ನನ್ನ ಬ್ಲಾಗ್ ಪಟ್ಟಿ

ಗುರುವಾರ, ಮೇ 12, 2011

ಅಮೆರಿಕ ತೋರಿದ ಎದೆಗಾರಿಕೆ ನಮ್ಮಲ್ಲಿದೆಯಾ?

ಹಿಂಸೆಯನ್ನೇ ಜೀವನ ಧರ್ಮವಾಗಿ ಸ್ವೀಕರಿಸಿದ ರಕ್ತಬೀಜಾಸುರ ಒಸಾಮಾ ಬಿನ್ ಲಾಡೆನ್್ನನ್ನು ಫಿನಿಷ್ ಮಾಡಿದ ಸುದ್ದಿ ತಿಳಿಯುತ್ತಿದ್ದಂತೆ, ಟಿವಿ ಮುಂದೆ ಕುಳಿತಿದ್ದೆ. ಎಲ್ಲ ಚಾನಲ್ ಗಳೂ ಆ ಸುದ್ದಿಯನ್ನು ಬಿತ್ತರಿಸುತ್ತಿದ್ದವು.

ಸಾಯಿಬಾಬಾ ನಿಧನ ಸುದ್ದಿಯಿಂದ ನಮ್ಮ ಕನ್ನಡ ಚಾನೆಲ್್ಗಳು ಇನ್ನೂ ಹೊರಬಂದಿರಲಿಲ್ಲ. ರಾಜಕುಮಾರ ವಿಲಿಯಮ್ಸ್ ಹಾಗೂ ಕೇಟ್ ಅವರ ರಾಯಲ್ ವೆಡ್ಡಿಂಗ್ ಗುಂಗಿನಿಂದ ರಾಷ್ಟ್ರೀಯ- ಅಂತಾರಾಷ್ಟ್ರೀಯ ಚಾನೆಲ್ ಗಳೂ ಹೊರಬಂದಿರಲಿಲ್ಲ. ಶನಿವಾರ ರಾತ್ರಿ ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮ ವೈಟ್್ಹೌಸ್ ಪತ್ರಕರ್ತರಿಗೆ ಪಾರ್ಟಿ ಇಟ್ಟುಕೊಂಡಿದ್ದರು. ತಮ್ಮನ್ನು ಪದೇ ಪದೇ ಟೀಕಿಸುತ್ತಿದ್ದ ಡೊನಾಲ್ಡ್ ಟ್ರಂಪ್ ನನ್ನು ಪತ್ರಕರ್ತರ ಮುಂದೆ ಗೇಲಿ ಮಾಡುತ್ತಾ ಮಜಾ ತೆಗೆದುಕೊಳ್ಳುತ್ತಿದ್ದರು. ಭಾನುವಾರ ಒಬಾಮ ತಮ್ಮ ಪಾಡಿಗೆ ತಾವು ಗಾಲ್ಫ್ ಆಡಿಕೊಂಡಿದ್ದರು. ಗಾಲ್ಫ ಕೋರ್ಸಿನಿಂದ ನಿರೀಕ್ಷಿತ ಅವಧಿಗೆ ಮುನ್ನವೇ ಅವರು ನಿರ್ಗಮಿಸಿದರು. ಗಾಲ್ಫ್ ಷೂ ಧರಿಸಿಯೇ ತಮ್ಮ ಓವಲ್ ಆಫೀಸಿಗೆ ಹೋದರೂ ಯಾರಿಗೂ ಒಂದಿನಿತು ಸುಳಿವು ಸಿಕ್ಕಿರಲಿಲ್ಲ. ಲಾಡೆನ್್ನನ್ನು ಮುಗಿಸುವಂತೆ ಅಷ್ಟರೊಳಗೆ ಅವರು ಲಿಖಿತವಾಗಿ ಆದೇಶವನ್ನೂ ನೀಡಿದ್ದರು. ಪ್ರಾಯಶಃ ಒಬಾಮ ಮತ್ತು ಅವರ ಮೂರ್ನಾಲ್ಕು ಮಂದಿ ಆಪ್ತರ ಹೊರತಾಗಿ ಈ ವಿಚಾರ ಬೇರೆ ಯಾರಿಗೂ ಗೊತ್ತಿರಲಿಲ್ಲ. ಅತ್ಯಂತ ರಹಸ್ಯವಾಗಿರಿಸಿದ್ದ ಈ ಕಾರ್ಯಾಚರಣೆ ಕೊನೆಗೊಳ್ಳುತ್ತಿದ್ದಂತೆ ಸ್ವತಃ ಒಬಾಮ ಅವರೇ ಇಡೀ ಜಗತ್ತಿನ ಮುಂದೆ ನಿಂತು – ಒಸಾಮಾ ಹತ್ಯೆಗೈದಿರುವುದನ್ನು ಅಧಿಕೃತವಾಗಿ ಘೋಷಿಸುವ ಮೂಲಕ ದೃಢಪಡಿಸಿದರು! ಇಡೀ ವಿಶ್ವ ಒಂದು ಕ್ಷಣ ನಿಬ್ಬೆರಗಾಗಿತ್ತು! ಅಮೆರಿಕ ಸೇರಿದಂತೆ ಇಡೀ ಜಗತ್ತು, ಸಾವಿರಾರು ಜನರನ್ನು ಬಲಿ ತೆಗೆದುಕೊಂಡ ಪರಮಪಾತಕಿ ಲಾಡೆನ್್ಗಾಗಿ ಹತ್ತು ವರ್ಷಗಳಿಂದ ನಡೆಸಿದ ಶೋಧ ಈ ಸ್ವರೂಪದಲ್ಲಿ ಪರ್ಯವಸಾನ ಕಂಡಿತ್ತು.

ಬರಾಕ್ ಒಬಾಮ ಏನು ಹೇಳಬಹುದೆಂದು ಅತೀವ ಕುತೂಹಲದಿಂದ ಅವರ ಮಾತುಗಳನ್ನು ಆಲಿಸುತ್ತಿದ್ದೆ. ಒಬಾಮ ಕಣ್ಣುಗಳಲ್ಲಿ ತೀಕ್ಷ್ಣತೆಯಿತ್ತು. ಮಾತಿನಲ್ಲಿ ಸ್ಪಷ್ಟತೆಯಿತ್ತು. ಪರಮವೈರಿಯನ್ನು ಹೊಸಕಿ ಹಾಕಿದ ಪೊಗರಿತ್ತು. ತಮ್ಮ ದೇಶದ ಸಾರ್ವಭೌಮತ್ವ ಮೆರೆದ ಗರ್ವವಿತ್ತು. ಒಬಾಮ ಒಬ್ಬ ಧೀರೋಧಾತ್ತ ನಾಯಕನಂತೆ, ದೇಶವಾಸಿಗಳಲ್ಲಿ ಭರವಸೆ ಮೂಡಿಸುವ ಮುತ್ಸದ್ದಿಯಂತೆ, ಅದಮ್ಯ ವಿಶ್ವಾಸ, ಉಲ್ಲಾಸ ಹಾಗೂ ಧೀಮಂತಿಕೆಯನ್ನು ಹೊಂದಿದ ಅಧಿನಾಯಕನಂತೆ ಕಂಗೊಳಿಸುತ್ತಿದ್ದರು. ಇಲ್ಲಿಯವರೆಗಿನ ಅಮೆರಿಕದ ಅಧ್ಯಕ್ಷರ ಪೈಕಿ, ಒಸಾಮಾ ಬಗ್ಗೆ ಒಬಾಮ ತೆಗೆದುಕೊಂಡ ನಿರ್ಧಾರ ಅತ್ಯಂತ ನಿರ್ಣಾಯಕ ಹಾಗೂ ಧೀರೋದಾತ್ತವಾದುದು ಎಂಬುದು ಸರ್ವತ್ರ ಅಭಿಪ್ರಾಯ. ಭಯೋತ್ಪಾದನೆಯ ವಿರುದ್ಧ ಒಬಾಮ ನಿಕಟಪೂರ್ವ ಅಧ್ಯಕ್ಷ ಜಾರ್ಜ್ ಬುಷ್ ತೆಗೆದುಕೊಂಡ ಕೆಲವು ಕ್ರಮಗಳು ಹುಂಬತನದಿಂದ ಕೂಡಿದ್ದವು. ಅವುಗಳಲ್ಲಿ ಚಾಣಾಕ್ಷತನಕ್ಕಿಂತ ತಕ್ಷಣದ ಹಸಿಹಸಿತನವೇ ಹೆಚ್ಚಾಗಿದ್ದವು. ಅಮೆರಿಕದ ವಿಶ್ವವ್ಯಾಪಾರ ಕೇಂದ್ರದ ಅವಳಿ ಕಟ್ಟಡಗಳು ಧ್ವಂಸವಾಗುತ್ತಿದ್ದಂತೆ ಭಯೋತ್ಪಾದನೆಯ ವಿರುದ್ಧ ಸಮರ ಸಾರಿದ ಬುಷ್, ಸಾಧಿಸಿದ್ದಕ್ಕಿಂತ ಮೈಮೇಲೆ ಎಳೆದುಕೊಂಡಿದ್ದೇ ಹೆಚ್ಚು. ಅದಕ್ಕೆ ಇಡೀ ಅಮೆರಿಕ ತೆತ್ತ ಬೆಲೆಯೂ ಅಪಾರವೇ.

ಅದೇನೇ ಇರಲಿ, ಒಬಾಮ ಅಂದು ಮಾತಾಡುತ್ತಿದ್ದರೆ ಯಾರಿಗಾದರೂ ಅವರ ಬಗ್ಗೆ ಅಭಿಮಾನ, ಹೆಮ್ಮೆ ಮೂಡುತ್ತಿತ್ತು.

ಅತ್ಯಂತ ಕ್ಲಿಷ್ಟ ಹಾಗೂ ಸವಾಲಿನ ಕೆಲಸವನ್ನು ಅವರು ಅತಿ ಸಮರ್ಥವಾಗಿ ಮಾಡಿ ಮುಗಿಸಿದ್ದರು. ಅವರು ಮಾತು ಮುಗಿಸುವ ಮುನ್ನ ಹೇಳಿದರು- ‘Let us remember that we can do these things not just because of wealth or power, but because of who we are: One nation, under God, indivisible, with liberty and justice for all. Thank you. God bless you.And may God bless the United States of America.’ ಆತ್ಮವಿಶ್ವಾಸ ಅಂದ್ರೆ ಇದು- ಒಬ್ಬ ಅಧ್ಯಕ್ಷ ಜನರ ಕಣ್ಣಲ್ಲಿ ನಾಯಕನಾಗಿ ಕಾಣುವುದು ಹೀಗೆ!

ನಮಗೆ ಇಲ್ಲಿ ಮುಖ್ಯವಾಗಿ ಕಾಣುವುದು ಅಮೆರಿಕ ಒಂದು ಸಮಸ್ಯೆಯನ್ನು ಹೇಗೆ ನೋಡುತ್ತದೆ, ನಿಭಾಯಿಸುತ್ತದೆ ಎಂಬುದು. ಅಲ್ಲಿ ಒಂದು ಸಮಸ್ಯೆ ಉದ್ಭವವಾದರೆ ಅದು ದೇಶದ ಸಮಸ್ಯೆ, ದೇಶವಾಸಿಗಳ ಸಮಸ್ಯೆ. ಹೀಗಾಗಿ ಇಡೀ ದೇಶ ಪಕ್ಷ ಪಂಗಡ ಮರೆತು ಒಂದಾಗಿ ಹೋರಾಡುತ್ತದೆ. ಒಂದು ಸಂಗತಿಯನ್ನು ರಿಪಬ್ಲಿಕನ್ ಪಕ್ಷದವರು ಸಮಸ್ಯೆಯೆಂದು ಪರಿಗಣಿಸಿದರೆ, ಅದು ಡೆಮಾಕ್ರೆಟಿಕ್ ಪಕ್ಷದವರಿಗೂ ಸಮಸ್ಯೆಯೇ. ರಿಪಬ್ಲಿಕನ್ ಪಕ್ಷದ ಜಾರ್ಜ್ ಬುಷ್ ಭಯೋತ್ಪಾದನೆಯ ವಿರುದ್ಧ ಸಮರ ಸಾರಿದರೆ, ಆನಂತರ ಅಧಿಕಾರಕ್ಕೆ ಬಂದ ಡೆಮಾಕ್ರೆಟಿಕ್ ಪಕ್ಷದ ಒಬಾಮ ಅದನ್ನು ಮುಂದುವರಿಸಿಕೊಂಡು ಹೋಗುತ್ತಾರೆ. ಹಾಗೆ ಮಾಡಿದ್ದರಿಂದಲೇ ಲಾಡೆನ್್ನನ್ನು ಫಿನಿಷ್ ಮಾಡಲು ಸಾಧ್ಯವಾಯಿತು. ಅಮೆರಿಕನ್್ರಿಗೆ ದೇಶದ ಮಾನ- ಮರ್ಯಾದೆ, ಭದ್ರತೆ, ಸಾರ್ವಭೌಮತ್ವಕ್ಕಿಂತ ಮತ್ತ್ಯಾವುದೂ ದೊಡ್ಡ ಸಂಗತಿಯಾಗಿ ಕಾಣುವುದಿಲ್ಲ ಎಂಬುದು ಲಾಡೆನ್ ಹತ್ಯೆಯಲ್ಲಿ ಮತ್ತೊಮ್ಮೆ ಸಾಬೀತಾದಂತಾಗಿದೆ. ಇಂದು ಇಡೀ ವಿಶ್ವಕ್ಕೆ ವಿಶ್ವವೇ ಬರಾಕ್ ಒಬಾಮ ಅವರನ್ನು, ಅಮೆರಿಕವನ್ನು ಹೊಗಳುತ್ತಿದೆ.

ಒಬಾಮ ಮಾತು ಮುಗಿಸಿದಾಗ, ಬೇಡ ಬೇಡವೆಂದರೂ ನೆನಪಾದವರು ನಮ್ಮ “ಹೆಮ್ಮೆ’ಯ ಪ್ರಧಾನಿ ಡಾ. ಮನಮೋಹನಸಿಂಗ್! ಒಂದು ವೇಳೆ ಒಬಾಮ ಜಾಗದಲ್ಲಿ ನಮ್ಮ ಮನಮೋಹನ್್ಸಿಂಗ್ ಅವರನ್ನು ಕಲ್ಪಿಸಿಕೊಳ್ಳಿ. (ಈ ಮಾತನ್ನು ಬರೆಯುವಾಗ ಸ್ನೇಹಿತರಾದ ಉಡುಪಿಯ ಮಂಜುನಾಥ ಪ್ರಸಾದ ಕಳಿಸಿದ ಎಸ್ಸೆಮ್ಮೆಸ್ ಬಂತು- Irony of two nations. No one is safe in Pakistan. Not even Osama Bin Laden. And Everyone is safe in Hindustan… even Ajmal Kasab and Afzal Guru) ಮೊದಲನೆಯದಾಗಿ ಅವರು ಇಂಥ ನಿರ್ಧಾರವನ್ನೇ ತೆಗೆದುಕೊಳ್ಳುತ್ತಿರಲಿಲ್ಲ ಬಿಡಿ. ಇದು ಕೇವಲ ಅವರಿಗೆ ಮಾತ್ರ ಸಲ್ಲುವ ಮಾತಲ್ಲ. ಸದ್ಯದ ಪರಿಸ್ಥಿತಿಯಲ್ಲಿ ಯಾವುದೇ ರಾಜಕೀಯ ಪಕ್ಷ, ನಾಯಕ ಅಧಿಕಾರದಲ್ಲಿದ್ದರೂ ಇಂಥ ನಿರ್ಧಾರ ಕೈಗೊಳ್ಳುತ್ತಿರಲಿಲ್ಲ. ನಮ್ಮ ನಾಯಕರಿಗೆ ಅಂಥ ದಮ್ಮಿಲ್ಲ. ದೇಶದ ಪರವಾಗಿ ಯೋಚಿಸುವ ದರ್ದೂ ಇಲ್ಲ. ಬರಾಕ್ ಒಬಾಮ ಥರ, ಭಾರತದ ಯಾವ ಪಕ್ಷದ ನಾಯಕ ಬಿನ್್ಲಾಡೆನ್ ಹತ್ಯೆಗೆ ಲಿಖಿತ ಪರವಾನಗಿ ನೀಡುತ್ತಿದ್ದ? ಈ ಡಿಸೆಂಬರ್ 13 ಬಂದರೆ ಭಾರತದ ಸಂಸತ್ ಭವನದ ಮೇಲೆ ದಾಳಿ ನಡೆದು ಹತ್ತು ವರ್ಷಗಳಾಗುತ್ತದೆ. ಆ ದಾಳಿಯ ರೂವಾರಿ ಅಫಜಲ್್ಗುರುವನ್ನು ನೇಣಿಗೆ ಹಾಕುವಂತೆ ಸುಪ್ರೀಂ ಕೋರ್ಟ್ ಆದೇಶ ನೀಡಿದೆ. ಆದರೂ ಅವನನ್ನು ಗಲ್ಲಿಗೇರಿಸಿಲ್ಲ. ಈ ಕಾಂಗ್ರೆಸ್ ಸರಕಾರವೇನಾದರೂ ಇನ್ನೂ ಹತ್ತು ವರ್ಷ ಅಧಿಕಾರದಲ್ಲಿದ್ದರೆ ಅಲ್ಲಿವರೆಗೆ ಆತ ಸುರಕ್ಷಿತವಾಗಿಯೇ ಇರುತ್ತಾನೆ. ಅಲ್ಪಸಂಖ್ಯಾಕ ಕೋಮಿಗೆ ಸೇರಿದ ಅಫಜಲ್್ಗುರುವನ್ನು ಗಲ್ಲಿಗೇರಿಸಿದರೆ, ಆ ಕೋಮಿನವರ ಕೆಂಗಣ್ಣಿಗೆ ಗುರಿಯಾಗಿ, ಚುನಾವಣೆಯಲ್ಲಿ ಅವರ ಮತಗಳನ್ನು ಕಳೆದುಕೊಳ್ಳಬೇಕಾದೀತು ಎಂಬ ಕಾರಣದಿಂದ ಕಾಂಗ್ರೆಸ್ ಶತಾಯಗತಾಯ ಅವನನ್ನು ರಕ್ಷಿಸಲು ಕಟಿಬದ್ಧವಾಗಿದೆ. ಪ್ರಜಾಪ್ರಭುತ್ವದ ಆತ್ಮದಂತಿರುವ ಸಂಸತ್ ಭವನದ ಮೇಲೆ ಬೇಕಾದರೆ ಆಕ್ರಮಣವಾಗಲಿ, ಆದರೆ ಆಕ್ರಮಣಕಾರರಿಗೆ ಏನೂ ಆಗಬಾರದು! ಅಫಜಲ್್ಗುರುವನ್ನು ರಕ್ಷಿಸಲು ಆಡಳಿತಾರೂಢ ಪಕ್ಷವೇ ರಕ್ಷಣೆಗೆ ನಿಂತು ಬಿಟ್ಟರೆ ಭಯೋತ್ಪಾದನೆ ವಿರುದ್ಧದ ಹೋರಾಟವೇನಾಗಬೇಕು? ಅದು ಹಳ್ಳ ಹಿಡಿಯದೇ ಇರುವುದುಂಟಾ?

ನೋಡಿ, ಮುಂಬೈಯಲ್ಲಿ ಸರಣಿ ಸ್ಫೋಟವಾಗಿ ಹದಿನೆಂಟು ವರ್ಷಗಳಾದವು. ಇಡೀ ದೇಶದ ಆತ್ಮಸ್ಥೈರ್ಯವನ್ನು ಉಡುಗಿಸಿದ ಭಯಾನಕ ಭಯೋತ್ಪಾದಕ ಘಟನೆಯಿದು. ಈ ಕುಕೃತ್ಯದ ರೂವಾರಿ ದಾವೂದ್ ಇಬ್ರಾಹಿಂ ಎಂಬುದು ಎಲ್ಲರಿಗೂ ಗೊತ್ತಿದೆ. ಆತ ಎಲ್ಲಿ ಅಡಗಿದ್ದಾನೆ, ರಾಜಾರೋಷವಾಗಿ ನಡೆದಾಡುತ್ತಿದ್ದಾನೆಂಬುದು ಸಹ ಎಲ್ಲರಿಗೂ ಗೊತ್ತಿದೆ. ಪಾಕಿಸ್ತಾನದಲ್ಲಿ ನಡೆಯುವ ವೈಭವೋಪೇತ ಔತಣಕೂಟದಲ್ಲಿ ಆತ ಕಾಯಂ ಆಹ್ವಾನಿತ. ಬಾಲಿವುಡ್ ತಾರೆಯರು ಅವನು ಏರ್ಪಡಿಸುವ ಪಾರ್ಟಿಗಳಲ್ಲಿ ಮಿಂಚಿ ಬರುತ್ತಾರೆ. ಆತ ಕರಾಚಿಯಲ್ಲೋ, ಇಸ್ಲಾಮಾಬಾದಿನಲ್ಲೋ ಕುಳಿತು ಭಾರತದಲ್ಲಿನ ತನ್ನ ವ್ಯಾಪಾರವನ್ನು ನಿಯಂತ್ರಿಸುತ್ತಾನೆ. ಭಾರತ ಸರ್ಕಾರಕ್ಕೂ ಅದು ಗೊತ್ತಿದೆ. ಆದರೆ ಏನೂ ಮಾಡದ ಸ್ಥಿತಿಯಲ್ಲಿದೆ.

ಒಂದು ದೃಷ್ಟಿಯಲ್ಲಿ ದಾವುದ್ ಇಬ್ರಾಹಿಂ ಪಾಕಿಸ್ತಾನದಲ್ಲಿರುವುದೇ ವಾಸಿ. ಯಾಕೆ ಗೊತ್ತಾ? ಆತನನ್ನೇನಾದರೂ ಪಾಕ್ ಸರಕಾರ ಭಾರತಕ್ಕೆ ಒಪ್ಪಿಸಿತು ಎಂದಿಟ್ಟುಕೊಳ್ಳಿ, ಕೋರ್ಟ್್ನಲ್ಲಿ ಸುದೀರ್ಘ ಕಾಲ ವಿಚಾರಣೆ ನಡೆದು, ಕೊನೆಗೆ ಅದು ಸುಪ್ರಿಂಕೋರ್ಟ್್ಗೆ ಹೋಗಬಹುದು. ಸಾಕ್ಷ್ಯಗಳ ಕೊರತೆಯಿಂದ ದಾವೂದ್ ಖುಲಾಸೆಯೂ ಆಗಬಹುದು. ಒಂದು ವೇಳೆ ಅವನಿಗೆ ಮರಣ ದಂಡನೆಯಾದರೆ, ಅವನು ಕ್ಷಮಾದಾನಕ್ಕೆ ಅರ್ಜಿ ಸಲ್ಲಿಸುತ್ತಾನೆ. ಅಷ್ಟೊತ್ತಿಗೆ ಅಫಜಲ್್ಗುರುವಿನ ಅರ್ಜಿಯೇ ಇತ್ಯರ್ಥವಾಗಿರುವುದಿಲ್ಲ. ಹೀಗಿರುವಾಗ ದಾವೂದ್ ಅರ್ಜಿಯನ್ನು ಕೈಗೆತ್ತಿಕೊಳ್ಳುವುದಾದರೂ ಹೇಗೆ? ಈ ಮಧ್ಯೆ ಕಾಂಗ್ರೆಸ್ ಸರಕಾರವೇನಾದರೂ ಅಧಿಕಾರದಲ್ಲಿದ್ದರೆ ಯಾವುದೇ ಕಾರಣಕ್ಕೂ ದಾವೂದ್ ಗೆ ಗಲ್ಲಾಗಲು ಬಿಡುವುದಿಲ್ಲ. ಇಷ್ಟೊತ್ತಿಗೆ ಏನಿಲ್ಲವೆಂದರೂ ಇಪ್ಪತ್ತು- ಇಪ್ಪತ್ತೈದು ವರ್ಷ ಸಂದಿರುತ್ತದೆ. ಜೈಲಿನಲ್ಲಿ ಒಂದು ದಿನ ಆತ ಮರಣ ಹೊಂದಿದ ಎಂದಿಟ್ಟುಕೊಳ್ಳಿ, ಕೇಂದ್ರ ಸರಕಾರ ಒಂದು ದಿನ ರಜಾ ಘೋಷಿಸಿದರೆ, ಆತನಿಗೆ ಶ್ರದ್ಧಾಂಜಲಿ ಅರ್ಪಿಸಲು ನಮ್ಮ ನಾಯಕರು ಸಾಲುಹಚ್ಚಿ ನಿಂತರೆ ಆಶ್ಚರ್ಯವಿಲ್ಲ. ಹೀಗೆ ಮಾಡುವುದರಿಂದ ಅಲ್ಪಸಂಖ್ಯಾಕರ ಮತಗಳು ಬರುತ್ತವೆಂಬುದು ಖಾತ್ರಿಯಾದರೆ, ನಿಶ್ಚಿತವಾಗಿಯೂ ಹಾಗೇ ಮಾಡುತ್ತದೆ. ಇದರ ಬದಲು ಆತ ಪಾಕಿಸ್ತಾನದಲ್ಲಿರುವುದೇ ಎಷ್ಟೋ ವಾಸಿ, ಯಾಕೆಂದರೆ ಸದಾ ಪಾಕಿಸ್ತಾನವನ್ನು ದೂಷಿಸುತ್ತಾ ಇರಬಹುದು. ಯಾಕೆಂದರೆ ಇಷ್ಟು ವರ್ಷಗಳ ಕಾಲ ಭಾರತ ಮಾಡುತ್ತಾ ಬಂದಿರುವುದು ಅದನ್ನೇ ಅಲ್ಲವೇ?

ಒಸಾಮಾ ಬಿನ್ ಲಾಡೆನ್ ಪ್ರತಿಪಾದಿಸುತ್ತಿರುವ ಹಿಂಸಾ ಸಿದ್ಧಾಂತದಿಂದ ಪ್ರೇರೇಪಿತರಾಗಿರುವ ಲಷ್ಕರೆತೈಬಾ, ಜೈಷೆ ಮುಹಮ್ಮದ್ ಭಾರತದ ವಿರುದ್ಧ ಭಯೋತ್ಪಾದಕ ಚಟುವಟಿಕೆಯನ್ನು ಸತತ ಜಾರಿಯಲ್ಲಿಟ್ಟಿದೆ. ಲಷ್ಕರೆತೈಬಾದ ಮುಖ್ಯಸ್ಥ ಹಫೀಜ್ ಸಯೀದ್ ಪಾಕಿಸ್ತಾನದಲ್ಲಿ ಬಹಿರಂಗವಾಗಿ ಭಾರತ- ವಿರೋಧಿ ಭಾಷಣ ಮಾಡುತ್ತಾನೆ. ಹಿಂಸೆಯನ್ನು ಪ್ರಚೋದಿಸುತ್ತಾನೆ. ಆದರೆ ಪಾಕಿಸ್ತಾನ ಸರಕಾರವನ್ನು ಕೇಳಿದರೆ, ಹಫೀಜ್್ಸಯೀದ್ ತನ್ನ ದೇಶದಲ್ಲಿ ಇಲ್ಲವೆಂದು ಕಣ್ಣಾ ಕಣ್ಣೆದುರು ಹಸಿಹಸಿ ಸುಳ್ಳನ್ನು ಹೇಳುತ್ತದೆ.

ಇಂಥದೇ ಸುಳ್ಳಿನ ಸರಮಾಲೆಯನ್ನು ಪಾಕ್ ಸರಕಾರ ಅಮೆರಿಕಕ್ಕೆ ಹೇಳುತ್ತಾ ಬಂದಿತ್ತು. 2002ರಲ್ಲಿ ಅಂದಿನ ಅಧ್ಯಕ್ಷ ಪರ್ವೇಜ್ ಮುಷರಫ್ ಅವರಿಂದ ಹಿಡಿದು, ಪಾಕ್ ಸೇನಾ ಮುಖ್ಯಸ್ಥ ಅಷಫಕ್ ಪರ್ವೇಜ್ ಕಯಾನಿ, ಪ್ರಧಾನಿ ಯುಸುಫ್ ರಾಜಾಗಿಲಾನಿ, ಅನಂತರ ಅಧ್ಯಕ್ಷರಾದ ಅಸೀಫ್ ಅಲಿ ಜರ್ದಾರಿ, ಜರ್ದಾರಿ ವಕ್ತಾರ ಫರಾತುಲ್ಲಾಹ ಬಾಬರ್, ಆಂತರಿಕ ವ್ಯವಹಾರ ಸಚಿವ ರೆಹಮಾನ್ ಮಲ್ಲಿಕ್, ಅಮೆರಿಕದಲ್ಲಿರುವ ಪಾಕ್ ರಾಯಭಾರಿ ಹುಸೇನ್ ಹಕ್ಕಾನಿ……ಹೀಗೆ ಎಲ್ಲರೂ “ಲಾಡೆನ್ ಪಾಕಿಸ್ತಾನದಲ್ಲಿ ಇಲ್ಲ. ಆತ ಬದುಕಿರುವ ಸಾಧ್ಯತೆ ಇಲ್ಲವೇ ಇಲ್ಲ. ಆತ ಒಂದೋ ಸತ್ತಿದ್ದಾನೆ. ಒಂದು ವೇಳೆ ಬದುಕಿದ್ದರೆ ನಮ್ಮ ದೇಶದಲ್ಲಂತೂ ಇಲ್ಲ’ ಎಂದು ಹೇಳುತ್ತಾ ಬಂದರು. ಮುಷರಫ್ ಎಂಥ ಸುಳ್ಳು ಹೇಳಿದರೆಂದರೆ “ಲಾಡೆನ್ ಕಿಡ್ನಿ ಪೇಶೆಂಟ್. ಅವನಿಗೆ ಸರಿಯಾದ ಚಿಕಿತ್ಸೆ ಸಿಗುತ್ತಿರುವ ಬಗ್ಗೆ ನನಗೆ ಸಂದೇಹವಿದೆ. ನನಗೆ ತಿಳಿದಿರುವಂತೆ ಲಾಡೆನ್ ಬದುಕಿಲ್ಲ’ ಎಂದು ಸತ್ಯದ ನೆತ್ತಿಗೆ ಗುದ್ದುವವರಂತೆ ಹೇಳುತ್ತಾ ಬಂದರು.

ಆದರೆ ಅಮೆರಿಕ ಇವರ ಮಾತನ್ನು ನಂಬಲಿಲ್ಲ. ಲಾಡೆನ್ ವಿರುದ್ಧ ನಡೆಸುತ್ತಿದ್ದ ಅಸಲಿ ಕಾರ್ಯಾಚರಣೆಯ ಲವಲೇಶವೂ ಪಾಕ್್ಗೆ ಗೊತ್ತಿರಲಿಲ್ಲ. ಆ ಬಗ್ಗೆ ಸ್ವಲ್ಪ ಸುಳಿವು ಬಿಟ್ಟು ಕೊಟ್ಟರೂ ಅದು ಲಾಡೆನ್್ಗೆ ತಲುಪುವುದೆಂದು ಅಮೆರಿಕಕ್ಕೆ ಗೊತ್ತಿತ್ತು. ಹೀಗಾಗಿ ಅವರ ಸಹಾಯವಿಲ್ಲದೇ, ಅವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ಲಾಡೆನ್್ಗೆ ಗಾಳ ಹಾಕಿತು. ಲಾಡೆನ್ ಆರು ವರ್ಷಗಳಿಂದ ಈಗ ಹತನಾದ ಪ್ರದೇಶದಲ್ಲಿ ಅಡಗಿ ಕುಳಿತಿದ್ದ ಅಂದರೆ ಅವನಿಗೆ ಪಾಕ್ ಸರ್ಕಾರದ ಸಂಪೂರ್ಣ ಸಹಕಾರ ಇತ್ತೆಂಬುದು ಸ್ಪಷ್ಟ. ಲಾಡೆನ್ ಅಡಗಿದ್ದ ಮನೆ ಸನಿಹವೇ ಪರ್ವೇಜ್ ಮುಷರಫ್ ಜಾಗಿಂಗ್ ಹೋಗುತ್ತಿದ್ದರಂತೆ !

ಭಾರತ ಈ ಘಟನೆಯಿಂದ ಕಲಿಯುವ ಪಾಠ ಸಾಕಷ್ಟಿದೆ. ಹಾಗಂತ ಈಗಲೂ ಅನಿಸದಿದ್ದರೆ ಹೇಗೆ? ದೇಶದ ಮಾನ ಮರ್ಯಾದೆ, ಸಾರ್ವಭೌಮತ್ವ ಹಾಗೂ ಭದ್ರತೆ ಮುಂದೆ ಉಳಿದೆಲ್ಲ ಸಂಗತಿಗಳೂ ಗೌಣವಾಗಬೇಕು. ನಮ್ಮ ದೇಶದ ವಿರುದ್ಧ ಭಯೋತ್ಪಾದಕ ಕೃತ್ಯವೆಸಗಿದವರು ಯಾವುದೇ ಧರ್ಮ, ಜಾತಿ, ಕೋಮಿಗೆ ಸೇರಿರಲಿ, ಅವರನ್ನು ಮುಲಾಜಿಲ್ಲದೇ ಶಿಕ್ಷಿಸಬೇಕು. ಈ ವಿಷಯದಲ್ಲಿ ರಾಜಕೀಯ ಮಾಡುವುದೆಂದರೆ ಅದು ದೇಶದ್ರೋಹಕ್ಕೆ ಸಮ. ಕಳೆದ ಎರಡು ದಶಕಗಳಲ್ಲಿ ನಡೆದ ನೂರಾರು ದೇಶವಿರೋಧಿ ಭಯೋತ್ಪಾದಕ ಚಟುವಟಿಕೆಗಳನ್ನು ನಡೆಸಿದ ಯಾರನ್ನೂ ಶಿಕ್ಷೆಗೆ ಗುರಿಪಡಿಸದಿರುವುದು ನಿಜಕ್ಕೂ ನಾಚಿಕೆಗೇಡಿನ ಪರಮಾವಧಿ. ಬುಷ್ ಆರಂಭಿಸಿದ ಭಯೋತ್ಪಾದಕತೆ ವಿರುದ್ಧದ ಸಮರವನ್ನು ರಾಜಕೀಯ ಕಾರಣಕ್ಕೆ ಮುಂದುವರಿಸುವುದಿಲ್ಲ ಎಂದು ಒಬಾಮ ಹೇಳಿದ್ದರೆ ಲಾಡೆನ್್ನನ್ನು ಮುಗಿಸಲು ಆಗುತ್ತಿತ್ತಾ? ಬಿಜೆಪಿ ಹಮ್ಮಿಕೊಂಡ ಕಾರ್ಯಕ್ರಮವನ್ನು ನಂತರ ಅಧಿಕಾರಕ್ಕೆ ಬರುವ ಕಾಂಗ್ರೆಸ್ ರದ್ದುಪಡಿಸುವಂತೆ, ಒಬಾಮ ಕೂಡ ಮಾಡಿದ್ದರೆ ತನ್ನ ದೇಶಕ್ಕೆ ಅವರೆಂಥ ದ್ರೋಹವೆಸಗುತ್ತಿದ್ದರು ತಾನೆ?

ಒಬಾಮ ತಮ್ಮ ಭಾಷಣದಲ್ಲಿ ಹೇಳಿದ ಒಂದು ಮಾತು ಮನನೀಯ- “ನಮ್ಮ ಯುದ್ಧ ಇಸ್ಲಾಂ ವಿರುದ್ಧ ಅಲ್ಲ. ಲಾಡೆನ್ ಮುಸ್ಲಿಂ ನಾಯಕ ಅಲ್ಲ. ಆತ mass murderer of Muslims ಆಲ್ ಖೈದಾ ಅಸಂಖ್ಯ ಅಮಾಯಕ ಮುಸ್ಲಿಮರನ್ನು ಹತ್ಯೆಗೈದ ಸಂಘಟನೆಯ ಮುಖ್ಯಸ್ಥನೀತ. ಆದ್ದರಿಂದ ಶಾಂತಿ ಹಾಗೂ ಮಾನವತೆಯಲ್ಲಿ ನಂಬಿಕೆಯಿರುವ ಎಲ್ಲರೂ ಲಾಡೆನ್ ಹತ್ಯೆಯನ್ನು ಸ್ವಾಗತಿಸಬೇಕು.’

ಛಾಲೆಂಜ್! ಈ ಮಾತನ್ನು ಹೇಳುವ ಛಾತಿ, ಎದೆಗಾರಿಕೆ ನಮ್ಮ ಯಾವ ನಾಯಕರಿಗೆ ಇದೆ? ಒಂದು ವೇಳೆ ಛಾತಿ ಇದ್ದಿದ್ದು ಹೌದಾದರೆ, ಅಫಜಲ್ ಗುರುವನ್ನು ಗಲ್ಲಿಗೇರಿಸಲಿ ನೋಡೋಣ. ವೈಟ್ ಹೌಸೋ, ಲಿಬರ್ಟಿ ಪ್ರತಿಮೆಯೋ ಅಥವಾ ಇನ್ಯಾವುದೇ ರಾಷ್ಟ್ರದ ಹೆಗ್ಗುರುತಿನ ಮೇಲೆ ಭಯೋತ್ಪಾದಕರು ದಾಳಿ ನಡೆಸಿದ್ದರೆ, ಅಮೆರಿಕನ್ನರು ಅಂಥವರನ್ನು ಇಷ್ಟು ದಿನ ಇಟ್ಟುಕೊಳ್ಳುತ್ತಿದ್ದರಾ? ಲಾಡೆನ್ ಸತ್ತ ಕೆಲವೇ ಗಂಟೆಗಳಲ್ಲಿ ಅವನನ್ನು ಸಮುದ್ರದಲ್ಲಿ ಸಮಾಧಿ ಮಾಡಿಬಿಟ್ಟರು. ಏಕೆಂದರೆ ಭೂಮಿಯ ಮೇಲೆ ಸಮಾಧಿ ಮಾಡಿದರೆ ಸ್ಮಾರಕ ಕಟ್ಟಬಹುದೆಂದು, ಅದು ಪ್ರತೀಕಾರಕ್ಕೆ ಪ್ರೇರಣೆ ನೀಡಬಹುದೆಂದು. ಈ ಭೂಮಿಯ ಮೇಲೆ ಅವನ ಕುರುಹು ಸಹ ಸಿಗದಂತೆ ಗುಡಿಸಿಹಾಕಿಬಿಟ್ಟರು!

ಆ ಎದೆಗಾರಿಕೆ ನಮ್ಮಲ್ಲಿದೆಯಾ? Are we ready?

ಕೃಪೆ: ವಿಭಟ್.ಇನ್ (ವಿಶ್ವೇಶ್ವರ ಭಟ್)ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ