ನನ್ನ ಬ್ಲಾಗ್ ಪಟ್ಟಿ

ಗುರುವಾರ, ಏಪ್ರಿಲ್ 7, 2011

ಜ್ಞಾನಪೀಠವೇಕೆ, ಸರಸ್ವತಿ ಸಮ್ಮಾನಕ್ಕೂ ಅಡ್ಡಗಾಲು ಹಾಕಿದ್ದರು!


Interview by- ಪ್ರತಾಪ್ ಸಿಂಹ

1. ಪ್ರಶಸ್ತಿ, ಪುರಸ್ಕಾರ, ಸನ್ಮಾನಗಳಿಂದ ನೀವು ತುಂಬಾ ಮುಜುಗರಕ್ಕೊಳಗಾಗುತ್ತೀರಿ ಎಂಬುದು ನಿಮ್ಮೆಲ್ಲ ಓದುಗರಿಗೂ ಗೊತ್ತಿದೆ. ಆದರೆ, ಜ್ಞಾನಪೀಠಕ್ಕೂ ಮಿಗಿಲಾದ ‘ಸರಸ್ವತಿ ಸಮ್ಮಾನ್್’ ಹುಡುಕಿಕೊಂಡು ಬಂದಿರುವುದು ನಿಮಗಿಂತ ನಿಮ್ಮ ಓದುಗರಿಗೆ ಹೆಚ್ಚು ಸಂತಸ ತಂದಿದೆ. ಈ ಬಗ್ಗೆ ಏನನ್ನುತ್ತೀರಿ?

ನನ್ನ ಓದುಗರಿಗೆ ಸಂತಸ ತಂದಿದೆ ಎಂಬುದು ನಿಜ.ಆದರೆ, ನಾನು ನಿರ್ಲಿಪ್ತನಾಗಿದ್ದೇನೆ. ಇಷ್ಟಕ್ಕೂ ಪ್ರಶಸ್ತಿಯಿಂದ ಒಂದು ಕೃತಿಯ ತೂಕ ಹೆಚ್ಚುವುದೂ ಇಲ್ಲ, ಕಡಿಮೆಯಾಗುವುದೂ ಇಲ್ಲ. ಒಂದು ಸಾಹಿತ್ಯ ಕೃತಿಯು ಎಷ್ಟು ಮುಂಬರುವ ತಲೆಮಾರುಗಳ ಹೃದಯವನ್ನು ತಟ್ಟುತ್ತದೆ ಮತ್ತು ಅವರ ಜೀವನದ ಸಮಸ್ಯೆಗಳಿಗೆ ಅಭಿವ್ಯಕ್ತಿ ಕೊಡುತ್ತದೆ ಎನ್ನುವುದರಿಂದ ಆ ಕೃತಿಯ ಆಯಸ್ಸು ನಿರ್ಧಾರವಾಗುತ್ತದೆ.

2. ಒಂದೊಂದು ಕೃತಿಯಲ್ಲೂ ನಮ್ಮ ಸಮಾಜ, ವ್ಯಕ್ತಿ, ಇತಿಹಾಸ, ಸಂಸ್ಕೃತಿ, ಪರಂಪರೆಗಳಿಗೆ ಬಾಧಿಸುವಂಥ ವಿಶಿಷ್ಟ ಸಮಸ್ಯೆಗಳನ್ನು ಸ್ಪರ್ಶಿಸಿ, ಆಳಕ್ಕಿಳಿದು ವಿಶ್ಲೇಷಿಸುವ ತಮ್ಮ ಕಥಾನಕಗಳು ವೈಚಾರಿಕ ಹಾಗೂ ಸಾಮಾನ್ಯ ಓದುಗರಿಗೂ ಸಮನಾಗಿಯೇ ತಲುಪಿವೆ. ಬಹುತೇಕ ಲೇಖಕರಿಗೆ ಓದುಗರ ವ್ಯಾಪ್ತಿ ಕಡಿಮೆಯಾಗುತ್ತಿದ್ದರೆ ನಿಮ್ಮ ಓದುಗರ ವ್ಯಾಪ್ತಿ ಹಿಗ್ಗುತ್ತಿದೆ ಎಂಬುದು ತಮ್ಮ ಈಚಿನ ಕಾದಂಬರಿಗಳಿಂದ ಕಂಡುಬರುತ್ತಿದೆ. ಜ್ಞಾನಪೀಠವೂ ಬಂದಿದ್ದರೆ ತಮ್ಮ ಅಪಾರ ಓದುಗ ವೃಂದಕ್ಕೆ ಖುಷಿಯಾಗುತ್ತಿತ್ತು. ಆಗಿಂದಾಗ್ಗೆ ನಿಮ್ಮ ಹೆಸರು ಪ್ರಸ್ತಾಪವಾಗುತ್ತಿದ್ದರೂ ಜ್ಞಾನಪೀಠವೇಕೆ ಕೈತಪ್ಪುತ್ತಿದೆ?

ಬರೀ ಜ್ಞಾನಪೀಠವಲ್ಲ, ಸರಸ್ವತಿ ಸಮ್ಮಾನಕ್ಕೂ ಕಳೆದ ಹದಿನೈದು ವರ್ಷಗಳಿಂದ ಅಡ್ಡಗಾಲು ಹಾಕುತ್ತಿದ್ದರು. ಮೊದಲು ಕನ್ನಡದಿಂದ ಆಯ್ಕೆಯಾಗಿ ಆ ಕೃತಿಯು ಶಿಫಾರಸಾಗಬೇಕು. ಆನಂತರ ಅದು ದಕ್ಷಿಣ ಭಾರತದ ಭಾಷೆಗಳ ಮಟ್ಟದಲ್ಲಿ ಆಯ್ಕೆಯಾಗಬೇಕು. ಅಂತಹ ಆರು ವಲಯಗಳನ್ನು ಸರಸ್ವತಿ ಸಮ್ಮಾನದವರು ಮಾಡಿಕೊಂಡಿದ್ದಾರೆ. ದಕ್ಷಿಣ ಭಾರತದಲ್ಲಿ ಗೆದ್ದ ನಂತರ ಆರೂ ವಲಯಗಳಲ್ಲಿ ಗೆದ್ದ ಒಂದೊಂದು ಪುಸ್ತಕ ಅಂದರೆ ಒಟ್ಟು ಆರು ಪುಸ್ತಕಗಳ ಆಯ್ಕೆ ಸಮಿತಿಯು ರಾಷ್ಟ್ರಮಟ್ಟದ ಜ್ಯೂರಿಗಳ ಸಮಿತಿಗೆ ಕಳುಹಿಸುತ್ತದೆ. ಅಲ್ಲಿ ತೇರ್ಗಡೆಯಾದ ಪುಸ್ತಕಕ್ಕೆ ಪ್ರಶಸ್ತಿ ಕೊಡುತ್ತಾರೆ. ಕನ್ನಡದಲ್ಲಿ ನನ್ನ ಹೆಸರು ಕನ್ನಡ ಭಾಷಾ ಸಮಿತಿಯಲ್ಲೇ ತೇರ್ಗಡೆಯಾಗದಂತೆ ಕಳೆದ ಹಲವು ವರ್ಷಗಳಿಂದ ಕನ್ನಡ ಸದಸ್ಯರುಗಳು ತಡೆಯುತ್ತಿದ್ದರು.

3. ನಿಮ್ಮ ಜತೆ ಸೈದ್ಧಾಂತಿಕ ಭಿನ್ನಾಭಿಪ್ರಾಯ ಹೊಂದಿರುವವರೂ ಭೈರಪ್ಪ ಜ್ಞಾನಪೀಠಕ್ಕೆ ಅರ್ಹರು ಎನ್ನುತ್ತಾರೆ. ಆದರೂ ಸಾಹಿತ್ಯ ವಲಯದಲ್ಲೇ ನಿಮ್ಮ ಬಗ್ಗೆ ಯಾಕಿಂಥ ಅಸಹನೆ?

ಎಲ್ಲರೂ ಅಸಹನೆಯಿಂದಿದ್ದಾರೆ ಎಂದು ನಾನು ಭಾವಿಸುವುದಿಲ್ಲ. ಆದರೆ ಅಸಹನೆಯುಳ್ಳವರೇ ಹೆಚ್ಚಾಗಿ ವಿಶ್ವವಿದ್ಯಾಲಯಗಳ ಸಾಹಿತ್ಯ ವಿಭಾಗಗಳನ್ನು ಆಕ್ರಮಿಸಿಕೊಂಡಿದ್ದಾರೆ. ಅವರಲ್ಲಿ ಭೈರಪ್ಪನವರನ್ನು ಹೊರಗಿಡಬೇಕೆಂಬ ಐಕಮತ್ಯ ಇರುವಷ್ಟು ಗಟ್ಟಿಯಾಗಿ ಅವರ ಬದಲು ಯಾರನ್ನು ಮೇಲೆತ್ತಬೇಕು ಎಂಬುದರಲ್ಲಿ ಐಕಮತ್ಯವಿಲ್ಲ. ಆದರೆ ನಾನು ಯಾರನ್ನೂ ದ್ವೇಷಿಸುವುದಿಲ್ಲ. ಏಕೆಂದರೆ ಇಂತಹ ಪ್ರಶಸ್ತಿಗಳಿಂದ ಯಾವ ಕೃತಿಯೂ ಬದುಕುವುದಿಲ್ಲ. ಅದು ಬದುಕುವುದು ತನ್ನ ಅಂತಃಶಕ್ತಿಯಿಂದ. ಹೀಗೆ ಒಬ್ಬನಿಗೆ ಬರುವುದನ್ನು ತಪ್ಪಿಸುವವರು ಪ್ರಶಸ್ತಿಗಳಿಗೆ ಸಲ್ಲದ ಮಹತ್ವ ಕೊಡುತ್ತಾರೆ.

4. ಸಾಹಿತ್ಯವೆಂದರೆ ಸಮಾಜಮುಖಿ, ಸಮಕಾಲೀನವಾಗಿರಬೇಕೆಂಬ ಒಂದಭಿಪ್ರಾಯ, ಇಲ್ಲಾ ಇಲ್ಲಾ ಅದು ಚೆನ್ನಾಗಿ ಓದಿಸಿಕೊಂಡು ಹೋಗುವಂತಿರಬೇಕು ಎಂಬ ಮತ್ತೊಂದು ಅಭಿಪ್ರಾಯವೂ ಇದೆ. ನಿಮ್ಮ ಬಗ್ಗೆ ಇರುವ, ನಿಮ್ಮ ವಿರೋಧಿಗಳು ಜರೆಯುವ ಅಂಶವೇನೆಂದರೆ ಭೈರಪ್ಪ ಜನಪ್ರಿಯ ಕಾದಂಬರಿಕಾರರಷ್ಟೆ. ಜನಪ್ರಿಯತೆ ಆಧಾರದ ಮೇಲೆ ಶ್ರೇಷ್ಠತೆಯನ್ನು ಅಳೆಯುವುದಕ್ಕಾಗಲ್ಲ ಎನ್ನುತ್ತಾರೆ. ಅದನ್ನು ಹೇಗೆ ವ್ಯಾಖ್ಯಾನಿಸುತ್ತೀರಿ?

ಇದು ಜನರ ಹೃದಯವನ್ನು ಆವರಿಸಬಲ್ಲ ರಸವನ್ನು ಸೃಷ್ಟಿಸಲಾರದ, ತಂತ್ರಗಳನ್ನೇ ಸಾಹಿತ್ಯವೆಂದು ಪ್ರತಿಪಾದಿಸಿದ ನವ್ಯರು ಆರಂಭಿಸಿದ ಟೀಕೆ. ಕುಮಾರವ್ಯಾಸನಷ್ಟು ಜನಪ್ರಿಯ ಕವಿಯು ಕನ್ನಡ ಸಾಹಿತ್ಯದ ಇತಿಹಾಸದಲ್ಲಿ ಬೇರೊಬ್ಬನಿಲ್ಲ. ಆದರೆ ಅವನ ಸಾಹಿತ್ಯಶಕ್ತಿ ಕಡಿಮೆಯದೇ?

5. ಚಳವಳಿಗಳು, ವಾದಗಳು ಕಾದಂಬರಿಕಾರರಿಗೆ ಎಷ್ಟರ ಮಟ್ಟಿಗೆ ಅಗತ್ಯ?

ವಾಸ್ತವವಾಗಿ ಚಳವಳಿಗಳು ಸ್ವಲ್ಪ ಮಟ್ಟಿಗೆ ಹೊಸ ವೈಚಾರಿಕ ಪ್ರಚೋದನೆಯನ್ನು ಲೇಖಕನಿಗೆ ಕೊಡಬಹುದು. ಆದರೆ ಚಳವಳಿಗಳಲ್ಲಿ ತೊಡಗಿಸಿಕೊಂಡವನು ಸೃಷ್ಟಿಶೀಲತೆಯ ನಿರ್ಲಿಪ್ತೆಯನ್ನು ಕಳೆದುಕೊಳ್ಳುತ್ತಾನೆ.

6. ಕನ್ನಡದ ಯಾವ ಲೇಖಕರೂ ತಲುಪದಷ್ಟು ಅನ್ಯ ಭಾಷಾ ಓದುಗರನ್ನು ನೀವು ತಲುಪಿದ್ದೀರಿ. ನಿಮ್ಮ ಕಾದಂಬರಿಗಳ ಬಗ್ಗೆ ಅವರ ಪ್ರತಿಕ್ರಿಯೆ ಹೇಗಿದೆ?

ಭಾರತದ ಎಲ್ಲ ಭಾಷೆಯ ಓದುಗರೂ ನನ್ನನ್ನು ತಮ್ಮ ಪ್ರಾಂತ್ಯದವನೆಂದೇ ಸ್ವೀಕರಿಸಿದ್ದಾರೆ. ಭೈರಪ್ಪನವರು ಕನ್ನಡದಲ್ಲಿ ಬರೆಯುತ್ತಿರುವ ಅತ್ಯಂತ ಜನಪ್ರಿಯ ಮರಾಠಿ ಲೇಖಕ ಎಂದು ಮಹಾರಾಷ್ಟ್ರದವರು ಹೇಳುತ್ತಾರೆ. ನನ್ನ ಗೃಹಭಂಗವನ್ನು ಓದಿದ ಪಂಜಾಬಿ ಲೇಖಕರೊಬ್ಬರು ಜೀವನದ ಕಸುವು ಮತ್ತು ಕೋಪದಲ್ಲಿ ಹೊರಬರುವ ಬೈಗುಳಗಳಲ್ಲಿ ಕರ್ನಾಟಕ ಮತ್ತು ಪಂಜಾಬು ಎರಡೂ ಒಂದೇ ಎಂಬುದನ್ನು ಭೈರಪ್ಪನವರು ತೋರಿಸಿದ್ದಾರೆ. ಆ ಮೂಲಕ ಅವರು ಭಾರತದ ಏಕತೆಯನ್ನು ವ್ಯಕ್ತಪಡಿಸಿದ್ದಾರೆ ಎಂದು ಹೇಳಿದ್ದಾರೆ. ನಾನೊಬ್ಬ ಭಾರತೀಯ ಲೇಖಕ. ಪ್ರಾದೇಶಿಕತೆಯ ಆಳಕ್ಕೆ ಇಳಿದರೂ ನಾನು ಸೃಷ್ಟಿಸುವ ಪಾತ್ರ ಮತ್ತು ಸನ್ನಿವೇಶಗಳು ಇಡೀ ಭಾರತವನ್ನು ವ್ಯಕ್ತಗೊಳಿಸುತ್ತವೆ.

7. ಇವತ್ತಿನ ಯುವಜನತೆಯ ಬೇಕು ಬೇಡಗಳನ್ನೇ ದೃಷ್ಟಿಯಲ್ಲಿಟ್ಟುಕೊಂಡು ಪತ್ರಿಕೆ, ಚಾನೆಲ್್ಗಳು ತಮ್ಮ ಹೂರಣ, ತಂತ್ರ ರೂಪಿಸಬೇಕೆಂಬ ಮಾತಿದೆ. ಅದು ಸಾಹಿತ್ಯಕ್ಕೂ ಅನ್ವಯಿಸುತ್ತದಾ?

ಇವತ್ತಿನ ಯುವಕರು ಹಿಂದಿನವರಿಗಿಂತ ಹೆಚ್ಚು ಸಾಮಾನ್ಯ ಜ್ಞಾನ ಮತ್ತು ಲೋಕಾನುಭವಗಳನ್ನು ಪಡೆದವರು. ಇಪ್ಪತ್ತೆರಡು ವಯಸ್ಸಿನ ಒಳಗಿರುವ ಬಹುತೇಕ ಕಂಪ್ಯೂಟರ್ ಎಂಜಿನಿಯರ್್ಗಳು ಅಮೆರಿಕ, ಯೂರೋಪುಗಳನ್ನೆಲ್ಲ ಸುತ್ತು ಹಾಕಿ ಬಂದಿರುತ್ತಾರೆ. ಇಂಟರ್್ನೆಟ್್ನಲ್ಲಿ ಎಷ್ಟೆಷ್ಟೋ ಸಂಗತಿಗಳನ್ನು ಓದಿರುತ್ತಾರೆ. ಅಂತಹವರಲ್ಲಿ ಆಸಕ್ತಿ ಹುಟ್ಟಿಸಬೇಕಾದರೆ ಲೇಖಕನಲ್ಲಿಯೂ ಅದೇ ವಿಶಾಲ ವ್ಯಾಪ್ತಿಯ ಅನುಭವ ಮತ್ತು ಜ್ಞಾನವಿರಬೇಕು.

8. ಇವತ್ತು ಸಾಹಿತ್ಯ ಔಟ್್ಡೇಟೆಡ್, ಯುವಜನಾಂಗ ಓದುತ್ತಿಲ್ಲ, ಪುಸ್ತಕದಿಂದ ದೂರವಾಗುತ್ತಿದೆ ಎಂಬ ಮಾತಿದೆ. ಇದಕ್ಕೆ ಸಾಹಿತಿಗಳು ಕಾರಣವೇ?

ಜನಗಳು ಓದುತ್ತಿಲ್ಲ ಎಂಬುದು ಸುಳ್ಳು ಮಾತು. ಹಿಂದಿದ್ದಕ್ಕಿಂತ ಈಗ ಹೆಚ್ಚು ಪುಸ್ತಕಗಳು ಮಾರಾಟವಾಗುತ್ತಿವೆ. ಬರೀ ನನ್ನ ಪುಸ್ತಕಗಳನ್ನು ಲಕ್ಷಿಸಿ ಈ ಮಾತನ್ನು ಹೇಳುತ್ತಿಲ್ಲ. ಕನ್ನಡ ಸಾಹಿತ್ಯ ಕೃತಿಗಳನ್ನು ಓದದೇ ಇರುವ ಯುವಜನರು ಇಂಗ್ಲಿಷ್ ಮಾಧ್ಯಮದ ಸರಕುಗಳು.

9. ನೀವೊಬ್ಬ ದೊಡ್ಡ, ಜನಪ್ರಿಯ ಲೇಖಕರಾಗಿ ಉದಯೋನ್ಮುಖ, ಹೊಸದಾಗಿ ಬರೆಯಬೇಕೆಂಬ ಇಚ್ಛೆ ಹೊಂದಿರುವವರಿಗೆ ನಿಮ್ಮ ಸಲಹೆ ಏನು?

ಪ್ರಪಂಚದ ಅತ್ಯುತ್ತಮ ಸಾಹಿತ್ಯ ಕೃತಿಗಳಲ್ಲಿ ಪ್ರಾತಿನಿಧಿಕವಾದುವುಗಳನ್ನಾದರೂ ಮೊದಲು ಓದಬೇಕು. ಬರೀ ಸಾಹಿತ್ಯದ ಓದಿಗೆ ಸೀಮಿತಗೊಳ್ಳದೆ ವಿಜ್ಞಾನ, ಇತಿಹಾಸ, ಸಮಾಜಶಾಸ್ತ್ರ ಮೊದಲಾದುವುಗಳನ್ನೂ ಓದಬೇಕು. ‘ಇಸಂ’ ಮತ್ತು ಐಡಿಯಾಲಜಿಗಳ ಬಲೆಗೆ ಬೀಳಬಾರದು. ಆದರೆ ಅವುಗಳ ಪರಿಚಯವಿರಬೇಕು.

10. ಒಬ್ಬ ಸಾಹಿತಿಯ ಶ್ರೇಷ್ಠತೆ ಕೊನೆಗೂ ವ್ಯಕ್ತವಾಗುವುದು ಪ್ರಶಸ್ತಿ ಪುರಸ್ಕಾರವೆಂಬ ಮಾನದಂಡದಿಂದಲೇ?

ಖಂಡಿತ ಇಲ್ಲ.

ಕೃಪೆ: ಪ್ರತಾಪ ಸಿಂಹ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ