ನನ್ನ ಬ್ಲಾಗ್ ಪಟ್ಟಿ

ಶನಿವಾರ, ಜುಲೈ 30, 2011

ಸಂಘಪರಿವಾರದಿಂದ ಬಂದು ‘ಸ್ವಂತ ಪರಿವಾರ’ ಕಟ್ಟಿಕೊಂಡರಲ್ಲ ಈ ವ್ಯಕ್ತಿ!

ಅವರೊಬ್ಬ ಹುಟ್ಟು ಹೋರಾಟಗಾರ, ಅವರ ಸಿಡುಕು ಮುಖದ ಹಿಂದಿದ್ದಿದ್ದು ಸಾತ್ವಿಕ ಸಿಟ್ಟು, ಮೂವತ್ತು ವರ್ಷ ಪರಿಶ್ರಮಪಟ್ಟು ಪಕ್ಷ ಕಟ್ಟಿದ್ದೇ ಅವರು. ಇಂತಹ ಹೊಗಳಿಕೆ ಗುಣವಾಚಕಗಳನ್ನು ನಾವು ಇದುವರೆಗೂ ಓದುತ್ತಾ ಕೇಳುತ್ತಾ ಬಂದಿದ್ದೆವು. ಹಾಗೆಂದೇ ನಂಬಿದ್ದೆವು.

ಆದರೆ…

ನಮ್ಮ ನಂಬಿಕೆ ನಿಜವಾಗಿತ್ತಾ? ನಾವು ಭಾವಿಸಿದಂತೆಯೇ ಇದ್ದರಾ ಬೂಕನಕೆರೆ ಸಿದ್ಧಲಿಂಗಪ್ಪ ಯಡಿಯೂರಪ್ಪ? ಅವರ ಸಿಡುಕು ಮುಖದ ಹಿಂದೆ ಇದ್ದಿದ್ದು ನಿಜಕ್ಕೂ ಸಾತ್ವಿಕ ಸಿಟ್ಟಾ? ಇಷ್ಟಕ್ಕೂ ನಿಜವಾದ ಯಡಿಯೂರಪ್ಪ ಯಾರು? ನಾವು ನಂಬಿಕೊಂಡು, ಕಲ್ಪಿಸಿಕೊಂಡು, ಗೌರವಿಸಿಕೊಂಡು ಬಂದಿದ್ದ ವ್ಯಕ್ತಿಯಾ ಅಥವಾ ಈಗ ಕಾಣುತ್ತಿರುವ ಅಧಿಕಾರಲಾಲಸಿ, ಧನದಾಹಿಯಾ?

“ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿ ಎಂದು ಬಿಜೆಪಿ ಹೈಕಮಾಂಡ್ ಗುರುವಾರ ಬೆಳಗ್ಗೆ ಸೂಚನೆ ನೀಡಿತು. ಆದರೆ ಮಧ್ಯಾಹ್ನದ ನಂತರ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಲವಾರು ಕಡತಗಳನ್ನು ತ್ವರಿತವಾಗಿ ವಿಲೇವಾರಿ ಮಾಡಿದರು! ಬೆಂಗಳೂರಿನ ರೇಸ್್ಕೇರ್ಸ್್ನಲ್ಲಿನ ತಮ್ಮ ನಿವಾಸಕ್ಕೆ ವಿವಿಧ ಇಲಾಖೆಗಳ ಕಡತಗಳನ್ನು ತರಿಸಿಕೊಂಡ ಸಿಎಂ ಅಲ್ಲಿಯೇ ಸಹಿಹಾಕಿದರು. ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಐಎನ್್ಎಸ್ ಪ್ರಸಾದ್, ಕಾರ್ಯದರ್ಶಿ ಲಕ್ಷ್ಮೀ ನಾರಾಯಣ, ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಆಶೋಕ್ ಕುಮಾರ್ ಮನೋಳಿ ಮುಂತಾದ ಕೆಲ ಹಿರಿಯ ಅಧಿಕಾರಿಗಳನ್ನು ಕರೆಸಿ ಕಡತ ವಿಲೇವಾರಿ ಮಾಡಿದರು.”

ಈ ಪತ್ರಿಕಾ ವರದಿ ಏನನ್ನು ಸೂಚಿಸುತ್ತದೆ?

ಗುರುವಾರ ಬೆಳಗ್ಗೆ ಬಿಜೆಪಿ ಸಂಸದೀಯ ಸಭೆಯಿಂದ ಹೊರಬಂದ ಪಕ್ಷದ ವಕ್ತಾರ ರವಿಶಂಕರ್ ಪ್ರಸಾದ್, ಬಿ.ಎಸ್. ಯಡಿಯೂರಪ್ಪನವರಿಗೆ ರಾಜೀನಾಮೆ ನೀಡುವಂತೆ ಸೂಚಿಸಿದೆ ಎಂದು ಮಾಧ್ಯಮಗಳ ಮುಂದೆ ಘೋಷಣೆ ಮಾಡಿದ್ದು 10 ಗಂಟೆಗೆ. ಅಲ್ಲಿಗೆ ಮುಖ್ಯಮಂತ್ರಿ ಸ್ಥಾನದಲ್ಲಿ ಒಂದು ಕ್ಷಣ ಮುಂದುವರಿಯುವ ನೈತಿಕ ಹಕ್ಕನ್ನೂ ಯಡಿಯೂರಪ್ಪನವರು ಕಳೆದುಕೊಂಡರು. ಪಕ್ಷಕ್ಕಿಂತ ಯಾವ ವ್ಯಕ್ತಿಯೂ ದೊಡ್ಡವನಲ್ಲ. ಕರ್ನಾಟಕದಲ್ಲಿರುವುದು ಬಿಜೆಪಿ ಸರ್ಕಾರ. ಯಡಿಯೂರಪ್ಪನವರು ಅದರ ಮುಖ್ಯಸ್ಥರಷ್ಟೇ. ಪಕ್ಷಕ್ಕೆ ವಿಶ್ವಾಸವಿಲ್ಲವೆಂದಾದರೆ ನೇತಾರನನ್ನು ಯಾವ ಕ್ಷಣಕ್ಕೂ ಅದು ಬದಲಿಸಬಹುದು. ಹಾಗೆ ವಿಶ್ವಾಸವಿಲ್ಲ ಎಂದ ಮೇಲೂ ಯಡಿಯೂರಪ್ಪನವರು ಮಾಡಿದ್ದೇನು? ಮುಖ್ಯಮಂತ್ರಿಗಾದಿಯಿಂದ ಕೆಳಗಿಳಿಯಿರಿ ಎಂದು ಸೂಚಿಸಿದ ನಂತರವೂ ಕಡತಗಳಿಗೆ ಸಹಿಹಾಕುವ ಮೂಲಕ ಅಧಿಕಾರ ಚಲಾಯಿಸಿದ್ದೇಕೆ? ಇದರರ್ಥವೇನು? ಪಕ್ಷದ ಆದೇಶವನ್ನೂ ಧಿಕ್ಕರಿಸುತ್ತಾರೆಂದರೆ ಕಡತಗಳ ಹಿಂದೆ ಯಾವುದೋ ಕಮಾಯಿಯ ಲೆಕ್ಕಾಚಾರವಿರಬೇಕಲ್ಲವೆ? ಇಪ್ಪತ್ತುಕೋಟಿ ರುಪಾಯಿಗಳನ್ನು ಚೆಕ್ ಮೂಲಕ ತೆಗೆದುಕೊಂಡು ಸಿಕ್ಕಿಹಾಕಿಕೊಂಡಿರುವ ಯಡಿಯೂರಪ್ಪನವರೆಷ್ಟು ಸತ್ಯಸಂಧರೆಂಬುದು ಗೊತ್ತೇ ಇದೆ. ಹಾಗಿರುವಾಗ ಕಡತಗಳಿಗೆ ಸಹಿ ಹಾಕಿರುವುದರ ಹಿಂದೆಯೂ ಯಾವುದೋ ಲಾಭ-ನಷ್ಟಗಳ ಲೆಕ್ಕಾಚಾರ ಇರಬೇಕಲ್ಲವೆ? ಅಧಿಕಾರವನ್ನು ಕಳೆದುಕೊಳ್ಳುತ್ತಿರುವ ಸಂದರ್ಭದಲ್ಲೂ ಕಡತಗಳನ್ನು ವಿಲೇವಾರಿ ಮಾಡುತ್ತಾರೆಂದರೆ ಇವರ 3 ವರ್ಷದ ಆಡಳಿತ ಯಾವ ಉದ್ದೇಶ, ಗುರಿ ಇಟ್ಟುಕೊಂಡು ನಡೆದಿರಬೇಕು ಹೇಳಿ? ಇಂತಹ ವ್ಯಕ್ತಿಯ ವಿರುದ್ಧ ಲೋಕಾಯುಕ್ತರ ವರದಿಯಲ್ಲಿ ಮಾಡಲಾಗಿರುವ ಆರೋಪಗಳಲ್ಲಿ ಯಾವ ಆಶ್ಚರ್ಯವಿದೆ? ಇವರಿಗೆ ರಾಜಕೀಯ ಅಧಿಕಾರವೆಂಬುದು ತಮ್ಮ ಖಾಸಗಿ ಸಾಮ್ರಾಜ್ಯ ಕಟ್ಟುವುದಕ್ಕಷ್ಟೇ ಬೇಕಾಗಿತ್ತು ಎಂದನಿಸುವುದಿಲ್ಲವೆ? ಒಬ್ಬ ಬಿಜೆಪಿ ಮುಖ್ಯಮಂತ್ರಿಯಿಂದ ಇಂಥದ್ದನ್ನು ನೀವೆಂದಾದರೂ ನಿರೀಕ್ಷಿಸಿದ್ದಿರಾ?

ಅದು 2008, ಸೆಪ್ಟೆಂಬರ್. ಭಾರತೀಯ ಜನತಾಪಕ್ಷದ ರಾಷ್ಟ್ರೀಯ ಕಾರ್ಯಕಾರಣಿ ಬೆಂಗಳೂರಿನಲ್ಲಿ ಆಯೋಜನೆಯಾಗಿತ್ತು. ಆ ಸಂದರ್ಭದಲ್ಲಿ ನರೇಂದ್ರ ಮೋದಿಯವರನ್ನು ಭೇಟಿಯಾಗುವ, ಪ್ರಶ್ನೆ ಕೇಳುವ ವಿರಳ ಅವಕಾಶ ದೊರೆತಿತ್ತು. ಮೋದಿಯವರೇ ನಿಮ್ಮ ಯಶಸ್ಸಿನ ಹಿಂದಿರುವ ಗುಟ್ಟೇನು? ಮಹಾಭ್ರಷ್ಟ ಅಧಿಕಾರಶಾಹಿ ವರ್ಗವನ್ನು ಹೇಗೆ ಹತೋಟಿಗೆ ತೆಗೆದುಕೊಂಡಿರಿ? ಅವರ ಭ್ರಷ್ಟತೆಯನ್ನು ಹೇಗೆ ಮಟ್ಟ ಹಾಕಿದ್ದೀರಿ? ಎಂದು ಕೇಳಿದಾಗ, ‘ನಾನು ಏನೂ ಮಾಡಲಿಲ್ಲ. ಎಲ್ಲರಿಗಿಂತಲೂ ಹೆಚ್ಚು ಕೆಲಸ ಮಾಡತೊಡಗಿದೆ. ಪ್ರತಿದಿನ ಬೆಳಗ್ಗೆ 8 ಗಂಟೆಗೆ ಮನೆ ಬಿಟ್ಟರೆ ವಾಪಸಾಗುವಾಗ 11 ಕಳೆದಿರುತ್ತಿತ್ತು. ನಮ್ಮ ಮುಖ್ಯಮಂತ್ರಿಯೇ ಕೆಲಸ ಮಾಡುತ್ತಿದ್ದಾರೆ, ನಾವ್ಹೇಗೆ ಸುಮ್ಮನೆ ಕುಳಿತುಕೊಳ್ಳುವುದು ಎಂದು ಉಳಿದವರೂ ಸರಿಯಾಗಿ ಕೆಲಸ ಮಾಡಲಾರಂಭಿಸಿದರು. ಸಾಮಾನ್ಯವಾಗಿ ಐಎಎಸ್, ಐಪಿಎಸ್ ಮುಂತಾದ ಅಧಿಕಾರಶಾಹಿ ವರ್ಗದಲ್ಲಿ ಶೇ.80ರಷ್ಟು ಜನ ಒಳ್ಳೆಯವರೇ ಇರುತ್ತಾರೆ. ಆದರೆ 20 ಪರ್ಸೆಂಟ್ ಭ್ರಷ್ಟರ ಹಾವಳಿ ಎಷ್ಟಿರುತ್ತದೆಂದರೆ ಅವರನ್ನು ಎದುರು ಹಾಕಿಕೊಳ್ಳುವ ಬದಲು ಒಂದಿಷ್ಟು ಕಿಸೆಗಿಳಿಸಿಕೊಂಡು ಸುಮ್ಮನಿರುವುದೇ ವಾಸಿ ಎಂಬ ಮನಸ್ಥಿತಿಗೆ ತಲುಪಿರುತ್ತಾರೆ. ನಾನು ಎಲ್ಲರಿಗಿಂತಲೂ ಹೆಚ್ಚು ಕೆಲಸ ಮಾಡಲು ಆರಂಭಿಸಿದ್ದನ್ನು ಕಂಡು 80 ಪರ್ಸೆಂಟ್ ಒಳ್ಳೆಯವರು ಉತ್ಸಾಹಿತರಾಗಿ ಕಾರ್ಯಪ್ರವೃತ್ತರಾದರು. ನಾನು ಬಿಡಿಗಾಸನ್ನೂ ಮುಟ್ಟಲಿಲ್ಲ. ಅಯ್ಯೋ, ನಮ್ಮ ಮುಖ್ಯಮಂತ್ರಿಯೇ ಕಾಸು ತೆಗೆದುಕೊಳ್ಳುವುದಿಲ್ಲ. ನಾವೇನಾದರೂ ತೆಗೆದುಕೊಂಡಿದ್ದು ಗೊತ್ತಾದರೆ ಗತಿಯೇನು ಎಂಬ ಭಯದಿಂದ 20 ಪರ್ಸೆಂಟ್ ಭ್ರಷ್ಟರೂ ಸರಿದಾರಿಗೆ ಬಂದರು’ ಎಂದಿದ್ದರು ಮೋದಿ!

ಕಳೆದ ಒಂಬತ್ತು ವರ್ಷಗಳಿಂದ ಗುಜರಾತನ್ನು ಆಳುತ್ತಿರುವ ನರೇಂದ್ರ ಮೋದಿಯವರು ರಾಜಕೀಯ ಪ್ರವೇಶ ಮಾಡಿದ್ದು ಸಂಘದಿಂದ. ಅವರಿಗೆ ಸಂಸ್ಕಾರ ಕೊಟ್ಟಿದ್ದೂ ಸಂಘ. ಆದರೆ ನಮ್ಮನ್ನು ಆಳುತ್ತಿರುವ ಬಿ.ಎಸ್. ಯಡಿಯೂರಪ್ಪನವರನ್ನು ನೋಡಿದಾಗ, ಅವರ ವರ್ತನೆ ಮತ್ತು ಹಪಾಹಪಿಯನ್ನು ಕಂಡಾಗ ಸಂಘಪರಿವಾರದ ಗರಡಿಯಲ್ಲಿ ಪಳಗಿದ ವ್ಯಕ್ತಿ ಇವರೇನಾ ಎಂಬ ಸಂಶಯ ಕಾಡುವುದಿಲ್ಲವೆ? ಇವರು ಸಂಘದ ಶಾಖೆಗೆ ಹೋಗಿ ಕಲಿತಿದ್ದೇನು? ರಾಷ್ಟ್ರಕ್ಕಾಗಿ ಸರ್ವಸ್ವವನ್ನೂ ತ್ಯಾಗ ಮಾಡಿದ ಮಹಾನ್ ದೇಶಪ್ರೇಮಿಗಳ ಕಥೆ ಕೇಳಿ ಜೀವನದಲ್ಲಿ ಅಳಡಿಸಿಕೊಂಡಿದ್ದೇನು? ನಾನು ಬೂಕನಕೆರೆ ಸಿದ್ಧಲಿಂಗಪ್ಪ ಯಡಿಯೂರಪ್ಪ… ಎಂದು ರೈತನ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದ ನಂತರ ‘ಮೋದಿ ಮಾದರಿ’ಯ ಆಡಳಿತ ನಡೆಸುತ್ತೇವೆಂದಿದ್ದ ಯಡಿಯೂರಪ್ಪನವರು ಮಾಡಿದ್ದೇನು? ಒಂಬತ್ತು ವರ್ಷಗಳ ಆಡಳಿತದಲ್ಲಿ ಮೋದಿ ವಿರುದ್ಧ ಭ್ರಷ್ಟಾಚಾರದ ಒಂದು ಸಣ್ಣ ಆರೋಪವನ್ನು ತೋರಿಸಿ ನೋಡೋಣ? ಐವತ್ತು ವರ್ಷಗಳ ಸುದೀರ್ಘ ರಾಜಕೀಯ ಜೀವನದಲ್ಲಿ, ಪ್ರಧಾನಿಯಾದ ಆರು ವರ್ಷಗಳ ಅವಧಿಯಲ್ಲಿ ಒಂದೇ ಒಂದು ಭ್ರಷ್ಟಾಚಾರದ ಆರೋಪವನ್ನು ಎದುರಿಸದ ಅಟಲ್ ಬಿಹಾರಿ ವಾಜಪೇಯಿ ಮುನ್ನಡೆಸಿದ ಬಿಜೆಪಿಯಲ್ಲಿ ಯಡಿಯೂರಪ್ಪನಂಥವರಿದ್ದಾರೆ ಎಂಬುದೇ ಆಶ್ಚರ್ಯ ತರುವುದಿಲ್ಲವೆ? ಅದ್ಯಾವುದೋ ಕಪೋಲಕಲ್ಪಿತ ಜೈನ್ ಡೈರಿಯಲ್ಲಿ ‘ಎಲ್್ಕೆ’ ಎಂಬ ಎರಡಕ್ಷರಗಳಿವೆ ಎಂಬ ಕಾರಣಕ್ಕೆ ಪಕ್ಷದ ಅಧ್ಯಕ್ಷಗಾದಿಗೆ ಹಾಗೂ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಿ, ದೋಷಮುಕ್ತರಾಗುವವರೆಗೂ ರಾಜಕೀಯದಿಂದ ಹೊರಬಂದ ಆಡ್ವಾಣಿಯವರು ಕಟ್ಟಿದ ಪಕ್ಷದಲ್ಲಿ ಇಂಥ ಯಡ್ಡಿ, ರೆಡ್ಡಿಗಳು?!

ಎತ್ತ ಸಾಗುತ್ತಿದೆ ರಾಜ್ಯ ಬಿಜೆಪಿ? ಏನಾಗಿದೆ ಈ ಯಡಿಯೂರಪ್ಪನವರಿಗೆ?

ಪಕ್ಷಕ್ಕಿಂತ ಯಾರೂ ದೊಡ್ಡವರಲ್ಲ ಎಂಬ ಕನಿಷ್ಠ ಅರಿವೂ ಇಲ್ಲವೆ? ಪಕ್ಷಕ್ಕೆ ಸಡ್ಡು ಹೊಡೆಯಲು ಹೋದ ಉಮಾಭಾರತಿ ಏನಾದರು? ಆಡ್ವಾಣಿ ವಿರುದ್ಧ ಹರಿಹಾಯ್ದ ದಿಲ್ಲಿಯ ಮಾಜಿ ಮುಖ್ಯಮಂತ್ರಿ ಮದನ್್ಲಾಲ್ ಖುರಾನ ರಾಜಕೀಯವಾಗಿ ನಿರ್ನಾಮಗೊಂಡು ಮತ್ತೆ ಪಕ್ಷದ ಕಾಲಿಗೆ ಬಿದ್ದಿದ್ದು ಗೊತ್ತಿಲ್ಲವೆ? ಒಂದು ಲಕ್ಷ ರೂ.ಗಳನ್ನು ರಸೀದಿಯಿಲ್ಲದೆ ಪಕ್ಷದ ನಿಧಿಗೆ ತೆಗೆದುಕೊಂಡಿದ್ದ ಬಂಗಾರು ಲಕ್ಷ್ಮಣ್್ರನ್ನು ವಾಜಪೇಯಿ ಒಂದು ಕ್ಷಣವೂ ನಿಧಾನಿಸದೇ ಮನೆಗೆ ಕಳುಹಿಸಿದ್ದು ನೆನಪಿಲ್ಲವೆ? ಛತ್ತೀಸ್್ಗಢದ ಮುಂದಿನ ಮುಖ್ಯಮಂತ್ರಿ ಎಂದೇ ಬಿಂಬಿತರಾಗಿದ್ದ ಕೇಂದ್ರ ಸಚಿವ ದಿಲೀಪ್ ಸಿಂಗ್ ಜುದೇವ್ ಮೈನಿಂಗ್ ಲೈಸೆನ್ಸ್ ಕೊಡಿಸಿದ್ದಕ್ಕೆ ಪ್ರತಿಯಾಗಿ ಲಂಚ ತೆಗೆದುಕೊಂಡು ಸಿಕ್ಕಿಬಿದ್ದಾಗ ಅವರನ್ನು ಸಂಪುಟದಿಂದ ತೆಗೆದುಹಾಕಿದ್ದಲ್ಲದೆ ಅವರ ರಾಜಕೀಯ ಜೀವನವೇ ಹೆಚ್ಚೂಕಡಿಮೆ ಮುಗಿಯುವಂತೆ ಮಾಡಿದರು ಅಟಲ್. ಇಂತಹ ಉದಾಹರಣೆಗಳಿರುವಾಗ ರಾಷ್ಟ್ರ ಸೇವಿಕಾ ಸಂಘದಿಂದ ಬಂದ ಶೋಭಾ ಕರಂದ್ಲಾಜೆಯವರ ಬುದ್ಧಿಗೂ ಗರಬಡಿದಿದೆಯೇ? ವ್ಯಕ್ತಿಗಿಂತ ರಾಷ್ಟ್ರ ಮುಖ್ಯ ಎಂಬ ಸಂಘದ ಧ್ಯೇಯ, ಧೋರಣೆಯನ್ನು ಈಕೆಯೂ ಮರೆತುಬಿಟ್ಟರೆ? ಏಕೆ ಭ್ರಷ್ಟ ಯಡಿಯೂರಪ್ಪನವರ ಬಾಲಬಡುಕಿಯಂತೆ ವರ್ತಿಸುತ್ತಿದ್ದಾರೆ? ಕಲ್ಯಾಣ್ ಸಿಂಗ್್ಗಾದ ಗತಿ, ವಸುಂಧರಾ ರಾಜೆಯ ಸೊಕ್ಕಡಗಿಸಿದ್ದು, ತಲೆಹರಟೆ ಮಾಡಿದ ಗೋವಿಂದಾಚಾರ್ಯ ಮೂಲೆಗುಂಪಾಗಿದ್ದು ಈ ದುರಂಹಕಾರಿ ಯಡಿಯೂರಪ್ಪ ಮತ್ತು ಅವರ ಜಾತಿ ನಾಯಕರಿಗೆ ತಿಳಿದಿಲ್ಲವೆ? ಆ ರೇಣುಕಾಚಾರ್ಯ, ಮುರುಗೇಶ್ ನಿರಾಣಿ, ಸೋಮಣ್ಣ, ಉಮೇಶ್ ಕತ್ತಿ, ‘ಖಾಲಿ’ ತಲೆಯ ಬಸವರಾಜ ಬೊಮ್ಮಾಯಿಯವರನ್ನು ಅಪ್ತರನ್ನಾಗಿ ಇಟ್ಟುಕೊಂಡಿರುವುದು ಯಡಿಯೂರಪ್ಪನವರು ನೈತಿಕವಾಗಿ ಎಷ್ಟು ಅಧಃ ಪತನಕ್ಕಿಳಿದಿದ್ದಾರೆ ಎಂಬುದರ ಸಂಕೇತವಲ್ಲವೆ? ಈ ರಾಜ್ಯದ ಎಲ್ಲ ಪಕ್ಷಗಳ ಬಾಗಿಲನ್ನೂ ತಟ್ಟಿ, ನಡುಮನೆಗೆ ನುಗ್ಗಿ ಬಂದಿರುವ ಹುಟ್ಟಾ ಅವಕಾಶವಾದಿ ಸೋಮಣ್ಣನ ಬಗ್ಗೆ ಬಿಡಿಸಿ ಹೇಳುವುದಕ್ಕೇನಿದೆ? ಇನ್ನು ಯಾವ ಲಜ್ಜೆಗೇಡಿ ರೇಣುಕಾಚಾರ್ಯ ತಮ್ಮ ಪತನಕ್ಕೆ ಮುಂದಾಗಿದ್ದರೋ ಅಂತಹ ವ್ಯಕ್ತಿಯ ಜತೆ ಗೌಪ್ಯ ಮಾತುಕತೆ ನಡೆಸುತ್ತಿದ್ದಾರಲ್ಲಾ ಈ ಯಡ್ಡಿ ತಲೆಯಲ್ಲೇನು ಲದ್ದಿ ತುಂಬಿದೆಯೇ? ಸಂಘಪರಿವಾರದಿಂದ ಬಂದ ವ್ಯಕ್ತಿ ಈ ರೀತಿ ಜಾತಿ ನಾಯಕರನ್ನು ಸೇರಿಸಿಕೊಂಡು ‘ಸ್ವಂತ ಪರಿವಾರ’ ಕಟ್ಟಿಕೊಂಡರಲ್ಲಾ..?!

ಈ ಬೂಕನಕೆರೆ ಸಿದ್ಧಲಿಂಗಪ್ಪ ಯಡಿಯೂರಪ್ಪನವರು ಒಂದನ್ನು ಅರ್ಥಮಾಡಿಕೊಳ್ಳಬೇಕು, ಅವರೇನು ನರೇಂದ್ರ ಮೋದಿಯಲ್ಲ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ನರೇಂದ್ರ ಮೋದಿ 43 ಹಾಲಿ ಶಾಸಕರಿಗೆ ಟಿಕೆಟ್ ಕೊಡಲಿಲ್ಲ. ಹಾಗೆ ಮಾಡಿಯೂ ಜಯಿಸಿಕೊಂಡರು. ಅದಕ್ಕೆ ಅವರ ನ್ಯಾಯಪರತೆ ಹಾಗೂ ಅಭಿವೃದ್ಧಿ ಕಾರ್ಯಗಳೇ ಕಾರಣ. ಗುಜರಾತ್್ನಲ್ಲಿ ನರೇಂದ್ರ ಮೋದಿಯವರ ಗಾಣಿಗ ಸಮುದಾಯ 0.5 ಪರ್ಸೆಂಟ್್ಗಿಂತ ಕಡಿಮೆ ಇದೆ. ಆದರೂ ಮೋದಿ ಮೂರನೇ ಎರಡರಷ್ಟು ಬಹುಮತದಿಂದ ಆಯ್ಕೆಯಾಗಿ ಬರುತ್ತಾರೆ. ಕಾರಣ, ಅವರ ಅಭಿವೃದ್ಧಿ ಕಾರ್ಯಗಳು ಹಾಗೂ ಪ್ರಾಮಾಣಿಕತೆ. ಈ ಎರಡೂ ವಿಷಯಗಳ ಬಗ್ಗೆ ಮಾತನಾಡುವ ಅರ್ಹತೆಯಾದರೂ ಯಡಿಯೂರಪ್ಪನವರಿಗಿದೆಯೆ?

ಭಾರತೀಯ ಜನತಾ ಪಕ್ಷ ಯಾವುದೋ ಒಂದು ಜಾತಿಯ ಅಸ್ತಿಯಲ್ಲ. 2004, 2008ರ ಚುನಾವಣೆಗೂ ಮೊದಲು ಬಿಜೆಪಿಯ ಅಭ್ಯರ್ಥಿಗಳನ್ನು ಸತತವಾಗಿ ಆಯ್ಕೆ ಮಾಡಿ ಕಳುಹಿಸುತ್ತಿದ್ದುದು ಮಂಗಳೂರು, ಉಡುಪಿ, ಉತ್ತರ ಕನ್ನಡ ಮುಂತಾದ ಕರಾವಳಿ ಭಾಗಗಳು ಹಾಗೂ ಮಡಿಕೇರಿ, ಸಕಲೇಶಪುರ, ಚಿಕ್ಕಮಗಳೂರು, ಶಿವಮೊಗ್ಗಗಳೇ ಹೊರತು ನಿರಾಣಿ, ಸೋಮಣ್ಣ, ಬಸವರಾಜ ಬೊಮ್ಮಾಯಿ, ರೇಣುಕಾಚಾರ್ಯಗಳ ಸಂಬಂಧಿಕರಲ್ಲ. ಬಿಜೆಪಿಗೆ ಈ ರಾಜ್ಯದಲ್ಲಿ ಒಳ್ಳೆಯ ಹೆಸರು ತಂದುಕೊಡುವುದರಲ್ಲಿ ಬ್ರಾಹ್ಮಣರ ಬಹುದೊಡ್ಡ ಪಾಲಿದೆ. ಸಂಖ್ಯಾಬಲದಲ್ಲಿ ಅವರು ನಿರ್ಣಾಯಕವಲ್ಲದಿದ್ದರೂ ಬಿಜೆಪಿಯನ್ನು ಕಟ್ಟಿಬೆಳೆಸಿದವರು ಅವರೇ. ಅಂತಹ ಪಕ್ಷವನ್ನು ಜಾತಿ ಲೆಕ್ಕಾಚಾರಗಳನ್ನು ಮುಂದಿಟ್ಟು ಒತ್ತೆಯಾಗಿಟ್ಟುಕೊಳ್ಳಲು ಯಡಿಯೂರಪ್ಪನವರಿಗೆ ಅವಕಾಶ ಮಾಡಿಕೊಡಬಾರದಲ್ಲವೇ? ಬಿಜೆಪಿಯನ್ನು ಜೆಡಿಎಸ್್ನಂತೆ ಒಂದು ಕುಟುಂಬ, ಒಂದು ಜಾತಿಯ ಒಂದು ಭಾಗದವರ ಪಕ್ಷವಾಗಲು ಬಿಡಬಾರದು ಎಂದೆನಿಸುತ್ತಿಲ್ಲವೇ? 2001ರಲ್ಲಿ ಗುಜರಾತ್್ನಲ್ಲೂ ಹೀಗೇ ಆಗಿತ್ತು. ಕೇಶುಭಾಯಿ ಪಟೇಲರನ್ನು ಇಳಿಸಿ ಮೋದಿಯನ್ನು ಪ್ರತಿಷ್ಠಾಪಿಸಿದಾಗ ಸಂಖ್ಯಾಬಲದಲ್ಲಿ ಬಹಳ ನಿರ್ಣಾಯಕವಾಗಿದ್ದ ಪಟೇಲರ ಮತಗಳು ಕೈತಪ್ಪಿ ಹೋಗುತ್ತವೆ ಎಂಬ ಭಯ ಸೃಷ್ಟಿಯಾಗಿತ್ತು. ಆದರೆ 2002, 2007ರಲ್ಲಿ ಮೋದಿ ಭಾರೀ ಬಹುಮತದೊಂದಿಗೆ ಮತ್ತೆ ಆರಿಸಿ ಬಂದರು. ಕರ್ನಾಟಕದಲ್ಲಿ ಬುದ್ಧಿಗೇಡಿ, ಜಾತಿವಾದಿ ಮಠಾಧೀಶರಿರಬಹುದು, ಆದರೆ ಪ್ರಜ್ಞಾವಂತ ಮತದಾರರಿಗೆ ಕೊರತೆಯಿಲ್ಲ. ಹಾಗಾಗಿ ಜಾತಿ ದಾಳದ ಮೂಲಕ ಅಧಿಕಾರ ಉಳಿಸಿಕೊಳ್ಳಲು ಹೊರಟಿರುವ ಯಡಿಯೂರಪ್ಪನವರನ್ನು ಕಿತ್ತೊಗೆದು, ಬಿಜೆಪಿ ಒಂದು ಸಮುದಾಯದ ಕಪಿಮುಷ್ಠಿಗೆ ಸೇರದಂತೆ ರಕ್ಷಿಸಬೇಕು.

ಇದನ್ನು ಬಿಟ್ಟು ಬಿಜೆಪಿ ಹೈಕಮಾಂಡ್್ಗೂ ಬೇರೆ ದಾರಿಯಿಲ್ಲ.

ಮುಂದಿನ ವಾರವೇ ಸಂಸತ್ತಿನ ಮುಂಗಾರು ಅಧಿವೇಶನ ಆರಂಭ. 2ಜಿ ಹಗರಣದ ಮುಖ್ಯ ಆರೋಪಿ ಎ.ರಾಜಾ, ಪ್ರಧಾನಿ ಮನಮೋಹನ್ ಸಿಂಗ್ ಹಾಗೂ ಆಗಿನ ವಿತ್ತ ಸಚಿವ, ಹಾಲಿ ಗೃಹ ಸಚಿವ ಪಿ. ಚಿದಂಬರಂ ಕೂಡಾ ಇದರಲ್ಲಿ ಭಾಗಿ ಎಂದು ಬೆರಳು ತೋರಿದ್ದಾರೆ. ಭ್ರಷ್ಟ ಯಡಿಯೂರಪ್ಪನವರನ್ನು ಉಚ್ಛಾಟಿಸದೆ ಮನಮೋಹನ್ ಸಿಂಗ್ ಹಾಗೂ ಚಿದಂಬರಂ ಅವರನ್ನು ಟೀಕಿಸುವುದಕ್ಕಾಗಲೀ, ಸಂಸತ್ತಿನಲ್ಲಿ ಕಾಂಗ್ರೆಸ್ಸನ್ನು ಹಣಿಯುವುದಕ್ಕಾಗಲೀ ಬಿಜೆಪಿಗೆ ಹೇಗೆ ತಾನೇ ಸಾಧ್ಯ? ಯಾವ ಮುಖ ಇಟ್ಟುಕೊಂಡು ಕಾಂಗ್ರೆಸ್ ವಿರುದ್ಧ ಟೀಕಾಪ್ರಹಾರ ಮಾಡುವುದಕ್ಕಾಗುತ್ತದೆ? ಹಾಗಾಗಿ ಯಡಿಯೂರಪ್ಪನವರನ್ನು ಕಿತ್ತೊಗೆಯಲೇಬೇಕು.

That’s it!

ಕೃಪೆ: ಪ್ರತಾಪ ಸಿಂಹ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ