ನನ್ನ ಬ್ಲಾಗ್ ಪಟ್ಟಿ

ಸೋಮವಾರ, ಜೂನ್ 13, 2011

ಕಲೆಯೇ ಸಾಯಲು ಅದೇನು ಆತನ ಜತೆ ಹುಟ್ಟಿದ್ದಲ್ಲ!

ಅವರು ಕುಸುರಿ ಕೆಲಸ ಬಿಟ್ಟು ಬಹಳ ಸರಳವಾಗಿ ಚಿತ್ರಿಸುತ್ತಾ ಹೋದರು. ಎಲ್ಲರಿಗಿಂತ ವಿಭಿನ್ನ ಎನಿಸುವಂತೆ ಚಿತ್ರಿಸಿದರು. ಏನೋ ಹೊಸತನ ನೀಡಿದರು. ಆ ಕಾರಣಕ್ಕಾಗಿಯೇ ಎಲ್ಲರ ಗಮನ ಸೆಳೆದರು. ಮಾಡರ್ನ್ ಆರ್ಟ್್ನ ಈ ಪರ್ವದಲ್ಲಿ ಇಂಡಿಯನ್ ಆರ್ಟ್್ಗೆ ವಿಶ್ವಮನ್ನಣೆ ತಂದು ಕೊಟ್ಟರು. ಭಾರತೀಯ ಕಲಾವಿದರ ಚಿತ್ರಗಳೂ ಲಕ್ಷಾಂತರ ರೂ.ಗಳಿಗೆ ಮಾರಾಟವಾಗಬಲ್ಲವು ಎಂಬುದನ್ನು ತೋರಿಸಿಕೊಟ್ಟರು. ಚಿತ್ರಗಳಿಗೆ ಬಣ್ಣಗಳಿಂದ ಜೀವ ತುಂಬಿದರು. ಆ ಬಣ್ಣಗಳಲ್ಲೇ ಭಾವನೆಯನ್ನು ವ್ಯಕ್ತಪಡಿಸಲು ಹೊರಟರು.
ಹಾಗಿದ್ದರೂ ಈ ದೇಶ, ಅದರ ನೆಲ, ಜಲ, ಕಣ ಕಣಗಳಲ್ಲೂ ದೈವತ್ವವನ್ನು ಕಾಣುವ, ಪೂಜಿಸುವ, ಮಾತೆಯೆಂದು ಆರಾಧಿಸುವ ಕೋಟ್ಯಂತರ ಜನರ ಭಾವನೆಗಳೇಕೆ ಅವರಿಗೆ ಅರ್ಥವಾಗಲಿಲ್ಲ?
ಒಬ್ಬ ಕಲಾವಿದನಾದ ಮಾತ್ರಕ್ಕೆ ವೋತಪ್ರೋತವಾಗಿ ಕುಂಚದಲ್ಲಿ ತನ್ನ ಭಾವನೆಗಳನ್ನು ವ್ಯಕ್ತಪಡಿಸುವುದು ಸರಿಯೇ? ಆ ಭಾವನೆಗಳೂ “”Selective” ಆಗಬೇಕಿತ್ತೆ? ಒಬ್ಬ ಮಹಾನ್ ಕಲಾವಿದನೆನಿಸಿಕೊಂಡವನ ಮನಸ್ಸೂ ಪಕ್ಷಪಾತಿಯಾಗಿ ಬಿಟ್ಟರೆ ಗತಿಯೇನು? ಹಾಗಿದ್ದೂ Artistic freedom ಹೆಸರಿನಲ್ಲಿ ಅನ್ಯರ ಭಾವನೆಗಳಿಗೆ ಘಾಸಿಯುಂಟು ಮಾಡುವ ಕೆಲಸವನ್ನು ಸಮರ್ಥಿಸಿಕೊಳ್ಳಲು ಹೊರಟರೆ ಸಮಾಜ ಸುಮ್ಮನಾಗಿ ಬಿಡುತ್ತದೆಯೇ? ಅಂತಾರಾಷ್ಟ್ರೀಯ ಖ್ಯಾತಿಯ ಭಾರತೀಯ ಕಲಾವಿದ ಎಂ.ಎಫ್. ಹುಸೇನ್ ಲಂಡನ್್ನಲ್ಲಿ ಮರಣ ಹೊಂದಿರುವ ಈ ಸಮಯದಲ್ಲಿ ಇಂತಹ ಪ್ರಶ್ನೆಗಳು ಕಾಡುತ್ತಿವೆ. ಏಕಾಗಿ ಅವರು ಲಂಡನ್್ನಲ್ಲಿ ಸಾಯಬೇಕಾಯಿತು? ಏಕಾಗಿ ಕತಾರ್್ನ ಪ್ರಜೆಯಾಗಬೇಕಾಯಿತು? ಏಕಾಗಿ ಪಲಾಯನಗೈದ ವ್ಯಕ್ತಿಯಂತೆ ಬದುಕಬೇಕಾಯಿತು? ಏಕಾಗಿ ಕಾನೂನಿನ ದೃಷ್ಟಿಯಲ್ಲಿ ತಾವೊಬ್ಬ Fugitive ಎನಿಸಿಕೊಳ್ಳಬೇಕಾಯಿತು? ಏಕಾಗಿ ಭಾರತವನ್ನು ತ್ಯಜಿಸಬೇಕಾದ ಪರಿಸ್ಥಿತಿಯನ್ನು ತಂದೊಡ್ಡಿಕೊಂಡರು?

ಖ್ಯಾತ ಕಲಾವಿದ ಬಿ.ಕೆ.ಎಸ್. ವರ್ಮಾ ಅವರು ವಿವರಿಸಿದಂತೆ ಕಲೆಯಲ್ಲಿ ಎರಡು ವಿಧಗಳಿವೆ.
1. ಭಾವನಾತ್ಮಕ ಕಲೆ
2. ಭಾವನಾತೀತ ಕಲೆ
ಈ ಭಾವನಾತೀತ ಕಲೆಗೆ ಅದರದ್ದೇ ಆದ ಅಭಿವ್ಯಕ್ತಿ ಸ್ವಾತಂತ್ರ್ಯವಿದೆ. ಆದರೆ ಭಾವನಾತ್ಮಕ ಕಲೆಗೆ, ಸಂಬಂಧಕ್ಕೆ ಚೌಕಟ್ಟಿದೆ. ಹಾಗಾಗಿ ಇಲ್ಲಿ ಮೂರು ಭಾಷೆಗಳಿವೆ. ಒಂದು ಕಥಾ ಭಾಷೆ, ಎರಡನೆಯದ್ದು ಚರಿತ್ರ ಭಾಷೆ, ಮೂರನೆಯದ್ದು ಕಾವ್ಯ ಭಾಷೆ. ಇದ್ದಿದ್ದನ್ನು ಇದ್ದ ಹಾಗೆ ಹೇಳುವುದು ಚರಿತ್ರ ಭಾಷೆ, ಸ್ವಲ್ಪ ಸೇರಿಸಿ ಹೇಳುವುದು ಕಥಾ ಭಾಷೆ. ಇಲ್ಲದ್ದನ್ನು ಸೃಷ್ಟಿಸಿ ಹೇಳುವುದು ಕಾವ್ಯ ಭಾಷೆ.
ಅವರು…
I mean, ಮಕ್ಬೂಲ್ ಫಿದಾ ಹುಸೇನ್ ಕಾವ್ಯ ಭಾಷೆಯಲ್ಲಿ ಅನುಭವಿಸುತ್ತಾ ಭಾವನಾತೀತರಾಗಿ ಭಾವನಾತ್ಮಕ ಕಲೆಯನ್ನು ಏಕಾಗಿ ಚಿತ್ರಿಸಿದರು? ಅದರಿಂದ ಈ ದೇಶದ ಬಹುಸಂಖ್ಯಾತರ ಭಾವನೆಗಳಿಗೆ ನೋವುಂಟಾಗುತ್ತದೆ ಎಂಬುದರ ಅರಿವಿರಲಿಲ್ಲವೆ? ಎಡವುದಕ್ಕೂ, ಉದ್ದೇಶಪೂರ್ವಕವಾಗಿ ಚಿತ್ರಿಸುವುದಕ್ಕೂ ವ್ಯತ್ಯಾಸವಿದೆಯಲ್ಲವೆ? ಸೀತೆ, ಸರಸ್ವತಿ, ಲಕ್ಷ್ಮಿ, ಭಾರತಮಾತೆ, ಬ್ರಾಹ್ಮಣ ಹೀಗೆ ಒಂದರ ಹಿಂದೆ ಒಂದರಂತೆ ನಗ್ನ ಚಿತ್ರಗಳನ್ನು ಬರೆಯುತ್ತಾ ಹೋಗಿದ್ದೇಕೆ? ಅದನ್ನು ಅಭಿವ್ಯಕ್ತಿ ಸ್ವಾತಂತ್ರ್ಯ ಎನ್ನುವುದಾದರೆ ಅವರ ಅಭಿವ್ಯಕ್ತಿಯಲ್ಲೂ ಪಕ್ಷಪಾತ ತೋರಿದ್ದೇಕೆ? ಹಿಂದೂ ಧರ್ಮದ ದೇವತೆಗಳನ್ನು ಚಿತ್ರಿಸುವಾಗ ಕಾಣುವ ನಗ್ನತೆಯನ್ನು ಸ್ವಧರ್ಮ, ಧರ್ಮೀಯರ ಚಿತ್ರಣಗಳಲ್ಲೇಕೆ ತೋರಲಿಲ್ಲ? ಒಂದು ವೇಳೆ, ಬೆತ್ತಲಾಗಿ, ಪ್ರಾಣಿಗಳ ಜತೆ ಲೈಂಗಿಕ ಕ್ರಿಯೆ ನಡೆಸುವಂತೆ ಇಸ್ಲಾಮ್್ನ ಪೂಜನೀಯರನ್ನೂ ಚಿತ್ರಿಸಿದ್ದರೆ ಮುಸ್ಲಿಮರು ಸುಮ್ಮನಾಗುತ್ತಿದ್ದರೆ? ಷರಿಯಾ ಕಾನೂನಿನಡಿ ಹುಸೇನ್್ರನ್ನು ಕಲ್ಲು ಹೊಡೆದು ಸಾಯಿಸದೇ ಬಿಡುತ್ತಿದ್ದರೆ?
ಇಷ್ಟಕ್ಕೂ “ಫ್ರೀಡಂ ಆಫ್ ಎಕ್ಸ್್ಪ್ರೆಷನ್್” ಅಂದರೆ ಏನು? ಯಾರು ಯಾರನ್ನ ಬೇಕಾದರೂ ಬೆತ್ತಲಾಗಿ ಚಿತ್ರಿಸುವುದೇ ಅಭಿವ್ಯಕ್ತಿ ಸ್ವಾತಂತ್ರ್ಯವೇ? ಈ ಹುಸೇನ್ ಅವರ ಕಣ್ಣಿಗೆ ಬರೀ ಹಿಂದೂ ದೇವ-ದೇವತೆಗಳೇ ಏಕೆ ನಗ್ನವಾಗಿ ಕಾಣುತ್ತಾರೆ? ಒಂದೆಡೆ ದುರ್ಗೆ ಹುಲಿಯೊಂದಿಗೆ ಸಂಭೋಗದಲ್ಲಿ ತೊಡಗಿರುವಂತೆ ಚಿತ್ರಿಸುವ ಹುಸೇನ್, ತಮ್ಮ ಪುತ್ರಿಯನ್ನು ಮಾತ್ರ ಮೈ ತುಂಬ ಬಟ್ಟೆಯೊಂದಿಗೆ ಚಿತ್ರಿಸಿದ್ದಾರೆ. ಭಾರತಮಾತೆಯನ್ನು ನಗ್ನವಾಗಿಸಿರುವ ಅವರು, ತಮ್ಮ ತಾಯಿ ಜುನೈಬ್ ಮೈಯನ್ನು ಬಟ್ಟೆಯಿಂದ ಮುಚ್ಚಿದ್ದಾರೆ! ವೇಷ- ಭೂಷಣಗಳಿಂದ ಅಲಂಕೃತನಾಗಿರುವ ಮುಸ್ಲಿಮ್ ರಾಜನ ಪಕ್ಕದಲ್ಲಿ ನಗ್ನ ಬ್ರಾಹ್ಮಣನ ಚಿತ್ರವಿದೆ. ದ್ರೌಪದಿ, ಸರಸ್ವತಿ, ಪಾರ್ವತಿ, ಸೀತೆಯರನ್ನು ನಗ್ನಗೊಳಿಸಿರುವ ಹುಸೇನ್, ಮುಸ್ಲಿಂ ಮಹಿಳೆ ಹಾಗೂ ಮದರ್ ಥೆರೇಸಾ ಅವರ ಮೈ ಮುಚ್ಚಿದ್ದಾರೆ!!
ಇಂತಹ ಇಬ್ಬಂದಿತನ ಬೇಕಿತ್ತೆ?
ಒಂದು ವೇಳೆ, ಬೆತ್ತಲೆ ಚಿತ್ರ ಬರೆಯುವುದೇ ಕಲೆ ಅನ್ನುವುದಾದರೆ, “ಫ್ರೀಡಂ ಆಫ್ ಎಕ್ಸ್್ಪ್ರೆಷನ್್” ನಡಿ ಅಂತಹ ಪರಧರ್ಮ, ಅವಹೇಳನವನ್ನೂ ಸಮರ್ಥಿಸಿಕೊಳ್ಳಬಹುದೇ ಆಗಿದ್ದರೆ ಹುಸೇನ್ ಅವರು ತಮ್ಮ ತಾಯಿ, ಮಗಳನ್ನೂ ಬೆತ್ತಲಾಗಿ ಕಲ್ಪಿಸಿಕೊಂಡು ಚಿತ್ರ ಬರೆಯಬಹುದಿತ್ತಲ್ಲವೆ?” ದುರ್ಗೆ ಬದಲು ತನ್ನ ತಾಯಿಯೇ ಹುಲಿಯ ಜತೆ ರತಿಕ್ರೀಡೆ ನಡೆಸುವಂತೆ ಏಕೆ ಚಿತ್ರಿಸಲಿಲ್ಲ? “ಫ್ರೀಡಂ ಆಫ್ ಎಕ್ಸ್್ಪ್ರೆಷನ್್” ಸೂತ್ರವನ್ನು ತಮ್ಮ ಕುಟುಂಬ ಹಾಗೂ ಸ್ವಧರ್ಮಕ್ಕೂ ಏಕೆ ಅನ್ವಯ ಮಾಡಿಕೊಳ್ಳಲಿಲ್ಲ? ಇಂತಹ ದ್ವಂದ್ವ ನಿಲುವಿನ ಹುಸೇನ್ ಅವರನ್ನು ಸಮರ್ಥಿಸಿಕೊಂಡಿದ್ದ ಶಶಿ ತರೂರ್, “ಖಜುರಾಹೋದಲ್ಲಿರುವುದು ಕಾಮಕ್ರೀಡೆಯ ಅಭಿವ್ಯಕ್ತಿಯೇ ಅಲ್ಲವೆ?” ಎಂದು ಪ್ರಶ್ನಿಸಿದ್ದರು. ಹೌದು, ಕಾಮಸೂತ್ರವನ್ನು ಜಗತ್ತಿಗೆ ಕೊಟ್ಟವರು ನಾವೇ. ಖಜುರಾಹೋದಲ್ಲಿರುವ ಶಿಲ್ಪಕಲೆಗಳಲ್ಲಿ ಲೈಂಗಿಕ ಕ್ರಿಯೆಗಳ ಚಿತ್ರಣ ಇರುವುದೂ ದಿಟವೇ. ಆದರೆ ಈಗಿನ ವಿಜ್ಞಾನದಂತೆಯೇ ಆಗ ಶಿಲ್ಪ ಚಿತ್ರಗಳ ಮೂಲಕ ಲೈಂಗಿಕ ಕ್ರಿಯೆಯನ್ನು ತೋರಿಸಿದ್ದಾರಷ್ಟೇ. ಹಾಗೆ ತೋರಿಸುವುದಕ್ಕೂ ಅವುಗಳಿಗೆ ಸೀತೆ, ಸರಸ್ವತಿಯರ ಹೆಸರು ಕೊಟ್ಟು ವಿವರಿಸುವುದಕ್ಕೂ ವ್ಯತ್ಯಾಸವಿದೆ. ಅಷ್ಟಕ್ಕೂ ಒಂದು ಹುಡುಗಿಯನ್ನು ನಗ್ನವಾಗಿ ಕಲ್ಪಿಸಿಕೊಳ್ಳುವುದಕ್ಕೂ ಅದೇ ಸ್ಥಾನದಲ್ಲಿ ಸ್ವಂತ ತಾಯಿ, ತಂಗಿ, ಮಗಳನ್ನು ಕಲ್ಪಿಸಿಕೊಳ್ಳುವುದಕ್ಕೂ ವ್ಯತ್ಯಾಸವಿದೆಯಲ್ಲವೆ? ಮಿಗಿಲಾಗಿ ಸೀತೆ, ಸರಸ್ವತಿ, ಲಕ್ಷ್ಮೀ, ದುರ್ಗೆಯರಂತಹ ಪೂಜನೀಯರನ್ನು ಯಾವ ದೇವಸ್ಥಾನದಲ್ಲಿ ಅಶ್ಲೀಲವಾಗಿ ತೋರಿಸಿದ್ದಾರೆಯೇ ಹೇಳಿ?
ಏಕೆ ಇಂತಹ ಪ್ರಶ್ನೆಗಳನ್ನು ಮತ್ತೆ ಮತ್ತೆ ಕೇಳಬೇಕಾಗಿದೆಯೆಂದರೆ ಧರ್ಮ, ದೇಶಾಭಿಮಾನದ ವಿಷಯದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಅಡ್ಡ ತರಲು ಸಾಧ್ಯವಿಲ್ಲ. ನೀವೇ ಹೇಳಿ, ಯಾರಾದರೂ ತ್ರಿವರ್ಣ ಧ್ವಜವನ್ನು ಸುಡುತ್ತಿರುವುದು ಕಂಡರೆ ನಿಮ್ಮ ಮನಸ್ಸಿಗೆ ನೋವಾಗಿ ರಾಷ್ಟ್ರ ಧ್ವಜಕ್ಕೆ ಅವಮಾನ ಮಾಡಿದವರ ವಿರುದ್ಧ ಸಿಡಿದೇಳುತ್ತೀರೋ ಅಥವಾ ಸುಟ್ಟಿದ್ದು ಕೇಸರಿ, ಬಿಳಿ, ಹಸಿರು ಬಣ್ಣದ ಬಟ್ಟೆಯನ್ನಷ್ಟೇ ಅಂತ ಸುಮ್ಮನಾಗುತ್ತೀರೋ? “ರಾಷ್ಟ್ರಗೀತೆಯನ್ನು ಹಾಡುವ ಬದಲು ವಾದ್ಯ ಸಂಗೀತವನ್ನು ಆಲಿಸೋಣ” ಎಂದ ನಾರಾಯಣಮೂರ್ತಿಯವರ ವಿರುದ್ಧವೇ ಕೇಸು ಹಾಕಿದವರು ನಾವು. ಏಕೆಂದರೆ ರಾಷ್ಟ್ರಗೀತೆ, ರಾಷ್ಟ್ರಧ್ವಜಕ್ಕೆ ಯಾರಾದರೂ ಅಗೌರವ, ಅಸಡ್ಡೆ ತೋರಿದರೆ ನಮ್ಮ ಮನಸ್ಸಿಗೆ ನೋವಾಗುವುದು ಮಾತ್ರವಲ್ಲ, ರೋಷ ಉಕ್ಕಿ ಬರುತ್ತದೆ. ನಮ್ಮ ಪಾಲಿಗೆ ತ್ರಿವರ್ಣ ಧ್ವಜವೆಂದರೆ ಸಾಂಕೇತಿಕ ಮಹತ್ವ ಹೊಂದಿರುವ ಕೇಸರಿ, ಬಿಳಿ, ಹಸಿರು ಬಣ್ಣದ ಬಟ್ಟೆಯಲ್ಲ. ಅದರಲ್ಲಿ ಭಾವನಾತ್ಮಕ ಸಂಬಂಧವಿದೆ. ತಾಯಿಯ ಜತೆಯೂ ಅಂತಹದ್ದೇ ಸಂಬಂಧವಿರುತ್ತದೆ. ಹಾಗಾಗಿಯೇ ತಾಯಿಗೆ ಅವಮಾನ ಮಾಡಿದರೆ ಅದನ್ನು ಸಹಿಸಲು ನಮ್ಮಿಂದಾಗುವುದಿಲ್ಲ. ಹುಸೇನ್ ಅವರಂಥವರಿಗೆ ಮಾತ್ರ ತಾಯಿಗೂ ಹೆಂಡತಿಗೂ ವ್ಯತ್ಯಾಸವೇ ಗೊತ್ತಿರುವುದಿಲ್ಲ. ಅಕಸ್ಮಾತ್ ಗೊತ್ತಿದ್ದರೂ ತನ್ನ ತಾಯಿಯ ಮೈಯನ್ನು ಬಟ್ಟೆಯಿಂದ ಮುಚ್ಚಿ, ಪರರ ತಾಯಿಯನ್ನು ನಗ್ನವಾಗಿ ಚಿತ್ರಿಸುತ್ತಾರೆ. ಎಂ.ಎಫ್ ಹುಸೇನ್ ಎಂದ ಕೂಡಲೇ ನಮಗೆ ಅವರ ರೇಖೆಗಳಿಗಿಂತ ಧಾರ್ಮಿಕ ಭಾವನೆಗಳಿಗೆ ಮಾಡಿದ ಘಾಸಿಯೇ ದೊಡ್ಡದಾಗಿ ಕಾಣಲು ಈ ಧೋರಣೆಯೇ ಕಾರಣವಲ್ಲವೆ?
ಅದಿರಲಿ, ಆರ್ಟ್್ಗೂ ಪೋರ್ನೋಗ್ರಫಿಗೂ ವ್ಯತ್ಯಾಸವೇ ಇಲ್ಲವೆ? ಎಂ.ಎಫ್. ಹುಸೇನ್ ಅವರ ವಿರುದ್ಧ ದೇಶಾದ್ಯಂತ ಸುಮಾರು 1250 ಪೊಲೀಸ್ ದೂರುಗಳು ದಾಖಲಾಗಿದ್ದವು. ನ್ಯಾಯಾಲಯಗಳಲ್ಲಿ 7 ಮೊಕದ್ದಮೆಗಳನ್ನು ಹೂಡಲಾಗಿದೆ. ಭಾರತೀಯ ದಂಡಸಂಹಿತೆ (ಐಪಿಸಿ) ಯ 153 (ಎ), 295, 295 (ಎ) ಪ್ರಕಾರ ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡಿದ್ದ ಹುಸೇನ್ ಅವರ ಕೃತ್ಯ ಶಿಕ್ಷಾರ್ಹ ಮಾತ್ರವಲ್ಲ ಕ್ರಿಮಿನಲ್ ಅಪರಾಧ. ಹಾಗಾಗಿಯೇ ಹರಿದ್ವಾರದ ನ್ಯಾಯಾಲಯ ಹುಸೇನ್ ವಿರುದ್ಧ ಜಾಮೀನುರಹಿತ ವಾರಂಟ್ ಹೊರಡಿಸಿತ್ತು. ಈ ವಾರಂಟ್ ನಂತರ ಭೀತಿಗೊಂಡ ಹುಸೇನ್ ದೇಶದಿಂದಲೇ ಪಲಾಯನ ಮಾಡಿದ್ದರು.
ಕಲೆಯೆಂಬುದು ಮನುಷ್ಯನನ್ನು ಅರಳಿಸಬೇಕು, ಕೆರಳಿಸುವುದಲ್ಲ!
ಎಂ.ಎಫ್. ಹುಸೇನ್್ರ ಪೇಟಿಂಗ್್ಗಳು ಮಿಲಿಯನೇರ್, ಬಿಲಿಯನೇರ್್ಗಳ ಡ್ರಾಯಿಂಗ್ ರೂಮ್್ಗಳ ಗೋಡೆಯನ್ನು ಆಕ್ರಮಿಸಿದ ಮಾತ್ರಕ್ಕೆ ಅವರು ದೊಡ್ಡ ಕಲಾವಿದ, ಕಲಾಕ್ಷೇತ್ರದ ಯುಗ ಪುರುಷನಾಗುವುದಿಲ್ಲ. ಇಷ್ಟಕ್ಕೂ ಮಾಡರ್ನ್ ಆರ್ಟ್ ಎಂದು ಬಾಯಿ ಚಪ್ಪರಿಸುವವರು ಎಲೀಟ್ ವರ್ಗ ಮಾತ್ರ. ಅವು ಶ್ರೀಮಂತರ ಖಯಾಲಿಗಳಷ್ಟೇ. ಹಾಗಿರುವಾಗ ಹುಸೇನ್ ಅಂತ್ಯದೊಂದಿಗೆ ಎಲ್ಲಾ ಮುಗಿದು ಹೋಯಿತೆಂಬಂತೆ ಅಲವತ್ತುಕೊಳ್ಳುತ್ತಿರುವುದರಲ್ಲಿ, ಉತ್ಪ್ರೇಕ್ಷೆಯಿಂದ ಮಾತನಾಡುವುದರಲ್ಲಿ ಅರ್ಥವಿಲ್ಲ. ಕಲೆಯೇನೂ ಎಂ.ಎಫ್. ಜತೆ ಸಾಯುವುದಿಲ್ಲ. ಏಕೆಂದರೆ ಅದೇನು ಅವರ ಜತೆ ಹುಟ್ಟಿದ್ದಲ್ಲ. ಕಲೆಯ ಮೂಲವಿರುವುದು ಹುಸೇನ್್ರಲ್ಲಲ್ಲ. ಇವತ್ತಿಗೂ ಯಾವುದೋ ಒಂದು ಕುಗ್ರಾಮದ ಮನೆಯೊಂದರ ಗೋಡೆಯನ್ನು ಅಲಂಕರಿಸಿರುವುದು ರಾಜಾ ರವಿವರ್ಮನ ಲಕ್ಷ್ಮಿ, ಶಾರದೆಯೇ ಹೊರತು ಎಂ.ಎಫ್. ಹುಸೇನರ ದುಬಾರಿ ಕುದುರೆ ಚಿತ್ರಗಳಲ್ಲ. ಜತಗೆ ಅವನೀಂದ್ರನಾಥ್ ಟಾಗೋರ್, ಜಾಮಿನಿ ರಾಯ್, ನಂದಲಾಲ್ ಬೋಸ್್ರಂತಹ ಅಪ್ರತಿಮ ಕಲಾವಿದರು ಭರತ ಖಂಡದಲ್ಲಿ ಜನ್ಮವೆತ್ತಿ ಹೋಗಿದ್ದಾರೆ.
ಹುಸೇನ್ ಬಹುದೊಡ್ಡ ಕಲಾವಿದ, ಆತನ ಮರಣ ಭಾರತಕ್ಕೆ ಒಂದು ದೊಡ್ಡ ನಷ್ಟ ಎಂದು ಪದಕೋಶದಲ್ಲಿರುವ ಎಲ್ಲ ವಿಶೇಷಣಗಳನ್ನು ಬಳಸಿ ಕೆಲವರು ಹೊಗಳಿದ್ದಾರೆ. ಆದರೆ, ಆತನ ಹೆಸರು ಕೇಳಿದರೆ ಕಣ್ಣಮುಂದೆ ಬರುವ ಒಂದೇ ಒಂದು ಚಿತ್ರವನ್ನು ಹೇಳಿ ನೋಡೋಣ?!
ಇನ್ನು ಮಾಡರ್ನ್ ಆರ್ಟ್ ವಿಷಯಕ್ಕೆ ಬಂದರೂ ಹುಸೇನ್್ಗಿಂತ ಮೊದಲೇ ಅಮೃತಾ ಶೇರ್್ಗಿಲ್, ಕೆ.ಕೆ. ಹೆಬ್ಬಾರ್ ಭಾರತಕ್ಕೆ ವಿಶ್ವ ಮನ್ನಣೆ ತಂದುಕೊಟ್ಟಿ ದ್ದರು. ಬಾಲ್ಯದಲ್ಲೇ ನಮ್ಮಲ್ಲಿ ಉನ್ನತ ಮೌಲ್ಯಗಳನ್ನು ತುಂಬುವ ಮಾಧ್ಯಮವೆಂದರೆ ನಮ್ಮಲ್ಲಿನ ರಾಮಾ ಯಣ, ಮಹಾಭಾರತ ಹಾಗೂ ನೀತಿಕತೆಗಳೇ. ಇಲ್ಲಿನ ಪಾತ್ರಗಳಿಗೆಲ್ಲ ಬಣ್ಣ ತುಂಬಿ ಅಮರ ಚಿತ್ರಕತೆಯಾಗಿಸಿ ಚಿಕ್ಕಂದಿನಲ್ಲೇ ನಮಗರಿವಿಲ್ಲದಂತೆ ನಮ್ಮ ಮನ ಅರಳಿಸಿದ ಡಾ. ಎಸ್.ಎಂ. ಪಂಡಿತ್ ಅವರಂಥ ಚಿತ್ರಕಾರರನ್ನು ನಾವು ಅನವರತ ನೆನಪಿಸಿಕೊಳ್ಳಬೇಕು. ಮೇಲ್ಮಧ್ಯಮವರ್ಗ ಹಾಗೂ ಆಂಗ್ಲ ಮಾಧ್ಯಮದ ಒಂದು ಚಿಕ್ಕ ಗುಂಪು ಹುಸೇನ್ ಅವರನ್ನು ಭಾರತದ ಪಿಕಾಸೋ ಎಂದು ಎಷ್ಟೇ ಹೊಗಳಿದರೂ ಆತ ಭಾರತೀಯ ಎನಿಸಲಾರ. ಭಾರತೀಯ ಮನಸ್ಸುಗಳಿಗೆ ಆತ ನಮ್ಮ ಚಿತ್ರ ಪರಂಪರೆಯ ಒಂದು “ಕಪ್ಪುಕಲೆ’ ಮಾತ್ರ.
ಹುಸೇನ್ ತಮ್ಮ ಕೊನೆ ಕಾಲವನ್ನು ತಾಯ್ನಾಡಲ್ಲಿ ಕಳೆಯಲಾಗಲಿಲ್ಲವಲ್ಲಾ, ಅವರ ಅಂತ್ಯ ಸಂಸ್ಕಾರ ಈ ಮಣ್ಣಿನಲ್ಲಾಗಲಿಲ್ಲವಲ್ಲಾ.. ಭಾರತಕ್ಕೆ ಇದೊಂದು ಕಪ್ಪು ಚುಕ್ಕೆ ಎಂದು ಸಮಕಾಲೀನ ಕಲಾವಿದರಾದ ಕಿಶನ್ ಖನ್ನಾ, ಆಂಜೋಲಿ ಇಳಾ ಮೆನನ್, ಯುವಕಲಾವಿದ ಜಿತಿಶ್ ಕಲ್ಲಟ್ ಮುಂತಾದವರು ಕಣ್ಣೀರು ಸುರಿಸಿದ್ದಾರೆ. ಆದರೆ ಅಂತಹ ಪರಿಸ್ಥಿತಿ ಏಕಾಗಿ ಸೃಷ್ಠಿಯಾಯಿತು?ಈ ದೇಶದ ಕಾನೂನಿಗೆ ಹೆದರಿ, ಕೋರ್ಟ್ ಮುಂದೆ ಹಾಜರಾಗದೆ ಪಲಾಯನ ಮಾಡಿದ, ಯಾವ ಭೂಮಿಯನ್ನು ಭಾರತಮಾತೆ ಎಂದು ಆರಾಧಿಸುತ್ತೇವೋ ಅದನ್ನು ನಗ್ನವಾಗಿ, ಅಶ್ಲೀಲವಾಗಿ ಚಿತ್ರಿಸಿದ ವ್ಯಕ್ತಿಗೆ ಈ ನೆಲದ ಮೇಲೆ ಯಾವ ಪ್ರೀತಿ ಇದ್ದೀತು?
ಇರಲಿ, ಸತ್ತ ಮೇಲೂ ಶಪಿಸುವ ಸಂಸ್ಕೃತಿ ನಮ್ಮ ಭಾರತೀಯರದ್ದಲ್ಲ. May his soul rest in peace “forever”!

ಕೃಪೆ: ಪ್ರತಾಪ ಸಿಂಹ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ