ನನ್ನ ಬ್ಲಾಗ್ ಪಟ್ಟಿ

ಶನಿವಾರ, ಮೇ 21, 2011

ರಾಜ್ಯಕ್ಕಂಟಿದ ಶಾಪ ಈ ನಮ್ಮ ರಾಜ್ಯಪಾಲ, ಮುಖ್ಯಮಂತ್ರಿ!

1. ಈ ದೇಶದ ಯಾವುದಾದರೊಂದು ರಾಜ್ಯ ಸಂವಿಧಾನದ ವಿಧಿವಿಧಾನಗಳಿಗೆ ವ್ಯತಿರಿಕ್ತವಾಗಿ ನಡೆದುಕೊಳ್ಳುತ್ತಿದ್ದರೆ ಅಂತಹ ರಾಜ್ಯಕ್ಕೆ ಮೊದಲು ಎಚ್ಚರಿಕೆ ನೀಡಬೇಕು.

2. ರಾಜ್ಯಪಾಲರಿಂದ ವರದಿ ತರಿಸಿಕೊಳ್ಳಬೇಕು ಮತ್ತು ಸರಕಾರದಿಂದ ವಿವರಣೆ ಕೇಳಬೇಕು.

3. ಕೂಡಲೇ ಕ್ರಮತೆಗೆದುಕೊಳ್ಳದಿದ್ದರೆ ಅರಾಜಕ ಪರಿಸ್ಥಿತಿ ಏನಾದರೂ ಸೃಷ್ಟಿಯಾಗಬಹುದೇ ಎಂಬ ಸಾಧ್ಯಾಸಾಧ್ಯತೆಯನ್ನೂ ತಿಳಿದುಕೊಳ್ಳಬೇಕು.

4. ಬಾಹ್ಯ ಆಕ್ರಮಣ ಅಥವಾ ಆಂತರಿಕ ಬಿಕ್ಕಟ್ಟೇನಾದರೂ ಸೃಷ್ಟಿಯಾಗಿದ್ದರೆ, ಆಡಳಿತಯಂತ್ರ ಹದಗೆಟ್ಟು ಹೋಗುವ ಸಾಧ್ಯತೆ ಇದೆ ಎಂದಾದರೆ

ಹಾಗೂ

5. ಆ ರಾಜ್ಯದಲ್ಲಿ ಸಾಂವಿಧಾನಿಕ ವ್ಯವಸ್ಥೆ ಮುರಿದು ಬಿದ್ದಿದ್ದರೆ, ಎಲ್ಲ ಪ್ರಯತ್ನಗಳ ಹೊರತಾಗಿಯೂ ಆಡಳಿತ ಯಂತ್ರವನ್ನು ಸರಿಪಡಿಸಲು ಸಾಧ್ಯವಿಲ್ಲವಾಗಿದ್ದರೆ, ಸಮಸ್ಯೆಯನ್ನು ಸರಿಪಡಿಸಲು ಬೇರೆ ಮಾರ್ಗಗಳೇ ಇಲ್ಲವೆಂದಾದರೆ ಅಂತಹ ಸಂದರ್ಭದಲ್ಲಿ 356ನೇ ವಿಧಿ ಪ್ರಯೋಗಿಸಿ ರಾಷ್ಟ್ರಪತಿ ಆಡಳಿತವನ್ನು ಜಾರಿಗೆ ತರಬಹುದು.

ಹಾಗಂತ ಸಂವಿಧಾನದಲ್ಲೇ ಸ್ಪಷ್ಟವಾಗಿ ಹೇಳಲಾಗಿದೆ. ಸರ್ಕಾರಿಯಾ ಆಯೋಗದ ಅಭಿಪ್ರಾಯ ಮತ್ತು ಶಿಫಾರಸ್ಸು ಕೂಡಾ ಇದೇ ಆಗಿತ್ತು. ಅಂತಹ ಯಾವ ಪರಿಸ್ಥಿತಿ ನಮ್ಮ ಕರ್ನಾಟಕ ರಾಜ್ಯದಲ್ಲಿ ಸೃಷ್ಟಿಯಾಗಿದೆ? ಕಾನೂನು ಸುವ್ಯವಸ್ಥೆ ಹದಗೆಟ್ಟಿದೆಯೇ? ಸುಪ್ರೀಂ ಕೋರ್ಟ್ ತೀರ್ಪಿನ ಹಿನ್ನೆಲೆಯಲ್ಲಿ ಸಾಂವಿಧಾನಿಕ ಬಿಕ್ಕಟ್ಟು ಸೃಷ್ಟಿಯಾಗಿದೆ, ವ್ಯವಸ್ಥೆ ಮುರಿದು ಬಿದ್ದಿದೆ ಎಂದು ಹೇಳುವುದಕ್ಕಾದರೂ ಸಾಧ್ಯವಿದೆಯೆ? ಸುಪ್ರೀಂ ಕೋರ್ಟ್ ಈಗ ನೀಡಿರುವ ತೀರ್ಪು ಕೂಡ ಅಂತಿಮವೇನಲ್ಲ. ಮರುಪರಿಶೀಲಿಸುವಂತೆ ರಾಜ್ಯ ಸರಕಾರ ಮೇಲ್ಮನವಿ ಸಲ್ಲಿಸಬಹುದು. ಈ ಮಧ್ಯೆ ಬಂಡಾಯವೆದ್ದಿದ್ದ 11 ಶಾಸಕರೇ ಮತ್ತೆ ಯಡಿಯೂರಪ್ಪನವರಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಹೀಗಿರುವಾಗ ಯಾವ ಆಧಾರದ ಮೇಲೆ ಸಾಂವಿಧಾನಿಕ ಬಿಕ್ಕಟ್ಟು ತಲೆದೋರಿದೆ ಎಂದು ಹೇಳಲು ಸಾಧ್ಯ? ಜತೆಗೆ 2010 ಅಕ್ಟೋಬರ್ 11ರಂದು ಇದ್ದ ಪರಿಸ್ಥಿತಿಯನ್ನು ದೃಷ್ಟಿಯಲ್ಲಿಟ್ಟುಕೊಂಡು ಈ ಸರಕಾರಕ್ಕೆ ಬಹುಮತವಿಲ್ಲ, ರಾಷ್ಟ್ರಪತಿ ಆಡಳಿತ ಹೇರಿ ಎಂದು ಶಿಫಾರಸ್ಸು ಮಾಡಲು ಹೇಗೆ ತಾನೇ ಸಾಧ್ಯವಿದೆ? ಹಾಗೇನಾದರೂ ‘Retrospective effect’ನಲ್ಲಿ ಕ್ರಮತೆಗೆದುಕೊಳ್ಳಬಹುದೆಂದಾದರೆ ಎಸ್.ಆರ್. ಬೊಮ್ಮಾಯಿ ಸರಕಾರವನ್ನು ವಜಾ ಮಾಡಿದ್ದು 1988ರಲ್ಲಿ, ಅದು ಅಸಾಂವಿಧಾನಿಕ ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದ್ದು 1994ರಲ್ಲಿ. ಹಾಗಾದರೆ ‘Retrospective effect’ನಲ್ಲಿ ಬಹುಮತ ಸಾಬೀತುಪಡಿಸುವಂತೆ ಬೊಮ್ಮಾಯಿಯವರಿಗೆ 1994ರಲ್ಲಿ ಸೂಚಿಸುವುದಕ್ಕಾಗುತ್ತಿತ್ತೆ? ಇಂತಹ ವಸ್ತುಸ್ಥಿತಿ ಕಣ್ಣ ಮುಂದಿದ್ದರೂ ಈ ಭಾರದ್ವಾಜ್ ಏಕೆ ಏಜೆಂಟರಂತೆ ವರ್ತಿಸುತ್ತಿದ್ದಾರೆ? ಆಗಿಂದಾಗ್ಗೆ ಬಿಜೆಪಿ ನಡೆಸುತ್ತಿರುವ ಅಪರೇಶನ್ ಕಮಲವನ್ನು ಖಂಡಿತ ಯಾರೂ ಒಪ್ಪಲು ಸಾಧ್ಯವಿಲ್ಲ. ಆದರೆ ಅದನ್ನು ಪ್ರಶ್ನಿಸಲು ಕಾಂಗ್ರೆಸ್್ಗಾಗಲಿ, ಮಾಜಿ ಕಾಂಗ್ರೆಸ್ಸಿಗ ಹಾಗೂ ಹಾಲಿ ರಾಜ್ಯಪಾಲ ಹಂಸರಾಜ ಭಾರದ್ವಾಜ್ ಅವರಿಗಾಗಲಿ ಯಾವ ನೈತಿಕ ಹಕ್ಕಿದೆ?

ಇಷ್ಟಕ್ಕೂ ಚುನಾಯಿತ ಪ್ರತಿನಿಧಿಗಳನ್ನು ಖರೀದಿಸುವ ಕೆಲಸವನ್ನು ಆರಂಭಿಸಿದ್ದು ಯಾವ ಪಕ್ಷ? ಜೆಎಂಎಂ ಲಂಚ ಹಗರಣ ಯಾವ ಪಕ್ಷದ ಪಾಪದ ಕೂಸು? 1993, ಜುಲೈನಲ್ಲಿ ನಡೆದ ವಿಶ್ವಾಸಮತ ಗೊತ್ತುವಳಿ ಸಂದರ್ಭದಲ್ಲಿ ಜಾರ್ಖಂಡ್ ಮುಕ್ತಿ ಮೋರ್ಚಾದ ಬೆಂಬಲ ಪಡೆಯುವ ಸಲುವಾಗಿ ಶಿಬು ಸೊರೇನ್, ಸೂರಜ್ ಮಂಡಲ್, ಅನಾದಿ ಚರಣ್ ದಾಸ್್ಗೆ ತಲಾ 50 ಲಕ್ಷ ನೀಡಿದ್ದು, ಇದೇ ತೆರನಾದ ಆಮಿಷವೊಡ್ಡಿ ಅಜಿತ್ ಸಿಂಗ್ ಪಕ್ಷದ 5 ಸಂಸದರನ್ನು ಬುಟ್ಟಿಗೆ ಹಾಕಿಕೊಳ್ಳುವ ಮೂಲಕ ಸಂಸತ್ತಿನಲ್ಲಿ ಕುದುರೆ ವ್ಯಾಪಾರ ಆರಂಭಿಸಿದ ಅಪಕೀರ್ತಿ ಯಾವ ಪಕ್ಷಕ್ಕೆ ಸಲ್ಲಬೇಕು? ಇದೇನು ಬರೀ ಅರೋಪವಲ್ಲ. 2000ದಲ್ಲಿ ನೀಡಿದ ತೀರ್ಪಿನಲ್ಲಿ ಸುಪ್ರೀಂ ಕೋರ್ಟ್ ನರಸಿಂಹರಾವ್, ಬೂಟಾ ಸಿಂಗ್ ಅವರನ್ನು ದೋಷಿಗಳಾಗಿ ಮಾಡಿತು. ಈ ಹಿನ್ನೆಲೆಯಲ್ಲಿ ಜೆಎಂಎಂನ 4 ಹಾಗೂ ಅಜಿತ್ ಸಿಂಗ್ ಅವರ ಪಕ್ಷದ 5 ಸದಸ್ಯರನ್ನು ಹೊರಗಿಟ್ಟು ‘Retrospective effect’ನಲ್ಲಿ ನೋಡುವುದಾದರೆ 1993ರಲ್ಲಿ ರಾವ್ ಸರಕಾರ ಕೂಡ ಬಹುಮತ ಸಾಬೀತುಪಡಿಸಿರಲಿಲ್ಲವೆಂದಾಗಲಿಲ್ಲವೆ? ಇಂತಹ ಇತಿಹಾಸ, ಹಿನ್ನೆಲೆ ಇಟ್ಟುಕೊಂಡಿರುವ ಕಾಂಗ್ರೆಸ್ಸಿಗರು ಯಾವ ಮುಖ ಇಟ್ಟುಕೊಂಡು ಬಿಜೆಪಿಯವರ ಆಪರೇಶನ್ ಕಮಲವನ್ನು ಟೀಕಿಸುತ್ತಾರೆ?

ಕಾಂಗ್ರೆಸ್ ಹಾಕಿಕೊಟ್ಟಿದ್ದ ಇಂತಹ ಮೇಲ್ಪಂಕ್ತಿ ಇದ್ದರೂ 1999ರಲ್ಲಿ ವಿಶ್ವಾಸಮತ ಯಾಚಿಸಿದ ಆಗಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಯಾವ ರೀತಿ ನಡೆದುಕೊಂಡಿದ್ದರು?

ಅಂದು ಅಟಲ್ ಕೂಡ ಖರೀದಿಗಿಳಿಯಬಹುದಿತ್ತು. ಬಹುಮತ ಸಾಬೀತಿಗೆ ಬೇಕಿದ್ದಿದ್ದು ಒಂದು ವೋಟು. ಒಂದು ವೋಟಿನಿಂದ (269-270) ಸರಕಾರ ಕಳೆದುಕೊಳ್ಳುವುದಕ್ಕೆ ಅಟಲ್ ಸಿದ್ಧರಾದರೇ ಹೊರತು, ಖರೀದಿಗಿಳಿಯಲಿಲ್ಲ. ಆ ಸಂದರ್ಭದಲ್ಲೂ ಕಾಂಗ್ರೆಸ್ ಎಲ್ಲ ರೀತಿಯ ಅನೈತಿಕ ಕೆಲಸಗಳನ್ನೂ ಮಾಡಿತ್ತು. 1999 ಫೆಬ್ರವರಿಯಲ್ಲೇ ಒರಿಸ್ಸಾದ ಮುಖ್ಯಮಂತ್ರಿಯಾಗಿದ್ದ ಕಾಂಗ್ರೆಸ್್ನ ಗಿರಿಧರ್ ಗಮಾಂಗ್ ಏಪ್ರಿಲ್ ಬಂದರೂ ತಮ್ಮ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಿರಲಿಲ್ಲ. ಇಂಥದ್ದೊಂದು ತಾಂತ್ರಿಕ ಕಾರಣದ ಲಾಭ ಪಡೆದುಕೊಂಡ ಕಾಂಗ್ರೆಸ್, ಗಮಾಂಗ್ ಅವರನ್ನು ದಿಲ್ಲಿಗೆ ಕರೆಸಿ ವಾಜಪೇಯಿ ಸರಕಾರದ ವಿರುದ್ಧ ವೋಟು ಹಾಕಿಸಿತು. ಅಷ್ಟೇ ಅಲ್ಲ, ಎನ್್ಡಿಎ ಮಿತ್ರಪಕ್ಷವಾಗಿದ್ದ ನ್ಯಾಷನಲ್ ಕಾನ್ಫರೆನ್ಸ್್ನ ಸಂಸದ ಸೈಫುದ್ದೀನ್ ಸೋಝ್ ವ್ಹಿಪ್ ಉಲ್ಲಂಘಿಸಿ ವಾಜಪೇಯಿಯವರ ವಿರುದ್ಧ ವೋಟು ಹಾಕಿದರು. ಅವರನ್ನು ತನ್ನ ತೆಕ್ಕೆಗೆ ಸೆಳೆದುಕೊಂಡಿದ್ದು, 2004ರಲ್ಲಿ ಮಂತ್ರಿ ಮಾಡಿದ್ದು ಯಾವ ಪಕ್ಷ?

ಕಾಂಗ್ರೆಸ್್ನ ಅನೈತಿಕ ಹಾಗೂ ಪ್ರಜಾತಂತ್ರ ವಿರೋಧಿ ಕೆಲಸಗಳು ಅಷ್ಟಕ್ಕೇ ನಿಲ್ಲಲಿಲ್ಲ!

ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ಸ್ಪೀಕರ್ ಬೋಪಯ್ಯ ಸೇರಿ ಪಿತೂರಿ ಮಾಡಿದ್ದಾರೆ ಎಂದು ಕಾಂಗ್ರೆಸ್ ಹಾಗೂ ರಾಜ್ಯಪಾಲರು ಈಗ ಅರೋಪಿಸುವುದಾದರೆ ಇದೇ ಹಂಸರಾಜ್ ಭಾರದ್ವಾಜ್ ಕಾನೂನು ಮಂತ್ರಿಯಾಗಿದ್ದ ಯುಪಿಎ ಸರಕಾರ 2008ರಲ್ಲಿ ಮಾಡಿದ್ದೇನು? ಅಮೆರಿಕದ ಜತೆಗಿನ ನಾಗರಿಕ ಅಣು ಸಹಕಾರ ಒಪ್ಪಂದವನ್ನು ವಿರೋಧಿಸಿ 2008, ಜುಲೈ 8ರಂದು ಎಡಪಕ್ಷಗಳು ಕೇಂದ್ರದ ಕಾಂಗ್ರೆಸ್ ಸರಕಾರಕ್ಕೆ ನೀಡಿದ್ದ ಬೆಂಬಲ ವಾಪಸ್ ಪಡೆದವು. 2008, ಜುಲೈ 22ರಂದು ಯುಪಿಎ ಮೊದಲ ಅವಿಶ್ವಾಸ ಗೊತ್ತುವಳಿ ಎದುರಿಸಿತು. 59 ಸಂಸದರನ್ನು ಹೊಂದಿದ್ದ ಎಡಪಕ್ಷಗಳ ಬೆಂಬಲ ವಾಪಸ್್ನಿಂದಾಗಿ ತೀರಾ ಅಲ್ಪಮತಕ್ಕಿಳಿದಿದ್ದ ಕಾಂಗ್ರೆಸ್, 256-275 ಅಂತರದ 19 ಮತಗಳ ವಿಜಯ ಸಾಧಿಸಿದ್ದು ಹೇಗೆ? ಅಂದು 21 ಸಂಸದರು ಅಡ್ಡಮತ ಹಾಕಿದರು. 10 ಜನರು ವೋಟೇ ಹಾಕಲಿಲ್ಲ. ಅಂದು ಕಾಂಗ್ರೆಸ್ ಸರಕಾರ ಉಳಿಸಿಕೊಂಡಿದ್ದು ಅಡ್ಡ ಮಾರ್ಗದ ಮೂಲಕವೇ ಅಲ್ಲವೇ? ಬಿಜೆಪಿ ಸಂಸದರಾದ ಅಶೋಕ್ ಅರ್ಗಲ್, ಫಗನ್ ಸಿಂಗ್ ಕುಲಸ್ತೆ, ಮಹಾವೀರ್ ಭಾಗೋರಾ ಕಾಂಗ್ರೆಸ್ ಪರ ವೋಟು ಹಾಕಿದರೆ, ಕರ್ನಾಟಕದಿಂದ ಆಯ್ಕೆಯಾಗಿದ್ದ ಬಿಜೆಪಿ ಸಂಸದರಾದ ಸಾಂಗ್ಲಿಯಾನಾ ಹಾಗೂ ಮನೋರಮಾ ಮಧ್ವರಾಜ್ ಗೈರುಹಾಜರಾದರು. ಅವತ್ತು ಈ ಐವರು ಬಿಜೆಪಿ ಸಂಸದರನ್ನು ಕಾಂಗ್ರೆಸ್ ಖರೀದಿ ಮಾಡಿರಲಿಲ್ಲವೆ? ನಾನು ದುಡ್ಡು ತೆಗೆದುಕೊಂಡಿಲ್ಲ, ಅದರೆ ನನಗೆ ರಾಜ್ಯಪಾಲರ ಹುದ್ದೆ ನೀಡುತ್ತೇನೆಂದು ಸೋನಿಯಾ ಗಾಂಧಿಯವರು ಭರವಸೆ ನೀಡಿದ್ದರು ಎಂದು ಸ್ವತಃ ಮನೋರಮಾ ಮಧ್ವರಾಜ್ ಅವರೇ ಇತ್ತೀಚೆಗೆ ಹೇಳಿದ್ದಾರೆ. ಈ ರೀತಿಯ ಆಮಿಷ, ಅನ್ಯಪಕ್ಷಗಳ ಸಂಸದರ ಖರೀದಿ ಪ್ರಜಾತಂತ್ರ ವಿರೋಧಿ ಕೆಲಸವಾಗಿರಲಿಲ್ಲವೆ? ಇತ್ತೀಚೆಗಷ್ಟೇ ‘ದಿ ಹಿಂದು’ ಪತ್ರಿಕೆ ಹೊರಹಾಕಿದ ವಿಕಿಲೀಕ್ಸ್್ನಲ್ಲಿ ಇದನ್ನೆಲ್ಲ ಬಯಲು ಮಾಡಲಾಗಿದೆ. ಸಂಸದರ ಖರೀದಿಗಾಗಿ ಯುಪಿಎ ಅಮೆರಿಕದಿಂದ ಹಣ ಪಡೆದುಕೊಂಡಿರುವುದು ಬೆಳಕಿಗೆ ಬಂದಿದೆ.

ಇಂತಹ ಗಂಭೀರ ಅರೋಪಗಳು ಕೇಳಿಬಂದಾಗ ಪ್ರಧಾನಿ ಮನಮೋಹನ್ ಸಿಂಗ್ ಹೇಳಿದ್ದೇನು ಗೊತ್ತೆ?

‘ಈ ರೀತಿಯ ಅರೋಪಗಳಿಗೆ ಜನ ಯಾವ ರೀತಿ ಉತ್ತರ ಕೊಟ್ಟರು? ಮುಖ್ಯ ವಿರೋಧ ಪಕ್ಷ(ಬಿಜೆಪಿ) 14ನೇ ಲೋಕಸಭೆಯಲ್ಲಿ 138 ಸ್ಥಾನ ಹೊಂದಿತ್ತು. 15ನೇ ಲೋಕಸಭೆಯಲ್ಲಿ 116ಕ್ಕಿಳಿದಿದೆ. ಎಡಪಕ್ಷಗಳ ಬಲಾಬಲ 59ರಿಂದ ಕೇವಲ 24ಕ್ಕಿಳಿದಿದೆ. ಕಾಂಗ್ರೆಸ್ ಪಕ್ಷ ಮಾತ್ರ 145ರಿಂದ 206ಕ್ಕೆ ಏರಿಸಿಕೊಂಡಿದೆ. 61 ಸೀಟುಗಳ ಹೆಚ್ಚಳ. ಜನರ ತೀರ್ಪೇ ಅಂತಿಮ’ ಎಂದು ಬಿಟ್ಟರು.

ಅದೇ ಅಳತೆಗೋಲನ್ನು ಕರ್ನಾಟಕಕ್ಕೂ ಅನ್ವಯಿಸಿದರೆ?

ಮೊನ್ನೆಯಷ್ಟೇ ನಡೆದ ಉಪಚುನಾವಣೆಯಲ್ಲಿ ಮೂರಕ್ಕೆ ಮೂರೂ ಸ್ಥಾನಗಳನ್ನು ಬಿಜೆಪಿ ಪಡೆದುಕೊಂಡಿದೆ. ಆಪರೇಶನ್ ಕಮಲ ಹಾಗೂ ಭ್ರಷ್ಟಾಚಾರ ಆರೋಪಕ್ಕೆ ಜನ ನೀಡಿದ ತೀರ್ಪೇ ಈ ಫಲಿತಾಂಶ ಎಂದು ಬಿಜೆಪಿ ಕೂಡ ವಾದ ಮಾಡಬಹುದಲ್ಲವೆ?

ಕರ್ನಾಟಕದ ಬಿಜೆಪಿ ಸರಕಾರ ಈ ರಾಜ್ಯ ಕಂಡ ಅತ್ಯಂತ ಭ್ರಷ್ಟ ಸರಕಾರ, ಯಡಿಯೂರಪ್ಪನವರಷ್ಟು ಭ್ರಷ್ಟ ಮುಖ್ಯಮಂತ್ರಿಯನ್ನು ಈ ರಾಜ್ಯ ಕಂಡಿರಲಿಲ್ಲ, ವರ್ಷಕ್ಕೆ 5 ಲಕ್ಷ ಆಶ್ರಯ ಮನೆ ಕಟ್ಟುತ್ತೇವೆ, ಬಡವರನ್ನು ಉದ್ಧಾರ ಮಾಡುತ್ತೇವೆ ಎಂದೆಲ್ಲ ಹೇಳಿದ್ದ ಬಿಜೆಪಿ ಮೋಸವೆಸಗಿದೆ, ಉತ್ತರ ಕರ್ನಾಟಕದ ನೆರೆಸಂತ್ರಸ್ತರು ಬಿಸಿಲ ಬೇಗೆಯಲ್ಲಿ ಶೀಟಿನ ಸೂರಿನಡಿ ಬದುಕು ನೂಕುವಂತೆ ಮಾಡಿದೆ, ರಸ್ತೆಗಳನ್ನೇ ತಿಂದುಹಾಕಿದೆ, ಈ ರಾಜ್ಯ ತಲೆತಗ್ಗಿಸುವಂಥ ಕೆಲಸ ಮಾಡುತ್ತಿದೆ, ಈ ಸಿಎಂ ತೊಲಗಬೇಕು ಎಂಬುದರಲ್ಲಿ ಯಾವ ಸಂಶಯವೂ ಬೇಡ. ಹಾಗಂತ ಸರಕಾರವನ್ನು ಪತನಗೊಳಿಸಲು ಹಂಸರಾಜ ಹಿಡಿದಿರುವ ಮಾರ್ಗ ಮಾತ್ರ ಯಡಿಯೂರಪ್ಪನವರ ಭ್ರಷ್ಟಾಚಾರದಷ್ಟೇ ಅನೈತಿಕ. ಒಂದು ವೇಳೆ, ಭ್ರಷ್ಟಾಚಾರ, ಭೂಹಗರಣ, ವಿಶ್ವಾಸಮತ ಯಾಚಿಸುವ ಸಂದರ್ಭದಲ್ಲಿ ಕಾನೂನು ಉಲ್ಲಂಘನೆ ಮುಂತಾದುವುಗಳನ್ನಿಟ್ಟುಕೊಂಡು ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಸ್ಪೀಕರ್ ಬೋಪಯ್ಯ ರಾಜೀನಾಮೆ ನೀಡಬೇಕು ಎಂದಾದರೆ ಮನಮೋಹನ್ ಸಿಂಗ್ ಹಾಗೂ ಕೇಂದ್ರದ ಕಾಂಗ್ರೆಸ್ ಸರಕಾರ ಮೊದಲು ತೊಲಗಬೇಕು. ಈ ರಾಷ್ಟ್ರಕ್ಕೆ 1.76 ಲಕ್ಷ ಕೋಟಿ ಮೋಸ ಮಾಡಿರುವ 2ಜಿ ಹಗರಣ, ಯೆಸ್ ಬ್ಯಾಂಕ್ ಹಗರಣ, ಈ ರಾಷ್ಟ್ರ ವಿಶ್ವದ ಮುಂದೆ ತಲೆತಗ್ಗಿಸುವಂತೆ ಮಾಡಿದ 75 ಸಾವಿರ ಕೋಟಿ ರು.ಗಳ ಕಾಮನ್ವೆಲ್ತ್ ಹಗರಣ, ವಿಕಿಲೀಕ್ಸ್ ಹೊರಹಾಕಿದ 2008ರಲ್ಲಿ ನಡೆದ ಸಂಸದರ ಖರೀದಿ ಹಗರಣ… ಇವಿಷ್ಟೇ ಸಾಕಿದ್ದವು ಕೇಂದ್ರ ಸರಕಾರವನ್ನು ಕಿತ್ತೊಗೆಯಲು ಅಥವಾ ನೈತಿಕತೆ ಇರುವವರಿಗೆ ರಾಜೀನಾಮೆ ನೀಡಲು. ಇಷ್ಟಾಗಿಯೂ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅವರು ಎಂದಾದರೂ ಭಾರದ್ವಾಜ್ ಅವರಂತೆ ವರ್ತಿಸಿದರೆ? ಪ್ರಧಾನಿ ಮನಮೋಹನ ಸಿಂಗ್ ನೈತಿಕ ಹೊಣೆ ಹೊತ್ತು ರಾಜಿನಾಮೆ ನೀಡಲು ಮುಂದಾದರೆ?

ಅಲ್ಲ, ಭ್ರಷ್ಟಾಚಾರದ ಬಗ್ಗೆ ಇಷ್ಟೆಲ್ಲ ಮಾತನಾಡುವ ರಾಜ್ಯ ಕಾಂಗ್ರೆಸ್ ಎಂತಹ ಹಿನ್ನೆಲೆ ಹೊಂದಿದೆ?

ಕರ್ನಾಟಕ, ಮಹಾರಾಷ್ಟ್ರ ಮತ್ತು ರಾಜಸ್ಥಾನಗಳಲ್ಲಿ ಬೇರು ಬಿಟ್ಟಿದ್ದ 56 ಸಾವಿರ ಕೋಟಿ ರೂ.ಗಳ ಸ್ಟ್ಯಾಂಪ್ ಪೇಪರ್ ಹಗರಣದ ರೂವಾರಿಗಳು ಯಾರು? ಆ ಕಾಲಕ್ಕೆ ಇಂಥದ್ದೊಂದು ಕಂಡು ಕೇಳರಿಯದ ಭಾರೀ ಹಗರಣ ನಡೆದಿದ್ದು ಕಾಂಗ್ರೆಸ್ ರಾಜ್ಯ ಸರಕಾರಗಳ ಅವಧಿಯಲ್ಲೇ ಅಲ್ಲವೆ? ಇಂತಹ ಪಕ್ಷದಿಂದ ಬಂದಿರುವ ಹಾಗೂ ‘ನನ್ನ ಕಾಂಗ್ರೆಸ್ ಹಿನ್ನೆಲೆ ಬಗ್ಗೆ ನನಗೆ ಹೆಮ್ಮೆಯಿದೆ’ ಎಂದು ಹೇಳಿಕೊಳ್ಳುವ ಭಾರದ್ವಾಜ್ ಅವರಿಗೆ ಪ್ರಜಾತಂತ್ರ ಹಾಗೂ ನೈತಿಕತೆ ಬಗ್ಗೆ ಮಾತನಾಡುವ ಕನಿಷ್ಠ ಅರ್ಹತೆಯಾದರೂ ಇದೆಯೇ, ನೀವೇ ಹೇಳಿ? ರಾಜ್ಯಪಾಲರಾದ ಮೇಲೂ ಪಕ್ಷದ ಏಜೆಂಟರಂತೆ ವರ್ತಿಸುವುದು ಎಷ್ಟು ಸರಿ? ರಾಜ್ಯಪಾಲರ ವರ್ತನೆಗೂ ವಿರೋಧ ಪಕ್ಷಕಾಂಗ್ರೆಸ್ ಅನುಸರಿಸುತ್ತಿರುವ ಧೋರಣೆಗೂ ಯಾವ ವ್ಯತ್ಯಾಸ ಕಾಣುತ್ತಿದೆ? ಸಂವಿಧಾನದ 355, 356ನೇ ವಿಧಿಗಳ ಬಗ್ಗೆ ಹೇಳುತ್ತಾ, ‘Such articles will never be called into operation and that they would remain a dead letter’ಎಂದಿದ್ದರು ಸಂವಿಧಾನ ಶಿಲ್ಪಿ ಅಂಬೇಡ್ಕರ್. ಆದರೆ ಹಂಸರಾಜ ಭಾರದ್ವಾಜ್ ನಡೆದುಕೊಳ್ಳುತ್ತಿರುವ ರೀತಿ ಹೇಗಿದೆ?

ಬಹಳ ಬೇಸರದ ವಿಚಾರವೆಂದರೆ ನಮ್ಮ ರಾಜ್ಯಕ್ಕೆ ಏಕಿಂಥ ಗತಿ ಬಂತು? ಭವ್ಯ ಇತಿಹಾಸ, ಸಾಂಸ್ಕೃತಿಕ ಹಾಗೂ ಸಾಹಿತ್ಯಿಕ ಪರಂಪರೆ ಹೊಂದಿರುವ, ಜಗತ್ತಿನ ಅಗ್ರಮಾನ್ಯ ಎಂಜಿನಿಯರ್್ಗಳಲ್ಲಿ ಒಬ್ಬರಾದ ವಿಶ್ವೇಶ್ವರಯ್ಯನವರಿಗೆ ಜನ್ಮ ನೀಡಿದ, ಐಟಿಗೆ ನೀಡಿದ ಆಧ್ಯತೆಯಿಂದಾಗಿ ವಿಶ್ವಮನ್ನಣೆ ಗಳಿಸಿದ ರಾಜ್ಯ ಈಗ ಯಾವ ಕಾರಣಗಳಿಗಾಗಿ ಸುದ್ದಿ ಮಾಡುತ್ತಿದೆ? ಒಂದೆಡೆ ವಿಕ್ಷಿಪ್ತ ಮನಸ್ಥಿತಿಯ ರಾಜ್ಯಪಾಲ, ಮತ್ತೊಂದೆಡೆ ಈ ದೇಶದ ಬಗ್ಗೆ ಪ್ರೀತಿ, ಅಭಿಮಾನ ಹೊಂದಿರುವವರೇ ಪ್ರಮುಖ ಮತದಾರರಾಗಿರುವ ಬಿಜೆಪಿ ಬೆಂಬಲಿಗರನ್ನು ತಲೆತಗ್ಗಿಸುವಂತೆ ಮಾಡಿರುವ ಮಹಾಭ್ರಷ್ಟ ಮುಖ್ಯಮಂತ್ರಿ. ಕಳೆದ 3 ವರ್ಷಗಳಿಂದ ಮುಖ್ಯಮಂತ್ರಿಯವರ ಭ್ರಷ್ಟ, ಅನೈತಿಕ ಕೆಲಸಗಳನ್ನು ಸಮರ್ಥಿಸಿಕೊಳ್ಳುವುದರಲ್ಲೇ ಸರಕಾರ ತನ್ನ ಕಾಲವನ್ನೆಲ್ಲ ಹರಣ ಮಾಡುವಂತೆ ಮಾಡಿರುವ ಯಡಿಯೂರಪ್ಪ ಹಾಗೂ ನಕ್ಷತ್ರಿಕನಂತೆ ಕಾಡುತ್ತಿರುವ ರಾಜ್ಯಪಾಲ ಇವರಿಬ್ಬರೂ ನಿಜಕ್ಕೂ ನಮ್ಮ ರಾಜ್ಯದ ಪಾಲಿಗೆ ದೊಡ್ಡ ಶಾಪ.

ಇವರಿಬ್ಬರೂ ಮೊದಲು ತೊಲಗಬೇಕು.

ಕೃಪೆ: ಪ್ರತಾಪ ಸಿಂಹ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ