ನನ್ನ ಬ್ಲಾಗ್ ಪಟ್ಟಿ

ಗುರುವಾರ, ಜುಲೈ 14, 2011

ಒಕ್ಕಲಿಗರು, ಲಿಂಗಾಯತರು, ಬ್ರಾಹ್ಮಣರ ಜತೆ ದಲಿತರು ಸಂಬಂಧ ಬೆಳೆಸುವಂತಾಗಬೇಕು!

ಭಾರತದಲ್ಲಿ ದಲಿತ ಚಿಂತನೆ ಎಂದರೆ ಅದನ್ನು ಕಡ್ಡಾಯವಾಗಿ ಮಾರ್ಕ್ಸ್್ವಾದದೊಂದಿಗೆ ತಳಕು ಹಾಕುವುದು, ಮೇಲ್ವರ್ಗವನ್ನು ನಿಂದಿಸುವುದು ಎಂಬ ಕಲ್ಪನೆ ಲಾಗಾಯ್ತಿನಿಂದ ಬೆಳೆದುಬಿಟ್ಟಿದೆ. ಈ ಚೌಕಟ್ಟಿನ ಹೊರಗೆ ನಿಂತು, ಶಿಕ್ಷಣ ಹಾಗೂ ಉದ್ಯಮಶೀಲತೆಯ ಮುಖಾಂತರವೇ ದಲಿತ ವಿಮೋಚನೆಗೆ ರಾಷ್ಟ್ರಮಟ್ಟದಲ್ಲಿ ಪ್ರಯತ್ನಕ್ಕೆ ಇಳಿದಿರುವ ವಿಶಿಷ್ಟ ಚಿಂತಕ ಚಂದ್ರಭಾನ್ ಪ್ರಸಾದ್. “ಪಯೋನೀರ್್’ನಲ್ಲಿ ಪ್ರತಿವಾರ “ದಲಿತ್ ಡೈರಿ’ ಅಂಕಣ ಬರೆಯುವ ಅವರು ದೇಶದ ಮೊದಲ ದಲಿತ ಅಂಕಣಕಾರರೂ ಹೌದು. “ಕನ್ನಡ ಪ್ರಭ’ ಓದುಗರಿಗೂ ಇವರು ತಮ್ಮ ಬರಹಗಳ ಮೂಲಕ ಪರಿಚಿತರು. ಇದೀಗ ದಲಿತ ಉದ್ಯಮಿಗಳನ್ನು ಗುರುತಿಸಿ, ಒಂದೆಡೆ ಕಲೆ ಹಾಕಿ, ಅವರದ್ದೇ ಆದ ಒಂದು ಒಕ್ಕೂಟವನ್ನು ಅರಂಭಿಸಲು ರಾಷ್ಟ್ರವ್ಯಾಪಿ ಪ್ರವಾಸ ಕೈಗೊಂಡಿದ್ದಾರೆ. ಅದರ ಅಂಗವಾಗಿ ಚಂದ್ರಭಾನ್ ಪ್ರಸಾದ್ ಬುಧವಾರ ಬೆಂಗಳೂರಿಗೂ ಆಗಮಿಸಿದ್ದರು. ಆ ಸಂದರ್ಭದಲ್ಲಿ ಅವರನ್ನು ಸಂದರ್ಶನದ ರೂಪದಲ್ಲಿ ಮಾತಿಗೆಳೆದಾಗ ಕುತೂಹಲಕಾರಿ ಅಂಶಗಳು ಬೆಳಕಿಗೆ ಬಂದವು.

1. ದಲಿತ ಉದ್ಯಮಿಗಳನ್ನು ಗುರುತಿಸಿ, ಒಗ್ಗೂಡಿಸಲು ನೀವು ಯತ್ನಿಸುತ್ತಿರುವ ಹಿಂದಿನ ಉದ್ದೇಶವೇನು?

ದಲಿತರಲ್ಲೂ ಉದ್ಯಮಿಗಳಿದ್ದಾರೆ, ಯಾರ ಸಹಾಯವೂ ಇಲ್ಲದೆ ಕಷ್ಟಪಟ್ಟು ಮೇಲೆ ಬಂದವರಿದ್ದಾರೆ ಎಂಬುದನ್ನು ತೋರಿಸುವ ಹಾಗೂ ದಲಿತರು ಸ್ವಂತ ಶಕ್ತಿಯಿಂದ ಏನನ್ನೂ ಮಾಡಲಾರರು ಎಂಬ ಮಿಥ್ಯೆಯನ್ನು ಹೊಡೆದು ಹಾಕುವ ಯತ್ನವಿದು.

2. ಇದರಲ್ಲಿ ಎಷ್ಟರಮಟ್ಟಿನ ಯಶಸ್ಸು ಲಭಿಸಿದೆ?

ದಲಿತ ಉದ್ಯಮಿಗಳು ಎಲ್ಲ ಕಡೆ ಕಾಣಸಿಗುತ್ತಿದ್ದಾರೆ. ಸಣ್ಣ ಪುಟ್ಟ ನಿರ್ಮಾಣಗಳಲ್ಲ ಟೌನ್್ಶಿಪ್್ಗಳನ್ನು ನಿರ್ಮಿಸುತ್ತಿರುವ ದಲಿತರನ್ನು ಕಂಡು ಹುಡುಕಿದ್ದೇವೆ. ಸಿಐಐ, ಫಿಕ್ಕಿಗೆ ಪ್ರತಿಯಾಗಿ ನಾವು ದಲಿತ ಉದ್ಯಮಿಗಳಿಂದಲೇ ಕೂಡಿರುವ ‘ಡಿಕ್ಕಿ’ (ದಲಿತ್ ಇಂಡಿಯನ್ ಚೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರಿ) ಆರಂಭಿಸಿದ್ದೇವೆ. ಮಹಾರಾಷ್ಟ್ರದಲ್ಲಿ ಇದರ ನಾಲ್ಕು ಚಾಪ್ಟರ್್ಗಳು ಈಗಾಗಲೇ ಆರಂಭವಾಗಿದ್ದು, ಈ ವರ್ಷ ದೇಶಾದ್ಯಂತ ಒಟ್ಟು 50 ಚಾಪ್ಟರ್್ಗಳನ್ನು ಆರಂಭಿಸುವ ಗುರಿ ಇಟ್ಟುಕೊಂಡಿದ್ದೇವೆ.

3. ಮೀಸಲಾತಿಯನ್ನು ಬಿಟ್ಟು ದಲಿತರ ಏಳಿಗೆಗೆ ಏನು ಮಾಡಬೇಕು?

ದಲಿತರಿಗೆ ಮಾರುಕಟ್ಟೆ ಬೇಕು. ಜತೆಗೆ ದಲಿತ ಉದ್ಯಮಿಗಳೂ ಸ್ಪರ್ಧಾತ್ಮಕತೆ ಬೆಳೆಸಿಕೊಳ್ಳಬೇಕು. ದಲಿತರೆಂಬ ಕಾರಣಕ್ಕೆ ಯಾರೂ ಆರ್ಡರ್ ಕೊಡುವುದಿಲ್ಲ ಹಾಗೂ ಆರ್ಡರ್ ನಿರಾಕರಿಸುವುದಿಲ್ಲ. ತಮ್ಮಲ್ಲೂ ಪ್ರತಿಭೆ ಇದೆ, ಗುಣಮಟ್ಟದಲ್ಲಿ ರಾಜಿ ಮಾಡಿಕೊಳ್ಳುವುದಿಲ್ಲ ಎಂಬುದನ್ನು ದಲಿತರು ತೋರಿಸಬೇಕು. ನಾನು ಇಲ್ಲಿಗೆ ಆಗಮಿಸುವ ಮೊದಲು ಚೆನ್ನೈಗೆ ಹೋಗಿದ್ದೆ. ಅಲ್ಲಿ ನಮ್ಮ ದಲಿತನೊಬ್ಬ ಪಿಝಾ ಹಟ್ ಇಟ್ಟಿದ್ದಾನೆ! ಮಾರಾಟವಾಗದೆ ಉಳಿದ ಪಿಝಾಗಳನ್ನು ಮರುದಿನ ಬಿಸಿ ಮಾಡಿಕೊಡಲು ಏನಾದರೂ ವ್ಯವಸ್ಥೆ ಮಾಡಿಕೊಂಡಿದ್ದೀಯಾ ಎಂದು ಕೇಳಿದಾಗ, ಮರುದಿನಕ್ಕೆ ಉಳಿಸಿಕೊಳ್ಳುವ ಪ್ರಮೇಯವೇ ಇಲ್ಲ, ಒಂದು ವೇಳೆ ಖಾಲಿಯಾಗದೆ ಉಳಿದರೆ ಅವುಗಳನ್ನು ತೊಟ್ಟಿಗೆ ಹಾಕುತ್ತೇನೆಯೇ ಹೊರತು ಮರುದಿನ ಬಿಸಿ ಮಾಡಿಕೊಡುವುದಿಲ್ಲ ಎಂದ! ಅಂದರೆ ಜನರ ವಿಶ್ವಾಸ ಗಳಿಸುವುದು, ಉಳಿಸಿಕೊಳ್ಳುವುದು ನಮ್ಮ ಧ್ಯೇಯವಾಗಬೇಕು. ಹಾಗಾಗಿಯೇ ಆತನನ್ನೂ ಯಾರೂ ದಲಿತನೆಂಬಂತೆ ಕಾಣುವುದಿಲ್ಲ, ಎಲ್ಲರಿಗಿಂತಲೂ ಹೆಚ್ಚು ಗಿರಾಕಿಗಳನ್ನು ಹೊಂದಿದ್ದಾನೆ.

4. ತಮ್ಮ ಬಗ್ಗೆ ಸವರ್ಣೀಯರಲ್ಲಿರುವ ಕೀಳು ಭಾವನೆಯನ್ನು ತೊಡೆದು ಹಾಕಲು ದಲಿತರು ಮಾಡಬೇಕಾಗಿರುವುದೇನು?

“ಜನಾಂಗೀಯ ತಾರತಮ್ಯವನ್ನು ತೊಡೆದು ಹಾಕಬೇಕಾದರೆ ಸಾವಿರಾರು ಸಂಖ್ಯೆಯಲ್ಲಿ ಕರಿಯರು ಉದ್ಯಮಿಗಳಾಗಬೇಕು. ಬಿಳಿಯರಿಗೆ ಉದ್ಯೋಗ ಕೊಡಬೇಕು” ಎಂದು ಮೂವತ್ತು ವರ್ಷಗಳ ಹಿಂದೆ ಅಮೆರಿಕದಲ್ಲಿ ಕಪ್ಪುವರ್ಣೀಯ ಬುದ್ಧಿಜೀವಿಗಳು ಒತ್ತಿ ಹೇಳಿದರು. ನಮ್ಮಲ್ಲೂ ಅದೇ ಬದಲಾವಣೆಯಾಗಬೇಕು. ದಲಿತರೆಂದರೆ ಕೆಲಸ ಕೇಳುವವರು ಎಂಬ ಭಾವನೆ ಹೋಗಬೇಕಾದರೆ ಮೇಲ್ಜಾತಿಯವರಿಗೆ ಕೆಲಸ ಕೊಡುವ ಸಾಮರ್ಥ್ಯವನ್ನು ದಲಿತರು ಪಡೆದುಕೊಳ್ಳಬೇಕು. ಹಾಗೆ ಆರ್ಥಿಕ ಮಟ್ಟವನ್ನು ಏರಿಸಿಕೊಂಡು ಒಕ್ಕಲಿಗರು, ಲಿಂಗಾಯತರು, ಬ್ರಾಹ್ಮಣರ ಜೊತೆ ಸಂಬಂಧ ಬೆಳೆಸಬೇಕು! ಆಗ ಪರಸ್ಪರ ಅಪನಂಬಿಕೆಗಳೂ ದೂರವಾಗುತ್ತವೆ, ಜಾತಿ ಕಂದಕಗಳೂ ಮುಚ್ಚಿ ಹೋಗುತ್ತವೆ. ಸಮಾಜದಲ್ಲೂ ಸೌಹಾರ್ದಯುತ ವಾತಾವರಣ ಸೃಷ್ಟಿಯಾಗುತ್ತದೆ!

5. ಹಾಗಾದರೆ ಇಂದಿಗೂ ಮೇಲ್ಜಾತಿ ವಿರುದ್ಧದ ಕೋಪತಾಪಗಳನ್ನೇ ಜೀವಾಳವಾಗಿಟ್ಟುಕೊಂಡಿರುವ ದಲಿತ ನಾಯಕರ ಬಗ್ಗೆ ಏನನ್ನುತ್ತೀರಿ?

ತಪ್ಪು. ನಾವು ಮೇಲ್ಜಾತಿ ದ್ವೇಷ ಬಿಟ್ಟು, ಅವರ ಜತೆ ಕೈಜೋಡಿಸಲು ಹಾಗೂ ಪಾಲುದಾರಿಕೆಗೆ ಯತ್ನಿಸುತ್ತಿದ್ದೇವೆ.

6. ಇನ್ನು ಮೀಸಲಾತಿಯ ವಿಷಯಕ್ಕೆ ಬರುವುದಾದರೆ, ಕೆನೆ ಪದರವನ್ನು ಮೀಸಲಿನಿಂದ ಹೊರಗಿಡುವುದನ್ನು ದಲಿತ ಬುದ್ಧಿಜೀವಿಗಳೇ ವಿರೋಧಿಸುವುದೇಕೆ? ಅದರಿಂದ ಮೀಸಲು ವಂಚಿತ ದಲಿತರಿಗೇ ಲಾಭವಾಗುವುದಿಲ್ಲವೇ?

ಖಂಡಿತ ಸರಿಯಲ್ಲ. ಒಮ್ಮೆ ಮೀಸಲು ಸೌಲಭ್ಯವನ್ನು ಬಳಸಿಕೊಂಡವರು ಜನರಲ್ ಕೆಟಗರಿ ಜತೆ ಸ್ಪರ್ಧೆ ಮಾಡಬೇಕೇ ಹೊರತು ಮುಂದಿನ ತಲೆಮಾರಿಗೂ ಬೇಡಬಾರದು. ಆಗ ಮಾತ್ರ ಉಳಿದವರಿಗೆ ಅದರ ಲಾಭ ಸಿಗಲು ಸಾಧ್ಯ.

7. ಮಾಯಾವತಿಯವರ ಬಗ್ಗೆ ನಿಮಗೇನನಿಸುತ್ತದೆ? ಪ್ರತಿಮೆ ಅನಾವರಣ, ಉದ್ಯಾನವನಗಳ ಮರುನಾಮಕರಣ ಬಿಟ್ಟು ಆಕೆ ದಲಿತರ ಏಳಿಗೆಗೆ ಏನನ್ನಾದರೂ ಮಾಡುತ್ತಿದ್ದಾರೆಯೇ?

ಸೈಕಲಾಜಿಕಲ್ ಎಂಪವರ್್ಮೆಂಟ್. ಆಕೆ ಮಾನಸಿಕ ಮಟ್ಟದಲ್ಲಿ ಬದಲಾವಣೆ ತಂದಿದ್ದಾರೆ. ಅದಕ್ಕಿಂತ ಹೆಚ್ಚೂ ಇಲ್ಲ, ಕಡಿಮೆಯೂ ಇಲ್ಲ. ದಲಿತರು ಬಹಳ ಆತ್ಮವಿಶ್ವಾಸದಿಂದಿದ್ದಾರೆ.

8. ಇಂಗ್ಲಿಷ್ ದೇವಿಯ ಪ್ರತಿಷ್ಠಾಪನೆಯ ನಂತರ ಅದೇನೋ “ಜಾನುವಾರುಗಳ ದೌರ್ಜನ್ಯದಿಂದ ಮುಕ್ತಿ” ಎಂಬ ಹೊಸ ಚಳವಳಿ ಆರಂಭಿಸಿದ್ದೀರಂತಲ್ಲ?

ನೋಡಿ…, ಹಸು, ಎತ್ತು, ಕರು, ಎಮ್ಮೆ, ಮೇಕೆ, ಹಂದಿಗಳ ಹಿಂದೆ ಹೋದರೆ ಏನಾಗುತ್ತೆ? ಅವುಗಳ ಮಾಡುವ ಮಲ, ಮೂತ್ರವನ್ನು ಸ್ವಚ್ಛಗೊಳಿಸಬೇಕು. ಜಾನುವಾರುಗಳು ಅನಕ್ಷರಸ್ಥ ಪ್ರಾಣಿಗಳು. ಅವುಗಳನ್ನು ಮೇಯಿಸಲು ಹೊರಡಿಸಿದಾಗ ಅವು ಮುಂದೆ ಸಾಗುತ್ತವೆ. ದಲಿತರು ಬಾಲ ಹಿಡಿದು ಸಾಗಬೇಕು. ಇಂತಹ ಅನಕ್ಷರಸ್ಥ ಪ್ರಾಣಿಗಳು ನಮ್ಮನ್ನು ಮುನ್ನಡೆಸಿದರೆ ದಲಿತರು ಹೋಗಿ ಸೇರುವುದೆಲ್ಲಿಗೆ? ದಲಿತರು ಜಾನುವಾರುಗಳ ಹಿಂದೆ ಹೋಗುವುದನ್ನು ಬಿಡಬೇಕು. ಅದಕ್ಕೇ ನಾನು ದಲಿತರಿಗೆ ಹೇಳುತ್ತೇನೆ- ನಿಮ್ಮ ವೈರಿಗಳ ವಿರುದ್ಧ ತೆಗೆದುಕೊಳ್ಳಬೇಕಾದ ಅತಿ ದೊಡ್ಡ ಪ್ರತೀಕಾರವೆಂದರೆ ಆತನ ಜತೆ ಕುಸ್ತಿಗಿಳಿಯುವುದಲ್ಲ, ಆತನಿಗೊಂದು ಜಾನುವಾರುವನ್ನು ದಾನವಾಗಿ ಕೊಡುವುದು. ಆಗ ಆತನ ಒಂದು ತಲೆಮಾರು ಜಾನುವಾರುಗಳ ಪಾಲನೆ ಪೋಷಣೆಯಲ್ಲೇ ಹಿಂದೆ ಬೀಳುತ್ತದೆ!

9. ಇವತ್ತು ದಲಿತ ಉದ್ಯಮಿಗಳು ಮಾತ್ರವಲ್ಲ, ದೇಶದ ಆಧ್ಯಾತ್ಮಿಕ ಕ್ಷೇತ್ರದಲ್ಲೂ ಬಾಬಾರಾಮದೇವ್, ಮಾತಾ ಅಮೃತಾನಂದಮಯಿ ಅವರಂತಹ ಹಿಂದುಳಿದ ಜನಾಂಗಗಳ ವ್ಯಕ್ತಿಗಳು ದೊಡ್ಡ ಹೆಸರು ಮಾಡುತ್ತಿರುವುದು ದಲಿತ ಚಿಂತಕರಾದ ನಿಮಗೆ ಖುಷಿ ಕೊಡುವುದಿಲ್ಲವೆ?

ಈ ಸಾಧು-ಸಂತರ ಬಗ್ಗೆ ನನಗೆ ಯಾವ ಮೋಹವೂ ಇಲ್ಲ. ಅವರು ಎಲ್ಲರಿಂದ ವಿಮುಖರಾಗಿರುವ ವ್ಯಕ್ತಿಗಳು. ಹಿಂದುಳಿದ ವರ್ಗದ ವ್ಯಕ್ತಿಯೇ ಸಾಧುವಾದರೂ ಆತ ಎಲ್ಲರಂತೆ ತಿನ್ನುವಂತಿಲ್ಲ, ಕುಡಿಯುವ ಹಾಗಿಲ್ಲ, ಆಹಾರ ಸೇವನೆಯಲ್ಲೂ ಕಟ್ಟುಪಾಡುಗಳನ್ನು ಅನುಸರಿಸಬೇಕಾಗುತ್ತದೆ. ಹಾಗಿರುವಾಗ ಮೇಲ್ಜಾತಿ- ಕೆಳಜಾತಿ ಸಂತರ ನಡುವೆ ಯಾವ ವ್ಯತ್ಯಾಸವಿರುತ್ತದೆ.

10. ಮೇಲ್ಜಾತಿಯವರು ದಲಿತರನ್ನು ನೋಡುವ, ಕಾಣುವ, ನಡೆಸಿಕೊಳ್ಳುವ ವಿಧಾನದಲ್ಲಿ ಈಗ ಏನಾದರೂ ಬದಲಾವಣೆ ಕಾಣುತ್ತಿದೆಯೇ?

ಖಂಡಿತ. ದಲಿತರಲ್ಲಿ ಯಾರು ಯಶಸ್ವಿಯಾಗಿದ್ದಾರೋ ಅವರಿಗೆ ಸವರ್ಣೀಯರಿಂದ ಯೋಗ್ಯ ಗೌರವ ದೊರೆಯುತ್ತಿದೆ. ಇದು ಜಾಗತೀಕರಣದ ಕಾಲ. ನಿಮ್ಮ ಜಾತಿಯ ಆಧಾರದ ಮೇಲೆ ಯಾರೂ ನಿಮಗೆ ಗೌರವ ಕೊಡುವುದಿಲ್ಲ. ನೀವು ಮೇಲ್ಜಾತಿಯವರಾಗಿದ್ದು ಕೈಯಲ್ಲಿ ಮೊಬೈಲ್, ಓಡಾಡಲು ಕಾರು ಇಲ್ಲದಿದ್ದರೆ ಯಾರೂ ಕ್ಯಾರೆ ಎನ್ನುವುದಿಲ್ಲ. ದಲಿತನೊಬ್ಬ ಚೆನ್ನಾಗಿ ಉಡುಪು ಧರಿಸಿಕೊಂಡು, ಇಂಗ್ಲಿಷ್್ನಲ್ಲಿ ಸರಾಗವಾಗಿ ಮಾತನಾಡುತ್ತಾ ಒಳ್ಳೆಯ ಕಾರಿನಲ್ಲಿ ಬಂದಿಳಿದರೆ ಯಾರು ತಾನೇ ನಿನ್ನನ್ನು ಮುಟ್ಟುವುದಿಲ್ಲ ಎನ್ನುತ್ತಾರೆ? ಆ ಕಾರಣಕ್ಕಾಗಿಯೇ ದಲಿತರೂ ಉದ್ಯಮಶೀಲತೆ ಬೆಳೆಸಿಕೊಳ್ಳಬೇಕು, ಕೆಲಸ ಕೊಡುವವರಾಗಬೇಕು ಎಂದು ನಾನು ಪ್ರತಿಪಾದಿಸುತ್ತಿರುವುದು. ದಲಿತರೆಂದರೆ ಕೆಲಸ ಕೇಳುವವರು ಎಂಬ ಭಾವನೆ ಹೋಗಬೇಕಾದರೆ ಮೇಲ್ಜಾತಿಯವರಿಗೆ ಕೆಲಸ ಕೊಡುವ ಸಾಮರ್ಥ್ಯವನ್ನು ದಲಿತರು ಪಡೆದುಕೊಳ್ಳಬೇಕು. ಹಾಗೆ ಆರ್ಥಿಕ ಮಟ್ಟವನ್ನು ಏರಿಸಿಕೊಂಡು ಒಕ್ಕಲಿಗರು, ಲಿಂಗಾಯತರು, ಬ್ರಾಹ್ಮಣರ ಜತೆ ಸಂಬಂಧ ಬೆಳೆಸಬೇಕು! ಆಗ ಪರಸ್ಪರ ಅಪನಂಬಿಕೆಗಳೂ ದೂರವಾಗುತ್ತವೆ, ಜಾತಿ ಕಂದಕಗಳೂ ಮುಚ್ಚಿ ಹೋಗುತ್ತವೆ. ಸಮಾಜದಲ್ಲೂ ಸೌಹಾರ್ದಯುತ ವಾತಾವರಣ ಸೃಷ್ಟಿಯಾಗುತ್ತದೆ.

ಕೃಪೆ: ಪ್ರತಾಪ ಸಿಂಹ


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ