ನನ್ನ ಬ್ಲಾಗ್ ಪಟ್ಟಿ

ಮಂಗಳವಾರ, ಮೇ 17, 2011

ಕಮ್ಯುನಿಸ್ಟರ ಬಗ್ಗೆ ಕೊನೆಗೂ ಅಲರ್ಜಿ, ಗೆದ್ದರು ಬ್ಯಾನರ್ಜಿ!

ಇದು ಎರಡು ಬೀದಿ ನಾಯಿಗಳ ಕಥೆ. ಒಂದು ಭಾರತದ್ದು, ಮತ್ತೊಂದು ಚೀನಾದ್ದು. ಭಾರತದ ನಾಯಿ ಚೀನಾಕ್ಕೆ ಹೊರಟಿತ್ತು. ಚೀನಾದ ನಾಯಿ ಭಾರತದತ್ತ ಹೊರಟಿತ್ತು. ಹೀಗೆ ದೇಶಬಿಟ್ಟು ಹೊರಟಿದ್ದ ಆ ಎರಡೂ ನಾಯಿಗಳು ಭಾರತ-ಚೀನಾ ಗಡಿಯಲ್ಲಿ ಮುಖಾಮುಖಿಯಾದವು. ಭಾರತದ ನಾಯಿ ಸೊರಗಿ, ಬಡಕಲಾಗಿ ಹೋಗಿತ್ತು. ಹೊಟ್ಟೆ ಬೆನ್ನಿಗೆ ಅಂಟಿಕೊಂಡಿತ್ತು. ಇತ್ತ ಮೈ ಕೈ ತುಂಬಿಕೊಂಡು ದಷ್ಟ-ಪುಷ್ಟವಾಗಿದ್ದ ಚೀನಿ ನಾಯಿ, “ಏಕೆ ಚೀನಾಕ್ಕೆ ಹೊರಟಿದ್ದೀಯಾ?’ ಅಂತ ಆಶ್ಚರ್ಯದಿಂದ ಭಾರತದ ನಾಯಿಯನ್ನು ಪ್ರಶ್ನಿಸುತ್ತದೆ. “ಅಯ್ಯೋ ಭಾರತದಲ್ಲಿ ಒಪ್ಪೊತ್ತಿನ ಊಟಕ್ಕೂ ಗತಿಯಿಲ್ಲ. ಆಹಾರ ಹುಡುಕಿಕೊಂಡು ಹೋದರೆ ಜನ ಕಲ್ಲು ಹೊಡೆಯುತ್ತಾರೆ. ಆದರೆ ನಿಮ್ಮ ದೇಶದಲ್ಲಿ ಸರಕಾರದವರೇ ಹೊಟ್ಟೆ ತುಂಬಾ ಊಟ ಹಾಕುತ್ತಾರಂತಲ್ಲ. ಅದಕ್ಕೇ ಚೀನಾಕ್ಕೆ ಹೊರಟಿದ್ದೀನಿ’ ಅನ್ನುತ್ತದೆ. ಅಷ್ಟಕ್ಕೇ ಸುಮ್ಮನಾಗದೆ, “ಅಲ್ಲಾ, ಹೊಟ್ಟೆ ತುಂಬ ಊಟ ಕೊಡುವ ದೇಶವನ್ನು ಬಿಟ್ಟು ನೀನೇಕೆ ಭಾರತಕ್ಕೆ ಹೊರಟಿದ್ದೀಯಾ’ ಎಂದು ಚೀನಾ ನಾಯಿಯನ್ನು ಕೇಳುತ್ತದೆ. “ಹೌದು, ನೀನು ಹೇಳಿದಂತೆ ಚೀನಾದಲ್ಲಿ ಊಟಕ್ಕೇನೂ ಕೊರತೆಯಿಲ್ಲ, ಹೊಟ್ಟೆ ತುಂಬಾ ಸಿಗುತ್ತದೆ. ಆದರೆ…. ಅಲ್ಲಿ ಬೊಗಳುವ ಸ್ವಾತಂತ್ರ್ಯವೇ ಇಲ್ಲ! ಭಾರತದಲ್ಲಿ ಊಟಕ್ಕೆ ಕಷ್ಟವಿದ್ದರೂ ಬೊಗಳುವ ಸ್ವಾತಂತ್ರ್ಯಕ್ಕೆ ಯಾವ ಅಡ್ಡಿ-ಆತಂಕಗಳೂ ಇಲ್ಲ. ಅಷ್ಟು ಸಾಕು’ ಎನ್ನುತ್ತದೆ ಚೀನಾ ನಾಯಿ!!

ನಮ್ಮ ಕಮ್ಯುನಿಸ್ಟರನ್ನು ನೋಡಿದರೇ ಗೊತ್ತಾಗುವುದಿಲ್ಲವೆ ಚೀನಿ ನಾಯಿಯ ಮಾತಿನಲ್ಲಿ ಎಂತಹ ಸತ್ಯ ಅಡಗಿದೆ ಎಂದು?!

ಕಳೆದ 34 ವರ್ಷಗಳಲ್ಲಿ ಪಶ್ಚಿಮ ಬಂಗಾಳದಲ್ಲಿ ಕಮ್ಯುನಿಸ್ಟರು ಮಾಡಿದ್ದೇನು? ಭೂ ಸುಧಾರಣೆಯನ್ನು ಹೊರತುಪಡಿಸಿ ಬೇರಾವ ಜನಪರ ಕೆಲಸ ಮಾಡಿದ್ದಾರೆ? 1960ರಲ್ಲಿ ದೇಶದಲ್ಲಿಯೇ ಅತಿಹೆಚ್ಚು ಜಿಡಿಪಿ ಅಭಿವೃದ್ಧಿ ದರವನ್ನು ಹೊಂದಿದ್ದ ಪಶ್ಚಿಮ ಬಂಗಾಳವನ್ನು ಆರ್ಥಿಕ ಪ್ರಪಾತಕ್ಕೆ ತಳ್ಳಿದ ವರಾರು? ಬರೀ ಬೊಬ್ಬೆ ಹಾಕುವುದನ್ನು ಬಿಟ್ಟರೆ ಅವರು ಸಾಧಿಸಿದ್ದಾದರೂ ಏನನ್ನು?

ಈ ಸತ್ಯ ಪಶ್ಚಿಮ ಬಂಗಾಳದ ಜನತೆಗೆ ಕೊನೆಗೂ ಅರಿವಾಗಿದೆ. ಸ್ವಾತಂತ್ರ್ಯ ಚಳವಳಿ ಸಂದರ್ಭದಲ್ಲಿ ಬ್ರಿಟಿಷರ ಜತೆ ಕೈಜೋಡಿಸಿದ್ದ, ಸುಭಾಶ್ಚಂದ್ರ ಬೋಸ್್ರಂಥ ಅಪ್ರತಿಮ ದೇಶಪ್ರೇಮಿಯನ್ನೇ ಕೆಟ್ಟದಾಗಿ ಚಿತ್ರಿಸಿದ್ದ, ಮಹಾತ್ಮ ಗಾಂಧೀಜಿಯವರ ಕ್ವಿಟ್ ಇಂಡಿಯಾ ಚಳವಳಿಗೆ ವಿರೋಧ ವ್ಯಕ್ತಪಡಿಸಿದ್ದ, 1962ರಲ್ಲಿ ಚೀನಾ ಆಕ್ರಮಣ ಮಾಡಿದಾಗ ಅವರಿಗೇ ಬೆಂಬಲ ನೀಡಿದ್ದ ಕಮ್ಯುನಿಸ್ಟರ ನಿಜರೂಪ ಅಂತಿಮವಾಗಿಯಾದರೂ ಅವರಿಗೆ ಮನವರಿಕೆಯಾಯಿತಲ್ಲಾ! ಇಂತಹ ಅರಿವು ಮೂಡಿಸಿದ, ಮನವರಿಕೆ ಮಾಡಿಕೊಟ್ಟ ಮಮತಾ ಬ್ಯಾನರ್ಜಿಯವರಿಗೆ ಎಷ್ಟು ಬಾರಿ ಥ್ಯಾಂಕ್ಸ್ ಹೇಳಿದರೂ ಸಾಲದು.

ಇಷ್ಟಕ್ಕೂ ಆಕೆಯದ್ದೇನು ಸಾಮಾನ್ಯ ಸಾಧನೆಯೇ?

ಕೇವಲ 13 ವರ್ಷಗಳಲ್ಲಿ ಇಂಥದ್ದೊಂದು ದೈತ್ಯ ಕೆಲಸ ಮಾಡಿದ್ದಾದರೂ ಹೇಗೆ? ಪ್ರಣಬ್ ಮುಖರ್ಜಿ, ಪ್ರಿಯರಂಜನ್ ದಾಸ್್ಮುನ್ಷಿ, ಘನಿಖಾನ್ ಚೌಧುರಿ ಮುಂತಾದ ದೊಡ್ಡ ದೊಡ್ಡ ನಾಯಕರಿಂದ ಸಾಧ್ಯವಾಗದ್ದನ್ನು ಮಮತಾ ಸಾಧಿಸಿದ್ದು ಹೇಗೆ? ಆಕೆಯ ಮೇಲೆ ಯಾರಿಗೆ ತಾನೆ ಭರವಸೆಯಿತ್ತು?

2004ರ ಲೋಕಸಭೆ ಚುನಾವಣೆಯಲ್ಲಿ ಒಟ್ಟು 42 ಸ್ಥಾನಗಳಲ್ಲಿ ತೃಣಮೂಲ ಕಾಂಗ್ರೆಸ್ ಗೆದ್ದಿದ್ದು ಒಂದೇ ಸೀಟು. ಮಮತಾ ಬಿಟ್ಟು ಆಕೆಯ ಪಕ್ಷದ ಎಲ್ಲ ಅಭ್ಯರ್ಥಿಗಳೂ ಸೋತಿದ್ದರು. 2006ರ ವಿಧಾನಸಭೆ ಚುನಾವಣೆಯಲ್ಲಿ ತೃಣಮೂಲ ಪಡೆದಿದ್ದು ಕೇವಲ 10 ಪರ್ಸೆಂಟ್ ಸೀಟುಗಳು. ಎಡರಂಗ ಶೇ. 80 ರಷ್ಟು ಅಸೆಂಬ್ಲಿ ಸ್ಥಾನಗಳನ್ನು ಬಾಚಿಕೊಂಡಿತ್ತು. ಭಾರೀ ನಿರೀಕ್ಷೆಗಳೊಂದಿಗೆ ಕಣಕ್ಕಿಳಿದರೂ ಮಮತಾ ನಿರಾಶಾದಾಯಕ ಪ್ರದರ್ಶನ ನೀಡಿದ್ದರು. ನಾಲ್ಕು ವರ್ಷಗಳ ಹಿಂದೆ ಮಮತಾ ಬ್ಯಾನರ್ಜಿಯವರ ಬಗ್ಗೆಯಾಗಲಿ, ಅವರ ತೃಣಮೂಲ ಕಾಂಗ್ರೆಸ್ ಮೇಲಾಗಲಿ ಯಾವ ಭರವಸೆಗಳೂ ಇರಲಿಲ್ಲ. ಇನ್ನೊಂದೆಡೆ ಸಿಪಿಎಂ ಕಾರ್ಯಕರ್ತರಿಂದ ಹಲ್ಲೆಗೊಳಗಾಗಿ ಆಸ್ಪತ್ರೆಯನ್ನು ಸೇರಿದ್ದ ಮಮತಾ ಬ್ಯಾನರ್ಜಿಯವರನ್ನು ರಾಜಕೀಯವಾಗಿ ಇಲ್ಲವೆ ದೈಹಿಕ ಹಲ್ಲೆ ಯಾವುದಾದರೊಂದರಲ್ಲಿ ಪರಿಸಮಾಪ್ತಿ ಮಾಡುವುದು ಖಂಡಿತ ಎಂಬ ಭಾವನೆ ನೆಲೆಗೊಂಡಿತ್ತು. ಜತೆಗೆ ಟಾಟಾದವರ ನ್ಯಾನೋ ಉತ್ಪಾದನಾ ಘಟಕ ಸ್ಥಾಪನೆಗೆ, ಸಲೀಂ ಗ್ರೂಪ್್ಗೆ ಭೂಮಿ ನೀಡುವುದಕ್ಕೆ ಅಡ್ಡವಾಗಿ ನಿಂತಾಗಲಂತೂ ಮಾಧ್ಯಮಗಳಿಂದಲೂ ಆಕೆ ದೂಷಣೆಗೆ ಒಳಗಾಗಿದ್ದರು. ಪ್ರಗತಿ ವಿರೋಧಿ ಎಂಬಂತೆ ಪ್ರತಿಬಿಂಬಿಸಲು ದಾರಿ ಮಾಡಿಕೊಟ್ಟಿದ್ದರು. ಅಷ್ಟೇಕೆ, ಆಕೆಯ ಧರಣಿ, ಮುಷ್ಕರ, ದಿನಕ್ಕೊಂದು ಹೇಳಿಕೆ, ರಂಪ, ರಗಳೆಯನ್ನು ಕಂಡು ನಿಮಗೂ ಎಷ್ಟೋ ಬಾರಿ ಕೋಪ ಬಂದಿರಬಹುದು. ನ್ಯಾನೋದಂಥ ಮಹತ್ವಾಕಾಂಕ್ಷಿ ಯೋಜನೆಗೆ ಈ ರೀತಿ ಅಡ್ಡಿಪಡಿಸುವುದು ಸರಿಯೇ? ಯಾರು ತಾನೇ ಪಶ್ಚಿಮ ಬಂಗಾಳದಲ್ಲಿ ಬಂಡವಾಳ ತೊಡಗಿಸಲು ಮುಂದೆ ಬರುತ್ತಾರೆ? ಇಂತಹ ಪ್ರಶ್ನೆಗಳು ನಿಮ್ಮ ಮನದಲ್ಲೂ ಮೂಡಿದ್ದಿರಬಹುದು.

ಆದರೆ…

ಮಮತಾ ಅಂತಃಕರಣ ಇರುವ ಗಟ್ಟಿ ಹೆಣ್ಣು. ರಾಜಕೀಯ ಲಾಭಕ್ಕೋಸ್ಕರ ಕಾರ್ಮಿಕರನ್ನು ಎತ್ತಿಕಟ್ಟಿ, ಪೊಲೀಸರ ಜತೆ ಬೀದಿ ಕಾಳಗ ಮಾಡಿ ಅಧಿಕಾರ ಹಿಡಿದಿದ್ದ ಕಮ್ಯುನಿಸ್ಟರ ಬಗ್ಗೆ ಆಕೆಯ ಮನದಲ್ಲಿ ತೀವ್ರ ಅಸಮಾಧಾನಗಳಿದ್ದವು. ಹಾಗಾಗಿ 1970ರ ದಶಕದಲ್ಲಿ ಕಾಂಗ್ರೆಸ್ ಸೇರಿದ ಆಕೆ, 1984ರ ಸಾರ್ವತ್ರಿಕ ಚುನಾವಣೆಯಲ್ಲಿ ಮೊದಲ ಬಾರಿಗೆ ಲೋಕಸಭೆಗೆ ಆಯ್ಕೆಯಾದರು. 1991ರಲ್ಲಿ ಎರಡನೇ ಬಾರಿಗೆ ಲೋಕಸಭೆಗೆ ಆಯ್ಕೆಯಾದ ಮಮತಾ ಅವರಿಗೆ ನರಸಿಂಹರಾವ್ ಮಂತ್ರಿಮಂಡಲದಲ್ಲಿ ಯುವಜನ ಹಾಗೂ ಕ್ರೀಡಾ ಖಾತೆ ದೊರೆಯಿತು. ಆದರೆ ಕ್ರೀಡಾ ಖಾತೆಯ ಬಗ್ಗೆ ಮಲತಾಯಿ ಧೋರಣೆ ತೋರಲಾಗುತ್ತಿದೆ ಎಂದು ಪ್ರತಿಭಟಿಸಿ 1993ರಲ್ಲಿ ಮಂತ್ರಿಸ್ಥಾನಕ್ಕೇ ರಾಜೀನಾಮೆ ನೀಡಿದರು. ಒಬ್ಬ ಯುವ ಸಚಿವೆಯಾಗಿ ಅಧಿಕಾರ ಚಲಾಯಿಸುವುದನ್ನು ಬಿಟ್ಟು ಮಂತ್ರಿ ಸ್ಥಾನವನ್ನೇ ತೊರೆದರೆಂದರೆ ಆಕೆಯ ಹೋರಾಟ ಮನೋಭಾವನೆ ಎಂಥದ್ದಿರಬಹುದು? ಸಿಪಿಎಂ ಬಗ್ಗೆ ಕಾಂಗ್ರೆಸ್ ಮೃದು ಧೋರಣೆ ತಳೆದಿದೆ ಎಂಬ ಕಾರಣಕ್ಕೆ 1997ರಲ್ಲಿ ಪಕ್ಷವನ್ನೇ ತೊರೆದು “ತೃಣಮೂಲ (ಗ್ರಾಸ್್ರೂಟ್) ಕಾಂಗ್ರೆಸ್್’ ಎಂಬ ಹೊಸ ಪಕ್ಷವನ್ನೇ ಕಟ್ಟಿದರು. ಪ್ರಣಬ್ ಮುಖರ್ಜಿ, ಘನಿಖಾನ್ ಚೌಧುರಿ, ಪ್ರಿಯರಂಜನ್ ದಾಸ್ ಮುನ್ಷಿ ಅವರಂತಹ ಹಿರಿಯ ನಾಯಕರಿದ್ದರೂ ಮಮತಾ ಜನಪ್ರಿಯತೆ ಮುಂದೆ ಕಾಂಗ್ರೆಸ್ ಕ್ಷೀಣಿಸಿ ಹೋಯಿತು. ತೃಣಮೂಲ ಕಾಂಗ್ರೆಸ್ ಪ್ರಮುಖ ಪ್ರತಿಪಕ್ಷವಾಯಿತು.

ನಮಗೆ ಹುಚ್ಚುತನವೆನಿಸಬಹುದು. ಆದರೆ ಮಮತಾ ಯಾರನ್ನೂ ಲೆಕ್ಕಿಸುವುದಿಲ್ಲ. 1998ರಲ್ಲಿ ಅಟಲ್ ಬಿಹಾರಿ ವಾಜಪೇಯಿ ಸರಕಾರ “ಮಹಿಳಾ ಮೀಸಲು’ ವಿಧೇಯಕವನ್ನು ಲೋಕಸಭೆಯ ಮುಂದಿಟ್ಟಾಗ ತೀವ್ರ ಅಡಚಣೆಯನ್ನುಂಟುಮಾಡಿದ ಸಮಾಜವಾದಿ(ಎಸ್ಪಿ) ಪಕ್ಷದ ಸಂಸದ ದುರ್ಗಾ ಪ್ರಸಾದ್ ಸರೋಜ್ ಅವರನ್ನು ಕಾಲರ್ ಹಿಡಿದುಕೊಂಡು ಸದನದ ಆವರಣಕ್ಕೆ ಎಳೆದು ತಂದಿದ್ದರು ಮಮತಾ. ಪಿ.ಎ. ಸಂಗ್ಮಾ ಸ್ಪೀಕರ್ ಆಗಿದ್ದಾಗ ಒಮ್ಮೆ ರೊಚ್ಚಿಗೆದ್ದು ಹೊದ್ದಿದ್ದ ಶಾಲನ್ನೇ ಸ್ಪೀಕರ್ ಚೇರ್್ನತ್ತ ಎಸೆದಿದ್ದರು. 2005ರಲ್ಲಿ ಬಾಂಗ್ಲಾದೇಶಿ ಅತಿಕ್ರಮಣಕಾರರ ಬಗ್ಗೆ ಚರ್ಚಿಸುವ ಸಲುವಾಗಿ “ನಿಲುವಳಿ ಸೂಚನೆ’ ಮಂಡಿಸಲು ಅವಕಾಶ ನೀಡಬೇಕೆಂದು ಆಕೆ ಮಾಡಿದ್ದ ಕೋರಿಕೆಯನ್ನು ಸ್ಪೀಕರ್ ಸೋಮನಾಥ ಚಟರ್ಜಿ ತಿರಸ್ಕರಿಸಿರುವ ವಿಷಯ ತಿಳಿದು ಆ ಸಂದರ್ಭದಲ್ಲಿ ಸ್ಪೀಕರ್ ಚೇರ್ ಮೇಲೆ ಕುಳಿತಿದ್ದ ಡೆಪ್ಯುಟಿ ಸ್ಪೀಕರ್ ಚರಣ್್ಜಿತ್ ಸಿಂಗ್ ಅತ್ವಾಲ್ ಮುಖದತ್ತ ಪೇಪರ್್ಗಳನ್ನು ಎಸೆದಿದ್ದರು. ಅಷ್ಟೇ ಅಲ್ಲ, ಇಂಡೋನೇಷ್ಯಾದ ಸಲೀಂ ಗ್ರೂಪ್್ಗೆ ಮುಖ್ಯಮಂತ್ರಿ ಬುದ್ಧದೇವ್ ಅವರು ಹೌರಾ ಬಳಿ ಕೃಷಿ ಭೂಮಿಯನ್ನು ನೀಡಿದಾಗ ಒಪ್ಪಂದಕ್ಕೆ ಸಹಿ ಹಾಕಲು ಗ್ರೂಪ್್ನ ಮುಖ್ಯಸ್ಥ ಬೆನ್ನಿ ಸ್ಯಾಂಟೊಸೋ ಆಗಮಿಸಲಿದ್ದ ತಾಜ್ ಹೋಟೆಲ್್ನೆದುರು ಧಾರಾಕಾರವಾಗಿ ಸುರಿಯುತ್ತಿದ್ದ ಮಳೆಯಲ್ಲೇ ನಿಂತು ಪ್ರತಿಭಟಸಿದ್ದರು ಮಮತಾ ಬ್ಯಾನರ್ಜಿ.

ಇಂತಹ ಕಾಳಜಿ ಹಾಗೂ ಗಟ್ಟಿತನಗಳಿಂದಾಗಿಯೇ ಅಂದು ನಂದಿ ಗ್ರಾಮ ಹಾಗೂ ಸಿಂಗೂರಿನ ಜನ ಪ್ರಾಣವನ್ನು ಒತ್ತೆಯಿಟ್ಟು ಆಕೆಯ ಬೆಂಬಲಕ್ಕೆ ನಿಂತರು. ಇಷ್ಟಾಗಿಯೂ ಆಕೆಯೇನು ಕಾರ್ಮಿಕ ನಾಯಕಿಯಲ್ಲ, ಆಕೆಯ ಬೆಂಬಲಕ್ಕೆ ನಿಲ್ಲುವಂಥ ಕಾರ್ಮಿಕ ಒಕ್ಕೂಟಗಳೂ ಇಲ್ಲ. ಇರುವುದು ಪ್ರಾಮಾಣಿಕ ಕಾಳಜಿಯೊಂದೇ.

ಈ ಹಿಂದೆ ಕಾರ್ಮಿಕರು, ಭೂರಹಿತರು ಅಂತ ಹೋರಾಡುತ್ತಿದ್ದವರೆಲ್ಲ ಕಮ್ಯುನಿಸ್ಟರೇ ಆಗಿದ್ದರು. ಆದರೆ ಅವರ ಹೋರಾಟಗಳು ರಾಜಕೀಯ ಹಿತಾಸಕ್ತಿ ಹಾಗೂ ರಾಜಕೀಯ ಲಾಭದ ಉದ್ದೇಶ ಹೊಂದಿರುತ್ತಿದ್ದವು. ಹಾಗಾಗಿ ಅಧಿಕಾರಕ್ಕೇರಿದ ಕೂಡಲೇ ಹೋರಾಟ ನಿಂತು ಹೋಗುತ್ತಿತ್ತು. ಇಂದು ನಕ್ಸಲ್ ಪಿಡುಗು ಇಡೀ ದೇಶವನ್ನೇ ಕಾಡುತ್ತಿದ್ದರೂ ಪಶ್ಚಿಮ ಬಂಗಾಳ, ಕೇರಳ, ತ್ರಿಪುರಗಳಲ್ಲಿ ಈ ಸಮಸ್ಯೆಯಿಲ್ಲ. ಏಕೆಂದರೆ ಇದುವರೆಗೂ ನಕ್ಸಲರ ಕೈಯಲ್ಲೇ ಅಧಿಕಾರವಿತ್ತು. ದಟ್ಟದಾರಿದ್ರ್ಯದಿಂದ ಕೂಡಿದ್ದರೂ ಪಶ್ಚಿಮ ಬಂಗಾಳದಲ್ಲಿ ಕಮ್ಯುನಿಸ್ಟರ ಯಾವ ಹೋರಾಟ, ಚೀರಾಟಗಳೂ ಕಾಣುತ್ತಿರಲಿಲ್ಲ. ಕಮ್ಯುನಿಸ್ಟರ ಇಂತಹ ಇಬ್ಬಂದಿ ನಿಲುವಿನಿಂದಾಗಿ ಮಮತಾ ಪ್ರಾಮುಖ್ಯತೆಗೆ ಬಂದರು. ಲೆಫ್ಟಿಸ್ಟ್ ಐಡಿಯಾಲಜಿಯನ್ನೇ ಹೈಜಾಕ್ ಮಾಡಿದ ಆಕೆ, ಕಮ್ಯುನಿಸ್ಟರಿಗೆ ಅವರದ್ದೇ ಭಾಷೆಯಲ್ಲಿ ಬಿಸಿ ಮುಟ್ಟಿಸಲಾರಂಭಿ ಸಿದರು.

ಬ್ರಿಟಿಷರ ಕಾಲದಿಂದಲೂ ದೇಶದಲ್ಲಿಯೇ ಅತ್ಯಂತ ಪ್ರಗತಿಪರ ಹಾಗೂ ಕೈಗಾರಿಕೀಕರಣಗೊಂಡ ರಾಜ್ಯವೆಂಬ ಹೆಗ್ಗಳಿಕೆಯನ್ನು ಪಶ್ಚಿಮ ಬಂಗಾಳ ಪಡೆದಿತ್ತು. ಅದನ್ನು ಈ ಸ್ಥಿತಿಗೆ ತಂದವರಾರು? ಅಲ್ಲಿನ ಕಾರ್ಖಾನೆಗಳು ಮುಚ್ಚುವಂತಾಗಿದ್ದು ಕಮ್ಯುನಿಸ್ಟರ ಮಿಲಿಟೆಂಟ್ ಟ್ರೇಡ್ ಯೂನಿಯನಿಸಂನಿಂದಲೇ ಅಲ್ಲವೆ? ಬುದ್ಧದೇವ ಭಟ್ಟಾಚಾರ್ಯ ಅವರಿಗೆ ಬಡತನ, ನಿರುದ್ಯೋಗವನ್ನು ತರುವ ಓಬಿರಾಯನ ಕಾಲದ ಕಮ್ಯುನಿಸ್ಟ್ ಸಿದ್ಧಾಂತದಿಂದ ರಾಜ್ಯದ ಉದ್ಧಾರ ಸಾಧ್ಯವಿಲ್ಲ ಎಂಬುದು ಕೊನೆಗೂ ಅರಿವಾಯಿತು. ಹಾಗಂತ ಎಡಬಿಡಂಗಿ ಎಡಪಂಥೀಯರ ಪಾಪದ ಕೊಡ ಅಷ್ಟು ಸುಲಭವಾಗಿ ಖಾಲಿಯಾದೀತೆ? ಅಂದು ಬಂಡವಾಳಶಾಹಿ ಎಂದು ಅಮೆರಿಕವನ್ನು ದೂರುತ್ತಿದ್ದವರು ಸಲೀಂ ಗ್ರೂಪ್, ನ್ಯಾನೋ ಮಂತ್ರ ಜಪಿಸಲಾರಂಭಿಸಿದರು. ಹಾಗಂತ ಕಮ್ಯುನಿಸ್ಟರಂತೆ ಮಮತಾ ಎಂದೂ ಧೂರ್ತತನ ತೋರಲಿಲ್ಲ. “ಪಶ್ಚಿಮ ಬಂಗಾಳದಲ್ಲಿ ಕೃಷಿ ಹಾಗೂ ಕೈಗಾರಿಕಾ ಕ್ಷೇತ್ರಗಳೆರಡೂ ಸಾಂಘಿಕವಾಗಿ ಪ್ರಗತಿ ಕಾಣಬೇಕು ಎಂಬುದಷ್ಟೇ ನನ್ನ ಉದ್ದೇಶ. ಹಾಗಾಗಲು ನಾನು ಯಾವ ತ್ಯಾಗಕ್ಕೂ ಸಿದ್ಧ” ಎಂದಿದ್ದರು. ಸಿಂಗೂರಿನಲ್ಲಿ ಟಾಟಾಕ್ಕೆ ನೀಡಲಾಗಿರುವ ಸಾವಿರ ಎಕರೆ ಭೂಮಿಯಲ್ಲಿ 400 ಎಕರೆಯನ್ನು ಬಿಡಲೊಪ್ಪದ ರೈತರಿಗೆ ಬೇರೆ ಕಡೆ ಭೂಮಿಗೆ ಪ್ರತಿಯಾಗಿ ಭೂಮಿಯನ್ನೇ ನೀಡಿದರೆ ತಮ್ಮ ಅಭ್ಯಂತರವೇನೂ ಇಲ್ಲ ಎಂದೂ ಹೇಳಿದರು. ಜನರಿಗೆ ಈ ರೀತಿಯ ಪ್ರಾಮಾಣಿಕ ಕಾಳಜಿಗಿಂತ ಇನ್ನೇನು ಬೇಕು?

ಮಮತಾ ಇಷ್ಟವಾಗುವುದೇ ಈ ಕಾರಣಕ್ಕೆ. ಎಂಎ, ಎಲ್್ಎಲ್್ಬಿ ಓದಿರುವ ಆಕೆ ಸುಖವನ್ನರಸಿಕೊಂಡು ಹೋಗಿದ್ದರೆ ಉತ್ತಮ ಉದ್ಯೋಗವೂ ದೊರೆಯುತ್ತಿತ್ತು, ಆರಾಮದಾಯಕ ಜೀವನವನ್ನೂ ನಡೆಸಬಹುದಿತ್ತು. ವಿವಾಹ, ಗಂಡ, ಮಕ್ಕಳು, ಸ್ವಾರ್ಥ ಚಿಂತನೆಗಳನ್ನು ಮೆಟ್ಟಿನಿಂತು ಆಕೆ ಜನರಿಗಾಗಿ ಹೋರಾಡಿದ್ದರಿಂದಲೇ ಇಂದು ಅತಿಮಾನುಷವೆನಿಸುವ ಸಾಧನೆಯನ್ನು ಮಾಡಿದ್ದಾರೆ.

ಇದೆಲ್ಲ ನಮ್ಮ ಧನದಾಹಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರಿಗೆ ಯಾವಾಗ ಅರ್ಥವಾಗುತ್ತೋ?

ಮಮತಾಗೊಂದು ಸಲಾಮ್!

ಕೃಪೆ: ಪ್ರತಾಪ ಸಿಂಹ
ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ