ನನ್ನ ಬ್ಲಾಗ್ ಪಟ್ಟಿ

ಶನಿವಾರ, ಮೇ 28, 2011

ಅವರು, ಹಾಲಿನೊಳಗೆ ಸಕ್ಕರೆ ಬೆರೆತಂತೆ ನಮ್ಮೊಳಗೆ ಒಂದಾದವರು!

ಆ ಘಟನೆ ನಡೆದು ೧೨೦೦ ವರ್ಷಗಳೇ ಕಳೆದು ಹೋದವು.

ಅದು ಎಂಟನೆಯ ಶತಮಾನ. ಮುಸಲ್ಮಾನರು ಖಡ್ಗ ಹಿಡಿದು ಮತಪ್ರಚಾರಕ್ಕೆ ಹೊರಟಿದ್ದರು. ಅವರ ಧಾರ್ಮಿಕ ದಬ್ಬಾಳಿಕೆಯನ್ನು ಸಹಿಸಲು ಸಾಧ್ಯವೇ ಇಲ್ಲದಂತಾ ಯಿತು. ಹಾಗಂತ ಎದುರಿಸುವ ಸ್ಥಿತಿಯಲ್ಲೂ ಇರಲಿಲ್ಲ. ಪಾರ್ಸಿಗಳು ದೇಶವನ್ನೇ ಬಿಟ್ಟು ಹೊರಟರು. ಹಾಗೆ ತಮ್ಮ ಮೂಲಸ್ಥಾನವಾದ ಪರ್ಷಿಯಾವನ್ನು(ಈಗಿನ ಇರಾನ್) ಬಿಟ್ಟು ಹೊರಟ ಒಂದಿಷ್ಟು ಪಾರ್ಸಿಗಳು ಬಂದು ತಲುಪಿದ್ದು ನಮ್ಮ ಗುಜರಾತ್ ಬಳಿ ಇರುವ ‘ದಿಯು’ ದ್ವೀಪವನ್ನು. ಅಲ್ಲಿಂದ ಸಂಜನ್‌ಗೆ ಆಗಮಿಸಿದರು. ಅದು ಗುಜರಾತ್‌ನ ರಾಜನಾಗಿದ್ದ ಜಾಧವ್ ರಾಣಾನ ಆಳ್ವಿಕೆಗೆ ಒಳಪಟ್ಟಿತ್ತು. ಹಾಗಾಗಿ ಪಾರ್ಸಿಗಳು ರಾಜನ ಬಳಿಗೆ ಬಂದು ಆಶ್ರಯ ನೀಡುವಂತೆ ಬೇಡಿಕೊಂಡರು. ಆದರೆ ರಾಜ ಕಂಠಪೂರ್ತಿ ಹಾಲು ತುಂಬಿರುವ ತಂಬಿಗೆಯನ್ನು ತೋರಿಸುತ್ತಾನೆ. ಅಂದರೆ ನಮ್ಮ ದೇಶದಲ್ಲೇ ಸಾಕಷ್ಟು ಜನರಿದ್ದಾರೆ, ನಿಮಗೆಲ್ಲಿಂದ ಜಾಗ ಕೊಡುವುದು? ಎಂಬುದು ರಾಜನ ಸನ್ನೆಯ ಸಂಕೇತವಾಗಿತ್ತು. ಅದನ್ನು ಅರ್ಥಮಾಡಿಕೊಂಡ ಪಾರ್ಸಿ ಅರ್ಚಕರೊಬ್ಬರು ಬಳಿಯಲ್ಲೇ ಇದ್ದ ಬಟ್ಟಲಿನಿಂದ ಒಂದು ಚಮಚ ಸಕ್ಕರೆಯನ್ನು ತೆಗೆದು ತಂಬಿಗೆಗೆ ಹಾಕಿದರು. ಆದರೆ ತಂಬಿಗೆ ಮೊದಲೇ ತುಂಬಿದ್ದರೂ ಹಾಲು ಹೊರಚೆಲ್ಲಲಿಲ್ಲ, ಬೆರೆತು ಒಂದಾಯಿತು!! ಅಂದರೆ ಈ ದೇಶದ ಮುಖ್ಯವಾಹಿನಿಗೆ ತಾವೂ ಸೇರಿಕೊಳ್ಳುವುದಾಗಿ, ಜನಮಾನಸದೊಳಗೆ ತಾವೂ ಒಂದಾಗುವುದಾಗಿ, ಸಂಸ್ಕೃತಿಯೊಂದಿಗೆ ತಾವೂ ಬೆರೆಯುವುದಾಗಿ ಪಾರ್ಸಿಗಳು ಮಾಡಿದ ವಾಗ್ದಾನದ ಸಾಂಕೇತಿಕ ಸೂಚನೆ ಅದಾಗಿತ್ತು. ಈ ಘಟನೆ ನಡೆದು ೧೨ ಶತಮಾನಗಳು ಕಳೆದರೂ ನಾವೇ ಪ್ರತ್ಯೇಕ, ನಮಗೊಂದಿಷ್ಟು extra space ಕೊಡಿ, ಇಲ್ಲವೇ ಪ್ರತ್ಯೇಕ ಭಾಗ ಕೊಡಿ ಎಂದು ಪಾರ್ಸಿಗಳೆಂದೂ ಕೇಳಿದವರಲ್ಲ.

ಅವರು ಹಾಲಿನೊಳಗೆ ಸಕ್ಕರೆ ಬೆರೆತಂತೆ ನಮ್ಮೊಂದಿಗೆ ಬೆರೆತಿರುವುದು ಮಾತ್ರವಲ್ಲ ದೇಶಕ್ಕೆ ಸಿಹಿಯುಣಿಸುತ್ತಿದ್ದಾರೆ. ಅಷ್ಟೇ ಅಲ್ಲ, ದೇಶದ ಮಾನ ಕಾಪಾಡುವಂತಹ ವೀರಪುತ್ರರನ್ನೂ ಪಾರ್ಸಿ ಸಮುದಾಯ ನಮಗೆ ನೀಡಿದೆ!
೧೯೩೯ರಲ್ಲಿ ಎರಡನೇ ಮಹಾಯುದ್ಧ ಪ್ರಾರಂಭವಾಗಿತ್ತು. ಇತ್ತ ಸ್ವಾತಂತ್ರ್ಯದ ಆಮಿಷ ತೋರಿದ ಬ್ರಿಟಿಷರು ಭಾರತೀಯರನ್ನೂ ಸಮರದಲ್ಲಿ ತೊಡಗಿಸಿಕೊಂಡಿದ್ದರು. ಬರ್ಮಾ ಮೂಲಕ ಭಾರತದ ಮೇಲೆ ದಂಡೆತ್ತಿ ಬಂದ ಜಪಾನಿ ಸೇನೆಯ ವಿರುದ್ಧ ಬ್ರಿಟಿಷ್ ಸೇನೆಯಲ್ಲಿದ್ದ ಭಾರ ತೀಯ ಸೈನಿಕರೂ ಕಾದಾಟಕ್ಕಿಳಿದಿದ್ದರು. ಅದು ೧೯೪೨ನೇ ಇಸವಿ. ಭಾರತೀಯ ಯೋಧನೊಬ್ಬ ಯುದ್ಧದಲ್ಲಿ ತೀವ್ರವಾಗಿ ಗಾಯಗೊಂಡಿದ್ದ. ಆತನ ಶ್ವಾಸನಾಳ, ಲಿವರ್, ಕಿಡ್ನಿಗೆ ಒಂಬತ್ತು ಗುಂಡುಗಳು ಹೊಕ್ಕಿದ್ದವು. ಅರೆಜೀವವಾಗಿದ್ದ ಆತನಿಗೆ ಶಸ್ತ್ರಚಿಕಿತ್ಸೆ ಮಾಡಿದರೂ ಲಾಭವಿಲ್ಲ, ಆತ ಉಳಿಯುವುದಿಲ್ಲ ಎಂದನಿಸಿತು. ಹಾಗಂತ ಸುಮ್ಮನಿರಲಾದೀತೆ? ಪ್ರಾಣಹೋಗುವವರೆಗಾದರೂ ಕಾಯಬೇಕಲ್ಲಾ? ಹಾಗಾಗಿ ಶಸ್ತ್ರಚಿಕಿತ್ಸೆ ನಡೆಸುವ ಬದಲು ಬಾಯುಪಚಾರಕ್ಕೆ “ನಿನಗೇನಾಯಿತು?” ಎಂದು ಕೇಳಿದರು ಮಿಲಿಟರಿ ವೈದ್ಯರೊಬ್ಬರು. ‘Oh, a donkey kicked‘ ಎಂಬ ಉತ್ತರ ಬಂತು ಆ ಸೈನಿಕನ ಬಾಯಿಂದ !!

ಒಂದೇ ಕ್ಷಣಕ್ಕೆ ವೈದ್ಯ ನಿಬ್ಬೆರಗಾಗಿ ಹೋದ.

ಕಂಟಕ ಎದುರಾಗಿರುವ ಕ್ಷಣದಲ್ಲೂ ಅಂತಹ ಹಾಸ್ಯಪ್ರe ಹೊಂದಿದ್ದ ಆ ಸೈನಿಕನ ಮನೋಸ್ಥೈರ್ಯವನ್ನು ಕಂಡ ವೈದ್ಯನಿಗೆ, ಹೇಗಾದರೂ ಮಾಡಿ ಆತನನ್ನು ಉಳಿಸಿಕೊಳ್ಳ ಬೇಕೆನಿಸಿತು. ಅದೃಷ್ಟವಶಾತ್ ಚಿಕಿತ್ಸೆ ಫಲಿಸಿ ಸೈನಿಕನ ಜೀವ ಉಳಿಯಿತು. ಅಷ್ಟೇ ಅಲ್ಲ, ಎರಡನೇ ಮಹಾಯುದ್ಧ, ೧೯೪೭ರ ಪಾಕ್ ದಾಳಿ, ೧೯೬೨ರ ಚೀನಾ ಆಕ್ರಮಣ, ೧೯೬೫, ೧೯೭೧ರ ಪಾಕ್ ಯುದ್ಧಗಳಲ್ಲಿ ರಣರಂಗದಲ್ಲಿ ನಿಂತು ಹೋರಾಡಿದ ಆ ಸೈನಿಕ ನಮ್ಮ ಸೇನೆಯ ೯ನೇ ಜನರಲ್ ಆದ. ೧೯೭೧ರ ಯುದ್ಧದಲ್ಲಿ ಪಾಕಿಸ್ತಾನವನ್ನು ಸದೆಬಡಿದ ಭಾರತದ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದೂ ಆತನೇ. ಆ ಸೈನಿಕ ಮತ್ತಾರೂ ಅಲ್ಲ, ಕಳೆದ ಶುಕ್ರವಾರ ನಮ್ಮನ್ನಗಲಿದ ೯೪ ವರ್ಷದ ಸ್ಯಾಮ್ ಹರ್ಮುಸ್ಜಿ ಫ್ರೇಮ್ಜ್ ಜೆಮ್ಷೆಡ್ಜಿ ಮಾಣಿಕ್‌ಷಾ! ಅವರೊಬ್ಬರೇ ಅಲ್ಲ, ಅಡ್ಮಿರಲ್ ಜಲ್ ಕರ್ಟ್‌ಝಿ, ಏರ್ ಮಾರ್ಷಲ್ ಆಸ್ಪಿ ಮೆರ್ವನ್ ಎಂಜಿನಿಯರ್ ಕೂಡ ಪಾರ್ಸಿಗಳೇ. ಆಶ್ರಯ ನೀಡಿದ ನಾಡಿನ ರಕ್ಷಣೆಗಾಗಿ ಪಾರ್ಸಿ ಸಮುದಾಯ ರಕ್ತವನ್ನೂ ಚೆಲ್ಲಿದೆ. ಆದರೆ ಅವರ ಕೊಡುಗೆ ಯಾವುದೋ ಒಂದು ಕ್ಷೇತ್ರಕ್ಕೆ ಸೀಮಿತವಾದುದಲ್ಲ. ಅಷ್ಟಕ್ಕೂ ‘In numbers Parsis are beneath contempt, but in contribution, beyond compare‘ ಅಂತ ಗಾಂಧೀಜಿ ಸುಖಾಸುಮ್ಮನೆ ಹೇಳಿದ್ದಲ್ಲ. ಪಾರ್ಸಿಗಳು ಕೈಹಾಕದ ಕ್ಷೇತ್ರವೇ ಇಲ್ಲ, ನೀಡದ ಕೊಡುಗೆಯೂ ಇಲ್ಲ. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಮೂಲಸ್ಥಾಪಕರಲ್ಲಿ ಒಬ್ಬರಾದ ದಾದಾಭಾಯಿ ನವರೋಜಿ ಕೂಡ ಒಬ್ಬ ಪಾರ್ಸಿ. “Poverty and Un-British Rule in India” ಎಂಬ ಪುಸ್ತಕ ಬರೆದು ಭಾರತದ ಸಂಪನ್ಮೂಲಗಳನ್ನು ಹೇಗೆ ಬ್ರಿಟಿಷರು ದೋಚಿಕೊಂಡು ಹೋಗುತ್ತಿದ್ದಾರೆ, ಅದರಿಂದ ಭಾರತ ಹೇಗೆ ಬಡವಾಗುತ್ತಿದೆ ಎಂಬುದನ್ನು ಜಗತ್ತಿಗೆ ಮನವರಿಕೆ ಮಾಡಿಕೊಟ್ಟಿದ್ದೇ ನವರೋಜಿ. ಅಷ್ಟೇ ಅಲ್ಲ, ಒಂದೆಡೆ ದಾದಾಭಾಯಿ ನವರೋಜಿ, ಭಿಕಜಿ ಕಾಮಾ, ಫಿರೋಝ್‌ಶಾ ಮೆಹ್ತಾ ಮುಂತಾದ ಪಾರ್ಸಿಗಳು ಸ್ವಾತಂತ್ರ್ಯ ಚಳವಳಿಗೆ ಧುಮುಕುವ ಮೂಲಕ ದೇಶವನ್ನು ದಾಸ್ಯದಿಂದ ಮುಕ್ತಿಗೊಳಿಸುವ ಸಲುವಾಗಿ ಹೋರಾಡುತ್ತಿದ್ದರೆ ಇನ್ನೊಂದೆಡೆ ಜೆ.ಎನ್. ಟಾಟಾ ರೂಪದಲ್ಲಿ ಮತ್ತೊಬ್ಬ ಪಾರ್ಸಿ ಬ್ರಿಟಿಷರ ವಿರುದ್ಧ ಇನ್ನೊಂದು ಬಗೆಯ ಹೋರಾಟಕ್ಕೆ ಸಿದ್ಧತೆ ನಡೆಸುತ್ತಿದ್ದರು. ಜಾಗತೀಕರಣದ ಯುಗವಾದ ಇಂದು ನಾವು ಮಾರುಕಟ್ಟೆ ವಸಾಹತುಶಾಹಿತ್ವದ ಬಗ್ಗೆ ಮಾತನಾಡುತ್ತಿದ್ದೇವೆ. ಆದರೆ ಅಂದು ಬ್ರಿಟಿಷರು ನಮ್ಮ ಭೂಭಾಗಗಳನ್ನು ಮಾತ್ರ ಆಕ್ರಮಿಸಿರಲಿಲ್ಲ, ೧೫೦ ವರ್ಷಗಳ ಹಿಂದೆಯೇ ನಮ್ಮ ಮಾರುಕಟ್ಟೆಗಳನ್ನೂ ಕಬಳಿಸಲು ಯತ್ನಿಸುತ್ತಿದ್ದರು. ತಮ್ಮ ಉಡುಪುಗಳಿಗೆ ಭಾರತವನ್ನು ಪ್ರಮುಖ ಮಾರುಕಟ್ಟೆಯನ್ನಾಗಿ ಮಾಡಿಕೊಳ್ಳಲು ಮುಂದಾಗಿದ್ದ ಬ್ರಿಟಿಷರಿಗೆ ನಮ್ಮ ಸ್ಥಳೀಯ ಜವಳಿ ಉದ್ಯಮ ದೊಡ್ಡ ಅಡಚಣೆಯಾಗಿತ್ತು. ಹಾಗಾಗಿ ನೇಕಾರರನ್ನು ಮಟ್ಟಹಾಕಿದ ಬ್ರಿಟಿಷರು, ಗುಡಿ ಕೈಗಾರಿಕೆಯನ್ನೇ ಹಾಳುಗೆಡವಿದ್ದರು. ಅಲ್ಲದೆ ಬ್ರಿಟಿಷರ ಯಂತ್ರನಿರ್ಮಿತ ಜವಳಿಗೆ ಸ್ಪರ್ಧೆ ನೀಡುವ ತಾಕತ್ತು ನಮ್ಮ ಜವಳಿ ಉದ್ಯಮಕ್ಕಿರಲಿಲ್ಲ. ಅಂತಹ ಸಂದರ್ಭದಲ್ಲಿ ಬ್ರಿಟನ್‌ನ ಮ್ಯಾಂಚೆಸ್ಟರ್ ಹಾಗೂ ಅಮೆರಿಕಕ್ಕೆ ಭೇಟಿ ನೀಡಿದ ಜೆ.ಎನ್. ಟಾಟಾ ಜವಳಿ ಮಷೀನ್‌ಗಳನ್ನು ಖರೀದಿ ಮಾಡಿಕೊಂಡು ಬಂದು ಬಾಂಬೆಯಲ್ಲಿ ‘ಎಂಪ್ರೆಸ್ ಮಿಲ್’ ಆರಂಭಿಸಿದರು. ನಮ್ಮ ದೇಶದಲ್ಲೇ ವಿಶ್ವದರ್ಜೆಯ ಬಟ್ಟೆ ಉತ್ಪಾದನೆ ಆರಂಭಿಸಿದರು. ಅವರು ಸ್ವದೇಶಿ ಬಗ್ಗೆ ಭಾಷಣ ಮಾಡಲಿಲ್ಲ, ಕೃತಿಯಲ್ಲಿ ತೋರಿದರು. ಇವತ್ತು ಅರವಿಂದ್ ಹಾಗೂ ಜೆಸಿಟಿ ಎಂಬ ಎರಡು ಮಿಲ್‌ಗಳೇ ದೇಶಕ್ಕಾಗಿ ಉಳಿಯುವಷ್ಟು ಜವಳಿ ಉತ್ಪಾದಿಸುತ್ತಿರಬಹುದು. ಆದರೆ ನಮ್ಮ ಜವಳಿ ಉದ್ಯಮಕ್ಕೆ ಕಾಯಕಲ್ಪ ನೀಡಿದ್ದು, ತಂತ್ರeನವನ್ನು ದೇಶಕ್ಕೆ ತಂದಿದ್ದು ಪಾರ್ಸಿಗಳು. ಒಂದು ಕಾಲಕ್ಕೆ ದೇಶದ ಮೆಚ್ಚುಗೆಗೆ ಪಾತ್ರವಾಗಿದ್ದ ‘ಬಾಂಬೆ ಡೈಯಿಂಗ್’ನ ಮಾಲೀಕರಾದ ವಾಡಿಯಾ ಕುಟುಂಬ ಕೂಡ ಪಾರ್ಸಿ ಸಮುದಾಯಕ್ಕೇ ಸೇರಿದ್ದಾಗಿದೆ. ಅವರು ೨೫೦ ವರ್ಷಗಳ ಹಿಂದೆಯೇ ಹಡಗು ನಿರ್ಮಾಣ ಕಾರ್ಯಕ್ಕೂ ಕೈಹಾಕಿದ್ದರು. ಇಂದು ದೇಶದ ಮುಂಚೂಣಿ ಸೋಪು ಉತ್ಪಾದಕರಾದ ‘ಗೋದ್ರೇಜ್ ಗ್ರೂಪ್’ ಸಹ ಪಾರ್ಸಿಗಳದ್ದೇ.

ಹಾಗಂತ ಪಾರ್ಸಿಗಳು ದುಡ್ಡು ಮಾಡುವುದಕ್ಕಷ್ಟೇ ತಮ್ಮನ್ನು ಸೀಮಿತಗೊಳಿಸಿಕೊಳ್ಳಲಿಲ್ಲ.

ಅಂದು ಬಟ್ಟೆ ಉತ್ಪಾದನೆ ಮಾಡುವ ಸಲುವಾಗಿ ಅಮೆರಿಕದಿಂದ ಮಷೀನ್‌ಗಳನ್ನು ಖರೀದಿ ಮಾಡಿಕೊಂಡು ಬರಲು ಹೊರಟ್ಟಿದ್ದ ಜೆ.ಎನ್. ಟಾಟಾ ಜಪಾನ್‌ನಲ್ಲಿ ಹಡಗು ಏರಿದಾಗ ವಿಶ್ವಧರ್ಮ ಸಮ್ಮೇಳನಕ್ಕೆ ಹೊರಟಿದ್ದ ವಿವೇಕಾನಂದರೂ ಅದೇ ಹಡಗಿನಲ್ಲಿದ್ದರು. ಅಲ್ಲಿ ಇಬ್ಬರೂ ಭೇಟಿಯಾದರು. ವಿವೇಕಾನಂದರ ಮಾತುಗಳು ಎಷ್ಟು ಪ್ರಭಾವ ಬೀರಿದವೆಂದರೆ ಉದ್ಯಮ ಕಟ್ಟಲು ಹೊರಟಿದ್ದ ಟಾಟಾ ಆಧ್ಯಾತ್ಮದತ್ತ ಒಲವು ತೋರತೊಡಗಿದರು. ಆದರೆ ನಿಮ್ಮಿಂದ ಬೇರೊಂದು ಕಾರ್ಯವಾಗಬೇಕಿದೆ. ವಿeನ ಕ್ಷೇತ್ರಕ್ಕೂ ನಿಮ್ಮ ಕೊಡುಗೆಯ ಅಗತ್ಯವಿದೆ ಎಂದರು ವಿವೇಕಾನಂದರು. ಇಂದು ಬೆಂಗಳೂರಿನಲ್ಲಿ ನಾವು ಕಾಣುತ್ತಿರುವ ಟಾಟಾ ಇನ್‌ಸ್ಟಿಟ್ಯೂಟ್ ಅಥವಾ ಐಐಎಸ್‌ಸಿ ವಿವೇಕಾನಂದರು ಹಾಗೂ ಜೆ.ಎನ್.ಟಾಟಾ ಭೇಟಿಯ ಫಲಶ್ರುತಿಯಾಗಿದೆ. ನಮ್ಮ ದೇಶದ ಮೊದಲ ತಲೆಮಾರಿನ ವಿeನಿಗಳು ರೂಪುಗೊಂಡಿದ್ದು, ಇಂದಿಗೂ ವಿeನಿಗಳು ರೂಪುಗೊಳ್ಳುತ್ತಿರುವುದೇ ಐಐಎಸ್‌ಸಿಯಲ್ಲಿ. ಅಷ್ಟೇ ಅಲ್ಲ, ಅನ್ನಕ್ಕೇ ಗತಿಯಿಲ್ಲದ ಕಾಲದಲ್ಲಿ, ದಾಸ್ಯದಿಂದಲೇ ಹೊರಬರದಿದ್ದ ಸಂದರ್ಭದಲ್ಲಿ ಅಣುಶಕ್ತಿ ಅಭಿವೃದ್ಧಿಯ ಕನಸು ಕಟ್ಟಿಕೊಟ್ಟ ಹೋಮಿ ಜೆಹಾಂಗಿರ್ ಭಾಭಾ ಕೊಡುಗೆ ಯೇನು ಸಾಮಾನ್ಯವೇ? ೧೯೪೪ರಲ್ಲಿಯೇ ಅಣುಶಕ್ತಿ ಅಭಿವೃದ್ಧಿಯ ಮಾತನಾಡಿದ ಭಾಭಾ, ಭಾರತದ ನಿಜವಾದ ಅಣುಶಕ್ತಿಯ ಜನಕ. ಹೋಮಿ ಭಾಭಾ ಹಾಗೂ ೧೯೭೪ರಲ್ಲಿ ದೇಶದ ಮೊದಲ ಅಣುಪರೀಕ್ಷೆಯಲ್ಲಿ ಪ್ರಮುಖ ಪಾತ್ರ ವಹಿಸಿದ ಹೋಮಿ ಸೇತ್ನಾ ಅವರಂತಹ ವಿeನಿಗಳನ್ನು ಹಾಗೂ ಅವರ ಸಹಾಯಕ್ಕೆ ನಿಂತ ಜೆ.ಆರ್.ಡಿ. ಟಾಟಾ ಅವರಂತಹ ದೇಶಪ್ರೇಮಿ ಉದ್ಯಮಿಗಳನ್ನು ಪಾರ್ಸಿ ಸಮುದಾಯ ನೀಡಿದ್ದರಿಂದಲೇ ಭಾರತ ಇಂದು ಅಣುಶಕ್ತಿ ಹೊಂದಿರುವ ರಾಷ್ಟ್ರವಾಗಿ ಹೊರಹೊಮ್ಮಿರುವುದು ಎಂಬು ದನ್ನು ಮರೆಯಬೇಡಿ.

ಇಂದು ದಾದಾ ಸಾಹೇಬ್ ಫಾಲ್ಕೆ ಎಂದರೆ ಎಲ್ಲರಿಗೂ ಗೊತ್ತಾಗುತ್ತದೆ. ಕನಿಷ್ಠ ಆ ಹೆಸರನ್ನಾದರೂ ಕೇಳಿದ್ದೇವೆ ಎನ್ನುತ್ತಾರೆ. ನಮ್ಮ ದೇಶದ ಮೊಟ್ಟಮೊದಲ ಮೂಕಿ ಚಿತ್ರ ‘ರಾಜಾ ಹರೀಶ್ಚಂದ್ರ’ವನ್ನು ರೂಪಿಸಿದ್ದು ಫಾಲ್ಕೆ. ಆದರೆ ಭಾರತೀಯ ಚಿತ್ರೋದ್ಯಮಕ್ಕೆ ಫಾಲ್ಕೆಗಿಂತ ದೊಡ್ಡ ಕೊಡುಗೆ ನೀಡಿದ್ದು ಪಾರ್ಸಿ ಸಮುದಾಯಕ್ಕೆ ಸೇರಿದ್ದ ಆರ್ದೇಶಿರ್ ಇರಾನಿ! ಭಾರತದ ಟಾಕಿ ಚಿತ್ರಗಳ ಪಿತಾಮಹ ಅವರೇ. ೧೯೩೧, ಮಾರ್ಚ್ ೧೪ರಂದು ಬಿಡುಗಡೆಯಾದ ‘ಆಲಂ ಆರಾ’ ಎಂಬ ಭಾರತದ ಮೊಟ್ಟಮೊದಲ ಟಾಕಿ ಚಿತ್ರವನ್ನು ತಯಾರಿಸಿದ್ದು ಆರ್ದೇಶಿರ್ ಇರಾನಿ. ಅಷ್ಟೇ ಅಲ್ಲ, ದೇಶದ ಮೊದಲ ಬಣ್ಣದ ಚಿತ್ರ ‘ಕಿಸಾನ್ ಕನ್ಯಾ’(೧೯೩೭)ವನ್ನು ರೂಪಿಸಿದ್ದೂ ಇರಾನಿಯವರೇ.

Good Thoughts, Good Words, Good Deeds.

ಈ ತತ್ತ್ವಗಳು ಪಾರ್ಸಿಗಳಿಗೆ ದಾರಿ ದೀವಿಗೆಯಾಗಿವೆ. ಹಾಗಾಗಿಯೇ ಸಂಖ್ಯೆಯಲ್ಲಿ ಕಡಿಮೆಯಿದ್ದರೂ ಸಮಾಜ ಸೇವೆಯಲ್ಲಿ ಎಲ್ಲರಿಗಿಂತ ಮುಂದಿದ್ದಾರೆ. ಇವತ್ತು ರಾಜ್ ಠಾಕ್ರೆಯಂತಹ ಕ್ಷುಲ್ಲಕ ಮನಸ್ಸುಗಳು ಮುಂಬೈ ನಮ್ಮದೆಂದು ಕೂಗು ಹಾಕುತ್ತಿರಬಹುದು. ಆದರೆ ಮುಂಬೈಗೆ ಉದ್ಯಮ ತಂದಿದ್ದು ಭಾರತೀಯ ಕೈಗಾರೀಕೋದ್ಯಮದ ‘ಗಾಡ್ ಫಾದರ್‍ಸ್’ ಎಂಬ ಖ್ಯಾತಿ ಪಡೆದಿರುವ ಜೆ.ಎನ್. ಟಾಟಾ ಮತ್ತು ಜೆ.ಆರ್.ಡಿ. ಟಾಟಾ. ವಾಡಿಯಾ ಮತ್ತು ಗೋದ್ರೇಜ್ ಕುಟುಂಬಗಳಂತಹ ಪಾರ್ಸಿಗಳು. ಇವತ್ತು ನಮ್ಮಲ್ಲಿ ಅಂಬಾನಿ, ಬಿಯಾನಿ, ಬಿಜ್ಲಿ, ಬಿರ್ಲಾಗಳಂತಹ ಕುಬೇರರಿರಬಹುದು. ಆದರೆ ಪಾರ್ಸಿಗಳಂತೆ ದೇಶ ಕಟ್ಟಿದವ ರನ್ನು ಕಾಣಲು ಕಷ್ಟವಾಗುತ್ತದೆ. ಕಾನೂನು ಕ್ಷೇತ್ರದಲ್ಲಿ ನಾನಿ ಪಾಲ್ಖೀವಾಲಾ, ಫಾಲಿ ನಾರಿಮನ್, ಸೋಲಿ ಸೊರಾಬ್ಜಿ ಯವರಂತಹ ದಿಗ್ಗಜರನ್ನು ಕಾಣಬಹುದಾಗಿದ್ದರೆ ಸಂಗೀತ ಕ್ಷೇತ್ರಕ್ಕೆ ಪಾರ್ಸಿಗಳು ನೀಡಿದ ಕೊಡುಗೆ ಜುಬಿನ್ ಮೆಹ್ತಾ ಮತ್ತು ಫ್ರೆಡ್ಡಿ ಮರ್ಕ್ಯುರಿ! ಮತ್ತೊಬ್ಬ ಪಾರ್ಸಿ ರುಸ್ಸಿ ಕರಂಜಿಯಾ ಅವರಂತೂ ರೂಢಿಗತ ಕಟ್ಟಳೆಗಳನ್ನು ಮುರಿದು ಭಾರತೀಯ ಪತ್ರಿಕೋದ್ಯಮಕ್ಕೆ ಹೊಸ ಆಯಾಮ ಕೊಟ್ಟ ವರು.
ಇಷ್ಟೆಲ್ಲಾ ಕೊಡುಗೆ ನೀಡಿರುವ ಪಾರ್ಸಿಗಳ ಸಂಖ್ಯೆಯೆಷ್ಟು ಗೊತ್ತಾ?

೨೦೦೧ರ ಜನಗಣತಿಯ ಪ್ರಕಾರ ಕೇವಲ ೭೦ ಸಾವಿರ! ೨೦೨೦ರ ವೇಳೆಗೆ ೧೨೦ ಕೋಟಿ ಜನಸಂಖ್ಯೆಯನ್ನು ತಲುಪಲಿರುವ ಭಾರತ ವಿಶ್ವದ ಅತ್ಯಂತ ಜನಭರಿತ ರಾಷ್ಟ್ರ ಎಂಬ ಕುಖ್ಯಾತಿ ಪಡೆಯಲಿದೆ. ಆದರೆ ಗಣನೀಯವಾಗಿ ಕುಸಿಯುತ್ತಿರುವ ಪಾರ್ಸಿಗಳ ಸಂಖ್ಯೆ ೨೦೨೦ಕ್ಕೆ ಕೇವಲ ೨೩ ಸಾವಿರಕ್ಕಿಳಿಯಲಿದೆ. ಇಷ್ಟಾಗಿಯೂ ಪಾರ್ಸಿ ಸಮುದಾಯ ಕೊರಗುತ್ತಿಲ್ಲ. ನಮ್ಮ ಸಂಖ್ಯೆ ಕಡಿಮೆಯಾಗುತ್ತಿದೆ ಎಂದು ಬೊಬ್ಬೆಹಾಕುತ್ತಿಲ್ಲ. ಅವರೆಂದೂ ನಾವು ಅಲ್ಪಸಂಖ್ಯಾತರು ಎನ್ನುತ್ತಾ ಕಿತ್ತು ತಿನ್ನಲು ಬಂದವರಲ್ಲ. ನಮಗೆ ವಿಶೇಷ ಸವಲತ್ತು ಕೊಡಿ ಎಂದು ಕೇಳಿದವರಲ್ಲ, ಮೀಸಲು ಸೌಲಭ್ಯ ನೀಡಿ ಎಂದು ಬೇಡಿಕೆ ಇಟ್ಟವರಲ್ಲ. ನಾವೂ ಕೂಡ ಅವರ ಜತೆ ಎಂದೂ ಕಾದಾಟಕ್ಕಿಳಿದಿಲ್ಲ. ಏಕೆಂದರೆ ಅವ ರೆಂದೂ ಹೊರಗಿನವರಂತೆ ವರ್ತಿಸಿಲ್ಲ, ನಮಗೂ ಅವರು ಹೊರಗಿನವರೆಂದು ಎಂದೂ ಅನ್ನಿಸಿಲ್ಲ. ನಮ್ಮ ಸಂಸ್ಕೃತಿ, ಸಂಸ್ಕಾರ, ಭ್ರಾತೃತ್ವ, ಮುಖ್ಯವಾಹಿನಿಯ ಒಂದು ಅಂಗವಾಗಿಯೇ ಇದ್ದಾರೆ. ಅಷ್ಟೇಕೆ ನಮ್ಮ ಸಂವಿಧಾನ ಶಿಲ್ಪಿಗಳು ‘ಅಲ್ಪಸಂಖ್ಯಾತ’ ಸ್ಥಾನಮಾನ ನೀಡುವ ಕೊಡುಗೆ ಮುಂದಿಟ್ಟಾಗ ಅಂತಹ ಅವಕಾಶವನ್ನು ಬರಸೆಳೆದುಕೊಳ್ಳುವ ಬದಲು ನಯವಾಗಿ ತಿರಸ್ಕರಿಸಿದವರು ಪಾರ್ಸಿಗಳು. ಅವರೆಂದೂ ಮತ ಪ್ರಚಾರ ಮಾಡುವುದಿಲ್ಲ, ಇತರರನ್ನು ಮತಾಂತರಗೊಳಿಸುವುದಿಲ್ಲ, ಟಿವಿ ಚಾನೆಲ್‌ಗಳಲ್ಲಿ ಕರ್ತ, ಕರ್ತ ಎನ್ನುತ್ತಾ ಮೈ ತುರಿಕೆ ಬಂದವರಂತೆ ಬೊಬ್ಬೆಹಾಕಿ ಅಮಾಯಕರನ್ನು ಮೋಸಗೊಳಿಸಲು ಯತ್ನಿಸುವು ದಿಲ್ಲ, ನಮ್ಮ ಧರ್ಮವೇ ಶ್ರೇಷ್ಠವೆನ್ನುವುದಿಲ್ಲ. ಅಷ್ಟೇಕೆ ಧರ್ಮದ ಬಗ್ಗೆ ಮಾತನಾಡುವುದೂ ಇಲ್ಲ. ಅವರ ಸಂಖ್ಯೆ ತೀವ್ರ ಪ್ರಮಾಣದಲ್ಲಿ ಕುಸಿಯುತ್ತಿದ್ದರೂ ಇತರ ಅಲ್ಪಸಂಖ್ಯಾತರಂತೆ ಪುರುಸೊತ್ತಿಲ್ಲದೆ ಮಕ್ಕಳನ್ನು ಹುಟ್ಟಿಸಿ ಸಂಖ್ಯೆ ಹೆಚ್ಚು ಮಾಡಿಕೊಳ್ಳಲೂ ಮುಂದಾಗಿಲ್ಲ. ಅಷ್ಟಕ್ಕೂ ಹಾಲಿಗೆ ಸಕ್ಕರೆ ಬೆರೆಸಿದಂತೆ ನಮ್ಮೊಂದಿಗೆ ಬೆರೆತಿದ್ದಾರೆ. ಬೆರೆತು ಒಂದಾಗಿದ್ದಾರೆ. ಹಾಗಾಗಿಯೇ ನಾವೂ ಕೂಡ ಅವರನ್ನು ನಮ್ಮವರೆಂದು ಒಪ್ಪಿಕೊಂಡಿದ್ದೇವೆ. ಜೆಆರ್‌ಡಿ ಟಾಟಾಗೆ ದೇಶದ ಅತಿದೊಡ್ಡ ಪುರಸ್ಕಾರವಾದ ‘ಭಾರತ ರತ್ನ’ ನೀಡುವ ಮೂಲಕ ಪಾರ್ಸಿ ಸಮುದಾಯದ ಕೊಡುಗೆಯನ್ನು ಗುರುತಿಸಿ ಗೌರವಿಸಿದ್ದೇವೆ. ಇಂತಹ ದೇಶನಿಷ್ಠೆ, Inclusiveness ಇತರ ‘ಅಲ್ಪಸಂಖ್ಯಾತ’ರಲ್ಲೂ ಒಡಮೂಡಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು, ನಮ್ಮ ದೇಶ ಇನ್ನಷ್ಟು ಅಭಿವೃದ್ಧಿ ಹೊಂದಿರುತಿತ್ತು ಅಲ್ಲವೆ?

ಮೊನ್ನೆ ಸ್ಯಾಮ್ ಮಾಣಿಕ್‌ಷಾ ಅಗಲಿದಾಗ ಪಾರ್ಸಿಗಳ ಕೊಡುಗೆ ನೆನಪಾಯಿತು.

ಕೃಪೆ: ಪ್ರತಾಪ ಸಿಂಹ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ