಸಮೂಹವೊಂದನ್ನು ಸೃಷ್ಟಿಸಿದ. ಅಲ್ಲಿ ನೀಡಲಾದ ಸಂದೇಶದಲ್ಲಿ ಮೊದಲ ವೆಬ್್ಸೈಟ್್ಗಾಗಿ ಬೇಕಾದ ಮೊದಲ ವೆಬ್ ಬ್ರೌಸರ್ ಅನ್ನು ಡೌನ್್ಲೋಡ್ ಮಾಡಿಕೊಳ್ಳುವುದು ಹೇಗೆ ಎಂಬುದನ್ನು ವಿವರಿಸಲಾಗಿತ್ತು. ಆಗಸ್ಟ್ 6, 1996ರ ಮಧ್ಯಾಹ್ನ 2:56:20 ಗಂಟೆಗೆ ಸರಿಯಾಗಿ ವೆಬ್್ಸೈಟ್ ಲಾಂಚ್ ಆಯಿತು. ವೆಬ್ ಬ್ರೌಸರ್ ಡೌನ್್ಲೋಡ್ ಮಾಡಿಕೊಳ್ಳಬೇಕಾದ http://info.cern.chಗೆ ಅವತ್ತಿನಿಂದಲೇ 10 ಹಿಟ್ಸ್್ಗಳಿಂದ ಆರಂಭಿಸಿ 100- 1000 ಎಂದು ಹಿಗ್ಗುತ್ತಲೇ ಹೋಯಿತು. ಹೋಮ್್ಪೇಜ್, ಸರ್ಚ್ ಇಂಜಿನ್, ಡಾಟ್ ಕಾಮ್ ಲೋಕಗಳೆಂಬ ಅದ್ಭುತ ಸಂಗತಿಗಳಿಗೆ ತಾನಿವತ್ತು ನಾಂದಿ ಹಾಡುತ್ತಿದ್ದೇನೆ ಎಂಬ ಕಲ್ಪನೆ ಖುದ್ದು ಬರ್ನರ್ಸ್್ಗೂ ಇರಲಿಲ್ಲ. ಎಲ್ಲ ಸರ್ವರ್್ಗಳಿಗೂ ಕಳುಹಿಸಲಾಗಿದ್ದ ಸಂದೇಶವನ್ನು ಕೆಲವರಂತೂ ಓದಿದರು. ಹಾಗೆ ಓದಿದವರ ಕಣ್ಣಿನಲ್ಲಿ ನ್ಯೂಸ್ ಗ್ರೂಪ್್ನ ಸಂದೇಶ ಸಾಧ್ಯತೆಗಳ ನಕ್ಷತ್ರವನ್ನೇ ಮಿನುಗಿಸಿತು. ಅಕ್ಷರ, ಚಿತ್ರಗಳು, ವಿಡಿಯೋ, ಲಿಂಕ್್ಗಳು ಎಲ್ಲವನ್ನೂ ಪಡೆಯಬಹುದಾದ ಮಹತ್ ಸಾಧ್ಯತೆಯಾಗಿ ವರ್ಲ್ಡ್ ವೈಡ್ ವೆಬ್ ತೆರೆದುಕೊಂಡಿತು.

ಇಂಟರ್ನೆಟ್್ನ ಮೂಲ ಸಂಶೋಧಕ ಈತನಲ್ಲದಿರಬಹುದು. ಅದು ಅಮೆರಿಕದ ಡಿಫೆನ್ಸ್ ಎಸ್ಟಾಬ್ಲಿಷ್್ಮೆಂಟ್್ನ ಹಿಡಿತದಲ್ಲಿತ್ತು. ಎರಡನೇ ಮಹಾಯುದ್ಧದ ನಂತರ ಅವರು ಅಂಥದ್ದೊಂದು ತಂತ್ರಜ್ಞಾನವನ್ನು ಕಂಡು ಹಿಡಿದಿದ್ದರು. ಅದು ಒಂದೆಡೆಯಿಂದ ಮತ್ತೊಂದೆಡೆಗೆ ಮಾಹಿತಿ ರವಾನಿಸುವುದಕ್ಕಷ್ಟೇ ಬಳಕೆಯಾಗುತ್ತಿತ್ತು. ಆ ವ್ಯವಸ್ಥೆ ಯಾರೋ ಒಬ್ಬರ ಏಕಸ್ವಾಮ್ಯಕ್ಕೆ ಒಳಪಡಬಾರದು ಎಂಬ ಯೋಚನೆಯಿಂದ ಒಂದು ಟೆಲಿಫೋನ್ ಲೈನ್ ಹಾಗೂ ಕಂಪ್ಯೂಟರ್ ಬಳಸಿಕೊಂಡು ಟಿಮ್ ಮಾಹಿತಿ ರವಾನೆ ಮಾಡಲು ಯತ್ನಿಸಿ, ಯಶಸ್ವಿಯಾದರು. ಆ ಮೂಲಕ ಇಂಟರ್ನೆಟ್ ಮೇಲೆ ಅಮೆರಿಕ ಹೊಂದಿದ್ದ ಮೊನೊಪಲಿಯನ್ನು ಹೊಡೆದು, ಜನಸಾಮಾನ್ಯರಿಗೂ ತಲುಪುವಂತೆ ಮಾಡಿದರು. ಒಂದು ಸಣ್ಣ ಅನ್ವೇಷಣೆ ಮಾಡಿದರೂ ಪೇಟೆಂಟ್ ಮಾಡಿಕೊಂಡು ಬಿಡುವವರ ನಡುವೆಯೂ, ಲೀ ಅದನ್ನು ಪೇಟೆಂಟ್ ಮಾಡಿಕೊಂಡು ತನ್ನ ವಶದಲ್ಲಿಟ್ಟುಕೊಳ್ಳಲು, ದುಡ್ಡು ಮಾಡಲು ಪ್ರಯತ್ನಿಸದೇ ವೆಬ್ಬನ್ನು ಡೆಮೊಕ್ರಟೈಸ್ ಮಾಡಿದರು.

ಅತನನ್ನು ನೆನಪಿಸಿಕೊಳ್ಳಲು ಕಾರಣವೇನಿರಬಹುದೆಂದು ಅಂದುಕೊಂಡಿರಿ?

ಮಾರ್ಚ್ ಕೊನೆ ವಾರ ಹೈದರಾಬಾದ್್ನಲ್ಲಿ ವೆಬ್ ಬಗ್ಗೆ ಒಂದು ವಿಚಾರ ಸಂಕಿರಣ ಏರ್ಪಾಡಾಗಿತ್ತು. ವರ್ಲ್ಡ್ ವೈಡ್ ವೆಬ್ ಒಕ್ಕೂಟದ ನಿರ್ದೇಶಕರಾಗಿರುವ ಸರ್. ಟಿಮ್ ಬರ್ನರ್ಸ್ ಲೀ ಕೂಡ ಅಗಮಿಸಿದ್ದರು. ಪಕ್ಕದ ಚಿತ್ರವನ್ನು ನೋಡಿ, ಒಂದು ಮೂಲೆಯಲ್ಲಿ ಅಬ್ಬೆಪಾರಿಯಂತೆ ಕುಳಿತಿರುವ ವ್ಯಕ್ತಿಯೇ ಟಿಮ್. ಈ ಫೋಟೋ ‘ಬ್ಯುಸಿನೆಸ್ ಲೈನ್್’ ಪತ್ರಿಕೆಯಲ್ಲಿ ಪ್ರಕಟವಾಗಿತ್ತು. ಒಂದು ಸಣ್ಣ ಸಂದರ್ಶನ ಕೊಡಿ ಎಂದು ಹೋದರೆ, No, not now. Perhaps, some time later ಎಂದರಂತೆ ಲೀ! ಪ್ರಚಾರಕ್ಕಾಗಿ ಮುಗಿಬೀಳುವವರು, ಹತಾಶರಂತೆ ಹಾತೊರೆಯುವವರು, ಪತ್ರಿಕೆಗಳ ಜತೆ ಡೀಲ್ ಮಾಡಿಕೊಂಡು ಆತ್ಮರತಿಯನ್ನು (ಅಡ್ವರ್ಟೈಸ್್ಮೆಂಟ್) ನೈಜ ಸುದ್ದಿಯಂತೆ ದುಡ್ಡು ಕೊಟ್ಟು ಪ್ರಕಟಿಸಿಕೊಳ್ಳುವವರು, ಯಾವೊಂದೂ ಸಾಧನೆ ಮಾಡದಿದ್ದರೂ ರಾಜ್ಯೋತ್ಸವ ಪ್ರಶಸ್ತಿಗೆ ಅರ್ಜಿ ಹಾಕುವವರು, ಪದ್ಮಶ್ರೀಗಾಗಿ ಲಾಬಿ ಮಾಡುವವರು, ವೇದಿಕೆಯ ಹಿಂದಿನ ಸೀಟಿನಲ್ಲಿ ಕೂರಿಸಿದರು ಎಂದು ಮುನಿಸಿಕೊಳ್ಳುವವರು ತುಂಬಿರುವ ಕಾಲದಲ್ಲಿ ಪ್ರಚಾರ-ಪ್ರಶಂಸೆ ತಾನಾಗಿಯೇ ಅರಸಿಕೊಂಡು ಬಂದರೂ ಬೇಡವೆನ್ನುವ ಟಿಮ್ ಲೀಯಂಥವರಿದ್ದಾರೆ ಎಂಬುದು ಮಹದಾಶ್ಚರ್ಯ. ನಿಷ್ಕಾಮ ಕರ್ಮ, ನಿಜವಾದ ಧರ್ಮಎಂಬ ಮಾತು ಇಂತಹ ವ್ಯಕ್ತಿಗಳಿಗಾಗಿಯೇ ಸೃಷ್ಟಿಯಾಯಿತೇನೋ? ಈ ಮೇಲಿನ ಫೋಟೋವನ್ನು ನೋಡಿದಾಗ ಆತನ ಬಗ್ಗೆ ಹೇಳಬೇಕೆನಿಸಿತು

ಕೃಪೆ : ಪ್ರತಾಪ ಸಿಂಹ


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ