ನನ್ನ ಬ್ಲಾಗ್ ಪಟ್ಟಿ

ಗುರುವಾರ, ಏಪ್ರಿಲ್ 21, 2011

ನೋಡ್ತಾ ಇರಿ, ಹಜಾರೆ ಹೋರಾಟವನ್ನು ಹಳ್ಳ ಹಿಡಿಸುವವರಿದ್ದಾರೆ, ಜೋಕೆ!

‘ಆ ಶ್ರೀರಾಮಚಂದ್ರನನ್ನೂ ಬಿಡಲಿಲ್ಲ, ಶ್ರೀಕೃಷ್ಣ ಪರಮಾತ್ಮನನ್ನೂ ಬಿಡಲಿಲ್ಲ, ಮಹಾತ್ಮ ಗಾಂಧಿಯ ಗ್ರಹಚಾರವನ್ನು ಬಿಡಿಸದೇ ಹೋಗಲಿಲ್ಲ. ಹೀಗಿರುವಾಗ ನಮ್ಮ ಜನ ಅಣ್ಣಾ ಹಜಾರೆಯನ್ನು ಬಿಡ್ತಾರೇನ್ರಿ?’

ಇಂಥದೊಂದು ಸಂದೇಶ ಟ್ವಿಟ್ಟರ್ ನಲ್ಲಿ ಹರಿದಾಡುತ್ತಿದೆ. ಲಕ್ಷಾಂತರ ಮಂದಿ ಆತಂಕಗೊಂಡು ಇದನ್ನು ರೀಟ್ವೀಟ್ ಮಾಡುತ್ತಿದ್ದಾರೆ. ಅಣ್ಣಾ ಹಜಾರೆ ಹಾಗೂ ಅವರು ಕೈಗೆತ್ತಿಕೊಂಡ ಭ್ರಷ್ಟಾಚಾರ ವಿರೋಧಿ ಆಂದೋಲನವನ್ನು ಹಳ್ಳಹಿಡಿಸುವುದು ಹೇಗೆ, ಅಣ್ಣಾಗೆ ಕಪ್ಪು ಚುಕ್ಕೆ ಮೆತ್ತೋದು ಹೇಗೆ ಎಂಬ ಬಗ್ಗೆ ವ್ಯವಸ್ಥಿತ ಷಡ್ಯಂತ್ರ ನಡೆಯುತ್ತಿದೆ. ಭ್ರಷ್ಟಾಚಾರದ ವಿರುದ್ಧ ಸೆಟೆದೆದ್ದು ನಿಂತವರೇನು ಸುಬಗರಾ ಎಂಬ ಅಪಸ್ವರ ಟಿಸಿಲೊಡೆಯುತ್ತಿದೆ. ಪಕ್ಷಭೇದ ಮರೆತು ಭ್ರಷ್ಟರೆಲ್ಲ ಒಂದಾಗುತ್ತಿದ್ದಾರೆ. ಅಣ್ಣಾ ಮೇಲೆ ಕೂರಿಸಬೇಕಿರುವ ಗೂಬೆಗಾಗಿ ಎಲ್ಲರ ಶೋಧ ಆರಂಭಗೊಂಡಂತಿದೆ.

ಒಟ್ಟಾರೆ ಒಂದು ಚಳವಳಿಯನ್ನು ಕತ್ತು ಹಿಡಿದು ಸಾಯಿಸುವ ಪ್ರಯತ್ನ ತೆರೆಮರೆಯಲ್ಲಿ ನಡೆಯುತ್ತಿರುವ ಸ್ಪಷ್ಟ ಸೂಚನೆಗಳು ಹೊರಹೊಮ್ಮುತ್ತಿರುವುದಂತೂ ಸತ್ಯ.

ಭ್ರಷ್ಟಾಚಾರವನ್ನು ನಿಗ್ರಹಿಸಲು ಲೋಕಪಾಲ ಮಸೂದೆ ಜಾರಿಯೊಂದೇ ಉಳಿದಿರುವ ದಾರಿ ಎಂದು ಭಾವಿಸಿದ ಅಣ್ಣಾ ಹಜಾರೆ, ದಿಲ್ಲಿಯ ಜಂತರ್ ಮಂತರ್ ನಲ್ಲಿ ಉಪವಾಸ ಸತ್ಯಾಗ್ರಹಕ್ಕೆ ಕುಳಿತುಕೊಳ್ಳುವಾಗ ದೇಶವ್ಯಾಪಿ ಈ ಪರಿಯ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗಬಹುದೆಂದು ಯಾರೂ ಊಹಿಸಿರಲಿಲ್ಲ. ದೇಶದೆಲ್ಲೆಡೆ, ಎಲ್ಲ ರಂಗಗಳಲ್ಲೂ ವ್ಯಾಪಿಸಿದ ಭ್ರಷ್ಟಾಚಾರದಿಂದ ರೋಸಿ ಹೋದ ಜನತೆಗೆ ತಮ್ಮ ಆಕ್ರೋಶವನ್ನು ಹೊರಹಾಕಲು ಒಂದು ಅವಕಾಶ ಹಾಗೂ ಈ ಆಕ್ರೋಶದ ಮೊತ್ತವಾಗಿ ರೂಪ ತಾಳುವ ಒಂದು ಜನಾಂದೋಲನಕ್ಕೆ ಪ್ರಾಮಾಣಿಕ, ವಿಶ್ವಾಸಾರ್ಹ ನಾಯಕತ್ವದ ಅಗತ್ಯವಿತ್ತು. ಇದನ್ನು ದೇಶವಾಸಿಗಳು ಅಣ್ಣಾ ಹಜಾರೆಯವರಲ್ಲಿ ಕಂಡಿದ್ದರೆ ಅದರಲ್ಲಿ ಅಚ್ಚರಿಯೇನೂ ಇಲ್ಲ. ಅಣ್ಣಾ ಬದಲು ಅವರಂಥ ಮತ್ತೊಬ್ಬ ನಾಯಕ ಈ ಹೋರಾಟದ ಮುಂದಾಳತ್ವ ವಹಿಸಿದ್ದರೂ ಪ್ರತಿಕ್ರಿಯೆ ಹೀಗೇ ಇರುತ್ತಿತ್ತೇನೋ?

ಆದರೆ ಜನಸ್ಪಂದನ ಅದೆಷ್ಟು ತೀಕ್ಷ್ಣ ಹಾಗೂ ಭರ್ಜರಿಯಾಗಿತ್ತೆಂದರೆ, ಅಣ್ಣಾ ಉಪವಾಸ 97 ಗಂಟೆ ಕಳೆಯುವುದರೊಳಗೆ ಕೇಂದ್ರದ ಭಂಡ ಸರ್ಕಾರ, ನಿರ್ಲಿಪ್ತ ನಾಯಕತ್ವ ಮಣಿಯಲೇ ಬೇಕಾಯಿತು. ಈ ವಿಷಯದಲ್ಲಿ ಇನ್ನೂ ವಿಳಂಬ ಮಾಡಿದ್ದರೆ, ಚೌಕಾಶಿ ನಡೆಸಿದ್ದರೆ ಪರಿಸ್ಥಿತಿ ಕೈ ಮೀರಿ ಹೋಗಬಹುದೆಂದು ಕೇಂದ್ರ ಸರಕಾರದ ನೊಗ ಹೊತ್ತವರಿಗೆ ಅನಿಸಿರಬೇಕು. ಅಣ್ಣಾ ಬೇಡಿಕೆಗಳಿಗೆ ಮಣಿದರು. ಪ್ರತಿಪಕ್ಷಗಳ ನಾಯಕರು ಸಹ ಈ ವಿಷಯದಲ್ಲಿ ಕಲ್ಲವಿಲರಾಗಿದ್ದರು. ಈ ವಿಷಯದಲ್ಲಿ ಯಾವ ಸ್ಪಷ್ಟ ನಿಲುವು ತಳೆಯಬೇಕು ಎಂದು ಆ ನಾಯಕರೂ ತಲೆಕೆಡಿಸಿಕೊಂಡಿದ್ದರು.ನಮ್ಮಿಂದಾಗದ ಕೆಲಸವನ್ನು ಅಣ್ಣಾ ಹಜಾರೆ ಮಾಡಿದರು ಎಂದು ಅಡ್ವಾಣಿಯವರಂಥವರು ಉಪಾಯವಾಗಿ ಹೇಳಿದರು.

ನಮ್ಮ ಸಂಸತ್ತು ಸಣ್ಣ- ಪುಟ್ಟ ವಿಷಯಗಳಿಗೆಲ್ಲ ಸಭಾತ್ಯಾಗ ಕಂಡಿದೆ. ಚಿಲ್ಲರೆ ವಿಷಯಗಳಿಗೆ ಜಗಳವಾಡಿದ್ದಕ್ಕೆ ಸಾಕ್ಷಿಯಾಗಿದೆ. ಆದರೆ ಲೋಕಪಾಲ ಮಸೂದೆ ಅಂಗೀಕಾರಕ್ಕಾಗಿ ಒಬ್ಬನೇ ಸದಸ್ಯ ಒತ್ತಾಯಿಸಿಲ್ಲ. ಕಳೆದ ನಲವತ್ತೆರಡು ವರ್ಷಗಳಿಂದ ಈ ಮಸೂದೆ ಅಂಗೀಕಾರಕ್ಕಾಗಿ ಕಾದು ಕುಳಿತಿದೆ. ಈ ದೇಶದ ಯಾವ ರಾಜ್ಯದ ಮುಖ್ಯಮಂತ್ರಿಯೂ ಲೋಕಾಯುಕ್ತ ಸಂಸ್ಥೆಯನ್ನು ಸದೃಢಗೊಳಿಸಲು ಅವರಿಗೆ ಪರಮಾಧಿಕಾರ ನೀಡಲು ಮುಂದೆ ಬರಲಿಲ್ಲ. ಒಬ್ಬೇ ಒಬ್ಬ ಮುಖ್ಯಮಂತ್ರಿಯನ್ನಾಗಲಿ, ಮಂತ್ರಿಯನ್ನಾಗಲಿ, ಲೋಕಾಯುಕ್ತರಿಗೆ ಶಿಕ್ಷಿಸಲು ಸಾಧ್ಯವಾಗಿಲ್ಲ.

ಇದಕ್ಕೆ ವ್ಯತಿರಿಕ್ತವಾಗಿ ಲೋಕಾಯುಕ್ತರೇ ಮೆತ್ತಗಾಗಿದ್ದಾರೆ. ಭ್ರಷ್ಟಾಚಾರ ನಮಗೆ ಚರ್ಚೆಯ ವಸ್ತುವೂ ಆಗದಷ್ಟು ನಾವು ಅದನ್ನು ಒಪ್ಪಿಕೊಳ್ಳುವ ಹಂತಕ್ಕೆ ಹೋಗಿದ್ದೆವು. ಯಾಕೆಂದರೆ ಎಷ್ಟೇ ಮಾತನಾಡಿದರೂ ಪ್ರಯೋಜನವಿಲ್ಲ, ಎಲ್ಲರೂ ಭ್ರಷ್ಟರೇ ಎಂಬ ನಿರ್ಧಾರಕ್ಕೆ ಬಂದಿದ್ದೆವು. ಯಾರು ಭ್ರಷ್ಟರಲ್ಲ, ಎಲ್ಲಿ ಅದು ಇಲ್ಲ, ಹಣ ತೆಗೊಂಡು ಕೆಲಸ ಮಾಡಿಕೊಡ್ತಾನಲ್ಲ ಅದೇ ಪುಣ್ಯ ಎಂದು ನಾವು ಭ್ರಷ್ಟಾಚಾರವನ್ನು ಒಪ್ಪಿಕೊಂಡಿದ್ದೆವು. ಅಂಥ ಸ್ಥಿತಿಯಲ್ಲಿ ಅಣ್ಣಾ ಹಜಾರೆ ಹೋರಾಟ ಪರಿಹಾರವಾಗದಿದ್ದರೂ, ಹೊಸ ಆಶಾಭಾವನೆಯಾಗಿ ಕಂಡಿರುವುದು ದಿಟ.

ಯಾವಾಗ ಅಣ್ಣಾ ಹಜಾರೆ ‘ಮ್ಯಾಜಿಕ್’ ಇಡೀ ದೇಶದಲ್ಲಿ ಅಲ್ಲೋಲಕಲ್ಲೋಲ ಉಂಟು ಮಾಡಿತೋ, ಭ್ರಷ್ಟಶಕ್ತಿಗಳು ಮಸಲತ್ತು ನಡೆಸಲಾರಂಭಿಸಿದರು. ಬಾಬಾರಾಮದೇವ್ ಈ ಹೋರಾಟಕ್ಕೆ ಬೆಂಬಲ ಘೋಷಿಸುತ್ತಿದ್ದಂತೆ, ಬಾಬಾಗೆ ಅಷ್ಟೆಲ್ಲ ಹಣ ಎಲ್ಲಿಂದ ಬಂತು? ಅವರು ತೆರಿಗೆಗಳ್ಳರಲ್ಲವೇನು? ಎಂಬ ಮಾತುಗಳು ಕೇಳಿ ಬರಲಾರಂಭಿಸಿದವು. ಅಣ್ಣಾ ಹಜಾರೆ ಜತೆಗಿದ್ದ ಕಾನೂನು ಪರಿಣತರಾದ ಶಾಂತಿಭೂಷಣ್ ಹಾಗೂ ಪ್ರಶಾಂತ್ ಭೂಷಣ್ ಅವರನ್ನು ಸರಕಾರ- ನಾಗರಿಕ ಸಮಾಜದ ಪ್ರತಿನಿಧಿಗಳ ಜಂಟಿ ಸಮಿತಿಯಲ್ಲಿ ಸೇರಿಸಿಕೊಳ್ಳುವುದಕ್ಕೆ ಪ್ರತಿರೋಧ ಬಂತು. ಆನಂತರ ಮೊದಲ ಸಭೆಯ ಮುನ್ನಾದಿನ ಶಾಂತಿಭೂಷಣ್ ಅವರ ಚಾರಿತ್ರ್ಯವಧೆ ಮಾಡುವ ಸಿಡಿಯೊಂದನ್ನು ಬಿಡುಗಡೆ ಮಾಡಲಾಯಿತು.

ಅದಾಗಿ ಎರಡು ದಿನಗಳ ಬಳಿಕ, ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಕೋರ್ಟಿನಲ್ಲಿ ಹಾಕಿ, ಬ್ಲ್ಯಾಕ್ ಮೇಲ್ ಮಾಡುವುದನ್ನೇ ತಮ್ಮ ಕಸುಬನ್ನಾಗಿ ಮಾಡಿಕೊಂಡಿದ್ದಾರೆಂದು ಪ್ರಶಾಂತ್ ಭೂಷಣ್ ಮೇಲೆ ಗೂಬೆ ಕೂರಿಸಲಾಯಿತು. ಅಪ್ಪ-ಮಗ ಸೇರಿ ಇತ್ತೀಚಿಗೆ ನೂರಾರು ಕೋಟಿ ರೂ. ಆಸ್ತಿ ಖರೀದಿಸಿದ್ದಾರೆ. ಆ ಹಣ ಅವರಿಗೆಲ್ಲಿಂದ ಬಂತು? ಎಂದು ಅಮರ್್ಸಿಂಗ್ ಕೇಳಿದರು. ಕಾಂಗ್ರೆಸ್ ಅಮರ್ ಸಿಂಗ್ ಅವರಿಗೆ ‘ಸುಪಾರಿ’ ಕೊಟ್ಟು ಈ ಮಾತುಗಳನ್ನು ಹೇಳಿಸುತ್ತಿದೆ ಎಂದು ಬಿಜೆಪಿ ಟೀಕಿಸಿತು.

ಈ ಮಧ್ಯೆ ಕಾಂಗ್ರೆಸ್ ಕೂಡ ಅಣ್ಣಾ ಹಜಾರೆ ವಿರುದ್ಧ ಅಸಹನೆ ಕಾರಿಕೊಳ್ಳಲಾರಂಭಿಸಿತು. ದಿಗ್ವಿಜಯ್ ಸಿಂಗ್ ಹಾಗೂ ಕಪಿಲ್ ಸಿಬಲ್ ಬಹಿರಂಗವಾಗಿಯೇ ಅಣ್ಣಾ ವಿರುದ್ಧ ಮಾತಿಗಿಳಿದರು. ಲೋಕಪಾಲ್ ಮಸೂದೆ ಅಂಗೀಕಾರವಾದ ಮಾತ್ರಕ್ಕೆ ಬಡತನ ನಿವಾರಣೆಯಾಗುವುದಾ, ಅದರಿಂದ ಸಾಮಾನ್ಯ ಪ್ರಜೆಗೆ ಏನು ಪ್ರಯೋಜನ ಎಂದು ಸಚಿವ ಸಿಬಲ್ ಉಡಾಫೆ ಮಾತುಗಳನ್ನು ಆಡಿದರು. ಲೋಕಪಾಲ್ ಮಸೂದೆಯನ್ನು ಸಿದ್ಧಪಡಿಸಲು ರಚಿಸಲಾಗಿರುವ ಸಮಿತಿಯಲ್ಲಿ ಸರಕಾರದ ಪರವಾಗಿ ಸಿಬಲ್ ಕೂಡ ಸದಸ್ಯರಲ್ಲೊಬ್ಬರು. ಅವರಿಂದ ಇಂಥ ಮಾತು!

ಲೋಕಪಾಲ ಮಸೂದೆ ಕರಡು ಸಮಿತಿಯಲ್ಲಿ ಐವರು ಸಾಮಾಜಿಕ ಕಾರ್ಯಕರ್ತರನ್ನು ಸೇರಿಸಿದ್ದನ್ನು ಪ್ರಶ್ನಿಸಿ ವಕೀಲರ ತಂಡವೊಂದು ಸುಪ್ರೀಂಕೋರ್ಟಿನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ದಾಖಲಿಸಿದೆ. ಐವರು ಸಚಿವರಿರುವ ಸಮಿತಿಯಲ್ಲಿ ನಾಗರಿಕ ಸಮಾಜದ ಪ್ರತಿನಿಧಿಗಳನ್ನು ಸದಸ್ಯರನ್ನಾಗಿ ಮಾಡಿದ ಔಚಿತ್ಯವೇನು? ಸಂಸದೀಯ ಸಮಿತಿಗೆ ಸಂಸದರು ಸದಸ್ಯರಾಗಿರಬೇಕು. ಅದು ಬಿಟ್ಟು ಇವರನ್ನೇಕೆ ನೇಮಿಸಿದ್ದೀರಿ ಎಂದು ಇವರು ಪ್ರಶ್ನಿಸಿದ್ದಾರೆ. ಇವರ ವಾದವನ್ನೇನಾದರೂ ಕೋರ್ಟ್ ಎತ್ತಿ ಹಿಡಿದರೆ ಅಲ್ಲಿಗೆ ಕೇಸು ಫಡ್ಚಾ!

ಅಣ್ಣಾ ಹಜಾರೆ ಹಾಗೂ ಅವರ ಸನಿಹವಿರುವ ವ್ಯಕ್ತಿಗಳ ಹೆಸರಿಗೆ ಕುಂದುಂಟು ಮಾಡುವ ಪ್ರಯತ್ನ ವ್ಯವಸ್ಥಿತವಾಗಿ ನಡೆಯುತ್ತಿದೆ. ಅಣ್ಣಾ ಇಡೀ ಪ್ರಜಾಸತ್ತಾತ್ಮಕ ವ್ಯವಸ್ಥೆಗೆ ದ್ರೋಹವೆಸಗಿದ್ದಾರೆ, ಸಂವಿಧಾನಕ್ಕೆ ಅಪಚಾರವೆಸಗಿದ್ದಾರೆ, ಸಂಸದರನ್ನು ಧಿಕ್ಕರಿಸಿ, ಸರಕಾರವನ್ನು ಬ್ಲ್ಯಾಕ್್ಮೇಲ್ ಮಾಡುತ್ತಿದ್ದಾರೆ. ಒಬ್ಬ ವ್ಯಕ್ತಿ ಈ ರೀತಿ ಸವಾಲು ಹಾಕುವ ರೀತಿಯಲ್ಲಿ ನಡೆದುಕೊಂಡರೆ ಸರಕಾರವಾಗಲಿ, ಸಂಸತ್ ಆಗಲಿ ಏಕಿರಬೇಕು ಎಂದು ಕೆಲವು ಕಾಂಗ್ರೆಸ್ ಪರ ಬುದ್ಧಿಜೀವಿಗಳು ತಮ್ಮ ವಿಚಾರಧಾರೆ ಹರಿಬಿಡಲಾರಂಭಿಸಿದ್ದಾರೆ. ಇನ್ನು ಕೆಲವರು ಅಣ್ಣಾ ಹಜಾರೆಯವರನ್ನು ಮಹಾತ್ಮ ಗಾಂಧಿಗೆ ಹೋಲಿಸುತ್ತಿರುವುದನ್ನು ವಿರೋಧಿಸುತ್ತಿದ್ದಾರೆ. ಗಾಂಧಿ ಎಂದೂ ಸೆಕೆಂಡ್ ಕ್ಲಾಸ್ ರೈಲನ್ನು ಬಿಟ್ಟು ಪ್ರಯಾಣಿಸಲಿಲ್ಲ. ಆದರೆ ಈ so called ಗಾಂಧೀಜಿ ವಿಮಾನದಲ್ಲಿ ಸಂಚರಿಸುತ್ತಾರೆ ಎಂದು ಗೇಲಿ ಮಾಡುತ್ತಿದ್ದಾರೆ. ಟ್ವಿಟರ್ ಹಾಗೂ ಫೇಸ್್ಬುಕ್್ನಲ್ಲಿ ಉದ್ದೇಶಪೂರ್ವಕವಾಗಿ ಇಂಥ ಸಂದೇಶಗಳು ಪ್ರತಿದಿನ ಹರಿದಾಡುತ್ತಿವೆ.

ಇಷ್ಟೇ ಆಗಿದ್ದರೆ ಪರವಾಗಿರಲಿಲ್ಲ. ‘ಓಪನ್’ ಮ್ಯಾಗಜಿನ್ ಅಣ್ಣಾ ಹಜಾರೆ ಕುರಿತು This man is not your Hero ಎಂಬ ಲೇಖನ ಪ್ರಕಟಿಸಿದೆ. ಈ ಪತ್ರಿಕೆಯ ನಾಲ್ಕು ಲಕ್ಷ ಪ್ರತಿಗಳನ್ನು ರಾಜಕೀಯ ಪಕ್ಷದ ಮುಖಂಡರೊಬ್ಬರು ಖರೀದಿಸಿ, ಉಚಿತವಾಗಿ ಹಂಚುವ ಹುನ್ನಾರ ನಡೆಸಿದ್ದಾರಂತೆ! ಈ ಪತ್ರಿಕೆಯಲ್ಲಿ ಅಣ್ಣಾ ಕುರಿತು ಪ್ರಕಟವಾಗಿರುವ ಲೇಖನವೊಂದನ್ನೇ ಜೆರಾಕ್ಸ್ ಮಾಡಿಸಿ ಅದನ್ನು ಎಲ್ಲೆಡೆ ಹಂಚುವ ಕೆಲಸವನ್ನೂ ವ್ಯವಸ್ಥಿತವಾಗಿ ಮಾಡಲಾಗುತ್ತಿದೆ.

ಈ ಲೇಖನ ಹೀಗೆ ಆರಂಭವಾಗುತ್ತದೆ-’ಹೆಡ್ ಲೈನ್ಸ್ ಟುಡೇ’ ಟಿವಿ ವಾಹಿನಿಯ ಕಾರ್ಯಕ್ರಮ ನಿರೂಪಕ ರಾಹುಲ್ ಕನ್ವಲ್ ಅಣ್ಣಾ ಹಜಾರೆ, ಕಿರಣ್ ಬೇಡಿ ಮತ್ತು ಅರವಿಂದ ಕೇಜ್ರಿವಾಲ (ನಾಗರಿಕ ಸಮಾಜದ ಸದಸ್ಯರಲ್ಲೊಬ್ಬರು) ಅವರ ಜತೆಗೆ ಮಾತಾಡುತ್ತಿದ್ದಾನೆ. ‘ಅದ್ಸರಿ? ಮುಂದಿನ ನಿಮ್ಮ ಕ್ರಮವೇನು?’ ಎಂದು ಅಣ್ಣಾ ಅವರಿಗೆ ಕೇಳುತ್ತಾನೆ. ಅಣ್ಣಾ ಉತ್ತರ ಹೇಳಲು ತಡವರಿಸುತ್ತಾರೆ. ತಕ್ಷಣ ನಿರೂಪಕ ಮತ್ತೊಂದು ಪ್ರಶ್ನೆ ಕೇಳುತ್ತಾನೆ- ‘ಅಣ್ಣಾ ಹಜಾರೆ ಅವರೇ, ನೀವೇ ಹೇಳಿದಿರಿ ಭ್ರಷ್ಟರನ್ನು ಗಲ್ಲಿಗೇರಿಸಬೇಕು ಅಂತ. ಇದು ಗಾಂಧಿತತ್ವಕ್ಕೆ ವಿರುದ್ಧ ಅಲ್ಲವೇ?’

ಅದಕ್ಕೆ ಅಣ್ಣಾ ಹಿಂದಿಯಲ್ಲಿ ಹೇಳುತ್ತಾರೆ- ‘ಅದಕ್ಕಾಗಿಯೇ ನಾನು ಹೇಳುತ್ತಿರುವುದು. ಅದೇನೆಂದರೆ ಗಾಂಧಿ ತತ್ವವೊಂದೇ ಅಲ್ಲ, ಇಂದಿನ ಪರಿಸ್ಥಿತಿಯಲ್ಲಿ ನಾವು ಶಿವಾಜಿ ಕಡೆಗೂ ನೋಡಬೇಕಾದ ಅಗತ್ಯವಿದೆ ಎಂದು. ಪಟೇಲ್ ತಪ್ಪುಗಳನ್ನು ಮಾಡಿದರು. ಛತ್ರಪತಿ ಶಿವಾಜಿ ತಪ್ಪು ಮಾಡಿದವರ ಕೈಗಳನ್ನು ಕತ್ತರಿಸಿದರು. ಶಿವಾಜಿಯ ಈ ನೀತಿಯ ಬಗ್ಗೆ ನಾವೆಲ್ಲ ಯೋಚಿಸಬೇಕಿದೆ. ನೂರಕ್ಕೆ ನೂರರಷ್ಟು ಅಹಿಂಸಾವಾದಿ ಸಾಧುವಲ್ಲ, ಸಾಧ್ಯವೂ ಇಲ್ಲ. ಅದಕ್ಕಾಗಿಯೇ ನಾನು ಹೀಗೆ ಹೇಳುತ್ತಿರುವುದು, ಭ್ರಷ್ಟರನ್ನು ಗಲ್ಲಿಗೇರಿಸಬೇಕೆಂದು….. ತಕ್ಷಣ ಕಿರಣ್ ಬೇಡಿ ಮಧ್ಯ ಪ್ರವೇಶಿಸುತ್ತಾರೆ- ‘ಅಣ್ಣಾ ಅವರು ಹೇಳುತ್ತಿರುವುದು ಅಕ್ಷರಶಃ ಅರ್ಥದಲ್ಲಿ ಪರಿಗಣಿಸಬಾರದು. ನಮ್ಮ ದೇಶದಲ್ಲಿ ಭ್ರಷ್ಟರು ಸಿಕ್ಕಿಬಿದ್ದರೂ ಶಿಕ್ಷೆಯಾಗುವುದಿಲ್ಲ. ಹೇಗೋ ಬಚಾವ್ ಆಗಿಬಿಡುತ್ತಾರೆ. ಹಣಕಾಸಿನ ಅಪರಾತಪರಾ ಮಾಡಿದವರು ಜಾಮೀನು ಪಡೆದು ಹೊರಬಂದು ಸಾಕ್ಷ್ಯನಾಶಪಡಿಸಿ ಪಾರಾಗುತ್ತಾರೆ. ಅವರು ತಿಂದ ಹಣವನ್ನು ವಸೂಲಿ ಮಾಡುವುದಿಲ್ಲ. ಈ ಅರ್ಥದಲ್ಲಿ ಅಣ್ಣಾ ತಮ್ಮ ಆಕ್ರೋಶವನ್ನು ಹಾಗೇ ವ್ಯಕ್ತಪಡಿಸಿದ್ದಾರೆ.’ ಅಣ್ಣಾ ಹಜಾರೆ ಆಂದೋಲನ ಯಾವ ರೀತಿ ನಡೆಯುತ್ತಿದೆ ಎಂಬುದನ್ನು ತಿಳಿಯಲು ಈ ಪ್ರಸಂಗವೊಂದೇ ಸಾಕು ಎಂದು ‘ಓಪನ್’ ಪತ್ರಿಕೆ ಬರೆಯುತ್ತದೆ.

ಅಣ್ಣಾ ಹಜಾರೆ ವಿರುದ್ಧ ಮಾತಾಡಲು ಯಾವ ರಾಜಕೀಯ ನಾಯಕರೂ ಸಿದ್ಧರಿಲ್ಲ. ಆ ಧೈರ್ಯವನ್ನು ಯಾರೂ ತೋರುತ್ತಿಲ್ಲ. ಕಾರಣ ಅವರ ಹಿಂದೆ ಇಡೀ ದೇಶವೇ ನಿಂತಿದೆ. ಅವರ ಬೆಂಬಲಕ್ಕಾಗಿ ಪ್ರತಿ ಊರಿನಲ್ಲೂ ಯುವಕರಪಡೆ ಹುಟ್ಟಿಕೊಂಡಿದೆ. ದೇಶದ ಜನ ಅಣ್ಣಾ ಹಜಾರೆಯವರಲ್ಲಿ ಹೊಸ ಭರವಸೆ ಆಸೆಯನ್ನು ಕಾಣುತ್ತಿದ್ದಾರೆ. ಅದರಲ್ಲೂ ಮಧ್ಯಮ ವರ್ಗದ ಜನ ಅವರಿಗೆ ನೀಡಿದ ಹಠಾತ್ ಬೆಂಬಲ ಇತ್ತೀಚಿನ ವರ್ಷಗಳಲ್ಲೇ ಬೆರಗು ಮೂಡಿಸುವಂಥದ್ದು. ಅಣ್ಣಾ ಅಸ್ತ್ರ ಅದೆಷ್ಟು ಪ್ರಖರವಾಗಿತ್ತೆಂದರೆ, ಉಪವಾಸ ಆರಂಭಿಸುತ್ತೇನೆಂದು ಹೇಳುತ್ತಿದ್ದಂತೆ ಪ್ರಧಾನಿ ಪತರಗುಟ್ಟಿ ಹೋದರು. ನಿರಶನ ನಿಲ್ಲಿಸುವಂತೆ ಮನವಿ ಮಾಡಿದರು. ಅದಕ್ಕೆಲ್ಲ ಅಣ್ಣಾ ಜಗ್ಗಲಿಲ್ಲ. ನಿಜಕ್ಕೂ ಅಣ್ಣಾ ಯುಪಿಎ ಸರಕಾರಕ್ಕೆ ತಲೆನೋವಾಗಿ ಪರಿಣಮಿಸಿದರು. ಅವರು ಹೇಳಿದ್ದಕ್ಕೆಲ್ಲ ‘ಹೂಂ’ ಅಂದರು. ಉಪವಾಸ ನಿಲ್ಲಿಸಿದರೆ ಸಾಕಾಗಿತ್ತು, ಮುಂದೆ ನೋಡಿಕೊಳ್ಳೋಣ ಎಂಬುದು ಅವರ ತಂತ್ರವಾಗಿತ್ತು.

ಆಗ ಆ ತಂತ್ರವನ್ನು ಹೆಣೆದು, ಒಂದೊಂದೇ ಪ್ರಯೋಗವನ್ನು ಮಾಡಲಾರಂಭಿಸಿದ್ದಾರೆ. ಅದಕ್ಕಾಗಿ ರಾಜಕೀಯ ನಾಯಕರು ಬಹಿರಂಗವಾಗಿ ಬಾಯಿಬಿಡುತ್ತಿಲ್ಲ. ಎಲ್ಲ ಒಳಗೊಳಗೇ ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಚಲಾವಣೆಯಲ್ಲಿದ್ದ ಕರಪತ್ರ ಹಂಚಿಕೆಗೆ ಶರಣಾಗಿದ್ದಾರೆ. ಅಣ್ಣಾ ಹಜಾರೆ ಮಹಾ ಜಿಗುಟ, ತಮ್ಮ ಹಿಂದ್ ಸ್ವರಾಜ್ ಟ್ರಸ್ಟ್ ಗೆ ಸರಕಾರ ನೀಡಿದ 22 ಕೋಟಿ ರೂ.ಗಳನ್ನು ದುರುಪಯೋಗಪಡಿಸಿಕೊಂಡಿದ್ದಾರೆ, ತಮ್ಮ ಊರಾದ ರಾಲೇಗಾನ್ ಸಿದ್ಧಿಯನ್ನು ಸ್ವಂತ ಆಡೊಂಬಲ ಮಾಡಿಕೊಂಡಿದ್ದಾರೆ, ಈ ಊರಿಗೆ ಅವರೇ ಸರಕಾರ, ಅಣ್ಣಾ ಒಬ್ಬ ಸರ್ವಾಧಿಕಾರಿ ಎಂದು ಬರೆದ ಕರಪತ್ರಗಳು ಎಲ್ಲೆಡೆ ಸದ್ದಿಲ್ಲದೇ ಹರಿದಾಡುತ್ತಿವೆ.

ಅಣ್ಣಾ ಹಜಾರೆ ಮೊದಲು ನರೇಂದ್ರ ಮೋದಿಯನ್ನು ಹೊಗಳಿದಾಗ ಅವರು ಕೋಮುವಾದಿ, ಬಿಜೆಪಿ ಬಗ್ಗೆ ಅನುಕಂಪ ಹೊಂದಿದವರೆಂದು ಹೇಳಿದವರು, ಅಣ್ಣಾ ಹಜಾರೆಯವರು ಉಪವಾಸಕ್ಕೆ ಕುಳಿತಾಗ ಹಿಂದೆ ಭಾರತ ಮಾತೆಯ ಫೋಟೋ ನೋಡಿ ಇವರು ಆರೆಸ್ಸಿಸ್ಸಿಗರು ಎಂದು ಪುಂಗಿ ಊದಿದರು. ‘ಬೋಲೋ ಭಾರತ್ ಮಾತಾ ಕೀ ಜೈ’ ಎಂದು ಘೋಷಣೆ ಕೂಗಿದ್ದು ಇನ್ನು ಕೆಲವರಿಗೆ ಅಪಥ್ಯವಾಯಿತು. ಅಣ್ಣಾ ವಿರುದ್ಧ ಸಂಚು ಹೂಡಲು ಇಷ್ಟೇ ಸಾಕಾಯಿತು.

ತಮ್ಮ ಬುಡ ಅಲುಗಾಡಲಿದೆ ಎಂಬುದು ರಾಜಕಾರಣಿಗಳಿಗೆ ಖಾತ್ರಿಯಾದರೆ ಸಾಕು, ಅವರು ಯಾರನ್ನಾದರೂ ಬಲಿ ಕೊಡಲು ಸಿದ್ಧ. ಎಂಥವರನ್ನಾದರೂ ಬದ್ನಾಮ್ ಮಾಡಲು ಹಿಂದೇಟು ಹಾಕುವುದಿಲ್ಲ. ಭ್ರಷ್ಟಾಚಾರದ ವಿಷಯ ಬಂದರೆ ಎಲ್ಲ ಪಕ್ಷಗಳ ನಾಯಕರೂ ಒಂದಾಗುತ್ತಾರೆ. ಕಳೆದ ಆರು ದಶಕಗಳ ಅವಧಿಯಲ್ಲಿ ಕೇರಳದ ಒಬ್ಬ ಸಚಿವರನ್ನು ಹೊರತುಪಡಿಸಿದರೆ, ಒಬ್ಬೇ ಒಬ್ಬ ಮಂತ್ರಿಗಾಗಲಿ, ಶಾಸಕರಿಗಾಗಲಿ, ಸಂಸದರಿಗಾಗಲಿ ಶಿಕ್ಷೆಯಾಗಿಲ್ಲ. ಅಧಿಕಾರಕ್ಕೆ ಬಂದ ಬಹುತೇಕ ಮಂದಿ ನೂರಾರು ಕೋಟಿ ರೂ.ಗಳನ್ನು ದೋಚಿದ್ದಾರೆ, ಬೊಕ್ಕಸವನ್ನು ಕೊಳ್ಳೆ ಹೊಡೆದಿದ್ದಾರೆ. ಅದು ಎಲ್ಲರಿಗೂ ಗೊತ್ತಿದೆ. ಆದರೆ ಯಾರೂ, ಏನೂ ಮಾಡದಂಥ ಹತಾಶ ಸ್ಥಿತಿ! ಸೂರ್ಯನೂ ಮುಳುಗಿದಾಗ ಹಣತೆಯಾದರೂ ಮುಂದೆ ಬಂದು ‘ನಾನಿದ್ದೇನೆ, ಚಿಂತಿಸಬೇಡ’ ಎಂದು ಹೇಳಿದರೆ, ಈಗ ಅದನ್ನೂ ನಂದಿಸಲು ಕೆಲವರು ಪಣ ತೊಟ್ಟಿದ್ದಾರೆ.

ಇಷ್ಟಕ್ಕೂ ಅಣ್ಣಾ ಹಜಾರೆ ಕೈಗೆತ್ತಿಕೊಂಡ ಹೋರಾಟದಲ್ಲಿ ಅವರು ಸಾಂಕೇತಿಕ. ಅವರು ಪ್ರಸ್ತಾಪಿಸಿದ ಭ್ರಷ್ಟಾಚಾರ ನಿರ್ಮೂಲನೆಯೇ ಪ್ರಧಾನ ಅಂಶ. ಅವರ ಕಾಳಜಿಯೂ ಅದೇ. ಇದನ್ನು ಬಿಟ್ಟು ಅಣ್ಣಾ ಹಜಾರೆಯವರ ವಿರುದ್ಧವೇ ಹೋರಾಟಕ್ಕೆ ನಿಂತರೆ ಏನಾದೀತು? ಅದು ಇಡೀ ವ್ಯವಸ್ಥೆಯ ಕ್ರೂರ ಅಣಕವಲ್ಲವಾ? ನಮ್ಮನ್ನೇ ನಾವು ಹೀಯಾಳಿಸಿಕೊಂಡಂತಲ್ಲವಾ? ಯೋಚಿಸಬೇಕು.

ಕೃಪೆ: ವಿಭಟ್.ಇನ್ (ವಿಶ್ವೇಶ್ವರ ಭಟ್)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ