ನನ್ನ ಬ್ಲಾಗ್ ಪಟ್ಟಿ

ಗುರುವಾರ, ಜೂನ್ 16, 2011

ಕನ್ನಡದ ಸಣ್ಣಮನಗಳ ಸಾಹಿತ್ಯ ರಾಜಕಾರಣ!


ಭಾರತದ ಹೆಮ್ಮೆಯಂತಿರುವ ಭೈರಪ್ಪನವರನ್ನು 2011ನೇ ಸಾಲಿನ ಪ್ರತಿಷ್ಠಿತ ‘ಸರಸ್ವತಿ ಸಮ್ಮಾನ್್’ ಪುರಸ್ಕಾರಕ್ಕೆ ಆಯ್ಕೆ ಮಾಡಿರುವ ಸುದ್ದಿ ಕಳೆದ ಏಪ್ರಿಲ್ 5ರಂದು ಪ್ರಕಟವಾದಾಗ ಕನ್ನಡಕ್ಕೆ ಮೊಟ್ಟಮೊದಲ ಬಾರಿಗೆ ಅಂತಹ ಪ್ರಶಸ್ತಿ ತಂದುಕೊಟ್ಟಿರುವ ಅವರನ್ನು ಸಂದರ್ಶನ ಮಾಡಬೇಕೆಂದು ನಮ್ಮ ‘ಕನ್ನಡಪ್ರಭ’ದ ಪ್ರಧಾನ ಸಂಪಾದಕರಾದ ವಿಶ್ವೇಶ್ವರ ಭಟ್ಟರು ಸೂಚಿಸಿದರು. ಪ್ರಶ್ನೆಗಳನ್ನು ಸಿದ್ಧಪಡಿಸಿಕೊಂಡು ಕರೆ ಮಾಡಿದೆ. ‘ಸರ್, ಜ್ಞಾನಪೀಠವೂ ಸಿಕ್ಕಿದ್ದರೆ ನಿಮ್ಮ ದೊಡ್ಡ ಓದುಗ ವರ್ಗಕ್ಕೆ ಖುಷಿಯಾಗುತ್ತಿತ್ತು. ಆಗಿಂದಾಗ್ಗೆ ನಿಮ್ಮ ಹೆಸರು ಪ್ರಸ್ತಾಪವಾಗುತ್ತಿದ್ದರೂ ಜ್ಞಾನಪೀಠವೇಕೆ ನಿಮ್ಮ ಕೈತಪ್ಪುತ್ತಿದೆ ಎಂಬ ಪ್ರಶ್ನೆಗೆ, ‘ಜ್ಞಾನಪೀಠವೇಕೆ ಸರಸ್ವತಿ ಸಮ್ಮಾನಕ್ಕೂ ಅಡ್ಡಗಾಲು ಹಾಕಿದ್ದರು’ ಎಂದರು ಭೈರಪ್ಪ!

ಕನ್ನಡಕ್ಕೆ ಇದುವರೆಗೂ 7 ಜ್ಞಾನಪೀಠಗಳು ಬಂದಿದ್ದರೂ ಸಾಹಿತ್ಯಾಭಿಮಾನಿಗಳು, ಸಾಹಿತ್ಯಾಸಕ್ತರು ಹಾಗೂ ಅಪಾರ ಓದುಗವೃಂದದಲ್ಲಿ ಇಂಥದ್ದೊಂದು ಕೊರಗು ಮಾತ್ರ ಇದ್ದೇ ಇದೆ. ಬಹುತೇಕ ಲೇಖಕರ ಓದುಗರ ವ್ಯಾಪ್ತಿ ದಿನೇ ದಿನೆ ಕುಗ್ಗುತ್ತಿದ್ದರೆ ಕಾದಂಬರಿಯಿಂದ ಕಾದಂಬರಿಗೆ ಓದುಗರನ್ನು ಹೆಚ್ಚಿಸಿಕೊಳ್ಳುತ್ತಿರುವ ಏಕಮಾತ್ರ ಸಾಹಿತಿ ಎಸ್.ಎಲ್. ಭೈರಪ್ಪ. ಆ ವಿಷಯದಲ್ಲಿ ಅವರ ಕಟ್ಟಾ ವಿರೋಧಿಗಳೂ ಅಹುದಹುದೆಂದು ತಲೆಯಾಡಿಸುತ್ತಾರೆ. ಹಾಗಾಗಿ ಅವರಿಗೆ ಜ್ಞಾನಪೀಠ ಸಿಗಬೇಕಿತ್ತು ಎಂಬುದು ಒಪ್ಪುವಂತಹ ಮಾತೇ ಆಗಿತ್ತು. ಯಾರೂ ಅಡ್ಡಗಾಲು ಹಾಕದಿದ್ದರೆ ಕನಿಷ್ಠ 15-20 ವರ್ಷಗಳ ಹಿಂದೆಯೇ ಅವರಿಗೆ ಜ್ಞಾನಪೀಠ ಲಭಿಸಿರುತ್ತಿತ್ತು ಎಂದು ಸಾಹಿತ್ಯಾಭಿಮಾನಿಗಳಿಗೆಲ್ಲ ಗೊತ್ತು. ಆದರೆ ಅನುಮಾನದ ಹೊರತಾಗಿ ನಿಜಕ್ಕೂ ನಡೆದಿದ್ದೇನು? ನಡೆಯುತ್ತಿರುವುದೇನು? ಸಾಹಿತಿಗಳಿಗೇಕೆ ಭೈರಪ್ಪನವರ ಮೇಲೆ ಈ ಪರಿ ಮತ್ಸರ? ಎಂಬುದು ಮಾತ್ರ ಅಷ್ಟಾಗಿ ತಿಳಿಯದ ವಿಷಯವಾಗಿದೆ. ಈ ಹಿನ್ನೆಲೆಯಲ್ಲಿ ಆಯಾ ಕಾಲ ಘಟ್ಟಗಳಲ್ಲಿ ಏನು ನಡೆದಿತ್ತು, ಯಾಕಾಗಿ ಭೈರಪ್ಪನವರ ವಿರುದ್ಧ ಸಾಹಿತಿಗಳೇ ಬಣ ಮಾಡಿಕೊಂಡರು ಎಂಬುದನ್ನು ಹೊರತೆಗೆದು ನಿಮ್ಮ ಮುಂದಿಡಬೇಕೆನಿಸಿತು. ಅಂತಹ ಶೋಧನೆಗೆ ಭೈರಪ್ಪನವರ ಆತ್ಮಕಥೆ ‘ಭಿತ್ತಿ’ಯೇ ಸುಳಿವು ನೀಡಿತು. ಜತೆಗೆ ‘ಸಾಹಿತ್ಯಲೋಕದ ರಾಜಕಾರಣ’ಕ್ಕೆ ಸಾಕ್ಷೀಭೂತರಾಗಿರುವ ಒಂದಿಷ್ಟು ಸಾಹಿತಿ, ಸಂಶೋಧಕರ ಸಹಾಯ ಪಡೆದು ಈ ಲೇಖನವನ್ನು ಸಿದ್ಧಪಡಿಸಲಾಗಿದೆ.

ಓದಿ…

ನಿಮಗೆ ಅಶ್ಚರ್ಯವೆನಿಸಬಹುದು. ಒಂದು ಕ್ಷುಲ್ಲಕ ಕಾರಣವನ್ನಿಟ್ಟುಕೊಂಡು ಭೈರಪ್ಪನವರ ವಿರುದ್ಧ ಕೊಂಕು ಆರಂಭಿಸಿದರು ಕೀರ್ತಿನಾಥ ಕುರ್ತಕೋಟಿ! ಅದು ‘ವಂಶವೃಕ್ಷ’ ಕೃತಿ ಪ್ರಕಟವಾದ ಹೊಸತು. ಅದರ ಮೇಲೆ ಉಡುಪಿಯಲ್ಲೊಂದು ವಿಚಾರಗೋಷ್ಠಿ ಆಯೋಜನೆಯಾಗಿತ್ತು. ಇಡೀ ದಕ್ಷಿಣಕನ್ನಡ ಜಿಲ್ಲೆಯ ವಿದ್ವಾಂಸರು ಭಾಗವಹಿಸಿದ್ದರು. ಅಷ್ಟರಲ್ಲಾಗಲೇ ‘ವಂಶವೃಕ್ಷ’ ನಾಡಿನಾದ್ಯಂತ ಸಂಚಲನ ಮೂಡಿಸಿತ್ತು, ಓದುಗರನ್ನು ಹುಚ್ಚೆಬ್ಬಿಸಿತ್ತು. ಆದರೆ ವೇದಿಕೆಯೇರಿದ ಕುರ್ತಕೋಟಿಯವರು, ‘ಇದು ನೂರು ದೋಷಗಳಿರುವ ಕಾದಂಬರಿ’ ಎಂದು ಪ್ರಹಾರ ಮಾಡಿ ಬಿಟ್ಟರು! ನೆರೆದಿದ್ದ ಸಭಿಕರು ಹಾಗೂ ವಿದ್ವಾಂಸರು ಒಮ್ಮೆಲೇ ದಿಗ್ಬ್ರಮೆಗೊಳಗಾದರು. ಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದ ಸಾಹಿತ್ಯ ಕ್ಷೇತ್ರದ ದಿಗ್ಗಜ ಬೇಂದ್ರೆಯವರಿಗೇ ಕುರ್ತಕೋಟಿಯವರ ಟೀಕೆ ಹಿಡಿಸಲಿಲ್ಲ. ಅದನ್ನು ತಮ್ಮ ಭಾಷಣದಲ್ಲೂ ವ್ಯಕ್ತಪಡಿಸಿದರು. ‘ಇದರಲ್ಲಿ ನೂರು ದೋಷಗಳಿವೆ ಅಂತ ಕೀರ್ತಿ ಹೇಳುತ್ತಾರೆ, ಇದ್ದೀತು. ಒಂದು ಕಾದಂಬರಿಯನ್ನು ಕುರಿತು ಗೋಷ್ಠಿಯ ಅಧ್ಯಕ್ಷತೆ ವಹಿಸಲು ನಾನು ಮುನ್ನೂರು ಮೈಲಿಯಿಂದ ಬಂದಿದೀನಿ. ಕುರ್ತಕೋಟಿ ಎಂಟುನೂರು ಮೈಲಿಯಿಂದ ಬಂದಿದ್ದಾರೆ. ಇಡೀ ದಕ್ಷಿಣಕನ್ನಡ ಜಿಲ್ಲೆಯ ವಿದ್ವಾಂಸರೆಲ್ಲ ಸೇರಿದ್ದಾರೆ. ಶ್ರೋತೃಗಳು ಕಿಕ್ಕಿರಿದಿದ್ದಾರೆ. ಇಷ್ಟು ಜನರನ್ನು ಇಷ್ಟು ದೂರದಿಂದ ಕರೆಸಿಕೊಂಡಿರುವ ಈ ಕೃತಿಯ ಶಕ್ತಿಮೂಲವನ್ನು ಗುರುತಿಸುವುದು ವಿಮರ್ಶೆಯ ಗುರಿಯಾಗಬೇಕು. ಆನಂತರ ದೋಷಾನ್ವೇಷಣೆ’ ಎಂದು ಬೇಂದ್ರೆಯವರು ಹೇಳಿದಾಗ ಸಮಸ್ತ ವಿದ್ವಾಂಸರೂ, ಸಭಿಕರೂ ಚಪ್ಪಾಳೆ ತಟ್ಟಿದರು.

ಇಷ್ಟಕ್ಕೂ ಕುರ್ತಕೋಟಿಯವರು ಭೈರಪ್ಪನವರ ವಿರುದ್ಧ ಮುನಿಸಿಕೊಂಡಿದ್ದಿದ್ದು, ದ್ವೇಷ ಸಾಧಿಸಿದ್ದು ಯಾಕೆ ಗೊತ್ತೆ?

ತಾನು ಹೇಳಿದ ಪ್ರಕಾಶಕರಿಗೆ ಭೈರಪ್ಪ ತಮ್ಮ ‘ನಾಯಿ-ನೆರಳು’ ಕಾದಂಬರಿಯನ್ನು ಕೊಡಲಿಲ್ಲವೆಂಬ ಕಾರಣಕ್ಕೆ. ‘ಪರ್ವ’ ಕಾದಂಬರಿ ಪ್ರಕಟವಾದ ಹೊಸತರಲ್ಲಿ ಅದರ ಮೇಲೆ ಡಾ. ವಿಜಯಾ ಅವರು ಒಂದು ವಿಮರ್ಶಾ ಗೋಷ್ಠಿ ಏರ್ಪಡಿಸಿದ್ದರು. ಈ ಗೋಷ್ಠಿಯಲ್ಲಿ ಮಂಡಿಸಿದ ಲೇಖನಗಳನ್ನು ಡಾ. ವಿಜಯಾ ಅವರು ‘ಪರ್ವ’ ಒಂದು ಸಮೀಕ್ಷೆ ಎಂದು ಪ್ರಕಟಿಸಿದ್ದಾರೆ. ಇಳಾ ಪ್ರಕಾಶನ, ಚಾಮರಾಜಪೇಟೆ, ಬೆಂಗಳೂರು-19. ಅದರಲ್ಲಿ ಮೊದಲು ಮಾತನಾಡಿದ ಕೆ.ವಿ. ರಾಜಗೋಪಾಲ ಮೊದಲಾದವರು ಇದು ಈ ಶತಮಾನದ ಮಹತ್ತ್ವದ ಕೃತಿ ಎಂದು ಮೆಚ್ಚಿದರು. ಕುರ್ತಕೋಟಿ ತಮ್ಮ ಸರದಿ ಬಂದಾಗ ‘ಇದು ಪಾಶ್ಚಿಮಾತ್ಯರಿಂದ ಪಡೆದ ಕಾದಂಬರಿ ಫಾರಂನಿಂದ ನಮ್ಮ ಪುರಾಣದ ಮೇಲೆ ನಿಯೋಗ ಮಾಡಿಸಿ ಸೃಷ್ಟಿಸಿದ ಕೃತಿ’ ಎಂದು ಆರಂಭಿಸಿದ ಮೊದಲ ವಾಕ್ಯದ ಧ್ವನಿಯಲ್ಲೇ ರೋಷ ಒಡೆದು ಕಾಣುತ್ತಿತ್ತು. ಅದು ಬರೀ ಸಾಹಿತ್ಯದ ಭಿನ್ನಾಭಿಪ್ರಾಯವಲ್ಲ, ಏಕೆಂದರೆ ಸಾಹಿತ್ಯಿಕ ಭಿನ್ನಾಭಿಪ್ರಾಯದಲ್ಲಿ ರೋಷಕ್ಕೆ ಆಸ್ಪದವಿರುವುದಿಲ್ಲ.

ಕೇಂದ್ರ ಸಾಹಿತ್ಯ ಅಕಾಡೆಮಿಯು ‘ಪರ್ವ’ವನ್ನು ಇಂಗ್ಲಿಷಿಗೆ ಅನುವಾದಿಸಿದ ಹಿನ್ನೆಲೆಯು ತಿಳಿಯಬೇಕಾದ ಘಟನೆಯಾಗಿದೆ. 1981ನೇ ಇಸವಿ ಆಗಸ್ಟ್ 16ನೇ ತಾರೀಖು ಕೇಂದ್ರ ಸಾಹಿತ್ಯ ಅಕಾಡೆಮಿಯ ಕನ್ನಡ ಸಲಹಾ ಸಮಿತಿಯು ಬೆಂಗಳೂರಿನ ಸಾಹಿತ್ಯ ಪರಿಷತ್ತಿನ ಕಟ್ಟಡದಲ್ಲಿ ಸೇರಿತ್ತು. ಅಕಾಡೆಮಿಯ ಪ್ರಾದೇಶಿಕ ಕಾರ್ಯದರ್ಶಿ ಸಿ.ಆರ್. ಶರ್ಮರು ‘ಭಾರತದ ಎಲ್ಲ ಭಾಷೆಗಳಲ್ಲೂ ಆಧುನಿಕ ಕ್ಲಾಸಿಕ್ ಎಂದು ಪರಿಗಣಿಸಬಹುದಾದ ಒಂದೊಂದು ಸಾಹಿತ್ಯ ಕೃತಿಯನ್ನು ಇಂಗ್ಲಿಷಿಗೆ ಅನುವಾದಿಸಿ ಪ್ರಕಟಿಸುವ ಯೋಜನೆ ಸಾಹಿತ್ಯ ಅಕಾಡೆಮಿಗಿದೆ. ಕನ್ನಡದ ಅಂಥ ಒಂದು ಆಧುನಿಕ ಮಹತ್ತ್ವದ ಕೃತಿಯನ್ನು ಈ ಸಭೆಯು ಶಿಫಾರಸು ಮಾಡಬೇಕು’ ಎಂದರು.

ಸದಸ್ಯರಾಗಿದ್ದ ಸಿದ್ಧಯ್ಯ ಪುರಾಣಿಕರು ‘ಪರ್ವ- ಇದು ಆಧುನಿಕ ಕನ್ನಡದಲ್ಲಿ ಮಾತ್ರವಲ್ಲ, ಇಡೀ ಭಾರತೀಯ ಸಾಹಿತ್ಯದಲ್ಲಿ ಮಹತ್ತ್ವವಾದ ಕ್ಲಾಸಿಕ್ ಎನ್ನಿಸಿಕೊಳ್ಳುವಂಥ ಕೃತಿ’ ಎಂದರು. ಗೀತಾ ಕುಲಕರ್ಣಿಯವರು ‘ಹೌದು ಇದು ಇಂಗ್ಲಿಷಿಗೆ ಮಾತ್ರವಲ್ಲ, ಎಲ್ಲ ಭಾಷೆಗಳಲ್ಲಿಯೂ ಅನುವಾದಗೊಳ್ಳಬೇಕಾದ ಕೃತಿ’ ಎಂದು ಉತ್ಸಾಹದಿಂದ ಅನುಮೋದಿಸಿದರು. ಕಣವಿಯವರು ಅನುಮೋದಿಸಿದರು. ಹಾ.ಮಾ. ನಾಯಕರು ‘ಅಗತ್ಯವಾಗಿ’ ಎಂದರು. ಗೊರೂರು ರಾಮಸ್ವಾಮಿ ಅಯ್ಯಂಗಾರರು ‘ತುಂಬ ಪ್ರೌಢವಾದ ಕಾದಂಬರಿ’ ಎಂದರು. ಶಂಕರ ಮೊಕಾಶಿ ಪುಣೇಕರ್ ಮತ್ತು ಬುದ್ದಣ್ಣ ಹಿಂಗಮಿರೆಯವರು ‘ಒಪ್ಪಿಗೆ’ ಎಂದರು. ‘ಹಾಗಾದರೆ ಬಹುಜನ ಸದಸ್ಯರ ಅಭಿಪ್ರಾಯದಂತೆ ಪರ್ವವನ್ನು ಶಿಫಾರಸು ಮಾಡಲಾಗಿದೆ’ ಎಂದು ಪ್ರಾದೇಶಿಕ ಕಾರ್ಯದರ್ಶಿ ಹೇಳಿ ಮುಗಿಸುವಾಗ ಸಭೆಯಲ್ಲಿದ್ದ ಅನಂತಮೂರ್ತಿ ‘ಬಹುಜನರ ಅಭಿಪ್ರಾಯವಿರಬಹುದು. ಆದರೆ ಇಂಥ ಮಹತ್ತ್ವದ ನಿರ್ಣಯ ಕೈಗೊಳ್ಳುವಾಗ ಮೊದಲೇ ಅಜೆಂಡಾದಲ್ಲಿ ಕಳುಹಿಸಿ ಸಭಿಕರೆಲ್ಲ ಕೂಲಂಕಷ ವಿಚಾರ ಮಾಡಿ ಹೇಳಬೇಕಲ್ಲವೇ? ನೀವು ಅಜೆಂಡಾದಲ್ಲಿ ನಮಗೆ ಮೊದಲೇ ಏಕೆ ಹೇಳಲಿಲ್ಲ? ನಾನು ಕೇಳುತ್ತಿರುವುದು ತತ್ತ್ವದ ಅಂಶ’ ಎಂದು ಕುರ್ತಕೋಟಿಯವರ ಮುಖ ನೋಡಿದರು. ಕುರ್ತಕೋಟಿ ‘ಹೌದು ಹೌದು’ ಎಂದು ತಲೆ ಹಾಕಿದರು. ‘ಹಾಗಾದರೆ ಮುಂದಿನ ಸಭೆಯಲ್ಲಿ ಇದು ತೀರ್ಮಾನವಾಗಲಿ ಅಥವಾ ಸಭಿಕರೆಲ್ಲ ತಮ್ಮ ತಮ್ಮ ಅಭಿಪ್ರಾಯಗಳನ್ನು ಕಾಗದದಲ್ಲಿ ಬರೆದು ಕಳಿಸಲಿ’ ಎಂದು ಅನಂತಮೂರ್ತಿ ಮತ್ತೆ ಸೂಚಿಸಿದರು. ಪ್ರಾದೇಶಿಕ ಕಾರ್ಯದರ್ಶಿಗೆ ಇದನ್ನು ಒಪ್ಪಿಕೊಳ್ಳದೇ ಬೇರೆ ದಾರಿ ಇರಲಿಲ್ಲ. ಅನಂತಮೂರ್ತಿಯವರು ಏನು ಹೇಳಬೇಕಾದರೂ ತತ್ತ್ವದ ವೇಷ ತೂರಿಸಬಲ್ಲ ಜಾಣರು. ಅಂದು ‘ಪರ್ವ’ದ ನಾಮಕರಣವನ್ನು ವಿರೋಧಿಸಿದ್ದರೆ ಅವರು 8-2 ಓಟುಗಳಿಂದ ಸೋಲುತ್ತಿದ್ದರು. ಆದ್ದರಿಂದ ತತ್ತ್ವದ ಸೋಗು ಕೊಟ್ಟು ಮುಂದೆ ಹಾಕಿಸಿ ಒಳಗೊಳಗೆ ಕೆಲಸ ಮಾಡತೊಡಗಿದರು. ಸಭೆ ಮುಗಿದ ಮೇಲೆ ಅನಂತಮೂರ್ತಿ ಮತ್ತು ಕುರ್ತಕೋಟಿ ಇಬ್ಬರೂ ಸಿದ್ಧಯ್ಯ ಪುರಾಣಿಕರನ್ನು ಪ್ರತ್ಯೇಕ ಕರೆದು ಪರ್ವದ ಬಗೆಗೆ ಅವರಿಗಿದ್ದ ಮೆಚ್ಚುಗೆಯನ್ನು ನಾಶಮಾಡುವಂಥ ಟೀಕೆ ಟಿಪ್ಪಣಿಗಳನ್ನು ಹೇರತೊಡಗಿದರು. ತುಸು ಹೊತ್ತು ಕೇಳಿದ ಪುರಾಣಿಕರು ‘ನನ್ನ ತಿಳಿವಳಿಕೆಗೆ ತಕ್ಕಂತೆ ನಾನು ಅದನ್ನು ಮೆಚ್ಚಿದ್ದೇನೆ. ನಿಮ್ಮ ವಾದ ಎಷ್ಟು ಹೇಳಿದರೂ ನನ್ನ ಮೆಚ್ಚುಗೆ ಕಮ್ಮಿಯಾಗುತ್ತಿಲ್ಲ. ನಾನೇನು ಮಾಡಲಿ?’ ಎಂದು ತಮಗೆ ಸಹಜವಾದ ವಿನಯದಿಂದಲೇ ಉತ್ತರಿಸಿದರು. ಅನಂತರ ಅನಂತಮೂರ್ತಿ ಗೀತಾ ಕುಲಕರ್ಣಿಯವರನ್ನು ಭೇಟಿ ಮಾಡಿ ‘ಗೀತಾ, ನಿಮ್ಮ ಸಾಹಿತ್ಯರುಚಿಗೆ ನಾನು ತುಂಬ ಬೆಲೆ ಕೊಡುತ್ತೀನಿ. ಕನ್ನಡ ಮಹಿಳೆಯರಲ್ಲಿ ನಿಮ್ಮಂತೆ ಬರೆಯುವ ಇನ್ನೊಬ್ಬರಿಲ್ಲ’ ಎಂದು ಹೊಗಳಿ, ಅನಂತರ ‘ನಿಮ್ಮ ಭಾವ ದೊಡ್ಡ ಕಾದಂಬರಿಕಾರರು. ನೀವು ಅವರ ಪುಸ್ತಕವನ್ನು ಸೂಚಿಸದೆ ಪುರಾಣಿಕರು ಯಾವುದೋ ಲಹರಿಯಲ್ಲಿ ಹೇಳಿದ್ದನ್ನು ಅನುಮೋದಿಸಿದಿರಲ್ಲ ಅಂತ ನನಗೆ ಆಶ್ಚರ್ಯವಾಗ್ತಿದೆ’ ಎಂದರು. ಗೀತಾ ಕುಲಕರ್ಣಿಯವರ ಭಾವ ಎಂದರೆ ಶಿವರಾಮ ಕಾರಂತರು. ಲೀಲಾ ಕಾರಂತರು ಗೀತಾ ಅವರ ಅಕ್ಕ. ‘ನನ್ನ ಭಾವ ದೊಡ್ಡ ಕಾದಂಬರಿಕಾರರು ಅನ್ನೋದಕ್ಕೆ ಯಾರ ಶಿಫಾರಸೂ ಬೇಕಾಗಿಲ್ಲ. ಆದರೆ ಆಧುನಿಕ ಕನ್ನಡದಲ್ಲಿ ‘ಪರ್ವ’ ಒಂದು ಕ್ಲಾಸಿಕ್ ಅಂತ ನನಗನಿಸಿದ್ದು ನಾನು ಹೇಳಿದೆ. ನಾನು ಅದನ್ನು ನಾಲ್ಕು ಬಾರಿ ಓದಿದ್ದೀನಿ. ಪ್ರತಿ ಬಾರಿ ಓದಿದಾಗಲೂ ಹಾಗೆಯೇ ಅನ್ನಿಸಿದೆ’ ಎಂದು ಗೀತಾ ಉತ್ತರಿಸಿದರು. ಅಷ್ಟರಲ್ಲಿ ಅಲ್ಲಿಗೆ ಬಂದ ಕುರ್ತಕೋಟಿಯವರು ಪರ್ವದಲ್ಲಿ ಇಂತಿಂಥ ದೋಷಗಳಿವೆ ಎಂದು ತಮ್ಮ ವಿಮರ್ಶೆಯ ಪ್ರೌಢಿಮೆಯನ್ನು ತೋರತೊಡಗಿದರು. ‘ನಿಮ್ಮ ಅಭಿಪ್ರಾಯ ನನಗೆ ಗೊತ್ತು ಕೀರ್ತಿನಾಥರೆ. ವಿಜಯಾ, ಪರ್ವದ ಮೇಲೆ ಏರ್ಪಡಿಸಿದ್ದ ಸೆಮಿನಾರಿನಲ್ಲಿ ನೀವು ಮಾಡಿದ ಭಾಷಣ ನಾನು ಓದಿದ್ದೀನಿ’ ಎಂದು ಗೀತಾ ಜಾಡಿಸಿದರು.

ಇಲ್ಲಿ ಬರುವ ಇಬ್ಬರು ನಾಯಕರಲ್ಲಿ ಒಬ್ಬರು ತಾವು ಹೇಳಿದ ಪ್ರಕಾಶಕರಿಗೆ ಭೈರಪ್ಪನವರು ‘ನಾಯಿ-ನೆರಳು’ ಕಾದಂಬರಿಯನ್ನು ಕೊಡಲಿಲ್ಲವೆಂಬ ರೊಚ್ಚನ್ನು ಸಾಯುವತನಕ ಸಾಧಿಸಿದವರು. ಇನ್ನೊಬ್ಬರು ಆಧುನಿಕ ಕನ್ನಡ ಗದ್ಯ ಸಾಹಿತ್ಯದಲ್ಲಿ ತಾವೊಬ್ಬರೇ ಏಕಮೇವಾದ್ವಿತೀಯರೆನ್ನಿಸಿಕೊಳ್ಳಬೇಕೆಂದು ಸದಾ ಸಂಚು ಹೂಡುವುದರಲ್ಲೇ ಆಯುಷ್ಯವನ್ನು ಕಳೆಯುತ್ತಿರುವವರು. ಮೊದಲನೆಯವರಿಗೆ ಪ್ರೌಢ ವಿಮರ್ಶಕರೆಂಬ ಹೆಸರು ಚಿಕ್ಕವಯಸ್ಸಿನಲ್ಲೇ ಲಭಿಸಿತು. ಎರಡನೆಯವರ ಸಾಹಿತ್ಯಿಕ ರಾಜಕೀಯಕ್ಕೆ ಒಂದು ಅವಧಿಯ ಲೇಖಕರೆಲ್ಲ ಹೆದರುತ್ತಿದ್ದರು. ಒಟ್ಟಿನಲ್ಲಿ ಇವರಾರಿಗೂ ಬಗ್ಗದೆ ತಮ್ಮ ದಾರಿಯನ್ನು ತಾವೇ ನಿರ್ಮಿಸಿಕೊಂಡು ನಡೆದ ಭೈರಪ್ಪನವರ ವಿಷಯದಲ್ಲಿ ಸಾಹಿತ್ಯದ ಒಂದು ಗುಂಪಿನವರ ಮನಸ್ಸು ಕಲುಷಿತಗೊಂಡಿತು.

ಆ ಸಲಹಾ ಸಮಿತಿಯ ಅವಧಿಯಲ್ಲಿ ಆಧುನಿಕ ಕ್ಲಾಸಿಕ್್ನ ಪ್ರಸ್ತಾಪ ಮತ್ತೆ ಬರಲಿಲ್ಲ. ಬೇರೆ ಬೇರೆಯವರು ಮುಂದಿನ ಸಮಿತಿಯ ಸದಸ್ಯರಾದರು. ಹೊಸ ಸಮಿತಿಯ ಸಭೆ 29-3-1985ರಲ್ಲಿ ಎಂದರೆ ಅನಂತಮೂರ್ತಿ ಮತ್ತು ಕುರ್ತಕೋಟಿಗಳು ತಾಂತ್ರಿಕ ದೋಷವೆತ್ತಿ ಪರ್ವವು ಇಂಗ್ಲಿಷಿಗೆ ಅನುವಾದವಾಗುವುದಕ್ಕೆ ಅಡ್ಡಗಾಲು ಹಾಕಿದ (16-8-1981) ನಾಲ್ಕೂವರೆ ವರ್ಷಗಳ ನಂತರ, ಸೇರಿದಾಗ ಅಕಾಡೆಮಿಯ ಕಾರ್ಯದರ್ಶಿ ಇಂದ್ರನಾಥ ಚೌಧರಿಯವರು ಹಿಂದಿನ ಕೋರಿಕೆಯನ್ನೇ ಮುಂದಿಟ್ಟು, ‘ನೀವು ಕ್ಲಾಸಿಕ್ ಎಂದು ಪರಿಗಣಿಸುವ ಒಂದು ಆಧುನಿಕ ಕನ್ನಡ ಕೃತಿಯನ್ನು ಸೂಚಿಸಿ’ ಎಂದು ಕೇಳಿದಾಗ ಶ್ರೀನಿವಾಸ ಹಾವನೂರ, ಜಯತೀರ್ಥ ರಾಜಪುರೋಹಿತ, ಡಾ. ವಿಜಯಾ, ಎಸ್.ಆರ್. ಎಕ್ಕುಂಡಿ, ಹಿಂಗಮಿರೆ, ಎನ್.ಎಸ್. ಲಕ್ಷ್ಮೀನಾರಾಯಣ ಭಟ್ಟ, ಬಿ.ಸಿ. ರಾಮಚಂದ್ರ ಶರ್ಮ ಮೊದಲಾದವರಿದ್ದ ಇಡೀ ಸಭೆಯು ‘ಪರ್ವ’ವನ್ನು ಶಿಫಾರಸು ಮಾಡಿತು. ಅನಂತಮೂರ್ತಿ ಇರಲಿಲ್ಲ. ಕುರ್ತಕೋಟಿ ತಡವಾಗಿ, ಈ ವಿಷಯ ತೀರ್ಮಾನವಾದ ನಂತರ ಸಭೆಗೆ ಬಂದರು. ಆನಂತರ ಅಕಾಡೆಮಿಯು ಪರ್ವವನ್ನು ಧಾರವಾಡದ ಪ್ರೊ. ಕೆ. ರಾಘವೇಂದ್ರ ರಾಯರಿಂದ ಇಂಗ್ಲಿಷಿಗೆ ಅನುವಾದಿಸಿ ಪ್ರಕಟಿಸಿತು. ನವ್ಯರು ಅಷ್ಟಕ್ಕೆ ಬಿಡಲಿಲ್ಲ. ‘ನಿಮ್ಮಂಥ ಪ್ರೌಢ ವಿದ್ವಾಂಸರು ಕೇವಲ ಜನಪ್ರಿಯ ಲೇಖಕರ ಕೃತಿಯನ್ನು ಅನುವಾದಿಸಲು ಹೇಗೆ ಒಪ್ಪಿಕೊಂಡಿರಿ?’ ಎಂದು ರಾಘವೇಂದ್ರರಾಯರ ನಿಶ್ಚಯವನ್ನು ಮುರಿಯಲೂ ಪ್ರಯತ್ನಿಸಿದರು. ಮಂಗಳೂರಿನಿಂದ ಪ್ರಕಟವಾದ ಒಂದು ಸಾಹಿತ್ಯಿಕ ಕಿರು ಪತ್ರಿಕೆಯಲ್ಲಿ ರಾಘವೇಂದ್ರರಾಯರೇ ಇದನ್ನು ಪ್ರಕಟಿಸಿದರು.

ಇದಾದ ಕೆಲವು ವರ್ಷಗಳ ನಂತರ ಕೇಂದ್ರ ಸಾಹಿತ್ಯ ಅಕಾಡೆಮಿಯೂ ದಿಲ್ಲಿಯ ಇಂಡಿಯಾ ಇಂಟರ್್ನ್ಯಾಷನಲ್ ಸೆಂಟರ್್ನಲ್ಲಿ ಒಂದು ಸೆಮಿನಾರನ್ನು ಏರ್ಪಡಿಸಿತ್ತು. ‘ಆಧುನಿಕ ಕನ್ನಡ ಸಾಹಿತ್ಯದಲ್ಲಿ ಮಿಥ್್ಗಳ ನಿರ್ವಹಣೆ’ ಎಂಬ ಲೇಖನವನ್ನು ಬೆಂಗಳೂರಿನ ಒಂದು ಕಾಲೇಜಿನಲ್ಲಿ ಇಂಗ್ಲಿಷ್ ಮಾಸ್ತರಾಗಿರುವ ಮನು ಚಕ್ರವರ್ತಿ ಎಂಬುವವರು ಮಂಡಿಸಿದರು. ಅದರಲ್ಲಿ ಅವರು ತಮ್ಮ ಗುರುಗಳಾದ ಅನಂತಮೂರ್ತಿಗಳು ಮಿಥ್್ಗಳನ್ನು ನಿರ್ವಹಿಸಿರುವುದನ್ನು ದೊಡ್ಡದು ಮಾಡಿ ಪುಟ ತುಂಬಿಸಿದ್ದರು. ‘ಪರ್ವ’ದ ಹೆಸರನ್ನು ತಪ್ಪಿಯೂ ಹೇಳಲಿಲ್ಲ. ಆದರೆ ಅವರ ನಂತರದ ಲೇಖನ ಮಂಡಿಸಿದ ಗೋವಾ ವಿಶ್ವವಿದ್ಯಾಲಯದಲ್ಲಿ ಇಂಗ್ಲಿಷ್ ರೀಡರ್ ಮತ್ತು ವಿಭಾಗ ಮುಖ್ಯಸ್ಥರಾಗಿದ್ದ ಡಾ. ಶ್ರೀಮತಿ ಕೆ.ಜೆ. ಬಡಕುಲೆ ಎಂಬುವವರು ಪರ್ವದ ಇಂಗ್ಲಿಷ್ ಅನುವಾದವನ್ನು ಆಧಾರವಾಗಿಟ್ಟುಕೊಂಡು ಮಿಥ್್ಗಳ ನಿರ್ವಹಣೆಯನ್ನು ಪರ್ವದಷ್ಟು ಸಮಗ್ರವಾಗಿ, ಸಮರ್ಥವಾಗಿ ನಿರ್ವಹಿಸಿರುವ ಸಾಹಿತ್ಯ ಕೃತಿಯು ತಮಗೆ ತಿಳಿದಂತೆ ಇಡೀ ಭಾರತದ ಯಾವ ಭಾಷೆಯಲ್ಲೂ ಇಲ್ಲವೆಂದು ದೀರ್ಘವಾಗಿ ವಿವರಿಸಿದರು. ಮನು ಚಕ್ರವರ್ತಿ ಮಹಾಶಯರು ಕನ್ನಡಿಗರು: ಆದರೆ ಕಮ್ಯುನಿಸ್ಟರು, ಅನಂತಮೂರ್ತಿಯವರ ಶಿಷ್ಯರು!

1986ರ ಸುಮಾರಿನಲ್ಲಿ ನ್ಯಾಶನಲ್ ಬುಕ್ ಟ್ರಸ್ಟ್್ನವರು ದಿಲ್ಲಿಯ ಸಮೀಪದ ಸೂರಜ್್ಕುಂಡ್್ದಲ್ಲಿ ಒಂದು ವಿಚಾರ ಸಂಕಿರಣವನ್ನೇರ್ಪಡಿಸಿದ್ದರು. ಭಾರತದ ಪ್ರತಿಯೊಂದು ಭಾಷೆಯಿಂದಲೂ ಇಬ್ಬರು ಅಥವಾ ಮೂವರು ಪ್ರತಿನಿಧಿಗಳನ್ನು ಆಹ್ವಾನಿಸಿದ್ದರು. ಒಟ್ಟು ಮೂವತ್ತೈದು ಜನ. ಕನ್ನಡದಿಂದ ಧಾರವಾಡದಲ್ಲಿ ಆಗ ಇಂಗ್ಲಿಷ್ ರೀಡರ್ ಆಗಿದ್ದ ಹಾಗೂ ಎಡಪಂಥೀಯ ವಿಮರ್ಶಕ ಗಿರಡ್ಡಿ ಗೋವಿಂದರಾಜ, ಲೇಖಕಿ ಎಚ್.ಎಸ್. ಪಾರ್ವತಿ ಮತ್ತು ಭೈರಪ್ಪನವರು. ಪ್ರತಿಯೊಬ್ಬರೂ ತಮ್ಮ ತಮ್ಮ ಭಾಷೆಗಳಲ್ಲಿ ಕಳೆದ ಹತ್ತು ವರ್ಷಗಳಲ್ಲಿ ಆಗಿರುವ ಸಾಹಿತ್ಯದ ಬೆಳವಣಿಗೆಗಳ ವರದಿಯನ್ನು ಮಂಡಿಸಬೇಕಾಗಿತ್ತು. ಮೊದಲ ದಿನ ಉಳಿದ ಏಳೆಂಟು ಪ್ರತಿನಿಧಿಗಳೊಡನೆ ಗಿರಡ್ಡಿಯವರ ಲೇಖನವಿತ್ತು. ಅವರು ಆರಂಭದಲ್ಲೇ ‘ಸಮಯಾಭಾವದಿಂದ ನನ್ನ ಲೇಖನ ಅಪೂರ್ಣವಾಗಿದೆ’ ಎಂಬ ಹಾರಿಕೆಯ ವಾಕ್ಯದಿಂದ ಆರಂಭಿಸಿದರು. ಸಾಹಿತ್ಯ ವಲಯದಲ್ಲಿ ಯಾರೂ ಕೇಳಿರದ ಲೇಖಕರ ಪಟ್ಟಿ ಮಾಡುತ್ತಾ ಹೋಗಿ ತಮ್ಮ ವರದಿಯನ್ನು ಮುಗಿಸಿದರು. ಮರುದಿನ ಪಾರ್ವತಿಯವರು ತಮ್ಮ ಲೇಖನದಲ್ಲಿ ಇತರ ಕೆಲವು ಕೃತಿಗಳನ್ನು ಹೇಳಿದ ನಂತರ ‘ಹಿಂದಿಗೆ ಅನುವಾದಗೊಂಡು ಅಲ್ಲಿಯೂ ಅಪಾರ ಮನ್ನಣೆ ಗಳಿಸಿರುವ ಭೈರಪ್ಪನವರ ‘ಪರ್ವ’ವು ಈ ಅವಧಿಯಲ್ಲಿ ಕನ್ನಡದಲ್ಲಿ ಪ್ರಕಟವಾದ….’ ಎಂದು ವಾಕ್ಯವನ್ನು ಮುಗಿಸುವ ಮೊದಲೇ ಬೇರೆ ಬೇರೆ ಭಾಷೆಗಳ ನಾಲ್ಕಾರು ಪ್ರತಿನಿಧಿಗಳು ‘ಹೌದು, ನಾನು ಓದಿದೀನಿ. ಅದೊಂದು ಮಹತ್ತ್ವದ ಕೃತಿ’, ‘ಅದು ಕನ್ನಡ ಕೃತಿಯಲ್ಲ, ಇಡೀ ಭಾರತದ ಕೃತಿ’, ‘ಅದು ಎಲ್ಲ ಭಾಷೆಗೂ ಸೇರುವ ಕೃತಿ’ ಎಂದು ಮುಂತಾಗಿ ಉದ್ಗಾರ ತೆಗೆದರು. ‘ನೋಡಿ, ಅದರ ಕರ್ತೃವೂ ಈ ಸಭೆಯಲ್ಲಿದ್ದಾರೆ’ ಎಂದು ಯಾರೋ ಕೂಗಿದರು. ಎಲ್ಲರ ಗಮನವೂ ಭೈರಪ್ಪನವರ ಕಡೆಗೆ ತಿರುಗಿತು. ಅನಂತರ ಪಾರ್ವತಿಯವರ ಲೇಖನವನ್ನು ಪೂರ್ತಿ ಓದಲು ಅವಕಾಶ ಸಿಗದಷ್ಟು ಎಲ್ಲರೂ ಪರ್ವದ ಮೇಲೆ ಚರ್ಚೆ ಮಾಡಿ ಪ್ರಶ್ನೆಗಳನ್ನು ಕೇಳತೊಡಗಿದರು. ಪಾರ್ವತಿಯವರ ನಂತರ ಲೇಖನ ಮಂಡಿಸಿದ ಹಿಂದಿಯ ಹಿರಿಯ ಲೇಖಕ ಅಂಚಲ್ ಅವರು ‘ನಾನು ಪರ್ವವನ್ನು ಓದಿದ್ದೇನೆ. ಅದು ಕನ್ನಡದ್ದಿರಬಹುದು. ಆದರೆ ಅದೊಂದು ಮೂಲ ಹಿಂದಿಯ ಕಾದಂಬರಿ ಎಂದು ಹೇಳುತ್ತೇನೆ’ ಎಂದು ಪರ್ವದ ಮೇಲೆಯೇ ಹತ್ತು ನಿಮಿಷ ಮಾತನಾಡಿದರು. ಅದಾದ ಮೇಲೆ ಮಧ್ಯಾಹ್ನದ ಊಟಕ್ಕೆ ಸಭೆ ವಿರಾಮಗೊಂಡಿತು. ಊಟದ ಅಂಗಳದಲ್ಲಿ ಮರಾಠಿಯ ಪ್ರತಿನಿಧಿಯಾದ ಮುಂಬಯಿಯ ಡಾ. ಶ್ರೀಮತಿ ವಿಜಯಾ ರಾಜಾಧ್ಯಕ್ಷ ಅವರು ಭೈರಪ್ಪನವರ ಮತ್ತು ಪಾರ್ವತಿಯವರ ಹತ್ತಿರ ಬಂದು ‘ಅಖಿಲ ಭಾರತ ಮಟ್ಟದಲ್ಲಿ ಇಷ್ಟು ಖ್ಯಾತಿ ಪಡೆದಿರುವ ಪರ್ವದ ಹೆಸರನ್ನು ಕೂಡ ಗಿರಡ್ಡಿಯವರು ನಿನ್ನೆ ಅವರ ಲೇಖನದಲ್ಲಿ ಹೇಳಲಿಲ್ಲವಲ್ಲ. ಯಾಕೆ?’ ಎಂದು ಕೇಳಿದರು. ‘ಅವರನ್ನೇ ಕೇಳಿ. ಸಮಯಾಭಾವದಿಂದ ನನ್ನ ಲೇಖನ ಅಪೂರ್ಣವಾಗಿದೆ ಅಂತ ಜಾಣ ಉತ್ತರ ಕೊಡುತ್ತಾರೆ’ ಎಂದು ಪಾರ್ವತಿ ಹೇಳಿದರು. ಅನಂತರ ರಾಜಾಧ್ಯಕ್ಷರು ಭೈರಪ್ಪನವರೊಡನೆ ಹಾಗೂ ಪಾರ್ವತಿಯವರೊಡನೆ ಪರ್ವದ ಬಗೆಗೆ, ಕನ್ನಡದ ನವ್ಯರ ಬಗೆಗೆ ಸಾಕಷ್ಟು ಮಾಹಿತಿ ಪಡೆದರು. ಅವರಿಗೆ ಪರ್ವದ ಮೇಲೆ ಆಸ್ಥೆ ಹುಟ್ಟಿತು. ಅದು ಮರಾಠಿಗೆ ಅನುವಾದಗೊಳ್ಳಲು ಮತ್ತು ಪ್ರಕಟವಾಗಲು ಅವರು ಮತ್ತು ಅವರ ಪತಿ ಪ್ರೊ. ಎಂ.ವಿ. ರಾಜಾಧ್ಯಕ್ಷರು ಪ್ರಯತ್ನಿಸಿದರು. ಈಗ ಅದು ಮರಾಠಿಯಲ್ಲಿ ಆರು ಮುದ್ರಣಗಳನ್ನು ಕಂಡಿದೆ. ಮರಾಠಿಯ ವಿದ್ವಾಂಸ ಹಾಗೂ ವಿಮರ್ಶಕ ಮುಂಬಯಿ ವಿಶ್ವವಿದ್ಯಾಲಯದಲ್ಲಿ ತೌಲನಿಕ ಸಾಹಿತ್ಯದ ಪ್ರೊಫೆಸರ್ ಆಗಿದ್ದ ಬಂದಿವಾಡೇಕರ್ ಅವರು ‘ಪರ್ವ ಓದಿದ ನಂತರ ನಾನು ಭೈರಪ್ಪನವರ ಭಕ್ತನಾಗಿದ್ದೇನೆ’ ಎಂದು ಬರೆದರು.

ಅನಂತರ ಗಿರಡ್ಡಿಯವರು ‘ಪರ್ವ’ವು ಮರಾಠಿಯ ಇರಾವತಿ ಕರ್ವೆಯವರ ‘ಯುಗಾಂತ’ದಿಂದ ಪ್ರೇರಿತವಾದದ್ದು ಎಂಬ ಟೀಕೆಯನ್ನು ತೇಲಿಬಿಟ್ಟರು. ‘ಯುಗಾಂತ’ವು ಅಷ್ಟರಲ್ಲಿ ಕನ್ನಡಕ್ಕೂ ಅನುವಾದವಾಗಿತ್ತು. ಆದರೆ ಯಾರೂ ಗಿರಡ್ಡಿಯವರ ಟೀಕೆಯನ್ನು ಪರಿಗಣಿಸಲಿಲ್ಲ. ಮಾತ್ರವಲ್ಲ, ಮರಾಠಿಯ ಯಾವ ಲೇಖಕರೂ, ವಿಮರ್ಶಕರೂ ಇಂಥ ಟೀಕೆಯನ್ನೆತ್ತಿಲ್ಲ.

—————————

ಸಾಹಿತ್ಯ ಅಕಾಡೆಮಿ, ಭಾರತೀಯ ಜ್ಞಾನಪೀಠ, ಸರಸ್ವತೀ ಸಮ್ಮಾನ ಮೊದಲಾದ ಪ್ರಶಸ್ತಿಗಳ ಆಯ್ಕೆಯ ಹಂತ ಮತ್ತು ವಿಧಾನಗಳನ್ನು ಸರಿಯಾಗಿ ಅರ್ಥಮಾಡಿಕೊಂಡರೆ ಭೈರಪ್ಪನವರ ಹೆಸರಿಗೆ ಎಲ್ಲೆಲ್ಲಿ ಅಡ್ಡಗಾಲು ಹಾಕುತ್ತಿದ್ದರೆಂಬುದು ಸ್ಪಷ್ಟವಾಗುತ್ತದೆ. ಈ ಸಂಸ್ಥೆಗಳು ಪ್ರತಿ ಭಾಷೆಯಲ್ಲೂ ಸುಮಾರು ಐವತ್ತು ಅರವತ್ತು ಜನ ಸಾಹಿತಿಗಳು, ವಿಮರ್ಶಕರು, ವಿಶ್ವವಿದ್ಯಾಲಯಗಳ ಆಯಾ ಭಾಷೆಯ ವಿಭಾಗ ಮುಖ್ಯಸ್ಥರುಗಳಿಗೆ ಆಯಾ ವರ್ಷದ ಪ್ರಶಸ್ತಿಗೆ ಹೆಸರನ್ನು ಸೂಚಿಸುವಂತೆ ವಿನಂತಿಸುತ್ತವೆ. ಅವರಲ್ಲಿ ಸುಮಾರು ಅರ್ಧದಷ್ಟು ಜನರು ಸೂಚನೆಯನ್ನು ಕೊಡುತ್ತಾರೆ. ಈ ಸೂಚನೆಗಳನ್ನು ಒಂದು ಕಡತ ಮಾಡಿ ಸಂಸ್ಥೆಗಳು ಆಯಾ ಭಾಷೆಗಳ ಆಯ್ಕೆ ಸಮಿತಿಗೆ ಕಳಿಸುತ್ತವೆ. ಆಯ್ಕೆ ಸಮಿತಿಯಲ್ಲಿ ಮೂವರು ಸದಸ್ಯರಿರುತ್ತಾರೆ. ಅವರಲ್ಲಿ ಒಬ್ಬನು(ಳು) ಕನ್ವೀನರ್ ಇಬ್ಬರು ಸದಸ್ಯರು. ಈ ಸಮಿತಿಯು ಈ ಕಡತದಲ್ಲಿರುವ ಸೂಚನೆಗಳನ್ನು ಗಮನಿಸಿರಬೇಕೆಂಬ ನಿಯಮವುಂಟೇ ಹೊರತು ಅವುಗಳನ್ನು ಅನುಸರಿಸಬೇಕೆಂದಿಲ್ಲ. ಕಡತದಲ್ಲಿ ಒಂದೂ ಸೂಚನೆ ಇರದ ಹೆಸರನ್ನು ಕೂಡ ಸಮಿತಿಯು ಶಿಫಾರಸು ಮಾಡಬಹುದು. ಸಾಹಿತ್ಯ ಅಕಾಡೆಮಿಯಲ್ಲಾದರೆ ಪ್ರತಿ ಭಾಷೆಗೂ ಒಂದೊಂದು ಪ್ರಶಸ್ತಿ ಇರುವುದರಿಂದ ಈ ಸಮಿತಿಯು ಶಿಫಾರಸು ಮಾಡಿದವರಿಗೆ ಪ್ರಶಸ್ತಿ ಬರುತ್ತದೆ. ಈ ಶಿಫಾರಸನ್ನು ಕೇಂದ್ರದ ಕಾರ್ಯಕಾರಿ ಸಮಿತಿಯು ಅನುಮೋದಿಸುವುದು ಕೇವಲ ಔಪಚಾರಿಕ. ಜ್ಞಾನಪೀಠ ಮತ್ತು ಸರಸ್ವತಿ ಸಮ್ಮಾನಗಳಲ್ಲಿ ಇಡೀ ರಾಷ್ಟ್ರಕ್ಕೆ ಒಂದೇ ಪ್ರಶಸ್ತಿ ಇರುವುದರಿಂದ ಇಂಥ ಇಪ್ಪತ್ತೆರಡು ಸಮಿತಿಗಳ ಶಿಫಾರಸುಗಳನ್ನು ಕೇಂದ್ರ ಆಯ್ಕೆ ಸಮಿತಿಯು ವಿಶ್ಲೇಷಿಸಿ ಒಂದನ್ನು ಆರಿಸುತ್ತದೆ. ಸರಸ್ವತಿ ಸಮ್ಮಾನದಲ್ಲಿ ಕನ್ನಡದ ಆಯ್ಕೆ ಸಮಿತಿಯ ಶಿಫಾರಸು ದಕ್ಷಿಣ ಭಾರತದ ನಾಲ್ಕು ಭಾಷೆಗಳ ಸಮಿತಿಯ ಮುಂದೆ ಹೋಗುತ್ತದೆ. ಹೀಗೆ ರಾಷ್ಟ್ರದಲ್ಲಿ ಇಂಥ ಐದು ಗುಂಪುಗಳಿವೆ. ಒಂದೊಂದು ಗುಂಪಿನಿಂದಲೂ ಆರಿಸಲ್ಪಟ್ಟ ಶಿಫಾರಸು ಅಂತಿಮ ಆಯ್ಕೆಗೆ ಹೋಗಿ ಅಲ್ಲಿ ಗೆದ್ದದ್ದು ಪ್ರಶಸ್ತಿಗೆ ಅರ್ಹವಾಗುತ್ತದೆ. ಕನ್ನಡದ ಕೃತಿಯೊಂದು ದಕ್ಷಿಣ ಭಾರತದ ತಮಿಳು, ತೆಲುಗು, ಮಲೆಯಾಳಂಗಳೊಡನೆ ಸ್ಪರ್ಧಿಸಿ ಗೆದ್ದರೆ ಅನಂತರ ಅಂಥ ಐದು ಗುಂಪುಗಳಲ್ಲಿ ಗೆದ್ದ ಕೃತಿಗಳೊಡನೆ ಸ್ಪರ್ಧಿಸಿ ಗೆಲ್ಲಬೇಕು. ಒಟ್ಟಿನಲ್ಲಿ ಇಲ್ಲಿ ಮೂರು ಹಂತದ ಸ್ಪರ್ಧೆ ನಡೆಯುತ್ತದೆ. ಜ್ಞಾನಪೀಠದಲ್ಲಿ ಆಯಾ ಭಾಷೆ ಸಮಿತಿಯಿಂದ ಆರಿಸಲ್ಪಟ್ಟ ಕೃತಿಯು ನೇರವಾಗಿ ಇಪ್ಪತ್ತೆರಡು ಭಾಷೆಗಳ ಸಮಿತಿಯ ಮುಂದೆ ಹೋಗುತ್ತದೋ ಅಥವಾ ನಾಲ್ಕೋ ಐದೋ ಪ್ರಾಂತೀಯ ಸಮಿತಿಯ ಮುಂದೆ ಹಾಯ್ದು ಅಂತಿಮ ಸ್ಪರ್ಧೆಯನ್ನು ಮುಟ್ಟುತ್ತದೋ ನನಗೆ ಗೊತ್ತಿಲ್ಲ.

ಭೈರಪ್ಪನವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ಬಂದದ್ದು 1975ರಲ್ಲಿ. ಅಂದರೆ ಈಗ್ಗೆ 36 ವರ್ಷಗಳ ಹಿಂದೆ. ಆಗಿನ್ನೂ ಸಾಹಿತ್ಯದ ಸಂಘ ಸಂಸ್ಥೆಗಳ ಆಯಕಟ್ಟಿನ ಜಾಗಗಳನ್ನು ಸಾಹಿತ್ಯ ರಾಜಕೀಯದ ಗುಂಪುಗಳು, ಐಡಿಯಾಲಜಿಗಳ ಗುಂಪುಗಳು ಆಕ್ರಮಿಸಿರಲಿಲ್ಲ. ಸಾಹಿತ್ಯದ ಸಂಘ ಸಂಸ್ಥೆಗಳಿಗೆ ನಾಮನಿರ್ದೇಶನಗೊಳ್ಳುವ, ಸ್ಥಾನ ಬಲದಿಂದಲೇ ಅಲ್ಲಿ ಸ್ಥಾನ ಗಿಟ್ಟಿಸಿಕೊಳ್ಳುವ ವಿಶ್ವವಿದ್ಯಾಲಯಗಳ ಕುರ್ಚಿಗಳು ಜಾತಿಬಲದಿಂದ, ರಾಜಕೀಯ ಬಲದಿಂದ ತುಂಬಿಕೊಂಡಿರಲಿಲ್ಲ. ಕೆಲವು ಸಾಹಿತ್ಯಿಕ ಗುಂಪುಗಳು, ಸಾಹಿತ್ಯ ಸಂಸ್ಥೆಗಳ ಸಾಧಾರಣ ಸದಸ್ಯರನ್ನು ನೇಮಿಸುವ ಹಂತದಿಂದ ಕಾರ್ಯಕಾರಿ ಸಮಿತಿಗೆ ಆರಿಸುವ ಹಂತದವರೆಗೆ, ಅಧ್ಯಕ್ಷರನ್ನು ಆರಿಸುವ ಅಥವಾ ನೇಮಿಸುವ ಹಂತದವರೆಗೆ ಲೆಕ್ಕಾಚಾರ ಹಾಕಿ ತಮ್ಮವರನ್ನೇ ಕೂರಿಸುವುದು ಕಳೆದ ಎರಡು ಮೂರು ದಶಕಗಳಿಂದ ಚಾಲ್ತಿಗೆ ಬಂತು. ಇಂಥ ಆಯ್ಕೆಯ, ನೇಮಕಾತಿಯ ಕೈಚಳಕದವರನ್ನು ಸ್ಥಾನಾಪೇಕ್ಷಿಗಳು ಓಲೈಸುವುದು, ಅವರಿಗೆ ವಿಧೇಯರಾಗುವುದೂ ಆರಂಭವಾಯಿತು. ಚುನಾವಣೆಗೆ ಮುನ್ನ ಟಿಕೆಟ್ ಆಕಾಂಕ್ಷಿಗಳು ರಾಜಕೀಯ ಪಕ್ಷಗಳ ನಾಯಕರುಗಳ ಮರ್ಜಿ ಹಿಡಿಯುವಂತೆ; ಅನಂತರ ನಾಯಕರುಗಳ ಬೇಕುಬೇಡಗಳನ್ನರಿತು ನಡೆಯುವಂತೆ.

ಸುಮಾರು ಹತ್ತು ವರ್ಷಗಳ ಹಿಂದೆ ಸರಸ್ವತಿ ಸಮ್ಮಾನದ ಕನ್ನಡ ಆಯ್ಕೆ ಸಮಿತಿಯ ಸಭೆ ಬೆಂಗಳೂರಿನಲ್ಲಿ ಸೇರಿತ್ತು. ಅದನ್ನು ಮಂಗಳೂರು ವಿಶ್ವವಿದ್ಯಾಲಯದಲ್ಲಿ ಪ್ರೊಫೆಸರ್ ಆಗಿದ್ದ ವಿವೇಕ ರೈ ಅವರು ಕನ್ವೀನರ್. ಶ್ರೀನಿವಾಸರಾಜು ಮತ್ತು ಬಿ.ಆರ್. ನಾರಾಯಣ ಅವರು ಸದಸ್ಯರು. ಪ್ರತಿವರ್ಷ ಒಬ್ಬ ಹೊಸ ಸದಸ್ಯನ ಸೇರ್ಪಡೆ, ಎರಡು ವರ್ಷ ಸದಸ್ಯನಾಗಿ ಮೂರನೆ ವರ್ಷಕ್ಕೆ ಕಾಲಿಡುವ ಸದಸ್ಯನು ಕನ್ವೀನರ್ ಆಗುವುದು ಅಲ್ಲಿಯ ಪದ್ಧತಿ. ಬಿ.ಆರ್. ನಾರಾಯಣರು ನಲವತ್ತು ವರ್ಷ ದಿಲ್ಲಿಯಲ್ಲಿ ನೌಕರಿ ಮಾಡಿ ಉತ್ತರ ಭಾರತದ ಅದರಲ್ಲೂ ಹಿಂದಿಯ ಸಾಹಿತ್ಯ ಮತ್ತು ಸಾಹಿತಿಗಳನ್ನು ಚೆನ್ನಾಗಿ ಬಲ್ಲವರು. ಹಲವಾರು ಉತ್ಕೃಷ್ಟ ಕನ್ನಡ ಕೃತಿಯನ್ನು ಹಿಂದಿಗೆ ಅನುವಾದಿಸಿದ್ದವರು. ಭೈರಪ್ಪನವರ ಅದುವರೆಗಿನ ಬಹುತೇಕ ಕೃತಿಗಳನ್ನು ಹಿಂದಿಗೆ ಅನುವಾದಿಸಿ ಹಿಂದಿ ಸಾಹಿತ್ಯ ಜಗತ್ತು ಭೈರಪ್ಪನವರನ್ನು ಯಾವ ಮಟ್ಟದಲ್ಲಿ ಗೌರವಿಸುತ್ತದೆಂಬುದನ್ನು ಸ್ವತಃ ಅನುಭವದಿಂದ ತಿಳಿದವರು. ಅವರು ಈ ಸಮಿತಿಯಲ್ಲಿ ಭೈರಪ್ಪನವರ ಹೆಸರನ್ನು ಸೂಚಿಸಿದರು. ವಿವೇಕ ರೈ ಮತ್ತು ಶ್ರೀನಿವಾಸ ರಾಜು ಇಬ್ಬರೂ ಚಂದ್ರಶೇಖರ ಕಂಬಾರರನ್ನು ಮುಂದಿಟ್ಟರು. ನಾರಾಯಣರು ‘ಅಖಿಲ ಭಾರತ ಮಟ್ಟದ ಹೆಸರುಗಳನ್ನು ನಾನು ಬಲ್ಲೆ. ಕನ್ನಡದಿಂದ ಗೆಲ್ಲುವ ಕುದುರೆಯನ್ನು ಓಡಲು ಬಿಟ್ಟರೆ ನಮ್ಮ ಭಾಷೆಗೆ ಜಯ ಲಭಿಸುತ್ತೆ. ಆದ್ದರಿಂದ ಭೈರಪ್ಪನವರೇ ಆಗಬೇಕು’ ಎಂದು ಪಟ್ಟು ಹಿಡಿದರು. ಮೂರು ತಾಸು ಕಳೆದರೂ ಅವರಿಬ್ಬರೂ ಹಠ ಬಿಡಲಿಲ್ಲ. ಇವರೂ ಜಗ್ಗಲಿಲ್ಲ. ಕನ್ವೀನರ್ ವಿವೇಕ ರೈಗಳು ಸಭೆಯನ್ನು ಮರುದಿನಕ್ಕೆ ಮುಂದೂಡಿದರು. ಮರುದಿನವೂ ನಾರಾಯಣರು ತಮ್ಮ ಪಟ್ಟನ್ನು ಸಡಿಲಿಸಲಿಲ್ಲ. ಅವರಿಬ್ಬರೂ ‘ಹಾಗಿದ್ದರೆ ಈ ಬಾರಿ ಕನ್ನಡದಿಂದ ಯಾವ ಸೂಕ್ತ ವ್ಯಕ್ತಿಯೂ ಇಲ್ಲ ಅಂತ ಬರೆದು ಕಳಿಸೋಣ’ ಎಂದರು. ‘ಗೆಲ್ಲುವ ಕುದುರೆ ಭೈರಪ್ಪನವರು ಇರುವಾಗ ಯಾರೂ ಇಲ್ಲ ಅನ್ನುವ ಕಾರಣವೇನು ಹೇಳಿ’ ಎಂದರೆ ಅವರಿಂದ ಉತ್ತರವಿಲ್ಲ. ಕೊನೆಗೆ ಅವರಿಬ್ಬರೂ ಯಾವ ಸೂಕ್ತ ವ್ಯಕ್ತಿಯೂ ಇಲ್ಲ ಎಂದೇ ಬರೆದರು. ಇವರು ತಮ್ಮ ಅಸಮ್ಮತಿಯ ಟಿಪ್ಪಣಿ ಬರೆದು ಭೈರಪ್ಪನವರ ಹೆಸರನ್ನು ಸೂಚಿಸಿದರು. ಸರ್ವಾನುಮತವಿಲ್ಲದ ಕಾರಣದಿಂದ ಮಾತ್ರವಲ್ಲ, ಅಲ್ಪಮತವೆಂಬ ಕಾರಣವೂ ಸೇರಿ ಇವರ ಅಭಿಪ್ರಾಯವು ಮುಂದಿನ ಹಂತದಲ್ಲಿ ತೇರ್ಗಡೆಯಾಗಲಿಲ್ಲ.

ಅವರಿಬ್ಬರೂ ಯಾಕೆ ಹೀಗೆ ಹಠ ಹಿಡಿದರು? ರೈಗಳು ಆಗಿನ್ನೂ ಪ್ರೊಫೆಸರರಾಗಿದ್ದರು. ಕಂಬಾರರು ಹಂಪಿಯ ಕನ್ನಡ ವಿಶ್ವವಿದ್ಯಾಲಯಕ್ಕೆ ಪ್ರಥಮ ಕುಲಪತಿಯಾಗಿ ನಿವೃತ್ತರಾಗಿದ್ದರು. ಇವರ ಕುಲಪತಿಯಾಗುವ ಆಕಾಂಕ್ಷೆಗೆ ಅವರಿಂದ ಸಹಾಯ ಸಿಕ್ಕುತ್ತದೆಂಬ ಹಂಚಿಕೆಯೇ? ಅಥವಾ ಐಡಿಯಾಲಜಿಯ ಕಾರಣದಿಂದ ಭೈರಪ್ಪನವರ ಮೇಲೆ ದ್ವೇಷವೇ? ಇದರ ಕಾರಣವನ್ನು ಅವರೇ ಹೇಳಬೇಕು.

ಶ್ರೀನಿವಾಸರಾಜು ಅವರಿಗೆ ಭೈರಪ್ಪನವರ ಮೇಲೆ ಅಸಮಾಧಾನವಿರಲು ಒಂದು ಗಟ್ಟಿ ಘಟನೆ ಆ ಹಿಂದೆ ನಡೆದಿತ್ತು. ಒಂದು ದಿನ ಶ್ರೀನಿವಾಸರಾಜು ಅವರು ತಮ್ಮ ಮಗ ಸುಗತರೊಡನೆ ತಮಗೆ ಪರಿಚಯವಿದ್ದ, ಭೈರಪ್ಪನವರ ಆತ್ಮೀಯ ಸ್ನೇಹಿತರಾದ ಎಂ.ಎಸ್.ಕೆ. ಪ್ರಭುಗಳನ್ನು ಕರೆದುಕೊಂಡು ಭೈರಪ್ಪನವರ ಮನೆಗೆ ಬಂದಿದ್ದರು. ಅದುವರೆಗೆ ಶ್ರೀನಿವಾಸರಾಜು ಭೈರಪ್ಪನವರನ್ನು ಭೇಟಿ ಮಾಡಿರಲಿಲ್ಲ. ಅವರು ತಮ್ಮನ್ನು ಜೊತೆಗೆ ಕರೆದ ಕಾರಣವು ಪ್ರಭುಗಳಿಗೂ ಗೊತ್ತಿರಲಿಲ್ಲ. ಮನೆಗೆ ಬಂದು ಉಭಯ ಕುಶಲೋಪರಿಗಳಾದ ಮೇಲೆ ಶ್ರೀನಿವಾಸರಾಜು ತಾವು ಕನ್ನಡಕ್ಕೆ ಮಾಡಿರುವ ಸೇವೆಯನ್ನು ವಿವರಿಸಿ ‘ಹಂಪಿಯ ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಹುದ್ದೆ ಖಾಲಿಯಾಗಿದೆ. ಸರಕಾರವು ಅದನ್ನು ತುಂಬಲಿದೆ. ನೀವು ನನ್ನ ಹೆಸರನ್ನು ಶಿಫಾರಸು ಮಾಡಿ ಮುಖ್ಯಮಂತ್ರಿಗಳಿಗೆ ಹೇಳಬೇಕು’ ಎಂದು ಕೋರಿದರು. ಭೈರಪ್ಪನವರದ್ದು ಯಾವ ಮಂತ್ರಿಯನ್ನೂ ತಮ್ಮದಾದರೂ ಯಾವುದೇ ಸಹಾಯಕ್ಕೆ ಹೇಳುವ ಜಾಯಮಾನವಲ್ಲ. ಬೇರೊಬ್ಬರಿಗೂ ಶಿಫಾರಸು ಮಾಡುವ ಸ್ವಭಾವವೂ ಅಲ್ಲ. ಶಿಫಾರಸು ಮಾಡುವುದೂ ಹಂಗಿಗೆ ಒಳಪಟ್ಟಂತೆ ಎಂಬುದು ಅವರ ನಿಲುವು. ‘ನನಗೆ ಮುಖ್ಯಮಂತ್ರಿಗಳ ಪರಿಚಯವಿಲ್ಲ’ ಎಂದರು. ‘ನಿಮಗೆ ಇಲ್ಲದಿದ್ದರೂ ಅವರಿಗೆ ನೀವೆಂದರೆ ತುಂಬ ಗೌರವವಿದೆ. ಅವರು ನಿಮ್ಮ ಸಾಹಿತ್ಯ ಓದಿದ್ದಾರೆ’ ಎಂದು ಶ್ರೀನಿವಾಸರಾಜು ಒತ್ತಾಯ ಮಾಡಿದರು.

‘ನನ್ನ ಪಾಡಿಗೆ ನನ್ನನ್ನು ಬಿಡಿ ಶ್ರೀನಿವಾಸರಾಜು. ಇವೆಲ್ಲ ನನಗೆ ಮುಜುಗರದ ಕೆಲಸಗಳು’ ಎಂದು ಭೈರಪ್ಪನವರು ಖಡಾಖಂಡಿತವಾಗಿ ಉತ್ತರಿಸಿದರು.

‘ನಿಮಗೆ ನೇರವಾಗಿ ಹೇಳುವುದಕ್ಕೆ ಮುಜುಗರವಾದರೆ ಬೇಡ. ನನ್ನ ಪರವಾಗಿ ಮುಖ್ಯಮಂತ್ರಿಗಳಿಗೆ ಹೇಳುವಂತೆ ಹಾ.ಮಾ. ನಾಯಕರಿಗೆ ಹೇಳಿ. ಅವರು ನಿಮ್ಮ ಸ್ನೇಹಿತರು’ ಎಂಬುದಾಗಿ ಶ್ರೀನಿವಾಸರಾಜು ಕೋರಿಕೆಯನ್ನು ಬದಲಿಸಿದರು.

‘ಆಗಲಿ’ ಎಂದು ಭೈರಪ್ಪನವರು ಕುಲಪತಿ ಆಕಾಂಕ್ಷಿಯನ್ನು ಸಾಗಹಾಕಿದರು.

ಅವರು ಹೋದ ಮೇಲೆ ಭೈರಪ್ಪನವರು ಹಾ.ಮಾ. ನಾಯಕರಿಗೆ ಫೋನು ಮಾಡಿ ಶ್ರೀನಿವಾಸರಾಜು ಬಂದಿದ್ದ ಸಂಗತಿಯನ್ನು ವಿವರಿಸಿದರು. ನಾಯಕರು ‘ಅವರು ನಿಮ್ಮ ಹತ್ತಿರ ಬರುವುದಕ್ಕೆ ಮೊದಲು ನನ್ನ ಮನೆಗೆ ಬಂದಿದ್ದರು. ನಾಲ್ಕು ಜನ ಹೊಸ ಲೇಖಕರ ಪುಸ್ತಕ ಪ್ರಕಟಣೆಗೆ ಸಹಾಯ ಮಾಡಿದ್ದಾರೆ ಅನ್ನೋದು ಬಿಟ್ಟರೆ ಅವರಿಗೆ ಯಾವ ಸಂಶೋಧನೆಯ ಅನುಭವವಿದೆ? ಕುಲಪತಿಯ ಪಟ್ಟಿಯಲ್ಲಿ ಎಂ.ಎಂ. ಕಲಬುರ್ಗಿಯ ಹೆಸರು ಪ್ರಧಾನವಾಗಿದೆ. ಆ ಹೆಸರಿನ ಮುಂದೆ ಈ ಶ್ರೀನಿವಾಸರಾಜು ಅವರನ್ನು ಶಿಫಾರಸು ಮಾಡುವುದಕ್ಕೆ ಹೋದರೆ ನಮಗೆ ಮರ್ಯಾದೆ ಉಳಿಯುತ್ತದೆಯೇ? ಮನುಷ್ಯನ ಆಸೆಗೂ ಒಂದು ಮಿತಿ ಬೇಕು’ ಎಂದರು. ಒಟ್ಟಿನಲ್ಲಿ ಶ್ರೀನಿವಾಸರಾಜು ಆಶಾಭಗ್ನರಾದರು. ಭಗ್ನ ಆಸೆಯು ಕೋಪ, ದ್ವೇಷ ಅಥವಾ ಪ್ರತೀಕಾರಕ್ಕೆ ತಿರುಗುವುದು ಸಹಜವೇ. ಸ್ವಲ್ಪ ಹೆಸರು ಮಾಡಿದವರು ತಾವು ಯಾರ ತಂಟೆಗೂ ಹೋಗುವುದಿಲ್ಲವೆಂದು ತಮ್ಮ ಪಾಡಿಗೆ ತಾವಿದ್ದರೂ ತಂಟೆಗೆ ಸಿಕ್ಕಿಸುವ ಜನಗಳೂ ಸನ್ನಿವೇಶಗಳೂ ಇರುತ್ತವಷ್ಟೆ.

ಕಳೆದ ವರ್ಷ ಮತ್ತು ಅದರ ಹಿಂದಿನ ವರ್ಷಗಳ ಸರಸ್ವತಿ ಸಮ್ಮಾನದ ಕನ್ನಡ ಆಯ್ಕೆ ಸಮಿತಿಯಲ್ಲಿ ಭೈರಪ್ಪನವರ ಹೆಸರು ಪ್ರಸ್ತಾಪಗೊಂಡಾಗ ಅದೇ ಗಿರಡ್ಡಿ ಗೋವಿಂದರಾಜರು ‘ಭೈರಪ್ಪ ಕಾಂಟ್ರೊವರ್ಸಿಯಲ್ ಲೇಖಕ. ಆದ್ದರಿಂದ ಅವರ ಹೆಸರು ಬೇಡ’ ಎಂದರು. ‘ಯು.ಆರ್. ಅನಂತಮೂರ್ತಿಯವರು ಕಾಂಟ್ರೊವರ್ಸಿಯಲ್ ಅಲ್ಲವೇ? ಎಂದು ಇನ್ನೊಬ್ಬ ಸದಸ್ಯರು ತಿರುಗೇಟು ಹಾಕಿದಾಗ ಗೋವಿಂದರಾಜರಲ್ಲಿ ಉತ್ತರವಿರಲಿಲ್ಲ. ಆದರೆ ಮಾರ್ಕ್ಸಿಸ್ಟ್ ಟಿ. ಪಿ. ಅಶೋಕರೂ ಭೈರಪ್ಪ ಬಿಲ್ಕುಲ್ ಬೇಡ ಎಂದು ಹಠ ಹಿಡಿದಿದ್ದರಿಂದ ಭೈರಪ್ಪನವರ ಹೆಸರು ಪಾಸಾಗಲಿಲ್ಲ. ಅವಧೂತಪ್ರಜ್ಞೆಯ ವಿಮರ್ಶಕರೆಂದು ಅವರ ಹಿಂಬಾಲಕರಿಂದ ಸರ್ಟಿಫಿಕೆಟ್ ಪಡೆದುಕೊಂಡಿದ್ದ ಕಿ.ರಂ. ನಾಗರಾಜರಿಗಂತೂ ಭೈರಪ್ಪನವರ ತಲೆ ಕಂಡರೆ ಮಾತ್ರವಲ್ಲ ಹೆಸರು ಹೇಳಿದರೂ ಆಗುತ್ತಿರಲಿಲ್ಲ. ಹಾಗಾಗಿ ಅವರದ್ದೂ ಕಟ್ಟುನಿಟ್ಟಿನ ವಿರೋಧ ಎದ್ದು ನಿಂತಿತು. ಎಂ.ಎಂ. ಕಲಬುರ್ಗಿಯವರು ಮೊದಮೊದಲು ಭೈರಪ್ಪನವರು ಆಗಬಹುದು ಎಂದರೂ ಅವರ ಹೆಸರನ್ನು ತಾವು ಒಪ್ಪಿದ್ದು ತಿಳಿದರೆ ವಿಚಾರವಾದಿಗಳು ತಮ್ಮನ್ನು ಏನೆಂದುಕೊಂಡಾರೋ ಎಂಬ ಅಂಜಿಕೆಯನ್ನು ವ್ಯಕ್ತಪಡಿಸಿ ಗಿರಡ್ಡಿಯವರ ಪರ ನಿಂತರು. ಸಮಯ ಸಿಕ್ಕಿದಾಗ ಚಿದಾನಂದಮೂರ್ತಿಯವರ ಮೇಲೆ ಹುಮ್ಮಸ್ಸಿನಿಂದ ಎರಗುವ ಕಲಬುರ್ಗಿಯವರಿಗೆ ತಮ್ಮ ಮನಸ್ಸು ಒಪ್ಪಿದರೂ ಭೈರಪ್ಪನವರ ಹೆಸರನ್ನು ಬೆಂಬಲಿಸಲು ಯಾಕೆ ಅಧೈರ್ಯವಾಯಿತು? ಎಡಪಂಥೀಯರು ತಮಗೆ ಪ್ರಗತಿವಿರೋಧಿ ಎಂಬ ಹಣೆಪಟ್ಟಿ ಕಟ್ಟಿಬಿಡುತ್ತಾರೆಂಬ ಅಂಜಿಕೆಯೇ? ಎಡಪಂಥೀಯ ಟೆರರಿಸಂಗೆ ಅವರೂ ಹೆದರಬೇಕೆ?

ಇವರೆಲ್ಲ ಭೈರಪ್ಪನವರ ಹೆಸರನ್ನು ವಿರೋಧಿಸಿದರೇ ಹೊರತು ರಾಷ್ಟ್ರಮಟ್ಟದಲ್ಲಿ ಹೆಸರು ಸಂಪಾದಿಸಿರುವ ಕನ್ನಡದ ಇನ್ನೊಬ್ಬ ಲೇಖಕನ ಹೆಸರನ್ನು ಮುಂದಿಡಲಿಲ್ಲ.

ಸರಸ್ವತಿ ಸಮ್ಮಾನಕ್ಕಾಗಿ ಈ ವರ್ಷದ ಕನ್ನಡ ಭಾಷೆಯ ಮಟ್ಟದ ಆಯ್ಕೆ ಸಮಿತಿಯಲ್ಲಿ ಡಿ.ಎ. ಶಂಕರ್, ವೀಣಾ ಶಾಂತೇಶ್ವರ್ ಮತ್ತು ತೀ.ನಂ. ಶಂಕರನಾರಾಯಣರಿದ್ದರು. ಯಾರ ಬೆದರಿಕೆಗೂ ಪಕ್ಕಾಗದೆ ಯಾವ ಐಡಿಯಾಲಜಿಯ ಗಾಜನ್ನೂ ಕಣ್ಣಿಗೆ ಕಟ್ಟಿಕೊಳ್ಳದೆ ಇದುವರೆಗೆ ಒಮ್ಮೆಯೂ ದಕ್ಕದ ಈ ರಾಷ್ಟ್ರಮಟ್ಟದ ಪ್ರಶಸ್ತಿಯನ್ನು ಕನ್ನಡಕ್ಕೆ ಗೆಲ್ಲಿಸಿಕೊಡಬೇಕೆಂಬ ಕನ್ನಡ ಮತ್ತು ಕರ್ನಾಟಕದ ಏಕೈಕ ನಿಷ್ಠೆಯಿಂದ ಪ್ರೇರಿತರಾಗಿ ಗೆಲ್ಲುವ ಕುದುರೆಯನ್ನು ಇವರು ಮುಂದೆ ಬಿಟ್ಟರು. ಈ ಕುದುರೆಗೆ ಓಡುವ ಅವಕಾಶ ಸಿಕ್ಕಿದ್ದು ಇದೇ ಮೊದಲು. ಅದು ಅಡೆತಡೆ ಇಲ್ಲದ, ದಕ್ಷಿಣ ಭಾರತದ ಹಂತವನ್ನೂ ದಾಟಿ ಅಖಿಲ ಭಾರತ ಮಟ್ಟದಲ್ಲಿ ಸರ್ವಾನುಮತದ ಗೆಲುವನ್ನು ಸಾಧಿಸಿತು. ಏಕೆಂದರೆ ಅವರ ಹೆಸರು ಭಾರತದಲ್ಲೆಲ್ಲಾ ಪ್ರಸಿದ್ಧವಾಗಿತ್ತು. ದುಷ್ಟಶಕ್ತಿಗಳು ತಡೆಹಾಕದಿದ್ದರೆ ಅದು ಕಳೆದ ಹದಿನೈದಿಪ್ಪತ್ತು ವರ್ಷಗಳ ಹಿಂದೆಯೇ ಕನ್ನಡಕ್ಕೆ ಈ ಪ್ರಶಸ್ತಿಯನ್ನೋ ಅಥವಾ ಜ್ಞಾನಪೀಠವನ್ನೋ ತಂದುಕೊಡುತ್ತಿತ್ತು.

ಆಯ್ಕೆಯ ಕನ್ನಡ ಭಾಷಾ ಮಟ್ಟದಲ್ಲಿ ಭೈರಪ್ಪನವರ ಹೆಸರನ್ನು ಸೂಚಿಸಿ ಎಷ್ಟು ಪ್ರಸ್ತಾವಗಳು ಬಂದರೂ ಭಾಷಾ ಸಮಿತಿಗಳು ಅವುಗಳನ್ನು ಕಡೆಗಣಿಸುತ್ತಿದ್ದವು. ಅವುಗಳಲ್ಲಿ ನನಗೆ ತಿಳಿದ ಕೆಲವುಗಳ ವಿವರಗಳನ್ನು ಮಾತ್ರ ನಾನು ಇಲ್ಲಿ ಹೇಳಿದ್ದೇನೆ. ಉಳಿದ ಸಮಿತಿಗಳಲ್ಲಿ ಯಾರು ಯಾರು ಇದ್ದರು, ಅವರುಗಳ ನಿಲುವುಗಳು ಏನಿದ್ದವು ಎಂಬುವನ್ನು ಯಾರಾದರೂ ವಿವರವಾಗಿ ಸಂಶೋಧನೆ ಮಾಡಿದರೆ ಆಧುನಿಕ ಕನ್ನಡ ಸಾಹಿತಿಗಳ ಕೊಳಕು ರಾಜಕೀಯವನ್ನು ಜನತೆಗೆ ತಿಳಿಸಿದಂತಾಗುತ್ತದೆ.

ನವ್ಯರು ತಮ್ಮ ವಿಜೃಂಭಣೆಯನ್ನು ಆರಂಭಿಸಿದ ಅವಧಿಯಲ್ಲಿ ಭೈರಪ್ಪನವರು ಲಾರೆನ್ ಕಾಫ್ಕಾ, ಕಾಮೂ, ಲೋಹಿಯಾರ ಹಿಂಬಾಲಕರಾಗದೆಯೂ ಗಟ್ಟಿ ಸಾಹಿತ್ಯವನ್ನು ನಿರ್ಮಿಸಬಹುದೆಂದು ತೋರಿಸಿದ್ದರಿಂದ ಅವರು ಇವರನ್ನು ವಿರೋಧಿಸತೊಡಗಿದರು. ಅಲ್ಲದೆ ತಾನೊಬ್ಬನೇ ಆಧುನಿಕ ಕನ್ನಡದ ಏಕಮೇವಾದ್ವಿತೀಯ ಲೇಖಕನೆಂದು ಮೆರೆಯುವ ಆಕಾಂಕ್ಷೆಯ ರಾಜಕಾರಣಿಗೆ ತಮಗಿಚ್ಛೆ ಇಲ್ಲದೆಯೇ ಸವಾಲಾದರು. ಅನಂತರ ಬಂದ ಬಂಡಾಯ, ದಲಿತ ಮೊದಲಾದ ಚಳವಳಿಗಳಿಂದಲೂ ಹೊರಗೆ ನಿಂತು ಗಟ್ಟಿ ಸಾಹಿತ್ಯ ರಚಿಸತೊಡಗಿದರು. ಕನಕಪುರದಲ್ಲಿ ನಡೆದ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಭಾಷಣದಲ್ಲಿ ಅವರು ಸಮಕಾಲೀನ ಸಾಹಿತ್ಯ ಚಳವಳಿಗಳನ್ನು ವಿವರಿಸಿದ ರೀತಿಗಂತೂ ಎಲ್ಲ ಚಳವಳಿಗಳೂ ಅವರ ವಿರುದ್ಧ ನಿಂತವು. ಸಮ್ಮೇಳನದ ಎರಡನೆಯ ದಿನ ಬೆಳಗ್ಗೆ ಅವರ ಭಾಷಣದ ಪ್ರತಿಯನ್ನು ಸುಡುವ ಮಟ್ಟಿಗೂ ಈ ವಿರೋಧ ಹೋಯಿತು. ಇತ್ತೀಚೆಗೆ ಬಂದ ಅವರ ‘ಆವರಣ’ವು ಸಮಸ್ತ ಕನ್ನಡಿಗರ ಮಾತ್ರವಲ್ಲದೆ ಅನುವಾದಿತ ಭಾಷೆಗಳ ಓದುಗರ ಮೆಚ್ಚುಗೆಯನ್ನು ಸೂರೆಗೊಂಡಿದ್ದು ಈ ಚಳವಳಿಗಾರರನ್ನು ಇನ್ನೂ ರೇಗಿಸಿತು. ಆದರೆ ಯಾರ ರೇಗಿಗೂ, ರೇಜಿಗೆಗೂ ತಲೆಕೆಡಿಸಿಕೊಳ್ಳದೆ ಭೈರಪ್ಪನವರು ಬರೆಯುತ್ತಲೇ ಸಾಗುತ್ತಿದ್ದಾರೆ. ಇಷ್ಟಕ್ಕೂ ಈ ಗುಂಪುಗಳು ಮಾಡಬಹುದಾದುದ್ದೇನು? ಆಯಕಟ್ಟಿನ ಜಾಗ ಹಿಡಿದು ಪ್ರಶಸ್ತಿಗಳನ್ನು ತಪ್ಪಿಸುವುದು. ಪ್ರಶಸ್ತಿಗಳ ಮೌಲ್ಯವು ವರ್ಷವರ್ಷಕ್ಕೂ ಅಗ್ಗವಾಗುತ್ತಿರುವುದನ್ನು ಭಾರತದ ಎಲ್ಲ ಭಾಷೆಗಳ ವಿದ್ಯಾವಂತ ಓದುಗರೇ ಗುರುತಿಸಿದ್ದಾರೆ. ಭೈರಪ್ಪನವರಂತೂ ಅವುಗಳ ಲೋಭದಿಂದ ಮೊದಲಿನಿಂದಲೂ ದೂರವಿದ್ದಾರೆ.

‘ಸಾಹಿತಿಯು ಸೂಕ್ಷ್ಮ ಸಂವೇದನೆಯ ವ್ಯಕ್ತಿ, ನಿಜ. ಆದರೆ ದುರ್ಬಲ ವ್ಯಕ್ತಿಯು ಗಟ್ಟಿ ಸಾಹಿತ್ಯವನ್ನು ಸೃಷ್ಟಿಸಲಾರ’ (ಭಿತ್ತಿ, ಪುಟ 524) ಎಂಬುದು ಅವರ ಅಚಲ ನಂಬಿಕೆ. ಇದೆಲ್ಲ ಏಕಮೇವಾದ್ವಿತೀಯನೆನಿಸಿಕೊಳ್ಳಬೇಕೆಂಬ ಆಸೆಯನ್ನು ಪೋಷಿಸುತ್ತಾ ಬಂದಿರುವ ವ್ಯಕ್ತಿ ಹಾಗೂ ಅವರ ಶಿಷ್ಯವೃಂದಕ್ಕೆ ಹೇಗೆ ಅರ್ಥವಾದೀತು?

ಕೃಪೆ: ಪ್ರತಾಪ ಸಿಂಹ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ