ನನ್ನ ಬ್ಲಾಗ್ ಪಟ್ಟಿ

ಸೋಮವಾರ, ಜೂನ್ 6, 2011

ಹೈಕಮಾಂಡ್ ಎಂಬ ಖಾಲಿ ಮಂಡೆ ನಾಯಕರು!

ಮೊನ್ನೆ ಕೊನೆಗೊಂಡ ರಾಜಕೀಯ ಪ್ರಹಸನದ ಬಗ್ಗೆ ಸುಮ್ಮನೆ ಯೋಚಿಸುತ್ತಾ ಕುಳಿತಾಗ ಅನೇಕ ದೃಶ್ಯ ತುಣುಕುಗಳು ಪಥ ಸಂಚಲನದಲ್ಲಿ ಹೊರಟಿದ್ದವು . ರಾಜ್ಯಪಾಲರು ಕಳಿಸಿದ ವರದಿಯನ್ನು ಸ್ವೀಕರಿಸಬೇಕೋ, ತಿರಸ್ಕರಿಸಬೇಕೋ ಎಂಬ ನಿರ್ಧಾರ ತೆಗೆದುಕೊಳ್ಳಲು ಕಾಂಗ್ರೆಸ್ ಹೈಕಮಾಂಡ್ ಹತ್ತು ದಿನ ತೆಗೆದುಕೊಂಡಿತು. ಹೈಕಮಾಂಡ್ ಅಂತ ಕರೆಯಿಸಿಕೊಂಡ ಸೋನಿಯಾ ಗಾಂಧಿ ಸ್ವತಂತ್ರವಾಗಿ ನಿರ್ಧಾರ ತೆಗೆದುಕೊಳ್ಳುವ ಸ್ಥಿತಿಯಲ್ಲಿರಲಿಲ್ಲ. ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರಿಂದ ಇವನ್ನೆಲ್ಲ ನಿರೀಕ್ಷಿಸುವುದು ಸಾಧ್ಯವಿಲ್ಲ. ನಿರ್ಧಾರ, ತೀರ್ಮಾನ ಅಂತಂದ್ರೆ ಏನು ಎಂದು ಕೇಳದಿದ್ದರೆ ಅದೇ ಪುಣ್ಯ. ರಾಜಕೀಯ ವ್ಯವಹಾರಗಳ ಸಂಪುಟ ಸಮಿತಿ ಎರಡು- ಮೂರು ಸಲ ಸಭೆ ಸೇರಿತು. ಕೇಂದ್ರ ಸಚಿವ ಸಂಪುಟ ಸಭೆಯಲ್ಲೂ ಒಮ್ಮೆ ಚರ್ಚೆಯಾಯಿತು.

ಇನ್ನು ಸಾರ್ವಜನಿಕರಿಗೆ, ಮಾಧ್ಯಮದವರಿಗೆ ಗೊತ್ತಾಗದಂತೆ ಅವೆಷ್ಟು ಸಲ ಕಾಂಗ್ರೆಸ್್ನ ಹಿರಿಯ ನಾಯಕರು ಮುಖಾಮುಖಿ, ಫೋನಿನಲ್ಲಿ ಆ ವಿಷಯದ ಬಗ್ಗೆ ಚರ್ಚಿಸಿದರೋ ಏನೋ? ಸಾರ್ವಜನಿಕ ಒತ್ತಡ ತೀವ್ರಗೊಂಡ ಬಳಿಕ ಹೈಕಮಾಂಡ್ ಕೊನೆಗೊಂದು ತೀರ್ಮಾನ ತೆಗೆದುಕೊಳ್ಳಲೇಬೇಕಾಗಿತ್ತು, ಅದನ್ನು ತೆಗೆದುಕೊಂಡಿತು. ಈ ಮಧ್ಯೆ ಕಾಂಗ್ರೆಸ್್ನ ಹಿರಿಯ ನಾಯಕರು ಅಭಿಪ್ರಾಯ ಭೇದದಿಂದ ಇಬ್ಭಾಗವಾದರು. ಕೆಲವರು ರಾಜ್ಯಪಾಲರ ವರದಿಯನ್ನು ತಿರಸ್ಕರಿಸಿ ಅಂದ್ರೆ, ಉಳಿದವರು ಪುರಸ್ಕರಿಸಿ ಅಂದರು. ಹೈಕಮಾಂಡ್್ಗೆ ದಿಕ್ಕು ತೋಚದಂತಾಗಿತ್ತು. ಕೊನೆಗೆ ಎಲ್ಲರೂ ಕುಳಿತು ಒಂದು ನಿರ್ಧಾರಕ್ಕೆ ಬಂದರು! ಅಷ್ಟೊತ್ತಿಗೆ ಹೈಕಮಾಂಡ್ ಸಾಕಷ್ಟು ಬಸವಳಿದಿತ್ತು!

ಹೈಕಮಾಂಡ್ ಪರಂಪರೆಯನ್ನು ಈ ದೇಶದ ರಾಜಕಾರಣದಲ್ಲಿ ಒಂದು ಸಂಸ್ಕೃತಿಯೆಂಬಂತೆ ರೂಪಿಸಿದ ಕಾಂಗ್ರೆಸ್ ನಾಯಕತ್ವಕ್ಕೆ, ನಿರ್ಧಾರ ತೆಗೆದುಕೊಳ್ಳಬೇಕಾದ ಮಹತ್ವದ ಸಂದರ್ಭದಲ್ಲಿ ಒದ್ದಾಡುವ ಪರಿಸ್ಥಿತಿಗೆ ತನ್ನನ್ನು ನೂಕಿಕೊಳ್ಳುವಂಥದ್ದು ಇತ್ತೀಚಿನ ಬೆಳವಣಿಗೆ. ಹೈಕಮಾಂಡ್ ಅಂದ್ರೆ ಯಾರು? ಸೋನಿಯಾ ಗಾಂಧಿಯಾ? ಮನಮೋಹನ್ ಸಿಂಗಾ? ಪ್ರಣಬ್ ಮುಖರ್ಜಿ, ಪಿ. ಚಿದಂಬರಮ್, ಆ್ಯಂಟನಿ, ಕೃಷ್ಣ ಇವರೆಲ್ಲರ ಸಾಮೂಹಿಕ ಅಭಿಪ್ರಾಯವಾ? ಯಾರು? ಹೀಗೆಂದು ಕೇಳುವ ಸ್ಥಿತಿ ಬಂದಿದೆ.

ಈ ಮಧ್ಯೆ ರಾಹುಲ್ ಗಾಂಧಿ, ಅಹಮದ್ ಪಟೇಲ್ ಮುಂತಾದವರೂ ಹಾದು ಹೋಗುತ್ತಾರೆ. ಕೊನೆಯಲ್ಲಿ ಸ್ವೀಕರಿಸಿದ ನಿರ್ಧಾರ ‘ಹೈಕಮಾಂಡ್ ತೀರ್ಮಾನ’ ಎನಿಸಿಕೊಳ್ಳುತ್ತದೆ. ಯಾವುದೇ ವಿಷಯವನ್ನಾದರೂ ಹೈಕಮಾಂಡ್ ನಿರ್ಧಾರಕ್ಕೆ ಬಿಡಲಾಗಿದೆ ಅಂದ್ರೆ, ಅದು ಪುನಃ ಈ ಎಲ್ಲ ಹಂತಗಳಲ್ಲಿ ಚರ್ಚೆಗೆ ಒಳಗಾಗುತ್ತದೆ ಎಂದೇ ಅರ್ಥ. ಹಾಗಿದ್ದರೆ ಅದು ಹೈಕಮಾಂಡ್ ಹೇಗಾದೀತು? ನಿಸ್ಸಂದೇಹವಾಗಿ ಅದು ಲೋಕಮಾಂಡ್! ಅಂಥ ಸ್ಥಿತಿಗೆ ತನ್ನನ್ನು ತಂದುಕೊಂಡಿರುವುದು ರಾಷ್ಟ್ರೀಯ ಪಕ್ಷವಾದ ಕಾಂಗ್ರೆಸ್್ನ ಇಂದಿನ ಪರಿಸ್ಥಿತಿಗೆ ಹಿಡಿದ ಕೈಗನ್ನಡಿ.


ಮತ್ತೊಂದು ರಾಷ್ಟ್ರೀಯ ಪಕ್ಷವಾದ ಬಿಜೆಪಿ ಸ್ಥಿತಿಯೂ ಹೀಗೇ. ಅಲ್ಲೂ ಹೈಕಮಾಂಡ್್ನದು ಲೋಕಮಾಂಡೇ. ಯಡಿಯೂರಪ್ಪನವರನ್ನು ಮುಂದುವರಿಸಬೇಕಾ, ಬೇಡವಾ ಎಂಬ ಪ್ರಶ್ನೆ ಎದುರಾದರೆ, ಮೊದಲು ಬಿಜೆಪಿ ಹೈಕಮಾಂಡ್ ಧರ್ಮೇಂದ್ರ ಪ್ರಧಾನರಂಥ ಚಳ್ಳೆಪಿಳ್ಳೆಗಳನ್ನು ಕಳಿಸಿಕೊಡುತ್ತದೆ. ಆನಂತರ ಜೇಟ್ಲಿ, ಸುಷ್ಮಾ, ವೆಂಕಯ್ಯ ಕುಳಿತು ಚರ್ಚಿಸುತ್ತಾರೆ. ಇವರೆಲ್ಲರೂ ರಾಷ್ಟ್ರೀಯ ಅಧ್ಯಕ್ಷರ ಬಳಿ ಓಡುತ್ತಾರೆ. ಅವರೋ? ಅಧ್ಯಕ್ಷರೆಂಬ ಕಾರಣದಿಂದ ನಾಯಕರು, ಅದಕ್ಕಿಂತ ಮೊದಲು ಅವರು ಅಮಾಯಕರು. ಇವರೆಲ್ಲ ಸೇರಿ ಆಡ್ವಾಣಿ ಮನೆಗೆ ಓಡುತ್ತಾರೆ. ಅಲ್ಲಿ ಎಲ್ಲ ಸೇರಿ, ಸಂಘದ ನಾಯಕರು ಏನಂತಾರೆ ಕೇಳೋಣ ಅಂತಾರೆ. ಆರೆಸ್ಸೆಸ್ ನಾಯಕರು ಏನೋ ಪಿಸುಗುಟ್ಟುತ್ತಾರೆ. ಅದನ್ನು ಒಬ್ಬೊಬ್ಬರು ತಮ್ಮ ಅನುಕೂಲಕ್ಕೆ ತಕ್ಕ ಹಾಗೆ ಅರ್ಥೈಸಿಕೊಂಡು ಹೊಸಸೂತ್ರ ಹೊಸೆಯುತ್ತಾರೆ. ಅಷ್ಟರೊಳಗೆ ಹತ್ತು ದಿನ ಕಳೆದಿರುತ್ತದೆ. ಇಲ್ಲಿ ಹೈಕಮಾಂಡ್ ಅಂದ್ರೆ ರಾಷ್ಟ್ರೀಯ ಅಧ್ಯಕ್ಷ ಗಡ್ಕರಿಯವರಾ? ಮನೆಯ ಯಜಮಾನನಂತಿರುವ ಆಡ್ವಾಣಿಯವರಾ? ಮಾತೃ ಸಂಸ್ಥೆಯಂತಿರುವ ಆರೆಸ್ಸೆಸ್ಸಾ? ಯಾರು? ಯಾರು? ಯಾರಿಗೂ ಪಕ್ಷದ ಮೇಲಾಗಲಿ, ನಾಯಕರ ಮೇಲಾಗಲಿ ಹಿಡಿತವಿಲ್ಲ. ಆದರೂ ಅವರು ಹೈಕಮಾಂಡ್! ಅವರ ಮಾತನ್ನು ಯಾರೂ ಕೇಳದಿದ್ದರೂ, ಕಮಾಂಡ್- ಡಿಮಾಂಡ್ ಮಾಡಿದರೂ ಬೇರೆಯವರು ಕ್ಯಾರೇ ಅನ್ನದಿದ್ದರೂ ಅವರು ಹೈಕಮಾಂಡ್!

ಹಿಂದಿನ ಸಲ ಯಡಿಯೂರಪ್ಪನವರು ‘ಏನೇ ಆದರೂ ನಾನು ಕುರ್ಚಿ ಬಿಡೊಲ್ಲ. ಅಂಥ ಸ್ಥಿತಿ ಬಂದರೆ ಪಕ್ಷವನ್ನೇ ಒಡೆದುಕೊಂಡು ಹೋಗ್ತೇನೆ ಏನಾಡ್ತೀರೋ ಮಾಡ್ಕೊಳ್ಳಿ’ ಅಂತ ಗುಟುರು ಹಾಕಿದರೆ ಹೈಕಮಾಂಡ್ ತಿರುಗಿ ‘ಮಿಯಾಂವ್್’ ಸಹ ಅನ್ನದೆ ಬಾಲಮುದುರಿಕೊಂಡಿತ್ತು. ಇದನ್ನೆಲ್ಲ ಹೈಕಮಾಂಡ್ ಅನ್ನಲಾದೀತಾ? ಆ ಪದಕ್ಕೇ ಇದು ಅಗೌರವ.

ಈ ಹೈಕಮಾಂಡ್ ಸಂಸ್ಕೃತಿಯನ್ನು ಆರಂಭಿಸಿದವರು ಇಂದಿರಾಗಾಂಧಿ. ಅದು ಹೈಕಮಾಂಡ್ ಗೆ ಒಪ್ಪುವ ಖದರು. ಇಂದಿರಾ ಹೇಳಿದರೆ ಅದೇ ಫೈನಲ್. ಯಾರೂ ದೂಸರಾ ಸೊಲ್ಲೆತ್ತುತ್ತಿರಲಿಲ್ಲ. ಮೇಡಂ ಬಾಯಿ ಬಿಟ್ಟು ಹೇಳುವುದು ಬೇಡ, ಮೇಡಂ ಮನಸ್ಸಿನಲ್ಲಿ ಹೀಗಿದೆಯಂತೆ ಎಂದು ಯಾರೋ ಯಂಕಣ್ಣ ಹೇಳಿದರೂ ಸಾಕು, ಅದು ಬಾಯಿಯಿಂದ ಬಾಯಿಗೆ ಹಬ್ಬಿ ಅದೇ ವೇದವಾಕ್ಯವಾಗಿ ಬಿಡುತ್ತಿತ್ತು. ಇಂದಿರಾಗಾಂಧಿ ಸಹ ಅದೇ ಧಿಮಾಕು, ದರ್ಪ, ಸೆಡವು, ಕೆಚ್ಚು, ಪೊಗರು, ಧೀಮಂತಿಕೆ, ಧರ್ತಿಯಿಂದ ವರ್ತಿಸುತ್ತಿದ್ದರು. ಪ್ರಧಾನ ಮಂತ್ರಿ ಕಚೇರಿಯಲ್ಲಿ ಅವರು ಕುಳಿತಿದ್ದರೆ, ಅವರ ಮುಂದೆ ಯಾರೂ ಕುಳಿತುಕೊಳ್ಳುತ್ತಿರಲಿಲ್ಲ. ಕುಳಿತುಕೊಳ್ಳಿ ಎಂದು ಇಂದಿರಾಗಾಂಧಿ ಕೂಡ ಸೌಜನ್ಯಕ್ಕೂ ಹೇಳುತ್ತಿರಲಿಲ್ಲ. ಕೆಲಕಾಲ ಅವರು ತಮ್ಮ ಟೇಬಲ್ ಮುಂದಿದ್ದ ಕುರ್ಚಿಗಳನ್ನೇ ತೆಗೆಸಿ ಹಾಕಿಸಿದ್ದರಂತೆ, ಬಂದವರು ನಿಂತೇ ಮಾತಾಡಬೇಕಿತ್ತಂತೆ.

ಹಾಗೆಂದು ಪಿ.ಎನ್. ಹಕ್ಸರ್ ಬರೆಯುತ್ತಾರೆ. ಈ ಹೈಕಮಾಂಡ್ ನೆಸ್ ಅನ್ನು ಇಂದಿರಾ ಸಂಪಾದಿಸಿಕೊಂಡಿದ್ದರು. ಚಿಟಿಕೆ ಹೊಡೆದರೆ, ಕಣ್ಣು ಮಿಟುಕಿಸಿದರೆ ಕೆಲಸವಾಗುತ್ತಿತ್ತು. ಇಂದಿರಾ ವಿರೋಧ ಕಟ್ಟಿಕೊಂಡು, ಕೆಂಗಣ್ಣಿಗೆ ಗುರಿಯಾಗಿ ಅರೆಗಳಿಗೆ ಸಹ ಪಕ್ಷದಲ್ಲಿ ಇರಲು ಸಾಧ್ಯವಿರಲಿಲ್ಲ. ಮುಂದಾನೊಂದು ದಿನ ಈ ಮನುಷ್ಯನಿಂದ ಅಪಾಯ ಎದುರಾಗಬಹುದು ಎಂದು ಯಾವುದೋ ಸಣ್ಣ ಸಂದೇಹ ಭಾವಕೋಶದ ಕದ ಬಡಿದರೂ ಸಾಕು, ಅವರು ಅವನ ಕತೆ ಮುಗಿಸಿ ಬಿಡುತ್ತಿದ್ದರು. ಅವರು ಪಕ್ಷಕ್ಕೆ ಮಾತ್ರ ಅಲ್ಲ, ಇಡೀ ದೇಶಕ್ಕೆ ಹೈಕಮಾಂಡ್! ಇವರು ಈ ಬೀಜಗುಣದ ಮೊಳಕೆಯನ್ನು ತಮ್ಮ ತಂದೆಯವರಾದ ಜವಾಹರಲಾಲ್ ನೆಹರು ಅವರಲ್ಲಿ ಕಂಡಿದ್ದರು. ನೆಹರು ಇಡೀ ದೇಶವನ್ನು mesmarise ಮಾಡಿದಂಥ ನಾಯಕ. ಅವರ ಮಾತು ಕೇಳಲಷ್ಟೇ ಅಲ್ಲ; ನೋಡಲೂ ಚೆಂದವಾಗಿತ್ತು. ಅವರ ಮಾತನ್ನು ದೇಶಕ್ಕೆ ದೇಶವೇ ಕೇಳಿಸಿಕೊಳ್ಳುತ್ತಿತ್ತು. ಅವರ ಕಮಾಂಡೂ ಹೈ! ಹೀಗಾಗಿ ಅವರೇನು ಹೇಳಿದರೂ ಯಾರೂ ಇಲ್ಲ, ಅಲ್ಲ ಎನ್ನುತ್ತಿರಲಿಲ್ಲ.

ಇಂದಿರಾಗಾಂಧಿ ಅವಕೃಪೆಗೆ ಗುರಿಯಾದ ಯಾರೂ, ಅದೆಂಥ ನಾಯಕನೇ ಆಗಿರಲಿ ಅಲ್ಲಿಗೆ ಅವನ ಇತಿಶ್ರೀ. ಅದು ಅವರ ನಾಯಕತ್ವ. ಹೈಕಮಾಂಡ್ ಅಂದ್ರೆ ಅದು.


ಪಂಡಿತ ದೀನದಯಾಳ ಉಪಾಧ್ಯಾಯರ ನಂತರ ಅಂದಿನ ಜನಸಂಘ ಹಾಗೂ ನಂತರದ ಬಿಜೆಪಿಗೆ ವಾಜಪೇಯಿ- ಆಡ್ವಾಣಿಯವರೇ ಹೈಕಮಾಂಡ್. 1968ರಿಂದ 2006ರ ತನಕ ಇವರಿಬ್ಬರೇ ಅದ್ವಿತೀಯ ನಾಯಕರು. ಇವರ ನಾಯಕತ್ವ ಹೇಗಿತ್ತೆಂದರೆ ಯಾರೂ ಇವರನ್ನು ಪ್ರಶ್ನಿಸಲಿಲ್ಲ. ಗುಜರಾತ್ ನಲ್ಲಿ ಕೇಶುಭಾಯ್ ಪಟೇಲ್ ಅವರಂಥ ರೈತ ನಾಯಕನ ಸರ್ಕಾರ ಅವರ ಅಳಿಯಂದಿರ ಭ್ರಷ್ಟಾಚಾರ, ವೈಫಲ್ಯಗಳಿಂದ ತೀವ್ರ ಟೀಕೆಗೆ ಗುರಿಯಾಗಿತ್ತು. ನಮ್ಮ ಯಡಿಯೂರಪ್ಪ ಹೇಗೋ, ಕೇಶುಭಾಯ್ ಕೂಡ ಹಾಗೇ. ಯಡಿಯೂರಪ್ಪಗಿಂತ ಒಂದು ಕೈ ಮೇಲೆ. ಕರ್ನಾಟಕದಲ್ಲಿ ಲಿಂಗಾಯತರು ಶೇ.18ರಷ್ಟಿದ್ದರೆ, ಕೇಶುಭಾಯ್ ಅವರ ಪಟೇಲ್ ಜಾತಿಯವರು ಶೇ. 30ರಷ್ಟಿದ್ದಾರೆ. ಇಂಥ ಸ್ಥಿತಿಯಲ್ಲಿ ಕೇಶುಭಾಯ್ ಅವರನ್ನು ಬದಲಿಸುವ ಪ್ರಶ್ನೆಯೇ ಇರಲಿಲ್ಲ. ಗುಜರಾತಿನ ಅತ್ಯಂತ ಪ್ರಭಾವಿ ಹಾಗೂ ಜನಪ್ರಿಯ ನಾಯಕನ ಬದಲಿಸಿದರೆ, ಅವರ ಜಾಗ ತುಂಬುವ ಯಾವ ನಾಯಕರಿದ್ದಾರೆ? ಹಾಗೆಂದು ಭ್ರಷ್ಟ ಕೇಶುಭಾಯ್ ಅವರನ್ನು ಮುಂದುವರಿಸಲಾದೀತೇ? ವಾಜಪೇಯಿ- ಆಡ್ವಾಣಿ ಕಠಿಣ ನಿಲುವು ತೆಗೆದುಕೊಂಡರು.

ತತ್ ಕ್ಷಣ ರಾಜೀನಾಮೆ ನೀಡುವಂತೆ ಕೇಶುಭಾಯ್ ಗೆ ಸೂಚಿಸಲಾಯಿತು. ಆಗ ಬಂದವರೇ ನರೇಂದ್ರ ಮೋದಿ! ಬಿಜೆಪಿಯಲ್ಲಿ ಈಗಿನ ಹೈಕಮಾಂಡ್ ಇದ್ದಿದ್ದರೆ ಕೇಶುಭಾಯ್ ಅವರನ್ನು ಮುಟ್ಟುತ್ತಿರಲಿಲ್ಲ. ಮೋದಿ ಬರುವ ಪ್ರಶ್ನೆಯೇ ಇರಲಿಲ್ಲ.

ಹುಬ್ಬಳ್ಳಿ ಧ್ವಜಾರೋಹಣ ವಿವಾದ ಪ್ರಸಂಗದ ಹಿನ್ನೆಲೆಯಲ್ಲಿ ಮಧ್ಯಪ್ರದೇಶದ ಮುಖ್ಯಮಂತ್ರಿ ಪದವಿಗೆ ಉಮಾಭಾರತಿ ರಾಜೀನಾಮೆ ನೀಡಿದರಷ್ಟೇ. ಆನಂತರ ಅಧಿಕಾರಕ್ಕೆ ಬಂದ ಬಾಬುಲಾಲ್ ಗೌರ್ ಏಳು ತಿಂಗಳ ಬಳಿಕ ರಾಜೀನಾಮೆ ಕೊಡಬೇಕಾಯಿತು. ಆಗ ಉಮಾಭಾರತಿಯವರೇ ಮುಖ್ಯಮಂತ್ರಿಯಾಗುತ್ತಾರೆಂದು ಎಲ್ಲರೂ ಭಾವಿಸಿದ್ದರು. ಆದರೆ ವಾಜಪೇಯಿ- ಆಡ್ವಾಣಿ ಕರೆದುಕೊಂಡು ಬಂದಿದ್ದು ಶಿವರಾಜ್ ಸಿಂಗ್ ಚೌವಾಣ್ ಅವರನ್ನು. ಉಮಾ ಭಾರತಿ ಪಕ್ಷವನ್ನೇ ತೊರೆದು ಹೋದರು. ವಾಜಪೇಯಿ- ಆಡ್ವಾಣಿ ಸೊಪ್ಪು ಹಾಕಲಿಲ್ಲ. ಉತ್ತರ ಪ್ರದೇಶದಲ್ಲಿ ಕಲ್ಯಾಣ್ ಸಿಂಗ್ ಕತೆಯೂ ಹೀಗೇ ಆಯಿತು. ಸ್ವಜನಪಕ್ಷಪಾತ, ಭ್ರಷ್ಟಾಚಾರ, ದುರಾಡಳಿತ, ಸ್ತ್ರೀ ವ್ಯಾಮೋಹದಿಂದ ಕಲ್ಯಾಣ್ ಸಿಂಗ್ ಕಳಂಕಿತರಾದಾಗ, ಅವರನ್ನು ಮುಂದುವರಿಸುವ ಮಾತೇ ಇರಲಿಲ್ಲ. ಆಡ್ವಾಣಿಯವರು ಕಲ್ಯಾಣ್ ಸಿಂಗ್ ಗೆ ಫೋನ್ ಮಾಡಿ ರಾಜೀನಾಮೆ ಕೊಡುವಂತೆ ಸೂಚಿಸಿದರು. ಅದಾಗಿ ಒಂದು ಗಂಟೆಯಲ್ಲಿ ಕಲ್ಯಾಣ್ ಸಿಂಗ್ ಗೆ ರಾಜೀನಾಮೆ ಪತ್ರದೊಂದಿಗೆ ರಾಜಭವನದಲ್ಲಿದ್ದರು! ವಾಜಪೇಯಿಯವರಾಗಲಿ, ಆಡ್ವಾಣಿಯವರಾಗಲಿ, ಹೇಳಿದರೆಂದರೆ ಅದು ದೇವವಾಣಿ. ಅದನ್ನು ಪ್ರಶ್ನಿಸುವ ಛಾತಿ ಯಾರಿಗೂ ಇರುತ್ತಿರಲಿಲ್ಲ. ಅವರದೇ ಸುಪ್ರೀಂ ನಿರ್ಧಾರ.

ಇದಕ್ಕೆ ಮುಖ್ಯ ಕಾರಣ ಅವರ ಸ್ಥಾನಮಾನ, stature, acceptibility, ಅವರ integrity ಹಾಗೂ ನಾಯಕತ್ವ. ಇವರು ಯಾರಿಂದಲೋ ನೇಮಕರಾದವರಲ್ಲ. ಜನಮಾನಸದಿಂದ ಅವತರಿಸಿ ಬಂದವರು. ಜನರೇ ಠಸ್ಸೆ ಹೊಡೆದು ನಮ್ಮ ನಾಯಕರಿವರು ಎಂದು ಅಭಿಮಾನದಿಂದ ಕರೆದವರು. ಇವರಿಗಾಗಿ ಏನೂ ಮಾಡಲು ಜನ ಸಿದ್ಧ. ڪ. appointed ನಾಯಕರಿಗೂ accepted ನಾಯಕರಿಗೂ ಇರುವ ವ್ಯತ್ಯಾಸ ಇದು. appointed ನಾಯಕರು ನಾಲ್ಕು ಮಂದಿಯಿಂದappoint ಆದವರು. ಆದರೆ accepted ನಾಯಕರು ಹಾಗಲ್ಲ. ಅವರು accepted by mass. ತ್ಯಾಗ, ಪರಿಶ್ರಮ, ನಿಸ್ವಾರ್ಥ, ಪ್ರಾಮಾಣಿಕತೆಯಿಂದ ಜನರಿಗೆ ಪ್ರಿಯರಾದವರು.

ಕಾಂಗ್ರೆಸ್ ಹೈಕಮಾಂಡ್ ಆದ ಸೋನಿಯಾ ಗಾಂಧಿಯವರಾಗಲಿ, ಬಿಜೆಪಿ ಹೈಕಮಾಂಡ್ ಆದ ಗಡ್ಕರಿಯವರಾಗಲಿ ಜನಮಾನಸದಿಂದ ಬಂದವರಲ್ಲ. ಜನರು ಒಪ್ಪಿದ್ದರಿಂದ ಪದವಿಗೇರಿದವರಲ್ಲ. ಏನಕೇನ ಪದವಿಯಲ್ಲಿದ್ದಾರೆಂದು ಜನರು ಒಪ್ಪಿದ್ದಾರೆ. ಅದರಲ್ಲೂ ಗಡ್ಕರಿಯವರು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗುವ ತನಕ ಅಂಥದ್ದೊಂದು ಶರೀರ ಇತ್ತೆಂದು ಸಹ ಅನೇಕ ಬಿಜೆಪಿ ಮಂದಿಗೇ ಗೊತ್ತಿರಲಿಲ್ಲ. ಹೀಗಾಗಿ ಇಂಥವರು ಹೇಗೆ ಕಮಾಂಡ್ ಗಳಿಸಿಕೊಳ್ಳಬಲ್ಲರು? ಯಾರೋ ಕೆಲವರು ಹೇಳಿದ ಮಾತ್ರಕ್ಕೆ ಆ ಪದವಿಯಲ್ಲಿ ಕುಳಿತಿದ್ದಾರೆ.

ವಾಜಪೇಯಿ- ಆಡ್ವಾಣಿ ಆರೆಸ್ಸೆಸ್ ಚಿಂತನೆಯ ಮೂಸೆಯಲ್ಲಿ ಬೆಳೆದು ಬಂದವರು. ಗುರೂಜೀ, ಶಾಮಪ್ರಸಾದ ಮುಖರ್ಜಿ, ದೀನದಯಾಳ ಉಪಾಧ್ಯಾಯ, ದೇವರಸ್, ರಜ್ಜು ಭಯ್ಯಾ ಅವರಂಥವರ ಗರಡಿಯಲ್ಲಿ ಪಳಗಿದವರು. ವಯಸ್ಸು, ಅನುಭವ, ವೈಚಾರಿಕ ಸಂಘರ್ಷದಿಂದ ಪಕ್ವವಾದವರು. Leadership is not in position but in action ಎಂದು ಬಲವಾಗಿ ನಂಬಿದವರು.

ಆದರೆ ಇಂದು ನಾಯಕತ್ವವೇ ಇಲ್ಲದಂತಾಗಿದೆ. ಅನುಕೂಲವಾದಿ, ಅವಕಾಶವಾದಿ, ಹೊಂದಾಣಿಕೆ ಮಾಡಿಕೊಳ್ಳುವ, ಸ್ವಾರ್ಥ ನಾಯಕತ್ವವೇ ಎಲ್ಲಾ ಪಕ್ಷಗಳಲ್ಲೂ ವಿಜೃಂಭಿಸುತ್ತಿದೆ. ‘ರಾಮಾಯ ಸ್ವಸ್ತಿ, ರಾವಣಾಯ ಸ್ವಸ್ತಿ’ ಎನ್ನುವವರೇ ಗೆಲ್ಲುತ್ತಿದ್ದಾರೆ. ರಾಮನ ಕೈ ಮೇಲಾದಾಗ ಅವನಿಗೆ ಜೈ, ರಾವಣನ ಕೈ ಮೇಲಾದಾಗ ರಾಮನಿಗೆ ಧಿಕ್ಕಾರ ಕೂಗುವವರ ಕಾಲವಿದು. ಪಕ್ಷಕ್ಕೆ, ಸಮಾಜಕ್ಕೆ ಆತ್ಮಸಾಕ್ಷಿಯಾದವರು, ವೈಚಾರಿಕ ಸಂಘರ್ಷಕ್ಕೆ ಆತ್ಮನಿವೇದಿಸಿಕೊಳ್ಳುವವರು ಯಾರಿಗೂ ಸ್ವಸ್ತಿ ಎನ್ನುವುದಿಲ್ಲ. ಆದರೆ ಈ ನಾಯಕರ ‘ಆತ್ಮ’ವಿರುವುದು ಅಲ್ಲಲ್ಲವಲ್ಲಾ?


ನೆಹರು, ಇಂದಿರಾ, ವಾಜಪೇಯಿ ಇವರೆಲ್ಲ ಜನರಿಂದ ಆಯ್ಕೆಯಾದ ಪ್ರಧಾನಿಗಳು. People Voted for them.. ಉಳಿದವರೆಲ್ಲ ಅನ್ಯಾನ್ಯ ಕಾರಣಗಳಿಂದ ಪ್ರಧಾನಿಗಳಾದವರು. ಒಂಥರ Accidental Prime Ministers!

ಇಂಥವರು ಆ ಹುದ್ದೆಯಲ್ಲಿ ಇರುವ ತನಕ ಪದನಿಮಿತ್ತದಿಂದ ಗೌರವ ಪಡೆಯುತ್ತಾರೆ. ಆ ಪದವಿ ಹೋಗುತ್ತಿದ್ದಂತೆ ನೇಪಥ್ಯಕ್ಕೆ ಸರಿಯುತ್ತಾರೆ. ಆದರೆ ನಿಜವಾದ ನಾಯಕ ಹಾಗಲ್ಲ. ಆತ ಕೇವಲ ಒಂದು ಪಕ್ಷವನ್ನಷ್ಟೇ ಅಲ್ಲ, ಇಡೀ ವಿಚಾರಧಾರೆಯನ್ನು, ಜನಮಾನಸವನ್ನು, ದೇಶವಾಸಿಗಳನ್ನು ಮುನ್ನಡೆಸುತ್ತಾನೆ. ಅಂಥವರನ್ನು ಜನ ಹೆಮ್ಮೆಯಿಂದ ‘ಇವರು ನಮ್ಮ ನಾಯಕರು’ ಎಂದು ಬಾಯ್ತುಂಬಾ ಕರೆಯುತ್ತಾರೆ, ಆರಾಧಿಸುತ್ತಾರೆ. ಉಳಿದವರನ್ನು ಅಧಿಕಾರದಲ್ಲಿದ್ದಷ್ಟು ದಿನ ಅಭಿನಂದಿಸುತ್ತಾರೆ, ಅದು ಹೋಗುತ್ತಿದ್ದಂತೆ ನಂದಿಸುತ್ತಾರೆ.

ಈ ಮಾತನ್ನು ಹೇಳಿದವರ್ಯಾರೆಂಬುದು ನೆನಪಾಗುತ್ತಿಲ್ಲ. ಆ ಮಾತನ್ನು ಕೇಳಿWhen first rate leadership is not available, second rate leadership will come. When second rate leadership comes, it will be advised, assisted and surrounded by third rate leadership. ಇಂದಿನ ಸಂದರ್ಭದಲ್ಲಿ ಇದು ಎಷ್ಟು ಸತ್ಯ ಅಲ್ಲವೇ? ನಮಗೆ ಇಂದು ಫಸ್ಟ್ ಕ್ಲಾಸ್ ನಾಯಕತ್ವ ಇಲ್ಲವೇ ಇಲ್ಲ. ಅವಕಾಶವಾದಿ, ಅನುಕೂಲವಾದಿಗಳೇ ನಮ್ಮ ನಾಯಕರು. ಫಸ್ಟ್ ಕ್ಲಾಸ್ ನಾಯಕತ್ವ ಇಲ್ಲದಿರುವುದರಿಂದ ಸೆಕೆಂಡ್ ಕ್ಲಾಸ್ ನಾಯಕತ್ವ ಸಿಕ್ಕಿದೆ. ಈ ನಾಯಕರನ್ನು ಥರ್ಡ್ ಕ್ಲಾಸ್ ಸಹಾಯಕರು, ಸಲಹೆಗಾರರು ಸುತ್ತುವರಿದಿದ್ದಾರೆ. ಹೀಗಾಗಿ ಇವರು ಸಮಸ್ತ ಜನರನ್ನು ಪ್ರತಿನಿಧಿಸುವುದಿಲ್ಲ. ಕೆಲವು ಸ್ಥಾಪಿತ ಹಿತಾಸಕ್ತಿ, ಸೀಮಿತ ವ್ಯಕ್ತಿಗಳನ್ನಷ್ಟೇ ಪ್ರತಿನಿಧಿಸುತ್ತಾರೆ.

ಇಂಥವರನ್ನು ನಾಯಕರೆಂದು ಒಪ್ಪಿಕೊಳ್ಳುವುದು ನಮ್ಮ ದೌರ್ಭಾಗ್ಯ!

ಕೃಪೆ: ವಿಭಟ್.ಇನ್ (ವಿಶ್ವೇಶ್ವರ ಭಟ್)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ