ನನ್ನ ಬ್ಲಾಗ್ ಪಟ್ಟಿ

ಸೋಮವಾರ, ಜುಲೈ 18, 2011

ಅಂದಹಾಗೆ “ಕಾಮರಾಜ’ ಯಾರೆಂದುಕೊಂಡಿದ್ದೀರಿ?


ಅವರ ಶಾಲೆಯಲ್ಲಿ ಗಣೇಶ ಚತುರ್ಥಿಯಂದು ವರ್ಷ ವರ್ಷವೂ ಗದ್ದಲ, ಗೌಜು. ಬಹಳ ಭಕುತಿಯಿಂದ ಗಣೇಶನ ಆರಾಧನೆ ನಡೆಯುತ್ತಿತ್ತು. ಮಕ್ಕಳಿಗದು ಸಂಭ್ರಮದ ಕ್ಷಣ. ಪ್ರಸಾದದ ಸ್ವಾದ ಮಕ್ಕಳಲ್ಲಿ ಹೊಸ ಉಮೇದು ಸೃಷ್ಟಿಸುತ್ತಿತ್ತು. ಪೂಜೆಗಾಗಿ ಮಕ್ಕಳಿಂದಲೇ ಒಂದೂವರೆ ಆಣೆ ದೇಣಿಗೆ ಸಂಗ್ರಹಿಸಲಾಗುತ್ತಿತ್ತು. ಇತ್ತ ಅಸಾಧ್ಯ ತಲೆನೋವೆಂದು ಹಾಸಿಗೆ ಹಿಡಿದ ಅಪ್ಪ ಕುಮಾರಸಾಮಿ ಮತ್ತೆಂದೂ ಮೇಲೇಳದ ಸ್ಥಳ ಸೇರಿದ್ದ. ಬೆನ್ನಲ್ಲೇ ಅಜ್ಜ ಚಿನ್ನಪ್ಪ ನಾಡರ್ ಕೂಡ ಅಗಲಿದ್ದ. ಅಂತಹ ಕಷ್ಟದ ಸ್ಥಿತಿಯಲ್ಲೂ ಒಂದೂವರೆ ಆಣೆ ಕೊಟ್ಟ ಬಾಲಕನೊಬ್ಬ ದೇವರಿಗೆ ವಂದಿಸಿ ಪ್ರಸಾದದ ಪಾಲು ಪಡೆಯಲು ಸಾಲಿನಲ್ಲಿ ನಿಂತ. ಸಾಲಿನಲ್ಲಿ ಬಂದೇ ಪ್ರಸಾದ ಪಡೆಯಬೇಕೆಂಬ ಕಟ್ಟುನಿಟ್ಟಾದ ಸೂಚನೆಯಿದ್ದರೂ ವಿದ್ಯಾರ್ಥಿಗಳು ನೂಕುನುಗ್ಗುಲು ಆರಂಭಿಸಿದರು. ಆದರೆ ಈ ಬಾಲಕ ಮಾತ್ರ ಸಾಲಿನಿಂದ ಹೊರಗುಳಿದು ಒಂದು ಮೂಲೆಯಲ್ಲಿ ನಿಂತುಕೊಂಡ. ಸ್ವಲ್ಪ ತಡವಾದರೂ ನ್ಯಾಯಯುತವಾಗಿ ಸಿಗಬೇಕಾದ ಪಾಲು ಸಿಕ್ಕೇ ಸಿಗುತ್ತದೆ ಎಂದು ಆತ ಭಾವಿಸಿದ್ದ. ಕೊನೆಗೂ ನೂಕುನುಗ್ಗಲು ಕಡಿಮೆಯಾಯಿತು. ಬಾಲಕನಿಗೆ ಪ್ರಸಾದ ದೊರೆಯಿತು. ಆದರೆ ಪಾಲು ಮಾತ್ರ ಸಣ್ಣದಾಗಿತ್ತು. ಪ್ರಸಾದದಲ್ಲಿ ಸಿಗುವ ವಿವಿಧ ತಿನಿಸುಗಳ ಸಂಖ್ಯೆಯಲ್ಲೂ ಕಡಿತವಾಗಿತ್ತು. ತನಗೆ ಎಷ್ಟು ಸಿಕ್ಕಿತೋ ಅಷ್ಟು ಪ್ರಸಾದದ ಜತೆ ಬಾಲಕ ಮನೆಗೆ ತೆರಳಿದ. ಅದನ್ನು ಕಂಡ ಅಜ್ಜಿ, ‘ಏಕೆ ನಿನಗೆ ಕಡಿಮೆ ಪ್ರಸಾದ ಕೊಟ್ಟಿದ್ದಾರೆ?’ ಎಂದು ಪ್ರಶ್ನಿಸಿದಳು. ನಾನು ಎಲ್ಲರಂತೆಯೇ ಒಂದೂವರೆ ಆಣೆ ಕೊಟ್ಟಿದ್ದರೂ ಅವರೇಕೆ ನನಗೆ ಕಡಿಮೆ ಪ್ರಸಾದ ಕೊಟ್ಟರು ಎಂದು ಬಾಲಕ ಮರು ಪ್ರಶ್ನೆ ಹಾಕಿದ. ನೀನೂ ಕೂಡ ಉಳಿದವರಂತೆಯೇ ನೂಕುನುಗ್ಗುಲಿನಲ್ಲಿ ಸೇರಿ ಮೊದಲಿಗೇ ಪ್ರಸಾದ ಪಡೆಯಬೇಕಿತ್ತು ಎಂದು ಅಜ್ಜಿ ದಬಾಯಿಸಿದಳು. ನಾನು ಎಲ್ಲರಂತೆಯೇ ದುಡ್ಡುಕೊಟ್ಟಿದ್ದೇನೆ, ಸಮಪಾಲು ಕೊಡಬೇಕಾಗಿದ್ದು ಶಿಕ್ಷಕರ ಜವಾಬ್ದಾರಿಯಲ್ಲವೆ? ಆತ ತನ್ನ ಜವಾಬ್ದಾರಿಯನ್ನೇಕೆ ಸರಿಯಾಗಿ ನಿರ್ವಹಿಸಲಿಲ್ಲ ಎಂದು ಮತ್ತೆ ಪ್ರಶ್ನೆಹಾಕಿದ. ಇಂತಹ ಪ್ರತಿಪ್ರಶ್ನೆಗಳನ್ನು ಎದುರಿಸಲಾರದೆ ಅಜ್ಜಿಯೇ ಬಾಯಿಮುಚ್ಚಿಕೊಂಡಳು. ಪಾಪ, ಆಕೆಗೇನು ಗೊತ್ತಿತ್ತು ತನ್ನ ಮೊಮ್ಮಗ ಮುಂದೊಂದು ದಿನ ಸಾಮಾಜಿಕ ಪಿಡುಗಾಗಿದ್ದ ಅಸಮಾನತೆಯೆ ವಿರುದ್ಧ ಧ್ವನಿಯೆತ್ತುತ್ತಾನೆ, ಇಡೀ ಜನಸಮುದಾಯವನ್ನೇ ಒಗ್ಗೂಡಿಸಿ ಹೋರಾಡುತ್ತಾನೆಂದು?!

ಇದು ಸ್ವಾತಂತ್ರ್ಯ ಹೋರಾಟಗಾರ, ತಮಿಳುನಾಡಿನ ಲೆಜೆಂಡರಿ ಮುಖ್ಯಮಂತ್ರಿಯಾಗಿದ್ದ ಕೆ. ಕಾಮರಾಜರ ಜೀವನಗಾಥೆ!

ನಾಡರ್ ಸಮುದಾಯಕ್ಕೆ ಸೇರಿದ್ದರೂ ಕಾಮರಾಜರ ಅಸಕ್ತಿ ವ್ಯಾಪಾರ ವಹಿವಾಟು ಬಿಟ್ಟು, ಸ್ವಾತಂತ್ರ್ಯ ಹೋರಾಟದತ್ತ ವಾಲಿತ್ತು. 1919ರಲ್ಲಿ ಮಹಾತ್ಮ ಗಾಂಧೀಜಿ ರೌಲತ್ ಕಾಯಿದೆಯ ವಿರುದ್ಧ ಧರಣಿಗೆ ಕರೆ ನೀಡಿದಾಗ 16 ವರ್ಷದ ಕಾಮರಾಜ್ ಕೂಡ ಸ್ವಾತಂತ್ರ್ಯ ಚಳವಳಿಗೆ ಧುಮುಕಿದರು. ಹೋಮ್್ರೂಲ್ ಚಳವಳಿಯ ನಂತರ ಕಾಂಗ್ರೆಸ್್ನ ಪೂರ್ಣಕಾಲಿಕ ಸದಸ್ಯನಾಗಿ ಬಿಟ್ಟರು. ಪಂಜಾಬ್ ಹತ್ಯಾಕಾಂಡದ ನಂತರ ಸ್ವಾತಂತ್ರ್ಯ ಹೋರಾಟಕ್ಕೆ ತಮ್ಮನ್ನು ಅರ್ಪಿಸಿಕೊಳ್ಳುವ ಸೂಚನೆ ಕೊಟ್ಟ ನಂತರ ಆತಂಕಿತರಾದ ಕುಟುಂಬಸ್ಥರು ಆತನ ಚಿಕ್ಕಪ್ಪ ಕುರುಪ್ಪಯ್ಯ ನಾಡರ್್ರನ್ನು ಕಳುಹಿಸಿ ಕಾಮರಾಜರನ್ನು ತಿರುವನಂತಪುರದಿಂದ ವಿರುಧ್ ನಗರಕ್ಕೆ ಕರೆಸಿಕೊಂಡರು. ಆದರೂ 1920ರ ಅಸಹಕಾರ ಚಳವಳಿಯಲ್ಲಿ ಪಾಲ್ಗೊಳ್ಳುವುದನ್ನು ತಪ್ಪಿಸಲಾಗಲಿಲ್ಲ. ಈ ಘಟನೆಯ ನಂತರ ಕಾಮರಾಜರ ಸಾಹಸಕ್ಕೆ ಕಡಿವಾಣ ಹಾಕಲು ಇರುವ ಏಕೈಕ ಮಾರ್ಗವೆಂದರೆ ವಿವಾಹ ಎಂಬ ತೀರ್ಮಾನಕ್ಕೆ ಬಂದರು. ಹಾಗಾದರೂ ಮಗ ದಾರಿಗೆ ಬರುತ್ತಾನೆಂಬ ಆಸೆ ತಾಯಿಯದ್ದಾಗಿತ್ತು. ಅದಕ್ಕಾಗಿ ಗೌಪ್ಯ ತಯಾರಿಯೂ ನಡೆಯಿತು. ಆದರೆ ಕಾಮರಾಜರ ಜೀವನ ಧ್ಯೇಯ ಸೇವೆಯಾಗಿತ್ತೇ ಹೊರತು, ಸಾಂಸಾರಿಕ ಬದುಕಿನ ಹಿಂದೆ ಅವರು ಹೊರಟಿರಲಿಲ್ಲ. ಕುಟುಂಬದ ಸದಸ್ಯರ ಯೋಜನೆ ಫಲಿಸಲಿಲ್ಲ. ಕಾಂಗ್ರೆಸ್ ಸೇರಿದ ನಂತರವಂತೂ ಧರಣಿ, ಪ್ರತಿಭಟನೆ ಆಯೋಜಿಸುವುದು ನಿತ್ಯಕಾಯಕವಾಯಿತು. 1857ರಲ್ಲಿ ನಡೆದಿದ್ದ ಮೊದಲ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪಾಲ್ಗೊಂಡಿದ್ದ ಭಾರತೀಯರನ್ನು ಹಿಂಸಿಸಿದ್ದ ಜನರಲ್ ನೀಲ್್ನ ಪ್ರತಿಮೆಯನ್ನು ಕಿತ್ತೊಗೆಯಲು ಮುಂದಾದರು. 1927ರಲ್ಲಿ ತಮಿಳುನಾಡಿಗೆ ಆಗಮಿಸಿದ್ದ ಗಾಂಧೀಜಿಯವರ ಮುಂದೆ ಈ ವಿಷಯ ಪ್ರಸ್ತಾಪಿಸಿದಾಗ ಅಹಿಂಸಾ ಮಾರ್ಗದಲ್ಲೇ ಕಿತ್ತೊಗೆಯುವಂತೆ ಸಲಹೆ ನೀಡಿದ್ದರು. ಹೀಗೆ ಕಾಮರಾಜರು ಓದು-ಬರಹಕ್ಕೆ ತಿಲಾಂಜಲಿ ಇತ್ತರೂ ರಾಜಕೀಯವಾಗಿ ಪ್ರಾಮುಖ್ಯತೆಗೆ ಬರಲಾರಂಭಿಸಿದರು. ಕಾಮರಾಜ ಮೊದಲು ಬಂಧನಕ್ಕೊಳಗಾಗಿದ್ದು ಉಪ್ಪಿನ ಸತ್ಯಾಗ್ರಹದಲ್ಲಿ ಪಾಲ್ಗೊಂಡಾಗ. ಕಲ್ಕತ್ತಾದ ಅಲಿಪುರ್ ಜೈಲಿನಲ್ಲಿ ಎರಡು ವರ್ಷವಿದ್ದರು. ಈ ಮಧ್ಯೆ ತಾಯಿ ಪಾರ್ವತಿ ಅಮ್ಮಳ್್ಳ ಆರೋಗ್ಯ ಹದಗೆಡುತ್ತಾ ಬಂತು. ಮೊಮ್ಮಗನನ್ನು ನೋಡಬೇಕೆಂದು ಕೊನೆ ಕ್ಷಣದವರೆಗೂ ಹಾತೊರೆದರೂ ಕಾಮರಾಜರು ಮಣಿಯಲಿಲ್ಲ. ಸ್ವಾತಂತ್ರ್ಯ ಹೋರಾಟ ಆ ಪರಿ ಅವರನ್ನು ಆವರಿಸಿತ್ತು.

ಕಾಂಗ್ರೆಸ್್ನಲ್ಲಿ ಕಾಮರಾಜರಿಗೆ ‘ಕಿಂಗ್ ಮೇಕರ್್’ ಎಂಬ ಬಿರುದಿತ್ತು.

1931ರಲ್ಲಿ ಮಧುರೈನಲ್ಲಿ ನಡೆದ ಕಾಂಗ್ರೆಸ್ ಸಮಿತಿ ಸಭೆಯಲ್ಲಿ ಅದನ್ನು ಮತ್ತೊಮ್ಮೆ ಸಾಬೀತು ಮಾಡಿದರು. ಆಗ ತಮಿಳುನಾಡು ಕಾಂಗ್ರೆಸ್್ನಲ್ಲಿ ಎರಡು ಬಣಗಳಿದ್ದವು. ಸಿ. ರಾಜಗೋಪಾಲಚಾರಿ (ರಾಜಾಜಿ) ನೇತೃತ್ವದ ಒಂದು ಬಣವಾದರೆ ಇನ್ನೊಂದು ಬಣಕ್ಕೆ ಎಸ್. ಸತ್ಯಮೂರ್ತಿ ನೇತಾರರಾಗಿದ್ದರು. ಬಡಬಗ್ಗರಿಂದಲೇ ಕೂಡಿದ್ದ ಸತ್ಯಮೂರ್ತಿ ಬಣಕ್ಕೆ ಕವಡೆ ಕಿಮ್ಮತ್ತು ಸಿಗುತ್ತಿರಲಿಲ್ಲ. ಇದರಿಂದ ಕುಪಿತರಾದ ಕಾಮರಾಜ, ಸತ್ಯಮೂರ್ತಿ ಬಣಕ್ಕೆ ಬೆಂಬಲ ನೀಡಿದರು. ಸಭೆಯ ಅಧ್ಯಕ್ಷತೆ ವಹಿಸಿದ್ದ ಸತ್ಯಮೂರ್ತಿಯವರನ್ನು ಮೆರವಣಿಗೆಯಲ್ಲಿ ಕರೆದೊಯ್ದಾಗ ರಾಜಾಜಿ ಬೇಕೆಂದೇ ದೂರ ಉಳಿದಿದ್ದರು. ನಂತರ ನಡೆದ ಸಭೆಯಲ್ಲಿ ಮೊದಲೇ ನಿರ್ಧಾರಿತವಾಗಿದ್ದಂತೆ ರಾಜಾಜಿಯವರನ್ನು ಪ್ರಾದೇಶಿಕ ಕಾಂಗ್ರೆಸ್್ನ ಅಧ್ಯಕ್ಷರಾಗಿ ಆಯ್ಕೆ ಮಾಡಲಾಯಿತು. ಆದರೆ ರಾಜಾಜಿ ಬಣದವರು ಉಪಾಧ್ಯಕ್ಷ ಸ್ಥಾನವನ್ನು ಸತ್ಯಮೂರ್ತಿಯವರಿಂದ ತಪ್ಪಿಸಲು ಯತ್ನಿಸಿದಾಗ ಕಾರ್ಯಪ್ರವೃತ್ತರಾದ ಕಾಮರಾಜ, ಅನ್ಯಾಯವನ್ನು ಸರಿಪಡಿಸಿದ್ದಲ್ಲದೆ ಕಾರ್ಯಕಾರಿ ಸಮಿತಿಯ ಸದಸ್ಯರ ಆಯ್ಕೆಯಲ್ಲಿ ಸತ್ಯಮೂರ್ತಿ ಬಣದವರೇ ಆಯ್ಕೆಯಾಗುವಂತೆ ನೋಡಿಕೊಂಡರು. ಹೀಗೆ ರಾಜಾಜಿಯವರು ಉತ್ಸವ ಮೂರ್ತಿಯಂತೆ ಅಧಿಕಾರಾವಧಿ ಪೂರೈಸುವಂತೆ ಮಾಡಿ, ಅಧಿಕಾರ ಚಲಾಯಿಸದಂತೆ ಕೈಕಟ್ಟಿದರು.

ಐಟಿಜಿಛ್ಛಡಿ, ಎಸ್.ಸತ್ಯಮೂರ್ತಿಯವರೇ ಕಾಮರಾಜರ ರಾಜಕೀಯ ಗುರು.

ಈ ಮಧ್ಯೆ ವಿರುಧು ನಗರ ಬಾಂಬ್ ಸ್ಫೋಟ ಪ್ರಕರಣದಲ್ಲಿ ಕಾಮರಾಜ ಭಾಗಿಯಾಗಿದ್ದಾರೆಂಬ ಅರೋಪ ಹೊರಿಸಿದರು ಬ್ರಿಟಿಷರು. ಡಾ. ಪಿ. ವರದರಾಜುಲು ನಾಯ್ಡು ಮತ್ತು ಜಾರ್ಜ್ ಜೋಸೆಫ್ ಕಾಮರಾಜರ ಪರವಾಗಿ ವಾದಿಸಿ ಅಮಾಯಕರೆಂದು ಸಾಬೀತುಪಡಿಸಿದರು. 1940ರಲ್ಲಿ ವಾಧ್ರಾದಲ್ಲಿದ್ದ ಗಾಂಧೀಜಿಯವರನ್ನು ಭೇಟಿಯಾಗಲು ಹೋಗುತ್ತಿದ್ದ ಕಾಮರಾಜರನ್ನು ಮತ್ತೆ ಬಂಧಿಸಿ ವೆಲ್ಲೂರು ಜೈಲಿಗೆ ತಳ್ಳಲಾಯಿತು. ಜೈಲಿನಿಂದಲೇ ವಿರುಧು ನಗರ ಮುನ್ಸಿಪಲ್ ಕೌನ್ಸಿಲ್್ಗೆ ಆಯ್ಕೆಯಾದರು. ಗಾಂಧೀಜಿಯವರು ಆರಂಭಿಸಿದ್ದ ಕ್ವಿಟ್ ಇಂಡಿಯಾ ಚಳವಳಿಗೆ ತಯಾರಿ, ಕುಮ್ಮಕ್ಕು ಆರೋಪದ ಮೇಲೆ 1942ರಲ್ಲಿ ಬಂಧನಕ್ಕೊಳಗಾದರು. ಕಾಮರಾಜರ ಬಗ್ಗೆ ಜನರಿಗಾಗಲಿ, ಸ್ಥಳೀಯ ಕಾಂಗ್ರೆಸ್ ನಾಯಕರಿಗಾಗಲಿ ಎಂತಹ ವಿಶ್ವಾಸ, ಗೌರವಿತ್ತೆಂದರೆ 1945ರಲ್ಲಿ ಗಾಂಧೀಜಿ, ನೆಹರು ಬೆಂಬಲದೊಂದಿಗೆ ಕಣಕ್ಕಿಳಿದಿದ್ದ ರಾಜಾಜಿಯವರನ್ನು ಸೋಲಿಸಿ ಕಾಮರಾಜರನ್ನು ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾಗಿ ಪುನರಾಯ್ಕೆ ಮಾಡಲಾಗಿತ್ತು. ಹಾಗಂತ ಅವರು ಯಾರ ವಿರುದ್ಧವೂ ವೈಷಮ್ಯ ಸಾಧಿಸಿದವರಲ್ಲ. 1954, ಏಪ್ರಿಲ್ 13ರಂದು ಕೆ. ಕಾಮರಾಜ ಮದ್ರಾಸ್ ರಾಜ್ಯದ ಮುಖ್ಯಮಂತ್ರಿಯಾದಾಗ ತಮ್ಮ ನಾಯಕತ್ವದ ವಿರುದ್ಧ ಯಾರು ಸ್ಪರ್ಧಿಸಿದ್ದರೋ ಅಂತಹ ಸಿ. ಸುಬ್ರಹ್ಮಣ್ಯಂ ಮತ್ತು ಎಂ. ಭಕ್ತವತ್ಸಲಂ ಅವರನ್ನೇ ಹಣಕಾಸು ಹಾಗೂ ಕೃಷಿ ಸಚಿವರನ್ನಾಗಿ ಸಂಪುಟಕ್ಕೆ ತೆಗೆದುಕೊಂಡರು! ಜನರ ಅಭ್ಯುದಯವನ್ನಷ್ಟೇ ಬಯಸುವ ವ್ಯಕ್ತಿಯಲ್ಲಿ ಮಾತ್ರ ಇಂತಹ ಹೃದಯ ವೈಶಾಲ್ಯತೆ, ಕಾಳಜಿಯನ್ನು ಕಾಣಲು ಸಾಧ್ಯ.

ವೈಷಮ್ಯವನ್ನೇ ಒಡಲಲ್ಲಿ ತುಂಬಿಕೊಂಡಂತೆ ವರ್ತಿಸುವ ಈಗಿನ ರಾಜಕಾರಣಿಗಳು ಹಾಗೂ ಕಾಮರಾಜರ ನಡುವೆ ಎಂತಹ ವ್ಯತ್ಯಾಸ?

ಬಾಲ್ಯಾವಸ್ಥೆಯಲ್ಲಿ ಅಕ್ಷರ ಕಲಿಕೆಗೆ ಶರಣು ಹೊಡೆದರೂ ಕಾಮರಾಜರಿಗೆ ಶಿಕ್ಷಣದ ಮಹತ್ವ ಚೆನ್ನಾಗಿ ಗೊತ್ತಿತ್ತು. ತಮಗೂ ಮೊದಲು ಮುಖ್ಯಮಂತ್ರಿಯಾಗಿದ್ದ ಸಿ. ರಾಜಗೋಪಾಲಚಾರಿ ಸರಕಾರ ಹಣಕಾಸು ಮುಗ್ಗಟ್ಟಿನಿಂದ ಮುಚ್ಚಿದ್ದ 6 ಸಾವಿರ ಶಾಲೆಗಳನ್ನು ಮತ್ತೆ ತೆರೆದರು. ಅಷ್ಟೇ ಅಲ್ಲ, 12 ಸಾವಿರ ಹೊಸ ಶಾಲೆಗಳನ್ನು ಆರಂಭಿಸಿದರು. ಪ್ರತಿ ಪಂಚಾಯಿತಿಗೂ ಕನಿಷ್ಠ ಪ್ರಾಥಮಿಕ ಶಾಲೆಯೊಂದಾದರೂ ಇರುವಂತೆ ಮಾಡಿದರು. ಹಾಲಿ ಶಾಲೆಗಳ ಸ್ಥಿತಿಗತಿಯನ್ನು ಸುಧಾರಿಸಿದರು. 11ನೇ ತರಗತಿವರೆಗೂ ಉಚಿತ ಹಾಗೂ ಕಡ್ಡಾಯ ಶಿಕ್ಷಣವನ್ನು ಜಾರಿಗೆ ತಂದರು. ಬಡಮಕ್ಕಳನ್ನು ದೃಷ್ಟಿಯಲ್ಲಿಟ್ಟುಕೊಂಡು ಮಧ್ಯಾಹ್ನದ ಊಟ ಯೋಜನೆಯನ್ನು ಜಾರಿಗೆ ತಂದರು. ಅದು ಜಗತ್ತಿನಲ್ಲೇ ಮೊಟ್ಟ ಮೊದಲ ಪ್ರಯತ್ನವಾಗಿತ್ತು! ಜಾತಿ, ಧರ್ಮ, ಅಂತಸ್ತುಗಳ ತಾರತಮ್ಯ ಮಕ್ಕಳ ಮನಸ್ಸಿಗೆ ನಾಟಬಾರದೆಂಬ ಕಾರಣಕ್ಕೆ ವಿದ್ಯಾರ್ಥಿಗಳಿಗೆ ಉಚಿತ ಸಮವಸ್ತ್ರವನ್ನು ಜಾರಿಗೆ ತಂದರು. ಬ್ರಿಟಿಷರ ಕಾಲದಲ್ಲಿ ಮದ್ರಾಸ್ ರಾಜ್ಯದ ಶಿಕ್ಷಣದ ಪ್ರಮಾಣ ಶೇ. 7 ಆಗಿದ್ದರೆ ಕಾಮರಾಜರ ಆಡಳಿತದಲ್ಲಿ ಅದು 37 ಪರ್ಸೆಂಟ್್ಗೇರಿತು! ರಾಜಾಜಿ ಅಧಿಕಾರಾವಧಿಯಲ್ಲಿ 12 ಸಾವಿರ ಇದ್ದ ಶಾಲೆಗಳ ಸಂಖ್ಯೆ ಕಾಮರಾಜ ಆಡಳಿತಾವಧಿಯಲ್ಲಿ 27 ಸಾವಿರಕ್ಕೇರಿದವು. ಪ್ರತಿಷ್ಠಿತ ಐಐಟಿ-ಮದ್ರಾಸ್ ಆರಂಭವಾಗಿದ್ದೂ (1959) ಕಾಮರಾಜರ ಕಾಲದಲ್ಲೇ.

ಮಣಿ ಮುತ್ತುವರ್, ವೈಕೈ, ಅಲಿಯರ್, ಸಾತನೂರ್, ಕೃಷ್ಣಗಿರಿ ಅಣೆಕಟ್ಟುಗಳು ನಿರ್ಮಾಣಗೊಂಡವು. ಮೆಟ್ಟೂರು ಕಾಲುವೆ ನಿರ್ಮಾಣಗೊಂಡಿತು. ಸಣ್ಣ ನಿರಾವರಿ ಯೋಜನೆಯಡಿ ಸಾವಿರಾರು ಭಾವಿಗಳು ರೂಪುಗೊಂಡವು. ರೈತರಿಗೆ ಶೇ. 25ರ ಸಬ್ಸಿಡಿಯಲ್ಲಿ ಸಾಲ ಕೊಟ್ಟರು. ಕಾಮರಾಜರ ಅವಧಿಯಲ್ಲಿ ಒಂದೂವರೆ ಕೋಟಿ ಎಕರೆ ಜಮೀನಿಗೆ ನೀರು ಲಭ್ಯವಾಗಿ ಕೃಷಿ ಕಾರ್ಯ ನಡೆಯಿತು. ಕೈಗಾರಿಕಾ ಕ್ಷೇತ್ರದ ಬಗ್ಗೆ ಹೇಳುವುದಾದರೂ ತಿರುಚಿಯ ಬಿಎಚ್್ಇಎಲ್, ನೈವೇಲಿ ಕಾರ್ಖಾನೆ ತಲೆಯೆತ್ತಿದವು. ಹಾಗಂತ ಅವರು ಅಧಿಕಾರಕ್ಕೆ ಅಂಟಿಕೊಂಡವರಲ್ಲ. 1963, ಅಕ್ಟೋಬರ್ 2ರಂದು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಅವರು, ಹಿರಿಯ ಕಾಂಗ್ರೆಸ್ ನಾಯಕರು ಪದವಿ ತೊರೆದು ಪಕ್ಷವನ್ನು ಬಲಪಡಿಸುವ ಕಾರ್ಯಕ್ಕೆ ಮುಂದಾಗಬೇಕೆಂದು ಕರೆ ನೀಡಿದರು. ಅದು ‘ಕಾಮ್್ರಾಜ್ ಸೂತ್ರ’ವೆಂದೇ ಪ್ರಸಿದ್ಧಿಯಾಯಿತು. ಪ್ರಧಾನಿ ನೆಹರು ಅವರೇ ಅದನ್ನು ಮೆಚ್ಚಿಕೊಂಡರು. ಅದೇ ವರ್ಷದ ಅಕ್ಟೋಬರ್ 9ರಂದು ಕಾಮರಾಜರನ್ನು ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷರನ್ನಾಗಿ ಮಾಡಲಾಯಿತು. ನೆಹರು ತೀರಿಕೊಂಡ ನಂತರ ಲಾಲ್ ಬಹಾದ್ದೂರ್ ಶಾಸ್ತ್ರಿ, ಅವರ ಅಕಾಲಿಕ ಅಂತ್ಯದ ನಂತರ ಇಂದಿರಾ ಗಾಂಧಿ ಹೀಗೆ ಉತ್ತರಾಧಿಕಾರತ್ವವನ್ನು ಸುಸೂತ್ರಗೊಳಿಸಿದವರೂ ಕಾಮರಾಜರೇ.

ಈ ದೇಶ ಬಹಳಷ್ಟು ಲೆಜೆಂಡರಿ ಮುಖ್ಯಮಂತ್ರಿಗಳನ್ನು ಕಂಡಿದೆ. ಬಿಜು ಪಟ್ನಾಯಕ್, ನಂಬೂದರಿಪಾಡ್, ಕರ್ಪೂರಿ ಠಾಕೂರ್, ದೇವರಾಜ ಅರಸ್ ಮುಂತಾದವರು ಕಣ್ಣಮುಂದೆ ಬರುತ್ತಾರೆ. ಆದರೆ ‘ಭಾರತ ರತ್ನ’ವೆನಿಸಿದ್ದು ಕೆ. ಕಾಮರಾಜರು ಮಾತ್ರ. ಕೊನೆವರೆಗೂ ಅವಿವಾಹಿತರಾಗಿಯೇ ಉಳಿದು ಜನಸೇವೆ ಮಾಡಿದರು. ಅವರು ಜನಿಸಿದ್ದು 1903, ಜುಲೈ 15ರಂದು. ಇಂದು ಅವರ ಜನ್ಮದಿನ. ಅಂತಹ Towering personality, ಮಹಾನ್ ವ್ಯಕ್ತಿಯ ಹೆಸರನ್ನು ತನ್ನ ಹುಟ್ಟಿನ ಮೂಲದಲ್ಲೇ ಅನೈತಿಕತೆಯನ್ನಿಟ್ಟುಕೊಂಡು ಅನ್ಯರ ಹಾದರದ ಕಥೆ ಹೇಳುವ, ತನ್ನ ಮನಸ್ಸಿನಲ್ಲಿ ತುಂಬಿಕೊಂಡಿರುವ ಕಾಮಪಿಪಾಸೆಯನ್ನು ಹೊರಹಾಕುವ ಅಶ್ಲೀಲ ಪುಸ್ತಕದ ಟೈಟಲ್ ಆಗಿ ಬಳಸಿಕೊಂಡನಲ್ಲಾ ಆ ಅಯೋಗ್ಯ…

ಶೇಮ್!

ಕೃಪೆ: ಪ್ರತಾಪ ಸಿಂಹ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ