ನನ್ನ ಬ್ಲಾಗ್ ಪಟ್ಟಿ

ಮಂಗಳವಾರ, ಏಪ್ರಿಲ್ 19, 2011

ಅಣ್ಣಾಗೆ ಆ ಪರಿ ಬೆಂಬಲ ವ್ಯಕ್ತವಾಗಲು ಕಾರಣವೇನಣ್ಣಾ?

ಇಂಥದ್ದೊಂದು ಪ್ರಶ್ನೆ ನಿಮ್ಮನ್ನೂ ಕಾಡಿರಬಹುದು! ಒಬ್ಬ ಅಣ್ಣಾ ಹಜಾರೆ ಲೋಕಪಾಲ್ ಮಸೂದೆಯನ್ನು ಜಾರಿಗೆ ತರಲೇಬೇಕೆಂದು ಉಪವಾಸಕ್ಕೆ ಕುಳಿತ ಮಾತ್ರಕ್ಕೆ ಇಡೀ ದೇಶವೇ ಅವರ ಹಿಂದೆ ಟೊಂಕ ಕಟ್ಟಿ ನಿಂತಿದ್ದೇಕೆ? ಸ್ವತಃ ಅಣ್ಣಾ ಅವರಿಗೇ ಅಶ್ಚರ್ಯವಾಗುವಂಥ ರೀತಿಯಲ್ಲಿ ದೇಶವಾಸಿಗಳಿಂದ ಅಭೂತಪೂರ್ವ ಬೆಂಬಲ ವ್ಯಕ್ತವಾಗಲು ಕಾರಣವಾದ ಅಂಶಗಳಾದರೂ ಯಾವುವು? ಅವರ ಉಪವಾಸಕ್ಕೆ ಇಡೀ ದೇಶದ ಸಾಕ್ಷಿಪ್ರಜ್ಞೆಯನ್ನು ಬಡಿದೆಬ್ಬಿಸುವ ಶಕ್ತಿ ಬಂದಿದ್ದಾದರೂ ಹೇಗೆ? ಸ್ವಾತಂತ್ರ್ಯ ಚಳವಳಿ ಸಂದರ್ಭದಲ್ಲಿ ಮಹಾತ್ಮ ಗಾಂಧೀಜಿಯವರಂತಹ ಮೇರು ನಾಯಕ ಕರೆಕೊಟ್ಟ ಕಾರಣಕ್ಕೆ ವಿದ್ಯಾರ್ಥಿಗಳು ಶಾಲೆ-ಕಾಲೇಜು ತೊರೆದು ಹೋರಾಟಕ್ಕೆ ಧುಮುಕಿದ್ದನ್ನು ಕೇಳಿದ್ದೆವು , ಓದಿದ್ದೆವು . ಇವತ್ತು ಅಣ್ಣಾ ಕರೆ ಕೊಡದಿದ್ದರೂ ಶಾಲೆ-ಕಾಲೇಜು ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದೇಕೆ? 0226155789ಗೆ ಮಿಸ್ಡ್ ಕಾಲ್ ಕೊಡುವ ಮೂಲಕ ಅಣ್ಣಾ ಸತ್ಯಾಗ್ರಹಕ್ಕೆ ಬೆಂಬಲ ನೀಡಿ ಎಂದ ಕರೆಗೆ 7 ಲಕ್ಷ ಜನ ಸ್ಪಂದಿಸಿದ್ದಾರೆ! ಜಗತ್ತಿನ 400ಕ್ಕೂ ಹೆಚ್ಚು ಭಾಗಗಳಲ್ಲಿ ಅಣ್ಣಾಗೆ ಬೆಂಬಲ ವ್ಯಕ್ತಪಡಿಸಿ ಪ್ರತಿಭಟನೆಗಳಾಗಿವೆ!! ಹೀಗೆ ನಾಗರಿಕ ಸಮಾಜದಲ್ಲಿ ಭ್ರಷ್ಟಾಚಾರದ ಬಗ್ಗೆ ಸಾತ್ವಿಕ ಸಿಟ್ಟು ಮಾತ್ರವಲ್ಲ, ರಾಜಕಾರಣಿಗಳನ್ನು ಹಿಡಿದು ಥಳಿಸುವಂಥ ಅಕ್ರೋಶ ವ್ಯಕ್ತವಾಗುತ್ತಿರುವುದೇಕೆ? ಅಣ್ಣಾ ಹಜಾರೆಯವರಿಗೆ ಆ ಪರಿ ಜನ ಬೆಂಬಲ ವ್ಯಕ್ತವಾಗಲು, ಅವರು ನೈಜ ಅರ್ಥದಲ್ಲಿ ದೊಡ್ಡ ಹೀರೋ ಅಗಲು ಮುಖ್ಯ ಕಾರಣಕರ್ತರಾರು?

ಡಾ. ಮನಮೋಹನ್ ಸಿಂಗ್ ಹಾಗೂ ಸೋನಿಯಾ ಗಾಂಧಿ!

ಸರಕಾರ ಲೋಕಪಾಲ್ ಮಸೂದೆಯ ಕರಡು ಸಿದ್ಧಪಡಿಸಲು ಒಪ್ಪಿಕೊಳ್ಳುವುದರೊಂದಿಗೆ ಏಪ್ರಿಲ್ 9 ರಂದು ಅಣ್ಣಾ ಹಜಾರೆ ತಮ್ಮ ಉಪವಾಸವನ್ನು ಅಂತ್ಯಗೊಳಿಸಿದರು. ಆ ಸಂದರ್ಭದಲ್ಲಿ ನಡೆದ ರ್ಯಾಲಿಯಲ್ಲಿ ರಾರಾಜಿಸುತ್ತಿದ್ದ ಫಲಕಗಳು ಇವರಿಬ್ಬರ ಬಗ್ಗೆ ದೇಶವಾಸಿಗಳಲ್ಲಿರುವ ಅಭಿಪ್ರಾಯಕ್ಕೆ ಕನ್ನಡಿ ಹಿಡಿದಿದ್ದವು.

100 ಕೋಟಿ ಒಬ್ಬ (ಮಧು) ಕೋಡಾ, 100 ಕೋಡಾ ಒಬ್ಬ (ಸುರೇಶ್) ಕಲ್ಮಾಡಿ, 100 ಕಲ್ಮಾಡಿ ಒಬ್ಬ (ಎ) ರಾಜಾ, 100 ರಾಜಾ ಒಬ್ಬ ರಾಣಿ(ಸೋನಿಯಾ).

ಹಾಗೂ

‘ಶೂನ್ಯ ಮೋಹನ್್’, ‘ಗುಲಾಮನಾದ ಸರ್ದಾರ್್’, ‘ಹುಲಿಗಳು ಹುಟ್ಟಿದ ನಾಡಿಗೆ ಅಪಮಾನ ಮಾಡಬೇಡ ಮನಮೋಹನ್. ಸರ್ದಾರನಾಗಿ ಗುಲಾಮನ ಕೆಲಸ ಮಾಡಬೇಡ.’

ಇಂತಹ ಬ್ಯಾನರ್್ಗಳನ್ನು ಕಾಣಬೇಕಾದ ಪರಿಸ್ಥಿತಿಯನ್ನು ಸೃಷ್ಟಿಸಿಕೊಂಡವರಾರು? ಅಂತಹ ಸನ್ನಿವೇಶ ನಿರ್ಮಾಣವಾಗಿದ್ದಾದರೂ ಏಕೆ? 2004ರಲ್ಲಿ ಮೊಟ್ಟಮೊದಲ ಬಾರಿಗೆ ಪ್ರಧಾನಿಯಾಗಿ ನೇಮಕಗೊಂಡಾಗ, ಒಬ್ಬ ಸರಳ, ಸಜ್ಜನ, ಸಮರ್ಥ, ಶುದ್ಧಹಸ್ತ ವ್ಯಕ್ತಿ ಎಂಬುದೇ ಮನಮೋಹನ್ ಸಿಂಗ್್ರ ಹೆಗ್ಗಳಿಕೆಯಾಗಿತ್ತು. ಏಳು ವರ್ಷಗಳ ನಂತರ ಜನರಲ್ಲಿ ಯಾವ ಅಭಿಪ್ರಾಯ ನೆಲೆಗೊಂಡಿದೆ?“I’m not such a big culprit as is projected”ಎಂದು ಅಲವತ್ತುಕೊಳ್ಳುವ ಪರಿಸ್ಥಿತಿಯನ್ನು ಪ್ರಧಾನಿ ಸೃಷ್ಟಿಸಿಕೊಂಡಿದ್ದೇಕೆ? ಒಂದೆಡೆ ಜಾಗತಿಕ ಆರ್ಥಿಕ ಹಿನ್ನಡೆಯ ನಡುವೆಯೂ ನಮ್ಮ ಅರ್ಥವ್ಯವಸ್ಥೆ ಮಾತ್ರ ಗಣನೀಯ ಪ್ರಗತಿ ತೋರುತ್ತಿದ್ದರೂ ಭಾರತದ ಪ್ರತಿಷ್ಠೆಯೇಕೆ ಕುಂದುತ್ತಿದೆ? ಕುಂದು ತರುತ್ತಿರುವ ಸಂಗತಿಯಾದರೂ ಯಾವುದು? ಸರ್ಕಾರ ಕಳಂಕಿತವಾಗಿರುವಾಗ ಪ್ರಧಾನಿ ನಿಷ್ಕಳಂಕಿತರಾಗಿರಲು ಸಾಧ್ಯವೆ?

1. ಕಾಮನ್್ವೆಲ್ತ್ ಹಗರಣ

2. 2ಜಿ ಹಗರಣ

3. ಕಾರ್ಗಿಲ್ ಹುತಾತ್ಮರಿಗೂ ದ್ರೋಹ(ಆದರ್ಶ್ ಹೌಸಿಂಗ್ ಹಗರಣ)

4. ಸಿವಿಸಿ ನೇಮಕದಲ್ಲೂ ಅಡ್ಡಮಾರ್ಗ

5. ವಿಕಿಲೀಕ್ಸ್್ನಿಂದ ಹೊರಬಿದ್ದ ಸಂಸದರ ಖರೀದಿ ಹಗರಣ.

ಇಂತಹ ಒಂದೊಂದು ಹಗರಣಗಳು ಹೊರಬಿದ್ದಾಗಲೂ ಪ್ರಧಾನಿ ಯಾವ ರೀತಿಯ ಧೋರಣೆ ತೋರುತ್ತಾ ಬಂದಿದ್ದಾರೆ? ಬೆಲೆ ಏರಿಕೆಯಾದರೆ ಕೃಷಿ ಸಚಿವ ಶರದ್ ಪವಾರ್ ಕಾರಣ, 2ಜಿ ಹಗರಣಕ್ಕೆ ರಾಜಾ ಮತ್ತು ಮೈತ್ರಿಕೂಟದ ಅನಿವಾರ್ಯತೆಗಳು ಕಾರಣ, ಕಾಮನ್್ವೆಲ್ತ್ ಹಗರಣಕ್ಕೆ ಕಲ್ಮಾಡಿ ಹೊಣೆಗಾರರು. ಹೀಗೆ ಒಂದೊಂದಕ್ಕೆ ಒಬ್ಬೊಬ್ಬರು ಹೊಣೆಗಾರರಾದರೆ ಪ್ರಧಾನಿಗೆ ಕೆಲಸವೇನಿದೆ? ಇನ್ನು ತೀರಾ ಅನಿವಾರ್ಯವಾದಾಗ ರಾಜಿನಾಮೆಯ ಪ್ರಹಸನ ನಡೆಯುತ್ತದೆ. ಅಂದರೆ ಹಗರಣಗಳು ಎದುರಾದಾಗ, ಸರಕಾರದ ಸಮಗ್ರತೆಯ ಮೇಲೆಯೇ ಅನುಮಾನಗಳ ಕಾರ್ಮೋಡ ಆವರಿಸಿದಾಗ, ಸರಕಾರ ಸಂಕಷ್ಟಕ್ಕೆ ಸಿಲುಕಿದಾಗ ಸಂಬಂಧಪಟ್ಟ ಸಚಿವರ ರಾಜಿನಾಮೆ ಪಡೆದ ಮಾತ್ರಕ್ಕೆ ಕಳಂಕ ಹೊರಟು ಹೋಗುತ್ತದೆಯೇ?

ಕಳೆದ ಏಳು ವರ್ಷಗಳಿಂದ ಮನಮೋಹನ್ ಸಿಂಗ್ ಹಾಗೂ ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಮಾಡಿಕೊಂಡು ಬರುತ್ತಿರುವುದು ಇದನ್ನೇ ಅಲ್ಲವೇ? ಇಷ್ಟಾಗಿಯೂ ರಾಜಿನಾಮೆಯಿಂದ ಆಗಿದ್ದಾದರೂ ಏನು?

ಪ್ರಧಾನಿ ಮನಮೋಹನ್ ಸಿಂಗ್ ಅವರೇ, ಮಾಜಿ ವಿದೇಶಾಂಗ ಸಚಿವ ನಟವರ್ ಸಿಂಗ್ ರಾಜಿನಾಮೆ ನೀಡಿ ಏಳು ವರ್ಷಗಳಾಗುತ್ತ ಬಂದವು, ಅವರ ವಿರುದ್ಧ ಯಾವ ತನಿಖೆ ನಡೆದಿದೆ? ಯಾವ ಕ್ರಮ ಕೈಗೊಂಡಿದ್ದೀರಿ? ರಾಜಿನಾಮೆ ಕೊಡಿಸಿದ ಮಾತ್ರಕ್ಕೆ ಸಮಸ್ಯೆ, ಕಳಂಕ ಪರಿಹಾರವಾಗಿ ಬಿಡುತ್ತದೆಯೇ? ಐಪಿಎಲ್ ಕೊಚ್ಚಿ ಪಾಲುದಾರಿಕೆ ವಿಷಯದಲ್ಲಿ ತಮ್ಮ ಪತ್ನಿಯಾಗಲಿದ್ದ ಸುನಂದಾ ಪುಷ್ಕರ್ ಪರ ಲಾಬಿ ಮಾಡಿದರೆಂಬ ಕಾರಣಕ್ಕೆ ವಿದೇಶಾಂಗ ಸಚಿವ ಶಶಿ ತರೂರ್ ರಾಜಿನಾಮೆ ಪಡೆದಿದ್ದೇನೋ ಸರಿ, ಮುಂದೇನಾಯಿತು? ಅಶೋಕ್ ಚವಾಣ್ ವಿಷಯಕ್ಕೆ ಬರೋಣ. ಕಾರ್ಗಿಲ್ ಯುದ್ಧ ಕಲಿಗಳು ಹಾಗೂ ಯುದ್ಧದಲ್ಲಿ ಹುತಾತ್ಮರಾಗಿರುವ ಯೋಧರ ಪತ್ನಿಯರ ವಸತಿಗೆಂದು ನಿರ್ಮಿಸಲಾದ ಅದರ್ಶ ಹೌಸಿಂಗ್ ಸೊಸೈಟಿ ಹಗರಣ ಭುಗಿಲೆದ್ದಾಗ ಮಾಧ್ಯಮಗಳು ಹಾಗೂ ವಿರೋಧ ಪಕ್ಷಗಳ ಒತ್ತಡಕ್ಕೆ ಮಣಿದು ಮಹಾರಾಷ್ಟ್ರ ಮುಖ್ಯಮಂತ್ರಿ ಅಶೋಕ್ ಚವಾಣ್ ಅವರ ರಾಜಿನಾಮೆ ಪಡೆದ ನಂತರ ಏನು ಮಾಡಿದ್ದೀರಿ? ಅವರ ವಿರುದ್ಧದ ತನಿಖೆ ಯಾವ ಹಂತದಲ್ಲಿದೆ? ಚವಾಣ್ ವಿರುದ್ಧ ಯಾವ ಕ್ರಮ ತೆಗೆದುಕೊಂಡಿದ್ದೀರಿ? ಇಡೀ ದೇಶಕ್ಕೆ ಕಳಂಕ ತಂದ ಕಾಮನ್್ವೆಲ್ತ್ ಹಗರಣದ ರೂವಾರಿ ಸುರೇಶ್ ಕಲ್ಮಾಡಿಗೆ ಯಾವ ಶಿಕ್ಷೆ ನೀಡಿದ್ದೀರಿ? ಏಕೆ ಕಲ್ಮಾಡಿಯವರನ್ನು ಇಂದಿಗೂ ಬಂಧಿಸಿಲ್ಲ? ಕೇಂದ್ರ ವಿಚಕ್ಷಣಾ ಅಯೋಗದ ಕಳಂಕಿತ ಹಾಗೂ ಪದಚ್ಯುತ ಮುಖ್ಯಾಧಿಕಾರಿ ಪಿ.ಜೆ. ಥಾಮಸ್ ಅವರನ್ನು ಆ ಸ್ಥಾನಕ್ಕೆ ತಂದು ಕೂರಿಸುವಾಗ, ಪ್ರತಿಪಕ್ಷದ ವಿರೋಧದ ಹೊರತಾಗಿಯೂ ತಮ್ಮ ಮನಸ್ಸಿನಂತೆ ನಡೆದುಕೊಳ್ಳುವಾಗ ತೋರಿದ ದರ್ಪ ಈಗ ಎಲ್ಲಿಗೆ ಹೋಯಿತು? 2ಜಿ ಹಗರಣದ ಸಲುವಾಗಿ ಎ. ರಾಜಾ ಅವರ ರಾಜಿನಾಮೆ ಪಡೆದುಕೊಂಡ ನೀವು, ಥಾಮಸ್ ಪ್ರಕರಣದಲ್ಲಿ ಏಕೆ ನೈತಿಕ ಹೊಣೆ ಹೊರಲಿಲ್ಲ? ಏಕೆ ರಾಜಿನಾಮೆ ನೀಡುವ ನೈತಿಕತೆ ತೋರಲಿಲ್ಲ? ಕ್ಷಮೆ ಕೇಳಿದ್ದೇ ದೊಡ್ಡ ಮುತ್ಸದ್ದಿತನವೇ? ಎ. ರಾಜಾ ವಿರುದ್ಧ ಒಂದು ಅರೋಪಪಟ್ಟಿ ಸಿದ್ಧಪಡಿಸಿ ತನಿಖೆಗೆ ಆದೇಶಿಸಲು 16 ತಿಂಗಳು ಬೇಕಾದವೇ? ಎಂದು ಸುಪ್ರೀಂಕೋರ್ಟ್ ಟೀಕಾಪ್ರಹಾರ ಮಾಡಬೇಕಾಗಿ ಬಂತೆಂದರೆ ಪ್ರಧಾನಿ ಎಷ್ಟು ನಿಷ್ಕ್ರಿಯರಾಗಿದ್ದಾರೆ, ಭ್ರಷ್ಟಾಚಾರದ ಬಗ್ಗೆ ಎಂತಹ ಭಾವನೆ ಹೊಂದಿದ್ದಾರೆ ಎಂಬುದನ್ನು ಸೂಚಿಸುವುದಿಲ್ಲವೆ? ಈ ದೇಶ ಕಂಡ ಅತ್ಯಂತ ಭ್ರಷ್ಟ ಸರಕಾರದ ಮುಂದಾಳು ನೀವು ಎಂಬ ವಾಸ್ತವವನ್ನು ಅಲ್ಲಗಳೆಯಲು ಸಾಧ್ಯವೆ?

2011, ಫೆಬ್ರವರಿ 16ರಂದು ದೇಶದ ಪ್ರಭಾವಿ ಇಂಗ್ಲಿಷ್ ಚಾನೆಲ್್ಗಳ ಮುಖ್ಯಸ್ಥರ ಜತೆ ಪತ್ರಿಕಾಗೋಷ್ಠಿ ನಡೆಸಿದ ಪ್ರಾಮಾಣಿಕ ಪ್ರಧಾನಿ ಮನಮೋಹನ್ ಸಿಂಗ್ ಹೇಳಿದ್ದೇನು? ಬಿಜೆಪಿ ಬಹಳ ಕಟು ಧೋರಣೆ ಅನುಸರಿಸುತ್ತಿದೆ, ತನ್ನ ಸಚಿವರೊಬ್ಬರನ್ನು ರಕ್ಷಿಸಲು ಸಹಕರಿಸದ ಕಾರಣ ಅದು ವರಾತಕ್ಕೆ ಇಳಿದಿದೆ ಎಂದು ವಿಷಯಾಂತರ ಮಾಡಲು ಯತ್ನಿಸಿದಿರಲ್ಲಾ 1.7 ಲಕ್ಷ ಕೋಟಿ 2ಜಿ ಹಗರಣಕ್ಕೆ ಕೊಡುವ ಸಮರ್ಥನೆ ಇದೇನಾ? ಜತೆಗೆ ಮೈತ್ರಿಕೂಟದ ಅನಿವಾರ್ಯಗಳು ತಮ್ಮನ್ನು ತಡೆಯುತ್ತಿವೆ ಎನ್ನುವುದಾದರೆ ನೀವು ಯಾರಿಗಾಗಿ, ಯಾರ ಸೇವೆ ಮಾಡುವುದಕ್ಕಾಗಿ ಪ್ರಧಾನಿ ಗಾದಿಯಲ್ಲಿದ್ದೀರಿ? ‘ದಿ ಹಿಂದು’ ಪತ್ರಿಕೆ ಬೆಳಕಿಗೆ ತಂದ ವಿಕಿಲೀಕ್ಸ್ ಹಾಗೂ ಓಟಿಗಾಗಿ ಕಾಸು ಹಗರಣದ ಬಗ್ಗೆ ಬಿಜೆಪಿ ಬೊಬ್ಬೆ ಹಾಕಿದರೆ, “ಅದು ಮುಗಿದ ವಿಚಾರ. ಚುನಾವಣೆಯಲ್ಲಿ ಜನ ತೀರ್ಪು ಕೊಟ್ಟಿದ್ದಾರೆ. ಬಿಜೆಪಿಗೆ ಪಾಠ ಕಲಿಸಿದ್ದಾರೆ” ಎಂದು ಏಕೆ ವಿವೇಚನೆ ಇಲ್ಲದವರಂತೆ ಸಮಜಾಯಿಷಿ ನೀಡುತ್ತೀರಿ? ಹೀಗೆಲ್ಲಾ ಮಾತನಾಡುವ ಮನಮೋಹನ್ ಸಿಂಗ್ ಯಾವ ಚುನಾವಣೆಯಲ್ಲಿ ಗೆದ್ದಿದ್ದಾರೆ? ಇಡೀ ದೇಶದಲ್ಲಿಯೇ ಅತ್ಯಂತ ಸುಶಿಕ್ಷಿತ ಲೋಕಸಭಾ ಕ್ಷೇತ್ರವೆಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ದಕ್ಷಿಣ ದಿಲ್ಲಿಯಲ್ಲಿ 1998ರಲ್ಲಿ ಸೋಲುಂಡಿದ್ದ ಹಾಗೂ ಮತ್ತೆಂದೂ ಸಾರ್ವತ್ರಿಕ ಚುನಾವಣೆಯಲ್ಲಿ ಸ್ಪರ್ಧಿಸುವ ಧೈರ್ಯ ತೋರದ ಮನಮೋಹನ್್ಗೆ ಜನಾದೇಶದ ಬಗ್ಗೆ ಮಾತನಾಡುವ ಯಾವ ನೈತಿಕ ಹಕ್ಕಿದೆ? ಒಂದು ವೇಳೆ, ಪ್ರಮುಖ ಪ್ರತಿಪಕ್ಷವೇನಾದರೂ ಭ್ರಷ್ಟಾಚಾರದ ಬಗ್ಗೆ ಧ್ವನಿಯೆತ್ತಿದರೆ ಕಾಂಗ್ರೆಸ್, ಕರ್ನಾಟಕದ ಮುಖ್ಯಮಂತ್ರಿ ಯಡಿಯೂರಪ್ಪನವರತ್ತ ಕೈ ತೋರುತ್ತದೆ.

ಆದರೆ ಪ್ರಧಾನಿ ಮನಮೋಹನ್ ಸಿಂಗ್ ಅವರು ಮಾಡುವ ಭ್ರಷ್ಟಾಚಾರ ಸಮರ್ಥನೆಗೂ, ಯಡಿಯೂರಪ್ಪನವರ ನಿರ್ಲಜ್ಜತನಕ್ಕೂ ಯಾವ ವ್ಯತ್ಯಾಸವಿದೆ?

ಯಡಿಯೂರಪ್ಪನವರ ರೂಪದಲ್ಲಿ ಬಿಜೆಪಿಯ ಒಬ್ಬ ಭ್ರಷ್ಟ ಮುಖ್ಯಮಂತ್ರಿಯತ್ತ ಬೊಟ್ಟು ಮಾಡುತ್ತಾ ತಮ್ಮ ಪರಮಭ್ರಷ್ಟ ಸರಕಾರವನ್ನು ಸಮರ್ಥಿಸಿಕೊಳ್ಳುತ್ತಿರುವ ಮನಮೋಹನ್ ಸಿಂಗ್್ಗೆ ದೇಶವೇ ಕೊಂಡಾಡುತ್ತಿರುವ ನರೇಂದ್ರ ಮೋದಿ, ನಿತೀಶ್ ಕುಮಾರ್ ಎಂಬ ಬಿಜೆಪಿ-ಎನ್್ಡಿಎ ಮುಖ್ಯಮಂತ್ರಿಗಳೇಕೆ ಕಾಣುತ್ತಿಲ್ಲ? ಸತತ ಎರಡನೇ ಬಾರಿಗೆ ಕೇಂದ್ರದಲ್ಲಿ ಕಾಂಗ್ರೆಸ್ ಗದ್ದುಗೆ ಏರಿರಬಹುದು. ಅದರೆ ಇಡೀ ರಾಷ್ಟ್ರದಲ್ಲಿ ಯಾರಾದರೂ ಒಳ್ಳೆಯ ಮುಖ್ಯಮಂತ್ರಿಗಳಿದ್ದಾರಾ? ಎಂಬ ಪ್ರಶ್ನೆಯನ್ನಿಟ್ಟುಕೊಂಡು ಹುಡುಕಲು ಹೊರಟರೆ ಕಾಣುವುದು ನಿತೀಶ್ ಕುಮಾರ್, ನರೇಂದ್ರ ಮೋದಿ, ರಮಣ್ ಸಿಂಗ್, ಶಿವರಾಜ್ ಸಿಂಗ್ ಚೌಹಾಣ್ ಮೊದಲಾದ ಬಿಜೆಪಿ-ಎನ್್ಡಿಎ ಮುಖ್ಯಮಂತ್ರಿಗಳಷ್ಟೇ! ಇವರನ್ನು ಬಿಟ್ಟರೆ ಯೋಗ್ಯ ಹಾಗೂ ಒಳ್ಳೆಯ ಕಾರಣಕ್ಕಾಗಿ ಸುದ್ದಿ ಮಾಡುತ್ತಿರುವ ಒಬ್ಬ ಮುಖ್ಯಮಂತ್ರಿಯನ್ನು ಹೆಸರಿಸಲಿ ನೋಡೋಣ? ಮನಮೋಹನ್ ಸರಕಾರ ವಿತ್ತೀಯ ಕೊರತೆಯೊಂದೇ ಅಲ್ಲ, ಉತ್ತಮ ಅಡಳಿತ ಹಾಗೂ ನೈತಿಕತೆಯ ಕೊರತೆಯನ್ನೂ ಎದುರಿಸುತ್ತಿದೆ ಎಂದು ಅವರ ಸಂಪುಟದಲ್ಲೇ ಇರುವ ಗೃಹಸಚಿವ ಪಿ. ಚಿದಂಬರಂ ಹೇಳುತ್ತಾರೆಂದರೆ ಪರಿಸ್ಥಿತಿ ಎಷ್ಟು ಹದಗೆಟ್ಟಿರಬಹುದು?

ಹೀಗೆ ಮೇಲಿಂದ ಮೇಲೆ ಬೆಳಕಿಗೆ ಬಂದ ಹಗರಣಗಳು ಜನರ ಭಾವನೆಗಳಿಗೆ ನೋವುಂಟು ಮಾಡಿದವು, ಸಾಕ್ಷಿಪ್ರಜ್ಞೆಯನ್ನು ಕೆಣಕಿದವು, ಮನಸ್ಸನ್ನು ಹತಾಶೆಗೊಳಿಸಿದವು. ಯಾವ ಸಂಕೋಚವೂ ಇಲ್ಲದೆ ಇತರರ ಮೇಲೆ ಗೂಬೆ ಕೂರಿಸುವ, ಭ್ರಷ್ಟಾಚಾರವನ್ನು, ಸಂಸದರ ಖರೀದಿಯನ್ನು ಸಮರ್ಥಿಸಿಕೊಳ್ಳುವ ಪ್ರಧಾನಿ, ಅಧಿಕಾರ ಉಳಿಸಿಕೊಳ್ಳುವುದಕ್ಕಾಗಿ ಯಾವ ಮಟ್ಟಕ್ಕೂ ಇಳಿಯುವ ಯಡಿಯೂರಪ್ಪನವರಂತಹ ಮುಖ್ಯಮಂತ್ರಿಗಳು ಇರುವಾಗ ದೇಶವಾಸಿಗಳಲ್ಲಿ ರಾಜಕಾರಣಿಗಳ ಬಗ್ಗೆ ಆಕ್ರೋಶ, ವ್ಯವಸ್ಥೆಯ ಮೇಲೆ ಜುಗುಪ್ಸೆ, ಭವಿಷ್ಯದ ಮೇಲೆ ಭ್ರಮನಿರಸನ ಸೃಷ್ಟಿಯಾಗದೇ ಇದ್ದೀತೆ? ಅಂತಹ ಅಕ್ರೋಶಕ್ಕೆ ಧ್ವನಿಯಾಗಲು ಅಣ್ಣಾ ಹೊರಟಾಗ ಜನ ಬೆಂಬಲಿಸದೇ ಇರುತ್ತಾರೆಯೇ?

ಕೃಪೆ: ಫ್ರತಾಪ ಸಿಂಹ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ