ನನ್ನ ಬ್ಲಾಗ್ ಪಟ್ಟಿ

ಬುಧವಾರ, ಏಪ್ರಿಲ್ 13, 2011

ನಿತ್ಯ ಭಾರತದ ಮರ್ಯಾದೆ ಹರಾಜು ಹಾಕುವ ಪಡಪೋಶಿ ಪತ್ರಕರ್ತರು!


ಈ ಪತ್ರಕರ್ತರಿದ್ದಾರಲ್ಲಾ, ಮಹಾ ಪಡಪೋಶಿಗಳು!

ಅವರಿಗೆ ಹಿಂದೆ- ಮುಂದೆ ಇಲ್ಲ, ಮನಸ್ಸಿಗೆ ಬಂದ ವರದಿಗಳನ್ನು ಬರೆದು, ಅದಕ್ಕೆ ತಮ್ಮ ಹೆಸರು (ಬೈಲೈನ್) ಹಾಕಿಸಿಕೊಂಡು ಕೀರ್ತಿ, ಪ್ರಶಸ್ತಿ ಪಡೆದು ಸುಮ್ಮನೆ ಎದ್ದು ಹೋಗಿ ಬಿಡುತ್ತಾರೆ. ಇವರನ್ನು ವಿದೇಶಿ ವರದಿಗಾರರು (Foreign Correspondents) ಅಂತಾರೆ. ಅಮೆರಿಕ, ಬ್ರಿಟನ್, ಕೆನಡ, ಫ್ರಾನ್ಸ್ ಮುಂತಾದ ದೇಶಗಳ ಪ್ರಮುಖ ಪತ್ರಿಕೆಗಳ ಭಾರತ ವರದಿಗಾರರಿವರು. ಇವರ ಕೇಂದ್ರ ವಾಸಸ್ಥಾನ ನವದೆಹಲಿ. ನ್ಯೂಯಾರ್ಕ್ ಟೈಮ್ಸ್, ವಾಷಿಂಗ್ಟನ್ ಪೋಸ್ಟ್, ವಾಲ್ ಸ್ಟ್ರೀಟ್ ಜರ್ನಲ್, ಫೈನಾನ್್ಶಿಯಲ್ ಟೈಮ್ಸ್, ಇಂಟರ್ ನ್ಯಾಶನಲ್ ಹೆರಾಲ್ಡ್ ಟ್ರಿಬ್ಯೂನ್, ನ್ಯೂಸ್ ವೀಕ್, ದಿ ಗಾರ್ಡಿಯನ್, ಟೈಮ್ಸ್ ಮುಂತಾದ ಪ್ರತಿಷ್ಠಿತ ವಿದೇಶಿ ಪತ್ರಿಕೆಗಳು ಭಾರತ ವ್ಯವಹಾರಗಳನ್ನು ವರದಿ ಮಾಡಲೆಂದು ಈ ಮಹಾಶಯರನ್ನು ಕಳಿಸಿ ಕೊಡುತ್ತವೆ. ನಮ್ಮಲ್ಲಿ ಪನಿಶ್ ಮೆಂಟ್ ಟ್ರಾನ್ಸಫರ್ ಎಂದು ಬೀದರ್, ಗುಲ್ಬರ್ಗಕ್ಕೆ ಕಳಿಸುತ್ತೇವಲ್ಲ, ಅದೇ ರೀತಿ ವಿದೇಶಿ ಪತ್ರಿಕೆಗಳು ತಮ್ಮ ವರದಿಗಾರರನ್ನು ಭಾರತಕ್ಕೆ ಕಳಿಸುತ್ತವೆ!

ಮೊದಲೇ ಭಾರತದ ಬಗ್ಗೆ ಕೀಳರಿಮೆ, ಪೂರ್ವಗ್ರಹ ಹಾಗೂ ತಾತ್ಸಾರ. ಜತೆಗೆ ಪನಿಶ್್ಮೆಂಟ್ ಟ್ರಾನ್ಸ್್ಫರ್ ಉರಿ ಬೇರೆ. ನಮ್ಮ ದೇಶದ ಬಗ್ಗೆ ಅವರಿಗೆ ಅದೆಂಥದೋ ಕೆಟ್ಟ ಭಾವ, ವಿಚಿತ್ರ ಉದಾಸೀನ. ಭಾರತವೆಂದರೆ ಅವರಿಗೆ ಸ್ವಲ್ಪವೂ ಗೌರವವಿಲ್ಲ. ಇಲ್ಲಿನ ಬಡತನ, ಅನಾರೋಗ್ಯ, ಅನಕ್ಷರತೆ, ಧೂಳು, ಸೆಗಣಿ, ಚರಂಡಿ ನೀರು, ಹೊಂಡ ಬಿದ್ದ ರಸ್ತೆಗಳು, ಸೊಳ್ಳೆ, ಹಾವು, ತಿಗಣೆ, ಬಿಡಾಡಿ ನಾಯಿ, ರಸ್ತೆ ಮೇಲಿನ ದನ, ಎಮ್ಮೆ, ಎಲೆ ಅಡಕೆ ಉಗಿಯುವಿಕೆ, ರಸ್ತೆ ಬದಿಯ ಮೂತ್ರ, ಮಲ ವಿಸರ್ಜನೆಯೇ ಅವರಿಗೆ ದೊಡ್ಡದಾಗಿ ಕಾಣಿಸುತ್ತದೆ. ಅವುಗಳನ್ನೇ ದೊಡ್ಡದಾಗಿ ಮಾಡಿ ಲೇಖನ, ವರದಿಗಳನ್ನು ಬರೆದು ವಿದೇಶಗಳಲ್ಲಿರುವ ತಮ್ಮ ಪತ್ರಿಕೆಗಳಿಗೆ ಕಳಿಸಿ ಕೊಡುತ್ತಾರೆ. ಈ ಪ್ರಭೃತಿಗಳು ಕಳಿಸಿದ್ದೇ ‘ಮಹಾಪ್ರಸಾದ’ವೆಂದು ಭಾವಿಸಿ ಅಲ್ಲಿನ ಪತ್ರಿಕೆಗಳು ಕಣ್ಮುಚ್ಚಿ ಪ್ರಕಟಿಸುತ್ತವೆ.

ಇಂಥ ವರದಿ, ವಿಶ್ಲೇಷಣೆ, ನುಡಿ ಚಿತ್ರ (Feature) ಹಾಗೂ ಲೇಖನಗಳನ್ನು ಓದಿದ ವಿದೇಶಿಯರು ಭಾರತ ಹಾಗೂ ಭಾರತೀಯರ ಬಗ್ಗೆ ಎಂಥ ಅಭಿಪ್ರಾಯ ತಳೆಯಬಹುದು? ಈ ಸ್ಟೋರಿಗಳನ್ನು ಓದಿದ ಬಳಿಕವೂ ಅವರು ಭಾರತದ ಬಗ್ಗೆ ಸದಭಿಪ್ರಾಯ ಹೊಂದಲು ಸಾಧ್ಯವಾ? ನಮ್ಮ ಬಗ್ಗೆ ಅವರು ಅದೆಂಥ ಭಯಾನಕ, ಅಸಹ್ಯ, ತಿರಸ್ಕಾರದ ಇಮೇಜುಗಳನ್ನು ಮನಸ್ಸಿನಲ್ಲಿ ಸೃಷ್ಟಿಸಿಕೊಳ್ಳಬಹುದು? ಇವರು ಅದೆಂಥ ತೀವ್ರ, ಅಗಾಧ ನಕಾರಾತ್ಮಕ ದೃಶ್ಯಗಳನ್ನು ಭಾರತದ ಬಗ್ಗೆ ವಿದೇಶಿಯಲ್ಲಿ ಕಟ್ಟಿಕೊಡಬಹುದು? ಇವರು ನಡೆಸುವ ದುಪಳಿ, ದಾಂಧಲೆ, ಕೀಟಲೆ, ಭಾನಗಡಿ, ಉಪಾದ್ಯ್ವಾಪಿತನ ಒಂದಾ, ಎರಡಾ?

ಇಡೀ ದೇಶದ ಬಗ್ಗೆ ಕಪ್ಪು ಚುಕ್ಕೆ ಮೂಡಿಸಲು, ಈ ವಿದೇಶಿ ವರದಿಗಾರರ ಒಂದು ವರದಿ ಸಾಕು- ಯಾವನೋ ಒಬ್ಬ ವಿದೇಶಿ ಪ್ರಜೆ ಜೀವನ ಪರ್ಯಂತ ಭಾರತದ ಕಡೆ ಮುಖ ಮಾಡದೇ, ಸ್ವಾಟೆ ತಿರುಗಿಸಲು ಒಂದೇ ಒಂದು ಲೇಖನ ಸಾಕು. ಹಾಗೆಂದು ಇವರೇನು ಭಾರತದ ಬಗ್ಗೆ ಬರೆಯಲು ಪರಿಣತರಾ? ಭಾರತದ ಕುರಿತು ಓದಿಕೊಂಡವರಾ? ದೇಶದ ಉದ್ದಗಲ ಪ್ರವಾಸ ಮಾಡಿದವರಾ? ನಮ್ಮ ದೇಶದ ಇತಿಹಾಸ, ಸಮಾಜ, ಜಾತಿ, ಸಂಸ್ಕೃತಿ, ಧರ್ಮ, ವೈವಿಧ್ಯ, ಪ್ರಾದೇಶಿಕ ಸೊಗಡು, ಪುರಾಣ, ಐತಿಹ್ಯಗಳ ಬಗ್ಗೆ ತಿಳಿದುಕೊಂಡವರಾ? ಉಹುಂ… ಏನೂ ಇಲ್ಲ. ವಿದೇಶಿ ಪತ್ರಿಕೆಗಳ ಬಿಳಿ ತೊಗಲಿನ ಪತ್ರಕರ್ತರು ಎಂಬ ಕಾರಣಕ್ಕೇ ಇವರದು ಡೌಲು, ಪುಂಗಿ. ಈ ದೇಶದಲ್ಲಿ ಹುಟ್ಟಿ, ಬೆಳೆದು, ಓದಿದವರಿಗೇ ಇಲ್ಲಿನ ಸಂಕೀರ್ಣತೆ ಅರ್ಥವಾಗುವುದಿಲ್ಲ. ಇಡೀ ಜೀವನವನ್ನು ಅದಕ್ಕಾಗಿ ಮುಡಿಪಾಗಿಟ್ಟವರಿಗೂ ಅಸಾಧ್ಯ.

ಹಾಗಿರುವಾಗ ಈ ಪಡಪೋಶಿಗಳು ಬರಬರುತ್ತಲೇ expert ಕಾಮೆಂಟರಿ ಹೇಳಲು ಶುರು ಮಾಡಿ ಬಿಡುತ್ತಾರೆ. ಇವರಿಗೆ ಮೊದಲು ಕಣ್ಣಿಗೆ ಕಾಣುವುದೇ ನಕಾರಾತ್ಮಕ ಸಂಗತಿಗಳು! ಇದೆಂಥ ದರಿದ್ರ ದೇಶವಪ್ಪಾ? ಇಲ್ಲಿನ ಜನ ಅದೆಷ್ಟು ಹೊಲಸಪ್ಪಾ? ಇಂಥ ಕೊಳಗೇರಿಯಲ್ಲಿ ಜನ ಹೇಗೆ ಜೀವನ ಸಾಗಿಸ್ತಾರಪ್ಪಾ? ಎಂದೇ ರಾಗ ತೆಗೆಯುತ್ತಾರೆ. ಇವೇ ಅವರ ವರದಿಗಳಿಗೆ ವಸ್ತುವಾಗುತ್ತವೆ. ಈ ಪಡಪೋಶಿಗಳು ಕಳಿಸಿದ ಸ್ಟೋರಿಗಳನ್ನು ಸುದ್ದಿ ಮನೆಯಲ್ಲಿರುವ ಪೂರಾಪೋಶಿಗಳು ಕಾಲು ಬಾಲ ಸೇರಿಸಿ, ಹೈಲೈಟ್ ಮಾಡಿ, ಮುಖ ಪುಟದಲ್ಲಿ display ಮಾಡಿ ಪ್ರಕಟಿಸುತ್ತಾರೆ!

ಏನಾಗಬೇಡ ನಮ್ಮ ದೇಶದ ಇಮೇಜಿಗೆ?

ಇಂದಿಗೂ ಭಾರತವೆಂದರೆ ಅಮೆರಿಕ, ಬ್ರಿಟನ್್ನಲ್ಲಿ ‘ಹಾವಾಡಿಗರ ದೇಶ’ (Land of Snake-Charmers) ಎಂಬ ಕಲ್ಪನೆಯಿದೆ. ಮಾಹಿತಿ ತಂತ್ರಜ್ಞಾನದಲ್ಲಿ ಭಾರತ ವಿಶ್ವದಲ್ಲಿಯೇ ಅಗಾಧ ಪ್ರಗತಿ ಸಾಧಿಸಿ ನಿಬ್ಬೆರಗಾಗಿಸಿದರೂ, ‘ಟೈಮ್್’ನಂಥ ನಿಯತಕಾಲಿಕ ಹಾವಾಡಿಗನ ಬುಟ್ಟಿಯ ಬದಲು, ಕಂಪ್ಯೂಟರ್ ಮಾನಿಟರ್ ಒಳಗೆ ಮಲಗಿದ ಹಾವಿನ ರೇಖಾ ಚಿತ್ರವನ್ನು ಬಿಡಿಸಿ ಪ್ರಕಟಿಸುತ್ತದೆ! ಅದೆಂಥ ಹೆಬ್ಬಾವು ಮಲಗಿರಬೇಡ?

ಮೊದಲ ಬಾರಿಗೆ ಭಾರತಕ್ಕೆ ಭೇಟಿಯಿತ್ತ ಅಡ್ನಾಡಿ ಪ್ರವಾಸಿಗನೊಬ್ಬ ಬರೆದ ಪ್ರವಾಸ ಕಥನವನ್ನು ‘ನ್ಯೂಯಾರ್ಕ್ ಪೋಸ್ಟ್್’ ಎಂಬ ಪತ್ರಿಕೆ 2009ರ ಸೆಪ್ಟೆಂಬರ್ 4ರ ಸಂಚಿಕೆಯಲ್ಲಿ ಪ್ರಕಟಿಸಿತ್ತು. ಆ ಲೇಖನ ಹೀಗೆ ಆರಂಭವಾಗುತ್ತದೆ- ‘Let’s face it. India is really intimidating. The heart breaking poverty, the heat, the crazy traffic, the begging. It’s an unpredictable place, in fact, there are few things you can count on when visiting- except, perhaps, a week-long bout of Delhi Belly…. some one noted that ‘pink is the navy blue of India.’

ಈತ ನಮಗೆ ಹೇಗೆ ಎತ್ತಿದ್ದಾನೆ ಮಂಗಳಾರತಿಯನ್ನು ನೋಡಿ. ಹೃದಯವಿದ್ರಾವಕ ಬಡತನ, ಬಿಸಿಲು, ಯರ್ರಾಬಿರ್ರಿ ಟ್ರಾಫಿಕ್, ಭಿಕ್ಷಾಟನೆ ಕಂಡು ಅವನಿಗೆ ಭಾರತ ಅಂದ್ರೆ ಭಯಾನಕವಂತೆ! ಹಾಗಂತ ಬರೆಯುತ್ತಾನೆ, ಅದನ್ನೇ ಅಲ್ಲಿನ ಪತ್ರಿಕೆ ಯಥಾವತ್ತು ಪ್ರಕಟಿಸುತ್ತದೆ. ಈ ಪ್ರವಾಸಿ ಕಥನವನ್ನು ಓದಿದ ಯಾರೇ ಆಗಲಿ, ಭಾರತದ ಕಡೆ ಮುಖ ಹಾಕಿ ಮಲಗಲಾರ. ಭಾರತಕ್ಕೆ ಹೊರಟ ವಿಮಾನದಲ್ಲೇನಾದರೂ ಓದಿದರೆ, ವಾಪಸ್ ಬರುವ ವಿಮಾನದಲ್ಲಿ ತಿರುಗಿ ಬರಲು ಯೋಚಿಸಿಯಾನು. ಅಂಥ ಬೇಜವಾಬ್ದಾರಿ ಬರೆಹ!

ಬಹುತೇಕ ವಿದೇಶಿ ವರದಿಗಾರರು ಬರುವಾಗಲೇ ಭಾರತದ ಬಗ್ಗೆ ಪೂರ್ವಗ್ರಹಗಳನ್ನು ಲೋಡ್ ಮಾಡಿಕೊಂಡೇ ಬರುತ್ತಾರೆ. ಇಲ್ಲಿಗೆ ಬಂದ ಬಳಿಕ ಅವರಿಗೆ ಫೀಡ್ ಮಾಡಲು ಅಂಥದೇ ಜನ ಸಿಗುತ್ತಾರೆ. ಯಾಕೆಂದರೆ ಇವನಿಗಿಂತ ಮೊದಲು ಇದ್ದವನು ತನ್ನ ಸಂಪರ್ಕಗಳನ್ನೆಲ್ಲ ಇವನಿಗೆ ಅಂಟಿಸಿ ಹೋಗುತ್ತಾನೆ. ರಾಯಭಾರ ಕಚೇರಿಗಳಲ್ಲಿನ ಕಾಕ್್ಟೇಲ್ ಪಾರ್ಟಿ, ರಾಯಭಾರಿಗಳ ಜತೆಗಿನ ಸಖ್ಯ, ವಿದೇಶಿ ವರದಿಗಾರರ ಸಂಘದಲ್ಲಿ ನಡೆಯುವ ನಿತ್ಯ ಹರಟೆ, ಬುದ್ಧಿ ಜೀವಿಗಳೆಂದು ಕರೆಯಿಸಿಕೊಳ್ಳುವವರಿಂದ ಭಾರತದ ಬಗ್ಗೆ ಕೊರೆತ, ನಕಾರಾತ್ಮಕ ಚಿಂತನೆಯ ಬೀಜ ಬಿತ್ತನೆಯಿಂದ ಬಹುಬೇಗ ಆತ ಭಾರತ ದ್ವೇಷೀ ಮನೋಭಾವ ತಳೆಯುತ್ತಾನೆ. ಇದರಿಂದಾಗಿ ಆತ ನಿಜವಾದ ಭಾರತವನ್ನು ನೋಡುವುದೇ ಇಲ್ಲ. ಅವನಿಗೆ ಈ ದೇಶದ ಸೊಗಡು, ಸಂಸ್ಕೃತಿಯೇ ಅರ್ಥವಾಗುವುದಿಲ್ಲ. ಗ್ರಾಮ ಭಾರತ ಅವನ ಕಣ್ಣಿಗೆ ಧೂಳಿನ ಕವಚ, ಪರದೆಯನ್ನು ನಿರ್ಮಿಸುವುದರಿಂದ ಆತ ತೆರೆ ಸರಿಸುವ ಗೋಜಿಗೆ ಹೋಗುವುದಿಲ್ಲ. ಹೀಗಾಗಿ ಬರುವಾಗ ಯಾವ ಅಭಿಪ್ರಾಯ ಇಟ್ಟುಕೊಂಡು ಬಂದಿದ್ದನೋ, ಹೋಗುವಾಗಲೂ ಅದನ್ನು ಜೋಪಾನವಾಗಿ ತೆಗೆದುಕೊಂಡು ಹೋಗುತ್ತಾನೆ. ಈ ಮಧ್ಯದ ಅವಧಿಯಲ್ಲಿ ಸಾಧ್ಯವಾಗುವಷ್ಟು ಹಾನಿಯನ್ನು ಮಾಡುತ್ತಾನೆ. ಇದರಿಂದ ಆತ ಕಳೆದುಕೊಳ್ಳುವುದೇನಿಲ್ಲ.

ಈ ಪಡಪೋಶಿ ಪತ್ರಕರ್ತ ಭಯೋತ್ಪಾದಕನಿಗಿಂತ ಅಪಾಯಕಾರಿ. ಆತ ನಮ್ಮ ದೇಶದ ಬಗ್ಗೆ ಏನು ಬರೆಯುತ್ತಾನೆ ಎಂಬುದು ನಮಗೆ ಗೊತ್ತಾಗುವುದಿಲ್ಲ. ಯಾಕೆಂದರೆ ಅವನ ಪತ್ರಿಕೆ ಇಲ್ಲಿ ಸಿಗುವುದಿಲ್ಲ. ಅವನು ಬರೆದಿದ್ದೇ ವೇದವಾಕ್ಯ. ಅವನನ್ನು ಪ್ರಶ್ನಿಸುವವರು ಯಾರು? ಹೀಗಿರುವಾಗ ಅವನ ಮೇಲೆ ಏನಂತ ಕ್ರಮ ಜರುಗಿಸುವುದು? ಅವನ ವರದಿಯನ್ನು ಇಲ್ಲಿನ ನಮ್ಮ ವಿದೇಶಾಂಗ ವ್ಯವಹಾರಗಳ ಅಧಿಕಾರಿಗಳು ಓದಬಹುದು. ಅವರು ಭಾರತದಲ್ಲಿದ್ದೂ ಪರಕೀಯರು ಬಿಡಿ. ಹಾಗೂ ಹೀಗೂ ನಾಲ್ಕೈದು ವರ್ಷ ಬೇಕಾಬಿಟ್ಟಿ ವರದಿ ಮಾಡುವಷ್ಟರಲ್ಲಿ ಸ್ವದೇಶಕ್ಕೆ ಮರಳುವ ಕಾಲ ಬರುತ್ತದೆ. (ಎಲ್ಲ ವಿದೇಶಿ ವರದಿಗಾರರೂ ಹೀಗೆ ಅಂತಲ್ಲ. ಬಿಬಿಸಿಯ ಮಾರ್ಕ್ ಟುಲಿ ಅವರಂಥ ವರದಿಗಾರರು ಮೂರು ದಶಕಗಳಿಂದ ವರದಿ ಮಾಡಿದ್ದಾರೆ. ನಿವೃತ್ತಿಯ ನಂತರವೂ ದೆಹಲಿಯಲ್ಲಿಯೇ ನೆಲೆಸಿದ್ದಾರೆ. ಅದು ಬೇರೆ ಮಾತು.)

ಕೆಲ ವರ್ಷಗಳ ಹಿಂದೆ ಕಾಶ್ಮೀರದ ಬಡಾವಣೆಯೊಂದರಲ್ಲಿ ಉಗ್ರಗಾಮಿಯೊಬ್ಬ ಅಡಗು ತಾಣದಲ್ಲಿ ಕುಳಿತಿದ್ದಾನೆಂಬ ಖಚಿತ ಮಾಹಿತಿ ಸಿಕ್ಕ ತಕ್ಷಣ ಸೇನೆ ಅಲ್ಲಿಗೆ ನುಗ್ಗಿ ಅವನನ್ನು ಹಿಡಿಯಿತು. ಸುದ್ದಿ ಇಷ್ಟೆ. ಆದರೆ ನಾಲ್ಕು ದಿನಗಳ ಬಳಿಕ ‘ನ್ಯೂಯಾರ್ಕ್ ಟೈಮ್ಸ್್’ನಲ್ಲಿ ‘ಕಾಶ್ಮೀರದಲ್ಲಿ ಭಾರತೀಯ ಸೇನಾ ಅಧಿಕಾರಿಗಳಿಂದ ಮಾನವ ಹಕ್ಕುಗಳ ಉಲ್ಲಂಘನೆ’ ಎಂಬ ವರದಿ ಪ್ರಕಟವಾಗಿತ್ತು! ಭಾಷೆ ಹಾಗೂ ಗ್ರಹಿಕೆಯ ದೃಷ್ಟಿಯಿಂದ ಉತ್ತಮ ಯುವ ಪತ್ರಕರ್ತರು ದೆಹಲಿಯಲ್ಲಿ ಬಿಡಾರ ಹೂಡಿ ವಿದೇಶಗಳಲ್ಲಿರುವ ತಮ್ಮ ಪತ್ರಿಕೆಗಳಿಗೆ ವರದಿ ಮಾಡುವ ಪರಿಯಿದು!

ಕೆಲ ತಿಂಗಳುಗಳ ಹಿಂದೆ ‘ಫೋರ್ಬ್ಸ್್’ ಮ್ಯಾಗಜಿನ್್ನಲ್ಲಿ ಒಂದು ಲೇಖನ ಪ್ರಕಟವಾಗಿತ್ತು. ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚವಾಣ್ ಆಹ್ವಾನದ ಮೇರೆಗೆ ಅಮೆರಿಕದ ಡಲ್ಲಾಸ್ ಮೂಲದ ಕಂಪನಿಯೊಂದು ಭೋಪಾಲ್ ಸನಿಹ ತನ್ನ ಶಾಖೆಯನ್ನು ತೆರೆಯಲು ನಿರ್ಧರಿಸಿತ್ತು. ಆದರೆ ಭೋಪಾಲ್ ಅನಿಲ ದುರಂತಕ್ಕೆ ಸಂಬಂಧಿಸಿದ ಕೋರ್ಟ್ ತೀರ್ಪಿನ ಕುರಿತು ‘ಇಂಟರ್ ನ್ಯಾಶನಲ್ ಹೆರಾಲ್ಡ್ ಟ್ರಿಬ್ಯೂನ್್’ ಪತ್ರಿಕೆ ಭಾರತೀಯ ಅಧಿಕಾರಶಾಹಿ, ನ್ಯಾಯಾಂಗದ ಕುರಿತು ನಕಾರಾತ್ಮಕ ಲೇಖನ ಪ್ರಕಟಿಸಿದ್ದರ ಹಿನ್ನೆಲೆಯಲ್ಲಿ ಡಲ್ಲಾಸ್ ಮೂಲದ ಕಂಪನಿ ತನ್ನ ಯೋಜನೆಗೆ ಎಳ್ಳು- ನೀರು ಬಿಟ್ಟಿತು. ಅಂತಾರಾಷ್ಟ್ರೀಯ ಮಟ್ಟದ ಎಷ್ಟೋ ನಿರ್ಧಾರಗಳ ಹಿಂದೆ ಈ ಪಡಪೋಶಿ ಪತ್ರಕರ್ತರ ವರದಿಗಳು ಕರಾಮತ್ತು ನಡೆಸುತ್ತವೆ ಎಂಬುದು ನಮ್ಮ ಅರಿವಿಗೆ ಬರುವುದೇ ಇಲ್ಲ.

ಈ ವಿದೇಶಿ ವರದಿಗಾರರು ಭಾರತದಲ್ಲಿನ ಮೂಢನಂಬಿಕೆ, ದಟ್ಟ ದಾರಿದ್ರ್ಯ, ಧಾರ್ಮಿಕ ಆಚರಣೆಗಳನ್ನು ವಿದೇಶಿ ಓದುಗರಿಗಾಗಿ ರಸವತ್ತಾಗಿ ಬರೆಯುತ್ತಾರೆ.ಅಕ್ಷರಶಃ ನಮ್ಮ ಬಡತನವನ್ನು ಮಾರುವ ಸರಕನ್ನಾಗಿ ಪರಿಗಣಿಸುತ್ತಾರೆ. ಉದಾಹರಣೆಗೆ ‘ನ್ಯೂಯಾರ್ಕ್ ಟೈಮ್ಸ್್’ ನ ವರದಿಗಾರ ರಾಜಸ್ತಾನಕ್ಕೆ ಹೋಗಿ ಒಂದು ವರದಿ ಸಿದ್ಧಪಡಿಸಿದ್ದ. ಅಲ್ಲಿನ ಆದಿವಾಸಿ ಹುಡುಗಿಯರಿಗೆ ಜಾನುವಾರುಗಳಿಗೆ ನೀಡುವ ಇಂಜೆಕ್ಷನ್ ನೀಡಿ, ಅವರ ಹಾರ್ಮೋನ್್ಗಳನ್ನು ದಿಢೀರ್ ವೃದ್ಧಿಯಾಗುವಂತೆ ಮಾಡಿ, ಹತ್ತು- ಹನ್ನೆರಡು ವರ್ಷದ ಬಾಲಕಿಯರು ಹದಿನೆಂಟು- ಇಪ್ಪತ್ತು ವರ್ಷದ ಯುವತಿಯರ ಹಾಗೆ ಕಾಣುವಂತೆ ಬೆಳೆಸಿ ಅವರನ್ನು ಅರಬ್ ದೇಶಗಳಿಗೆ ವೇಶ್ಯಾವಾಟಿಕೆಗೆ ಕಳುಹಿಸುತ್ತಾರೆ ಎಂದು ಬರೆದಿದ್ದ. ಇಂಥ ವರದಿ ಅಮೆರಿಕದ ಪತ್ರಿಕೆಯಲ್ಲಿ ಪ್ರಕಟವಾದರೆ, ಅಲ್ಲಿನ ಜನತೆ ಭಾರತದ ಬಗ್ಗೆ ಎಂಥ ಭಾವನೆ ಬೆಳೆಸಿಕೊಳ್ಳಬಹುದು?

ಇದು ನಿಜಕ್ಕೂ ಅತ್ಯಂತ ಹೇಯ ಹಾಗೂ ಅಮಾನುಷ ಕೃತ್ಯ, ಅನುಮಾನವೇ ಇಲ್ಲ. ಆದರೆ ದೇಶದ ಯಾವುದೋ ಒಂದು ಕುಗ್ರಾಮದಲ್ಲಿ ನಡೆದ ಈ ಘಟನೆಯನ್ನು ಅಮೆರಿಕದ ಪ್ರತಿಷ್ಠಿತ ಪತ್ರಿಕೆಯ ಮುಖಪುಟದಲ್ಲಿ ಪ್ರಕಟಿಸಿದರೆ, ಭಾರತೀಯ ಯುವತಿಯರು ಜಾನುವಾರ ಇಂಜೆಕ್ಷನ್್ನಿಂದಲೇ ಮಹಿಳೆಯರಂತೆ ಕಾಣುತ್ತಾರೆ ಎಂಬ ನಿರ್ಧಾರಕ್ಕೆ ಬಂದರೆ ಅಚ್ಚರಿಯಿಲ್ಲ. ಮಧ್ಯಪ್ರದೇಶದ ಗುಡ್ಡಗಾಡು ಪ್ರದೇಶದಲ್ಲಿರುವ ಆದಿವಾಸಿಗಳು ಬಡತನದ ಬೇಗೆಯಿಂದ ಹೊಟ್ಟೆಗಿಲ್ಲದೆ ಇಲಿಗಳನ್ನು ಕೊಂದು ಅದನ್ನು ತಿನ್ನುತ್ತಾರೆ ಎಂದು ವಿದೇಶಿ ವರದಿಗಾರ ಒಮ್ಮೆ ಬರೆದಿದ್ದ.

ಅಸಲಿ ವಿಷಯವೇ ಬೇರೆ. ಆದಿವಾಸಿಗಳು ಬಡತನದಲ್ಲಿರುವುದು ನಿಜ. ಆದರೆ ಇಲಿ ಅವರಿಗೆ ಹಬ್ಬದೂಟದಲ್ಲಿ ಕಜ್ಜಾಯವಿದ್ದಂತೆ. ಮನೆಯಲ್ಲಿ ಇಲಿ ಹಾಕಿದ ಅಡುಗೆ ಮಾಡಿದ್ದಾರೆಂದರೆ ಅಂದು ಏನೋ ವಿಶೇಷವಿದೆಯೆಂದೇ ಅರ್ಥ. ಆದರೆ ಹೊಟ್ಟೆಗೆ ಏನೂ ಇಲ್ಲವೆಂದೂ ಇಲಿ ತಿಂದು ಬದುಕುತ್ತಾರೆಂದು ಆ ಪಡಪೋಶಿ ಬರೆದರೆ?

ಹಿಂದಿನ ಸೂರ್ಯಗ್ರಹಣದ ಸಂದರ್ಭದಲ್ಲಿ ಗುಲ್ಬರ್ಗದಲ್ಲಿ ಕೆಲವು ವಿಕಲ ಚೇತನ ಮಕ್ಕಳು ತಮ್ಮ ದೈಹಿಕ ನೂನ್ಯತೆ ಹೋಗಲಾಡಿಸಲು ಯಾವುದೋ ಡಂಬಾಚಾರಿಯ ಮಾತು ಕೇಳಿ ಕುತ್ತಿಗೆ ತನಕ ಮಣ್ಣಿನಲ್ಲಿ ಹೂತುಕೊಂಡ ಫೋಟೋ, ವರದಿ ನೀವು ನೋಡಿದ್ದಿರಬಹುದು. ಕನ್ನಡ ಪತ್ರಿಕೆಗಳನ್ನು ಹೊರತುಪಡಿಸಿದರೆ ಈ ಸುದ್ದಿ ಇಂಗ್ಲಿಷ್ ಪತ್ರಿಕೆಗಳಲ್ಲಿ ಅಷ್ಟೊಂದು ಪ್ರಧಾನವಾಗಿ ಪ್ರಕಟವಾಗಿರಲಿಲ್ಲ. ಆದರೆ ಅಮೆರಿಕ, ಬ್ರಿಟನ್್ನ ಪತ್ರಿಕೆಗಳ ಮುಖಪುಟದಲ್ಲಿ ಈ ಸುದ್ದಿ- ಚಿತ್ರ ರಾರಾಜಿಸಿದ್ದವು. ಭಾರತದ ಮರ್ಯಾದೆಯನ್ನು ಹರಾಜಿಗಿಡಲಾಗಿತ್ತು!

ಇಂಥ ಪತ್ರಿಕೆಗಳಲ್ಲಿ ಪ್ರಕಟವಾಗುವ ವರದಿಗಳನ್ನು ಅಂತಾರಾಷ್ಟ್ರೀಯ ನಾಯಕರು ಗಮನಿಸದೇ ಹೋಗುವುದಿಲ್ಲ. ಭಾರತ ಸರ್ಕಾರ ವರ್ಷವಿಡೀ ಮಾಡುವ ಕೆಲಸ ಇಂಥ ಒಂದೆರಡು ವರದಿಗಳಿಂದ ನೀರು ಪಾಲಾಗುತ್ತದೆ.

ಈ ಪಡಪೋಶಿಗಳ ಉಪಟಳಕ್ಕೆ ಉಪಾಯವೇನು? ಯೋಚಿಸಿ.

ಕೃಪೆ: ವಿಶ್ವೇಶ್ವರ ಭಟ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ