ನನ್ನ ಬ್ಲಾಗ್ ಪಟ್ಟಿ

ಸೋಮವಾರ, ಜೂನ್ 6, 2011

ಕಪ್ಪು ಹಣದ ಬಗ್ಗೆ ಹುಯಿಲು, ಕಾಂಗ್ರೆಸ್ಗೇಕೆ ದಿಗಿಲು?

1. ಕಪ್ಪು ಹಣ ರಾಷ್ಟ್ರೀಯ ಸಂಪತ್ತು ಎಂದು ಘೋಷಿಸಬೇಕು.

2. ಭ್ರಷ್ಟ ಕೋಟ್ಯಧಿಪತಿಗಳಿಗೆ ಮರಣದಂಡನೆ ಅಥವಾ ಜೀವಾವಧಿ ಶಿಕ್ಷೆ ವಿಧಿಸಬೇಕು.

3. ಭಾರತೀಯರು ವಿದೇಶಗಳಲ್ಲಿ ಹೊಂದಿರುವ ಖಾತೆ (ಅಕೌಂಟ್)ಗಳ ವಿವರ ನೀಡಬೇಕು.

4. ಕಪ್ಪು ಹಣ ಸಂಗ್ರಹಣೆಗೆ ಕಾರಣವಾಗಿರುವ 500/ 1000 ನೋಟುಗಳನ್ನು ಹಿಂತೆಗೆದುಕೊಳ್ಳಬೇಕು.

5. ಪ್ರಧಾನಿಯನ್ನು ಜನರೇ ನೇರವಾಗಿ ಆಯ್ಕೆ ಮಾಡುವ ವ್ಯವಸ್ಥೆ ಜಾರಿಗೆ ತರಬೇಕು.

ಇಂತಹ 5 ಬೇಡಿಕೆಗಳನ್ನಿಟ್ಟಿದ್ದಾರೆ ಬಾಬಾ ರಾಮದೇವ್. ಇವುಗಳಲ್ಲಿ ಕೊನೆಯ ಎರಡನ್ನು ಬಿಟ್ಟು ಈಡೇರಿಸಲಾರದಂತಹ ಅದ್ಯಾವ ಬೇಡಿಕೆಗಳಿವೆ ನೀವೇ ಹೇಳಿ? ಆದರೂ ಕೇಂದ್ರ ಸರ್ಕಾರ ಯಾವ ರೀತಿ ವರ್ತಿಸುತ್ತಿದೆ? ಇಂದಿನಿಂದ ರಾಮಲೀಲಾ ಮೈದಾನದಲ್ಲಿ ಆರಂಭವಾಗಲಿರುವ ಉಪವಾಸ ಸತ್ಯಾಗ್ರಹದ ಸಿದ್ಧತೆಗಳನ್ನು ಪರಿಶೀಲಿಸಲು ಜೂನ್ 1ರಂದು ದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ರಾಮ್್ದೇವ್್ರನ್ನು ಕಪಿಲ್ ಸಿಬಲ್ ನೇತೃತ್ವದಲ್ಲಿ ನಾಲ್ವರು ಕೇಂದ್ರ ಸಚಿವರು ಸ್ಥಳದಲ್ಲೇ ಭೇಟಿಯಾಗಿ ಉಪವಾಸ/ ಧರಣಿಯನ್ನು ಬಿಡಿ ಎಂದು ಒತ್ತಾಯಿಸಿದರೇ ಹೊರತು, ಬೇಡಿಕೆ ಈಡೇರಿಸುವ ಮಾತನ್ನೇಕೆ ಆಡಲಿಲ್ಲ? ಮತ್ತೊಂದೆಡೆ “ಬಾಬಾ ಮುಂದೆ ತಲೆಬಾಗಿದ ಸರಕಾರ, ಬಾಬಾಗೆ ರತ್ನಗಂಬಳಿ ಹಾಸಿ ಸ್ವಾಗತಿಸುತ್ತಿರುವ ಸರಕಾರ, ಬಾಬಾಗೆ ಹೆದರಿದ ಸರಕಾರ, ಬಾಬಾಗೆ ಅತಿಯಾದ ಮಹತ್ವ ನೀಡುತ್ತಿರುವ ಸರಕಾರ….” ಎಂದು ಇಂಗ್ಲಿಷ್ ಮಾಧ್ಯಮಗಳು ಟೀಕೆ ಮಾಡುತ್ತಿವೆಯೇ ಹೊರತು, ಕಾಂಗ್ರೆಸ್ ಅಂಜುತ್ತಿರುವುದೇಕೆ ಎಂಬುದನ್ನೇಕೆ ಹೇಳುತ್ತಿಲ್ಲ? ಕಾಂಗ್ರೆಸ್ ಹಿಂಜರಿಕೆ ಮಾಡಲು ಬಲವಾದ ಕಾರಣವೇನಾದರೂ ಇದೆಯೇ? ಸ್ವಿಸ್ ಬ್ಯಾಂಕ್್ಗಳಲ್ಲಿ ಹಣವಿಟ್ಟಿರುವವರ ಪಟ್ಟಿಯನ್ನು ಹೊರತೆಗೆದರೆ ತನ್ನ ಬಣ್ಣವೇ ಬಯಲಾಗುತ್ತದೆ ಎಂಬ ಭಯ ಕಾಂಗ್ರೆಸ್್ಗೇನಾದರೂ ಕಾಡುತ್ತಿದೆಯೇ? ಕಪ್ಪು ಹಣವನ್ನು ಕೂಡಿಟ್ಟಿರುವವರ ಸ್ವಿಸ್ ಬ್ಯಾಂಕ್್ಗಳ ವಿಚಾರ ಬಂದಾಗಲೆಲ್ಲ ಹಾರಿಕೆಯ ಉತ್ತರ ನೀಡುವುದು, ಇಲ್ಲಸಲ್ಲದ ಕಾರಣ ನೀಡಿ ನುಣುಚಿಕೊಳ್ಳಲು, ಕಾಯಿದೆ- ಕಾನೂನಿನ ಕಾರಣವೊಡ್ಡಿ ಕಣ್ಣಾಮುಚ್ಚಾಲೆ ಆಡಲು ಕಾಂಗ್ರೆಸ್ ಪ್ರಯತ್ನಿಸುವುದೇಕೆ? ಸುಮಾರು 400 ಲಕ್ಷ ಕೋಟಿ ಕಪ್ಪು ಹಣವನ್ನು ಸ್ವಿಸ್ ಬ್ಯಾಂಕ್್ಗಳಲ್ಲಿರುವ ಗುಮಾನಿಯಿದ್ದು, ಈ ಹಣವನ್ನು ವಾಪಸ್ ತಂದರೆ ಕಾಂಗ್ರೆಸ್್ಗೇನಾದರೂ ನಷ್ಟವಾಗಲಿದೆಯೇ? ಸ್ವಿಸ್ ಬ್ಯಾಂಕ್ ಹೆಸರೆತ್ತಿದರೆ ಕಾಂಗ್ರೆಸ್ ಈ ಪರಿ ದಿಗಿಲುಗೊಳ್ಳುವುದೇಕೆ?

LOTUS-POTUS!

ಇಂದಿರಾ ಗಾಂಧಿಯವರು ಪ್ರಧಾನಿಯಾಗಿದ್ದ ಕಾಲದಲ್ಲಿ ಪತ್ರಕರ್ತರು ‘ಲೋಟಸ್-ಪೋಟಸ್್’ ಎಂದು ಜೋಕ್ ಮಾಡುತ್ತಿದ್ದರು. ಆ ಜೋಕಿಗೆ ಕಾಲು- ಬಾಲ ಎಲ್ಲ ಸೇರಿಕೊಂಡು ಜಾನಪದ ಕಥೆಗಳಂಥ ಸ್ಟೋರಿಗಳು ಸೃಷ್ಟಿಯಾಗಿದ್ದವು. ಅಂದು ಸಂಜಯ್ ಗಾಂಧಿಯವರ ಹೆಲಿಕಾಪ್ಟರ್ ದುರಂತಕ್ಕೀಡಾದಾಗ, ಘಟನೆ ನಡೆದ ಸ್ಥಳಕ್ಕೆ ಓಡಿ ಬಂದ ಇಂದಿರಾ ಗಾಂಧಿಯವರು ಮಗನ ಸಾವಿಗೆ ದುಃಖಿಸುವ ಬದಲು ಸಂಜಯ್ ಕೈಯಲ್ಲಿದ್ದ ವಾಚ್ ಹುಡುಕುತ್ತಿದ್ದರಂತೆ. ಅದರೊಳಗೆ ಸ್ವಿಸ್ ಬ್ಯಾಂಕ್್ನಲ್ಲಿಟ್ಟಿರುವ ಕಳ್ಳ ಹಣದ ಕೋಡ್ ಇತ್ತಂತೆ. ಆ ಕೋಡ್ ಮೊದಲ ಮಗ ರಾಜೀವ್ (LOTUS) ಗಾಂಧಿಯವರ ಹೆಸರೇ ಆಗಿತ್ತಂತೆ.

ಇಂತಹ ಊಹಾಪೋಹಗಳು ಆ ಕಾಲದಲ್ಲಿ ಆಗಾಗ್ಗೆ ಕೇಳಿ ಬರುತ್ತಿದ್ದವು. ಇತ್ತ ಅಪ್ಪ ನೆಹರು ಅವರಂತೆಯೇ ಸೋವಿಯತ್ ರಷ್ಯಾವನ್ನು ಓಲೈಸಲು ಪ್ರಯತ್ನಿಸುತ್ತಿದ್ದ ಇಂದಿರಾಗಾಂಧಿಯವರು, ಯಾವುದೇ ಸಮಸ್ಯೆ ಎದುರಾದರೂ “Invisible Forces”, “Foreign Hand’ ಅಂತ ಯಾವಾಗಲೂ ಯಾರತ್ತಲೋ ಬೆರಳು ತೋರುತ್ತಿದ್ದರು, ಯಾರನ್ನೋ ದೂರುತ್ತಿದ್ದರು. ಅಂದರೆ ನಮ್ಮೆಲ್ಲ ಸಮಸ್ಯೆಗಳಿಗೂ ಅಮೆರಿಕವೇ (POTUS-President of the United States) ಕಾರಣ, ಅಮೆರಿಕದ ಗುಪ್ತಚರ ಸಂಸ್ಥೆ (CIA) ಕಾರಣ (Invisible hand) ಎಂಬುದು ಅವರ ಪರೋಕ್ಷ ಆರೋಪವಾಗಿರುತ್ತಿತ್ತು. ಇದನ್ನು ಕೇಳಿ ಕೇಳಿ ಅಮೆರಿಕದ ಸಿಐಎ ಅಧ್ಯಕ್ಷ ರಿಚರ್ಡ್ ಹೆಲ್ಮ್ ್ಸಗೆ ಎಷ್ಟು ಕಿರಿಕಿರಿಯಾಯಿತೆಂದರೆ, ‘ಭಾರತದಲ್ಲಿ ಭೂಕಂಪ ಆದರೂ, ಸುಂಟರಗಾಳಿ ಬೀಸಿದರೂ ಅಮೆರಿಕ ಕಾರಣ ಎನ್ನುತ್ತಾರೆ ಈ ಇಂದಿರಾಗಾಂಧಿ’ ಎಂದು ಕಿಚಾಯಿಸಿದ್ದರು. ಹಾಗಾಗಿಯೇ ಪತ್ರಕರ್ತರ ವಲಯಲ್ಲಿ ‘LOTUS-POTUS’ ಎಂಬ ಜೋಕು ಹುಟ್ಟಿಕೊಂಡಿತ್ತು.

ಅದು ಇಂದು ಬರೀ ಜೋಕಾಗಿ ಉಳಿದಿಲ್ಲ.

ಖ್ಯಾತ ನ್ಯಾಯವಾದಿ ರಾಮ್್ಜೇಠ್ಮಲಾನಿ, ಪಂಜಾಬ್ ಪೊಲೀಸ್್ನ ಮಾಜಿ ಮುಖ್ಯಸ್ಥ ಕೆ.ಪಿ.ಎಸ್. ಗಿಲ್ ಹಾಗೂ ಇತರ ನಾಲ್ವರು ಪ್ರತಿಷ್ಠಿತ ನಾಗರಿಕರು 2009, ಏಪ್ರಿಲ್ 21ರಂದು ಸುಪ್ರಿಂಕೋರ್ಟ್್ನಲ್ಲಿ ಸಾರ್ವಜನಿಕ ಹಿತಾಸಕ್ತಿ (PIL) ಅರ್ಜಿಯೊಂದನ್ನು ಸಲ್ಲಿಸಿದ್ದರು. ಒಟ್ಟು 71 ಲಕ್ಷ ಕೋಟಿ ರೂ.ಗಳನ್ನು ನಮ್ಮ ದೇಶದಿಂದ ದೋಚಿಕೊಂಡು ಹೋಗಿ ಸ್ವಿಸ್ ಸೇರಿದಂತೆ ಹಲವಾರು ವಿದೇಶಿ ಬ್ಯಾಂಕ್್ಗಳಲ್ಲಿಡಲಾಗಿದೆ. ಆ ಹಣವನ್ನು ವಾಪಸ್ ತಂದರೆ ಭಾರತದ ಪ್ರತಿಯೊಂದು ಕುಟುಂಬಕ್ಕೂ ತಲಾ 2 ಲಕ್ಷ ರು. ಹಂಚಬಹುದು. ಹಾಗಾಗಿ ಹಣವನ್ನು ಭಾರತಕ್ಕೆ ವಾಪಸ್ ತರಬೇಕಾದುದು ಅತ್ಯಗತ್ಯ ಎಂದು (ಕಿಐಔ)ನಲ್ಲಿ ಪ್ರತಿಪಾದಿಸಿದ್ದರು. ಇದಕ್ಕೆ ಕೇಂದ್ರ ಸರಕಾರ, ರಿಸರ್ವ್ ಬ್ಯಾಂಕ್, ಸೆಬಿ, ಜಾರಿ ನಿರ್ದೇಶನಾಲಯ ಹಾಗೂ ಹಣಕಾಸು ಖಾತೆಯನ್ನು ಹೊಣೆಗಾರರನ್ನಾಗಿ ಹೆಸರಿಸಿದ್ದರು. ಕ್ರಮವಾಗಿ 40 ಸಾವಿರ ಹಾಗೂ 20 ಸಾವಿರದ 580 ಕೋಟಿ ರು. ತೆರಿಗೆ ಹಣವನ್ನು ವಂಚಿಸಿದ್ದಾರೆ ಎಂದು ಹವಾಲಾ ಜಾಲದ ನೇತಾರ ಪುಣೆ ಮೂಲದ ಹಸನ್ ಅಲಿ ಹಾಗೂ ಆತನ ಸಹವರ್ತಿಗಳ ವಿರುದ್ಧ ತೆರಿಗೆ ಇಲಾಖೆ ನೀಡಿರುವ ನೋಟಿಸನ್ನೂ ಪಿಐಎಲ್್ನಲ್ಲಿ ಪ್ರಮುಖವಾಗಿ ಎತ್ತಿ ತೋರಿಸಿದ್ದರು. ಅದೇ ಸಂದರ್ಭದಲ್ಲಿ ನಡೆಯುತ್ತಿದ್ದ ಲೋಕಸಭಾ ಚುನಾವಣೆಯ ಪ್ರಚಾರಾಂದೋಲನದ ವೇಳೆ, “ನಾವು ಅಧಿಕಾರಕ್ಕೆ ಬಂದರೆ 100 ದಿನಗಳೊಳಗಾಗಿ ಕಪ್ಪು ಹಣವನ್ನು ವಾಪಸ್ ತರಲು ಪ್ರಯತ್ನಿಸುವುದಾಗಿ” ಎನ್್ಡಿಎ ಪ್ರಧಾನಿ ಅಭ್ಯರ್ಥಿ ಲಾಲ್ ಕೃಷ್ಣ ಆಡ್ವಾಣಿಯವರು ಸಾರ್ವಜನಿಕವಾಗಿ ಘೋಷಣೆ ಮಾಡಿದ್ದರು.

ಆದರೆ…

ಈ ವಿಷಯದ ಬಗ್ಗೆ ಮೊದಲು ಸಾರ್ವಜನಿಕವಾಗಿ ಮಾತನಾಡಿದ್ದು ಯೋಗ ಗುರು ಬಾಬಾ ರಾಮ್್ದೇವ್!

ಇದು ನಿಜಕ್ಕೂ ಒಂದು ಗಂಭೀರ ವಿಷಯ. ಈ ವಿಷಯದಲ್ಲಿ ಎಲ್ಲರಿಗಿಂತಲೂ ಮೊದಲು ಜರ್ಮನಿಗೆ ನಾವೊಂದು ಸಲಾಮು ಹಾಕಬೇಕು. ಪ್ರಕರಣವನ್ನು ದಾಖಲೆ ಸಮೇತ ಬೆಳಕಿಗೆ ತಂದಿದ್ದೇ ಜರ್ಮನಿ. ಸ್ವಿಜರ್್ಲ್ಯಾಂಡ್, ಲೀಚೈನ್್ಸ್ಟೀನ್, ಆಸ್ಟ್ರಿಯಾ, ಲಕ್ಸಂಬರ್ಗ್, ಜಿಬ್ರಾಲ್ಟರ್, ಪನಾಮಾ, ಮೊನಾಕೊ, ಸಿಂಗಪುರ್, ಹಾಂಕಾಂಗ್ ಮುಂತಾದ ಸ್ಥಳಗಳಲ್ಲಿರುವ ಜಗತ್ತಿನ ಸುಮಾರು 70 ಬ್ಯಾಂಕ್್ಗಳನ್ನು ’Tax Havens’ (ತೆರಿಗೆಗಳ್ಳರ ಆಶ್ರಯ ತಾಣ) ಎನ್ನುತ್ತಾರೆ. ಅದು ಯಾವುದೇ ದೇಶವಾಗಿರಲಿ, ಎಲ್ಲ ದೇಶಗಳ ಕಳ್ಳರೂ ತಮ್ಮ ಕಪ್ಪು ಹಣವನ್ನು ಇಡುವುದೇ ಈ ಬ್ಯಾಂಕ್್ಗಳಲ್ಲಿ. ಕಳ್ಳರಿಗಾಗಿಯೇ ಜನ್ಮ ತಳೆದಂತಿರುವ ಈ ಬ್ಯಾಂಕುಗಳು ತನ್ನಲ್ಲಿ ಖಾತೆ ಹೊಂದಿರುವವರ ಬಗೆಗಿನ ಯಾವುದೇ ವಿವರವನ್ನು ಎಂತಹ ಸಂದರ್ಭದಲ್ಲೂ ಯಾರಿಗೂ ನೀಡುವುದಿಲ್ಲ. ಹಾಗಾಗಿಯೇ ತೆರಿಗೆ ವಂಚಕರ ಸ್ವರ್ಗಗಳಾಗಿ ಪರಿಣಮಿಸಿವೆ. ಅದರಲ್ಲೂ ಜಗತ್ತಿನ ಒಟ್ಟು ವಾರ್ಷಿಕ ಕಳ್ಳಸಾಗಣೆಯಾಗುವ ಹಣದಲ್ಲಿ ಶೇ. 27ರಷ್ಟು ಸ್ವಿಸ್ ಬ್ಯಾಂಕೊಂದಕ್ಕೆ (UBS) ಹರಿದು ಬರುತ್ತದೆ. ಈ ವಿಷಯದಲ್ಲಿ ಲೀಚೈನ್್ಸ್ಟೀನ್್ನ ಎಲ್್ಜಿಟಿ ಬ್ಯಾಂಕ್ ಕೂಡ ಸಾಮಾನ್ಯದ್ದೇನಲ್ಲ. ಜರ್ಮನಿಯ ಕಣ್ಣು ಈ ಬ್ಯಾಂಕಿನ ಮೇಲೆ ಬಿದ್ದಿತ್ತು. ತನ್ನ ದೇಶದ ಕಳ್ಳರೆಲ್ಲ ಈ ಬ್ಯಾಂಕ್್ನಲ್ಲಿ ಹಣ ಇಟ್ಟಿದ್ದಾರೆಂಬ ಬಲವಾದ ಗುಮಾನಿಯೂ ಅದಕ್ಕೆ ಬಂದಿತ್ತು. ಆದರೆ ನೇರ ಮಾರ್ಗದಲ್ಲಿ ಹೋದರೆ ಬರಿಗೈಲಿ ಮರಳಬೇಕಾಗುತ್ತದೆ, ತನ್ನ ಮಾತಿಗೆ ಎಲ್್ಜಿಟಿ ಬ್ಯಾಂಕ್ ಕಿಮ್ಮತ್ತು ಕೊಡುವುದಿಲ್ಲ ಎಂಬುದು ಜರ್ಮನಿಗೆ ತಿಳಿದಿತ್ತು. ಹಾಗಾಗಿ ಜರ್ಮನಿ ಕೂಡ ಅಡ್ಡಮಾರ್ಗಕ್ಕೆ ಇಳಿಯಿತು. ಎಲ್್ಜಿಟಿ ಬ್ಯಾಂಕ್್ನ ಕೆಲವು ಅಧಿಕಾರಿಗಳಿಗೆ 60 ಲಕ್ಷ ಡಾಲರ್ ಲಂಚ ಕೊಟ್ಟ ಜರ್ಮನಿ, ಕಳ್ಳ ಹಣ ಇಟ್ಟಿರುವ 1500 ಮಂದಿ ವಂಚಕರ ಹೆಸರುಗಳನ್ನು ಹೊಂದಿರುವ ಗೌಪ್ಯ ಸಿ.ಡಿ.ಯನ್ನು ಪಡೆದುಕೊಂಡು ಹೆಸರುಗಳನ್ನು ಪರಿಶೀಲಿಸತೊಡಗಿತು. 1500 ಹೆಸರುಗಳಲ್ಲಿ ಸುಮಾರು 600 ಜರ್ಮನ್ನರದ್ದಾಗಿದ್ದವು. ಅವರಲ್ಲಿ ಜರ್ಮನಿಯ ಅಂಚೆ ವ್ಯವಸ್ಥೆಯ ಮುಖ್ಯಸ್ಥನ ಹೆಸರೂ ಇತ್ತು. ಹೀಗೆ ಸೂಕ್ತ ಮಾಹಿತಿಯೊಂದಿಗೆ ಕೂಲಂಕಷ ತನಿಖೆ ನಡೆಸಿದ ಜರ್ಮನಿ ಅಷ್ಟೂ ಜನರ ವಿರುದ್ಧ ಕ್ರಮಕೈಗೊಂಡಿತು.

ಹಾಗಾದರೆ 1500ರಲ್ಲಿ ಉಳಿದ 900 ಹೆಸರುಗಳು ಯಾವ ದೇಶದವರದ್ದು?

ಮೊದಲು ತನ್ನ ದೇಶದವರ ವಿರುದ್ಧ ಕ್ರಮ ಕೈಗೊಂಡ ಜರ್ಮನಿ, “ಒಂದು ವೇಳೆ 1500 ಜನರ ಪಟ್ಟಿಯಲ್ಲಿ ತಮ್ಮ ದೇಶದವರ ಹೆಸರೂ ಇರಬಹುದು ಎಂದು ಯಾವ ದೇಶಕ್ಕಾದರೂ ಗುಮಾನಿಯಿದ್ದರೆ ಮನವಿ ಮಾಡಿಕೊಳ್ಳಬಹುದು. ನಾವು ಉಚಿತವಾಗಿ ಹೆಸರುಗಳು ನೀಡುತ್ತೇವೆ” ಎಂದು ಸಾರ್ವಜನಿಕವಾಗಿ ಘೋಷಣೆ ಮಾಡಿತು. ಹಾಗೆ ಘೋಷಣೆ ಮಾಡಿದ್ದೇ ತಡ, ಎಲ್ಲ ದೇಶಗಳೂ ಜರ್ಮನಿಗೆ ಮನವಿ ಮಾಡಿಕೊಂಡವು, ಭಾರತವೊಂದನ್ನು ಬಿಟ್ಟು!!

ಈ ಮಧ್ಯೆ, ಸ್ವಿಸ್ ಬ್ಯಾಂಕ್ ವಿರುದ್ಧ ಸಂಘರ್ಷಕ್ಕಿಳಿದ ಅಮೆರಿಕದ ನ್ಯಾಯಾಂಗ ಇಲಾಖೆ ತನ್ನ ದೇಶದ ಕಳ್ಳರ ಸ್ವತ್ತನ್ನು ಹಿಂದಿರುಗಿಸುವಂತೆ ಒತ್ತಡ ಹಾಕತೊಡಗಿತು. ಅದರಲ್ಲಿ ಯಶಸ್ವಿಯೂ ಆಯಿತು. ತನ್ನಲ್ಲಿ ಅನಧಿಕೃತವಾಗಿ ಇಡಲಾಗಿರುವ 780 ದಶಲಕ್ಷ ಡಾಲರ್ ಹಣವನ್ನು ಹಿಂದಿರುಗಿಸಲು 2009, ಫೆಬ್ರವರಿ 19ರಂದು ಒಪ್ಪಿಕೊಂಡ ಸ್ವಿಸ್ ಬ್ಯಾಂಕ್, ಇನ್ನೂ 20 ಶತಕೋಟಿ ಡಾಲರ್ ಹಣ ಇಟ್ಟಿರುವ 250 ಅಮೆರಿಕ ನಾಗರಿಕರ ಹೆಸರು ಮತ್ತು ವಿವರ ನೀಡಲು ಒಪ್ಪುಗೆ ಮುಂದಿಟ್ಟಿತು. ಅಮೆರಿಕದ 52 ಸಾವಿರ ತೆರಿಗೆಗಳ್ಳರ ಹಣಕಾಸು ವ್ಯವಹಾರದ ಮಾಹಿತಿ ನೀಡುವಂತೆ ಒತ್ತಡ ಹೇರಲಾರಂಭಿಸಿತು. ಇಂತಹ ಒತ್ತಡಕ್ಕೆ ಸ್ವಿಸ್ ಬ್ಯಾಂಕ್ ಪ್ರತಿರೋಧವೊಡ್ಡಿದ್ದೇನೂ ನಿಜ. ಆದರೆ ಎಷ್ಟು ದಿನ ಹಾಗೆ ಮಾಡಲು ಸಾಧ್ಯ?

ಇತ್ತ ಜರ್ಮನಿ ಎಲ್್ಜಿಟಿ ಬ್ಯಾಂಕ್್ನಲ್ಲಿ ಖಾತೆ ಹೊಂದಿದ್ದವರ ವಿರುದ್ಧ ಕ್ರಮಕೈಗೊಂಡ ನಂತರ ಜರ್ಮನಿ ಹಾಗೂ ಲೀಚೈನ್್ಸ್ಟೀನ್ ನಡುವೆ ರಾಜತಾಂತ್ರಿಕ ಸಂಘರ್ಷವೇ ಏರ್ಪಟ್ಟಿತು. ಅಷ್ಟಕ್ಕೂ ಗೌಪ್ಯವಾಗಿ ಟ್ರಸ್ಟ್್ಗಳನ್ನು ಸೃಷ್ಟಿ ಮಾಡಿ, ಅಲ್ಲಿಂದ ಸ್ವಿಸ್ ಬ್ಯಾಂಕ್್ಗೆ ಹಣ ಸಂದಾಯ ಮಾಡುವುದೇ ಅತ್ಯಂತ ಸಣ್ಣ ಪ್ರಾಂತವಾದ ಲೀಚೈನ್್ಸ್ಟೀನ್್ನಿಂದ! ಆದ ಕಾರಣ 17 ದೇಶಗಳ ವೇದಿಕೆಯಾದ ‘ಆರ್ಗನೈಸೇಷನ್ ಫಾರ್ ಇಕಾನಾಮಿಕ್ ಕೋ-ಆಪರೇಷನ್ ಅಂಡ್ ಡೆವಲಪ್್ಮೆಂಟ್್’ನ (OECD) ಸಭೆಯಲ್ಲಿ ಜರ್ಮನಿ ವಿಷಯವನ್ನೆತ್ತಿಕೊಂಡಿತು. ಅದಕ್ಕೂ ಕಾರಣವಿತ್ತು. ಸ್ವಿಜರ್್ಲ್ಯಾಂಡ್ ಕೂಡ ಆ ವೇದಿಕೆಯ ಸದಸ್ಯ ರಾಷ್ಟ್ರ. ಇದನ್ನೆಲ್ಲಾ ಪರಿಗಣಿಸಿಯೇ ವಿಷಯ ಪ್ರಸ್ತಾಪಿಸಿದ ಜರ್ಮನಿ, ಸ್ವಿಜರ್್ಲ್ಯಾಂಡ್್ನ್ನು ಕಳಂಕಿತ ರಾಷ್ಟ್ರಗಳ ಪಟ್ಟಿಗೆ ಸೇರಿಸಿ ಆರ್ಥಿಕ ದಿಗ್ಬಂದನೆಯನ್ನು ಹೇರಬೇಕೆಂದು ಒತ್ತಾಯಿಸಿತು. ಮತ್ತೊಂದು ಬಲಿಷ್ಠ ರಾಷ್ಟ್ರವಾದ ಫ್ರಾನ್ಸ್ ಕೂಡ ಜರ್ಮನಿಯ ಬೆಂಬಲಕ್ಕೆ ನಿಂತಿತು. ಆಗ ಸ್ವಿಜರ್್ಲ್ಯಾಂಡ್್ಗೆ ದಾರಿ ಕಾಣದಾಯಿತು. ಹೇಗಾದರೂ ಮಾಡಿ ತಪ್ಪಿಸಿಕೊಳ್ಳೋಣವೆಂದು ಲಾಬಿ ಮಾಡಲಾರಂಭಿಸಿತು. ಆದರೆ ಯಾವ ಪ್ರಯೋಜನವೂ ಆಗಲಿಲ್ಲ. 2009, ಏಪ್ರಿಲ್ 2ರಂದು ಲಂಡನ್್ನಲ್ಲಿ ನಡೆಯಬೇಕಿದ್ದ ಜಿ-20 ಶೃಂಗಕ್ಕೆ ಮೊದಲು ನಡೆದ ಪೂರ್ವಭಾವಿ ಸಭೆಯಲ್ಲೂ ಜರ್ಮನಿ ಮತ್ತು ಫ್ರಾನ್ಸ್್ಗಳು ವಿಷಯವನ್ನು ಪ್ರಸ್ತಾಪಿಸಿದವು. ಸ್ವಿಜರ್್ಲ್ಯಾಂಡ್ ಹಾಗೂ ಸಹಕಾರ ನೀಡದ ಇತರ ರಾಷ್ಟ್ರಗಳನ್ನು ಕಳಂಕಿತ ದೇಶಗಳ ಪಟ್ಟಿಗೆ ಸೇರಿಸಿ ಆರ್ಥಿಕ ದಿಗ್ಭಂದನೆ ವಿಧಿಸುವಂತೆ ಏಪ್ರಿಲ್ 2ರ ಲಂಡನ್ ಶೃಂಗದ ವೇಳೆ ಒತ್ತಡ ಹೇರಲಾಗುವುದು ಎಂದು ಬಹಿರಂಗವಾಗಿ ಘೋಷಣೆ ಮಾಡಿದವು. ಅದಕ್ಕೆ ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮ ಕೂಡ ಧ್ವನಿಗೂಡಿಸಿದರು.

ಐರೋಪ್ಯ ರಾಷ್ಟ್ರಗಳಿಂದಲೇ ಸುತ್ತುವರಿದಿರುವ ಸ್ವಿಜರ್್ಲ್ಯಾಂಡ್ ಎಷ್ಟು ಅಂತ ನುಣುಚಿಕೊಳ್ಳಲು ಸಾಧ್ಯ? ಜಿ-20 ಶೃಂಗವೇನಾದರೂ ತನ್ನನ್ನು ಕಳಂಕಿತ ರಾಷ್ಟ್ರಗಳ ಪಟ್ಟಿಗೆ ಸೇರಿಸಿದರೆ, ಆರ್ಥಿಕ ದಿಗ್ಬಂಧನ ಹೇರಿದರೆ ಗತಿಯೇನು? ಬ್ಯಾಂಕಿಂಗ್ ಸೇವೆಯನ್ನೇ ಜೀವಾಳವಾಗಿಟ್ಟುಕೊಂಡಿರುವ ತನ್ನ ಅರ್ಥವ್ಯವಸ್ಥೆ ಅವನತಿಯತ್ತ ಸಾಗದೇ ಇದ್ದೀತೆ? ಇಂತಹ ಭಯ ಸ್ವಿಜರ್್ಲ್ಯಾಂಡನ್ನು ಕಾಡತೊಡಗಿತು. ಹಾಗಾಗಿ, “ಒಂದು ವೇಳೆ ತೆರಿಗೆ ವಂಚನೆ ಮಾಡಿರುವ ವ್ಯಕ್ತಿಗಳ ಬಗ್ಗೆ ಸೂಕ್ತ ದಾಖಲೆ ಒದಗಿಸಿದರೆ ಯಾವುದಾದರೂ ದೇಶಕ್ಕಾದರೂ ತಾನು ಮಾಹಿತಿ ನೀಡುವೆ” ಎಂದು 2009 ಮಾರ್ಚ್ 13ರಂದು ಸ್ವಿಸ್ ಬ್ಯಾಂಕ್ ಘೋಷಣೆ ಮಾಡಿತು! ಅದರ ಬೆನ್ನಲ್ಲೇ ಜಿ-20 ಶೃಂಗದಲ್ಲಿ ಎದುರಾಗಲಿದ್ದ ಆರ್ಥಿಕ ದಿಗ್ಭಂದನೆಯ ಅಪಾಯಕ್ಕೆ ಹೆದರಿ ಆಸ್ಟ್ರಿಯಾ ಮತ್ತು ಲಕ್ಸಂಬರ್ಗ್ ಕೂಡ ಸ್ವಿಸ್ ಬ್ಯಾಂಕ್್ನಂತೆ ತಾವೂ ಮಾಹಿತಿ ನೀಡುವುದಾಗಿ ಘೋಷಿಸಿದವು. ಮುಂದಿನ ಹಾದಿ ಇನ್ನೂ ದೀರ್ಘವಾಗಿದ್ದರೂ, ಹಣವನ್ನು ವಾಪಸ್ ತರುವುದು ದೂರದ ಮಾತಾಗಿದ್ದರೂ ಇದೇನು ಸಣ್ಣ ಸಾಧನೆಯಲ್ಲ. ಜಗತ್ತಿನ ಬಲಿಷ್ಠ ರಾಷ್ಟ್ರಗಳೆಲ್ಲ ಒಂದಾಗಿ ನಿಂತರೆ ಯಾವ ಬ್ಯಾಂಕ್ ತಾನೇ ಬಗ್ಗದೇ ಇದ್ದೀತು? ಸಹಕಾರ ನೀಡದ ದೇಶ ಹಾಗೂ ಬ್ಯಾಂಕ್್ಗಳನ್ನು ಕಳಂಕಿತರ ಪಟ್ಟಿಗೆ ಸೇರಿಸುತ್ತೇವೆ ಎಂದು ಹೆದರಿಸಿದರೆ ಯಾವ ರಾಷ್ಟ್ರ ತಾನೇ ಬೆದರದೇ ಇರುತ್ತದೆ? ಅದರಲ್ಲೂ ಇಡೀ ಜಗತ್ತೇ ಆರ್ಥಿಕ ಸಂಕಷ್ಟದಲ್ಲಿರುವಾಗ ಕಳ್ಳರನ್ನು ಯಾವ ರಾಷ್ಟ್ರ ತಾನೆ ಸಹಿಸೀತು?

ಇಷ್ಟಾಗಿಯೂ ಕೇಂದ್ರದ ನಮ್ಮ ಯುಪಿಎ ಸರಕಾರ ಮಾಡಿದ್ದೇನು?

ನಮಗೂ ಕಳ್ಳರ ಪಟ್ಟಿಯನ್ನು ನೀಡಿ ಎಂದು ಜರ್ಮನಿಯನ್ನು ಬಲವಾಗಿ ಕೇಳಿಕೊಳ್ಳದೇ ಇದ್ದಿದ್ದಕ್ಕೆ ಕಾರಣವೇನು? ‘ಆರ್ಗನೈಸೇಷನ್ ಫಾರ್ ಇಕಾನಾಮಿಕ್ ಕೋಆಪರೇಷನ್ ಅಂಡ್ ಡೆವಲಪ್್ಮೆಂಟ್ ನ ಸಭೆಯಲ್ಲಿ ಜರ್ಮನಿ ಹಾಗೂ ಫ್ರಾನ್ಸ್್ಗಳು ಕಳ್ಳಹಣದ ವಿಚಾರವೆತ್ತಿದಾಗ ಭಾರತ ಸರಕಾರವೇಕೆ ಅದನ್ನು ಸ್ವಾಗತಿಸಲಿಲ್ಲ? ಜಿ-20 ಶೃಂಗಕ್ಕೂ ಮೊದಲು ನಡೆದ ಪೂರ್ವಭಾವಿ ಸಭೆಯಲ್ಲಿ ಭಾರತವೇಕೆ ಈ ವಿಷಯವಾಗಿ ಧ್ವನಿಯೆತ್ತಲಿಲ್ಲ? 2002ರಿಂದ 2006ರ ಅವಧಿಯಲ್ಲಿ ವಾರ್ಷಿಕ ಸುಮಾರು 27 ಶತಕೋಟಿ ಡಾಲರ್ ಹಣವನ್ನು ಭಾರತದಿಂದ ಹೊರಸಾಗಿಸಲಾಗಿದೆ! ಅಂದರೆ 6 ವರ್ಷಗಳಲ್ಲಿ 6 ಲಕ್ಷದ 88 ಸಾವಿರ ಕೋಟಿ ರೂ.ಗಳನ್ನು ಕೊಳ್ಳೆ ಹೊಡೆದು ಕಳ್ಳ ಬ್ಯಾಂಕುಗಳಲ್ಲಿಡಲಾಗಿದೆ ಎಂದು ಗ್ಲೋಬಲ್ ಫೈನಾನ್ಷಿಯಲ್ (GIF) ಹೇಳಿದೆ!! ಆರು ವರ್ಷಗಳಲ್ಲೇ ಇಷ್ಟು ಹಣ ದೇಶದಿಂದ ಹೊರ ಹೋಗಿದೆ ಎಂದಾದರೆ, ಕಳೆದ 63 ವರ್ಷಗಳಲ್ಲಿ ಇನ್ನೆಷ್ಟು ಹಣವನ್ನು ಕೊಳ್ಳೆ ಹೊಡೆದಿರಬಹುದು? 1934ರಲ್ಲಿ ಸ್ಥಾಪನೆಯಾಗಿರುವ ಸ್ವಿಸ್ ಬ್ಯಾಂಕ್್ನಲ್ಲಿ ಭಾರತೀಯರು ಇದುವರೆಗೂ ಇಟ್ಟಿರುವ ಹಣದ ಪ್ರಮಾಣ ಅದೆಷ್ಟಾಗಿರಬಹುದು? ಹಣದ ಪ್ರಮಾಣದ ಬಗ್ಗೆ ತಕರಾರು ಎತ್ತ ಬಹುದಾಗಿದ್ದರೂ, ಅಭಿಪ್ರಾಯಭೇದ ಇಟ್ಟುಕೊಳ್ಳಬಹುದಾಗಿದ್ದರೂ ಹಣವನ್ನು ಲೂಟಿ ಹೊಡೆದಿರುವುದನ್ನು ತಳ್ಳಿ ಹಾಕಲು ಸಾಧ್ಯವೆ?

ಬಾಬಾ ರಾಮ್್ದೇವ್ ಕುಪಿತಗೊಂಡಿರುವುದು ಈ ಕಾರಣಕ್ಕೆ.

ಒಂಭತ್ತು ತಿಂಗಳ ಹಿಂದೆ ದ್ವಾರಕಾದಿಂದ “ಭ್ರಷ್ಟಾಚಾರ ವಿರೋಧಿ ಆಂದೋಲನ” ಆರಂಭಿಸಿದ ರಾಮ್್ದೇವ್ ಇದುವರೆಗೂ 1 ಲಕ್ಷ ಕಿ.ಮೀ. ವ್ಯಾಪ್ತಿಯನ್ನು ಕ್ರಮಿಸಿ ದೇಶವಾಸಿಗಳಲ್ಲಿ ಜಾಗೃತಿ ಮೂಡಿಸಲು ಪ್ರಯತ್ನಿಸಿದ್ದಾರೆ. ಆದರೂ ಕೇಂದ್ರ ಸರ್ಕಾರ ದಿವ್ಯ ನಿರ್ಲಕ್ಷ್ಯ ತೋರುತ್ತಾ ಬಂದಿದೆ. ಹಾಗಾಗಿ ರಾಷ್ಟ್ರವ್ಯಾಪಿ ಜನಾಂದೋಲನವನ್ನು ರೂಪಿಸಲು ಜೂನ್ 4ರಿಂದ ದೆಹಲಿಯ ರಾಮಲೀಲಾ ಮೈದಾನದಲ್ಲಿ ಬಾಬಾ ಉಪವಾಸ ಸತ್ಯಾಗ್ರಹ ಆರಂಭಿಸುತ್ತಿದ್ದಾರೆ. ಈಗಾಗಲೇ ಒಂದು ತಿಂಗಳ ಅವಧಿಗೆ ರಾಮಲೀಲಾ ಮೈದಾನವನ್ನು ಬುಕ್ ಮಾಡಿದ್ದಾರೆ. ಅವರ ಜತೆ ತಾನೂ ಉಪವಾಸಕ್ಕೆ ಕುಳಿತುಕೊಳ್ಳುವುದಾಗಿ ಅಣ್ಣಾ ಹಜಾರೆ ಕೂಡಾ ಹೇಳಿದ್ದಾರೆ. ಇಷ್ಟಾಗಿಯೂ ಉಪವಾಸ ಕೈ ಬಿಡುವಂತೆ ಪ್ರಧಾನಿ ಮನವಿ ಮಾಡಿಕೊಳ್ಳುತ್ತಿದ್ದಾರೆಯೇ ಹೊರತು, ಬಾಬಾ ಮುಂದಿಟ್ಟಿರುವ ಬೇಡಿಕೆಗಳನ್ನು ಈಡೇರಿಸುವುದಾಗಿ ಏಕೆ ಹೇಳುತ್ತಿಲ್ಲ? ಸ್ವಿಸ್ ಹೆಸರೆತ್ತಿದರೆ ಕಾಂಗ್ರೆಸ್್ಗೇಕೆ ಹೆಗಲು ಮುಟ್ಟಿಕೊಳ್ಳುವ ದಿಗಿಲು?!

ಕೃಪೆ: ಪ್ರತಾಪ ಸಿಂಹ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ